Tag: union government

  • ಇನ್ನು ಮುಂದೆ ಕೇಂದ್ರದ ಹುದ್ದೆಗಳಿಗೆ ಒಂದೇ ಪರೀಕ್ಷೆ

    ಇನ್ನು ಮುಂದೆ ಕೇಂದ್ರದ ಹುದ್ದೆಗಳಿಗೆ ಒಂದೇ ಪರೀಕ್ಷೆ

    – ನಾನ್‌ ಗೆಜೆಟೆಡ್‌ ಹುದ್ದೆಗಳಿಗೆ ಏಕರೂಪದ ಸಿಇಟಿ
    – ಮೂರು ವರ್ಷಗಳವರೆಗೆ ಅಂಕಗಳಿಗೆ ಮಾನ್ಯತೆ
    – ದೇಶದ ವಿವಿಧ ಭಾಷೆಗಳಲ್ಲಿ ಪರೀಕ್ಷೆ

    ನವದೆಹಲಿ: ಇನ್ನು ಮುಂದೆ ಕೇಂದ್ರ ಸರ್ಕಾರದ ಹುದ್ದೆ ಪಡೆಯಲು ಹಲವು ಪರೀಕ್ಷೆಗಳನ್ನು ಬರೆಯಬೇಕಿಲ್ಲ. ಒಂದೇ ಪರೀಕ್ಷೆ ಬರೆಯುವ ಮೂಲಕ ವಿವಿಧ ಇಲಾಖೆಯ ಹುದ್ದೆಯನ್ನು ಪಡೆಯಬಹುದು.

    ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಕ್ಯಾಬಿನೆಟ್‌ ಸಭೆಯಲ್ಲಿ ರಾಷ್ಟ್ರೀಯ ನೇಮಕಾತಿ ಸಂಸ್ಥೆ (ಎನ್‌ಆರ್‌ಎ) ರಚನೆಗೆ ಅನುಮೋದನೆ ನೀಡಿದೆ. ಈ ವರ್ಷದ ಬಜೆಟ್‌ನಲ್ಲಿ ಎನ್‌ಆರ್‌ಎ ರಚಿಸಲಾಗುವುದು ಎಂದು ಸರ್ಕಾರ ತಿಳಿಸಿತ್ತು.

     

    ಕೇಂದ್ರ ಸರ್ಕಾರ ಇಲಾಖೆ ಮತ್ತು ಸಾರ್ವಜನಿಕ ವಲಯದಲ್ಲಿರುವ ಬ್ಯಾಂಕುಗಳ ನಾನ್‌ ಗೆಜೆಟೆಡ್‌ ಹುದ್ದೆಗಳನ್ನು ಬಯಸುವ ಮಂದಿಗೆ ಸುಲಭವಾಗಲು ಸರ್ಕಾರ ಎನ್‌ಆರ್‌ಎ ಸ್ಥಾಪನೆಗೆ ಮುಂದಾಗಿದೆ.

     

     

     

    ಯಾಕೆ ಈ ಪರೀಕ್ಷೆ?
    ಪ್ರಸ್ತುತ, ಸರ್ಕಾರಿ ಉದ್ಯೋಗಗಳನ್ನು ಬಯಸುವ ಅಭ್ಯರ್ಥಿಗಳು ವಿವಿಧ ಹುದ್ದೆಗಳಿಗೆ ಬಹು ನೇಮಕಾತಿ ಏಜೆನ್ಸಿಗಳು ನಡೆಸುವ ಪ್ರತ್ಯೇಕ ಪರೀಕ್ಷೆಗಳಿಗೆ ಹಾಜರಾಗಬೇಕಾಗುತ್ತದೆ. ಅಷ್ಟೇ ಅಲ್ಲದೇ ಅಭ್ಯರ್ಥಿಗಳು ಅನೇಕ ನೇಮಕಾತಿ ಏಜೆನ್ಸಿಗಳಿಗೆ ಶುಲ್ಕವನ್ನು ಪಾವತಿಸಬೇಕಾಗುತ್ತದೆ ಮತ್ತು ವಿವಿಧ ಪರೀಕ್ಷೆಗಳಿಗೆ ಹಾಜರಾಗಲು ದೂರದ ಪ್ರಯಾಣ ಮಾಡಬೇಕಾಗುತ್ತದೆ. ಇದನ್ನು ತಪ್ಪಿಸಲು ಒಂದೇ ಸಿಇಟಿ ಪರೀಕ್ಷೆಯನ್ನು ರಾಷ್ಟ್ರೀಯ ನೇಮಕಾತಿ ಸಂಸ್ಥೆ ನಡೆಸಲಿದೆ. ಸಿಇಟಿ ಅಂಕ ಮೂರು ವರ್ಷಗಳವರೆಗೆ ಮಾನ್ಯವಾಗಿರುತ್ತದೆ, ಪ್ರಯತ್ನಗಳಿಗೆ ಯಾವುದೇ ನಿರ್ಬಂಧವಿಲ್ಲ ಎಂದು ಸರ್ಕಾರ ತಿಳಿಸಿದೆ.

     

    ಯಾವೆಲ್ಲ ಪರೀಕ್ಷೆ?
    ಎನ್‌ಆರ್‌ಎ ಮೂರು ಹಂತದ ಪದವೀಧರ, ಹೈಯರ್ ಸೆಕೆಂಡರಿ (12 ನೇ ಪಾಸ್) ಮತ್ತು ತಾಂತ್ರಿಕೇತರ ಹುದ್ದೆಗಳಿಗೆ ಮೆಟ್ರಿಕ್ಯುಲೇಟ್ (10 ನೇ ಪಾಸ್) ಅಭ್ಯರ್ಥಿಗಳಿಗೆ ತಲಾ ಪ್ರತ್ಯೇಕ ಸಿಇಟಿಯನ್ನು ನಡೆಸಿ ಅಂಕ ನೀಡುತ್ತದೆ.

    ಪ್ರಸ್ತುತ ನೇಮಕಾತಿಯನ್ನು ಸಿಬ್ಬಂದಿ ಆಯ್ಕೆ ಆಯೋಗ (ಎಸ್‌ಎಸ್‌ಸಿ), ರೈಲ್ವೆ ನೇಮಕಾತಿ ಮಂಡಳಿಗಳು (ಆರ್‌ಆರ್‌ಬಿಎಸ್‌) ಮತ್ತು ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್‌ ಸೆಲೆಕ್ಷನ್‌( ಐಬಿಪಿಎಸ್) ಮಾಡುತ್ತದೆ. ಈಗ ಇವುಗಳು ನಡೆಸುವ ಪರೀಕ್ಷೆಗಳನ್ನು ಎನ್‌ಆರ್‌ಎ ನಡೆಸಲಿದೆ.

    ಈ ಎಲ್ಲ ಪರೀಕ್ಷೆಗಳ ಸಂಬಂಧಿಸಿದ ಪಠ್ಯಗಳು ಒಂದೇ ಆಗಿರಲಿದೆ. ಸಿಇಟಿ ಪರೀಕ್ಷೆ ದೇಶದ ಹಲವು ಭಾಷೆಗಳಲ್ಲಿ ನಡೆಯಲಿದೆ. ಎನ್‌ಆರ್‌ಎ ಸ್ಥಾಪನೆಗೆ ಕೇಂದ್ರ ಸರ್ಕಾರ 1,517.57 ಕೋಟಿ ರೂ. ಹಣವನ್ನು ಮೀಸಲಿಟ್ಟಿದೆ.

     

     

     

  • ನಕಲಿ, ಕಳಪೆ ಕೀಟನಾಶಕ ಮಾರಿದ್ರೆ 5 ವರ್ಷ ಜೈಲು ಶಿಕ್ಷೆ

    ನಕಲಿ, ಕಳಪೆ ಕೀಟನಾಶಕ ಮಾರಿದ್ರೆ 5 ವರ್ಷ ಜೈಲು ಶಿಕ್ಷೆ

    – ರೈತರ ರಕ್ಷಣೆಗೆ ಮಂಡನೆಯಾಗಲಿದೆ ಮಸೂದೆ
    – ನಷ್ಟವಾದರೆ ಕಂಪನಿಗಳಿಂದಲೇ ಪರಿಹಾರ
    – ಕೀಟನಾಶಕಗಳ ಬೆಲೆ ನಿಯಂತ್ರಿಸಲು ಪ್ರಾಧಿಕಾರ ರಚನೆ

    ನವದೆಹಲಿ: ನಕಲಿ, ಕಳಪೆ ಕೀಟನಾಶಕ ಮಾರಿದರೆ ಗರಿಷ್ಠ 5 ವರ್ಷ ಜೈಲು ಶಿಕ್ಷೆ ವಿಧಿಸುವ ‘ಕೀಟನಾಶಕ ನಿರ್ವಹಣಾ ಮಸೂದೆ -2020’ಕ್ಕೆ ಕೇಂದ್ರ ಕ್ಯಾಬಿನೆಟ್ ಒಪ್ಪಿಗೆ ನೀಡಿದೆ.

    ನಕಲಿ ಕೀಟನಾಶಕ ಬಳಸಿ ನಷ್ಟ ಉಂಟಾದಲ್ಲಿ ರೈತರಿಗೆ ಪರಿಹಾರ ನೀಡುವ ಮಸೂದೆಯನ್ನು ಬಜೆಟ್ ಅಧಿವೇಶನದ ಎರಡನೇ ಅವಧಿಯಲ್ಲಿ ಮಂಡಿಸುವುದಕ್ಕೆ ಕ್ಯಾಬಿನೆಟ್ ಬುಧವಾರ ಒಪ್ಪಿಗೆ ನೀಡಿತು.

    ಕೀಟನಾಶಕ ಕಾಯ್ದೆ -1968ರ ಜಾಗವನ್ನು ಈ ಮಸೂದೆ ತುಂಬಲಿದೆ. ಪ್ರಸ್ತಾವಿತ ಮಸೂದೆಯಲ್ಲಿ ರೈತರ ಹಾದಿ ತಪ್ಪಿಸಿ ಮೋಸ ಆಗದೇ ಇರಲು ಕೀಟನಾಶಕಗಳ ಜಾಹೀರಾತುಗಳ ಮೇಲೂ ನಿಗಾ ವಹಿಸಲಿದೆ.

    ಮಸೂದೆಯಲ್ಲಿ ಏನಿದೆ?
    ಕೀಟನಾಶಕಗಳಿಗೆ ನಿರ್ಧಿಷ್ಟ ಬೆಲೆಯನ್ನು ನಿಗದಿ ಪಡಿಸಲು ಪ್ರಾಧಿಕಾರ ರಚನೆ ಮಾಡಲಾಗುತ್ತದೆ. ಎಲ್ಲ ಕೀಟನಾಶಕ ಕಂಪನಿಗಳು ಹೊಸ ಕಾಯ್ದೆಯಡಿ ಕಡ್ಡಾಯವಾಗಿ ನೋಂದಣಿಯಾಗಬೇಕು. ಕಳಪೆ ಅಥವಾ ನಕಲಿ ಕೀಟನಾಶಕಗಳಿಂದ ರೈತರಿಗೆ ಮೋಸವಾದರೆ ಪರಿಹಾರ ನೀಡಲಾಗುತ್ತದೆ. ಕಂಪನಿಗಳ ಮೇಲೆ ಹಾಕಲಾದ ದಂಡ ಸಂಗ್ರಹಿಸಲು ಕೇಂದ್ರೀಯ ನಿಧಿಯನ್ನು ಸ್ಥಾಪಿಸಲಾಗುತ್ತದೆ. ಸಂಗ್ರಹಗೊಂಡ ಹಣದಿಂದ ರೈತರಿಗೆ ಪರಿಹಾರ ನೀಡಲಾಗುತ್ತದೆ.

    ಶಿಕ್ಷೆ ಏನು?
    ಷರತ್ತು, ನಿಯಮಗಳನ್ನು ಉಲ್ಲಂಘಿಸಿದರೆ ಕನಿಷ್ಠ 25 ಸಾವಿರ ರೂಪಾಯಿಯಿಂದ ಗರಿಷ್ಠ 50 ಲಕ್ಷ ರೂಪಾಯಿ ತನಕ ದಂಡವನ್ನೂ ಮತ್ತು ಗರಿಷ್ಠ 5 ವರ್ಷ ಜೈಲು ಶಿಕ್ಷೆಯನ್ನೂ ವಿಧಿಸುವ ಅಂಶವನ್ನು ಮಸೂದೆಯಲ್ಲಿ ಸೇರಿಸಲಾಗಿದೆ.

    ಪರಿಸರ, ಅರಣ್ಯ, ಹವಾಮಾನ ಬದಲಾವಣೆ ಖಾತೆಯ ಸಚಿವ ಪ್ರಕಾಶ್ ಜಾವಡೇಕರ್ ಪ್ರತಿಕ್ರಿಯಿಸಿ, ರೈತರ ಅಭಿವೃದ್ಧಿ ನಮ್ಮ ಸರ್ಕಾರದ ಪ್ರಾಥಮಿಕ ಆಧ್ಯತೆಯಾಗಿದ್ದು, ಯಾವುದೇ ರೀತಿಯಲ್ಲೂ ಕೃಷಿಕರಿಗೆ ವಂಚನೆ ಆಗಬಾರದು. ಈ ನಿಟ್ಟಿನಲ್ಲಿ ಕೀಟನಾಶಕ ಕಂಪನಿಗಳ ಮೋಸವನ್ನು ತಪ್ಪಿಸಲು ಈ ಮಸೂದೆಯನ್ನು ಮಂಡಿಸಲಾಗುತ್ತಿದೆ. ಕೃಷಿಕರಿಗೆ ಕೀಟನಾಶಕಗಳ ಬಲ ಮತ್ತು ದೌರ್ಬಲ್ಯಗಳ ಬಗ್ಗೆ ವಿವರ ನೀಡಿ ಅದರ ಅಪಾಯದ ಕುರಿತು ಮಾಹಿತಿ ನೀಡಲಾಗುತ್ತದೆ. ಅಷ್ಟೇ ಅಲ್ಲದೇ ಕೀಟನಾಶಕಕ್ಕೆ ಪರ್ಯಾಯ ಯಾವುದು ಎಂಬ ಮಾಹಿತಿಯೂ ಸಾರ್ವಜನಿಕವಾಗಿ ಡಿಜಿಟಲ್ ಮಾದರಿಯಲ್ಲಿ ಎಲ್ಲ ಭಾಷೆಗಳಲ್ಲಿ ಲಭ್ಯವಿರುತ್ತದೆ. ಇದನ್ನು ನೋಡಿಕೊಂಡು ರೈತರು ತಮ್ಮ ಬೆಳೆಗೆ ಯಾವ ಕೀಟನಾಶಕ ಉತ್ತಮ ಎಂಬ ನಿರ್ಧಾರಕ್ಕೆ ಬರಬಹುದು ಎಂದು ಅವರು ತಿಳಿಸಿದರು.

    ರೈತರಿಗೆ ಮೋಸ ಮಾಡುವ ಕಂಪನಿಗಳಿಗೆ ದಂಡ ವಿಧಿಸುವುದು ಈ ಮಸೂದೆಯ ವಿಶೇಷ ಅಂಶವಾಗಿದೆ. ತಯಾರಕರು ಮತ್ತು ಡೀಲರ್ ಗಳಿಂದ ದಂಡವನ್ನು ಸಂಗ್ರಹಿಸಿ ಕೇಂದ್ರೀಯ ನಿಧಿಯ ಮೂಲಕ ರೈತರಿಗೆ ಪರಿಹಾರ ನೀಡಲಾಗುವುದು. ಕೀಟನಾಶಕಗಳ ಬಲ ಮತ್ತು ದೌರ್ಬಲ್ಯಗಳ ವಿವರವನ್ನು ಕೃಷಿಕರು ಡೀಲರ್ ಬಳಿಯಿಂದ ಪಡೆಯಬಹುದು ಎಂದು ಅವರು ವಿವರಿಸಿದರು.

    ಈಗ ಯಾಕೆ?
    ಸಾವಯವ ಕೀಟನಾಶಕಗಳಿಗೆ ಉತ್ತೇಜನ ನೀಡುವುದು ಈ ಮಸೂದೆಯ ಮುಖ್ಯ ಉದ್ದೇಶವಾಗಿದೆ. ಈ ಮಸೂದೆ 2008ರಲ್ಲಿ ರಾಜ್ಯಸಭೆಯಲ್ಲಿ ಮಂಡನೆಯಾಗಿತ್ತು. ಆದರೆ ಮಸೂದೆ ಕೃಷಿ ಸ್ಥಾಯಿ ಸಮಿತಿ ಪರಿಶೀಲನೆಗೆ ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಮಂಡನೆಯಾಗಿರಲಿಲ್ಲ. ಮೋದಿ ಸರ್ಕಾರದ ಮೊದಲ ಅವಧಿಯಲ್ಲಿ 2017-18ರಲ್ಲಿ ಈ ಸಂಬಂಧ ಕರಡು ಮಸೂದೆಯನ್ನು ರಚಿಸಲಾಗಿತ್ತು.

    ವಿಶ್ವದಲ್ಲೇ ಅತಿ ಹೆಚ್ಚು ಕೀಟನಾಶಕಗಳ ಗ್ರಾಹಕ ದೇಶ ಭಾರತವಾಗಿದ್ದು, ದೇಶದಲ್ಲಿ ಅಂದಾಜು 292 ಕೀಟನಾಶಕಗಳು ನೋಂದಣಿಯಾಗಿವೆ.

  • ಶ್ರೀನಿವಾಸ್ ಪ್ರಸಾದ್ ಅಳಿಯ ಕೂಡ ಸಚಿವ ಸ್ಥಾನದ ಆಕಾಂಕ್ಷಿ

    ಶ್ರೀನಿವಾಸ್ ಪ್ರಸಾದ್ ಅಳಿಯ ಕೂಡ ಸಚಿವ ಸ್ಥಾನದ ಆಕಾಂಕ್ಷಿ

    ಮೈಸೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲಿ ದಿನದಿನಕ್ಕೂ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಲೇ ಇದೆ. ಮೈಸೂರಿನ ನಂಜನಗೂಡಿನ ಬಿಜೆಪಿ ಶಾಸಕ ಹರ್ಷವರ್ಧನ್ ತಾನೂ ಕೂಡ ಸಚಿವ ಸ್ಥಾನದ ಆಕಾಂಕ್ಷಿ. ಈ ಬಗ್ಗೆ ಸಿಎಂ ಅವರಿಗೂ ಖುದ್ದಾಗಿ ಹೇಳಿದ್ದೇನೆ ಎಂದು ಹೇಳುವ ಮೂಲಕ ಸಚಿವ ಸ್ಥಾನದ ಆಕಾಂಕ್ಷಿಗಳ ಪಟ್ಟಿ ಬೆಳೆಸಿದ್ದಾರೆ.

    ಹರ್ಷವರ್ಧನ್ ಸಂಸದ ಶ್ರೀನಿವಾಸ್ ಪ್ರಸಾದ್ ಅವರ ಅಳಿಯ. ಹೀಗಾಗಿ, ಇವರ ಹೇಳಿಕೆ ಗಂಭೀರತೆ ಪಡೆದು ಕೊಂಡಿದೆ. ಕೇಂದ್ರದಲ್ಲಿ ಇನ್ನೊಮ್ಮೆ ಮಂತ್ರಿ ಆಗಬೇಕು ಎಂಬ ಆಸೆ ಹೊಂದಿದ್ದ ಶ್ರೀನಿವಾಸ್ ಪ್ರಸಾದ್ ಅವರಿಗೆ ಅದು ಸಾಧ್ಯವಾಗಿಲ್ಲ. ಹೀಗಾಗಿ, ರಾಜ್ಯದಲ್ಲಿ ತಮ್ಮ ಅಳಿಯನ ಮಂತ್ರಿ ಮಾಡಲು ಲಾಬಿ ಆರಂಭಿಸಿದ್ದಾರಾ ಎಂಬ ಚರ್ಚೆ ಈಗ ಶುರುವಾಗಿದೆ.

    ತಮ್ಮ ಮನದ ಬಯಕೆ ಹೇಳಿಕೊಂಡ ಹರ್ಷವರ್ಧನ್, ಕೇಂದ್ರದಲ್ಲಿ ಮಾಜಿ ಮಂತ್ರಿ ವಿ.ಶ್ರೀನಿವಾಸ್ ಪ್ರಸಾದ್ ಅವರಿಗೆ ಸಚಿವ ಸ್ಥಾನ ನೀಡಲಿಲ್ಲ. ಹಾಗಾಗಿ ರಾಜ್ಯದಲ್ಲಿ ಪ.ಜಾ. ಬಲಗೈ ಜನಾಂಗದಿಂದ ನಾನೂ ಕೂಡ ಸಚಿವ ಸ್ಥಾನದ ಆಕಾಂಕ್ಷಿ. ಚಾಮರಾಜನಗರ ಲೋಕಸಭಾ ವ್ಯಾಪ್ತಿಯಲ್ಲಿ ವಿ.ಶ್ರೀನಿವಾಸ್ ಪ್ರಸಾದ್ ರವರ ಪ್ರಭಾವ ಅಗಾಧವಾಗಿದೆ. ಚಾಮರಾಜನಗರ ಲೋಕಸಭಾ ಮತ್ತು ನಂಜನಗೂಡಿನ ವಿಧಾನಸಭಾ ಕ್ಷೇತ್ರದಲ್ಲಿ ಮೊಟ್ಟಮೊದಲ ಬಾರಿಗೆ ಬಿಜೆಪಿ ಪಕ್ಷದ ಬಾವುಟವನ್ನು ಹಾರಿಸಿದ್ದೇವೆ. ಹೀಗಾಗಿ ಈ ಲೋಕಸಭಾ ಕ್ಷೇತ್ರ ಮತ್ತು ವಿಧಾನಸಭಾ ಕ್ಷೇತ್ರ ಹೆಚ್ಚು ಹೆಚ್ಚು ಅಭಿವೃದ್ಧಿಯಾಗಬೇಕಾದರೆ ಸಚಿವ ಸ್ಥಾನ ಇರಲೇಬೇಕು. ಇದು ಕ್ಷೇತ್ರದ ಜನರ ಬಯಕೆ ಕೂಡ ಎಂದರು.

    ಸಮುದಾಯದ ಬಲಗೈ ಜನಾಂಗದ ಪರವಾಗಿ ನನಗೆ ಸಚಿವ ಸ್ಥಾನ ನೀಡಿದರೆ ಚಾಮರಾಜನಗರ ಲೋಕಸಭಾ ಕ್ಷೇತ್ರ ಮತ್ತು ನಂಜನಗೂಡು ವಿಧಾನಸಭಾ ಕ್ಷೇತ್ರದಲ್ಲಿ ಇನ್ನಷ್ಟು ಪಕ್ಷವನ್ನು ಪ್ರಬಲ ಗೊಳಿಸಿ ಅಭಿವೃದ್ಧಿಕಾರ್ಯ ಮಾಡುತ್ತೇನೆ. ಈಗಾಗಲೇ ಮುಖ್ಯಮಂತ್ರಿ ಯಡಿಯೂರಪ್ಪ ರವರಿಗೆ ನಮ್ಮ ಸಚಿವ ಸ್ಥಾನಗಳು ಬಯಕೆಯನ್ನು ತಿಳಿಸಿದ್ದೇನೆ ಎಂದು ಸ್ಪಷ್ಟಪಡಿಸಿದರು.

  • ಭಾರತ ಮುಸ್ಲಿಮರಿಗೆ ಸೂಕ್ತ ಸ್ಥಳವಲ್ಲ- ಮೆಹಬೂಬಾ ಮುಫ್ತಿ ಪುತ್ರಿ

    ಭಾರತ ಮುಸ್ಲಿಮರಿಗೆ ಸೂಕ್ತ ಸ್ಥಳವಲ್ಲ- ಮೆಹಬೂಬಾ ಮುಫ್ತಿ ಪುತ್ರಿ

    ನವದೆಹಲಿ: ನೆರೆಯ ರಾಷ್ಟ್ರಗಳ ಮುಸ್ಲಿಮೇತರರಿಗೆ ಮಾತ್ರ ಪೌರತ್ವ ನೀಡುವ ಕೇಂದ್ರ ಸರ್ಕಾರದ ಕ್ರಮದ ವಿರುದ್ಧ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಪುತ್ರಿ ಸನಾ ಇಲ್ತಿಜಾ ಜವೇದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಇಂದು ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ವಿವಾದಿತ ತಿದ್ದುಪಡಿ ಮಸೂದೆಗೆ ಅನುಮೋದನೆ ನೀಡಲಾಗಿದೆ. ಇದಕ್ಕೆ ಮೆಹಬೂಬಾ ಮುಫ್ತಿ ಪುತ್ರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿಯವರ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡಿದ್ದು, ಭಾರತ-ಮುಸ್ಲಿಮರಿಗಾಗಿ ಇರುವ ದೇಶವಲ್ಲ ಎಂದು ಬರೆದಿದ್ದಾರೆ.

    ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇಂದು ತಿದ್ದುಪಡಿ ಮಸೂದೆಗೆ ಒಪ್ಪಿಗೆ ಸೂಚಿಸುತ್ತಿದ್ದಂತೆ ಈ ಕುರಿತು ಟ್ವೀಟ್ ಮಾಡಲಾಗಿದ್ದು, ಸರ್ಕಾರ ಮುಸ್ಲಿಮರನ್ನು ಹೊರಗಿಡುವ ಪ್ರಯತ್ನ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದು ಪಡಿಸುವ ಸಂದರ್ಭದಲ್ಲಿ ಆಗಸ್ಟ್ 5ರಂದು ಮೆಹಬೂಬಾ ಮುಫ್ತಿಯವರನ್ನು ಬಂಧನಕ್ಕೊಳಪಡಿಸಿದಾಗಿನಿಂದ ಸನಾ ಇಲ್ತಿಜಾ ಜವೇದ್ ಅವರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಹಿಂದೆ ಸಹ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಸನಾ, ಮುಸ್ಲಿಮರು ಹೆಚ್ಚಿರುವ ದೇಶದಲ್ಲಿ ಅವರು ಎರಡನೇ ದರ್ಜೆಯ ಪ್ರಜೆಗಳಾಗುತ್ತಿದ್ದಾರೆ ಎಂದು ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದರು.

    ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಪಡಿಸುವ ಸಂದರ್ಭದಲ್ಲಿ ಬಂಧಿಸಲಾಗಿದ್ದ ಮೆಹಬೂಬಾ ಮುಫ್ತಿ, ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಖ್ ಅಬ್ದುಲ್ಲಾ ಹಾಗೂ ಮಗ ಒಮರ್ ಅಬ್ದುಲ್ಲಾ ಅವರನ್ನು ಇನ್ನೂ ಸಹ ಬಿಡುಗಡೆ ಮಾಡಿಲ್ಲ. ಅಲ್ಲದೆ ಯಾವಾಗ ಬಿಡುಗಡೆ ಮಾಡಲಾಗುತ್ತದೆ ಎಂಬುದರ ಕುರಿತು ಸಹ ಸ್ಪಷ್ಟತೆ ಇಲ್ಲ.

    ಇಂದು ಸಚಿವ ಸಂಪುಟ ಸಭೆಯಲ್ಲಿ ಬಾಂಗ್ಲಾದೇಶ, ಅಫ್ಘಾನಿಸ್ಥಾನ ಹಾಗೂ ಪಾಕಿಸ್ಥಾನದ ಮುಸ್ಲಿಮೇತರ ವಲಸಿಗರಿಗೆ ಭಾರತೀಯ ಪೌರತ್ವ ನೀಡುವ ಪೌರತ್ವ ತಿದ್ದುಪಡಿ ಮಸೂದೆಗೆ ಅನುಮೋದನೆ ನೀಡಲಾಗಿದೆ.

    ಈ ದೇಶಗಳಲ್ಲಿ ಅಲ್ಪಸಂಖ್ಯಾತರಾದ ಹಿಂದೂಗಳು, ಸಿಖ್, ಜೈನರು, ಬೌದ್ಧರು, ಪಾರ್ಸಿ ಹಾಗೂ ಕ್ರಿಶ್ಚಿಯನ್ ಸಮುದಾಯ ಕಿರುಕುಳ ಅನುಭವಿಸುತ್ತಿದೆ. ಹೀಗಾಗಿ ಇವರಿಗೆ ಭಾರತದ ಪೌರತ್ವ ನೀಡುವ ಅವಶ್ಯಕತೆ ಇದೆ ಎನ್ನುವುದು ಕೇಂದ್ರದ ವಾದ. ಆದರೆ ಮುಸ್ಲಿಮರನ್ನು ಹೊರಗಡೆ ಇಟ್ಟಿರುವುದು ಸಂವಿಧಾನ ವಿರೋಧಿ ನಡೆ ಎನ್ನುವುದು ವಿಪಕ್ಷಗಳ ಪ್ರತಿವಾದ.

    ಭಾರತದ ಪೌರತ್ವ ಪಡೆಯಬೇಕಾದರೆ 12 ವರ್ಷಕ್ಕಿಂತ ಹೆಚ್ಚು ಕಾಲ ದೇಶದಲ್ಲಿ ನೆಲೆಸಿರಬೇಕು ಎನ್ನುವ ನಿಯಮವನ್ನು 6 ವರ್ಷಕ್ಕೆ ಈ ಮಸೂದೆ ಇಳಿಸಿದೆ. ಸೂಕ್ತ ದಾಖಲೆಯ ಅಗತ್ಯತೆಯೂ ಇಲ್ಲದಿದ್ದರೂ ಕೂಡ ಪೌರತ್ವ ಸಿಗಲಿದೆ.

    2016ರಲ್ಲಿ ಈ ಮಸೂದೆ ಮೊದಲ ಬಾರಿಗೆ ಲೋಕಸಭೆಯಲ್ಲಿ ಮಂಡನೆಯಾಗಿತ್ತು. ಈ ವೇಳೆ ಕೋಲಾಹಲ ನಡೆದು ಜಂಟಿ ಸಂಸದೀಯ ಸಮಿತಿ ಪರಾಮರ್ಶೆಗೆ ಹೋಗಿತ್ತು. ಈ ಸಮಿತಿ ಈ ವರ್ಷದ ಜನವರಿಯಲ್ಲಿ ವರದಿ ನೀಡಿದ ಬಳಿಕ ಮಸೂದೆ ಮಂಡನೆಯಾಗಿತ್ತು. ಲೋಕಸಭೆಯಲ್ಲಿ ಪಾಸ್ ಆದರೂ ರಾಜ್ಯಸಭೆಯಲ್ಲಿ ಬಹುಮತ ಇಲ್ಲದ ಕಾರಣ ಮಸೂದೆ ಪಾಸ್ ಆಗಿರಲಿಲ್ಲ. ಈ ಸಂದರ್ಭದಲ್ಲಿ 16ನೇ ಲೋಕಸಭೆಯ ಅವಧಿ ಮುಕ್ತಾಯವಾಗಿತ್ತು. ಹೀಗಾಗಿ ಈಗ ತಿದ್ದುಪಡಿ ಮಾಡಿ ಮಂದಿನ ಮಂಗಳವಾರ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಲಾಗುತ್ತಿದೆ.

    ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ರದ್ದುಗೊಳಿಸುವಷ್ಟೇ ಮಹತ್ವದ ಮಸೂದೆ ಇದಾಗಿದೆ. ಹೀಗಾಗಿ ಎಲ್ಲ ಸಂಸದರು ಸದನದಲ್ಲಿ ಹಾಜರಿರಬೇಕು ಎಂದು ಈಗಾಗಲೇ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬಿಜೆಪಿ ಸಂಸದರಿಗೆ ಸೂಚಿಸಿದ್ದಾರೆ.

  • ಕೇಂದ್ರದ ನೀತಿ ಖಂಡಿಸಿ ಇಂದು ಬ್ಯಾಂಕ್ ನೌಕರರ ಮುಷ್ಕರ

    ಕೇಂದ್ರದ ನೀತಿ ಖಂಡಿಸಿ ಇಂದು ಬ್ಯಾಂಕ್ ನೌಕರರ ಮುಷ್ಕರ

    ನವದೆಹಲಿ: 10 ರಾಷ್ಟ್ರೀಕೃತ ಬ್ಯಾಂಕ್‍ಗಳನ್ನು 4 ಬ್ಯಾಂಕುಗಳನ್ನಾಗಿ ವಿಲೀನಗೊಳಿಸುತ್ತಿರುವ ಕೇಂದ್ರ ಸರ್ಕಾರ ನಿರ್ಧಾರವನ್ನು ಖಂಡಿಸಿ ಅಖಿಲ ಭಾರತ ಬ್ಯಾಂಕ್ ಸಿಬ್ಬಂದಿ ಒಕ್ಕೂಟ (ಎಐಬಿಇಎ) ಮತ್ತು ಬ್ಯಾಂಕ್ ಉದ್ಯೋಗಿಗಳ ಫೆಡರೇಷನ್ ಆಫ್ ಇಂಡಿಯಾ (ಬಿಇಎಫ್‍ಐ) ಮಂಗಳವಾರ ಮುಷ್ಕರಕ್ಕೆ ಕರೆ ನೀಡಿವೆ.

    ಮುಷ್ಕರದಿಂದ ಮಂಗಳವಾರ ಸರ್ಕಾರಿ ಸ್ವಾಮ್ಯದ ಬ್ಯಾಂಕ್‍ಗಳ ಸೇವೆಯಲ್ಲಿ ಸಮಸ್ಯೆಯಾಗುವ ಸಾಧ್ಯತೆಯಿದ್ದು, ಖಾಸಗಿ ವಲಯದ ಬ್ಯಾಂಕ್‍ಗಳು ಈ ಮುಷ್ಕರದಲ್ಲಿ ಭಾಗವಹಿಸುತ್ತಿಲ್ಲ. ಮುಷ್ಕರ ನಡೆಯುವ ಪ್ರದೇಶದಲ್ಲಿ ಎಟಿಎಂಗಳನ್ನೂ ಮುಚ್ಚುವುದಾಗಿ ಸಂಘಟನೆಗಳು ತಿಳಿಸಿವೆ.

    ಬ್ಯಾಂಕ್ ಮುಷ್ಕರವನ್ನು ಹಿಂದಕ್ಕೆ ಪಡೆಯುವಂತೆ ಸರ್ಕಾರ ಮುಖ್ಯ ಕಾರ್ಮಿಕ ಆಯುಕ್ತ, ಕಾರ್ಮಿಕ ಸಚಿವಾಲಯದ ಜೊತೆಗಿನ ಮಾತುಕತೆ ವಿಫಲವಾದ ಹಿನ್ನೆಲೆಯಲ್ಲಿ ನಿಗದಿಯಂತೆ ಮುಷ್ಕರ ನಡೆಯಲಿದೆ.

    ಬ್ಯಾಂಕ್ ನೌಕರರ ಸಂಘದ ಒಟ್ಟು 3.50 ಲಕ್ಷ ಸಿಬ್ಬಂದಿ ಈ ಮುಷ್ಕರದಲ್ಲಿ ಭಾಗಿಯಾಗಲಿರುವ ಕಾರಣ ಬ್ಯಾಂಕುಗಳ ಸೇವೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆಯಿದೆ.

    ಒಕ್ಕೂಟದಲ್ಲಿ ಸದಸ್ಯತ್ವ ಪಡೆದಿರುವ ಸಿಬ್ಬಂದಿ ಸಂಖ್ಯೆ ಕಡಿಮೆ ಇರುವ ಪರಿಣಾಮ ವಹಿವಾಟಿನ ಮೇಲೆ ಹೆಚ್ಚಿನ ಪರಿಣಾಮವೇನೂ ಆಗುವುದಿಲ್ಲ ಎಂದು ಎಸ್‍ಬಿಐ ಷೇರುಪೇಟೆಗೆ ಮಾಹಿತಿ ನೀಡಿದೆ. ಠೇವಣಿ ಇಡುವುದು, ನಗದು ಹಿಂದಕ್ಕೆ ಪಡೆಯುವುದು, ಚೆಕ್ ಕ್ಲಿಯರೆನ್ಸ್ ಸೇರಿದಂತೆ ಇನ್ನಿತರ ವಹಿವಾಟುಗಳಿಗೆ ಮುಷ್ಕರದಿಂದ ಸಮಸ್ಯೆಯಾಗುವ  ಸಾಧ್ಯತೆಯಿದೆ.

  • ಪ್ರವಾಹ ವರದಿಯನ್ನು ಕೇಂದ್ರ ತಿರಸ್ಕಾರ ಮಾಡೇ ಇಲ್ಲ- ಸಿಎಂ ಬಿಎಸ್‍ವೈ

    ಪ್ರವಾಹ ವರದಿಯನ್ನು ಕೇಂದ್ರ ತಿರಸ್ಕಾರ ಮಾಡೇ ಇಲ್ಲ- ಸಿಎಂ ಬಿಎಸ್‍ವೈ

    ಬೆಳಗಾವಿ: ರಾಜ್ಯದ ಪ್ರವಾಹ ಪರಿಹಾರದ ವರದಿಯನ್ನು ಕೇಂದ್ರ ತಿರಸ್ಕಾರ ಮಾಡಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಸ್ಪಷ್ಟನೆ ನೀಡಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ರಾಜ್ಯದ ಪ್ರಸ್ತಾಪ ಹಾಗೂ ಕೇಂದ್ರ ತಂಡದ ವರದಿ ಹೊಂದಾಣಿಕೆ ಆಗುತ್ತಿಲ್ಲ. ಈ ಕಾರಣಕ್ಕೆ ಪರಿಶೀಲಿಸಬೇಕಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಇದಕ್ಕಾಗಿ ನಮ್ಮ ಇಬ್ಬರು ಅಧಿಕಾರಿಗಳನ್ನು ದೆಹಲಿಗೆ ಕಳುಹಿಸಲಾಗಿದೆ ಎಂದರು.

    ಈ ದೇಶದಲ್ಲಿ ಅನೆಕ ರಾಜ್ಯಗಳ ಪರಿಸ್ಥಿತಿ ಹೀಗೆ ಇದೆ. ನಾವೂ ಬಜೆಟ್ ನಲ್ಲಿ ಹಣ ನೀಡುವ ಮೂಲಕ ಎಲ್ಲ ಇಲಾಖೆಯಿಂದ ಪರಿಹಾರ ಕೊಡಲಾಗುವುದು. ದೇಶದಲ್ಲಿ ನಮ್ಮ ರಾಜ್ಯದಲ್ಲಿ ಅತೀ ಹೆಚ್ಚು ಹಾನಿಯಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‍ಡಿಆರ್ ಎಪ್‍) ನಿಂದ ಹೆಚ್ಚಿನ ಪ್ರಮಾಣದಲ್ಲಿ ಹಣ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.

    ಕೇಂದ್ರ ಸರ್ಕಾರ ರಾಜ್ಯದ ವರದಿಯನ್ನು ತಿರಸ್ಕರಿಸಿದೆ ಎಂಬುದು ಸುಳ್ಳು. ಈಗಾಗಲೇ ಕೇಂದ್ರದ ಎಲ್ಲ ಸಚಿವರೊಂದಿಗೆ ಮಾತನಾಡಿದ್ದೇನೆ. ಮೂರ್ನಾಲ್ಕು ದಿನಗಳಲ್ಲಿ ರಾಜ್ಯ ಸರ್ಕಾರಕ್ಕೆ ಕೇಂದ್ರದ ಪರಿಹಾರ ಹಣ ಬಿಡುಗಡೆ ಆಗಲಿದೆ ಎಂದು ಭರವಸೆ ನೀಡಿದರು.

    ದೇಶದ ಯಾವ ಪ್ರವಾಹಪೀಡಿತ ರಾಜ್ಯಗಳಿಗೆ ಪರಿಹಾರ ಬಿಡುಗಡೆ ಆಗಿಲ್ಲ. ರಾಜ್ಯಕ್ಕೆ ಕೇಂದ್ರದಿಂದ ಹೆಚ್ಚಿನ ಪ್ರಮಾಣದಲ್ಲಿ ಪರಿಹಾರ ಬಿಡುಗಡೆ ಆಗುವ ವಿಶ್ವಾಸ ಇದೆ. ರಾಜ್ಯ ಸರ್ಕಾರದ ಬೊಕ್ಕಸ ಖಾಲಿ ಆಗಿಲ್ಲ. ಖಾಲಿ ಆಗಿದ್ದರೆ ಪ್ರವಾಹ ಪರಿಹಾರಕ್ಕೆ ಇಷ್ಟೊಂದು ಹಣ ನೀಡಲು ಆಗುತ್ತಿರಲಿಲ್ಲ. ಮುಂದಿನ ಬಜೆಟ್ ನಲ್ಲಿ ಪ್ರವಾಹ ಪುನರ್ವಸತಿಗೆ ಹೆಚ್ಚಿನ ಹಣ ಮೀಸಲಿಡುತ್ತೇವೆ ಎಂದರು.

    ಇದೇ ವೇಳೆ ಮಧ್ಯಂತರ ಚುನಾವಣೆಯ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಅವರು, ದೇವೇಗೌಡ ಅವರು ಬೇಜವಾಬ್ದಾರಿ ಹೇಳಿಕೆಗಳನ್ನ ಕೊಟ್ಟಿದ್ದಾರೆ. ನಾನು ಯಾರ ಬಗ್ಗೆಯೂ ಟೀಕೆ ಮಾಡಲ್ಲ. ರಾಜ್ಯ ಸರ್ಕಾರದಲ್ಲಿ ಎಲ್ಲ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದೆ. ಎಲ್ಲಿ ಕೆಲಸ ನಿಂತಿದೆ ಅದನ್ನ ತೋರಿಸಲಿ. ಲೂಟಿ ಮಾಡುವವರ ವಿರುದ್ಧ ಕ್ರಮ ತೆಗೆದುಕ್ಕೊಳ್ಳಲಾಗುತ್ತಿದೆ ಎಂದರು.

    ಕೇಂದ್ರ ತಿರಸ್ಕಾರ:
    ರಾಜ್ಯ ಸರ್ಕಾರ ನೀಡಿದ ನೆರೆ ವರದಿಯನ್ನು ಕೇಂದ್ರ ತಿರಸ್ಕರಿಸಿದೆ. ರಾಜ್ಯ ಸರ್ಕಾರ ಇಷ್ಟು ದಿನ ಸಮಯ ತೆಗೆದುಕೊಂಡ ನೆರೆ ಸ್ಥಳಗಳಿಗೆ ಭೇಟಿ ನೀಡಿ ಸಮೀಕ್ಷೆ ನಡೆಸಿ ವರದಿಯನ್ನು ಸಿದ್ಧಪಡಿಸಿತ್ತು. ಇತ್ತ ಕೇಂದ್ರ ನೇಮಕ ಮಾಡಿದ್ದ ಅಧಿಕಾರಿಗಳು ಸಹ ಸಮೀಕ್ಷೆ ನಡೆಸಿ ವರದಿಯನ್ನು ಸಿದ್ಧಪಡಿಸಿಕೊಂಡಿದ್ದರು. ಇದೀಗ ರಾಜ್ಯ ನೀಡಿದ ವರದಿಯಲ್ಲಿ ಅಂಕಿ ಅಂಶಗಳು ತಪ್ಪಾಗಿದೆ. ಪ್ರಮಾಣೀಕರಿಸಿ ಮತ್ತೊಮ್ಮೆ ಹೊಸ ವರದಿ ನೀಡಿ ಎಂದು ಕಂದಾಯ ಇಲಾಖೆ ಕಾರ್ಯದರ್ಶಿ ಅನಿಲ್ ಕುಮಾರ್‍ಗೆ ಕೇಂದ್ರ ಗೃಹ ಸಚಿವಾಲಯದ ಅಧಿಕಾರಿಗಳು ಸಂದೇಶ ರವಾನಿಸಿದ್ದಾರೆ ಎಂಬುದಾಗಿ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭ್ಯವಾಗಿತ್ತು.

    ಅಲ್ಲದೇ ಕೇಂದ್ರ ತಿರಸ್ಕಾರ ಮಾಡಿದೆ ಎಂದು ಕಾಂಗ್ರೆಸ್ ಕೂಡ ತಮ್ಮ ಆಕ್ರೋಶ ವ್ಯಕ್ತಪಡಿಸಿ ಟ್ವೀಟ್ ಮಾಡಿದೆ. ಕೇಂದ್ರಕ್ಕೆ ಹೆಚ್ಚು ತೆರಿಗೆ ನೀಡುತ್ತಿರುವ ದೇಶದ 4ನೇ ಅತಿ ದೊಡ್ಡ ರಾಜ್ಯ ಕರ್ನಾಟಕ. ನಮ್ಮ ತೆರಿಗೆ ಹಣವನ್ನು ನೆರೆ ಪರಿಹಾರಕ್ಕಾಗಿ ಕೇಳುವುದು ನಮ್ಮ ಹಕ್ಕು. ಸಿಎಂ ಯಡಿಯೂರಪ್ಪ ಅವರು ಮಾತು ಕೊಟ್ಟಂತೆ 3 ದಿನಗಳಲ್ಲಿ ಕೇಂದ್ರದಿಂದ ಪರಿಹಾರ ಬರದೇ ಇದ್ದಲ್ಲಿ ರಾಜ್ಯಾದ್ಯಂತ ‘ಕರ ನಿರಾಕರಣೆ’ ಚಳುವಳಿಗೆ ಕರೆ ನೀಡಲಾಗುವುದು ಎಂದು ಕಾಂಗ್ರೆಸ್ ಎಚ್ಚರಿಕೆ ನೀಡಿದೆ.

  • ತಮ್ಮ ನಿವಾಸದಲ್ಲೇ ಸೆಹ್ವಾಗ್ ಮದ್ವೆ ಮಾಡಿಸಿದ್ದ ಅರುಣ್ ಜೇಟ್ಲಿ

    ತಮ್ಮ ನಿವಾಸದಲ್ಲೇ ಸೆಹ್ವಾಗ್ ಮದ್ವೆ ಮಾಡಿಸಿದ್ದ ಅರುಣ್ ಜೇಟ್ಲಿ

    ನವದೆಹಲಿ: ಕೇಂದ್ರದ ಮಾಜಿ ಸಚಿವ ಅರುಣ್ ಜೇಟ್ಲಿ ಅವರು ಶನಿವಾರ ಮಧ್ಯಾಹ್ನ ನಿಧನರಾಗಿದ್ದು, ಇಂದು ಅವರ ಅಂತ್ಯಕ್ರಿಯೆ ನಡೆಯಲಿದೆ. ಈ ಮಧ್ಯೆ ಅಗಲಿದ ದಿವ್ಯ ಚೇತನರ ಅಂತಿಮ ದರ್ಶನ ಪಡೆದು ಸಾವಿರಾರು ಮಂದಿ ಕಂಬನಿ ಮಿಡಿಯುವ ಮೂಲಕ ಸಂತಾಪ ಸೂಚಿಸುತ್ತಿದ್ದಾರೆ.

    ಕೇವಲ ರಾಜಕಾರಣ ಮಾತ್ರವಲ್ಲದೇ ಜೇಟ್ಲಿ ಅವರಿಗೆ ಬೇರೆ ಕ್ಷೇತ್ರಗಳಲ್ಲಿಯೂ ಆಸಕ್ತಿ ಹೆಚ್ಚಾಗಿತ್ತು. ಕ್ರಿಕೆಟ್ ಪ್ರಿಯರಾಗಿದ್ದ ಅವರು ದೆಹಲಿ ಜಿಲ್ಲಾ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿದ್ದರು. ಜೇಟ್ಲಿ ಮೃತಪಟ್ಟ ವಿಚಾರ ಸುದ್ದಿಯಾಗುತ್ತಿದ್ದಂತೆಯೇ ಕ್ರಿಕೆಟ್ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಟ್ವೀಟ್ ಮಾಡಿ ಕಂಬನಿ ಮಿಡಿದಿದ್ದರು. ಅಲ್ಲದೆ ನನಗೆ ಹಾಗೂ ಇತರ ಆಟಗಾರರಿಗೆ ಜೇಟ್ಲಿ ಅವರು ಹೇಗೆ ಸಹಾಯ ಮಾಡಿದ್ದರು ಎಂಬುದನ್ನು ಮೆಲುಕು ಹಾಕಿಕೊಂಡಿದ್ದರು.

    ಕುತೂಹಲಕಾರಿ ವಿಚಾರವೆಂದರೆ, ಸೆಹ್ವಾಗ್ ಹಾಗೂ ಆರತಿ ಅವರ ವಿವಾಹವನ್ನು 2004ರಲ್ಲಿ ಅರುಣ್ ಜೇಟ್ಲಿ ಅವರು ತಮ್ಮ ನಿವಾಸದಲ್ಲಿಯೇ ಮಾಡಿಸಿದ್ದರು. ಮದುವೆಯನ್ನು ತನ್ನ ಅಧಿಕೃತ ಬಂಗಲೆಯಲ್ಲೇ ನಡೆಸಬೇಕೆಂದು ಸೆಹ್ವಾಗ್ ಅವರ ತಂದೆಗೆ ಜೇಟ್ಲಿ ಸೂಚಿಸಿದ್ದರು. ಹೀಗಾಗಿ 9 ನೇಯ ಅಶೋಕ ರಸ್ತೆಯಲ್ಲಿರುವ ಅವರ ನಿವಾಸದಲ್ಲಿ ವಿವಾಹ ಸಮಾರಂಭ ನೆರವೇರಿತ್ತು.

    ಸೆಹ್ವಾಗ್ ಮದುವೆ ಸಮಾರಂಭಕ್ಕೋಸ್ಕರ ಜೇಟ್ಲಿ ತಮ್ಮ ನಿವಾಸವನ್ನು ಅಲಂಕಾರ ಮಾಡಿದ್ದರು. ಅಲ್ಲದೆ ಅತಿಥಿಗಳಿಗಾಗಿ ಎಲ್ಲಾ ವ್ಯವಸ್ಥೆಗಳನ್ನು ಮಾಡಿದ್ದರು. ಆದರೆ ಜೇಟ್ಲಿ ಅವರು ಮಾತ್ರ ಬೆಂಗಳೂರಿನಲ್ಲಿ ಇದ್ದುದ್ದರಿಂದ ಮದುವೆಗೆ ಹಾಜರಾಗಿರಲಿಲ್ಲ. ಇದನ್ನೂ ಓದಿ: ಭಾನುವಾರ ನಿಗಮ್‍ಬೋಧ್ ಘಾಟ್‍ನಲ್ಲಿ ಅರುಣ್ ಜೇಟ್ಲಿ ಅಂತ್ಯಕ್ರಿಯೆ

    ಮದುವೆಗೆ ಕ್ರೀಡಾಲೋಕದ ಗಣ್ಯರು, ಬಾಲಿವುಡ್ ನಟ-ನಟಿಯರು, ರಾಜಕೀಯ ನಾಯಕರುಗಳು ಭಾಗವಹಿಸಿದ್ದರು. ಕಾರ್ಯಕ್ರಮದ ಹಿನ್ನೆಲೆಯಲ್ಲಿ ಭಾರೀ ಬಿಗಿ ಭದ್ರತೆ ಕೈಗೊಳ್ಳಲಾಗಿದ್ದು, ಹೀಗಾಗಿ ಮದುವೆಗೆ ಬರುವವರು ಆಮಂತ್ರಣ ಪತ್ರಿಕೆ ತರುವುದು ಕಡ್ಡಾಯ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ತಮ್ಮನ್ನು ಅಗಲಿದ ಸುದ್ದಿ ತಿಳಿದ ತಕ್ಷಣವೇ ಸೆಹ್ವಾಗ್ ಅವರು ಟ್ವೀಟ್ ಮಾಡಿ ತಮಗೆ ಸಹಾಯ ಮಾಡಿರುವ ಜೇಟ್ಲಿ ಅವರನ್ನು ನೆನೆದು ಕಣ್ಣೀರಾದರು.

  • ಸತ್ಯ ಒಂದಲ್ಲೊಂದು ದಿನ ಹೊರಗೆ ಬರುತ್ತೆ ಅನ್ನೋದಕ್ಕೆ ಎಚ್‍ಡಿಡಿ ಹೇಳಿಕೆಯೇ ಉದಾಹರಣೆ- ಪ್ರಹ್ಲಾದ್ ಜೋಷಿ

    ಸತ್ಯ ಒಂದಲ್ಲೊಂದು ದಿನ ಹೊರಗೆ ಬರುತ್ತೆ ಅನ್ನೋದಕ್ಕೆ ಎಚ್‍ಡಿಡಿ ಹೇಳಿಕೆಯೇ ಉದಾಹರಣೆ- ಪ್ರಹ್ಲಾದ್ ಜೋಷಿ

    ಹುಬ್ಬಳ್ಳಿ: ಸತ್ಯ ಒಂದಲ್ಲ ಒಂದಿನ ಹೊರಗೆ ಬರುತ್ತದೆ ಅನ್ನೋದಕ್ಕೆ ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡರ ಹೇಳಿಕೆಯೇ ಉದಾಹರಣೆಯಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಮೈತ್ರಿ ಸರ್ಕಾರದ ಪತನ ಕುರಿತು ದೇವೇಗೌಡ ಹೇಳಿಕೆ ಸಂಬಂಧ ಪ್ರತಿಕ್ರಿಯಿಸಿ, ಮೈತ್ರಿ ಸರ್ಕಾರದ ಒಳ ಜಗಳದಿಂದಾಗಿ ಸರ್ಕಾರ ಪತನಗೊಂಡಿದೆ. ಈ ಬಗ್ಗೆ ಈ ಹಿಂದೆಯೇ ನಾನು ಹೇಳಿದ್ದೆ. ಬಿಜೆಪಿಯವರೇ ಮೈತ್ರಿ ಸರ್ಕಾರ ಉರುಳಿಸುತ್ತಿದ್ದಾರೆ ಎಂದು ಜನರ ಮುಂದೆ ಬಿಂಬಿಸಿದ್ದರು. ಆದರೆ ಸತ್ಯ ಒಂದಿಲ್ಲ ಒಂದಿನ ಹೊರಬರುತ್ತದೆ ಅನ್ನೋದಕ್ಕೆ ದೇವೇಗೌಡರು ಹೇಳಿಕೆನೇ ಉದಾಹರಣೆ ಎಂದು ತಿಳಿಸಿದರು.

    ಅಧಿಕಾರದ ವ್ಯಾಮೋಹದಿಂದ ಮೈತ್ರಿ ಸರ್ಕಾರ ರಚನೆ ಮಾಡಿದರು. ಆದರೆ ತಮ್ಮ ಒಳ ಬೇಗುದಿಯಿಂದಾಗಿ ಮೈತ್ರಿ ಸರ್ಕಾರ ಅಧೋಗತಿಗೆ ಬಂತು. ಕಾಂಗ್ರೆಸ್ ಪಕ್ಷ ದೇಶದಲ್ಲೇ ಬೌದ್ಧಿಕ ದಿವಾಳಿಕೋರತನಕ್ಕೆ ಸಾಕ್ಷಿಯಾಗಿದೆ. ಪಿ ಚಿದಂಬರಂ ಅವರು ನೆಲದ ಕಾನೂನಿಗೆ ಬೆಲೆ ಇಲ್ಲದಂತೆ ನಡೆದುಕೊಂಡಿದ್ದಾರೆ. ರಾಜ್ಯ ಹಾಗೂ ದೇಶದಲ್ಲಿ ಕಾಂಗ್ರೆಸ್ ಅಧೋಗತಿಗೆ ತೆರಳಿದೆ. ಕಾಂಗ್ರೆಸ್ ನವರಿಗೆ ಯಾವುದನ್ನ ವಿರೋಧ ಮಾಡಬೇಕು ಎಂಬುದು ತಿಳಿದಿಲ್ಲ ಎಂದು ಗರಂ ಆದರು.

    ಸಚಿವಾಕಾಂಕ್ಷಿಗಳಲ್ಲಿ ಅಸಮಾಧಾನ ವಿಚಾರಕ್ಕೆ ಪ್ರತಿಕ್ರಿಯಿಸಿ, ಅಸಮಾಧಾನಗೊಂಡವರನ್ನ ಸಮಾಧಾನ ಪಡಿಸುವಂತಹ ಕೆಲಸ ನಡೆದಿದೆ. ರಾಜ್ಯದಲ್ಲಿ ಬಿಜೆಪಿ ಉತ್ತಮ ಆಡಳಿತವನ್ನ ನೀಡಲಿದೆ. ಸರ್ಕಾರ ನಾಲ್ಕು ವರ್ಷ ನಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಇದೇ ವೇಳೆ ಉಮೆಶ್ ಕತ್ತಿ ಜೆಡಿಎಸ್‍ನವರ ಸಂಪರ್ಕದಲ್ಲಿದ್ದಾರೆ ಎಂಬ ವಿಚಾರದ ಕುರಿತು ಮಾತನಾಡಿದ ಜೋಷಿ, ಅದೆಲ್ಲ ಶುದ್ಧ ಸುಳ್ಳು ವಿಚಾರ. ಜೆಡಿಎಸ್ ಹಾಗೂ ಕಾಂಗ್ರೆಸ್ ಮುಳುಗುತ್ತಿರುವ ಹಡಗುಗಳು. ಮುಳುಗುತ್ತಿರುವ ಹಡಗಿನಲ್ಲಿ ಯಾರೂ ಪ್ರಾಣ ಕಳೆದುಕೊಳ್ಳುವುದಿಲ್ಲ. ನೆರೆ ಪರಿಹಾರಕ್ಕೆ ಈಗಾಗಲೇ ಕೇಂದ್ರದಿಂದ ಹಣ ಬಿಡುಗಡೆಯಾಗಿದೆ. ಇನ್ನೂ ಹೆಚ್ಚಿನ ಹಣ ಬಿಡುಗಡೆಯಾಗಲಿದೆ ಎಂದು ತಿಳಿಸಿದರು.

    ಮಹೇಶ್ ಕುಮಟಳ್ಳಿ ಅವರನ್ನೂ ನಾವು ವಿಶ್ವಾಸಕ್ಕೆ ತೆಗೆದುಕೊಂಡು ಸರ್ಕಾರ ನಡೆಸಲಿದ್ದೇವೆ. ಸಚಿವ ಸಂಪುಟ ವಿಸ್ತರಣೆಯಾಗಿದೆ ಆದಷ್ಟು ಬೇಗ ಖಾತೆ ಹಂಚಿಕೆಯಾಗುತ್ತದೆ. ಅನರ್ಹ ಶಾಕಸರೆಲ್ಲರೂ ಅರ್ಹ ಶಾಸಕರಾಗುತ್ತಾರೆ. ಸುಪ್ರೀಂಕೋರ್ಟಿನಲ್ಲಿ ಅವರಿಗೆ ಜಯ ಸಿಗುತ್ತದೆ ಎಂದರು.

  • ಸಂಪುಟದಲ್ಲಿ ನನಗೆ ಜವಾಬ್ದಾರಿ ನೀಡಬೇಡಿ – ಪ್ರಧಾನಿಗೆ ಜೇಟ್ಲಿ ಮನವಿ

    ಸಂಪುಟದಲ್ಲಿ ನನಗೆ ಜವಾಬ್ದಾರಿ ನೀಡಬೇಡಿ – ಪ್ರಧಾನಿಗೆ ಜೇಟ್ಲಿ ಮನವಿ

    ನವದೆಹಲಿ: ದೀರ್ಘ ಅವಧಿಯಿಂದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಕೇಂದ್ರ ಆರ್ಥಿಕ ಸಚಿವರಾಗಿದ್ದ ಅರುಣ್ ಜೇಟ್ಲಿ ಅವರು ಈ ಬಾರಿಯ ಸಂಪುಟದಲ್ಲಿ ತಮಗೇ ಯಾವುದೇ ಜವಾಬ್ದಾರಿ ನೀಡಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಬಳಿ ಮನವಿ ಮಾಡಿಕೊಂಡಿದ್ದಾರೆ.

    ತಮ್ಮ ನಿರ್ಧಾರದ ಕುರಿತು ಸ್ಪಷ್ಟಪಡಿಸಿ ಪತ್ರ ಬರೆದಿರುವ ಅರುಣ್ ಜೇಟ್ಲಿ ಅವರು, ಕೇಂದ್ರದಲ್ಲಿ ಪ್ರತಿ ಬಾರಿ ಎನ್‍ಡಿಎ ಸರ್ಕಾರದಲ್ಲಿ ನಾನು ಸಚಿವನಾಗಿದ್ದು, ಈ ಅವಕಾಶ ಮಾಡಿಕೊಟ್ಟಿದ್ದಕ್ಕೆ ಬಿಜೆಪಿ ನಾಯಕರಿಗೆ ಧನ್ಯವಾದಗಳು. ಆದರೆ ಈ ಬಾರಿ ಅನಾರೋಗ್ಯದ ಕಾರಣದಿಂದಾಗಿ ವಿಶ್ರಾಂತಿ ಅಗತ್ಯವಿದ್ದು, ಸಂಪುಟ ಸೇರಲು ಅಸಹಾಯಕನಾಗಿದ್ದೇನೆ ಎಂದಿದ್ದಾರೆ.

    ನಿಮ್ಮ ಸರ್ಕಾರದ ಅವಧಿಯಲ್ಲಿ 5 ವರ್ಷ ಸಚಿವನಾಗಿ ಕಾರ್ಯನಿರ್ವಹಿಸಿದ್ದು ನನಗೆ ಹೆಮ್ಮೆಯ ಸಂಗತಿಯಾಗಿದೆ. ಈ ಹಿಂದೆಯೂ ಎನ್‍ಡಿಎ ಸರ್ಕಾರದ ಅವಧಿಯಲ್ಲಿ ಸಚಿವನಾಗಿದ್ದೆ. ಸದ್ಯ ಇದಕ್ಕಿಂತ ಹೆಚ್ಚು ನಿರೀಕ್ಷೆ ಮಾಡುತ್ತಿಲ್ಲ. ಕಳೆದ 9 ತಿಂಗಳಿನಿಂದ ಆನಾರೋಗ್ಯದ ಸಮಸ್ಯೆ ಎದುರಿಸಿದ್ದೇನೆ. ಚುನಾವಣಾ ಪ್ರಚಾರ ಮುಗಿದ ಬಳಿಕ ನಾನು ಮೌಖಿಕವಾಗಿ ತನ್ನ ನಿರ್ಧಾರವನ್ನು ನಿಮಗೆ ತಿಳಿಸಿದ್ದೆ. ಅನಾರೋಗ್ಯದ ಸಮಸ್ಯೆಯಿಂದ ಸರ್ಕಾರದಲ್ಲಿ ಯಾವುದೇ ಜವಾಬ್ದಾರಿ ನಿರ್ವಹಿಸಲು ಕಷ್ಟ. ಆದ್ದರಿಂದ ಅಧಿಕೃತವಾಗಿ ಈ ಬಗ್ಗೆ ಸ್ಪಷ್ಟಪಡಿಸುತ್ತಿದ್ದೇನೆ. ಈ ಬಾರಿಯ ಸಂಪುಟ ಸೇರದಿರಲು ನಿರ್ಧರಿಸಿದ್ದು, ನನ್ನ ಸಹಕಾರ ಸದಾ ಪಕ್ಷಕ್ಕೆ ಹಾಗೂ ಸರ್ಕಾರಕ್ಕೆ ಇರುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

    ಕಳೆದ ಎನ್‍ಡಿಎ ಸರ್ಕಾರದ ಅವಧಿಯ ಅಂತಿಮ ಬಜೆಟ್ ವೇಳೆಯೂ ಅರುಣ್ ಜೇಟ್ಲಿ ಅವರು ಆರೋಗ್ಯ ಸಮಸ್ಯೆ ಎದುರಿಸಿದ್ದ ಪರಿಣಾಮ ರೈಲ್ವೇ ಸಚಿವರಾಗಿದ್ದ ಪಿಯೂಷ್ ಗೋಯೆಲ್ ಅವರು ಬಜೆಟ್ ಮಂಡನೆ ಮಾಡಿದ್ದರು. ಇದಕ್ಕೂ ಮುನ್ನ ಮೂತ್ರಪಿಂಡ ಸಮಸ್ಯೆಯಿಂದಾಗಿ ಮೂರು ತಿಂಗಳ ಕಾಲ ಸುದೀರ್ಘ ರಜೆ ಪಡೆದಿದ್ದ ಅರುಣ್ ಜೇಟ್ಲಿ ಅವರು ಆ ಬಳಿಕ ಮತ್ತೆ ಕರ್ತವ್ಯಕ್ಕೆ ಹಾಜರಾಗಿದ್ದರು. ಈ ಅವಧಿಯಲ್ಲೂ ಸಚಿವ ಪಿಯೂಷ್ ಗೋಯಲ್ ಅವರು ಇಲಾಖೆಯ ಉಸ್ತುವಾರಿ ವಹಿಸಿಕೊಂಡಿದ್ದರು.

  • ಹುಬ್ಬಳ್ಳಿ ರೈಲ್ವೆ, ವಿಮಾನ ನಿಲ್ದಾಣದಲ್ಲಿ ಹೆಚ್ಚಿನ ಭದ್ರತೆ

    ಹುಬ್ಬಳ್ಳಿ ರೈಲ್ವೆ, ವಿಮಾನ ನಿಲ್ದಾಣದಲ್ಲಿ ಹೆಚ್ಚಿನ ಭದ್ರತೆ

    ಹುಬ್ಬಳ್ಳಿ/ಧಾರವಾಡ: ಪುಲ್ವಾಮಾ ದಾಳಿಗೆ ಪ್ರತ್ಯುತ್ತರವಾಗಿ ಭಾರತೀಯ ವಾಯುಸೇನೆ ವಾಯುದಾಳಿ ಮಾಡುವ ಮೂಲಕ ಉಗ್ರರ ಅಡಗುತಾಣ ಸಂಹಾರ ಮಾಡಿದ ನಂತರ ಕೇಂದ್ರ ಸರ್ಕಾರ ಆಯಾ ರಾಜ್ಯದ ಪ್ರಮುಖ ಸ್ಥಳಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದೆ.

    ಈ ಹಿನ್ನೆಲೆಯಲ್ಲಿ ವಾಣಿಜ್ಯನಗರಿಯ ನೈಋತ್ಯ ರೈಲ್ವೆ ವಲಯ ಕಚೇರಿ, ರೈಲ್ವೆ ನಿಲ್ದಾಣ ಮತ್ತು ವಿಮಾನ ನಿಲ್ದಾಣ ಸೇರಿದಂತೆ ಪ್ರಮುಖ ಸ್ಥಳಗಳಿಗೆ ಹೆಚ್ಚಿನ ಭದ್ರತೆಯನ್ನು ಒದಗಿಸಲಾಗಿದೆ. ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಮೊದಲಿಗಿಂತಲೂ ಭದ್ರತೆ ದೃಷ್ಟಿಯಿಂದ ಹೆಚ್ಚಿನ ತಪಾಸಣೆ ಮಾಡಲಾಗುತ್ತಿದೆ.

    ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಪ್ರವೇಶ ಪಡೆಯುತ್ತಿದ್ದಂತೆ ಪ್ರಯಾಣಿಕರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ. ತದನಂತರ ಸರಕು- ಸರಂಜಾಮುಗಳನ್ನು ಪ್ರತ್ಯೇಕವಾಗಿ ಪರೀಕ್ಷೆ ಮಾಡಲಾಗುತ್ತಿದೆ. ತಪಾಸಣೆ ಹಾಗೂ ಭದ್ರತೆಗಾಗಿ ಒಟ್ಟು 90 ಜನ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನು ರೈಲ್ವೆ ನಿಲ್ದಾಣದಲ್ಲಿ ಹೆಚ್ಚಿನ ತಪಾಸಣೆ ನಡೆಸಲಾಗುತ್ತಿದೆ.

    ನೈಋತ್ಯ ರೈಲ್ವೆ ವಲಯ ಕಚೇರಿ ಹಾಗೂ ರೈಲ್ವೆ ನಿಲ್ದಾಣಕ್ಕೆ ರೈಲ್ವೆ ಪೊಲೀಸ್ ಇಲಾಖೆ ಹೆಚ್ಚಿನ ಭದ್ರತೆ ಒದಗಿಸಿದ್ದು, ಪ್ರಯಾಣಿಕರ ತಪಾಸಣೆಗೆ ಮುಂದಾಗಿದೆ. ಅನುಮಾನಸ್ಪದ ವ್ಯಕ್ತಿಗಳ ಮಾಹಿತಿ ಪಡೆಯುವ ಮುನ್ನೆಚ್ಚರಿಕೆ ಕ್ರಮವಾಗಿ ರೈಲ್ವೆ ನಿಲ್ದಾಣದ ಒಳ ಹೋಗುವ ಹಾಗೂ ಹೊರಗೆ ಬರುವ ಪ್ರಯಾಣಿಕರ ಮೇಲೆ ನಿಗಾ ಇಟ್ಟಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv