Tag: union government

  • ʻವಕ್ಫ್ ತಿದ್ದುಪಡಿ ಕಾಯ್ದೆʼಯ ಕೆಲ ಅಂಶಗಳಿಗೆ ಸುಪ್ರೀಂ ತಡೆ; ಒಟ್ಟಾರೆ ಕಾಯ್ದೆ ಕಾನೂನು ಬದ್ಧವಾಗಿದೆ ಎಂದು ಆದೇಶ

    ʻವಕ್ಫ್ ತಿದ್ದುಪಡಿ ಕಾಯ್ದೆʼಯ ಕೆಲ ಅಂಶಗಳಿಗೆ ಸುಪ್ರೀಂ ತಡೆ; ಒಟ್ಟಾರೆ ಕಾಯ್ದೆ ಕಾನೂನು ಬದ್ಧವಾಗಿದೆ ಎಂದು ಆದೇಶ

    – ವಕ್ಫ್​ ಸದಸ್ಯರಾಗಲು 5 ವರ್ಷ ಇಸ್ಲಾಂ ಧರ್ಮ ಪಾಲಿಸಿರಬೇಕೆಂಬ ಷರತ್ತಿಗೆ ತಡೆ
    – ವಕ್ಫ್‌ ಮಂಡಳಿಯಲ್ಲಿ ಮುಸ್ಲಿಂ ಸಮುದಾಯದವರೇ ಬಹುಸಂಖ್ಯಾತರಿರಬೇಕು

    ನವದೆಹಲಿ: ವಕ್ಫ್ (ತಿದ್ದುಪಡಿ) ಕಾಯ್ದೆಯ ಕೆಲವೊಂದು ನಿಬಂಧನೆಗಳಿಗೆ ಸುಪ್ರೀಂ ಕೋರ್ಟ್ (Supreme Court) ಇಂದು ತಡೆ ನೀಡಿದೆ. ಕೆಲ ಅಂಶಗಳ ಬದಲಾವಣೆಗೆ ಸೂಚಿಸಿರುವ ಕೋರ್ಟ್‌, ಸಂಪೂರ್ಣವಾಗಿ ಕಾಯ್ದೆಗೆ ತಡೆ ನೀಡಲು ಸಾರಾಸಗಟಾಗಿ ನಿರಾಕರಿಸಿದೆ.

    ವಕ್ಫ್ ಕಾಯ್ದೆಯ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿಗಳನ್ನು ಸಲ್ಲಿಸಲಾಗಿತ್ತು. ಆ ಅರ್ಜಿಗಳಲ್ಲಿ, ವಕ್ಫ್ ತಿದ್ದುಪಡಿ ಕಾಯ್ದೆಯನ್ನು (Waqf Amendment Act) ಕೇಂದ್ರ ಸರ್ಕಾರ ತೀವ್ರ ವಿರೋಧದ ನಡುವೆಯೂ ಜಾರಿಗೊಳಿಸಿದೆ. ಹಾಗಾಗಿ, ತಿದ್ದುಪಡಿ ಕಾಯ್ದೆಗೆ ತಡೆಯಾಜ್ಞೆ ನೀಡಬೇಕೆಂದು ಮನವಿ ಸಲ್ಲಿಸಲಾಗಿತ್ತು. ಆ ಎಲ್ಲಾ ಅರ್ಜಿಗಳ ವಿಚಾರಣೆಯನ್ನು ನಡೆಸಿದ ಸುಪ್ರೀಂ ಕೋರ್ಟ್, ಸಂಪೂರ್ಣ ಕಾಯ್ದೆಗೆ ತಡೆ ನೀಡಲು ನಿರಾಕರಿಸಿದೆ. ಆದರೆ, ಕಾನೂನಿನ ಕೆಲವು ನಿಬಂಧನೆಗಳಿಗೆ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಮತ್ತು ನ್ಯಾಯಮೂರ್ತಿ ಎ.ಜಿ ಮಸಿಹ್ ಇದ್ದ ಪೀಠವು ಮಧ್ಯಂತರ ಆದೇಶ ಹೊರಡಿಸಿದೆ.

    ವಕ್ಫ್‌ ಕಾಯ್ದೆ ತಿದ್ದುಪಡಿ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗೆ ಸಂಬಂಧಿಸಿದಂತೆ ಸರ್ಕಾರದ ಪರವಾಗಿ ಸಾಲಿಸಿಟ‌ರ್ ಜನರಲ್‌ ತುಷಾರ್ ಮೆಹ್ತಾ ವಾದ ಮಂಡಿಸಿದ್ರೆ, ಮೂರು ವಿಚಾರಗಳಿಗೆ ಅರ್ಜಿದಾರರು ತಡೆಕೋರಿ ಸಲ್ಲಿಸಿದ್ದ ಅರ್ಜಿದಾರರ ಪರ ಹಿರಿಯ ವಕೀಲ ಕಪಿಲ್ ಸಿಬಲ್ ವಾದ ಮಂಡಿಸಿದ್ದರು. ಇದನ್ನೂ ಓದಿ: ವಕ್ಫ್ ಫೈಟ್: ಏನಿದು ವಿವಾದ?- ಹೊಸ ತಿದ್ದುಪಡಿ ಮಸೂದೆಯಿಂದ ಆಗುವ ಬದಲಾವಣೆ ಏನು?

    ಯಾವುದೇ ಒಬ್ಬ ವ್ಯಕ್ತಿ ವಕ್ಫ್‌ ಮಂಡಳಿಯ (Waqf Board) ಸದಸ್ಯರಾಗಲು ಅಥವಾ ವಕ್ಫ್ ಮಂಡಳಿಗಳಿಗೆ ಭೂಮಿ ದಾನ ಕೊಡಲು ಕನಿಷ್ಠ 5 ವರ್ಷ‌ ಇಸ್ಲಾಂ ಧರ್ಮ ಅನುಸರಿಸಬೇಕೆಂಬ ಷರತ್ತು ವಿಧಿಸಲಾಗಿತ್ತು. ಇದಕ್ಕೆ ಸುಪ್ರೀಂ ಕೋರ್ಟ್‌ ತಡೆ ನೀಡಿದೆ. ಈ ಅಂಶದ ಬಗ್ಗೆ ರಾಜ್ಯ ಸರ್ಕಾರಗಳು ಹೊಸ ನಿಯಮಗಳನ್ನು ರೂಪಿಸುವವರೆಗೂ ತಡೆ ನೀಡಬೇಕು ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

    ಮಧ್ಯಂತರ ಆದೇಶದಲ್ಲಿ ಯಾವುದಕ್ಕೆ ತಡೆ!?

    ತಕರಾರು-1
    ಜಿಲ್ಲಾಧಿಕಾರಿಗೆ ಅಥವಾ ಸರ್ಕಾರ ನಿಯೋಜಿಸಿದ ಅಧಿಕಾರಿಗೆ ಆಸ್ತಿಯನ್ನು ವಕ್ಫ್ ಆಗಿ ಗುರುತಿಸುವ ಅಧಿಕಾರ ನೀಡುವ ನಿಬಂಧನೆ

    ಕೋರ್ಟ್ ಸಲಹೆ; ಕಾರ್ಯನಿರ್ವಾಹಕ ಅಧಿಕಾರಿಯು ವೈಯಕ್ತಿಕ ನಾಗರಿಕರ ಹಕ್ಕುಗಳನ್ನು ನಿರ್ಣಯಿಸಲು ಅನುಮತಿಸಲಾಗುವುದಿಲ್ಲ. ಇದು ಅಧಿಕಾರಗಳ ಪ್ರತ್ಯೇಕತೆ ಉಲ್ಲಂಘಿಸುತ್ತದೆ ಎಂದು ಕೋರ್ಟ್ ಸ್ಪಷ್ಟಪಡಿಸಿದೆ. ವಕ್ಫ್ ಆಸ್ತಿಯು ಸರ್ಕಾರಿ ಆಸ್ತಿಯನ್ನು ಅತಿಕ್ರಮಣ ಮಾಡಿದೆಯೇ ಎಂಬ ವಿವಾದ ನಿರ್ಧರಿಸಲು ಸರ್ಕಾರದ ನಿಯೋಜಿತ ಅಧಿಕಾರಿಗೆ ಅವಕಾಶ ನೀಡುವ ನಿಬಂಧನೆ ತಡೆಹಿಡಿಯಲಾಗಿದೆ. ನ್ಯಾಯಾಧೀಕರಣ ಒಂದು ವಿಷಯದ ಬಗ್ಗೆ ಅಂತಿಮ ತೀರ್ಪು ಅಥವಾ ನಿರ್ಧಾರ ನೀಡುವವರೆಗೆ, ಆ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ 3ನೇ ವ್ಯಕ್ತಿ ಯಾವುದೇ ಹಕ್ಕುಗಳನ್ನು ಸ್ಥಾಪಿಸಲು ಅಥವಾ ದಾವೆ ಹೂಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

    ತಕರಾರು-2
    ವಕ್ಫ್ ತಿದ್ದುಪಡಿ ಕಾಯ್ದೆಯಲ್ಲಿ, ಯಾವ ವ್ಯಕ್ತಿಯು ಕನಿಷ್ಟ 5 ವರ್ಷದಿಂದ ಇಸ್ಲಾಂ ಧರ್ಮ ಪಾಲಿಸುತ್ತಿದ್ದಾನೋ ಆ ವ್ಯಕ್ತಿ ಮಾತ್ರ ವಕ್ಫ್ ಮಂಡಳಿಗಳಿಗೆ ಭೂಮಿ ದಾನ ಕೊಡಲು ಅರ್ಹ ಎಂಬ ಷರತ್ತು

    ಕೋರ್ಟ್ ಸಲಹೆ: ಈ ಷರತ್ತಿಗೆ ಸದ್ಯಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್ ಒಪ್ಪಿದೆ. ಈ ಷರತ್ತು ಬಗ್ಗೆ ರಾಜ್ಯ ಸರ್ಕಾರಗಳು ಹೊಸ ನಿಯಮಗಳನ್ನು ರೂಪಿಸುವವರೆಗೂ ತಡೆ ನೀಡಬೇಕು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

    ತಕರಾರು-3
    ವಕ್ಫ್ ಮಂಡಳಿಗಳಿಗೆ ಮುಸ್ಲಿಮೇತರ ಸದಸ್ಯರ ನಾಮನಿರ್ದೇಶನಕ್ಕೆ ಅವಕಾಶ ನೀಡುವ ನಿಬಂಧನೆಗೆ ತಕರಾರು

    ಕೋರ್ಟ್ ಸಲಹೆ: ಕೋರ್ಟ್ ಈ ನಿಬಂಧನೆಗೆ ತಡೆ ನೀಡಿಲ್ಲ. ಆದರೂ, ಸಾಧ್ಯವಾದಷ್ಟು ಮಟ್ಟಿಗೆ, ಮಂಡಳಿಯ ಪದನಿಮಿತ್ತ ಸದಸ್ಯರು ಮುಸ್ಲಿಂ ವ್ಯಕ್ತಿಯಾಗಿರಬೇಕು ಎಂದು ಕೋರ್ಟ್ ಹೇಳಿದೆ. ಕೇಂದ್ರ ವಕ್ಫ್ ಮಂಡಳಿಯಲ್ಲಿ 4 ಕ್ಕಿಂತ ಹೆಚ್ಚು ಮುಸ್ಲಿಮೇತರ ಸದಸ್ಯರು ಇರಬಾರದು, ರಾಜ್ಯ ವಕ್ಫ್ ಮಂಡಳಿ 3 ಕ್ಕಿಂತ ಹೆಚ್ಚು ಮುಸ್ಲಿಮೇತರ ಸದಸ್ಯರನ್ನು ಒಳಗೊಂಡಿರಬಾರದು. ಸಾಧ್ಯವಾದಷ್ಟು ಮಟ್ಟಿಗೆ ಮಂಡಳಿಯ ಸಿಇಒ ಮುಸ್ಲಿಮರಾಗಿರಬೇಕು ಎಂದು ಅಭಿಪ್ರಾಯಪಟ್ಟಿದೆಯಲ್ಲದೇ ವಕ್ಫ್ ಕಾಯ್ದೆಯ ಸಿಂಧುತ್ವದ ಬಗ್ಗೆ ತನ್ನ ಆದೇಶವು ಅಂತಿಮ ಅಭಿಪ್ರಾಯವಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

    ತಕರಾರು-4
    ಎಲ್ಲ ವಕ್ಫ್ ಆಸ್ತಿಗಳನ್ನು ಕಾಯ್ದೆಯಡಿ ನೋಂದಣಿ ಕಡ್ಡಾಯ ನಿಬಂಧನೆ

    ಕೋರ್ಟ್ ಸಲಹೆ: ಈ ನಿಬಂಧನೆಯಲ್ಲಿ ಕೋರ್ಟ್ ಹಸ್ತಕ್ಷೇಪ ಮಾಡಿಲ್ಲ. ಇದು ಹೊಸ ನಿಯಮ ಅಲ್ಲ ಎಂದು ಕೋರ್ಟ್ ಹೇಳಿದೆ. ಏಕೆಂದರೆ, ಈ ಷರತ್ತು 1995 ಮತ್ತು 2013ರ ಹಿಂದಿನ ಕಾಯ್ದೆಗಳಲ್ಲಿಯೂ ಇತ್ತು. ಆದರೂ, ಕೋರ್ಟ್ ನೋಂದಣಿಗೆ ಸಮಯ ಮಿತಿಯನ್ನು ವಿಸ್ತರಿಸಿದೆ.

    ಅರ್ಜಿದಾರರು ಯಾರು?
    ಎಐಎಂಐಎಂ ಸಂಸದ ಅಸಾದುದ್ದೀನ್ ಓವೈಸಿ, ದೆಹಲಿ ಎಎಪಿ ಶಾಸಕ ಅಮಾನತುಲ್ಲಾ ಖಾನ್, ನಾಗರಿಕ ಹಕ್ಕುಗಳ ರಕ್ಷಣಾ ಸಂಘ, ಜಮಾತ್ ಉಲೇಮಾ-ಇ-ಹಿಂದ್ ಅಧ್ಯಕ್ಷ ಅರ್ಷದ್ ಮದನಿ, ಸಮಸ್ತ ಕೇರಳ ಜಮಿಯತ್ ಉಲೇಮಾ, ಅಂಜುಮ್ ಕದರಿ, ತೈಯಬ್ ಖಾನ್ ಸಲ್ಮಾನಿ, ಮೊಹಮ್ಮದ್ ಶಫಿ, ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್, ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್, ಆರ್‌ಜೆಡಿ ಸಂಸದ ಮನೋಜ್ ಕುಮಾರ್ ಝಾ, ಎಸ್‌ಪಿ ಸಂಸದ ಜಿಯಾ ಉರ್ ರೆಹಮಾನ್, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ, ಡಿಎಂಕೆ ಇತರರು.

    ಕಾಯ್ದೆ ಬೆಂಬಲಿಸಿ ಸುಪ್ರೀಂಕೋರ್ಟ್‌ಗೆ ಹೋದವರು ಯಾರು?
    ಬಿಜೆಪಿ ಸರ್ಕಾರಗಳಿರುವ ಅಸ್ಸಾಂ, ರಾಜಸ್ಥಾನ, ಛತ್ತೀಸ್‌ಗಢ, ಉತ್ತರಾಖಂಡ, ಹರಿಯಾಣ ಮತ್ತು ಮಹಾರಾಷ್ಟ್ರ ಸರ್ಕಾರಗಳು. ಕೇರಳ ರಾಜ್ಯ ಸರ್ಕಾರ ಕೂಡ ತಿದ್ದುಪಡಿ ಕಾಯ್ದೆಯನ್ನು ಬೆಂಬಲಿಸಿ ಮಧ್ಯಂತರ ಅರ್ಜಿಯನ್ನು ಸಲ್ಲಿಸಿತ್ತು.

  • ಎತ್ತಿನಹೊಳೆ ಯೋಜನೆಗೆ ಹಿನ್ನಡೆ – 423 ಎಕ್ರೆ ಅರಣ್ಯ ಭೂಮಿ ಬಳಕೆಗೆ ಕೇಂದ್ರ ಸರ್ಕಾರದಿಂದ ನಕಾರ

    ಎತ್ತಿನಹೊಳೆ ಯೋಜನೆಗೆ ಹಿನ್ನಡೆ – 423 ಎಕ್ರೆ ಅರಣ್ಯ ಭೂಮಿ ಬಳಕೆಗೆ ಕೇಂದ್ರ ಸರ್ಕಾರದಿಂದ ನಕಾರ

    – 423 ಎಕರೆ ಅರಣ್ಯ ಬಳಕೆಗೆ ಅನುಮೋದನೆ ಕೇಳಿದ್ದ ರಾಜ್ಯ

    ನವದೆಹಲಿ: ಬಯಲುಸೀಮೆ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವ 23 ಸಾವಿರ ಕೋಟಿ ರೂ. ವೆಚ್ಚದ ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಗೆ (Yettinahole Integrated Drinking Water Supply Project) ಹೆಚ್ಚುವರಿಯಾಗಿ 423 ಎಕ್ರೆ ಅರಣ್ಯ (Forest) ಬಳಕೆಗೆ ಅನುಮೋದನೆ ನೀಡಬೇಕೆಂಬ ಕರ್ನಾಟಕ ಸರ್ಕಾರದ (Karnataka Government) ಪ್ರಸ್ತಾವಕ್ಕೆ ಕೇಂದ್ರ ಅರಣ್ಯ, ಪರಿಸರ ಸಚಿವಾಲಯದ ಅರಣ್ಯ ಸಲಹಾ ಸಮಿತಿ  ಅನುಮತಿ ನೀಡಲು ನಿರಾಕರಿಸಿದೆ.

    ಗುರುತ್ವಾಕರ್ಷಣೆ ಕಾಲುವೆ ನಿರ್ಮಾಣಕ್ಕೆ ಹಾಸನ ಹಾಗೂ ತುಮಕೂರು ಜಿಲ್ಲೆಗಳಲ್ಲಿ 432 ಎಕ್ರೆ ಅರಣ್ಯ ಬಳಕೆಗೆ ಒಪ್ಪಿಗೆ ನೀಡುವಂತೆ ಕೋರಿ ರಾಜ್ಯ ಸರ್ಕಾರವು ಪರಿಸರ ಸಚಿವಾಲಯಕ್ಕೆ ಮಾರ್ಚ್‌ನಲ್ಲಿ ಪ್ರಸ್ತಾವನೆ ಸಲ್ಲಿಸಿತ್ತು. ಸಚಿವಾಲಯದ ಡಿಐಜಿಎಫ್‌ ಪ್ರಣಿತಾ ಪೌಲ್‌ ನೇತೃತ್ವದ ಅಧಿಕಾರಿಗಳ ತಂಡವು ಯೋಜನಾ ಸ್ಥಳದಲ್ಲಿ ಪರಿಶೀಲನೆ ನಡೆಸಿ ವರದಿ ಸಲ್ಲಿಸಿತ್ತು. ರಾಜ್ಯ ಸರ್ಕಾರವು ಲೋಪಗಳನ್ನು ಸರಿಪಡಿಸಿ ಸೂಕ್ತ ಸಮಜಾಯಿಷಿ ನೀಡಿದ ಬಳಿಕವೇ ಹೆಚ್ಚುವರಿ ಅರಣ್ಯ ಬಳಕೆಗೆ ಅನುಮೋದನೆ ನೀಡಬಹುದು ಎಂದು ಸಮಿತಿ ಶಿಫಾರಸು ಮಾಡಿತ್ತು. ಇದನ್ನೂ ಓದಿ: ನಾನು ಸಚಿವನಾದ್ರೆ ಪುರುಷರಿಗೂ ಬಸ್‌ ಪ್ರಯಾಣ ಫ್ರೀ: ಬಸವರಾಜ ರಾಯರೆಡ್ಡಿ

     

    ನವದೆಹಲಿಯಲ್ಲಿ ಜೂನ್‌ 26ರಂದು ನಡೆದ ಸಲಹಾ ಸಮಿತಿಯ ಸಭೆಯಲ್ಲಿ ಈ ಯೋಜನೆಗೆ ಹೆಚ್ಚುವರಿ ಅರಣ್ಯ ಭೂಮಿ ನೀಡುವ ಬಗ್ಗೆ ಚರ್ಚೆ ನಡೆಯಿತು. ‘ಕೇಂದ್ರದಿಂದ ಅನುಮೋದನೆ ಪಡೆಯುವ ಮುನ್ನವೇ ಈ ಯೋಜನೆಗಾಗಿ ಅರಣ್ಯ ಭೂಮಿಯನ್ನು ಬಳಕೆ ಮಾಡಲಾಗಿದೆ ಎಂಬುದನ್ನು ಅಧಿಕಾರಿಗಳ ತಂಡವು ಬೊಟ್ಟು ಮಾಡಿ ತೋರಿಸಿದೆ. ನಿಯಮ ಉಲ್ಲಂಘಿಸಿದ ಸರ್ಕಾರಿ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಹಾಗೂ ದಂಡ ವಿಧಿಸಬೇಕು’ ಎಂದು ಸಲಹಾ ಸಮಿತಿ ನಿರ್ದೇಶನ ನೀಡಿತು. ಬಳಿಕ ಪ್ರಸ್ತಾವವನ್ನು ಮುಂದಿನ ಸಭೆಗೆ ಮುಂದೂಡಿತು.  ಇದನ್ನೂ ಓದಿ: ಅನಿವಾಸಿ ಭಾರತೀಯರಿಗೆ ಗುಡ್‌ ನ್ಯೂಸ್‌ 23 ಲಕ್ಷಕ್ಕೆ ಜೀವಿತಾವಧಿ ‘ಗೋಲ್ಡನ್‌ ವೀಸಾ’ ಪರಿಚಯಿಸಿದ ಯುಎಇ

    ಪಶ್ಚಿಮ ಘಟ್ಟದ ಎತ್ತಿನಹೊಳೆಯಿಂದ 24 ಟಿಎಂಸಿ ನೀರು ಹರಿಸುವ ಈ ಯೋಜನೆಗೆ ಈ ಹಿಂದೆ 13.93 ಹೆಕ್ಟೇರ್ ಅರಣ್ಯ ಬಳಕೆಗೆ 2016ರಲ್ಲಿ ಪ್ರಸ್ತಾವ ಸಲ್ಲಿಸಲಾಗಿತ್ತು. 33 ಷರತ್ತುಗಳನ್ನು ವಿಧಿಸಿ 2016ರಲ್ಲಿ ಅನುಮೋದನೆ ಕೊಡಲಾಗಿತ್ತು. ಆದರೆ ಬಹುತೇಕ ಷರತ್ತುಗಳನ್ನು ಪಾಲನೆ ಮಾಡಿಲ್ಲ. ಕಾಮಗಾರಿ ಸಂದರ್ಭದಲ್ಲಿ ಭೂಕುಸಿತ ಹಾಗೂ ಮಣ್ಣಿನ ಕೊರೆತ ಉಂಟಾಗಿದೆ ಎಂದು ಎನ್‌ಜಿಟಿಯ ಮೇಲ್ವಿಚಾರಣಾ ತಂಡವು 2019ರಲ್ಲಿ ವರದಿ ಸಲ್ಲಿಸಿತ್ತು. ಭೂಕುಸಿತ ತಡೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಇದರ ಜತೆಗೆ ಅನುಮೋದನೆಗಿಂತ ಹೆಚ್ಚುವರಿ ಅರಣ್ಯ ಬಳಸಲಾಗಿದೆ. ಕಾಮಗಾರಿಯಿಂದಾಗಿ ಅನೇಕ ಮನೆಗಳಿಗೆ ಹಾನಿಯಾಗಿದೆ. ಆದರೆ, ಸಂತ್ರಸ್ತರಿಗೆ ಯಾವುದೇ ಪರಿಹಾರ ನೀಡಿಲ್ಲ ಎಂದು ತಜ್ಞರ ತಂಡವು ಆಕ್ಷೇಪ ವ್ಯಕ್ತಪಡಿಸಿತ್ತು.

  • ಎಸಿ ಬಳಕೆಗೆ ಹೊಸ ನಿಯಮ – ದೇಶಕ್ಕೆ 18,000 ಕೋಟಿ ಉಳಿತಾಯ

    ಎಸಿ ಬಳಕೆಗೆ ಹೊಸ ನಿಯಮ – ದೇಶಕ್ಕೆ 18,000 ಕೋಟಿ ಉಳಿತಾಯ

    ನವದೆಹಲಿ: ದೇಶದಲ್ಲಿ ಏರ್ ಕಂಡೀಷನ್ (Air-Conditioners) ಯಂತ್ರಗಳಿಗೆ ಹೊಸ ನಿಯಮವನ್ನು ಜಾರಿ ಮಾಡಲು ಕೇಂದ್ರ ಸರ್ಕಾರ (Union Government) ಮುಂದಾಗಿದೆ.

    ಇನ್ನು ಮುಂದೆ ಹೊಸ ಹವಾನಿಯಂತ್ರಣ ಯಂತ್ರಗಳ (AC) ಕನಿಷ್ಠ ತಾಪಮಾನ 16 ಅಥವಾ 18 ಡಿಗ್ರಿಗಳ ಬದಲಿಗೆ 20 ಡಿಗ್ರಿ ಸೆಲ್ಸಿಯಸ್ ಮತ್ತು ಪ್ರಸ್ತುತ ಗರಿಷ್ಠ ಇರುವ 30 ಡಿಗ್ರಿಗಳ ಬದಲಿಗೆ ಗರಿಷ್ಠ 28 ಡಿಗ್ರಿಯೊಂದಿಗೆ ಬರಲಿದೆ.

    ಈ ಆದೇಶ ಜಾರಿಗೆ ಬಂದ ನಂತರ ಮೂರು ವರ್ಷಗಳಲ್ಲಿ 18,000-20,000 ಕೋಟಿ ರೂ. ಉಳಿತಾಯವಾಗಬಹುದು ಎಂದು ಅಂದಾಜಿಸಲಾಗಿದೆ.

    ಪ್ರಸ್ತುತ ಎಸಿ ಕನಿಷ್ಠ ತಾಪಮಾನವು 18°C ​​(ಕೆಲವು ಸಂದರ್ಭಗಳಲ್ಲಿ 16°C) ವರೆಗೆ ಹೋದರೆ ಗರಿಷ್ಠ 30°C ವರೆಗೆ ಏರಿಸಬಹುದಾಗಿದೆ. ಸರ್ಕಾರದ ಈ ಆದೇಶ ಜಾರಿಯಾದರೆ ಎಸಿ ತಾಪಮಾನ 20°C – 28°C ಗೆ ನಿರ್ಬಂಧಿಸುತ್ತದೆ. ಇದರರ್ಥ ಬಳಕೆದಾರರು ತಮ್ಮ ಎಸಿ ತಾಪಮಾನವನ್ನು 20°C ಗಿಂತ ಕಡಿಮೆ ಮತ್ತು 30°C ಗಿಂತ ಹೆಚ್ಚು ಹೊಂದಿಸಲು ಸಾಧ್ಯವಾಗುವುದಿಲ್ಲ. ಇದನ್ನೂ ಓದಿ: ಶೀಘ್ರದಲ್ಲೇ ಜಾರಿಗೆ ಬರಲಿದೆ ಕಿಲೋಮೀಟರ್ ಆಧಾರಿತ ಹೊಸ ಟೋಲ್ ತೆರಿಗೆ ನೀತಿ

    ಕೇಂದ್ರ ವಿದ್ಯುತ್ ಸಚಿವ ಮನೋಹರ್ ಲಾಲ್ ಖಟ್ಟರ್‌ ಮಾತನಾಡಿ, ಇದೊಂದು ವಿಶಿಷ್ಟ ಪ್ರಯೋಗವಾಗಿದ್ದು, ಬೇಸಿಗೆಯಲ್ಲಿ ವಿದ್ಯುತ್ ಬೇಡಿಕೆ ಮತ್ತು ವಿದ್ಯುತ್ ಬಿಲ್‌ಗಳಲ್ಲಿನ ಏರಿಕೆಯನ್ನು ಕಡಿಮೆ ಮಾಡುತ್ತದೆ ಎಂದು ಹೇಳಿದ್ದಾರೆ.

    ಈ ನಿಯಮ ಜಾರಿಯಾದ ನಂತರ ಗೃಹಬಳಕೆಯಿಂದ ಹಿಡಿದು ವಾಣಿಜ್ಯ ಸಂಸ್ಥೆಗಳಾದ ಕಚೇರಿ ಬ್ಲಾಕ್‌ಗಳು, ಮಾಲ್‌, ಹೋಟೆಲ್‌ ಮತ್ತು ಚಲನಚಿತ್ರ ಮಂದಿರಗಳ ಸೇರಿದಂತೆ ವಿವಿಧ ವಲಯಗಳಲ್ಲಿ ಬಳಸುವ ಎಸಿಗಳಿಗೆ ಅನ್ವಯವಾಗುತ್ತದೆ.

    ಈಗಾಗಲೇ ಈ ಪ್ರಯೋಗ ಇಟಲಿ ಮತ್ತು ಜಪಾನ್‌ನಲ್ಲಿ ಜಾರಿಯಾಗಿದೆ. ರೋಮ್ ಸಾರ್ವಜನಿಕ ಕಟ್ಟಡಗಳಿಗೆ ಕನಿಷ್ಠ ತಾಪಮಾನವನ್ನು 23 ಡಿಗ್ರಿ ಸೆಲ್ಸಿಯಸ್‌ಗೆ ನಿಗದಿಪಡಿಸಿದರೆ, ಜಪಾನ್ 27 ಡಿಗ್ರಿ ಸೆಲ್ಸಿಯಸ್‌ ಫಿಕ್ಸ್‌ ಮಾಡಲಾಗಿದೆ.

    ಪ್ರತಿ 1 ಡಿಗ್ರಿ ಸೆಲ್ಸಿಯಸ್ ಹೆಚ್ಚಳವು ವಿದ್ಯುತ್ ಬಳಕೆಯನ್ನು 6% ರಷ್ಟು ಕಡಿಮೆ ಮಾಡುತ್ತದೆ. 6 ಕೋಟಿ ನಗರ ಮನೆಗಳು ಮತ್ತು 12 ಲಕ್ಷ ವಾಣಿಜ್ಯ ಸಂಸ್ಥೆಗಳು ತಮ್ಮ ಎಸಿ ಸೆಟ್ಟಿಂಗ್ ಅನ್ನು 22 ರಿಂದ 24 ಡಿಗ್ರಿ ಸೆಲ್ಸಿಯಸ್ ನಡುವೆ ಇಟ್ಟುಕೊಂಡರೆ ವಾರ್ಷಿಕವಾಗಿ 12-15 ಬಿಲಿಯನ್ ಯೂನಿಟ್ ವಿದ್ಯುತ್ ಉಳಿಸುತ್ತದೆ ಮತ್ತು 4-5 ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳನ್ನು ನಿರ್ಮಿಸುವ ಅಗತ್ಯವನ್ನು ನಿವಾರಿಸುತ್ತದೆ. ಅಷ್ಟೇ ಅಲ್ಲದೇ ಇಂಗಾಲದ ಹೊರಸೂಸುವಿಕೆಯನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ.

  • ಸಂಸದರ ಸಂಬಳ 24% ಏರಿಕೆ – ಈಗ ಎಷ್ಟಿದೆ? ಎಷ್ಟು ಏರಿಕೆಯಾಗಿದೆ?

    ಸಂಸದರ ಸಂಬಳ 24% ಏರಿಕೆ – ಈಗ ಎಷ್ಟಿದೆ? ಎಷ್ಟು ಏರಿಕೆಯಾಗಿದೆ?

    ನವದೆಹಲಿ: ಕೇಂದ್ರ ಸರ್ಕಾರ ಸಂಸದರ ಸಂಬಳವನ್ನು (Salary) 24% ಏರಿಕೆ ಮಾಡಿದೆ. ಏಪ್ರಿಲ್‌ 1 ರಿಂದ ಇದು ಜಾರಿಗೆ ಬರಲಿದೆ.

    ಸಂಸದೀಯ ವ್ಯವಹಾರಗಳ ಸಚಿವಾಲಯದ (Ministry of Parliamentary Affairs) ಸುತ್ತೋಲೆಯ ಪ್ರಕಾರ, ಸಂಸದರ ಮಾಸಿಕ ವೇತನವು 1,00,000 ರೂ.ಗಳಿಂದ 1,24,000 ರೂ.ಗಳಿಗೆ ಏರಿಕೆಯಾಗಿದೆ.  ದೈನಂದಿನ ಭತ್ಯೆ 2,000 ರೂ.ಗಳಿಂದ 2,500 ರೂ.ಗಳಿಗೆ ಹೆಚ್ಚಿಸಲಾಗಿದೆ.

    ಸಂಸದರು ಮತ್ತು ಮಾಜಿ ಸಂಸದರ ಮಾಸಿಕ ಪಿಂಚಣಿಯನ್ನು 25,000 ರೂ.ಗಳಿಂದ 31,000 ರೂ.ಗಳಿಗೆ ಪರಿಷ್ಕರಿಸಲಾಗಿದೆ. ಹೆಚ್ಚುವರಿಯಾಗಿ ಮಾಜಿ ಸಂಸದರ ಹೆಚ್ಚುವರಿ ಪಿಂಚಣಿಯನ್ನು ವರ್ಷಕ್ಕೆ 2,000 ರೂ.ಗಳಿಂದ 2,500 ರೂ.ಗಳಿಗೆ ಏರಿಕೆ ಮಾಡಲಾಗಿದೆ.

    ಬೇರೆ ಏನೇನು ಸಿಗುತ್ತೆ?
    ಕ್ಷೇತ್ರದೊಳಗಿನ ತಿರುಗಾಟದ ಖರ್ಚಿಗಾಗಿ ಕ್ಷೇತ್ರದ ಭತ್ಯೆಯಾಗಿ ಪ್ರತಿ ತಿಂಗಳು 70,000 ರೂ. ಸಿಗುತ್ತದೆ. ಕಚೇರಿ ನಿರ್ವಹಣೆಗಾಗಿ ಪ್ರತಿ ತಿಂಗಳು 60,000 ರೂ. ಸಿಗುತ್ತದೆ

    ಸಂಸದರಿಗೆ ಪ್ರತಿವರ್ಷ ತಾವೂ ಸೇರಿದಂತೆ ಕುಟುಂಬ ಸದಸ್ಯರು 34 ಬಾರಿ ಉಚಿತವಾಗಿ ವಿಮಾನ ಪ್ರಯಾಣ ಕೈಗೊಳ್ಳಬಹುದು. ಅದೇ ರೀತಿ ವೈಯಕ್ತಿಕವಾಗಿ ಹಾಗೂ ಸಂಸದರ ಕಾರ್ಯಗಳಿಗಾಗಿ ಉಚಿತವಾಗಿ ಫಸ್ಟ್‌ ಕ್ಲಾಸ್‌ ರೈಲು ಪ್ರಯಾಣ ಮಾಡಬಹುದು. ಅಷ್ಟೇ ಅಲ್ಲ ತಮ್ಮ ಕ್ಷೇತ್ರ ಸುತ್ತಾಟಕ್ಕಾಗಿ ಮೈಲೇಜ್‌ ಭತ್ಯೆಯನ್ನು ಪಡೆಯಬಹುದಾಗಿದೆ.

     

  • ಯೋಧರ ಪಿಂಚಣಿ ಬಾಕಿ ಉಳಿಸಿಕೊಂಡ ಕೇಂದ್ರ ಸರ್ಕಾರ – ಪಂಜಾಬ್ ಹೈಕೋರ್ಟ್ ಕೆಂಡಾಮಂಡಲ

    ಯೋಧರ ಪಿಂಚಣಿ ಬಾಕಿ ಉಳಿಸಿಕೊಂಡ ಕೇಂದ್ರ ಸರ್ಕಾರ – ಪಂಜಾಬ್ ಹೈಕೋರ್ಟ್ ಕೆಂಡಾಮಂಡಲ

    ಚಂಡೀಗಢ: ಭಾರತ-ಪಾಕಿಸ್ತಾನ ನಡುವೆ 1965ರಲ್ಲಿ ನಡೆದಿದ್ದ ಯುದ್ಧದಲ್ಲಿ ಹೋರಾಡಿ ವೀರ ಚಕ್ರ ಪುರಸ್ಕಾರಕ್ಕೆ ಭಾಜನರಾಗಿರುವ ಯೋಧರ ಪಿಂಚಣಿ ಬಾಕಿಯನ್ನು ಸಶಸ್ತ್ರ ಪಡೆಗಳ ನ್ಯಾಯಮಂಡಳಿ ಆದೇಶದಂತೆ ಒಂದು ತಿಂಗಳೊಳಗೆ ಪಾವತಿಸಬೇಕು. ಇಲ್ಲದೇ ಹೋದರೆ ಶೇ.15ರಷ್ಟು ಬಡ್ಡಿ ತೆರಬೇಕಾಗುತ್ತದೆ ಎಂದು ಕೇಂದ್ರ ಸರ್ಕಾರಕ್ಕೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಎಚ್ಚರಿಕೆ ನೀಡಿದೆ.

    ಈ ಸಂಬಂಧ 2018 ರಲ್ಲಿಯೇ ತೀರ್ಪು ನೀಡಲಾಗಿದ್ದರೂ 7 ವರ್ಷಗಳಿಂದ ಬಾಕಿ ಮೊತ್ತ ಪಾವತಿಸದೇ ಇರುವ ಕೇಂದ್ರ ಸರ್ಕಾರದ ಧೋರಣೆ ಬಗ್ಗೆ ನ್ಯಾ. ಸಂಜೀವ್ ಪ್ರಕಾಶ್ ಶರ್ಮಾ ಮತ್ತು ಮೀನಾಕ್ಷಿ ಐ ಮೆಹ್ತಾ ಅವರಿದ್ದ ಪೀಠ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ಇದನ್ನೂ ಓದಿ: Microfinance Bill | ರಾಜ್ಯಪಾಲರ ಅಂಕಿತಕ್ಕೆ ಸುಗ್ರೀವಾಜ್ಞೆ ಬಿಲ್ – ಅನಧೀಕೃತವಾಗಿ ಕೊಟ್ಟಿದ್ದರೆ ಸಾಲ ಮನ್ನಾ

    ಪುರುಷೋತ್ತಮ್ ದಾಸ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಆಧರಿಸಿ ಸಶಸ್ತ್ರ ಪಡೆಗಳ ನ್ಯಾಯಮಂಡಳಿಯ ಆದೇಶ ಪ್ರಶ್ನಿಸಿ ಪದೇ ಪದೇ ಅರ್ಜಿ ಸಲ್ಲಿಸಲಾಗುತ್ತಿದೆ ಎಂದು ಕೂಡ ನ್ಯಾಯಾಲಯ ಕಳವಳ ವ್ಯಕ್ತಪಡಿಸಿದೆ. ಇದನ್ನೂ ಓದಿ: ಮೈಕ್ರೋ ಫೈನಾನ್ಸ್‌ನವರು ರೌಡಿಗಳನ್ನಿಟ್ಟುಕೊಂಡು ಹಣ ವಸೂಲಿ ಮಾಡ್ತಿದ್ದಾರೆ: ಡಿಕೆಶಿ

    ಇದು ಎಎಫ್‌ಟಿ ಆದೇಶಗಳನ್ನು ಪ್ರಶ್ನಿಸಿ 226ನೇ ವಿಧಿಯಡಿ ಅರ್ಜಿಗಳನ್ನು ಆಲಿಸಲು ಹೈಕೋರ್ಟ್‌ಗಳಿಗೆ ಅಧಿಕಾರವಿಲ್ಲ ಎಂದು ತಿಳಿಸಿ ಕೇಂದ್ರ ಸರ್ಕಾರ ಮತ್ತು ಮೇಜರ್ ಜನರಲ್ ಶ್ರೀಕಾಂತ್ ಶರ್ಮಾ ಪ್ರಕರಣಕ್ಕೆ ಸಂಬಂಧಿಸಿದಂತೆ 2015ರಲ್ಲಿ ನೀಡಿದ್ದ ತೀರ್ಪನ್ನು ಆ ಪ್ರಕರಣದ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ರದ್ದುಗೊಳಿಸಿತ್ತು.

    ಭಾರತ- ಪಾಕಿಸ್ತಾನ ನಡುವೆ 1965ರಲ್ಲಿ ನಡೆದಿದ್ದ ಯುದ್ಧದ ವೇಳೆ ಅಂಗವೈಕಲ್ಯಕ್ಕೆ ತುತ್ತಾದ ಪ್ರತಿಷ್ಠಿತ ʻವೀರ ಚಕ್ರʼ ಪುರಸ್ಕಾರಕ್ಕೆ ಭಾಜನರಾದ ನಿವೃತ್ತ ಸೇನಾ ಅಧಿಕಾರಿ ಕ್ಯಾಪ್ಟನ್ ರೀತ್ ಎಂ.ಪಿ ಸಿಂಗ್ ಹಾಗೂ ಇನ್ನಿತರ ಯೋಧರಿಗೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಅವರು ಅರ್ಹರಾಗಿದ್ದ ಶೇ.100ರಷ್ಟು ಪಿಂಚಣಿ ಬದಲಿಗೆ ಕೇವಲ ಶೇ.80ರಷ್ಟು ಪಿಂಚಣಿ ನೀಡಲು ನಿರ್ಧರಿಸಲಾಗಿತ್ತು. ಆದರೆ 2014 ರಲ್ಲಿ ಭಾರತ ಒಕ್ಕೂಟ ಸರ್ಕಾರ ಮತ್ತು ರಾಮ್ ಅವತಾರ್ ಪ್ರಕರಣದಲ್ಲಿ ಇಂತಹ ಘಟನೆಗಳಲ್ಲಿ ಅಂಗವೈಕಲ್ಯಕ್ಕೆ ತುತ್ತಾದ ಯೋಧರಿಗೆ ಶೇ.100ರಷ್ಟು ಪಿಂಚಣಿ ಒದಗಿಸಬೇಕು ಎಂದು ತೀರ್ಪು ನೀಡಿತ್ತು. ಈ ತೀರ್ಪಿನ ಹಿನ್ನೆಲೆಯಲ್ಲಿ ಪೂರ್ವಾನ್ವಯವಾಗುವಂತೆ ತಮ್ಮ ಪಿಂಚಣಿಯನ್ನೂ ಪರಿಷ್ಕರಿಸಬೇಕು ಎಂದು ರೀತ್ ಸಿಂಗ್ ಕೋರಿದ್ದರು.

  • HMPV ಜಾಗತಿಕವಾಗಿ ಪರಿಚಲನೆಯಲ್ಲಿದೆ – ಐಸಿಎಂಆರ್ ಎಚ್ಚರಿಕೆ

    HMPV ಜಾಗತಿಕವಾಗಿ ಪರಿಚಲನೆಯಲ್ಲಿದೆ – ಐಸಿಎಂಆರ್ ಎಚ್ಚರಿಕೆ

    ನವದೆಹಲಿ: ಕರ್ನಾಟಕ ಮತ್ತು ಗುಜುರಾತ್‌ನಲ್ಲಿ ಹ್ಯೂಮನ್ ಮೆಟಾಪ್ನ್ಯೂಮೋವೈರಸ್ (HMPV) ಪತ್ತೆಯಾದ ಬೆನ್ನಲೆ ಉನ್ನತ ವೈದ್ಯಕೀಯ ಸಂಸ್ಥೆಯಾದ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಸ್ಪಷ್ಟನೆ ನೀಡಿದ್ದು, ಭಾರತ ಸೇರಿದಂತೆ ಜಾಗತಿಕವಾಗಿ ವೈರಸ್ ಪರಿಚಲನೆಯಲ್ಲಿದೆ ಎಂದು ಎಚ್ಚರಿಸಿದೆ.

    ಉಸಿರಾಟದ ಕಾಯಿಲೆಗಳಲ್ಲಿ ಯಾವುದೇ ಸಂಭಾವ್ಯ ಹೆಚ್ಚಳವನ್ನು ನಿಭಾಯಿಸಲು ಭಾರತವು ಸುಸಜ್ಜಿತವಾಗಿದೆ ಎಂದು ಉನ್ನತ ಸಂಸ್ಥೆ ವಿಶ್ವಾಸ ವ್ಯಕ್ತಪಡಿಸಿದೆ. ಇದನ್ನೂ ಓದಿ: Delhi Elections | ಗೃಹಲಕ್ಷ್ಮಿ ಮಾದರಿಯಲ್ಲಿ `ಪ್ಯಾರಿ ದೀದಿ’; ಮಹಿಳೆಯರಿಗೆ ಪ್ರತಿ ತಿಂಗಳು 2500 ರೂ. – `ಕೈʼ ಮೊದಲ ಗ್ಯಾರಂಟಿ!

    ಬೆಂಗಳೂರಿನಲ್ಲಿ ಎಚ್‌ಎಂಪಿವಿಯ ಎರಡೂ ಪ್ರಕರಣಗಳು ವರದಿಯಾಗುತ್ತಿದ್ದಂತೆ ಐಎಂಸಿಆರ್‌ನ ಈ ಹೇಳಿಕೆ ಬಂದಿದೆ. ಸೋಂಕಿತ 3 ತಿಂಗಳ ಮಗು ಡಿಸ್ಚಾರ್ಜ್ ಆಗಿದ್ದು, 8 ತಿಂಗಳ ಮಗು ಚೇತರಿಸಿಕೊಳ್ಳುತ್ತಿದೆ. ಆರೋಗ್ಯ ಇಲಾಖೆಯು ಇತರ ಪ್ರದೇಶಗಳು ಅಥವಾ ದೇಶಗಳಿಂದ ವೈರಸ್ ಬರುವುದನ್ನು ತಳ್ಳಿಹಾಕಿದೆ. ಸೋಂಕಿತ ಶಿಶುಗಳು ಮತ್ತು ಅವರ ಕುಟುಂಬಗಳು ಇತ್ತೀಚೆಗೆ ಯಾವುದೇ ಪ್ರಯಾಣದ ಇತಿಹಾಸವನ್ನು ಹೊಂದಿಲ್ಲ ಎಂದು ಹೇಳಿದರು. ಇದನ್ನೂ ಓದಿ: `ಕೈ’ಗೆ 60% ಕಮೀಷನ್ ಆರೋಪ: ಹೆಚ್‌ಡಿಕೆಗೆ ಬಿಜೆಪಿ ಸಾತ್ – ಸಿಎಂ ಸಚಿವರು ಟಕ್ಕರ್

    ಬಹು ಉಸಿರಾಟದ ವೈರಲ್ ರೋಗಕಾರಕಗಳ ವಾಡಿಕೆಯ ಕಣ್ಗಾವಲಿನ ಮೂಲಕ ಎರಡೂ ಪ್ರಕರಣಗಳನ್ನು ಗುರುತಿಸಲಾಗಿದೆ ಎಂದು ಅದು ಹೇಳಿದೆ. ಎಚ್‌ಎಂಪಿವಿ ಈಗಾಗಲೇ ಭಾರತವನ್ನು ಒಳಗೊಂಡಂತೆ ಜಾಗತಿಕವಾಗಿ ಚಲಾವಣೆಯಲ್ಲಿದೆ ಎಚ್‌ಎಂಪಿವಿಯೊಂದಿಗೆ ಸಂಬಂಧಿಸಿದ ಉಸಿರಾಟದ ಕಾಯಿಲೆಗಳ ಪ್ರಕರಣಗಳು ವಿವಿಧ ದೇಶಗಳಲ್ಲಿ ವರದಿಯಾಗಿದೆ ಎಂದು ಒತ್ತಿಹೇಳಲಾಗಿದೆ. ಇದಲ್ಲದೆ, ಐಸಿಎಂಆರ್ ಮತ್ತು ಇಂಟಿಗ್ರೇಟೆಡ್ ಡಿಸೀಸ್ ಸರ್ವೆಲೆನ್ಸ್ ಪ್ರೋಗ್ರಾಂ (ಐಡಿಎಸ್‌ಪಿ) ನೆಟ್ವರ್ಕ್‌ನ ಪ್ರಸ್ತುತ ಡೇಟಾವನ್ನು ಆಧರಿಸಿ, ಇನ್ಫ್ಲುಯೆನ್ಸ ತರಹದ ಕಾಯಿಲೆ (ಐಎಲ್‌ಐ) ಅಥವಾ ತೀವ್ರವಾದ ಉಸಿರಾಟದ ಕಾಯಿಲೆಯಲ್ಲಿ ಯಾವುದೇ ಅಸಾಮಾನ್ಯ ಉಲ್ಬಣವು ಕಂಡುಬಂದಿಲ್ಲ ಎಂದು ಐಸಿಎಂಆರ್ ಹೇಳಿದೆ.

    ಕೇಂದ್ರ ಆರೋಗ್ಯ ಸಚಿವಾಲಯವು ಲಭ್ಯವಿರುವ ಎಲ್ಲಾ ಕಣ್ಗಾವಲು ಚಾನೆಲ್‌ಗಳ ಮೂಲಕ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿರುವಾಗ, ಐಸಿಎಂಆರ್ ವರ್ಷವಿಡೀ ಎಚ್‌ಎಂಪಿವಿ ಚಲಾವಣೆಯಲ್ಲಿರುವ ಪ್ರವೃತ್ತಿಯನ್ನು ಪತ್ತೆಹಚ್ಚುವುದನ್ನು ಮುಂದುವರಿಸುತ್ತದೆ ಎಂಬುದನ್ನು ಅದು ಗಮನಿಸಿದೆ.

    ಚೀನಾದಲ್ಲಿ ಪ್ರಕರಣಗಳ ಉಲ್ಬಣದ ನಂತರ ಎಚ್‌ಎಂಪಿವಿ ಮತ್ತು ಇತರ ಉಸಿರಾಟದ ವೈರಸ್‌ಗಳನ್ನು ಮೇಲ್ವಿಚಾರಣೆ ಮಾಡುತ್ತಿದೆ ಎಂದು ಕೇಂದ್ರವು ಈ ಹಿಂದೆ ಘೋಷಿಸಿತ್ತು. ವಿಶ್ವ ಆರೋಗ್ಯ ಸಂಸ್ಥೆ ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್, ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಮತ್ತು ಇತರ ಆರೋಗ್ಯ ಸಂಸ್ಥೆಗಳ ಪ್ರತಿನಿಧಿಗಳು ಪರಿಸ್ಥಿತಿಯನ್ನು ಮೌಲ್ಯಮಾಪನ ಮಾಡಲು ಜಂಟಿ ಮಾನಿಟರಿಂಗ್ ಗ್ರೂಪ್ ಅನ್ನು ನಡೆಸಿದರು. ಇದನ್ನೂ ಓದಿ: 40% ಆರೋಪಕ್ಕೆ ಕಾಂಗ್ರೆಸಿಗರು ಏನು ದಾಖಲೆ ಕೊಟ್ಟಿದ್ರು: ಬೊಮ್ಮಾಯಿ ಟಕ್ಕರ್

  • ಬೆಂಬಲ ಬೆಲೆಯಲ್ಲಿ ತೊಗರಿ,ಕಡಲೆ ಖರೀದಿಗೆ ಕೇಂದ್ರ ಅನುಮತಿ – ಯಾವ ಜಿಲ್ಲೆಗಳಲ್ಲಿ ಖರೀದಿ?

    ಬೆಂಬಲ ಬೆಲೆಯಲ್ಲಿ ತೊಗರಿ,ಕಡಲೆ ಖರೀದಿಗೆ ಕೇಂದ್ರ ಅನುಮತಿ – ಯಾವ ಜಿಲ್ಲೆಗಳಲ್ಲಿ ಖರೀದಿ?

    ಬೆಂಗಳೂರು: ಕನಿಷ್ಠ ಬೆಂಬಲ ಬೆಲೆಯಲ್ಲಿ (MSP) ತೊಗರಿ ಮತ್ತು ಕಡಲೆ ಖರೀದಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ.

    ರಾಜ್ಯ ಸರ್ಕಾರದ ಕೋರಿಕೆಯ ಮೇರೆಗೆ ಕೇಂದ್ರ ಸರ್ಕಾರವು 3,06,150 ಮೆಟ್ರಿಕ್‌ ಟನ್‌ ತೊಗರಿ, 96,498 ಮೆಟ್ರಿಕ್‌ ಟನ್‌ ಕಡಲೆ ಖರೀದಿ ಮಾಡಲಿದೆ. ಪ್ರತಿ ಕ್ವಿಂಟಲ್‌ಗೆ ತೊಗರಿಗೆ 7,550 ರೂ. ಹಾಗೂ ಕಡಲೆಗೆ 5,650 ರೂ. ದರವನ್ನು ನಿಗದಿ ಮಾಡಲಾಗಿದೆ.

    ಕಲಬುರಗಿ, ಯಾದಗಿರಿ, ಬೀದರ್‌, ರಾಯಚೂರು, ವಿಜಯಪುರ, ಕೊಪ್ಪಳ ಬೆಳಗಾವಿ, ಬಳ್ಳಾರಿ, ವಿಜಯನಗರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ತೊಗರಿ ಖರೀದಿಸಲಾಗುತ್ತದೆ. ಇದನ್ನೂ ಓದಿ:ಚಾಂಪಿಯನ್ಸ್ ಟ್ರೋಫಿ 2025 ರ ವೇಳಾಪಟ್ಟಿ ಪ್ರಕಟ; ಫೆ.23ರ ಭಾನುವಾರ ಭಾರತ-ಪಾಕ್‌ ಮುಖಾಮುಖಿ

     

    ಧಾರವಾಡ, ಕೊಪ್ಪಳ, ಬಳ್ಳಾರಿ, ಚಿತ್ರದುರ್ಗ, ಗದಗ, ಬೆಳಗಾವಿ, ವಿಜಯಪುರ ಕಲಬುರಗಿ, ಯಾದಗಿರಿ, ಬೀದರ್‌, ಬಾಗಲಕೋಟೆ, ದಾವಣಗೆರೆ, ಚಿಕ್ಕಮಗಳೂರು ಮತ್ತು ರಾಯಚೂರು ಜಿಲ್ಲೆಗಳಲ್ಲಿ ಕಡಲೆಯನ್ನು ಖರೀದಿ ಮಾಡಲಾಗುತ್ತದೆ.

    ಕೇಂದ್ರ ಸರ್ಕಾರದ ಅನುಮತಿ ಬೆನ್ನಲ್ಲೇ ನೋಂದಣಿ ಮತ್ತು ಖರೀದಿ ಕೇಂದ್ರ ಆರಂಭಿಸುವಂತೆ ಜವಳಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ (Shivanand Patil) ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

     

  • ಕರ್ನಾಟಕದ 7 ಮಂದಿ ಸೇರಿ ದೇಶದ 463 ಭದ್ರತಾ ಅಧಿಕಾರಿಗಳಿಗೆ ʻಕೇಂದ್ರೀಯ ಗೃಹಮಂತ್ರಿ ದಕ್ಷತಾ ಪದಕʼ

    ಕರ್ನಾಟಕದ 7 ಮಂದಿ ಸೇರಿ ದೇಶದ 463 ಭದ್ರತಾ ಅಧಿಕಾರಿಗಳಿಗೆ ʻಕೇಂದ್ರೀಯ ಗೃಹಮಂತ್ರಿ ದಕ್ಷತಾ ಪದಕʼ

    ನವದೆಹಲಿ: ಅನುಕರಣೀಯ ಸೇವೆ ಗುರುತಿಸಿ, ವಿವಿಧ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು, ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು ಮತ್ತು ಕೇಂದ್ರ ಪೊಲೀಸ್ ಸಂಸ್ಥೆಗಳ 463 ಸಿಬ್ಬಂದಿಗೆ ʻಕೇಂದ್ರೀಯ ಗೃಹಮಂತ್ರಿ ದಕ್ಷತಾ ಪದಕʼ (Kendriya Grihmantri Dakshata Padak) ಪ್ರಶಸ್ತಿ ಘೋಷಣೆ ಮಾಡಲಾಗಿದೆ.

    ವಿವಿಧ ಭದ್ರತಾ ಪಡೆಗಳಲ್ಲಿರುವ ಪೊಲೀಸ್‌ ಅಧಿಕಾರಿಗಳ ಅತ್ಯುತ್ತಮ ಸೇವೆ, ಕೊಡುಗೆಗಳನ್ನು ಗುರುತಿಸಲು, ವೃತ್ತಿಪರ ಗುಣಮಟ್ಟವನ್ನು ಉತ್ತೇಜಿಸಲು ಕೊಡಮಾಡುವ ಪ್ರತಿಷ್ಠಿತ ಪದಕ ಇದಾಗಿದೆ.

    ಕರ್ನಾಟಕದ 7 ಮಂದಿಗೆ ಪದ:
    ದೇಶದ ವಿವಿಧ ಭದ್ರತಾ ಪಡೆಗಳಲ್ಲಿರುವ ಪೊಲೀಸ್‌ ಅಧಿಕಾರಿಗಳಿಗೆ ಪ್ರಶಸ್ತಿ ನೀಡಿದ್ದು, ಈ ಪಟ್ಟಿಯಲ್ಲಿ ಕರ್ನಾಟಕದ 6 ಪೊಲೀಸ್‌ ಅಧಿಕಾರಿಗಳು ಹಾಗೂ ಓರ್ವ ಎಫ್‌ಎಸ್‌ಎಲ್‌ ಅಧಿಕಾರಿಯೂ ಸೇರಿದ್ದಾರೆ. ಇದನ್ನೂ ಓದಿ: ಮೊದಲು ನಗರ ನಕ್ಸಲರ ವಿರುದ್ಧ ಹೋರಾಡಬೇಕು – ವಿಪಕ್ಷಗಳ ವಿರುದ್ಧ ಮೋದಿ ಪರೋಕ್ಷ ವಾಗ್ದಾಳಿ

    ಕರ್ನಾಟಕದ ಅಧಿಕಾರಿಗಳಾದ ಡಿವೈಎಸ್ಪಿ, ಐಎಸ್ಡಿ ಬಸವರಾಜ್, ಬೆಂಗಳೂರು ನಗರ ಎಸಿಪಿ ರಮೇಶ್ ವಿ.ಎಲ್, ರಾಯಚೂರು ಜಿಲ್ಲೆ ಇನ್ಸ್ಪೆಕ್ಟರ್ ಉಮೇಶ್ ಕಾಂಬ್ಲೇ, ಸಿಐಡಿ ಇನ್ಸ್ಪೆಕ್ಟರ್ ನರೇಂದ್ರ ಬಾಬು, ಹಾಸಜನ ಜಿಲ್ಲೆ ಇನ್ಸ್ಪೆಕ್ಟರ್ ವಸಂತ ಕೆ.ಎಂ, ಉತ್ತರಕನ್ನಡ ಜಿಲ್ಲೆಯ ಇನ್ಸ್ಪೆಕ್ಟರ್ ರಮೇಶ್ ಹೆಚ್ ಹನಾಪುರ್, ಬೆಳಗಾವಿ ಜಿಲ್ಲೆಯ ಡಾ.ಪ್ರವೀಣ್ ಸಂಗ್ನಲ್ ಮಠ್ ಅವರು ಪದಕಕ್ಕೆ ಭಾಜನರಾಗಿದ್ದಾರೆ. ಇದನ್ನೂ ಓದಿ: ಆರ್‌.ಆರ್‌ ನಗರ ದರ್ಶನ್ ನಿವಾಸದ ಬಳಿ ಪೊಲೀಸರ ಬಿಗಿ ಭದ್ರತೆ – ನಾಳೆ ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ

    ಪದಕದ ವಿಶೇಷತೆ ಏನು?
    2024ರ ಫೆಬ್ರವರಿ 1ರಂದು ಕೇಂದ್ರೀಯ ಗೃಹದಕ್ಷತಾ ಪದಕವನ್ನು ಸ್ಥಾಪಿಸಲಾಗಿದೆ. ಕರ್ತವ್ಯದಲ್ಲಿ ಉನ್ನತ ಕೊಡುಗೆ ನೀಡಿದ ಪೊಲೀಸ್ ಪಡೆಗಳು, ಭದ್ರತಾ ಸಂಸ್ಥೆ, ಗುಪ್ತಚರ ವಿಭಾಗ, ಶಾಖೆ, ರಾಜ್ಯದ ವಿಶೇಷ ಶಾಖೆ, ಯುಟಿ ಸದಸ್ಯರಿಗೆ ಈ ಪದಕ ನೀಡಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ ಪ್ರಾರಂಭವಾದ ʻಕೇಂದ್ರೀಯ ಗೃಹಮಂತ್ರಿ ದಕ್ಷತಾ ಪದಕʼವು ಎಲ್ಲಾ ಪೊಲೀಸ್ ಸಿಬ್ಬಂದಿಯ ನೈತಿಕತೆ ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ ಎಂದು ಬಣ್ಣಿಸಲಾಗಿದೆ.

  • ಕೇಂದ್ರದ ಗುಪ್ತಚರ ಸಂಸ್ಥೆಗಳು ಏನ್‌ ಮಾಡ್ತಿವೆ – RAW, IB ವಿದೇಶಿಗರನ್ನು ಹಿಡಿದು ಹಾಕ್ಬೇಕು: ‌ಪರಮೇಶ್ವರ್‌

    ಕೇಂದ್ರದ ಗುಪ್ತಚರ ಸಂಸ್ಥೆಗಳು ಏನ್‌ ಮಾಡ್ತಿವೆ – RAW, IB ವಿದೇಶಿಗರನ್ನು ಹಿಡಿದು ಹಾಕ್ಬೇಕು: ‌ಪರಮೇಶ್ವರ್‌

    ಧಾರವಾಡ: ಮಾದಕ ವಸ್ತುಗಳ ವಿರುದ್ಧ ವಿರುದ್ಧ ನಾವು ಸಮರ ಸಾರಿದ್ದೇವೆ. ಕರ್ನಾಟಕದಲ್ಲಿ 10,000ಕ್ಕೂ ಹೆಚ್ಚು ಜನ ವಿದೇಶಿಗರಿದ್ದಾರೆ. ಅದರಲ್ಲಿ ಅನೇಕರು ಡ್ರಗ್ಸ್‌ ಜಾಲಕ್ಕೆ ಸಿಲುಕಿಕೊಂಡಿದ್ದಾರೆ ಎಂದು ಗೃಹ ಸಚಿವ ಜಿ.ಪರಮೇಶ್ವರ್‌ (G Parameshwara) ಹೇಳಿದರು.

    ಧಾರವಾಡದಲ್ಲಿ (Dharwad) ಮಾತನಾಡಿದ ಅವರು, ವಿದೇಶಿಗರನ್ನ ಫರ್ಮನೆಂಟ್ ಆಗಿ‌ ಮಾನಿಟರ್ ಮಾಡುತ್ತಿದ್ದೇವೆ. ನೂರಕ್ಕೂ ಹೆಚ್ಚು ಜನರನ್ನ ಆಯಾ ದೇಶಕ್ಕೆ ವಾಪಸ್ ಕಳುಹಿಸುತ್ತೇವೆ. ಕೆಲವರನ್ನ ಡಿಟೆಸೆನ್ಸ್ ಕೇಂದ್ರಗಳಲ್ಲಿ ಇಟ್ಟುಕೊಂಡಿದ್ದೇವೆ ಎಂದರು. ಇದನ್ನೂ ಓದಿ: ಧಾರವಾಡ| ಖಾಸಗಿ ಬಸ್‌ನಲ್ಲಿ ದಾಖಲೆಗಳಿಲ್ಲದೇ ಸಾಗಿಸುತ್ತಿದ್ದ 98 ಲಕ್ಷ ರೂ. ಮೌಲ್ಯದ ಚಿನ್ನ, ಬೆಳ್ಳಿ ಜಪ್ತಿ

    ಆಯಾ ದೇಶಗಳ ರಾಯಭಾರ ಕಚೇರಿಯವರ ಕ್ಲಿಯರೆನ್ಸ್ ಕೇಳಿ ವಾಪಸ್‌ ಕಳುಹಿಸುತ್ತೇವೆ ಎಂದ ಗೃಹಸಚಿವರು ಕೇಂದ್ರ ಸರ್ಕಾರದ ಗುಪ್ತಚರ ಸಂಸ್ಥೆಗಳು ಏನು ಮಾಡುತ್ತಿವೆ? RAW, IB ದವರು ವಿದೇಶಿಗರನ್ನು ಹಿಡಿದು ಹಾಕಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಇಂಡಿಗೋ ಏರ್‌ಲೈನ್ಸ್‌ನಲ್ಲಿ ಸರ್ವರ್‌ ಸಮಸ್ಯೆ; ಚೆಕ್-ಇನ್‌, ಫ್ಲೈಟ್ ಕಾರ್ಯಾಚರಣೆಯಲ್ಲಿ ತೊಂದರೆ

    ಆನೇಕಲ್ ಬಳಿ ನಾಲ್ಕು ಜನರನ್ನು ಹಿಡಿದಿದ್ವಿ, ನಾಲ್ಕು ಜನ ನಮ್ಮ ರಾಜ್ಯಕ್ಕೆ ಬಂದು ಒಂದು ವರ್ಷ ಆಯ್ತು. ಆದರೆ ಅವರು ದೇಶಕ್ಕೆ ಬಂದು 10 ವರ್ಷ ಆಗಿದೆ. ನಮ್ಮ ಪೊಲೀಸರೇ ಅವರನ್ನು ಹಿಡಿದು IB ದವರಿಗೆ ಮಾಹಿತಿ ಕೊಟ್ಟಿದ್ದಾರೆ. ಹಿಂದೆ ಸಹ ಒಬ್ಬ ಹಾಗೆಯೇ ಮಾಡಿದ್ದ, ಅಂಗಡಿಗಳ ಮಧ್ಯೆ ಅಂಗಡಿ ಇಟ್ಟುಕೊಂಡಿದ್ದ, ಆತನನ್ನು ಪತ್ತೆ ಮಾಡಿದ್ವಿ. ಇಂತಹ ವಿಚಾರಗಳ ಬಗ್ಗೆ ಕರ್ನಾಟಕ ಪೊಲೀಸರಿಗೆ IB ದವರು ಮಾಹಿತಿ ಕೊಡಬೇಕು ಎಂದು ಹೇಳಿದ್ದಾರೆ.

  • ಗುಡ್‌ನ್ಯೂಸ್‌ – ಕಾರ್ಮಿಕರಿಗೆ ಕನಿಷ್ಠ ವೇತನ ದರ ಹೆಚ್ಚಳ, ಅ.1ರಿಂದ ವೇತನ ಪರಿಷ್ಕರಣೆ ಜಾರಿ

    ಗುಡ್‌ನ್ಯೂಸ್‌ – ಕಾರ್ಮಿಕರಿಗೆ ಕನಿಷ್ಠ ವೇತನ ದರ ಹೆಚ್ಚಳ, ಅ.1ರಿಂದ ವೇತನ ಪರಿಷ್ಕರಣೆ ಜಾರಿ

    ನವದೆಹಲಿ: ಕೇಂದ್ರ ಸರ್ಕಾರವು (Union Government) ಕಾರ್ಮಿಕರಿಗೆ ಕನಿಷ್ಠ ವೇತನ ದರಗಳನ್ನು ಹೆಚ್ಚಳ ಮಾಡಿದೆ. ವೇರಿಯಬಲ್ ಡಿಯರ್ನೆಸ್ ಅಲೋವೆನ್ಸ್ (VDA) ಪರಿಷ್ಕರಣೆ ಮೂಲಕ ಕೇಂದ್ರ ಸರ್ಕಾರವು ಕನಿಷ್ಠ ವೇತನ ದರ ಹೆಚ್ಚಳ ಘೋಷಿಸಿದೆ. ಇದು ಅಕ್ಟೋಬರ್ 1, 2024 ರಿಂದ ಜಾರಿಗೆ ಬರಲಿದೆ.

    ಈ ಪರಿಷ್ಕರಣೆಯು ಕಾರ್ಮಿಕರಿಗೆ, ವಿಶೇಷವಾಗಿ ಅಸಂಘಟಿತ ವಲಯದಲ್ಲಿರುವವರಿಗೆ, ಆರ್ಥಿಕ ನಿರ್ವಹಣೆಗೆ ಸಹಕಾರಿಯಾಗಲಿದೆ. ಪರಿಷ್ಕೃತ ವೇತನವು ಕಟ್ಟಡ ಕಾರ್ಮಿಕರು, ಲೋಡಿಂಗ್ ಮತ್ತು ಅನ್‌ಲೋಡಿಂಗ್, ವಾಚ್ ಮತ್ತು ವಾರ್ಡ್, ಕಸ ಗುಡಿಸುವುದು, ಸ್ವಚ್ಛತೆ, ಮನೆಗೆಲಸ, ಗಣಿಗಾರಿಕೆ ಮತ್ತು ಕೃಷಿ ಸೇರಿದಂತೆ ವಿವಿಧ ವಲಯಗಳ ಕಾರ್ಮಿಕರಿಗೆ ಪ್ರಯೋಜನವನ್ನು ನೀಡುತ್ತದೆ.

    ಕೌಶಲ್ಯಮಟ್ಟಕ್ಕೆ ಅನುಗುಣವಾಗಿ ಕನಿಷ್ಠ ವೇತನ ದರ ಹೆಚ್ಚಿಸಲಾಗಿದೆ. ಕೌಶಲ್ಯರಹಿತ, ಅರೆ-ಕುಶಲ, ಕೌಶಲ್ಯ ಮತ್ತು ಹೆಚ್ಚು ನುರಿತ ಮತ್ತು ಇತರೇ ವರ್ಗಗಳನ್ನು A, B ಮತ್ತು C ಎಂದು ವರ್ಗೀಕರಿಸಲಾಗಿದೆ.

    ವೇತನ ಪರಿಷ್ಕರಣೆ ಅಡಿಯಲ್ಲಿ ಎ- ವರ್ಗದಲ್ಲಿರುವವರು ದಿನಕ್ಕೆ 783 ರೂ.ಗಳಂತೆ ತಿಂಗಳಿಗೆ ರೂ 20,358 ರೂ., ಅರೆ-ಕುಶಲ ಕೆಲಸಗಾರರು 868 ರೂ. ನಂತೆ ತಿಂಗಳಿಗೆ ರೂ 22,568 ರೂ., ನುರಿತ ಮತ್ತು ಕ್ಲೆರಿಕಲ್ ಕೆಲಸಗಾರರು ದಿನಕ್ಕೆ 954 ರೂ.ನಂತೆ 24,804 ರೂ., ಹೆಚ್ಚು ನುರಿತ ಕೆಲಸಗಾರರು ಅದಕ್ಕಿಂತಲೂ ಹೆಚ್ಚಿನ ವೇತನವನ್ನು ಪಡೆಯಲಿದ್ದಾರೆ. ಹೆಚ್ಚಿನ ಮಾಹಿತಿಯನ್ನು ಮುಖ್ಯ ಕಾರ್ಮಿಕ ಆಯುಕ್ತರ (ಕೇಂದ್ರ) ವೆಬ್‌ಸೈಟ್‌ನಲ್ಲಿ clc.gov.in ನಲ್ಲಿ ಕಾಣಬಹುದಾಗಿದೆ.