Tag: umesh jadhav

  • ಎಲ್ಲಿಯೂ ಹೋಗಿಲ್ಲ, ತೀರ್ಥ ಯಾತ್ರೆಗೆ ಹೋಗಿ ಬಂದೆ: ಉಮೇಶ್ ಜಾಧವ್

    ಎಲ್ಲಿಯೂ ಹೋಗಿಲ್ಲ, ತೀರ್ಥ ಯಾತ್ರೆಗೆ ಹೋಗಿ ಬಂದೆ: ಉಮೇಶ್ ಜಾಧವ್

    -ನಾನೇ ಆಪರೇಟಿಂಗ್ ಸರ್ಜನ್, ನಾವೇ ಆಪರೇಷನ್ ಮಾಡ್ತೀವಿ

    ರಾಯಚೂರು: ಬಿಜೆಪಿ ಪಕ್ಷಕ್ಕೆ ಹೋಗುವ ಬಗ್ಗೆ ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ ಕೇವಲ ಜನ ಮಾತನಾಡುತ್ತಿದ್ದಾರೆ. ಈ ಸಂಬಂಧ ನಾನು ನಿರ್ಧಾರ ಮಾಡಿಲ್ಲ ಅಂತ ಸಮ್ಮಿಶ್ರ ಸರ್ಕಾರದ ಅತೃಪ್ತ ಚಿಂಚೋಳಿ ಶಾಸಕ ಉಮೇಶ್ ಜಾಧವ್ ಹೇಳಿದ್ದಾರೆ.

    ರಾಯಚೂರು ರೈಲ್ವೇ ನಿಲ್ದಾಣದಲ್ಲಿ ಮಾತನಾಡಿದ ಶಾಸಕರು, ನಾನೂ ಎಲ್ಲಿಗೂ ಹೋಗಿಲ್ಲ ತೀರ್ಥ ಯಾತ್ರೆಗೆ ಹೋಗಿದ್ದೆ. ಸಮಸ್ಯೆಗಳನ್ನ ಬಗೆಹರಿಸುತ್ತಾರೆ ಅಂದಮೇಲೆ ಎಲ್ಲಿಗೆ ಹೋಗೋ ಪ್ರಶ್ನೆಯಿಲ್ಲ. ಕಾರ್ಯಕರ್ತರಯ ಮನೆ ಮುಂದೆ ಪ್ರತಿಭಟನೆ ಮಾಡಿದ್ದರಿಂದ ಡಿಪ್ರೆಷನ್ ನಲ್ಲಿ ಆಸ್ಪತ್ರೆಗೆ ಸೇರಿದ್ದೆ. ನಾವು ಆಪರೇಷನ್ ಗೆ ಒಳಗಾಗುವವರಲ್ಲ ಆಪರೇಟಿಂಗ್ ಸರ್ಜನ್ ಇದ್ದೀನಿ ನಾವೇ ಆಪರೇಷನ್ ಮಾಡುವವರು ಇದ್ದೇವೆ ಎಂದರು.

    ಮುಂದಿನ ನಡೆ ಬಗ್ಗೆ ಯಾವುದನ್ನೂ ತೀರ್ಮಾನ ಮಾಡಿಲ್ಲ. ನಾವು ಯಾವುದೇ ಉಸ್ತುವಾರಿ ಕೇಳುತ್ತಿಲ್ಲ ಕ್ಷೇತ್ರದ ಅಭಿವೃದ್ಧಿ ಆಗಬೇಕು ಅನ್ನೋದು ನಮ್ಮ ಆಸೆ. ಬಿಜೆಪಿಯವರು ಯಾರೂ ಸಂಪರ್ಕ ಮಾಡಿಲ್ಲ, ನಮ್ಮ ಹಿತ ಬಯಸುವವರು ಮಾತ್ರ ಸಂಪರ್ಕದಲ್ಲಿದ್ದಾರೆ. ಪತ್ನಿಗೆ ಶಸ್ತ್ರಚಿಕಿತ್ಸೆಯಾಗಿತ್ತು ಹೀಗಾಗಿ ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ಹೊರಟಿದ್ದೇನೆ, ಎರಡು ದಿನಗಳ ಬಳಿಕ ಕ್ಷೇತ್ರಕ್ಕೆ ಮರಳುತ್ತೇನೆ ಅಂತ ಅತೃಪ್ತ ಶಾಸಕ ಉಮೇಶ್ ಜಾಧವ್ ಹೇಳಿದರು. ರೈಲ್ವೆ ನಿಲ್ದಾಣದಲ್ಲಿ ಬಿಜೆಪಿ ಮುಖಂಡ ತ್ರಿವಿಕ್ರಮ ಜೋಶಿಯನ್ನ ಭೇಟಿ ಮಾಡಿದ ಜಾಧವ್ ಒಂದೇ ರೈಲಿನಲ್ಲಿ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದು, ಕುತೂಹಲಕ್ಕೆ ಎಡೆಮಾಡಿಕೊಟ್ಟಿತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪಕ್ಷ ಇಲ್ಲವೇ ರಾಜೀನಾಮೆ ಎರಡೇ ಆಯ್ಕೆ: ಉಮೇಶ್ ಜಾಧವ್

    ಪಕ್ಷ ಇಲ್ಲವೇ ರಾಜೀನಾಮೆ ಎರಡೇ ಆಯ್ಕೆ: ಉಮೇಶ್ ಜಾಧವ್

    – ಸಚಿವ ಸ್ಥಾನಕ್ಕೆ ಕ್ಷೇತ್ರದ ಜನರಿಂದ ಒತ್ತಾಯ

    ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿರಬೇಕು. ಇಲ್ಲವೇ ರಾಜೀನಾಮೆ ನೀಡಬೇಕು. ಈ ಎರಡರಲ್ಲಿ ಒಂದು ನಿರ್ಧಾರ ಕೈಗೊಳ್ಳುತ್ತೇನೆ ಎಂದು ಚಿಂಚೋಳಿ ಶಾಸಕ ಉಮೇಶ್ ಜಾಧವ್ ಅವರು ರಾಜೀನಾಮೆ ನೀಡುವ ಸುಳಿವನ್ನು ಬಿಟ್ಟುಕೊಟ್ಟಿದ್ದಾರೆ.

    ವಿಧಾನಸಭೆ ಕಲಾಪಕ್ಕೂ ಮುನ್ನ ಮಾಧ್ಯಮಗಳ ಜೊತೆಗೆ ಮಾತನಾಡಿದ ಶಾಸಕರು, ರಾಜೀನಾಮೆ ನೀಡುವ ವಿಚಾರದಲ್ಲಿ ಗೊಂದಲವಿದ್ದು, ಕ್ಷೇತ್ರದ ಮತದಾರರ ಸಲಹೆ ಪಡೆದು ಮುಂದುವರಿಯುತ್ತೇನೆ. ಸ್ಪೀಕರ್ ರಮೇಶ್ ಕುಮಾರ್ ಅವರು ನೀಡಿದ ನೋಟಿಸ್ ತಲುಪಿದ ಮೇಲೆ ಉತ್ತರ ಕೊಡುತ್ತೇನೆ. ಸ್ಥಳೀಯವಾಗಿ ಕ್ಷೇತ್ರದಲ್ಲಿ ಸಮಸ್ಯೆಯಿಂದ ಅಸಮಾಧಾನವಿದೆ ಎಂದು ಹೇಳಿದರು.

    ಬಿಜೆಪಿಯವರ ಆಪರೇಷನ್ ಕಮಲಕ್ಕೆ ನಾನು ಒಳಗಾಗಿಲ್ಲ. ಅಲ್ಲಿ ನನ್ನ ಸ್ನೇಹಿತರಿದ್ದಾರೆ. ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಜೊತೆ ಮುಂಬೈ ಹೋಟೆಲ್‍ನಲ್ಲಿ ಇರಲಿಲ್ಲ. ನಾನು ಬೆಂಗಳೂರಿನಲ್ಲೇ ಇದ್ದೆ ಎಂದ ಶಾಸಕರು, ನಾನು ಪಕ್ಷದಲ್ಲೇ ಇರುತ್ತೇನೆ. ಪಕ್ಷ ಬಿಟ್ಟು ಹೋಗಲ್ಲ. ಕಲಾಪದಲ್ಲಿ ಇಂದು ಬಜೆಟ್ ವಿಧೇಯಕ ಮತದಾನ ಹೀಗಾಗಿ ಬಂದಿದ್ದೇನೆ ಎಂದರು.

    ಸಿಎಲ್‍ಪಿ ಸಭೆಗೆ ಗೈರು ಆಗಿದ್ದ ಕುರಿತು ಪ್ರತಿಕ್ರಿಯೆ ನೀಡಿದ ಶಾಸಕರು, ವೈಯಕ್ತಿಕ ಕಾರಣದಿಂದಾಗಿ ಹಾಜರಾಗಿಲ್ಲ. ಈ ಸಂಬಂಧ ಪಕ್ಷದ ನಾಯಕರಿಗೆ ಕಾರಣ ಕೊಟ್ಟಿದ್ದೇನೆ. ನನ್ನ ಸ್ಪಷ್ಟನೆಯಲ್ಲಿ ತಪ್ಪು ಇದ್ದರೆ ಕ್ರಮ ಕೈಗೊಳ್ಳಲಿ ಎಂದ ಅವರು, ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ದೊಡ್ಡವರು. ಅವರ ಬಗ್ಗೆ ನಾನು ಮಾತನಾಡುವುದಿಲ್ಲ. ಸಮಯ ಬಂದಾಗ ಮಾತನಾಡುತ್ತೇನೆ ಎಂದು ಹೇಳಿ ಟಾಂಗ್ ಕೊಟ್ಟರು.

    ನಾನು ತಪ್ಪು ಮಾಡಿಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ನನ್ನ ನಾಯಕ. ಬಿಜೆಪಿಯಲ್ಲಿ ನನ್ನ ಗೆಳೆಯರಿದ್ದಾರೆ. ಅವರ ಜೊತೆಗೆ ಸಂಪರ್ಕದಲ್ಲಿ ಇಲ್ಲದೆ ಇರುವುದಕ್ಕೆ ಆಗುತ್ತದೆಯೇ? ಸರ್ಕಾರ ಬೀಳಿಸುವ ವಿಚಾರವನ್ನ ಮಾಡಿಲ್ಲ. ಅಷ್ಟೇ ಅಲ್ಲದೆ ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಆದರೆ ಕ್ಷೇತ್ರದ ಮತದಾರರಿಗೆ ನಾನು ಸಚಿವನಾಗಬೇಕು ಎನ್ನುವ ಆಶಯ ಎಂದು ಸಚಿವ ಸ್ಥಾನದ ಬೇಡಿಕೆಯನ್ನು ಸಮರ್ಥಿಸಿಕೊಂಡರು.

    ಕಲಾಪದಲ್ಲಿ ಕ್ಷೇತ್ರದ ಸಮಸ್ಯೆ ಕುರಿತು ಮತದಾನ ಮಾಡಬೇಕು. ಇವತ್ತೂ ಕೂಡ ಬಂದಿಲ್ಲ ಎನ್ನುವ ಕಳಂಕ ಹೊತ್ತುಕೊಳ್ಳಲು ನಾನು ಸಿದ್ಧನಿಲ್ಲ ಎಂದ ಅವರು, ನಾನು ಗೊಂದಲದಲ್ಲಿದ್ದೇನೆ. ರಾಜೀನಾಮೆ ಕುರಿತು ನಿರ್ಣಯವಾಗಿಲ್ಲ ಎಂದರು.

    ಬಿಜೆಪಿಯಿಂದ ಲೋಕಸಭೆ ಟಿಕೆಟ್ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಶಾಸಕರು, ಈ ಬಗ್ಗೆ ನನಗೆ ಗೊತ್ತಿಲ್ಲ. ಮಾಧ್ಯಮಗಳಲ್ಲಿ ಹೀಗೆ ಸುದ್ದಿ ಬರುತ್ತಿರುವುದನ್ನು ನೋಡಿದ್ದೇನೆ ಅಷ್ಟೇ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಾಜ್ಯದ ಚುಕ್ಕಾಣಿಗೆ ಅದೃಷ್ಟದ ಕ್ಷೇತ್ರ-ಬಂಡಾಯದಿಂದಲೇ ಸುದ್ದಿಯಾಗ್ತಾರೆ ಚಿಂಚೋಳಿ ಶಾಸಕರು!

    ರಾಜ್ಯದ ಚುಕ್ಕಾಣಿಗೆ ಅದೃಷ್ಟದ ಕ್ಷೇತ್ರ-ಬಂಡಾಯದಿಂದಲೇ ಸುದ್ದಿಯಾಗ್ತಾರೆ ಚಿಂಚೋಳಿ ಶಾಸಕರು!

    ಕಲಬುರಗಿ: ಜಿಲ್ಲೆಯ ಚಿಂಚೋಳಿ ಕ್ಷೇತ್ರದಲ್ಲಿ ಗೆಲ್ಲುವ ಪಕ್ಷವೇ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ದುರಂತ ಅಂದ್ರೆ ಹೀಗೆ ಆಯ್ಕೆಯಾದ ಬಹುತೇಕ ಶಾಸಕರು ಅದೇ ಪಕ್ಷದ ವಿರುದ್ಧ ಬಂಡಾಯ ಸಾರಿ ಸಿಕ್ಕ ಹುದ್ದೆ ಕಳೆದುಕೊಂಡಿದ್ದಾರೆ. ಚಿಂಚೋಳಿ ವಿಧಾನಸಭಾ ಕ್ಷೇತ್ರ ಅಂದ್ರೆ ಸಾಕು ರಾಜಕೀಯವಾಗಿ ಅದೃಷ್ಟದ ಕ್ಷೇತ್ರ ಅಂತಲೇ ಪ್ರಖ್ಯಾತಿ. ಯಾಕಂದ್ರೆ 1983ರ ಅವಧಿ ಹೊರತುಪಡಿಸಿ ಈ ಕ್ಷೇತ್ರದಲ್ಲಿ ಯಾವ ಪಕ್ಷ ಗೆಲ್ಲುತ್ತೋ ಅದೇ ಪಕ್ಷ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಅಲ್ಲದೆ ಚಿಂಚೋಳಿಯಿಂದ ಆಯ್ಕೆಯಾದ ಶಾಸಕರು ಒಂದಿಲ್ಲೊಂದು ರೀತಿಯ ಉನ್ನತ ಹುದ್ದೆಯಲ್ಲಿರುತ್ತಾರೆ.

    ಚಿಂಚೋಳಿ ಕ್ಷೇತ್ರ ಅದೃಷ್ಟಕ್ಕೆ ಎಷ್ಟು ಹೆಸರುವಾಸಿಯೂ ಅಷ್ಟೇ ದುರಾದೃಷ್ಟಕ್ಕೂ ಹೆಸರುವಾಸಿಯಾಗಿದೆ. ಯಾಕಂದ್ರೆ ಇಲ್ಲಿ ಗೆದ್ದ ಪಕ್ಷ ಗದ್ದುಗೆ ಏರಿದ್ರೂ ಪಕ್ಷದಿಂದ ಆಯ್ಕೆಯಾದವರು ಪಕ್ಷದ ವಿರುದ್ಧವೇ ತಿರುಗಿ ಬೀಳುತ್ತಾರೆ. ಇದಕ್ಕೆ ಪೂರಕವೆಂಬಂತೆ ದಿವಗಂತ ವೀರೇಂದ್ರ ಪಾಟೀಲ್ ಸಿಎಂ ಸ್ಥಾನ ಕಳೆದುಕೊಂಡಿದ್ದರು. ನಂತರದ ದಿನಗಳಲ್ಲಿ ಸಚಿವರಾಗಿದ್ದ ಘಾಳೆಪ್ಪ ಹಲವು ಆಪಾದನೆಗಳನ್ನು ಹೊತ್ತು ರಾಜೀನಾಮೆ ನೀಡಿದ್ದರು. ನಂತರ ಬಂದ ವೈಜನಾಥ ಪಾಟೀಲ್ ಹೈದರಾಬಾದ್ ಕರ್ನಾಟಕ ಭಾಗಕ್ಕೆ 371 ವಿಶೇಷ ಸ್ಥಾನಮಾನ ಸಿಗಲಿಲ್ಲ ಎಂದು ರಾಜೀನಾಮೆ ನೀಡಿದರು. ಬಳಿಕ ಸಚಿವ ಸ್ಥಾನ ಪಡೆದು ಸುನೀಲ್ ವಲ್ಯಾಪುರ ಬಿಜೆಪಿ-ಕೆಜೆಪಿ ಜಗಳದಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಹೀಗೆ ಹಲವಾರು ಉದಾಹರಣೆಗಳಿವೆ. ಇದೀಗ ಅದೇ ಸಾಲಿನಲ್ಲಿ ಚಿಂಚೋಳಿ ಕಾಂಗ್ರೆಸ್‍ನ ಅತೃಪ್ತ ಶಾಸಕ ಉಮೇಶ್ ಜಾಧವ್ ಸೇರಿದ್ದಾರೆ.

    ರಾಜ್ಯದ ಚುಕ್ಕಾಣಿ ಹಿಡಿಯಲು ಲಕ್ಕಿ ಕ್ಷೇತ್ರವಾದ ಚಿಂಚೋಳಿ ಇಲ್ಲಿನ ಶಾಸಕರಿಗೆ ಮಾತ್ರ ಅದೃಷ್ಟ ತಂದುಕೊಟ್ಟಿಲ್ಲ. ಶಾಸಕ ಜಾಧವ್ ಇದೀಗ ಬಂಡಾಯ ನಾಯಕರ ಪಟ್ಟಿಯಲ್ಲಿದ್ದು ಅವರ ನಡೆ ಏನು ಎಂಬುದು ರಾಜ್ಯ ರಾಜಕೀಯದಲ್ಲಿ ತೀವ್ರ ಕೂತೂಹಲ ಸೃಷ್ಟಿಸಿದೆ. ಈಗಾಗಲೇ ಕಾಂಗ್ರೆಸ್ ಅತೃಪ್ತ ಶಾಸಕರನ್ನು ಅನರ್ಹಗೊಳಿಸಬೇಕೆಂದು ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಸೋಮವಾರ ಮನವಿ ಸಲ್ಲಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸೋಮವಾರದೊಳಗೆ ಜಾಧವ್ ರಾಜೀನಾಮೆ ಪಕ್ಕಾ – ಮಾಜಿ ಸಚಿವ ಬಾಬೂರಾವ್ ಚಿಂಚನಸೂರು

    ಸೋಮವಾರದೊಳಗೆ ಜಾಧವ್ ರಾಜೀನಾಮೆ ಪಕ್ಕಾ – ಮಾಜಿ ಸಚಿವ ಬಾಬೂರಾವ್ ಚಿಂಚನಸೂರು

    ಯಾದಗಿರಿ: ಸೋಮವಾರದೊಳಗೆ ಶಾಸಕ ಉಮೇಶ್ ಜಾಧವ್ ರಾಜೀನಾಮೆ ನೀಡುವುದು 100ಕ್ಕೆ 100ರಷ್ಟು ಸತ್ಯ ಎಂದು ಮಾಜಿ ಸಚಿವ ಬಾಬೂರಾವ್ ಚಿಂಚನಸೂರು ಹೇಳಿದ್ದಾರೆ.

    ಮುಂಬೈನಲ್ಲಿ ಕಾಂಗ್ರೆಸ್ ಅತೃಪ್ತ ಶಾಸಕರ ಹೊಣೆ ಹೊತ್ತಿರುವ ಅವರು ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಮುಂದಿನ ಲೋಕಸಭಾ ಚುನಾವಣೆಗೆ ಚಿಂಚೊಳಿ ಶಾಸಕ ಉಮೇಶ್ ಜಾಧವ್ ಬಿಜೆಪಿ ಅಭ್ಯರ್ಥಿಯಾಗಿರುತ್ತಾರೆ. ಜಾಧವ್ ಅವರು ಈಗಾಗಲೇ ಬಿಜೆಪಿ ಹೈಕಮಾಂಡ್ ಜೊತೆ ಮಾತನಾಡಿದ್ದಾರೆ ಎಂದು ಹೇಳಿದ್ದಾರೆ.

    ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಕೀರ್ತಿ ಪತಾಕೆ ಹಾರಿಸೋದೆ ನಮ್ಮ ಗುರಿಯಾಗಿದೆ. ಉಮೇಶ್ ಜಾಧವ್ ಅವರು ರಾಜೀನಾಮೆ ನೀಡಿಯೇ ನೀಡುತ್ತಾರೆ. ಜಾಧವ್ ಅವರನ್ನು ಅನರ್ಹಗೊಳಿಸಿದ್ರೆ ನಮಗೂ ಕಾನೂನು ಗೊತ್ತು. ಮುಂದಿನ ವಾರ ಬಿಎಸ್ ಯಡಿಯೂರಪ್ಪ ಗುರುಮಠಕಲ್ ಕ್ಷೇತ್ರಕ್ಕೆ ಬರುತ್ತಾರೆ ಎಂದು ಅವರು ಹೇಳಿದ್ದಾರೆ.

    ರಾಜ್ಯ ಉಗ್ರಾಣ ನಿಗಮಕ್ಕೆ ಉಮೇಶ್ ಜಾಧವ್ ನೇಮಕಾತಿಯನ್ನ ಸಿಎಂ ಕುಮಾರಸ್ವಾಮಿ ರದ್ದು ಮಾಡಿದ್ದಾರೆ. ಉಮೇಶ್ ಜಾಧವ್ ಬದಲಾಗಿ ಉಗ್ರಾಣ ನಿಗಮಕ್ಕೆ ಮಸ್ಕಿ ಶಾಸಕ ಪ್ರತಾಪ್ ಗೌಡ ಪಾಟೀಲ್‍ರನ್ನ ಅಧ್ಯಕ್ಷರನ್ನಾಗಿ ನೇಮಿಸಿ ಸಿಎಂ ಆದೇಶ ಹೊರಡಿಸಿದ್ದಾರೆ.

    ಫೆಬ್ರವರಿ 17ರಂದು ಕಲಬುರಗಿಯಲ್ಲಿ ನಡೆಯಲಿರುವ ಸಮಾವೇಶದಲ್ಲಿ ಪ್ರಧಾನಿ ಮೋದಿ ಸಮ್ಮುಖದಲ್ಲೇ ಜಾಧವ್ ಬಿಜೆಪಿ ಸೇರ್ಪಡೆಯಾಗಲಿದ್ದಾರೆ. ಈ ಮೂಲಕ ಕಲಬುರಗಿ ಮೀಸಲು ಲೋಕಸಭಾ ಚುನಾವಣೆ ಸಿದ್ಧತೆ ನಡೆಸಲಿದ್ದು, ಕೈ ನಾಯಕ ಮಲ್ಲಿಕಾರ್ಜುನ ಖರ್ಗೆ ಹಣಿಸಲು ಮುಂದಾಗಲಿದ್ದಾರೆ ಎಂಬುದಾಗಿ ಮಾಹಿತಿ ಲಭಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅತೃಪ್ತರು ಗೈರಾಗಿದ್ದು ಯಾಕೆ? ಅನರ್ಹತೆಗೊಳಿಸಿದ್ದು ಯಾಕೆ? ಸಿದ್ದರಾಮಯ್ಯ ನೀಡಿದ ಸ್ಪಷ್ಟನೆ ಏನು?

    ಅತೃಪ್ತರು ಗೈರಾಗಿದ್ದು ಯಾಕೆ? ಅನರ್ಹತೆಗೊಳಿಸಿದ್ದು ಯಾಕೆ? ಸಿದ್ದರಾಮಯ್ಯ ನೀಡಿದ ಸ್ಪಷ್ಟನೆ ಏನು?

    ಬೆಂಗಳೂರು: ಕಳೆದ ಒಂದು ತಿಂಗಳಿನಿಂದ ಸಮ್ಮಿಶ್ರ ಸರ್ಕಾರಕ್ಕೆ ತಲೆನೋವಾಗಿದ್ದ ಅತೃಪ್ತ ಶಾಸಕರ ಅನರ್ಹತೆಗೆ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ನಿರ್ಧರಿಸಲಾಗಿದೆ. ಸಚಿವ ಸ್ಥಾನ ಕಳೆದುಕೊಂಡ ಬಳಿಕ ಮುಂಬೈನಲ್ಲಿ ಕುಳಿತಿರುವ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಮತ್ತು ಬಂಡಾಯ ಬಾವುಟ ಕೈಯಲ್ಲಿ ಹಿಡಿದುಕೊಂಡು ನಿಂತಿರುವ ಚಿಂಚೋಳಿ ಶಾಸಕ ಉಮೇಶ್ ಜಾಧವ್, ನಾಗೇಂದ್ರ, ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಅವರನ್ನು ಶಾಸಕ ಸ್ಥಾನದಿಂದ ಅನರ್ಹ ಮಾಡುವ ಮೂಲಕ ಉಳಿದ ಅಸಮಾಧಾನಿತರಿಗೆ ಎಚ್ಚರಿಕೆಯ ಸಂದೇಶ ನೀಡಲು ಶಾಸಕಾಂಗ ಸಭೆಯಲ್ಲಿ ನಿರ್ಧರಿಸಲಾಗಿದೆ.

    ಅಜ್ಞಾತ ಸ್ಥಳದಲ್ಲಿ ಕುಳಿತುಕೊಂಡಿರುವ ರಮೇಶ್ ಜಾರಕಿಹೊಳಿ ಅವರ ನಡೆಯಿಂದ ಸಮ್ಮಿಶ್ರ ಸರ್ಕಾರ ಮುಜುಗರಕ್ಕೆ ಒಳಗಾಗುತ್ತಿರುವುನ್ನ ತಪ್ಪಿಸಿಕೊಳ್ಳಲು ಅನರ್ಹಗೊಳಿಸಲು ಸಿದ್ದರಾಮಯ್ಯ ತೀರ್ಮಾನಿಸಿದ್ದಾರೆ. ಈ ನಿರ್ಧಾರದಿಂದ ಉಳಿದ ಅತೃಪ್ತ ಶಾಸಕರಿಗೆ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ರೆ ಏನಾಗುತ್ತೆ ಎಂಬ ಸಂದೇಶ ನೀಡಲು ಸಿದ್ದರಾಮಯ್ಯನವರು ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗುತ್ತಿದೆ. ಶಾಸಕಾಂಗ ಸಭೆಯಲ್ಲಿ ಮಾತನಾಡಿದ ಇತರೆ ಶಾಸಕರು ಸಿದ್ದರಾಮಯ್ಯರ ತೀರ್ಮಾನಕ್ಕೆ ಬದ್ಧ ಎಂಬ ಮಾತನ್ನು ಹೇಳಿದ್ದಾರೆ.

    ಎಂಟು ಶಾಸಕರು ಗೈರು: ಇಂದು ನಡೆದ ಶಾಸಕಾಂಗ ಸಭೆಗೆ ರಮೇಶ್ ಜಾರಕಿಹೊಳಿ, ಉಮೇಶ್ ಜಾಧವ್, ಮಹೇಶ್ ಕುಮಟಳ್ಳಿ, ನಾಗೇಂದ್ರ, ಬಿ.ಸಿ.ಪಾಟೀಲ್, ಗಣೇಶ್, ಡಾ.ಸುಧಾಕರ್ ಮತ್ತು ರೋಷನ್ ಬೇಗ್ ಗೈರಾಗಿದ್ದಾರೆ. ಮುಂಬೈನಲ್ಲಿದ್ದಾರೆಂದು ಎನ್ನಲಾಗಿದ್ದ ಶಾಸಕ ಡಾ.ಸುಧಾಕರ್ ಕೊನೆಯಲ್ಲಿ ಸಭೆಗೆ ಹಾಜರಾದರು.

    ಐವರನ್ನು ಹೊರತುಪಡಿಸಿ ಎಲ್ಲರು ಶಾಸಕಾಂಗ ಸಭೆಗೆ ಬಂದಿದ್ದು, ರೋಷನ್ ಬೇಗ್ ದೆಹಲಿಯ ಅಲ್ಪಸಂಖ್ಯಾತರ ಸಭೆಯಲ್ಲಿ ಭಾಗಿಯಾಗಿದ್ದಾರೆ. ಬಿಸಿ ಪಾಟೀಲ್ ಫೋನ್ ಮಾಡಿದ್ದು, ಮಧ್ಯಾಹ್ನದ 3 ಗಂಟೆಗೆ ಬಂದು ಭೇಟಿ ಮಾಡ್ತೀನಿ ಅಂತಾ ಹೇಳಿದ್ದಾರೆ.

    ಮುಂಬೈನಲ್ಲಿದ್ದಾರೆ ಎನ್ನಲಾದ ನಾಲ್ವರು ನನಗೆ ಪತ್ರ ಕಳುಹಿಸಿದ್ದು, ವೈಯಕ್ತಿಕ ಕಾರಣ ನೀಡಿ ಸಿಎಲ್‍ಪಿ ಸಭೆಗೆ ಗೈರಾಗಿದ್ದಾರೆ. ಅತೃಪ್ತರು ನೀಡಿರುವ ಕಾರಣಗಳು ಹೀಗಿವೆ.
    1. ಉಮೇಶ್ ಜಾಧವ್: ವೈಯಕ್ತಿಕ ಕಾರಣಗಳಿಂದ ಸಭೆಗೆ ಬರಲು ಆಗುತ್ತಿಲ್ಲ. ಆದಷ್ಟು ಬೇಗ ನಿಮ್ಮನ್ನು ಭೇಟಿಯಾಗುತ್ತೇನೆ.
    2. ರಮೇಶ್ ಜಾರಕಿಹೊಳಿ: ಮದುವೆ ಕಾರ್ಯಕ್ರಮವಿದ್ದು, ಈ ತಿಂಗಳ 15ರವರೆಗೆ ಬರೋದಕ್ಕೆ ಆಗಲ್ಲ.
    3. ಮಹೇಶ್ ಕುಮಟಳ್ಳಿ: ಆರೋಗ್ಯ ಸರಿ ಇಲ್ಲದ ಕಾರಣ ಸಭೆಗೆ ಬಂದಿಲ್ಲ.
    4. ನಾಗೇಶ್ : ವೈಯಕ್ತಿಕ ಕಾರಣಗಳಿಂದ ಬರೋದಕ್ಕೆ ಆಗುತ್ತಿಲ್ಲ.
    5. ಗಣೇಶ್: ಕಂಪ್ಲಿ ಶಾಸಕ ಎಲ್ಲಿದ್ದಾರೋ ಗೊತ್ತಿಲ್ಲ. ನಮ್ಮ ಸಂಪರ್ಕಕ್ಕೂ ಸಿಕ್ಕಿಲ್ಲ.

    ಈ ನಾಲ್ವರು ಫೆಬ್ರವರಿ 15ರವವರೆಗೆ ಯಾವುದೇ ಸಭೆ ಮತ್ತು ಅಧಿವೇಶನಕ್ಕೆ ಬರೋದಕ್ಕೆ ಆಗಲ್ಲ ಎಂದು ಅನುಮತಿ ಕೇಳಿದ್ದಾರೆ. ಈ ನಾಲ್ವರಿಗೆ ಸಾಕಷ್ಟು ಅವಕಾಶಗಳನ್ನು ನೀಡಲಾಗಿತ್ತು. ಶೋಕಾಸ್ ನೋಟಿಸ್ ಜಾರಿ ಮಾಡಿ ಕಾರಣ ನೀಡುವಂತೆ ಕೇಳಿದ್ದೇವೆ. ಈ ಸಂಬಂಧ ಶಾಸಕರ ಅನರ್ಹತೆಗೆ ಶಿಫಾರಸ್ಸು ಮಾಡಲು ನಿರ್ಧರಿಸಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.

    ಜನವರಿ 18ರಂದು ನೀಡಿದ್ದ ಶೋಕಾಸ್ ನೋಟಿಸ್‍ಗೆ ಉತ್ತರ ನೀಡಿದ್ದ ನಾಲ್ವರು ಕಾಂಗ್ರೆಸ್ ನಲ್ಲಿ ಇದ್ದೇವೆ ಎಂದು ಉತ್ತರ ನೀಡಿದ್ದರು. ನಾನು ಸಭೆಗೆ ಅಥವಾ ನನ್ನನ್ನು ಪರ್ಸನಲ್ ಆಗಿ ಭೇಟಿಯಾಗಬೇಕೆಂಬ ಸಂದೇಶವನ್ನು ಕಳುಹಿಸಲಾಗಿತ್ತು. ಎರಡು ದಿನ ನಡೆದ ಅಧಿವೇಶನಕ್ಕೂ ಈ ನಾಲ್ವರು ಹಾಜರಾಗಿಲ್ಲ. ಇವತ್ತು ಬರೆದ ಪತ್ರದಲ್ಲಿಯೂ ಅಧಿವೇಶನಕ್ಕೆ ಬರಲ್ಲ ಅಂತಾ ತಿಳಿಸಿದ್ದಾರೆ. ಅನರ್ಹಗೊಳಿಸುವ ಕುರಿತಾಗಿ ದಾಖಲೆಗಳನ್ನು ಸಿದ್ಧ ಮಾಡಿಕೊಳ್ಳುತ್ತಿದ್ದು, ಸಂಜೆಯೊಳಗೆ ಸ್ಪೀಕರ್ ಅವರಿಗೆ ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹಗೊಳಿಸುವಂತೆ ಮನವಿ ಮಾಡಿಕೊಳ್ಳುತ್ತೇವೆ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಇಂದೇ ಅತೃಪ್ತ ಶಾಸಕ ಉಮೇಶ್ ಜಾಧವ್ ರಾಜೀನಾಮೆ..?

    ಇಂದೇ ಅತೃಪ್ತ ಶಾಸಕ ಉಮೇಶ್ ಜಾಧವ್ ರಾಜೀನಾಮೆ..?

    ಕಲಬುರಗಿ: ಚಿಂಚೋಳಿ ಶಾಸಕ ಉಮೇಶ್ ಜಾಧವ್ ಅವರು ಇಂದೇ ರಾಜೀನಾಮೆ ಸಲ್ಲಿಸುವ ಸಾಧ್ಯತೆಗಳಿವೆ. ಇಂದು ಸಂಜೆ ಸ್ಪೀಕರ್ ಅವರನ್ನು ಖುದ್ದು ಭೇಟಿಯಾಗಿ ರಾಜೀನಾಮೆ ಪತ್ರ ಹಸ್ತಾಂತರ ಮಾಡಲಿದ್ದಾರೆ.

    ಶಾಸಕರಾಗಿ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಆಗದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡುವುದಾಗಿ ಜಾಧವ್ ಅವರು ತಮ್ಮ ಆಪ್ತವಲಯಗಳಿಗೆ ತನ್ನ ನಿರ್ಧಾರ ತಿಳಿಸಿರುವುದಾಗಿ ಪಬ್ಲಿಕ್ ಟಿವಿಗೆ ಮೂಲಗಳು ಮಾಹಿತಿ ಲಭಿಸಿದೆ.

    ಇತ್ತ ಪಕ್ಷದಲ್ಲಿ ಅತೃಪ್ತ ಶಾಸಕರಾಗಿರುವ ಉಮೇಶ್ ಜಾಧವ್ ಅವರಿಗೆ ಕಾಂಗ್ರೆಸ್ ಶಾಕ್ ನೀಡಿದ್ದು, ತಾವು ಕೊಟ್ಟಿದ್ದ ನಿಗಮ ಮಂಡಳಿ ಜವಾಬ್ದಾರಿಯನ್ನು ವಾಪಸ್ ಪಡೆದಿದೆ. ಈ ಎಲ್ಲಾ ಕಾರಣಗಳಿಂದ ಅವರು ಇಂದು ಸಂಜೆ ರಾಜೀನಾಮೆ ನೀಡುವ ಸಾಧ್ಯತೆಗಳಿವೆ.

    ಕಾಂಗ್ರೆಸ್‍ನಿಂದ ದೂರವಾದ ಬೆನ್ನಲ್ಲೆ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ. ಫೆಬ್ರವರಿ 17ರಂದು ಕಲಬುರಗಿಯಲ್ಲಿ ನಡೆಯಲಿರುವ ಸಮಾವೇಶದಲ್ಲಿ ಪ್ರಧಾನಿ ಮೋದಿ ಸಮ್ಮುಖದಲ್ಲೇ ಸೇರ್ಪಡೆಯಾಗಲಿದ್ದಾರೆ. ಈ ಮೂಲಕ ಕಲಬುರಗಿ ಮೀಸಲು ಲೋಕಸಭಾ ಚುನಾವಣೆ ಸಿದ್ಧತೆ ನಡೆಸಲಿದ್ದು, ಕೈ ನಾಯಕ ಮಲ್ಲಿಕಾರ್ಜುನ ಖರ್ಗೆ ಹಣಿಸಲು ಮುಂದಾಗಲಿದ್ದಾರೆ ಎಂಬುದಾಗಿ ಮಾಹಿತಿ ಲಭಿಸಿದೆ. ಇದನ್ನೂ ಓದಿ: ಖರ್ಗೆ ವಿರುದ್ಧ ಚಿಂಚೋಳಿ ಕೈ ಶಾಸಕ ಉಮೇಶ್ ಜಾಧವ್ ಕಣಕ್ಕೆ?

    ಉಮೇಶ್ ಜಾಧವ್ ಅವರಿಗೆ ದೋಸ್ತಿ ಸರ್ಕಾರ ಕೊಟ್ಟಿರುವ ಉಗ್ರಾಣ ನಿಗಮ ಮಂಡಳಿ ಜವಾಬ್ದಾರಿಯನ್ನು ಕೊಟ್ಟಿತ್ತು. ಆದ್ರೆ ಜಾಧವ್ ಅವರು ಸಚಿವ ಸ್ಥಾನಕ್ಕೆ ಉಮೇಶ್ ಜಾಧವ್ ಅವರು ಪಟ್ಟು ಹಿಡಿದಿದ್ದರು. ಹೀಗಾಗಿ ನಿಗಮ ಮಂಡಳಿ ಅಧ್ಯಕ್ಷ ಸ್ಥಾನವನ್ನು ಅವರು ಸ್ವೀಕಾರ ಮಾಡಿರಲಿಲ್ಲ. ಇದನ್ನೂ ಓದಿ:  ನನ್ನನ್ನು ಖರೀದಿಸಲು ಯಾರಿಂದ ಸಾಧ್ಯವಿಲ್ಲ ಎಂದು ಹೇಳಿ ಕೈ ನಾಯಕರ ವಿರುದ್ಧ ಸಿಡಿದ ಜಾಧವ್

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಾಜ್ಯ ರಾಜಕೀಯದಲ್ಲಿ ಕ್ಷಿಪ್ರ ವಿದ್ಯಮಾನ-ರೆಬೆಲ್ ಶಾಸಕರ ಅನರ್ಹತೆಗೆ ಕಾಂಗ್ರೆಸ್ ನಿರ್ಧಾರ!

    ರಾಜ್ಯ ರಾಜಕೀಯದಲ್ಲಿ ಕ್ಷಿಪ್ರ ವಿದ್ಯಮಾನ-ರೆಬೆಲ್ ಶಾಸಕರ ಅನರ್ಹತೆಗೆ ಕಾಂಗ್ರೆಸ್ ನಿರ್ಧಾರ!

    ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಕ್ಷಿಪ್ರ ವಿದ್ಯಮಾನ ಜರುಗಿದ್ದು, ರೆಬೆಲ್ ಶಾಸಕರ ಅನರ್ಹತೆಗೆ ಕಾಂಗ್ರೆಸ್ ನಿರ್ಧಾರ ಮಾಡಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಇಂದು ವಿಪ್ ಉಲ್ಲಂಘಿಸಿದ ಅತೃಪ್ತ ಶಾಸಕರ ಪೈಕಿ ರಮೇಶ್ ಜಾರಕಿಹೊಳಿ ಮತ್ತು ಉಮೇಶ್ ಜಾಧವ್ ಇಬ್ಬರನ್ನು ಅನರ್ಹತೆಗೊಳಿಸುವಂತೆ ಹೈಕಮಾಂಡ್ ರಾಜ್ಯ ನಾಯಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆಯಂತೆ. ಈ ಸಂಬಂಧ ಕಾಂಗ್ರೆಸ್ ಈಗಾಗಲೇ ದಾಖಲೆಗಳನ್ನು ಸಿದ್ಧಪಡಿಸಿಕೊಂಡಿದ್ದು, ಗುರುವಾರ ಅನರ್ಹಗೊಳಿಸುವಂತೆ ಸ್ಪೀಕರ್ ಅವರಿಗೆ ಮನವಿ ಸಲ್ಲಿಸಲಿದೆ ಎಂದು ಕಾಂಗ್ರೆಸ್ ಬಲ್ಲ ಮೂಲಗಳು ತಿಳಿಸಿವೆ.

    ಸಚಿವ ಸ್ಥಾನ ಕಳೆದುಕೊಂಡ ಬಳಿಕ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಅಜ್ಞಾತ ಸ್ಥಳದಲ್ಲಿದ್ದುಕೊಂಡು ಸರ್ಕಾರ ಬೀಳಿಸಲು ಪ್ರಯತ್ನಿಸುತ್ತಿದ್ದಾರೆ ಎಂಬ ಮಾತುಗಳು ರಾಜಕೀಯ ಅಂಗಳದಲ್ಲಿ ಕೇಳಿ ಬರುತ್ತಿವೆ. ಇತ್ತ ಚಿಂಚೋಳ್ಳಿ ಶಾಸಕ ಉಮೇಶ್ ಜಾಧವ್ ಬಂಡಾಯದ ಬಾವುಟ ಹಿಡಿದ ಮೊದಲಿಗರಾಗಿದ್ದು, ಹಲವು ಬಾರಿ ಸರ್ಕಾರದ ವೈಖರಿಯ ಬಗ್ಗೆ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ. ಅತೃಪ್ತ ಶಾಸಕರನ್ನು ಸೆಳೆಯಲು ರಮೇಶ್ ಜಾರಕಿಹೊಳಿ ಮತ್ತು ಉಮೇಶ್ ಜಾಧವ್ ಮುಂದಾಗುತ್ತಿರುವ ಹಿನ್ನೆಲೆಯಲ್ಲಿ ಇಬ್ಬರನ್ನು ಅನರ್ಹಗೊಳಿಸುವ ಮೂಲಕ ಇನ್ನುಳಿದ ಶಾಸಕರಿಗೆ ಎಚ್ಚರಿಕೆ ನೀಡಲು ಕಾಂಗ್ರೆಸ್ ತೀರ್ಮಾನಿಸಿದೆ ಎಂದು ಹೇಳಲಾಗುತ್ತಿದೆ.

    ಬಜೆಟ್ ಅಧಿವೇಶನದ ಮೊದಲ ದಿನವೇ ಮೈತ್ರಿ ಸರ್ಕಾರಕ್ಕೆ ಆಘಾತವಾಗಿದೆ. ಐವರು ಅತೃಪ್ತರೊಂದಿಗೆ 10 ಕಾಂಗ್ರೆಸ್ ಶಾಸಕರು ಗೈರಾಗಿದ್ದಾರೆ. ಜೆಡಿಎಸ್‍ನ ಓರ್ವ ಶಾಸಕರು ಹಾಗೂ ಇಬ್ಬರು ಪಕ್ಷೇತರರೂ ಕೂಡ ಚಕ್ಕರ್ ಹೊಡೆದಿದ್ದಾರೆ. ಮೈತ್ರಿ ಸರ್ಕಾರದ 10 ಶಾಸಕರಲ್ಲದೆ, ಬಿಜೆಪಿಯ ಐವರು ಶಾಸಕರು ಕಲಾಪದಿಂದ ದೂರ ಉಳಿದಿದ್ದಾರೆ. ಗೈರಾದ ಬಿಜೆಪಿ ಶಾಸಕರಲ್ಲಿ ಇಬ್ಬರು ಆಪರೇಷನ್ ಕಮಲದಲ್ಲೂ ತೊಡಗಿದ್ದಾರೆ ಎನ್ನಲಾಗಿದೆ.

    ಕಲಾಪಕ್ಕೆ ಗೈರಾದ ಕಾಂಗ್ರೆಸಿಗರು: ರಮೇಶ್ ಜಾರಕಿಹೊಳಿ (ಗೋಕಾಕ್), ನಾಗೇಂದ್ರ (ಬಳ್ಳಾರಿ ಗ್ರಾಮೀಣ), ಉಮೇಶ್ ಜಾಧವ್(ಚಿಂಚೋಳಿ), ಮಹೇಶ್ ಕುಮಟಳ್ಳಿ (ಅಥಣಿ), ಗಣೇಶ್ (ಕಂಪ್ಲಿ) ಈ ಎಲ್ಲ ಶಾಸಕರು ಯಾವುದೇ ಅನುಮತಿಯನ್ನು ಪಡೆಯದೇ ಅಧಿವೇಶನಕ್ಕೆ ಗೈರಾಗಿದ್ದಾರೆ ಎನ್ನಲಾಗುತ್ತಿದೆ, ಇನ್ನುಳಿದಂತೆ ಬಿ.ಸಿ. ಪಾಟೀಲ್, ಡಾ. ಸುಧಾಕರ್, ರಾಮಪ್ಪ, ರಾಮಲಿಂಗಾರೆಡ್ಡಿ ಮತ್ತು ಸೌಮ್ಯಾರೆಡ್ಡಿ ಇವರೆಲ್ಲರು ಪಕ್ಷಕ್ಕೆ ಮಾಹಿತಿ ನೀಡಿ ಗೈರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಯಾರ ‘ಕೈ’ಗೂ ಸಿಗದ ನಾಯಕ-ಅಜ್ಞಾತ ಸ್ಥಳದಲ್ಲಿ ಉಮೇಶ್ ಜಾಧವ್

    ಯಾರ ‘ಕೈ’ಗೂ ಸಿಗದ ನಾಯಕ-ಅಜ್ಞಾತ ಸ್ಥಳದಲ್ಲಿ ಉಮೇಶ್ ಜಾಧವ್

    ಬೆಂಗಳೂರು: ಆಪರೇಷನ್ ಕಮಲಕ್ಕೆ ಒಳಗಾಗಿದ್ದಾರೆ ಎನ್ನಲಾದ ಚಿಂಚೊಳಿ ಶಾಸಕ ಉಮೇಶ್ ಜಾಧವ್ ಮಾತೃ ಪಕ್ಷಕ್ಕೆ ಹಿಂದಿರುಗುತ್ತಿದ್ದಾರೆ ಎಂಬ ಸುದ್ದಿಯೊಂದು ಕಾಂಗ್ರೆಸ್ ಅಂಗಳದಲ್ಲಿ ಬೆಳಗ್ಗೆ ಹರಿದಾಡಿತ್ತು. ಶಾಸಕರಾದ ಉಮೇಶ್ ಜಾಧವ್ ಸ್ವಕ್ಷೇತ್ರದಲ್ಲಿಯೂ ಕಾಣಿಸುತ್ತಿಲ್ಲ. ಮೂರು ದಿನಗಳ ಹಿಂದೆ ಮತ್ತೆ ಮುಂಬೈ ರೆಸಾರ್ಟ್ ಸೇರಿಕೊಂಡಿದ್ದಾರೆ ಎನ್ನಲಾಗುತ್ತಿತ್ತು. ಸದ್ಯ ಉಮೇಶ್ ಜಾಧವ್ ಬೆಂಗಳೂರಿನಲ್ಲಿದ್ದು, ಯಾರ ಕರೆಗಳನ್ನು ಸ್ವೀಕರಿಸುತ್ತಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

    ಉಮೇಶ್ ಜಾಧವ್ ಮುಂಬೈನಿಂದ ಬಂದ ಬಳಿಕ ನಡೆಸಿದ ಸುದ್ದಿಗೋಷ್ಠಿಯಲ್ಲಿ ನೇರವಾಗಿ ಸಮ್ಮಿಶ್ರ ಸರ್ಕಾರದ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ಹೊರ ಹಾಕಿದ್ದರು. ಕ್ಷೇತ್ರದ ಕಾರ್ಯಕರ್ತರು ಮತ್ತು ಬೆಂಬಲಿಗರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಿದ್ದೇನೆ ಅಂತ ಹೇಳಿದ್ದರು. ಬೆಂಬಲಿಗರೊಂದಿಗೆ ನಡೆದ ಸಭೆಯಲ್ಲಿ ಬಿಜೆಪಿ ಸೇರಲು ಕ್ಷೇತ್ರದ ಮುಖಂಡರು ಒಪ್ಪಿಗೆ ಸೂಚಿಸಿದ್ದಾರೆ ಎಂದು ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿದ್ದವು.

    ಮನವೊಲಿಕೆ ಮಾಡಿದ್ರಾ ಈಶ್ವರ್ ಖಂಡ್ರೆ?
    ರಾಜಕೀಯ ಗಾಡ್ ಫಾದರ್, ಕೆಪಿಸಿಸಿ ಕಾರ್ಯಧ್ಯಕ್ಷರಾದ ಈಶ್ವರ್ ಖಂಡ್ರೆ ಅಸಮಾಧಾನಿತ ಉಮೇಶ್ ಜಾಧವ್ ಜೊತೆ ಚರ್ಚಿಸಿ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರಂತೆ. ಈ ವೇಳೆ ಉಮೇಶ್ ಜಾಧವ್ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಚಿಂಚೋಳಿ ಕ್ಷೇತ್ರದ ಟಿಕೆಟ್ ಮತ್ತೆ ನನಗೆ ಕೊಡಬೇಕು ಹಾಗೂ ನನ್ನ ಕ್ಷೇತ್ರದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಹಸ್ತಕ್ಷೇಪ ಮಾಡುವುದನ್ನು ತಡೆಯಬೇಕು ಎಂಬ ಎರಡು ಷರತ್ತುನ್ನು ವಿಧಿಸಿದ್ದಾರೆ ಎನ್ನಲಾಗುತ್ತಿತ್ತು.

    ಉಮೇಶ್ ಜಾಧವ್ ಷರತ್ತುಗಳನ್ನು ಒಪ್ಪಿ ಕೂಡಲೇ ಕೆಪಿಸಿಸಿ ಗ್ರೀನ್ ಸಿಗ್ನಲ್ ಕೊಟ್ಟಿದ್ದು, ಹೀಗಾಗಿ ಬಿಜೆಪಿಗೆ ಜಿಗಿಯೋ ತಮ್ಮ ನಿರ್ಧಾರದಿಂದ ಶಾಸಕ ಜಾಧವ್ ಹಿಂದೆ ಸರಿದಿದ್ದಾರೆ ಎಂಬ ಚರ್ಚೆ ರಾಜಕೀಯ ಅಂಗಳದಲ್ಲಿ ಆರಂಭವಾಗಿತ್ತು. ಈ ಎಲ್ಲ ಬೆಳವಣಿಗೆಗಳ ನಡುವೆ ಉಮೇಶ್ ಜಾಧವ್ ಯಾರ ಸಂಪರ್ಕಕ್ಕೆ ಸಿಗುತ್ತಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • 2 ತಿಂಗಳಿಂದ ಹಿಡಿದಿಟ್ಟುಕೊಂಡಿದ್ದ `ಕೈ’ ಶಾಸಕ ಯೂ ಟರ್ನ್ – ಬಿಜೆಪಿಗೆ ಬಿಗ್ ಶಾಕ್

    2 ತಿಂಗಳಿಂದ ಹಿಡಿದಿಟ್ಟುಕೊಂಡಿದ್ದ `ಕೈ’ ಶಾಸಕ ಯೂ ಟರ್ನ್ – ಬಿಜೆಪಿಗೆ ಬಿಗ್ ಶಾಕ್

    ಬೆಂಗಳೂರು: ಕೊನೆಯ ಆಟ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಆಪರೇಷನ್ ಲೋಟಸ್ ರಾಕೆಟ್ ಮಾಡುತ್ತಿದ್ದರು. ಆದರೆ ನಿರ್ಣಾಯಕ ಹಂತದಲ್ಲಿ ಆಪರೇಷನ್ ಕಮಲಕ್ಕೆ ಮೊದಲ ಹೊಡೆತ ಬಿದ್ದಿದೆ.

    ಸುಮಾರು ಎರಡು ತಿಂಗಳಿನಿಂದ ಕಷ್ಟಪಟ್ಟು ಬಿಜೆಪಿಯಲ್ಲಿ ಹಿಡಿದಿಟ್ಟುಕೊಂಡಿದ್ದ ಚಿಂಚೋಳಿಯ ಶಾಸಕ ಉಮೇಶ್ ಜಾಧವ್ ಯೂ ಟರ್ನ್ ಹೊಡೆದಿದ್ದಾರೆ. ಆಪರೇಷನ್ ಕಮಲದ ಮೊದಲ ಹಂತದಲ್ಲಿಯೇ ನಾಲ್ವರು ಅತೃಪ್ತ ಶಾಸಕರು ಬಿಜೆಪಿ ಪಾಳಯ ಸೇರಿದ್ದರು. ಈಗ ಅವರಲ್ಲಿ ಶಾಸಕ ಜಾಧವ್ ತಮ್ಮ ಮಾತೃಪಕ್ಷಕ್ಕೆ ಬರಲು ನಿರ್ಧಾರ ಮಾಡಿದ್ದು, ಈ ಬಗ್ಗೆ ಕಾಂಗ್ರೆಸ್ ನಾಯಕರ ಜೊತೆ ಈಗಾಗಲೇ ಮಾತುಕತೆ ನಡೆಸಿದ್ದಾರೆ ಎಂದು ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ.

    ಗಾಡ್ ಫಾದರ್ ಈಶ್ವರ್ ಖಂಡ್ರೆ ಜೊತೆ ಚರ್ಚೆ ನಡೆಸಿ ಕಾಂಗ್ರೆಸ್‍ ನಲ್ಲೇ ಉಳಿಯಲು ತೀರ್ಮಾನ ಮಾಡಿದ್ದು, ಉಮೇಶ್ ಜಾಧವ್ ಮನವೊಲಿಸುವಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಯಶಸ್ವಿಯಾಗಿದ್ದಾರೆ. ಆದರೆ ಚಿಂಚೋಳಿ ಶಾಸಕ ಉಮೇಶ್ ಜಾಧವ್ ಎರಡು ಷರತ್ತುಗಳನ್ನು ಕಾಂಗ್ರೆಸ್ ಮುಂದಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

    ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಚಿಂಚೋಳಿ ಕ್ಷೇತ್ರದ ಟಿಕೆಟ್ ಮತ್ತೆ ನನಗೆ ಕೊಡಬೇಕು ಹಾಗೂ ನನ್ನ ಕ್ಷೇತ್ರದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಹಸ್ತಕ್ಷೇಪ ಮಾಡುವುದನ್ನು ತಡೆಯಬೇಕು ಎಂಬ ಎರಡು ಷರತ್ತುನ್ನು ವಿಧಿಸಿದ್ದಾರೆ. ಉಮೇಶ್ ಜಾಧವ್ ಷರತ್ತುಗಳನ್ನು ಒಪ್ಪಿ ಕೂಡಲೇ ಕೆಪಿಸಿಸಿ ಗ್ರೀನ್ ಸಿಗ್ನಲ್ ಕೊಟ್ಟಿದ್ದು, ಹೀಗಾಗಿ ಬಿಜೆಪಿಗೆ ಜಿಗಿಯೋ ತಮ್ಮ ನಿರ್ಧಾರದಿಂದ ಶಾಸಕ ಜಾಧವ್ ಹಿಂದೆ ಸರಿದಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಕ್ಷೇತ್ರದಲ್ಲಿ ನನ್ನನ್ನು ಬಲಿಕಾ ಬಕ್ರಾ ಮಾಡಲಾಗ್ತಿದೆ: ಪ್ರಿಯಾಂಕ್ ಖರ್ಗೆ

    ಕ್ಷೇತ್ರದಲ್ಲಿ ನನ್ನನ್ನು ಬಲಿಕಾ ಬಕ್ರಾ ಮಾಡಲಾಗ್ತಿದೆ: ಪ್ರಿಯಾಂಕ್ ಖರ್ಗೆ

    ಯಾದಗಿರಿ: ಕ್ಷೇತ್ರದಲ್ಲಿ ನನ್ನನ್ನು ಬಲಿಕಾ ಬಕ್ರಾ ಮಾಡಲಾಗುತ್ತಿದೆ. ಪಕ್ಷ ಬಿಟ್ಟು ಹೋಗಲು ಸದ್ಯ ಎಲ್ಲರಿಗೂ ಒಂದು ಕಾರಣ ಬೇಕಾಗಿದ್ದಕ್ಕೆ ನನ್ನನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಅಸಮಾಧಾನ ಹೊರಹಾಕಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಉಮೇಶ್ ಜಾಧವ್ ಬಗ್ಗೆ ಪ್ರತಿಕ್ರಿಯೆ ನೀಡಿದರು. ಇಲ್ಲಿಯವರೆಗೆ ಉಮೇಶ್ ಜಾದವ್ ನನ್ನ ಕೈಗೆ ಸಿಕ್ಕಿಲ್ಲ ಮತ್ತು ಕರೆ ಮಾಡಿದ್ರು ಸಂಪರ್ಕ ಸಾಧ್ಯವಾಗುತ್ತಿಲ್ಲ. ಕಾಂಗ್ರೆಸ್ ನಾಯಕರು ಪಕ್ಷ ಬಿಟ್ಟು ಹೋಗಲು ನನ್ನನ್ನು ಬಳಸಿಕೊಳ್ಳುತ್ತಿದ್ದಾರೆ. ನನ್ನನ್ನು ಬಲಿಕಾ ಬಕ್ರಾ ಮಾಡುತ್ತಿದ್ದಾರೆ. ಶಾಸಕರು ಕಾಂಗ್ರೆಸ್ ಬಿಟ್ಟು ಹೋಗಿರೋದಕ್ಕೆ ಅವರ ಕೆಲಸದ ಭಾರವನ್ನು ನಾವು ಹೊತ್ತುಕೊಂಡು ಕರ್ತವ್ಯ ನಿರ್ವಸುತ್ತಿದ್ದೇವೆ. ಪಕ್ಷದಿಂದ ಹೊರಹೋಗಲು ಏನಾದರೂ ಕಾರಣ ಬೇಕಲ್ಲ ಅದಕ್ಕಾಗಿ ನನ್ನನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.

    ಮಲ್ಲಿಕಾರ್ಜುನ ಖರ್ಗೆಗೆ ಸೋಲಿನ ಭೀತಿ ವಿಚಾರವಾಗಿ ಪ್ರತಿಕ್ರಿಯಿಸಿ, ಯಾದಗಿರಿಯಲ್ಲಿ ನಮ್ಮ ತಂದೆ ಅವರಿಗೆ ಅಪಾರ ಸಂಖ್ಯೆಯ ಬೆಂಬಲಿಗರಿದ್ದಾರೆ. ಅವರಿಗ್ಯಾಕೆ ಸೋಲಿನ ಭೀತಿ ಬರುತ್ತದೆ. ಅವರಿಂದ ಬಿಜೆಪಿಯವರಿಗೆ ಸೋಲಿನ ಭೀತಿ ಇದೆ. ಆದರಿಂದ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.

    ಯಾದಗಿರಿ ಜಿಲ್ಲೆಯಲ್ಲಿ ಸಂಪುಟ ಉಪ ಸಮಿತಿ ತಂಡ ಬರ ಅಧ್ಯಯನ ಪ್ರವಾಸ ನಡೆಸುತ್ತಿದ್ದು, ಜಿಲ್ಲೆಯ ಚಕ್ರ ಗ್ರಾಮದಲ್ಲಿ ಸಚಿವ ಬಂಡೆಪ್ಪ ಕಾಂಶೆಂಪುರ, ಪ್ರಿಯಾಂಕ್ ಖರ್ಗೆ ಹಾಗೂ ರಾಜಶೇಖರ ಬಿ ಪಾಟೀಲ್ ಒಳಗೊಂಡ ಸಚಿವರ ತಂಡ ಮತ್ತು ಇತರೆ ಅಧಿಕಾರಿಗಳು ಭೇಟಿ ನೀಡಿ ಬರ ಪರಿಶೀಲನೆ ನಡೆಸಿದ್ದಾರೆ. ಚಕ್ರ ಗ್ರಾಮಕ್ಕೆ ಕುಡಿಯುವ ನೀರು ಪೂರೈಕೆ, ಬೋರವೆಲ್, ಜೋಳದ ಬೆಳೆ ಪರಿಶೀಲಿಸಿದ ತಂಡ, ಇದೇ ಫೆ.4 ರಂದು ಬರ ಪರಿಶೀಲನೆ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಮಿತಿ ಸಲ್ಲಿಸುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv