Tag: umesh jadhav

  • ನಾನು ಮಗಳ ಬಗ್ಗೆ ಯೋಚನೆ ಮಾಡಿಲ್ಲ, ಕೆಲವರು ಮಕ್ಕಳು, ಮರಿಮಕ್ಕಳ ಬಗ್ಗೆ ಯೋಚಿಸುತ್ತಾರೆ: ಪ್ರತಾಪ್ ಸಿಂಹ

    ನಾನು ಮಗಳ ಬಗ್ಗೆ ಯೋಚನೆ ಮಾಡಿಲ್ಲ, ಕೆಲವರು ಮಕ್ಕಳು, ಮರಿಮಕ್ಕಳ ಬಗ್ಗೆ ಯೋಚಿಸುತ್ತಾರೆ: ಪ್ರತಾಪ್ ಸಿಂಹ

    ಮೈಸೂರು: ನಾನು ನನ್ನ ಮಗಳ ಬಗ್ಗೆ ಯೋಚನೆ ಮಾಡಿಲ್ಲ, ಜನಸೇವೆ ಬಗ್ಗೆ ಯೋಚನೆ ಮಾಡ್ತೀನಿ. ಆದ್ರೆ ಕೆಲವರು ಮಕ್ಕಳು, ಮರಿಮಕ್ಕಳ ಭವಿಷ್ಯದ ಬಗ್ಗೆ ಯೋಚನೆ ಮಾಡ್ತಾರೆ ಅಂತ ಸಂಸದ ಪ್ರತಾಪ್ ಸಿಂಹ ಅವರು ಪರೋಕ್ಷವಾಗಿ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬ ರಾಜಕಾರಣಕ್ಕೆ ಟಾಂಗ್ ಕೊಟ್ಟಿದ್ದಾರೆ.

    ಜಿಲ್ಲೆಯಲ್ಲಿ ನಡೆದ ರೈಲ್ವೇ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ನನ್ನ ಮಗಳ ಬಗ್ಗೆ ಯೋಚನೆ ಮಾಡಲ್ಲ. ಆದ್ರೆ ಕೆಲವರು ಮಕ್ಕಳು, ಮರಿಮಕ್ಕಳ ಭವಿಷ್ಯದ ಬಗ್ಗೆ ಯೋಚನೆ ಮಾಡ್ತಾರೆ. ನಾನು ಮೈಸೂರಿನ ಜನತೆ ಬಗ್ಗೆ ಯೋಚನೆ ಮಾಡುತ್ತೇನೆ. ನಾನು ಬೇರೆ ರಾಜಕಾರಣಿಗಳಂತೆ ಕಮಿಷನ್ ವ್ಯವಹಾರ ಮಾಡಲ್ಲ. ನಾನು ಜನ ಸೇವೆ ಮಾಡಲು ಬಂದಿದ್ದೇನೆ. ಬೇರೆ ಯಾವ ರಾಜಕಾರಣಿಗಳು ಮಾಡದ ಜನಪರ ಕೆಲಸಗಳನ್ನು ಮಾಡಿದ್ದೇನೆ ಎಂದು ಹೇಳಿದ್ದಾರೆ.

    ಉಮೇಶ್ ಜಾಧವ್ ಬಿಜೆಪಿ ಬರುವುದು ಅಪರೇಷನ್ ಕಮಲ ಅಲ್ಲ. ಆಪರೇಷನ್ ನಡೆಯುವುದು ಕೆ.ಆರ್.ಆಸ್ಪತ್ರೆಯಲ್ಲಿ. ಜಾಧವ್ ಅವರು ಬಿಜೆಪಿ ಸೇರುತ್ತಿರುವುದು ಮೋದಿಯವರ ಅಭಿವೃದ್ಧಿ ಕಾರ್ಯ ನೋಡಿ ಎಂದು ತಿಳಿಸಿದ್ದಾರೆ.

    ನನ್ನ ಎದುರಾಳಿ ಯಾರು ಎಂಬುದನ್ನು ನೋಡಲ್ಲ. ನಾನು ನಾಲ್ಕೂವರೆ ವರ್ಷ ಮಾಡಿದ ಅಭಿವೃದ್ಧಿ ಕೆಲಸವನ್ನ ಜನರು ನೋಡಿದ್ದಾರೆ. ನನ್ನ ಅಭಿವೃದ್ಧಿ ಕಾರ್ಯ ಜನರು ನೋಡಿ ಮತಹಾಕುತ್ತಾರೆ ಎಂದು ಪ್ರತಾಪ್ ಸಿಂಹ ಅವರು ವಿಶ್ವಾಸ ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಉಮೇಶ್ ಜಾಧವ್ ರಾಜೀನಾಮೆ ಬೆನ್ನಲ್ಲೇ ಯಾದಗಿರಿ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ

    ಉಮೇಶ್ ಜಾಧವ್ ರಾಜೀನಾಮೆ ಬೆನ್ನಲ್ಲೇ ಯಾದಗಿರಿ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ

    ಯಾದಗಿರಿ: ಕಾಂಗ್ರೆಸ್ ಶಾಸಕರಾಗಿ ಆಯ್ಕೆ ಆಗಿದ್ದ ಉಮೇಶ್ ಜಾಧವ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರಲು ಸಿದ್ಧರಾಗುತ್ತಿದ್ದಾರೆ ಎಂಬ ಸುದ್ದಿಯ ಬೆನ್ನಲ್ಲೇ ಯಾದಗಿರಿ ಜಿಲ್ಲಾ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟಗೊಂಡಿದೆ.

    ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಉಮೇಶ್ ಜಾಧವ್ ಅವರು ಈ ಬಾರಿ ಬಿಜೆಪಿ ಪಕ್ಷದಿಂದ ಲೋಕಸಭಾ ಸ್ಥಾನಕ್ಕೆ ಸ್ಪರ್ಧೆ ಮಾಡಿ ಮಲ್ಲಿಕಾರ್ಜುನ ಖರ್ಗೆರನ್ನು ಸೋಲಿಸಬೇಕೆಂಬ ಉದ್ದೇಶ ಹೊಂದಿದ್ದಾರೆ ಎನ್ನಲಾಗಿದೆ. ಆದರೆ ಇತ್ತ ಬಿಜೆಪಿ ಕದ ತಟ್ಟುತ್ತಾರೆ ಎಂಬ ಮಾತಿನ ನಡುವೆಯೇ ಯಾದಗಿರಿ ಬಿಜೆಪಿಯಲ್ಲಿ ಭಿನ್ನ ಮತ ಸ್ಫೋಟಗೊಂಡಿದ್ದು, ಇದು ಜಾಧವ್ ಅವರಿಗೆ ಹಿನ್ನೆಡೆ ಆಗಲಿದೆಯಾ ಎಂಬ ಚರ್ಚೆ ಜಿಲ್ಲಾ ರಾಜಕೀಯ ವಲಯದಲ್ಲಿ ಕೇಳಿ ಬಂದಿದೆ. ಇದನ್ನೂ ಓದಿ: ಖರ್ಗೆ ವಿರುದ್ಧ ಚಿಂಚೋಳಿ ಕೈ ಶಾಸಕ ಉಮೇಶ್ ಜಾಧವ್ ಕಣಕ್ಕೆ?

    ಕಾಂಗ್ರೆಸ್ ಅತೃಪ್ತ ಶಾಸಕ ಉಮೇಶ್ ಜಾದವ್ ಈಗಾಗಲೇ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಬಾರಿ ಲೋಕಸಭೆ ಚುನಾವಣೆಗೆ ಜಾಧವ್ ಬಿಜೆಪಿಯಿಂದ ಜಾಧವ್ ಸ್ಪರ್ಧೆ ಮಾಡುವುದು ಪಕ್ಕಾ ಆಗಿದೆ ಎನ್ನಲಾಗಿದೆ. ಆದರೆ ಈ ಬಗ್ಗೆ ಅಧಿಕೃತ ಘೋಷಣೆ ಮಾತ್ರ ಬಾಕಿ ಇದೆ.

    ಕಲಬುರಗಿ ಲೋಕಸಭೆ ಕ್ಷೇತ್ರದ ಒಂದು ಭಾಗವಾಗಿರುವ ಯಾದಗಿರಿ ಜಿಲ್ಲೆಯಲ್ಲಿ, ಶಾಸಕ ಮತ್ತು ಜಿಲ್ಲಾಧಕ್ಷರ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದ್ದು, ಇದು ಜಾಧವ್ ಗೆಲುವಿಗೆ ಭಾರಿ ಹೊಡೆತ ನೀಡುವ ಮುನ್ಸೂಚನೆಯನ್ನು ನೀಡುತ್ತದೆ. ವೈಯಕ್ತಿಕ ವಿಚಾರಕ್ಕಾಗಿ ಸುರಪುರ ಶಾಸಕ ರಾಜುಗೌಡ ಮತ್ತು ಜಿಲ್ಲಾಧ್ಯಕ್ಷ ಚಂದ್ರಶೇಖರ ಮಾಗನೂರ ನಡುವೆ ಮೊದಲಿಂದಲೂ ಮುಸುಕಿನ ಗುದ್ದಾಟವಿದೆ ಎನ್ನಲಾಗಿದೆ. ಆದರೆ ಈ ಇಬ್ಬರ ಒಳ ಜಗಳ ಸದ್ಯ ಬಿಜೆಪಿಗೆ ಮುಳುವಾಗುವ ಲಕ್ಷಣಗಳ ಕಂಡು ಬರುತ್ತಿವೆ.

    ಜಿಲ್ಲೆಯಲ್ಲಿ ಮೋದಿ ವಿಜಯ ರಥ ಯಾತ್ರೆಗೆ ಶಾಸಕ ರಾಜುಗೌಡರಿಗೆ ಆಹ್ವಾನವೇ ನೀಡದಿರುವುದು. ಹೀಗಾಗಿ ಜಿಲ್ಲೆಯಲ್ಲಿ ರಾಜ್ಯಮಟ್ಟದ ಕಾರ್ಯಕ್ರಮ ನಡೆಯುತ್ತಿದ್ದರು, ಶಾಸಕ ರಾಜುಗೌಡ ಮತ್ತು ಸುರಪುರ, ಶಹಾಪುರ ವಿಧಾನ ಸಭಾ ಕ್ಷೇತ್ರದ ಪ್ರಮುಖರು ಯಾತ್ರೆಯಲ್ಲಿ ಭಾಗವಹಿಸಿರಲಿಲ್ಲ. ಇದು ಜಿಲ್ಲೆಯ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಈ ವಿಚಾರವಾಗಿ ಸ್ವತಃ ಶಾಸಕ ರಾಜುಗೌಡ ಬಹಿರಂಗವಾಗಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

    ಜಿಲ್ಲೆಯಲ್ಲಿ ರಾಜುಗೌಡ ಸ್ಟಾರ್ ಪ್ರಚಾರಕರಾಗಿದ್ದು ಅವರನ್ನು ಜಿಲ್ಲೆಯ ಪ್ರಮುಖ ಕಾರ್ಯಕ್ರಮಗಳಲ್ಲಿ ಕಡೆಗಣಿಸುತ್ತಿರುವುದು ಪಕ್ಷದ ಕಾರ್ಯಕರ್ತರ ಗೊಂದಲಕ್ಕೆ ಕಾರಣವಾಗಿದೆ. ನಾನು ರಾಜ್ಯದ ನಾಯಕರ ಮಾತಿನಂತೆ, ಜಿಲ್ಲೆಯ ಕಾರ್ಯಕ್ರಮದ ಪಟ್ಟಿ ತಯಾರಿಸುತ್ತೇನೆ. ಇದನ್ನು ದೊಡ್ಡದು ಮಾಡುವ ಅವಶ್ಯಕತೆ ಇಲ್ಲ ಎಂದು ಜಿಲ್ಲಾಧ್ಯಕ್ಷ ಚಂದ್ರಶೇಖರ ಸಮರ್ಥನೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಉಮೇಶ್ ಜಾಧವ್ ರಾಜೀನಾಮೆ ಹಳೆಯ ಸರಕು: ಸಿಎಂ

    ಉಮೇಶ್ ಜಾಧವ್ ರಾಜೀನಾಮೆ ಹಳೆಯ ಸರಕು: ಸಿಎಂ

    ಬೆಂಗಳೂರು: ಚಿಂಚೋಳಿ ಕಾಂಗ್ರೆಸ್ ಶಾಸಕ ಉಮೇಶ್ ಜಾಧವ್ ರಾಜೀನಾಮೆ ನೀಡ್ತಾರೆ ಎಂಬುವುದು ಮೊದಲೇ ಗೊತ್ತಿತ್ತು. ರಾಜೀನಾಮೆಯ ವಿಷಯ ಹಳೆಯ ಸರಕು ಎಂದು ಹೇಳುವ ಮೂಲಕ ಸಿಎಂ ಹೆಚ್.ಡಿ. ಕುಮಾರಸ್ವಾಮಿ ವ್ಯಂಗ್ಯ ಮಾಡಿದ್ದಾರೆ.

    ಉಮೇಶ್ ಜಾಧವ್ ರಾಜೀನಾಮೆ ನಿರೀಕ್ಷಿತವಾಗಿತ್ತು. ಜಾಧವ್ ರಾಜೀನಾಮೆಯಿಂದ ಸರ್ಕಾರಕ್ಕೆ ಆತಂಕ ಇಲ್ಲ, ಸುಭದ್ರವಾಗಿದೆ. ಇನ್ನುಳಿದ ಬಂಡಾಯ ಶಾಸಕರಾದ ರಮೇಶ್ ಜಾರಕಿಹೊಳಿ, ನಾಗೇಂದ್ರ ಸೇರಿ ಯಾರೂ ರಾಜೀನಾಮೆ ಕೊಡಲ್ಲ ಎಂದು ಸಿಎಂ ವಿಶ್ವಾಸ ವ್ಯಕ್ತಪಡಿಸಿದರು.

    ಲೋಕಸಭೆ ಸೀಟುಗಳ ಹಂಚಿಕೆಯಲ್ಲಿ ಸಮಸ್ಯೆಯಿಲ್ಲ. ನಮ್ಮ ನಡುವೆ ಸುಸೂತ್ರವಾಗಿ ಸೀಟುಗಳ ಹಂಚಿಕೆ ಆಗುತ್ತದೆ. ಇದರಲ್ಲಿ ಯಾವುದೇ ಗೊಂದಲ ಇಲ್ಲ. ಎರಡೂ ಕಡೆಯವರು ಚರ್ಚಿಸಿ ತೀರ್ಮಾನ ಮಾಡ್ತೀವಿ ಅಂತ ಸ್ಪಷ್ಟಪಡಿಸಿದರು.

    ಉಮೇಶ್ ಜಾಧವ್ ರಾಜೀನಾಮೆ ನೀಡಿರುವ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಸಚಿವ ಬಾಬುರಾವ್ ಚಿಂಚನಸೂರ್, ಇಂದು ನನಗೆ ಹಬ್ಬದ ಡಬಲ್ ಖುಷಿಯಾಗುತ್ತಿದೆ. ಉಮೇಶ್ ಜಾದವ್ ಅವರೇ ಈ ಬಾರಿಯ ಕಲಬುರಗಿ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ. ನನ್ನನ್ನು ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಸೋಲಿಸಿದ್ದರು. ಇದೀಗ ಉಮೇಶ್ ಜಾಧವ್ ಎದುರು ಖರ್ಗೆ ಅವರು ಸೋಲುತ್ತಾರೆ. ಚುನಾವಣೆಯಲ್ಲಿ ಉಮೇಶ್ ಜಾಧವ್ ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ಭವಿಷ್ಯ ನುಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಉಮೇಶ್ ಜಾಧವ್ ಬಿಜೆಪಿಯವರಿಗೆ ಮೊದಲೇ ಫಿಕ್ಸ್ ಆಗಿದ್ದ: ಶಾಮನೂರು ಕಿಡಿ

    ಉಮೇಶ್ ಜಾಧವ್ ಬಿಜೆಪಿಯವರಿಗೆ ಮೊದಲೇ ಫಿಕ್ಸ್ ಆಗಿದ್ದ: ಶಾಮನೂರು ಕಿಡಿ

    ದಾವಣಗೆರೆ: ಚಿಂಚೋಳಿ ಶಾಸಕ ಉಮೇಶ್ ಜಾಧವ್ ಬಿಜೆಪಿಯವರಿಗೆ ಮೊದಲೇ ಫಿಕ್ಸ್ ಆಗಿದ್ದ. ಮುಂಚಿತವಾಗಿಯೇ ದುಡ್ಡು ಪಡೆದಿದ್ದ ಅದಕ್ಕಾಗಿಯೇ ರಾಜೀನಾಮೆ ನೀಡಿದ್ದಾನೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಕಿಡಿಕಾರಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಉಮೇಶ್ ಜಾಧವ್ ಮೊದಲೇ ಬಿಜೆಪಿ ಅವರೊಂದಿಗೆ ಕೈ ಜೋಡಿಸಿದ್ದಾನೆ. ಜಾಧವ್ ಹಣ ಪಡೆದು ಬಿಜೆಪಿಗೆ ಸೇರಿದ್ದಾನೆ ಎಂದರು. ಬಳಿಕ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಟಿಕೆಟ್ ಗೊಂದಲ ಶೀಘ್ರ ಬಗೆಹರಿಯುತ್ತದೆ. ಲೋಕಸಭೆ ಚುನಾವಣೆಗೆ ದಾವಣಗೆರೆಯಲ್ಲಿ ಜೆಡಿಎಸ್‍ನವರಿಗೆ ಟಿಕೆಟ್ ಸಿಗುವುದಿಲ್ಲ. ಇಲ್ಲಿ ಕಾಂಗ್ರೆಸ್ ಅಭ್ಯರ್ಥಿಯೇ ಸ್ಪರ್ಧಿಸುತ್ತಾರೆ ಎಂದು ತಿಳಿಸಿದ್ದಾರೆ.

    ಮಲ್ಲಿಕಾರ್ಜುನ ಖರ್ಗೆ ಇದು ನನ್ನ ಕೊನೆ ಚುನಾವಣೆ ಎಂದ ವಿಚಾರವಾಗಿ ಪ್ರತಿಕ್ರಿಯಿಸಿ, ರಾಜಕಾರಣಿಗಳು ಅದನ್ನು ಹೇಳುತ್ತಿರುತ್ತಾರೆ, ಕೊನೆ ಚುನಾವಣೆ ಅಂತ ಮತ್ತೆ ಚುನಾವಣೆಗೆ ನಿಲ್ಲುತ್ತಾರೆ. ಜಿ.ಎಂ ಸಿದ್ದೇಶ್ವರ ಅವರು ಕೂಡ ಕೊನೆ ಚುನಾವಣೆ ಎಂದಿದ್ದಾರೆ. ಇದು ಅವರ ಕೊನೆ ಚುನಾವಣೆ ಆಗಬಹುದು, ಇಲ್ಲ ಜನರೇ ಅವರನ್ನು ಮನೆಗೆ ಕಳುಹಿಸಬಹುದು ಎಂದು ಶಾಮನೂರು ಶಿವಶಂಕರಪ್ಪ ಕುಟುಕಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಾಕ್ಷಿ ಕೇಳುವವರನ್ನು ಏರ್ ಸ್ಟ್ರೈಕ್ ನಡೆದ ಸ್ಥಳಕ್ಕೆ ಒಯ್ದು ಒಗೆಯಿರಿ: ಯತ್ನಾಳ್ ಕಿಡಿ

    ಸಾಕ್ಷಿ ಕೇಳುವವರನ್ನು ಏರ್ ಸ್ಟ್ರೈಕ್ ನಡೆದ ಸ್ಥಳಕ್ಕೆ ಒಯ್ದು ಒಗೆಯಿರಿ: ಯತ್ನಾಳ್ ಕಿಡಿ

    ವಿಜಯಪುರ: ಪಾಕಿಸ್ತಾನದ ಉಗ್ರರ ಕ್ಯಾಂಪ್ ಮೇಲೆ ಏರ್ ಸ್ಟ್ರೈಕ್ ಮಾಡಿರುವುದಕ್ಕೆ ಸಾಕ್ಷಿ ಕೇಳುತ್ತಿರುವ ಪ್ರತಿಪಕ್ಷ ನಾಯಕರನ್ನು ಹೆಲಿಕಾಪ್ಟರ್ ನಲ್ಲಿ ಕರೆದೊಯ್ದು, ದಾಳಿ ನಡೆದ ಸ್ಥಳಕ್ಕೆ ಬಿಟ್ಟುಬನ್ನಿ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿಪಕ್ಷ ನಾಯಕರಿಗೆ ಟಾಂಗ್ ನೀಡಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮೋದಿ ಹಾಗೂ ಭಾರತೀಯ ವಾಯುಪಡೆಯು ಒಂದು ದಿಟ್ಟ ನಿರ್ಧಾರ ತೆಗೆದುಕೊಂಡು ಸರ್ಜಿಕಲ್ ಸ್ಟ್ರೈಕ್ ಮಾಡಿದೆ. ಆದ್ರೆ ಈ ಏರ್ ಸ್ಟ್ರೈಕ್‍ಗೆ ಸಾಕ್ಷಿ ಕೇಳುವವರನ್ನು ದಾಳಿ ನಡೆದ ಸ್ಥಳದಲ್ಲಿ ಒಯ್ದು ಒಗೆಯಿರಿ. ಅವರು ಅಲ್ಲಿಯೇ ಭಾರತೀಯ ಸೇನೆಯ ಪರಾಕ್ರಮ ವೀಕ್ಷಿಸಲಿ. ಅಲ್ಲಿಯೇ ಎಷ್ಟು ಜನ ಮೃತಪಟ್ಟರು, ಯಾವ ಬಾಂಬ್ ಹಾಕಲಾಗಿದೆ ಅಂತ ನೋಡಿ ಬರಲಿ ಎಂದು ಏರ್ ಸ್ಟ್ರೈಕ್ ಬಗ್ಗೆ ಪ್ರಶ್ನಿಸಿದ ದೆಹಲಿ ಸಿಎಂ ಕೇಜ್ರೀವಾಲ್, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹಾಗೂ ಬಿಎಸ್‍ಪಿ ನಾಯಕಿ ಮಾಯಾವತಿ ಹೆಸರು ಹೇಳಿ ಪ್ರತಿಪಕ್ಷ ನಾಯಕರ ವಿರುದ್ಧ ಯತ್ನಾಳ ವಾಗ್ದಾಳಿ ನಡೆಸಿದ್ದಾರೆ.

    ಸರ್ಜಿಕಲ್ ಸ್ಟ್ರೈಕ್ ಸಂಭ್ರಮಾಚರಣೆ ಕುರಿತು ಸಿಎಂ ಹೇಳಿಕೆ ವಿಚಾರ ಪ್ರತಿಕ್ರಿಯಿಸಿ, ಭಾರತೀಯರು ಆಟದಲ್ಲಿ ಗೆದ್ದಾಗ ಅಥವಾ ಸರ್ಜಿಕಲ್ ಸ್ಟ್ರೈಕ್ ನಡೆಸಿದಾಗ ಸಂಭ್ರಮಿಸಬಾರದಾ? ಸೀತಾರಾಮ ಕಲ್ಯಾಣ ಸಿನಿಮಾ ನೋಡಿ ಸಂಭ್ರಮಿಸಬೇಕಾ? ಎಂದು ಸಿಎಂಗೆ ತಿರುಗೇಟು ನೀಡಿದರು.

    ಈಗ ಉಮೇಶ್ ಜಾಧವ್ ರಾಜೀನಾಮೆ ನೀಡಿದ್ದಾರೆ. ಅವರು ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಸ್ಪರ್ಧಿಸಲಿದ್ದಾರೆ. ನೋಡುತ್ತಿರಿ ಕಾಂಗ್ರೆಸ್ ಜೆಡಿಎಸ್ ಮನೆ ಖಾಲಿಯಾಗಲಿವೆ ಎಂದು ಮೈತ್ರಿ ಸರ್ಕಾರದ ಬಗ್ಗೆ ಯತ್ನಾಳ್ ವ್ಯಂಗ್ಯವಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಜಾಧವ್ ರಾಜೀನಾಮೆ ನೀಡಿದ್ದು ಖುಷಿಯ ವಿಚಾರ: ಮಾಜಿ ಸಚಿವ ಬಾಬುರಾವ್ ಚಿಂಚನಸೂರ್

    ಜಾಧವ್ ರಾಜೀನಾಮೆ ನೀಡಿದ್ದು ಖುಷಿಯ ವಿಚಾರ: ಮಾಜಿ ಸಚಿವ ಬಾಬುರಾವ್ ಚಿಂಚನಸೂರ್

    – ನಾನೇ ರಾಜೀನಾಮೆ ನೀಡೋದಕ್ಕೆ ಹೇಳಿದ್ದೆ

    ಯಾದಗಿರಿ: ಕಾಂಗ್ರೆಸ್ ರೆಬೆಲ್ ನಾಯಕ ಉಮೇಶ್ ಜಾಧವ್ ರಾಜೀನಾಮೆ ನೀಡಿದ್ದು ಖುಷಿಯ ವಿಚಾರ. ನಾನೇ ಅವರಿಗೆ ರಾಜೀನಾಮೆ ನೀಡಲು ಹೇಳಿದ್ದೆ ಎಂದು ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಹೇಳಿದ್ದಾರೆ.

    ಯಾದಗಿರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಸಚಿವರು, ಇಂದು ನನಗೆ ಹಬ್ಬದ ಡಬಲ್ ಖುಷಿಯಾಗುತ್ತಿದೆ. ಉಮೇಶ್ ಜಾದವ್ ಅವರೇ ಈ ಬಾರಿಯ ಕಲಬುರಗಿ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ. ನನ್ನನ್ನು ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಸೋಲಿಸಿದ್ದರು. ಇದೀಗ ಉಮೇಶ್ ಜಾಧವ್ ಎದುರು ಖರ್ಗೆ ಅವರು ಸೋಲುತ್ತಾರೆ. ಚುನಾವಣೆಯಲ್ಲಿ ಉಮೇಶ್ ಜಾಧವ್ ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ಭವಿಷ್ಯ ನುಡಿದರು.

    ಒಬ್ಬ ಶಾಸಕನ ರಾಜೀನಾಮೆ ಕೊಡಿಸುವ ಮೂಲಕ ಬಿಜೆಪಿ ದೊಡ್ಡ ಸಾಧನೆ ಮಾಡಿದೆ. ಹಣ ನೀಡಿ ಖರೀದಿಸಿದ್ದೇವೆ ಎಂದು ಹೊಟ್ಟೆ ಕಿಚ್ಚಿಗೆ ಕಾಂಗ್ರೆಸ್ ನಾಯಕರು ಸುಳ್ಳು ಹೇಳುತ್ತಿದ್ದಾರೆ. ಕಾಂಗ್ರೆಸ್ ಆರೋಪ ಸಾಬೀತಾದ್ರೆ ನಮ್ಮ ಅಭ್ಯರ್ಥಿ (ಉಮೇಶ್ ಜಾಧವ್) ನೇಣು ಹಾಕಿಕೊಳ್ಳುತ್ತಾರೆ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಉಮೇಶ್ ಜಾಧವ್ ರಾಜೀನಾಮೆ ಬಗ್ಗೆ ಸ್ಪೀಕರ್ ಮಾತು

    ಉಮೇಶ್ ಜಾಧವ್ ರಾಜೀನಾಮೆ ಬಗ್ಗೆ ಸ್ಪೀಕರ್ ಮಾತು

    ಕೋಲಾರ: ಚಿಂಚೋಳಿ ಶಾಸಕ ಉಮೇಶ್ ಜಾಧವ್ ನನ್ನ ಮನೆಗೆ ಬಂದ್ರು ರಾಜೀನಾಮೆ ಕೊಟ್ರು. ಆದ್ರೆ ರಾಜೀನಾಮೆಗೆ ಯಾವುದೇ ಕಾರಣ ಹೇಳಿಲ್ಲ. ಕಾನೂನಿನಡಿ ಮುಂದೆ ಕ್ರಮ ಕೈಗೊಳ್ಳುವೆ ಎಂದು ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ.

    ಕೋಲಾರದ ಶ್ರೀನಿವಾಸಪುರ ತಾಲೂಕಿನ ಅಡ್ಡಗಲ್ ಗ್ರಾಮದಲ್ಲಿ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ಬೆಳಗ್ಗೆ ಮನೆಯಲ್ಲಿ ತಿಂಡಿ ತಿಂತಿದ್ದೆ. ಪಾಪ ಬೆಳಗ್ಗೆನೆ ಎದ್ದು ನಮ್ಮೂರಿಗೆ ಬಂದ್ರು ರಾಜೀನಾಮೆ ಕೊಟ್ರು. ನಾನು ತಗೊಂಡೆ ಜೊತೆಗೆ ತಿಂಡಿ ಮಾಡಿದ್ವಿ, ಪೇಪರ್ ಕೊಟ್ಟು ಹೋದ್ರು ಎಂದು ಹೇಳಿದ್ರು.

    ರಾಜೀನಾಮೆ ಪತ್ರವನ್ನ ಅಧಿಕಾರಿಗಳಿಗೆ ಕಳಿಸಿದ್ದೇನೆ. ನಾನು ಹಳ್ಳಿಯಲ್ಲಿ ಇದ್ದೇನೆ. ಹಾಗಾಗಿ ನಾಳೆ ಬೆಂಗಳೂರಿಗೆ ಹೋಗಿ ಅಧಿಕಾರಿಗಳ ಬಳಿ ಮಾತನಾಡಿ ಕ್ರಮ ಕೈಗೊಳ್ಳುತ್ತೇನೆ. ನಾನು ಹಳ್ಳಿಯಲ್ಲಿ ಹುಟ್ಟಿ ಬೆಳೆದವನು ಕಾನೂನಿನ ಅರಿವು ಗೊತ್ತಿಲ್ಲ. ಅದಕ್ಕೆ ಅಧಿಕಾರಿಗಳೊಂದಿಗೆ ಪರಿಶೀಲನೆ ಮಾಡಬೇಕು. ಅದಾದ ನಂತರ ಕ್ರಮ ಕೈಗೊಳ್ಳುವೆ. ಇನ್ನೂ ನನ್ನ ನಿರ್ಧಾರಕ್ಕೆ ನಿಗದಿತ ವೇಳೆ ಇಲ್ಲ ಎಂದು ಅವರು ಹೇಳಿದ್ರು.

    ಇದೇ ವೇಳೆ ಮಕ್ಕಳ ಕಲಿಕೆಯ ಸಮಸ್ಯೆಯನ್ನೂ ರಾಜಕೀಯಕ್ಕಾಗಿ ತಮಾಷೆ ಮಾಡಿದ ಪ್ರಧಾನಿ ಮೋದಿ ವಿರುದ್ಧ ಟೀಕೆ ವ್ಯಕ್ತವಾಗಿರುವುದಕ್ಕೆ ಅವರ ಸ್ಥಾನಕ್ಕೆ ತಕ್ಕಂತೆ ನಡೆದುಕೊಳ್ಳಬೇಕು. ಅವರ ವ್ಯಕ್ತಿತ್ವಗಳು ಇದರಿಂದ ನಿರ್ಧಾರವಾಗತ್ತದೆ. ಮಕ್ಕಳ ಕಲಿಕೆಯ ಸಮಸ್ಯೆಯಲ್ಲೂ ಪ್ರಧಾನಿ ಮೋದಿ ರಾಜಕೀಯ ಹುಡುಕಿ ತೀವ್ರ ಟೀಕೆಗೆ ಗುರಿಯಾಗಿರುವುದಕ್ಕೆ ತೀಕ್ಷ್ಣವಾಗಿ ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬೊಗಳುವ ನಾಯಿ ಬೊಗಳುತ್ತಲೇ ಇರುತ್ತದೆ: ಬಿಜೆಪಿಗೆ ವೆಂಕಟರಮಣಪ್ಪ ಲೇವಡಿ

    ಬೊಗಳುವ ನಾಯಿ ಬೊಗಳುತ್ತಲೇ ಇರುತ್ತದೆ: ಬಿಜೆಪಿಗೆ ವೆಂಕಟರಮಣಪ್ಪ ಲೇವಡಿ

    ಚಿತ್ರದುರ್ಗ: ಬೊಗಳುವ ನಾಯಿ ಬೊಗಳುತ್ತಲೇ ಇರುತ್ತದೆ ಎನ್ನುವಂತೆ ಬಿಜೆಪಿ ವರ್ತಿಸುತ್ತದೆ. ಯಡಿಯೂರಪ್ಪ ಹೇಳಿದಂತೆ ಆಗುವಂತಿದ್ದರೆ ಬಿಎಸ್‍ವೈ ಯಾವತ್ತೋ ಸಿಎಂ ಆಗಿರುತ್ತಿದ್ದರು ಎಂದು ಕಾರ್ಮಿಕ ಸಚಿವ ವೆಂಕಟರಮಣಪ್ಪ ಬಿಜೆಪಿಗೆ ಲೇವಡಿ ಮಾಡಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಾಕಷ್ಟು ಕಾಂಗ್ರೆಸ್ ಅತೃಪ್ತ ಶಾಸಕರು ಬಿಜೆಪಿ ಸೇರುತ್ತಾರೆ ಅಂತ ಬಿಜೆಪಿ ಅವರು ಸುಮ್ಮನೆ ಹೇಳಿಕೊಂಡು ತಿರುಗುತ್ತಿದ್ದಾರೆ. ಬೊಗಳುವ ನಾಯಿ ಬೊಗಳುತ್ತಲೇ ಇರುತ್ತದೆ. ಬಿಜೆಪಿ ಅವರಿಗೆ ಬೇರೆ ಕೆಲಸವಿಲ್ಲ. ಶಾಸಕ ಉಮೇಶ್ ಜಾಧವ್ ಒಬ್ಬ ರಾಜೀನಾಮೆ ನೀಡಿ ಬಿಜೆಪಿ ಸೇರುತ್ತಾರೆಂದು ಕಾಂಗ್ರೆಸ್ಸಿನ ಇತರೇ ಶಾಸಕರು ಬಿಜೆಪಿ ಸೇರುವುದಿಲ್ಲ. ಜಾಧವ್ ಅವರೊಬ್ಬರಿಂದ ಕಾಂಗ್ರೆಸ್ಸಿಗೆ ಏನೂ ಹಾನಿ ಇಲ್ಲ ಎಂದು ತಿಳಿಸಿದರು. ಇದನ್ನೂ ಓದಿ:ಎಲ್ಲರಿಗೂ ದೇಶ, ಸೈನಿಕರ ಚಿಂತೆಯಾದರೆ ಬಿಎಸ್‍ವೈಗೆ ಸೀಟಿನ ಚಿಂತೆ: ಯು.ಟಿ ಖಾದರ್

    ಪಕ್ಷಾಂತರ ಮಾಡಿದವರಿಗೆ ಜನ ಬುದ್ಧಿ ಕಲಿಸ್ತಾರೆ. ಯಾರು ಯಾರು ಎಲ್ಲೆಲ್ಲಿ ಅಭಿಮಾನವಿದೆ ಅಲ್ಲಿಗೆ ಹೋಗ್ತಾರೆ. ಇನ್ನೂ ನಾಲ್ಕುವರೆ ವರ್ಷ ಇರುವಾಗಲೇ ಜಾಧವ್ ರಾಜೀನಾಮೆ ಕೊಟ್ಟಿದ್ದಾರೆ. ಇದನ್ನು ಜನರು ಅರ್ಥ ಮಾಡಿಕೊಳ್ಳಬೇಕೆಂದು ಹೇಳಿದರು. ಇದನ್ನೂ ಓದಿ:ಅವಳ ಸಪೋರ್ಟಿನಿಂದ ನೀನು ಹೀಗೆ ಮಾಡ್ತೀರೋದು: ಶಾಸಕರಿಬ್ಬರ ಜಗಳದಲ್ಲಿ ಮಹಿಳೆಯ ಎಂಟ್ರಿ

    ಕಾಂಗ್ರೆಸ್ಸಿನವರು ಬಿಜೆಪಿ ಸೇರುತ್ತಾರೆ ಎನ್ನುವುದು ಬರೀ ಕನಸು. ಯಡಿಯೂರಪ್ಪನವರ ಕನಸು ನನಸಾಗುವುದೇ ಇಲ್ಲ. ಯಡಿಯೂರಪ್ಪ ಹೇಳಿದಂತೆ ಆಗುವಂತಿದ್ದರೆ ಯಾವತ್ತೋ ಸಿಎಂ ಆಗುತ್ತಿದ್ದರು. ಮೂರು ವರ್ಷಕ್ಕೆ ಸಿಎಂ ಸ್ಥಾನದಿಂದ ಕೆಳಗಿಳಿಯುತ್ತಲೂ ಇರಲಿಲ್ಲ ಎಂದು ಟಾಂಗ್ ನೀಡಿದರು.

    ಶಾಸಕ ಗಣೇಶ್ ಹಾಗೂ ಆನದ್ ಸಿಂಗ್ ವಿಚಾರವಾಗಿ ಪ್ರತಿಕ್ರಿಯಿಸಿ, ಅವರಿಬ್ಬರು ಫ್ರೆಂಡ್ಸ್. ವೈಯಕ್ತಿಕ ಕಾರಣಕ್ಕೆ ಗಲಾಟೆ ಮಾಡಿಕೊಂಡಿದ್ದಾರೆ ಅಷ್ಟೇ. ಒಂದೇ ತಾಯಿಯ ಮಕ್ಕಳು, ಅಣ್ಣ ತಮ್ಮಂದಿರು, ಗಂಡ-ಹೆಂಡತಿ ಕಿತ್ತಾಡುತ್ತಾರೆ. ಸಂಸಾರದ ಜಗಳ ತಾನಾಗಿಯೇ ಸರಿ ಆಗುತ್ತದೆ. ಹಾಗೆಯೇ ಇವರಿಬ್ಬರ ನಡುವೆ ಇರುವ ಭಿನ್ನಾಭಿಪ್ರಾಯ ಕೂಡ ಸರಿಯಾಗುತ್ತದೆ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಚಿಂಚೋಳಿ ಕೈ ಶಾಸಕ ಉಮೇಶ್ ಜಾಧವ್ ರಾಜೀನಾಮೆ

    ಚಿಂಚೋಳಿ ಕೈ ಶಾಸಕ ಉಮೇಶ್ ಜಾಧವ್ ರಾಜೀನಾಮೆ

    ಕೋಲಾರ: ಕಾಂಗ್ರೆಸ್ ಜೆಡಿಎಸ್ ಸಮನ್ವಯ ಸಮಿತಿಯ ಸಭೆ ಆರಂಭಗೊಳ್ಳುವ ಮುನ್ನವೇ ಚಿಂಚೋಳಿ ಕೈ ಶಾಸಕ ಉಮೇಶ್ ಜಾಧವ್ ಸರ್ಕಾರಕ್ಕೆ ಶಾಕ್ ನೀಡಿದ್ದಾರೆ. ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸಿದ್ದಾರೆ.

    ಕೋಲಾರದ ಶ್ರೀನಿವಾಸಪುರದಲ್ಲಿ ರಮೇಶ್ ಕುಮಾರ್ ಅವರನ್ನು ಭೇಟಿಯಾಗಿ ಉಮೇಶ್ ಜಾಧವ್ ರಾಜೀನಾಮೆ ನೀಡಿದ್ದಾರೆ. ಈ ಹಿಂದೆ ನಾನು ಕಾಂಗ್ರೆಸ್ ಪಕ್ಷದಲ್ಲಿರಬೇಕು. ಇಲ್ಲವೇ ರಾಜೀನಾಮೆ ನೀಡಬೇಕು. ಈ ಎರಡರಲ್ಲಿ ಒಂದು ನಿರ್ಧಾರ ಕೈಗೊಳ್ಳುತ್ತೇನೆ ಉಮೇಶ್ ಜಾಧವ್ ತಿಳಿಸಿದ್ದರು.

    ರಾಜೀನಾಮೆ ನೀಡುವ ವಿಚಾರದಲ್ಲಿ ಗೊಂದಲವಿದ್ದು, ಕ್ಷೇತ್ರದ ಮತದಾರರ ಸಲಹೆ ಪಡೆದು ಮುಂದುವರಿಯುತ್ತೇನೆ. ಸ್ಪೀಕರ್ ರಮೇಶ್ ಕುಮಾರ್ ಅವರು ನೀಡಿದ ನೋಟಿಸ್ ತಲುಪಿದ ಮೇಲೆ ಉತ್ತರ ಕೊಡುತ್ತೇನೆ. ಸ್ಥಳೀಯವಾಗಿ ಕ್ಷೇತ್ರದಲ್ಲಿ ಸಮಸ್ಯೆಯಿಂದ ಅಸಮಾಧಾನವಿದೆ ಎಂದು ಹೇಳಿದ್ದರು.

    ಬುಧವಾರ ಕಲಬುರಗಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಬಿಜೆಪಿ ಸಮಾವೇಶ ನಡೆಯಲಿದ್ದು, ಈ ವೇಳೆ ಅಧಿಕೃತವಾಗಿ ಜಾಧವ್ ಬಿಜೆಪಿ ಸೇರ್ಪಡೆಯಾಗಲಿದ್ದಾರೆ. ಲೋಕಸಭಾ ಕಾಂಗ್ರೆಸ್ ಸಂಸದೀಯ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರನ್ನು ಈ ಬಾರಿ ಸೋಲಿಸಲು ಬಿಜೆಪಿ ಪ್ರಯತ್ನಿಸುತ್ತಿದ್ದು, ಜಾಧವ್ ಅವರು ಖರ್ಗೆ ವಿರುದ್ಧ ಸ್ಪರ್ಧಿಸುವ ಸಾಧ್ಯತೆಯಿದೆ.  ಇದನ್ನೂ ಓದಿ: ಖರ್ಗೆ ವಿರುದ್ಧ ಚಿಂಚೋಳಿ ಕೈ ಶಾಸಕ ಉಮೇಶ್ ಜಾಧವ್ ಕಣಕ್ಕೆ?

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

     

  • 50 ಕೋಟಿ ರೂ. ಮಾರಾಟ ಸಾಬೀತಾದ್ರೆ ಆತ್ಮಹತ್ಯೆ ಮಾಡ್ಕೊತ್ತೇನೆ: ಉಮೇಶ್ ಜಾಧವ್

    50 ಕೋಟಿ ರೂ. ಮಾರಾಟ ಸಾಬೀತಾದ್ರೆ ಆತ್ಮಹತ್ಯೆ ಮಾಡ್ಕೊತ್ತೇನೆ: ಉಮೇಶ್ ಜಾಧವ್

    – ಮಂತ್ರಿ ಮಾಡುತ್ತೇನೆ ಅಂತಾರೆ ನಾನೇ ಬೇಡ ಅಂತಿದ್ದೇನೆ
    – ಧರಂಸಿಂಗ್ ರಾಜಕೀಯ ಗುರುವೆಂದು ಮಲ್ಲಿಕಾರ್ಜುನ ಖರ್ಗೆಗೆ ಟಾಂಗ್ ಕೊಟ್ಟ ಶಾಸಕರು

    ಕಲಬುರಗಿ: ನಾನು 50 ಕೋಟಿ ರೂ.ಗೆ ಮಾರಾಟವಾಗಿದೀನಿ ಎನ್ನುವುದು ಸಾಬೀತಾದ್ರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಚಿಂಚೋಳಿ ಕಾಂಗ್ರೆಸ್ ಶಾಸಕ ಉಮೇಶ ಜಾಧವ್ ಹೇಳಿದ್ದಾರೆ.

    ಜಿಲ್ಲೆಯ ಸಿದ್ದಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ಸೇವಾಲಾಲ್ ಜಯಂತಿ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕರು, ಆಪರೇಷನ್ ಕಮಲಕ್ಕೆ ಒಳಗಾಗಿದ್ದೇವೆಂದು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಿಬಿಡಲಾಗಿದೆ. ಸ್ಪೀಕರ್ ರಮೇಶ್ ಕುಮಾರ್ ಅವರ ಮೇಲೂ ಇಂತಹ ಆರೋಪ ಬಂದಿದೆ. ಹೀಗಾಗಿ ಅಧಿವೇಶನವೇ ಸರಿಯಾಗಿ ನಡೆಯಲಿಲ್ಲ. ಹಣ ಪಡೆದಿದ್ದೇವೆ ಎನ್ನುವ ಆರೋಪದಿಂದಾಗಿ ಮನಸ್ಸಿಗೆ ತುಂಬಾ ನೋವಾಗಿದೆ. ಇದರಿಂದಾಗಿ ಮಾನಸಿಕವಾಗಿ ನೊಂದಿದ್ದೇವೆ ಎಂದು ಪಕ್ಷದ ನಾಯಕರ ವಿರುದ್ಧ ಕಿಡಿಕಾರಿದರು.

    ಮಾಜಿ ಮುಖ್ಯಮಂತ್ರಿ ಧರಂಸಿಂಗ್ ತಮ್ಮ ರಾಜಕೀಯ ಗುರು ಎನ್ನುವ ಮೂಲಕ ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬ ವಿರುದ್ಧ ವಾಗ್ದಾಳಿ ನಡೆಸಿದರು. ನಾನು ಈಗ ಕಾಂಗ್ರೆಸ್‍ನಲ್ಲಿ ಇದ್ದೇನೆ ಅಷ್ಟೇ. ಮುಂದೆ ಏನಾಗುತ್ತದೆ ಎನ್ನುವುದು ಗೊತ್ತಿಲ್ಲ. ಕಾಂಗ್ರೆಸ್ ನಾಯಕರು ನೋಟಿಸ್ ನೀಡಿದ್ದಾರೆ. ಅದಕ್ಕೆ ಸದ್ಯದಲ್ಲಿಯೇ ಉತ್ತರ ನೀಡುತ್ತೇನೆ. ನನ್ನನ್ನು ಸಮಾಧಾನಪಡಿಸಲು ಮಂತ್ರಿ ಸ್ಥಾನ ನೀಡುತ್ತೇನೆ ಎನ್ನುತ್ತಾರೆ. ಆದರೆ ನಾನೇ ಬೇಡವೆಂದು ಹೇಳುತ್ತಿರುವೆ. ಆಮಿಷಕ್ಕೆ ಒಳಗಾಗದರೆ ಕ್ಷೇತ್ರದ ಅಭಿವೃದ್ಧಿಯಾಗಲ್ಲ ಎಂದು ಮಂತ್ರಿಗಿರಿ ಆಕಾಂಕ್ಷೆಯನ್ನು ವ್ಯಕ್ತಪಡಿಸಿದರು.

    ಕಾಂಗ್ರೆಸ್ ಶಾಸಕಾಂಗ ಪಕ್ಷ (ಸಿಎಲ್‍ಪಿ) ಸಭೆಗೆ ಗೈರಾಗಿರುವ ಕುರಿತು ಪ್ರತಿಕ್ರಿಯೆ ನೀಡಿದ ಶಾಸಕರು, ನನ್ನ ಪತ್ನಿಗೆ ಮಣಿಪಾಲ್ ಆಸ್ಪತ್ರೆಯಲ್ಲಿ ಆಪರೇಷನ್ ಆಗಿತ್ತು. ಅವರ ಆರೈಕೆ ಮಾಡುವ ಉದ್ದೇಶದಿಂದ ನಾನು ಕೂಡ ಅಲ್ಲಿ ಉಳಿದಿದ್ದೆ. ಇದರಿಂದಾಗಿ ಸಿಎಲ್‍ಪಿ ಸಭೆಗೆ ಹಾಜರಾಗಿಲ್ಲ. ಜನ ನನ್ನನ್ನು ಕಾಂಗ್ರೆಸ್‍ನಿಂದ ಗೆಲ್ಲಿಸಿದ್ದಾರೆ. ಹೀಗಾಗಿ ಬಜೆಟ್ ಅಧಿವೇಶನಕ್ಕೆ ಹೋಗಿ ಬೆಂಬಲ ನೀಡಿ ವಾಪಾಸ್ ಬಂದಿದ್ದೇನೆ ಎಂದು ಪಕ್ಷದ ನಾಯಕರ ವಿರುದ್ಧ ಅಸಮಾಧಾನ ಹೊರ ಹಾಕಿದರು.

    ನಾನು ಲೋಕಸಭಾ ಚುನಾವಣೆಯ ಸ್ಪರ್ಧೆ ಮಾಡುವ ನಿರ್ಧಾರವನ್ನು ಕ್ಷೇತ್ರದ ಜನರಿಗೆ ಬಿಟ್ಟಿದ್ದೇನೆ. ಅವರು ಒಪ್ಪಿಗೆ ನೀಡಿದರೆ ಚುನಾವಣೆ ಎದುರಿಸುತ್ತೇನೆ ಎಂದ ಅವರು, ನಾನು ಕೇಂದ್ರ ಸರ್ಕಾರಿ ಉದ್ಯೋಗದಲ್ಲಿದ್ದೆ. ಆಗ ಮಾಜಿ ಸಿಎಂ ಧರಂಸಿಂಗ್ ಅವರು ನನ್ನನ್ನು ರಾಜಕೀಯಕ್ಕೆ ಕರೆತಂದರು. ನಾನು ಟೈಮ್ ಪಾಸ್ ಮಾಡುವ ರಾಜಕಾರಣಿಯಲ್ಲ. ನಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳು ಆಗಬೇಕು. ಪ್ರತಿ ನಿಮಿಷವೂ ನಾನು ಕೆಲಸ ಮಾಡುತ್ತಲೇ ಇರಬೇಕು ಎಂದರು.

    ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸರ್ಕಾರದ ಅವಧಿಯಲ್ಲಿ ನಾನು ಸಾಕಷ್ಟು ಕೆಲಸಗಳನ್ನು ಮಾಡಿದ್ದೇವೆ. ಆದರೆ ಈಗ ಸಮ್ಮಿಶ್ರ ಸರ್ಕಾರ ಬಂದ ಮೇಲೆ ಅಭಿವೃದ್ಧಿಯಾಗುತ್ತಿಲ್ಲ. ಹಿಂದಿನ ಸರ್ಕಾರದ ಕಾಮಗಾರಿಗಳು ಆರಂಭವಾಗುತ್ತಿಲ್ಲ ಎಂದು ದೋಸ್ತಿ ಸರ್ಕಾರದ ವಿರುದ್ಧ ಕಿಡಿಕಾರಿದರು.

    ಕಾಂಗ್ರೆಸ್‍ನಲ್ಲಿ ಇದ್ದರೂ ಬಿಜೆಪಿಯವರನ್ನು ಕಡೆಗಣಿಸಿಲ್ಲ. ಅಭಿವೃದ್ಧಿ ಮೂಲಕ ಕ್ಷೇತ್ರದ ಜನರಿಗೆ ಸ್ವಾಭಿಮಾನದ ಬದುಕನ್ನು ನೀಡುವುದು ನನ್ನ ಉದ್ದೇಶ. ಈವರೆಗೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ನನ್ನ ಜೊತೆಗೆ ಮಾತನಾಡಿಲ್ಲ. ನಾನು ಆಪರೇಷನ್ ಕಮಲಕ್ಕೆ ಒಳಗಾಗಿಲ್ಲ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv