Tag: umesh jadhav

  • ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡಿದ್ದಕ್ಕೆ ಕಿಡ್ನ್ಯಾಪ್ ಮಾಡಿ ಹಲ್ಲೆ

    ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡಿದ್ದಕ್ಕೆ ಕಿಡ್ನ್ಯಾಪ್ ಮಾಡಿ ಹಲ್ಲೆ

    ಕಲಬುರಗಿ: ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆ ತಾರಕಕ್ಕೆ ಏರಿದ್ದು, ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ಪರ ಪ್ರಚಾರ ಮಾಡಿದ ಹಿನ್ನೆಲೆಯಲ್ಲಿ ವ್ಯಕ್ತಿಯನ್ನು ಕಿಡ್ನ್ಯಾಪ್ ಮಾಡಿ ಹಲ್ಲೆ ಮಾಡಿರುವ ಘಟನೆ ನಡೆದಿದೆ.

    ಕಲಬುರಗಿಯ ರೋಜಾ ಬಡಾವಣೆಯಲ್ಲಿ ಈ ಘಟನೆ ನಡೆದಿದ್ದು, ಕುಡಾ ಮಾಜಿ ಅಧ್ಯಕ್ಷ ಅಜಗರ್ ಚುಲ್ಬುಲ್ ನನ್ನು ಕಿಡ್ನ್ಯಾಪ್ ಮಾಡಿ ಹಲ್ಲೆ ಮಾಡಿದ್ದಾರೆ. ಈ ಸಂಬಂಧ ಕಲಬುರಗಿ ಉತ್ತರ ಕ್ಷೇತ್ರದ ಶಾಸಕಿ ಖನಿಜ್ ಫಾತಿಮಾ ಸೇರಿ ಹಲವರ ವಿರುದ್ಧ ದೂರು ದಾಖಲಾಗಿದೆ.

    ಚುಲ್ಬುಲ್ ಶಾಸಕಿಯ ನಿರ್ಧಾರದ ವಿರುದ್ಧ ಬಿಜೆಪಿ ಪರ ಕೆಲಸ ಮಾಡುತ್ತಿದ್ದರು. ಇದರಿಂದ ಕೋಪಗೊಂಡ ಶಾಸಕಿ ಅವರ ಬೆಂಬಲಿಗರು ಶನಿವಾರ ತಡರಾತ್ರಿ ಚುಲ್ಬುಲ್ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ. ಈ ವೇಳೆ ಮನೆಯಲ್ಲಿನ ಪೀಠೋಪಕರಣಗಳನ್ನು ಧ್ವಂಸ ಮಾಡಲಾಗಿದೆ. ಅಷ್ಟೇ ಅಲ್ಲದೇ ದುಷ್ಕರ್ಮಿಗಳು ಮನೆಯ ಮುಂಭಾಗದ ನಿಲ್ಲಿಸಿದ್ದ ಇನ್ನೋವಾ ಕಾರಿನ ಗಾಜಿನ ಮೇಲೆ ಕಲ್ಲು ಎತ್ತಿ ಹಾಕಿ ಜಖಂ ಮಾಡಿದ್ದಾರೆ.

    ಈ ಕುರಿತು ಶಾಸಕಿ ಖನಿಜ್ ಫಾತಿಮಾ ಸೇರಿದಂತೆ ಬೆಂಬಲಿಗರ ವಿರುದ್ಧ ರೋಜಾ ಪೊಲೀಸ್ ಠಾಣೆಗೆ ಚುಲ್ಬುಲ್ ದೂರು ನೀಡಿದ್ದಾರೆ.

  • ಮಂಡ್ಯ ಆಯ್ತು, ಈಗ ಕಲಬುರಗಿಯಲ್ಲೂ ಮೂವರು ಜಾಧವ್

    ಮಂಡ್ಯ ಆಯ್ತು, ಈಗ ಕಲಬುರಗಿಯಲ್ಲೂ ಮೂವರು ಜಾಧವ್

    ಕಲಬುರಗಿ: ಮತದಾರರಲ್ಲಿ ಗೊಂದಲ ಮೂಡಿಸಲು ಮಂಡ್ಯದಲ್ಲಿ ಮೂರು ಜನ ಸುಮಲತಾ ಎಂಬವರು ನಾಮಪತ್ರ ಸಲ್ಲಿಸಿದ್ದರು. ಅದೇ ರೀತಿ ಇತ್ತ ಕಲಬುರಗಿ ಜಿಲ್ಲೆಯಲ್ಲೂ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ಮತ ವಿಭಜಿಸಲು, ಜಾಧವ್ ಹೆಸರಿನ ಮೂವರು ಅಭ್ಯರ್ಥಿಗಳು ಪಕ್ಷೇತರರಾಗಿ ಕಣಕ್ಕಿಳಿದಿದ್ದಾರೆ.

    ಕಲಬುರಗಿ ಲೋಕಸಭಾ ಕಣದಲ್ಲಿ ಶಂಕರ್ ಜಾಧವ್, ವಿಠಲ್ ಜಾಧವ್ ಹಾಗೂ ವಿಜಯ್ ಜಾಧವ್ ಎಂಬವರು ನಾಮಪತ್ರ ಸಲ್ಲಿಸಿದ್ದಾರೆ. ಈ ಮೂಲಕ ಡಾ.ಉಮೇಶ್ ಜಾಧವ್ ಮತಗಳು ಒಡೆಯಲು ವಿಪಕ್ಷಗಳು ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ ಎಂದು ಹೇಳಲಾಗುತ್ತಿದೆ.

    ಕಲಬುರಗಿಯಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಖರ್ಗೆ ಸ್ಪರ್ಧಿಸಿದ್ದರೂ, ವಿಠಲ್ ಜಾಧವ್ ಎಂಬವರು ಜೆಡಿಎಸ್ ಪಕ್ಷದಿಂದ ಸ್ಪರ್ಧಿಸುವುದಾಗಿ ಅವರ ಅಫಡವಿಟ್ ನಲ್ಲಿ ಹೇಳಿದ್ದಾರೆ. ಇದು ಇದೀಗ ಹಲವು ಗೊಂದಲಗಳಿಗೆ ಕಾರಣವಾಗಿದೆ.

  • ಅಂದು ನಾಸ್ತಿಕ, ಇಂದು ಆಸ್ತಿಕ – ಕಲಬುರಗಿ ಕಣದಲ್ಲಿ ಗೆಲುವಿಗಾಗಿ ಪಣ

    ಅಂದು ನಾಸ್ತಿಕ, ಇಂದು ಆಸ್ತಿಕ – ಕಲಬುರಗಿ ಕಣದಲ್ಲಿ ಗೆಲುವಿಗಾಗಿ ಪಣ

    – ಖರ್ಗೆ, ಜಾಧವ್‍ರಿಂದ ಟೆಂಪಲ್ ರನ್

    ಕಲಬುರಗಿ: ಚುನಾವಣೆ ಶುರುವಾಗುತ್ತಿದ್ದಂತೆ ರಾಜಕಾರಣಿಗಳಿಗೆ ಇದ್ದಕ್ಕಿದ್ದಂತೆ ದೇವರ ಭಕ್ತಿ ಜಾಸ್ತಿಯಾಗಿ ಬಿಡುತ್ತದೆ. ತೀವ್ರ ಜಿದ್ದಾ ಜಿದ್ದಿನ ಕ್ಷೇತ್ರವಾಗಿರುವ ಕಲಬುರಗಿ ಲೋಕಸಭಾ ಕ್ಷೇತ್ರ ಇದೀಗ ಬಿಜೆಪಿ, ಕಾಂಗ್ರೆಸ್‍ಗೆ ಪ್ರತಿಷ್ಠೆಯ ಕಣವಾಗಿದೆ. ಎರಡೂ ಪಕ್ಷದ ಘಟಾನುಘಟಿ ನಾಯಕರು ಕಣದಲ್ಲಿದ್ದು, ಸ್ಪರ್ಧೆಗೆ ಭಾರೀ ಪೈಪೋಟಿ ಏರ್ಪಟ್ಟಿದೆ. ಅಲ್ಲದೆ ಈ ನಡುವೆ ಕಲಬುರಗಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳು ಟೆಂಪಲ್ ರನ್ ಶುರು ಮಾಡಿದ್ದಾರೆ.

    ಬಿಜೆಪಿ ಅಭ್ಯರ್ಥಿ ಡಾ.ಉಮೇಶ್ ಜಾಧವ್ ನಾಮಪತ್ರ ಸಲ್ಲಿಸುವ ಮುನ್ನ ಚಿಂಚೋಳಿಯ ರೇವಣ ಸಿದ್ದೇಶ್ವರ ಮತ್ತು ಕಲಬುರಗಿಯ ಶ್ರೀಶರಣ ಬಸವೇಶ್ವರ ದೇವಸ್ಥಾನ ಸೇರಿ ಅನೇಕ ದೇವಾಲಯಗಳಿಗೆ ಭೇಟಿ ನೀಡಿದ್ದರು. ಅಲ್ಲದೆ ಕೋಡಿ ಮಠದ ಶ್ರೀಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದರು. ಕೋಡಿ ಮಠದ ಶ್ರೀಗಳು ಕೂಡ ಜಾಧವ್ ಚುನಾವಣೆಯಲ್ಲಿ ಜಯಗಳಿಸುವುದಾಗಿ ಆಶೀರ್ವಾದ ಮಾಡಿದ್ದರು ಎಂದು ತಿಳಿದುಬಂದಿದೆ.

    ವಿಶೇಷ ಅಂದರೆ ನಾಸ್ತಿಕನೆಂದು ಹೇಳಿಕೊಳ್ಳುತ್ತಿದ್ದ ಮಲ್ಲಿಕಾರ್ಜುನ ಖರ್ಗೆ ಕೂಡ ದೇವರ ಮೊರೆ ಹೋಗಿದ್ದಾರೆ. ಈ ಮೂಲಕ ನಾನು ನಾಸ್ತಿಕನಲ್ಲ ದೇವರ ಭಕ್ತ ಎಂದು ಜನರಲ್ಲಿ ಬಿಂಬಿಸಲು ಮುಂದಾಗಿದ್ದಾರೆ. ಹೀಗಾಗಿ ಜಾಧವ್ ಭೇಟಿ ನೀಡಿದ್ದ ಶ್ರೀ ಶರಣಬಸವೇಶ್ವರ ದೇವಸ್ಥಾನಕ್ಕೂ ಖರ್ಗೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ. ಇನ್ನು ಖರ್ಗೆ ಪತ್ನಿ ರಾಧಾಬಾಯಿ ಕೂಡ ಜ್ಯೋತಿಷಿಗಳ ಮೊರೆ ಹೋಗಿ ಪತಿ ನಾಮಪತ್ರ ಸಲ್ಲಿಸಬೇಕಾದ ಸಮಯವನ್ನು ನಿಗದಿ ಮಾಡಿದ್ದರು ಎನ್ನಲಾಗಿದೆ.

  • ಉಮೇಶ್ ಜಾಧವ್ ರಾಜೀನಾಮೆ ಅಂಗೀಕಾರ

    ಉಮೇಶ್ ಜಾಧವ್ ರಾಜೀನಾಮೆ ಅಂಗೀಕಾರ

    ಬೆಂಗಳೂರು: ಕಲಬುರಗಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ಶಾಸಕ ಸ್ಥಾನಕ್ಕೆ ನೀಡಿದ್ದ ರಾಜೀನಾಮೆಯನ್ನು ಸ್ಪೀಕರ್ ರಮೇಶ್ ಕುಮಾರ್ ಅಂಗೀಕರಿಸಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಚಿಂಚೋಳ್ಳಿ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಉಮೇಶ್ ಜಾಧವ್ ಅಯ್ಕೆಯಾಗಿದ್ದರು. ಮಾರ್ಚ್ 4ರಂದು ಸ್ಪೀಕರ್ ನಿವಾಸಕ್ಕೆ ತೆರಳಿದ್ದ ಉಮೇಶ್ ಜಧವ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿದ್ದರು.

    ಭಾರತ ಸಂವಿಧಾನದ ಅನುಚ್ಛೇದ 190(3)ಬಿ ಯಲ್ಲಿ ಸಭಾಧ್ಯಕ್ಷರು ಇಂತಹ ಸಂದರ್ಭಗಳಲ್ಲಿ ಅನುಸರಿಸಬೇಕಾದ ಕ್ರಮಗಳನ್ನು ಸ್ಪಷ್ಟವಾಗಿ ವಿವರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಭಾರತ ಸಂವಿಧಾನದ ಅನುಚ್ಛೇದ 190(3)ಬಿ ಯ ಅಡಿಯಲ್ಲಿ ಸೂಚಿಸಿದ ಹಾಗೆ ಕ್ರಮವನ್ನು ಜರುಗಿಸಿದ ನಂತರ ಡಾ. ಉಮೇಶ್ ಜಿ. ಜಾಧವ್ ಅವರ ಚಿಂಚೋಳಿ ವಿಧಾನಸಭಾ ಕ್ಷೇತ್ರದಿಂದ ಕರ್ನಾಟಕ ವಿಧಾನಸಭೆ ಸದಸ್ಯತ್ವಕ್ಕೆ ನೀಡಿರುವ ರಾಜೀನಾಮೆಯನ್ನು ನನ್ನ ಸ್ವಂತ ನ್ಯಾಯಿಕ ಪ್ರಜ್ಞೆಯ ಮೇರೆಗೆ ಅಂಗೀಕರಿಸಲಾಗಿದೆ ಎಂದು ರಮೇಶ್ ಕುಮಾರ್ ಧೃಡೀಕರಣ ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.

    ರಾಜೀನಾಮೆ ಅಂಗೀಕಾರಕ್ಕೂ ಮೊದಲೇ ಉಮೇಶ್ ಜಾಧವ್ ಅವರನ್ನು ಬಿಜೆಪಿ ಕಲಬುರಗಿ ಕ್ಷೇತ್ರದ ಅಭ್ಯರ್ಥಿ ಎಂದು ಘೋಷಿಸಿತ್ತು. ರಾಜೀನಾಮೆ ಸಲ್ಲಿಕೆ ಬಳಿಕ ಮಾತನಾಡಿದ್ದ ಉಮೇಶ್ ಜಾಧವ್, ಸ್ಪೀಕರ್ ಮೇಲೆ ನಂಬಿಕೆ ಹೊಂದಿದ್ದು, ಪಕ್ಷಾತೀತವಾಗಿ ಕೆಲಸ ಮಾಡುತ್ತಾರೆ. ಸಂವಿಧಾನಬದ್ಧವಾಗಿ ನನ್ನ ರಾಜೀನಾಮೆಯನ್ನು ಅಂಗೀಕರಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.

    ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಕಾಂಗ್ರೆಸ್ ಶಾಸಕಾಂಗದ ನಾಯಕರಾಗಿರುವ ಸಿದ್ದರಾಮಯ್ಯ, ವಿಪ್ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಉಮೇಶ್ ಜಾಧವ್ ಸೇರಿದಂತೆ ಇನ್ನುಳಿದ ಮೂವರು ಶಾಸಕರನ್ನು ಅನರ್ಹಗೊಳಿಸಬೇಕೆಂದು ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ದೂರು ಸಲ್ಲಿಸಿದ್ದರು.

    ಪಕ್ಷಾಂತರ ಕಾಯ್ದೆ ಏನು ಹೇಳುತ್ತೆ?
    ಪಕ್ಷಾಂತರ ನಿಷೇಧ ಕಾಯ್ದೆಯಡಿ ಪಕ್ಷದ ಆದೇಶ ಉಲ್ಲಂಘಿಸಿದರೆ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ತೆಗೆದು ಹಾಕಬಹುದು. ಆಗ ಸಹಜವಾಗಿಯೇ ಶಾಸಕರು ಅನರ್ಹರಾಗುತ್ತಾರೆ. ಅನರ್ಹ ಶಾಸಕರು ವಿಧಾನಸಭೆ ಅವಧಿ ಮುಗಿಯುವವರೆಗೆ ಬೇರೆ ಪಕ್ಷಕ್ಕೆ ಸೇರುವಂತಿಲ್ಲ. ಹಾಲಿ ವಿಧಾನಸಭೆ ಅವಧಿ ಮುಗಿಯುವವರೆಗೂ ಉಪ ಚುನಾವಣೆಯಲ್ಲೂ ಸ್ಪರ್ಧಿಸುವಂತಿಲ್ಲ. ಅನರ್ಹಗೊಂಡ ಶಾಸಕರು ಮಂತ್ರಿ ಸ್ಥಾನ ಸೇರಿದಂತೆ ಯಾವುದೇ ಸರ್ಕಾರಿ ಹುದ್ದೆಯನ್ನು ಹೊಂದುವಂತಿಲ್ಲ.

    ಅನರ್ಹಗೊಂಡ ದಿನದಿಂದ ಅವರ ಶಾಸಕತ್ವ ಅವಧಿ ಯಾವಾಗ ಮುಗಿಯುತ್ತದಫ ಅಲ್ಲಿವರೆಗೆ ಹುದ್ದೆಗಳನ್ನ ಹೊಂದುವಂತಿಲ್ಲ. ಪಕ್ಷದ ಒಟ್ಟು ಶಾಸಕರಲ್ಲಿ 2/3ರಷ್ಟು ಶಾಸಕರು ಗುಂಪಾಗಿ ಪಕ್ಷಾಂತರ ಮಾಡಿದರಷ್ಟೇ ಅನರ್ಹತೆ ಅನ್ವಯಿಸಲ್ಲ. ಶಾಸಕರನ್ನು ಅನರ್ಹಗೊಳಿಸುವ ಅಧಿಕಾರ ವಿಧಾನಸಭೆ ಸ್ಪೀಕರ್ ಕೈಯಲ್ಲಿದ್ದು, ಅನರ್ಹತೆ ಪ್ರಶ್ನಿಸಿ ಸ್ಪೀಕರ್ ಅವರಿಗೂ ಮನವಿ, ಕಾನೂನು ಹೋರಾಟವನ್ನೂ ಮಾಡಬಹುದು.

  • ಮಂಡ್ಯದಲ್ಲಿ ಮೂವರು ಸುಮಲತಾ – ಕಲಬುರಗಿಯಲ್ಲಿ ಇಬ್ಬರು ಜಾಧವ್

    ಮಂಡ್ಯದಲ್ಲಿ ಮೂವರು ಸುಮಲತಾ – ಕಲಬುರಗಿಯಲ್ಲಿ ಇಬ್ಬರು ಜಾಧವ್

    ಕಲಬುರಗಿ: ಮಂಡ್ಯ ಜಿಲ್ಲೆಯಂತೆ ಕಲಬರಗಿಯಲ್ಲೂ ಒಂದೇ ಹೆಸರಿನ ಇಬ್ಬರು ಅಭ್ಯರ್ಥಿಗಳು ಲೋಕಸಬಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ.

    ಉಮೇಶ್ ಜಾಧವ್ ಮತ್ತು ಶಂಕರ್ ಜಾಧವ್ ಇಬ್ಬರು ಸ್ಪರ್ಧೆ ಮಾಡುತ್ತಿದ್ದು, ಈ ಮೂಲಕ ಲೋಕಸಭಾ ರಣಕಣದಲ್ಲಿ ಹೆಸರಿನ ಕಮಾಲ್ ಜೋರಾಗಿ ನಡೆಯುತ್ತಿದೆ. ಬಿಜೆಪಿ ಅಭ್ಯರ್ಥಿಯಾಗಿ ಉಮೇಶ್ ಜಾಧವ್ ಸ್ಪರ್ಧೆ ಮಾಡಿದ್ದರೆ, ಪಕ್ಷೇತರ ಅಭ್ಯರ್ಥಿಯಾಗಿ ಶಂಕರ್ ಜಾಧವ್ ಅಖಾಡಕ್ಕಿಳಿಯುತ್ತಿದ್ದಾರೆ.

    ಶುಕ್ರವಾರ ಶಂಕರ್ ಜಾಧವ್ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಏಪ್ರಿಲ್ 3 ರಂದು ಉಮೇಶ್ ಜಾಧವ್ ನಾಮಪತ್ರ ಸಲ್ಲಿಸಲಿದ್ದಾರೆ. ಜೊತೆಗೆ ಎಪ್ರಿಲ್ 4 ರಂದು ಕೈ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಕೂಡ ನಾಮಿನೇಷನ್ ಮಾಡಲಿದ್ದಾರೆ. ಉಮೇಶ್ ಜಾಧವ್ ಅವರು ಕಾಂಗ್ರೆಸ್ಸಿಗೆ ಗುಡ್ ಬೈ ಹೇಳಿ ಬಿಜೆಪಿ ಪಕ್ಷಕ್ಕೆ ಸೇರಿದ್ದು, 11 ಬಾರಿ ಗೆಲುವು ಕಂಡಿರುವ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ತೊಡೆತಟ್ಟಿದ್ದಾರೆ.

    ಮಂಡ್ಯದಲ್ಲಿ ಕಾಂಗ್ರೆಸ್ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಅಂಬರೀಶ್, ಬಿಜೆಪಿ ಬೆಂಬಲದೊಂದಿಗೆ ಚುನಾವಣಾ ಅಖಾಡಕ್ಕೆ ಧುಮುಕಿದ್ದಾರೆ. ಅಚ್ಚರಿ ಎಂಬಂತೆ ಮಂಡ್ಯದಲ್ಲಿ ಸುಮಲತಾ ಹೆಸರಿನ ಮೂವರು ಮಹಿಳೆಯರು ನಾಮಪತ್ರ ಸಲ್ಲಿಸಿದ್ದಾರೆ. ಈಗ ಅದೇ ರೀತಿ ಕಲಬುರಗಿಯಲ್ಲಿ ಜಾಧವ್ ಹೆಸರಿನ ಇಬ್ಬರು ಲೋಕಸಭಾ ಚುನಾವಣೆ ಕಣಕ್ಕಿಳಿದಿದ್ದಾರೆ.

  • ಉಮೇಶ್ ಜಾಧವ್ ಅನರ್ಹತೆ – ವಿಚಾರಣೆ ಅಂತ್ಯಗೊಳಿಸಿ ತೀರ್ಪು ಕಾಯ್ದರಿಸಿದ ಸ್ಪೀಕರ್

    ಉಮೇಶ್ ಜಾಧವ್ ಅನರ್ಹತೆ – ವಿಚಾರಣೆ ಅಂತ್ಯಗೊಳಿಸಿ ತೀರ್ಪು ಕಾಯ್ದರಿಸಿದ ಸ್ಪೀಕರ್

    – ಮೊದಲ ಬಾರಿಗೆ ಶಾಸಕರಿಗೆ ಮತ ನೀಡಿದ ಮತದಾರರಿಗೆ ಪ್ರಶ್ನಿಸುವ ಅವಕಾಶ

    ಬೆಂಗಳೂರು: ಉಮೇಶ್ ಜಾಧವ್ ವಿರುದ್ಧದ ಕಾಂಗ್ರೆಸ್‍ನ ಅನರ್ಹತೆ ಅರ್ಜಿಯ ವಿಚಾರಣೆ ಇಂದು ನಡೆಯಿತು. ಸ್ಪೀಕರ್ ಎದುರು ಉಮೇಶ್ ಜಾಧವ್ ಪರ ಸಂದೀಪ್ ಪಾಟೀಲ್, ಕಾಂಗ್ರೆಸ್ ಪರ ಶಶಿಕಿರಣ್ ವಾದ ಮಂಡಿಸಿದರು. ವಾದ ಆಲಿಸಿದ ಸ್ಪೀಕರ್ ತೀರ್ಪು ಕಾಯ್ದಿರಿಸಿದ್ದಾರೆ.

    ಸ್ಪೀಕರ್ ಯಾವುದೇ ತೀರ್ಪು ನೀಡಿದರು ಅದಕ್ಕೆ ತಲೆಬಾಗುತ್ತೇನೆ ಎಂದು ಉಮೇಶ್ ಜಾಧವ್ ಹೇಳಿದ್ದು, ರಾಜೀನಾಮೆ ಅಂಗೀಕಾರ ಆಗುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದರ ನಡುವೆ ಜಾಧವ್ ಅವರಿಗೆ ಬಿಜೆಪಿ ಬಿ-ಫಾರಂ ನೀಡಿದೆ. ಇತ್ತ ಚಿಂಚೋಳಿಯಲ್ಲಿ ಉಮೇಶ್ ಜಾದವ್ ವಿರುದ್ಧ ಪರ ವಿರೋಧ ಎದ್ದಿದ್ದು, ಬೈಲಹೊಂಗಲದ ಮಾಜಿ ಶಾಸಕ ಜಗದೀಶ್ ಮೆಟಗುಡ್ ಬಿಜೆಪಿ ಸೇರ್ಪಡೆಯಾಗಿದ್ದಾರೆ.

    ಇತಿಹಾಸದಲ್ಲಿ ಮೊದಲ ಬಾರಿಗೆ ಎಂಬಂತೆ ಸ್ಪೀಕರ್ ರಮೇಶ್ ಕುಮಾರ್ ಅವರು ಶಾಸಕ ಉಮೇಶ್ ಜಾಧವ್ ಅವರಿಗೆ ಮತ ನೀಡಿದ್ದ ಮತದಾರರಿಗೆ ಶಾಸಕರನ್ನು ಪ್ರಶ್ನೆ ಮಾಡಲು ಅವಕಾಶ ನೀಡಿದ್ದರು. ಚಿಂಚೋಳಿ ಮತಕ್ಷೇತ್ರದ ಮತದಾರರ ಶಿವಕುಮಾರ್ ಎಂಬವರು ಮಾತನಾಡಿ, ಉಮೇಶ್ ಜಾದವ್ ಅವರಿಗೆ ಮತ ಹಾಕಿದ್ದೇವೆ. ಮತ ಹಾಕಿ ಗೆಲ್ಲಿಸಿದ ನಮಗೆ ಹೇಳದೆ ಹೇಗೆ ರಾಜೀನಾಮೆ ನೀಡಿದ್ದಿರಿ ಎಂದು ಪ್ರಶ್ನೆ ಮಾಡಿದರು.

    ಸವಿತಾ ಸಜ್ಜನ್ ಎಂಬವರು ಮಾತನಾಡಿ, ಚುನಾವಣೆಯಲ್ಲಿ ಗೆದ್ದ ಬಳಿಕ ಜಾದವ್ ಅವರು ಕೈಗೆ ಸಿಗುತ್ತಿಲ್ಲ. ಎಲ್ಲ ಮತದಾರರ ಬಳಿ ಕೇಳಿ ರಾಜೀನಾಮೆ ಕೊಟ್ಟಿದ್ದೇನೆ ಎಂದು ಹೇಳುತ್ತಾರೆ. ಆದರೆ ಅವರು ಯಾರ ಬಳಿ ಕೇಳದೆ ರಾಜೀನಾಮೆ ನೀಡಿದ್ದಾರೆ. ಅವರು ಹಣದ ಅಮಿಷಕ್ಕೆ ಬಲಿಯಾಗಿ ಬೇರೆ ಪಕ್ಷಕ್ಕೆ ಹೋಗಿದ್ದಾರೆ. ಈ ಬಗ್ಗೆ ಮಾಧ್ಯಮ, ಜನ ಹೇಳಿದ್ದಾರೆ ಎಂದರು. ತಕ್ಷಣ ಮಧ್ಯ ಪ್ರವೇಶ ಮಾಡಿದ ಸ್ಪೀಕರ್ ಇದಕ್ಕೆ ಏನಾದ್ರೂ ಸಾಕ್ಷಿ ಇದೀಯಾ ಎಂದು ಪ್ರಶ್ನಿಸಿದರು. ಅಲ್ಲದೇ ಮಾಧ್ಯಮದಲ್ಲಿ ಬಂದಿದ್ದು ಎಲ್ಲ ಸರಿ ಅಲ್ಲ ತಿಳಿಸಿದ್ರು.

    ಬಳಿಕ ಮಾತನಾಡಿದ ಶಾಸಕ ಜಾಧವ್ ಅವರು, ನನಗೆ ಮತ ಹಾಕಿ ಗೆಲ್ಲಿಸಿ ಇಲ್ಲಿಗೆ ಬಂದ ನಿಮಗೆಲ್ಲರಿಗೂ ಧನ್ಯವಾದ. ಕಳೆದ 6-8 ತಿಂಗಳಲ್ಲಿ ಏನೆಲ್ಲ ಆಗಿದೆ ಎಂದು ಎಲ್ಲರಿಗೂ ಗೊತ್ತಿದೆ. ಅದನ್ನು ನಾನು ಈಗ ಹೇಳಲ್ಲ. ಸ್ಪೀಕರ್ ನೀವು ಏನು ತೀರ್ಮಾನ ತೆಗೆದುಕೊಂಡರು ನಾನು ಅದಕ್ಕೆ ಬದ್ಧನಾಗಿರುತ್ತೇನೆ ಎಂದರು.

    ವಾದ ಪ್ರತಿವಾದ ಬಳಿಕ ಮಾತನಾಡಿದ ಸ್ಪೀಕರ್, ಸದ್ಯದ ತಿಳುವಳಿಕೆಯಲ್ಲಿ ಈ ಪ್ರಕರಣದ ಬಗ್ಗೆ ತೀರ್ಪು ನೀಡಲು ನನಗೆ ಇನ್ನು ಕಾಲಾವಕಾಶ ಬೇಕಿದೆ. ತಜ್ಞರ ಜತೆ ಚರ್ಚೆ ಮಾಡಬೇಕಿದೆ. ಅದ್ದರಿಂದ ಜಾಧವ್ ಸದಸ್ಯತ್ವ ಅನರ್ಹ ಪ್ರಕರಣವನ್ನು ಮುಂದೂಡುತ್ತೇನೆ. ಪಕ್ಷಾಂತರ ನಿಷೇಧ ಕಾಯ್ದೆಯಡಿ ನೀಡಿರುವ ಪ್ರಕರಣ ಮುಂದೂಡಿಕೆ ಮಾಡಲಾಗಿದೆ. ನಮ್ಮ ಮುಂದೇ ಹೈಕೋರ್ಟ್ ವಿಭಾಗಿಯ ಪೀಠದ ತೀರ್ಪು ಇದ್ದು, ಎಲ್ಲಾ ನೋಡಿ ತೀರ್ಮಾನ ಮಾಡುತ್ತೇನೆ. ಯಾವಾಗ ಅಂಗೀಕಾರ ಆಗುತ್ತೆ ಎಂಬುದಕ್ಕೆ ಟೈಮ್ ಬಾಂಡ್ ಹೇಳಲು ಆಗಲ್ಲ. ಸಂವಿಧಾನದ 10 ನೇ ಪರಿಚ್ಛೇದದ ಅನ್ವಯ ಪ್ರಜಾಪ್ರತಿನಿಧಿ ಕಾಯ್ದೆಯಲ್ಲಿರುವ ಅನರ್ಹತೆ ಕುರಿತ ನಿಯಮಗಳು ನೂನ್ಯತೆಯಿಂದ ಕೂಡಿದೆ. ಅದರ ಬದಲಾವಣೆ ಆಗುವ ಅಗತ್ಯವಿದೆ. ನಾನು ಈಗ ಅನರ್ಹತೆಗೊಳಿಸಿದರೂ ಚಿಂಚೋಳಿಯಿಂದ ಉಮೇಶ್ ಜಾಧವ್ ಮತ್ತೆ ಸ್ಪರ್ಧೆ ಮಾಡುವ ಅವಕಾಶ ಕಾನೂನಿನಲ್ಲಿದೆ. ಈ ಹಿನ್ನೆಲೆಯಲ್ಲಿ ಕಾಯಿದೆಯ ಬದಲಾವಣೆಯ ಅಗತ್ಯವಿದೆ ಎಂಬುವುದರ ಪರ ನಾನೀದ್ದೇನೆ ಎಂದರು.

  • ಖರ್ಗೆ ಎಂಬ ಪರ್ವತದಿಂದ್ಲೇ ಕಾಂಗ್ರೆಸ್ ನಾಶವಾಗುತ್ತೆ- ಉಮೇಶ್ ಜಾಧವ್

    ಖರ್ಗೆ ಎಂಬ ಪರ್ವತದಿಂದ್ಲೇ ಕಾಂಗ್ರೆಸ್ ನಾಶವಾಗುತ್ತೆ- ಉಮೇಶ್ ಜಾಧವ್

    ಯಾದಗಿರಿ: ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಎಂಬ ಪರ್ವತದಿಂದಲೇ ಕಾಂಗ್ರೆಸ್ ನಾಶವಾಗುತ್ತದೆ ಎಂದು ಕಲಬುರಗಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ಹೇಳಿದ್ದಾರೆ.

    ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈಶ್ವರ ಖಂಡ್ರೆಯವರು ಮಲ್ಲಿಕಾರ್ಜುನ ಖರ್ಗೆಯನ್ನು ಪರ್ವತ ಎಂದು ಕರೆದಿದ್ದರು. ಈ ಹೇಳಿಕೆಗೆ ತಿರುಗೇಟು ನೀಡಿದ ಜಾಧವ್, ಮಲ್ಲಿಕಾರ್ಜುನ ಖರ್ಗೆ ಹಳೆ ಪರ್ವತ ಅದು ತಾನೇ ಬೀಳುತ್ತದೆ. ಖರ್ಗೆ ಎಂಬ ಪರ್ವತ ತಂದು ಕಾಂಗ್ರೆಸ್ ತಾನೆ ನಾಶವಾಗುತ್ತದೆ ಎಂದು ಹೇಳಿದ್ದಾರೆ.

    ಲೋಕಸಭಾ ಚುನಾವಣೆಯ ನಂತರ ಕಾಂಗ್ರೆಸ್-ಜೆಡಡಿಎಸ್ ಸರ್ಕಾರ ಪತನವಾಗಲಿದೆ. ಬಿ.ಎಸ್ ಯಡಿಯೂರಪ್ಪ ಮತ್ತೆ ಸಿಎಂ ಆಗಲಿದ್ದಾರೆ. ಇದು ನೂರಕ್ಕೂ ನೂರರಷ್ಟು ಸತ್ಯ. ನನ್ನನ್ನು ಕಾಂಗ್ರೆಸ್ ನವರೆ ಗೆಲ್ಲಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಬಿಜೆಪಿ ಟಿಕೆಟ್ ಪೈನಲ್ ಹಿನ್ನೆಲೆಯಲ್ಲಿ ಯಾದಗಿರಿ ಜಿಲ್ಲೆಯ ಗುರುಮಿಠಕಲ್ ತಾಲೂಕಿನ ವಿವಿಧ ದೇವಸ್ಥಾನಗಳಿಗೆ ಭೇಟಿ ಮಾಡಿದ್ದೇನೆ. ನನಗೆ ಮತ್ತು ಮೋದಿಗೆ ದೇವರು ಒಳ್ಳೆಯದು ಮಾಡಲಿ ಎಂದು ದೇವರ ದರ್ಶನ ಮಾಡಿದ್ದೇನೆ ಎಂದು ತಿಳಿಸಿದ್ರು.

    ನನಗೆ ಕ್ಷೇತ್ರದ ಎಲ್ಲ ಕಡೆ ಬೆಂಬಲ ಸಿಗುತ್ತಿದೆ. ನನ್ನ ರಾಜೀನಾಮೆ ವಿಚಾರದಲ್ಲಿ ಕೆಲವರು ಸುಮ್ಮನೆ ಗೊಂದಲ ಸೃಷ್ಟಿ ಮಾಡಿದ್ದಾರೆ. ಕಾನೂನಿನಲ್ಲಿ ತೊಡಕು ಇಲ್ಲ ನನ್ನ ರಾಜೀನಾಮೆಯನ್ನು ಸ್ಪೀಕರ್ ಅವರು ವಿಶೇಷವಾಗಿ ಪರಿಶೀಲನೆ ಮಾಡುತ್ತಿದ್ದಾರೆ. ಈ ಬಗ್ಗೆ ಸ್ಪೀಕರ್ ಮತ್ತೆ ನನಗೆ ಪತ್ರ ಬರೆದಿದ್ದಾರೆ. ಸ್ಪೀಕರ್ ರಮೇಶ್ ಕುಮಾರ್ ಯಾರ ಕೈಗೊಂಬೆಯಾಗಿಲ್ಲ. ಸ್ಪೀಕರ್ ಅವರು ಈ ತಿಂಗಳ 24ಕ್ಕೆ ನನ್ನನ್ನು ವಿಚಾರಣೆ ಕರೆದಿದ್ದು 25ರ ಒಳಗೆ ರಾಜೀನಾಮೆ ಅಂಗಿಕಾರ ಆಗುತ್ತದೆ ಅಂದ್ರು.

    ಸದ್ಯ ಕಾಂಗ್ರೆಸ್ ನಲ್ಲಿ ಉಸಿರುಗಟ್ಟುವ ವಾತಾವರಣವಿದೆ. ಹೀಗಾಗಿ ಕಾಂಗ್ರೆಸ್ ಮುಖಂಡರು ಪಕ್ಷ ಬಿಟ್ಟು ಬಿಜೆಪಿ ಸೇರುತ್ತಿದ್ದಾರೆ. ನಾನು ಸಚಿವ ಆಗಬೇಕೆಂದು ಚಿಂಚೋಳಿ ಕ್ಷೇತ್ರದ ಜನರ ಆಸೆ ಇತ್ತು. ಈ ಮೈತ್ರಿ ಸರ್ಕಾರದಲ್ಲಿ ನನಗೆ ಸಚಿವ ಸ್ಥಾನ ಸಿಕ್ಕಿಲ್ಲ ಎಂಬುವುದಕ್ಕೆ ನಮ್ಮ ಕ್ಷೇತ್ರದ ಜನ ಬೇಸರಗೊಂಡಿದ್ದಾರೆ ಎಂದು ಅವರು ಹೇಳಿದ್ರು.

  • ನನ್ನನ್ನು ಗೆಲ್ಲಿಸಲು ನನ್ನ ಗುರುಗಳು ಬಂದಿದ್ದು, ಆನೆಬಲ ಸಿಕ್ತು: ಉಮೇಶ್ ಜಾಧವ್

    ನನ್ನನ್ನು ಗೆಲ್ಲಿಸಲು ನನ್ನ ಗುರುಗಳು ಬಂದಿದ್ದು, ಆನೆಬಲ ಸಿಕ್ತು: ಉಮೇಶ್ ಜಾಧವ್

    ಕಲಬುರಗಿ: ಶಾಸಕ ಸ್ಥಾನಕ್ಕೆ ನೀಡಿದ ರಾಜೀನಾಮೆ ಅಧಿಕೃತವಾಗಿ ಅಂಗಿಕಾರವಾಗದೇ ಇದ್ದರೂ ಲೋಕಸಭಾ ಚುನಾವಣೆಯ ಸ್ಪರ್ಧೆ ಖಚಿತ ಎಂದು ಕಲಬುರಗಿಯಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಉಮೇಶ್ ಜಾಧವ್ ಹೇಳಿದ್ದಾರೆ.

    ಕಲಬುರಗಿಯಲ್ಲಿ ಮಾತನಾಡಿದ ಅವರು, ನನಗೆ ಟಿಕೆಟ್ ನೀಡಿಕೆಯ ಬಗ್ಗೆ ಕೆಲ ಶಕ್ತಿಗಳು ವಿವಾದ ಸೃಷ್ಟಿಸಲು ಮುಂದಾಗಿದ್ದಾರೆ. ಇದೀಗ ನನ್ನ ಗೆಲ್ಲಿಸಲು ನನ್ನ ಗುರುಗಳಾದ ಮಾಲಕರೆಡ್ಡಿ ಸಹ ಬಿಜೆಪಿ ಬಂದಿದ್ದಾರೆ. ಮಾಲಕರೆಡ್ಡಿ ಸೇರ್ಪಡೆಯಿಂದ ನನಗೆ ಆನೆ ಬಲ ಬಂದಂತಾಗಿದೆ ಎಂದು ಹೇಳಿದ್ದಾರೆ.

    ನನ್ನ ಸ್ಪರ್ಧೆ ಬಗ್ಗೆ ಜನರು ತಲೆಕೆಡಿಸಿಕೊಳ್ಳಬಾರದು. ಆಡಳಿತ ಯಂತ್ರ ದುರುಪಯೋಗವಾಗಲು ಬಿಡುವುದಿಲ್ಲ. ಅಧಿಕಾರಿಗಳು ನಿಸ್ಪಕ್ಷವಾಗಿ ಚುನಾವಣೆ ನಡೆಸುತ್ತಾರೆ. ಪಕ್ಷದ ಮುಖಂಡರ ಜೊತೆ ಚರ್ಚಿಸಿ ನಾಮಪತ್ರ ಸಲ್ಲಿಸುವ ದಿನಾಂಕ ಫೈನಲ್ ಮಾಡುವುದಾಗಿ ಹೇಳಿದ್ದರು.

    ಇದೇ ಸಂದರ್ಭದಲ್ಲಿ ಶಹಬಾದ್ ನಗರಸಭೆಯ ಜೆಡಿಎಸ್ ಸದಸ್ಯ ಜಬೀಖಾನ್ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಈ ಮೂಲಕ ಮುಸ್ಲಿಂ ಮತವನ್ನು ಸೆಳೆಯಲು ಉಮೇಶ್ ಜಾಧವ್ ಜಬೀಖಾನ್ ಅವರನ ಮನ ಒಲಿಸಿ ಬಿಜೆಪಿಗೆ ಸೇರ್ಪಡೆಗೊಳಿಸಿದ್ದಾರೆ ಎಂದು ಹೇಳಲಾಗುತ್ತಿದೆ.

  • ಉಮೇಶ್ ಜಾಧವ್ ರಾಜೀನಾಮೆ ಅಂಗೀಕರಿಸದಂತೆ ಸ್ಪೀಕರ್‌ಗೆ ಕಾಂಗ್ರೆಸ್ ಮನವಿ

    ಉಮೇಶ್ ಜಾಧವ್ ರಾಜೀನಾಮೆ ಅಂಗೀಕರಿಸದಂತೆ ಸ್ಪೀಕರ್‌ಗೆ ಕಾಂಗ್ರೆಸ್ ಮನವಿ

    ಬೆಂಗಳೂರು: ಕಾಂಗ್ರೆಸ್‍ಗೆ ಗುಡ್‍ಬೈ ಹೇಳಿ ಬಿಜೆಪಿ ಸೇರಿದ ಉಮೇಶ್ ಜಾಧವ್ ಅವರಿಗೆ ಬಿಸಿ ಮುಟ್ಟಿಸಲು ಕೈ ನಾಯಕರು ಪ್ಲಾನ್ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಶಾಸಕರು ಸಲ್ಲಿಸಿದ ರಾಜೀನಾಮೆ ಅಂಗೀಕರಿಸದಂತೆ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಕಾಂಗ್ರೆಸ್ ಮನವಿ ಮಾಡಿಕೊಂಡಿದೆ.

    ಉಮೇಶ್ ಜಾಧವ್ ಅವರ ರಾಜೀನಾಮೆ ಅಂಗೀಕರಿಸುವ ಮೊದಲು ನಮ್ಮ ದೂರನ್ನು ಇತ್ಯರ್ಥಗೊಳಿಸಿ. ನಮ್ಮ ದೂರು ಇತ್ಯರ್ಥಗೊಳ್ಳದೇ ಇರುವುದರಿಂದ ರಾಜೀನಾಮೆ ಅಂಗೀಕಾರ ಬೇಡ ಎಂದು ಸಿಎಲ್‍ಪಿ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ಪಿ.ಆರ್.ರಮೇಶ್ ಅವರು ಪತ್ರದ ಮೂಲಕ ಮನವಿ ಸಲ್ಲಿಸಿದ್ದಾರೆ.

    ಈ ಸಂಬಂಧ ಮನವಿ ಪತ್ರ ನೀಡಲು ಸ್ಪೀಕರ್ ರಮೇಶ್ ಕುಮಾರ್ ಅವರು ಕಚೇರಿ ಪಿ.ಆರ್.ರಮೇಶ್ ತೆರಳಿದ್ದರು. ಆದರೆ ಸ್ಪೀಕರ್ ಇಲ್ಲದ ಕಾರಣ ಕಾರ್ಯದರ್ಶಿಗೆ ಮನವಿ ಸಲ್ಲಿಸಿದ್ದಾರೆ.

    ಮನವಿ ಪತ್ರ ನೀಡಿರುವ ಕುರಿತು ಪ್ರತಿಕ್ರಿಯೆ ನೀಡಿದ ಪಿ.ಆರ್.ರಮೇಶ್ ಅವರು, ಉಮೇಶ್ ಜಾಧವ್ ವಿರುದ್ಧ ಪಕ್ಷಾಂತರ ಕಾಯಿದೆ ಅಡಿ ದೂರು ಕೊಟ್ಟಿದ್ದೇವೆ. ಶಾಸಕರು ಸಿಎಲ್‍ಪಿ ಹಾಗೂ ಅಧಿವೇಶಕ್ಕೆ ಗೈರಾಗಿದ್ದರು. ಈ ಸಂಬಂಧ ನೋಟಿಸ್ ನೀಡಿದ್ದರೂ ಯವುದೇ ಸೂಕ್ತ ಉತ್ತರ ಕೊಟ್ಟಿಲ್ಲ. ಹೀಗಾಗಿ ಉಮೇಶ್ ಜಾಧವ್ ಅವರು ನೀಡಿರುವ ರಾಜೀನಾಮೆ ಅಂಗೀಕಾರ ಮಾಡಬಾರದು. ಎರಡು ವಿಚಾರಗಳನ್ನು ಒಮ್ಮೆಯೇ ವಿಚಾರಣೆ ಮಾಡುವಂತೆ ಮನವಿ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

  • ಬಂಡಾಯ ಶಾಸಕರ ವಿರುದ್ಧ ದಾಖಲಾದ ದೂರಿನ ಕಥೆಯ ಏನಾಯ್ತು? – ಇಲ್ಲಿದೆ ಪಿನ್ ಟು ಪಿನ್ ಮಾಹಿತಿ

    ಬಂಡಾಯ ಶಾಸಕರ ವಿರುದ್ಧ ದಾಖಲಾದ ದೂರಿನ ಕಥೆಯ ಏನಾಯ್ತು? – ಇಲ್ಲಿದೆ ಪಿನ್ ಟು ಪಿನ್ ಮಾಹಿತಿ

    ಬೆಂಗಳೂರು: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಶಾಸಕ ಉಮೇಶ್ ಜಾಧವ್ ರಾಜೀನಾಮೆ ಇದೂವರೆಗೂ ಅಂಗೀಕಾರವಾಗಿಲ್ಲ. ಉಮೇಶ್ ಜಾಧವ್ ರಾಜೀನಾಮೆಗೂ ಮುನ್ನವೇ ಕಾಂಗ್ರೆಸ್ ನಾಲ್ವರು ಶಾಸಕರ ವಿರುದ್ಧ ವಿಪ್ ಉಲ್ಲಂಘನೆಯ ದೂರನ್ನು ಸ್ವೀಕರ್ ಅವರಿಗೆ ಸಲ್ಲಿಸಿದ್ದರು. ರಾಜೀನಾಮೆ ನೀಡಿ ಎರಡು ವಾರ ಕಳೆದರೂ ಅಂಗೀಕಾರವಾಗಿಲ್ಲ. ರಾಜೀನಾಮೆ ಅಂಗೀಕಾರವಾಗದ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿವೆ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿವೆ.

    ಪಕ್ಷಾಂತರ ನಿಷೇಧ ಕಾಯ್ದೆಯ ಅನ್ವಯ ಅಮಾನತು ಶಿಫಾರಸ್ಸಿಗೆ ಒಳಗಾದ ನಾಲ್ವರು ಶಾಸಕರ ಪೈಕಿ ಉಮೇಶ್ ಜಾದವ್ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ನೀಡಿ ಎರಡು ವಾರ ಕಳೆದರೂ ಇನ್ನು ಅಂಗೀಕಾರವಾಗಿಲ್ಲ. ಕಲಬುರಗಿಯಿಂದ ಬಿಜೆಪಿ ಅಭ್ಯರ್ಥಿಯಾಗಿ ಲೋಕಸಭೆಗೆ ಸ್ಪರ್ಧಿಸಲು ಮುಂದಾಗಿರುವ ಉಮೇಶ್ ಜಾದವ್ ಗೆ ರಾಜೀನಾಮೆ ಅಂಗೀಕಾರವಾಗದ್ದು ದೊಡ್ಡ ಸಂಕಷ್ಟ ತಂದಿಟ್ಟಿದೆ. ಉಮೇಶ್ ಜಾಧವ್ ರಾಜೀನಾಮೆ ಅಂಗೀಕಾರವಾಗದೇ ಅತ್ತ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡುವುದು ಹೇಗೆ ಎಂಬ ಗೊಂದಲದಲ್ಲಿದ್ದಾರೆ ಎನ್ನಲಾಗುತ್ತಿದೆ.

    ರಾಜೀನಾಮೆಗೆ ಮೊದಲೇ ಶಾಸಕ ಸ್ಥಾನ ಅನರ್ಹತೆಗೆ ಕಾಂಗ್ರೆಸ್ ಶಿಫಾರಸ್ಸು ಮಾಡಿದ್ದು ರಾಜಕೀಯ ಜೀವನಕ್ಕೆ ಅಪಾಯಕಾರಿ ಆಗುತ್ತಾ ಎಂಬ ಗೊಂದಲದಲ್ಲಿ ಹಲವು ನಾಯಕರಿದ್ದಾರೆ. ಆದರೆ ಇದು ಕೇವಲ ಉಮೇಶ್ ಜಾದವ್ ಒಬ್ಬರ ಕಾರಣದಿಂದ ಗೊಂದಲವಾಗಿ ಉಳಿದಿದೆ ಎನ್ನುವಂತಿಲ್ಲ ಎಂದು ಕಾಂಗ್ರೆಸ್ ಮೂಲಗಳು ಹೇಳುತ್ತಿವೆ. ಈ ಮೂಲಕ ಉಳಿದ ಮೂವರು ಬಂಡಾಯಗಾರರಾದ ನಾಗೇಂದ್ರ, ರಮೇಶ್ ಜಾರಕಿಹೊಳಿ ಹಾಗೂ ಮಹೇಶ್ ಕುಮ್ಟಳ್ಳಿಯವರನ್ನ ಬೆದರಿಸುವ ತಂತ್ರ ಎಂದು ಹೇಳಲಾಗುತ್ತಿದೆ.

    ಉಮೇಶ್ ಜಾಧವ್ ರಾಜೀನಾಮೆ ಬೆನ್ನಲ್ಲೇ ಉಳಿದ ಅತೃಪ್ತ ಶಾಸಕರು ರಾಜೀನಾಮೆ ನೀಡಲು ಮುಂದಾಗಿದ್ದಾರಂತೆ. ಒಂದು ವೇಳೆ ಮುಂದಿನ ದಿನಗಳಲ್ಲಿ ಬಂಡಾಯ ಶಾಸಕರು ರಾಜೀನಾಮೆಗೆ ಮುಂದಾದ್ರೆ, ಪಕ್ಷಾಂತರ ನಿಷೇಧ ಕಾಯ್ದೆ ಅಸ್ತ್ರ ಬಳಸಿ ಶಾಸಕರನ್ನು ಇಕ್ಕಟ್ಟಿಗೆ ಸಿಲುಕಿಸಲು ಕಾಂಗ್ರೆಸ್ ರಣತಂತ್ರವನ್ನು ರೂಪಿಸಿದೆ ಎನ್ನಲಾಗುತ್ತಿದೆ. ಒಟ್ಟಾರೆ ಶಾಸಕರ ರಾಜೀನಾಮೆ ಹಾಗೂ ಪಕ್ಷಂತರ ನಿಷೇಧ ಕಾಯ್ದೆ ಅನ್ವಯ ಅನರ್ಹತೆ ಶಿಫಾರಸ್ಸು ಎರಡು ಬೆಳವಣಿಗೆಗಳು ಸಾಕಷ್ಟು ಗೊಂದಲಕ್ಕೆ ಕಾರಣವಾಗಿದೆ.

    ಕಾನೂನು ಪಂಡಿತರು ಹೇಳೋದು ಏನು?
    ಯಾವುದೇ ಪಕ್ಷದ ಅಭ್ಯರ್ಥಿಯಾಗಿ ಲೋಕಸಭೆ ಚುನಾವಣೆಗೆ ಜಾಧವ್ ಈಗ ಸ್ಪರ್ಧಿಸಬಹುದು ಎಂದು ಕಾನೂನು ಪಂಡಿತರು ಹೇಳುತ್ತಾರೆ. ಈಗಾಗಲೇ ರಾಜೀನಾಮೆ ಸಲ್ಲಿಸಿದ್ದು ಮಾತ್ರವಲ್ಲದೇ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ನೀಡಿದ್ದಾರೆ. ಸ್ಪೀಕರ್ ರಮೇಶ್ ಕುಮಾರ್ ಅವರ ನಿವಾಸಕ್ಕೆ ತೆರಳಿ ರಾಜೀನಾಮೆ ನೀಡಿದ್ದರಿಂದ ಈಗ ರಾಜೀನಾಮೆ ಅಂಗಿಕಾರವಾಗಬೇಕಿತ್ತು. ಈ ಹಿಂದೆ ಸಿದ್ದರಾಮಯ್ಯ ಜಾರಿ ಮಾಡಿದ್ದ ವಿಪ್‍ಗೆ ಮಾನ್ಯತೆ ನೀಡಿ ಜಾಧವ್ ಮತ್ತು ಇತರರು ವಿಧಾನಸಭೆ ಅಧಿವೇಶನಕ್ಕೆ ಹಾಜರಾಗಿದ್ದಾರೆ. ಹೀಗಾಗಿ ಅನರ್ಹತೆ ಪ್ರಕರಣದಲ್ಲೂ ಇವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಇದನ್ನು ಹೊರತು ಪಡಿಸಿ ಕ್ರಮ ಕೈಗೊಳ್ಳಲು ಬೇರೆ ಯಾವುದಾದರೂ ಆಯಾಮಗಳನ್ನು ಸ್ಪೀಕರ್ ಹುಡುಕಬಹುದು. ವಿಳಂಬ ಮಾಡಿದರೂ ಅವರು ರಾಜೀನಾಮೆ ಅಂಗೀಕಾರವಾಗಲೇಬೇಕು ಎಂದು ಕಾನೂನು ಪಂಡಿತರು ಹೇಳುತ್ತಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv