Tag: umesh jadhav

  • ಒಂದು ಅವಕಾಶ ಕೊಡಿ, 5 ವರ್ಷ ನಿಮ್ಮ ಸೇವಕನಾಗಿ ಕೆಲ್ಸ ಮಾಡ್ತೀನಿ : ಉಮೇಶ್ ಜಾಧವ್

    ಒಂದು ಅವಕಾಶ ಕೊಡಿ, 5 ವರ್ಷ ನಿಮ್ಮ ಸೇವಕನಾಗಿ ಕೆಲ್ಸ ಮಾಡ್ತೀನಿ : ಉಮೇಶ್ ಜಾಧವ್

    – ಕುಸ್ತಿ ಆಡಲು ಸಿದ್ಧನಾಗಿದ್ದೇನೆ, ಸಾಥ್ ಕೊಡಿ
    – ಪ್ರಿಯಾಂಕ್ ಖರ್ಗೆ ಕ್ಷೇತ್ರದಲ್ಲೇ ಹೆಚ್ಚು ಮಕ್ಕಳು ಸಾವನಪ್ಪಿದ್ದಾರೆ
    – ವೇದಿಕೆ ಮೇಲೆ ಸಾಷ್ಟಾಂಗ ನಮಸ್ಕಾರ ಹಾಕಿದ ಉಮೇಶ್ ಜಾಧವ್

    ಕಲಬುರಗಿ: ನಿಮಗೆ ಕೈ ಜೋಡಿಸಿ ವಿನಂತಿ ಮಾಡುತ್ತೇನೆ ನನಗೆ ಒಂದು ಅವಕಾಶ ಕೊಡಿ. ಮುಂದಿನ 5 ವರ್ಷಗಳ ಕಾಲ ನಿಮ್ಮ ಸೇವಕನಾಗಿ ಕೆಲಸ ಮಾಡುತ್ತೇನೆ ಎಂದು ಕಲಬುರಗಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಉಮೇಶ್ ಜಾಧವ್ ಮತದಾರರಲ್ಲಿ ವಿನಂತಿ ಮಾಡಿಕೊಂಡಿದ್ದಾರೆ.

    ನಗರದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ನಮ್ಮ ಹಿಂದೆ ದೊಡ್ಡ ಶಕ್ತಿಗಳಿವೆ. ಹೀಗಾಗಿ ಕಲಬುರಗಿ ಜಿಲ್ಲೆಯ ಜನ ನನ್ನ ಮತ ಹಾಕಿ ಗೆಲ್ಲಿಸಬೇಕು. ರಾಜ್ಯ ಸರ್ಕಾವು ಕಾಂಗ್ರೆಸ್ ಸಂಸದೀಯ ನಾಯಕ, ಕಲಬುರಗಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಅವರ ಪರ ಕೆಲಸ ಮಾಡುತ್ತಿದೆ. ಯಾರಿಗೂ ನೀವು ಹೆದರದೇ ನನಗೆ ಮತ ಹಾಕಿ ಎಂದು ವೇದಿಕೆ ಮೇಲೆ ಮತ್ತೊಮ್ಮೆ ಸಾಷ್ಟಾಂಗ ನಮಸ್ಕಾರ ಮಾಡಿ ಮತದಾರರಿಗೆ ಮನವಿ ಮಾಡಿಕೊಂಡರು.

    ಸೋಲಿಲ್ಲದ ಹಾಗೂ ಕಲಬುರಗಿ ಲೋಕಸಭಾ ಕ್ಷೇತ್ರವನ್ನು ಅಭಿವೃದ್ಧಿ ಮಾಡದ ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಅವರು ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಗಾಗಿ ಏನು ಮಾಡಿದ್ದಾರೆ? ಕಲಬುರಗಿಗೆ ಮೋದಿ ಕೊಡುಗೆ ಏನು ಅಂತ ಕೇಳುತ್ತಾರೆ. ಆದರೆ ಗುರುಮಠಕಲ್ ಕ್ಷೇತ್ರಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರ ಕೊಡುಗೆ ಏನು ಎಂದು ಪ್ರಶ್ನಿಸಿದರು.

    ಮಲ್ಲಿಕಾರ್ಜುನ ಖರ್ಗೆ ಅವರು 371(ಜೆ) ಜಾರಿಗಾಗಿ ಒಂದೇ ಒಂದು ಪತ್ರ ಬರೆದಿಲ್ಲ. ಜಿಲ್ಲೆಯಲ್ಲಿರುವ ಅನೇಕ ಕಾರ್ಖಾನೆಗಳು ಬಂದ್ ಆಗಿವೆ. ಸಚಿವ ಪ್ರಿಯಾಂಕ್ ಖರ್ಗೆ ಅವರ ಕ್ಷೇತ್ರದಲ್ಲಿಯೇ ಅತಿ ಹೆಚ್ಚು ಮಕ್ಕಳು ಸಾವನಪ್ಪಿದ್ದಾರೆ. ಅವರು ತಂದೆಯ ಮಾರ್ಗದರ್ಶನದಲ್ಲಿ ನಡೆಯುತ್ತಿದ್ದಾರೆ. ನಾವು ಅವರ ವಿರುದ್ಧ ಕುಸ್ತಿ ಆಡಲು ಸಿದ್ಧನಾಡಿದ್ದೇನೆ. ಹೀಗಾಗಿ ನೀವು ನನಗೆ ಸಾಥ್ ನೀಡಬೇಕು ಎಂದು ಮತದಾರರಿಗೆ ಹೇಳಿಕೊಂಡರು.

    ನನ್ನ ನಾಮಪತ್ರ ರದ್ದು ಮಾಡಲು ಮಲ್ಲಿಕಾರ್ಜುನ ಖರ್ಗೆ ಅವರು ಹಲವು ಯತ್ನಗಳನ್ನು ಮಾಡಿದ್ದಾರೆ. ನಾನು ಹಣ ಕೊಟ್ಟು ಜನರನ್ನು ಪ್ರಚಾರಕ್ಕೆ ಕರೆಸಿಲ್ಲ. ಪ್ರಿಯಾಂಕ್ ಖರ್ಗೆ ಅವರು ಸೋಲಿನ ಭೀತಿಯಿಂದಾಗಿ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು.

  • ಬಿಜೆಪಿಗೆ ಬಂದಿದ್ದು ತಪ್ಪಾಗಿದೆ ಹೇಳಿಕೆಗೆ ಜಾಧವ್ ಸ್ಪಷ್ಟನೆ

    ಬಿಜೆಪಿಗೆ ಬಂದಿದ್ದು ತಪ್ಪಾಗಿದೆ ಹೇಳಿಕೆಗೆ ಜಾಧವ್ ಸ್ಪಷ್ಟನೆ

    ಕಲಬುರಗಿ: ಬಿಜೆಪಿ ಪಕ್ಷಕ್ಕೆ ಬಂದಿರುವುದು ತಪ್ಪಾಗಿದೆ ಎಂಬ ಹೇಳಿಕೆಗೆ ಅಭ್ಯರ್ಥಿ ಉಮೇಶ್ ಜಾಧವ್ ಸ್ಪಷ್ಟನೆ ನೀಡಿದ್ದಾರೆ.

    ಗಂಡ ಹೆಂಡ್ತಿ ಮದುವೆಯಾದ ಬಳಿಕ ಸೆಟ್ ಆಗಲು ಸ್ವಲ್ಪ ದಿನ ಬೇಕಾಗುತ್ತದೆ. ಹೀಗಾಗಿ ಸೆಟ್ ಆಗಲು ನಿಮ್ಮ ಆಶೀರ್ವಾದ ಬೇಕು ಎಂದು ಗೋವಿಂದ ಕಾರಜೋಳ ಅವರ ಬಳಿ ಮನವಿ ಮಾಡಿದ್ದೇನೆ. ಇದನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ ಎಂದು ಹೇಳಿದ್ರು.

    ನಾನು ತುಂಬಾ ಸಂತೋಷದಿಂದ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದೇನೆ. ನೀವು 10 ಸಲ ಬೇಕಾದ್ರೆ ರಿವೈಂಡ್ ಮಾಡಿ ನೋಡಿ. ನಾನು ಬಿಜೆಪಿ ಸೇರಿ ತಪ್ಪು ಮಾಡಿದ್ದೇನೆ ಎಂದು ಎಲ್ಲಿ ಕೂಡ ಹೇಳಿಲ್ಲ. ನಾನು ಇನ್ನು ಪಕ್ಷದಲ್ಲಿ ಸೆಟ್ ಆಗುತ್ತಿದ್ದೇನೆ ಎಂದು ಮಾತ್ರ ಹೇಳಿದ್ದೇನೆ ಅಂದ್ರು.

    ಮೂರು ದಿನದ ಹಿಂದೆ ಖುದ್ದು ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಸಹ ಭಾಷಣದ ಭರಾಟೆಯಲ್ಲಿ ಎಡವಿದ್ದರು. ರಾಜೀವ್ ಗಾಂಧಿ ತುಂಡು ತುಂಡಾಗಿ ಹತ್ಯೆ ಎಂದು ಹೇಳುವ ಬದಲು ರಾಹುಲ್ ಗಾಂಧಿ ಹತ್ಯೆ ಎಂದು ಹೇಳಿದ್ದರು. ಸ್ವಲ್ಪ ಕಮ್ಯೂನಿಕೇಷನ್ ಗ್ಯಾಪ್‍ನಿಂದ ಹೀಗಾಗುತ್ತದೆ ಎಂದು ಹೇಳುವ ಮೂಲಕ ತನ್ನ ತಪ್ಪನ್ನು ಸಮರ್ಥಿಸಿಕೊಂಡರು.

    ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನನ್ನ ಗೆಲುವು ನಿಶ್ಚಿತ ಎಂದು ಭರವಸೆ ವ್ಯಕ್ತಪಡಿಸಿದರು.

  • ಇದು ನಂಗೆ ಡು ಆರ್ ಡೈ, ರಾಜಕೀಯವಾಗಿ ಇದು ಲಾಸ್ಟ್ ಚಾನ್ಸ್: ಜಾಧವ್

    ಇದು ನಂಗೆ ಡು ಆರ್ ಡೈ, ರಾಜಕೀಯವಾಗಿ ಇದು ಲಾಸ್ಟ್ ಚಾನ್ಸ್: ಜಾಧವ್

    ಕಲಬುರಗಿ: ಬಿಜೆಪಿ ನಾಯಕರೆಲ್ಲ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿ ಗೆದ್ದೇ ಗೆಲ್ತಾರೆ ಎಂದು ಓಡಾಡುತ್ತಿದ್ದಾರೆ. ಆದರೆ ಬಿಜೆಪಿ ಅಭ್ಯರ್ಥಿ ಮಾತ್ರ ಇದು ನನಗೆ ಡು ಆರ್ ಡೈ. ಇದು ನನಗೆ ಕೊನೆಯ ಅವಕಾಶ ಎಂದು ಹೇಳಿದ್ದಾರೆ.

    ಹೌದು. ಕಲಬುರಗಿ ಬಿಜೆಪಿ ಅಭ್ಯರ್ಥಿ ಡಾ.ಉಮೇಶ್ ಜಾಧವ್ ಅವರು ಶುಕ್ರವಾರ ರಾತ್ರಿ ಕಲಬುರಗಿಯ ಎಸ್‍ಸಿ ಸಮಾವೇಶದಲ್ಲಿ ಮಾತನಾಡುತ್ತಾ ಇದು ನನಗೆ ಡು ಆರ್ ಡೈ ಅನ್ನುವಂತ ಸ್ಥಿತಿ. ನನಗೆ ಇನ್ನೂ ಸೆಟ್ ಆಗುತ್ತಿಲ್ಲ. ರಾಜಕೀಯವಾಗಿ ಇದು ಲಾಸ್ಟ್ ಚಾನ್ಸ್. ಹೀಗಾಗಿ ನೀವು ನನ್ನನ್ನ ಕೈ ಬಿಡಬೇಡಿ. ಈ ಯುದ್ಧದಲ್ಲಿ ನನ್ನನ್ನು ಗೆಲ್ಲಿಸಬೇಕು ಎಂದು ಜನರನ್ನ ಮನವಿ ಮಾಡಿದ್ದಾರೆ.

     

    ಇದೇ ವೇಳೆ ಗೋವಿಂದ ಕಾರಜೋಳ ಅವರೇ ನಿಮ್ಮ ಆಶೀರ್ವಾದ ನಮ್ಮ ಮೇಲೆ ಇರಬೇಕು ಎಂದು ವಿನಂತಿಸಿಕೊಂಡರು. ಒಟ್ಟಿನಲ್ಲಿ ಇದೀಗ ಖರ್ಗೆ ವಿರುದ್ಧ ಸ್ಪರ್ಧೆ ಮಾಡಿ ಸಂಸದನಾಗುವ ಕನಸು ಕಂಡಿದ್ದ ಉಮೇಶ್ ಜಾಧವ್ ಈ ರೀತಿ ಹೇಳಿದ್ಯಾಕೆ ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.

     

  • ನೀವು ಧೀರ, ಶೂರ ಎಂದು ಹೊಗಳಿದವನು ಪಕ್ಷ ಬಿಟ್ಟು ಹೋದ: ಚಿಂಚನಸೂರಿಗೆ ಮಾಜಿ ಸಿಎಂ ಟಾಂಗ್

    ನೀವು ಧೀರ, ಶೂರ ಎಂದು ಹೊಗಳಿದವನು ಪಕ್ಷ ಬಿಟ್ಟು ಹೋದ: ಚಿಂಚನಸೂರಿಗೆ ಮಾಜಿ ಸಿಎಂ ಟಾಂಗ್

    – ಖರ್ಗೆ ಬೆನ್ನಿಗೆ ಚೂರಿ ಹಾಕಿದ ಜಾಧವ್‍ರನ್ನು ಹೀನಾಯವಾಗಿ ಸೋಲಿಸಬೇಕು
    – ಖರ್ಗೆ ಎದುರಿಸುವ ಶಕ್ತಿ ಮೋದಿಗಿಲ್ಲ

    ಯಾದಗಿರಿ: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಗುರುಮಠಕಲ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸೈದಾಪುರದಲ್ಲಿ ನಡೆದ ಬೃಹತ್ ಕಾಂಗ್ರೆಸ್ ಸಮಾವೇಶದಲ್ಲಿ ಪಕ್ಷ ಬಿಟ್ಟು ಹೋದ ನಾಯಕರನ್ನು ನೆನೆದು ವಾಗ್ದಾಳಿ ನಡೆಸಿದ್ದಾರೆ.

    ಮಾಜಿ ಸಚಿವ ಬಾಬೂರಾವ್ ಚಿಂಚನಸೂರ್ ಅವರು, ನೀವು ಚಂದ್ರ, ಧೀರ, ಶೂರ ಎಂದು ನನ್ನನ್ನು ಹೊಗಳಿದ್ದ. ನಿಮ್ಮನ್ನ ಬಿಟ್ಟು ಹೋಗಲ್ಲ ಎಂದು ಹೇಳಿದ ಅಸಾಮಿ ಇದೀಗ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿಕೊಂಡ. ಮಾಜಿ ಶಾಸಕರಾದ ಉಮೇಶ್ ಜಾಧವ್, ಮಾಲಿಕಯ್ಯ ಗುತ್ತೇದಾರ್, ಡಾ.ಎ.ಬಿ.ಮಾಲಕರೆಡ್ಡಿ ಎಲ್ಲರೂ ಬಂದರು, ಪಕ್ಷ ಬಿಟ್ಟು ಹೋದರು. ಆದರೆ ಅವರು ಯಾರೂ ನಿರ್ದಿಷ್ಟ ಕಾರಣ ನೀಡಲಿಲ್ಲ ಎಂದು ಅಸಮಾಧಾನ ಹೊರ ಹಾಕಿದರು.

    ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಯಾವತ್ತೂ ಅಧಿಕಾರದಿಂದ ಹೋಗಲಿಲ್ಲ. ಅಧಿಕಾರವೇ ಅವರ ಹಿಂದೆ ಬಂದಿದೆ. ಕಲಬುರಗಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ಕಾಂಗ್ರೆಸ್‍ನಲ್ಲಿದ್ದಾಗ ಅವರು ಹೇಳಿದ ಎಲ್ಲ ಕೆಲಸವನ್ನು ಮಾಡಿಕೊಟ್ಟೆ. ಆದರೆ ಪಕ್ಷ ಬಿಟ್ಟು ಹೋದರು. ಮುಂಬೈಗೆ ಹೋಗಿ ಬಿಜೆಪಿ ಹತ್ತಿರ ದುಡ್ಡು ತೆಗೆದುಕೊಂಡು ಅವರ ಪಕ್ಷ ಸೇರಿಕೊಂಡರು. ಉಮೇಶ್ ಜಾಧವ್ ಅವರಿಗೆ ನಾಚಿಕೆ ಆಗಬೇಕು. ಮಲ್ಲಿಕಾರ್ಜುನ ಖರ್ಗೆ ಅವರ ಬೆನ್ನಿಗೆ ಚೂರಿ ಹಾಕಿದ ಅವರನ್ನು ಹೀನಾಯವಾಗಿ ಸೋಲಿಸಬೇಕು. ಆಗ ಅವರಿಗೆ ಬುದ್ಧಿ ಬರುತ್ತದೆ ಎಂದು ಗುಡುಗಿದರು.

    ಮಂತ್ರಿ ಸ್ಥಾನ ನೀಡುತ್ತೇವೆ ಎಂದು ಹೇಳಿದರೂ ಉಮೇಶ್ ಜಾಧವ್ ಪಕ್ಷ ಬಿಟ್ಟರು. ಈಗ ದುಡ್ಡು ಪಡೆದು ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಅವರಿಗೆ ಮರ್ಯಾದೆ ಇಲ್ಲ. ಮಲ್ಲಿಕಾರ್ಜುನ ಖರ್ಗೆ ಅವರನ್ನು ಎದುರಿಸುವಷ್ಟು ಶಕ್ತಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಇಲ್ಲ. ಹೀಗಾಗಿ ಪ್ರಧಾನಿ ಮೋದಿ ಸಂಸತ್‍ಗೆ ಬರುವುದಿಲ್ಲ. ಸಂಸತ್‍ನಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ಸ್ಥಾನ ಭರ್ತಿ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು.

    ಬಿಜೆಪಿಯವರು ಎಲ್ಲರೂ ಮಾನಗೆಟ್ಟವರು. ಅದಕ್ಕಾಗಿಯೇ ನನ್ನ ಮುಖ ನೋಡಬೇಡಿ, ಮೋದಿ ಮುಖ ನೋಡಿ ಮತ ಹಾಕಿ ಎನ್ನುತ್ತಿದ್ದಾರೆ. ಪ್ರಧಾನಿ ಮೋದಿ ಅವರು ಐದು ವರ್ಷ ಏನು ಮಾಡಿದರು ಎಂದು ನಾವು ನೋಡಿದ್ದೇವೆ. ನಾನು ಮುಖ್ಯಮಂತ್ರಿಯಾಗಿದ್ದಾಗ ಸೇವಲಾಲ ಜಯಂತಿ ಆಚರಣೆ ಮಾಡಿದೆ. ಕೋಲಿ ಹಾಗೂ ಕಬ್ಬಲಿಗ ಸಮುದಾಯವನ್ನು ಎಸ್‍ಟಿಗೆ ಸೇರಿಸಲು ಒತ್ತಡ ಹಾಕಿದ್ದೆ. ಅಂಬಿಗರ ಚೌಡಯ್ಯ ಜಯಂತಿ ಮಾಡಿದ್ದು ನಾನು. ಮಾಜಿ ಸಚಿವ ಬಾಬೂರಾವ್ ಚಿಂಚನಸೂರ್, ಉಮೇಶ್ ಜಾಧವ್ ಏನು ಮಾಡಿದ್ದಾರೆ ಎಂದು ಕಿಡಿಕಾರಿದರು.

    ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯವರು ಹಿಂದುಳಿದವರಿಗೆ ಒಂದೇ ಒಂದು ಟಿಕೆಟ್ ನೀಡಿಲ್ಲ. ಬಿಜೆಪಿ ಮುಖಂಡ ಕೆ.ಎಸ್ ಈಶ್ವರಪ್ಪ ಬಾಯ್ಬಡಕ. ಅವನ ಯೋಗ್ಯತೆಗೆ ಬೆಂಕಿ ಹಾಕ, ಕುರುಬ ಸಮಾಜ ಒಬ್ಬ ನಾಯಕನಿಗೆ ಟಿಕೆಟ್ ಕೊಡಿಸಲು ಶ್ರಮಿಸಲಿಲ್ಲ. ಕೇಂದ್ರ ಸಚಿವ ಅನಂತ್‍ಕುಮಾರ್ ಹೆಗ್ಡೆ ಗ್ರಾಮ ಪಂಚಾಯತ್ ಸದಸ್ಯರಾಗಲು ಕೂಡ ನಾಲಾಯಕ್. ಇಂತಹವನು ಸಂವಿಧಾನ ಬದಲಿಸುವ ಮಾತನಾಡುತ್ತಾನೆ ಎಂದು ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದರು.

  • ರಕ್ತದಲ್ಲಿ ಬರೆದುಕೊಡ್ತೇನೆ, ಜಾಧವ್ ಗೆಲ್ತಾರೆ: ಬಿಎಸ್‍ವೈ

    ರಕ್ತದಲ್ಲಿ ಬರೆದುಕೊಡ್ತೇನೆ, ಜಾಧವ್ ಗೆಲ್ತಾರೆ: ಬಿಎಸ್‍ವೈ

    – ವೇದಿಕೆಯಲ್ಲಿ ಜಾಧವ್ ಸಾಷ್ಟಾಂಗ ನಮಸ್ಕಾರ

    ಕಲಬುರಗಿ: ತೀವ್ರ ಕುತೂಹಲ ಕೆರಳಿಸಿರುವ ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ ಇದೀಗ ಮತಗಳಿಸಲು ಪ್ಲಾನ್ ಮೇಲೆ ಪ್ಲಾನ್ ನಡೆಯುತ್ತಿದೆ. ಮೊನ್ನೆಯಷ್ಟೇ ವೀರಶೈವ ಲಿಂಗಾಯತ ಸಮಾವೇಶ ನಡೆಸಿದ ಕೈ ಪಡೆಗೆ ಶಾಕ್ ಎನ್ನುವಂತೆ ಬಿಜೆಪಿ ಮಂಗಳವಾರ ವೀರಶೈವ ಲಿಂಗಾಯತರ ಬೃಹತ್ ಸಮಾವೇಶ ನಡೆಸಿತು.

    ನಗರದ ಎನ್‍ವಿ ಕಾಲೇಜು ಆವರಣದಲ್ಲಿ ನಡೆದ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದ ಮಾಜಿ ಸಿಎಂ ಯಡಿಯೂರಪ್ಪ, ಇವತ್ತೇ ನಾನು ನನ್ನ ರಕ್ತದಲ್ಲಿ ಬರೆದು ಕೊಡುತ್ತೇನೆ ಉಮೇಶ್ ಜಾಧವ್ ಸೇರಿ 300 ಜನರು ಗೆದ್ದು ಮೋದಿಯವರನ್ನ ಮತ್ತೊಮ್ಮೆ ಪ್ರಧಾನಿ ಮಾಡುತ್ತೇವೆ ಎಂದರು.

    ಸಮಾವೇಶ ವೀರಶೈವ ಲಿಂಗಾಯತ ಮುಖಂಡರಾಗಿದ್ದರೂ ಬಿಜೆಪಿ ಅಭ್ಯರ್ಥಿ ಡಾ.ಉಮೇಶ್ ಜಾಧವ್ ಕೇಂದ್ರ ಬಿಂದುವಾಗಿದ್ದರು. ಶಾಸಕ ಸ್ಥಾನಕ್ಕೆ ರಿಸೈನ್ ಮಾಡಿ ರಿಸ್ಕ್ ತಗೊಂಡಿದ್ದೇನೆ. ಕಾಂಗ್ರೆಸ್ ನಾಯಕರ ವರ್ತನೆಗೆ ನೊಂದು ಹೊರಬಂದಿದ್ದೇನೆ. ನೀವು ನನಗೆ ಆಶೀರ್ವಾದ ಮಾಡಿ ಎಂದು ಬೇಡಿಕೊಂಡ್ರು. ನಂತರ ಇಡೀ ಜನಸ್ತೋಮದ ಮುಂದೆ ವೇದಿಕೆಯಲ್ಲಿ ಸಾಷ್ಟಾಂಗ ನಮಸ್ಕಾರ ಹಾಕಿದ್ರು. ಒಟ್ಟಾರೆ ಇಡೀ ಸಮಾವೇಶ ಖರ್ಗೆಗೆ ಟಾರ್ಗೆಟ್ ಮಾಡಿದ್ರೆ ಮತ್ತೊಂದೆಡೆ ಲಿಂಗಾಯತರ ಮತ ಸೆಳೆಯಲು ಸಹಾಯ ಮಾಡಿದಂತಿತ್ತು.

  • ಚಿಂಚೋಳಿಗೆ ಮೇ 19ರಂದು ಉಪಚುನಾವಣೆ

    ಚಿಂಚೋಳಿಗೆ ಮೇ 19ರಂದು ಉಪಚುನಾವಣೆ

    ಬೆಂಗಳೂರು: ಉಮೇಶ್ ಜಾಧವ್ ಅವರ ರಾಜೀನಾಮೆಯಿಂದ ತೆರವಾದ ಚಿಂಚೋಳಿ ವಿಧಾನಸಭೆ ಕ್ಷೇತ್ರದ ಉಪಚುನಾವಣೆ ಮೇ 19ರಂದು ನಡೆಯಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

    ಲೋಕಸಭಾ ಚುನಾವಣೆಯ ಅಂತಿಮ ಹಂತದ ಮತದಾನ ಮೇ 19 ರಂದು ನಡೆಯಲಿದೆ. ಅದೇ ದಿನವೇ ಚಿಂಚೋಳಿ ವಿಧಾನಸಭೆ ಕ್ಷೇತ್ರದ ಉಪಚುನಾವಣೆ ನಡೆಯಲಿದೆ. ಈಗಾಗಲೇ ಕುಂದಗೋಳ ಉಪ ಚುನಾವಣೆ ಕೂಡ ಮೇ 19ರಂದು ನಿಗದಿಯಾಗಿದೆ.

    ಚಿಂಚೋಳಿ ವಿಧಾನಸಭೆ ಕ್ಷೇತ್ರದ ಉಪಚುನಾವಣೆ ಸಂಬಂಧ ಏಪ್ರಿಲ್ 22ರಂದು ಚುನಾವಣಾ ಆಯೋಗವು ಅಧಿಸೂಚನೆ ಹೊರಡಿಸಲಿದೆ. ನಾಮಪತ್ರ ಸಲ್ಲಿಕೆಗೆ ಏಪ್ರಿಲ್ 29ರಂದು ಕಡೆಯ ದಿನವಾಗಿದ್ದು, ನಾಮಪತ್ರ ವಾಪಸ್ ಪಡೆಯಲು ಮೇ 2 ರಂದು ಕೊನೆಯ ದಿನ. ಈ ಮೂಲಕ ಮೇ 19ರಂದು ಮತದಾನ ನಡೆಯಲಿದ್ದು, ಮೇ 23ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.

    ಚಿಂಚೋಳಿ ವಿಧಾನಸಭೆ ಕ್ಷೇತ್ರದಿಂದ 2018ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಉಮೇಶ್ ಜಾಧವ್ ಅವರು ಜಯಗಳಿಸಿದ್ದರು. ಶಾಸಕ ಸ್ಥಾನಕ್ಕೆ ರಾಜೀನಾಮೆ ಬಿಜೆಪಿ ಸೇರ್ಪಡೆಯಾಗಿ ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.

  • ಬೆಕ್ಕಿಗೆ ಘಂಟೆ ಕಟ್ಟಲು ನಾನು ತಯಾರಾಗಿದ್ದೇನೆ: ಉಮೇಶ್ ಜಾಧವ್

    ಬೆಕ್ಕಿಗೆ ಘಂಟೆ ಕಟ್ಟಲು ನಾನು ತಯಾರಾಗಿದ್ದೇನೆ: ಉಮೇಶ್ ಜಾಧವ್

    ಕಲಬುರಗಿ: ಇಷ್ಟು ದಿನ ಬೆಕ್ಕು ಕದ್ದು ಮುಚ್ಚಿ ಹಾಲು ಕುಡಿಯುತಿತ್ತು. ಆದರೆ ಇನ್ನು ಮುಂದೆ ಆ ರೀತಿ ಆಗಲು ಬಿಡಲ್ಲ. ಬೆಕ್ಕಿಗೆ ಘಂಟೆ ಕಟ್ಟಲು ನಾನು ತಯಾರಿದ್ದೇನೆ ಎಂದು ಪರೋಕ್ಷವಾಗಿ ಕಲಬುರಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಉಮೇಶ್ ಜಾಧವ್ ವಾಗ್ದಾಳಿ ನಡೆಸಿದ್ದಾರೆ.

    ನಗರದ ಗಂಜ್ ಪ್ರದೇಶ, ಕಿರಾಣ ಬಜಾರ್, ಲೋಹರ್ ಗಲ್ಲಿ ಸೂಪರ್ ಮಾರ್ಕೆಟ್ ಸೇರಿದಂತೆ ವಿವಿಧೆಡೆ ಬೆಳಗ್ಗೆಯಿಂದಲೇ ಜಾಧವ್ ಅವರು ಮತಯಾಚಿಸಿದರು. ಪ್ರಚಾರ ಸಭೆಯಲ್ಲಿ ಮಾತಾನಾಡಿದ ಜಾಧವ್, ಬೆಕ್ಕಿನ ಕೊರಳಿಗೆ ಘಂಟೆ ಕಟ್ಟಲು ನಾನು ಸಿದ್ಧನಾಗಿದ್ದೇನೆ. ನೀವು ನನ್ನನ್ನು ಬೆಂಬಲಿಸಬೇಕು ಎಂದು ಮತದಾರರಲ್ಲಿ ಮನವಿ ಮಾಡಿದರು.

    ಈ ಬಾರಿ ಲೋಕಸಭೆ ಚುನಾವಣೆ ನನ್ನ ರಾಜಕೀಯ ಜೀವನದ ಅಳಿವು ಉಳಿವಿನ ಪ್ರಶ್ನೆಯಾಗಿದೆ. ಅವರು ಎಷ್ಟೇ ಹಣ ಖರ್ಚು ಮಾಡಿದರೂ ಇತಿಹಾಸ ಬದಲಿಸುವ ಕೆಲಸ ನಿಮ್ಮ ಕೈಲಿದೆ. ಹೈದರಾಬಾದ್ ಕರ್ನಾಟಕ ಪ್ರಾಂತ್ಯದಲ್ಲಿ ಇಂದಿಗೂ ಅನೇಕ ಜ್ವಲಂತ ಸಮಸ್ಯೆಗಳು ಕಾಡುತ್ತಿದೆ. ಸಮಸ್ಯೆಗಳ ಕೊನೆ ಕಾಣುವಂತೆ ಮಾಡಲು ನನಗೆ ಮತ ನೀಡಿ ಎಂದು ಕಾರ್ಯಕರ್ತರಿಗೆ ತಿಳಿಸಿದರು. ಇದೇ ವೇಳೆ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಕಿಡಿಕಾರಿದ ಜಾಧವ್, ರಾಮನವಮಿ ದಿನ ಕಾವಿ ಶಲ್ಯಾ, ಟೋಪಿ ಹಾಕಿಕೊಂಡು ಮೆರವಣಿಗೆಯಲ್ಲಿ ಭಾಗವಹಿಸುತ್ತಾರೆ. ಆದರೆ ಇವರು ಒಮ್ಮೆಯಾದರು ರಾಮನವಮಿ ಉತ್ಸವದಲ್ಲಿ ಭಾಗಿಯಾಗಿದ್ದರಾ ಎಂದು ಪ್ರಶ್ನಿಸಿದರು.

    ಇತ್ತ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿರುವ ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಅವರು, ಮಲ್ಲಿಕಾರ್ಜುನ ಖರ್ಗೆ ಹಳೆ ಎತ್ತು ಅದನ್ನ ಕೊಟ್ಟಿಗೆಯಲ್ಲಿ ಕಟ್ಟಿಹಾಕುತ್ತೇವೆ ಎಂದು ಕಿಡಿಕಾರಿದರು. ಈ ಹೇಳಿಕಗೆ ಟಾಂಗ್ ಕೊಟ್ಟ ಸಚಿವ ಪ್ರಿಯಾಂಕ್ ಖರ್ಗೆ ಅವರು, ಖರ್ಗೆ ಹಳೆ ಎತ್ತು ಎಂಬ ಹೇಳಿಕೆ ಸರಿ ಅಲ್ಲ. ಯಾರು ಹಳೆ ಎತ್ತು ಎಂದು ಜನ ತೀರ್ಮಾನ ಮಾಡುತ್ತಾರೆ. ಕಲಬುರಗಿ ಜನರು ಅಭಿವೃದ್ಧಿಗೆ ಮತಹಾಕುತ್ತಾರೆ ವಿನಾ: ಕೆಲಸ ಮಾಡದ ನಾಯಕರನ್ನು ತಿರಸ್ಕರಿಸುತ್ತಾರೆ. ಮುಂದಿನ ಬಾರಿಯಾದರೂ ಉತ್ತಮ ಕೆಲಸ ಮಾಡಿ, ಆ ಮೂಲಕ ಚುನಾವಣೆಯಲ್ಲಿ ಗೆಲ್ಲುವ ಬಗ್ಗೆ ಚಿಂತನೆ ನಡೆಸಿ. ಕೋಮು ಪಕ್ಷದ ಅಭ್ಯರ್ಥಿಗೆ ಚುನಾವಣೆಯಲ್ಲಿ ಗೆಲುವು ಕಷ್ಟಸಾಧ್ಯ ಎಂದರು.

  • ನನಗೆ 3 ಬಾರಿ ಸಿಎಂ ಹುದ್ದೆ ಕೈ ತಪ್ಪಿದೆ, ಪಕ್ಷದ ವಿರುದ್ಧ ಮುನಿಸಿಕೊಂಡ್ನಾ: ಖರ್ಗೆ ಪ್ರಶ್ನೆ

    ನನಗೆ 3 ಬಾರಿ ಸಿಎಂ ಹುದ್ದೆ ಕೈ ತಪ್ಪಿದೆ, ಪಕ್ಷದ ವಿರುದ್ಧ ಮುನಿಸಿಕೊಂಡ್ನಾ: ಖರ್ಗೆ ಪ್ರಶ್ನೆ

    – ಉಮೇಶ್ ಜಾಧವ್ ವಿರುದ್ಧ ವಾಗ್ದಾಳಿ

    ಕಲಬುರಗಿ: ನನಗೂ ಮೂರು ಬಾರಿ ಮುಖ್ಯಮಂತ್ರಿ ಹುದ್ದೆ ಕೈ ತಪ್ಪಿದೆ. ಹಾಗಂತ ಪಕ್ಷದ ವಿರುದ್ಧ ಮುನಿಸಿಕೊಂಡಿದ್ದೇನಾ ಎಂದು ಲೋಕಸಭೆಯ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಪರೋಕ್ಷವಾಗಿ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಕಲಬುರಗಿಯ ಪಟ್ನಾ ಗ್ರಾಮದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಬೇರೆ ಬೇರೆ ಕಾರಣಗಳಿಂದಾಗಿ ನನಗೆ ಸಿಎಂ ಸ್ಥಾನ ತಪ್ಪಿದೆ. ಅದಕ್ಕಾಗಿ ನಾನು ಪಕ್ಷದ ವಿರುದ್ಧ ಯಾವತ್ತೂ ಮಾತನಾಡಲಿಲ್ಲ. ನನಗೆ ಪಕ್ಷದ ತತ್ವ ಸಿದ್ಧಾಂತಗಳು ಹಾಗೂ ಜನಪರ ಕಾಳಜಿ ಮುಖ್ಯ ಎಂದು ಹೇಳುವ ಮೂಲಕ ಸಿಎಂ ಆಗುವ ಆಸೆಯನ್ನು ಹೊರಹಾಕಿದರು.

    ನೀವು ಒಳ್ಳೆಯದನ್ನು ಮಾಡಿದರೆ ಒಳ್ಳೆಯದೇ ಆಗುತ್ತದೆ. ಕೆಟ್ಟದ್ದನ್ನು ಮಾಡಿದರೆ ನಿಮಗೆ ಕೆಟ್ಟದ್ದೆ ಆಗುತ್ತದೆ ಎಂದು ಭಗವಾನ್ ಬುದ್ಧ ಹೇಳಿದ್ದಾನೆ. ಹರಕೆ ಹೊತ್ತರೆ ಮಕ್ಕಳಾಗಲ್ಲ. ಮದುವೆಯಾಗಬೇಕು, ಸೋಬಾನ ನಡೆಯಬೇಕು ಆಗಲೇ ಮಕ್ಕಳಾಗುತ್ತವೆ. ಇದು ನಿಸರ್ಗ ನಿಯಮ. ಹೀಗಾಗಿ ಒಂದು ನಿರ್ದಿಷ್ಟ ತತ್ವ, ಸಿದ್ಧಾಂತಗಳನ್ನು ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಆಗ ಯಶಸ್ವಿಯಾಗಲು ಸಾಧ್ಯ ಎಂದು ಹೇಳಿದರು.

    ನಾನು ಯಾವಾಗಲೂ ಕೋಪದಿಂದಲೇ ಮಾತನಾಡುತ್ತೇನೆ, ಮುಖ ಗಂಟು ಹಾಕಿಕೊಂಡು ಇರುತ್ತೇನೆ ಎಂದು ಕೆಲವರು ಹೇಳುತ್ತಾರೆ. ಹೀಗೆ ಇರುವುದು ಮನುಷ್ಯನ ಸ್ವಭಾವ. ಕೆಲವು ಜನರು ನಗುತ್ತಾರೆ, ಕೆಲಸ ಮಾಡುವುದಿಲ್ಲ. ಆದರೆ ನನಗೆ ನಗುವುದಕ್ಕೆ ಬರುವುದಿಲ್ಲ, ಕೆಲಸ ಮಾಡಲಿಕ್ಕೆ ಬರುತ್ತದೆ ಎಂದು ಹೇಳಿದರು.

  • ಬಾಬುರಾವ್ ಚವ್ಹಾಣ್‍ಗೆ ಲಂಬಾಣಿ ಮಂದಿ ಕ್ಲಾಸ್ – ಕಲಬುರಗಿಯಲ್ಲಿ ಖರ್ಗೆಗೆ ಕಷ್ಟ!

    ಬಾಬುರಾವ್ ಚವ್ಹಾಣ್‍ಗೆ ಲಂಬಾಣಿ ಮಂದಿ ಕ್ಲಾಸ್ – ಕಲಬುರಗಿಯಲ್ಲಿ ಖರ್ಗೆಗೆ ಕಷ್ಟ!

    ಕಲಬುರಗಿ: ಜಿಲ್ಲೆಯ ಲೋಕಸಭಾ ಕ್ಷೇತ್ರ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಪ್ರಚಾರಕ್ಕೆ ಹೋದ ಲಂಬಾಣಿ ನಾಯಕರಿಗೆ ಲಂಬಾಣಿ ಜನರೇ ತರಾಟೆ ತೆಗೆದುಕೊಂಡ ಘಟನೆ ನಡೆದಿದೆ.

    ಬಿಜೆಪಿ ಅಭ್ಯರ್ಥಿ ಡಾ.ಉಮೇಶ್ ಜಾಧವ್ ವಿರುದ್ಧ ಪ್ರಚಾರ ಮಾಡಲು ಹೋದವರಿಗೆ ಲಂಬಾಣಿ ಜನರು ತರಾಟೆ ತೆಗೆದುಕೊಂಡಿದ್ದರು. ಮಾಜಿ ಸಚಿವ ಬಾಬುರಾವ್ ಚವ್ಹಾಣ್ ಮತ್ತು ಸುಭಾಷ್ ರಾಠೋಡ್ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ್ ಖರ್ಗೆ ಪರ ಪ್ರಚಾರ ಮಾಡಲು ಹೋಗಿದ್ದರು. ಈ ವೇಳೆ ಸಮುದಾಯದ ಜನ ಅವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಕೆಲ ದಿನಗಳ ಹಿಂದಷ್ಟೇ ಬಾಬುರಾವ್ ಚವ್ಹಾಣ್ ಮತ್ತು ಸುಭಾಷ್ ರಾಠೋಡ್ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ದರು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಲಂಬಾಣಿ ಸಮಾಜದ ಡಾ.ಉಮೇಶ್ ಜಾಧವ್ ಬಿಜೆಪಿಯಿಂದ ಸ್ಪರ್ಧಿಸಿದ್ದಾರೆ. ಸಮಾಜದ ವ್ಯಕ್ತಿಗೆ ಬೆಂಬಲಿಸುವುದನ್ನು ಬಿಟ್ಟು ವಿರುದ್ಧವಾಗಿ ಪ್ರಚಾರಕ್ಕೆ ಮುಂದಾಗಿದ್ದಕ್ಕೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರಿಂದ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ್ ಖರ್ಗೆ ಸಂಕಷ್ಟವಾಗುವ ಸಾಧ್ಯತೆ ಇದೆ.

  • ಜಾಧವ್ ಹೆಸರಿನ ಪಕ್ಷೇತರರಿಗೆ ಫುಲ್ ಡಿಮ್ಯಾಂಡ್

    ಜಾಧವ್ ಹೆಸರಿನ ಪಕ್ಷೇತರರಿಗೆ ಫುಲ್ ಡಿಮ್ಯಾಂಡ್

    ಕಲಬುರಗಿ: ಪಕ್ಷೇತರರಾಗಿ ಗೆದ್ದವರಿಗೆ ಚುನಾವಣೆ ಫಲಿತಾಂಶ ಬಂದ ಮೇಲೆ ಡಿಮ್ಯಾಂಡ್ ಹೆಚ್ಚಾಗುವುದು ಗೊತ್ತಿರುವ ವಿಚಾರ. ಆದರೆ ಕಲಬುರಗಿಯಲ್ಲಿ ಪಕ್ಷೇತರ ಅಭ್ಯರ್ಥಿಗಳಿಗೆ ಈಗಲೇ ಫುಲ್ ಡಿಮ್ಯಾಂಡ್ ಬಂದಿದೆ.

    ಎಪ್ರಿಲ್ 23ಕ್ಕೆ ಎರಡನೇ ಹಂತದ ಚುನಾವಣೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ನಾಮಪತ್ರ ವಾಪಸ್ ಪಡೆಯಲು ಇಂದೇ ಕೊನೆ ದಿನವಾಗಿದೆ. ಮತ್ತೊಂದೆಡೆ ಕಲಬುರಗಿಯಲ್ಲಿ ಉಮೇಶ್ ಜಾಧವ್, ವಿಠಲ್ ಜಾಧವ್, ಶಂಕರ್ ಜಾಧವ್, ವಿಜಯ್ ಜಾಧವ್ ಸೇರಿದಂತೆ ನಾಲ್ವರು ಜಾಧವ್ ಹೆಸರಿನ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.

     

    ಹಾಗಾಗಿ ಪಕ್ಷೇತರ ಹೆಸರಿನ ಜಾಧವ್‍ರಿಗೆ ನಾಮಪತ್ರ ವಾಪಸ್ ಪಡೆಯಲು ಬಿಜೆಪಿ ಸರ್ಕಸ್ ನಡೆಸುತ್ತಿದೆ. ಇದಕ್ಕಾಗಿ ಚೌಕಾಸಿ ಪಾಲಿಟಿಕ್ಸ್ ಕೂಡ ಮಾಡುತ್ತಿದೆ. ಈ ಮೂಲಕ ಕಲಬುರಗಿಯಲ್ಲಿ ಪಕ್ಷೇತರ ಅಭ್ಯರ್ಥಿಗಳಿಗೆ ಚುನಾವಣೆಯ ಮುಂಚೆಯೇ ಡಿಮ್ಯಾಂಡ್ ಬಂದಿದೆ ಎಂಬ ಮಾಹಿತಿ ಲಭ್ಯವಾಗಿದೆ.

    ಕಲಬುರಗಿಯಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಖರ್ಗೆ ಸ್ಪರ್ಧಿಸಿದ್ದರು. ಬಿಜೆಪಿ ಅಭ್ಯರ್ಥಿಯಾಗಿ ಡಾ.ಉಮೇಶ್ ಜಾಧವ್ ಸ್ಪರ್ಧೆ ಮಾಡಿದ್ದಾರೆ. ಆದರೆ ಕಲಬುರಗಿ ಲೋಕಸಭಾ ಕಣದಲ್ಲಿ ಶಂಕರ್ ಜಾಧವ್, ವಿಠಲ್ ಜಾಧವ್ ಹಾಗೂ ವಿಜಯ್ ಜಾಧವ್ ಎಂಬವರು ನಾಮಪತ್ರ ಸಲ್ಲಿಸಿದ್ದಾರೆ. ಈ ಮೂಲಕ ಡಾ.ಉಮೇಶ್ ಜಾಧವ್ ಮತಗಳು ಒಡೆಯಲು ವಿಪಕ್ಷಗಳು ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ ಎಂದು ಹೇಳಲಾಗುತ್ತಿದೆ.