Tag: umesh jadhav

  • ಕಲಬುರಗಿ ವಿಮಾನ ನಿಲ್ದಾಣಕ್ಕೆ 6 ಕೋಟಿ ಮೌಲ್ಯದ ಅಗ್ನಿಶಾಮಕ ವಾಹನ

    ಕಲಬುರಗಿ ವಿಮಾನ ನಿಲ್ದಾಣಕ್ಕೆ 6 ಕೋಟಿ ಮೌಲ್ಯದ ಅಗ್ನಿಶಾಮಕ ವಾಹನ

    – ಸಂಸದ ಉಮೇಶ್ ಜಾಧವ್‍ರಿಂದ ಸಮರ್ಪಣೆ

    ಕಲಬುರಗಿ: ಅತ್ಯಾಧುನಿಕ ತಂತ್ರಜ್ಞಾನವುಳ್ಳ ಬರೋಬ್ಬರಿ ಆರು ಕೋಟಿ ರೂಪಾಯಿ ಮೌಲ್ಯದ ಅಗ್ನಿಶಾಮಕ ವಾಹನ ಕಲಬುರಗಿ ವಿಮಾನ ನಿಲ್ದಾಣಕ್ಕೆ ಸೇರ್ಪಡೆಯಾಗಿದೆ.

    ಕಲಬುರಗಿ ಲೋಕಸಭಾ ಸದಸ್ಯರಾದ ಡಾ.ಉಮೇಶ್ ಜಾಧವ್ ಅವರು ಇಂದು ವಿಮಾನ ನಿಲ್ದಾಣದ ಸೇವೆಗೆ ಇದನ್ನು ಸಮರ್ಪಣೆ ಮಾಡಿದರು. ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು 6 ಕೋಟಿ ರೂಪಾಯಿ ವೆಚ್ಚದಲ್ಲಿ ಆಸ್ಟ್ರಿಯಾ ದೇಶದಿಂದ ರೊಸೆನ್ ಬೌರ್ (ROSENBAUER) ಎಂಬ ವೊಲ್ವೋ ಕಂಪನಿಯ ಈ ಅಗ್ನಿಶಾಮಕ ವಾಹನವನ್ನು ಖರೀದಿಸಿ ತಂದಿದೆ.

    ಇದರ ವಿಶೇಷತೆ:
    ಅತಿಹೆಚ್ಚು ಉಷ್ಣಾಂಶ, ಶೀತ, ಹೊಗೆ, ಧೂಳುಮಯದಂತಹ ಪ್ರತಿಕೂಲ ವಾತಾವರಣದಲ್ಲಿಯೂ ಈ ಅಗ್ನಿಶಾಮಕ ವಾಹನ ಕಾರ್ಯಾಚರಣೆ ನಡೆಸುವ ಸಾಮರ್ಥ್ಯ ಹೊಂದಿದೆ. ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಸಂಪೂರ್ಣ ಸ್ವಯಂಚಾಲಿತ ವಾಹನ ಇದಾಗಿದ್ದು, ಗರಿಷ್ಠ 121 ಕಿಲೋಮೀಟರ್ ವೇಗದಲ್ಲಿ ಚಲಿಸಲಿದೆ. ಅಗ್ನಿ ಅವಘಡ ಸಂಭವಿಸಿದಾಗ 65 ಮೀಟರ್ ದೂರದವರೆಗೆ ನೀರು ಚಿಮುಕಿಸುವ ಶಕ್ತಿ ಇದಕ್ಕಿದೆ.

    ಟ್ಯಾಂಕರ್ 6,000 ಲೀಟರ್ ನೀರು ಸಂಗ್ರಹದ ಸಾಮರ್ಥ್ಯ ಹೊಂದಿದ್ದು, ಕಾರ್ಯಾಚರಣೆ ವೇಳೆ ಕೆಲವೇ ನಿಮಿಷಗಳಲ್ಲಿ 3,000 ಲೀಟರ್ ಹೊರಚಿಮ್ಮಿಸಿ ಬೆಂಕಿಯ ಜ್ವಾಲೆಗಳನ್ನು ಶಮನಗೊಳಿಸಲಿದೆ. 800 ಲೀಟರ್ ನೊರೆ (ರಾಸಾಯನಿಕ ಮಿಶ್ರಿತ) ಟ್ಯಾಂಕರನ್ನು ಕೂಡ ಒಳಗೊಂಡಿದೆ. ಅಂದರೆ ತೈಲಗಾರ, ವಿಮಾನ ನಿಲ್ದಾಣಗಳಂತಹ ಸ್ಥಳಗಳಲ್ಲಿ ಅತಿವೇಗವಾಗಿ ವ್ಯಾಪಿಸುವ ಬೆಂಕಿಯನ್ನು ನಂದಿಸಲು ಬಳಸುವ ನೊರೆ ಇದಾಗಿದೆ.

    ಒಮ್ಮೆಗೆ ಇಡೀ ಅಗ್ನಿ ಅವಘಡ ಪ್ರದೇಶವನ್ನು ನಿಯಂತ್ರಿಸುವ ಹಾಗೂ ವಿಮಾನದ ರನ್ ವೇಗಳಲ್ಲಿ ಚಲಿಸುತ್ತಲೇ ಕಾರ್ಯಾಚರಿಸುವಂತಹ ಆನೆ ಬಲ ಇದಕ್ಕಿದೆ ಎಂದು ಸಂಸದ ಉಮೇಶ್ ಜಾಧವ್ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಕಲಬುರಗಿ ವಿಮಾನ ನಿಲ್ದಾಣ ನಿರ್ದೇಶಕ ಜ್ಞಾನೇಶ್ವರ್ ರಾವ್, ರಾಜ್ಯ ಅಗ್ನಿಶಾಮಕ ಇಲಾಖೆ ಅಧಿಕಾರಿ ಮಧು ರಾಠೋಡ್, ಏರ್ ಲೈನ್ಸ್ ಇಲಾಖೆ ಅಧಿಕಾರಿಗಳು ಮುಂತಾದವರು ಇದ್ದರು.

  • ಬೆಂಗಳೂರಿನಿಂದ ಕಲಬುರಗಿಗೆ ಮೃತದೇಹ ರವಾನೆಗೆ ನೆರವಾದ ಸಂಸದ ಉಮೇಶ್ ಜಾಧವ್

    ಬೆಂಗಳೂರಿನಿಂದ ಕಲಬುರಗಿಗೆ ಮೃತದೇಹ ರವಾನೆಗೆ ನೆರವಾದ ಸಂಸದ ಉಮೇಶ್ ಜಾಧವ್

    ಕಲಬುರಗಿ: ಮೃತಪಟ್ಟ ಕೂಲಿ ಕಾರ್ಮಿಕ ಮಹಿಳೆಯ ಮೃತದೇಹವನ್ನು ಬೆಂಗಳೂರಿನಿಂದ ಕಲಬುರಗಿಗೆ ಸಾಗಿಸಲು ಹಾಗೂ ಮೃತರ ಬಂಧುಗಳ ಪ್ರಯಾಣಕ್ಕೆ ಪೊಲೀಸ್ ಇಲಾಖೆಯ ಅನುಮತಿ ಕೊಡಿಸುವ ಮೂಲಕ ಕಲಬುರಗಿ ಸಂಸದ ಡಾ. ಉಮೇಶ್ ಜಾಧವ್ ಅವರು ಮಾನವೀಯತೆ ಮೆರೆದಿದ್ದಾರೆ.

    ಗುರುವಾರ ಬೆಳಗ್ಗೆ ಬೆಂಗಳೂರಿನ ಅಮೃತಹಳ್ಳಿಯಲ್ಲಿ ವಾಸವಾಗಿದ್ದ 56 ವರ್ಷದ ದ್ರೌಪದಿ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಕಲಬುರಗಿಯ ಬಸವನಗರಕ್ಕೆ ಮೃತದೇಹ ಸಾಗಿಸಲು ಬೆಳಗ್ಗೆಯಿಂದ ಅನುಮತಿಗಾಗಿ ಅವರ ಸಂಬಂಧಿಕರು ಕಸರತ್ತು ನಡೆಸಿದ್ದರು. ಈ ಸಂದರ್ಭದಲ್ಲಿ ಸಂಸದ ಜಾಧವ್ ಅವರಿಗೆ ವಿಷಯ ತಿಳಿದು ಸಂಜೆ 6 ಗಂಟೆಗೆ ಸ್ಥಳಕ್ಕೆ ತೆರಳಿ, ಬೆಂಗಳೂರಿನ ಈಶಾನ್ಯ ವಲಯ ಡೆಪ್ಯೂಟಿ ಪೊಲೀಸ್ ಕಮೀಷನರ್ ಅವರಿಂದ ಮೃತದೇಹ ಸಾಗಿಸಲು ಅಂಬ್ಯುಲೆನ್ಸ್ ನಲ್ಲಿ ಸಂಬಂಧಿಕರಿಗೆ ಪ್ರಯಾಣಿಸಲು ಅನುಮತಿ ಕೊಡಿಸಿದ್ದಾರೆ. ಮೃತರ ಮಗ ಮಿಲಿಂದು, ಪುತ್ರಿ ಶೋಭಾ ಹಾಗೂ ಅಳಿಯ ಗಣೇಶ್ ಅವರಿಗೆ ಅಂಬ್ಯುಲೆನ್ಸ್ ಜೊತೆ ತೆರಳಲು ಅನುಮತಿ ದೊರೆತಿದೆ. ಅಂಬ್ಯುಲೆನ್ಸ್ ಬೆಂಗಳೂರಿಂದ ಹೊರಟಿದ್ದು, ಶುಕ್ರವಾರ ಬೆಳಗ್ಗೆ ಕಲಬುರಗಿ ತಲುಪಲಿದೆ.

    ಅಂಬ್ಯುಲೆನ್ಸ್ ಬಾಡಿಗೆ ಪಾವತಿ: ಮೊದಲೇ ಲಾಕ್‍ಡೌನ್ ನಿಂದ ಸಂಕಷ್ಟಕ್ಕೀಡಾಗಿದ್ದ ಕಾರ್ಮಿಕರ ಪರಿಸ್ಥಿತಿಯನ್ನು ಅರಿತ ಸಂಸದ ಉಮೇಶ್ ಜಾಧವ್ ಅವರು ಅಂಬ್ಯುಲೆನ್ಸ್ ಬಾಡಿಗೆ ವೆಚ್ಚವನ್ನು ಭರಿಸಿ, ಮೃತದೇಹ ಹಾಗೂ ಸಂಬಂಧಿಕರನ್ನು ಕಲಬುರಗಿ ಕಳುಹಿಸಲು ನೆರವಾಗಿದ್ದಾರೆ.

    ಕೃತಜ್ಞತೆ ಸಲ್ಲಿಕೆ: ಪ್ರಸಕ್ತ ಕಷ್ಟದಲ್ಲಿದ್ದ ಸಂದರ್ಭದಲ್ಲಿ ನೆರವಾಗಿದ್ದಕ್ಕೆ ಮೃತರ ಸಂಬಂಧಿಕರು ಕೃತಜ್ಞತೆ ಸಲ್ಲಿಸಿದ್ದು, ಸಕಾಲಕ್ಕೆ ಆಗಮಿಸಿ ಅಂತ್ಯಸಂಸ್ಕಾರ ಮಾಡಲು ಸಹಾಯ ಮಾಡಿದ್ದಾರೆ ಎಂದು ಹೇಳಿದ್ದಾರೆ. ಇವರ ಋಣ ಮರೆಯಲು ಸಾಧ್ಯವಿಲ್ಲ ಎಂದಿದ್ದಾರೆ.

  • ಮಗನ ಜೊತೆ ಭರ್ಜರಿ ಸ್ಟೆಪ್ ಹಾಕಿದ ಸಂಸದ ಉಮೇಶ್ ಜಾಧವ್

    ಮಗನ ಜೊತೆ ಭರ್ಜರಿ ಸ್ಟೆಪ್ ಹಾಕಿದ ಸಂಸದ ಉಮೇಶ್ ಜಾಧವ್

    ಕಲಬುರಗಿ: ಸಾಮಾನ್ಯವಾಗಿ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಜನಪ್ರತಿನಿಧಿಗಳು ಸ್ಟೆಪ್ಸ್ ಹಾಕುವುದನ್ನು ನೀವು ನೋಡಿರಬಹುದು. ಆದರೆ ಸಂಸದ ಉಮೇಶ್ ಜಾಧವ್ ಅವರು ತಮ್ಮ ಮಗನ ಜೊತೆ ಮದುವೆ ಕಾರ್ಯಕ್ರಮದಲ್ಲಿ ಕುಣಿದು ಕುಪ್ಪಳಿಸಿದ್ದಾರೆ.

    ಕಲಬುರಗಿ ಸಂಸದ ಡಾ ಉಮೇಶ್ ಜಾಧವ್, ತಮ್ಮ ಹಿರಿಯ ಸಹೋದರ ರಾಮಚಂದ್ರ ಜಾಧವ್ ಪುತ್ರ ಪ್ರಶಾಂತ್ ಅವರ ಮದುವೆ ಸಮಾರಂಭದಲ್ಲಿ ಪುತ್ರ ಚಿಂಚೋಳಿ ಶಾಸಕ ಡಾ ಅವಿನಾಶ್ ಜಾಧವ್ ಹಾಗೂ ಸ್ನೇಹಿತರ ಜೊತೆಗೂಡಿ ಕಲ್ಯಾಣ ಮಂಟಪದಲ್ಲಿ ಭರ್ಜರಿಯಾಗಿ ಸ್ಟೆಪ್ಸ್ ಹಾಕಿದ್ದಾರೆ.

    ತಂದೆ ಡಾ ಉಮೇಶ್ ಜಾಧವ್ ಹಾಗೂ ಪುತ್ರ ಶಾಸಕ ಡಾ ಅವಿನಾಶ್ ಜಾಧವ್ ಒಟ್ಟಿಗೆ ಡ್ಯಾನ್ಸ್ ಮಾಡಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಇವರ ಜೊತೆ ಸಹೋದರ ರಾಮಚಂದ್ರ ಜಾಧವ್ ಮತ್ತು ಅವರ ಕುಟುಂಬಸ್ಥರು ಸೇರಿ ಮಗನ ಮದುವೆಯಲ್ಲಿ ಸಖತ್ ಡ್ಯಾನ್ಸ್ ಮಾಡಿದ್ದಾರೆ.

  • ಸಂಸದರ ಶಕ್ತಿಯನ್ನ ಪ್ರಶ್ನೆ ಮಾಡುವ ಹಾಗಿಲ್ಲ: ಉಮೇಶ್ ಜಾಧವ್

    ಸಂಸದರ ಶಕ್ತಿಯನ್ನ ಪ್ರಶ್ನೆ ಮಾಡುವ ಹಾಗಿಲ್ಲ: ಉಮೇಶ್ ಜಾಧವ್

    ನವದೆಹಲಿ: ನಮ್ಮ ಸಂಸದರ ಶಕ್ತಿಯನ್ನು ಪ್ರಶ್ನೆ ಮಾಡುವ ಹಾಗಿಲ್ಲ. ನಮ್ಮ ಶಕ್ತಿ ಏನು ಎಂಬುದನ್ನು ಜನರು ಲೋಕಸಭಾ ಚುನಾವಣೆಯಲ್ಲಿ ತೋರಿಸಿದ್ದಾರೆ. ಪ್ರಧಾನಿ ಮೋದಿ ಮತ್ತು ದೆಹಲಿಯ ನಾಯಕರಿಗೆ ಏನು ಮಾಡಬೇಕು ಎಂಬ ವಿಚಾರ ಗೊತ್ತಿದೆ ಎಂದು ಸಂಸದ ಉಮೇಶ್ ಜಾಧವ್ ಹೇಳಿದ್ದಾರೆ.

    ಬೆಂಗಳೂರಿನಲ್ಲಿ ನೆರೆ ಪರಿಹಾರ ನೀಡದ ಕೇಂದ್ರ ಸರ್ಕಾರದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿದ ಉಮೇಶ್ ಜಾಧವ್, ಕೆಲಸ ಮಾಡಿ ಜನರಿಗೆ ಸಂಸದರ ಶಕ್ತಿಯನ್ನು ತೋರಿಸುತ್ತೇವೆ. ಪರಿಹಾರ ನೀಡುವುದರಲ್ಲಿ ಯಾವುದೇ ವಿಳಂಬವಾಗಿಲ್ಲ. ರಾಜ್ಯ ಸರ್ಕಾರದಿಂದ ವರದಿಯನ್ನು ತರಿಸಿಕೊಂಡು ದೆಹಲಿ ನಾಯಕರು ಪರಿಶೀಲನೆ ನಡೆಸುತ್ತಿದ್ದಾರೆ. ಈಗಾಗಲೇ ಕೇಂದ್ರ ಸಚಿವ ನಿರ್ಮಲಾ ಸೀತಾರಾಮನ್ ಟ್ವೀಟ್ ಸಹ ಮಾಡಿದ್ದಾರೆ. ನಾನು ಇಂದು ಹಳ್ಳಿಯಿಂದ ದೆಹಲಿಗೆ ಬಂದಿದ್ದು ಮಾತನಾಡುತ್ತೇನೆ ಎಂದರು. ಇದನ್ನೂ ಓದಿ: ಯಾರೂ ಕಿಸೆಯಿಂದ ಪರಿಹಾರ ಕೊಡಲು ಆಗಲ್ಲ: ಪ್ರತಾಪ್ ಸಿಂಹ

    ಇಷ್ಟು ದಿನ ನಾನು ಕ್ಷೇತ್ರದಲ್ಲಿ ಇದ್ದಿದ್ದರಿಂದ ಇಲ್ಲಿ ಏನಾಗಿದೆ ಎಂಬುವುದು ಗೊತ್ತಿಲ್ಲ. ಕೇಂದ್ರ ಸಚಿವರಾದ ಡಿ.ವಿ.ಸದಾನಂದ ಗೌಡ, ಪ್ರಹ್ಲಾದ್ ಜೋಶಿ ಮತ್ತು ಸುರೇಶ್ ಅಂಗಡಿಯವರ ಜೊತೆ ಮಾತನಾಡಿ ಮಾಹಿತಿ ಪಡೆದುಕೊಳ್ಳುತ್ತೇನೆ ಎಂದು ಉಮೇಶ್ ಜಾಧವ್ ಹಾರಿಕೆ ಉತ್ತರ ನೀಡಿದರು. ಇದನ್ನೂ ಓದಿ: ನೆರೆ ಪರಿಹಾರಕ್ಕೆ ಯಾರ ಶಿಫಾರಸ್ಸು ಬೇಕಾಗಿಲ್ಲ: ಬಿಎಸ್‍ವೈ ಕಿಡಿ

  • ಆಪರೇಷನ್ 2 ಇಲ್ಲ, ತಾವಾಗಿಯೇ ಹಲವರು ಪಕ್ಷಕ್ಕೆ ಬರ್ತಿದ್ದಾರೆ- ಉಮೇಶ್ ಜಾಧವ್

    ಆಪರೇಷನ್ 2 ಇಲ್ಲ, ತಾವಾಗಿಯೇ ಹಲವರು ಪಕ್ಷಕ್ಕೆ ಬರ್ತಿದ್ದಾರೆ- ಉಮೇಶ್ ಜಾಧವ್

    ಕಲಬುರಗಿ: ರಾಜ್ಯದಲ್ಲಿ ಆಪರೇಷನ್ ಕಮಲ ಪಾರ್ಟ್-2 ಇಲ್ಲ, ತಾವಾಗಿಯೇ ಇನ್ನೂ ಹಲವರು ನಮ್ಮ ಪಕ್ಷಕ್ಕೆ ಬರುತ್ತಿದ್ದಾರೆ ಎಂದು ಸಂಸದ ಉಮೇಶ್ ಜಾಧವ್ ಇನ್ನೂ ಹಲವು ಶಾಸಕರು ಬಿಜೆಪಿ ಸೇರುವ ಸುಳಿವು ನೀಡಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಆಡಳಿತವನ್ನು ಮೆಚ್ಚಿ ಪಕ್ಷಕ್ಕೆ ಬರುತ್ತಿದ್ದಾರೆ. ಈಗಾಗಲೇ ಮಹಾರಾಷ್ಟ್ರದಲ್ಲಿ ಎಲ್ಲಾ ಪಾರ್ಟಿ ಕ್ಲೀನ್ ಆಗಿದೆ. ಬಹುತೇಕರು ಸ್ವಯಂ ಪ್ರೇರಿತರಾಗಿ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ಹೀಗಾಗಿ ರಾಜ್ಯದಲ್ಲೂ ಅದೇ ಪರಿಸ್ಥಿತಿ ನಿರ್ಮಾಣ ಆಗುತ್ತದೆ ಎಂದು ರಾಜ್ಯ ರಾಜಕೀಯದ ಕುರಿತು ಜಾಧವ್ ಭವಿಷ್ಯ ನುಡಿದಿದ್ದಾರೆ.

    ಅಮಿತ್ ಶಾ ಅವರ ಒಂದು ದೇಶ ಒಂದೇ ಭಾಷೆ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಯಾರೂ ಯಾವುದೇ ಭಾಷೆಯನ್ನು ಯಾರ ಮೇಲು ಹೇರಬಾರದು. ನಾವು ಅಮಿತ್ ಶಾ ಅವರಿಗೆ ಮನವರಿಕೆ ಮಾಡುತ್ತೇವೆ. ಅವರ ನಿಲುವು ಏನು ಎಂದು ಸಹ ತಿಳಿದುಕೊಳ್ಳುತ್ತೆವೆ. ಅಮಿತ್ ಶಾ ಅವರು ಒಂದು ರಾಷ್ಟ್ರೀಯ ಭಾಷೆ ಇರಬೇಕೆಂದು ಹೇಳಿರುತ್ತಾರೆ. ಆದರೆ, ಬೇರೆ ಭಾಷೆ ಬೇಡ ಎಂದು ಹೇಳಿಲ್ಲ. ಅವರ ಒಂದು ದೇಶ ಒಂದು ಭಾಷೆಯ ಹೇಳಿಕೆ ಬಗ್ಗೆ ಸಂಪೂರ್ಣವಾಗಿ ನನಗೆ ಗೊತ್ತಿಲ್ಲ. ಅದನ್ನು ಪೂರ್ತಿ ನೋಡಿಲ್ಲ. ಈ ಕುರಿತು ಸಂಪೂರ್ಣವಾಗಿ ತಿಳಿದುಕೊಳ್ಳುತ್ತೇನೆ ಎಂದರು.

  • ಖರ್ಗೆ ಸಿಎಂ ಆದ್ರೆ ಸ್ವಾಗತಿಸುತ್ತೇನೆ: ಉಮೇಶ್ ಜಾಧವ್

    ಖರ್ಗೆ ಸಿಎಂ ಆದ್ರೆ ಸ್ವಾಗತಿಸುತ್ತೇನೆ: ಉಮೇಶ್ ಜಾಧವ್

    ಬೆಂಗಳೂರು: ಕಾಂಗ್ರೆಸ್ ನ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರು ಮುಖ್ಯಮಂತ್ರಿಯಾಗೋದಾದರೆ ನಾನು ಸ್ವಾಗತ ಮಾಡುತ್ತೇನೆ ಎಂದು ಬಿಜೆಪಿ ಸಂಸದ ಉಮೇಶ್ ಜಾಧವ್ ತಿಳಿಸಿದ್ದಾರೆ.

    ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಖರ್ಗೆ ಸಿಎಂ ಆದರೆ ನಾನು ಸ್ವಾಗತ ಮಾಡುತ್ತೇನೆ. ದಲಿತರೊಬ್ಬರು ಸಿಎಂ ಆಗುತ್ತಾರೆ ಎಂದರೆ ನಾನು ಕೂಡ ಖುಷಿ ಪಡುತ್ತೇನೆ. ಖರ್ಗೆಯವರನ್ನು ನಾನು ಸೋಲಿಸಿಲ್ಲ. ಕ್ಷೇತ್ರದ ಮತದಾರರು ಅವರನ್ನು ಸೋಲಿಸಿದ್ದಾರೆ ಎಂದರು.

    ಕರ್ನಾಟಕ ರಾಜ್ಯದ ಪರಿಸ್ಥಿತಿ ಗಂಭೀರವಾಗಿದೆ. ನೀರಿನ ಸಮಸ್ಯೆ ಸೇರಿ ಹಲವು ಸಮಸ್ಯೆಗಳಿವೆ. ಒಳ್ಳೆಯ ಆಡಳಿತ ನೀಡಬೇಕು. ಸ್ಥಿರವಾದ ಸರ್ಕಾರ ಬೇಕು ಅನ್ನೋ ಆಸೆ ಜನರಿಗಿದೆ. ಕ್ಷೇತ್ರದ ಜನರ ಸಮಸ್ಯೆಗಳು ಈಡೇರದೇ ಇದ್ದಾಗ ಕೆಲವೊಂದು ತೀರ್ಮಾನಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಹೀಗಾಗಿ ಶಾಸಕರು ರೆಬೆಲ್ ಆಗಿದ್ದಾರೆ ಎಂದು ಉಮೇಶ್ ಜಾಧವ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

    ಸದ್ಯದ ರಾಜಕೀಯ ಬೆಳವಣಿಗೆಗಳ ಬಗ್ಗೆ ನನಗೇನೂ ಗೊತ್ತಿಲ್ಲ. ನಾನು ಸಂಸದನಾಗಿದ್ದೇನೆ ನನ್ನ ಕ್ಷೇತ್ರದ ಅಭಿವೃದ್ಧಿ ಮಾಡುತ್ತೇನೆ. ರಾಜ್ಯದ ಮೈತ್ರಿ ಸರ್ಕಾರ ಉಳಿಯುತ್ತೋ, ಉರುಳುತ್ತೋ ನನಗೆ ಗೊತ್ತಿಲ್ಲ. ಮಗನ ವಿದ್ಯಾಭ್ಯಾಸ ನಿಮಿತ್ತ ಕುಟುಂಬ ಸಮೇತ ನಾನು ಮುಂಬೈಗೆ ಹೋಗುತ್ತಿದ್ದೇನೆ ಎಂದರು.

  • ಗಾಯಾಳುಗಳನ್ನು  ಕಾರಿನಲ್ಲಿ ಆಸ್ಪತ್ರೆಗೆ ದಾಖಲಿಸಿ ಇಂಜೆಕ್ಷನ್ ಕೊಟ್ಟ ಸಂಸದ ಜಾಧವ್

    ಗಾಯಾಳುಗಳನ್ನು ಕಾರಿನಲ್ಲಿ ಆಸ್ಪತ್ರೆಗೆ ದಾಖಲಿಸಿ ಇಂಜೆಕ್ಷನ್ ಕೊಟ್ಟ ಸಂಸದ ಜಾಧವ್

    ಯಾದಗಿರಿ: ಅಪಘಾತಕ್ಕೀಡಾಗಿದ್ದ ಗಾಯಾಳುಗಳನ್ನು ಸ್ವಂತ ತಮ್ಮ ಕಾರಿನಲ್ಲಿ ಆಸ್ಪತ್ರೆಗೆ ದಾಖಲಿಸಿ ಸ್ವತಃ ತಾವೇ ಚಿಕಿತ್ಸೆ ನೀಡಿ ಸಂಸದ ಉಮೇಶ್ ಜಾಧವ್ ಮಾನವೀಯತೆ ಮೆರೆದಿದ್ದಾರೆ.

    ಯಾದಗಿರಿ ನಗರದ ಕೆಎಸ್ಆರ್‌ಟಿಸಿ ಕಾರ್ಯಾಗಾರ ಬಳಿ ಬೈಕ್ ಮತ್ತು ಟಾಟಾ ಏಸ್ ವಾಹನದ ನಡುವೆ ಅಪಘಾತ ನಡೆದಿತ್ತು. ಈ ಘಟನೆಯಲ್ಲಿ ಗುರಮಿಠಕಲ್ ತಾಲೂಕಿನ ಕೆ.ಅರಕೇರಿ ಗ್ರಾಮದ ರಾಠೋಡ ಹಾಗೂ ನರೇಶ್ ಎಂಬುವವರು ತೀವ್ರವಾಗಿ ಗಾಯಗೊಂಡಿದ್ದರು.

    ಆದೇ ದಾರಿಯಲ್ಲಿ ರೈಲು ಕಾರ್ಯಾಗಾರ ವೀಕ್ಷಿಸಲು ತೆರಳುತಿದ್ದ ಉಮೇಶ್ ಜಾಧವ್ ಅವರು ವಾಪಸ್ ಬರುತ್ತಿರುವಾಗ ಘಟನೆ ತಿಳಿದು ತಕ್ಷಣ ಸಹಾಯಕ್ಕೆ ಬಂದಿದ್ದಾರೆ. ಅಂಬುಲೆನ್ಸ್ ಬರುವುದು ತಡವಾಗುತ್ತದೆ ಎಂದು ಬೈಕಿನಲ್ಲಿ ಅಪಘಾತಕ್ಕೀಡಾಗಿದ್ದ ಇಬ್ಬರು ಯುವಕರನ್ನು ತಮ್ಮ ಕಾರಿನಲ್ಲೇ ಹತ್ತಿರದ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದಾರೆ ಮತ್ತು ಇಷ್ಟೇ ಅಲ್ಲದೇ ಜಾಧವ್ ಅವರು ಸ್ವತಃ ವೈದ್ಯರಾಗಿರುವುದರಿಂದ ತಾವೇ ಚಿಕಿತ್ಸೆ ಮಾಡಿ ಮಾನವೀಯತೆ ಮೆರೆದಿದ್ದಾರೆ.

     

    ಇದಾದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಜಾಧವ್ ಅವರು, ರಸ್ತೆಯಲ್ಲಿ ಅಪಘಾತವಾದ ಸಂದರ್ಭದಲ್ಲಿ ಮೊದಲು ಕರೆದುಕೊಂಡು ಹೋಗಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಬೇಕು. ಪ್ರಚಾರಕ್ಕಾಗಿ ಫೋಟೋ ತೆಗದುಕೊಳ್ಳುವುದನ್ನು ಮಾಡಬಾರದು ಎಂದು ಮನವಿ ಮಾಡಿದರು.

    ನಂತರ ಆಸ್ಪತ್ರೆಗೆ ಬಂದ ಯಾದಗಿರಿ ನಗರ ಟ್ರಾಫಿಕ್ ಪೋಲೀಸರು ಗಾಯಾಳುಗಳಿಂದ ಘಟನೆಯ ಬಗ್ಗೆ ಮಾಹಿತಿ ಪಡೆದಿದ್ದಾರೆ.

  • ರಾತ್ರೋರಾತ್ರಿ ಜಾಧವ್ ಭೇಟಿಯಾದ್ರು ರಮೇಶ್ ಜಾರಕಿಹೊಳಿ!

    ರಾತ್ರೋರಾತ್ರಿ ಜಾಧವ್ ಭೇಟಿಯಾದ್ರು ರಮೇಶ್ ಜಾರಕಿಹೊಳಿ!

    ಬೆಳಗಾವಿ: ನೂತನ ಸಂಸದರಾಗಿ ಆಯ್ಕೆಯಾದ ಡಾ.ಉಮೇಶ್ ಜಾಧವ್ ಅವರನ್ನು ಕಾಂಗ್ರೆಸ್ ರೆಬೆಲ್ ಶಾಸಕ ರಮೇಶ್ ಜಾರಕಿಹೊಳಿ ಭೇಟಿಯಾಗಿ ಶುಭಾಶಯ ಕೋರಿದ್ದಾರೆ.

    ಕಳೆದ ರಾತ್ರಿ ಖಾಸಗಿ ಹೋಟೆಲ್ ಒಂದರಲ್ಲಿ ಆಪರೇಷನ್ ಕಮಲದ ಎ ಟೀಮ್ ಡಾ.ಉಮೇಶ್ ಜಾಧವ್ ಅವರನ್ನು ಭೇಟಿಯಾಗಿತ್ತು. ಕಾಂಗ್ರೆಸ್‍ನ ಬಂಡಾಯ ಶಾಸಕ ರಮೇಶ್ ಜಾರಕಿಹೊಳಿ, ಉಮೇಶ್ ಜಾಧವ್, ಸಿಪಿ ಯೋಗೇಶ್ವರ್, ಮಾಲಿಕಯ್ಯ ಗುತ್ತೆದಾರ ಮತ್ತು ಯಡಿಯೂರಪ್ಪ ಪಿಎ ಸಂತೋಷ್ ಎಲ್ಲರೂ ಒಂದೇ ಕಡೆ ಸೇರಿ ಭಾಗಿಯಾಗಿದ್ದರು.

    ರಾತ್ರಿ ಡಿನ್ನರ್ ನೆಪದಲ್ಲಿ ಎರಡು ಗಂಟೆಗಳ ಕಾಲ ಮುಖಂಡರು ಮಾತುಕತೆ ನಡೆಸಿದ್ದಾರೆ. ರಾಜೀನಾಮೆ ನೀಡುವುದು ಸೇರಿದಂತೆ ಸರ್ಕಾರ ರಚನೆ ಕುರಿತು ಕೂಡ ಚರ್ಚೆ ಮಾಡಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲದೆ ಇಂದು ಸಂಜೆ ಗೋವಾ ತೆರಳುವುದಕ್ಕೆ ಅತೃಪ್ತ ಹಾಗೂ ರಮೇಶ್ ಟೀಮ್ ಪ್ಲಾನ್ ಮಾಡಿದೆ ಎಂದು ತಿಳಿದು ಬಂದಿದೆ.

    ಒಂದು ವೇಳೆ ಎಲ್ಲಾ ಅತೃಪ್ತ ಶಾಸಕರು ಸಂಪರ್ಕಕ್ಕೆ ಸಿಕ್ಕಿದ್ದೇ ಆದರೆ ಇಂದೇ ಗೋವಾಕ್ಕೆ ಶಿಫ್ಟ್ ಆಗಲು ಪ್ಲಾನ್ ಮಾಡಿದ್ದಾರೆ. ಈಗಾಗಲೇ ಗೋವಾದ ಫೋರ್ಟ್ ಅಗುಡಾದಲ್ಲಿರುವ ಫೈವ್ ಸ್ಟಾರ್ ಹೋಟೆಲ್ ನಲ್ಲಿ ಸುಮಾರು 30 ರೂಮ್ ಗಳು ಬುಕ್ ಆಗಿವೆ. ಅತೃಪ್ತರು ಕಾಲಾವಕಾಶ ಕೇಳಿದರೆ ಕೇಂದ್ರದಲ್ಲಿ ಸರ್ಕಾರ ರಚನೆವರೆಗೂ ಸುಮ್ಮನಿರಲು ತೀರ್ಮಾನ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

  • ಪೊಲೀಸ್ ವಾಹನದ ಮುಂದೇ ಧರಣಿ ಕುಳಿತ ಉಮೇಶ್ ಜಾಧವ್

    ಪೊಲೀಸ್ ವಾಹನದ ಮುಂದೇ ಧರಣಿ ಕುಳಿತ ಉಮೇಶ್ ಜಾಧವ್

    – ‘ಕೈ’ ಮುಖಂಡರಿಂದ ಮತದಾರರಿಗೆ ಹಣ ಹಂಚಿಕೆ

    ಕಲಬುರಗಿ: ಮತದಾರರಿಗೆ ಹಣ ಹಂಚಲು ಬಂದ ಚಿತ್ತಾಪುರ ಕಾಂಗ್ರೆಸ್ ತಾಲೂಕು ಪಂಚಾಯಿತಿ ಸದಸ್ಯ ನಾಮದೇವ್ ರಾಠೋಡನನ್ನು ಪೊಲೀಸರು ವಶಕ್ಕೆ ಪಡೆದು ಬಿಡಲಾಗಿದೆ. ಇನ್ನು ಈ ಸಂದರ್ಭದಲ್ಲಿ ಪೊಲೀಸರ ನಡೆ ಖಂಡಿಸಿ ಮಾಜಿ ಶಾಸಕ ಉಮೇಶ್ ಜಾಧವ್ ಪೊಲೀಸ್ ವಾಹನದ ಮುಂದೆ ಪ್ರತಿಭಟನೆ ನಡೆಸಿದ್ದಾರೆ.

    ಸಚಿವ ಪ್ರಿಯಾಂಕ್ ಖರ್ಗೆ ರೌಡಿಗಳನ್ನು ಕ್ಷೇತ್ರದಲ್ಲಿ ಕರೆತಂದು ಹಣ ಹಂಚಿಕೆ ಮಾಡುತ್ತಿದ್ದಾರೆ. ನಮ್ಮ ಮತದಾರರಿಗೆ ಬಿಜೆಪಿಗೆ ಮತ ಹಾಕದಂತೆ ಬೆದರಿಕೆ ಹಾಕಲಾಗುತ್ತಿದೆ. ಹೀಗಿದ್ದರೂ ಪೊಲೀಸರು ಕಾಂಗ್ರೆಸ್ ಪರ ಕೆಲಸ ಮಾಡುತ್ತಿದ್ದಾರೆ ಎಂದು ಉಮೇಶ್ ಜಾಧವ್ ಆರೋಪಿಸಿದ್ದಾರೆ.

    ಈ ಕುರಿತು ಕಾಂಗ್ರೆಸ್ ತಾಲೂಕು ಪಂಚಾಯಿತಿ ಸದಸ್ಯನನ್ನು ಕೇಳಿದರೆ, ನಾನು ಹಣ ಹಂಚಲು ಬಂದಿಲ್ಲ.ನಮ್ಮ ಸಂಬಂಧಿಕರ ಕಾರ್ಯಕ್ರಮಕ್ಕೆ ಹೋಗುತ್ತಿರುವುದ್ದಾಗಿ ಹೇಳಿದ್ದಾರೆ. ಈ ಸಂದರ್ಭದಲ್ಲಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಸ್ಥಳಕ್ಕೆ ಕಲಬುರಗಿ ಎಸ್‍ಪಿ ಯಡಾ ಮಾರ್ಟಿನ್ ಭೇಟಿ ನೀಡಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದರು.

    ಇದಕ್ಕೂ ಮುನ್ನ ಚಿಂಚೋಳಿಯ ಬೇಡಸೂರ ತಾಂಡಾದಲ್ಲಿ ಮತದಾನದ ಬಳಿಕ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಉಮೇಶ್ ಜಾಧವ್, ಮೇ 23 ರ ನಂತರ ರಾಜರಾಜಕಾರಣದಲ್ಲಿ ಭೂಕಂಪ ಆಗುತ್ತದೆ. ನನ್ನ ಅವಧಿಯಲ್ಲಿ ಆದ ಅಭಿವೃದ್ಧಿ ಕೆಲಸ ನೋಡಿ ನನ್ನ ಮಗ ಅವಿನಾಶ್ ಜಾಧವ್‍ಗೆ ಕ್ಷೇತ್ರದ ಜನ ಆಶೀರ್ವಾದ ಮಾಡುತ್ತಾರೆ. ಸಚಿವ ಪ್ರಿಯಾಂಕ್ ಖರ್ಗೆ ನನ್ನ ಬಗ್ಗೆ ಕೀಳಾಗಿ ಮಾತನಾಡಿ ಅವರ ಸಂಸ್ಕೃತಿಯನ್ನ ತೋರಿಸಿದ್ದಾರೆ. ಹೀಗಾಗಿ ಇದನೆಲ್ಲ ನೋಡಿಕೊಂಡು ಚಿಂಚೋಳಿ ಜನ ನಮ್ಮ ಕೈ ಹಿಡಿಯುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

  • ಚಿಂಚೋಳಿ ಉಪಚುನಾವಣೆ ಕುರುಡು ಕಾಂಚಾಣ – ವೋಟಿಗಾಗಿ ನೋಟು ಆಡಿಯೋ ವೈರಲ್!

    ಚಿಂಚೋಳಿ ಉಪಚುನಾವಣೆ ಕುರುಡು ಕಾಂಚಾಣ – ವೋಟಿಗಾಗಿ ನೋಟು ಆಡಿಯೋ ವೈರಲ್!

    ಕಲಬುರಗಿ: ಭಾನುವಾರ ನಡೆಯಲಿರುವ ಚಿಂಚೋಳಿ ಉಪಚುನಾವಣೆಯಲ್ಲಿ ಕುರುಡು ಕಾಂಚಾಣ ಕುಣಿಯುತ್ತಲಿದೆ. ಎರಡೂ ಪಕ್ಷಗಳು ತೆರೆಮರೆಯಲ್ಲಿ ಕಾರ್ಯಕರ್ತರಿಗೆ ಹಣ ಹಂಚಿಕೆ ಮಾಡುತ್ತಿದ್ದಾರೆ ಎನ್ನಲಾದ ಆಡಿಯೋ ಒಂದು ಬಿಡುಗಡೆಯಾಗಿದ್ದು, ಸ್ಥಳೀಯ ಮಟ್ಟದಲ್ಲಿ ಸಖತ್ ವೈರಲ್ ಆಗಿದೆ.

    ಚಿಂಚೋಳಿ ಬಿಜೆಪಿ ಮುಖಂಡ ಮತ್ತು ಗ್ರಾಮ ಪಂಚಾಯತಿಯ ಅಧ್ಯಕ್ಷರೊಬ್ಬರು ನಡೆಸಿದ್ದಾರೆ ಎನ್ನಲಾಗುವ ಆಡಿಯೋ ಸಂಭಾಷಣೆಯಲ್ಲಿ ಈ ಬಾರಿಯ ಉಪಚುನಾವಣೆಯಲ್ಲಿ ಎರಡು ಪಕ್ಷಗಳು ಹಣದ ಹೊಳೆಯನ್ನೇ ಹರಿಸುತ್ತಿವೆ ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ.

    ಯಾರು ಯಾರಿಗೇ ಹಣ ಕೊಟ್ಟಿದ್ದೇವೆ. ಎಷ್ಟು ಎಷ್ಟು ಹಣ ಕೊಡಲಾಗುತ್ತಿದೆ?. ಯಾರಿಗೆ ಹಣ ನೀಡಲಾಗುತ್ತಿಲ್ಲ ಎನ್ನುವುದರ ಬಗ್ಗೆ ಸ್ವತಃ ಸ್ಥಳೀಯ ಬಿಜೆಪಿ ಮುಖಂಡ ಆಡಿಯೋ ನಲ್ಲಿ ಬಿಚ್ಚಿಟ್ಟಿದ್ದಾರೆ. ಈ ಆಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಚರ್ಚೆಗೆ ಒಳಪಟ್ಟಿದೆ. ಆದ್ರೆ ಈ ಕುರಿತು ಯಾವುದೇ ನಾಯಕರು ಪ್ರತಿಕ್ರಿಯೆಯನ್ನ ನೀಡಿಲ್ಲ.

    ಈ ಉಪಚುನಾವಣೆ ಎರಡು ಪಕ್ಷಗಳಿಗೂ ಪ್ರತಿಷ್ಠೆಯ ಕಣವಾಗಿದೆ. ಕಾಂಗ್ರೆಸ್ ನಿಂದ ಸುಭಾಷ್ ರಾಥೋಡ್ ಸ್ಪರ್ಧೆ ಮಾಡಿದರೆ, ಬಿಜೆಪಿಯಿಂದ ಉಮೇಶ್ ಜಾಧವ್ ಪುತ್ರ ಅವಿನಾಶ್ ಜಾಧಾವ್ ಸ್ಪರ್ಧೆಯಲ್ಲಿದ್ದಾರೆ.