Tag: Umesh Jadav

  • ತಮ್ಮದೇ ರಾಜಕೀಯ ನಡೆಸಲು ನನ್ನನ್ನು ಪಕ್ಷದಿಂದ ಬಿಡಿಸಿದ್ರು: ಜಾಧವ್ ಕಿಡಿ

    ತಮ್ಮದೇ ರಾಜಕೀಯ ನಡೆಸಲು ನನ್ನನ್ನು ಪಕ್ಷದಿಂದ ಬಿಡಿಸಿದ್ರು: ಜಾಧವ್ ಕಿಡಿ

    – ಕಾಂಗ್ರೆಸ್ ಪಕ್ಷದ್ದೂ ಲೋ ಲೆವೆಲ್ ರಾಜಕೀಯ

    ಕಲಬುರಗಿ: ಜಿಲ್ಲೆಯಲ್ಲಿ ತಮ್ಮದೇ ರಾಜಕೀಯ ನಡೆಯಬೇಕು ಎನ್ನುವ ಒಂದೇ ಉದ್ದೇಶಕ್ಕಾಗಿ ನನ್ನನ್ನು ಪಕ್ಷದಿಂದ ಬಿಡಿಸಿದ್ದು ಎಂದು ಶಾಸಕ ಉಮೇಶ್ ಜಾಧವ್ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಆರೋಪಿಸಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆಗಳಿಗೆ ಪ್ರತಿಕ್ರಿಯಿಸಿ, ನಾನು ಯಾಕೆ ಪಕ್ಷ ಬಿಟ್ಟಿದ್ದು ಎಂದು ಪ್ರಿಯಾಂಕ್ ಖರ್ಗೆಗೆ ಗೊತ್ತು. ಕಲಬುರಗಿಯಲ್ಲಿ ತಮ್ಮದೇ ರಾಜಕೀಯ ನಡೀಬೇಕು ಎಂದು ಉದ್ದೇಶಪೂರ್ವಕವಾಗಿ ಅವರೇ ನನ್ನನ್ನು ಪಕ್ಷದಿಂದ ಬಿಡಿಸಿದ್ದು ಎಂದು ಆರೋಪಿಸಿದರು.

    `ಜಂಪಿಂಗ್ ಜಾಧವ್’ ಎಂಬ ಪ್ರಿಯಾಂಕ್ ಖರ್ಗೆ ಟ್ವೀಟ್ ವಿಚಾರವಾಗಿ ಮಾತನಾಡಿ, ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಕೈ ಪಕ್ಷ ಬಿಟ್ಟು ದೇವರಾಜ ಅರಸು ಜೊತೆಗೆ ಹೋದಾಗ ಜಂಪಿಂಗ್ ಆಗಲಿಲ್ವೇ ಎಂದು ಪ್ರಶ್ನಿಸಿ ಟಾಂಗ್ ಕೊಟ್ಟರು.

    ಮೈತ್ರಿ ಸರ್ಕಾರ ಮಾಡಿರುವ ಅಭಿವೃದ್ಧಿ ಬಗ್ಗೆ ಮಾತನಾಡಲ್ಲ. ಅವರು ನನ್ನ ಬೈಯ್ಯುವುದನ್ನು ಬಿಟ್ಟು ಬೇರೆ ಏನೂ ಹೇಳುವುದಿಲ್ಲ. ಕಾಂಗ್ರೆಸ್ ಪಕ್ಷದವರದ್ದು ಅಭಿವೃದ್ಧಿ ಇಲ್ಲದ ಲೋ ಲೆವೆಲ್ ರಾಜಕೀಯ ಎಂದರು. ಬಳಿಕ ಇಂದು ನಡೆಯುತ್ತಿರುವ ಚಿಂಚೊಳ್ಳಿ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಅವಿನಾಶ್ ಜಾಧವ್ 25 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂದು ಬೆಡಸೂರ ಗ್ರಾಮದಲ್ಲಿ ಮತದಾನ ಬಳಿಕ ಉಮೇಶ್ ಜಾಧವ್ ವಿಶ್ವಾಸ ವ್ಯಕ್ತಡಿಸಿದರು.

    ಅಷ್ಟೇ ಅಲ್ಲದೆ `ಡಾಕ್ಟರ್ ಇದ್ದಾರೆ ಆಪರೇಷನ್ ಮಾಡುತ್ತಾರೆ ಎಂದು ಪಕ್ಷಕ್ಕೆ ಕರೆತಂದರೆ ಡಾ.ಜಾಧವ್ ಅಬಾರ್ಷನ್ ಮಾಡಿ ಹೋಗಿದ್ದಾರೆ’ ಎಂಬ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿ, ತಾಯಿ ಹೆಲ್ತ್ ಕೆಡಬಾರದು ಎಂದು ಅಬಾರ್ಷನ್ ಮಾಡಿದ್ದೇವೆ. ಅದನ್ನ ಇನ್ವೈಟೇಬಲ್ ಅಬಾರ್ಷನ್ ಎಂದು ಕರೀತೀವಿ. ಅಬಾರ್ಷನ್ ಮಾಡದಿದ್ದರೆ ಮಗು ಆರೋಗ್ಯವೂ ಕೆಡುತಿತ್ತು, ತಾಯಿ ಆರೋಗ್ಯವೂ ಕೆಡುತಿತ್ತು ಎಂದು ಜಾಧವ್ ತಿರುಗೇಟು ನೀಡಿದರು.

  • ಬಸ್‍ಗಳ ಮುಖಾಮುಖಿ ಡಿಕ್ಕಿ- ಗಾಯಾಳುಗಳ ಆರೋಗ್ಯ ವಿಚಾರಿಸಿದ ಬಿಜೆಪಿ ಅಭ್ಯರ್ಥಿ

    ಬಸ್‍ಗಳ ಮುಖಾಮುಖಿ ಡಿಕ್ಕಿ- ಗಾಯಾಳುಗಳ ಆರೋಗ್ಯ ವಿಚಾರಿಸಿದ ಬಿಜೆಪಿ ಅಭ್ಯರ್ಥಿ

    ಕಲಬುರಗಿ: ಜಿಲ್ಲೆಯ ಹೊರವಲಯದಲ್ಲಿ ಗುರುವಾರ ಸಾರಿಗೆ ಸಂಸ್ಥೆಯ ಎರಡು ಬಸ್‍ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ 30ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಈ ವಿಷಯ ತಿಳಿಯುತ್ತಿದ್ದಂತೆ ಬಿಜೆಪಿ ಅಭ್ಯರ್ಥಿ ಡಾ.ಉಮೇಶ್ ಜಾಧವ್ ತಡರಾತ್ರಿ 11.30ಕ್ಕೆ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ್ದಾರೆ.

    ಉಮೇಶ್ ಜಾಧವ್ ತಡರಾತ್ರಿ ಜಿಲ್ಲಾಸ್ಪತ್ರೆಗೆ ಭೇಟಿ ಕೊಟ್ಟು, ಅಪಘಾತದಲ್ಲಿ ಗಾಯಗೊಂಡವರನ್ನು ಮಾತನಾಡಿಸಿದ್ದಾರೆ. ಅಲ್ಲದೆ ಗಾಯಾಳುಗಳಿಗೆ ನೀಡಲಾಗುತ್ತಿರುವ ಚಿಕಿತ್ಸೆಯ ಬಗ್ಗೆ ಮಾಹಿತಿ ಪಡೆದಿದ್ದಾರೆ. ವೃತ್ತಿಯಲ್ಲಿ ವೈದ್ಯರಾಗಿದ್ದ ಜಾಧವ್ ಅವರೇ ಗಾಯಾಳುಗಳ ಆರೋಗ್ಯ ಪರಿಶೀಲನೆ ಕೂಡ ಮಾಡಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಕೂಡ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

    ಬಸ್‍ಗಳ ನಡುವೆ ಅಪಘಾತ:
    ಗುರುವಾರ ಸಾರಿಗೆ ಸಂಸ್ಥೆ ಎರಡು ಬಸ್‍ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ 30ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಂಭೀರ ಗಾಯಗೊಂಡಿದ್ದರು. ಗಾಣಗಾಪುರದಿಂದ ಚಿತ್ತಾಪುರಕ್ಕೆ ತೆರಳುತ್ತಿದ್ದ ಸಾರಿಗೆ ಸಂಸ್ಥೆಯ ಬಸ್ ಮತ್ತು ಚಿಂಚೋಳಿಯಿಂದ ಕಲಬುರಗಿಗೆ ಬರುತ್ತಿದ್ದ ಇನ್ನೊಂದು ಸಾರಿಗೆ ಸಂಸ್ಥೆಯ ಬಸ್ ನಡುವೆ ಮುಖಾಮುಖಿ ಡಿಕ್ಕಿಯಾಗಿತ್ತು. ಅಪಘಾತದಿಂದ ಇಬ್ಬರ ಸ್ಥಿತಿ ಚಿಂತಾಜನಕವಾಗಿದ್ದರಿಂದ ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. 30ಕ್ಕೂ ಹೆಚ್ಚು ಗಾಯಾಳುಗಳನ್ನು ಕಲಬುರಗಿ ಜಿಲ್ಲಾಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

    ಈ ಬಗ್ಗೆ ಕಲಬುರಗಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

  • ಸಿಎಂ ಕುಮಾರಸ್ವಾಮಿ ಸುಳ್ಳಿನ ಸರದಾರ: ರವಿಕುಮಾರ್ ವ್ಯಂಗ್ಯ

    ಸಿಎಂ ಕುಮಾರಸ್ವಾಮಿ ಸುಳ್ಳಿನ ಸರದಾರ: ರವಿಕುಮಾರ್ ವ್ಯಂಗ್ಯ

    – ಕಾಂಗ್ರೆಸ್‍ಗೆ ಜನರಿಂದ ಚೋರ್ ಬಿರುದು
    – ಜಾಧವ್ ನಮ್ಮ ಅಭ್ಯರ್ಥಿ, ಖರ್ಗೆ ವಿರುದ್ಧ ಗೆಲುವು ನಿಶ್ಚಿತ

    ಕಲಬುರಗಿ: ಸಿಎಂ ಎಚ್.ಡಿ ಕುಮಾರಸ್ವಾಮಿ ಸುಳ್ಳಿನ ಸರದಾರ, ಕುಣಿಯೋಕೆ ಬರದಿದ್ದರೆ ನೆಲ ಡೊಂಕು ಅಂತಾರೆ ಎಂದು ಕುಮಾರಸ್ವಾಮಿ ವಿರುದ್ಧ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ ವಾಗ್ದಾಳಿ ನಡೆಸಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಸಾಲಮನ್ನಾದ ಬಗ್ಗೆ ಪದೇ ಪದೇ ಸುಳ್ಳು ಹೇಳಿಕೊಂಡು ಬರುತ್ತಿದ್ದಾರೆ, ಆದರೆ ಸಾಲ ಮನ್ನಾದ ಬಗ್ಗೆ ಇದೂವರೆಗೆ ಸ್ಪಷ್ಟವಾದಂತಹ ನಿರ್ಧಾರ ತೆಗೆದುಕೊಂಡಿಲ್ಲ. ನಿನ್ನೆ ಕಾಂಗ್ರೆಸ್ ಪರಿವರ್ತನಾ ರ್ಯಾಲಿಯಲ್ಲಿ ರಾಹುಲ್ ಗಾಂಧಿ ಹಾಗೂ ಖರ್ಗೆ ಕೆಂಡದಂತಹ ಬಿಸಿಲಿನಲ್ಲೂ ಹಸಿ ಸುಳ್ಳಿನ ಭಾಷಣ ಮಾಡಿದ್ದು, ಜನರು ಕಾಂಗ್ರೆಸ್‍ಗೆ ಚೋರ್ ಎಂಬ ಬಿರುದು ಕೊಟ್ಟಿದ್ದಾರೆ. ರಫೆಲ್ ಎಂಬುದು ಹಗರಣವಲ್ಲ, ಬದಲಿಗೆ ಅದು ವಿವಾದತ್ಮಕ ಪ್ರಕರಣ, ಆದ್ರೆ ಯುಪಿಎ ಸರ್ಕಾರ ಬೊಫೋರ್ಸ್ ಹಿಡಿದು ಅದನ್ನು ಹಗರಣ ಮಾಡಿದೆ ಎಂದು ಕಿಡಿಕಾರಿದ್ದಾರೆ.

    ಬಳಿಕ ಚಿಂಚೋಳಿ ಶಾಸಕರಾಗಿದ್ದ ಉಮೇಶ್ ಜಾಧವ್ ಅವರೇ ನಮ್ಮ ಪಕ್ಷದ ಅಭ್ಯರ್ಥಿ, ಖರ್ಗೆ ವಿರುದ್ಧ ಜಾಧವ್ ಗೆಲವು ನಿಶ್ಚಿತ ಅಂತ ವಿಶ್ವಾಸ ವ್ಯಕ್ತಪಡಿಸಿದರು. ಹಾಗೆಯೇ ಜಾಧವ್ ಅವರು ಸ್ವ ಇಚ್ಚೆಯಿಂದ ರಾಜೀನಾಮೆ ಸಲ್ಲಿಸಿದಾರೆ, ರಾಜೀನಾಮೆ ಅಂಗೀಕರಿಸುವುದಕ್ಕೆ ಸ್ಪೀಕರ್ ರಮೇಶ್ ಕುಮಾರ್ ಒಪ್ಪಿಕೊಳ್ಳಲೇಬೇಕು. ಜಾಧವ್ ಅವರ ರಾಜೀನಾಮೆ ಅಂಗೀಕಾರ ಮಾಡಲು ಸಮ್ಮಿಶ್ರ ಸರ್ಕಾರ ಅಡ್ಡಗಾಲು ಹಾಕುತ್ತಿದೆ ಅಂತ ಆರೋಪಿಸಿದರು.