Tag: Umabharathi

  • ಪೇಜಾವರ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ- ವೆಂಟಿಲೇಟರ್ ಮೂಲಕವೇ ಉಸಿರಾಟ

    ಪೇಜಾವರ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ- ವೆಂಟಿಲೇಟರ್ ಮೂಲಕವೇ ಉಸಿರಾಟ

    – ಉಡುಪಿಗೆ ಇಂದು ಉಮಾಭಾರತಿ ಭೇಟಿ?

    ಉಡುಪಿ: ಪೇಜಾವರಶ್ರೀ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ. ಮಧ್ಯರಾತ್ರಿ ತಪಾಸಣೆ ನಡೆಸಿದ ತಜ್ಞ ವೈದ್ಯರು ಕೊಂಚಮಟ್ಟಿನ ಚೇತರಿಕೆ ಗುರುತಿಸಿದ್ದಾರೆ.

    ಈ ಹಿನ್ನೆಲೆಯಲ್ಲಿ ಶ್ರೀಗಳಿಗೆ ಔಷಧಿ ಪ್ರಮಾಣ ಹೆಚ್ಚಿಸುವ ಬಗ್ಗೆ ಚಿಂತನೆ ನಡೆದಿದ್ದು, ಇಂದು ಈ ಬಗ್ಗೆ ವೈದ್ಯತಂಡ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಿದೆ. ಶ್ರೀಗಳಿಗೆ ವೆಂಟಿಲೇಟರ್ ಮೂಲಕ ಉಸಿರಾಟದ ವ್ಯವಸ್ಥೆ ಮುಂದುವರಿದಿದೆ ಎಂದು ಶ್ರೀಗಳ ಆಪ್ತ ಸಹಾಯಕರು ಮಾಹಿತಿ ನೀಡಿದ್ದಾರೆ.

    ಪೇಜಾವರಶ್ರೀ ಅನಾರೋಗ್ಯ ಹಿನ್ನೆಲೆಯಲ್ಲಿ ಇಂದು ಕೇಂದ್ರ ಮಾಜಿ ಸಚಿವೆ ಉಮಾಭಾರತಿ ಉಡುಪಿಗೆ ಆಗಮಿಸುವ ಸಾಧ್ಯತೆಗಳಿದೆ. ಪೇಜಾವರ ಶ್ರೀಗಳಿಂದ ದೀಕ್ಷೆ ಪಡೆದಿರುವ ಉಮಾಭಾರತಿ, ಇಂದು ಗುರುಗಳ ದರ್ಶನ ಪಡೆಯಲಿದ್ದಾರೆ. ರೈಲಿನ ಮೂಲಕ ಉಡುಪಿಗೆ ಧಾವಿಸುತ್ತಿರುವ ಉಮಾಭಾರತಿ ಅವರು ಸಂಜೆ ಕೆಎಂಸಿಗೆ ಭೇಟಿ ನೀಡಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

    ಶುಕ್ರವಾರ ಮುಂಜಾನೆ ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಶ್ರೀಗಳನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಶ್ರೀಗಳ ಎದೆಯಲ್ಲಿ ಕಟ್ಟಿದ ಕಫ ನಿಧಾನವಾಗಿ ಕರಗುತ್ತಿದೆ. ನ್ಯುಮೋನಿಯಾ ಸಮಸ್ಯೆಯಿಂದ ಬಳಲುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಭಕ್ತರು ಯಾವುದೇ ಆತಂಕ ಪಡಬೇಕಿಲ್ಲ. ಸುಳ್ಳು ವದಂತಿಗಳಿಗೆ ಯಾರೂ ಕಿವಿಗೊಡಬೇಡಿ, ಎರಡು ದಿನದಿಂದ ಎಲ್ಲಾ ಬೆಳವಣಿಗೆಗಳನ್ನು ಗಮನಿಸುತ್ತಿದ್ದೇನೆ ಎಂದು ಸ್ವಾಮೀಜಿ ಆಪ್ತ ಸಹಾಯಕ ವಿಷ್ಣುಮೂರ್ತಿ ಆಚಾರ್ಯ ಭಾನುವಾರ ಹೇಳಿದ್ದರು.

  • ಪೇಜಾವರಶ್ರೀ ಮಧ್ವಪೀಠವೇರಿ 80 ವರ್ಷ ಪೂರ್ಣ- ರಾಷ್ಟ್ರಪತಿ ಕೋವಿಂದ್, ಉಮಾಭಾರತಿಯಿಂದ ಗುರುವಾರ ಗುರುವಂದನೆ

    ಪೇಜಾವರಶ್ರೀ ಮಧ್ವಪೀಠವೇರಿ 80 ವರ್ಷ ಪೂರ್ಣ- ರಾಷ್ಟ್ರಪತಿ ಕೋವಿಂದ್, ಉಮಾಭಾರತಿಯಿಂದ ಗುರುವಾರ ಗುರುವಂದನೆ

    ಉಡುಪಿ: ಅಷ್ಟಮಠದ ಹಿರಿಯಶ್ರೀಗಳಾದ ಪೇಜಾವರ ಶ್ರೀಗಳು ಮಧ್ವಪೀಠವೇರಿ 80 ವರ್ಷ ಪೂರ್ಣಗೊಂಡಿದ್ದು, ಸ್ವತಃ ರಾಷ್ಟ್ರಪತಿಗಳು ಹಾಗೂ ಶ್ರೀಗಳ ಶಿಷ್ಯೆ ಕೇಂದ್ರ ಸಚಿವೆ ಉಮಾಭಾರತಿಯವರು ಗುರುವಂದನೆ ಮಾಡಲಿದ್ದು ಉಡುಪಿಯಲ್ಲಿ ಕಾರ್ಯಕ್ರಮದ ಸಿದ್ಧತೆ ಜೋರಾಗಿದೆ.

    ಪೇಜಾವರ ಶ್ರೀಗಳು ಬ್ರಾಹ್ಮಣ ಯತಿಯಾದ್ರೂ ದಲಿತ ಕೇರಿಗೆ ಹೋದ ಕ್ರಾಂತಿಕಾರಿ. ಸರ್ವಸಂಘ ಪರಿತ್ಯಾಗಿಯಾದ್ರೂ ರಾಜಕೀಯ ಪಂಡಿತ. ಪ್ರಪಂಚ ಅರಿಯದ ವಯಸ್ಸಿನಲ್ಲಿ ಪೀಠವೇರಿ ಸನ್ಯಾಸಿಯಾದ್ರು ಶ್ರೀ ಪೇಜಾವರ ಶ್ರೀಗಳು. 80 ವರ್ಷದ ಹಿಂದೆ ಇವರ ಹೆಸರು ವೆಂಕಟರಮಣ. ಆಗಿನ್ನೂ ಅವರು 8 ವರ್ಷದ ಬಾಲಕ. ದಕ್ಷಿಣ ಕನ್ನಡ ಜಿಲ್ಲೆಯ ಸರಕಾರಿ ಶಾಲೆಯಲ್ಲಿ ಎರಡನೇ ತರಗತಿ ವ್ಯಾಸಂಗ ಮಾಡುತ್ತಿದ್ದರು. ಪುಟ್ಟ ಬಾಲಕನಿಗೆ ಅದೇನು ಕನಸಿತ್ತೋ, ಮುಂದೇನು ಆಗಬೇಕೆಂಬ ಮನಸ್ಸಿತ್ತೋ ಗೊತ್ತಿಲ್ಲ. ಆದ್ರೆ ಮಧ್ವಾಚಾರ್ಯರಿಂದ ಸ್ಥಾಪಿತವಾದ ಅಷ್ಟಮಠಗಳ ಪೈಕಿ ಒಂದಾಗ ಪೇಜಾವರ ಮಠಕ್ಕೆ ಉತ್ತರಾಧಿಕಾರಿಯಾಗಿ ಧೀಕ್ಷೆ ಕೊಡಲಾಯ್ತು. ಬಳಿಕ ಮಾಣಿ ವೆಂಕಟರಮಣ ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀಪಾದರಾದರು.

    ಪೇಜಾವರ ಸ್ವಾಮೀಜಿ ಸನ್ಯಾಸಿಯಾಗಿ 80 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಗುರುವಂದನಾ ಕಾರ್ಯಕ್ರಮ ನೆರವೇರುತ್ತಿದೆ. ಆದರಿಂದ ಪೇಜಾವರಶ್ರೀ ಶಿಷ್ಯೆ ಉಮಾಭಾರತಿ ಗುರುವಂದನೆ ಮಾಡಲಿದ್ದಾರೆ. ಡಿಸೆಂಬರ್ 27ರಂದು ನಡೆಯುವ ಕಾರ್ಯಕ್ರಮಕ್ಕೆ ಭಾರತದ ಪ್ರಥಮ ಪ್ರಜೆ ರಾಮನಾಥ ಕೋವಿಂದ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಹಾಗೆಯೇ ಕರ್ನಾಟಕ ರಾಜ್ಯಪಾಲ ವಜೂಭಾಯಿ ವಾಲಾ, ನಾಗಾಲ್ಯಾಂಡ್ ರಾಜ್ಯಪಾಲ ಪಿ.ಬಿ ಆಚಾರ್ಯ ಸ್ವಾಮೀಜಿಯವರ ಎಂಬತ್ತನೇ ಸನ್ಯಾಸ ಉತ್ಸವದಲ್ಲಿ ಭಾಗಿಯಾಗಲಿದ್ದಾರೆ.

    ಪೇಜಾವರ ಶ್ರೀಗಳಿಗೆ ಈಗ 89 ವಯಸ್ಸು. ಹೆಸರಿಗೆ 89, ಆದ್ರೆ ಶ್ರೀಗಳ ಓಡಾಟ, ಚುರುಕುತನ, ಪೂಜೆ, ಯೋಗ, ಭಾಷಣ, ಪ್ರವಚನ ಕೇಳಿದ್ರೆ ಇನ್ನೂ ಮೂವತ್ತೊಂಬತ್ತು ಅನ್ನಿಸುತ್ತದೆ. ಕಾವಿ ಉಟ್ಟು ಕೇವಲ ಧಾರ್ಮಿಕವಾಗಿ ತೊಡಗಿಸಿಕೊಳ್ಳದೆ ಸಾಮಾಜಿಕ ಚಟುವಟಿಕೆಯಲ್ಲೂ ಪೇಜಾವರಶ್ರೀ ಮುಂಚೂಣಿಯಲ್ಲಿದ್ದಾರೆ. 60ರ ದಶಕದಲ್ಲಿ ದಲಿತ ಕೇರಿಗೆ ಭೇಟಿಕೊಟ್ಟು ಅಸ್ಪೃಶ್ಯತೆಯನ್ನು ಹೋಗಲಾಡಿಸುವ ದಿಟ್ಟ ಹೆಜ್ಜೆಯನ್ನು ಶ್ರೀಗಳು ಇಟ್ಟಿದ್ದರು. ಬ್ರಾಹ್ಮಣರಿಂದ ವಿರೋಧ ಬಂದರೂ, ಲೆಕ್ಕಕ್ಕೆ ತೆಗೆದುಕೊಳ್ಳದೆ ಮುಂದುವರಿದವರು. ಇತ್ತೀಚಿನ ಮಡೆಸ್ನಾನಕ್ಕೆ ಪರಿಹಾರ ನೀಡಿ ಪರ್ಯಾಯ ಸಂದರ್ಭದಲ್ಲಿ ಇಫ್ತಾರ್ ಕೂಟ ಮಾಡಿ ವಿರೋಧ ಕಟ್ಟಿಕೊಂಡ ಶ್ರೀಗಳು, ಎಲ್ಲವನ್ನೂ ಯಶಸ್ವಿಯಾಗಿ ನಿಭಾಯಿಸುತ್ತಾ, ಉಡುಪಿ ಕೃಷ್ಣನಿಗೆ ಅತೀಹೆಚ್ಚು ಪೂಜೆ ಮಾಡಿದ ಸಂತ ಎಂಬ ಕೀರ್ತಿಗೂ ಸ್ವಾಮೀಜಿ ಪಾತ್ರವಾಗಿದ್ದಾರೆ. ರಾಮಮಂದಿರ ನಿರ್ಮಾಣ ಆಗಬೇಕೆಂಬ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಪೇಜಾವರ ಶ್ರೀಗಳಿಗೆ ಇದೀಗ ತನ್ನ ಶಿಷ್ಯೆ ಹಾಗೂ ದೇಶದ ಮೊದಲ ಪ್ರಜೆಯಿಂದ ಸನ್ಯಾಸದ 80ನೇ ವರ್ಷದ ಸಂದರ್ಭ ಗುರುವಂದನೆಯಲ್ಲಿ ಪಡೆಯಲ್ಲಿದ್ದಾರೆ.

    ಪಲಿಮಾರು ವಿದ್ಯಾಧೀಶತೀರ್ಥ ಸ್ವಾಮೀಜಿ ಅವರು ಮಾತನಾಡಿ, ಹಿರಿಯ ಶ್ರೀಗಳಿಗೆ ನಮ್ಮ ಪರ್ಯಾಯ ಸಂದರ್ಭದಲ್ಲಿ 80ರ ಗುರುವಂದನೆ ನಡೆಯುತ್ತಿರುವುದು ಮನಸ್ಸಿಗೆ ಬಹಳ ಖುಷಿ ಕೊಟ್ಟಿದೆ. ಅವರ ನೂರನೇ ಗುರುವಂದನಾ ಕಾರ್ಯಕ್ರಮ ನೋಡುವ ಅವಕಾಶವನ್ನು ಭಗವಂತ ಕರುಣಿಸಲಿ. ಕೃಷ್ಣಮಠಕ್ಕೆ ರಾಷ್ಟ್ರಪತಿಗಳು ಆಗಮಿಸಲಿದ್ದು ದೇವರ ದರ್ಶನ ಮತ್ತು ಅವರ ಗೌರವಕ್ಕೆ ಸಿದ್ಧತೆ ನಡೆಸಿದ್ದೇವೆ ಎಂದರು.

    ಪೇಜಾವರಶ್ರೀಗಳಿಗೆ ದೇಶಾದ್ಯಂತ ಭಕ್ತರಿದ್ದಾರೆ. ಬಾಬ್ರಿ ಮಸೀದಿ ಧ್ವಂಸ, ಸಂವಿಧಾನ ತಿದ್ದುಪಡಿ ಮುಂತಾದ ಕೆಲ ಘಟನೆಗಳ ನಂತರ ಅವರನ್ನು ಟೀಕಿಸುವವರೂ ಹೆಚ್ಚಿದ್ದಾರೆ. ಒಟ್ಟಿನಲ್ಲಿ ಸನ್ಯಾಸ ಜೀವನದಲ್ಲಿ 80 ವರ್ಷಗಳನ್ನು ಪೂರೈಸಿರುವುದು ಹಾಗೂ ಸಮಾಜದ ಎಲ್ಲಾ ವರ್ಗಗಳನ್ನು ಮುಟ್ಟುವುದು ಸಾಮಾನ್ಯ ವಿಷಯವಲ್ಲ. 1940ರಿಂದ ಪೀಠವನ್ನು ನಿಭಾಯಿಸಿಕೊಂಡು ಬಂದು ಈಗಲೂ ಪ್ರಸಿದ್ಧರಾಗಿರುವುದು ಸುಲಭದ ಮಾತಲ್ಲ ಅನ್ನುವುದು ಎಲ್ಲರೂ ಒಪ್ಪಿಕೊಳ್ಳುವ ಸತ್ಯಂಶವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv