Tag: Uma Bharati

  • ನನ್ನನ್ನು ದೀದಿ ಮಾ ಅಂತ ಕರೆಯಿರಿ – ಕುಟುಂಬ ತ್ಯಜಿಸಿದ ಬಿಜೆಪಿ ನಾಯಕಿ ಉಮಾ ಭಾರತಿ

    ನನ್ನನ್ನು ದೀದಿ ಮಾ ಅಂತ ಕರೆಯಿರಿ – ಕುಟುಂಬ ತ್ಯಜಿಸಿದ ಬಿಜೆಪಿ ನಾಯಕಿ ಉಮಾ ಭಾರತಿ

    ಭೋಪಾಲ್: ಬಿಜೆಪಿಯ ಹಿರಿಯ ನಾಯಕಿ ಉಮಾ ಭಾರತಿ (Senior BJP leader Uma Bharti) ಅವರು ಎಲ್ಲಾ ಕೌಟುಂಬಿಕ ಸಂಬಂಧಗಳಿಂದ ದೂರವಾಗಿದ್ದು, ಇನ್ಮುಂದೆ “ದೀದಿ ಮಾ” (Didi Maa) ಎಂದು ಮಾತ್ರ ಗುರುತಿಸಿಕೊಳ್ಳಲು ಇಚ್ಛಿಸುವುದಾಗಿ ಟ್ವೀಟ್ ಮೂಲಕ ತಿಳಿಸಿದ್ದಾರೆ.

    ರಾಷ್ಟ್ರ ರಾಜಕೀಯದಲ್ಲಿ ಬಿಜೆಪಿ ಅಭಿವೃದ್ಧಿಗೆ ಮತ್ತು ರಾಮಮಂದಿರ ಚಳುವಳಿಯಲ್ಲಿ ಪ್ರಮುಖ ಪಾತ್ರವಹಿಸಿದವರಲ್ಲಿ ಉಮಾ ಭಾರತಿ ಅವರು ಕೂಡ ಒಬ್ಬರು. ಜೈನ ಗುರು ಆಚಾರ್ಯ ವಿದ್ಯಾಸಾಗರ ಮಹಾರಾಜ್ (Jain Muni Acharya Vidyasagar Maharaj ) ಅವರ ಆದೇಶದ ಮೇರೆಗೆ ತಮ್ಮ ಕುಟುಂಬದೊಂದಿಗಿನ ಎಲ್ಲಾ ಸಂಬಂಧಗಳನ್ನು ತೊರೆದಿದ್ದು, ನನ್ನನ್ನು ದೀದಿ ಮಾ ಎಂದು ಮಾತ್ರ ಗುರುತಿಸಿಕೊಳ್ಳುತ್ತೇನೆ. ಇಡೀ ವಿಶ್ವ ಸಮುದಾಯವೇ ನನ್ನ ಕುಟುಂಬವಾಗಿರಬೇಕು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪಕ್ಷ ಬಿಡ್ತಾರಾ ರಮೇಶ್ ಜಾರಕಿಹೊಳಿ? – ಸಿದ್ದಾಂತ ಒಪ್ಪಿ ಬಂದ್ರೆ ಸ್ವಾಗತ ಅಂದ್ರು ಕೈ ಮುಖಂಡ

    ಈ ಕುರಿತಂತೆ ಸರಣಿ ಟ್ವೀಟ್ ಮಾಡಿರುವ ಉಮಾ ಭಾರತಿಯವರು,ನನ್ನ ಸನ್ಯಾಸ ದೀಕ್ಷೆಯ 30ನೇ ವರ್ಷದಲ್ಲಿ ನಾನು ಅವರ (ದೀಕ್ಷೆ ನೀಡಿದ್ದ ಸಂತರ) ಆದೇಶವನ್ನು ಪಾಲಿಸಲು ಪ್ರಾರಂಭಿಸುತ್ತೇನೆ ಎಂದು ನಾನು ನಿರ್ಧರಿಸಿದ್ದೆ. ಅದರಂತೆ 2022ರ ಮಾರ್ಚ್ 17ರಂದು ಸಾಗರ್ ಜಿಲ್ಲೆಯ ರಹಾಲಿಯಲ್ಲಿ ಎಲ್ಲ ಸಂತರ ಮುಂದೆ ಕೌಟುಂಬಿಕ ಬಾಂಧವ್ಯಗಳಿಂದ ಮುಕ್ತಳಾಗುವ ಬಗ್ಗೆ ನನಗೆ ಅವರು ಆದೇಶವನ್ನು ನೀಡಿದ್ದರು. ಇದೇ 17ರಂದು ನಾನು ಕುಟುಂಬ ಸದಸ್ಯರೊಂದಿಗಿನ ಎಲ್ಲಾ ಬಂಧನದಿಂದ ಮುಕ್ತಳಾಗುತ್ತೇನೆ. ನನ್ನ ಜಗತ್ತು ಮತ್ತು ಕುಟುಂಬದ ವ್ಯಾಪ್ತಿ ವಿಸ್ತಾರಗೊಂಡಿದೆ. ಈಗ ನಾನು ಇಡೀ ವಿಶ್ವ ಸಮುದಾಯಕ್ಕೇ ಸಹೋದರಿ ಮತ್ತು ತಾಯಿಯಾಗಿದ್ದೇನೆ. ನನಗೆ ವೈಯಕ್ತಿಕವಾಗಿ ಕುಟುಂಬ ಎಂಬುದಿಲ್ಲ ಎಂದಿದ್ದಾರೆ.

    ನನ್ನ ಕುಟುಂಬ, ನನ್ನ ಸಹೋದರರು, ಸೋದರಳಿಯರು ಮತ್ತು ಸೊಸೆಯಂದಿರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ನನಗೆ ರಾಜಕೀಯದಲ್ಲಿ ಸಾಕಷ್ಟು ಬೆಂಬಲ ನೀಡಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಆಡಳಿತದಲ್ಲಿಯೂ ಸಾಕಷ್ಟು ಸುಳ್ಳು ಪ್ರಕರಣ, ಕಿರುಕುಳ ಮತ್ತು ಅನೇಕ ತೊಂದರೆಗಳನ್ನು ಅನುಭವಿಸಿದ್ದೇನೆ. ನನ್ನ ಪೋಷಕರು ಕಲಿಸಿದ ಉತ್ತಮ ಮೌಲ್ಯಗಳು, ನನ್ನ ಗುರುಗಳ ಸಲಹೆ, ನನ್ನ ಜಾತಿ ಮತ್ತು ಕುಲದ ಘನತೆ, ನನ್ನ ಪಕ್ಷದ ಸಿದ್ಧಾಂತ ಮತ್ತು ದೇಶಕ್ಕಾಗಿ ನನ್ನ ಜವಾಬ್ದಾರಿ ಇದ್ಯಾವುದರಿಂದಲೂ ನನಗೆ ಮುಕ್ತಿಸಿಗುವುದಿಲ್ಲ ಎಂದು ಹೀಗೆ ಕೌಟುಂಬಿಕ ಬಂಧದಿಂದ ಮುಕ್ತರಾಗುವ ಬಗ್ಗೆ ಸಾಕಷ್ಟು ಟ್ವೀಟ್ ಮಾಡಿದ್ದಾರೆ.

    ಸದ್ಯ ರಾಜಕೀಯದಿಂದ ದೂರ ಉಳಿದಿರುವ ಉಮಾಭಾರತಿ ಅವರು, ಕೊನೆಯಾದಾಗಿ ಮಧ್ಯಪ್ರದೇಶದಲ್ಲಿ ಮದ್ಯದ ಅಂಗಡಿಗಳನ್ನು ನಿಷೇಧಿಸುವ ಬಗ್ಗೆ ನಡೆದ ಚಳುವಳಿಯಲ್ಲಿ ಕಾಣಿಸಿಕೊಂಡಿದ್ದರು. ಇದನ್ನೂ ಓದಿ: ಖಾನ್ ಹತ್ಯೆಗೆ ಸಂಚು ಮಾಡಿರುವುದು ಸಾಬೀತಾದರೆ ಒಂದು ನಿಮಿಷವೂ ಪ್ರಧಾನಿಯಾಗಿರಲ್ಲ: ಶೆಹಬಾಜ್ ಷರೀಫ್

    ಕರ್ನಾಟಕದವರಾದ ಜೈನ ಮುನಿ ಆಚಾರ್ಯ ವಿದ್ಯಾಸಾಗರ ಜೀ ಮಹಾರಾಜ್ ಅವರು ಈಗಲೂ ನನಗೆ ಗುರುಗಳು. ಎಲ್ಲಾ ವೈಯಕ್ತಿಕ ಸಂಬಂಧಗಳು ಮತ್ತು ಬಾಂಧವ್ಯಗಳನ್ನು ತ್ಯಜಿಸಲು ಅವರು ನನಗೆ ಆದೇಶಿಸಿದ್ದಾರೆ. ನನ್ನನ್ನು ದೀದಿ ಮಾ ಎಂದೇ ಕರೆಯಬೇಕು. ನನ್ನ ಭಾರತಿ ಹೆಸರನ್ನು ಅರ್ಥಪೂರ್ಣಗೊಳಿಸಲು ಭಾರತದ ಎಲ್ಲಾ ನಾಗರಿಕರು ಇದನ್ನು ಒಪ್ಪಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಹರಿದ್ವಾರ ಪೇಜಾವರ ಮಠದಲ್ಲಿ ಉಮಾಭಾರತಿ ಗುರು ಪೂಜೆ ಸಲ್ಲಿಕೆ

    ಹರಿದ್ವಾರ ಪೇಜಾವರ ಮಠದಲ್ಲಿ ಉಮಾಭಾರತಿ ಗುರು ಪೂಜೆ ಸಲ್ಲಿಕೆ

    ಡೆಹ್ರಾಡೂನ್: ಗುರುಪೂರ್ಣಿಮೆಯ ಪರ್ವ ದಿನವಾದ ಇಂದು ಕೇಂದ್ರದ ಮಾಜಿ ಸಚಿವೆ ಉಮಾಭಾರತಿ ಅವರು ಹರಿದ್ವಾರದಲ್ಲಿರುವ ಪೇಜಾವರ ಮಠದ ಶಾಖೆ ಮಧ್ವಾಶ್ರಮದಲ್ಲಿ ಗುರುಪೂಜೆ ನೆರವೇರಿಸಿದರು. ವೃಂದಾವನಸ್ಥ ಶ್ರೀ ವಿಶ್ವೇಶತೀರ್ಥರಲ್ಲಿ ಮಂತ್ರದೀಕ್ಷೆ ಪಡೆದ ಅವರು, ಶ್ರೀ ವಿಶ್ವೇಶತೀರ್ಥರ ಭಾವಚಿತ್ರಕ್ಕೆ ವಿಶೇಷ ಪೂಜೆ ನೆರವೇರಿಸಿ, ಭಕ್ತಿ ನಮನ ಸಲ್ಲಿಸಿದರು.

    ಪೇಜಾವರ ಮಠಾಧೀಶ ಶ್ರೀವಿಶ್ವಪ್ರಸನ್ನತೀರ್ಥರಿಗೆ ಗುರುಪೂಜೆ ಸಲ್ಲಿಸಿ, ಆಶೀರ್ವಾದ ಪಡೆದರು. ಶ್ರೀ ವಿಶ್ವೇಶತೀರ್ಥರು ಇದ್ದಷ್ಟು ಸಮಯ ಪ್ರತಿ ವರ್ಷ ಆಷಾಢ ಪೂರ್ಣಿಮೆಯಂದು ಅವರಿದ್ದಲ್ಲಿಗೆ ಬಂದು ಅಥವಾ ದೆಹಲಿಗೆ ಆಮಂತ್ರಿಸಿ ವಿಶೇಷ ಕಾರ್ಯಕ್ರಮ ನೆರವೇರಿಸಿ, ಉಮಾಭಾರತಿಯವರು ಗುರು ಭಕ್ತಿ ನಮನ ಸಲ್ಲಿಸುತ್ತಿದ್ದರು. ಈ ಬಾರಿ ಹರಿದ್ವಾರದ ಶಾಖಾ ಮಠದಲ್ಲಿ ಗುರುಗಳಿಗೆ ಭಕ್ತಿ ನಮನ ಅರ್ಪಿಸಿದರು.

    ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಚಿತ್ರಕೂಟ ಆಶ್ರಮದ ಶ್ರೀರಾಮಕಿಶನ್ ಮಹಾರಾಜ್ ಅವರಿಗೂ ಗುರುನಮನ ಅರ್ಪಿಸಿದ ಉಮಾಭಾರತಿ, ಅಲ್ಲಿನ ಹತ್ತಾರು ಸಾಧು ಸಂತರಿಗೂ ವಿಶೇಷ ಉಡುಗೊರೆ ನೀಡಿ ಗೌರವ ಸಲ್ಲಿಸಿದರು. ಗುರುಪೂರ್ಣಿಮೆಯ ಅಂಗವಾಗಿ ಆಶ್ರಮದಲ್ಲಿರುವ ಜಗದ್ಗುರು ಮಧ್ವಾಚಾರ್ಯರ ಶಿಲಾಪ್ರತಿಮೆಗೆ ಪೇಜಾವರ ಶ್ರೀಗಳ ನೇತೃತ್ವದಲ್ಲಿ ವಿಶೇಷ ಅಭಿಷೇಕ ಪೂಜೆ ನೆರವೇರಿತು.

    ಎರಡು ದಿನಗಳ ಹಿಂದೆ ಉಮಾಭಾರತಿಯವರ ಸಂಕಲ್ಪದಂತೆ ಆಶ್ರಮದಲ್ಲಿ ವಿದ್ವಾನ್ ಶಶಾಂಕ ಭಟ್ಟರ ನೇತೃತ್ವದಲ್ಲಿ ವಿಷ್ಣು ಸಹಸ್ರನಾಮ ಯಾಗ ಸಂಪನ್ನಗೊಂಡಿತು. ಆಶ್ರಮದ ವ್ಯವಸ್ಥಾಪಕ ಮನೋಜ್ ಕಾರ್ಯಕ್ರಮ ಸಂಯೋಜಿಸಿದರು.

    ಪೇಜಾವರ ಶ್ರೀವಿಶ್ವೇಶತೀರ್ಥ ಸ್ವಾಮೀಜಿ 1992ರ ನವೆಂಬರ್ 17ರಂದು ನರ್ಮದಾ ನದಿಯ ಉಗಮಸ್ಥಳ ಮಧ್ಯಪ್ರದೇಶದ ಅಮರಕಂಟಕ್‍ನಲ್ಲಿ ಉಮಾಭಾರತಿಯವರಿಗೆ ಮಂತ್ರದೀಕ್ಷೆ ನೀಡಿದ್ದರು. ಆ ಕಾಲಕ್ಕೆ ಇಡೀ ದೇಶದಲ್ಲಿ ಈ ಘಟನೆ ಸಂಚಲನ ಮೂಡಿಸಿತ್ತು. ಬಳಿಕ ಪ್ರತಿ ವರ್ಷ ಉಮಾಭಾರತಿ ಗುರು ಪೂರ್ಣಿಮೆಯಂದು ತಮಗೆ ದೀಕ್ಷೆ ಕೊಟ್ಟ ಗುರುಗಳಿಗೆ ಗುರುವಂದನೆ ಸಲ್ಲಿಸುತ್ತಿದ್ದರು. ಪೇಜಾವರ ಶ್ರೀಗಳೊಂದಿಗೆ ಉತ್ತಮ ಒಡನಾಟ ಹೊಂದಿದ್ದ ಉಮಾಭಾರತಿ, 2018ರಲ್ಲಿ ಪೇಜಾವರ ಶ್ರೀಗಳಿಗೆ ಅಪಘಾತವಾಗಿ ವಿಶ್ರಾಂತಿಯಲ್ಲಿದ್ದಾಗ ಉಡುಪಿಗೆ ಆಗಮಿಸಿ, ಆರೋಗ್ಯ ವಿಚಾರಿಸಿದ್ದರು.

    ಶ್ರೀಗಳ ಅಂತಿಮ ದಿನಗಳಲ್ಲಿ ಅವರು ಮಣಿಪಾಲ ಆಸ್ಪತ್ರೆಯಲ್ಲಿದ್ದಾಗಲೂ ಉಡುಪಿಗೆ ಆಗಮಿಸಿದ ಉಮಾಭಾರತಿ, ನಾಲ್ಕೈದು ದಿನಗಳ ಕಾಲ ಉಡುಪಿ, ಆಸ್ಪತ್ರೆಯಲ್ಲಿಯೇ ಇದ್ದು ತಮ್ಮ ಗುರು ಭಕ್ತಿಯನ್ನು ಮೆರೆದಿದ್ದರು. ಪೇಜಾವರ ಶ್ರೀಗಳ ಸನ್ಯಾಸ ದೀಕ್ಷೆಯ 75ನೇ ವರ್ಧಂತಿಯನ್ನು ಉಮಾಭಾರತಿಯವರು ದೆಹಲಿಯಲ್ಲಿ ತಮ್ಮ ಮನೆಯಲ್ಲಿ ನಡೆಸಿದ್ದರು. 80ನೇ ವರ್ಧಂತಿಯನ್ನು ಉಡುಪಿಯಲ್ಲಿ ವಿಜ್ರಂಭಣೆಯಿಂದ ಮಾಡಬೇಕೆಂಬ ಮಹದಾಸೆ ಇತ್ತು. ಆ ಅಪೇಕ್ಷೆ ಮಾತ್ರ ಈಡೇರದೇ ಬಾಕಿ ಉಳಿಯಿತು. ಅತೀವ ನೋವು ಮನಸ್ಸಿನಲ್ಲಿ ಉಳಿದಿದೆ ಎಂದು ಈ ಸಂದರ್ಭದಲ್ಲಿ ಉಮಾಭಾರತಿ ನೆನಪಿಸಿಕೊಂಡರು.

  • ಮೋದಿ ಬಗ್ಗೆ ಆತಂಕವಾಗ್ತಿದೆ- ಭೂಮಿ ಪೂಜೆಯಿಂದ ದೂರ ಉಳಿದ ಉಮಾಭಾರತಿ

    ಮೋದಿ ಬಗ್ಗೆ ಆತಂಕವಾಗ್ತಿದೆ- ಭೂಮಿ ಪೂಜೆಯಿಂದ ದೂರ ಉಳಿದ ಉಮಾಭಾರತಿ

    ನವದೆಹಲಿ: ಅಯೋಧ್ಯೆಯಲ್ಲಿ ರಾಮಮಂದಿರ ಶಿಲಾನ್ಯಾಸಕ್ಕೆ ಕ್ಷಣಗಣನೆ ಶುರುವಾಗಿದ್ದು, ಸಿದ್ಧತೆಗಳು ಕೂಡ ಭರದಿಂದ ಸಾಗುತ್ತಿದೆ. ಆದರೆ ಇತ್ತ ಭೂಮಿ ಪೂಜೆ ಕಾರ್ಯಕ್ರಮದಿಂದ ದೂರ ಉಳಿಯುವುದಾಗಿ ಬಿಜೆಪಿ ಹಿರಿಯ ನಾಯಕಿ ಉಮಾಭಾರತಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

    ಹೌದು. ಕೊರೊನಾ ವೈರಸ್ ಭೀತಿಯಿಂದ ಉಮಾ ಭಾರತಿ ಕಾರ್ಯಕ್ರಮದಲ್ಲಿ ಭಾಗಿಯಾಗಲ್ಲ. ಈ ಬಗ್ಗೆ ಈಗಾಗಲೇ ಅತಿಥಿಗಳ ಪಟ್ಟಿಯಿಂದ ತನ್ನ ಹೆಸರು ಹೊರಗಿಡುವಂತೆ ಕಾರ್ಯಕ್ರಮದ ಹಿರಿಯ ಅಧಿಕಾರಿಗಳಿಗೆ ಹಾಗೂ ಪ್ರಧಾನಿ ಕಾರ್ಯಾಲಯಕ್ಕೂ ಮಾಹಿತಿ ನೀಡಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ ಈ ಶುಭಕಾರ್ಯಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಪಾಲ್ಗೊಳ್ಳುತ್ತಿದ್ದು, ಅವರ ಆರೋಗ್ಯದ ಬಗ್ಗೆ ನನಗೆ ಆತಂಕ ಶುರುವಾಗಿದೆ ಎಂದಿದ್ದಾರೆ. ಇದನ್ನೂ ಓದಿ: 800 ಕಿ.ಮೀ ನಡ್ಕೊಂಡೇ ಅಯೋಧ್ಯೆ ಭೂಮಿ ಪೂಜೆಗೆ ಹೊರಟ ಫಯಾಜ್ ಖಾನ್!

    ಈ ಕುರಿತು ಸರಣಿ ಟ್ವೀಟ್ ಮಾಡಿರುವ ಉಮಾ ಭಾರತಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟ ಸುದ್ದಿ ಕೇಳಿದ ಬಳಿಕ ಕಾರ್ಯಕ್ರಮದಲ್ಲಿ ಭಾಗಿಯಾಗಲು ಆತಂಕ ಎದುರಾಗಿದೆ. ಅಮಿತ್ ಶಾ ಹಾಗೂ ಬಿಜೆಪಿ ನಾಯಕರಿಗೆ ಕೊರೊನಾ ಪಾಸಿಟಿವ್ ಎಂದು ಸುದ್ದಿ ಕೇಳಿದ ಬಳಿಕ ಭಯ ಶುರುವಾಗಿದೆ. ಅಯೋಧ್ಯೆ ಭೂಮಿ ಪೂಜೆಯಲ್ಲಿ ಭಾಗಿಯಾಗುವವರ ಅದರಲ್ಲೂ ಮೋದಿ ಬಗ್ಗೆ ನನಗೆ ಆತಂಕ ಹೆಚ್ಚಾಗಿದೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಭೂಮಿ ಪೂಜೆಯಂದು ದಯವಿಟ್ಟು ಅಯೋಧ್ಯೆಗೆ ಬರಬೇಡಿ- ಟ್ರಸ್ಟ್ ಮನವಿ

    ಇಂದು ನಾನು ಭೋಪಾಲ್ ನಿಂದ ಹೊರಟು ನಾಳೆ ಸಂಜೆ ಅಯೋಧ್ಯೆ ಸೇರುತ್ತೇನೆ. ಆದರೆ ಕಾರ್ಯಕ್ರಮದಲ್ಲಿ ಭಾಗಿಯಾಗಲ್ಲ. ಯಾಕಂದರೆ ಒಂದು ವೇಳೆ ನಾನು ಈ ಶುಭಕಾರ್ಯದಲ್ಲಿ ಪಾಲ್ಗೊಂಡರೆ ನನಗೂ ಸೋಂಕು ಹರಡಬಹುದು. ಪ್ರಧಾನಿ ಮೋದಿಯವರು ಭಾಗವಹಿಸುವ ಈ ಕಾರ್ಯಕ್ರಮದಲ್ಲಿ ಯಾವುದೇ ರೀತಿಯ ಅಹಿತರ ಘಟನೆಗಳು ನಡೆಯಬಾರದು. ಈ ಹಿನ್ನೆಲೆಯಲ್ಲಿ ನಾನು ಮನೆಯಲ್ಲೇ ಕುಳಿತು ಕಾರ್ಯಕ್ರಮ ವೀಕ್ಷಿಸುತ್ತೇನೆ. ಕಾರ್ಯಕ್ರಮ ಮುಗಿಸಿ ಪ್ರಧಾನಿಯವರು ದೆಹಲಿಗೆ ಹೊರಟ ನಂತರ ನಾನು ಅಯೋಧ್ಯೆಗೆ ಹೋಗುತ್ತೇನೆ. ಅಲ್ಲಿಯವರೆಗೆ ಸರಯೂ ನದಿಯ ತಟದಲ್ಲಿ ವಿಹರಿಸುವುದಾಗಿ ಉಮಾ ಭಾರತಿ ಮಾಹಿತಿ ನೀಡಿದ್ದಾರೆ.

  • ಉಮಾಭಾರತಿಯನ್ನು ಅಪ್ಪಿ ಕಣ್ಣೀರಿಟ್ಟ ಸಾಧ್ವಿ ಪ್ರಜ್ಞಾ ಸಿಂಗ್ – ವಿಡಿಯೋ

    ಉಮಾಭಾರತಿಯನ್ನು ಅಪ್ಪಿ ಕಣ್ಣೀರಿಟ್ಟ ಸಾಧ್ವಿ ಪ್ರಜ್ಞಾ ಸಿಂಗ್ – ವಿಡಿಯೋ

    ಭೋಪಾಲ್: ಮಧ್ಯಪ್ರದೇಶದ ಭೋಪಾಲ್ ನಿಂದ ಸ್ಪರ್ಧೆ ಮಾಡಿರುವ ಸಾಧ್ವಿ ಪ್ರಜ್ಞಾಸಿಂಗ್ ಇಂದು ಮಾಜಿ ಸಿಎಂ ಉಮಾಭಾರತಿ ಅವರನ್ನು ಭೇಟಿ ಮಾಡಿ ಪ್ರಚಾರ ಕಾರ್ಯಕ್ರಮಕ್ಕೆ ಆಗಮಿಸುವಂತೆ ಮನವಿ ಮಾಡಿದರು. ಈ ವೇಳೆ ಪ್ರಜ್ಞಾಸಿಂಗ್ ಉಮಾ ಭಾರತಿ ಅವರನ್ನು ಅಪ್ಪಿ ಕಣ್ಣೀರಿಟ್ಟಿದ್ದಾರೆ.

    ಭೋಪಾಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ದಿಗ್ವಿಜಯ್ ಸಿಂಗ್ ಅವರ ವಿರುದ್ಧ ಕಣಕ್ಕೆ ಇಳಿದಿರುವ ಪ್ರಜ್ಞಾಸಿಂಗ್, ಉಮಾ ಭಾರತಿ ಅವರನ್ನು ಪ್ರಚಾರಕ್ಕೆ ಆಗಮಿಸುವಂತೆ ಮನವಿ ಮಾಡಲು ಅವರ ನಿವಾಸದ ಬಳಿ ತೆರಳಿದ್ದರು. ಈ ಭೇಟಿ ಬಳಿಕ ಉಮಾ ಭಾರತಿ ಅವರು ಪ್ರಜ್ಞಾ ಅವರನ್ನು ಕಾರಿನವರೆಗೂ ಬಂದು ಕಳುಹಿಸಿಕೊಟ್ಟರು. ಈ ವೇಳೆ ಭಾವೋದ್ವೇಗಕ್ಕೆ ಒಳಗಾದ ಪ್ರಜ್ಞಾಸಿಂಗ್ ಕಣ್ಣೀರಿಟ್ಟಿದ್ದಾರೆ.

    ಇತ್ತೀಚಿನ ಸಂದರ್ಭದಲ್ಲಿ ಉಮಾ ಭಾರತಿ ಹಾಗೂ ಪ್ರಜ್ಞಾ ಮಧ್ಯೆ ವೈಮನಸ್ಸು ಮೂಡಿತ್ತು ಎಂದು ಸುದ್ದಿಯಾಗಿತ್ತು. ಅಲ್ಲದೇ ಈ ಬಗ್ಗೆ ಮಾಧ್ಯಮಗಳು ಉಮಾ ಭಾರತಿ ಅವರನ್ನು ಪ್ರಶ್ನೆ ಮಾಡಿದ ವೇಳೆ ಖಾರವಾಗಿ ಪ್ರತಿಕ್ರಿಯೆ ನೀಡಿದ್ದ ಅವರು, ಪ್ರಜ್ಞಾ ಅವರಿಗೂ ನನಗೂ ಹೋಲಿಕೆ ಮಾಡಬೇಡಿ. ಅವರು ಮಹಾನ್ ಸ್ವಾಧಿ, ನಾನು ಸಾಮಾನ್ಯ ವ್ಯಕ್ತಿ. ಮೂರ್ಖ ಜೀವಿ ಎಂದು ಪ್ರತಿಕ್ರಿಯೆ ನೀಡಿದ್ದರು.

    ಘಟನೆ ಬಳಿಕ ಮಾತನಾಡಿದ ಉಮಾ ಭಾರತಿ ಅವರು, ಇದು ಒಂದು ಭಾವನಾತ್ಮಕ ಸನ್ನಿವೇಶ ಅಷ್ಟೇ ಎಂದು ತಿಳಿಸಿದರು. ಮಧ್ಯಪ್ರದೇಶದಲ್ಲಿ ಸಾಧ್ವಿ ಪ್ರಜ್ಞಾಸಿಂಗ್ ಉಮಾ ಭಾರತಿ ಅವರ ಸ್ಥಾನವನ್ನು ತುಂಬಲಿದ್ದಾರೆ ಎಂಬ ಮಾತು ಚುನಾವಣೆಗೂ ಮುನ್ನವೇ ಕೇಳಿ ಬಂದಿತ್ತು.

  • ದೀಕ್ಷೆ ಕೊಟ್ಟ ಗುರುವಿನ ಆರೋಗ್ಯ ವಿಚಾರಿಸಿದ ಉಮಾಭಾರತಿ

    ದೀಕ್ಷೆ ಕೊಟ್ಟ ಗುರುವಿನ ಆರೋಗ್ಯ ವಿಚಾರಿಸಿದ ಉಮಾಭಾರತಿ

    ಉಡುಪಿ: ದೀಕ್ಷೆ ಕೊಟ್ಟ ಗುರುವಿಗೆ ಅಪಘಾತದ ಸುದ್ದಿ ಕೇಳಿ ಕೇಂದ್ರ ನೀರಾವರಿ ಸಚಿವೆ ಉಮಾಭಾರತಿ ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿಯನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.

    ಉಮಾಭಾರತಿ ಮೊದಲು ಪೇಜಾವರ ಮಠಕ್ಕೆ ಆಗಮಿಸಿ ಪೇಜಾವರಶ್ರೀಗೆ ಗೌರವ ಸಲ್ಲಿಸಿದರು. ನಂತರ ಸ್ವಾಮೀಜಿಯನ್ನು ಕಂಡು ಮಾತನಾಡಿಸಿ ನಿಟ್ಟುಸಿರು ಬಿಟ್ಟು ಅಪಘಾತ ಬಗ್ಗೆ ಮಾಹಿತಿ ಪಡೆದುಕೊಂಡರು. ಬಳಿಕ ತಾವು ಆರೋಗ್ಯದ ಬಗ್ಗೆ ಹೆಚ್ಚು ಗಮನ ಕೊಡಬೇಕೆಂದು ಸ್ವಾಮೀಜಿಗೆ ಕಿವಿಮಾತು ಹೇಳಿದರು.

    ಪೇಜಾವರ ಶ್ರೀ ಶಿಷ್ಯೆಯಾಗಿರುವ ಉಮಾಭಾರತಿ ಕಳೆದ ಎರಡು ವರ್ಷದಲ್ಲಿ ಉಡುಪಿಗೆ ಮೂರು ಬಾರಿ ಭೇಟಿ ನೀಡಿದ್ದಾರೆ. ಇದೇ ಸಂದರ್ಭ ಪಂಚಮ ಪರ್ಯಾಯ ಮುಗಿಸಿ ಸರ್ವಜ್ಞ ಪೀಠದಿಂದ ಏಳುವ ಸಂದರ್ಭದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿಲ್ಲ ಎಂದು ಕ್ಷಮೆಯನ್ನು ಕೇಳಿದರು.

    ಮಾಧ್ಯಮಗಳ ಜೊತೆ ಮಾತನಾಡಿದ ಉಮಾಭಾರತಿ, ಸ್ವಾಮೀಜಿಗೆ ಅಪಘಾತ ಸುದ್ದಿ ಕೇಳಿ ಆಘಾತವಾಯ್ತು. ಕೆಲಸವನ್ನೆಲ್ಲ ಬದಿಗೊತ್ತಿ ಉಡುಪಿಗೆ ಓಡೋಡಿ ಬಂದೆ. ಸ್ವಾಮೀಜಿಯವರನ್ನು ಭೇಟಿ ಮಾಡಿ ಈಗ ನಿರಾಳವಾಗಿದ್ದೇನೆ. ಸ್ವಾಮೀಜಿ ಈಗ ಚೇತರಿಸಿಕೊಳ್ಳುತ್ತಿದ್ದಾರೆ. ಬೆನ್ನಿಗೆ ಹೊಡೆತ ಬಿದ್ದಿದ್ದರಿಂದ ಹೆಚ್ವಿನ ವಿಶ್ರಾಂತಿ ಅವಶ್ಯಕತೆ ಇದೆ. ವೈದ್ಯರ ಸೂಚನೆಯನ್ನು ಪಾಲಿಸಬೇಕು ಎಂದು ಸ್ವಾಮೀಜಿ ಬಳಿ ಉಮಾಭಾರತಿ ನಿವೇದಿಸಿರುವುದಾಗಿ ಹೇಳಿದರು.

    ಪೇಜಾವರಶ್ರೀ ಪಂಚಮ ಪರ್ಯಾಯ ಮುಗಿಸಿದ್ದಾರೆ. ಗುರೂಜಿ ಪಂಚಮ ಪರ್ಯಾಯ ಐತಿಹಾಸಿಕವಾದದ್ದು, ಅವರು ಗುಣಮುಖರಾದ ಕೂಡಲೇ ಉಡುಪಿಯಲ್ಲೇ ದೊಡ್ಡ ಸಂಭ್ರಮಾಚರಣೆ ಮಾಡುತ್ತೇನೆ. ಕಾರ್ಯಕ್ರಮದ ದಿನಾಂಕ ಇನ್ನೂ ನಿಗದಿಪಡಿಸಿಲ್ಲ. ಒಟ್ಟಿನಲ್ಲಿ ಕಾರ್ಯಕ್ರಮ ರಾಜಕೀಯೇತರವಾಗಿ ಇರುತ್ತದೆ. ಆಮಂತ್ರಣ ಮಾಡಿಸಲ್ಲ, ಪುಣ್ಯವಂತರು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ರಾಜ್ಯ ಮತ್ತು ಕೇಂದ್ರದ ರಾಜಕಾರಣದ ಬಗ್ಗೆ ಮಾತನಾಡಲ್ಲ ಎಂದು ಉಮಾಭಾರತಿ ಹೇಳಿದರು.

    1992ರ ನವೆಂಬರ್ 17ರಂದು ಉಮಾ ಭಾರತಿ ಅವರಿಗೆ ಪೇಜಾವರ ಶ್ರೀಗಳು ಸನ್ಯಾಸ ದೀಕ್ಷೆ ಕೊಟ್ಟಿದ್ದರು.