Tag: Ukraine

  • ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿಯನ್ನು ವಾಂಟೆಡ್ ಲಿಸ್ಟ್‌ಗೆ  ಸೇರಿಸಿದ ರಷ್ಯಾ

    ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿಯನ್ನು ವಾಂಟೆಡ್ ಲಿಸ್ಟ್‌ಗೆ ಸೇರಿಸಿದ ರಷ್ಯಾ

    ಮಾಸ್ಕೋ: ಉಕ್ರೇನ್ (Ukraine) ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಯವರ (Volodymyr Zelensky) ವಿರುದ್ಧ ರಷ್ಯಾ  (Russia) ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದು, ಅವರನ್ನು ವಾಂಟೆಡ್ ಪಟ್ಟಿಗೆ ಸೇರಿಸಲಾಗಿದೆ ಎಂದು ವರದಿಯಾಗಿದೆ.

    ಫೆಬ್ರವರಿ 2022 ರಲ್ಲಿ ಉಕ್ರೇನ್‍ನೊಂದಿಗೆ ಯುದ್ಧ ಪ್ರಾರಂಭವಾದಾಗಿನಿಂದ ರಷ್ಯಾ, ಉಕ್ರೇನ್ ಮತ್ತು ಇತರ ಯುರೋಪಿಯನ್ ರಾಜಕಾರಣಿಗಳ ಬಂಧನಕ್ಕೆ ವಾರಂಟ್‍ಗಳನ್ನು ಹೊರಡಿಸಿದೆ. ಈಗಾಗಲೇ ಎಸ್ಟೋನಿಯಾದ ಪ್ರಧಾನಿ ಕಾಜಾ ಕಲ್ಲಾಸ್, ಲಿಥುವೇನಿಯಾದ ಸಂಸ್ಕೃತಿ ಮಂತ್ರಿ ಮತ್ತು ಹಿಂದಿನ ಲಟ್ವಿಯನ್ ಸಂಸತ್ತಿನ ಸದಸ್ಯರನ್ನು ವಾಂಟೆಡ್ ಪಟ್ಟಿಗೆ ಸೇರಿಸಿದ್ದಾರೆ.

    ಕಳೆದ ವರ್ಷ ಯುದ್ಧಾಪರಾಧದ ಆರೋಪದ ಮೇಲೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‍ಗೆ (Vladimir Putin) ಅಂತರರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ (International Criminal Court) ಬಂಧನದ ವಾರಂಟ್ ಹೊರಡಿಸಿತ್ತು.

    ಇಲ್ಲಿಯವರೆಗೂ ಎರಡು ದೇಶಗಳ ನಡುವಿನ ಯುದ್ಧದಲ್ಲಿ 1,12,000 ರಷ್ಯಾದ ಸೈನಿಕರು ಸಾವಿಗೀಡಾಗಿದ್ದಾರೆ. 1,70,000 ದಿಂದ 1,80,000 ವರೆಗೆ ಸೈನಿಕರು ಗಾಯಗೊಂಡಿದ್ದಾರೆ ಎಂದು ಯುನೈಟೆಡ್ ಸ್ಟೇಟ್ಸ್ ಅಧಿಕಾರಿಗಳು ತಿಳಿಸಿದ್ದಾರೆ. ಉಕ್ರೇನ್‍ನಲ್ಲಿ 70,000 ದಿಂದ 1,00,000 ವರೆಗೆ ಸೈನಿಕರು ಹತರಾಗಿದ್ದಾರೆ ಎಂದು ಹೇಳಲಾಗಿದೆ. ಆದರೆ ಅಮೆರಿಕದ ಅಂಕಿ ಅಂಶಗಳನ್ನು ರಷ್ಯಾ ಅಧಿಕಾರಿಗಳು ತಳ್ಳಿ ಹಾಕಿದ್ದಾರೆ.

  • ರಷ್ಯಾ ಯುದ್ಧಭೂಮಿಯಲ್ಲಿ ಸಿಲುಕಿರುವ ಕಲಬುರಗಿ ಯುವಕರು – ರಕ್ಷಣೆಗಾಗಿ ವಿದೇಶಾಂಗ ಸಚಿವರಿಗೆ ಖರ್ಗೆ ಪತ್ರ

    ರಷ್ಯಾ ಯುದ್ಧಭೂಮಿಯಲ್ಲಿ ಸಿಲುಕಿರುವ ಕಲಬುರಗಿ ಯುವಕರು – ರಕ್ಷಣೆಗಾಗಿ ವಿದೇಶಾಂಗ ಸಚಿವರಿಗೆ ಖರ್ಗೆ ಪತ್ರ

    ಕಲಬುರಗಿ: ಯುದ್ಧಪೀಡಿತ ರಷ್ಯಾದಲ್ಲಿ (Russia) ಸಿಲುಕಿರುವ ಕಲಬುರಗಿ (Kalaburagi) ಮೂಲದ ಮೂವರ ರಕ್ಷಣೆಗೆ ವಿದೇಶಾಂಗ ಸಚಿವರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಪತ್ರ ಬರೆದಿದ್ದಾರೆ.

    ಕಲಬುರಗಿ ಜಿಲ್ಲೆಯ ಮೂವರು ಯುವಕರು ಯುದ್ಧಪೀಡಿತ ರಷ್ಯಾದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಕುರಿತು ವರದಿಯಾಗಿದ್ದು, ಈ ಹಿನ್ನೆಲೆಯಲ್ಲಿ ನಮ್ಮ ಕಲಬುರಗಿ ಯುವಕರನ್ನು ಸುರಕ್ಷಿತವಾಗಿ ಮರಳಿ ಕರೆತರುವಂತೆ ಮಲ್ಲಿಕಾರ್ಜುನ ಖರ್ಗೆ ಅವರು ಕೇಂದ್ರದ ವಿದೇಶಾಂಗ ಸಚಿವ ಎಸ್. ಜೈಶಂಕರ್ (S Jaishankar) ಅವರಿಗೆ ಪತ್ರ (Letter) ಬರೆದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ರಷ್ಯಾದ ಡೇಂಜರ್‌ ಸೇನೆಯಲ್ಲಿದ್ದಾರೆ ಕಲಬುರಗಿಯ ಮೂವರು – ನಮ್ಮನ್ನು ರಕ್ಷಿಸಿ ಎಂದ ಯುವಕರು

    ಕಲಬುರಗಿ ಜಿಲ್ಲೆಯ ಮೂವರು ಯುವಕರು ಹಾಗೂ ತೆಲಂಗಾಣದ ಒಬ್ಬ ಯುವಕನಿಗೆ ಉದ್ಯೋಗದ ಆಮಿಷವೊಡ್ಡಿ ಇದೀಗ ಅವರನ್ನು ಬಲವಂತವಾಗಿ ಉಕ್ರೇನ್ (Ukraine) ವಿರುದ್ಧದ ಯುದ್ಧಕ್ಕೆ ತಳ್ಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಮಾಧ್ಯಮಗಳ ವರದಿ ಪ್ರಕಾರ ಕಳೆದ ಒಂದು ವರ್ಷದಲ್ಲಿ ಭಾರತದ ನೂರಕ್ಕೂ ಹೆಚ್ಚು ಯುವಕರನ್ನು ರಷ್ಯಾದ ಸೈನ್ಯದಲ್ಲಿ ಸಹಾಯಕರಾಗಿ ನೇಮಿಸಿಕೊಳ್ಳಲಾಗಿದೆ ಎಂಬ ಆಘಾತಕಾರಿ ವಿಷಯಗಳು ಬಿತ್ತರವಾಗುತ್ತಿದೆ. ಇದನ್ನೂ ಓದಿ: ಸರ್ಕಾರದ ವಿರುದ್ಧ ಶುಕ್ರವಾರ ರಾಜ್ಯಾದ್ಯಂತ ಪ್ರತಿಭಟನೆಗೆ ಬಿಜೆಪಿ ಕರೆ!

    ರಷ್ಯಾದಲ್ಲಿ ಸಿಲುಕಿ ಸಂಕಷ್ಟ ಎದುರಿಸುತ್ತಿರುವ ಎಲ್ಲಾ ಭಾರತೀಯರು ಹಾಗೂ ಕನ್ನಡಿಗರನ್ನು ಸುರಕ್ಷಿತವಾಗಿ ತಾಯ್ನಡಿಗೆ ಕರೆತರುವಂತೆ ಪತ್ರದ ಮೂಲಕ ಖರ್ಗೆವಿನಂತಿಸಿದ್ದಾರೆ. ಇದನ್ನೂ ಓದಿ: ಭಿನ್ನಾಭಿಪ್ರಾಯಗಳನ್ನು ಮರೆತು ಗೆಲ್ಲಲೇಬೇಕು ಎಂಬ ಛಲದಿಂದ ಕೆಲಸ ಮಾಡಬೇಕು: ಕಾರ್ಯಕರ್ತರಿಗೆ ಸಿದ್ದರಾಮಯ್ಯ ಕರೆ

  • 65 ಯುದ್ಧ ಕೈದಿಗಳನ್ನು ಹೊತ್ತು ಸಾಗಿದ್ದ ರಷ್ಯಾದ ವಿಮಾನ ಉಕ್ರೇನ್‌ ಬಳಿ ಪತನ – ವಿಮಾನದಲ್ಲಿದ್ದ ಎಲ್ಲರೂ ಸಾವು

    65 ಯುದ್ಧ ಕೈದಿಗಳನ್ನು ಹೊತ್ತು ಸಾಗಿದ್ದ ರಷ್ಯಾದ ವಿಮಾನ ಉಕ್ರೇನ್‌ ಬಳಿ ಪತನ – ವಿಮಾನದಲ್ಲಿದ್ದ ಎಲ್ಲರೂ ಸಾವು

    ಮಾಸ್ಕೋ: 65 ಉಕ್ರೇನಿಯನ್ (Ukraine) ಯುದ್ಧ ಕೈದಿಗಳನ್ನು ಹೊತ್ತು ಸಾಗಿದ್ದ ರಷ್ಯಾದ IL-76, ಹೆವಿ-ಲಿಫ್ಟ್ ಮಿಲಿಟರಿ ಸಾರಿಗೆ ವಿಮಾನವು ರಷ್ಯಾದ ಬೆಲ್ಗೊರೊಡ್ ಪ್ರದೇಶದಲ್ಲಿ ಪತನಗೊಂಡಿದೆ. ಅವಘಡದಲ್ಲಿ ಯಾರೂ ಬದುಕುಳಿದಿಲ್ಲ ಎಂದು ರಷ್ಯಾ ತಿಳಿಸಿದೆ.

    ಅಪಘಾತದ ವೀಡಿಯೋ ವೈರಲ್‌ ಆಗಿದೆ. ವಿಮಾನವು ವೇಗವಾಗಿ ಭೂಮಿಯ ಕಡೆ ಬರುತ್ತಿರುವ ದೃಶ್ಯ ವೀಡಿಯೋದಲ್ಲಿದೆ. IL-76 ವಿಮಾನವು (Russian Plane Crash) ಪೈಲಟ್‌ ನಿಯಂತ್ರಣ ಕಳೆದುಕೊಂಡಿತ್ತು. ವಸತಿ ಪ್ರದೇಶದ ಬಳಿ ವಿಮಾನ ಪತನಗೊಂಡಿದೆ. ಇದನ್ನೂ ಓದಿ: ರನ್‌ವೇನಲ್ಲಿ ಸ್ಕಿಡ್‌ ಆದ ಮ್ಯಾನ್ಮಾರ್ ಮಿಲಿಟರಿ ವಿಮಾನ- 6 ಮಂದಿಗೆ ಗಾಯ

    “ಮಾಸ್ಕೋ ಸಮಯ 11 ಗಂಟೆ ಸುಮಾರಿನಲ್ಲಿ IL-76 ವಿಮಾನವು ಹಾರಾಟದ ಸಮಯದಲ್ಲಿ ಬೆಲ್ಗೊರೊಡ್ ಪ್ರದೇಶದಲ್ಲಿ ಅಪಘಾತಕ್ಕೀಡಾಯಿತು ಎಂದು ಮಾಸ್ಕೋದ ರಕ್ಷಣಾ ಸಚಿವಾಲಯ ತಿಳಿಸಿದೆ ಎಂದು ಸ್ಥಳೀಯ ಪತ್ರಿಕೆಯೊಂದು ವರದಿ ಮಾಡಿದೆ.

    ಹಡಗಿನಲ್ಲಿ ವಶಕ್ಕೆ ಪಡೆದ 65 ಉಕ್ರೇನಿಯನ್ ಸೇನಾ ಯೋಧರನ್ನು ವಿನಿಮಯಕ್ಕಾಗಿ ಬೆಲ್ಗೊರೊಡ್ ಪ್ರದೇಶಕ್ಕೆ ಸಾಗಿಸಲಾಗಿತ್ತು. ಆರು ಸಿಬ್ಬಂದಿ ಮತ್ತು ಮೂರು ಬೆಂಗಾವಲುಗಳಿದ್ದರು. ಪ್ರದೇಶದ ರಾಜಧಾನಿಯ ಈಶಾನ್ಯದಲ್ಲಿರುವ ಕೊರೊಚಾನ್ಸ್ಕಿ ಜಿಲ್ಲೆಯಲ್ಲಿ ಈ ಅಪಘಾತ ಸಂಭವಿಸಿದೆ ಎಂದು ಪ್ರಾದೇಶಿಕ ಗವರ್ನರ್ ವ್ಯಾಚೆಸ್ಲಾವ್ ಗ್ಲಾಡ್ಕೊವ್ ಟೆಲಿಗ್ರಾಮ್‌ನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಚೀನಾದಲ್ಲಿ 7.2 ತೀವ್ರತೆಯ ಪ್ರಬಲ ಭೂಕಂಪನ – ದೆಹಲಿಯಲ್ಲೂ ಕಂಪಿಸಿದ ಭೂಮಿ, ಬೆಚ್ಚಿಬಿದ್ದ ಜನ

    ವಿಮಾನ ಪತನ ವಿಚಾರವಾಗಿ ರಷ್ಯಾ ವಿರುದ್ಧ ಉಕ್ರೇನ್‌ ಕಿಡಿಕಾರಿದೆ. ಮಾನವೀಯ ಕಾರ್ಯಾಚರಣೆ ನಡೆಸುತ್ತಿದ್ದ ನಮ್ಮ ಪೈಲಟ್‌ಗಳನ್ನು ಹೊಡೆದುರುಳಿಸಲಾಗಿದೆ ಎಂದು ಗಂಭೀರ ಆರೋಪ ಮಾಡಿದೆ.

  • ನಿಲ್ಲದ ಸಮರ – ಉಕ್ರೇನ್‌ ದಿನಸಿ ಅಂಗಡಿ ಮೇಲೆ ರಷ್ಯಾ ರಾಕೆಟ್‌ ದಾಳಿಗೆ 49 ಮಂದಿ ಬಲಿ

    ನಿಲ್ಲದ ಸಮರ – ಉಕ್ರೇನ್‌ ದಿನಸಿ ಅಂಗಡಿ ಮೇಲೆ ರಷ್ಯಾ ರಾಕೆಟ್‌ ದಾಳಿಗೆ 49 ಮಂದಿ ಬಲಿ

    ಕೀವ್‌/ಮಾಸ್ಕೋ: 2022ರ ಫೆಬ್ರವರಿ 24ರಂದು ಆರಂಭವಾದ ರಷ್ಯಾ-ಉಕ್ರೇನ್‌ ಯುದ್ಧ (Russia Ukraine War) ಸದ್ದು ಮಾಡುತ್ತಲೇ ಇದೆ. ಯುದ್ಧ ಆರಂಭವಾಗಿ ವರ್ಷ ಕಳೆದರೂ, ಸಾವಿರಾರು ಜೀವಗಳನ್ನು ಬಲಿ ತೆಗೆದುಕೊಂಡರೂ, ವಿಶ್ವದ ಅನೇಕ ರಾಷ್ಟ್ರಗಳು ಶಾಂತಿ ಕಾಪಾಡುವಂತೆ ಸಲಹೆ ನೀಡಿದರೂ ಡೋಂಟ್‌ಕೇರ್‌ ಎನ್ನುವಂತೆ ರಷ್ಯಾ ಉಕ್ರೇನ್‌ ಮೇಲಿನ ದಾಳಿಯನ್ನ ಮುಂದುವರಿಸಿದೆ.

    ಗುರುವಾರವೂ ಸಹ ರಷ್ಯಾ ಸೇನೆಯು ಉಕ್ರೇನ್‌ನ ಖಾರ್ಕೀವ್‌ ಪೂರ್ವ ಪ್ರದೇಶದ ದಿನಸಿ ಅಂಗಡಿ ಹಾಗೂ ಕೆಫೆಯೊಂದರ ಮೇಲೆ ದಾಳಿ (Russian Rocket Strike) ನಡೆಸಿದ್ದು, ಸುಮಾರು 49 ಮಂದಿ ಸಾವನ್ನಪ್ಪಿದ್ದಾರೆ. ಇಲ್ಲಿನ ಗ್ರೋಜಾ ಗ್ರಾಮದಲ್ಲಿ ಮಧ್ಯಾಹ್ನ 1:15ರ (ಭಾರತೀಯ ಕಾಲಮಾನ) ವೇಳೆಗೆ ದಾಳಿ ನಡೆದಿರುವುದಾಗಿ ಖಾರ್ಕಿವ್ ಪ್ರದೇಶದ ಮುಖ್ಯಸ್ಥ ಒಲೆಗ್ ಸಿನೆಗುಬೊವ್ ತಿಳಿಸಿದ್ದಾರೆ. ಸದ್ಯ ರಕ್ಷಣಾ ತಂಡಗಳು ಸ್ಥಳದಲ್ಲಿ ಕಾರ್ಯಾಚರಣೆ ನಡೆಸುತ್ತಿವೆ. ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ (Volodimir Zelensky) ಸ್ಥಳಕ್ಕೆ ಧಾವಿಸಿದ್ದಾರೆ. ಇದನ್ನೂ ಓದಿ: P-8I Poseidon: ಹಿಂದೂ ಮಹಾಸಾಗರದ ಕಾವಲುಗಾರ – ಬೋಯಿಂಗ್ P-8I ವಿಮಾನ

    ಕಳೆದ ವರ್ಷ ಉಕ್ರೇನ್‌ ವಶಪಡಿಸಿಕೊಂಡಿದ್ದ ಕಾರ್ಕೀವ್‌ ಪ್ರದೇಶಗಳನ್ನು ಮರಳಿ ಪಡೆದುಕೊಳ್ಳಲು ಉಕ್ರೇನ್‌ ಕಸರತ್ತು ನಡೆಸುತ್ತಿದೆ. ಆದ್ರೆ ಇದಕ್ಕೆ ಆಸ್ಪದ ನೀಡದ ರಷ್ಯಾ ಉಕ್ರೇನಿನ ಮೇಲೆ ಭೀಕರ ದಾಳಿ ನಡೆಸುತ್ತಲೇ ಇದೆ, ಅಲ್ಲಿನ ಮೂಲ ಸೌಕರ್ಯಗಳನ್ನು ನಾಶಪಡಿಸುತ್ತಿದೆ. ಇದನ್ನೂ ಓದಿ: ಹೊಸ ಮದ್ಯ ನೀತಿ ಪ್ರಕರಣದ ಕಿಂಗ್‌ಪಿನ್ ಸರದಿಯೂ ಬರಲಿದೆ; ದೆಹಲಿ ಸಿಎಂಗೆ ಪರೋಕ್ಷವಾಗಿ ಎಚ್ಚರಿಕೆ ಕೊಟ್ಟ ಅನುರಾಗ್ ಠಾಕೂರ್

    ರಷ್ಯಾ ಸೇನೆ ನಡೆಸಿದ ರಾಕೆಟ್‌ ದಾಳಿಯಲ್ಲಿ ಗುರುವಾರ ಉಕ್ರೇನಿನ 49 ಮಂದಿ ಸಾವನ್ನಪ್ಪಿದ್ದಾರೆ. ಇದು ರಷ್ಯಾದ ಉದ್ದೇಶಿದ ಭಯೋತ್ಪಾದಕ ದಾಳಿ ಎಂದು ಉಕ್ರೇನಿಯನ್‌ ಪ್ರಾಸಿಕ್ಯೂಟರ್ ಜನರಲ್ ಆರೋಪಿಸಿದ್ದಾರೆ. ಘಟನೆ ನಂತರ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ. ಇದನ್ನೂ ಓದಿ: 2 ಲಕ್ಷ ಬಹುಮಾನಕ್ಕಾಗಿ 10 ನಿಮಿಷದಲ್ಲಿ ಒಂದು ಲೀಟರ್ ಮದ್ಯ ಕುಡಿದು ವ್ಯಕ್ತಿ ಸಾವು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವಿಶ್ವ ಸಾಂಸ್ಕೃತಿಕ ಉತ್ಸವ; ಉಕ್ರೇನ್‌ ಶಾಂತಿಗಾಗಿ ಪ್ರಾರ್ಥಿಸಿದ 180 ದೇಶಗಳ ಜನ

    ವಿಶ್ವ ಸಾಂಸ್ಕೃತಿಕ ಉತ್ಸವ; ಉಕ್ರೇನ್‌ ಶಾಂತಿಗಾಗಿ ಪ್ರಾರ್ಥಿಸಿದ 180 ದೇಶಗಳ ಜನ

    – ಉತ್ಸವದಲ್ಲಿ ಯೋಗ ಕಾರ್ಯಕ್ರಮ ನಡೆಸಿಕೊಟ್ಟ ಶ್ರೀ ಶ್ರೀ ರವಿಶಂಕರ್ ಗುರೂಜಿ

    ಬೆಂಗಳೂರು: ಅಮೆರಿಕದ ವಾಷಿಂಗ್ಟನ್‌ (Washington DC) ಡಿಸಿಯ ನ್ಯಾಷನಲ್‌ ಮಾಲ್‌ನಲ್ಲಿ ಆಯೋಜಿಸಿರುವ ‘ವಿಶ್ವ ಸಾಂಸ್ಕೃತಿಕ ಉತ್ಸವ’ (World Culture Festival) 2ನೇ ದಿನವೂ ಅದ್ಧೂರಿಯಾಗಿ ಜರುಗಿತು. ಉತ್ಸವಕ್ಕೆ 180 ದೇಶಗಳಿಂದ ಆಗಮಿಸಿದ್ದ ಜನರು, ಉಕ್ರೇನ್‌ನಲ್ಲಿ ಶಾಂತಿ ನೆಲೆಸಲಿ ಎಂದು ಪ್ರಾರ್ಥಿಸಿದರು.

    ಉತ್ಸವದಲ್ಲಿ ಎರಡನೆಯ ದಿನವು ಕೂಡ ನೂರಾರು ಬಾವುಟಗಳು ಹಾರಾಡಿದವು. ಮತ್ತೊಮ್ಮೆ ಏಕತೆಯ ಭಾವವು ಎಲ್ಲೆಡೆ ರಾರಾಜಿಸಿತು. 180 ದೇಶಗಳಿಂದ ಬಂದಿದ್ದ ಜನರು ಒಬ್ಬರನ್ನೊಬ್ಬರು ಕಲೆತು, ನೃತ್ಯ, ಸಂಗೀತ ಮತ್ತು ಆಹಾರದೊಡನೆ ಜಗತ್ತಿನ ವಿವಿಧ ಸಂಸ್ಕೃತಿಗಳನ್ನು ಸಂಭ್ರಮಿಸಿದರು.

    ಬೃಹತ್ ಪ್ರಮಾಣದಲ್ಲಿ ನಡೆದ ಈ ಉತ್ಸವವು ವಿಶ್ವವನ್ನು ಒಗ್ಗೂಡಿಸಲು ಹೊರಟಿರುವ ಭಾರತದ ಸಂಕಲ್ಪ ಶಕ್ತಿಯನ್ನು ಪ್ರತಿಬಿಂಬಿಸಿತು. ವಾಷಿಂಗ್ಟನ್ ಡಿಸಿ ನ್ಯಾಷನಲ್ ಮಾಲಿನ ಐತಿಹಾಸಿಕ ಲಿಂಕನ್ ಸ್ಮಾರಕದ ಎದುರು ಸಾವಿರಾರು ಜನ ತಮ್ಮ ತಮ್ಮ ಮ್ಯಾಟ್ ಹಾಸಿ ಯೋಗ ಮಾಡುವುದರೊಂದಿಗೆ 2ನೇ ದಿನದ ಉತ್ಸವಕ್ಕೆ ಚಾಲನೆ ಕೊಟ್ಟರು. ಅಲ್ಲಿ ನೆರೆದಿದ್ದ ಎಲ್ಲರಿಗೂ ಗುರುದೇವ ಶ್ರೀ ಶ್ರೀ ರವಿಶಂಕರ್ ಗುರೂಜಿ (Ravishankar Guruji) ಅವರು ಒಂದು ಅನುಪಮವಾದ ಉಸಿರಾಟ, ಯೋಗ ಮತ್ತು ಧ್ಯಾನದ ಪ್ರಕ್ರಿಯೆಗಳನ್ನು ಹೇಳಿಕೊಟ್ಟರು. ಸಂಜೆಯ ವೇಳೆಗೆ ಮನಸೂರೆಗೊಳ್ಳುವಂತಹ ಪ್ರದರ್ಶನಗಳು ಜರುಗಿದವು. ಇದನ್ನೂ ಓದಿ: ನಾವೆಲ್ಲರೂ ವಿಶ್ವ ಕುಟುಂಬಕ್ಕೆ ಸೇರಿದವರು: ಶ್ರೀ ಶ್ರೀ ರವಿಶಂಕರ್‌ ಗುರೂಜಿ

    ಗಣ್ಯರ ಸ್ಫೂರ್ತಿದಾಯಕ ಭಾಷಣಗಳು ಮನುಷ್ಯರ ಬಾಂಧವ್ಯಗಳನ್ನು ಇನ್ನಷ್ಟು ಬೆಸೆಯುವಂತಿತ್ತು. ಭಾರತದ ಮಾಜಿ ರಾಷ್ಟ್ರಪತಿಗಳಾದ ರಾಮ್‌ನಾಥ್ ಕೋವಿಂದ್ ಮಾತನಾಡಿ, ಪರ್ವತ ಶ್ರೇಣಿಗಳು, ಕರಾವಳಿ ಬಯಲು, ನದಿಯ ತೀರ, ಮರುಭೂಮಿ ಪ್ರದೇಶ ಹೀಗೆ ಪ್ರಪಂಚದ ಮೂಲೆ ಮೂಲೆಗಳಿಂದ ಬಂದು ಜನರು ಇಲ್ಲಿ ಸೇರಿದ್ದಾರೆ. ಗುರುದೇವರು ಇಲ್ಲಿ ಒಂದು ಪುಟ್ಟ ಪ್ರಪಂಚವನ್ನೇ ನಿರ್ಮಿಸಿದ್ದಾರೆ ಎಂದು ಬಣ್ಣಿಸಿದರು.

    ಅನೇಕ ಕಲಾರೂಪಗಳ ಪ್ರದರ್ಶನಗಳು ನಡೆದವು. ಅವುಗಳಲ್ಲಿ ಪಾರಂಪರಿಕ ಉಕ್ರೇನ್‌ನ ಹಾಡಿನ ಪ್ರದರ್ಶನ ಕೂಡ ಒಂದು. ಇದನ್ನು ಉಕ್ರೇನ್ ಖ್ಯಾತ ಸಂಗೀತಗಾರರಾದ ಒಲೇನ ಅಸ್ತಶೇವ‌ ಅವರು ನಡೆಸಿಕೊಟ್ಟರು. ಯುದ್ಧದ ಕಾರಣದಿಂದಾಗಿ ಇವರು ತಮ್ಮ ಮಾತೃಭೂಮಿಯನ್ನು ತೊರೆದಿದ್ದರು. ಮನಕುಲಕುವ ಈ ಹಾಡಿನ ಪ್ರದರ್ಶನದ ನಂತರ ಜನರೆಲ್ಲರೂ ಸೇರಿ ಉಕ್ರೇನ್ ಶಾಂತಿಗಾಗಿ ಗುರುದೇವರ ಸಮ್ಮುಖದಲ್ಲಿ ಪ್ರಾರ್ಥಿಸಿದರು. ಇದನ್ನೂ ಓದಿ: ಬೆಂಗಳೂರಿನ BSF ಯೋಧರಿಂದ ಸ್ವಚ್ಛತಾ ಅಭಿಯಾನ

    ಎಲ್ಲರನ್ನೂ ಎಚ್ಚರಿಸುವಂತೆ ಬಿರುಸಿನ ಭಾಷಣ ಮಾಡಿದ ರೆವರೆಂಡ್ ಜೆರಾಲ್ಡ್ ದುರ್ಲೆ, ಆರ್ಟ್ ಆಫ್ ಲಿವಿಂಗ್‌ನ ಹೆಸರನ್ನು ಆರ್ಟ್ ಆಫ್ ಪ್ರೂಫ್ ಎಂದು ಬದಲಿಸಬೇಕು. ಏಕೆಂದರೆ ನಾವು ಎಲ್ಲರನ್ನೂ ಪ್ರೀತಿಸಬಹುದು. ನಾವು ಎಲ್ಲರೊಂದಿಗೆ ಹಂಚಿಕೊಳ್ಳಬಹುದು ಎಂದು ಗುರುದೇವರು ಪ್ರೂವ್ ಮಾಡಿದ್ದಾರೆ ಎಂದರು.

    ಅಮೆರಿಕದ ವೆಂಚರ್ ಕ್ಯಾಪಿಟಲ್ ಹೂಡಿಕೆದಾರರಾದ ಟಿಮ್ ಡ್ರೇಪರ್ ಮಾತನಾಡಿ, ಅಮೆರಿಕನ್ನರಾದ ನಾವು ಇತರ ಜನರನ್ನು ಅನ್ಯಲೋಕದವರಂತೆ ಕಂಡಿದ್ದೇವೆ. ಅದು ಒಳ್ಳೆಯ ಬೆಳವಣಿಗೆ ಆಗಿರಲಿಲ್ಲ. ಆದರೆ ಈಗ ಬದಲಾವಣೆ ಆರಂಭವಾಗಿದೆ. ಗುರುದೇವರ ನಾಯಕತ್ವದಲ್ಲಿ ಜನರನ್ನು ಒಂದಾಗಿ ತರುತ್ತಿದ್ದೇವೆ. ಈಗ ಭೂಮಿಯ ಮೇಲಿರುವ ಯಾರು ಕೂಡ ಏಲಿಯನ್ನರಲ್ಲ (ಅನ್ಯಗ್ರಹ ಜೀವಿಗಳು). ಆದರೆ ಈ ಭೂಮಿಯ ಮೇಲೆ ಯಾರಾದರೂ ಏಲಿಯನ್ನರು ಇದ್ದು, ನಿಮ್ಮ ನಾಯಕರ ಬಳಿಗೆ ಕರೆದೊಯ್ಯಿರಿ ಎಂದರೆ ನಾನು ಅವರನ್ನು ಗುರುದೇವ್ ಶ್ರೀ ಶ್ರೀ ರವಿಶಂಕರರ ಬಳಿಗೆ ಕರೆದೊಯ್ಯುತ್ತೇನೆ ಎಂದರು.

    ಮಾರಿಷಿಯಸ್‌ನ ಅಧ್ಯಕ್ಷರಾದ ಪೃಥ್ವಿರಾಜ್‌ ಸಿಂಗ್ ರೂಪನ್, ಜಪಾನಿನ ಮಾಜಿ ಪ್ರಧಾನ ಮಂತ್ರಿ ದಿವಂಗತ ಶಿಂಜೊ ಅಬೆಯವರ ಪತ್ನಿ ಅಕೀ ಅಬೆ, ಯುಎಸ್‌ನ ಸರ್ಜನ್ ಜನರಲ್ ಡಾ. ವಿವೇಕ್ ಮೂರ್ತಿ ಇನ್ನಿತರ ಗಣ್ಯರು ಎರಡನೇ ದಿನ ಉಪಸ್ಥಿತರಾಗಿದ್ದರು. ಇದನ್ನೂ ಓದಿ: BJP-JDS ಮೈತ್ರಿಗೆ ಜೆಡಿಎಸ್ ಶಾಸಕರಿಂದ ಸರ್ವಾನುಮತದ ಒಪ್ಪಿಗೆ

    ಸಾಂಸ್ಕೃತಿಕ ಕಾರ್ಯಕ್ರಮ
    ಎರಡನೆಯ ದಿನ ಸಾಂಸ್ಕೃತಿಕ ಮಹೋತ್ಸವದಲ್ಲಿ, 10,000 ಜನರಿಂದ ಗರ್ಭ ನೃತ್ಯ ನಡೆಯಿತು. ಅವರೊಡನೆ ಗ್ರಾಮಿ ಪ್ರಶಸ್ತಿ ವಿಜೇತರಾದ ಭಾರತೀಯ ಅಮೆರಿಕನ್ನರೂ ಆದ ಫಾಲು ಶಾ ಅವರು ಗಾಯನ ಮಾಡಿದರು. 200 ಜನರನ್ನೊಳಗೊಂಡ ಭಾಂಗ್ರ ನೃತ್ಯ, ಐರಿಶ್‌ನ ಸ್ಟೆಪ್ ನೃತ್ಯ, ಆಫ್ಗಾನಿನ ಸುಮಧುರ ಸಂಗೀತ, 1000 ಚೀನಿ ಅಮೆರಿಕನ್ನರಿಂದ ವೈಭವಯುತವಾದ ನೃತ್ಯ ಹಾಗೂ ಗಾಯನ ಜರುಗಿತು. ಇದರೊಡನೆ ಕುಂಗ್ ಫೂ ಪ್ರದರ್ಶನವೂ ನಡೆಯಿತು.

    ಭವ್ಯವಾದ ಡ್ರಾಗನ್ ಮತ್ತು ಸಿಂಹಗಳು ಕಲಾತ್ಮಕ ಕಲ್ಪನೆಯನ್ನು ಜೀವಂತವಾಗಿಸಿದವು. ಇಂಡೊನೇಷಿಯಾ, ಬ್ರೆಜಿಲ್, ಬೊಲಿವಿಯ ಮತ್ತು ಲ್ಯಾಟಿನ್ ಅಮೆರಿಕದ ದೇಶಗಳು ಅವಿಸ್ಮರಣೀಯವಾದ ನೃತ್ಯಗಳನ್ನು ನಡೆಸಿದವು. ಖ್ಯಾತ ಕುರ್ಟಿಸ್ ಬ್ಲೋ ಅವರ ನೇತೃತ್ವದಲ್ಲಿ ಹಿಪ್ ಹಾಪ್ ಮತ್ತು ಬ್ರೇಕ್ ಡಾನ್ಸ್‌ನ ಪ್ರದರ್ಶನ ನಡೆಯಿತು. 1,200 ಹಾಡುಗಾರರ ಗಾಸ್ಪೆಲ್ ಕಾಯರ್, ಪಾಕಿಸ್ತಾನದ ಮನಮೋಹಕ ಪ್ರದರ್ಶನವು ನಡೆಯಿತು.

    ಸರ್ಜನ್ ಜನರಲ್ ಡಾ. ವಿವೇಕ್ ಮೂರ್ತಿ ಮಾತನಾಡಿ, ಇಂದಿನ ವಿಶ್ವ ಸಾಂಸ್ಕೃತಿಕ ಉತ್ಸವದಂತಹ ಉತ್ಸವಗಳು ಬಹಳ ಮುಖ್ಯ. ನಾವೆಲ್ಲರೂ ಪರಸ್ಪರ ಹೊಂದಿರುವ ಸಂಬಂಧವು ಎಷ್ಟು ಅವಶ್ಯಕವಾದದ್ದು ಎಂಬುದನ್ನು ಇದು ತೋರಿಸುತ್ತದೆ. ಇಂದಿನ ದಿನಗಳಲ್ಲಿ ಏಕಾಂಗಿತನ ಹಾಗೂ ಪ್ರತ್ಯೇಕತೆಯು ಹೆಚ್ಚಾಗಿದೆ. ಎಲ್ಲರೂ ಒಂದಾಗಿರುವ ಸಂಬಂಧಗಳನ್ನು ನೆನಪಿಸಿಕೊಳ್ಳುವುದು ಅವಶ್ಯಕವಾಗಿದೆ. ಏಕಾಂಗಿತನ, ಪ್ರತ್ಯೇಕತೆಯಿಂದ ದೈಹಿಕ ಕಾಯಿಲೆ, ಹೃದ್ರೋಗಗಳು ಹೆಚ್ಚುತ್ತಿವೆ. ಇವು ನಮ್ಮ ಸಮುದಾಯಗಳ ಒಳಿತನ್ನೇ ನಾಶಮಾಡುತ್ತಿವೆ ಎಂದು ತಿಳಿಸಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಉಕ್ರೇನ್‌ನ ಆಕ್ರಮಿತ ಪ್ರದೇಶಗಳಲ್ಲಿ ರಷ್ಯಾ ಚುನಾವಣೆ ನಡೆಸುತ್ತಿದೆ: ಅಮೆರಿಕ ರಾಜ್ಯ ಕಾರ್ಯದರ್ಶಿ ಆರೋಪ

    ಉಕ್ರೇನ್‌ನ ಆಕ್ರಮಿತ ಪ್ರದೇಶಗಳಲ್ಲಿ ರಷ್ಯಾ ಚುನಾವಣೆ ನಡೆಸುತ್ತಿದೆ: ಅಮೆರಿಕ ರಾಜ್ಯ ಕಾರ್ಯದರ್ಶಿ ಆರೋಪ

    ವಾಷಿಂಗ್ಟನ್‌: ಆಕ್ರಮಿತ ಉಕ್ರೇನ್‌ ಪ್ರದೇಶದಲ್ಲಿ ರಷ್ಯಾ ನೆಪಮಾತ್ರ ಚುನಾವಣೆ ನಡೆಸುತ್ತಿದೆ. ಈ ಕ್ರಮವು ಯುಎನ್ ಚಾರ್ಟರ್ ತತ್ವಗಳ ವಿರುದ್ಧ ಇದೆ ಎಂದು ಯುಎಸ್ ರಾಜ್ಯ ಕಾರ್ಯದರ್ಶಿ ಆಂಟೊನಿ ಬ್ಲಿಂಕೆನ್ ಖಂಡಿಸಿದ್ದಾರೆ.

    ರಷ್ಯಾದ ಒಕ್ಕೂಟವು ಉಕ್ರೇನ್‌ನ ಆಕ್ರಮಿತ ಪ್ರದೇಶಗಳಲ್ಲಿ ನೆಪಮಾತ್ರ ಚುನಾವಣೆಗಳನ್ನು ನಡೆಸುವ ಪ್ರಕ್ರಿಯೆಯಲ್ಲಿದೆ. ಕ್ರೆಮ್ಲಿನ್ ನೆಪಮಾತ್ರದ ಜನಾಭಿಪ್ರಾಯವನ್ನು ಪ್ರದರ್ಶಿಸಿದ ಸುಮಾರು ಒಂದು ವರ್ಷದ ನಂತರ ಈ ಚುನಾವಣೆಗಳು ನಡೆಯುತ್ತಿವೆ. ಉಕ್ರೇನ್‌ನ ಖೆರ್ಸನ್, ಝಪೊರಿಜ್ಜ್ಯಾ, ಡೊನೆಟ್ಸ್ಕ್ ಮತ್ತು ಲುಹಾನ್ಸ್ಕ್ ಪ್ರದೇಶಗಳು ಸೇರಿದಂತೆ ಒಂಬತ್ತು ವರ್ಷಗಳ ನಂತರ ರಷ್ಯಾ ಉಕ್ರೇನ್‌ನ ಸ್ವಾಯತ್ತ ಗಣರಾಜ್ಯ ಕ್ರೈಮಿಯಾ ಮತ್ತು ಸೆವಾಸ್ಟೊಪೋಲ್ ಅನ್ನು ಸ್ವಾಧೀನಪಡಿಸಿಕೊಳ್ಳಲು ಉದ್ದೇಶಿಸಿದೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಭೂಮಿ ನಿರ್ನಾಮ ಹಂತ ತಲುಪಿದ್ರೆ ಮುಂದೇನು?

    ತಾನು ಆಕ್ರಮಿಸಿಕೊಂಡಿರುವ ಉಕ್ರೇನ್‌ನ ಭಾಗಗಳಲ್ಲಿ ರಷ್ಯಾ ಕಾನೂನುಬಾಹಿರ ಹಕ್ಕುಗಳನ್ನು ಬಲಪಡಿಸಲು ಮುಂದಾಗಿದೆ. ಇದು ಪ್ರಚಾರದ ಉದ್ದೇಶದಿಂದ ಕೂಡಿದೆ ಅಷ್ಟೆ. ಯುನೈಟೆಡ್ ಸ್ಟೇಟ್ಸ್ ಉಕ್ರೇನ್‌ನ ಯಾವುದೇ ಸಾರ್ವಭೌಮ ಪ್ರದೇಶದಲ್ಲಿ ರಷ್ಯಾದ ಒಕ್ಕೂಟದ ಹಕ್ಕುಗಳನ್ನು ಸ್ಥಾಪಿಸಲು ಎಂದಿಗೂ ಬಿಡುವುದಿಲ್ಲ ಎಂದು ಕಿಡಿಕಾರಿದ್ದಾರೆ.

    ಆಗಸ್ಟ್ 31 ರಂದು ರಷ್ಯಾ ಉಕ್ರೇನ್‌ನ ಆಕ್ರಮಿತ ಪ್ರದೇಶಗಳಲ್ಲಿ ಪ್ರಾದೇಶಿಕ ಚುನಾವಣೆಗಳನ್ನು ನಡೆಸಲು ಪ್ರಾರಂಭಿಸಿತು ಎಂದು ಕೈವ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ ಬಂದಿತ್ತು. ಉಕ್ರೇನ್ ಈ ಕ್ರಮವನ್ನು ಖಂಡಿಸಿದೆ. ಆಕ್ರಮಿತ ಪ್ರದೇಶಗಳಲ್ಲಿ ರಷ್ಯಾ ನೇಮಿಸಿದ ಅಧಿಕಾರಿಗಳು ಯೋಜಿಸಿರುವ ಮುಂಬರುವ ಚುನಾವಣೆಗಳಲ್ಲಿ ಮತ ಚಲಾಯಿಸದಂತೆ ನಾಗರಿಕರಿಗೆ ಉಕ್ರೇನ್ ಒತ್ತಾಯಿಸಿದೆ. ಸಾಧ್ಯವಾದರೆ ಪ್ರದೇಶವನ್ನು ಬಿಟ್ಟು ಬೇರೆ ಕಡೆ ಬನ್ನಿ ಎಂದು ಸಲಹೆ ನೀಡಿದೆ. ಇದನ್ನೂ ಓದಿ: ಮಹಿಳೆಗೆ ಮುತ್ತಿಟ್ಟು, ಪೊಲೀಸ್‌ ಕಾರಿನಲ್ಲೇ ರೊಮ್ಯಾನ್ಸ್‌ – US ಅಧಿಕಾರಿ ಅಮಾನತು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಯುದ್ಧಕಾಲದ ರಕ್ಷಣಾ ಸಚಿವರನ್ನ ವಜಾಗೊಳಿಸಿದ ಉಕ್ರೇನ್‌ ಅಧ್ಯಕ್ಷ ಝೆಲೆನ್ಸ್ಕಿ

    ಯುದ್ಧಕಾಲದ ರಕ್ಷಣಾ ಸಚಿವರನ್ನ ವಜಾಗೊಳಿಸಿದ ಉಕ್ರೇನ್‌ ಅಧ್ಯಕ್ಷ ಝೆಲೆನ್ಸ್ಕಿ

    ಕೀವ್: ಯುದ್ಧಕಾಲದ ರಕ್ಷಣಾ ಸಚಿವ ಓಲೆಕ್ಸಿ ರೆಜ್ನಿಕೋವ್ (Oleksii Reznik) ಅವರನ್ನು ವಜಾಗೊಳಿಸಿ, ಅವರ ಸ್ಥಾನಕ್ಕೆ ರುಸ್ಟೆಮ್ ಉಮೆರೋವ್ ಅವರನ್ನು ನಾಮನಿರ್ದೇಶನ ಮಾಡಿ ಉಕ್ರೇನ್‌ (Ukraine) ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್ಸ್ಕಿ (Volodimir Zelensky) ಆದೇಶ ಹೊರಡಿಸಿದ್ದಾರೆ.

    ಉಕ್ರೇನ್‌ ಮೇಲಿನ ರಷ್ಯಾ (Russia) ಯುದ್ಧವು 19 ನೇ ತಿಂಗಳನ್ನು ಪ್ರವೇಶಿಸಿದೆ. ಈ ಹೊತ್ತಿನಲ್ಲಿ ರಕ್ಷಣಾ ವ್ಯವಸ್ಥೆ ವಿಚಾರವಾಗಿ ಸಚಿವಾಲಯಕ್ಕೆ ಹೊಸ ವಿಧಾನಗಳ ಅಗತ್ಯವಿದೆ ಎಂದು ಈ ನಿರ್ಧಾರ ಕೈಗೊಳ್ಳಲಾಗಿದೆ. ಇದನ್ನೂ ಓದಿ: 2ನೇ ಮಹಾಯುದ್ಧದ ನಂತರ ಅತಿ ಹೆಚ್ಚು ಸಾವುಗಳಾದ ಯುದ್ಧ ರಷ್ಯಾ-ಉಕ್ರೇನ್‌ ವಾರ್‌; ಮಡಿದವರೆಷ್ಟು?

    ಹೊಸ ರಕ್ಷಣಾ ಸಚಿವರಾಗಲು ಉಕ್ರೇನ್‌ನ ಮಾಜಿ ಪೀಪಲ್ಸ್ ಡೆಪ್ಯೂಟಿ ರುಸ್ಟೆಮ್ ಉಮೆರೊವ್ ಅವರನ್ನು ನಾಮನಿರ್ದೇಶನ ಮಾಡಲಾಗಿದೆ ಎಂದು ಝೆಲೆನ್ಸ್ಕಿ ಸೋಷಿಯಲ್‌ ಮೀಡಿಯಾ ಎಕ್ಸ್‌ನಲ್ಲಿ ವೀಡಿಯೋ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.

    ಉಕ್ರೇನ್‌ನ ರಕ್ಷಣಾ ಸಚಿವರನ್ನು ಬದಲಿಸಲು ನಾನು ನಿರ್ಧರಿಸಿದ್ದೇನೆ. ಮಿಲಿಟರಿ ಮತ್ತು ಸಮಾಜದೊಂದಿಗೆ ಉತ್ತಮ ಪ್ರಮಾಣದಲ್ಲಿ ಸಂವಹನದ ಹೊಸ ವಿಧಾನಗಳು ಮತ್ತು ಇತರ ಸ್ವರೂಪಗಳ ಅಗತ್ಯವಿದೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಸಿಂಗಾಪುರ ಅಧ್ಯಕ್ಷರಾಗಿ ಆಯ್ಕೆಯಾದ ಭಾರತೀಯ ಮೂಲದ ಷಣ್ಮುಗರತ್ನಂಗೆ ಮೋದಿ ಅಭಿನಂದನೆ – ಯಾರಿವರು?

    ಈಗ ರುಸ್ಟೆಮ್ ಉಮೆರೋವ್ ಸಚಿವಾಲಯವನ್ನು ಮುನ್ನಡೆಸಬೇಕು. ಉಕ್ರೇನ್‌ನ ವರ್ಕೋವ್ನಾ ರಾಡಾ (ಶಾಸಕಾಂಗ) ಈ ವ್ಯಕ್ತಿಯನ್ನು ಚೆನ್ನಾಗಿ ಬಲ್ಲವರಾಗಿದ್ದಾರೆ. ಉಮೆರೋವ್‌ಗೆ ಯಾವುದೇ ಹೆಚ್ಚುವರಿ ಪರಿಚಯಗಳ ಅಗತ್ಯವಿಲ್ಲ. ಸಂಸತ್ತು ಈ ಅಭ್ಯರ್ಥಿಯನ್ನು ಬೆಂಬಲಿಸುತ್ತದೆ ಎಂದು ನಾನು ನಿರೀಕ್ಷಿಸುತ್ತೇನೆ ಎಂದು ಉಕ್ರೇನ್‌ ಅಧ್ಯಕ್ಷ ಹೇಳಿದ್ದಾರೆ.

    ಫೆಬ್ರವರಿ 24, 2022 ರಂದು ರಷ್ಯಾ-ಉಕ್ರೇನ್ ಯುದ್ಧದ ಆರಂಭದಿಂದಲೂ ರೆಜ್ನಿಕೋವ್ ರಕ್ಷಣಾ ಸಚಿವರಾಗಿ ಕೆಲಸ ಮಾಡಿದ್ದರು. ಯುದ್ಧವು ಸಾವಿರಾರು ಜನರನ್ನು ಬಲಿ ತೆಗೆದುಕೊಂಡಿದೆ. ಈಗಲೂ ಎರಡು ರಾಷ್ಟ್ರಗಳ ನಡುವೆ ಯುದ್ಧವು ಉಲ್ಬಣಗೊಳ್ಳುತ್ತಲೇ ಇದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 2ನೇ ಮಹಾಯುದ್ಧದ ನಂತರ ಅತಿ ಹೆಚ್ಚು ಸಾವುಗಳಾದ ಯುದ್ಧ ರಷ್ಯಾ-ಉಕ್ರೇನ್‌ ವಾರ್‌; ಮಡಿದವರೆಷ್ಟು?

    2ನೇ ಮಹಾಯುದ್ಧದ ನಂತರ ಅತಿ ಹೆಚ್ಚು ಸಾವುಗಳಾದ ಯುದ್ಧ ರಷ್ಯಾ-ಉಕ್ರೇನ್‌ ವಾರ್‌; ಮಡಿದವರೆಷ್ಟು?

    ದು 2022, ಫೆಬ್ರವರಿ 24ರ ಸಂದರ್ಭ. ಇಡೀ ಜಗತ್ತೇ ಬೆಚ್ಚಿ ಬೀಳುವಂತಹ ಘೋಷಣೆಯೊಂದನ್ನು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Volodymyr Zelensky) ಮಾಡಿದರು. ಉಕ್ರೇನ್ ಮೇಲೆ ಯುದ್ಧ ನಡೆಸುವುದಾಗಿ ಘೋಷಿಸಿ ಬಿಟ್ಟರು. ಎರಡು ಮಹಾಯುದ್ಧಗಳ ಭೀಕರತೆಗೆ ನಲುಗಿ ಶಾಂತಿಯ ಮಂತ್ರ ಜಪಿಸುತ್ತಿದ್ದ ವಿಶ್ವಕ್ಕೆ, ಈ ಘೋಷಣೆ ನಿಜಕ್ಕೂ ನುಂಗಲಾರದ ತುತ್ತಾಯಿತು. ವಿಶ್ವಯುದ್ಧಗಳಿಂದಾದ ಸಾವು-ನೋವು, ಆರ್ಥಿಕ ಪ್ರಕ್ಷುಬ್ಧತೆ, ದೇಶ ದೇಶಗಳ ನಡುವಿನ ಕಂದಕ, ವೈಮನಸ್ಸಿನ ಗಾಯದ ಗುರುತು ಇನ್ನೂ ಮಾಡಿಲ್ಲ. ಒಬ್ಬರ ವಿರುದ್ಧ ಮತ್ತೊಬ್ಬರು ಕತ್ತಿ ಮಸೆಯುತ್ತಲೇ ಇದ್ದಾರೆ. ಇಂತಹ ಹೊತ್ತಿನಲ್ಲಿ ಪುಟಿನ್ (Vladimir Putin) ನಿರ್ಧಾರ ಭೂವಾಸಿಗಳಿಗೆ ಮತ್ತೆ ಸಂಕಷ್ಟ ತಂದಿಟ್ಟಿದೆ.

    ಉಕ್ರೇನ್ ಮೇಲೆ ರಷ್ಯಾ (Ukraine-Russia) ನಡೆಸುತ್ತಿರುವ ಯುದ್ಧಕ್ಕೆ 18 ತಿಂಗಳು ತುಂಬಿದೆ. ರಷ್ಯಾದ ಆಕ್ರಮಣದಿಂದ ಹತ್ತಾರು ಸಾವಿರ ಜನರ ಮಾರಣಹೋಮವಾಗಿದೆ. ಲಕ್ಷಾಂತರ ಜನರು ಗಂಟುಮೂಟೆ ಕಟ್ಟಿಕೊಂಡು ನೆಲೆ ಇಲ್ಲದಂತೆ ಅಲೆಮಾರಿಗಳಾಗಿದ್ದಾರೆ. ರಷ್ಯಾ ಮತ್ತು ಉಕ್ರೇನ್ ಯುದ್ಧದಿಂದ ಪ್ರಪಂಚದಾದ್ಯಂತ ಆರ್ಥಿಕ ಪ್ರಕ್ಷುಬ್ಧತೆ ತಲೆದೋರಿದೆ. 2ನೇ ಮಹಾಯುದ್ಧದ (World War 2) ನಂತರ ಯೂರೋಪ್‌ನಲ್ಲಿ ಎಂದೂ ಕಂಡಿರದ ಮಟ್ಟದಲ್ಲಿ ಅಪಾರ ಸಾವು-ನೋವು ಈ ಯುದ್ಧದಲ್ಲಿ ಆಗಿದೆ ಎಂದು ವಿಶ್ಲೇಷಿಸಲಾಗಿದೆ. ಇದನ್ನೂ ಓದಿ: ಪಾಕಿಸ್ತಾನದ ಯಾವ ಪ್ರಧಾನಿಯೂ 5 ವರ್ಷ ಪೂರೈಸಿಲ್ಲ – ಕಾರಣಗಳೇನು?

    ಎರಡನೇ ಮಹಾಯುದ್ಧದ ಭೀಕರತೆ
    1939ರಿಂದ 1945 ರ ವರೆಗೆ ನಡೆದ ಜಾಗತಿಕ ಅನೇಕ ದೇಶಗಳನ್ನೊಳಗೊಂಡ ಯುದ್ಧ ಎರಡನೇ ಮಹಾಯುದ್ಧ. ಪ್ರಧಾನವಾಗಿ ಯೂರೋಪ್ ಮತ್ತು ಏಷಿಯಾ ಖಂಡದಲ್ಲಿ ನಡೆದ ಈ ಯುದ್ಧದಲ್ಲಿ ಮಿತ್ರ ರಾಷ್ಟ್ರ (ಜರ್ಮನಿ, ರಷ್ಯಾ, ಇಂಗ್ಲೆಂಡ್ ಮತ್ತು ಅಮೆರಿಕ) ಹಾಗೂ ಅಕ್ಷ ರಾಷ್ಟ್ರ (ಜರ್ಮನಿ, ಇಟಲಿ ಮತ್ತು ಜಪಾನ್) ಎಂಬ ಎರಡು ಬಣಗಳಿದ್ದವು. ಬರೋಬ್ಬರಿ 70 ರಾಷ್ಟ್ರಗಳ ಸೈನ್ಯಗಳು ಭಾಗವಹಿಸಿದ್ದ ಈ ಯುದ್ಧದಲ್ಲಿ 6 ಕೋಟಿಗೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅಂದಾಜಿಸಲಾಗಿದೆ. ಮನುಕುಲದ ಇತಿಹಾಸದಲ್ಲೇ ಇದು ಅತಿ ಹೆಚ್ಚು ಸಾವು-ನೋವಾದ ಯುದ್ಧ.

    ಯುದ್ಧದಿಂದ ರಷ್ಯಾ ಮತ್ತು ಉಕ್ರೇನ್ ಎರಡೂ ರಾಷ್ಟ್ರಗಳಲ್ಲಿ ಎಷ್ಟು ಸಾವು-ನೋವಾಗಿದೆ? ಯುದ್ಧದಲ್ಲಿ ಮನೆ ಕಳೆದುಕೊಂಡು ಎಷ್ಟು ಜನ ವಲಸೆ ಹೋಗಿದ್ದಾರೆ? ಉಕ್ರೇನ್ ಹಾಗೂ ರಷ್ಯಾದ ಮೇಲೆ ಯುದ್ಧ ಯಾವ ರೀತಿಯ ಪರಿಣಾಮ ಬೀರಿದೆ? ಈ ಯುದ್ಧದಿಂದ ಜಾಗತಿಕವಾಗಿ ಉಂಟಾದ ಬಿಕ್ಕಟ್ಟೇನು? ಉಕ್ರೇನ್‌ಗೆ ಒದಗಿ ಬಂದ ನೆರವು ಮೊದಲಾದ ವಿಷಯಗಳ ಬಗ್ಗೆ ಇಲ್ಲಿ ಚರ್ಚಿಸಲಾಗಿದೆ.

    ರಷ್ಯಾ-ಉಕ್ರೇನ್ ಯುದ್ಧದಲ್ಲಿ ಮಡಿದವರೆಷ್ಟು?
    ಎರಡನೆಯ ಮಹಾಯುದ್ಧದ ನಂತರ ಯೂರೋಪ್‌ನಲ್ಲಿ ಕಂಡುಬರದ ಮಟ್ಟದಲ್ಲಿ ಈ ಯುದ್ಧವು ಸಾವನ್ನು ಉಂಟುಮಾಡಿದೆ. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈ ಕಮಿಷನರ್ (OHCHR) ಪ್ರಕಾರ, ಜುಲೈ ಅಂತ್ಯದ ವೇಳೆಗೆ 9,000 ಕ್ಕೂ ಹೆಚ್ಚು ನಾಗರಿಕರು ಹತ್ಯೆಯಾಗಿದ್ದಾರೆ. 16,000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ದಾಖಲಿಸಲಾಗಿದೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸಾವು-ನೋವಾಗಿದೆ. ಆ ಬಗ್ಗೆ ಹೆಚ್ಚಿನ ವಿವರ ಲಭ್ಯವಾಗಿಲ್ಲ. ಯುದ್ಧದಲ್ಲಿ ಮೃತಪಟ್ಟವರು ಮತ್ತು ಗಾಯಗೊಂಡವರ ಸಂಖ್ಯೆ ಎರಡೂ ಸೇರಿ 5,00,000 ದಷ್ಟಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಇದನ್ನೂ ಓದಿ: AsiaCup ಟೂರ್ನಿಯಲ್ಲಿ ಭಾರತದ್ದೇ ಮೇಲುಗೈ – ಗೆದ್ದವರು, ಬಿದ್ದವರ ಕಥೆ

    1,12,000 ರಷ್ಯಾದ ಸೈನಿಕರು ಸಾವಿಗೀಡಾಗಿದ್ದಾರೆ. 1,70,000 ದಿಂದ 1,80,000 ವರೆಗೆ ಸೈನಿಕರು ಗಾಯಗೊಂಡಿದ್ದಾರೆ ಎಂದು ಉಕ್ರೇನ್ ಬೆಂಬಲಿಸುವ ಯುನೈಟೆಡ್ ಸ್ಟೇಟ್ಸ್ ಅಧಿಕಾರಿಗಳು ತಿಳಿಸಿದ್ದಾರೆ. ಉಕ್ರೇನ್‌ನಲ್ಲಿ 70,000 ದಿಂದ 1,00,000 ವರೆಗೆ ಸೈನಿಕರು ಹತರಾಗಿದ್ದಾರೆ ಎಂದು ಹೇಳಲಾಗಿದೆ. ಆದರೆ ಅಮೆರಿಕದ ಅಂಕಿ ಅಂಶಗಳನ್ನು ರಷ್ಯಾ ಅಧಿಕಾರಿಗಳು ತಳ್ಳಿ ಹಾಕಿದ್ದಾರೆ. ಅಂಕಿಅಂಶದಲ್ಲಿ ಹೆಚ್ಚಿನ ಸಂಖ್ಯೆಯನ್ನು ತೋರಿಸಲಾಗಿದೆ. ಪ್ರಚಾರಕ್ಕಾಗಿ ಯುಎಸ್‌ ಹೀಗೆ ಮಾಡುತ್ತಿದೆ ಎಂದು ರಷ್ಯಾ ಅಧಿಕಾರಿಗಳು ಆರೋಪಿಸಿದ್ದಾರೆ.

    ಸ್ಥಳಾಂತರ ಆದವರೆಷ್ಟು?
    2022 ರ ಆಕ್ರಮಣದಿಂದ, ಲಕ್ಷಾಂತರ ಉಕ್ರೇನಿಯನ್ನರು ತಮ್ಮ ಮನೆಗಳಿಂದ ಬೇರೆಡೆಗೆ ಸ್ಥಳಾಂತರಗೊಂಡಿದ್ದಾರೆ. 4.1 ಕೋಟಿಯಷ್ಟು ಜನಸಂಖ್ಯೆಯನ್ನು ಉಕ್ರೇನ್ ರಾಷ್ಟ್ರ ಹೊಂದಿದೆ. 1.7 ಕೋಟಿಯಷ್ಟು ಜನರಿಗೆ ತುರ್ತು ಮಾನವೀಯ ನೆರವಿನ ಅಗತ್ಯವಿದೆ. 50 ಲಕ್ಷಕ್ಕೂ ಹೆಚ್ಚು ಮಂದಿ ಉಕ್ರೇನ್ ನಿರಾಶ್ರಿತರು ಯೂರೋಪ್‌ನಾದ್ಯಂತ ಆಶ್ರಯ ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ.

    ಉಕ್ರೇನ್ ಪರಿಸ್ಥಿತಿ ಹೇಗಿದೆ?
    ಯುದ್ಧ ಪ್ರಾರಂಭವಾದಾಗಿನಿಂದಲೂ ರಷ್ಯಾವು ಉಕ್ರೇನ್‌ನ 11 ಪ್ರತಿಶತದಷ್ಟು ಭೂಪ್ರದೇಶವನ್ನು ವಶಪಡಿಸಿಕೊಂಡಿದೆ. ಈ ಭೂಪ್ರದೇಶದ ಅಮೆರಿಕದ ರಾಜ್ಯಗಳಾದ ಮೆಸ್ಸಾಚುಸೆಟ್ಸ್, ನ್ಯೂ ಹ್ಯಾಂಪ್‌ಶೈರ್ ಮತ್ತು ಕನೆಕ್ಟಿಕಟ್‌ಗೆ ಸಮಾನವಾಗಿದೆ ಎಂದು ಹಾರ್ವರ್ಡ್ ಕೆನಡಿ ಸ್ಕೂಲ್‌ನಲ್ಲಿರುವ ಬೆಲ್ಫರ್ ಸೆಂಟರ್ ವರದಿಯಲ್ಲಿ ತಿಳಿಸಿದೆ. 2014 ರಲ್ಲಿ ಉಕ್ರೇನ್‌ನಿಂದ ಕ್ರಿಮಿಯಾವನ್ನು ರಷ್ಯಾ ಸ್ವಾಧೀನಪಡಿಸಿಕೊಂಡಿತ್ತು. ಒಟ್ಟಾರೆ ರಷ್ಯಾ ಈಗ ಉಕ್ರೇನ್‌ನ ಸುಮಾರು 17.5% ಭೂಭಾಗವನ್ನು ನಿಯಂತ್ರಿಸುತ್ತಿದೆ. ಇದು ಸುಮಾರು 41,000 ಚದರ ಮೈಲಿಗಳು (106,000 ಚದರ ಕಿಮೀ) ಇದೆ. ಇದನ್ನೂ ಓದಿ: Chandrayaan-3: ‘ಸ್ಮೈಲ್ ಪ್ಲೀಸ್’ – ವಿಕ್ರಂನ ಫೋಟೋ ಕ್ಲಿಕ್ಕಿಸಿದ ಪ್ರಗ್ಯಾನ್

    ಉಕ್ರೇನ್ ತನ್ನ ಕರಾವಳಿಯ ಒಂದು ಭಾಗವನ್ನು ಕಳೆದುಕೊಂಡಿದೆ. ಅದರ ಆರ್ಥಿಕತೆಯು ದುರ್ಬಲಗೊಂಡಿದೆ. ಹೋರಾಟದಿಂದ ಕೆಲವು ನಗರಗಳು ಪಾಳುಭೂಮಿಗಳಾಗಿ ಮಾರ್ಪಟ್ಟಿವೆ. ಉಕ್ರೇನ್‌ನ ಆರ್ಥಿಕತೆಯು 2022 ರಲ್ಲಿ 30% ರಷ್ಟು ಕುಸಿತ ಕಂಡಿದೆ. ಈ ವರ್ಷ 1% ರಿಂದ 3% ರಷ್ಟು ಬೆಳೆಯುವ ಮುನ್ಸೂಚನೆ ಇದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ ವಿಶ್ಲೇಷಿಸಿದೆ.

    ರಷ್ಯಾದಲ್ಲಿ ಪರಿಸ್ಥಿತಿ ಯಾವ ರೀತಿ ಇದೆ?
    ಉಕ್ರೇನ್ ಮೇಲೆ ಆಕ್ರಮಣ ನಡೆಸಿರುವ ರಷ್ಯಾ ವಿರುದ್ಧ ಪಾಶ್ಚಿಮಾತ್ಯ ರಾಷ್ಟ್ರಗಳು ನಿರ್ಬಂಧದ ಅಸ್ತ್ರವನ್ನು ಹೂಡಿವೆ. ಇದರಿಂದ ರಷ್ಯಾದ ಆರ್ಥಿಕತೆಗೆ ದೊಡ್ಡ ಪೆಟ್ಟು ಕೊಟ್ಟಂತಾಗಿದೆ. ರಷ್ಯಾವು ಮಿಲಿಟರಿಗೆ ಹೆಚ್ಚಿನ ಹಣ ವಿನಿಯೋಗಿಸುತ್ತಿದೆ. ಇದರಿಂದ ಇತರೆ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ. 2022 ರಲ್ಲಿ ರಷ್ಯಾ ಆರ್ಥಿಕತೆಯು 2.1% ನಷ್ಟು ಕುಸಿತ ಕಂಡಿತ್ತು. ಈ ವರ್ಷ 1.5% ರಷ್ಟು ಆರ್ಥಿಕ ಬೆಳವಣಿಗೆ ಸಾಧಿಸಬಹುದು ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ ವರದಿ ಮಾಡಿದೆ.

    ಯುದ್ಧದ ಮಧ್ಯಾವಧಿಯಲ್ಲಿ ಬಹುರಾಷ್ಟ್ರೀಯ ಕಂಪನಿಗಳ ನಿರ್ಗಮನ, ಮಾನವ ಬಂಡವಾಳದ ನಷ್ಟ, ಜಾಗತಿಕ ಹಣಕಾಸು ಮಾರುಕಟ್ಟೆಗಳಿಂದ ಸಂಪರ್ಕ ಕಡಿತದಿಂದ ರಷ್ಯಾದ ಆರ್ಥಿಕತೆಯು ಕುಂಠಿತಗೊಂಡಿದೆ ಎಂದು IMF ವಕ್ತಾರ ಜೂಲಿ ಕೊಜಾಕ್ ಕಳೆದ ತಿಂಗಳು ಹೇಳಿದ್ದರು. ಈ ಅವಧಿಯಲ್ಲಿ ರಷ್ಯಾದಲ್ಲಿ ಉತ್ಪಾದನೆಯು ಯುದ್ಧ ಪೂರ್ವದಲ್ಲಿದ್ದ ಪ್ರಮಾಣಕ್ಕಿಂತ 7 ಪ್ರತಿಶತದಷ್ಟು ಕಡಿಮೆಯಾಗಿದೆ ಎನ್ನಲಾಗಿದೆ. ರಷ್ಯಾ ತನ್ನ 2023 ರ ರಕ್ಷಣಾ ವೆಚ್ಚದ ಗುರಿಯನ್ನು 100 ಶತಕೋಟಿ ಡಾಲರ್‌ಗಿಂತ ಹೆಚ್ಚು ಹೊಂದಿದೆ. ಎಲ್ಲಾ ಸಾರ್ವಜನಿಕ ವೆಚ್ಚದ ಮೂರನೇ ಒಂದು ಭಾಗವನ್ನು ಮಿಲಿಟರಿಗಾಗಿಯೇ ವಿನಿಯೋಗಿಸುತ್ತಿದೆ ಎಂದು ವಿಶ್ಲೇಷಿಸಲಾಗಿದೆ. ಇದನ್ನೂ ಓದಿ: ಅದಾನಿ ಷೇರು ಶಾರ್ಟ್‌ ಸೆಲ್ಲಿಂಗ್‌, 16 ಕಂಪನಿಗಳಿಗೆ ಭಾರೀ ಲಾಭ – ಇಡಿ ತನಿಖಾ ವರದಿಯಲ್ಲಿ ಏನಿದೆ?

    ಜಾಗತಿಕ ಹಣದುಬ್ಬರ, ಆಹಾರ ಬಿಕ್ಕಟ್ಟು
    ರಷ್ಯಾದ ಆಕ್ರಮಣ ಮತ್ತು ಪಾಶ್ಚಿಮಾತ್ಯ ನಿರ್ಬಂಧಗಳು ಗೊಬ್ಬರ, ಗೋಧಿ, ಲೋಹಗಳ ಬೆಲೆಗಳಲ್ಲಿ ಏರಿಕೆಗೆ ಕಾರಣವಾಯಿತು. ಈ ಯುದ್ಧವು ಹಣದುಬ್ಬರದ ಅಲೆ ಮತ್ತು ಜಾಗತಿಕ ಆಹಾರ ಬಿಕ್ಕಟ್ಟನ್ನು ಉತ್ತೇಜಿಸಿತು. ಸೌದಿ ಅರೇಬಿಯಾದ ನಂತರ ರಷ್ಯಾ ವಿಶ್ವದ ಎರಡನೇ ಅತಿದೊಡ್ಡ ತೈಲ ರಫ್ತುದಾರ. ಅಷ್ಟೇ ಅಲ್ಲ ನೈಸರ್ಗಿಕ ಅನಿಲ, ಗೋಧಿ, ಸಾರಜನಕ ಗೊಬ್ಬರ ಮತ್ತು ಪಲ್ಲಾಡಿಯಂನ ರಫ್ತುದಾರ ಕೂಡ. ಉಕ್ರೇನ್‌ನ ಮೇಲೆ ರಷ್ಯಾದ ಆಕ್ರಮಣದ ಸ್ವಲ್ಪ ಕಾಲದ ನಂತರ, ಅಂತಾರಾಷ್ಟ್ರೀಯ ತೈಲ ಬೆಲೆಗಳು 2008 ರ ದಾಖಲೆಗಳನ್ನೂ ಮೀರಿ ಗರಿಷ್ಠ ಮಟ್ಟಕ್ಕೆ ಏರಿತು.

    ಪಾಶ್ಚಾತ್ಯ ರಾಷ್ಟ್ರಗಳಿಂದ ಉಕ್ರೇನ್‌ಗೆ ಒದಗಿಬಂದ ನೆರವು
    ಯುನೈಟೆಡ್ ಸ್ಟೇಟ್ಸ್ ಉಕ್ರೇನ್‌ಗೆ ಇದುವರೆಗೆ 43 ಶತಕೋಟಿಗೂ ಹೆಚ್ಚು ಡಾಲರ್ ಭದ್ರತಾ ನೆರವನ್ನು ನೀಡಿದೆ. ಇದರಲ್ಲಿ ಸ್ಟಿಂಗರ್ ವಿಮಾನ-ವಿರೋಧಿ ವ್ಯವಸ್ಥೆಗಳು, ಜಾವೆಲಿನ್ ಆಂಟಿ-ಆರ್ಮರ್ ಸಿಸ್ಟಮ್‌ಗಳು, 155mm ಹೊವಿಟ್ಜರ್‌ಗಳು ಮತ್ತು ರಾಸಾಯನಿಕ, ಜೈವಿಕ, ವಿಕಿರಣಶಾಸ್ತ್ರ ಮತ್ತು ಪರಮಾಣು ದಾಳಿಯಿಂದ ರಕ್ಷಿಸುವ ಉಪಕರಣಗಳು ಸೇರಿವೆ. ಯುನೈಟೆಡ್ ಸ್ಟೇಟ್ಸ್, ಯುರೋಪಿಯನ್ ಒಕ್ಕೂಟ, ಬ್ರಿಟನ್, ಜರ್ಮನಿ ಮತ್ತು ಜಪಾನ್ ದೇಶಗಳು ಉಕ್ರೇನ್‌ಗೆ ಅಪಾರ ಬೆಂಬಲ ನೀಡಿವೆ. ಪಾಶ್ಚಿಮಾತ್ಯ ರಾಷ್ಟ್ರಗಳು ಉಕ್ರೇನ್‌ಗೆ ಶಸ್ತ್ರಾಸ್ತ್ರ ಪೂರೈಸುತ್ತಿರುವುದರಿಂದ ಯುದ್ಧ ಮತ್ತಷ್ಟು ಹೆಚ್ಚಾಗಲು ಕಾರಣವಾಗುತ್ತಿದೆ ಎಂದು ರಷ್ಯಾ ಆರೋಪಿಸಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಉಕ್ರೇನ್ ಮೇಲೆ ರಷ್ಯಾ ಕ್ಷಿಪಣಿ ದಾಳಿ- 7 ಸಾವು, 90 ಮಂದಿಗೆ ಗಾಯ

    ಉಕ್ರೇನ್ ಮೇಲೆ ರಷ್ಯಾ ಕ್ಷಿಪಣಿ ದಾಳಿ- 7 ಸಾವು, 90 ಮಂದಿಗೆ ಗಾಯ

    ಕೈವ್: ಉತ್ತರ ಉಕ್ರೇನ್‍ನ (Ukraine) ಐತಿಹಾಸಿಕ ನಗರವಾದ ಚೆರ್ನಿವ್ ಮೇಲೆ ರಷ್ಯಾ ಕ್ಷಿಪಣಿ ದಾಳಿ (Russian Missile Strike) ನಡೆಸಿದೆ. ಘಟನೆಯಲ್ಲಿ 6 ವರ್ಷದ ಮಗು ಸೇರಿ ಒಟ್ಟು 7 ಮಂದಿ ಸಾವನ್ನಪ್ಪಿ, 90 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಉಕ್ರೇನ್‍ನ ಆಂತರಿಕ ಸಚಿವಾಲಯ ತಿಳಿಸಿದೆ.

    ಧಾರ್ಮಿಕ ಆಚರಣೆಯ ಸಲುವಾಗಿ ಜನ ಚರ್ಚ್‍ಗೆ ತೆರಳುತ್ತಿದ್ದಾಗ ಈ ದಾಳಿ ನಡೆದಿದೆ. ಗಾಯಗೊಂಡವರಲ್ಲಿ 12 ಮಂದಿ ಮಕ್ಕಳು ಹಾಗೂ 10 ಮಂದಿ ಪೊಲಿಸ್ ಅಧಿಕಾರಿಗಳು ಇದ್ದಾರೆ ಎಂದು ಸಚಿವಾಲಯ ತಿಳಿಸಿದೆ.

    ಈ ಸಂಬಂಧ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ (Zelenskiy) ಟೆಲಿಗ್ರಾಮ್‍ನಲ್ಲಿ ಪೋಸ್ಟ್ ಮಾಡಿದ್ದಾರೆ. ಚೆರ್ನಿವ್ (Chernihiv) ನಗರದ ಕೇಂದ್ರ ಭಾಗಕ್ಕೆ ರಷ್ಯಾ ಕ್ಷಿಪಣಿ ಅಪ್ಪಳಿಸಿದೆ. ಈ ಮೂಲಕ ರಷ್ಯಾ ಸೇನೆಯು ಎಂದಿನಂತೆ ಸಾಮಾನ್ಯವಾಗಿದ್ದ ದಿನವನ್ನು ದುಃಖ ಮತ್ತು ನಷ್ಟ ಆವರಿಸುವಂತೆ ಮಾಡಿದೆ ಎಂದು ಕಿಡಿಕಾರಿದ್ದಾರೆ. ಪೋಸ್ಟ್ ಜೊತೆಗೆ ವೀಡಿಯೋ ತುಣುಕು ಕೂಡ ಅಪ್ಲೋಡ್ ಮಾಡಿದ್ದಾರೆ. ವೀಡಿಯೋದಲ್ಲಿ ಚದುರಿದ ಅವಶೇಷಗಳು, ಹಾನಿಗೊಳಗಾದ ಕಾರಿಗಳನ್ನು ಕಾಣಬಹುದಾಗಿದೆ. ಇದನ್ನೂ ಓದಿ: ಅಮೆರಿಕಾದಲ್ಲಿ ದಾವಣಗೆರೆ ಮೂಲದ ಪತಿ, ಪತ್ನಿ, ಮಗು ದುರ್ಮರಣ

    ಚೆರ್ನಿವ್ ರಾಜಧಾನಿ ಕೈವ್‍ನ ಉತ್ತರಕ್ಕೆ ಶತಮಾನಗಳಷ್ಟು ಹಳೆಯದಾದ ಚರ್ಚ್‍ಗಳು ಇವೆ. ರಷ್ಯಾವು ಕಳೆದ ವರ್ಷ ಫೆಬ್ರವರಿಯಿಂದ ಉಕ್ರೇನ್ ಮೇಲೆ ದಾಳಿ ನಡೆಸುತ್ತಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಜೂನ್‌ನಲ್ಲಿ ರಷ್ಯಾದಿಂದ ಭಾರೀ ಕಡಿಮೆ ಬೆಲೆಯಲ್ಲಿ ತೈಲ ಖರೀದಿಸಿದ ಭಾರತ

    ಜೂನ್‌ನಲ್ಲಿ ರಷ್ಯಾದಿಂದ ಭಾರೀ ಕಡಿಮೆ ಬೆಲೆಯಲ್ಲಿ ತೈಲ ಖರೀದಿಸಿದ ಭಾರತ

    ನವದೆಹಲಿ: ಉಕ್ರೇನ್‌ (Ukraine) ಯುದ್ಧ ಆರಂಭವಾದ ಬಳಿಕ ಭಾರತ (India) ರಷ್ಯಾದಿಂದ ಡಿಸ್ಕೌಂಟ್‌ ದರದಲ್ಲಿ (Discount Price) ಕಚ್ಚಾ ತೈಲ ಖರೀದಿ ಮಾಡುತ್ತಿರುವುದು ಹಳೆ ಸುದ್ದಿ. ಆದರೆ ಈಗ ಮತ್ತಷ್ಟು ಕಡಿಮೆ ದರದಲ್ಲಿ ಕಚ್ಚಾ ತೈಲವನ್ನು ಖರೀದಿ ಮಾಡುತ್ತಿದೆ.

    ಹೌದು. ಮೇ ತಿಂಗಳಿನಲ್ಲಿ ಒಂದು ಬ್ಯಾರೆಲ್‌ ರಷ್ಯಾದ ಕಚ್ಚಾ ತೈಲವನ್ನು (Russia Crude Oil) 70.17 ಡಾಲರ್‌ (ಅಂದಾಜು 5,800 ರೂ.) ಬೆಲೆಯಲ್ಲಿ ಭಾರತ ಖರೀದಿಸಿದ್ದರೆ, ಜೂನ್‌ನಲ್ಲಿ ಒಂದು ಬ್ಯಾರೆಲ್‌ ಕಚ್ಚಾ ತೈಲಕ್ಕೆ ಸಾಗಾಣಿಕಾ ವೆಚ್ಚ ಸೇರಿ 68.17 ಡಾಲರ್‌ (ಅಂದಾಜು 5,600 ರೂ.) ನೀಡಿ ಖರೀದಿಸಿದೆ.

    ಪಾಶ್ಚಿಮಾತ್ಯ ದೇಶಗಳು ರಷ್ಯಾದ ಕಚ್ಚಾ ತೈಲಕ್ಕೆ ಗರಿಷ್ಠ 60 ಡಾಲರ್‌ ದರವನ್ನೂ ನಿಗದಿ ಪಡಿಸಿದ್ದರೂ ಭಾರತ ಹೆಚ್ಚಿನ ದರ ನೀಡಿ ತೈಲವನ್ನು ಖರೀದಿಸುತ್ತಿದೆ.

    ಜೂನ್‌ ತಿಂಗಳಿನಲ್ಲಿ ಇರಾಕ್‌ನಿಂದ ಖರೀದಿಸುವ ಒಂದು ಬ್ಯಾರೆಲ್‌ ಕಚ್ಚಾ ತೈಲಕ್ಕೆ ಭಾರತ 67.10 ಡಾಲರ್‌ (5,500 ರೂ.) ಪಾವತಿಸಿದ್ದರೆ ಸೌದಿ ಅರೇಬಿಯಾದ ತೈಲಕ್ಕೆ 81.78 ಡಾಲರ್‌ (ಅಂದಾಜು 6,700 ರೂ.) ಪಾವತಿಸಲಾಗಿದೆ ಎಂದು ಭಾರತ ಸರ್ಕಾರ ತಿಳಿಸಿದೆ.  ಇದನ್ನೂ ಓದಿ: Photo Album- ಸ್ಪಂದನಾ-ವಿಜಯ ರಾಘವೇಂದ್ರ ಮುದ್ದಾದ ಜೋಡಿಯ ಫೋಟೋ ಆಲ್ಬಂ

    ಕೆನಡಾ, ಫ್ರಾನ್ಸ್‌, ಜರ್ಮನಿ, ಇಟಲಿ, ಜಪಾನ್‌, ಯುನೈಟೆಡ್‌ ಕಿಂಗ್‌ಡಮ್‌, ಅಮೆರಿಕ, ಯುರೋಪಿಯನ್‌ ಯೂನಿಯನ್‌ ಜೊತೆ ಆಸ್ಟ್ರೇಲಿಯಾ ಒಂದು ಬ್ಯಾರೆಲ್‌ ರಷ್ಯಾದ ಕಚ್ಚಾ ತೈಲಕ್ಕೆ 60 ಡಾಲರ್‌(49 ಸಾವಿರ ರೂ.) ದರವನ್ನು ನಿಗದಿ ಮಾಡಿದೆ.

    ಜಿ7 ದೇಶಗಳು ಮತ್ತು ಮಿತ್ರರಾಷ್ಟ್ರಗಳು ವಿಧಿಸಿದ ತೈಲದ ಮೇಲಿನ ಬೆಲೆ ಮಿತಿಯನ್ನು ಬೆಂಬಲಿಸದಿರುವ ಭಾರತದ ನಿರ್ಧಾರವನ್ನು ರಷ್ಯಾ ಸ್ವಾಗತಿಸಿತ್ತು. ತೈಲ ಮಾರಾಟದಿಂದ ಸಂಗ್ರಹವಾದ ಆದಾಯವನ್ನು ಉಕ್ರೇನ್‌ ಮೇಲಿನ ಯುದ್ಧಕ್ಕೆ ರಷ್ಯಾ ಬಳಸುತ್ತಿದೆ ಎಂದು ಆರೋಪಿಸಿ ಜಿ7 ದೇಶಗಳು ತೈಲ ದರಕ್ಕೆ ಮಿತಿ ಹೇರುವ ನಿರ್ಧಾರವನ್ನು ಕೈಗೊಂಡಿದ್ದು ಡಿಸೆಂಬರ್‌ 5ರಿಂದ ಜಾರಿಗೆ ಬಂದಿದೆ.

     

    ರಷ್ಯಾದಿಂದ ಕಡಿಮೆ ಬೆಲೆಯಲ್ಲಿ ಭಾರತ ತೈಲ ಖರೀದಿ ಮಾಡುತ್ತಿರುವುದಕ್ಕೆ ಯುರೋಪ್‌ ಮತ್ತು ಅಮೆರಿಕ ಆಕ್ಷೇಪ ವ್ಯಕ್ತಪಡಿಸಿತ್ತು. ಇದಕ್ಕೆ ಭಾರತ, ನಮ್ಮ ದೇಶದ ಪ್ರಜೆಗಳ ಹಿತಕ್ಕಾಗಿ ನಾವು ಯಾವ ಕಠಿಣ ನಿರ್ಧಾರ ಬೇಕಾದರೂ ತೆಗೆದುಕೊಳ್ಳುತ್ತೇವೆ. ಒಂದು ವೇಳೆ ರಷ್ಯಾದಿಂದ ತೈಲ ಖರೀದಿಸದೇ ಇದ್ದಲ್ಲಿ ಒಂದು ಬ್ಯಾರೆಲ್‌ ಕಚ್ಚಾ ತೈಲದ ದರ 140 ಡಾಲರ್‌ಗೆ ಏರಿಕೆಯಾದರೆ ಅದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿ ತಿರುಗೇಟು ನೀಡಿತ್ತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]