Tag: Ukraine

  • ಶೀಘ್ರವೇ ಉಕ್ರೇನ್‍ಗೆ ಟ್ಯಾಂಕ್ ವಿರೋಧಿ ಶಸ್ತ್ರಾಸ್ತ್ರಗಳನ್ನು ಕಳುಹಿಸಲಿರುವ ಜರ್ಮನಿ

    ಶೀಘ್ರವೇ ಉಕ್ರೇನ್‍ಗೆ ಟ್ಯಾಂಕ್ ವಿರೋಧಿ ಶಸ್ತ್ರಾಸ್ತ್ರಗಳನ್ನು ಕಳುಹಿಸಲಿರುವ ಜರ್ಮನಿ

    ಕೀವ್: ರಷ್ಯಾ ವಿರುದ್ಧ ತನ್ನ ರಾಜಧಾನಿಯನ್ನು ಉಳಿಸಿಕೊಳ್ಳಲು ಹೋರಾಡುತ್ತಿರುವ ಉಕ್ರೇನ್‍ಗೆ ಟ್ಯಾಂಕ್ ವಿರೋಧಿ ಶಸ್ತ್ರಾಸ್ತ್ರಗಳು ಮತ್ತು ಇತರೆಗಳನ್ನು ಕಳುಹಿಸಲು ಮತ್ತು ರಷ್ಯಾಕ್ಕೆ ಸ್ವಿಫ್ಟ್ ಜಾಗತಿಕ ಬ್ಯಾಂಕಿಂಗ್ ವ್ಯವಸ್ಥೆಯ ಮೇಲೆ ಕೆಲವು ನಿರ್ಬಂಧಗಳನ್ನು ಹೇರಲು ಜರ್ಮನಿ ಸಿದ್ಧವಾಗಿದೆ ಎಂದು ಜರ್ಮನ್ ಸರ್ಕಾರ ತಿಳಿಸಿದೆ.

    ಶನಿವಾರ ಸಂಜೆ ಜರ್ಮನಿಯ ಆರ್ಥಿಕ ಮತ್ತು ಹವಾಮಾನ ಸಚಿವಾಲಯವು 1,000 ಟ್ಯಾಂಕ್ ವಿರೋಧಿ ಶಸ್ತ್ರಾಸ್ತ್ರಗಳನ್ನು ಮತ್ತು 500 ಸ್ಟಿಂಗರ್‌ಗಳನ್ನು ಉಕ್ರೇನ್‍ಗೆ ಸಾಧ್ಯವಾದಷ್ಟು ಬೇಗ ರವಾನಿಸುವುದಾಗಿ ಘೋಷಿಸಿದೆ. ಇದನ್ನೂ ಓದಿ: ಉಕ್ರೇನ್‍ನಿಂದ 2ನೇ ವಿಮಾನದಲ್ಲಿ ದೆಹಲಿಗೆ ಬಂದ 250 ಭಾರತೀಯರು

    ಈ ವಿಚಾರವಾಗಿ ಪ್ರತಿಕ್ರಿಯಿಸಿದ ಜರ್ಮನ್ ಓಲಾಫ್ ಸ್ಕೋಲ್ಜ್ ಅವರು, ಉಕ್ರೇನ್ ಮೇಲೆ ರಷ್ಯಾದ ಆಕ್ರಮಣವು ಒಂದು ಮಹತ್ವದ ತಿರುವನ್ನು ಸೂಚಿಸುತ್ತದೆ. ಇದು ನಮ್ಮ ಸಂಪೂರ್ಣ ಯುದ್ಧಾನಂತರದ ಆದೇಶಕ್ಕೆ ಧಕ್ಕೆ ತರುತ್ತದೆ. ಈ ಪರಿಸ್ಥಿತಿಯಲ್ಲಿ, ವ್ಲಾಡಿಮಿರ್ ಪುಟಿನ್ ಅವರ ಆಕ್ರಮಣಕಾರಿ ಸೈನ್ಯದ ವಿರುದ್ಧ ಉಕ್ರೇನ್ ತನ್ನನ್ನು ರಕ್ಷಿಸಿಕೊಳ್ಳಲು ನಮ್ಮ ಕೈಲಾದಷ್ಟು ಸಹಾಯ ಮಾಡುವುದು ನಮ್ಮ ಕರ್ತವ್ಯವಾಗಿದೆ ಎಂದು ಹೇಳಿದ್ದಾರೆ.

    ಉಕ್ರೇನ್ ಸೇರಿದಂತೆ ಸಂಘರ್ಷ ವಲಯಗಳಿಗೆ ಮಾರಣಾಂತಿಕ ಶಸ್ತ್ರಾಸ್ತ್ರಗಳನ್ನು ರಫ್ತು ಮಾಡದಿರುವ ನೀತಿಗೆ ಜರ್ಮನಿ ದೀರ್ಘಕಾಲವಾಗಿ ಅಂಟಿಕೊಂಡಿದ್ದು, ಈ ನೀತಿಗೆ ಬದ್ಧರಾಗಿರುವುದಾಗಿ ಶುಕ್ರವಾರ ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ:  ರಷ್ಯಾ ಜಾಗತಿಕ ಪಾವತಿ ವ್ಯವಸ್ಥೆ ಕಡಿತ – ಯುಎಸ್, ಮಿತ್ರರಾಷ್ಟ್ರಗಳ ಒಪ್ಪಿಗೆ

    Ukraine

    ರಷ್ಯಾದ ಆಕ್ರಮಣವನ್ನು ಹಿಮ್ಮೆಟ್ಟಿಸಲು ಉಕ್ರೇನ್‍ಗೆ ಸಹಾಯ ಮಾಡಲು ಸಾಕಷ್ಟು ಮಿತ್ರದೇಶಗಳು ಮುಂದೆ ಬಂದಿದ್ದು, ಈಗಾಗಲೇ ಜರ್ಮನಿ ಉಕ್ರೇನ್ ಸೈನಿಕರ ರಕ್ಷಣೆಗೆ 5,000 ಹೆಲ್ಮೆಟ್‍ಗಳನ್ನು ಕೊಡುಗೆಯಾಗಿ ನೀಡಿದೆ. ಇದಲ್ಲದೆ, ಜರ್ಮನಿ 14 ಶಸ್ತ್ರಸಜ್ಜಿತ ವಾಹನಗಳು ಮತ್ತು 10,000 ಟನ್‍ಗಳಷ್ಟು ಇಂಧನವನ್ನು ಉಕ್ರೇನ್‍ಗೆ ಕಳುಹಿಸುವುದಾಗಿ ಹೇಳಿದೆ.

    ರಷ್ಯಾದ ದಾಳಿಯಿಂದ ಉಕ್ರೇನ್ ತನ್ನನ್ನು ತಾನು ರಕ್ಷಿಸಿಕೊಳ್ಳಲು ಶಕ್ತವಾಗಿರಬೇಕು. ಹಾಗಾಗಿ ತುರ್ತಾಗಿ ಅಗತ್ಯವಿರುವ ವಸ್ತುಗಳನ್ನು ಒದಗಿಸುವಲ್ಲಿ ಫೆಡರಲ್ ಸರ್ಕಾರ ಉಕ್ರೇನ್‍ಗೆ ಬೆಂಬಲ ನೀಡುತ್ತದೆ ಎಂದು ವಿದೇಶಾಂಗ ಸಚಿವ ಅನ್ನಾಲೆನಾ ಬೇರ್ಬಾಕ್ ಮತ್ತು ಆರ್ಥಿಕ ಸಚಿವ ರಾಬರ್ಟ್ ಹ್ಯಾಬೆಕ್ ಹೇಳಿದ್ದಾರೆ.

  • ಅಪ್ಪ-ಅಮ್ಮ ಬಳಿ ಸುಳ್ಳು ಹೇಳಿದ್ದೆವು- ಉಕ್ರೇನ್ ಅನುಭವ ಹಂಚಿಕೊಂಡ ವಿದ್ಯಾರ್ಥಿನಿ

    ಅಪ್ಪ-ಅಮ್ಮ ಬಳಿ ಸುಳ್ಳು ಹೇಳಿದ್ದೆವು- ಉಕ್ರೇನ್ ಅನುಭವ ಹಂಚಿಕೊಂಡ ವಿದ್ಯಾರ್ಥಿನಿ

    ನವದೆಹಲಿ: ಉಕ್ರೇನ್ ನಲ್ಲಿ ರಷ್ಯಾ ಸೈನಿಕರ ಆಕ್ರಮಣ ಕ್ಷಣ ಕ್ಷಣಕ್ಕೂ ಹೆಚ್ಚಾಗುತ್ತಿದ್ದು, ಉಕ್ರೇನ್ ನಲ್ಲಿ ನೆಲೆಸಿದ್ದ ವಿದ್ಯಾರ್ಥಿಗಳನ್ನು ಭಾರತಕ್ಕೆ ಕರೆತರುವಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈಗಾಗಲೇ ಹಲವಾರು ವಿದ್ಯಾರ್ಥಿಗಳನ್ನು ತಾಯ್ನಾಡಿಗೆ ಕರೆತರಲಾಗಿದೆ. ಹೀಗೆ ಬಂದಿರುವ ವಿದ್ಯಾರ್ಥಿಗಳು ಉಕ್ರೇನ್ ನಲ್ಲಿ ತಾವು ಎದುರಿಸಿದ ಕಷ್ಟಗಳನ್ನು ಎಳೆಎಳೆಯಾಗಿ ಬಿಚ್ಚಿಡುತ್ತಿದ್ದಾರೆ.

    ವಿದ್ಯಾರ್ಥಿನಿಯೊಬ್ಬಳು ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಉಕ್ರೇನ್ ಕರಾಳತೆಯನ್ನು ಬಿಚ್ಚಿಟ್ಟಿದ್ದಾಳೆ. ಅಪ್ಪ-ಅಮ್ಮಂಗೆ ಸುಳ್ಳು ಹೇಳುತ್ತಿದ್ದೆವು. ಅಲ್ಲಿ ಇದ್ದ ಆಹಾರದಲ್ಲಿ ಅಲ್ಪ-ಸ್ವಲ್ಪ ತಿಂದು ಬದುಕುತ್ತಿದ್ದೆವು. ಪ್ರತಿ ಕ್ಷಣ ನಮ್ಮಲ್ಲಿ ಆತಂಕ ಇತ್ತು. ಯಾವಾಗ ಎಲ್ಲಿ ಬಾಂಬ್ ಬೀಳುತ್ತೋ ಅನ್ನೋ ಭೀತಿ ಇತ್ತು ಎಂದು ತಿಳಿಸಿದ್ದಾಳೆ. ಇದನ್ನೂ ಓದಿ: ಉಕ್ರೇನ್‍ನಿಂದ 2ನೇ ವಿಮಾನದಲ್ಲಿ ದೆಹಲಿಗೆ ಬಂದ 250 ಭಾರತೀಯರು

    ಸದ್ಯ ಕರ್ನಾಟಕದ 13 ವಿದ್ಯಾರ್ಥಿಗಳು ಸೇರಿ ಒಟ್ಟು 250 ಮಂದಿ ರೊಮೇನಿಯಾದಿಂದ ದೆಹಲಿ ತಲುಪಿದ್ದಾರೆ. ರಾತ್ರಿ 3:30ಕ್ಕೆ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ. ಈ ವೇಳೆ ವಿದ್ಯಾರ್ಥಿಗಳನ್ನು ಕೇಂದ್ರ ಸಚಿವ ಜೋತಿರಾಧಿತ್ಯಸಿಂದ್ಯಾ ಸ್ವಾಗತಿಸಿದರು. ಬಳಿಕ ಮಾತನಾಡಿದ ಅವರು, ಎರಡನೇ ವಿಮಾನದಲ್ಲಿ 250 ವಿದ್ಯಾರ್ಥಿಗಳು ಬಂದಿದ್ದಾರೆ. ಇಂದು ಮತ್ತೆರಡು ವಿಮಾನಗಳ ಮೂಲಕ ಭಾರತೀಯರು ಬರಲಿದ್ದಾರೆ. ನಾಲ್ಕು ದೇಶಗಳ ಸಹಕಾರದಲ್ಲಿ ಕಾರ್ಯಚರಣೆ ಮಾಡುತ್ತಿದ್ದೇವೆ. ಪರಿಸ್ಥಿತಿ ಆಧರಿಸಿ ಮತ್ತಷ್ಟು ವೇಗವಾಗಿ ಭಾರತೀಯರನ್ನು ಕರೆ ತರಲಾಗುವುದು ಎಮದು ತಿಳಿಸಿದರು.

  • ಉಕ್ರೇನ್‍ನಿಂದ 2ನೇ ವಿಮಾನದಲ್ಲಿ ದೆಹಲಿಗೆ ಬಂದ 250 ಭಾರತೀಯರು

    ಉಕ್ರೇನ್‍ನಿಂದ 2ನೇ ವಿಮಾನದಲ್ಲಿ ದೆಹಲಿಗೆ ಬಂದ 250 ಭಾರತೀಯರು

    ನವದೆಹಲಿ: ಉಕ್ರೇನ್‍ನಲ್ಲಿ ಸಿಲುಕಿದ್ದ 250 ಭಾರತೀಯ ಪ್ರಜೆಗಳನ್ನು ರೊಮೇನಿಯಾದ ರಾಜಧಾನಿ ಬುಕಾರೆಸ್ಟ್‌ನಿಂದ ಏರ್ ಇಂಡಿಯಾದ ಎರಡನೇ ವಿಮಾನವು ಭಾನುವಾರ ಮುಂಜಾನೆ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ.

    ಏರ್ ಇಂಡಿಯಾ (ಎಐ)-192 ವಿಶೇಷ ವಿಮಾನವು ಬೆಳಗ್ಗೆ 3 ಗಂಟೆಗೆ ‘ಆಪರೇಷನ್ ಗಂಗಾ’ ಅಡಿಯಲ್ಲಿ ಭಾರತೀಯ ವಿದ್ಯಾರ್ಥಿಗಳನ್ನು ಯಶಸ್ವಿಯಾಗಿ ನವದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದು ಇಳಿಸಿದೆ.  ಇದನ್ನೂ ಓದಿ:  ರಷ್ಯಾ ಜಾಗತಿಕ ಪಾವತಿ ವ್ಯವಸ್ಥೆ ಕಡಿತ – ಯುಎಸ್, ಮಿತ್ರರಾಷ್ಟ್ರಗಳ ಒಪ್ಪಿಗೆ

    ಈ ವೇಳೆ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಕೇಂದ್ರ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ.ಮುರಳೀಧರನ್ ಅವರು, ಉಕ್ರೇನ್‍ನಿಂದ ಬುಚಾರೆಸ್ಟ್ ಮೂಲಕ ಸುರಕ್ಷಿತವಾಗಿ ಬಂದ ಭಾರತೀಯರನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು.

    ಈ ವಿಮಾನದಲ್ಲಿ ಬಂದ ಭಾರತೀಯ ವಿದ್ಯಾರ್ಥಿಯೊಬ್ಬರು ಮಾಧ್ಯಮದೊಂದಿಗೆ ಮಾತನಾಡಿ, ಕೈವ್‍ನ ಹಲವಾರು ಸ್ಥಳಗಳಲ್ಲಿ ಪರಿಸ್ಥಿತಿ ತುಂಬಾ ಹದಗೆಟ್ಟಿದೆ. ನಾಗರಿಕರು ತಮ್ಮ ದೇಶವನ್ನು ಉಳಿಸಲು ಶಸ್ತ್ರಾಸ್ತ್ರಗಳನ್ನು ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.  ಇದನ್ನೂ ಓದಿ:  ಉಕ್ರೇನ್‍ನಿಂದ ತಾಯ್ನಾಡಿಗೆ ಬಂದ್ರು ಭಾರತೀಯರು – ಮುಂಬೈನಲ್ಲಿ ವಿಮಾನ ಲ್ಯಾಂಡಿಂಗ್

    ಶನಿವಾರ ರಾತ್ರಿ ಉಕ್ರೇನ್‍ನಿಂದ 219 ಭಾರತೀಯ ವಿದ್ಯಾರ್ಥಿಗಳು ಏರ್ ಇಂಡಿಯಾ ವಿಮಾನ ಮೂಲಕ ಮುಂಬೈಗೆ ಬಂದಿಳಿದಿದ್ದರು. ರೊಮೇನಿಯಾದ ರಾಜಧಾನಿ ಬುಕಾರೆಸ್ಟ್‍ನಿಂದ ಮಧ್ಯಾಹ್ನ ಭಾರತದ ಪ್ರಜೆಗಳನ್ನು ಹೊತ್ತು ವಿಮಾನ ಟೇಕಾಫ್ ಆಗಿತ್ತು. ಉಕ್ರೇನ್‍ನಿಂದ ಸುರಕ್ಷಿತವಾಗಿ ಸ್ಥಳಾಂತರಿಸಲ್ಪಟ್ಟ ಭಾರತೀಯರನ್ನು ಮುಂಬೈ ವಿಮಾನ ನಿಲ್ದಾಣಕ್ಕೆ ಬಂದು ಇಳಿಸಿತ್ತು. ಈ ವೇಳೆ ಕೇಂದ್ರ ಸಚಿವ ಪಿಯೂಷ್ ಗೋಯಲ್ ವಿದ್ಯಾರ್ಥಿಗಳನ್ನು ಸ್ವಾಗತಿಸಿದ್ದರು.

  • ರಷ್ಯಾದ SWIFT ಜಾಗತಿಕ ಪಾವತಿ ವ್ಯವಸ್ಥೆ ಕಡಿತ – ಯುಎಸ್, ಮಿತ್ರರಾಷ್ಟ್ರಗಳ ಒಪ್ಪಿಗೆ

    ರಷ್ಯಾದ SWIFT ಜಾಗತಿಕ ಪಾವತಿ ವ್ಯವಸ್ಥೆ ಕಡಿತ – ಯುಎಸ್, ಮಿತ್ರರಾಷ್ಟ್ರಗಳ ಒಪ್ಪಿಗೆ

    ಕೀವ್: ಉಕ್ರೇನ್ ಮೇಲೆ ರಷ್ಯಾದ ಆಕ್ರಮಣವನ್ನು ತಡೆಯುವ ಉದ್ದೇಶದಿಂದ ಜರ್ಮನಿ ಮತ್ತು ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳು SWIFT ಜಾಗತಿಕ ಪಾವತಿ ವ್ಯವಸ್ಥೆಯಿಂದ ರಷ್ಯಾವನ್ನು ಕಡಿತಗೊಳಿಸಲು ಒಪ್ಪಿಕೊಂಡಿವೆ ಎಂದು ಜರ್ಮನ್ ಸರ್ಕಾರದ ವಕ್ತಾರರು ತಿಳಿಸಿದ್ದಾರೆ.

    ಯುನೈಟೆಡ್ ಸ್ಟೇಟ್ಸ್, ಫ್ರಾನ್ಸ್, ಕೆನಡಾ, ಇಟಲಿ, ಗ್ರೇಟ್ ಬ್ರಿಟನ್ ಮತ್ತು ಯುರೋಪಿಯನ್ ಕಮಿಷನ್‍ಗಳು ಈ ನಿರ್ಧಾರವನ್ನು ಒಪ್ಪಿಕೊಂಡಿದ್ದು, ರಷ್ಯಾದ ಕೇಂದ್ರ ಬ್ಯಾಂಕ್‍ಗಳ ಮೇಲೆ ನಿರ್ಬಂಧ ಹೇರಲಾಗುತ್ತದೆ. ಇದು ಶ್ರೀಮಂತ ರಷ್ಯನ್ನರು ಮತ್ತು ಅವರ ಕುಟುಂಬಗಳಿಗೆ ನೀಡಿರುವ ಗೋಲ್ಡನ್ ಪಾಸ್‌ಪೋರ್ಟ್‌ಗಳನ್ನು ರದ್ದುಗೊಳಿಸಲಾಗುತ್ತದೆ ಮತ್ತು ಉಕ್ರೇನ್ ವಿರುದ್ಧ ಯುದ್ಧವನ್ನು ಮಾಡುತ್ತಿರುವ ರಷ್ಯಾವನ್ನು ಬೆಂಬಲಿಸುವ ವ್ಯಕ್ತಿಗಳು ಮತ್ತು ಸಂಸ್ಥೆಗಳನ್ನು ಗುರಿಯಾಗಿಸುತ್ತದೆ.  ಇದನ್ನೂ ಓದಿ: ಉಕ್ರೇನ್‌ಗೆ 4,503 ಕೋಟಿ ರೂ. ಭದ್ರತಾ ನೆರವು ಘೋಷಿಸಿದ ಅಮೆರಿಕ

    ಉಕ್ರೇನ್ ಮತ್ತು ಯುರೋಪಿಯನ್ ಶಾಂತಿ ಸುವ್ಯವಸ್ಥೆಯ ಮೇಲೆ ರಷ್ಯಾ ತನ್ನ ದಾಳಿಯನ್ನು ಕೊನೆಗೊಳಿಸದಿದ್ದರೆ, ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಇತರೆ ದೇಶಗಳು ವಾರ್ನ್ ಮಾಡಿದೆ. ಇದನ್ನೂ ಓದಿ: ಉಕ್ರೇನ್‌ಗೆ ಸಹಕಾರ ನೀಡುತ್ತೇವೆ ಎಂದಿದ್ದ ಅಮೆರಿಕ ಸೇನೆಯನ್ನು ಕಳುಹಿಸಿಲ್ಲ ಯಾಕೆ?

  • ಉಕ್ರೇನ್‌ಗೆ ಸಹಕಾರ ನೀಡುತ್ತೇವೆ ಎಂದಿದ್ದ ಅಮೆರಿಕ ಸೇನೆಯನ್ನು ಕಳುಹಿಸಿಲ್ಲ ಯಾಕೆ?

    ಉಕ್ರೇನ್‌ಗೆ ಸಹಕಾರ ನೀಡುತ್ತೇವೆ ಎಂದಿದ್ದ ಅಮೆರಿಕ ಸೇನೆಯನ್ನು ಕಳುಹಿಸಿಲ್ಲ ಯಾಕೆ?

    ವಾಷಿಂಗ್ಟನ್‌: ಉಕ್ರೇನ್‌ ಜೊತೆ ನಾವಿದ್ದೇವೆ ಎಂದು ಭಾಷಣ ಮೂಲಕ ಧೈರ್ಯ ತುಂಬಿದ್ದ ಅಮೆರಿಕದ ಅಧ್ಯಕ್ಷ ಜೋ ಬೈಡನ್‌ ತನ್ನ ಸೈನ್ಯವನ್ನು ಯಾಕೆ ಕಳುಹಿಸಿಲ್ಲ ಎಂಬ ವಿಚಾರ ಈಗ ಭಾರೀ ಚರ್ಚೆಗೆ ಕಾರಣವಾಗಿದೆ.

    ತನ್ನ ಎದುರಾಳಿಯಿಂದ ಬೇರೊಂದು ದೇಶಕ್ಕೆ ಅಪಾಯವಾದಾಗ ಕೂಡಲೇ ಸೈನ್ಯವನ್ನು ಕಳುಹಿಸಿ ಬೆದರಿಕೆ ಹುಟ್ಟಿಸುತ್ತಿದ್ದ ವಿಶ್ವದ ದೊಡ್ಡಣ್ಣ ಅಮೆರಿಕ ರಷ್ಯಾ ಉಕ್ರೇನ್‌ ವಿಚಾರದಲ್ಲಿ ಬಹಳ ಎಚ್ಚರಿಕೆ ಹೆಜ್ಜೆಯನ್ನು ಇಡುತ್ತಿದೆ. ಆರ್ಥಿಕವಾಗಿ ರಷ್ಯಾಗೆ ದಿಗ್ಭಂದನ ಹೇರಿದ ಅಮೆರಿಕ ಇಂದು 350 ಮಿಲಿಯನ್ ಡಾಲರ್ ನೆರವನ್ನು ಉಕ್ರೇನ್‌ಗೆ ನೀಡುವುದಾಗಿ ಘೋಷಿಸಿದೆ. ಇದನ್ನೂ ಓದಿ: ಉಕ್ರೇನ್‌ಗೆ 4,503 ಕೋಟಿ ರೂ. ಭದ್ರತಾ ನೆರವು ಘೋಷಿಸಿದ ಅಮೆರಿಕ

     

    ಯಾಕೆ ಸೈನ್ಯ ಕಳುಹಿಸಲ್ಲ?
    ಅಮೆರಿಕ ಏನೇ ಮಾಡಿದರೂ ಅದರಿಂದ ತನಗೇನು ಲಾಭ ಎಂದು ನೋಡುತ್ತದೆ. ಎಷ್ಟು ಬಿಸಿನೆಸ್‌ ಆಗುತ್ತದೆ ಎಂಬ ಲೆಕ್ಕಾಚಾರ ಹಾಕುತ್ತದೆ. ಆದರೆ ಈಗಾಗಲೇ ಹಲವು ದೇಶಗಳಲ್ಲಿ ಸೈನಿಕ ಕಾರ್ಯಾಚರಣೆಗಳನ್ನು ಮಾಡಿ ಕೈಸುಟ್ಟಿಕೊಂಡಿರುವ ಅಮೆರಿಕ ಈಗ ರಷ್ಯಾ ವಿಚಾರದಲ್ಲಿ ಬಹಳ ಆಲೋಚನೆ ಮಾಡಿ ನಿರ್ಧಾರ ಪ್ರಕಟಿಸುತ್ತದೆ.

    ಉಕ್ರೇನ್‌ಗೆ ಸೇನೆ ಕಳುಹಿಸಿದರೆ ರಾಷ್ಟ್ರೀಯ ಪ್ರಯೋಜನಗಳಿಲ್ಲ. ಬೇರೆ ದೇಶದಲ್ಲಿ ಸೈನ್ಯ ಹೋರಾಡಿದರೆ ಲಾಭಕ್ಕಿಂತ ನಷ್ಟವೇ ಜಾಸ್ತಿ ಎನ್ನುವ ಪಾಠವನ್ನು ಅಮೆರಿಕ ಈಗಾಗಲೇ ಕಲಿತುಕೊಂಡಿದೆ. ಒಂದು ವೇಳೆ ತಾನು ಯುದ್ಧಕ್ಕೆ ಕೈ ಹಾಕಿದರೆ ರಷ್ಯಾ ಮತ್ತಷ್ಟು ಆಕ್ರಮಣಕಾರಿಯಾಗಬಹುದು ಎನ್ನುವುದು ಅಮೆರಿಕಕ್ಕೆ ಗೊತ್ತಿದೆ. ರಷ್ಯಾ ಬಳಿ ಇರುವ ಶಸ್ತ್ರಾಸ್ತ್ರಗಳ ಅರಿವು ಅಮೆರಿಕಕ್ಕೆ ತಿಳಿದಿದೆ. ಉಕ್ರೇನ್ ನ್ಯಾಟೋ ಸದಸ್ಯ ದೇಶವಲ್ಲ ಅಷ್ಟೇ ಅಲ್ಲದೇ ಯಾವುದೇ ಒಪ್ಪಂದಗಳು ಇಲ್ಲ.  ಇದನ್ನೂ ಓದಿ: Russia-Ukraine War – ಏನಿದು ರಷ್ಯಾ ಟ್ಯಾಂಕರ್‌ಗಳ ಮೇಲೆ Z ಮಾರ್ಕ್?

    ತಾಲಿಬಾನ್‌ ಹಿಮ್ಮೆಟ್ಟಿಸುವುದಾಗಿ ಶಪಥಗೈದ ಅಮೆರಿಕ ಕೊನೆಗೆ ತಾಲಿಬಾನ್‌ ಜೊತೆಗೆ ಮಾತುಕತೆ ನಡೆಸಿ ಸೈನ್ಯವನ್ನು ಅಫ್ಘಾನಿಸ್ತಾನದಿಂದ ಹಿಂದಕ್ಕೆ ಪಡೆದುಕೊಂಡಿದೆ. ಸೈನ್ಯವನ್ನು ಕಳುಹಿಸಿ ರಷ್ಯಾ ವಿರುದ್ಧ ಗೆದ್ದರೂ ಉಕ್ರೇನ್‌ನಲ್ಲಿ ಮತ್ತೆ ಅಮೆರಿಕ ಯೋಧರು ಇರಲೇಬೇಕಾಗುತ್ತದೆ. ಈಗಾಗಲೇ ಕೋವಿಡ್‌ನಿಂದಾಗಿ ಅಮೆರಿಕದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಹೀಗಿರುವಾಗ ಮತ್ತೆ ಸಮಸ್ಯೆ ಎದುರಿಸಲು ಅಮೆರಿಕಕ್ಕೆ ಇಷ್ಟವಿಲ್ಲ.

  • ರಷ್ಯಾ ಅಧ್ಯಕ್ಷ ಪುಟಿನ್‌ಗೆ ವೈಯಕ್ತಿಕ ನಿರ್ಬಂಧ ಹೇರಲು ಮುಂದಾದ ಅಮೆರಿಕ

    ರಷ್ಯಾ ಅಧ್ಯಕ್ಷ ಪುಟಿನ್‌ಗೆ ವೈಯಕ್ತಿಕ ನಿರ್ಬಂಧ ಹೇರಲು ಮುಂದಾದ ಅಮೆರಿಕ

    ವಾಷಿಂಗ್ಟನ್: ಉಕ್ರೇನ್ ಮೇಲಿನ ದಾಳಿ ಖಂಡಿಸಿ ರಷ್ಯಾ ಮೇಲೆ ಆರ್ಥಿಕ ಯುದ್ಧ ಸಾರಿರುವ ಅಮೆರಿಕಾ ಮತ್ತೊಂದು ಪ್ರಮುಖ ನಿರ್ಣಯ ತೆಗೆದುಕೊಂಡಿದೆ. ರಷ್ಯಾ ಸರ್ಕಾರದ ವಿರುದ್ಧ ದಿಗ್ಬಂಧನದ ಅಸ್ತ್ರ ಝಳಪಿಸಿದ್ದ ಅಮೆರಿಕಾ ಈಗ ನೇರವಾಗಿ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ ಮತ್ತು ವಿದೇಶಾಂಗ ಸಚಿವ ಸೆರ್ಗೆ ಲಾವ್ರೋವ್ ಮೇಲೆ ವೈಯಕ್ತಿಕ ನಿರ್ಬಂಧಗಳ ಹೇರಿ ಶಾಕ್ ನೀಡಲು ಮುಂದಾಗಿದೆ.

    ಪುಟಿನ್, ಲಾವ್ರೋವ್ ಆಸ್ತಿಗಳನ್ನು ಫ್ರೀಜ್ ಮಾಡುವ ಐರೋಪ್ಯ ಒಕ್ಕೂಟದ ನಿರ್ಧಾರವನ್ನು ಬೆಂಬಲಿಸಿದೆ. ಈ ಹಿಂದೆ ಉತ್ತರ ಕೋರಿಯಾದ ಕಿಮ್ ಜಾಂಗ್ ಉನ್, ಬೆಲಾರಸ್‍ನ ಲುಕಷೆಂಕೋ, ಸಿರಿಯಾದ ಬಷರ್ ಮೇಲೆ ಆರ್ಥಿಕ ದಿಗ್ಬಂಧನ ವಿಧಿಸಿದ ಮಾದರಿಯಲ್ಲೇ ಪುಟಿನ್, ಲಾವ್ರೋವ್ ಸೇರಿ 11 ಪ್ರಮುಖರ ಮೇಲೆ ಮೇಲೆ ನಿರ್ಬಂಧಗಳನ್ನು ಹೇರಲಾಗಿದೆ. ಈ ದಿಗ್ಬಂಧನದಿಂದಾಗಿ ಅವರ ಪ್ರಯಾಣಕ್ಕೆ, ಆರ್ಥಿಕ ಚಟುವಟಿಕೆಗೆ ಬ್ರೇಕ್ ಬಿದ್ದಂತಾಗಿದೆ. ಇದನ್ನೂ ಓದಿ: ಪುಟಿನ್ ನಡೆಗೆ ರಷ್ಯಾ ಪ್ರಜೆಗಳಿಂದಲೇ ಖಂಡನೆ – ಉಕ್ರೇನ್‍ನಲ್ಲಿ ರಷ್ಯಾದ ಬಾವುಟ ಹಾರಾಟ

    ಆದರೆ ಇದರ ಪ್ರಭಾವ ಪುಟಿನ್ ಮೇಲೆ ಬೀಳುವ ಸಾಧ್ಯತೆ ಕಡಿಮೆ. ಯಾಕೆಂದರೆ ಈ ಬಗ್ಗೆ ಮೊದಲೇ ಚಿಂತಿಸಿರುವ 200 ಬಿಲಿಯನ್‍ಗಳ ಒಡೆಯ ಪುಟಿನ್ ಸಾಕಷ್ಟು ಮುಂಜಾಗ್ರತಾ ಕ್ರಮ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಈ ಎಲ್ಲದರ ನಡುವೆ ಅಂತರಾಷ್ಟ್ರೀಯ ನಗದು ವ್ಯವಹಾರಗಳ ಸಂಸ್ಥೆ ಸ್ವಿಫ್ಟ್ ಪೇಮೆಂಟ್ ನೆಟ್‍ವರ್ಕ್‍ನಿಂದ ರಷ್ಯಾವನ್ನು ಹೊರಗಿಡಲು ಬ್ರಿಟನ್ ಪ್ರಯತ್ನ ಆರಂಭಿಸಿದೆ. ಜೊತೆಗೆ ನಿಮ್ಮ ಇಷ್ಟಾನುಸಾರ ನಿರ್ಬಂಧಗಳನ್ನು ಹೇರತೊಡಗಿದ್ರೆ ಸುಮ್ಮನಿರಲ್ಲ ಎಂದು ರಷ್ಯಾ ಎಚ್ಚರಿಸಿದೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ಅಮೆರಿಕಾ, ಯುರೋಪ್ ದೇಶಗಳ ಮೇಲೆ ಬೀಳಿಸೋದಾಗಿ ಧಮ್ಕಿ ಹಾಕಿದೆ. ಇದನ್ನೂ ಓದಿ: ನಿನ್ನೆ ಮದುವೆಯಾಗಿ ಇಂದು ದೇಶ ಸೇವೆಗೆ ಗನ್‌ ಹಿಡಿದ ದಂಪತಿ

  • ಉಕ್ರೇನ್‍ನಿಂದ ತಾಯ್ನಾಡಿಗೆ ಬಂದ್ರು ಭಾರತೀಯರು – ಮುಂಬೈನಲ್ಲಿ ವಿಮಾನ ಲ್ಯಾಂಡಿಂಗ್

    ಉಕ್ರೇನ್‍ನಿಂದ ತಾಯ್ನಾಡಿಗೆ ಬಂದ್ರು ಭಾರತೀಯರು – ಮುಂಬೈನಲ್ಲಿ ವಿಮಾನ ಲ್ಯಾಂಡಿಂಗ್

    ಮುಂಬೈ: ಉಕ್ರೇನ್‍ನಿಂದ 219 ಭಾರತೀಯ ವಿದ್ಯಾರ್ಥಿಗಳನ್ನು ಹೊತ್ತ ಏರ್ ಇಂಡಿಯಾ ವಿಮಾನ ಇಂದು ರಾತ್ರಿ ಮುಂಬೈಗೆ ಬಂದಿಳಿದಿದೆ.

    ಇಂದು ಮಧ್ಯಾಹ್ನ ರೊಮೇನಿಯಾದ ರಾಜಧಾನಿ ಬುಕಾರೆಸ್ಟ್‍ನಿಂದ ಭಾರತದ ಪ್ರಜೆಗಳನ್ನು ಹೊತ್ತು ವಿಮಾನ ಟೇಕಾಫ್ ಆಗಿತ್ತು. ಉಕ್ರೇನ್‍ನಿಂದ ಸುರಕ್ಷಿತವಾಗಿ ಸ್ಥಳಾಂತರಿಸಲ್ಪಟ್ಟ ಭಾರತೀಯರನ್ನು ಮುಂಬೈ ವಿಮಾನ ನಿಲ್ದಾಣಕ್ಕೆ ಬಂದು ಇಳಿಸಿದೆ. ಈ ವೇಳೆ ಕೇಂದ್ರ ಸಚಿವ ಪಿಯೂಷ್ ಗೋಯಲ್ ವಿದ್ಯಾರ್ಥಿಗಳನ್ನು ಸ್ವಾಗತಿಸಿದರು. ಇದನ್ನೂ ಓದಿ:  ಉಕ್ರೇನ್‍ನಲ್ಲಿ ಸಿಲುಕಿದ್ದಾರೆ ಕೊಡಗಿನ ಒಟ್ಟು 10 ವಿದ್ಯಾರ್ಥಿಗಳು

    ರೊಮೇನಿಯಾದಿಂದ ಮೂರು ವಿಮಾನಗಳು ಭಾರತಕ್ಕೆ ಆಗಮಿಸಲಿವೆ. ಈ ಪೈಕಿ ಒಂದು ಮುಂಬೈನಲ್ಲಿ ಲ್ಯಾಂಡ್ ಆಗಿದ್ದು, ಬಾಕಿ ಎರಡು ವಿಮಾನ ದೆಹಲಿಗೆ ಬರಲಿವೆ. ಆ ವಿಮಾನ ಇಂದು ಮಧ್ಯರಾತ್ರಿ ಒಂದು ವಿಮಾನ ದೆಹಲಿ ತಲುಪಿದ್ರೆ. ಮತ್ತೊಂದು ನಾಳೆ ಬೆಳಗ್ಗೆ ಐದು ಗಂಟೆಗೆ ರೊಮೇನಿಯಾದಿಂದ ಹೊರಡಲಿದ್ದು, 27 ರ ಮಧ್ಯರಾತ್ರಿ ತಲುಪಲಿದೆ ಎಂದು ತಿಳಿಸಲಾಗಿದೆ.

    ಹಂಗೇರಿಯಿಂದ ಒಂದು ವಿಮಾನ ದೆಹಲಿಗೆ ಆಗಮಿಸಲಿದೆ. ನಾಳೆ ಬೆಳಗ್ಗೆ 6-7 ಗಂಟೆಗೆ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಲಿದೆ. ಇದನ್ನೂ ಓದಿ:  ಫೋನ್‌ನಲ್ಲಿ ಮಾತನಾಡುವಾಗ ಬಾಂಬ್ ಹಾಕುತ್ತಿದ್ದಾರೆ ಎಂದು ಬಂಕರ್‌ಗೆ ಓಡಿ ಹೋದ: ಪೋಷಕರ ಅಳಲು

  • ಪುಟಿನ್ ನಡೆಗೆ ರಷ್ಯಾ ಪ್ರಜೆಗಳಿಂದಲೇ ಖಂಡನೆ – ಉಕ್ರೇನ್‍ನಲ್ಲಿ ರಷ್ಯಾದ ಬಾವುಟ ಹಾರಾಟ

    ಪುಟಿನ್ ನಡೆಗೆ ರಷ್ಯಾ ಪ್ರಜೆಗಳಿಂದಲೇ ಖಂಡನೆ – ಉಕ್ರೇನ್‍ನಲ್ಲಿ ರಷ್ಯಾದ ಬಾವುಟ ಹಾರಾಟ

    ಕೀವ್: ಉಕ್ರೇನ್‍ನಲ್ಲಿ ರಷ್ಯಾ ರಕ್ತದೋಕುಳಿ ನಡೆಸುತ್ತಿದೆ. ರಷ್ಯಾ ಸೈನಿಕರ ರಾಕ್ಷಸೀ ಕೃತ್ಯಕ್ಕೆ 25ಕ್ಕೂ ಹೆಚ್ಚು ದೇಶಗಳು ಕೆಂಡಾಮಂಡಲವಾಗಿವೆ. ವಿಶ್ವದೆಲ್ಲೆಡೆ ಜನ ಪ್ರತಿಭಟನೆ ನಡೆಸುತ್ತಿದ್ದಾರೆ. ವಿಪರ್ಯಾಸ ಅಂದ್ರೆ ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ ನಡೆಯನ್ನು ರಷ್ಯಾ ಪ್ರಜೆಗಳೇ ತೀವ್ರವಾಗಿ ಖಂಡಿಸಿದ್ದಾರೆ.

    ನಮ್ಮದೇ ಸಂಸ್ಕೃತಿಯ, ನಮ್ಮದೇ ಭಾಷಿಕರ ದೇಶ ಉಕ್ರೇನ್‍ನಲ್ಲಿ ಯುದ್ಧ ನಿಲ್ಲಿಸಿ ಎಂದು ಸಾವಿರಾರು ರಷ್ಯನ್ನರು ವಿವಿಧೆಡೆ ಪ್ರತಿಭಟನೆ ನಡೆಸಿದ್ದಾರೆ. ಈ ಪ್ರತಿಭಟನೆಯನ್ನು ಬಲವಂತವಾಗಿ ಹತ್ತಿಕ್ಕುವ ಕೆಲಸವನ್ನು ರಷ್ಯಾ ಸರ್ಕಾರ ಮಾಡುತ್ತಿದೆ. ಮಹಿಳೆಯರು ಎನ್ನುವುದನ್ನು ನೋಡದೇ ಕೂದಲಿಡಿದು ಕ್ರೌರ್ಯ ಮೆರೆದಿದೆ. ಇನ್ನು ಅಮೆರಿಕಾದ ಲಾಸ್ ಏಂಜಲಿಸ್, ಚಿಲಿಯ ಸ್ಯಾಂಟಿಯಾಗೋ, ಜರ್ಮನಿಯ ಬರ್ಲಿನ್, ಬ್ರಿಟನ್‍ನ ಲಂಡನ್ ಸೇರಿ ವಿಶ್ವದ ವಿವಿಧೆಡೆ ಪುಟಿನ್ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಪೋಲ್ಯಾಂಡ್ ಫುಟ್‍ಬಾಲ್ ಸ್ಟೇಡಿಯಂನಲ್ಲಿ ಉಕ್ರೇನ್ ಪರ ಘೋಷಣೆ ಮುಗಿಲು ಮುಟ್ಟಿತ್ತು. ಇದನ್ನೂ ಓದಿ: Russia-Ukraine War – ಏನಿದು ರಷ್ಯಾ ಟ್ಯಾಂಕರ್‌ಗಳ ಮೇಲೆ Z ಮಾರ್ಕ್?

    ಇತ್ತ ಉಕ್ರೇನ್‍ನ ಬಹುತೇಕ ಭಾಗಗಳು ರಷ್ಯಾ ತಾತ್ಕಾಲಿಕವಾಗಿ ತನ್ನ ಹಿಡಿತಕ್ಕೆ ತೆಗೆದುಕೊಂಡಿದೆ. ಕೆಲವೆಡೆ ರಷ್ಯಾದ ಬಾವುಟಗಳು ಹಾರಿವೆ. ಆದ್ರೇ ರಷ್ಯಾ ಹೇಳುತ್ತಿರುವುದು ಮಾತ್ರ ಬೇರೆ. ತಾವು ಉಕ್ರೇನ್ ದೇಶವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಿಲ್ಲ. ಪಾಶ್ಚಾತ್ಯ ಸೆರೆಯಿಂದ ಬಿಡಿಸುತ್ತಿದ್ದೇವೆ. ಕೀವ್‍ನಲ್ಲಿರುವ ಸರ್ಕಾರವನ್ನು ಪದಚ್ಯುತ ಗೊಳಿಸಿ ಉಕ್ರೇನ್‍ಗೆ ಹೊಸ ಸ್ವಾತಂತ್ರ್ಯ ನೀಡುತ್ತೇವೆ. ಹೊಸ ಸರ್ಕಾರ ಸ್ಥಾಪನೆ ನಂತರ ಸೇನೆಯನ್ನು ವಾಪಸ್ ಪಡೆಯುತ್ತೇವೆ ಎಂದಿದೆ. ಇದನ್ನೂ ಓದಿ: ನಿನ್ನೆ ಮದುವೆಯಾಗಿ ಇಂದು ದೇಶ ಸೇವೆಗೆ ಗನ್‌ ಹಿಡಿದ ದಂಪತಿ

    ಉಕ್ರೇನ್ ಸರ್ಕಾರದ ಮೇಲೆ ದಾಳಿಗೆ ಪುಟಿನ್ ಆದೇಶ ನೀಡಿದ್ದಾರೆ. ಶರಣಾಗಲು ಅಧ್ಯಕ್ಷರಿಗೆ ಕರೆ ನೀಡಿದ್ದಾರೆ. ಆದರೆ ಹೋರಾಟವನ್ನು ನಿಲ್ಲಿಸಿ ಶಸ್ತ್ರತ್ಯಾಗ ಮಾಡುವ ಪ್ರಶ್ನೆಯೇ ಇಲ್ಲ ಎಂದು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ಎಂತಹ ಪರಿಸ್ಥಿತಿ ಬಂದರೂ ಕೀವ್ ಬಿಟ್ಟುಕೊಡಲ್ಲ. ನಮ್ಮ ಸೈನಿಕರು ವಿರೋಚಿತವಾಗಿ ಹೋರಾಡುತ್ತಿದ್ದಾರೆ. ನಮ್ಮವರು ರಷ್ಯಾದ ಸಾವಿರಾರು ಸೈನಿಕರನ್ನು ಕೊಂದಿದ್ದಾರೆ. ಈ ಹಂತದಲ್ಲಿ ನಮ್ಮವರನ್ನು ನಾವು ಕಳೆದಕೊಂಡಿದ್ದೇವೆ. ಆದರೆ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಇವತ್ತೊಂದು ರಾತ್ರಿ ಧೈರ್ಯವಾಗಿರಿ ಎಂದು ಝೆಲೆನ್ಸ್ಕಿ ದೇಶದ ಜನೆತೆಗೆ ಕರೆ ನೀಡಿದ್ದಾರೆ. ಈ ಮಧ್ಯೆ, ಉಕ್ರೇನ್ ನೆರವಿಗೆ ಪೊಲೆಂಡ್ ಧಾವಿಸುವ ಮುನ್ಸೂಚನೆ ನೀಡಿದೆ. ರಷ್ಯಾದ ಕ್ರಮವನ್ನು ಬಹಿರಂಗವಾಗಿ ಖಂಡಿಸಿದೆ. ವಿಶ್ವಸಂಸ್ಥೆ 150 ಕೋಟಿ ರೂಪಾಯಿ ನೆರವು ಪ್ರಕಟಿಸಿದೆ. ಇದನ್ನೂ ಓದಿ: ಪೋಷಕರನ್ನು ಕಳೆದುಕೊಂಡು ನಡುಬೀದಿಯಲ್ಲೇ ಬಾಲಕನ ಆಕ್ರಂದನ

  • ಉಕ್ರೇನ್‍ನಲ್ಲಿ ಸಿಲುಕಿದ್ದಾರೆ ಕೊಡಗಿನ ಒಟ್ಟು 10 ವಿದ್ಯಾರ್ಥಿಗಳು

    ಉಕ್ರೇನ್‍ನಲ್ಲಿ ಸಿಲುಕಿದ್ದಾರೆ ಕೊಡಗಿನ ಒಟ್ಟು 10 ವಿದ್ಯಾರ್ಥಿಗಳು

    ಮಡಿಕೇರಿ: ರಷ್ಯಾದ ಆಕ್ರಮಣಕಾರಿ ದಾಳಿಯಿಂದ ಉಕ್ರೇನ್ ದೇಶ ನಲುಗಿ ಹೋಗುತ್ತಿದೆ. ಇತ್ತ ಕರ್ನಾಟಕದಿಂದ ಉನ್ನತ ವಿದ್ಯಾಭ್ಯಾಸಕ್ಕಾಗಿ ತೆರಳಿದ್ದ ವಿದ್ಯಾರ್ಥಿಗಳು ಈ ದಾಳಿಯಿಂದ ಮತ್ತೆ ದೇಶಕ್ಕೆ ಮರಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅದರಂತೆ ಕೊಡಗು ಜಿಲ್ಲೆಯ ಸುಮಾರು 10 ವಿದ್ಯಾರ್ಥಿಗಳು ಉಕ್ರೇನ್ ನಲ್ಲಿ ಸಿಲುಕಿದ್ದಾರೆ. ಅವರನ್ನು ಕರೆತರುವ ಪ್ರಯತ್ನ ಜಿಲ್ಲಾಡಳಿತ ನಡೆಸುತ್ತಿದೆ.

    ಈ ಕುರಿತು ಕೊಡಗು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್ ಪಬ್ಲಿಕ್ ಟಿವಿ ಗೆ ಸ್ಪಷ್ಟನೆ ನೀಡಿದ್ದಾರೆ. ಪಬ್ಲಿಕ್ ಟಿವಿಯೊಂದಿಗೆ ಮಾತಾನಾಡಿದ ಅವರು, ಈಗಾಗಲೇ ಉಕ್ರೇನ್ ನಲ್ಲಿ ಜಿಲ್ಲೆಯ ಇಬ್ಬರು ಹುಡುಗರು, 8 ಹುಡುಗಿಯರು ಸಿಲುಕಿದ್ದಾರೆ. ಅವರೆಲ್ಲರು ಪೆÇೀಷಕರನ್ನು ಮತ್ತು ಜಿಲ್ಲಾಡಳಿತವನ್ನು ಸಂಪರ್ಕಿಸಿದ್ದಾರೆ ಎಂದು ವಿವರಿಸಿದರು. ಇದನ್ನೂ ಓದಿ: ಫೋನ್‌ನಲ್ಲಿ ಮಾತನಾಡುವಾಗ ಬಾಂಬ್ ಹಾಕುತ್ತಿದ್ದಾರೆ ಎಂದು ಬಂಕರ್‌ಗೆ ಓಡಿ ಹೋದ: ಪೋಷಕರ ಅಳಲು

    ಅಷ್ಟು ವಿದ್ಯಾರ್ಥಿಗಳನ್ನು ಭಾರತೀಯ ರಾಯಭಾರಿ ಅಧಿಕಾರಿಗಳು ಸಂಪರ್ಕಿಸಿದ್ದಾರೆ. ಎಲ್ಲರೂ ಬಂಕರ್‍ಗಳಲ್ಲಿ ರಕ್ಷಣೆ ಪಡೆದಿದ್ದಾರೆ. ಎಲ್ಲರನ್ನೂ ಸುರಕ್ಷಿತವಾಗಿ ಕರೆತರಲು ಭಾರತ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ತಿಳಿಸಿದರು.

    ಕೊಡಗಿನ 10 ವಿದ್ಯಾರ್ಥಿಗಳು ಹೆಸರು ಈ ಕೆಳಗಿನಂತಿವೆ:
    1)ಅಶ್ವಿನ್ ಕುಮಾರ್ – ಕೊಡಗು
    2)ಚಂದನ್ ಗೌಡ – ಕುಶಾಲನಗರ
    3)ಅಲಿಶಾ ಸೈಯದ್ – ಕೊಡಗು
    4)ಲಿಖೀತ್ – ಕುಶಾಲನಗರ
    5)ಅಕ್ಷಿತಾ ಅಕ್ಕಮ್ಮ – ಕುಶಾಲನಗರ
    6)ಎಂ.ಪಿ.ನಿರ್ಮಲಾ – ಅಮ್ಮತ್ತಿ ವಿರಾಜಪೇಟೆ ತಾಲೂಕು
    7)ಅರ್ಜುನ್ ವಸಂತ್- ಶಾನಿವಾರಸಂತೆ
    8)ಸಿನಿಯಾ.ವಿ.ಜೆ – ಪೋನ್ನಂಪೇಟೆ
    9)ತೇಜಸ್ವಿನಿ – ವಿರಾಜಪೇಟೆ
    10)ಶೀತಲ್ – ಸಂಪತ್ – ಗೋಣಿಕೋಪ್ಪ

  • ಈಗಲೂ ತಟಸ್ಥ ನೀತಿ ಸರಿಯಲ್ಲ: ಭಾರತದ ನಡೆಗೆ ಮನೀಶ್‌ ತಿವಾರಿ ಆಕ್ಷೇಪ

    ಈಗಲೂ ತಟಸ್ಥ ನೀತಿ ಸರಿಯಲ್ಲ: ಭಾರತದ ನಡೆಗೆ ಮನೀಶ್‌ ತಿವಾರಿ ಆಕ್ಷೇಪ

    ನವದೆಹಲಿ: ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ರಷ್ಯಾ ವಿರುದ್ಧ ಮತ ಚಲಾಯಿಸದೇ ಭಾರತ ತಟಸ್ಥ ನೀತಿಯನ್ನು ಅನುಸರಿಸಿದ್ದಕ್ಕೆ ಕಾಂಗ್ರೆಸ್‌ ಮುಖಂಡ ಮನೀಶ್‌ ತಿವಾರಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

    ನಮ್ಮ ಕಷ್ಟಗಳಲ್ಲಿ ರಷ್ಯಾ ನಮ್ಮ ಬೆಂಬಲಕ್ಕೆ ನಿಂತಿದೆ. ಆದರೆ ಸ್ನೇಹಿತ ತಪ್ಪು ಮಾಡಿದರೆ, ನಾವು ಆತನನ್ನು ಸರಿಪಡಿಸಬೇಕು. ಒಂದು ಕಡೆ ಪ್ರಜಾಪ್ರಭುತ್ವವನ್ನು ಪ್ರತಿಪಾದಿಸುವ ರಾಷ್ಟ್ರಗಳು ಮತ್ತು ಇತರರು ನಿರಂಕುಶ ಮಾರ್ಗವನ್ನು ಬೆಂಬಲಿಸುವ ಸಂದರ್ಭದಲ್ಲಿ ಭಾರತ ತನ್ನ ಪಕ್ಷವನ್ನು ಆರಿಸಿಕೊಳ್ಳಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: Russia-Ukraine War – ಏನಿದು ರಷ್ಯಾ ಟ್ಯಾಂಕರ್‌ಗಳ ಮೇಲೆ Z ಮಾರ್ಕ್?

    ಭಾರತದ ಅಲಿಪ್ತ ಆಂದೋಲನ (NAM) ನೀತಿ 1991 ರಿಂದ ಕ್ರಮೇಣ ಕೊನೆಗೊಂಡಿದೆ. ಈಗಲೂ ಭಾರತವು ಅದೇ ನೀತಿಗೆ ಮರಳಲು ಯೋಚಿಸಿದರೆ ಅದು ತಪ್ಪಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ನಿನ್ನೆ ಮದುವೆಯಾಗಿ ಇಂದು ದೇಶ ಸೇವೆಗೆ ಗನ್‌ ಹಿಡಿದ ದಂಪತಿ

    ಉಕ್ರೇನ್ ಮೇಲೆ ರಷ್ಯಾ ದಾಳಿಯನ್ನು ಖಂಡಿಸಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತೀಯ ಕಾಲಮಾನ ಶನಿವಾರ ನಸುಕಿನ ಜಾವ ಸಭೆ ಆಯೋಜಿಸಲಾಗಿತ್ತು. ಅಮೆರಿಕ ಮತ್ತು ಆಲ್ಬೇನಿಯಾ ಸಂಯುಕ್ತವಾಗಿ ಮಂಡಿಸಿದ ನಿರ್ಣಯದ ಮೇಲೆ ಮತದಾನ ನಡೆದಿತ್ತು.

    ಭಾರತ, ಚೀನಾ, ಯುಎಇ ದೇಶಗಳು ಮತದಾನದಿಂದ ದೂರ ಉಳಿದಿದ್ದರೆ ಪೋಲೆಂಡ್, ಇಟಲಿ, ನ್ಯೂಜಿಲೆಂಡ್ ಸೇರಿ 11 ದೇಶಗಳು ನಿರ್ಣಯದ ಪರವಾಗಿ ಮತ ಹಾಕಿವೆ. ರಷ್ಯಾ ದೇಶ ಊಹಿಸಿದಂತೆಯೇ ವಿಟೋ ಅಧಿಕಾರ ಚಲಾಯಿಸಿ, ನಿರ್ಣಯ ಪಾಸ್ ಆಗದಂತೆ ತಡೆದಿದೆ. ಈ ಬಗ್ಗೆ ಅಮೆರಿಕ ಆಕ್ರೋಶ ಹೊರಹಾಕಿದೆ. ಈ ವಿಚಾರವನ್ನು ಸಾಮಾನ್ಯ ಸಭೆಗೆ ಕೊಂಡೊಯ್ಯುವುದಾಗಿ ಘೋಷಿಸಿದೆ.

    ಈ ಬಿಕ್ಕಟ್ಟಿನ ಬಗ್ಗೆ ಮಾತನಾಡಿದ ಭಾರತದ ಶಾಶ್ವತ ರಾಯಭಾರಿ ತಿರುಮೂರ್ತಿ, ವಿವಾದ ಇತ್ಯರ್ಥಕ್ಕೆ ಚರ್ಚೆಯೊಂದೇ ಸಮಾಧಾನ. ಆದರೆ ಈ ಕ್ಷಣದಲ್ಲಿ ಅದು ಸಾಧ್ಯವಾಗಿಲ್ಲ. ಎರಡು ದೇಶಗಳು ರಾಜತಾಂತ್ರಿಕ ಮಾರ್ಗವನ್ನು ಕೈಬಿಟ್ಟಿದ್ದಕ್ಕೆ ವಿಷಾದವಿದೆ. ಸದ್ಯಕ್ಕೆ ಈ ಖಂಡನಾ ನಿರ್ಣಯದಿಂದ ದೂರ ಇರಲು ಭಾರತ ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.