Tag: Ukraine

  • ಪ್ರಧಾನಿ, ಭಾರತದ ರಾಯಭಾರಿ ಕಚೇರಿಗೆ ಧನ್ಯವಾದ ತಿಳಿಸಿದ ಪಾಕ್ ಯುವತಿ

    ಪ್ರಧಾನಿ, ಭಾರತದ ರಾಯಭಾರಿ ಕಚೇರಿಗೆ ಧನ್ಯವಾದ ತಿಳಿಸಿದ ಪಾಕ್ ಯುವತಿ

    ಕೀವ್: ಉಕ್ರೇನ್‍ನಲ್ಲಿ ಸಿಲುಕಿದ್ದ ಪಾಕಿಸ್ತಾನದ ಯುವತಿಯೊಬ್ಬಳು ಪ್ರಧಾನಿ ನರೇಂದ್ರ ಮೋದಿ ಹಾಗೂ ಭಾರತೀಯ ರಾಯಭಾರಿ ಕಚೇರಿಗೆ ಧನ್ಯವಾದವನ್ನು ತಿಳಿಸಿದ್ದಾರೆ.

    ಪಾಕಿಸ್ತಾನಿ ಯುವತಿ ಅಸ್ಮಾ ಶಫೀಕ್ ಅವರನ್ನು ಉಕ್ರೇನ್‍ನ ಕೀವ್‍ನಿಂದ ಸುರಕ್ಷಿತವಾಗಿ ಬೇರೆ ಸ್ಥಳಕ್ಕೆ ರಕ್ಷಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ವೀಡಿಯೋವೊಂದನ್ನು ಮಾಡಿ ಧನ್ಯವಾದವನ್ನು ತಿಳಿಸಿದರು.

    ವೀಡಿಯೋದಲ್ಲಿ ಅವರು, ಉಕ್ರೇನ್‍ನಲ್ಲಿ ಬಹಳ ಕಷ್ಟಕರ ಪರಿಸ್ಥಿತಿಯಲ್ಲಿ ಸಿಲುಕಿದ್ದೆ. ನಾವು ಅತ್ಯಂತ ಕಷ್ಟಕರ ಪರಿಸ್ಥಿತಿಯಲ್ಲಿ ಸಿಲುಕಿರುವಾಗ ಕೀವ್‍ನಲ್ಲಿ ಭಾರತೀಯ ರಾಯಭಾರಿ ಕಚೇರಿಯವರು ಎಲ್ಲಾ ರೀತಿಯ ಬೆಂಬಲ ನೀಡಿದ್ದಾರೆ. ನಮಗೆ ಕೀವ್‍ನಿಂದ ಪಾರಾಗಲು ಸಹಾಯ ಮಾಡಿದ ಭಾರತೀಯ ರಾಯಭಾರ ಕಚೇರಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದವನ್ನು ತಿಳಿಸುತ್ತೇನೆ. ನಾವು ಸುರಕ್ಷಿತವಾಗಿ ಮನೆಗೆ ತಲುಪುತ್ತೇವೆ ಎಂದು ಭಾವಿಸುತ್ತೇವೆ ಎಂದು ಈ ವೀಡಿಯೋದಲ್ಲಿ ತಿಳಿಸಿದರು. ಇದನ್ನೂ ಓದಿ: ಕಚ್ಚಾ ತೈಲ ಬೆಲೆ ಬ್ಯಾರೆಲ್‍ಗೆ 300 ಡಾಲರ್‌ಗೆ ಏರಬಹುದು: ರಷ್ಯಾ ಎಚ್ಚರಿಕೆ

    ಅಸ್ಮಾ ಶಫೀಕ್ ಅವರು ಈಗ ಪಶ್ಚಿಮ ಉಕ್ರೇನ್‍ಗೆ ಹೋಗುತ್ತಿದ್ದಾರೆ. ಅಲ್ಲಿಂದ ಶೀಘ್ರದಲ್ಲೇ ಅವರು ತಮ್ಮ ಕುಟುಂಬದವರನ್ನು ಮತ್ತೆ ಸೇರಿಕೊಳ್ಳುತ್ತಾರೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: 5 ಕೋಟಿಗೂ ಹೆಚ್ಚು ಅಕ್ರಮ ಆಸ್ತಿ – ಪ್ರಾಂಶುಪಾಲ ಅರೆಸ್ಟ್!

    ಉಕ್ರೇನ್-ರಷ್ಯಾ ನಡುವಿನ ಯುದ್ಧ 14ನೇ ದಿನ ಪೂರೈಸಿದೆ. ರಷ್ಯಾ ಪಡೆಗಳು ಮಾರಣಹೋಮವನ್ನೇ ಸೃಷ್ಟಿಸ್ತಿವೆ. ಯುದ್ಧದ ನಿಯಮಗಳನ್ನು ಉಲ್ಲಂಘಿಸಿ ಜನವಸತಿ ಪ್ರದೇಶಗಳ ಮೇಲೆ ಬಾಂಬ್‍ಗಳ ಸುರಿಮಳೆಗೈಯ್ಯುತ್ತಿದೆ.

  • ಕಚ್ಚಾ ತೈಲ ಬೆಲೆ ಬ್ಯಾರೆಲ್‍ಗೆ 300 ಡಾಲರ್‌ಗೆ ಏರಬಹುದು: ರಷ್ಯಾ ಎಚ್ಚರಿಕೆ

    ಕಚ್ಚಾ ತೈಲ ಬೆಲೆ ಬ್ಯಾರೆಲ್‍ಗೆ 300 ಡಾಲರ್‌ಗೆ ಏರಬಹುದು: ರಷ್ಯಾ ಎಚ್ಚರಿಕೆ

    ಮಾಸ್ಕೋ: ನಮ್ಮ ಕಚ್ಚಾ ತೈಲ ಆಮದಿಗೆ ನಿಷೇಧ ಹೇರಿದರೆ 1 ಬ್ಯಾರೆಲ್ ತೈಲದ ಬೆಲೆ 300 ಡಾಲರ್(ಅಂದಾಜು 23 ಸಾವಿರ ರೂ.)ಗೆ ಏರಿಕೆಯಾಗಬಹುದು ಎಂದು ರಷ್ಯಾ ವಿಶ್ವಕ್ಕೆ ಎಚ್ಚರಿಕೆ ನೀಡಿದೆ.

    ಪಾಶ್ಚಿಮಾತ್ಯ ದೇಶಗಳಿಂದ ರಷ್ಯಾದ ಪೆಟ್ರೋಲಿಯಂ ಉತ್ಪನ್ನಗಳ ಆಮದುಗಳ ಮೇಲಿನ ನಿಷೇಧವು ಜಾಗತಿಕ ಆರ್ಥಿಕತೆಗೆ ಕೆಟ್ಟ ಪರಿಣಾಮಗಳನ್ನು ಉಂಟುಮಾಡುತ್ತದೆ. ಇದರಿಂದ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್‍ಗೆ ಡಾಲರ್ 300ಗೆ ಏರಬಹುದು ಎಂದು ರಷ್ಯಾದ ಉಪ ಪ್ರಧಾನಿ ಅಲೆಕ್ಸಾಂಡರ್ ನೊವಾಕ್ ಎಚ್ಚರಿಸಿದ್ದಾರೆ. ಇದನ್ನೂ ಓದಿ: ಮೋದಿ ಸ್ಟ್ರಾಂಗ್: ಸೇನಾಬಲ ಬಳಸಿ ಪಾಕ್‍ಗೆ ತಿರುಗೇಟು ನೀಡುವ ಸಾಧ್ಯತೆ! 

    Russia, EU and Ukraine prepare draft agreement on gas — Novak - Business & Economy - TASS

    ರಷ್ಯಾದ ತೈಲ ಆಮದಿಗೆ ಅಮೆರಿಕ ನಿರ್ಬಂಧ ಹೇರಿದೆ. ಈ ಹಿನ್ನೆಲೆ ಸಿಟ್ಟಾಗಿರುವ ರಷ್ಯಾ, ಈ ನಿರ್ಧಾರ ವಿಶ್ವ ಮಾರುಕಟ್ಟೆಗೆ ದುರಂತ ಪರಿಣಾಮಗಳಿಗೆ ಕಾರಣವಾಗುತ್ತದೆ. ಈಗಾಗಲೇ ಮಾರುಕಟ್ಟೆಯಲ್ಲಿ ಬ್ಯಾರೆಲ್‍ಗೆ 130 ಡಾಲರ್(ಅಂದಾಜು 10 ಸಾವಿರ ರೂ.) ದಾಟಿದೆ. ಒಂದು ವೇಳೆ ರಷ್ಯಾ ಕಚ್ಚಾ ತೈಲದ ಮೇಲೆ ನಿಷೇಧ ಹೇರಿದರೆ ಕಚ್ಚಾ ತೈಲದ ಬೆಲೆ ಊಹೆಗೂ ಮೀರಿ ಏರಿಕೆಯಾಗುತ್ತೆ ಎಂದು ಖಡಕ್ ಎಚ್ಚರಿಕೆಯನ್ನು ರಷ್ಯಾ ಕೊಟ್ಟಿದೆ.

    ಯುರೋಪಿಯನ್ ಮಾರುಕಟ್ಟೆಯಲ್ಲಿ ರಷ್ಯಾದ ತೈಲದ ಪ್ರಮಾಣವನ್ನು ತ್ವರಿತವಾಗಿ ಬದಲಾಯಿಸುವುದು ಅಸಾಧ್ಯ. ಇದು ಒಂದು ವರ್ಷಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಯುರೋಪಿಯನ್‍ಗೆ ಹೆಚ್ಚು ದುಬಾರಿಯಾಗುತ್ತೆ ಎಂದು ನೊವಾಕ್ ತಿಳಿಸಿದ್ದಾರೆ. ಇದನ್ನೂ ಓದಿ: ಕಚ್ಚಾ ತೈಲ ಬೆಲೆ ಏರಿಕೆ ಬೆನ್ನಲ್ಲೇ ಭಾರತಕ್ಕೆ ರಷ್ಯಾದಿಂದ ಭಾರೀ ಆಫರ್

  • ನ್ಯಾಟೋ ಸದಸ್ಯತ್ವಕ್ಕೆ ಪಟ್ಟು ಹಿಡಿಯಲ್ಲ ಎಂದ ಉಕ್ರೇನ್‌:  ರಷ್ಯಾದ 2 ಷರತ್ತಿಗೆ ಒಪ್ಪಿಗೆ

    ನ್ಯಾಟೋ ಸದಸ್ಯತ್ವಕ್ಕೆ ಪಟ್ಟು ಹಿಡಿಯಲ್ಲ ಎಂದ ಉಕ್ರೇನ್‌: ರಷ್ಯಾದ 2 ಷರತ್ತಿಗೆ ಒಪ್ಪಿಗೆ

    ಕಿವ್‌: ಮಹತ್ವದ ಬೆಳವಣಿಗೆಯಲ್ಲಿ ನ್ಯಾಟೋ(NATO) ಸದಸ್ಯತ್ವಕ್ಕೆ ನಾವು ಪಟ್ಟು ಹಿಡಿಯುವುದಿಲ್ಲ ಎಂದು ಉಕ್ರೇನ್‌ ಅಧ್ಯಕ್ಷ ವೊಲೊದಿಮಿರ್‌ ಜೆಲೆನ್‌ಸ್ಕಿ ಹೇಳಿದ್ದಾರೆ.

    ಉಕ್ರೇನ್‌ನಿಂದ ಸ್ವಾಯತ್ತೆ ಬಯಸುತ್ತಿರುವ ಎರಡು ರಷ್ಯಾ-ಪರ ಪ್ರದೇಶಗಳ ವಿಷಯದಲ್ಲಿ ರಾಜಿ ಮಾಡಿಕೊಳ್ಳಲು ನಾನು ಸಿದ್ಧನಿದ್ದೇನೆ ಎಂದು ಮಂಗಳವಾರ ರಾತ್ರಿ ಪ್ರಕಟಿಸಿದ್ದಾರೆ.

    ರಷ್ಯಾ ವಿಧಿಸಿದ್ದ 4 ಪ್ರಮುಖ ಷರತ್ತುಗಳಲ್ಲಿ ಎರಡನ್ನು ಉಕ್ರೇನ್‌ ಒಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ಈಗ ಯುದ್ಧ ಅಂತ್ಯವಾಗುತ್ತಾ ಎಂಬ ಪ್ರಶ್ನೆ ಎದ್ದಿದೆ.

    ನಮ್ಮನ್ನು ನ್ಯಾಟೋ ಒಪ್ಪಿಕೊಳ್ಳಲು ತಯಾರಿಲ್ಲ. ರಷ್ಯಾ ವಿರುದ್ಧ ಯುದ್ಧ ಮಾಡಿ ಅಪಾಯ ತಂದುಕೊಳ್ಳಲು ನ್ಯಾಟೋಗೆ ಇಷ್ಟವಿಲ್ಲ. ರಷ್ಯಾ ವಿರುದ್ಧ ಯುದ್ಧ ಮಾಡಲು ನ್ಯಾಟೋ ಹೆದರುತ್ತದೆ. ಹೀಗಾಗಿ ನ್ಯಾಟೋ ಕುರಿತ ನಮ್ಮ ನಿಲುವಿನಿಂದ ನಾವು ಹಿಂದಕ್ಕೆ ಸರಿದಿದ್ದೇವೆ ಎಂದು ಎಬಿಸಿ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಜೆಲೆನ್‌ಸ್ಕಿ ತಿಳಿಸಿದ್ದಾರೆ.‌ ಇದನ್ನೂ ಓದಿ: ಕಚ್ಚಾ ತೈಲ ಬೆಲೆ ಏರಿಕೆ ಬೆನ್ನಲ್ಲೇ ಭಾರತಕ್ಕೆ ರಷ್ಯಾದಿಂದ ಭಾರೀ ಆಫರ್

    ಉಕ್ರೇನ್‌ನಿಂದ ಸ್ವಾಯತ್ತೆ ಬಯಸುತ್ತಿರುವ ಡೊನೆಟ್ಸ್ಕ್ ಮತ್ತು ಲುಹಾನ್ಸ್ಕ್ ವಿಚಾರದಲ್ಲಿ ರಾಜಿ ಮಾಡಿಕೊಳ್ಳಲು ಸಿದ್ಧನಿದ್ದೇನೆ ಎಂದೂ ಜೆಲೆನ್‌ಸ್ಕಿ ತಿಳಿಸಿದ್ದು ಯುದ್ಧ ಅಂತ್ಯವಾಗುವ ಸಾಧ್ಯತೆಯಿದೆ ಎಂಬ ವಿಶ್ಲೇಷಣೆ ಕೇಳಿ ಬಂದಿದೆ.

    ಯುದ್ಧ ನಿಲ್ಲಿಸಬೇಕಾದರೆ ರಷ್ಯಾ 4 ಷರತ್ತನ್ನು ಉಕ್ರೇನ್‌ಗೆ ವಿಧಿಸಿತ್ತು. ಈ 4 ಷರತ್ತನ್ನು ಒಪ್ಪಿಕೊಳ್ಳುವವರೆಗೂ ಯುದ್ಧ ನಿಲ್ಲಿಸುವುದೇ ಇಲ್ಲ ಎಂದು ರಷ್ಯಾ ಸಂಧಾನ ಸಭೆಯಲ್ಲಿ ಖಡಕ್‌ ಆಗಿ ಹೇಳಿತ್ತು.

    ರಷ್ಯಾದ ಷರತ್ತು ಏನಿತ್ತು?
    1. ನ್ಯಾಟೋ ಸೇರಬಾರದು:
    ಅಮೆರಿಕ ನೇತೃತ್ವದ 30 ಪಾಶ್ಚಾತ್ಯ ದೇಶಗಳ ‘ನ್ಯಾಟೋ’ ಸಂಘಟನೆ ಸೇರಿದಂತೆ ಯಾವುದೇ ಗುಂಪುಗಳನ್ನು ಉಕ್ರೇನ್‌ ಸೇರಬಾರದು. ಉಕ್ರೇನ್‌ ತಟಸ್ಥವಾಗಿ ಉಳಿಯುವ ನಿರ್ಧಾರ ತೆಗೆದುಕೊಳ್ಳಬೇಕು. ಮುಂದೆ ಯಾವುದೇ ಕಾರಣಕ್ಕೂ ಹೊಸ ಸಂಘಟನೆಯನ್ನು ನಾನು ಸೇರುವುದಿಲ್ಲ ಎಂದು ಸಂವಿಧಾನಕ್ಕೆ ತಿದ್ದುಪಡಿ ತರಬೇಕು.

    2. ಕೂಡಲೇ ಸೇನಾ ಕಾರ್ಯಾಚರಣೆ ನಿಲ್ಲಿಸಬೇಕು:
    ನಾವು ಉಕ್ರೇನ್‌ ಅನ್ನು ಸಂಪೂರ್ಣ ನಿಶ್ಶಸ್ತ್ರೀಕರಣ ಮಾಡುತ್ತಿದ್ದೇವೆ. ಒಂದು ವೇಳೆ ಉಕ್ರೇನ್‌ ತನ್ನ ಸೇನಾ ಕಾರ್ಯಚರಣೆ ಸ್ಥಗಿತಗೊಳಿಸಿದರೆ ನಾವು ಒಂದೇ ಒಂದು ಗುಂಡನ್ನೂ ಹಾರಿಸುವುದಿಲ್ಲ.

    3. ರಾಜ್ಯಗಳಿಗೆ ಮಾನ್ಯತೆ ಬೇಕು:
    ಬಂಡುಕೋರರ ವಶದಲ್ಲಿರುವ ಪ್ರಾಂತ್ಯಗಳಾದ ಡೊನೆಟ್ಸ್ಕ್ ಮತ್ತು ಲುಹಾನ್ಸ್ಕ್ ಸ್ವತಂತ್ರ್ಯ ರಾಜ್ಯಗಳೆಂದು ಘೋಷಿಸಿ ಅವುಗಳಿಗೆ ಮಾನ್ಯತೆ ನೀಡಬೇಕು.

    4.ಕ್ರೆಮಿಯಾಕ್ಕೆ ಮಾನ್ಯತೆ:
    ಉಕ್ರೇನ್‌ ಮೇಲೆ ದಾಳಿ ನಡೆಸಿ 2014ರಲ್ಲಿ ವಶಪಡಿಸಿಕೊಂಡ ಕ್ರೆಮಿಯಾವನ್ನು ರಷ್ಯಾದ ಭಾಗವೆಂದು ಒಪ್ಪಬೇಕು. ಇವುಗಳಿಗೆ ಒಪ್ಪಿದರೆ ತಕ್ಷಣವೇ ನಾವು ಯುದ್ಧ ನಿಲ್ಲಿಸಲಿದ್ದೇವೆ. ಇದನ್ನೂ ಓದಿ: ರಷ್ಯಾದ ತೈಲ, ಅನಿಲ ಆಮದಿಗೆ ಅಮೆರಿಕ ನಿರ್ಬಂಧ

    ರಷ್ಯಾ ಆತಂಕ ಏನು?
    ನ್ಯಾಟೋ ಸಂಕ್ಷಿಪ್ತ ರೂಪ ಉತ್ತರ ಅಟ್ಲಾಂಟಿಕ್ ಟ್ರೀಟಿ ಆರ್ಗನೈಸೇಶನ್ (ನ್ಯಾಟೋ). ಪ್ರಸ್ತುತ ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧಕ್ಕೆ ಮೂಲ ಕಾರಣವೇ ಈ ನ್ಯಾಟೋ.

    ಉಕ್ರೇನ್ ನ್ಯಾಟೋದ ಭಾಗವಾಗಲು ಬಯಸುತ್ತಿತ್ತು. ಆದರೆ ರಷ್ಯಾ ನ್ಯಾಟೋವನ್ನು ಬಲವಾಗಿ ವಿರೋಧಿಸುತ್ತಿದೆ. ತನ್ನ ವಿರುದ್ಧ ಹಣಿಯಲಾದ ದೇಶಗಳ ಒಕ್ಕೂಟ ಎಂದೇ ರಷ್ಯಾ ನ್ಯಾಟೋವನ್ನು ಕರೆಯುತ್ತಿದೆ. ಉಕ್ರೇನ್ ನ್ಯಾಟೋಗೆ ಸೇರಿದರೆ ಉಕ್ರೇನ್‌ ಮೂಲಕ ನ್ಯಾಟೋದ ಸೈನ್ಯ ತನ್ನ ಗಡಿಗೆ ಬರುತ್ತದೆ ಎಂಬ ಆತಂಕವನ್ನು ರಷ್ಯಾ ವ್ಯಕ್ತಪಡಿಸಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಹಲವು ಸುತ್ತಿನ ಮಾತುಕತೆ ನಡೆದರೂ ಯಾವುದೇ ನಿರ್ಧಾರಕ್ಕೆ ಬಾರದ ಹಿನ್ನೆಲೆಯಲ್ಲಿ ರಷ್ಯಾ ಉಕ್ರೇನ್‌ ಮೇಲೆ ದಾಳಿ ಮಾಡಿತ್ತು.

    ನ್ಯಾಟೋ ರಚನೆಯಾದ ಆರಂಭದಲ್ಲಿ 12 ಸದಸ್ಯ ರಾಷ್ಟ್ರಗಳನ್ನು ಹೊಂದಿತ್ತು. ಇದು ಅಮೆರಿಕ, ಬ್ರಿಟನ್, ಫ್ರಾನ್ಸ್, ಕೆನಡಾ, ಇಟಲಿ, ನೆದರ್ಲ್ಯಾಂಡ್ಸ್, ಐಸ್‌ಲ್ಯಾಂಡ್‌, ಬೆಲ್ಜಿಯಂ, ಲಕ್ಸೆಂಬರ್ಗ್, ನಾರ್ವೆ, ಪೋರ್ಚುಗಲ್ ಮತ್ತು ಡೆನ್ಮಾರ್ಕ್ ಅನ್ನು ಒಳಗೊಂಡಿತ್ತು. ಇಂದು, ನ್ಯಾಟೋ ಅಡಿಯಲ್ಲಿ 30 ಸದಸ್ಯ ರಾಷ್ಟ್ರಗಳಿವೆ

    ನ್ಯಾಟೋ ಸಾಮಾನ್ಯ ಭದ್ರತಾ ನೀತಿಯ ಮೇಲೆ ಕಾರ್ಯನಿರ್ವಹಿಸುವ ಮಿಲಿಟರಿ ಮೈತ್ರಿಯಾಗಿದೆ. ನ್ಯಾಟೋ ಸದಸ್ಯ ರಾಷ್ಟ್ರವನ್ನು ಆಕ್ರಮಿಸಿದರೆ, ಇದನ್ನು ಎಲ್ಲಾ ನ್ಯಾಟೋ ಸದಸ್ಯ ರಾಷ್ಟ್ರಗಳ ಆಕ್ರಮಣ ಎಂದು ಪರಿಗಣಿಸಲಾಗುತ್ತದೆ. ಎಲ್ಲಾ ನ್ಯಾಟೋ ಸದಸ್ಯ ರಾಷ್ಟ್ರಗಳು ಆಕ್ರಮಣದ ವಿರುದ್ಧ ಒಗ್ಗಟ್ಟಾಗಿ ಕೆಲಸ ಮಾಡುತ್ತದೆ.

  • ರಷ್ಯಾದ ತೈಲ, ಅನಿಲ ಆಮದಿಗೆ ಅಮೆರಿಕ ನಿರ್ಬಂಧ

    ರಷ್ಯಾದ ತೈಲ, ಅನಿಲ ಆಮದಿಗೆ ಅಮೆರಿಕ ನಿರ್ಬಂಧ

    ವಾಷಿಂಗ್ಟನ್: ಉಕ್ರೇನ್‌ ಮೇಲಿನ ರಷ್ಯಾ ಯುದ್ಧವನ್ನು ಖಂಡಿಸಿ ರಷ್ಯಾದ ಅನಿಲ, ತೈಲ ಸೇರಿ ಎಲ್ಲಾ ಬಗೆಯ ಆಮದುಗಳಿಗೆ ನಿರ್ಬಂಧ ವಿಧಿಸಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ತಿಳಿಸಿದ್ದಾರೆ.

    ನಮ್ಮ ಅನೇಕ ಯೂರೋಪಿಯನ್‌ ಮಿತ್ರರಾಷ್ಟ್ರಗಳು ಮತ್ತು ಪಾಲುದಾರರು ನಮ್ಮೊಂದಿಗೆ ಸೇರುವ ಸ್ಥಿತಿಯಲ್ಲಿ ಇಲ್ಲದಿರಬಹುದು. ಆದರೆ ನಾವು ಈ ನಿಷೇಧದ ತಿಳಿವಳಿಕೆಯೊಂದಿಗೆ ಮುಂದುವರಿಯುತ್ತಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಯುದ್ಧ ನಿಲ್ಲಿಸಲು 2 ಷರತ್ತುಗಳನ್ನು ಉಕ್ರೇನ್ ಮುಂದಿಟ್ಟ ರಷ್ಯಾ

    ನಾವು ಇತಿಹಾಸದಲ್ಲಿ ಆರ್ಥಿಕ ನಿರ್ಬಂಧಗಳ ಅತ್ಯಂತ ಮಹತ್ವದ ಪ್ಯಾಕೇಜ್‌ ಅನ್ನು ಜಾರಿಗೊಳಿಸುತ್ತಿದ್ದೇವೆ. ಇದು ರಷ್ಯಾದ ಆರ್ಥಿಕತೆಗೆ ಗಮನಾರ್ಹ ಹಾನಿಯನ್ನುಂಟುಮಾಡುತ್ತಿದೆ ಎಂದಿದ್ದಾರೆ.

    ನಾವು ರಷ್ಯಾದ ತೈಲ, ಅನಿಲ ಮತ್ತು ಇಂಧನ ಆಮದುಗಳನ್ನು ನಿಷೇಧಿಸುತ್ತಿದ್ದೇವೆ. ಯುಎಸ್‌ ಬಂದರುಗಳಲ್ಲಿ ರಷ್ಯಾದ ತೈಲವು ಇನ್ನು ಮುಂದೆ ಸ್ವೀಕಾರಾರ್ಹವಲ್ಲ. ಅಮೆರಿಕದ ಜನರು ಪುಟಿನ್‌ ಅವರಿಗೆ ಮತ್ತೊಂದು ಪ್ರಬಲ ಹೊಡೆತವನ್ನು ನೀಡುತ್ತಾರೆ ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಅಜ್ಜಿ ತವರು ಉಕ್ರೇನ್‌ಗೆ 77.07 ಕೋಟಿ ನೆರವು ನೀಡಿದ ʼಟೈಟಾನಿಕ್‌ʼ ಹೀರೋ

  • ಯುದ್ಧ ನಿಲ್ಲಿಸಲು 2 ಷರತ್ತುಗಳನ್ನು ಉಕ್ರೇನ್ ಮುಂದಿಟ್ಟ ರಷ್ಯಾ

    ಯುದ್ಧ ನಿಲ್ಲಿಸಲು 2 ಷರತ್ತುಗಳನ್ನು ಉಕ್ರೇನ್ ಮುಂದಿಟ್ಟ ರಷ್ಯಾ

    ಮಾಸ್ಕೋ: ಯುದ್ಧ ನಿಲ್ಲಿಸಲು ರಷ್ಯಾ ಎರಡು ಷರತ್ತುಗಳನ್ನು ಉಕ್ರೇನ್ ಮುಂದಿಟ್ಟಿದೆ. ಕ್ರಿಮಿಯಾವನ್ನು ರಷ್ಯಾದ ಭೂಭಾಗವೆಂದು, ಡೋನ್ಯಸ್ಕ್, ಲುಹಾನ್ಸ್‍ಕ್ ಪ್ರಾಂತ್ಯಗಳನ್ನು ಸ್ವಾತಂತ್ರ್ಯ ದೇಶಗಳೆಂದು ಉಕ್ರೇನ್ ಪರಿಗಣಿಸಬೇಕು ಎಂಬ ಷರತ್ತು ಒಡ್ಡಿದೆ.

    ಈ ಮಧ್ಯೆ ರಷ್ಯಾ ಮೇಲೆ ವಿಶ್ವದ ದಿಗ್ಬಂಧನ ಮತ್ತಷ್ಟು ಹೆಚ್ಚುತ್ತಿದೆ. ಐಬಿಎಂ ಸಂಸ್ಥೆ ರಷ್ಯಾದಲ್ಲಿ ಚಟುವಟಿಕೆ ನಿಲ್ಲಿಸುವುದಾಗಿ ಘೋಷಿಸಿದೆ. ಈ ಮೂಲಕ ಜಗತ್ತಿನಲ್ಲೇ ಅತ್ಯಧಿಕ ದಿಗ್ಬಂಧನಗಳಿಗೆ ಒಳಗಾಗಿರುವ ದೇಶ ಎಂಬ ಕೆಟ್ಟ ದಾಖಲೆಗೆ ರಷ್ಯಾ ಪಾತ್ರವಾಗಿದೆ. ಈ ಬೆಳವಣಿಗೆ ಜಾಗತಿಕ ಮಹಾ ಪಲ್ಲಟಕ್ಕೆ ದಾರಿ ಮಾಡಿಕೊಡುವಂತೆ ಕಾಣುತ್ತಿದೆ. ಇದನ್ನೂ ಓದಿ: ಅಜ್ಜಿ ತವರು ಉಕ್ರೇನ್‌ಗೆ 77.07 ಕೋಟಿ ನೆರವು ನೀಡಿದ ʼಟೈಟಾನಿಕ್‌ʼ ಹೀರೋ

    ರಷ್ಯಾ ತನ್ನ ಅಗತ್ಯಗಳನ್ನು ಪೂರೈಸಿಕೊಳ್ಳಲು ಈಗ ಚೀನಾ ಮೇಲೆ ಹೆಚ್ಚು ಅವಲಂಬಿತವಾಗುತ್ತಿದೆ. ಅಲ್ಲದೇ ವಿಶ್ವದ ದೊಡ್ಡಣ್ಣ ಅಮೆರಿಕಾ ಅಲ್ಲ, ಚೀನಾ ಎಂದು ರಷ್ಯಾ ಬಿಂಬಿಸತೊಡಗಿದೆ. ಜೊತೆಗೆ ದೇಶಿಯ ತಂತ್ರಜ್ಞಾನಗಳ ಬಳಕೆಗೆ ಮುಂದಾಗಿದೆ. ಇಷ್ಟಕ್ಕೆ ಸುಮ್ಮನಾಗಿಲ್ಲ ರಷ್ಯಾ, ಉಕ್ರೇನ್‍ಗೆ ಬೆಂಬಲ ನೀಡೋದನ್ನು ಮುಂದುವರೆಸಿದರೆ, ಇನ್ನಷ್ಟು ದಿಗ್ಬಂಧನ ವಿಧಿಸಿದ್ರೇ ಯುರೋಪ್‍ಗೆ ಅನಿಲ ಪೂರೈಕೆ ನಿಲ್ಲಿಸೋದಾಗಿ ಬೆದರಿಕೆ ಹಾಕಿದೆ.

    ರಷ್ಯಾದ ಕಚ್ಚಾ ತೈಲ ಪೂರೈಕೆ ನಿಂತ್ರೆ, ಒಂದು ಬ್ಯಾರಲ್ ಬೆಲೆ 300 ಡಾಲರ್ ಗಡಿ ದಾಟಲಿದೆ. ನೀವು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲು ಕನಿಷ್ಠ 1ವರ್ಷ ಹಿಡಿಯುತ್ತೆ.. ಯೋಚಿಸಿ ಎಂದು ವಾರ್ನಿಂಗ್ ನೀಡಿದೆ. ಇನ್ನು, ನ್ಯಾಟೋ ರಾಷ್ಟ್ರಗಳು ನೇರವಾಗಿ ಬೆಂಬಲ ನೀಡದಿರೋದು ಝೆಲೆನ್‍ಸ್ಕಿ ಸಿಟ್ಟಿಗೆ ಕಾರಣವಾಗಿದೆ. ರಷ್ಯಾಕ್ಕೆ ನ್ಯಾಟೋ ರಾಷ್ಟ್ರಗಳು ಭಯಬಿದ್ದಿದೆ ಎಂದು ಕಿಡಿಕಾರಿದ್ದಾರೆ. ತಾವು ಕ್ರಿಮಿಯಾ, ಡಾನ್ ಬಾಸ್ ಬಗ್ಗೆ ಚರ್ಚೆಗೆ ರೆಡಿ ಎಂದಿದ್ದಾರೆ. ಇದನ್ನೂ ಓದಿ: ನಿರ್ಬಂಧಕ್ಕೆ ಒಳಪಟ್ಟ ದೇಶಗಳ್ಯಾವುವು? ಕಾರಣ ಏನು? ಪಟ್ಟಿಯಲ್ಲಿ ರಷ್ಯಾ ನಂ.1

    ರಷ್ಯಾ ಪರ್ಯಾಯ ಮಂತ್ರ
    * ಅಂತಾರಾಷ್ಟ್ರೀಯ ಹಣಕಾಸು ವ್ಯವಹಾರಗಳಿಗೆ SWIFT  ಬದಲು SPSF ಬಳಕೆ (ದೇಶಿಯವಾಗಿ ತಯಾರಿಸಲಾದ ಸಿಸ್ಟಮ್ ಫಾರ್ ‘ಟ್ರಾನ್ಸ್ ಫರ್ ಆಫ್ ಫೈನಾನ್ಶಿಯಲ್ ಮೆಸೇಜೆಸ್’ ವ್ಯವಸ್ಥೆ ಸದ್ಯ 5 ದೇಶಗಳ 400 ಬ್ಯಾಂಕ್‍ಗಳು ಇದರ ವ್ಯಾಪ್ತಿಯಲ್ಲಿವೆ)
    * ಎಸ್‍ಪಿಎಸ್‍ಎಫ್ ಜೊತೆಗೆ ಚೀನಾದ ಅPIS ಬಳಕೆಗೂ ಚಿಂತನೆ (2015ರಿಂದ ಷಾಂಘೈ ಕೇಂದ್ರವಾಗಿ ಕಾರ್ಯ, ಇದರ ವ್ಯಾಪ್ತಿಯಲ್ಲಿ 103 ದೇಶಗಳ 1280 ಬ್ಯಾಂಕ್ ಸ್ವಿಫ್ಟ್ ಗೆ ಹೋಲಿಸಿದ್ರೆ 10 ಪಟ್ಟು ಚಿಕ್ಕದು)
    * ವೀಸಾ, ಮಾಸ್ಟರ್ ಕಾರ್ಡ್ ಬದಲು ಚೀನಾದ `ಯೂನಿಯನ್ ಪೇ’ ಬಳಕೆ ಪ್ಲಾನ್ (180 ದೇಶಗಳಲ್ಲಿ ಬಳಕೆಯಲ್ಲಿದೆ)

    ದಿಗ್ಬಂಧನ ದೇಶಗಳ ಲೆಕ್ಕ
    * ರಷ್ಯಾ – 5552 (ಫೆ.22ಕ್ಕೆ ಮೊದಲು 2754 ಇತ್ತು)
    * ಇರಾನ್ – 3616
    * ಸಿರಿಯಾ – 3608
    * ಉತ್ತರ ಕೊರೀಯಾ -2077
    * ವೆನಿಜುಯೆಲಾ – 651
    * ಮಯನ್ಮಾರ್ – 510
    * ಕ್ಯೂಬಾ – 208

  • ಉಕ್ರೇನ್‍ನ ಸುಮಿ ಮೇಲೆ ಬಾಂಬ್ ಸುರಿಮಳೆ- ಚೆರ್ನಿಹೀವ್ ಮೇಲೆ 500 ಕೆಜಿ ಬಾಂಬ್, ಸ್ಫೋಟ ಇಲ್ಲ

    ಉಕ್ರೇನ್‍ನ ಸುಮಿ ಮೇಲೆ ಬಾಂಬ್ ಸುರಿಮಳೆ- ಚೆರ್ನಿಹೀವ್ ಮೇಲೆ 500 ಕೆಜಿ ಬಾಂಬ್, ಸ್ಫೋಟ ಇಲ್ಲ

    ಕೀವ್: ಉಕ್ರೇನ್-ರಷ್ಯಾ ನಡುವಿನ ಯುದ್ಧ 13ನೇ ದಿನ ಪೂರೈಸಿದೆ. ರಷ್ಯಾ ಪಡೆಗಳು ಮಾರಣಹೋಮವನ್ನೇ ಸೃಷ್ಟಿಸ್ತಿವೆ. ಯುದ್ಧದ ನಿಯಮಗಳನ್ನು ಉಲ್ಲಂಘಿಸಿ ಜನವಸತಿ ಪ್ರದೇಶಗಳ ಮೇಲೆ ಬಾಂಬ್‍ಗಳ ಸುರಿಮಳೆಗೈಯ್ಯುತ್ತಿದೆ.

    ಖಾರ್ಕೀವ್, ಸುಮಿ ನಗರಗಳ ಮೇಲೆ ಭೂಮಿ, ಆಕಾಶಗಳಿಂದ ಗುಂಡಿನ ಮಳೆಗರೆದಿದೆ. ಈ ನಗರಗಳು ಸ್ಮಶಾನ ಸದೃಶವಾಗಿ ಮಾರ್ಪಟ್ಟಿವೆ. ಸಾವು ನೋವಿನ ಖಚಿತ ಅಂಕಿ-ಅಂಶಗಳು ಸಿಗುತ್ತಿಲ್ಲ. ಇದೇ ವೇಳೆ ಕೀವ್, ಚೆರ್ನಿಹೀವ್, ಮೈಕೋಲೈವ್, ಓಲ್ವಿಯಾ ನಗರಗಳ ಮೇಲೆ ಹಿಡಿತ ಸಾಧಿಸಲು ಇನ್ನಿಲ್ಲದ ಪ್ರಯತ್ನವನ್ನು ಮಾಡ್ತಿದೆ. ಚೆರ್ನಿಹೀವ್ ನಗರದ ಮೇಲೆ 500 ಕೆಜಿ ತೂಕದ ಬಾಂಬ್ ಹಾಕಿದೆ. ಅದೃಷ್ಟವಶಾತ್ ಅದು ಸ್ಫೋಟಿಸಿಲ್ಲ. ಇದನ್ನೂ ಓದಿ: ಅಜ್ಜಿ ತವರು ಉಕ್ರೇನ್‌ಗೆ 77.07 ಕೋಟಿ ನೆರವು ನೀಡಿದ ʼಟೈಟಾನಿಕ್‌ʼ ಹೀರೋ

    ಈಗಾಗಲೇ ಖೇರ್ಸಾನ್, ಬುಚಾ, ವೋರ್ಡಲ್, ಹೋಸ್ಟಾಮೆಲ್, ಜಪೋರಿಜಿಯಾ ಪ್ರಾಂತ್ಯದ ಆರು ನಗರಗಳನ್ನು ರಷ್ಯಾ ತನ್ನ ವಶಕ್ಕೆ ತೆಗೆದುಕೊಂಡಿದೆ. ಬ್ರಿಟನ್ ಪ್ರಕಾರ, ರಷ್ಯಾ ಈಗಾಗಲೇ ಉಕ್ರೇನ್‍ನ ಅರ್ಧ ಭಾಗವನ್ನು ವಶಕ್ಕೆ ತೆಗೆದುಕೊಂಡಿದೆ. ಕೀವ್ ಹೊರವಲಯದಲ್ಲಿ 65 ಕಿಲೋಮೀಟರ್ ಉದ್ದದಷ್ಟು ರಷ್ಯಾ ಪಡೆಗಳು ನಿಂತಿವೆ. ಜೊತೆಗೆ ಗಡಿಯಲ್ಲಿ ಬೀಡುಬಿಟ್ಟಿದ್ದ ರಷ್ಯಾದ 95 ಸಾವಿರ ಸೈನಿಕರು ಇದೀಗ ಉಕ್ರೇನ್‍ಗೆ ಎಂಟ್ರಿ ಕೊಟ್ಟಿದ್ದಾರೆ. ಉಕ್ರೇನ್ ಕೂಡ ವಿರೋಚಿತ ಹೋರಾಟ ಮುಂದುವರಿಸಿದೆ. ಇದನ್ನೂ ಓದಿ: ನಿರ್ಬಂಧಕ್ಕೆ ಒಳಪಟ್ಟ ದೇಶಗಳ್ಯಾವುವು? ಕಾರಣ ಏನು? ಪಟ್ಟಿಯಲ್ಲಿ ರಷ್ಯಾ ನಂ.1

    ಕೀವ್, ಖಾರ್ಕೀವ್, ಚೆರ್ನಿಹೀವ್, ಸುಮಿಯಂತಹ ನಗರಗಳನ್ನು ತನ್ನ ನಿಯಂತ್ರಣದಲ್ಲೇ ಉಳಿಸಿಕೊಂಡಿದೆ. ರಷ್ಯಾದ ದಾಳಿಯನ್ನು ಸಮರ್ಥವಾಗಿ ಹಿಮ್ಮೆಟ್ಟಿಸುತ್ತಿದೆ. ಖಾರ್ಕೀವ್ ಬಳಿ ಏರ್‍ಫೀಲ್ಡ್‍ನಲ್ಲಿದ್ದ ರಷ್ಯಾದ 30ಕ್ಕೂ ಹೆಚ್ಚು ಹೆಲಿಕಾಪ್ಟರ್‍ಗಳನ್ನು ಧ್ವಂಸ ಮಾಡಿದೆ. 12 ಸಾವಿರ ಯೋಧರನ್ನು ಕೊಂದಿರೋದಾಗಿ ಘೋಷಿಸಿದೆ. ಇದು ರಷ್ಯಾ ಸೇನೆಯ ಮಾನಸಿಕ ಸ್ಥೈರ್ಯವನ್ನು ಕುಗ್ಗಿಸುತ್ತಿದೆ ಎನ್ನಲಾಗಿದೆ. ಈ ಮಧ್ಯೆ ಇಂದು ಕೂಡ ಕೀವ್, ಸುಮಿ ಸೇರಿ ಐದು ನಗರಗಳಲ್ಲಿ ರಷ್ಯಾ ತಾತ್ಕಾಲಿಕ ಕದನ ವಿರಾಮ ಘೋಷಿಸಿತ್ತು. ಆದ್ರೇ, ಮಾನವೀಯ ಕಾರಿಡಾರ್‍ಗಳು ರಷ್ಯಾ-ಬೆಲಾರಸ್ ಕಡೆಗೆ ಸಾಗಿರುವುದನ್ನು ಉಕ್ರೇನ್ ವಿರೋಧಿಸ್ತಿದೆ. ಜೊತೆಗೆ ಲಕ್ಷಾಂತರ ನಾಗರಿಕರನ್ನು ರಷ್ಯಾ ನಿರ್ಬಂಧಿಸಿದೆ ಎಂದು ಉಕ್ರೇನ್ ಆರೋಪಿಸಿದೆ. ಇದನ್ನೂ ಓದಿ: 24 ಗಂಟೆಯೊಳಗೆ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ: ಇಮ್ರಾನ್‌ ಖಾನ್‌ಗೆ ಗಡುವು

  • ಅಜ್ಜಿ ತವರು ಉಕ್ರೇನ್‌ಗೆ 77.07 ಕೋಟಿ ನೆರವು ನೀಡಿದ ʼಟೈಟಾನಿಕ್‌ʼ ಹೀರೋ

    ಅಜ್ಜಿ ತವರು ಉಕ್ರೇನ್‌ಗೆ 77.07 ಕೋಟಿ ನೆರವು ನೀಡಿದ ʼಟೈಟಾನಿಕ್‌ʼ ಹೀರೋ

    ಕೀವ್: ʻಟೈಟಾನಿಕ್‌ʼ ಸಿನಿಮಾ ಖ್ಯಾತಿಯ ಹೀರೋ, ಹಾಲಿವುಡ್‌ ನಟ ಲಿಯೊನಾರ್ಡೊ ಡಿಕ್ಯಾಪ್ರಿಯೊ ತನ್ನ ಅಜ್ಜಿ ತವರು ಉಕ್ರೇನ್‌ಗೆ 77.07 ಕೋಟಿ (10 ಮಿಲಿಯನ್‌ ಡಾಲರ್‌) ನೆರವು ನೀಡಿದ್ದಾರೆ.

    ಲಿಯೊನಾರ್ಡೊ ಅಜ್ಜಿ ಹೆಲೆನ್ ಇಂಡೆನ್‌ಬಿರ್ಕೆನ್ ಅವರು ಉಕ್ರೇನ್‌ ಮೂಲದವರು. ಉಕ್ರೇನ್‌ನ ಒಡೆಸ್ಸಾದಲ್ಲಿ ಜನಿಸಿದ್ದ ಅವರು 1917ರಲ್ಲಿ ತನ್ನ ಪೋಷಕರೊಂದಿಗೆ ಜರ್ಮನಿಗೆ ವಲಸೆ ಹೋಗಿದ್ದರು.  ಇದನ್ನೂ ಓದಿ: ನಿರ್ಬಂಧಕ್ಕೆ ಒಳಪಟ್ಟ ದೇಶಗಳ್ಯಾವುವು? ಕಾರಣ ಏನು? ಪಟ್ಟಿಯಲ್ಲಿ ರಷ್ಯಾ ನಂ.1

    ಹೆಲೆನ್‌ 1943ರಲ್ಲಿ ಜರ್ಮನಿಯಲ್ಲಿ ಲಿಯೊನಾರ್ಡೊ ತಾಯಿ ಇರ್ಮೆಲಿನ್‌ಗೆ ಜನ್ಮ ನೀಡಿದರು. ಇರ್ಮೆಲಿನ್‌ ಅವರು ಲಿಯೊನಾರ್ಡೊ ತಂದೆ ಜಾರ್ಜ್‌ ಡಿಕ್ಯಾಪ್ರಿಯೊ ಅವರಿಂದ ವಿಚ್ಛೇದನ ಪಡೆದರು. ನಂತರ ಲಿಯೊನಾರ್ಡೊ ತನ್ನ ಅಜ್ಜಿ ಹೆಲೆನ್‌ ಅವರೊಟ್ಟಿಗೆ ಬೆಳೆದರು. ಲಿಯೊನಾರ್ಡೊ ಅವರ ನಟನಾ ಪ್ರತಿಭೆಯನ್ನು ಅಜ್ಜಿ ಪೋಷಿಸಿದರಲ್ಲದೇ, ಅವರ ನಟನಾ ವೃತ್ತಿಯನ್ನು ಬೆಂಬಲಿಸಿದರು. 2008ರಲ್ಲಿ ತಮ್ಮ 93ನೇ ವಯಸ್ಸಿನಲ್ಲಿ ಹೆಲೆನ್‌ ಅವರು ನಿಧನರಾದರು.

    ಲಿಯೊನಾರ್ಡೊ ಅವರ ತವರು ಉಕ್ರೇನ್‌ಗೆ ಇಂಟರ್‌ನ್ಯಾಷನಲ್‌ ವಿಸೆಗ್ರಾಡ್‌ ಫಂಡ್‌ ಮೂಲಕ ಘೋಷಿಸಲಾಗಿದೆ. ಪೂರ್ವ ಯೂರೋಪ್‌ ಅಭಿವೃದ್ಧಿಯನ್ನು ಉತ್ತೇಜಿಸುವ ಅಂತಾರಾಷ್ಟ್ರೀಯ ಉಪಕ್ರಮಗಳಿಗೆ ಹಣಕಾಸಿನ ನೆರವು ನೀಡುವ ಗುರಿಯನ್ನು ವಿಸೆಗ್ರಾಡ್‌ ಗ್ರೂಪ್‌ ಯೋಜನೆ ಹೊಂದಿದೆ. ಇದನ್ನೂ ಓದಿ: ನಾನು ಅಡಗಿಕೊಂಡಿಲ್ಲ, ಯಾರಿಗೂ ಹೆದರುವುದಿಲ್ಲ, ನಮ್ಮ ದೇಶಭಕ್ತಿ ಗೆಲ್ಲುತ್ತೆ: ಝೆಲೆನ್ಸ್ಕಿ

    ಲಿಯೊನಾರ್ಡೊ ಬೆನ್ನಲ್ಲೇ ಅನೇಕ ನಟ-ನಟಿಯರು, ನಿರ್ದೇಶಕರು ಸಹ ಉಕ್ರೇನ್‌ಗೆ ಆರ್ಥಿಕ ನೆರವು ನೀಡುವುದಾಗಿ ಘೋಷಿಸಿದ್ದಾರೆ. ರಿಯಾನ್ ರೆನಾಲ್ಡ್ಸ್ ಮತ್ತು ಬ್ಲೇಕ್ ಲೈವ್ಲಿ ಅವರು ಹಣಕಾಸಿನ ನೆರವು ನೀಡುವುದಾಗಿ ತಿಳಿಸಿದ್ದಾರೆ. ಮಿಲಾ ಕುನಿಸ್‌ ಮತ್ತು ಆಷ್ಟನ್‌ ಕಚ್ಚರ್‌ ಅವರು ಉಕ್ರೇನ್‌ನಲ್ಲಿ ಮಾನವೀಯ ಚಟುವಟಿಕೆಗಳು ಹಾಗೂ ಉಕ್ರೇನಿಯನ್‌ ನಿರಾಶ್ರಿತರ ಪುನರ್ವಸತಿಗಾಗಿ 23.09 ಕೋಟಿ (3 ಮಿಲಿಯನ್‌ ಡಾಲರ್) ದೇಣಿಗೆ ನೀಡುವುದಾಗಿ ಘೋಷಿಸಿದ್ದಾರೆ.

  • ಸಾರ್ವಜನಿಕರ ಹಿತಾಸಕ್ತಿಗೆ ಅನುಗುಣವಾಗಿ ಇಂಧನ ಬೆಲೆ ನಿರ್ಧಾರ: ಪೆಟ್ರೋಲಿಯಂ ಸಚಿವ

    ಸಾರ್ವಜನಿಕರ ಹಿತಾಸಕ್ತಿಗೆ ಅನುಗುಣವಾಗಿ ಇಂಧನ ಬೆಲೆ ನಿರ್ಧಾರ: ಪೆಟ್ರೋಲಿಯಂ ಸಚಿವ

    ನವದೆಹಲಿ: ಉಕ್ರೇನ್‌ ವಿರುದ್ಧ ರಷ್ಯಾ ನಡೆಸುತ್ತಿರುವ ಯುದ್ಧದ ಪರಿಣಾಮ ಭಾರತದ ಮೇಲೂ ಬೀರಿದ್ದು, ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಏರಿಕೆಯಾಗಲಿದೆ ಎಂಬ ಬಗ್ಗೆ ವ್ಯಾಪಕ ಚರ್ಚೆಯಾಗುತ್ತಿದೆ. ಇದರ ಬೆನ್ನಲ್ಲೇ ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ಕುರಿತು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್‌ ಸಿಂಗ್‌ ಪುರಿ ಪ್ರತಿಕ್ರಿಯಿಸಿದ್ದಾರೆ.

    ಸಾರ್ವಜನಿಕರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಇಂಧನ ಬೆಲೆಗಳ ಬಗ್ಗೆ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ ಎಂದು ಹರ್ದೀಪ್‌ ಸಿಂಗ್‌ ಪುರಿ ತಿಳಿಸಿದ್ದಾರೆ. ಇದನ್ನೂ ಓದಿ: ಮಹಿಳೆಯರಿಗೆ 33% ಸರ್ಕಾರಿ ಉದ್ಯೋಗ, 200 ಕೋಟಿ ವೆಚ್ಚದಲ್ಲಿ ವಿಶ್ವವಿದ್ಯಾಲಯ ನಿರ್ಮಾಣ: ಅಮಿತ್ ಶಾ

    ತೈಲ ಬೆಲೆಗಳನ್ನು ಜಾಗತಿಕ ಬೆಲೆಗಳಿಂದ ನಿರ್ಧರಿಸಲಾಗುತ್ತದೆ. ದೇಶದ ಒಂದು ಭಾಗದಲ್ಲಿ ಯುದ್ಧದಂತಹ ಪರಿಸ್ಥಿತಿ ಇದೆ. ತೈಲ ಕಂಪನಿಗಳು ಇದಕ್ಕೆ ಕಾರಣವಾಗುತ್ತವೆ. ನಮ್ಮ ನಾಗರಿಕರ ಹಿತದೃಷ್ಟಿಯಿಂದ ನಾವು ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

    ರಾಜಕೀಯವಾಗಿ ನಿರ್ಣಾಯಕ ರಾಜ್ಯಗಳಾದ ಉತ್ತರ ಪ್ರದೇಶ, ಪಂಜಾಬ್, ಉತ್ತರಾಖಂಡ ಮತ್ತು ಗೋವಾ ಹಾಗೂ ಮಣಿಪುರದಲ್ಲಿ ವಿಧಾನಸಭೆ ಚುನಾವಣೆ ಕಾರಣಕ್ಕೆ ಇಂಧನ ಬೆಲೆ ನಿಯಂತ್ರಿಸಿಲ್ಲ. ಚುನಾವಣೆಗಳ ಕಾರಣದಿಂದಾಗಿ ಸರ್ಕಾರವು ತೈಲ ಬೆಲೆಗಳನ್ನು ನಿಯಂತ್ರಿಸಿದೆ ಎಂದು ಹೇಳುವುದು ಸರಿಯಲ್ಲ. ನಮ್ಮ ಸಾಮರ್ಥ್ಯದ ಅವಶ್ಯಕತೆಗಳನ್ನು ಪೂರೈಸುವುದನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ ಎಂದು ವಿಪಕ್ಷಗಳ ಟೀಕೆಗಳಿಗೆ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಕೈಲಾದಷ್ಟು ಹೋರಾಡಿದ್ದೇವೆ, ಫಲಿತಾಂಶವನ್ನು ಕಾದು ನೋಡುತ್ತೇವೆ: ಪ್ರಿಯಾಂಕಾ ಗಾಂಧಿ

    ದೇಶದಲ್ಲಿ ಕಚ್ಚಾ ತೈಲದ ಕೊರತೆಯಾಗುವುದಿಲ್ಲ. ಕಚ್ಚಾ ತೈಲದ ಕೊರತೆಯಾಗುವುದಿಲ್ಲ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ. ನಮ್ಮ ಅವಶ್ಯಕತೆಗಳಲ್ಲಿ 85 ಪ್ರತಿಶತದಷ್ಟು ಕಚ್ಚಾ ತೈಲದ ಆಮದು ಮತ್ತು 50-55 ಪ್ರತಿಶತ ಅನಿಲದ ಮೇಲೆ ಅವಲಂಬಿತವಾಗಿದ್ದರೂ, ನಮ್ಮ ಶಕ್ತಿಯ ಅವಶ್ಯಕತೆಗಳನ್ನು ಪೂರೈಸಲಾಗಿದೆಯೇ ಎಂದು ನಾವು ಖಚಿತಪಡಿಸಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

    ರಷ್ಯಾ-ಉಕ್ರೇನ್‌ ಯುದ್ಧದ ಪರಿಣಾಮವಾಗಿ ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ಏರಿಕೆಯಾಗುತ್ತಿದೆ. ಬ್ರೆಂಟ್‌ ಕಚ್ಚಾ ತೈಲವು ಬ್ಯಾರೆಲ್‌ಗೆ 126 ಡಾಲರ್‌ ತಲುಪಿದೆ. ಇದನ್ನೂ ಓದಿ: ಏಕಾಂಗಿಯಾಗಿ ಉಕ್ರೇನ್ ಗಡಿಗೆ ಪ್ರಯಾಣಿಸಿದ 11 ವರ್ಷದ ಬಾಲಕ

  • ಉಕ್ರೇನ್‌ನಿಂದ ಬಂದ ಕರ್ನಾಟಕ ವಿದ್ಯಾರ್ಥಿಗಳ ಭವಿಷ್ಯ ಏನು?: ವಿಧಾನಸಭೆಯಲ್ಲಿ ಖಾದರ್ ಪ್ರಸ್ತಾಪ

    ಉಕ್ರೇನ್‌ನಿಂದ ಬಂದ ಕರ್ನಾಟಕ ವಿದ್ಯಾರ್ಥಿಗಳ ಭವಿಷ್ಯ ಏನು?: ವಿಧಾನಸಭೆಯಲ್ಲಿ ಖಾದರ್ ಪ್ರಸ್ತಾಪ

    ಬೆಂಗಳೂರು: ಉಕ್ರೇನ್‌ನಿಂದ ಬಂದಿರುವ ಕರ್ನಾಟಕದ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ವಿಧಾನಸಭೆಯಲ್ಲಿ ಪ್ರತಿಪಕ್ಷದ ಉಪ ನಾಯಕ ಯುಟಿ ಖಾದರ್ ಪ್ರಸ್ತಾಪಿಸಿದ್ದಾರೆ.

    ಉಕ್ರೇನ್‌ನಲ್ಲಿ ಹಾವೇರಿ ಮೂಲದ ವಿದ್ಯಾರ್ಥಿ ನವೀನ್‌ನನ್ನು ಕಳೆದುಕೊಂಡಿದ್ದೇವೆ. ಉಕ್ರೇನ್‌ನಿಂದ ಬಂದ ವಿದ್ಯಾರ್ಥಿಗಳ ಮುಂದಿನ ಶೈಕ್ಷಣಿಕ ಭವಿಷ್ಯದ ಬಗ್ಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಖಾದರ್ ಆಗ್ರಹಿಸಿದರು.

    ರಾಜೀವ್ ಗಾಂಧಿ ವಿವಿ ಜೊತೆಗೆ ಸರ್ಕಾರ ಚರ್ಚೆ ಮಾಡಿದರೆ ಪರಿಹಾರ ಸಾಧ್ಯವಿದೆ. ನೀಟ್‌ನಲ್ಲೂ ರಾಜ್ಯದ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ ಎಂಬ ಭಾವನೆ ಇದೆ. ಇದನ್ನು ಸರ್ಕಾರ ವಿಮರ್ಶೆ ಮಾಡಬೇಕು. 1,000 ರ‍್ಯಾಂಕ್‌ಗಳಲ್ಲಿ 50 ವಿದ್ಯಾರ್ಥಿಗಳು ಕೂಡಾ ನಮ್ಮ ರಾಜ್ಯದವರಲ್ಲ. ನಮ್ಮ ವಿದ್ಯಾರ್ಥಿಗಳಲ್ಲಿ ಇಷ್ಟು ಟ್ಯಾಲೆಂಟ್ ಇದ್ದರೂ ಏಕೆ ಸಿಗುತ್ತಿಲ್ಲ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಐದು ವಲಯಗಳಲ್ಲಿ ಟೌನ್‍ಶಿಪ್ ನಿರ್ಮಾಣ: ಮುರುಗೇಶ್ ನಿರಾಣಿ

    ನೀಟ್‌ನಿಂದ ಪಿಯುಸಿ ವಿದ್ಯಾಭ್ಯಾಸ ವಿಚಾರವಾಗಿ ತಲೆ ಕೆಡಿಸಿಕೊಳ್ಳುತ್ತಿಲ್ಲ. ಎರಡು ವರ್ಷ ಕಲಿತರು ಝಿರೋ ವ್ಯಾಲ್ಯೂ ಇದೆ. ಶ್ರೀಮಂತರ ಮಕ್ಕಳು ಎರಡು ವರ್ಷ ನೀಟ್‌ಗೆ ಗಮನ ಕೊಡುತ್ತಾರೆ ವಿನಃ ಪಿಯುಸಿ ಕಲಿಯುವುದಿಲ್ಲ. ಮುಂದಿನ ದಿನಗಳಲ್ಲಿ ಶೇ.50 ಪಿಯುಸಿ ಹಾಗೂ ಶೇ.50 ನೀಟ್ ಪರಿಗಣಿಸಿದರೆ ಒಳ್ಳೆಯದು. ಈ ಬಗ್ಗೆ ಉನ್ನತ ಮಟ್ಟದ ಚರ್ಚೆ ಆಗಬೇಕು ಎಂದು ಖಾದರ್ ಆಗ್ರಹಿಸಿದರು.

    ಯುಟಿ ಖಾದರ್ ಪ್ರಶ್ನೆಗೆ ಸಚಿವ ಡಾ. ಕೆ ಸುಧಾಕರ್ ಉತ್ತರಿಸಿದರು. ವೈದ್ಯಕೀಯ ಶಿಕ್ಷಣ ನೀತಿ ರೂಪಿಸುವುದು ನ್ಯಾಷನಲ್ ಮೆಡಿಕಲ್ ಕೌನ್ಸಿಲ್. ನೀಟ್ ಮಾರ್ಪಾಡು ಮಾಡಲು ರಾಜ್ಯ ಸರ್ಕಾರಕ್ಕೆ ಯಾವುದೇ ಅವಕಾಶ ಇಲ್ಲ. ಉಕ್ರೇನ್‌ನಲ್ಲಿ ದೇಶದ 20,000 ವಿದ್ಯಾರ್ಥಿಗಳು ಇದ್ದಾರೆ. ಕೀವ್, ಖಾರ್ಕೀವ್‌ನಲ್ಲಿದ್ದ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರಲಾಗಿದೆ. ಉಳಿದ ಎರಡು ನಗರಗಳಲ್ಲಿ ಇರುವ ಮಕ್ಕಳನ್ನು ಕರೆತರುವ ಪ್ರಯತ್ನ ನಡೆಸಲಾಗುತ್ತಿದೆ ಎಂದರು. ಇದನ್ನೂ ಓದಿ: ನನ್ನ ದಾರಿ ತಪ್ಪಿಸಲು ಈಶ್ವರಪ್ಪ ಜಗಳ ಮಾಡುಬೇಕು ಅಂತಾ ಬರ್ತಾರೆ: ಸಿದ್ದರಾಮಯ್ಯ ಹಾಸ್ಯ ಚಟಾಕಿ

    ಉಕ್ರೇನ್‌ನಿಂದ ಬಂದವರ ಶಿಕ್ಷಣದ ಭವಿಷ್ಯದ ಬಗ್ಗೆ ರಾಜೀವ್ ಗಾಂಧಿ ವಿವಿ ಉಪ ಕುಲಪತಿ ಜೊತೆಗೆ ಸಭೆ ನಡೆಸಲಾಗಿದೆ. ನಾವು ಇಲ್ಲಿ ಯಾವ ರೀತಿ ನ್ಯಾಷನಲ್ ಮೆಡಿಕಲ್ ಕೌನ್ಸಿಲ್‌ನಲ್ಲಿ ನೀಟ್‌ಗೆ ಶಿಫಾರಸು ಮಾಡಬೇಕು ಎಂದು ಚರ್ಚೆ ನಡೆಸಿದ್ದೇವೆ. ನೀಟ್ ಕೋಚಿಂಗ್ ವಿದ್ಯಾರ್ಥಿಗಳಿಗೆ ಸರ್ಕಾರವೇ ಕೊಡುವ ನಿಟ್ಟಿನಲ್ಲಿ ತೀರ್ಮಾನ ಮಾಡಿದೆ. ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಶೇ.50 ಸರ್ಕಾರಿ ಫೀಸ್ ತೆಗೆದುಕೊಳ್ಳುವಂತೆ ಪ್ರಧಾನಿ ಕೂಡಾ ಘೋಷಣೆ ಮಾಡಿದ್ದಾರೆ ಎಂದು ಸುಧಾಕರ್ ಸ್ಪಷ್ಟನೆ ನೀಡಿದರು.

  • ಎಲ್ಲೆಂದರಲ್ಲಿ ಕಾಣಿಸುತ್ತಿದೆ Z ಸಿಂಬಲ್ – ಇದು ರಷ್ಯಾದ ಯುದ್ಧದ ಸಂಕೇತ!

    ಎಲ್ಲೆಂದರಲ್ಲಿ ಕಾಣಿಸುತ್ತಿದೆ Z ಸಿಂಬಲ್ – ಇದು ರಷ್ಯಾದ ಯುದ್ಧದ ಸಂಕೇತ!

    ಕೀವ್: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್ ಮೇಲೆ ಯುದ್ಧ ಘೋಷಿಸಿದಾಗಿನಿಂದ ಅಲ್ಲಿನ ಹಲವು ಕಟ್ಟಡಗಳಲ್ಲಿ, ವಾಹನಗಳಲ್ಲಿ ಕೆಲವು ನಿಗೂಢ ಸಂಕೇತಗಳು ಮೂಡುತ್ತಿವೆ. ಇದೀಗ ಉಕ್ರೇನ್ ಗಡಿ ಬಳಿಯಲ್ಲಿರುವ ರಷ್ಯಾದ ಟ್ಯಾಂಕ್, ಮಿಲಿಟರಿ ಟ್ರಕ್‌ಗಳಲ್ಲಿ Z ಗುರುತು ಕಾಣಿಸುತ್ತಿವೆ.

    ಇಲ್ಲಿಯವರೆಗೆ ವಾಹನ ಹಾಗೂ ಮಿಲಿಟರಿ ಯಂತ್ರಗಳಲ್ಲಿ ಕೇವಲ Z ಚಿನ್ಹೆ ಮಾತ್ರ ಇರದೇ O, X, A, V ಚಿನ್ಹೆಗಳೂ ಕಾಣಿಸಿಕೊಂಡಿದ್ದವು. ಆದರೆ ಈ ಚಿನ್ಹೆಗಳ ಹಿನ್ನೆಲೆ ಏನು, ಇದನ್ನು ಏಕೆ ಬರೆಯಲಾಗುತ್ತದೆ ಎಂದು ಹೆಚ್ಚಿನವರಿಗೆ ತಿಳಿದಿಲ್ಲ.

    ಇನ್‌ಸ್ಟಾಗ್ರಾಮ್ ಹಾಗೂ ಟ್ವಿಟ್ಟರ್‌ಗಳಲ್ಲಿ ಹಲವರು ಈ ನಿಗೂಢ ಸಂಕೇತಗಳ ಬಗೆಗೆ ವಿವರಿಸಿದ್ದಾರೆ. ಹಲವರು ತಮ್ಮ ತಮ್ಮ ಅಭಿಪ್ರಾಯ ಹಾಗೂ ವ್ಯಾಖ್ಯಾನ ನೀಡಿದ್ದಾರೆ. ಇದನ್ನೂ ಓದಿ: Russia-Ukraine War – ಏನಿದು ರಷ್ಯಾ ಟ್ಯಾಂಕರ್‌ಗಳ ಮೇಲೆ Z ಮಾರ್ಕ್?

    Z ಎಂದರೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸಿ ಹಾಗೂ V ಎಂದರೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಎಂದು ಕೆಲವರು ಅಭಿಪ್ರಾಯ ಪಟ್ಟಿದ್ದಾರೆ. ತಮ್ಮ ತಮ್ಮ ಪಡೆಗಳನ್ನು ಗುರುತಿಸಲು ಈ ರೀತಿಯಾಗಿ ಸಂಕೇತಗಳನ್ನು ಬರೆಯಲಾಗಿದೆ ಎನ್ನಲಾಗುತ್ತಿದೆ. ಕುತೂಹಲಕಾರಿ ಸಂಗತಿಯೆoದರೆ  ಸಿರಿಲಿಕ್ ರಷ್ಯನ್ ವರ್ಣಮಾಲೆಯಲ್ಲಿ Z ಹಾಗೂ V ಅಕ್ಷರಗಳೇ ಅಸ್ಥಿತ್ವದಲ್ಲಿ ಇಲ್ಲ.

    ಇನ್ನೂ ಕೆಲವರು ರಷ್ಯಾದ ಪಡೆಗಳು ಪರಸ್ಪರ ದಾಳಿಯಿಂದ ರಕ್ಷಿಸಿಕೊಳ್ಳಲು ತಮ್ಮ ಟ್ಯಾಂಕ್‌ಗಳಲ್ಲಿ ಈ ರೀತಿಯ ಅಕ್ಷರಗಳನ್ನು ಬರೆಯುತ್ತಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ: ವಸತಿ ಕಟ್ಟಡಗಳ ಮೇಲೆ ಎಕ್ಸ್ ಗುರುತಿನ ಚಿಹ್ನೆ- ಕಟ್ಟಡ ತೊರೆಯುವಂತೆ ಅಧಿಕಾರಿಗಳ ಸೂಚನೆ

    ರಷ್ಯಾದ ರಕ್ಷಣಾ ಸಚಿವಾಲಯ ತನ್ನ ಇನ್‌ಸ್ಟಾಗ್ರಾಮ್ ಪುಟದಲ್ಲಿ Z ಹಾಗೂ V ಅಕ್ಷರಗಳ ವಿನ್ಯಾಸದ ಗ್ರಾಫಿಕ್ಸ್ಒಂದನ್ನು ಹಂಚಿಕೊಂಡಿದೆ. ಆದರೆ ಈ ಎರಡು ಅಕ್ಷರಗಳು ಏನನ್ನು ಸೂಚಿಸುತ್ತದೆ ಎಂಬುದರ ಬಗ್ಗೆ ಅಧಿಕೃತವಾಗಿ ಎಲ್ಲಿಯೂ ವಿವರಣೆಗಳನ್ನು ನೀಡಿಲ್ಲ.

    ಒಟ್ಟಿನಲ್ಲಿ Z ಅಕ್ಷರ ರಷ್ಯಾ ಸೈನ್ಯದ ಸಂಕೇತ ಎನ್ನಲಾಗುತ್ತಿದೆ. ದೇಶಾದ್ಯಂತ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಜನರು ಈ ಗುರುತನ್ನು ವ್ಯಾಪಕವಾಗಿ ಬಳಸುತ್ತಿದ್ದಾರೆ. ಕೇವಲ ಯುದ್ಧದ ಟ್ಯಾಂಕ್‌ಗಳಲ್ಲಿ ಮಾತ್ರವಲ್ಲದೇ ನಾಗರಿಕರೂ ತಮ್ಮ ವಾಹನಗಳಲ್ಲಿ ಈ ಸಂಕೇತವನ್ನು ಬಳಸುತ್ತಿರುವುದು ಗಮನಾರ್ಹವಾಗಿದೆ.