ಮುಖ್ಯಾಂಶಗಳು
– ಆಹಾರ ಶಸ್ತ್ರಾಸ್ತ್ರೀಕರಣ
– ಯುದ್ಧ ಪೀಡಿತ ಗಾಜಾ, ಸುಡಾನ್, ಉಕ್ರೇನ್‌ನಲ್ಲಿ ಅಸ್ತ್ರವಾದ ಆಹಾರ
– ಉದ್ದೇಶಪೂರ್ವಕ ಆಹಾರ ಕೊರತೆ ಸೃಷ್ಟಿ
– ಆಹಾರ ಪ್ರವೇಶ ನಿರ್ಬಂಧ
– ಮಿಲಿಟರಿ ಸಂಘರ್ಷಕ್ಕಿಂತ ಹೆಚ್ಚಿನ ಜನ ಇದರಿಂದ ಸಾಯಬಹುದು ಎಂದ ತಜ್ಞರು
ಇಂದಿನ ದಿನಗಳಲ್ಲಿ ಬರಿ ಗನ್, ಯುದ್ಧ ಟ್ಯಾಂಕರ್, ಬಾಂಬ್, ಅಣ್ವಸ್ತ್ರಗಳನ್ನು ಬಳಸಿ ಮಾತ್ರ ಯುದ್ಧ ಮಾಡಲಾಗುತ್ತಿಲ್ಲ. ಅದು ಬದಲಾಗಿ ಹೊಸ ಹೊಸ ತಂತ್ರ, ಕುತಂತ್ರಗಳಿಗೂ ತಿರುಗಿದೆ. ಅದರಲ್ಲಿ ಆಹಾರ (Food) ಆಯುಧೀಕರಣವೂ ಒಂದು. ಹೌದು ಆಹಾರವನ್ನು ಆಯುಧೀಕರಿಸಲಾಗುತ್ತಿದೆ. ಇದಕ್ಕೆ ತಂತ್ರಜ್ಞಾನ, ಜಾಗತೀಕರಣ ಮತ್ತು ರಾಜಕೀಯ ಸಾಥ್ ಕೊಡುತ್ತಿದೆ. ಆಹಾರ ಹೇಗೆ ಯುದ್ಧದಲ್ಲಿ ಆಯುಧವಾಗಿ ಬಳಕೆಯಾಗುತ್ತಿದೆ ಎಂಬುದನ್ನು ಇಲ್ಲಿ ವಿವರಿಸಲಾಗಿದೆ.

ಏನಿದು ಆಹಾರ ಆಯುಧೀಕರಣ?
ಆಹಾರ ಅಗ್ಗದ ಆಯುಧಗಳಲ್ಲಿ ಒಂದಾಗಿದೆ! ಆಹಾರದ ಆಯುಧೀಕರಣ (Weapon) ಎಂದರೆ ಉದ್ದೇಶಪೂರ್ವಕ ಆಹಾರದ ಕೊರತೆಯನ್ನು ಸೃಷ್ಟಿಸುವುದು. ಶತ್ರು ದೇಶಕ್ಕೆ ಸರಬರಾಜಾಗುವ ಆಹಾರದ ಸಾಮಾಗ್ರಿಗಳನ್ನು ಪೂರೈಕೆ ಆಗದಂತೆ ನಿರ್ಬಂಧಿಸುವುದು. ಅಂದರೆ ಆಹಾರ ಸಾಮಾಗ್ರಿಗಳನ್ನು ತಲುಪದಂತೆ ನೆಲ, ಜಲ, ವಾಯು ಗಡಿಯನ್ನು, ಮಾರ್ಗಗಳನ್ನು ಮುಚ್ಚುವುದಾಗಿದೆ. ಇದು ಯುದ್ಧ ಭೂಮಿ ಮಾತ್ರವಲ್ಲದೇ ದೇಶದ ಒಳಗೆ ಇರುವ ಸಾವಿರಾರು, ಲಕ್ಷಾಂತರ ಜನರ ಸಾವಿಗೆ ಕಾರಣ ಆಗಬಹುದು. ಪ್ರಸ್ತುತ ಯುದ್ದ ಪೀಡಿತ ದೇಶಗಳಲ್ಲಿ ಹಸಿವಿನಿಂದಾಗಿ 12 ಕೋಟಿಗಿಂತಲೂ ಹೆಚ್ಚು ಜನರು ಸ್ಥಳಾಂತರಗೊಂಡಿದ್ದಾರೆ. ಸಾವಿರಾರು ಜನ ಸಾವಿಗೀಡಾಗಿದ್ದಾರೆ.

ಸುಡಾನ್‌ನ್ನು ಸುಡುತ್ತಿರುವ ಹಸಿವು
ಸುಡಾನ್‌ನಲ್ಲಿ ಸಶಸ್ತ್ರ ಪಡೆ ಮತ್ತು ಅರೆಸೇನಾ ಪಡೆಗಳ ನಡುವೆ ನಡೆಯುತ್ತಿರುವ ಆಂತರಿಕ ಗಲಭೆಯಿಂದ ಸಾವಿರಾರು ಜನ ಸಾವಿಗೀಡಾಗಿದ್ದಾರೆ. ಈ ಎರಡು ಪಡೆಗಳು ಜನರಿಗೆ ಒದಗಿಸುವ ಸಹಾಯವನ್ನು ನಿರ್ಬಂಧಿಸುತ್ತಿವೆ. ಅಲ್ಲದೇ ಆಹಾರ ಸರಬರಾಜು ಮಾಡುವ ವಾಹನಗಳನ್ನು ನಾಶಮಾಡುತ್ತಿವೆ. ಜನರ ಮೇಲೆ ದಾಳಿ ಮಾಡುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಚಾಡ್‌ನಂತಹ ನೆರೆಯ ದೇಶಗಳಿಗೆ ಅಲ್ಲಿನ ಜನ ಸಾಮೂಹಿಕ ವಲಸೆ ಬಂದಿದ್ದು, ಆಹಾರಕ್ಕಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಉಕ್ರೇನ್ ಕೃಷಿ ಭೂಮಿ ನಾಶ
ಉಕ್ರೇನ್‌ನಲ್ಲಿ (Ukraine) ನಡೆಯುತ್ತಿರುವ ಯುದ್ಧ (War) ಆಹಾರ ಶಸ್ತ್ರಾಸ್ತ್ರೀಕರಣದ ವಾಸ್ತವವನ್ನು ಬಿಚ್ಚಿಟ್ಟಿದೆ. ಇದರ ಪರಿಣಾಮ ಒಮ್ಮೆ ಯುರೋಪಿನ ಬ್ರೆಡ್‌ಬಾಸ್ಕೆಟ್ ಆಗಿದ್ದ ಉಕ್ರೇನ್‌ನ ಕೃಷಿ ಭೂಮಿಯನ್ನು ಈಗ ಗಣಿಯನ್ನಾಗಿ ಪರಿವರ್ತಿಸಿ ದಿಗ್ಬಂಧನ ಮಾಡಲಾಗಿದೆ. ಜಾಗತಿಕ ಧಾನ್ಯ ಪೂರೈಕೆಯನ್ನು ಕಡಿತಗೊಳಿಸಲಾಗಿದೆ. ಇದೇ ರೀತಿಯ ತಂತ್ರಗಳು (Gaza) ಗಾಜಾದಲ್ಲಿ, ಹಮಾಸ್ ವಿರುದ್ಧ ಇಸ್ರೇಲ್ ಮಾಡಿದೆ. ಇಲ್ಲಿಗೆ ಆಹಾರ ಸಾಮಾಗ್ರಿಗಳ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

ಇತಿಹಾಸದುದ್ದಕ್ಕೂ ನಡೆದು ಬಂದ ತಂತ್ರ
ಆಹಾರವನ್ನು ಶಸ್ತ್ರಾಸ್ತ್ರವಾಗಿ ಬಳಸುವುದು ಹೊಸದೇನಲ್ಲ, ಲೆನಿನ್‌ಗ್ರಾಡ್ ಮುತ್ತಿಗೆ (1941–1944) 10 ಲಕ್ಷಕ್ಕಿಂತಲೂ ಹೆಚ್ಚು ನಾಗರಿಕರು ಸಾವಿಗೀಡಾಗಿದ್ದರು. ಬ್ರಿಟಿಷ್ ನೀತಿಗಳಿಂದ 1943ರಲ್ಲಿ ಉಂಟಾದ ಬಂಗಾಳ ಕ್ಷಾಮವು ಲಕ್ಷಾಂತರ ಜನರನ್ನು ಬಲಿ ತೆಗೆದುಕೊಂಡಿತ್ತು.

ನೈಜೀರಿಯಾದ ಬಿಯಾಫ್ರಾನ್ ಯುದ್ಧದ ಸಮಯದಲ್ಲಿ (1967–1970), ಪ್ರತ್ಯೇಕತಾವಾದಿಗಳನ್ನು ದುರ್ಬಲಗೊಳಿಸಲು ಇದೇ ತಂತ್ರ ಬಳಸಲಾಗಿತ್ತು. 1990ರ ಬಾಲ್ಕನ್ ಯುದ್ಧದಲ್ಲಿ ಆಹಾರ ಸರಬರಾಜಿನಿಂದ ಕಡಿತಗೊಳಿಸಲಾಗಿತ್ತು.
ಅಂತರರಾಷ್ಟ್ರೀಯ ಕಾನೂನು ಹೇಳೋದೇನು?
ವಿಶ್ವಸಂಸ್ಥೆ ಸ್ಥಾಪನೆಯಾದ ಬಳಿಕವೂ ಮಾನವ ನಿರ್ಮಿತ ಕ್ಷಾಮ ಮತ್ತು ಹಸಿವಿನಂತ ಬಿಕ್ಕಟ್ಟುಗಳನ್ನು ಪದೇ ಪದೇ ಎದುರಿಸಿದೆ. ಇದರ ನಡುವೆ ಆಹಾರವನ್ನು ತಡೆಹಿಡಿಯುವುದನ್ನು ಅಪರಾಧವೆಂದು ಪರಿಗಣಿಸಲಾಗಿದೆ. ಮಾನವೀಯ ಸಹಾಯಕ್ಕೆ ಅಡ್ಡಿಪಡಿಸುವವರಿಗೆ ಶಿಕ್ಷೆ ವಿಧಿಸುವ ಅಂತರರಾಷ್ಟ್ರೀಯ ಕಾನೂನನ್ನು ಜಾರಿಗೊಳಿಸಲು ತೀರ್ಮಾನಿಸಲಾಗಿದೆ. ಆದರೂ ಇದರ ಜವಾಬ್ಧಾರಿ ಅಸ್ಪಷ್ಟವಾಗಿದೆ.

1998 ರಲ್ಲಿ ಸ್ಥಾಪಿಸಲಾದ ಅಂತರರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯ (ಐಸಿಸಿ) ನಾಗರಿಕರನ್ನು ಉದ್ದೇಶಪೂರ್ವಕವಾಗಿ ಹಸಿವಿನಿಂದ ಬಳಲುವಂತೆ ಮಾಡುವುದನ್ನು ಅಪರಾಧವೆಂದು ಪರಿಗಣಿಸಿದೆ.
ಆಹಾರವನ್ನು ಆಯುಧವಾಗಿ ಬಳಸುವುದು ಅಂತರರಾಷ್ಟ್ರೀಯ ಕಾನೂನಿನಡಿಯಲ್ಲಿ ಕಾನೂನುಬಾಹಿರ ಎಂದು CFR (ವಿದೇಶಾಂಗ ಮಂಡಳಿ) ಕಾನೂನು ತಜ್ಞ ವೆರ್ಜ್ ಮತ್ತು ಡೇವಿಡ್ ಶೆಫರ್ ವಾದಿಸಿದ್ದಾರೆ. ಈ ಸಮಸ್ಯೆಯನ್ನು ಪರಿಹರಿಸಲು, ಆಹಾರ ಭದ್ರತೆಯನ್ನು ಕೇವಲ ಮಾನವೀಯ ಸಮಸ್ಯೆಯಾಗಿ ಮಾತ್ರವಲ್ಲದೇ ಭೌಗೋಳಿಕ ರಾಜಕೀಯವಾಗಿಯೂ ಪರಿಗಣಿಸಬೇಕಾಗಿದೆ. ಅಂತರರಾಷ್ಟ್ರೀಯ ವ್ಯವಹಾರಗಳ ಮೇಲೆ ಹೆಚ್ಚು ಪ್ರಭಾವ ಬೀರುವ ಬಿಕ್ಕಟ್ಟಿನ ಬಗ್ಗೆ ಮಿಲಿಟರಿ ಮತ್ತು ರಾಜತಾಂತ್ರಿಕ ನಾಯಕರು ಯೋಚಿಸುವ ಅಗತ್ಯವಿದೆ.
CFR ಆಫ್ರಿಕಾ ತಜ್ಞೆ ಮಿಚೆಲ್ ಗೇವಿನ್, ರಾಜಕೀಯ ಕಾರಣಗಳಿಗಾಗಿ ಮುಗ್ಧ ನಾಗರಿಕರನ್ನು ಹಸಿವಿನಿಂದ ಸಾಯಿಸುವುದು ನಾಗರಿಕ ಸಮಾಜ ಒಪ್ಪುವಂತಹದ್ದಲ್ಲ. ಇದು ಮಾನವೀಯ ಕಾನೂನಿನ ಉಲ್ಲಂಘನೆಯಾಗಿದೆ ಎಂದು ವಾದಿಸಿದ್ದಾರೆ.
ಆಹಾರದ ಶಸ್ತ್ರಾಸ್ತ್ರೀಕರಣ ಕೊನೆ ಇಂದಿನ ತುರ್ತು
2030ರ ವೇಳೆಗೆ ಶೂನ್ಯ ಹಸಿವಿನ ಗುರಿ ತಲುಪಲು ವಿಶ್ವಸಂಸ್ಥೆ 2015 ರಲ್ಲಿ ಪ್ರತಿಜ್ಞೆ ಮಾಡಿದೆ. ಈ ದಾರಿಯ ಪ್ರಗತಿ ಕುಂಠಿತವಾಗುತ್ತಿದೆ. ಮಾನವ ನಿರ್ಮಿತ ಹಸಿವು ತಡೆಗಟ್ಟಬೇಕಾಗಿರುವುದು ಇಂದಿನ ತುರ್ತಾಗಿ ನಡೆಯಬೇಕಾದ ಕೆಲಸವಾಗಿದೆ. ಯುದ್ಧ ಅಮಾನವೀಯ ಕೃತ್ಯವೆಂದು ಜಗತ್ತು ಗುರುತಿಸಬೇಕು, ಅಪರಾಧಿಗಳನ್ನು ವಿಚಾರಣೆಗೆ ಒಳಪಡಿಸುವ ಕಾರ್ಯವಿಧಾನಗಳನ್ನು ಬಲಪಡಿಸಬೇಕಿದೆ.


















