Tag: Ujjivan Small Finance Bank

  • ಮೈಕ್ರೋ ಫೈನಾನ್ಸ್ ಕಿರುಕುಳ – ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆ ಸಾವು

    ಮೈಕ್ರೋ ಫೈನಾನ್ಸ್ ಕಿರುಕುಳ – ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆ ಸಾವು

    – ಮಿಮ್ಸ್ ಶವಗಾರಕ್ಕೆ ಡಿಸಿ ಡಾ.ಕುಮಾರ್ ಭೇಟಿ

    ಮಂಡ್ಯ: ಮೈಕ್ರೋ ಫೈನಾನ್ಸ್ (Microfinance) ಕಿರುಕುಳ ಹಿನ್ನೆಲೆ ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

    ಮಂಡ್ಯ (Mandya) ಜಿಲ್ಲೆಯ ಮಳವಳ್ಳಿ ತಾಲೂಕಿನ ಕೊನ್ನಾಪುರ ಗ್ರಾಮದ ಪ್ರೇಮಾ (59) ಮೃತ ಮಹಿಳೆ.

    ಉಜ್ಜೀವನ್ ಬ್ಯಾಂಕ್‍ನಿಂದ (Ujjivan Small Finance Bank) ಪ್ರೇಮ 6 ಲಕ್ಷ ರೂ. ಸಾಲ ಪಡೆದಿದ್ದರು. ಈಗಾಗಲೇ 6 ಲಕ್ಷ ರೂ. ಹಣವನ್ನು ಕಟ್ಟಿದ್ದರು. ಇನ್ನೂ 6 ಲಕ್ಷ ರೂ. ಹಣ ಕಟ್ಟಬೇಕೆಂದು ಪೀಡಿಸುತ್ತಿದ್ದ ಉಜ್ಜೀವನ್ ಸಿಬ್ಬಂದಿ, ಪ್ರೇಮಾ ಮನೆ ಸೀಜ್ ಮಾಡಿದ್ದರು. ಇದರಿಂದ ಮನನೊಂದು ನಿನ್ನೆ (ಮಂಗಳವಾರ) ಕ್ರಿಮಿನಾಶಕ ಸೇವನೆ ಮಾಡಿ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದರು.

    ಪ್ರೇಮಾರನ್ನು ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು (ಬುಧವಾರ) ಚಿಕಿತ್ಸೆ ಫಲಕಾರಿಯಾಗದೇ ಪ್ರೇಮಾ ಸಾವನ್ನಪ್ಪಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸದ್ಯ ಪ್ರೇಮ ಮೃತದೇಹವನ್ನು ಮಿಮ್ಸ್ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದೆ.

    ಮೃತ ಪ್ರೇಮ ಮಗಳು ಮಾಣಿಕ್ಯ ಮಾಧ್ಯಮಗಳೊಂದಿಗೆ ಮಾತನಾಡಿ, ನಮ್ಮ ತಾಯಿ ಸಾವಿಗೆ ಉಜ್ಜೀವನ್ ಬ್ಯಾಂಕ್ ಸಿಬ್ಬಂದಿಯೇ ಕಾರಣ. 2018ರಲ್ಲಿ ನಮ್ಮ ತಾಯಿ 6 ಲಕ್ಷ ರೂ. ಸಾಲ ತೆಗೆದುಕೊಂಡಿದ್ದರು. ಇಲ್ಲಿಯವರೆಗೆ 6 ಲಕ್ಷ ರೂ. ಹಣವನ್ನು ನಮ್ಮ ತಾಯಿ ಕಟ್ಟಿದ್ದಾರೆ. ಕಟ್ಟಿರುವ ಹಣವನ್ನು ಬಡ್ಡಿಗೆ ಜಮೆ ಮಾಡಿಕೊಂಡಿದ್ದಾರೆ. ಇನ್ನೂ 6 ಲಕ್ಷ ಕಟ್ಟಿ ಅಂತಾ ಹಿಂಸೆ ಕೊಡುತ್ತಿದ್ದರು. ಮನೆ ಹತ್ತಿರ ಬಂದು ಗಲಾಟೆ ಮಾಡಿ ಮನೆ ಸೀಜ್ ಮಾಡಿದ್ದಾರೆ. ಇದಕ್ಕೆ ಮನನೊಂದು ಕ್ರಿಮಿನಾಶಕ ಮಾತ್ರೆ ಸೇವಿಸಿದ್ದಾರೆ. ಈಗ ನಮ್ಮ ತಾಯಿಯನ್ನು ಕಳೆದುಕೊಂಡಿದ್ದೇವೆ. ನಮಗೆ ಯಾರು ದಿಕ್ಕು ಎಂದು ಅಳಲು ತೋಡಿಕೊಂಡರು.

    ಈ ಹಿನ್ನೆಲೆ ಮಿಮ್ಸ್ ಶವಗಾರಕ್ಕೆ ಡಿಸಿ ಡಾ.ಕುಮಾರ್ ಭೇಟಿ ನೀಡಿದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿ, ಮೃತ ಪ್ರೇಮಾ ಉಜ್ಜೀವನ್ ಬ್ಯಾಂಕ್‍ನಿಂದ 6 ಲಕ್ಷ ರೂ.ಸಾಲ ತೆಗೆದುಕೊಂಡಿದ್ದಾರೆ. ಮಗಳ ಮದುವೆಗೆ ಪ್ರೇಮ ಸಾಲ ಮಾಡಿದ್ದರು. ಸಾಲ ತೆಗೆದುಕೊಂಡು ಕಂತು ಕಟ್ಟಿಕೊಂಡು ಬಂದಿದ್ದರು. ಕಳೆದ ಮೂರು ತಿಂಗಳು ಅವರು ಕಂತು ಕಟ್ಟಿಲ್ಲ. ಹೀಗಾಗಿ ಉಜ್ಜೀವನ್ ಬ್ಯಾಂಕ್ ಅವರು ಕೋರ್ಟ್‍ನಿಂದ ಮನೆ ಜಪ್ತಿ ಮಾಡಲು ಆರ್ಡರ್ ತಂದಿದ್ದಾರೆ. ನಂತರ ಬ್ಯಾಂಕ್ ಅವರು ಮನೆಯನ್ನು ಜಪ್ತಿ ಮಾಡಿದ್ದಾರೆ. ಇದಕ್ಕೆ ಮನನೊಂದು ಪ್ರೇಮ ಆತ್ಮಹತ್ಯೆ ಮಾಡಿಕೊಂಡಿರೋದು ದುರ್ದೈವ ಎಂದು ವಿಷಾದ ವ್ಯಕ್ತಪಡಿಸಿದರು.

    ಕೋರ್ಟ್ ಆರ್ಡರ್ ಇರೋದ್ರಿಂದ ನಾವು ಇತಿಮಿತಿಯಲ್ಲಿ ಕೆಲಸ ಮಾಡಬೇಕು. ಜಪ್ತಿ ಮಾಡಿರುವ ಮನೆಯನ್ನು ವಾಪಸ್ ನೀಡಲು ಬ್ಯಾಂಕ್‍ನವರಿಗೆ ಹೇಳಿದ್ದೇನೆ. ಜೊತೆಗೆ ಜಿಲ್ಲಾಡಳಿತದಿಂದ ಪರಿಹಾರದ ಬಗ್ಗೆಯೂ ಚಿಂತಿಸಿದ್ದೇವೆ. ಈಗ ಇವರ ಸಾಲ ಎಷ್ಟಿದೆ ಎಂದು ಬ್ಯಾಂಕ್‍ನವರಿಂದ ಮಾಹಿತಿ ಕೇಳಿದ್ದೇವೆ. ಅವರು ಬಂದು ಮಾಹಿತಿ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.