Tag: UGD

  • ಆಮೆಗತಿಯಲ್ಲಿ ಸಾಗುತ್ತಿದೆ ಯುಜಿಡಿ ಕಾಮಗಾರಿ- ಶಾಸಕ ಸೈಲೆಂಟ್

    ಆಮೆಗತಿಯಲ್ಲಿ ಸಾಗುತ್ತಿದೆ ಯುಜಿಡಿ ಕಾಮಗಾರಿ- ಶಾಸಕ ಸೈಲೆಂಟ್

    – ಶಾಸಕರ ವಿರುದ್ಧ ಸಾರ್ವಜನಿಕರು ಅಸಮಾಧಾನ

    ಕೊಪ್ಪಳ: ಗಂಗಾವತಿ ನಗರಸಭೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಒಳಚರಂಡಿ ನೀರು (ಯುಜಿಡಿ) ಸರಬರಾಜು ಕಾಮಗಾರಿಗೆ ಈಗ 20 ವರ್ಷ ತುಂಬಿದ್ದು, ನಗರಸಭೆ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದಾಗಿ ಕಾಮಗಾರಿ ಪೂರ್ಣಗೊಳ್ಳಲು ಎರಡು ದಶಕಗಳೇ ಬೇಕಾಗಿದೆ. ಈ ಬಗ್ಗೆ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಅವರಿಗೆ ಸಾರ್ವಜನಿಕರು ಸಾಕಷ್ಟು ಬಾರಿ ದೂರು ನೀಡಿದರು. ಆದರೆ ಶಾಸಕರು ಮಾತ್ರ ಸೈಲೆಂಟ್ ಆಗಿದ್ದಾರೆ. ಶಾಸಕರ ಈ ನಡೆ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ ಎಂದು ಸಾರ್ವಜನಿಕ ಆರೋಪ ಮಾಡುತ್ತಿದ್ದಾರೆ.

    ಗಂಗಾವತಿ ನಗರದಲ್ಲಿ ಗುಂಡಿಬಿದ್ದು, ಸಾಕಷ್ಟು ಜನರು ಗಾಯ ಮಾಡಿಕೊಂಡಿದ್ದಾರೆ. ಕಾಮಗಾರಿ ಆಮೆ ಗತಿಯಲ್ಲಿ ನಡೆಯುತ್ತಿದೆ. ಯುಜಿಡಿ ಕೆಲಸ ಕಳೆಪೆ ಕಾಮಗಾರಿ ನಡೆಯುತ್ತಿದೆ. ಶಾಸಕ ಪರಣ್ಣ ಮಾತ್ರ ನನಗೆ ಸಂಬಂಧ ಇಲ್ಲದ ರೀತಿ ವರ್ತಿಸುತ್ತಿರುವುದು ಇದೀಗ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

    ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಕೋಟ್ಯಂತರ ರೂಪಾಯಿ ಅನುದಾನ ಹರಿದು ಬಂದರೂ ಇಲ್ಲಿಯವರೆಗೂ ಕಾಮಗಾರಿ ಪೂರ್ಣಗೊಂಡಿಲ್ಲ. ಯುಜಿಡಿ ಕುರಿತು 2001-02 ನೇ ಸಾಲಿನಲ್ಲಿ ಕಾಮಗಾರಿ ನಡೆಸುವ ಕುರಿತು ನಗರಸಭೆ ಯೋಜನೆಯನ್ನು ತಯಾರಿಸಿತು. 17.2 ಕೋಟಿ ರೂಪಾಯಿ ವೆಚ್ಚದಲ್ಲಿ ಪ್ರಾರಂಭಗೊಂಡಿರುವ ಯುಜಿಡಿ ಕಾಮಗಾರಿ ಇದುವರೆಗೂ ಪ್ರಗತಿ ಹಂತದಲ್ಲಿಯೇ ಸಾಗಿದೆ. ಕಾಮಗಾರಿ ಕುಂಟುತ್ತ ಸಾಗಿದರೂ ಯಾವೊಬ್ಬ ಅಧಿಕಾರಿಗಳು ಮತ್ತು ನಗರಸಭೆ ಆಡಳಿತ ಮಂಡಳಿಯು ತಲೆ ಕೆಡಿಸಿಕೊಳ್ಳದೇ ಇರುವುದು ವಿಪರ್ಯಾಸವಾಗಿದೆ.

    ಈ ಹಿಂದೆ 44 ಕಿ.ಮೀ. ಆಳಗುಂಡಿಗಳ ಸಮೇತ ಸೀವರ್ ಕೊಳವೆ ಅಳವಡಿಸುವ ಕಾಮಗಾರಿ ಪ್ರಾರಂಭಿಸಲಾಗಿತ್ತು. ನಗರದ ಹಿರೇಜಂತಕಲ್ ಹೊರ ಭಾಗದಲ್ಲಿ 14 ದಶ ಲಕ್ಷ ಲೀಟರ್ ಸಾಮಥ್ರ್ಯದ ಮಲಿನ ನೀರು ಶುದ್ಧೀಕರಣ ಘಟಕ ನಿರ್ಮಾಣ ಮಾಡಲಾಗಿತ್ತು. ನಗರ ಪ್ರದೇಶದ 15 ವಾರ್ಡ್ ವ್ಯಾಪ್ತಿಯಲ್ಲಿರುವ 14,000 ಕುಟುಂಬಗಳಿಗೆ ಯುಜಿಡಿ ಸೌಕರ್ಯ ಒದಗಿಸುವ ಕಾಮಗಾರಿ, ಅಧಿಕಾರಿಗಳ ಬೇಜವಾಬ್ದಾರಿ, ಗುತ್ತಿಗೆದಾರರ ಮತ್ತು ಶಾಸಕರ ನಿರ್ಲಕ್ಷ್ಯದಿಂದ ಹಳ್ಳ ಹಿಡಿದಿದೆ.

    50 ಕೋಟಿ ಅನುದಾನ ಬಿಡುಗಡೆ: ಕೇಂದ್ರ ಸರ್ಕಾರ 1 ಲಕ್ಷಗಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ನಗರಗಳಿಗೆ ಮೂಲ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ 2015-16ನೇ ಸಾಲಿನಲ್ಲಿ ಅಮೃತ್ ನಗರ ಯೋಜನೆಯಡಿ ಒಳ ಚರಂಡಿ ಯೋಜನೆ ಕಾಮಗಾರಿಗೆ ಮೊದಲ ಹಂತದಲ್ಲಿ 36 ಕೋಟಿ ರೂ.ಬಿಡುಗಡೆ ಮಾಡಿತ್ತು. 2ನೇ ಹಂತದಲ್ಲಿ 14 ಕೋಟಿ ಅನುದಾನ ಬಿಡುಗಡೆಯಾಗಿದೆ.

    ನಾಲ್ಕು ಹಂತದ ಕಾಮಗಾರಿ ನಡೆಸುವ ಮೂಲಕ ಶಾಶ್ವತವಾಗಿ ಒಳಚರಂಡಿ ಸಮಸ್ಯೆ ಪರಿಹರಿಸಬೇಕೆಂದು ನಿರ್ಣಯಿಸಲಾಗಿತ್ತು. ನಗರ ವ್ಯಾಪ್ತಿಯ 220 ಕಿ.ಮೀ. ವ್ಯಾಪ್ತಿಯ ಉದ್ದಕ್ಕೂ ಯುಜಿಡಿ ಪೈಪ್‍ಲೈನ್ ಅಳವಡಿಸುವ ಮೂಲಕ 20 ಸಾವಿರಕ್ಕೂ ಅಧಿಕ ಮನೆಗಳಿಗೆ ಸಂಪರ್ಕ ಕಲ್ಪಿಸಲು ಯೋಜಿಸಲಾಗಿತ್ತು. ಆದರೆ ಇಲ್ಲಿಯವರೆಗೆ ಶೇ.40 ರಷ್ಟು ಕಾಮಗಾರಿ ಮುಕ್ತಾಯಗೊಂಡಿದೆ. ಬಾಕಿ ಕಾಮಗಾರಿ ಆಮೆಗತಿಯಲ್ಲಿ ನಡೆದಿದೆ.

    11 ಸಾವಿರ ಮನೆಗಳಿಗೆ ಕನೆಕ್ಷನ್: ಈಗಾಗಲೇ ಅಮೃತ್ ಸಿಟಿ ಯೋಜನೆಯಡಿಯಲ್ಲಿ ನಗರದ 15 ವಾರ್ಡ್ ಗಳಲ್ಲಿ ಯುಜಿಡಿ ಕಾಮಗಾರಿ ಕೆಲಸ ಮುಗಿದಿದ್ದು, ಮೊದಲ ಹಂತದ 39 ಕಿ.ಮೀ ನೆಟ್ವರ್ಕ್ ನಲ್ಲಿ ಸುಮಾರು 9,300 ಮನೆಗಳ ಪೈಕಿ 8,900 ಮನೆಗಳಿಗೆ ಕನೆಕ್ಷನ್ ಕೊಡಲಾಗಿದೆ. 14 ಕಿ.ಮೀ ನೆಟ್ವರ್ಕ್ ನಲ್ಲಿ 5 ಸಾವಿರ ಮನೆಗಳ ಪೈಕಿ 3 ಸಾವಿರ ಮನೆಗಳಿಗೆ ಕನೆಕ್ಷನ್ ನೀಡಲಾಗಿದ್ದು, 2 ಸಾವಿರ ಮನೆಗಳಿಗೆ ಕನೆಕ್ಷನ್ ಕೊಡುವುದು ಬಾಕಿ ಇದೆ ಎಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಅಧಿಕಾರಿಗಳು ಹೇಳುತ್ತಾರೆ.

    ಹೊರ ರಾಜ್ಯದ ಕಂಪನಿಗೆ ಗುತ್ತಿಗೆ: ಈ ಕಾಮಗಾರಿಯನ್ನು ಅಹಮದಾಬಾದ್ ಮೂಲಕ ಪಿ.ಸಿ.ಸ್ನೇಹಲ್ ಕನ್ಸಷ್ಟ್ರಕ್ಷನ್‍ಗೆ ಟೆಂಡರ್ ನೀಡಲಾಗಿದೆ. ಇದರ ನಿರ್ವಹಣೆ ಜವಾಬ್ದಾರಿಯನ್ನು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ (ಕೆಯುಡಬ್ಲೂಎಸ್)ಗೆ ವಹಿಸಲಾಗಿದೆ. ಆದರೆ, ಟೆಂಡರ್‍ದಾರರಿಂದ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದ್ದು, ನಿಗದಿಪಡಿಸಿದ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳ್ಳದೇ ವಿಳಂಬವಾಗುತ್ತಿದೆ.

    ಸಂಚಾರಕ್ಕೆ ತೊಂದರೆ: ನಗರದ ಡಾಂಬರು, ಸಿಸಿ ರಸ್ತೆಗಳನ್ನು ಅಗೆದು ಪೈಪ್‍ಲೈನ್ ಮಾಡಲಾಗುತ್ತಿದೆ. ತಗ್ಗು, ಗುಂಡಿ ತೋಡಿ ಹಾಗೆಯೇ ಬಿಟ್ಟಿರುವುದರಿಂದ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗಿದೆ.

    ಒಟ್ಟಿನಲ್ಲಿ ನಾನಾ ವಾರ್ಡ್, ಕಾಲೋನಿ, ಸ್ಲಂ ಏರಿಯಾಗಳಲ್ಲಿ ಯುಜಿಡಿಯ ಅರೆಬರೆ ಕಾಮಗಾರಿಯಿಂದ ತೀವ್ರ ತೊಂದರೆಯಾಗಿದೆ. ಪೈಪ್‍ಲೈನ್ ಹಾಕುವುದರಲ್ಲೇ ವರ್ಷಾನುಗಟ್ಟಲೇ ಕಾಲಹರಣ ಮಾಡುತ್ತಿರುವುದು ಸಾರ್ವಜನಿಕರಲ್ಲಿ ಅಸಮಾಧಾನ ಮೂಡಿಸಿದೆ.

  • ಯುಜಿಡಿ ಕಾಮಗಾರಿ ಗುಂಡಿಗೆ ಬಿದ್ದು ನರಳಿ ನರಳಿ ಪ್ರಾಣ ಬಿಟ್ಟ ಬಸವ

    ಯುಜಿಡಿ ಕಾಮಗಾರಿ ಗುಂಡಿಗೆ ಬಿದ್ದು ನರಳಿ ನರಳಿ ಪ್ರಾಣ ಬಿಟ್ಟ ಬಸವ

    ಮೈಸೂರು: ಯುಜಿಡಿ ಕಾಮಗಾರಿಯ ಗುಂಡಿಗೆ ಬಿದ್ದು ಬೀದಿ ಎತ್ತು ನರಳಿ ನರಳಿ ಪ್ರಾಣ ಬಿಟ್ಟಿರುವ ಮನಕಲಕುವ ಘಟನೆ ಜಿಲ್ಲೆಯ ಟಿ.ನರಸೀಪುರ ವಿನಾಯಕ ಕಾಲೋನಿಯಲ್ಲಿ ನಡೆದಿದೆ.

    ಯುಜಿಡಿ ಕಾಮಗಾರಿ ನಡೆಸಲು ಪುರಸಭೆಯಿಂದ ಮಧ್ಯ ರಸ್ತೆಯಲ್ಲಿ ಗುಂಡಿ ತೆರೆಯಲಾಗಿತ್ತು. ಮಧ್ಯ ರಸ್ತೆಯಲ್ಲಿದ್ದ ಗುಂಡಿಗೆ ಅರಿವಿಲ್ಲದೇ ಬೀದಿ ಬಸವ ಬಿದ್ದಿದ್ದಾನೆ. ಗುಂಡಿಯಿಂದ ಮೇಲಕ್ಕೆ ಬರಲಾರದೇ ನರಳಿ ನರಳಿ ಪ್ರಾಣ ಬಿಟ್ಟಿದ್ದಾನೆ.

    ಕಾಮಗಾರಿ ನಡೆಸುತ್ತಿರುವ ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಬಸವ ಪ್ರಾಣ ಕಳೆದುಕೊಂಡಿದ್ದಾನೆ. ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಪುರಸಭೆ ಯಾವುದೇ ತಾತ್ಕಲಿಕ ತಡೆಗೋಡೆಯನ್ನು ನಿರ್ಮಿಸಿರಲಿಲ್ಲ. ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿತ್ತು. ಕೊನೆಗೆ ಸ್ಥಳೀಯರೇ ಸಾವನ್ನಪ್ಪಿದ ಬಸವನನ್ನು ಹೊರ ತೆಗೆದಿದ್ದಾರೆ.

  • ಬೀದರ್ ಲೋಕೋಪಯೋಗಿ ಇಲಾಖೆ ಮುಂದೆಯೇ ರಸ್ತೆ ಕುಸಿದು ಹಳ್ಳಕ್ಕೆ ಬಿದ್ದ ಲಾರಿ, ಕಾರು

    ಬೀದರ್ ಲೋಕೋಪಯೋಗಿ ಇಲಾಖೆ ಮುಂದೆಯೇ ರಸ್ತೆ ಕುಸಿದು ಹಳ್ಳಕ್ಕೆ ಬಿದ್ದ ಲಾರಿ, ಕಾರು

    ಬೀದರ್: ಕಳಪೆ ಕಾಮಗಾರಿಗೆ ಸಾಕ್ಷಿ ಎಂಬಂತೆ ಜಿಲ್ಲೆಯ ಲೋಕೋಪಯೋಗಿ ಇಲಾಖೆಯ ಮುಂದೆಯೇ ರಸ್ತೆ ಕುಸಿದ ಪರಿಣಾಮ ಕಾರು ಹಾಗೂ ಲಾರಿ ಹಳ್ಳಕ್ಕೆ ಬಿದ್ದಿದೆ.

    ಕೆಲವೇ ದಿನಗಳ ಹಿಂದಷ್ಟೆ ಮಾಡಿದ್ದ ಯುಜಿಡಿ ರಸ್ತೆ ಕುಸಿದು ಕಾರು ಮತ್ತು ಲಾರಿ ಹಳ್ಳದಲ್ಲಿ ಸಿಲುಕಿಕೊಂಡಿದೆ. ವಿಪರ್ಯಾಸವೆಂದರೆ ಲೋಕೋಪಯೋಗಿ ಇಲಾಖೆಯ ಕಚೇರಿ ಮುಂದೆಯೇ ರಸ್ತೆ ಕುಸಿದು ಈ ಅವಘಡ ಸಂಭವಿಸಿದ್ದಕ್ಕೆ ಅಧಿಕಾರಿಗಳು ನಾಚಿಕೆಪಡುವಂತಾಗಿದೆ.

    ಎರಡು ವರ್ಷಗಳಿಂದ ಮಂದಗತಿಯಲ್ಲಿ ನಡೆಯುತ್ತಿರುವ ಯುಜಿಡಿ ಕಾಮಗಾರಿಗೆ ಯಾವಾಗ ಮುಕ್ತಿ ಸಿಗುತ್ತೆ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸಚಿವರು, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ವಿರುದ್ಧ ಸ್ಥಳೀಯರು ಹಿಡಿಶಾಪ ಹಾಕುತ್ತಿದ್ದಾರೆ. ಯುಜಿಡಿ ಕಳಪೆ ಕಾಮಗಾರಿಯ ಭಯದಲ್ಲೇ ವಾಹನ ಸವಾರರು ಸಂಚಾರ ಮಾಡುತ್ತಿದ್ದಾರೆ.

  • ನೀವು ತುಮಕೂರು ನಗರಕ್ಕೆ ಹೋಗ್ತಾ ಇದ್ದೀರಾ? ಹಾಗಾದ್ರೆ ಈ ಸುದ್ದಿ ಓದಿ

    ನೀವು ತುಮಕೂರು ನಗರಕ್ಕೆ ಹೋಗ್ತಾ ಇದ್ದೀರಾ? ಹಾಗಾದ್ರೆ ಈ ಸುದ್ದಿ ಓದಿ

    – ತುಮಕೂರಲ್ಲಿ ಯುಜಿಡಿ ಮುಚ್ಚೋ ಸರ್ಕಸ್
    – ಪೈಪ್ ತುಂಬಿಕೊಂಡು ಬರ್ತಿದ್ದ ಲಾರಿಯೇ ಕುಸಿದು ಬಿತ್ತು
    – ರಸ್ತೆ ಗುಂಡಿಗಳಿಂದ ಮದುವೆಗಳು ಶಿಫ್ಟ್

    ತುಮಕೂರು: ನೀವು ಬೈಕ್ ಅಥವಾ ಕಾರ್‍ನಲ್ಲೇನಾದ್ರೂ ತುಮಕೂರು ಕಡೆಗೆ ಹೋಗ್ಬೇಕಂದ್ರೆ ನಿಮ್ಮ ಅದೃಷ್ಟ ಗಟ್ಟಿಯಾಗಿದೆಯಾ ಅಂತ ಚೆಕ್ ಮಾಡ್ಕೊಂಡು ಹೋಗೋದು ಒಳ್ಳೇಯದು. ಯಾಕಂದ್ರೆ ತುಮಕೂರು ನಗರದ ರಸ್ತೆಗಳು ಭದ್ರವಾಗಿಲ್ಲ. ಯಾವಾಗ ಬೇಕಾದ್ರೂ, ಯಾವ ರಸ್ತೆಗಳು ಬೇಕಿದ್ರೂ ಕುಸಿದು ಬೀಳ್ಬಹುದು. ಪ್ರಾಣ ತೆಗೆಯೋ ತುಮಕೂರು ರಸ್ತೆ ಗುಂಡಿಗಳಿಗೆ ಮದುವೆಗಳನ್ನೇ ಶಿಫ್ಟ್ ಮಾಡೋ ಖದರ್ ಕೂಡ ಇದೆ.

    ಸ್ಮಾರ್ಟ್ ಸಿಟಿ ತುಮಕೂರು ನಗರದಲ್ಲಿ ಯುಜಿಡಿ(ಅಂಡರ್‍ಗ್ರೌಂಡ್ ಡ್ರೈನೇಜ್) ಗುಂಡಿ ಮುಚ್ಚೋ ಸರ್ಕಸ್ ನಡೆಯುತ್ತಿದೆ. ಅದು ಅಂತಿಂಥಾ ಸರ್ಕಸ್ ಅಲ್ಲ. ಸಣ್ಣ ಗುಂಡಿ ಮುಚ್ಚಲು ತುಮಕೂರು ಪಾಲಿಕೆ ಅಧಿಕಾರಿಗಳು ನಡೆಸೋ ವಾರಗಟ್ಟಲೆಯ ಭರ್ಜರಿ ಸರ್ಕಸ್. ಹೌದು, ತುಮಕೂರು ನಗರದ ರಸ್ತೆ ಅಡಿಯಲ್ಲಿರುವ ಯುಜಿಡಿ ಪೈಪ್ ಲೈನ್ ಬಹಳ ಅಶಕ್ತವಾಗಿವೆ. ಇದ್ದಕ್ಕಿದ್ದಂತೆ ಬಾಯ್ತೆರೆದು ವಾಹನ ಸವಾರರನ್ನು ಬಲಿ ಪಡೆಯುತ್ತವೆ ಯುಜಿಡಿ ರಸ್ತೆ ಗುಂಡಿಗಳು.

    ತುಮಕೂರು ನಗರದ ಶಿರಾಣಿ ರಸ್ತೆಯ ಮಾಕಂ ಕಲ್ಯಾಣ ಮಂಟಪದ ಎದುರಿನಲ್ಲೇ ಯುಜಿಡಿ ಕುಸಿದು ಬಿದ್ದಿದೆ. ಇದ್ರಿಂದ ಕಲ್ಯಾಣ ಮಂಟಪದಲ್ಲಿ ನಡೆಯಬೇಕಿದ್ದ ಮೂರು ಮದುವೆಗಳು ಬೇರೊಂದು ಕಲ್ಯಾಣ ಮಂಟಪಕ್ಕೆ ಶಿಫ್ಟಾಗಿವೆ. ಹೀಗಾಗಿ ವಧು, ವರ ತಂದೆ ತಾಯಿಗಳು ಕಲ್ಯಾಣ ಮಂಟಪದ ಎದುರು ಮದುವೆ ಬೇರೊಂದು ಕಡೆಗೆ ವರ್ಗಾಯಿಸಲಾಗಿದೆ ಅಂತ ಬ್ಯಾನರ್ ಬರೆದು ಹಾಕಿದ್ದಾರೆ.

    ಒಂದು ವಾರದ ಹಿಂದೆ ಯುಜಿಡಿ ಗುಂಡಿ ಕುಸಿದು ಬಿದ್ದು, ನಗರದ ಶೌಚಾಲಯದ ನೀರೆಲ್ಲಾ ಅಕ್ಕಪಕ್ಕದ ಕಲ್ಯಾಣ ಮಂಟಪ, ಅಂಗಡಿಗೆ ನುಗ್ಗಿದೆ. ಈ ಬಗ್ಗೆ ವಾರದ ಹಿಂದೆ ಪಾಲಿಕೆ ಅಧಿಕಾರಿಗಳಿಗೆ ದೂರು ನೀಡಿದ್ರೂ ಪ್ರಯೋಜನವಾಗಿಲ್ಲ. ಬಳಿಕ ಜನ್ರು ರೊಚ್ಚಿಗೆದ್ದಿದ್ದರಿಂದ ಅಧಿಕಾರಿಗಳು ಇಂದು ಯುಜಿಡಿ ಮುಚ್ಚಲು ಮುಂದಾಗಿದ್ರು. ಆದ್ರೆ ಇಂದು ಬೆಳಗ್ಗೆ ಪೈಪ್ ತುಂಬಿಕೊಂಡು ಬಂದ ಲಾರಿಯೊಂದು ಕೂಡ ಕುಸಿದು ಬಿತ್ತು. ಇದ್ರಿಂದ ಅಕ್ಕಪಕ್ಕದ ರಸ್ತೆಗಳಲ್ಲೆಲ್ಲಾ ಟ್ರಾಫಿಕ್ ಜಾಮ್ ಉಂಟಾಗಿತ್ತು. ಬಳಿಕ ಕ್ರೇನ್ ಮೂಲಕ ಲಾರಿಯನ್ನು ಎತ್ತಿ ಪೈಪ್ ಗಳನ್ನು ಪಕ್ಕಕ್ಕೆ ಜೋಡಿಸಲಾಗಿದೆ. ಪಾಲಿಕೆ ಅಧಿಕಾರಿಗಳು ವರ್ಷಕ್ಕೆ ಮೂರ್ನಾಲ್ಕು ಬಾರಿ ಇಂತಹ ಸರ್ಕಸ್ ಮಾಡಿ ಜನರಿಗೆ ಪುಕ್ಕಟ್ಟೆ ಮನೋರಂಜನೆ ನೀಡ್ತಾರೆ ಅಂತಾರೆ ಸ್ಥಳೀಯರು.

    ಪ್ರತಿ ಬಾರಿಯೂ ಕಳಪೆ ಕಾಮಗಾರಿ ಮಾಡುವುದರಿಂದ ಪದೇ ಪದೇ ಯುಜಿಡಿ ಪೈಪ್ ಗಳು ರಸ್ತೆ ನಗರದಲ್ಲಿ ಎಲ್ಲೆಂದರಲ್ಲಿ ಕುಸಿಯುತ್ತಿವೆ. ದೂರದೃಷ್ಠಿಯ ಕೊರತೆ, ಕಮಿಷನ್ ಆಸೆಗೆ ಬಲಿಯಾಗುವ ಅಧಿಕಾರಿ ಕಾಮಗಾರಿಗಳ ಗುಣಮಟ್ಟ ಪರಿಶೀಲನೆಗೆ ಮುಂದಾಗುವುದಿಲ್ಲ. ಇದ್ರಿಂದ ಇಂತಹ ಅವಾಂತರಗಳು, ಅವಘಡಗಳು ತುಮಕೂರಿನಲ್ಲಿ ಸಾಮಾನ್ಯವಾಗಿವೆ ಅಂತ ಸ್ಥಳೀಯರು ಆರೋಪಿಸಿದ್ದಾರೆ.