Tag: Ugadi Festival

  • ಯುಗಾದಿ ಸಂಭ್ರಮ – ಬ್ಯಾಚುಲರ್‌ ಹುಡುಗರು, ದೂರವೇ ಉಳಿದವರ ಸಡಗರ

    ಯುಗಾದಿ ಸಂಭ್ರಮ – ಬ್ಯಾಚುಲರ್‌ ಹುಡುಗರು, ದೂರವೇ ಉಳಿದವರ ಸಡಗರ

    ಮನೆಮಂದಿಯೆಲ್ಲ ಒಂದಾಗಲು ಹಬ್ಬವೊಂದು ನೆಪ. ಓದು, ಉದ್ಯೋಗದ ಕಾರಣಕ್ಕೆ ದೂರವೇ ಉಳಿದವರನ್ನು ಹಬ್ಬ ಊರು ಅಥವಾ ಮನೆಗೆ ಕರೆಸಿಕೊಳ್ಳುತ್ತದೆ. ಆದ್ರೆ ಅನಿವಾರ್ಯ ಕಾರಣಕ್ಕೆ ಊರಿಗೆ ಹೋಗಲಾಗದಿದ್ದರೆ ಮಾತ್ರ ಜೊತೆಗಿರದ ಭಾವವೊಂದು ಪರಿಪರಿಯಾಗಿ ಕಾಡಿಬಿಡುತ್ತದೆ ಅಲ್ಲವೇ ಹಾಗೆಯೇ ಈ ಯುಗಾದಿ ಹಬ್ಬವೂ ಹಾಗೆಯೇ ಇರಬೇಕಲ್ಲವೇ.

    ಚೈತ್ರಮಾಸದ ಮೊದಲ ದಿನವೆಂದರೆ ಹಾಗೇ ಹೊಸ ಮಾಸದ ಘಮಲು, ಹೊಸ ಭರವಸೆಯ ಕನಸು. ಹಳೆಯದೆಲ್ಲವ ಅಳಿಸಿ, ಹೊಸತಾಗುವ ಈ ಹಬ್ಬ ವರ್ಷಾರಂಭದ ಸಂಕೇತ. ಇದು ಹಿಂದೂಗಳ ಹೊಸ ವರ್ಷವೆಂಬ ಯುಗಾದಿ ಹಬ್ಬದ ಹೆಗ್ಗುರುತು.

    ಬೇವು ಬೆಲ್ಲ, ಹೋಳಿಗೆ ತುಪ್ಪದ ಸಿಹಿ ಊಟದ ರುಚಿ, ಹಬ್ಬಕ್ಕೆ ಖರೀದಿಸಿದ ಹೊಸ ಬಟ್ಟೆ ಊರಿನ ಕಟ್ಟೆಯ ಮೇಲೆ ಕುಳಿತು ಮಾತನಾಡುತ್ತಿದ್ದ ಮಾತುಕತೆ, ಗೆಳೆಯರೆಲ್ಲ ಕೂಡಿದ ನೆನಪಿಗೆ ಹಳೆಯ ಆಟ, ಹೊಸದಾಗಿ ಮದುವೆ ಆದ ಸ್ನೇಹಿತನ ಕಾಲೆಳೆಯುವುದು, ಮದುವೆ ಫಿಕ್ಸ್ ಆದ ಕ್ಲಾಸ್‌ಮೇಟ್ ಹುಡುಗಿಯ ಶಾಲೆಯ ಕಥೆ ಎಲ್ಲಾ ಮಿಸ್ ಆದಂತಹ ಭಾವ. ಆದರೆ ಹಬ್ಬ ಅಂದ್ರೆ ಹಬ್ಬಾನೇ ಅಲ್ವಾ? ಹಬ್ಬಕ್ಕೆ ಊರಿಗೆ ಹೋಗಲಾಗದೇ, ಅಲ್ಲಿ ಮಾಡುತ್ತಿದ್ದ ಹಬ್ಬವನ್ನು ಇನ್ಯಾವುದೋ ಊರಲ್ಲಿ, ಪುಟ್ಟ ಕೊಣೆಯಲ್ಲಿ ಉಳಿದು ಮಾಡುವ ಆಸೆ ಮೂಡುವುದೇ ಇಲ್ಲ.

    ಆದ್ರೆ ಈ ಬೆಂಗಳೂರಿನಂತಹ ಮಹಾನಗರಗಳ ಅಪಾರ್ಟ್‌ಮೆಂಟ್‌ನಲ್ಲಿದ್ದರೆ ಅದೊಂದು ಪುಟ್ಟ ಊರು ಇದ್ದ ಹಾಗೆ. ಅಲ್ಲಿನ ಮನೆಗಳ ಕೆಲವರು ಊರಿಗೆ ಹೋಗಿದ್ದರೆ ಉಳಿದವರದ್ದೆಲ್ಲ ಸೇರಿ ಒಂದು ಹಬ್ಬ ಎಲ್ಲಿಂದಲೋ ಬಂದವರು ಒಂದು ಕಡೆ ನಿಂತವರು. ಒಂದೊಂದು ಊರಿನಲ್ಲಿ ಒಂದೊಂದು ಥರದ ಹಬ್ಬ ಆ ಎಲ್ಲಾ ಆಚರಣೆಗಳು ಸೇರಿದ ಹಬ್ಬ ಇವರದ್ದು. ಹಬ್ಬದ ಹಿಂದಿನ ರಾತ್ರಿ ಹೊತ್ತಿಗಾಗಲೇ ಊರಿಗೆ ಹೋದವರು, ಹೋಗದೇ ಉಳಿದವರ ಪಟ್ಟಿ ಸಿಕ್ಕಿಬಿಡುತ್ತದೆ.

    ಹೋದವರ ಸ್ಟೇಟಸ್‌ಗಳಲ್ಲಿ ಊರಿನ ಒಂದು ಚಿತ್ರ, ಯುಗಾದಿ ಹಬ್ಬಕ್ಕೆ ಶುಭಾಶಯ ಕೋರುವ ಮೆಸೇಜು ಈ ರೀತಿ ಇದ್ದರೆ, ಊರಿಗೆ ಹೋಗದವರ ಮೊಬೈಲ್‌ಗಳು ಕೂಡ ಬಿಝಿಯಾಗುತ್ತವೆ. ಒಬ್ಬೊಬ್ಬರೇ ಇರುವವರು ಒಂದು ಕಡೆ ಸೇರಲು ಪ್ಲ್ಯಾನ್‌ ರೆಡಿಯಾಗುತ್ತದೆ.

    ಇನ್ನೂ ಬ್ಯಾಚ್ಯುಲರ್‌ ಲೈಫು ನೋಡೋದಾದ್ರೆ ಅವರಿಗೆ ಸಿಗುವ ಹಬ್ಬದಡುಗೆಯ ರುಚಿಯೇ ಬೇರೆ. ಬಾಡಿಗೆ ಮನೆಯಲ್ಲಿ ಓನರ್‌ಗಳು ಕೊಡುವ ಬೇವು, ಬೆಲ್ಲದ ತಿಂದು ಸಂಜೆ ಹೊತ್ತಿಗೆ ಒಂದಿಷ್ಟು ಹೋಳಿಗೆ ಊಟ. ಹೇಗೋ ಅಕ್ಕಪಕ್ಕದ ಮನೆಯವರು ಕೊಟ್ಟಿದ್ದನ್ನೆಲ್ಲ ಸೇರಿಸಿ ಹಬ್ಬ ಮುಗಿಸುತ್ತಾರೆ. ಬೆಳಗ್ಗೆಯಿಂದ ಸಂಜೆವರೆಗೆ ಏನೆಲ್ಲಾ ಆಯ್ತು.. ಅಂತ ಒಂದು ಸುತ್ತು ನೆನೆಸಿಕೊಂಡು ಹಾಗೇ ಕ್ಲಿಕ್ಕಿಸಿಕೊಂಡ ಒಂದೆರಡು ಫೋಟೋಗಳನ್ನ ಸ್ಟೇಟಸ್‌ ಹಾಕಿ, ಮಾರನೆ ದಿನ ಬೆಳಗ್ಗೆ 7 ಗಂಟೆ ಶಿಫ್ಟ್‌ ಕೆಲಸಕ್ಕೆ ಹೋಗುವ ಧಾವಂತಕ್ಕೆ ಯುಗಾದಿ ಹಬ್ಬ ಮುಗಿದೇ ಹೋಗಿರುತ್ತದೆ.

  • ಉಚ್ಛಾಟನೆ ಬಳಿಕ ವಿಜಯಪುರಕ್ಕೆ ಯತ್ನಾಳ್ ಆಗಮನ – ಸಿದ್ದೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ; ಹೋಮ, ಹವನ

    ಉಚ್ಛಾಟನೆ ಬಳಿಕ ವಿಜಯಪುರಕ್ಕೆ ಯತ್ನಾಳ್ ಆಗಮನ – ಸಿದ್ದೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ; ಹೋಮ, ಹವನ

    ವಿಜಯಪುರ: ಯುಗಾದಿ ಪಾಡ್ಯ ಹಿನ್ನೆಲೆ ಬಿಜೆಪಿಯಿಂದ (BJP) ಉಚ್ಛಾಟನೆಯಾದ ಬಳಿಕ ಮೊದಲ ಬಾರಿಗೆ ವಿಜಯಪುರ ನಗರಕ್ಕೆ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್ (Basanagouda Patil Yatnal) ಆಗಮಿಸಿದ್ದಾರೆ.

    ಬೆಂಗಳೂರಿನಿಂ‌ದ (Bengaluru) ತಡರಾತ್ರಿ ಪ್ರಯಾಣ ಬೆಳೆಸಿ ವಿಜಯಪುರಕ್ಕೆ ಆಗಮಿಸಿದ್ದಾರೆ. ವಿಜಯಪುರದ ಪ್ರಸಿದ್ಧ ಸಿದ್ದೇಶ್ವರ ದೇವಸ್ಥಾನದಲ್ಲಿ ಯತ್ನಾಳ್ ಹಾಗೂ ಕುಟುಂಬ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಪತ್ನಿ ಶೈಲಜಾ ಹಾಗೂ ಸಿದ್ದೇಶ್ವರ ಸಂಸ್ಥೆಯ ಪದಾಧಿಕಾರಿಗಳೊಂದಿಗೆ ಭಾಗಿಯಾಗಿದ್ದಾರೆ. ಇದನ್ನೂ ಓದಿ: ಅಮಾಯಕರ ಜೀವ ಬಲಿ ಪಡೆಯುತ್ತಲೇ ಇದೆ ಬಿಬಿಎಂಪಿ ಕಸದ ಲಾರಿ – 4 ವರ್ಷಗಳಲ್ಲಿ ಸಾಲು ಸಾಲು ಅಪಘಾತ

    ಪೂಜೆ ಬಳಿಕ ಮಂಗಳಾರತಿ ಕಾರ್ಯಕ್ರಮ ಮುಗಿಸಿದ್ದಾರೆ. ನಂತರ ಇದೀಗ ಪ್ರತಿ ವರ್ಷ ಯುಗಾದಿ ಪಾಡ್ಯಾದಂದು ನಡೆಸುವ ಹೋಮ ಹವನ ಪೂಜೆ ಕಾರ್ಯಗಳಲ್ಲಿ ಭಾಗಿ ಆಗಿದ್ದಾರೆ. ಇದನ್ನೂ ಓದಿ: ಯುಗಾದಿ ಹಬ್ಬದ ದೇಸಿ ಸೊಗಡು, ಗ್ರಾಮೀಣ ಕ್ರೀಡೆಗಳ ಗಮ್ಮತ್ತು!

    ಹೋಮ ಮುಗಿದ ನಂತರ ಸಿದ್ದೇಶ್ವರ ಸಂಸ್ಥೆಯಿಂದ ನಿರ್ಮಿಸಿರೋ ದಾಸೋಹ ನಿಲಯ ಹಾಗೂ ಕಟ್ಟಡ ಉದ್ಘಾಟನೆ ಪೂಜಾ ಕಾರ್ಯದಲ್ಲಿ ಭಾಗಿಯಾಗಲಿದ್ದಾರೆ. ಇದನ್ನೂ ಓದಿ: Myanmar Earthquake | ಭೀಕರ ಭೂಕಂಪಕ್ಕೆ 1,600ಕ್ಕೂ ಹೆಚ್ಚು ಮಂದಿ ಬಲಿ – 3,000ಕ್ಕೂ ಅಧಿಕ ಮಂದಿಗೆ ಗಾಯ

  • ಯುಗಾದಿ ಸಂಭ್ರಮ – ಬೆಲೆ ಏರಿಕೆ ನಡುವೆಯೂ ಖರೀದಿ ಬರಾಟೆ ಜೋರು!

    ಯುಗಾದಿ ಸಂಭ್ರಮ – ಬೆಲೆ ಏರಿಕೆ ನಡುವೆಯೂ ಖರೀದಿ ಬರಾಟೆ ಜೋರು!

    ಬೆಂಗಳೂರು: ಯುಗಾದಿ (Ugadi festival), ಹೊಸತೊಡಕು, ರಂಜಾನ್‌ ಹೀಗೆ ಸಾಲು ಸಾಲು ಹಬ್ಬದ ಸಂಭ್ರಮ ಊರೆಲ್ಲ ತುಂಬಿಕೊಳ್ಳುತ್ತಿದೆ. ಮಾರುಕಟ್ಟೆಯಲ್ಲೂ ಇದು ವ್ಯಾಪಿಸತೊಡಗಿದ್ದು, ಹೂವು, ಹಣ್ಣು ಹಂಪಲು ದರ ಗಗನಮುಖಿಯಾಗಿದೆ. ಅತ್ತ ಬೆಲೆ ಏರಿಕೆ ಬಗ್ಗೆ ತಲೆ ಕೆಡಿಸಿಕೊಳ್ಳದ ಜನ ಖರೀದಿ ಬರಾಟೆ ಜೋರಾಗಿ ನಡೆಸುತ್ತಿದ್ದಾರೆ.

    ಬೆಲೆ ಏರಿಕೆ ನಡುವೆಯೂ ಗ್ರಾಹಕರು ಮಾರುಕಟ್ಟೆಗೆ ದಾಂಗುಡಿಯಿಟ್ಟು ಖರೀದಿ ಬರಾಟೆ ನಡೆಸಿದ್ದಾರೆ. ಕೆಲವರು ಅಲ್ಲಲ್ಲಿ ಚೌಕಾಸಿ ಮಾಡಿ ರೇಟು ಗಿಟ್ಟಿಸಿಕೊಂಡು ಹೇಗೂ ಹಬ್ಬದ ಸಾಮಗ್ರಿ ಖರೀದಿಸುತ್ತಿದ್ದಾರೆ. ಶನಿವಾರ ರಾತ್ರಿಯಿಂದಲೂ ಹಬ್ಬದ ಖರೀದಿ ಜೋರಾಗಿದ್ದು, ವ್ಯಾಪಾರಿಗಳೂ ಹರ್ಷಗೊಂಡಿದ್ದಾರೆ. ಇದನ್ನೂ ಓದಿ: ಯುಗಾದಿ ಹಿಂದೂಗಳ ಹೊಸ ವರ್ಷ, ಹಸಿರಿಗೆ ಹೊಸ ಉಸಿರಿನ ಹಬ್ಬ

    ಬೆಂಗಳೂರು (Bengaluru) ನಗರದ ಪ್ರಮುಖ ರಸ್ತೆಗಳ ಇಕ್ಕೆಲಗಳಲ್ಲಿಯೂ ಮಾವು ಮತ್ತು ಬೇವಿನ ಸೊಪ್ಪಿನ ರಾಶಿ ಇರಿಸಲಾಗಿದ್ದು, ಜನರು ಸಂಭ್ರಮದಿಂದ ಖರೀದಿಸುತ್ತಿರುವ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿ ಕಂಡುಬರುತ್ತಿದೆ. ಕೆ.ಆ‌ರ್.ಮಾರುಕಟ್ಟೆ, ಯಶವಂತಪುರ, ಗಾಂಧಿ ಬಜಾರ್, ಮಲ್ಲೇಶ್ವರ, ಬಸವನಗುಡಿ, ಜಯನಗರ, ವಿಜಯನಗರ, ಮಡಿವಾಳ, ಕೆ.ಆರ್.ಪುರ, ಯಲಹಂಕ, ಕೆಂಗೇರಿ ಸೇರಿದಂತೆ ನಗರದ ವಿವಿಧೆಡೆ ಮಾರುಕಟ್ಟೆಯಲ್ಲಿ ಜನಜಂಗುಳಿ ಇನ್ನೂ ಮುಂದುವರಿದಿದೆ. ಜನರು ಹಬ್ಬಕ್ಕೆ ಬೇಕಾದ ಮಾವು ಮತ್ತು ಬೇವಿನ ಸೊಪ್ಪು, ಹೂವು, ಹಣ್ಣು, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳನ್ನು ಖರೀದಿಸುತ್ತಿದ್ದಾರೆ.

    ನಗರದ ಬಟ್ಟೆ ಅಂಗಡಿಗಳು, ಆಭರಣ ಮಳಿಗೆಗಳಲ್ಲೂ ಖರೀದಿ ಜೋರಾಗಿದೆ. ಹಬ್ಬದ ಹಿನ್ನೆಲೆಯಲ್ಲಿ ಎರಡು-ಮೂರು ದಿನಗಳಿಂದ ಹೂವಿನ ವ್ಯಾಪಾರ ಗರಿಗೆದರಿದ್ದು, ಮಲ್ಲಿಗೆ, ಗುಲಾಬಿ ಸೇರಿದಂತೆ ಕೆಲ ಹೂವಿನ ದರಗಳು ಕೊಂಚ ಏರಿಕೆಯಾಗಿವೆ. ಅಲ್ಲದೇ ಈ ಬಾರಿ ಕನಕಾಂಬರ ಹೂವಿನ ಬೆಳೆ ಚೆನ್ನಾಗಿ ಬಂದಿದ್ದು, ಬೇಡಿಕೆಗಿಂತ ಪೂರೈಕೆ ಹೆಚ್ಚಾಗಿದೆ. ಇದರಿಂದಾಗಿ ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಈ ಬಾರಿ ಬೆಲೆ ಸ್ವಲ್ಪ ಕಡಿಮೆಯಿದೆ ಅನ್ನುತ್ತಾರೆ ವ್ಯಾಪಾರಿಗಳು. ಇದನ್ನೂ ಓದಿ: ಅಮಾಯಕರ ಜೀವ ಬಲಿ ಪಡೆಯುತ್ತಲೇ ಇದೆ ಬಿಬಿಎಂಪಿ ಕಸದ ಲಾರಿ – 4 ವರ್ಷಗಳಲ್ಲಿ ಸಾಲು ಸಾಲು ಅಪಘಾತ

    ನಗರವಾಸಿಗಳಲ್ಲಿ ಹಲವರು ಊರುಗಳಿಗೆ ತೆರಳಿದ್ದಾರೆ. ತಿಂಗಳಾಂತ್ಯಕ್ಕೆ ಹಬ್ಬ ಬಂದಿದ್ದರಿಂದ ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಗ್ರಾಹಕರ ಸಂಖ್ಯೆ ಕಡಿಮೆಯಿದೆ. ಇದರಿಂದಾಗಿ ಮಾರುಕಟ್ಟೆಗಳಲ್ಲಿ ವ್ಯಾಪಾರ ಕಡಿಮೆ ಆಗಿದೆ. ಮಲ್ಲಿಗೆ ಮೊಗ್ಗು, ಗುಲಾಬಿ ದರವು ಕಳೆದ ಮೂರು ದಿನಗಳಿಂದ ಏರಿಕೆ ಕಂಡಿದ್ದು, ಉಳಿದ ಹೂವುಗಳ ದರವು ಈ ಬಾರಿ ಹೆಚ್ಚಳವಾಗಿಲ್ಲ ಎಂದು ವ್ಯಾಪಾರಿಗಳು ಹೇಳುತ್ತಾರೆ. ಇದನ್ನೂ ಓದಿ: Myanmar Earthquake | ಭೀಕರ ಭೂಕಂಪಕ್ಕೆ 1,600ಕ್ಕೂ ಹೆಚ್ಚು ಮಂದಿ ಬಲಿ – 3,000ಕ್ಕೂ ಅಧಿಕ ಮಂದಿಗೆ ಗಾಯ

  • ಯುಗಾದಿ ಹಬ್ಬವನ್ನು ಬೇರೆ ಬೇರೆ ರಾಜ್ಯಗಳಲ್ಲಿ ಹೇಗೆಲ್ಲಾ ಆಚರಿಸುತ್ತಾರೆ?

    ಯುಗಾದಿ ಹಬ್ಬವನ್ನು ಬೇರೆ ಬೇರೆ ರಾಜ್ಯಗಳಲ್ಲಿ ಹೇಗೆಲ್ಲಾ ಆಚರಿಸುತ್ತಾರೆ?

    ಯುಗಾದಿ ಎಂದರೆ ಹಿಂದೂ ಪಂಚಾಂಗದ ಪ್ರಕಾರ ಹೊಸ ವರ್ಷದ ಮೊದಲ ದಿನ. ಯುಗಾದಿ (Ugadi) ಎಂಬ ಪದವು ಸಂಸ್ಕೃತದಿಂದ ಬಂದಿದೆ. ಹಿಂದೂಗಳು ಈ ದಿನವನ್ನು ಹೊಸ ವರ್ಷವಾಗಿ ಆಚರಿಸುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಯುಗಾದಿಯು ಒಂದು ಪ್ರಮುಖ ವಿಶ್ವ ಚಕ್ರದ ಆರಂಭವನ್ನು ಸೂಚಿಸುತ್ತದೆ. ಯುಗಾದಿಯನ್ನು ವಿಶೇಷವಾಗಿ ಆಂಧ್ರಪ್ರದೇಶ, ತೆಲಂಗಾಣ ಮತ್ತು ಕರ್ನಾಟಕದ ಜನರು ಆಚರಿಸುತ್ತಾರೆ.

    ಕರ್ನಾಟಕದಲ್ಲಿ ಯುಗಾದಿ ಮತ್ತು ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಯುಗಾದಿ ಎಂದು ಆಚರಿಸಿದರೆ. ಮಹಾರಾಷ್ಟ್ರದಲ್ಲಿ ಗುಡಿ ಪಾಡ್ವ (Gudi Padwa), ತಮಿಳುನಾಡಿನಲ್ಲಿ ಪುತಂಡು, ಪಂಜಾಬ್‌ನಲ್ಲಿ ಬೈಸಾಕಿ, ಕೇರಳದಲ್ಲಿ ವಿಷು ಎಂದು ಆಚರಿಸಲಾಗುತ್ತದೆ. ಇದನ್ನೂ ಓದಿ: ಹೊಸ ವರುಷ.. ಹೊಸ ಹರುಷದ ಯುಗಾದಿ ಮತ್ತೆ ಬಂದಿದೆ

    ಆಂಧ್ರಪ್ರದೇಶ ಮತ್ತು ತೆಲಂಗಾಣದ ಯುಗಾದಿ

    ಪೂಜೆ ಮತ್ತು ಅಭ್ಯಂಗ ಸ್ನಾನದೊಂದಿಗೆ ಪ್ರಾರಂಭವ ಹಬ್ಬದ ಆಚರಣೆ. ಮನೆಗಳನ್ನು ಸ್ವಚ್ಛಗೊಳಿಸಿ ಮಾವಿನ ಎಲೆ ತೋರಣ ಮತ್ತು ರಂಗೋಲಿಗಳಿಂದ ಅಲಂಕರಿಸಲಾಗುತ್ತದೆ. ಮುಂದೆ ಪಂಚಾಂಗ ಓದುವಿಕೆಯೊಂದಿಗೆ ವರ್ಷದ ಒಳಿತುಗಳ ಬಗ್ಗೆ ತಿಳಿಯುತ್ತಾರೆ. ಜೀವನದ ವಿವಿಧ ಅನುಭವಗಳನ್ನು ಪ್ರತಿನಿಧಿಸುವ ಆರು ರುಚಿಗಳನ್ನು ಹೊಂದಿರುವ ʻಯುಗಾದಿ ಪಚಡಿʼ ಎಂಬ ಸಾಂಕೇತಿಕ ಖಾದ್ಯವನ್ನು ತಯಾರಿಸಲಾಗುತ್ತದೆ. ಇದನ್ನೂ ಓದಿ: ಯುಗಾದಿ ಸ್ಪೆಷಲ್;‌ ಆರೋಗ್ಯಕರ ಪಚಡಿ ರೆಸಿಪಿ!

    ಕರ್ನಾಟಕದ ಯುಗಾದಿ

    ಯುಗಾದಿಯಂದು ಪ್ರಾರ್ಥನೆ ಮತ್ತು ಎಣ್ಣೆ ಸ್ನಾನದೊಂದಿಗೆ ದಿನವನ್ನು ಆರಂಭಿಸುತ್ತಾರೆ. ನಂತರ ಬೇವು ಮತ್ತು ಬೆಲ್ಲದ ಸೇವಿಸುತ್ತಾರೆ. ಇದು ಜೀವನದ ಸಿಹಿ ಮತ್ತು ಕಹಿ ಕ್ಷಣಗಳನ್ನು ಸಂಕೇತಿಸುತ್ತದೆ. ಅಂದು ದೇವಾಲಯಗಳಿಗೆ ತೆರಳಿ ಒಳಿತಿಗಾಗಿ ದೇವರಲ್ಲಿ ಪ್ರಾರ್ಥಿಸುತ್ತಾರೆ.

    ಮಹಾರಾಷ್ಟ್ರ ಮತ್ತು ಗೋವಾದ ಗುಡಿ ಪಾಡ್ವ

    ವಸಂತ ಋತುವಿನ ಆಗಮನ ಮತ್ತು ರಬಿ ಬೆಳೆಗಳ ಕೊಯ್ಲಿಗೆ ಸೂಚಿಸುವ ಹಬ್ಬದಂದು ಮನೆಗಳಲ್ಲಿ ಗುಡಿ ಅಂದರೆ ಧ್ವಜ ಹಾರಿಸುವ ಮೂಲಕ ಹಬ್ಬವನ್ನು ಆಚರಿಸುತ್ತಾರೆ. ದುಷ್ಟಶಕ್ತಿಗಳನ್ನು ದೂರವಿಡುತ್ತದೆ ಎಂದು ನಂಬಲಾದ ಗುಡಿಯನ್ನು ಉದ್ದವಾದ ಬಿದಿರಿನ ಕೋಲಿನ ಮೇಲೆ ಹಳದಿ, ಹಸಿರು ಅಥವಾ ಕೆಂಪು ಬಣ್ಣದ ರೇಷ್ಮೆ ಬಟ್ಟೆಯಿಂದ ಕಟ್ಟಲಾಗುತ್ತದೆ. ಗುಡಿಯ ಮೇಲೆ ಬೇವಿನ ಎಲೆ, ಮಾವಿನ ಎಲೆ, ಹೂವು ಮತ್ತು ಸಕ್ಕರೆ ಹರಳುಗಳ ಹಾರವನ್ನು ಹಾಕಿ, ತಲೆಕೆಳಗಾದ ಕಂಚು, ಬೆಳ್ಳಿ ಅಥವಾ ತಾಮ್ರದ ಕಲಶದಿಂದ ಅಲಂಕರಿಸುವ ಮೂಲಕ ಆಚರಿಸುತ್ತಾರೆ. ಇದನ್ನೂ ಓದಿ: ಯುಗಾದಿ ವಿಶೇಷ – ಏನಿದು ಗುಡಿಪಾಡ್ವ? ಯಾಕೆ ಈ ಆಚರಣೆ?

    ತಮಿಳುನಾಡಿನ ಪುತಂಡು

    ತಮಿಳರು ಹೊಸ ವರ್ಷವನ್ನು ಸ್ವಾಗತಿಸಲು ಮನೆಗಳನ್ನು ಸ್ವಚ್ಛಗೊಳಿಸುತ್ತಾರೆ. ಹಳೆಯ ವಸ್ತುಗಳನ್ನು ಎಸೆದು, ಮನೆಯ ಮುಂದೆ ರಂಗೋಲಿಯನ್ನು ಬಿಡಿಸುತ್ತಾರೆ. ಹೊಸ ಬಟ್ಟೆಗಳನ್ನು ಧರಿಸುತ್ತಾರೆ. ʻಮಾಂಗ ಪಚಡಿʼ ಎಂಬ ವಿಶೇಷ ಪದಾರ್ಥವನ್ನು ತಯಾರಿಸುತ್ತಾರೆ. 

    ಕೇರಳದ ವಿಷು

    ಕೇರಳದಲ್ಲಿ ಈ ಹಬ್ಬದಂದು ದೇವರ ಕೋಣೆಯಲ್ಲಿ ʻವಿಷು ಕಣಿʼ ಇಡುವ ಸಂಪ್ರದಾಯವಿದೆ. ವಿಷುಕಣಿ ವಿಷು ಹಬ್ಬದ ಪ್ರಮುಖ ಭಾಗವಾಗಿದೆ. ವಿಷು ಹಬ್ಬದ ಹಿಂದಿನ ದಿನವೇ ಮನೆಯನ್ನು ಶುಚಿಗೊಳಿಸಿ ಶೃಂಗಾರ ಮಾಡುತ್ತಾರೆ. ದೇವರ ಕೋಣೆಯಲ್ಲಿ ಕಣಿ ಕಾಣಲು ಬೇಕಾದ ವಸ್ತುಗಳನ್ನು ತಯಾರು ಮಾಡುತ್ತಾರೆ. ದೇವರ ವಿಗ್ರಹ, ಫಲ ವಸ್ತುಗಳು, ನವ ಧಾನ್ಯ, ಹೊಸ ಬಟ್ಟೆ, ಧನ ಇತ್ಯಾದಿಯನ್ನು ಹೊಸ ಮಡಿಕೆಯಲ್ಲಿ ಅಥವಾ ಉರುಳಿ ಪಾತ್ರೆಯಲ್ಲಿ ಬೆಳ್ತಿಗೆ ಅಕ್ಕಿ, ತೆಂಗಿನಕಾಯಿ ಹಾಗೂ ಕನ್ನಡಿಯನ್ನು ಇಡುತ್ತಾರೆ. ಇದನ್ನೂ ಓದಿ: ಬೇವು – ಬೆಲ್ಲ ಸಿಹಿ, ಕಹಿಯ ಸಮಾನ ಹಂಚಿಕೆ ಬಾಳಿಗೊಂದು ಸವಿ ಪಾಠ

    ಈ ರೀತಿಯಾಗಿ ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆಯಾದ ಆಚರಣೆಗಳ ಮೂಲಕ ಯುಗಾದಿ ಹಬ್ಬವನ್ನು ಜನರು ಸಂಭ್ರಮದಿಂದ ಆಚರಿಸುತ್ತಾರೆ. ನವ ಸಂವತ್ಸರದ ಯುಗಾದಿಯು ಕೆಡುಕನ್ನು ಹೋಗಲಾಡಿಸಿ ಒಳಿತನ್ನು ತರುತ್ತದೆ ಎಂಬುದು ಜನರ ನಂಬಿಕೆಯಾಗಿದೆ.

  • ಬೇವು – ಬೆಲ್ಲ ಸಿಹಿ, ಕಹಿಯ ಸಮಾನ ಹಂಚಿಕೆ ಬಾಳಿಗೊಂದು ಸವಿ ಪಾಠ

    ಬೇವು – ಬೆಲ್ಲ ಸಿಹಿ, ಕಹಿಯ ಸಮಾನ ಹಂಚಿಕೆ ಬಾಳಿಗೊಂದು ಸವಿ ಪಾಠ

    ಯುಗಾದಿ ಹಬ್ಬದ (Ugadi 2025) ದಿನ ಬೇವು ಬೆಲ್ಲಕ್ಕೆ (Bevu Bella) ವಿಶೇಷ ಸ್ಥಾನವಿದೆ. ವಿಶೇಷ ಅರ್ಥವನ್ನೊಳಗೊಂಡಿರುವ ಈ ಬೇವು-ಬೆಲ್ಲವನ್ನು ಹಿಂದೂಗಳು ತಪ್ಪದೇ ಯುಗಾದಿ ಹಬ್ಬದಂದು ಸವಿಯುತ್ತಾರೆ. ಕರ್ನಾಟಕದಲ್ಲಿ ಬೇವು-ಬೆಲ್ಲವನ್ನು ತಿನ್ನುವ ಸಂಪ್ರದಾಯವಿದೆ. ಕಹಿಯಾದ ಬೇವು ಜೀವನದಲ್ಲಿ ಬರುವ ಕಷ್ಟ, ದುಃಖಗಳು, ತೊಡಕುಗಳನ್ನು ಪ್ರತಿಬಿಂಬಿಸಿದರೆ, ಸಿಹಿಯಾದ ಬೆಲ್ಲ ಜೀವನದಲ್ಲಿ ಬರುವ ಸಂತೋಷ ಸಂಭ್ರಮಗಳ ಸಂಕೇತವಾಗಿದೆ. ಜೀವನದಲ್ಲಿ ಸುಖ-ದುಃಖ ಇರುತ್ತದೆ. ಎರಡನ್ನೂ ಅನುಭವಿಸಬೇಕೆಂಬ ಅರ್ಥವನ್ನು ನೀಡುವ ಬೇವು-ಬೆಲ್ಲವನ್ನು ವರ್ಷದ ಆರಂಭದ ದಿನ ತಿನ್ನಬೇಕು ಎಂದು ನಮ್ಮ ಹಿರಿಯರು ಅಂದಿನಿಂದ ಪದ್ಧತಿಯಾಗಿ ಮಾಡಿಕೊಂಡು ಬಂದಿದ್ದಾರೆ.

    ಬೇವು-ಬೆಲ್ಲ ಸೇವನೆ ಹಿಂದಿದೆ ವೈಜ್ಞಾನಿಕ ಕಾರಣ
    ಮನುಷ್ಯ ಬೇವು-ಬೆಲ್ಲ ಸೇವನೆಯಿಂದ ಆರೋಗ್ಯಕ್ಕೆ ಹಲವು ಲಾಭಗಳಿವೆ ಎಂದು ತಿಳಿದು ಬಂದಿದೆ.

    ಬೇವು: ಬೇವಿನಲ್ಲಿರುವ ಔಷಧೀಯ ಗುಣಗಳು ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ವಸಂತ ಋತುವಿನ ಆರಂಭದೊಂದಿಗೆ ಸಮೃದ್ಧವಾಗಿ ಬೆಳೆಯುವ ಬೇವು ಇಡೀ ವರ್ಷ ಹಲವು ಆರೋಗ್ಯ ಸಮಸ್ಯೆಗಳಿಗೆ ರಾಮಬಾಣವಾಗಿ ಕೆಲಸ ಮಾಡುತ್ತದೆ. ಇದನ್ನೂ ಓದಿ: ಬ್ರಹ್ಮ ಜಗತ್ತನ್ನು ಸೃಷ್ಟಿಸಿದ ಮಂಗಳಕರ ದಿನ ಯುಗಾದಿ!

    ಬೇವು ಕಹಿಯಾದ ರಸವನ್ನೊಳಗೊಂಡಿರುತ್ತದೆ. ಬೆಲ್ಲದ ಜೊತೆಗೆ ಸೇವಿಸಿದರೆ ಪಿತ್ತದ ಅಂಶ ಕಡಿಮೆಯಾಗಿ ದೇಹ ತಂಪಾಗುತ್ತದೆ. ಇದು ಮುಖ್ಯವಾಗಿ ಪಿತ್ತರಸ ಲವಣಗಳು, ಫಾಸ್ಫೋಲಿಪಿಡ್ ಗಳು, ಕೊಲೆಸ್ಟ್ರಾಲ್, ಎಲೆಕ್ಟೋಲೈಟ್ ಗಳು ಸೇರಿದಂತೆ ನೀರಿನಾಂಶ ಹೊಂದಿರುತ್ತದೆ. ಹಲವು ಗುಣಗಳಿಂದ ಮನುಷ್ಯನ ಆರೋಗ್ಯಕ್ಕೆ ಉತ್ತಮವಾದ ಔಷಧಿಯಾಗಿದೆ.

    ಬೆಲ್ಲ: ಬೆಲ್ಲದಲ್ಲಿ ನೈಸರ್ಗಿಕ ಖನಿಜಾಂಶಗಳು ಇರುತ್ತದೆ. ಇದರಲ್ಲಿ ಕ್ಯಾಲ್ಸಿಯಂ, ಮೆಗ್ನೆಸಿಯಮ್, ಪೊಟ್ಯಾಶಿಯಂ ಅಪಾರವಾಗಿರುತ್ತದೆ. ಬೆಲ್ಲ ಸೇವಿಸಿದರೆ ತೂಕ ನಷ್ಟದ ಜೊತೆಗೆ ಉತ್ತಮ ಜೀರ್ಣಕ್ರಿಯೆಗೆ ಸಹಾಯಕವಾಗಿದೆ. ಬೆಲ್ಲದಲ್ಲಿರುವ ಪೊಟ್ಯಾಶಿಯಂ ಚಯಾಪಚಯವನ್ನು ಉತ್ತಮಗೊಳಿಸುತ್ತದೆ. ಮನುಷ್ಯನಿಗೆ ನಿಶಕ್ತಿಯನ್ನು ದೂರ ಮಾಡುತ್ತದೆ. ಬೆಲ್ಲವನ್ನು ಸೇವಿಸುವುದರಿಂದ ದೇಹ ಚೈತನ್ಯವಾಗಿರುತ್ತದೆ. ಜೀವನದ ಸಿಹಿ ಕಹಿಯ ಪಾಠದ ಜೊತೆಗೆ ಆರೋಗ್ಯದ ದೃಷ್ಟಿಯಿಂದಲೂ ಈ ಬೇವು ಬೆಲ್ಲ ಸಹಕಾರಿಯಾಗಿದೆ. ಇದನ್ನೂ ಓದಿ: ಯುಗಾದಿ ವಿಶೇಷ – ಪಂಚಾಂಗ ಪಠಣ ಮಾಡೋದು ಯಾಕೆ?

  • ಹಬ್ಬದ ಸಂಭ್ರಮದಲ್ಲಿ ಸೀರೆ ಸ್ಟೈಲಿಂಗ್‌ಗೆ ಸಿಂಪಲ್ ಟಿಪ್ಸ್

    ಹಬ್ಬದ ಸಂಭ್ರಮದಲ್ಲಿ ಸೀರೆ ಸ್ಟೈಲಿಂಗ್‌ಗೆ ಸಿಂಪಲ್ ಟಿಪ್ಸ್

    ಯುಗಾದಿ ಹಬ್ಬದ (Ugadi Festival) ಸಂಭ್ರಮಕ್ಕೆ ಸಾಥ್ ನೀಡುವ ರೇಷ್ಮೆ ಸೀರೆಗಳಲ್ಲಿ ನಾರಿಮಣಿಯರು ಆಕರ್ಷಕವಾಗಿ ಕಾಣಿಸುವುದು ತೀರಾ ಸುಲಭ. ಅದಕ್ಕಾಗಿ ಒಂದಿಷ್ಟು ಸ್ಟೈಲಿಂಗ್‌ಗೆ ಐಡಿಯಾಗಳನ್ನು ಫಾಲೋ ಮಾಡಬೇಕು. ಈ ಕುರಿತಂತೆ ಒಂದಿಷ್ಟು ಸಿಂಪಲ್ ಟಿಪ್ಸ್ ನೀಡಿದ್ದಾರೆ. ನೀವು ಧರಿಸುತ್ತಿರುವ ರೇಷ್ಮೆ ಸೀರೆ ಯಾವ ಡಿಸೈನ್ ಹೊಂದಿದೆ? ಯಾವ ಬಗೆಯ ಬಾರ್ಡರ್ ಹೊಂದಿದೆ? ಸಾದಾ, ಪ್ರಿಂಟ್ಸ್, ಹ್ಯಾಂಡ್‌ವರ್ಕ್ ಮಾಡಲಾಗಿದೆಯಾ? ಇಲ್ಲವೇ ಸಿಂಪಲ್ ರೇಷ್ಮೆ ಸೀರೆಯಾ ಎಂಬುದನ್ನು ಮನಗಂಡು ಸ್ಟೈಲಿಂಗ್‌ ಡಿಸೈಡ್ ಮಾಡುವುದು ಉತ್ತಮ.

    ನೀವು ಸೀರೆಗೆ ಹೊಸ ಲುಕ್ ನೀಡಲು ಬಯಸುತ್ತಿರುವಿರಾದಲ್ಲಿ ಕಾಂಟ್ರಾಸ್ಟ್ ಬ್ಲೌಸ್ ಮ್ಯಾಚ್ ಮಾಡಿ. ಸಾದಾ ರೇಷ್ಮೆ ಸೀರೆಯಾದಲ್ಲಿ, ಡಿಸೈನರ್ ಹ್ಯಾಂಡ್‌ವರ್ಕ್ ಅಥವಾ ಡಿಸೈನರ್ ಬ್ಲೌಸ್ ಮ್ಯಾಚ್ ಮಾಡಿ. ಗ್ರ‍್ಯಾಂಡ್ ಸೀರೆಯಾದಲ್ಲಿ ಆದಷ್ಟೂ ಸಿಂಪಲ್ ಬ್ಲೌಸ್ ಧರಿಸಿ. ಇನ್ನು, ಗ್ಲಾಮರಸ್ ಲುಕ್ ಬೇಕಾದಲ್ಲಿ ಸಮ್ಮರ್ ಬ್ಲೌಸ್ ಧರಿಸಿ. ಇದನ್ನೂ ಓದಿ:ವಿಜಯಲಕ್ಷ್ಮಿ ಅಕ್ಕ ಹೋರಾಟ ನೋಡಿ ಅವರೊಂದಿಗೆ ನಿಲ್ಲಬೇಕು ಅನ್ನಿಸಿತು: ದರ್ಶನ್‌ ಕೇಸ್‌ ಬಗ್ಗೆ ಧನ್ವೀರ್ ಮಾತು

    ರೇಷ್ಮೆ ಸೀರೆ ಉಟ್ಟಾಗ ನಿಮ್ಮ ಹೇರ್‌ ಸ್ಟೈಲ್ ನಿಮ್ಮ ಮುಖಕ್ಕೆ ಹೊಂದುವಂತಿರಬೇಕು. ಟ್ರೆಡಿಷನಲ್ ಬೇಕಿದ್ದಲ್ಲಿ ಜಡೆ ಹೆಣೆದು ಡಿಸೈನ್ ಮಾಡಿ. ಮಾಡರ್ನ್ ಲುಕ್ ಬೇಕಿದ್ದಲ್ಲಿ ಫ್ರೀ ಹೇರ್ ಅಥವಾ ಮೆಸ್ಸಿ ಹೇರ್ ಸ್ಟೈಲ್‌ ಯಾವುದಾದರೂ ಡಿಸೈನ್ ಮಾಡಿ. ಕರ್ಲ್ ಮಾಡಿಸಿದಲ್ಲೂ ಆಕರ್ಷಕವಾಗಿ ಕಾಣಿಸುವುದು.

    Temple Jewellery

    ಹಬ್ಬದಂದು ಉಡುವ ರೇಷ್ಮೆ ಸೀರೆಯ ಜ್ಯುವೆಲರಿಗಳು ಆಂಟಿಕ್ ಅಥವಾ ಟ್ರೆಡಿಷನಲ್ ಇದ್ದಲ್ಲಿ ಫೆಸ್ಟಿವ್ ಲುಕ್ ನಿಮ್ಮದಾಗುವುದು. ಹಾರ, ನೆಕ್ಲೇಸ್, ಕಡ, ಇಯರಿಂಗ್ಸ್, ಮಾಂಗ್‌ಟೀಕಾ, ಮಾಟಿ, ಕಮರ್‌ಬಾಂದ್ ನಿಮ್ಮ ರೇಷ್ಮೆ ಸೀರೆಯ ಲುಕ್ ಅನ್ನು ಮತ್ತಷ್ಟು ಸುಂದರವಾಗಿಸುವುದು. ನೋಡಲು ಸುಂದರವಾಗಿ ಕಾಣಿಸುವಿರಿ. ಒಟ್ಟಿನಲ್ಲಿ ಹಬ್ಬದ ದಿನದಂದು ಒಂದಿಷ್ಟು ಸಿಂಪಲ್ ಮೇಕೋವರ್ ಐಡಿಯಾಗಳನ್ನು ಪಾಲಿಸಿದಲ್ಲಿ, ನೀವೂ ಕೂಡ ಸೆಲೆಬ್ರೆಟಿಯಂತೆ ಕಾಣಿಸುವುದರಲ್ಲಿ ಯಾವುದೇ ಸಂಶಯವಿಲ್ಲ.

  • ಯುಗಾದಿ, ರಂಜಾನ್‌ ಹಬ್ಬದ ಹಿನ್ನೆಲೆ ಮಾ.31ರ ವರೆಗೆ ವಿಶೇಷ ಬಸ್‌ – ಇಲ್ಲಿದೆ ಡಿಟೇಲ್ಸ್‌

    ಯುಗಾದಿ, ರಂಜಾನ್‌ ಹಬ್ಬದ ಹಿನ್ನೆಲೆ ಮಾ.31ರ ವರೆಗೆ ವಿಶೇಷ ಬಸ್‌ – ಇಲ್ಲಿದೆ ಡಿಟೇಲ್ಸ್‌

    ಬೆಂಗಳೂರು: ಯುಗಾದಿ ಹಬ್ಬದ ಪ್ರಯುಕ್ತ ಕೆಎಸ್‌ಆರ್‌ಟಿಸಿ (KSRTC) ವತಿಯಿಂದ 2,000 ಹೆಚ್ಚುವರಿ ಬಸ್‌ಗಳ ವಿಶೇಷ ಸಾರಿಗೆ ಸೌಲಭ್ಯ ಕಲ್ಪಿಸಲಾಗಿದೆ. ಈ ವಿಶೇಷ ಬಸ್‌ಗಳು ಮಾರ್ಚ್‌ 28, 29 ಹಾಗೂ 30 ರಂದು ಮೂರು ದಿನ ಬೆಂಗಳೂರಿನಿಂದ (Bengaluru) ರಾಜ್ಯ, ಹೊರ ರಾಜ್ಯದ ಪ್ರಮುಖ ಸ್ಥಳಗಳಿಗೆ ಸಂಚಾರ ನಡೆಸಲಿವೆ.

    ಈ ಬಗ್ಗೆ ಕೆಎಸ್‌ಆರ್‌ಟಿಸಿ ಪ್ರಕಟಣೆ ನೀಡಿದ್ದು, ಮಾರ್ಚ್‌ 30 ರಂದು ಚಂದ್ರಮಾನ ಯುಗಾದಿ, ಮಾರ್ಚ್‌ 31 ರಂದು ರಂಜಾನ್ ಹಬ್ಬವಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಬೆಂಗಳೂರಿನಿಂದ ಪ್ರಯಾಣಿಕರು ತಮ್ಮ ಊರುಗಳಿಗೆ ಸಂಚಾರ ನಡೆಸುತ್ತಾರೆ. ಇವರ ಅನುಕೂಲಕ್ಕಾಗಿ ವಿಶೇಷ ಬಸ್‌ ವ್ಯವಸ್ಥೆ ಮಾಡಲಾಗಿದೆ. ಈ ಹೆಚ್ಚುವರಿ ಬಸ್‌ಗಳು ಮೆಜೆಸ್ಟಿಕ್, ಶಾಂತಿನಗರ, ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಕಾರ್ಯಾಚರಣೆ ನಡೆಸಲಿವೆ. ಇದನ್ನೂ ಓದಿ: ಅಮೆರಿಕ ಜೊತೆಗಿನ ಹಳೆಯ ಸಂಬಂಧಗಳು ಮುಗಿದಿವೆ – ಸುಂಕದ ಬರೆ ಬೆನ್ನಲ್ಲೇ ಕೆನಡಾ ಪ್ರಧಾನಿ ಹೇಳಿಕೆ

    ಮೆಜೆಸ್ಟಿಕ್‌ನಿಂದ…
    ಕೆಂಪೇಗೌಡ ಬಸ್ ನಿಲ್ದಾಣದಿಂದ ಧರ್ಮಸ್ಥಳ, ಕುಕ್ಕೆ ಸುಬ್ರಮಣ್ಯ, ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಗೋಕರ್ಣ, ಶಿರಸಿ, ಕಾರವಾರ, ರಾಯಚೂರು, ಕಲಬುರಗಿ, ಬಳ್ಳಾರಿ, ಕೊಪ್ಪಳ, ಯಾದಗಿರಿ, ಬೀದರ್, ತಿರುಪತಿ, ವಿಜಯವಾಡ, ಹೈದರಾಬಾದ್ ಮುಂತಾದ ಸ್ಥಳಗಳಿಗೆ ಈ ವಿಶೇಷ ಬಸ್‌ ಸಂಚರಿಸಲಿವೆ. ಇದನ್ನೂ ಓದಿ: ವರದಕ್ಷಿಣೆ ಕಿರುಕುಳಕ್ಕೆ ಮಹಿಳೆ ಬಲಿ – ಗಂಡನ ಹಿಂಸೆ ತಾಳಲಾರದೆ ತವರು ಸೇರಿದ್ದ ಪತ್ನಿ

    ಸ್ಯಾಟಲೈಟ್‌ ಬಸ್‌ ನಿಲ್ದಾಣದಿಂದ
    ಮಂಡ್ಯ,ರಾಮನಗರ, ಕುಶಾಲನಗರ, ಚಾಮರಾಜನಗರ, ಕೊಡಗು, ವೀರಾಜಪೇಟೆ, ಪಿರಿಯಾಪಟ್ಟಣಕ್ಕೆ ಬಸ್ ಗಳು ಲಭ್ಯವಿರಲಿದೆ. ಇದನ್ನೂ ಓದಿ: ಪತ್ನಿ ತುಂಡರಿಸಿ ಸೂಟ್‍ಕೇಸ್‍ಗೆ ತುಂಬಿ, ಪುಣೆಯಲ್ಲಿ ವಿಷ ಸೇವಿಸಿದ್ದ ಹಂತಕ!

    ಶಾಂತಿನಗರ ಬಸ್ ನಿಲ್ದಾಣದಿಂದ
    ತಮಿಳುನಾಡು ಮತ್ತು ಕೇರಳ ಕಡೆಗೆ ಅಂದರೆ ಮಧುರೈ, ಕುಂಭಕೋಣ, ಚೆನ್ನೈ, ಕೊಯಮತ್ತೂರ್, ತಿರುಚಿ, ಪಾಲಕ್ಕಾಡ್, ತ್ರಿಶೂರ್, ಏರ್ನಾಕುಲಂ, ಕೋಝಿಕೋಡ್, ಕ್ಯಾಲಿಕಟ್ ಮುಂತಾದ ಸ್ಥಳಗಳಿಗೆ ಹೋಗುವ ಪ್ರತಿಷ್ಠಿತ ಸಾರಿಗೆಗಳನ್ನು ಶಾಂತಿನಗರದಲ್ಲಿನ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದಿಂದ ವಿಶೇಷ ಬಸ್‌ಗಳು ಕಾರ್ಯಾಚರಣೆ ಮಾಡಲಿವೆ.

  • ಬ್ರಹ್ಮ ಜಗತ್ತನ್ನು ಸೃಷ್ಟಿಸಿದ ಮಂಗಳಕರ ದಿನ ಯುಗಾದಿ!

    ಬ್ರಹ್ಮ ಜಗತ್ತನ್ನು ಸೃಷ್ಟಿಸಿದ ಮಂಗಳಕರ ದಿನ ಯುಗಾದಿ!

    ಹೊಸ ಯುಗದ ಆರಂಭವನ್ನು ಯುಗಾದಿ (Ugadi 2025) ಎಂದು ಕರೆಯಲಾಗುತ್ತದೆ. ‘ಯುಗ’ (ವರ್ಷ) ಮತ್ತು ‘ಆದಿ’ (ಆರಂಭ) ಎಂಬರ್ಥ. ಇವು ಸಂಸ್ಕೃತ ಮೂಲದ ಪದಗಳಾಗಿವೆ. ಗ್ರೆಗೋರಿಯನ್ ಕ್ಯಾಲೆಂಡರ್‌ನಲ್ಲಿ ಮಾರ್ಚ್ ಅಂತ್ಯ ಅಥವಾ ಏಪ್ರಿಲ್ ಆರಂಭದಲ್ಲಿ ಬರುವ ಈ ದಿನವು ಹಿಂದೂಗಳಲ್ಲಿ (Hindu) ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ಹೊಂದಿದೆ. ಇನ್ನೂ ಬ್ರಹ್ಮ ಜಗತ್ತನ್ನು ಸೃಷ್ಟಿಸಿದ ಮಂಗಳಕರ ದಿನ ಯುಗಾದಿ ಎಂದು ಆಚರಣೆ ಮಾಡಲಾಗುತ್ತದೆ ಎಂಬ ಉಲ್ಲೇಖ ಪುರಾಣದಲ್ಲಿದೆ.

    ಯುಗಾದಿ ದಿನ ಬೇವು-ಬೆಲ್ಲ (Bevu Bella) ಹಂಚುವು ಪದ್ಧತಿ ಇದೆ. ಇದು ಬದುಕಿನಲ್ಲಿ ಬರುವ ಬೇವು-ಬೆಲ್ಲದಂತೆ ಸಿಹಿ ಕಹಿ ಎರಡನ್ನೂ ಸಮನಾಗಿ ಹೊಂದಿರುತ್ತದೆ ಎಂಬುದನ್ನು ಸಂಕೇತಿಸುತ್ತದೆ. ಈ ದಿನ ಸ್ವಚ್ಛ ಮಾಡಿ, ತೋರಣಗಳಿಂದ ಅಲಂಕಾರ ಮಾಡಿ, ರಂಗೋಲಿ ಹಾಕಿ ಸಿಂಗರಿಸಲಾಗುತ್ತದೆ. ಜನರು ಸೂರ್ಯೋದಯಕ್ಕೆ ಮುಂಚಿತವಾಗಿ ಎದ್ದು ಸಾಂಪ್ರದಾಯಿಕವಾಗಿ ಎಣ್ಣೆ ಸ್ನಾನ ಮಾಡಿ, ಹೊಸ ಬಟ್ಟೆಗಳನ್ನು ಧರಿಸುತ್ತಾರೆ. ದೇವಾಲಯಗಳು, ಮನೆಗಳು ಮತ್ತು ಅಂಗಡಿಗಳ ಪ್ರವೇಶದ್ವಾರಗಳಲ್ಲಿ ಮಾವಿನ ಎಲೆಗಳಿಂದ ತೋರಣ ಕಟ್ಟಲಾಗುತ್ತದೆ. ಅಲ್ಲದೇ, ವಿಶೇಷ ಅಡುಗೆಗಳನ್ನು ಮಾಡಿ ಮನೆಮಂದಿಯಲ್ಲ ಸಂಭ್ರಮದಿಂದ ಊಟ ಮಾಡುತ್ತಾರೆ.

    ಯುಗಾದಿ ಹಬ್ಬ (Ugadi Festival) ಶತ ಶತಮಾನಗಳಿಂದಲೂ ಆಚರಿಸಿಕೊಂಡು ಬಂದ ಹಬ್ಬವಾಗಿದೆ. ಅದರ ಮೂಲವು ಶಾತವಾಹನ ರಾಜವಂಶಕ್ಕೂ ಹಿಂದಿನದು ಎನ್ನುವ ನಂಬಿಕೆಯಿದೆ. ಈ ರಾಜ ವಂಶವು ಇಂದಿನ ಆಂಧ್ರ ಪ್ರದೇಶ, ತೆಲಂಗಾಣ ಮತ್ತು ಮಹಾರಾಷ್ಟ್ರದ ಭಾಗಗಳನ್ನು ಕ್ರಿ.ಪೂ ಸುಮಾರು 230 ರಿಂದ ಕ್ರಿ.ಶ 220 ರವರೆಗೆ ಆಳಿದ ಸಾಮ್ರಾಜ್ಯವಾಗಿದೆ. ಈ ಕಾಲದ ಪ್ರಾಚೀನ ಗ್ರಂಥಗಳು ಮತ್ತು ಶಾಸನಗಳಲ್ಲಿ ಯುಗಾದಿ ಹಬ್ಬದ ಉಲ್ಲೇಖವನ್ನು ಕಾಣಬಹುದಾಗಿದೆ.

    ಹಿಂದೂ ಕ್ಯಾಲೆಂಡರ್ ಪ್ರಕಾರ ಯುಗಾದಿಯನ್ನು ಹೊಸ ವರ್ಷದ ದಿನವಾಗಿ ಆಚರಿಸಲಾಗುತ್ತದೆ. ಈ ಹಬ್ಬವು ಹೊಸ ಯುಗದ ಆರಂಭವನ್ನು ಸಂಕೇತಿಸುತ್ತದೆ. ಬ್ರಹ್ಮಾಂಡದ ಸೃಷ್ಟಿಕರ್ತನಾದ ಬ್ರಹ್ಮನು (Brahma) ಈ ಮಂಗಳಕರ ದಿನದಂದು ಸೃಷ್ಟಿ ಪ್ರಕ್ರಿಯೆಯನ್ನು ಪ್ರಾರಂಭಿಸಿದನು ಎಂಬುದು ಈ ಹಬ್ಬಕ್ಕೆ ಸಂಬಂಧಿಸಿದ ಪೌರಾಣಿಕ ನಂಬಿಕೆಯಾಗಿದೆ. ಹಿಂದೂ ಪುರಾಣದ ಪ್ರಕಾರ, ಬ್ರಹ್ಮ ದೇವ ಈ ದಿನ ವಿಶ್ವವನ್ನು ಸೃಷ್ಟಿಸಿದ. ನಂತರ ಅವನು ದಿನಗಳು, ವಾರಗಳು, ತಿಂಗಳುಗಳು ಮತ್ತು ವರ್ಷಗಳನ್ನು ಸೃಷ್ಟಿಸಿದ. ಆದ್ದರಿಂದ, ಯುಗಾದಿಯನ್ನು ವಿಶ್ವ ಸೃಷ್ಟಿಯ ಮೊದಲ ದಿನ ಎಂದು ನಂಬಲಾಗಿದೆ.

  • ಮರೆಯದಂಥ ಸವಿಸವಿ ಗಳಿಗೆ ತಂದಿತು ʻಯುಗಾದಿʼ

    ಮರೆಯದಂಥ ಸವಿಸವಿ ಗಳಿಗೆ ತಂದಿತು ʻಯುಗಾದಿʼ

    – ಯುಗಾದಿ ಎಂದರೆ ದೇಸಿ ಆಟಗಳ ಕಂಪು – ಪ್ರಾದೇಶಿಗ ಸೊಗಡಿನ ಇಂಪು

    ನವ ವಸಂತದ ಆಗಮನವಾಗುತ್ತಿದ್ದಂತೆ ಪ್ರಕೃತಿಯಲ್ಲೂ ಹೊಸತನದ ಸಂಭ್ರಮ. ಈ ಸಮಯದಲ್ಲಿ ಪ್ರಕೃತಿಯಲ್ಲೂ ತಾಜಾ ಪರಿಮಳದ ಸೊಗಡು ಆವರಿಸುತ್ತದೆ. ಇದೇ ಸಂದರ್ಭದಲ್ಲಿ ಬರುವ ಯುಗಾದಿ ಹಬ್ಬಕ್ಕೆ ಪ್ರಾದೇಶಿಕ ಆಚರಣೆಯ ಸೊಗಡು ಕೂಡ ಸೇರಿ ಬೀರುವ ಕಂಪು ಎಂದೆಂದಿಗೂ ನಿತ್ಯ ನೂತನ. ಹಾಗಾಗಿಯೇ ಯುಗಾದಿ ಹಬ್ಬವನ್ನ (Ugadi Festival) ಹಿಂದೂಗಳ ಹೊಸ ವರ್ಷವೆಂದು ಆಚರಿಸಲಾಗುತ್ತದೆ. ಈ ಹಬ್ಬ ಜನರಲ್ಲಿ ಸಾಕಷ್ಟು ಮಹತ್ವವನ್ನು ಪಡೆದುಕೊಂಡಿದೆ.

    ಯುಗಾದಿ ಹಬ್ಬದ ಸಂಭ್ರಮ ಹೆಚ್ಚಿಸುವ ಪ್ರಕೃತಿಯ ಕಂಪಿಗೆ ಪ್ರಾದೇಶಿಕ ಸೊಗಡು ಸೇರಿದರೆ ಇನ್ನಷ್ಟು ಹಿತ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಅದರಲ್ಲೂ ಪ್ರತಿ ವಿಷಯದಲ್ಲಿ ವೈವಿಧ್ಯತೆಯಲ್ಲಿ ಏಕತೆ ಸಾರುವ ಭಾರತದಲ್ಲಿ ಯುಗಾದಿಯ ಆಚರಣೆ ಕೂಡ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಭಿನ್ನವಾಗಿರುತ್ತದೆ. ಆಯಾ ಪ್ರಾದೇಶಿಕತೆ ಮತ್ತು ಸ್ಥಳೀಯ ಸೊಗಡನ್ನು ತಮ್ಮದಾಗಿಸಿಕೊಂಡು ಪ್ರಾದೇಶಿಕ ರೀತಿಯಲ್ಲಿ ಆಚರಿಸಲ್ಪಡುವ ಯುಗಾದಿ, ಆ ಭಾಗದ ಗ್ರಾಮೀಣ ಸೊಗಡನ್ನು ಇತರರಿಗೆ ಪಸರಿಸುತ್ತದೆ. ಈ ಮೂಲಕ ಸ್ಥಳೀಯ ಸೊಗಡಿನ ಹಬ್ಬದ ಘಮಲು ಆ ಸ್ಥಳೀಯತೆ ಮೀರಿ, ಪ್ರದೇಶ, ಜಿಲ್ಲೆಗಳಿಗೆ ಪಸರಿಸಿ ಗಮನ ಸೆಳೆಯುತ್ತದೆ.

    ಇಂಥ ಸ್ಥಳೀಯ ಸೊಗಡಿನ ಯುಗಾದಿಯಲ್ಲಿ ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಭಾಗದ ಆಚರಣೆ ಪ್ರಮುಖವಾದದ್ದು. ಅಪ್ಪಟ ದೇಸಿ ಶೈಲಿಯಲ್ಲಿ ಆಚರಿಸಲ್ಪಡುವ ಈ ಭಾಗದ ಯುಗಾದಿಯಲ್ಲಿ ಹೊಸ ವರ್ಷದ ಸಂಭ್ರಮ, ನಳನಳಿಸುವ ಪ್ರಕೃತಿ ಮತ್ತು ದೇಸಿ ಸೊಗಡು ಮನೆಮಾಡಿರುತ್ತವೆ. ಆ ಕಡೆ ಗುಡಿ ಪಾಡ್ವ ಎಂದೂ ಕರೆಯಲ್ಪಡುವ ಯುಗಾದಿಗೆ ಮಹಾರಾಷ್ಟ್ರ ಭಾಗದ ಪ್ರಭಾವವೂ ಇದೆ.

    ದೇಸಿ ಆಟಗಳ ಸಿಹಿ-ಕಹಿ ನೆನಪು:
    ಯುಗಾದಿ ಸಂದರ್ಭದಲ್ಲಿ ಆಡುವ ಹಲವು ಆಟಗಳ ಮೂಲಕ ಜನಪದರು ತಮ್ಮ ಕಷ್ಟ ಸುಖ ಹಂಚಿಕೊಳ್ಳುತ್ತಾರೆ. ಹೊಲದಲ್ಲಿ ದುಡಿದು ರಾಶಿ ಮಾಡಿ ಹೊಸ ಬೆಳೆಯನ್ನು ಮನೆ ತುಂಬಿಸಿಕೊಂಡ ನಮ್ಮ ರೈತರು ಯುಗಾದಿ ಬರುವ ಹೊತ್ತಿಗೆ ನಿರಾಳವಾಗಿರುತ್ತಾರೆ. ಹಬ್ಬದ ಸಂದರ್ಭದಲ್ಲಿ ಹಲವಾರು ಜನಪದ ಆಟಗಳು ಗರಿಗೆದರುತ್ತವೆ. ಲಗೋರಿ, ಕಬಡ್ಡಿ, ಚೌಕಾಬಾರ, ಬಟ್ಟೆ ಚಂಡಾಟ, ಚಿನ್ನಿದಾಂಡು, ಬುಗರಿ, ಕುಂಟೆಬಿಲ್ಲೆ, ಸರಗೆರಿ ಹೀಗೆ ಹತ್ತಾರು ಆಟಗಳನ್ನು ವಯಸ್ಸಿನ ಅಂತರವಿಲ್ಲದೇ ಆಡುತ್ತಾರೆ. ಆಟದ ಸೋಲು-ಗೆಲುವುಗಳು ಬರುವ ವರ್ಷದ ಸೋಲು ಗೆಲುವುಗಳನ್ನು ನಿರ್ಣಯಿಸುತ್ತದೆ ಎಂಬ ನಂಬಿಕೆಯೂ ಜನಪದರಲ್ಲಿ ಇದೆ.

  • ಪ್ರಕೃತಿಯ ರಮ್ಯಚೈತ್ರ ಕಾಲವೇ ‘ಯುಗಾದಿ’

    ಪ್ರಕೃತಿಯ ರಮ್ಯಚೈತ್ರ ಕಾಲವೇ ‘ಯುಗಾದಿ’

    ಹೊಸ ಯುಗದ ಆರಂಭ.. ವಸಂತ ಋತುವಿನ ಚೈತ್ರಮಾಸದ ಮೊದಲ ದಿನವೇ ಯುಗಾದಿ (Ugadi). ಪ್ರಕೃತಿಗೂ ಯುಗಾದಿಗೂ ಒಂದು ಅಪೂರ್ವ ನಂಟಿದೆ. ಗಿಡ-ಮರಗಳಲ್ಲಿ ಹಸಿರ ಚಿಗುರು ಪ್ರಕೃತಿಗೆ ಜೀವಕಳೆ ಬರುವ ಕಾಲ. ನವಚೈತನ್ಯ ತುರುವ ಸಂದರ್ಭ. ಪ್ರಕೃತಿಯ ರಮ್ಯಚೈತ್ರ ಕಾಲವೇ ಯುಗಾದಿ.

    ಈ ಜಗತ್ತು ಕಾಲಚಕ್ರದ ಪ್ರತೀಕ. ಕಾಲಚಕ್ರ ಉರುಳಿದಂತೆ ಜಗತ್ತಿನಲ್ಲಿ ಬದಲಾವಣೆ ಆಗುತ್ತಿರುತ್ತದೆ. ಬದಲಾವಣೆ ಜಗದ ನಿಯಮ ಎಂಬ ಮಾತಿನಂತೆ. ಪ್ರಕೃತಿಯ ಮಡಿಲಿನಲ್ಲಿ ಬೀಜ ಮೊಳಕೆ ಒಡೆಯುತ್ತದೆ. ಗಿಡವಾಗುತ್ತದೆ. ಗಿಡ ಮರವಾಗಿ ಬೆಳೆಯುತ್ತದೆ. ಮರದಲ್ಲಿ ಹೂವು ಬಿಡುತ್ತದೆ. ಹೂವು ಕಾಯಾಗಿ, ಕಾಯಿ ಹಣ್ಣಾಗುತ್ತದೆ. ಹಣ್ಣಿನ ಬೀಜ ಮತ್ತೊಂದು ಗಿಡದ ಹುಟ್ಟಿಗೆ ಕಾರಣವಾಗುತ್ತದೆ. ಇದನ್ನೂ ಓದಿ: ಯುಗಾದಿ ಚಂದ್ರನ ದರ್ಶನ – ಏನಿದರ ಮಹತ್ವ?

    ಹುಟ್ಟು-ಬೆಳವಣಿಗೆ-ಮಾರ್ಪಾಡಿನ ಕಾಲಚಕ್ರದ ಆರಂಭದ ಗತಿಯೇ ಯುಗಾದಿ. ಪ್ರಕೃತಿಯಲ್ಲಾಗುವ ಬದಲಾವಣೆಗಳಿಗೆ ಋತುಗಳೆನ್ನುತ್ತೇವೆ. ವಸಂತ ಋತುವಿನ ಚೈತ್ರಮಾಸದ ಮೊದಲ ದಿನ ಯುಗಾದಿ. ಚಿರುಗಿನ ಕ್ಷಣ. ಚಿಗುರು ಹಣ್ಣೆಲೆಯಾಗಿ ಉದುರುವ ಕಾಲಕ್ಕೆ ಸಾಗುವ ಆರಂಭದ ಕ್ಷಣವಿದು. ಮನುಷ್ಯ ಜೀವನವೂ ಹೀಗೆಯೇ ಸಾಗುತ್ತದೆ. ಹುಟ್ಟು; ಬೆಳವಣಿಗೆ; ಮುಪ್ಪು; ಸಾವು ಮತ್ತೆ ಮಾರ್ಪಾಡು. ಕಾಲಚಕ್ರ ಹೀಗೆಯೇ ಉರುಳುತ್ತಿರುತ್ತದೆ.

    ಪ್ರಕೃತಿಯ ಚೈತ್ರ ಕಾಲವನ್ನು ಭಾರತೀಯರು ಸಾಂಪ್ರದಾಯಿಕವಾಗಿ ಸ್ವಾಗತಿಸುತ್ತಾರೆ. ‘ಯುಗಾದಿ’ ಹಬ್ಬ ಆಚರಿಸುತ್ತಾರೆ. ಬದುಕಿನಲ್ಲಿ ಸುಖ-ದುಃಖಗಳನ್ನು ಸಮನಾಗಿ ಸ್ವೀಕರಿಸುವ ಸಂಕೇತವಾಗಿ ಬೇವು-ಬೆಲ್ಲವನ್ನು ತಿನ್ನುತ್ತಾರೆ. ಬೆಲ್ಲವೆಂಬ ಸಿಹಿ ಮತ್ತು ಬೇವು ಎಂಬ ಕಹಿ ಎರಡನ್ನೂ ಪ್ರಕೃತಿಯೇ ನಮಗೆ ಕೊಟ್ಟಿದೆ. ಅಂದರೆ ಮನುಷ್ಯನ ಬದುಕಿನಲ್ಲಾಗುವ ಎಲ್ಲಾ ಬದಲಾವಣೆ ಮತ್ತು ಅನುಭವಗಳಿಗೂ ಪ್ರಕೃತಿಯೇ ಆಧಾರ. ಇದನ್ನೂ ಓದಿ: ವರಲಕ್ಷ್ಮಿ ಶರತ್‌ಕುಮಾರ್ ಜೋಡಿಯನ್ನು ಭೇಟಿಯಾದ ಕಿಚ್ಚ ಫ್ಯಾಮಿಲಿ

    ಹಬ್ಬ ಎಂದರೆ ಸಂಭ್ರಮ. ಮನೆಯನ್ನು ಶುಚಿಗೊಳಿಸಿ, ಮಾವು-ಬೇವು ತಳಿರು ತೋರಣದಿಂದ ಅಲಂಕರಿಸಿ ಚೈತ್ರದ ಚಿಗುರಿನ ಕಾಲವನ್ನು ಸ್ವಾಗತಿಸುವುದು, ದೇವಸ್ಥಾನಗಳಿಗೆ ತೆರಳಿ ಪೂಜೆ-ಪುನಸ್ಕಾರ ಮಾಡುವುದು, ಮನೆಯಲ್ಲಿ ರುಚಿ ರುಚಿಯಾದ ಭಕ್ಷ ಭೋಜ್ಯಗಳನ್ನು ಮಾಡಿ ಸವಿದು ಸಂಭ್ರಮಿಸುವ ಪರಿ ಇದ್ದೇ ಇರುತ್ತದೆ.

    ವಸಂತ ಕಾಲ ಬಂದಾಗ ಮಾವು ಚಿಗುರಲೇ ಬೇಕು ಅಂತ ಹಾಡೇ ಇದೆ. ಮಾವಿನ ಮರದಲ್ಲಿ ಮಾವಿನಕಾಯಿ ನಳನಳಿಸುತ್ತಿರುತ್ತವೆ. ಯುಗಾದಿ ಹಬ್ಬಕ್ಕೆ ಸಿಹಿಯಾದ ಹೋಳಿಗೆ ಜೊತೆಗೆ ಹುಳಿ ಮಾವಿನಕಾಯಿ ಚಿತ್ರಾನ್ನ ಇರಲೇಬೇಕು. ಹುಳಿ, ಸಿಹಿ, ಖಾರ ಯುಗಾದಿ ಹಬ್ಬಕ್ಕೆ ಪೂರಕ.

    ಹೊಸತೊಡಕು
    ಯುಗಾದಿ ಹಬ್ಬದ ಮಾರನೇ ದಿನ ಹೊಸತೊಡಕು ಹಬ್ಬ. ಆ ದಿನ ಮಾಂಸಾಹಾರದ್ದೇ ಕಾರುಬಾರು. ಕುರಿ-ಕೋಳಿಗಳನ್ನು ಬಲಿಕೊಟ್ಟು ಬಗೆ ಬಗೆಯ ಮಾಂಸದಡಿಗೆ ಮಾಡಿ ಸೇವಿಸುತ್ತಾರೆ. ಹೊಸತೊಡಕಿಗಾಗಿಯೇ ಅನೇಕರು ಮುಂಚಿತವಾಗಿ ಚೀಟಿ ಹಾಕಿರುತ್ತಾರೆ. ಚೀಟಿ ದುಡ್ಡಿನಲ್ಲಿ ಮಾಂಸ ಖರೀದಿಸಿ ಪರಸ್ಪರರು ಹಂಚಿಕೊಳ್ಳುತ್ತಾರೆ. ಹಬ್ಬದ ದಿನ ಸಿಹಿ ಮತ್ತು ಮಾರನೇ ದಿನ ಖಾರದ ಊಟ ಮಾಡಿ ಜನ ಸಂಭ್ರಮಿಸುತ್ತಾರೆ.