Tag: ugadi celebration

  • ಹೊಸ ವರುಷ.. ಹೊಸ ಹರುಷದ ಯುಗಾದಿ ಮತ್ತೆ ಬಂದಿದೆ

    ಹೊಸ ವರುಷ.. ಹೊಸ ಹರುಷದ ಯುಗಾದಿ ಮತ್ತೆ ಬಂದಿದೆ

    ಹಿಂದೂಗಳ ವರ್ಷಾರಂಭ ಎಂದೇ ಪರಿಗಣಿಸಲ್ಪಡುವ ಯುಗಾದಿ (Ugadi Festival), ಪ್ರಕೃತಿಯಲ್ಲೂ ಹೊಸ ಚಿಗುರು ಸೃಷ್ಟಿಯ ಕಾಲ. ವಸಂತ ಮಾಸದ ಆರಂಭ. ಋತುಗಳ ರಾಜ ವಸಂತನ ಆಗಮನವನ್ನು ಸೂಚಿಸುವ ಹಬ್ಬ. ಗಿಡಮರಗಳೆಲ್ಲ ತನ್ನ ಹಣ್ಣೆಲೆ ಕಳಚಿಕೊಂಡು ಹೊಸ ಚಿಗುರಿನೊಂದಿಗೆ ಹಸಿರಿನಿಂದ ಕಂಗೊಳಿಸುವ ಸಮಯವಿದು. ಯುಗಾದಿ ಎಲ್ಲರ ಪಾಲಿಗೂ ಸ್ಪೂರ್ತಿ, ಚೈತನ್ಯದ ಚಿಲುಮೆಯಿದ್ದಂತೆ. ಯುಗಾದಿಯನ್ನು ಹಿಂದೂಗಳಷ್ಟೇ ಅಲ್ಲ, ಇಡೀ ಪ್ರಕೃತಿಯೇ ಸಂಭ್ರಮಿಸುತ್ತದೆ. ಯುಗಾದಿ ಬೇಸಾಯದ ಆರಂಭದ ಸೂಚಕವೂ ಹೌದು. ಹಬ್ಬದ ದಿನ ಹಾಗೂ ಮರುದಿನ ಹೊನ್ನಾರು ಹೂಡಿ ಜಮೀನುಗಳಲ್ಲಿ ಶಾಸ್ತ್ರೋಕ್ತವಾಗಿ ನೇಗಿಲು ಉಳುವ ಪದ್ಧತಿ ಇಂದಿಗೂ ನಾಡಿನೆಲ್ಲೆಡೆ ಜೀವಂತವಾಗಿದೆ. ಇದನ್ನು ರೈತರು ಶುಭಸೂಚಕ ಎಂದೇ ಪರಿಗಣಿಸುತ್ತಾರೆ.

    ಬೇವು-ಬೆಲ್ಲ
    ಒಂದೊಂದು ಹಬ್ಬಕ್ಕೂ ಒಂದೊಂದು ಸದಾಶಯದ ಸಂದೇಶವಿರುತ್ತದೆ. ಯುಗಾದಿ ಹಬ್ಬದ ಕೇಂದ್ರಬಿಂದು ಬೇವು-ಬೆಲ್ಲ. ಬಾಯಿಗೆ ಸಿಹಿ ಮತ್ತು ಕಹಿ ರುಚಿ. ಹಾಗೆಯೇ ಬಾಳಿಗೆ ಸುಖ-ದುಃಖದ ಊರಣ. ಬೇವು ನಾಲಿಗೆಗೆ ಕಹಿ ಇರಬಹುದು. ಆದರೆ, ಹಲವು ರೋಗಗಳಿಗೆ ಔಷಧ. ಜೀವನದಲ್ಲಿ ಸುಖದೊಂದಿಗೆ ಬರುವ ಕಷ್ಟಗಳು ಎಂತಹ ಸಂದರ್ಭದಲ್ಲೂ ದಿಟ್ಟವಾಗಿ ನಿಲ್ಲುವ ಛಲವನ್ನು ಕಲಿಸುತ್ತವೆ. ಯುಗಾದಿಯಲ್ಲಿ ನಾವು ಸವಿಯುವ ಬೇವು-ಬೆಲ್ಲ, ಬದುಕಿನ ಪಾಠದ ಸಂಕೇತ. ಇದನ್ನೂ ಓದಿ: ಯುಗಾದಿ ವಿಶೇಷ – ಏನಿದು ಗುಡಿಪಾಡ್ವ? ಯಾಕೆ ಈ ಆಚರಣೆ?

    ಪಾನಕ-ಮಜ್ಜಿಗೆ
    ಯುಗಾದಿ ಹಬ್ಬದ ದಿನ ಹಳ್ಳಿಗಳಲ್ಲಿ ಪಾನಕ-ಮಜ್ಜಿಗೆಯದ್ದೇ ಗಮ್ಮತ್ತು. ಬಾಯಿಗೆ ರುಚಿ, ದೇಹಕ್ಕೆ ತಂಪು. ಯುಗಾದಿ ಬೇಸಿಗೆಯ ಆರಂಭದ ಸೂಚಕವಾದ್ದರಿಂದ ದೇಹವನ್ನು ತಂಪಾಗಿಡಬೇಕು. ಅದಕ್ಕಾಗಿ ಎಲ್ಲೆಲ್ಲೂ ಪಾನಕ-ಮಜ್ಜಿಗೆಯನ್ನು ವಿತರಿಸಲಾಗುತ್ತದೆ. ಹಬ್ಬದ ದಿನ ಈ ಪಾನೀಯಗಳ ರುಚಿಗೆ ಮಾರುಹೋಗದವರಿಲ್ಲ. ಯುಗಾದಿಗೆ ಹೋಳಿಗೆ ಊಟ ಮತ್ತೊಂದು ವಿಶೇಷ.

    ಜೂಜಾಟ
    ಗ್ರಾಮೀಣ ಕ್ರೀಡೆಗಳ ಮೆರುಗು ಯುಗಾದಿ ಹಬ್ಬದಲ್ಲಿರುತ್ತದೆ. ಯುಗಾದಿ ಅಂದಾಕ್ಷಣ ಥಟ್ಟನೆ ನೆನಪಾಗುವುದು ಜೂಜಾಟ. ‘ಅಪರಾಧ’ವೇ ಆಗಿರುವ ಈ ಕ್ರೀಡೆಗೆ ಅದೊಂದು ದಿನ ಮಾಫಿ ಇರುತ್ತದೆ. ಪೊಲೀಸರ ಭಯವಿಲ್ಲದೇ ನೂರು, ಇನ್ನೂರು, ಸಾವಿರ ಎನ್ನುತ್ತಾ ಬೆಟ್ಟು ಕಟ್ಟಿ ಜನ ಇಸ್ಪೀಟ್ ಆಡುತ್ತಾರೆ. ಮೂರೆಲೆ, ಅಂದರ್‌ಬಾಹರ್, ರಮ್ಮಿ, ಜಾಕ್‌ಪಟ್ ಇತ್ಯಾದಿ ಆಟಗಳನ್ನು ಆಡಲಾಗುತ್ತದೆ. ಉತ್ತರ ಕರ್ನಾಟಕ ಭಾಗದಲ್ಲಿ ನಿಂಬೆಹಣ್ಣನ್ನು ದೂರಕ್ಕೆ ಎಸೆಯುವ ವಿಶೇಷ ಆಟವನ್ನು ಆಡುತ್ತಾರೆ. ಹಿಂದೆಲ್ಲ ಪಚ್ಚೆಯಾಟ, ಚೌಕಾಭಾರ ಆಟಗಳನ್ನು ಆಡುತ್ತಿದ್ದರು. ಈಗ ಅವುಗಳ ಸ್ಥಾನವನ್ನು ಇಸ್ಪೀಟ್ ಆಟ ಅತಿಕ್ರಮಿಸಿಕೊಂಡಿದೆ. ಇದನ್ನೂ ಓದಿ: ಬೇವು – ಬೆಲ್ಲ ಸಿಹಿ, ಕಹಿಯ ಸಮಾನ ಹಂಚಿಕೆ ಬಾಳಿಗೊಂದು ಸವಿ ಪಾಠ

    ‘ಯುಗ ಯುಗವೇ ಕಳೆದರೂ.. ಯುಗಾದಿ ಮರಳಿ ಬರುತಿದೆ..’ ಎಂಬ ಕವಿವಾಣಿಯಂತೆ ಯುಗಾದಿ ಮತ್ತೆ ಬಂದಿದೆ. ಹಿಂದೂಗಳ ಹೊಸವರುಷ, ಹೊಸ ಹರುಷದೊಂದಿಗೆ ಆಗಮಿಸಿದೆ. ಮನೆ ತೊಳೆದು, ಹೂವು-ತೋರಣಗಳಿಂದ ಅಲಂಕರಿಸಿ, ಹೊಸ ಉಡುಗೆ ತೊಟ್ಟು, ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿ, ಮನೆಯಲ್ಲಿ ವಿಶೇಷ ಅಡುಗೆ ಮಾಡಿ ಹಬ್ಬದೂಟ ಮಾಡುವ ಸಂಭ್ರಮಕ್ಕೆ ಎಣೆಯಿಲ್ಲ.

  • ನಾಡಿನೆಲ್ಲೆಡೆ ಯುಗಾದಿ ಸಂಭ್ರಮ – ದರ ಏರಿಕೆ, ಬರದಲ್ಲೂ ಹಬ್ಬದ ಸಡಗರ

    ನಾಡಿನೆಲ್ಲೆಡೆ ಯುಗಾದಿ ಸಂಭ್ರಮ – ದರ ಏರಿಕೆ, ಬರದಲ್ಲೂ ಹಬ್ಬದ ಸಡಗರ

    ಬೆಂಗಳೂರು: ಇಂದು ದುರ್ಮುಖಿ ನಾಮ ಸಂವತ್ಸರದ ಹೇವಿಳಂಬಿ ಯುಗಾದಿ ಹಬ್ಬ. ಭೀಕರ ಬರ ಹಾಗೂ ದರ ಏರಿಕೆ ಮಧ್ಯೆಯೂ ರಾಜ್ಯದಲ್ಲಿ ಸಂಭ್ರಮದ ಯುಗಾದಿ ಮನೆ ಮಾಡಿದೆ.

    ಬರದ ಮಧ್ಯೆಯೂ ವರ್ಷದ ಹಬ್ಬ ಮಾಡ್ಬೇಕಲ್ಲ ಅಂತ ಜನ ಬೇವು-ಬೆಲ್ಲ, ಹಣ್ಣು-ಹಂಪಲು ಹಾಗೂ ಹೂವುಗಳನ್ನು ಖರೀದಿ ಮಾಡ್ತಿದ್ದಾರೆ. ಬೆಂಗಳೂರಿನ ವಿವಿಧ ಮಾರ್ಕೆಟ್‍ಗಳಲ್ಲಿ ಖರೀದಿಗಾಗಿ ಜನ ಜಮಾಯಿಸಿದ್ದಾರೆ.

    ದಕ್ಷಿಣ ಭಾರತದಲ್ಲಿ ಯುಗಾದಿಯನ್ನು ಹಿಂದೂಗಳ ಹೊಸವರ್ಷವೆಂದು ಆಚರಣೆ ಮಾಡಲಾಗುತ್ತದೆ. ದೇಶದ ಇತರ ಭಾಗಗಳಲ್ಲಿ ಯುಗಾದಿಯನ್ನು ವಿವಿಧ ಹೆಸರಿನಿಂದ ಆಚರಿಸಲಾಗುತ್ತದೆ. ಆದರೆ ಎಲ್ಲಾ ರಾಜ್ಯಗಳ ಆಚರಣೆಯ ಮಹತ್ವ ಮಾತ್ರ ಹೊಸ ವರ್ಷವನ್ನು ಸ್ವಾಗತಿಸುವುದೇ ಆಗಿರುತ್ತದೆ. ಉತ್ತರ ಭಾರತದಲ್ಲಿ ಕೂಡ ಚೈತ್ರ ನವರಾತ್ರಿ ಹಬ್ಬದ ಸಡಗರ ಇದೆ.

    ಯುಗಾದಿ ಎನ್ನುವುದು ಎರಡು ಸಂಸ್ಕೃತ ಪದಗಳಿಂದ ಬಂದಿದೆ. `ಯುಗ’ ಎಂದರೆ ವರ್ಷ `ಆದಿ’ ಎಂದರೆ ಆರಂಭವೆಂದು ಅರ್ಥ. ಚೈತ್ರ ಮಾಸದ ಮೊದಲ ದಿನವನ್ನು ಯುಗಾದಿಯೆಂದು ಆಚರಿಸಲಾಗುತ್ತದೆ. ಹಿಂದೂ ಪುರಾಣಗಳ ಪ್ರಕಾರ ಬ್ರಹ್ಮ ದೇವನು ಯುಗಾದಿಯಂದು ಈ ಬ್ರಹ್ಮಾಂಡವನ್ನು ಸೃಷ್ಟಿಸಿದ ಮತ್ತು ಅದನ್ನು ಸುಂದರವಾಗಿಸಲು ಹಲವಾರು ತಿದ್ದುಪಡಿಗಳನ್ನು ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ.

    ಮೋದಿ, ಆದಿತ್ಯನಾಥ್ ವೃತ: ಇಂದಿನಿಂದ ಪ್ರಧಾನಿ ನರೇಂದ್ರ ಮೋದಿ ಒಂಭತ್ತು ದಿನ ಅನ್ನ ಆಹಾರ ಸೇವನೆ ಮಾಡದೆ ವ್ರತ ಆಚರಿಸಲಿದ್ದಾರೆ. ಅಂತೆಯೇ ಗೋರಖ್‍ಪುರದ ಅರ್ಚಕರೂ ಆಗಿರುವ ಸಿಎಂ ಯೋಗಿ ಆದಿತ್ಯನಾಥ್ ಅವರು ಸಹ ವ್ರತ ಆಚರಿಸಲಿದ್ದಾರೆ.