Tag: UG

  • ಪದವಿ, ಸ್ನಾತಕೋತ್ತರ ಪದವಿ ಪರೀಕ್ಷೆ ತಡವಾದರೆ, ಮುಂದಿನ ಸೆಮಿಸ್ಟರ್ ಆನ್‍ಲೈನ್ ಬೋಧನೆ ಮುಂದುವರಿಕೆ: ಅಶ್ವಥ್ ನಾರಾಯಣ್

    ಪದವಿ, ಸ್ನಾತಕೋತ್ತರ ಪದವಿ ಪರೀಕ್ಷೆ ತಡವಾದರೆ, ಮುಂದಿನ ಸೆಮಿಸ್ಟರ್ ಆನ್‍ಲೈನ್ ಬೋಧನೆ ಮುಂದುವರಿಕೆ: ಅಶ್ವಥ್ ನಾರಾಯಣ್

    – ಕೊರೊನಾ ಪರಿಸ್ಥಿತಿ ನೋಡಿಕೊಂಡು ಪರೀಕ್ಷೆ, ಭೌತಿಕ ತರಗತಿ ಕುರಿತು ನಿರ್ಧಾರ

    ಬೆಂಗಳೂರು: ವಿಶ್ವವಿದ್ಯಾಲಯಗಳು ಹಾಗೂ ಉನ್ನತ ಶಿಕ್ಷಣ ಕಾಲೇಜುಗಳು ಪದವಿ ಕೋರ್ಸ್‍ಗಳ ಸಮ ಸ್ಥಾನಿಕ ಸೆಮಿಸ್ಟರ್ ಕೋರ್ಸ್‍ಗಳಿಗೆ ಆನ್‍ಲೈನ್ ತರಗತಿಗಳನ್ನು ಮುಂದುವರಿಸಬೇಕು. ಭೌತಿಕ ತರಗತಿಗಳನ್ನು ಆರಂಭಿಸುವ ಕುರಿತು ಕೋವಿಡ್ ಪರಿಸ್ಥಿತಿ ನೋಡಿಕೊಂಡು ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ್ ತಿಳಿಸಿದರು.

    ಬೆಸ ಸ್ಥಾನಿಕ ಸೆಮಿಸ್ಟರ್‍ಗಳಿಗೆ ಪರೀಕ್ಷೆಗಳನ್ನು ಇನ್ನೂ ಪೂರೈಸದ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳು ಕೂಡ ಸಮ ಸ್ಥಾನಿಕ ಸೆಮಿಸ್ಟರ್‍ಗಳಿಗೆ (2ನೇ, 4ನೇ, 6ನೇ ಮತ್ತು 8ನೇ ಸೆಮಿಸ್ಟರ್‍ಗಳು) ಆನ್‍ಲೈನ್ ತರಗತಿಗಳನ್ನು ಶುರು ಮಾಡಬೇಕು. ಬಹುತೇಕ ಕೋರ್ಸ್‍ಗಳಿಗೆ ಕ್ಯಾರಿ ಓವರ್ ಪದ್ಧತಿ ಅನ್ವಯವಾಗುವುದರಿಂದ ಪದವಿ ಕೋರ್ಸ್‍ಗಳ ಬೆಸ ಸ್ಥಾನಿಕ ಸೆಮಿಸ್ಟರ್‍ಗಳಿಗೆ ಕೋವಿಡ್ ಪರಿಸ್ಥಿತಿ ತಹಬಂದಿಗೆ ಬಂದಮೇಲೆ ನಡೆಸಲಾಗುತ್ತದೆ ಎಂದು ಸಚಿವರು ಸ್ಪಷ್ಟಪಡಿಸಿದರು.

    ಕೆಲವು ಎಂಜಿನಿಯರಿಂಗ್ ಮತ್ತು ವೃತ್ತಿಪರ ಕೋರ್ಸ್‍ಗಳಲ್ಲಿ ಮಾತ್ರ ಮುಂದಿನ ಸೆಮಿಸ್ಟರ್‍ಗಳಿಗೆ ಹೋಗಲು ಕ್ಯಾರಿ ಓವರ್ ಪದ್ಧತಿ ಅನ್ವಯವಾಗುವುದಿಲ್ಲ. ಅವುಗಳ ಬಗ್ಗೆ ಕುಲಪತಿಗಳು ಹಾಗೂ ಪ್ರಾಂಶುಪಾಲರುಗಳು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಜೊತೆ ಸಮಾಲೋಚನೆ ನಡೆಸಿ ನಿರ್ಧಾರಕ್ಕೆ ಬರಬೇಕು ಎಂದು ತಿಳಿಸಿದರು.

    ಸ್ನಾತಕೋತ್ತರ ಕೋರ್ಸ್‍ಗಳ ಬಗ್ಗೆ ಪ್ರಸ್ತಾಪಿಸಿದ ಅವರು, ಕೋವಿಡ್ ಕಾರಣದಿಂದಾಗಿ ಕೆಲವು ವಿಶ್ವವಿದ್ಯಾಲಯಗಳಲ್ಲಿ ಮೊದಲ ಸೆಮಿಸ್ಟರ್‍ಗೆ ಪ್ರವೇಶಾತಿ ಪ್ರಕ್ರಿಯೆ ವಿಳಂಬವಾಗಿದೆ. ಆದರೆ ಹೆಚ್ಚಿನ ವಿಶ್ವವಿದ್ಯಾಲಯಗಳಲ್ಲಿ ಈಗಾಗಲೇ ಮೂರನೇ ಸೆಮಿಸ್ಟರ್‍ನ ತರಗತಿಗಳು ಮುಗಿದಿದ್ದು, ಕೆಲವೆಡೆ ಪರೀಕ್ಷೆಗಳು ಕೂಡ ಆರಂಭವಾಗಿದ್ದವು. ಹೀಗಾಗಿ ಸ್ನಾತಕೋತ್ತರ ಕೋರ್ಸ್‍ಗಳಿಗೆ ಸಂಬಂಧಿಸಿದಂತೆ ಮೂರನೇ ಸೆಮಿಸ್ಟರ್‍ನ ತರಗತಿಗಳು ಈಗಾಗಲೇ ಮುಗಿದಿದ್ದು, ಪರೀಕ್ಷೆಗಳನ್ನು ನಡೆಸುವುದು ಮಾತ್ರ ಬಾಕಿ ಉಳಿದಿದ್ದರೆ, ಸಮ ಸ್ಥಾನಿಕ ಸೆಮಿಸ್ಟರ್‍ಗಳಿಗೆ ಆನ್‍ಲೈನ್ ತರಗತಿಗಳನ್ನು ಆರಂಭಿಸಬೇಕು. ಬೆಸ ಸ್ಥಾನಿಕ ಸೆಮಿಸ್ಟರ್‍ಗಳಿಗೆ ಬಾಕಿ ಉಳಿಯುವ ಪರೀಕ್ಷೆಗಳನ್ನು ಕೋವಿಡ್ ನಿಯಂತ್ರಣಕ್ಕೆ ಬಂದಮೇಲೆ ನಡೆಸಲಾಗುವುದು ಎಂದರು.

    ಬೆಸ ಸ್ಥಾನಿಕ ಸೆಮಿಸ್ಟರ್‍ಗಳಿಗೆ (1ನೇ, 3ನೇ, 5ನೇ, 7ನೇ ಸೆಮಿಸ್ಟರ್ ಗಳು) ಇನ್ನೂ ತರಗತಿಗಳನ್ನು ಮುಗಿಸದ ವಿಶ್ವವಿದ್ಯಾಲಯಗಳು ಆನ್‍ಲೈನ್ ತರಗತಿಗಳನ್ನು ಮುಂದುವರಿಸಬೇಕು. ಈ ತರಗತಿಗಳು ಮುಗಿದ ಮೇಲೂ ಕೋವಿಡ್‍ನಿಂದಾಗಿ ಪರೀಕ್ಷೆಗಳನ್ನು ನಡೆಸಲು ಸಾಧ್ಯವಾಗದಿದ್ದರೆ, ತಕ್ಷಣವೇ ಮುಂದಿನ ಸಮ ಸ್ಥಾನಿಕ ಸೆಮಿಸ್ಟರ್‍ಗಳಿಗೆ ಆನ್‍ಲೈನ್ ತರಗತಿಗಳನ್ನು ಶುರುಮಾಡಬೇಕು. ಇದರಿಂದಾಗಿ ಬಾಕಿ ಉಳಿಯುವ ಬೆಸ ಸ್ಥಾನಿಕ ಸೆಮಿಸ್ಟರ್ ಗಳ ಪರೀಕ್ಷೆಗಳನ್ನು ಕೋವಿಡ್ ನಿಯಂತ್ರಣಕ್ಕೆ ಬಂದಮೇಲೆ ನಡೆಸಲಾಗುತ್ತದೆ ಎಂದು ತಿಳಿಸಿದರು.

    ಪರಿಸ್ಥಿತಿಯ ಬೆಳವಣಿಗೆಗಳಿಗೆ ಅನುಗುಣವಾಗಿ ಕುಲಪತಿಗಳು ಮತ್ತು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್‍ನೊಂದಿಗೆ ಸಮಾಲೋಚನೆ ನಡೆಸಲಾಗುವುದು. ಅಲ್ಲಿ ಕೈಗೊಳ್ಳುವ ನಿರ್ಧಾರಗಳನ್ನು ಆಧರಿಸಿ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಪಾಲಿಸಬೇಕಾದ ಮಾರ್ಗದರ್ಶಿ ಸೂತ್ರಗಳು ಹಾಗೂ ವೇಳಾಪಟ್ಟಿಯನ್ನು ರೂಪಿಸಲಾಗುವುದು ಎಂದು ಅವರು ಹೇಳಿದರು.

  • ಪದವಿ, ಸ್ನಾತಕೋತ್ತರ ಪದವಿಯ ಹೊಸ ಕ್ಯಾಲೆಂಡರ್ ಬಿಡುಗಡೆ- ವಾರಕ್ಕೆ ಆರು ದಿನ ಪಾಠ

    ಪದವಿ, ಸ್ನಾತಕೋತ್ತರ ಪದವಿಯ ಹೊಸ ಕ್ಯಾಲೆಂಡರ್ ಬಿಡುಗಡೆ- ವಾರಕ್ಕೆ ಆರು ದಿನ ಪಾಠ

    – ಪ್ರವೇಶ ರದ್ದಾದರೆ ಪೂರ್ತಿ ಶುಲ್ಕ ವಾಪಸ್

    ನವದೆಹಲಿ: ಉನ್ನತ ಶಿಕ್ಷಣ ಸಂಸ್ಥೆಗಳಿಗಾಗಿ ಶಿಕ್ಷಣ ಸಚಿವಾಲಯ ಹೊಸ ಕ್ಯಾಲೆಂಡರ್ ಬಿಡುಗಡೆ ಮಾಡಿದ್ದು, ಕೊರೊನಾದಿಂದಾಗಿ ಕಳೆದು ಹೋಗಿರುವ ಸಮಯವನ್ನು ಸರಿದೂಗಿಸಲು ವಾರದ 6 ದಿನವೂ ತರಗತಿ ನಡೆಸುವಂತೆ ಸೂಚಿಸಲಾಗಿದೆ.

    ವಿಶ್ವವಿದ್ಯಾಲಯ ಧನ ಸಹಾಯ ಆಯೋಗ(ಯುಜಿಸಿ) ಹೊಸ ಶೈಕ್ಷಣಿಕ ಕ್ಯಾಲೆಂಡರ್ ಬಿಡುಗಡೆ ಮಾಡಿದ್ದು, ಅಕ್ಟೋಬರ್ 31ರೊಳಗೆ ಪ್ರವೇಶ ಪ್ರಕ್ರಿಯೆ ಪೂರ್ಣಗೊಳಿಸಬೇಕು. ನವೆಂಬರ್‍ನಿಂದ ಪ್ರಥಮ ವರ್ಷದ ಪದವಿ ಹಾಗೂ ಸ್ನಾತಕೋತ್ತರ ಪದವಿ ತರಗತಿಗಳು ಆರಂಭವಾಗಲಿವೆ. ಅಲ್ಲದೆ ನವೆಂಬರ್ 30ರ ಬಳಿಕ ಯಾವುದೇ ಪ್ರವೇಶಾತಿಯನ್ನು ಅನುಮತಿಸಲಾಗುವುದಿಲ್ಲ ಯುಜಿಸಿ ಸ್ಪಷ್ಟಪಡಿಸಿದೆ.

    ಯುಜಿ, ಪಿಜಿ ಮೊದಲ ವರ್ಷದ ಕ್ಯಾಲೆಂಡರ್
    ಕೊರೊನಾ ವೈರಸ್ ಹಿನ್ನೆಲೆ ಯುಜಿಸಿ ಸಮಿತಿಯ ವರದಿಯನ್ನು ಪುರಸ್ಕರಿಸಿದ್ದು, ಪದವಿ ಹಾಗೂ ಸ್ನಾತಕೋತ್ತರ ಪದವಿ ಶೈಕ್ಷಣಿಕ ಕ್ಯಾಲೆಂಡರ್‍ನ ಮಾರ್ಗಸೂಚಿಗಳನ್ನು ತಿಳಿಸಿದೆ. ಈ ಕುರಿತು ಶಿಕ್ಷಣ ಸಚಿವಾಲಯ ಟ್ವಿಟ್ಟರ್ ಮೂಲಕ ಸ್ಪಷ್ಟಪಡಿಸಿದೆ.

    ಯುಜಿಸಿ ಮೊದಲ ಬಾರಿಗೆ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಪರ್ಯಾಯ ಶೈಕ್ಷಣಿಕ ಕ್ಯಾಲೆಂಡರ್‍ನ್ನು ಏಪ್ರಿಲ್ 29ರಂದು ಬಿಡುಗಡೆ ಮಾಡಿತ್ತು. ಇದರಲ್ಲಿ ವಿಶ್ವವಿದ್ಯಾಲಯಗಳು ಅಂತಿಮ ವರ್ಷದ ಅಥವಾ ಟರ್ಮಿನಲ್ ಪರೀಕ್ಷೆಗಳನ್ನು ಜುಲೈ 1ರಿಂದ ಜುಲೈ 15ರ ವರೆಗೆ ಪರೀಕ್ಷೆ ನಡೆಸಬೇಕು. ತಿಂಗಳ ಕೊನೆಯಲ್ಲಿ ಫಲಿತಾಂಶ ಪ್ರಕಟಿಸಬೇಕು ಎಂದು ಸೂಚಿಸಿತ್ತು.

    ಕೊರೊನಾ ಸಮಯದಲ್ಲಿ ಕಳೆದುಹೋದ ಕಲಿಕೆಯ ಸಮಯವನ್ನು ಸರಿದೂಗಿಸಲು ವಾರದಲ್ಲಿ ಆರು ದಿನ ತರಗತಿಗಳನ್ನು ನಡೆಸಬೇಕು ಎಂದು ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಸೂಚಿಸಲಾಗಿದೆ. ಅಲ್ಲದೆ ವಿರಾಮ ಹಾಗೂ ರಜಾ ದಿನಗಳನ್ನು ಸಹ ಮೊಟಕುಗೊಳಿಸಲಾಗಿದೆ.

    ಪೂರ್ತಿ ಶುಲ್ಕ ವಾಪಸ್
    ಶಿಕ್ಷಣ ಸಚಿವಾಲಯ ಟ್ವಿಟ್ಟರ್ ನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದ್ದು, ಲಾಕ್‍ಡೌನ್ ಹಾಗೂ ಸಂಬಂಧಿತ ಅಂಶಗಳಿಂದಾಗಿ ಪೋಷಕರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಇದನ್ನು ತಪ್ಪಿಸಲು 2020ರ ನವೆಂಬರ್ 30ರ ವರೆಗೆ ವಿದ್ಯಾರ್ಥಿಗಳ ಪ್ರವೇಶ/ ಮೈಗ್ರೇಶನ್ ಗೆ ಸಂಬಂಧಿಸಿದ ಎಲ್ಲ ಹಣವನ್ನು ಪರು ಪಾವತಿ ಮಾಡಲಾಗುವುದು ಎಂದು ತಿಳಿಸಿದೆ.