Tag: udupim srinivas poojary

  • ಪ್ರತೀ ತಿಂಗಳು ಸಪ್ತಪದಿ – ಸಚಿವ ಕೋಟ ಘೋಷಣೆ

    ಪ್ರತೀ ತಿಂಗಳು ಸಪ್ತಪದಿ – ಸಚಿವ ಕೋಟ ಘೋಷಣೆ

    ಉಡುಪಿ: ರಾಜ್ಯ ಮುಜರಾಯಿ ಇಲಾಖೆಯ ಮಹತ್ವಾಕಾಂಕ್ಷೆಯ ಯೋಜನೆಯಾಗಿರುವ ಸಾಮೂಹಿಕ ವಿವಾಹದ ಸಪ್ತಪದಿ ಯೋಜನೆ ಇನ್ಮುಂದೆ ಪ್ರತಿ ತಿಂಗಳು ನಡೆಯಲಿದೆ.

    ಮಹಾಮಾರಿ ಕೋವಿಡ್ ಕಾರಣಕ್ಕೆ ಯೋಜನೆ ನಿಲುಗಡೆಯಾಗಿತ್ತು. ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಉಡುಪಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡುತ್ತಾ ಸಪ್ತಪತಿ ಯೋಜನೆಯ ಮಾಹಿತಿ ನೀಡಿದರು. ರಾಜ್ಯದಲ್ಲಿ 23 ಮಂದಿಗೆ ವಿವಾಹ ಮಾಡಿಸುವ ಕೆಲಸ ಆಗಿದೆ. ಚಿನ್ನದ ಟೆಂಡರ್ ಹಾಕಲು ಯಾರೂ ಮುಂದೆ ಬಂದಿರಲಿಲ್ಲ. ಕಾವೇರಿ ಎಂಪೋರಿಯಂ ಮೂಲಕ ಚಿನ್ನ ಖರೀದಿ ಮಾಡುತ್ತೇವೆ ಎಂದರು.

    ಪ್ರತಿ ತಿಂಗಳು ಸಪ್ತಪದಿ ಸಾಮೂಹಿಕ ವಿವಾಹ ಮಾಡುತ್ತೇವೆ. ಈ ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರ ಯಶಸ್ವಿಯಾಗುತ್ತದೆ. ಆರ್ಥಿಕ ಸಮಸ್ಯೆ ಇರುವವರ ಪಾಲಿಗೆ ಸಪ್ತಪದಿ ಯೋಚನೆ ವರದಾನವಾಗಲಿದೆ ಎಂದರು.

    ರಾಜ್ಯದಲ್ಲಿ ಲವ್ ಜಿಹಾದ್ ವಿರುದ್ಧ ಕಾಯ್ದೆ ಜಾರಿ ಕುರಿತಂತ ಪ್ರಶ್ನೆಗೆ ಉತ್ತರಿಸಿದ ಅವರು, ಸರ್ಕಾರಕ್ಕೆ ಲವ್ ಜಿಹಾದ್ ನಿಯಂತ್ರಣ ತರುವ ಕಾಯ್ದೆ ತರಬೇಕೆಂಬ ಮನಸ್ಸಿದೆ. ಸದ್ಯಕ್ಕೆ ಅದನ್ನು ಸುಗ್ರಿವಾಜ್ಞೆ ಮೂಲಕ ಜಾರಿಗೊಳಿಸಲ್ಲ. ಕಾನೂನು ತರಬೇಕೆಂಬೂದು ನಮ್ಮ ಪಕ್ಷದ, ಸಾರ್ವಜನಿಕರ ಆಶಯವಿದೆ. ನಮ್ಮ ಧರ್ಮದ ಆಶಯ ಕೂಡ ಅದೇ ಆಗಿದೆ. ಮುಂದಿನ ದಿನಗಳಲ್ಲಿ ಈ ಕುರಿತಾದ ಕಠಿಣ ಕಾನೂನು ತರುತ್ತೇವೆ ಎಂದರು.

    ಸಚಿವ ಸಂಪುಟ ವಿಸ್ತರಣೆ ಕುರಿತಂತೆ ಪ್ರತಿಕ್ರಯಿಸಿ, ಸಂಪುಟ ವಿಸ್ತರಣೆ ಮುಖ್ಯಮಂತ್ರಿಗಳ ಪರಮಾಧಿಕಾರ. ಸಿಎಂ ಬಿಎಸ್‍ವೈ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ನಿರ್ಧಾರ ತೆಗೆದುಕೊಳ್ಳುತ್ತಾರೆ. ಕೇಂದ್ರದ ಮುಖಂಡರ ಜೊತೆ ಚರ್ಚೆ ಮಾಡಿ ತೀರ್ಮಾನಿಸುತ್ತಾರೆ. ಪ್ರಮುಖರ ತೀರ್ಮಾನಕ್ಕೆ ನಾವು ಬದ್ಧರಾಗಿರುತ್ತೇವೆ ಎಂದರು.