Tag: Udupi- Chikkamagaluru

  • ಉಡುಪಿ- ಚಿಕ್ಕಮಗಳೂರು ಲೋಕಸಭಾ ಟಿಕೆಟ್ ಮೀನುಗಾರ ಮುಖಂಡ ಯಶ್ ಪಾಲ್‍ಗೆ ನೀಡಿ..!

    ಉಡುಪಿ- ಚಿಕ್ಕಮಗಳೂರು ಲೋಕಸಭಾ ಟಿಕೆಟ್ ಮೀನುಗಾರ ಮುಖಂಡ ಯಶ್ ಪಾಲ್‍ಗೆ ನೀಡಿ..!

    – ಬಿಜೆಪಿ ಕಾರ್ಯಕರ್ತರ ಒತ್ತಾಯ

    ಉಡುಪಿ: ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಲೋಕಸಭಾ ಚುನಾವಣೆಗೆ ಬಿಜೆಪಿ ಪಕ್ಷದಿಂದ ಹೊಸ ಅಭ್ಯರ್ಥಿಯ ಹೆಸರು ಕೇಳಿಬಂದಿದೆ. ತೀವ್ರ ವಿರೋಧದ ನಡುವೆಯೂ ಶೋಭಾ ಕರಂದ್ಲಾಜೆ ಚುನಾವಣೆಗೆ ಸಿದ್ಧತೆ ಮಾಡಿಕೊಂಡಿದ್ದರೂ ಕೂಡ ಮೀನುಗಾರ ಸಮುದಾಯದ ಮುಖಂಡರ ಹೆಸರು ಬಿಜೆಪಿ ವಲಯದಲ್ಲಿ ಓಡಾಡುತ್ತಿದೆ.

    ಉಡುಪಿ-ಚಿಕ್ಕಮಗಳೂರಿಗೆ ಜಯಪ್ರಕಾಶ್ ಹೆಗ್ಡೆ ಅವರನ್ನು ಅಭ್ಯರ್ಥಿಯಾಗಿ ಘೋಷಿಸಬೇಕು ಎಂಬ ಒತ್ತಾಯವೂ ಇಲ್ಲಿ ಜೋರಾಗಿ ಕೇಳಿಬರುತ್ತಿದೆ. ಎರಡೂ ಬಣಗಳ ಲಾಬಿಯೂ ಜೋರಾಗಿರುವಾಗಲೇ ಯಶ್ ಪಾಲ್ ಸುವರ್ಣ ಹೆಸರು ಈ ನಡುವೇ ಪ್ರಸ್ತಾಪವಾಗುತ್ತಿದೆ. ಮೊಗವೀರ ಮುಖಂಡ ಯಶಪಾಲ್ ಸುವರ್ಣ ಅವರು ಸಂಘ ಪರಿವಾರದ ಹಿನ್ನೆಲೆ ಇರುವ ಮೀನುಗಾರಿಕಾ ಫೆಡರೇಷನ್‍ನ ನಾಯಕನಾಗಿದ್ದಾರೆ. ಹಾಗೆಯೇ ಮೀನುಗಾರ ಸಮುದಾಯದ ಮುಂಚೂಣಿ ಮುಖಂಡ ಎನಿಸಿದ್ದಾರೆ.

    ಶೋಭಾ ಕರಂದ್ಲಾಜೆ ಅವರು ರಾಜ್ಯ ರಾಜಕಾರಣಕ್ಕೆ ಮರಳಲು ಬಯಸಿದರೆ, ಯಶಪಾಲ್ ಹೆಸರನ್ನು ಮುಂಚೂಣಿಗೆ ತರಲು ಕಾರ್ಯಕರ್ತರು ಉತ್ಸುಕತೆ ತೋರಿದ್ದಾರೆ. ಆರ್.ಎಸ್.ಎಸ್ ನಾಯಕ ಬಿ.ಎಲ್.ಸಂತೋಷ್ ಅವರ ಮೂಲಕ ಒತ್ತಾಯ ಹೇರಲು ತಯಾರಿಗಳು ನಡೆಯುತ್ತಿವೆ. ಜಯಪ್ರಕಾಶ್ ಹೆಗ್ಡೆಯನ್ನು ಒಪ್ಪದ ಬಿಜೆಪಿ ಮುಖಂಡರು ಶೋಭಾ ಕರಂದ್ಲಾಜೆ ಬದಲಾಗಿ ಯಶ್ ಪಾಲ್ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಿ ಎಂದು ಜನರು ಹೇಳಿದ್ದಾರೆ. ಶೋಭಾ ಕರಂದ್ಲಾಜೆಗೆ ರಾಜ್ಯ ರಾಜಕಾರಣದಲ್ಲಿ ಉನ್ನತ ಸ್ಥಾನ ಕೊಡುವ ಮೂಲಕ ಸ್ಪರ್ಧೆಯಿಂದ ಹಿಂದಕ್ಕೆ ಸರಿಯಲು ಸೂಚಿಸುವ ಸಾಧ್ಯತೆ ಇದೆ ಎಂದು ಕರಾವಳಿಯ ಬಿಜೆಪಿ ವಲಯದಲ್ಲಿ ಚರ್ಚೆಯಾಗುತ್ತಿದೆ. ವಾಟ್ಸಾಪ್, ಫೇಸ್‍ಬುಕ್‍ನಲ್ಲಿ ಇಂತಹ ಸಂದೇಶ ಹರಿದಾಡುತ್ತಿದೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಯಶ್ ಪಾಲ್ ಸುವರ್ಣ, ನಾನೊಬ್ಬ ಬಿಜೆಪಿಯ ಸಕ್ರಿಯ ಕಾರ್ಯಕರ್ತ. ಹೋರಾಟದಿಂದ ಬಂದವನು. ಹಿಂದೂ ಸಂಘಟನೆಯಲ್ಲಿ ಗುರುತಿಸಿಕೊಂಡು ಪಕ್ಷ ಬಲವರ್ಧನೆಗೆ ಹಗಲು ರಾತ್ರಿ ದುಡಿದಿದ್ದೇನೆ. ದೇಶ ಸೇವೆ, ಜನಸೇವೆ ಮಾಡಬೇಕೆಂಬ ಉದ್ದೆಶದಿಂದ ಮದುವೆಯಾಗದೆ ಬ್ರಹ್ಮಚಾರಿಯಾಗಿದ್ದೇನೆ. ಜೀವದ ಕೊನೆಯ ಉಸಿರು ಇರೋವರೆಗೆ ಜನರ ಕಷ್ಟ ಸುಖದ ಜೊತೆ ಇರುತ್ತೇನೆ. ಪಕ್ಷ, ನಾಯಕರು ಅವಕಾಶ ಕೊಟ್ಟರೆ ಸ್ಪರ್ಧೆ ಮಾಡುತ್ತೇನೆ ಎಂದು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv