Tag: Udumba

  • ಉಡುಂಬಾ: ಆಕ್ಷನ್ ಕಿಕ್ಕಿನೊಂದಿಗೆ ಕಡಲ ಕಿನಾರೆಯಲ್ಲರಳೋ ಪ್ರೇಮಕಥೆ!

    ಉಡುಂಬಾ: ಆಕ್ಷನ್ ಕಿಕ್ಕಿನೊಂದಿಗೆ ಕಡಲ ಕಿನಾರೆಯಲ್ಲರಳೋ ಪ್ರೇಮಕಥೆ!

    ಬೆಂಗಳೂರು: ಕರಾವಳಿ ಸೀಮೆಯಲ್ಲಿ ಜರುಗೋ ಕಥೆಯೆಂದಾಕ್ಷಣ ಕನ್ನಡದ ಪ್ರೇಕ್ಷಕರು ಅದರತ್ತ ಕಣ್ಣರಳಿಸಿ ನೋಡುತ್ತಾರೆ. ಆ ಕಾರಣದಿಂದಲೇ ಕಡಲ ಕಿನಾರೆಯ ಕಥೆ ಹೊಂದಿರುವ ಉಡುಂಬಾನತ್ತಲೂ ಕುತೂಹಲವಿತ್ತು. ಹಾಡುಗಳು ಮತ್ತು ಟ್ರೇಲರ್ ಮೂಲಕವೇ ಅದನ್ನು ಮತ್ತಷ್ಟು ತೀವ್ರವಾಗಿಸಿಕೊಂಡಿದ್ದ ಈ ಚಿತ್ರವೀಗ ಪ್ರೇಕ್ಷಕರ ಮುಂದೆ ಬಂದಿದೆ. ಪಕ್ಕಾ ಆಕ್ಷನ್ ಕಿಕ್ ನೀಡುತ್ತಲೇ ಕಡಲ ಕಿನಾರೆಯಲ್ಲರಳಿಕೊಳ್ಳೋ ಈ ಪ್ರೇಮ ಕಥೆಗೆ ನೋಡುಗರೆಲ್ಲರೂ ಮನಸೋತಿದ್ದಾರೆ.

    ಶಿವರಾಜ್ ನಿರ್ದೇಶನದಲ್ಲಿ ಮೂಡಿ ಬಂದಿರೋ ಮೊದಲ ಚಿತ್ರ ಉಡುಂಬಾ. ಅವರು ಒಂದಷ್ಟು ವರ್ಷಗಳ ತಮ್ಮ ಅನುಭವಗಳನ್ನೆಲ್ಲ ಧಾರೆಯೆರೆದು ಈ ಚಿತ್ರವನ್ನು ರೂಪಿಸಿರೋ ರೀತಿ ಪ್ರಧಾನವಾಗಿ ಪ್ರೇಕ್ಷಕರನ್ನು ತಟ್ಟುತ್ತದೆ. ಆಕ್ಷನ್ ಅಂಶಗಳೇ ಪ್ರಧಾನವಾಗಿದ್ದರೂ ಎಲ್ಲ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗುವ, ಎಲ್ಲರನ್ನೂ ಕಾಡುವ ರೀತಿಯಲ್ಲಿ ದೃಶ್ಯ ಕಟ್ಟಿರೋ ಪರಿ ಎಲ್ಲರನ್ನೂ ಬೆರಗಾಗಿಸುತ್ತದೆ. ಮೀನುಗಾರಿಕೆಯನ್ನೇ ಬದುಕಾಗಿಸಿಕೊಂಡು, ಪ್ರೀತಿಯಲ್ಲೇ ಬಿದ್ದು ತೊಯ್ದಾಡೋ ಸಾಮಾನ್ಯರಲ್ಲಿ ಸಾಮಾನ್ಯ ಹುಡುಗನೊಬ್ಬ ಉಡುಂಬಾವತಾರ ತಾಳಿ ಅಬ್ಬರಿಸೋ ರೀತಿ ಬೆಚ್ಚಿ ಬೀಳಿಸುವಂತೆ ಮೂಡಿ ಬಂದಿದೆ.

    ಉಡುಂಬಾ ಚಿತ್ರದ ಕಥೆಯೆಲ್ಲ ಜರುಗೋದು ಕಡಲ ಕಿನಾರೆಯ ಒಂದೂರಿನಲ್ಲಿ. ಇಲ್ಲಿ ಮೀನುಗಾರಿಕೆ ನಡೆಸಿ ಅದನ್ನು ಮಾರಿಯೇ ಬದುಕುವ ಶಿವು ಎಂಬ ಹುಡುಗ ಈ ಕಥೆಯ ಕೇಂದ್ರ ಬಿಂದು. ಆ ಪಾತ್ರದಲ್ಲಿ ಪವನ್ ಶೌರ್ಯ ಮನದುಂಬಿ ನಟಿಸಿದ್ದಾರೆ. ಇಂಥಾ ಹುಡುಗ ಅದೇ ಊರಿನ ಹುಡುಗಿಯೊಂದಿಗೆ ಲವ್ವಲ್ಲಿ ಬೀಳುತ್ತಾನೆ. ಹೀಗೆ ಒಂದಷ್ಟು ಕಾಲ ಪ್ರೇಮದ ಉನ್ಮಾದದಲ್ಲಿ ತೇಲಾಡೋ ಶಿವು ಪಾಲಿಗೆ ಪ್ರೀತಿಯ ಹುಡುಗಿಯೇ ಒಂದು ಶಾಕ್ ಕೊಡುತ್ತಾಳೆ. ಅದೇ ಹುಡುಗಿಯ ಮೇಲೆ ಆ ಊರಿನ ಪರಮ ದುಷ್ಟನ ಮಗನೂ ಕಣ್ಣಿಟ್ಟಿರುತ್ತಾನೆ. ಈ ಹೊಯ್ದಾಟದಲ್ಲಿ ಶಿವು ಒದ್ದಾಡುವಾಗಲೇ ಆ ಊರಲ್ಲೊಂದು ಘಟನೆ ನಡೆಯುತ್ತೆ. ಅದು ತನ್ನನ್ನು ಸುತ್ತಿಕೊಳ್ಳುತ್ತಲೇ ಆತ ಉಡುಂಬಾವತಾರ ತಾಳಿ ಮಾಸ್ ಗೆಟಪ್ಪಿನಲ್ಲಿ ಅಬ್ಬರಿಸುತ್ತಾನೆ.

    ಆ ನಂತರದಲ್ಲಿ ಕಥೆ ಮಹಾ ವೇಗದೊಂದಿಗೆ ಮೈನವಿರೇಳಿಸುವಂತೆ ಸಾಗುತ್ತೆ. ಹಾಗಾದರೆ ಆ ಘಟನೆಯೇನು, ಹುಡುಗಿ ಸಾದಾ ಸೀದಾ ಶಿವುಗೆ ನೀಡಿದ ಶಾಕ್ ಎಂಥಾದ್ದೆಂಬ ಪ್ರಶ್ನೆಗಳಿಗಿಲ್ಲಿ ಮಜವಾದ ಉತ್ತರವಿದೆ. ಅದನ್ನು ಥೇಟರಿಗೆ ಹೋಗಿಯೇ ನೋಡಿದರೆ ಒಳ್ಳೆಯದು. ಅಂತೂ ಮೊದಲ ಪ್ರಯತ್ನದಲ್ಲಿಯೇ ನಿರ್ದೇಶಕರಾಗಿ ಶಿವರಾಜ್ ಮನಗೆದ್ದಿದ್ದಾರೆ. ನಾಯಕಿಯಾಗಿ ಚಿರಶ್ರೀ ಅಂಚನ್ ನಟನೆಯೂ ಆ ಪಾತ್ರಕ್ಕೆ ತಕ್ಕುದಾಗಿ ಮುದ್ದಾಗಿದೆ. ಶರತ್ ಲೋಹಿತಾಶ್ವ ಆ ಪಾತ್ರಕ್ಕೆ ತಕ್ಕಂತೆ ಆರ್ಭಟಿಸಿದ್ದಾರೆ. ಕ್ಯಾಮೆರಾ, ಹಿನ್ನೆಲೆ ಸಂಗೀತ, ಹಾಡುಗಳು, ಸಂಕಲನ ಸೇರಿದಂತೆ ಎಲ್ಲವೂ ಉಡುಂಬಾನ ಶಕ್ತಿಯಾಗಿಯೇ ಕಾಣಿಸುತ್ತದೆ. ಇದು ತಾಜಾ ಕಥೆ ಹೊಂದಿರೋ ಚಿತ್ರ. ನೀವು ಯಾವ ವರ್ಗಕ್ಕೆ ಸೇರಿದ ಪ್ರೇಕ್ಷಕರೇ ಆಗಿದ್ದರೂ ಉಡುಂಬಾ ಖಂಡಿತಾ ನಿಮಗಿಷ್ಟವಾಗುತ್ತಾನೆ.

    ರೇಟಿಂಗ್ 3/5

  • ಹಲವು ವರ್ಷದ ತಪಸ್ಸಿಗೆ ಒಲಿದವನು ಉಡುಂಬಾ!

    ಹಲವು ವರ್ಷದ ತಪಸ್ಸಿಗೆ ಒಲಿದವನು ಉಡುಂಬಾ!

    ಬೆಂಗಳೂರು: ಕಡಲ ಕಿನಾರೆಯಲ್ಲಿ ಮೀನುಗಾರಿಕೆ ನಡೆಸೋ ಜನರ ನಡುವಿನ ಹುಡುಗನೊಬ್ಬನ ಕಥೆ ಹೊಂದಿರೋ ಚಿತ್ರ ಉಡುಂಬಾ. ನಿರ್ದೇಶಕ ಶಿವರಾಜ್ ಈ ಹಿಂದೆ ಒಂದಷ್ಟು ತಮಿಳು ಮತ್ತು ತೆಲುಗು ಚಿತ್ರಗಳ ನಿರ್ದೇಶನ ವಿಭಾಗದಲ್ಲಿ ಕಾರ್ಯ ನಿರ್ವಹಿಸಿದ್ದವರು. ಅಂಥಾ ಅನುಭವಗಳನ್ನೆಲ್ಲ ಒಟ್ಟುಗೂಡಿಸಿಯೇ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.

    ಮೂಲತಃ ಕನ್ನಡಿಗರೇ ಆಗಿರುವ ಶಿವರಾಜ್ ಬೇರೆ ಭಾಷೆಗಳ ಚಿತ್ರಗಳ ಮೂಲಕ ಅನುಭವ ದಕ್ಕಿಸಿಕೊಂಡಿದ್ದರೂ ತಾನು ನಿರ್ದೇಶನ ಮಾಡೋ ಮೊದಲ ಚಿತ್ರ ಕನ್ನಡದ್ದೇ ಆಗಿರಬೇಕೆಂಬ ಅಚಲ ಆಕಾಂಕ್ಷೆಯಿಟ್ಟುಕೊಂಡಿದ್ದರು. ಈ ತಪನೆಯಲ್ಲಿ ಈ ಸಿನಿಮಾಗಾಗಿ ವರ್ಷಗಟ್ಟಲೆ ಕಾದಿದ್ದಾರೆ. ವಿಶಿಷ್ಟವಾದ ಕಥೆಗೆ ಅಷ್ಟೇ ಶ್ರಮವಹಿಸಿ ಕಾವು ಕೊಟ್ಟು ಚೆಂದದ ಚಿತ್ರವನ್ನು ಕಟ್ಟಿಕೊಟ್ಟ ಖುಷಿಯಲ್ಲಿದ್ದಾರೆ. ಮೊದಲ ಪ್ರಯತ್ನದಲ್ಲಿಯೇ ಚಿತ್ರವೊಂದು ಈ ಥರದಲ್ಲಿ ಕ್ರೇಜ್ ಹುಟ್ಟು ಹಾಕಿರೋದು ನಿರ್ದೇಶಕರು ಮಾತ್ರವಲ್ಲದೇ ಇಡೀ ಚಿತ್ರತಂಡದ ಖುಷಿ ಹೆಚ್ಚಿಸಿದೆ.

    ಇದೇ ತಿಂಗಳ 23ರಂದು ಈ ಚಿತ್ರ ತೆರೆಕಾಣುತ್ತಿದೆ. ಈಗ ಎಲ್ಲಿ ನೋಡಿದರೂ ಉಡುಂಬಾನದ್ದೇ ಅಬ್ಬರ. ಒಂದಷ್ಟು ತಡವಾಗುತ್ತಲೇ ಸಾಗಿ ಬಂದರೂ ಕಡೇಯ ಕ್ಷಣಗಳಲ್ಲಿ ಈ ಚಿತ್ರ ಸಖತ್ ಆಗಿಯೇ ಸೌಂಡು ಮಾಡುತ್ತಿದೆ. ಪವನ್ ಶೌರ್ಯರ ರಗಡ್ ನಟನೆ, ನಾಯಕಿ ಚಿರಶ್ರೀ ಅಂಚನ್‍ರ ಮುಗ್ಧ ಅಭಿನಯ, ಶರತ್ ಲೋಹಿತಾಶ್ವರ ವಿಶಿಷ್ಟವಾದ ಪಾತ್ರಗಳ ಝಲಕ್ಕುಗಳೊಂದಿಗೆ ಉಡುಂಬಾ ಬಹು ನಿರೀಕ್ಷಿತ ಚಿತ್ರವಾಗಿಯೂ ಬಿಂಬಿತವಾಗಿದೆ. ಹೀಗೆ ಅಬ್ಬರಿಸುತ್ತಲೇ ಶಿವರಾಜ್‍ರ ಮೊದಲ ಕನಸಿನಂತಾ ಉಡುಂಬಾ ಥೇಟರಿನತ್ತ ಧಾವಿಸಿ ಬರುತ್ತಿದ್ದಾನೆ.

  • ಉಡುಂಬನಿಗೆ ಫಿದಾ ಆದ ಪುರಿ ಜಗನ್ನಾಥ್, ಡ್ಯಾನಿಶ್!

    ಉಡುಂಬನಿಗೆ ಫಿದಾ ಆದ ಪುರಿ ಜಗನ್ನಾಥ್, ಡ್ಯಾನಿಶ್!

    ಒಂದು ಪರಿಣಾಮಕಾರಿಯಾದ ಟ್ರೇಲರ್ ಹೇಗಿರಬೇಕನ್ನೋದಕ್ಕೆ ಒಂದಷ್ಟು ಮಾಸ್ಟರ್ ಪೀಸ್‍ನಂಥಾ ಉದಾಹರಣೆಗಳು ಸಿಗುತ್ತವೆ. ಕನ್ನಡದಲ್ಲಿಯೂ ಅಂಥಾದ್ದೊಂದಷ್ಟು ಉದಾಹರಣೆಗಳು ಖಂಡಿತಾ ಇವೆ. ಅದಕ್ಕೆ ಇತ್ತೀಚಿನ ತಾಜಾ ಉದಾಹರಣೆಯಾಗಿ ಉಡುಂಬಾ ಟ್ರೇಲರ್ ಅನ್ನೂ ದಾಖಲಿಸಬಹುದು. ಶಿವರಾಜ್ ನಿರ್ದೇಶನದ ಉಡುಂಬಾ ಟ್ರೇಲರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿ ಟ್ರೆಂಡಿಂಗ್‍ನಲ್ಲಿದೆ. ಇದೇ 23ರಂದು ಬಿಡುಗಡೆಯಾಗಲಿರೋ ಈ ಚಿತ್ರದ ಬಗ್ಗೆ ಕುತೂಹಲ ನಿಗಿನಿಗಿಸುವಂತಾಗಿರೋದರಲ್ಲಿ ಈ ಟ್ರೇಲರ್ ಪಾಲು ಪ್ರಧಾನವಾಗಿದೆ.

    ಪವನ್ ಶೌರ್ಯ ನಾಯಕನಾಗಿ ನಟಿಸಿರೋ ಈ ಚಿತ್ರದಲ್ಲಿ ಹುಲಿರಾಯ ಖ್ಯಾತಿಯ ಚಿರಶ್ರೀ ಅಂಚನ್ ನಾಯಕಿಯಾಗಿ ಜೊತೆಯಾಗಿದ್ದಾರೆ. ಉಡುಂಬಾ ಅನ್ನೋದು ಮೇಲುನೋಟಕ್ಕೆ ರಗಡ್ ಸ್ಟೋರಿಯಾಗಿ ಕಾಣಿಸುತ್ತದೆ. ಅದರಲ್ಲಿ ಸತ್ಯವೂ ಇದೆ. ಆದರೆ ಈ ಚಿತ್ರದಲ್ಲಿ ಬರೀ ಮಾಸ್ ಅಂಶಗಳು ಮಾತ್ರವೇ ಇದೆ ಅಂದುಕೊಳ್ಳುವಂತಿಲ್ಲ. ಪ್ರೀತಿ, ಸೆಂಟಿಮೆಂಟ್, ಕಾಮಿಡಿ ಎಲ್ಲವೂ ಇದೆ. ಅದೆಲ್ಲವನ್ನು ಮಾಸ್ ಅಬ್ಬರದ ಜೊತೆಗೆ ಬ್ಲೆಂಡ್ ಮಾಡಿ ಕಟ್ಟಿ ಕೊಡೋ ಮೂಲಕ ಈ ಟ್ರೇಲರ್ ಪ್ರೇಕ್ಷಕರನ್ನೆಲ್ಲ ಉಡುಂಬಾನತ್ತ ಆಕರ್ಷಿತರಾಗುವಂತೆ ಮಾಡಿ ಬಿಟ್ಟಿದೆ.

    ಇದು ಕಡಲಮಕ್ಕಳೆಂದೇ ಬಿಂಬಿತರಾಗಿರೋ ಮೀನುಗಾರರ ಲೋಕದಲ್ಲಿ ನಡೆಯೋ ರೋಚಕ ಕಥೆಯ ಚಿತ್ರ. ಈಗಾಗಲೇ ಒಂದಷ್ಟು ಚಿತ್ರಗಳು ಈ ಜಗತ್ತಿನತ್ತ ಕಣ್ಣೋಟ ಬೀರಿವೆ. ಆದರೆ ಉಡುಂಬಾನದ್ದು ಮಾತ್ರ ಈ ವರೆಗೆ ಯಾವ ಚಿತ್ರದಲ್ಲಿಯೂ ಕಂಡಿರದ ಸ್ಟೋರಿ ಅನ್ನೋ ಭರವಸೆ ಚಿತ್ರತಂಡದಲ್ಲಿದೆ. ಟ್ರೇಲರ್ ನೋಡಿದ ಪ್ರೇಕ್ಷಕರು ಮಾತ್ರವಲ್ಲದೇ ಚಿತ್ರರಂಗದವರು, ಪರಭಾಷೆಯ ಗಣ್ಯರೂ ಹಾಡಿ ಹೊಗಳುತ್ತಿದ್ದಾರೆ. ತೆಲುಗಿನ ಸ್ಟಾರ್ ನಿರ್ದೇಶಕ ಪುರಿ ಜಗನ್ನಾಥ್ ಮತ್ತು ಬಾಲಿವುಡ್ ಖ್ಯಾತ ನಟ ಹಾಗೂ ಕುರುಕ್ಷೇತ್ರದ ಭೀಮ ಡ್ಯಾನಿಶ್ ಕೂಡಾ ಉಡುಂಬಾದಲ್ಲಿನ ಪವನ್ ಶೌರ್ಯ ನಟನೆಯನ್ನು ಮೆಚ್ಚಿಕೊಂಡು ಶುಭ ಕೋರಿದ್ದಾರೆ.

  • ಉಡದಂಥ ಹುಂಬ ಉಡುಂಬ ಮಹಾನ್ ಪ್ರೇಮಿ!

    ಉಡದಂಥ ಹುಂಬ ಉಡುಂಬ ಮಹಾನ್ ಪ್ರೇಮಿ!

    ಬೆಂಗಳೂರು: ಶಿವರಾಜ್ ನಿರ್ದೇಶನ ಮಾಡಿರೋ ಉಡುಂಬಾ ಚಿತ್ರ ಕಡಲ ತಡಿಯ ರಗಡ್ ಕಥೆ ಹೊಂದಿದೆ ಅನ್ನೋದಕ್ಕೆ ಇತ್ತೀಚೆಗೆ ಬಿಡುಗಡೆಯಾಗಿದ್ದ ಟ್ರೇಲರ್ ಸಾಕ್ಷಿಯಾಗಿದೆ. ಅದರಲ್ಲಿ ತನಗಾದ ಅನ್ಯಾಯದ ವಿರುದ್ಧ, ಊರ ದುಷ್ಟರ ವಿರುದ್ಧ ಮುಗಿಬಿದ್ದು ಕಾದಾಡುವ ನಾಯಕನ ಮಾಸ್ ಪಾತ್ರಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಆದರೆ ಈ ಕಥೆ ಕೇವಲ ಮಾಸ್ ಸನ್ನಿವೇಶಗಳಿಗೆ ಮಾತ್ರವೇ ಸೀಮಿತವಾಗಿಲ್ಲ. ಎದುರು ನಿಂತವರ ಪಕ್ಕೆ ಮುರಿಯುವಂತೆ ಎಗರಾಡೋ ಹುಂಬ ಉಡುಂಬಾನ ಸುತ್ತ ಎಂಥವರನ್ನಾದರೂ ಕಾಡುವಂಥಾ ಪ್ರೇಮ ಕಥಾನಕವೂ ಇದೆ.

    ಪವನ್ ಶೌರ್ಯ ಉಡುಂಬಾ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ. ಹುಲಿರಾಯ ಖ್ಯಾತಿಯ ಚಿರಶ್ರೀ ಅಂಚನ್ ನಾಯಕಿಯಾಗಿ, ಮುಗ್ಧ ಹುಡುಗಿಯಾಗಿ ಉಡುಂಬಾನಿಗೆ ಸಾಥ್ ಕೊಟ್ಟಿದ್ದಾರೆ. ಈಗಾಗಲೇ ಈ ಜೋಡಿಯ ಕಾಂಬಿನೇಷನ್ನಿನಲ್ಲಿ ಮೂಡಿಬಂದಿರೋ ಹಾಡುಗಳೆಲ್ಲವೂ ಸೂಪರ್ ಹಿಟ್ ಆಗಿವೆ. ಪವನ್ ಶೌರ್ಯ ಮತ್ತು ಚಿರಶ್ರೀ ಅಂಚನ್ ಸೂಪರ್ ಪೇರ್ ಆಗಿಯೂ ಗುರುತಿಸಿಕೊಂಡಿದ್ದಾರೆ. ಈ ಜೋಡಿಯಷ್ಟೇ ಮುದ್ದಾದ ಪ್ರೇಮ ಕಥೆಯೊಂದು ನಿಮಗಾಗಿ ಕಾಯುತ್ತಿದೆ.

    ನಾಯಕನಾಗಿ ಪವನ್ ಶೌರ್ಯ ಅವರಿಗಿಲ್ಲಿ ಪಕ್ಕಾ ಸವಾಲಿನಂಥಾ ಪಾತ್ರಗಳಿವೆಯಂತೆ. ಉಡುಂಬನಾಗಿ ಅಬ್ಬರದ ನಟನೆ ಕೊಟ್ಟಿರುವ ಪವನ್ ಪಾಲಿಗೆ ಪ್ರೇಮಿಯಾಗಿ ಮತ್ತೊಂದು ಶೇಡಿನಲ್ಲಿ ಮುಗ್ಧತೆಯನ್ನು ಆವಾಹಿಸಿಕೊಂಡು ನಟಿಸುವ, ಪ್ರೇಮರಸವನ್ನು ತುಂಬಿಕೊಂಡು ತೆರೆ ಮೇಲೆ ಕಾಣಿಸಿಕೊಳ್ಳುವ ಸವಾಲೂ ಎದುರಾಗಿತ್ತು. ಅದನ್ನವರು ಅತ್ಯಂತ ಶ್ರದ್ಧೆಯಿಂದ ಎಲ್ಲರನ್ನೂ ಕಾಡುವಂತೆ ನಿರ್ವಹಿಸಿದ್ದಾರಂತೆ. ಅವರ ಪಾತ್ರ ಅದೆಷ್ಟು ಪರಿಣಾಮಕಾರಿಯಾಗಿ ಮೂಡಿ ಬಂದಿದೆ ಅನ್ನೋದಕ್ಕೆ ಟ್ರೇಲರ್‌ಗೆ ಬಂದಿರೋ ಅಗಾಧ ಪ್ರಮಾಣದ ಪ್ರತಿಕ್ರಿಯೆಗಳೇ ಸಾಕ್ಷಿ.

  • ಉಡುಂಬಾನ ವೆಜಿಟೆಬಲ್ ಸಿಕ್ಸ್‌ಪ್ಯಾಕ್‌ ಸಾಹಸ!

    ಉಡುಂಬಾನ ವೆಜಿಟೆಬಲ್ ಸಿಕ್ಸ್‌ಪ್ಯಾಕ್‌ ಸಾಹಸ!

    ಬೆಂಗಳೂರು:ಶಿವರಾಜ್ ನಿರ್ದೇಶನದಲ್ಲಿ ಮೂಡಿ ಬಂದಿರೋ ಉಡುಂಬಾ ಇದೇ ತಿಂಗಳ ಇಪ್ಪತ್ಮೂರನೇ ತಾರೀಕಿನಂದು ಬಿಡುಗಡೆಗೆ ರೆಡಿಯಾಗಿದೆ. ಈ ಹಿಂದೆ ಗೂಳಿಹಟ್ಟಿ ಚಿತ್ರದಲ್ಲಿ ಅಬ್ಬರದ ನಟನೆ ನೀಡಿ ಮೊದಲ ಪ್ರಯತ್ನದಲ್ಲೇ ಗಮನ ಸೆಳೆದಿದ್ದ ಪವನ್ ಶೌರ್ಯ ಈಗ ಉಡುಂಬಾನಾಗಿ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದ್ದಾರೆ. ಇದೇ ತಿಂಗಳ 23ರಂದು ಬಿಡುಗಡೆಯಾಗಲಿರೋ ಈ ಚಿತ್ರದಲ್ಲಿನ ಪವನ್ ನಟನೆ ಟ್ರೇಲರ್ ಮೂಲಕವೇ ಮೆಚ್ಚುಗೆ ಗಳಿಸಿಕೊಳ್ಳುತ್ತಿದೆ. ಉಡುಂಬನಾಗಲು ಪವನ್ ಮಾಡಿರೋ ಕಸರತ್ತುಗಳೇ ಅಂಥಾದ್ದಿವೆ.

    ಪವನ್ ಶೌರ್ಯ ಮೊದಲ ಚಿತ್ರ ಗೂಳಿಹಟ್ಟಿಗಾಗಿಯೂ ಇಂಥಾದ್ದೇ ತಯಾರಿಯೊಂದಿಗೆ ಅಖಾಡಕ್ಕಿಳಿದಿದ್ದರು. ಅದರಲ್ಲಿಯೂ ಉಡುಂಬಾ ಚಿತ್ರದ ಕಥೆಯಲ್ಲಿ ನಾಯಕನ ಪಾತ್ರ ದೈಹಿಕವಾಗಿಯೂ ಹಲವಾರು ರೂಪಾಂತರಗಳನ್ನು ಬೇಡುವಂಥಾದ್ದು. ಆದರೆ ಅದಕ್ಕೆ ಇಡೀ ಚಿತ್ರತಂಡವೇ ಬೆರಗಾಗುವಂತೆ ಪವನ್ ಶೌರ್ಯ ಜೀವ ತುಂಬಿದ್ದಾರೆ. ಅದರಲ್ಲಿಯೂ ವ್ರತ ಹಿಡಿದಿದ್ದ ಸಂದರ್ಭದಲ್ಲಿ ಬರೀ ವೆಜ್ ಆಹಾರ ಪದ್ಧತಿಯಲ್ಲಿಯೇ ಅವರು ಸಿಕ್ಸ್ ಪ್ಯಾಕ್ ತಮ್ಮದಾಗಿಸಿಕೊಂಡಿದ್ದೊಂದು ಸಾಹಸ!

    ಚಿತ್ರೀಕರಣ ಆರಂಭವಾದಾಗ ನಿರ್ದೇಶಕರು ಕಥೆಗೆ ಪೂರಪಕವಾಗಿ ಸಿಕ್ಸ್ ಪ್ಯಾಕ್ ಮಾಡಿಕೊಳ್ಳಬೇಕೆಂಬ ಬೇಡಿಕೆ ಇಟ್ಟಿದ್ದರಂತೆ. ಆದರೆ ಆ ಸಂದರ್ಭದಲ್ಲಿ ಮನೆಮಂದಿ ಅದ್ಯಾವುದೋ ವ್ರತ ಹಿಡಿದಿದ್ದರಿಂದ ಪವನ್ ಪಾಲಿಗೂ ನಾನ್‍ವೆಜ್ ಮರೀಚಿಕೆಯಾಗಿತ್ತು. ಆದರೂ ಅದನ್ನೇ ಸವಾಲಾಗಿ ಸ್ವೀಕರಿಸಿದ ಪವನ್ ದಿನಾ ಎರಡು ಹೊತ್ತು ತಲಾ ಮೂರು ಗಂಟೆಗಳ ಕಾಲ ಬೆವರಿಳಿಸಿ ಕೇವಲ ಎರಡೇ ತಿಂಗಳಲ್ಲಿ ಸಿಕ್ಸ್ ಪ್ಯಾಕನ್ನು ತಮ್ಮದಾಗಿಸಿಕೊಂಡಿದ್ದರಂತೆ.

     

    ಅಷ್ಟಕ್ಕೂ ಬಾಡಿ ಫಿಟ್ನೆಸ್ ಪವನ್ ಅವರಿಗೇನೂ ಹೊಸತಲ್ಲ. ಅವರು ಬೆಂಗಳೂರಿನ ಕೆಂಗೇರಿಯಲ್ಲಿ ಸ್ವಂತದ ಜಿಮ್ ಸೆಂಟರ್ ಅನ್ನೂ ಹೊಂದಿದ್ದಾರೆ. ಆ ಭಾಗದಲ್ಲಿ ಅವರು ಜಿಮ್ ಪವನ್ ಎಂದೇ ಫೇಮಸ್. ಆ ಜಿಮ್ ಸಾಹಚರ್ಯವನ್ನವರು ಸಿನಿಮಾಗಳಿಗೂ ಪೂರಕವಾಗಿ ಬಳಸಿಕೊಳ್ಳಲಿದ್ದಾರೆ. ಹೀಗೆ ಹಲವಾರು ದೈಹಿಕ ಕಸರತ್ತುಗಳನ್ನು ನಡೆಸಿರೋ ಈ ವೆಜೆಟೆಬಲ್ ಸಿಕ್ಸ್ ಪ್ಯಾಕ್ ಉಡುಂಬಾನನ್ನು ಕಣ್ತುಂಬಿಕೊಳ್ಳೋ ಕ್ಷಣಗಳು ಹತ್ತಿರಾಗಿವೆ.