Tag: UDF

  • LDF, UDF ರಾಜ್ಯದ ಪರಿಸ್ಥಿತಿ ಹದಗೆಡಿಸುತ್ತಿವೆ- ಕೇರಳದಲ್ಲಿ ವಿಪಕ್ಷಗಳ ವಿರುದ್ಧ ಮೋದಿ ವಾಗ್ದಾಳಿ

    LDF, UDF ರಾಜ್ಯದ ಪರಿಸ್ಥಿತಿ ಹದಗೆಡಿಸುತ್ತಿವೆ- ಕೇರಳದಲ್ಲಿ ವಿಪಕ್ಷಗಳ ವಿರುದ್ಧ ಮೋದಿ ವಾಗ್ದಾಳಿ

    ಪಾಲಕ್ಕಾಡ್: ಕೇರಳದ ಆಡಳಿತಾರೂಢ ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್ (LDF) ಮತ್ತು ಕಾಂಗ್ರೆಸ್ ನೇತೃತ್ವದ ಯುಡಿಎಫ್ (UDF) ರಾಜ್ಯದ ಸ್ಥಿತಿಯನ್ನು ಹದಗೆಡಿಸುತ್ತಿವೆ. ಕೇರಳದ (Kerala) ಜನರು ಎಲ್‌ಡಿಎಫ್ ಮತ್ತು ಯುಡಿಎಫ್ ಎರಡರ ಬಗ್ಗೆ ಎಚ್ಚರದಿಂದಿರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಪಾಲಕ್ಕಾಡ್‌ನಲ್ಲಿ (Palakkad) ಸಾರ್ವಜನಿಕ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೇರಳ ಅಥವಾ ಪಶ್ಚಿಮ ಬಂಗಾಳದಲ್ಲಿ ಎಲ್ಲಾ ಎಡ ಸರ್ಕಾರಗಳು ಒಂದೇ ಆಗಿದ್ದು, ಅವರು ಅಭಿವೃದ್ಧಿಗೆ ಅಡ್ಡಗಾಲು ಹಾಕುತ್ತಾರೆ ಎಂದು ಆರೋಪಿಸಿದರು. ಕೇರಳ ಮತ್ತು ಇಡೀ ಪ್ರದೇಶದ ಅಭಿವೃದ್ಧಿಗೆ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಪ್ರಯತ್ನಗಳಿಗೆ ವಿರೋಧ ಪಕ್ಷಗಳು ಅಡ್ಡಿಪಡಿಸುತ್ತವೆ. ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಅಡ್ಡಿಪಡಿಸಲು ಪ್ರಯತ್ನಿಸುತ್ತಿದ್ದಾರೆ ಮತ್ತು ಕೇಂದ್ರ ಸರ್ಕಾರ ರಾಜ್ಯಕ್ಕೆ ಮೀಸಲಿಟ್ಟ ಹಣವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ: ಕೇಜ್ರಿವಾಲ್‍ರನ್ನು ಭಯೋತ್ಪಾದಕನಂತೆ ನಡೆಸಿಕೊಳ್ಳಲಾಗುತ್ತಿದೆ: ಪಂಜಾಬ್ ಸಿಎಂ

    ಪಶ್ಚಿಮ ಬಂಗಾಳದಿಂದ ಕೇರಳದವರೆಗೆ ಎಲ್ಲಾ ಎಡಪಂಥೀಯ ಸರ್ಕಾರಗಳ ಸ್ವಭಾವ ಸಾಮಾನ್ಯವಾಗಿದೆ. ಅವರಿಗೆ ಯಾವ ಎಡವಿಲ್ಲ ಮತ್ತು ಯಾವ ಬಲವಿಲ್ಲ. ಕೇರಳದಲ್ಲಿ ಕಾಂಗ್ರೆಸ್ ಎಡ ಪಕ್ಷದ ಜನರನ್ನು ‘ಭಯೋತ್ಪಾದಕರು’ ಎಂದು ಕರೆಯುತ್ತದೆ. ಆದರೆ ದೆಹಲಿಯಲ್ಲಿ ಕಾಂಗ್ರೆಸ್ ಮತ್ತು ಈ ‘ಭಯೋತ್ಪಾದಕರು’ ಒಟ್ಟಿಗೆ ಕುಳಿತು ಒಟ್ಟಿಗೆ ತಿನ್ನುತ್ತಾರೆ ಮತ್ತು ಚುನಾವಣೆಗೆ ತಂತ್ರಗಳನ್ನು ಮಾಡುತ್ತಾರೆ. ಇಂತಹ ಜನರ ಬಗ್ಗೆ ಎಚ್ಚರಿಕೆ ಇರಲಿ ಎಂದು ಹರಿಹಾಯ್ದರು. ಇದನ್ನೂ ಓದಿ: ಕುಟುಂಬದೊಂದಿಗೆ ಅಯೋಧ್ಯೆಯಲ್ಲಿ ರಾಮನವಮಿ ಆಚರಣೆಗೆ ಅರುಣ್‌ ಯೋಗಿರಾಜ್‌ ಪ್ಲಾನ್‌

    ಕಾಂಗ್ರೆಸ್‌ನ ದೊಡ್ಡ ನಾಯಕರೊಬ್ಬರು ಉತ್ತರ ಪ್ರದೇಶದಲ್ಲಿ ತಮ್ಮ ಕುಟುಂಬದ, ಸ್ಥಾನದ ಗೌರವವನ್ನು ಉಳಿಸಿಕೊಳ್ಳಲು ಕಷ್ಟಪಟ್ಟಿದ್ದಾರೆ. ಈಗ ಚುನಾವಣೆ ಗೆಲ್ಲಲು ಕೇರಳದಲ್ಲಿ ತಮ್ಮ ಹೊಸ ನೆಲೆಯನ್ನು ಕಂಡುಕೊಂಡಿದ್ದಾರೆ. ರಾಷ್ಟ್ರವಿರೋಧಿ ಧೋರಣೆಗಾಗಿ ದೇಶದಲ್ಲಿ ನಿಷೇಧಕ್ಕೊಳಗಾಗಿರುವ ಸಂಘಟನೆಯೊಂದರ ರಾಜಕೀಯ ವಿಭಾಗದ ಜೊತೆ ಕಾಂಗ್ರೆಸ್ ಹಿಂಬಾಗಿಲ ಒಪ್ಪಂದ ಮಾಡಿಕೊಂಡಿದೆ. ಕಾಂಗ್ರೆಸ್‌ನ ಯುವರಾಜ ಕೇರಳದ ಜನರಲ್ಲಿ ಮತ ಕೇಳುತ್ತಾರೆ. ಆದರೆ ನಿಮ್ಮ ಸಮಸ್ಯೆಗಳ ಬಗ್ಗೆ ಒಂದೇ ಒಂದು ಮಾತನ್ನೂ ಹೇಳುವುದಿಲ್ಲ ಎಂದು ಪರೋಕ್ಷವಾಗಿ ವಯನಾಡ್‌ನಿಂದ ಸ್ಪರ್ಧಿಸಿರುವ ರಾಹುಲ್ ಗಾಂಧಿ ಅವರನ್ನು ಟೀಕಿಸಿದರು. ಇದನ್ನೂ ಓದಿ: ಪ್ರಹ್ಲಾದ್‌ ಜೋಶಿ 2 ಲಕ್ಷಕ್ಕೂ ಹೆಚ್ಚು ಲೀಡ್ ಪಡೆದು ಗೆಲ್ತಾರೆ : ಬಿಎಸ್‌ವೈ ವಿಶ್ವಾಸ

  • ಕೇರಳದಲ್ಲಿ ಮತ್ತೆ ಅಧಿಕಾರದತ್ತ ಎಲ್‍ಡಿಎಫ್ – 3 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ

    ಕೇರಳದಲ್ಲಿ ಮತ್ತೆ ಅಧಿಕಾರದತ್ತ ಎಲ್‍ಡಿಎಫ್ – 3 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ

    ತಿರುವನಂತಪುರಂ: ಕೇರಳದಲ್ಲಿ ಮತ್ತೆ ಪಿಣರಾಯ್ ವಿಜಯನ್ ಅಧಿಕಾರಕ್ಕೆ ಏರುವ ಸಾಧ್ಯತೆ ಹೆಚ್ಚಿದೆ.ಆರಂಭಿಕ ಎಣಿಕೆಗಳಲ್ಲಿ ಎಲ್‍ಡಿಎಫ್ ಮೈತ್ರಿಕೂಟ ಮುನ್ನಡೆಯಲ್ಲಿದೆ.

    ಎಲ್‍ಡಿಎಫ್ ಮೈತ್ರಿಕೂಟ 78 ರಲ್ಲಿ ಮುನ್ನಡೆ ಸಾಧಿಸಿದರೆ ಕಾಂಗ್ರೆಸ್ ನೇತೃತ್ವದ ಯುಡಿಎಫ್ 57 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಸದ್ಯದ ಟ್ರೆಂಡ್ ಪ್ರಕಾರ ಬಿಜೆಪಿ 3 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದರೆ ಇತರರು 3 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.

    ಆರಂಭದಲ್ಲಿ ಬಿಜೆಪಿ ಕೋಯಿಕ್ಕೋಡ್ ದಕ್ಷಿಣ ಮತ್ತು ಕಾಸರಗೋಡಿನಲ್ಲಿ ಮುನ್ನಡೆ ಸಾಧಿಸಿತ್ತು. ಸದ್ಯ ಬಿಜೆಪಿಯಿಂದ ಸ್ಪರ್ಧಿಸಿರುವ ಮೆಟ್ರೋ ಮ್ಯಾನ್ ಶ್ರೀಧರನ್ ಅವರು ಪಾಲಕ್ಕಾಡ್‍ನಲ್ಲಿ ಮುನ್ನಡೆ ಸಾಧಿಸಿದ್ದಾರೆ. ತ್ರಿಶ್ಯೂರಿನಲ್ಲಿ ಸುರೇಶ್ ಗೋಪಿ ಮುನ್ನಡೆಯಲ್ಲಿದ್ದಾರೆ.

    ನೇಮಂನಲ್ಲಿ ಕುಮ್ಮನಂ ರಾಜಶೇಖರ್ ಮುನ್ನಡೆಯಲ್ಲಿದ್ದಾರೆ. 2016ರ ಚುನಾವಣೆಯಲ್ಲಿ ಮೊದಲ ಬಾರಿಗೆ ಇಲ್ಲಿ ಕಮಲ ಅರಳಿತ್ತು. ಮಾಜಿ ಕೇಂದ್ರ ಸಚಿವ ಒ ರಾಜಗೋಪಾಲ್ ಇಲ್ಲಿ ಗೆಲುವು ಸಾಧಿಸಿದ್ದರು.

  • ಕೇರಳದಲ್ಲಿ ಪಿಣರಾಯಿ ‘ವಿಜಯ’ನ್ ಪತಾಕೆ – ಒಂದಂಕಿಗೆ ಸೀಮಿತವಾದ ಬಿಜೆಪಿ

    ಕೇರಳದಲ್ಲಿ ಪಿಣರಾಯಿ ‘ವಿಜಯ’ನ್ ಪತಾಕೆ – ಒಂದಂಕಿಗೆ ಸೀಮಿತವಾದ ಬಿಜೆಪಿ

    – ಕಾಂಗ್ರೆಸ್ ಬೆಂಬಲಿತ ಯುಡಿಎಫ್‍ಗೆ ನಿರಾಸೆ

    ನವದೆಹಲಿ: ಕೇರಳದಲ್ಲಿ ಸಿಎಂ ಪಿಣರಾಯಿ ವಿಜಯನ್ ವಿಜಯದ ಪತಾಕೆ ಹಾರಿಸಿದ್ದು, ಮತ್ತೊಮ್ಮೆ ಸಿಎಂ ಸ್ಥಾನ ಅಲಂಕರಿಸೋದು ಪಕ್ಕಾ ಆಗಿದೆ. ಚುನಾವಣೋತ್ತರ ಸಮೀಕ್ಷೆಗಳು ಪಿಣರಾಯಿ ವಿಜಯನ್ ಗೆಲುವನ್ನೇ ಹೇಳಿತ್ತು.

    ಪಶ್ಚಿಮ ಬಂಗಾಳದಲ್ಲಿ ಎಲ್‍ಡಿಎಫ್ ಜೊತೆ ಮೈತ್ರಿ ಮಾಡಿಕೊಂಡಿದ್ದ ಕಾಂಗ್ರೆಸ್ ಇಲ್ಲಿ ಅದರ ವಿರುದ್ಧವೇ ರಣರಂಗಕ್ಕೆ ಇಳಿದಿತ್ತು. ಕೇರಳದ ವಯನಾಡು ಕ್ಷೇತ್ರದ ಸಂಸದರಾಗಿರುವ ರಾಹುಲ್ ಗಾಂಧಿ ಸಾಲು ಸಾಲು ಸಮಾವೇಶಗಳಲ್ಲಿ ತೊಡಗಿಕೊಂಡಿದ್ದರು. ರಾಹುಲ್ ಗಾಂಧಿ ಕೇರಳದ ಜನಪ್ರತಿನಿಧಿ ಆಗಿದ್ದರಿಂದ ಕಾಂಗ್ರೆಸ್ ಗೆಲುವಿನ ಬಗ್ಗೆ ಹೆಚ್ಚು ಚರ್ಚೆಗಳು ನಡೆದಿದ್ದವು.

    ಯಾರಿಗೆ ಎಷ್ಟು ಕ್ಷೇತ್ರ?: ಕೇರಳ ಒಟ್ಟು ವಿಧಾನಸಭಾ ಕ್ಷೇತ್ರಗಳು – 140

    * ಇಂಡಿಯಾ ಟುಡೇ-ಆಕ್ಸಿಸ್ ಮೈ ಇಂಡಿಯಾ
    ಎಲ್‍ಡಿಎಫ್: 104-120
    ಯುಡಿಎಫ್+ಕಾಂಗ್ರೆಸ್: 20-36
    ಬಿಜೆಪಿ: 0-2
    ಇತರೆ: 0-2

    * ಟೈಮ್ಸ್ ನೌ-ಸಿ ವೋಟರ್
    ಎಲ್‍ಡಿಎಫ್: 74
    ಯುಡಿಎಫ್+ಕಾಂಗ್ರೆಸ್: 65
    ಬಿಜೆಪಿ: 1
    ಇತರೆ: 0

    * ಟುಡೇಸ್ ಚಾಣಕ್ಯ
    ಎಲ್‍ಡಿಎಫ್: 93-111
    ಯುಡಿಎಫ್+ಕಾಂಗ್ರೆಸ್: 26-44
    ಬಿಜೆಪಿ: 0-6
    ಇತರೆ: 0-3

    * ಸಿಎನ್‍ಎಕ್ಸ್
    ಎಲ್‍ಡಿಎಫ್: 72-80
    ಯುಡಿಎಫ್+ಕಾಂಗ್ರೆಸ್: 58-64
    ಬಿಜೆಪಿ: 1-5
    ಇತರೆ: 0

    ಕೇರಳದಲ್ಲಿ ನೆಲೆ ಇಲ್ಲದ ಬಿಜೆಪಿ ಖಾತೆ ತೆರೆಯುವಲ್ಲಿ ಯಶಸ್ವಿಯಾಗಿದೆ. ಆದ್ರೆ ಒಂದಂಕಿ ಸಾಧನೆ ಮಾತ್ರ ಆಗಿದೆ. ಕೊರೊನಾ ಸಮಯದಲ್ಲಿ ನಿರ್ವಹಣೆ ಪಿಣರಾಯಿ ವಿಜಯನ್ ಪ್ಲಸ್ ಪಾಯಿಂಟ್ ಅಂತ ವಿಮರ್ಶಕರು ಒತ್ತಿ ಒತ್ತಿ ಹೇಳಿದ್ದಾರೆ. ಇತ್ತ ಮೆಟ್ರೋ ಮ್ಯಾನ್ ಇ.ಶ್ರೀಧರನ್ ಅವರನ್ನ ಬಿಜೆಪಿ ಕರೆ ತಂದಿತ್ತು. ಇ.ಶ್ರೀಧರನ್ ಅವರೇ ಬಿಜೆಪಿಯ ಸಿಎಂ ಅಭ್ಯರ್ಥಿ ಅಂತ ಇಡೀ ಚುನಾವಣೆಯಲ್ಲಿ ಬಿಂಬಿತವಾಗಿತ್ತು. ಇತ್ತ ನಮ್ಮ ರಾಜ್ಯದ ಸಚಿವರು ಸಹ ಕೇರಳದಲ್ಲಿ ಕ್ಯಾಂಪೇನ್ ಗಳಲ್ಲಿ ಭಾಗಿಯಾಗಿದ್ದರು. ಇದನ್ನೂ ಓದಿ: ಅಸ್ಸಾಂ ಚಹಾ ತೋಟದಲ್ಲಿ ಎರಡನೇ ಬಾರಿ ಅರಳಿದ ಕಮಲ

    2016ರ ಫಲಿತಾಂಶ: 2016ರಲ್ಲಿ ಪಿಣರಾಯಿ ಸರ್ಕಾರ 91ರ ಶಾಸಕರೊಂದಿಗೆ ಸರ್ಕಾರ ರಚನೆ ಮಾಡಿತ್ತು. ಆಡಳಿತ ವಿರೋಧ ಅಲೆಯ ನಡುವೆಯೂ ಎಲ್‍ಡಿಎಫ್ ಮತ್ತಷ್ಟು ಕ್ಷೇತ್ರ ಗೆದ್ದು ಸರ್ಕಾರ ರಚನೆ ಮಾಡಲಿದೆ ಚುನಾವಣೋತ್ತರ ಸಮೀಕ್ಷೆ ಹೇಳಿದೆ. 2016ರಲ್ಲಿ ಕಾಂಗ್ರೆಸ್ ಬೆಂಬಲಿತ ಯುಡಿಎಫ್ 47 ಸೀಟ್ ಗೆದ್ದಿತ್ತು. ಬಿಜೆಪಿ ಒಂದು ಕ್ಷೇತ್ರದಲ್ಲಿ ಮಾತ್ರ ಕಮಲ ಅರಳಿತ್ತು. ಕೇರಳದ ಜನ ಸಿಎಂ ವಿಜಯನ್ ಅವರನ್ನ ಮತ್ತೊಮ್ಮೆ ಮುಖ್ಯಮಂತ್ರಿ ಸ್ಥಾನದಲ್ಲಿ ನೋಡಲು ಇಷ್ಟಪಡುತ್ತಾರೆ. ಮಾಜಿ ಸಿಎಂ ಉಮ್ಮನ್ ಚಾಂಡಿ ಎರಡನೇ ಸ್ಥಾನದಲ್ಲಿದ್ದಾರೆ. ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಮತ್ತೊಮ್ಮೆ ದೀದಿ ಅಧಿಕಾರಕ್ಕೆ

    ಇದನ್ನೂ ಓದಿ: ಮಸ್ಕಿ, ಬಸವ ಕಲ್ಯಾಣದಲ್ಲಿ ಕಾಂಗ್ರೆಸ್ – ಬೆಳಗಾವಿಯಲ್ಲಿ ಮತ್ತೆ ಬಿಜೆಪಿ

  • ಕೇರಳ ವಿಧಾನಸಭೆ ಚುನಾವಣೆಯಿಂದ ಹಿಂದೆ ಸರಿದ ತೃತೀಯ ಲಿಂಗಿ ಅಭ್ಯರ್ಥಿ

    ಕೇರಳ ವಿಧಾನಸಭೆ ಚುನಾವಣೆಯಿಂದ ಹಿಂದೆ ಸರಿದ ತೃತೀಯ ಲಿಂಗಿ ಅಭ್ಯರ್ಥಿ

    ತಿರುವನಂತಪುರ: ಕೇರಳದ ವಿಧಾನಸಭಾ ಚುನಾವಣೆಯ ಇತಿಹಾಸದಲ್ಲೇ ಮೊದಲ ಬಾರಿಗೆ ತೃತೀಯ ಲಿಂಗಿ ಅನನ್ಯಾ ಕುಮಾರಿ ಅಲೆಕ್ಸಾ ಚುನಾವಣೆಗೆ ಸ್ಪರ್ಧಿಸಿದ್ದರು. ಆದರೆ ಇದೀಗ ಅವರಿಗೆ ಮಾನಸಿಕ ಕಿರುಕುಳ, ಪ್ರಾಣ ಬೆದರಿಕೆ ಇರುವುದಾಗಿ ಕಾರಣಕೊಟ್ಟು ಕೊನೆ ಕ್ಷಣದಲ್ಲಿ ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ.

    ಅಲೆಕ್ಸಾ ಅವರು ಡೆಮಾಕ್ರಟಿಕ್ ಸೋಷಿಯಲ್ ಜಸ್ಟೀಸ್ ಪಕ್ಷದ ಅಭ್ಯರ್ಥಿಯಾಗಿ ಕೇರಳದ ವೆಂಗರ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದರು. ಆದರೆ ಇದೀಗ ನಾಮಪತ್ರ ಹಿಂಪಡೆಯುವ ಮೂಲಕ ಚುನಾವಣೆಯಿಂದ ಹೊರಬಂದಿದ್ದಾರೆ. ವೆಂಗರ ಕ್ಷೇತ್ರದಿಂದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್(ಯು.ಡಿಎಫ್)ಪಕ್ಷದ ಹಿರಿಯ ಅಭ್ಯರ್ಥಿ ಪಿ.ಕೆ ಕುನ್ಹಾಲಿಕುಟ್ಟಿ ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಅಭ್ಯರ್ಥಿ ಪಿ. ಜಿಜಿ, ಎಡ ಡೆಮಾಕ್ರಟಿಕ್ ಫ್ರಂಟ್( ಎಲ್‍ಡಿಎಫ್) ಪರವಾಗಿ ಸ್ಪರ್ಧಿಸಿದ್ದರು.

    ಈ ಕುರಿತು ಸ್ಥಳೀಯ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿರುವ ಡೆಮಾಕ್ರಟಿಕ್ ಸೋಷಿಯಲ್ ಜಸ್ಟೀಸ್ ಪಕ್ಷದ ಅಭ್ಯರ್ಥಿಯಾಗಿದ್ದ ಅಲೆಕ್ಸಾ ಅವರು, ಚುನಾವಣೆಯ ಪ್ರಚಾರದ ವೇಳೆ ಡೆಮಾಕ್ರಟಿಕ್ ಫ್ರಂಟ್ ಪಕ್ಷದ ಹಿರಿಯ ಅಭ್ಯರ್ಥಿ ಪಿ.ಕೆ ಕುನ್ಹಾಲಿಕುಟ್ಟಿ ಅವರ ವಿರುದ್ಧ ಆರೋಪ ಮಾಡಬೇಕಾಗಿ ತಿಳಿಸಿದ್ದರು. ಇದನ್ನು ಒಪ್ಪದ ನನಗೆ ನಮ್ಮ ಪಕ್ಷದಿಂದಲೇ ಮಾನಸಿಕ ಒತ್ತಡ ಬಂದಿದೆ. ಹಾಗಾಗಿ ಈ ನಿರ್ಧಾರಕ್ಕೆ ಬಂದಿದ್ದೇನೆ ಎಂದರು.

    ಡೆಮಾಕ್ರಟಿಕ್ ಸೋಷಿಯಲ್ ಜಸ್ಟೀಸ್ ಪಕ್ಷದ ಅಭ್ಯರ್ಥಿಯಾಗಿ ವೆಂಗರ ಕ್ಷೇತ್ರದಿಂದ ಸ್ಪರ್ಧಿಸುವಂತೆ ನನಗೆ ಪಕ್ಷದಿಂದ ಮೊದಲು ಕರೆಬಂತು. ಆದರೆ ಮೊದಲು ನಾನು ಇದನ್ನು ಒಪ್ಪಿಕೊಂಡೆ. ನಂತರ ಇದರಲ್ಲಿದ್ದ ಕೆಲವು ಹುಳುಕುಗಳು ನನಗೆ ತಿಳಿಯಿತು. ಹಾಗಾಗಿ ಇದರಿಂದ ಸಮಸ್ಯೆಗೆ ಒಳಗಾಗಲು ನಾನು ಬಯಸುವುದಿಲ್ಲ ಎಂದರು.

    ಅನನ್ಯಾ ಕುಮಾರಿ ಅಲೆಕ್ಸಾ ಕೇರಳದ ಮೊದಲ ತೃತೀಯ ಲಿಂಗಿ ರೇಡಿಯೋ ಜಾಕಿ ಆಗಿ ಕೆಲಸನಿರ್ವಹಿಸುತ್ತಿದ್ದರು. ಇವರು ಮೇಕಪ್ ಕಲಾವಿದೆಯಾಗಿ ಮತ್ತು ಖಾಸಗಿ ನ್ಯೂಸ್ ಚಾನಲ್‍ಗಳಲ್ಲಿ ಆ್ಯಂಕರ್ ಆಗಿ ಕೆಲಸ ಮಾಡುತ್ತಿದ್ದರು.

    ಕೇರಳದಲ್ಲಿ ಮೊದಲ ಹಂತದ ಚುನಾವಣೆ ಏಪ್ರಿಲ್ 6ರಂದು ಪ್ರಾರಂಭಗೊಳ್ಳಲಿದ್ದು, ಮೇ 2 ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.

  • ಕಾಂಗ್ರೆಸ್-ಎಡಪಕ್ಷಗಳ ನಡ್ವೆ ಫಿಕ್ಸಿಂಗ್: ಪ್ರಧಾನಿ ಮೋದಿ

    ಕಾಂಗ್ರೆಸ್-ಎಡಪಕ್ಷಗಳ ನಡ್ವೆ ಫಿಕ್ಸಿಂಗ್: ಪ್ರಧಾನಿ ಮೋದಿ

    – ಒಬ್ಬರು ಚಿನ್ನ, ಮತ್ತೊಬ್ಬರು ಬೆಳ್ಳಿ ಕದ್ರು

    ತಿರುವನಂತಪುರ: ವಿಧಾನಸಭಾ ಚುನಾವಣೆ ಹಿನ್ನೆಲೆ ಕೇರಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಪಲಕ್ಕಾಡದಲ್ಲಿ ಸಮಾವೇಶ ಉದ್ದೇಶಿಸಿ ಮಾತನಾಡಿದರು. ಕಾಂಗ್ರೆಸ್ ಮತ್ತು ಎಡಪಕ್ಷಗಳು ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿವೆ. ಕೇರಳದ ಜನತೆ ಎಲ್‍ಡಿಎಫ್-ಯುಡಿಎಫ್ ರಾಜಕಾರಣಕ್ಕೆ ಬೇಸತ್ತಿದ್ದು, ಬಿಜೆಪಿಯತ್ತ ಆಕರ್ಷಿತರಾಗುತ್ತಿದ್ದಾರೆ ಎಂದು ಹೇಳಿದರು.

    ಐದು ವರ್ಷ ಒಬ್ಬರು ಲೂಟಿ ಮಾಡ್ತಾರೆ, ಮತ್ತೈದು ವರ್ಷ ಮತ್ತೊಬ್ಬರು ಕನ್ನ ಹಾಕ್ತಾರೆ. ಒಬ್ಬರು ಚಿನ್ನ ಮತ್ತು ಮತ್ತೊಬ್ಬರು ಬೆಳ್ಳಿ ಕದ್ದರು. ಕಾಂಗ್ರೆಸ್ ಮತ್ತು ಎಡಪಕ್ಷಗಳು ಒಂದೇ ಆಗಿವೆ. ಉತ್ತರ ಪ್ರದೇಶದಲ್ಲಿ ಜೊತೆಯಾಗಿದ್ದು, ಚುನಾವಣೆ ಹಿನ್ನೆಲೆ ಇಲ್ಲಿ ಪ್ರತ್ಯೇಕವಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

    ಕೇರಳ ವಿಕಾಸದ ಕುರಿತು ಮಾತನಾಡಿ ಮತಯಾಚನೆ ಮಾಡಿದರು. ದೇಶದ ಜನತೆ ವಿಕಾಸ ಮತ್ತು ವಿಶ್ವಾಸದ ಮೇಲೆ ಬಿಜೆಪಿ ಜೊತೆ ಕೈ ಜೋಡಿಸುತ್ತಿದ್ದಾರೆ ಎಂದು ಹೇಳಿದರು. ಈ ವೇದಿಕೆ ಮೇಲಿದ್ದ ಮೆಟ್ರೋ ಮ್ಯಾನ್ ಇ.ಶ್ರೀಧರನ್ ಅವರನ್ನ ಹಾಡಿ ಹೊಗಳಿದರು. ಕೆಲವರು ಸ್ವಾರ್ಥ ಅಥವಾ ತಮ್ಮ ಲಾಭಕ್ಕಾಗಿ ರಾಜಕಾರಣಕ್ಕೆ ಬರುತ್ತಾರೆ. ಆದ್ರೆ ಶ್ರೀಧರನ್, ತಮ್ಮ ಜೀವನವನ್ನೇ ದೇಶಕ್ಕೆ ಅರ್ಪಿಸಿಕೊಂಡಿದ್ದಾರೆ. ಈ ವಯಸ್ಸಿನಲ್ಲಿಯೂ ಕೇರಳ ಜನತೆಯ ಸೇವೆಗೆ ಮುಂದಾಗಿದ್ದಾರೆ ಎಂದು ಹೇಳಿದರು.

  • ಎಲ್‌ಡಿಎಫ್‌, ಯುಡಿಎಫ್‌ ಬಗ್ಗೆ ಬೇಸತ್ತ ಕೇರಳದಲ್ಲಿ ಬಿಜೆಪಿಯತ್ತ ಒಲವು: ಡಿಸಿಎಂ ವಿಶ್ವಾಸ

    ಎಲ್‌ಡಿಎಫ್‌, ಯುಡಿಎಫ್‌ ಬಗ್ಗೆ ಬೇಸತ್ತ ಕೇರಳದಲ್ಲಿ ಬಿಜೆಪಿಯತ್ತ ಒಲವು: ಡಿಸಿಎಂ ವಿಶ್ವಾಸ

    ಬೆಂಗಳೂರು: ಕೇರಳದಲ್ಲಿ ಕಮ್ಯುನಿಸ್ಟ್‌ ಪಕ್ಷಗಳ ನೇತೃತ್ವದ ಎಲ್‌ಡಿಎಫ್‌ ಹಾಗೂ ಕಾಂಗ್ರೆಸ್‌ ನೇತೃತ್ವದ ಯುಡಿಎಫ್ ಭಾರತೀಯ ರಾಜಕಾರಣದಲ್ಲಿ ಅಪ್ರಸ್ತುತವಾಗಿವೆ. ಆ ರಾಜ್ಯದ ಜನರು ಈ ಬಾರಿ ಬದಲಾವಣೆ ಬಯಸುತ್ತಿದ್ದಾರೆಂದು ಕೇರಳ ರಾಜ್ಯದ ಬಿಜೆಪಿ ಸಹ ಪ್ರಭಾರಿಯೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಹೇಳಿದರು.

    ಬೆಂಗಳೂರಿನಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಕೇರಳದಲ್ಲಿ ಇವೆರಡೂ ರಾಜಕೀಯ ಒಕ್ಕೂಟಗಳು ಸಂಪೂರ್ಣ ವಿಫಲವಾಗಿವೆ. ಕೇವಲ ವೋಟ್‌ಬ್ಯಾಂಕ್‌ ಪಾಲಿಟಿಕ್ಸ್‌ ಮಾಡಿಕೊಂಡು ಕಳೆದ ಎಪ್ಪತ್ತು ವರ್ಷಗಳಿಂದ ಆ ರಾಜ್ಯವನ್ನು ಕತ್ತಲೆಯಲ್ಲೇ ಇಟ್ಟಿವೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪರ ಒಲವು ವ್ಯಕ್ತವಾಗುತ್ತಿದೆ ಎಂದರು.

    ಈಗಿನ ಎಲ್‌ಡಿಎಫ್‌ ಸರಕಾರವಂತೂ ರಾಜಕೀಯ ಕಿರುಕುಳ ನೀಡುವುದು, ರಾಜಕೀಯ ಕೊಲೆಗಳು ಹಾಗೂ ಸೇಡಿನ ರಾಜಕೀಯದಲ್ಲಿ ನಿರತವಾಗಿದೆ ಎಂದು ಆರೋಪಿಸಿದ ಡಿಸಿಎಂ, ಈ ಎರಡೂ ರಾಜಕೀಯ ಒಕ್ಕೂಟಗಳು ಎಲ್ಲ ಜನರಿಗೂ ಸಲ್ಲುವ ಪಕ್ಷಗಳಲ್ಲ. ಕೇವಲ ಜಾತಿ-ಜಾತಿಗಳ ನಡುವೆ ವೈಷಮ್ಯ ಭಿತ್ತಿ ಆ ಮೂಲಕ ರಾಜಕೀಯ ಲಾಭ ಪಡೆಯುತ್ತಿವೆ ಎಂದು ಟೀಕಿಸಿದರು.

    ನಮ್ಮ ಭಾರತೀಯ ಸಂಸ್ಕೃತಿ, ಆಚಾರ ವಿಚಾರಕ್ಕೆ ವಿರುದ್ಧವಾಗಿರುವ ಎಲ್‌ಡಿಎಫ್‌ನಿಂದ ಕೇರಳಕ್ಕೆ ತುಂಬಾ ಹಾನಿಯಾಗಿದೆ. ಕಮ್ಯುನಿಸ್ಟ್‌ ಪಕ್ಷಗಳು ನಮ್ಮ ದೇಶದಲ್ಲಿ ಅಪ್ರಸ್ತುತವಾಗಿವೆ. ಎಲ್ಲ ಕಡೆ ಅಧಿಕಾರ ಕಳೆದುಕೊಂಡು ಈ ಕೇರಳದಲ್ಲೂ ನಿರ್ನಾಮದ ಹಂತದಲ್ಲಿದೆ. ಅದೇ ರೀತಿ ಕಾಂಗ್ರೆಸ್‌ ಪಕ್ಷವೂ ದೇಶಾದ್ಯಂತ ಹೇಳ ಹೆಸರಿಲ್ಲದೆ ಹೋಗುತ್ತಿದೆ ಎಂದು ಡಾ.ಅಶ್ವತ್ಥನಾರಾಯಣ ತಿಳಿಸಿದರು.

    ಬಿಜೆಪಿ ಬಗ್ಗೆ ಕೇರಳದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅನೇಕ ಪಕ್ಷಗಳಿಗೆ ಅಲ್ಲಿ ನಾಯಕತ್ವವೇ ಇಲ್ಲ. ಆ ರಾಜ್ಯದ ಉದ್ದಗಲಕ್ಕೂ ನಮ್ಮ ಕಾರ್ಯಕರ್ತರು ಇದ್ದಾರೆ. ಈ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.