Tag: Udayagiri Riot Case

  • ಉದಯಗಿರಿ ಗಲಭೆ ಕೇಸ್‌ – ನಮ್ಮ ಪೊಲೀಸರ ಪರ ನಾನಿದ್ದೇನೆ ಎಂದ ಡಿಸಿಎಂ

    ಉದಯಗಿರಿ ಗಲಭೆ ಕೇಸ್‌ – ನಮ್ಮ ಪೊಲೀಸರ ಪರ ನಾನಿದ್ದೇನೆ ಎಂದ ಡಿಸಿಎಂ

    ಬೆಂಗಳೂರು: ಮೈಸೂರಿನ (Mysuru) ಉದಯಗಿರಿ (Udayagiri Riot Case) ಪೊಲೀಸ್‌ ಠಾಣೆ ಮೇಲಿನ ದಾಳಿ ವೇಳೆ ಪೊಲೀಸರು ಸಮಯೋಚಿತವಾಗಿ ಕೆಲಸ ಮಾಡಿದ್ದಾರೆ. ಪೊಲೀಸರದ್ದು ಯಾವ ತಪ್ಪು ಇಲ್ಲ. ನಾನು ಪೊಲೀಸರ ಪರ ಇದ್ದೇನೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ (D.K Shivakumar) ಹೇಳಿದ್ದಾರೆ.

    ಬೆಂಗಳೂರಿನಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ, ಯಾರು ಏನು ಹೇಳಿದರು ಎಂಬುದು ಮುಖ್ಯವಲ್ಲ. ನಾನು ಡಿಸಿಎಂ ಆಗಿ ಹೇಳುತ್ತಿದ್ದೇನೆ. ಪೊಲೀಸರದ್ದು ಯಾವ ತಪ್ಪು ಇಲ್ಲ. ಪೊಲೀಸರು ಸರಿಯಾಗಿಯೇ ಕೆಲಸ ಮಾಡಿದ್ದಾರೆ. ಪರಿಸ್ಥಿತಿಯನ್ನು ನಿಭಾಯಿಸಿದ್ದಾರೆ. ಈ ವೇಳೆ ಪೊಲೀಸರು ಗಾಯಗೊಂಡರು ಕೂಡ ಸಮಯ ಪ್ರಜ್ಞೆಯಿಂದ ಕೆಲಸ ಮಾಡಿದ್ದಾರೆ. ನಾನು ನಮ್ಮ ಪೊಲೀಸರ ಪರವಾಗಿಯೇ ಇದ್ದೇನೆ ಎಂದಿದ್ದಾರೆ. ಈ ಮೂಲಕವಾಗಿ ಸಚಿವ ರಾಜಣ್ಣಗೆ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.

    ಡಿಕೆಶಿ ಹೇಳಿಕೆ ಬಗ್ಗೆ ನಾನು ಆಮೇಲೆ ಮಾತಾಡ್ತೀನಿ ಎಂದು ಸಚಿವ ರಾಜಣ್ಣ ಜಾರಿಕೊಂಡಿದ್ದಾರೆ. ಇನ್ನೂ, ಬಿಜೆಪಿ, ಆರ್‍ಎಸ್‍ಎಸ್ ವಿರುದ್ಧ ಆರೋಪ ಮಾಡಿದ್ದ ಕೆಪಿಸಿಸಿ ವಕ್ತಾರ ಲಕ್ಷ್ಮಣ್ ವಿರುದ್ಧ ಹಿಂದೂ ಕಾರ್ಯಕರ್ತರು ಮಂಡ್ಯದ ಕೆರೆಗೋಡು ಠಾಣೆಗೆ ದೂರು ನೀಡಿ, ಲಕ್ಷ್ಮಣ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

    ಉದಯಗಿರಿಯ ಹಿಂಸಾಚಾರಕ್ಕೆ ಮುಸ್ಲಿಂ ಮುಖಂಡ ಮುಫ್ತಿ ಮುಷ್ತಾಕ್ ಪ್ರಚೋದನಕಾರಿ ಭಾಷಣವೇ ಕಾರಣ ಎಂಬ ವಿಚಾರ ಗೊತ್ತಾಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿದೆ. ಮುಷ್ತಾಕ್ ಸೇರಿ ಗಲಭೆಕೋರರಿಗಾಗಿ ಸಿಸಿಬಿ ಪೊಲೀಸರು ಬಲೆ ಬೀಸಿದ್ದಾರೆ. ಈವರೆಗೂ 8 ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.