Tag: Uday K Mehta

  • ಧ್ರುವ ಸರ್ಜಾ ಸಿನಿಮಾದ ನಿರ್ಮಾಪಕ-ನಿರ್ದೇಶಕನ ಮಧ್ಯೆ ಕಿರಿಕ್: ಸ್ಪಷ್ಟನೆ ಏನು?

    ಧ್ರುವ ಸರ್ಜಾ ಸಿನಿಮಾದ ನಿರ್ಮಾಪಕ-ನಿರ್ದೇಶಕನ ಮಧ್ಯೆ ಕಿರಿಕ್: ಸ್ಪಷ್ಟನೆ ಏನು?

    ಧ್ರುವ ಸರ್ಜಾ (Dhruva Sarja) ನಟನೆಯ ಮಾರ್ಟಿನ್ (Martin) ಸಿನಿಮಾದ ನಿರ್ಮಾಪಕ ಉದಯ್ ಕೆ ಮೆಹ್ತಾ (Uday K Mehta) ಹಾಗೂ ನಿರ್ದೇಶಕ ಎ.ಪಿ ಅರ್ಜುನ್ ಮಧ್ಯೆ ಕಿರಿಕ್ ಆಗಿ, ಈ ಜಗಳ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮೆಟ್ಟಿಲು ಏರಿದೆ ಎನ್ನುವ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿತ್ತು. ಈ ವಿಷಯ ವಿಸ್ತರಿಸುವ ಮುನ್ನ ಇಬ್ಬರೂ ಎಚ್ಚೆತ್ತುಕೊಂಡಿದ್ದಾರೆ. ಹಬ್ಬಿರೋದು ಗಾಸಿಪ್. ನಾವಿಬ್ಬರೂ ಚೆನ್ನಾಗಿಯೇ ಇದ್ದೇವೆ ಎಂದು ಮೆಹ್ತಾ ಮತ್ತು ಅರ್ಜುನ್ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ.

    ಧ್ರುವ ಸರ್ಜಾ ನಾಯಕರಾಗಿ ನಟಿಸಿರುವ ಬಹು ನಿರೀಕ್ಷಿತ ಮಾರ್ಟಿನ್  (Martin) ಚಿತ್ರಕ್ಕೆ ಲೂಪ್ ಸ್ಟುಡಿಯೋದಲ್ಲಿ ಮಾತಿನ ಜೋಡಣೆ ಮುಕ್ತಾಯವಾಗಿದೆ. ಸದ್ಯದಲ್ಲೇ ಚಿತ್ರದ ಪ್ರಥಮಪ್ರತಿ ಸಿದ್ದವಾಗಲಿದೆ. ಆರಂಭದಿಂದಲೂ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿರುವ ಚಿತ್ರದ ಬಿಡುಗಡೆಗಾಗಿ ಧ್ರುವ ಸರ್ಜಾ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

    ಚಿತ್ರೀಕರಣದಲ್ಲೂ ಮಾರ್ಟಿನ್ ದಾಖಲೆ ಬರೆದಿದೆ. ಒಟ್ಟು 240 ದಿನಗಳ ಚಿತ್ರೀಕರಣ ನಡೆದಿದೆ. ಇನ್ನು ಚಿತ್ರದ ಆಡಿಯೋ ಹಕ್ಕನ್ನು ಅಧಿಕ ಮೊತ್ತ ನೀಡಿ  ಜನಪ್ರಿಯ ಆಡಿಯೋ ಸಂಸ್ಥೆಯಾದ ಸರೆಗಮಪ ಪಡೆದುಕೊಂಡಿದೆ. ಮಣಿ ಶರ್ಮ ಅವರ ಸಂಗೀತ ನಿರ್ದೇಶನದಲ್ಲಿ ಎಲ್ಲಾ ಹಾಡುಗಳು ತುಂಬಾ ಚೆನ್ನಾಗಿ ಮೂಡಿಬಂದಿದ್ದುರವಿ ಬಸ್ರೂರ್ ಹಿನ್ನೆಲೆ ಸಂಗೀತ ನೀಡಿದ್ದಾರೆ.

    ಸತ್ಯ ಹೆಗಡೆ ಛಾಯಾಗ್ರಹಣ , ಕೆ.ಎಂ.ಪ್ರಕಾಶ್ ಸಂಕಲನ ಹಾಗೂ ರವಿವರ್ಮ, ರಾಮ್ ಲಕ್ಷ್ಮಣ್ ಅವರ  ಸಾಹಸ ನಿರ್ದೇಶನವಿರುವ ಮಾರ್ಟಿನ್ ಚಿತ್ರದ ತಾರಾಬಳಗದಲ್ಲಿ ಧ್ರುವ ಸರ್ಜಾ, ವೈಭವಿ ಶಾಂಡಿಲ್ಯ, ಅನ್ವೇಶಿ ಜೈನ್, ಜಾರ್ಜಿಯ ಆಂಡ್ರಿಯಾನಿ, ಚಿಕ್ಕಣ್ಣ, ಮಾಳವಿಕ ಅವಿನಾಶ್, ನಿಕ್ತಿನ್ ಧೀರ್, ನವಾಬ್ ಶಾ, ರೋಹಿತ್ ಪಾಠಕ್ ಮುಂತಾದವರಿದ್ದಾರೆ.

  • `ಮಾರ್ಟಿನ್’ ಆ್ಯಕ್ಷನ್ ಸೀನ್‌ಗಾಗಿ ಧ್ರುವಾ ಸರ್ಜಾ- ಎ.ಪಿ ಅರ್ಜುನ್ ಭರ್ಜರಿ ತಯಾರಿ

    `ಮಾರ್ಟಿನ್’ ಆ್ಯಕ್ಷನ್ ಸೀನ್‌ಗಾಗಿ ಧ್ರುವಾ ಸರ್ಜಾ- ಎ.ಪಿ ಅರ್ಜುನ್ ಭರ್ಜರಿ ತಯಾರಿ

    ಸ್ಯಾಂಡಲ್‌ವುಡ್‌ನ `ಪೊಗರು’ ಹೀರೋ ಧ್ರುವಾ ಸರ್ಜಾ ಸದ್ಯ `ಮಾರ್ಟಿನ್’ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಎ.ಪಿ ಅರ್ಜುನ್ ಜತೆ ಆ್ಯಕ್ಷನ್ ಸಿಕ್ವೇನ್ಸ್ ಚಿತ್ರೀಕರಣಕ್ಕಾಗಿ ಭರ್ಜರಿ ತಯಾರಿ ಮಾಡಿಕೊಂಡಿದ್ದಾರೆ.

    ಎ.ಪಿ ಅರ್ಜುನ್ ನಿರ್ದೇಶನದ `ಅದ್ದೂರಿ’ ಚಿತ್ರದ ಮೂಲಕ ಧ್ರುವಾ ಸರ್ಜಾ ಎಂಟ್ರಿ ಕೊಟ್ಟಿದ್ದರು. ಮೊದಲ ಚಿತ್ರದಲ್ಲೇ ಭರ್ಜರಿ ಸಕ್ಸಸ್ ಕಂಡು ಗಾಂಧಿನಗರದ ಆ್ಯಕ್ಷನ್ ಪ್ರಿನ್ಸ್ ಆಗಿ ರಾರಾಜಿಸುತ್ತಿದ್ದಾರೆ. `ಪೊಗರು’ ಸೂಪರ್ ಹಿಟ್ ನಂತರ ಈಗ ಎ.ಪಿ ಜತೆ ಮತ್ತೆ ಧ್ರುವಾ ಸರ್ಜಾ ಕೈ ಜೋಡಿದ್ದಾರೆ. ಇದನ್ನೂ ಓದಿ:71,000 ರೂ. ಸೀರೆಯುಟ್ಟು ಬಂದ ಹನ್ಸಿಕಾ ಮೋಟ್ವಾನಿ

    ಮಾರ್ಟಿನ್‌ಗಾಗಿ ಒಂದಾಗಿರುವ ಧ್ರುವಾ ಮತ್ತು ಎ.ಪಿ ಅರ್ಜುನ್ ಸದ್ಯ ಈ ಚಿತ್ರದ ಕೊನೆಯ ಹಂತದ ಚಿತ್ರೀಕರಣಕ್ಕೆ ಬಂದು ತಲುಪಿದೆ. ಸೆಪ್ಟೆಂಬರ್ ೩೦ಕ್ಕೆ ತೆರೆಗೆ ಬರಲಿರುವ ಈ ಚಿತ್ರದ ಆ್ಯಕ್ಷನ್ ಸಿಕ್ವೇನ್ಸ್ ಮತ್ತು ಎರಡು ಹಾಡು ಬಾಕಿಯಿದೆ. ಸ್ಟಂಟ್ ಮಾಸ್ಟರ್ ರವಿ ವರ್ಮಾ ಸಾರಥ್ಯದಲ್ಲಿ ಆ್ಯಕ್ಷನ್ ಸೀನ್ಸ್ ಮೂಡಿಬರಲಿದ್ದು, ಇದಕ್ಕಾಗಿ ಭರ್ಜರಿ ತಯಾರಿ ನಡೆಯುತ್ತಿದೆ. ಜತೆಗೆ ಜನಪ್ರಿಯ ಸ್ಟಂಟ್ ಮಾಸ್ಟರ್ಸ್‌ ರಾಮ ಲಕ್ಷ್ಮಣ   ಕೂಡ ಚಿತ್ರತಂಡಕ್ಕೆ ಸಾಥ್ ನೀಡುತ್ತಿದ್ದಾರೆ.

    ಧೃವಾ ಸರ್ಜಾಗೆ ನಾಯಕಿಯಾಗಿ ವೈಭವಿ ಕಾಣಿಸಿಕೊಂಡಿದ್ದು, ಬಾಲಿವುಡ್ ನಟ ನಿಕಿತ್, ಅನ್‌ವೇಷಿ ಜೈನ್ ಕೂಡ ಸಾಥ್ ನೀಡಿದ್ದಾರೆ. ಸದ್ಯದಲ್ಲೇ ಬಹುಭಾಷೆಗಳಲ್ಲಿ ಉದಯ್ ಕೆ ಮೆಹ್ತಾ ನಿರ್ಮಾಣದ `ಮಾರ್ಟಿನ್’ ಚಿತ್ರ ತೆರೆಗೆ ಅಬ್ಬರಿಸುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಹುಲಿಯ ಹೆಜ್ಜೆ ಜಾಡು ಹುಡುಕಿ ಹೊರಟರು ಉದಯ್ ಮೆಹ್ತಾ!

    ಹುಲಿಯ ಹೆಜ್ಜೆ ಜಾಡು ಹುಡುಕಿ ಹೊರಟರು ಉದಯ್ ಮೆಹ್ತಾ!

    – ಇದು ಅಪರೂಪ್ ನ್ಯಾಚುರಲ್ ಹಾರರ್ ಥ್ರಿಲ್ಲರ್ ಚಿತ್ರ!

    ಕನ್ನಡ ಚಿತ್ರರಂಗದೊಳಗೆ ಪ್ಯಾನಿಂಡಿಯಾ ಕನಸು ಗಿರಕಿ ಹೊಡೆಯಲಾರಂಭಿಸಿ ವರ್ಷಗಳೇ ಕಳೆದಿವೆ. ಆ ನಿಟ್ಟಿನಲ್ಲಿ ನಡೆಯುತ್ತಾ ಬಂದಿದ್ದ ಸೃಜನಾತ್ಮಕ ಪ್ರಯತ್ನಗಳಿಗೆ ಲಾಕ್‍ಡೌನ್ ಕೂಡಾ ಬ್ರೇಕ್ ಹಾಕಿಲ್ಲ. ಆದರೆ, ಇಂಥ ಪ್ರಯತ್ನಗಳೆಲ್ಲವೂ ನಿರ್ಮಾಪಕರ ಧೀಶಕ್ತಿ ಬೇಡುತ್ತವೆ. ವ್ಯಾಪಾರ, ವ್ಯವಹಾರದ ಮನಸ್ಥಿತಿ ಮೀರಿಕೊಂಡು ಸಿನಿಮಾಸಕ್ತಿ ಹೊಂದಿರೋ, ಚೆಂದದ ಕಥೆಯನ್ನು ಹೆಕ್ಕಿ ತೆಗೆಯುವ ಛಾತಿಯಿರೋ ನಿರ್ಮಾಪಕರಿದ್ದಾಗ ಮಾತ್ರವೇ ಇಂಥ ಕನಸುಗಳು ಕೈಗೂಡುತ್ತವೆ. ಅಂಥಾ ಸಕಾರಾತ್ಮಕ ಮನಸ್ಥಿತಿ ಹೊಂದಿರೋ ನಿರ್ಮಾಪಕರ ಪೈಕಿ ಉದಯ್ ಕೆ ಮೆಹ್ತಾ ಮೊದಲಿಗರಾಗಿ ಗೋಚರಿಸುತ್ತಾರೆ. ಅವರೀಗ ಭಾರತೀಯ ಚಿತ್ರರಂಗದಲ್ಲಿಯೇ ದಾಖಲೆಯಂಥಾ ಸಿನಿಮಾವೊಂದಕ್ಕೆ ಸದ್ದಿಲ್ಲದೆ ತಯಾರಾಗುತ್ತಿದ್ದಾರೆ.

    ಇದುವರೆಗೂ ಉದಯ್ ಮೆಹ್ತಾ ನಿರ್ಮಾಣ ಮಾಡಿರೋ ಸಿನಿಮಾಗಳೇ ಅವರ ಸಿನಿಮಾ ಪ್ರೇಮ ಎಂಥಾದ್ದೆಂಬುದಕ್ಕೆ ಉದಾಹರಣೆಯಂತಿವೆ. ಈ ಬಾರಿ ಅವರು ಅತ್ಯಂತ ಅಪರೂಪದ ಕಥಾ ಎಳೆಯೊಂದನ್ನು ಸ್ವತಃ ಸಿದ್ಧಪಡಿಸಿದ್ದಾರೆ. ಸಾಮಾನ್ಯ ಪಥದಾಚೆಗೆ ಹುಲಿಯ ಹೆಜ್ಜೆ ಜಾಡು ಹಿಡಿದು ಹೊರಟಿರೋ ಮೆಹ್ತಾರಿಗೆ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಬಿ.ಎಂ ಗಿರಿರಾಜ್ ಜೊತೆಯಾಗಿದ್ದಾರೆ. ಈ ಸಮಾಗಮದಿಂದ ಹುಲಿಯನ್ನು ಕೇಂದ್ರವಾಗಿಟ್ಟುಕೊಂಡ ಅದ್ಭುತ ಸಿನಿಮಾ ಸೃಷ್ಟಿ ಕಾರ್ಯವೀಗ ಭರದಿಂದ ಸಾಗುತ್ತಿದೆ.

    ಇದು ನ್ಯಾಚುರಲ್ ಹಾರರ್ ಥ್ರಿಲ್ಲರ್ ಜಾನರಿನ ಚಿತ್ರ. ಕೇವಲ ಕನ್ನಡಕ್ಕೆ ಮಾತ್ರವಲ್ಲ; ಭಾರತೀಯ ಚಿತ್ರರಂಗದಲ್ಲಿಯೇ ಅಪರೂಪದ ಚಿತ್ರವಾಗಿ ದಾಖಲಾಗುವಂಥಾ ಕಥಾಹಂದರ ಇದರಲ್ಲಿರಲಿದೆಯಂತೆ. ವಿಶೇಷವೆಂದರೆ ಈ ಕಥಾ ಎಳೆಯನ್ನು ನಿರ್ಮಾಪಕ ಉದಯ್ ಮೆಹ್ತಾ ಅವರೇ ಸೃಷ್ಟಿಸಿದ್ದಾರೆ. ಈ ಹಿಂದೆ ಬ್ರಹ್ಮಚಾರಿ ಚಿತ್ರದ ಮೂಲಕ ಕಥೆಗಾರರಾಗಿ ಹೊರಹೊಮ್ಮಿದ್ದ ಅವರು ಈ ಮೂಲಕ ಮತ್ತೊಂದು ಮೈಲಿಗಲ್ಲು ನೆಡಲು ಮುಂದಾಗಿದ್ದಾರೆ. ಅದಕ್ಕೆ ಬಿ.ಎಂ ಗಿರಿರಾಜ್ ಸಾಥ್ ಕೊಟ್ಟಿದ್ದಾರೆ. ಕಥೆ ಚಿತ್ರಕಥೆಯೊಂದಿಗೆ ಅವರೇ ಈ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ.

    ಪ್ರಾಣಿಗಳ ಇರುವಿಕೆ ಇರುವಂಥ ಒಂದಷ್ಟು ಸಿನಿಮಾಗಳು ಕನ್ನಡದಲ್ಲಿಯೂ ಬಂದಿವೆ. ಆದರೆ ಹುಲಿಯಂಥ ಪ್ರಾಣಿಗಳನ್ನೇ ಕೇಂದ್ರವಾಗಿಟ್ಟುಕೊಂಡ, ಅದರ ಬಿಂದುವಿನಿಂದ ಕಥೆ ಕದಲುವ ಚಿತ್ರಗಳ ಈವರೆಗೂ ಬಂದಿಲ್ಲ. ಅನಕೊಂಡದಂತೆ ಸಂಚಲನ ಸೃಷ್ಟಿಸಬಲ್ಲ ಈ ಚಿತ್ರವನ್ನು ಪ್ಯಾನಿಂಡಿಯಾ ಲೆವೆಲ್ಲಿನಲ್ಲಿ ನಿರ್ಮಾಣ ಮಾಡಲು ಉದಯ್ ಮೆಹ್ತಾ ಮುಂದಾಗಿದ್ದಾರೆ. ಈ ಹಿಂದೆ ಕೃಷ್ಣನ್ ಲವ್ ಸ್ಟೋರಿ ಚಿತ್ರದಲ್ಲಿ ಗಿರಿರಾಜ್ ನಿರ್ದೇಶನ ವಿಭಾಗದಲ್ಲಿ ಕಾರ್ಯನಿರ್ವಹಿಸಿದ್ದರಲ್ಲಾ? ಆ ದಿನಗಳಿಂದಲೇ ನಿರ್ಮಾಪಕರಾಗಿದ್ದ ಮೆಹ್ತಾರಿಗೆ ಗಿರಿರಾಜ್ ನಂಟು ಬೆಸೆದುಕೊಂಡಿತ್ತು. ಅಲ್ಲಿಂದೀಚೆಗೆ ಗಿರಿರಾಜ್ ಜೊತೆಗೊಂದು ಸಿನಿಮಾ ಮಾಡಬೇಕೆಂಬ ಆಸೆ ಉದಯ್ ಮೆಹ್ತಾರಿಗಿತ್ತಂತೆ. ಇದೀಗ ಅದಕ್ಕೆ ಕಾಲ ಕೂಡಿ ಬಂದಿದೆ.

    ನವಿಲಾದವರು, ಜಟ್ಟದಂಥಾ ಭಿನ್ನ ಬಗೆಯ ಚಿತ್ರಗಳ ಮೂಲಕ ಹೆಸರಾಗಿರುವವರು ಬಿ.ಎಂ ಗಿರಿರಾಜ್. ಸದಾ ಹೊಸ ಬಗೆಯ ಸಿನಿಮಾಗಳತ್ತ ದೃಷ್ಟಿ ನೆಟ್ಟಿರುವ ಅವರು ಸದರಿ ಚಿತ್ರದ ಬಗ್ಗೆ ಮಹತ್ವಾಕಾಂಕ್ಷೆಯಿಟ್ಟುಕೊಂಡಿದ್ದಾರೆ. ಇದೀಗ ಸ್ಕ್ರಿಫ್ಟ್ ಹಾಗೂ ಸ್ಕ್ರೀನ್ ಪ್ಲೇ ರಚನೆಯಲ್ಲವರು ಮಗ್ನರಾಗಿದ್ದಾರೆ. ರಘು ನಿಡುವಳ್ಳಿ ಸಂಭಾಷಣೆಯನ್ನೂ ಬರೆಯಲಿದ್ದಾರಂತೆ. ಇನ್ನೂ ವಿಶೇಷವೆಂದರೆ ಈ ಸಿನಿಮಾದಲ್ಲಿ ದಕ್ಷಿಣ ಭಾರತೀಯ ಚಿತ್ರರಂಗದ ಆರು ಮಂದಿ ಸ್ಟಾರ್ ಗಳು ನಟಿಸಲಿದ್ದಾರಂತೆ. ಇನ್ನೆರಡು ತಿಂಗಳಲ್ಲಿ ಆ ಬಗೆಗಿನ ಮಾಹಿತಿಗಳು ಹೊರ ಬೀಳಲಿವೆ.

  • ಬ್ರಹ್ಮಚಾರಿಯ ಸಖಿ ಅದಿತಿ ಪ್ರಭುದೇವ ಏನಂತಾರೆ?

    ಬ್ರಹ್ಮಚಾರಿಯ ಸಖಿ ಅದಿತಿ ಪ್ರಭುದೇವ ಏನಂತಾರೆ?

    ನೀನಾಸಂ ಸತೀಶ್ ಮತ್ತು ಅದಿತಿ ಪ್ರಭುದೇವ ಜೋಡಿಯಾಗಿ ನಟಿಸಿರುವ ಬ್ರಹ್ಮಚಾರಿ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಚಂದ್ರ ಮೋಹನ್ ನಿರ್ದೇಶನದಲ್ಲಿ ಮೂಡಿ ಬಂದಿರೋ ಈ ಚಿತ್ರ ಔಟ್ ಆಂಡ್ ಔಟ್ ಮನೋರಂಜನಾತ್ಮಕ ಸಿನಿಮಾ ಅನ್ನೋದು ಈಗಾಗಲೇ ಪ್ರೇಕ್ಷಕರ ಪಾಲಿಗೆ ಪಕ್ಕಾ ಆಗಿದೆ. ಭರಪೂರ ಹಾಸ್ಯವಿದ್ದರೂ ವಲ್ಗಾರಿಟಿಯ ಸೋಂಕಿಲ್ಲದ ಈ ಚಿತ್ರ ಹಾಸ್ಯ ಧಾಟಿಯಾಚೆಗೂ ಗಹನವಾದ ಕಥೆಯೊಂದಿಗೆ ನಿರ್ದೇಶಕ ಚಂದ್ರಮೋಹನ್ ಈ ಚಿತ್ರವನ್ನು ರೂಪಿಸಿದ್ದಾರೆ. ಇದುವರೆಗೂ ಹಲವಾರು ಪಾತ್ರಗಳನ್ನು ನಿರ್ವಹಿಸಿರುವ ಅದಿತಿ ಪ್ರಭುದೇವ ಈ ಮೂಲಕ ಮೊದಲ ಬಾರಿ ಹಾಸ್ಯಾತ್ಮಕ ಸಿನಿಮಾದ ಭಾಗವಾಗಿದ್ದಾರೆ.

    ಅದಿತಿ ಪ್ರಭುದೇವ ಪಾಲಿಗೆ ಇದೊಂದು ಹೊಸ ಜಾನರಿನ ಸಿನಿಮಾ. ಆರಂಭದಲ್ಲಿ ಇದರ ಕಾಮಿಡಿ ಝಲಕ್ ಮತ್ತು ತಮ್ಮ ಪಾತ್ರದ ವಿಶೇಷತೆಗೆ ಮನಸೋತೇ ಅದಿತಿ ನಟಿಸಲು ಒಪ್ಪಿಕೊಂಡಿದ್ದರಂತೆ. ಪ್ರತಿ ಸಿನಿಮಾಗಳೂ ತನ್ನ ಪಾಲಿಗೆ ಹೊಸ ಕಲಿಕೆಗೆ ಕಾರಣವಾಗಬೇಕೆಂಬ ಹಂಬಲವಿಟ್ಟುಕೊಂಡಿರೋ ಅವರ ಪಾಲಿಗೆ ಬ್ರಹ್ಮಚಾರಿ ಚಿತ್ರದ ಮೂಲಕ ಹೊಸತನದ ಅನುಭವ ದಕ್ಕಿದೆಯಂತೆ. ಯಾವ ಪ್ರೇಕ್ಷಕರೇ ಆಗಿದ್ದರೂ ತಮ್ಮ ಖಾಸಗಿ ಬದುಕಿನ ಜಂಜಾಟಗಳಿಂದ ಮುಕ್ತವಾಗಿ ಎಲ್ಲವನ್ನೂ ಮರೆತು ಮೈ ಮರೆಯಲೋಸ್ಕರವೇ ಸಿನಿಮಾ ಮಂದಿರಗಳತ್ತ ಬರುತ್ತಾರೆ. ಹಾಗೆ ಬಂದ ಪ್ರತಿಯೊಬ್ಬರಿಗೂ ಭರ್ಜರಿ ಮನರಂಜನೆ ನೀಡುವಲ್ಲಿ ಬ್ರಹ್ಮಚಾರಿ ಗೆಲುವು ಕಾಣುತ್ತಾನೆಂಬ ನಂಬಿಕೆ ಅದಿತಿಯದ್ದು.

    ಇದೇ ಸಂದರ್ಭದಲ್ಲಿ ಅವರು ಇಡೀ ಚಿತ್ರದಲ್ಲಿ ಎಲ್ಲಿಯೂ ಮುಜುಗರ ಪಟ್ಟುಕೊಳ್ಳುವಂಥಾ ಸನ್ನಿವೇಶಗಳಿಲ್ಲ ಎಂಬುದನ್ನೂ ಒತ್ತಿ ಹೇಳುತ್ತಾರೆ. ಒಟ್ಟಾರೆಯಾಗಿ ಈ ಸಿನಿಮಾ ದೊಡ್ಡ ಗೆಲುವು ದಾಖಲಿಸೋದರೊಂದಿಗೆ ತನ್ನ ಕೆರಿಯರ್‍ನಲ್ಲಿಯೂ ಭಿನ್ನ ಸಿನಿಮಾವಾಗಿ ನೆಲೆಗೊಳ್ಳುತ್ತದೆಂಬ ನಂಬಿಕೆಯೂ ಅವರಲ್ಲಿದೆ. ಯಾವ ವೆರೈಟಿಯ ಪಾತ್ರಗಳನ್ನಾದರೂ ತುಸು ಕಷ್ಟವಾದರೂ ಮಾಡಿ ಬಿಡಬಹುದು. ಆದರೆ ಏಕಾಏಕಿ ಕಾಮಿಡಿ ಟೈಮಿಂಗಿಗೆ ಒಗ್ಗಿಕೊಳ್ಳೋದು ಮಾತ್ರ ಅಕ್ಷರಶಃ ಹರಸಾಹಸ. ಕೊಂಚ ಕಷ್ಟವಾದರೂ ಅದಿತಿ ಅದನ್ನು ಸಮರ್ಥವಾಗಿ ನಿಭಾಯಿಸಿದ್ದರಂತೆ. ಇಲ್ಲಿ ಅವರ ಪಾತ್ರ ಕೂಡಾ ಸೊಗಸಾಗಿದೆಯಂತೆ. ಅಂದಹಾಗೆ, ಉದಯ್ ಮೆಹ್ತಾ ನಿರ್ಮಾಣ ಮಾಡಿರೋ ಈ ಸಿನಿಮಾ ಇದೇ ವಾರ ತೆರೆ ಕಾಣುತ್ತಿದೆ.

  • ಸಿಂಗನಿಗೆ ಟಾಂಗ್ ಕೊಡೋ ರವಿಶಂಕರ್ ನೀವಂದುಕೊಂಡಂತಿಲ್ಲ!

    ಸಿಂಗನಿಗೆ ಟಾಂಗ್ ಕೊಡೋ ರವಿಶಂಕರ್ ನೀವಂದುಕೊಂಡಂತಿಲ್ಲ!

    ಬೆಂಗಳೂರು: ಕನ್ನಡ ಚಿತ್ರರಂಗವನ್ನು ತನ್ನ ಅಗಾಧ ಪ್ರತಿಭೆಯ ಮೂಲಕವೇ ಆವರಿಸಿಕೊಂಡಿರುವ ಖ್ಯಾತ ಖಳನಟ ರವಿಶಂಕರ್. ಕಿಚ್ಚ ಸುದೀಪ್ ಅಭಿನಯದ ಕೆಂಪೇಗೌಡ ಚಿತ್ರದ ಮೂಲಕ ಖಳನಾಗಿ ಅಬ್ಬರಿಸಲಾರಂಭಿಸಿದ್ದ ರವಿಶಂಕರ್ ಆ ನಂತರ ತಿರುಗಿ ನೋಡಿದ್ದೇ ಇಲ್ಲ. ಈ ಹಾದಿಯಲ್ಲಿ ವೈವಿಧ್ಯಮಯ ಪಾತ್ರಗಳ ರೂವಾರಿಯಾಗಿ ಸಾಗಿ ಬಂದಿರೋ ಅವರು ಚಿರಂಜೀವಿ ಸರ್ಜಾ ನಾಯಕನಾಗಿ ನಟಿಸಿರೋ ಸಿಂಗ ಚಿತ್ರದಲ್ಲಿಯೂ ಒಂದು ಪಾತ್ರದಲ್ಲಿ ನಟಿಸಿದ್ದಾರೆ. ಆದರೆ ಅವರ ಪಾತ್ರ ಈ ಚಿತ್ರದಲ್ಲಿ ಖಂಡಿತಾ ನೀವಂದುಕೊಂಡಂತೆ ಇರೋದಿಲ್ಲ!

    ರವಿಶಂಕರ್ ಅಂದರೆ ಎಂಥವರೂ ಅದುರಿ ಹೋಗುವಂಥಾ ಅಬ್ಬರದ ನಟನಾ ಶಕ್ತಿ ಹೊಂದಿರೋ ಕಲಾವಿದ. ಹೀಗಿರೋದರಿಂದಲೇ ಅವರ ಹೆಸರು ಕೇಳಿದರೇನೇ ವಿಲನ್ ಪಾತ್ರಗಳು ಕಣ್ಮುಂದೆ ತೇಲಿ ಹೋಗುತ್ತವೆ. ಇನ್ನು ಪಕ್ಕಾ ಮಾಸ್ ಶೈಲಿಯ ಸಿಂಗ ಚಿತ್ರದಲ್ಲಿ ರವಿಶಂಕರ್ ನಟಿಸಿದ್ದಾರೆಂದ ಮೇಲೆ ಹೀರೋ ಚಿರುಗೆ ಟಕ್ಕರ್ ಕೊಡೋ ಪಾತ್ರದಲ್ಲಿಯೇ ನಟಿಸಿದ್ದಾರೆ ಅಂತಲೇ ಅರ್ಥ. ಇದಕ್ಕೆ ಪೂರಕವಾದ ದೃಶ್ಯಾವಳಿಗಳೇ ಟ್ರೈಲರ್‍ನಲ್ಲಿಯೂ ಸರಿದು ಹೋಗಿವೆ.

    ಆದರೆ ಈ ಚಿತ್ರದಲ್ಲಿ ರವಿಶಂಕರ್ ಪಾತ್ರ ಅಷ್ಟು ಸಲೀಸಾಗಿ ಊಹಿಸುವಂಥಾದ್ದಲ್ಲ. ಬಹುಶಃ ಇದುವರೆಗೂ ಕಾಣಿಸಿಕೊಳ್ಳದ ಪಾತ್ರದ ಮೂಲಕ ಸಿಂಗನ ಜೊತೆಗೆ ಅವರು ಪ್ರೇಕ್ಷಕರನ್ನು ತಲುಪಲಿದ್ದಾರೆ. ಕಥೆ ರೆಡಿ ಮಾಡುವ ಕ್ಷಣದಲ್ಲಿಯೇ ಪ್ರೇಕ್ಷಕರಿಗೊಂದು ಸರ್‍ಪ್ರೈಸ್ ಕೊಡಬೇಕೆಂಬ ಉದ್ದೇಶದಿಂದ ವಿಜಯ್ ಕಿರಣ್ ಈ ಪಾತ್ರವನ್ನು ಸೃಷ್ಟಿಸಿದ್ದರಂತೆ. ಇದು ಹೀಗೆಯೇ ಬರಬೇಕೆಂಬ ಕಲ್ಪನೆಯೊಂದು ನಿರ್ದೇಶಕರಲ್ಲಿತ್ತಲ್ಲಾ? ಅದನ್ನು ಮೀರಿಸುವಂತೆ ರವಿಶಂಕರ್ ಈ ಪಾತ್ರವನ್ನು ಮಿರುಗಿಸಿದ್ದಾರಂತೆ. ಅಷ್ಟಕ್ಕೂ ರವಿಶಂಕರ್ ಆ ಥರದ ಯಾವ ಪಾತ್ರವನ್ನು ನಿರ್ವಹಿಸಿದ್ದಾರೆಂಬ ಕುತೂಹಲ ನಿಮ್ಮಲ್ಲಿದ್ದರೆ, ಇದೇ ತಿಂಗಳ ಹತ್ತೊಂಬತ್ತರಂದು ಅದಕ್ಕೆ ನಿಖರ ಉತ್ತರ ಸಿಗಲಿದೆ.

  • ಶ್ಯಾನೆ ಟಾಪಾಗಿದೆಯಂತೆ ಸಿಂಗನ ಕಥೆ!

    ಶ್ಯಾನೆ ಟಾಪಾಗಿದೆಯಂತೆ ಸಿಂಗನ ಕಥೆ!

    ಬೆಂಗಳೂರು: ಚಿರಂಜೀವಿ ಸರ್ಜಾ `ಸಿಂಗ’ ಚಿತ್ರ ಇದೇ ತಿಂಗಳ ಹತ್ತೊಂಬತ್ತರಂದು ಬಿಡುಗಡೆಗೆ ರೆಡಿಯಾಗಿದೆ. ಹಾಡು, ಟ್ರೈಲರ್, ಪೋಸ್ಟರ್ ಸೇರಿದಂತೆ ಎಲ್ಲದರಲ್ಲಿಯೂ ಹೊಸ ಕಳೆ ತುಂಬಿಕೊಂಡಿರೋ ಈ ಚಿತ್ರಕ್ಕೆ ಪಾಸಿಟಿವ್ ಟಾಕ್‍ನ ಒಡ್ಡೋಲಗ ಭರ್ಜರಿ ಸಾಥ್ ನೀಡುತ್ತಿದೆ. ಟ್ರೈಲರ್ ಮುಂತಾದ ಬಿಡುಗಡೆ ಪೂರ್ವ ಚಟುವಟಿಕೆಗಳ ಮೂಲಕ ಚರ್ಚೆಗೆ ಕಾರಣವಾಗೋ ಚಿತ್ರಗಳು ಗೆಲುವು ಕಂಡ ಅದೆಷ್ಟೋ ಉದಾಹರಣೆಗಳಿವೆ. ಈ ಫಾರ್ಮುಲಾ ಆಧರಿಸಿ ಹೇಳೋದಾದರೆ ಸಿಂಗ ಚಿತ್ರದ ಗೆಲುವು ನಿಚ್ಚಳವಾದಂತಿದೆ!

    ಅದೇನೇ ಹೈಪು ಸೃಷ್ಟಿಯಾದರೂ ಚಿತ್ರವೊಂದು ಗೆಲ್ಲೋದರಲ್ಲಿ ಗಟ್ಟಿ ಕಥೆಯದ್ದು ಸಿಂಹಪಾಲು. ಸಿಂಗ ಚಿತ್ರದ ಕಥೆಯೂ ಅಷ್ಟೇ ಅದ್ಭುತವಾಗಿದೆಯಂತೆ. ಸಿನಿಮಾಗಳ ಆಯ್ಕೆ ವಿಚಾರದಲ್ಲಿ ವಿಶಿಷ್ಟವಾದ ಟೇಸ್ಟ್ ಹೊಂದಿರುವವರು ಚಿರಂಜೀವಿ ಸರ್ಜಾ. ಅವರೇ ಈ ಕಥೆ ಕೇಳಿ ಆರಂಭದಲ್ಲಿಯೇ ಥ್ರಿಲ್ ಆಗಿದ್ದರಂತೆ. ಮಾಸ್ ಸೇರಿದಂತೆ ಎಲ್ಲ ಅಂಶಗಳಿಂದ ಮೈ ಕೈ ತುಂಬಿಕೊಂಡಿರೋ ಈ ಕಥೆಯ ಸೊಗಸು ಕಂಡೇ ವಿಶೇಷ ಆಸಕ್ತಿ ವಹಿಸಿ ಚಿರು ಈ ಚಿತ್ರವನ್ನು ಪೂರ್ಣಗೊಳಿಸಿಕೊಂಡಿದ್ದಾರೆ. ಸಿಂಗ ತಮ್ಮ ವೃತ್ತಿ ಬದುಕಿಗೆ ಹೊಸ ದಿಕ್ಕಾಗಲಿದೆ ಎಂಬ ಗಾಢ ವಿಶ್ವಾಸವೂ ಅವರಲ್ಲಿದೆ.

    ಇತ್ತೀಚೆಗೆ ಬಿಡುಗಡೆಯಾಗಿದ್ದ ಈ ಸಿನಿಮಾದ ಶ್ಯಾನೆ ಟಾಪಗೌಳೆ ಎಂಬ ಹಾಡೊಂದು ಭಾರೀ ಫೇಮಸ್ ಆಗಿ ಟ್ರೆಂಡ್ ಸೆಟ್ ಮಾಡಿದೆ. ಈ ಹಾಡಿನ ಅದ್ಧೂರಿತನ ಇಡೀ ಚಿತ್ರದಲ್ಲಿಯೂ ತುಂಬಿಕೊಂಡಿದೆಯಂತೆ. ನಿರ್ದೇಶಕರಾದ ವಿಜಯ್ ಕಿರಣ್ ಅಷ್ಟೊಂದು ಕಾಳಜಿಯಿಂದ, ಎಲ್ಲ ಪ್ರೇಕ್ಷಕ ವರ್ಗವನ್ನೂ ಸಂತುಷ್ಟಗೊಳಿಸುವ ಇರಾದೆಯಿಂದಲೇ ಸಿಂಗನನ್ನು ಶೃಂಗರಿಸಿದ್ದಾರೆ. ಯಶಸ್ವಿ ನಿರ್ಮಾಪಕ ಉದಯ್ ಕೆ ಮೆಹ್ತಾ ಅಂಥಾದ್ದೇ ಕಾಳಜಿಯಿಂದ ಪ್ರತಿ ಹೆಜ್ಜೆಯಲ್ಲಿಯೂ ಸಿಂಗನನ್ನು ಪೊರೆದಿದ್ದಾರೆ. ಇಂಥಾ ಪ್ರೀತಿಯಿಂದಲೇ ಪೊಗದಸ್ತಾಗಿ ಮೂಡಿ ಬಂದಿರೋ ಈ ಚಿತ್ರ ಇದೇ ಹತ್ತೊಂಬತ್ತರಂದು ನಿಮ್ಮ ಮುಂದೆ ಬರಲಿದೆ.