Tag: UCC

  • ಮದುವೆ, ವಿಚ್ಛೇದನ, ಆಸ್ತಿ.. ಎಲ್ಲಾ ಧರ್ಮಿಯರಿಗೆ ಒಂದೇ ಕಾನೂನು: ಇಂದಿನಿಂದ ಉತ್ತರಾಖಂಡದಲ್ಲಿ UCC ಜಾರಿ

    ಮದುವೆ, ವಿಚ್ಛೇದನ, ಆಸ್ತಿ.. ಎಲ್ಲಾ ಧರ್ಮಿಯರಿಗೆ ಒಂದೇ ಕಾನೂನು: ಇಂದಿನಿಂದ ಉತ್ತರಾಖಂಡದಲ್ಲಿ UCC ಜಾರಿ

    – ಏಕರೂಪದ ನಾಗರಿಕೆ ಸಂಹಿತೆ ಜಾರಿಗೆ ತಂದ ಮೊದಲ ರಾಜ್ಯ
    – ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದಂತೆ ಬಿಜೆಪಿ ಸರ್ಕಾರದಿಂದ ಜಾರಿ

    ಡೆಹ್ರಾಡೂನ್‌: ಮದುವೆ, ವಿಚ್ಛೇದನ, ಉತ್ತರಾಧಿಕಾರ ಮತ್ತು ಆಸ್ತಿ ಹಕ್ಕು ವಿಚಾರ ಸೇರಿದಂತೆ ಎಲ್ಲಾ ಧರ್ಮೀಯರಿಗೂ ಒಂದೇ ಕಾನೂನು ಜಾರಿಗೆ ಅವಕಾಶ ಮಾಡಿಕೊಡುವ ಏಕರೂಪ ನಾಗರಿಕ ಸಂಹಿತೆ (Uniform Civil Code) ಉತ್ತರಾಖಂಡದಲ್ಲಿ (Uttarakhand) ಇಂದಿನಿಂದ ಜಾರಿಗೆ ಬಂದಿದೆ.

    ಸ್ವಾತಂತ್ರ್ಯಾನಂತರದಲ್ಲಿ ರಾಜ್ಯವೊಂದರಲ್ಲಿ ಯುಸಿಸಿ ಕಾಯ್ದೆ ಜಾರಿಯಾಗುತ್ತಿರುವುದು ಇದೇ ಮೊದಲು. ಕೇಂದ್ರದ ಆಡಳಿತಾರೂಢ ಬಿಜೆಪಿ ಸರ್ಕಾರದ ಮಹತ್ವಾಕಾಂಕ್ಷೆ ಘೋಷಣೆಗಳ ಪೈಕಿ ಒಂದಾದ ಈ ಕಾಯ್ದೆಯನ್ನು ಇದೀಗ ಬಿಜೆಪಿ ಆಡಳಿತದ ರಾಜ್ಯವಾದ ಉತ್ತರಾಖಂಡದಲ್ಲಿ ಜಾರಿ ಮಾಡಲಾಗಿದೆ.

    ಸರ್ಕಾರದ ನಿರ್ಧಾರವನ್ನು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ (Pushkar Singh Dhami) ಸಮರ್ಥಿಸಿದ್ದು ಏಕರೂಪ ನಾಗರಿಕ ಸಂಹಿತೆಯು ಧರ್ಮ, ಲಿಂಗ, ಜಾತಿ ಅಥವಾ ಸಮುದಾಯದ ಭೇದ ಇಲ್ಲದ ಸಾಮರಸ್ಯದ ಸಮಾಜಕ್ಕೆ ಅಡಿಪಾಯ ಹಾಕುತ್ತದೆ ಎಂದು ಹೇಳಿದ್ದಾರೆ.

    ಪರಿಶಿಷ್ಟ ಪಂಗಡಗಳು ಮತ್ತು ಕೆಲವು ಸಂರಕ್ಷಿತ ಸಮುದಾಯಗಳನ್ನು ಹೊರತು ಪಡಿಸಿ ರಾಜ್ಯದ ಎಲ್ಲಾ ನಿವಾಸಿಗಳಿಗೆ ಏಕರೂಪದ ನಾಗರಿಕ ಸಂಹಿತೆ ಅನ್ವಯವಾಗುತ್ತದೆ.  ಹೊಸ ಕಾಯ್ದೆ ಜಾರಿಗೊಳಿಸುವ ಸಂಬಂಧ  ರಾಜ್ಯ ಸರ್ಕಾರ ಅಧಿಕಾರಿಗಳಿಗೆ ತರಬೇತಿ ನೀಡಿದೆ.

    2022ರ ವಿಧಾನಸಭಾ ಚುನಾವಣೆಯಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ ಮಾಡಲಾಗುವುದು ಎಂದು ಪ್ರಣಾಳಿಕೆಯಲ್ಲಿ ತಿಳಿಸಿತ್ತು. ರಾಜ್ಯದಲ್ಲಿ ಎರಡನೇ ಬಾರಿಗೆ ಪಕ್ಷ ಅಧಿಕಾರಕ್ಕೆ ಬಂದ ಹಿನ್ನೆಲೆಯಲ್ಲಿ ಈ ಕಾಯ್ದೆಯನ್ನು ಇದೀಗ ಜಾರಿಗೆ ತರಲಾಗುತ್ತಿದೆ.

    ಏಕರೂಪದ ನಗರಿಕ ಸಂಹಿತೆಯಲ್ಲಿ ಏನಿದೆ?
    ಮದುವೆ ಮತ್ತು ವಿಚ್ಛೇದನ: ಈ ಕಾಯಿದೆಯು ಪುರುಷರು ಮತ್ತು ಮಹಿಳೆಯರಿಗೆ (ಕ್ರಮವಾಗಿ 21 ಮತ್ತು 18 ವರ್ಷಗಳು) ಮದುವೆಯ ಕಾನೂನುಬದ್ಧ ವಯಸ್ಸನ್ನು ಪ್ರಮಾಣೀಕರಿಸುತ್ತದೆ ಮತ್ತು ಎಲ್ಲಾ ಧರ್ಮಗಳಲ್ಲಿ ವಿಚ್ಛೇದನಕ್ಕೆ ಏಕರೂಪದ ಆಧಾರಗಳು ಮತ್ತು ಕಾರ್ಯವಿಧಾನಗಳನ್ನು ಕಡ್ಡಾಯಗೊಳಿಸುತ್ತದೆ.

    ಬಹುಪತ್ನಿತ್ವ ನಿಷೇಧ: ಯುಸಿಸಿ ಅನ್ವಯವಾಗುವ ಸಮುದಾಯಗಳಲ್ಲಿ ಬಹುಪತ್ನಿತ್ವವನ್ನು ನಿಷೇಧಿಸಲಾಗಿದೆ.

    ವಿವಾಹ ನೋಂದಣಿ: ಕಾಯ್ದೆ ಜಾರಿಯಾದ ನಂತರ ನಡೆಸುವ ವಿವಾಹಗಳನ್ನು 60 ದಿನಗಳ ಒಳಗೆ ನೋಂದಾಯಿಸಬೇಕು, ಪ್ರಕ್ರಿಯೆಯನ್ನು ಸರಳಗೊಳಿಸಲು ಆನ್‌ಲೈನ್ ಸೌಲಭ್ಯಗಳು ಲಭ್ಯವಿದೆ.

    ಲಿವ್-ಇನ್ ಸಂಬಂಧಗಳು: ಮದುವೆಯಂತೆ ಲಿವ್‌-ಇನ್‌ ಸಂಬಂಧ ನೋಂದಣಿ ಕಡ್ಡಾಯ. ಇದು ಉತ್ತರಾಖಂಡದಲ್ಲಿ ನೆಲೆಸಿರುವ ಅಥವಾ ಅನ್ಯ ರಾಜ್ಯಗಳಲ್ಲಿ ನೆಲೆಸಿರುವ ಉತ್ತರಾಖಂಡ ಮೂಲದವರಿಗೆ ಅನ್ವಯ. ಇದರಡಿ ಇಬ್ಬರ ಹೆಸರು, ವಯಸ್ಸಿನ ಸಾಕ್ಷಿ, ದೇಶ, ಧರ್ಮ, ಹಿಂದಿನ ಸಂಬಂಧ, ಸಂಪರ್ಕ ಸಂಖ್ಯೆ ಕುರಿತ ಮಾಹಿತಿಯನ್ನು ನೀಡಬೇಕು. ಇಂತಹ ಸಂಬಂಧದಿಂದ ಮಗು ಜನಿಸಿದರೆ ಜನನ ಪ್ರಮಾಣ ಪತ್ರ ದೊರೆತ 7 ದಿನಗಳೊಳಗಾಗಿ ಕಡ್ಡಾಯವಾಗಿ ನೋಂದಣಿ ಮಾಡಿಸಬೇಕಾಗುತ್ತದೆ.

    ಉತ್ತರಾಧಿಕಾರ ಉಯಿಲುಗಳು: ಉಯಿಲು ಬರೆಯುವವರು ತಮ್ಮ ಹಾಗೂ ಉತ್ತರಾಧಿಕಾರಿಯ ಆಧಾರ್‌ ಮಾಹಿತಿ ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ನೀಡಬೇಕು. 2 ಸಾಕ್ಷಿಗಳು ಉಯಿಲು ಪತ್ರವನ್ನು ಓದುವ ವಿಡಿಯೋವನ್ನೂ ಅಪ್‌ಲೋಡ್‌ ಮಾಡಬೇಕಾಗುತ್ತದೆ.

    ಯುದ್ಧದಲ್ಲಿ ಭಾಗವಹಿಸಿದ ಸೈನಿಕರು, ವಾಯುಪಡೆಯ ಸಿಬ್ಬಂದಿ ಮತ್ತು ನಾವಿಕರು ವಿಶೇಷ ನಿಬಂಧನೆಗಳ ಅಡಿಯಲ್ಲಿ ವಿಶೇಷ ಸವಲತ್ತು ಪಡೆದ ವಿಲ್‌ಗಳನ್ನು ರಚಿಸಲು ಅನುಮತಿ ಇದೆ.

    ಗೋವಾದಲ್ಲಿದೆ ಯುಸಿಸಿ: ಸ್ವಾತಂತ್ರ್ಯಾನಂತರ ದೇಶದಲ್ಲಿ ಯುಸಿಸಿಯನ್ನು ಜಾರಿಗೊಳಿಸಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಉತ್ತರಾಖಂಡ ಪಾತ್ರವಾದರೆ ಸ್ವಾತಂತ್ರ್ಯಪೂರ್ವದಲ್ಲಿ ಪೋರ್ಚುಗೀಸ್ ಕಾಲದಲ್ಲಿಯೇ ಗೋವಾದಲ್ಲಿ ಯುಸಿಸಿ ಜಾರಿಯಾಗಿತ್ತು. ಪೋರ್ಚುಗೀಸ್ ಸಿವಿಲ್ ಕೋಡ್-1867ರ ಪ್ರಕಾರ ಪೋರ್ಚುಗೀಸ್ ಆಳ್ವಿಕೆ ವಿಮೋಚನೆಯ ನಂತರ, ಗೋವಾ, ದಮನ್ ಮತ್ತು ದಿಯು ಆಡಳಿತ ಕಾಯಿದೆ-1962ರ ಸೆಕ್ಷನ್ 5(1) ರ ಮೂಲಕ ಈಗಲೂ ಮುಂದುವರೆದಿದೆ.

     

  • ಏಕರೂಪ ನಾಗರಿಕ ಸಂಹಿತೆ, ಅಗ್ನಿವೀರ್ ಬಗ್ಗೆ ಮರುಚಿಂತನೆ ಮಾಡಬೇಕಿದೆ- ಜೆಡಿಯು ಕ್ಯಾತೆ

    ಏಕರೂಪ ನಾಗರಿಕ ಸಂಹಿತೆ, ಅಗ್ನಿವೀರ್ ಬಗ್ಗೆ ಮರುಚಿಂತನೆ ಮಾಡಬೇಕಿದೆ- ಜೆಡಿಯು ಕ್ಯಾತೆ

    ನವದೆಹಲಿ: ಎನ್‌ಡಿಎ ಸರ್ಕಾರ ರಚನೆಗೂ ಮುನ್ನವೇ ಜೆಡಿಯು ಕ್ಯಾತೆ ತೆಗೆದಿದ್ದು, ಏಕರೂಪ ನಾಗರಿಕ ಸಂಹಿತೆ, ಅಗ್ನಿವೀರ್ (Agniveer Scheme) ಬಗ್ಗೆ ಮರುಚಿಂತನೆ ಮಾಡಬೇಕಿದೆ ಎಂದು ಹಿರಿಯ ನಾಯಕ ಕೆ.ಸಿ ತ್ಯಾಗಿ (K C Tyagi) ಹೊಸ ವರಸೆ ಎತ್ತಿದ್ದಾರೆ.

    ಅಗ್ನಿವೀರ್ ಯೋಜನೆಗೆ ಸಂಬಂಧಿಸಿದಂತೆ ಸರ್ಕಾರ ಹೊಸ ರೀತಿಯಲ್ಲಿ ಯೋಚಿಸಬೇಕಾಗಿದೆ. ಒಂದು ವರ್ಗದ ಮತದಾರರು ಅಗ್ನಿವೀರ್ ಯೋಜನೆ ಬಗ್ಗೆ ಕೋಪಗೊಂಡಿದ್ದಾರೆ. ಸಾರ್ವಜನಿಕರು ಪ್ರಶ್ನೆಗಳನ್ನು ಎತ್ತಿರುವ ನ್ಯೂನತೆಗಳ ಬಗ್ಗೆ ವಿವರವಾಗಿ ಚರ್ಚಿಸಬೇಕು ಮತ್ತು ಅವುಗಳನ್ನು ತೆಗೆದುಹಾಕಬೇಕು ಎಂದು ನಮ್ಮ ಪಕ್ಷ ಬಯಸುತ್ತದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿರುವ ಸಿಎಂ, ಏಕರೂಪ ನಾಗರಿಕ ಸಂಹಿತೆ (UCC) ಕುರಿತು ಕಾನೂನು ಆಯೋಗದ ಮುಖ್ಯಸ್ಥರಿಗೆ ಪತ್ರ ಬರೆದಿದ್ದಾರೆ. ಇದಕ್ಕೆ ನಮ್ಮ ವಿರೋಧವಿಲ್ಲ ಆದರೆ ಮೈತ್ರಿ ಒಕ್ಕೂಟದೊಂದಿಗೆ ಮಾತನಾಡಿ ಪರಿಹಾರ ಕಂಡುಕೊಳ್ಳಬೇಕು ಎಂದು ತಿಳಿಸಿದರು.

    ಜಾತಿ ಆಧಾರಿತ ಜನಗಣತಿ ಕುರಿತು ಮಾತನಾಡಿದ ಕೆ.ಸಿ.ತ್ಯಾಗಿ, ದೇಶದ ಯಾವ ಪಕ್ಷವೂ ಜಾತಿ ಆಧಾರಿತ ಜನಗಣತಿಯನ್ನು ತಿರಸ್ಕರಿಸಿಲ್ಲ. ಜಾತಿ ಆಧಾರಿತ ಜನಗಣತಿ ಇಂದಿನ ಅಗತ್ಯವಾಗಿದೆ. ನಾವು ಅದನ್ನು ಮುಂದಕ್ಕೆ ಕೊಂಡೊಯ್ಯುತ್ತೇವೆ. ಯಾವುದೇ ಪೂರ್ವ ಷರತ್ತುಗಳಿಲ್ಲ. ಬೇಷರತ್ ಬೆಂಬಲವಿದೆ. ಆದರೆ ಬಿಹಾರಕ್ಕೆ ವಿಶೇಷ ಸ್ಥಾನಮಾನ ಸಿಗಬೇಕು ಎಂಬುದು ನಮ್ಮ ಮನಸ್ಸಲ್ಲಿದೆ ಎಂದರು. ಇದನ್ನೂ ಓದಿ: ರಾಹುಲ್ ಗಾಂಧಿಗೆ ವಿಪಕ್ಷ ನಾಯಕನ ಸ್ಥಾನ?

  • ರಕ್ತ ಚೆಲ್ಲಲು ಸಿದ್ಧ.. ದೇಶದಲ್ಲಿ ಸಿಎಎ, ಎನ್‌ಆರ್‌ಸಿ, ಯುಸಿಸಿ ಜಾರಿ ಒಪ್ಪಲ್ಲ: ಮಮತಾ ಬ್ಯಾನರ್ಜಿ

    ರಕ್ತ ಚೆಲ್ಲಲು ಸಿದ್ಧ.. ದೇಶದಲ್ಲಿ ಸಿಎಎ, ಎನ್‌ಆರ್‌ಸಿ, ಯುಸಿಸಿ ಜಾರಿ ಒಪ್ಪಲ್ಲ: ಮಮತಾ ಬ್ಯಾನರ್ಜಿ

    ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಅವರು, ಪೌರತ್ವ (ತಿದ್ದುಪಡಿ) ಕಾಯ್ದೆ (CAA), ರಾಷ್ಟ್ರೀಯ ನಾಗರಿಕರ ನೋಂದಣಿ (NRC) ಮತ್ತು ಏಕರೂಪ ನಾಗರಿಕ ಸಂಹಿತೆ (UCC)ಗೆ ವಿರೋಧವನ್ನು ಪುನರುಚ್ಚರಿಸಿದ್ದಾರೆ. ಚುನಾವಣಾ ಸಮಯದಲ್ಲಿ ಕೆಲವರ ಅಜೆಂಡಾಗಳ ಬಗ್ಗೆ ಜಾಗರೂಕರಾಗಿರಿ ಎಂದು ಮತದಾರರಿಗೆ ಎಚ್ಚರಿಕೆ ನೀಡಿದ್ದಾರೆ.

    ಈದ್ ಪ್ರಾರ್ಥನೆಯಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶಕ್ಕಾಗಿ ರಕ್ತ ಸುರಿಸಲು ನಾವು ಸಿದ್ಧರಿದ್ದೇವೆ. ಆದರೆ ಹಿಂಸೆಯನ್ನು ಸಹಿಸುವುದಿಲ್ಲ. ಏಕರೂಪ ನಾಗರಿಕ ಸಂಹಿತೆ ಸ್ವೀಕಾರಾರ್ಹವಲ್ಲ. ನಾನು ಎಲ್ಲಾ ಧರ್ಮಗಳಲ್ಲಿ ಸಾಮರಸ್ಯವನ್ನು ಬಯಸುತ್ತೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಜೈಲಿನಿಂದಲೇ ಬಿಆರ್‌ಎಸ್‌ ನಾಯಕಿಯನ್ನು ಬಂಧಿಸಿದ ಸಿಬಿಐ

    ನಾವು ಸಿಎಎ, ಎನ್‌ಆರ್‌ಸಿ, ಯುಸಿಸಿಯನ್ನು ಒಪ್ಪಿಕೊಳ್ಳುವುದಿಲ್ಲ. ಚುನಾವಣೆ ಸಮಯದಲ್ಲಿ ಕೆಲವರು ಗಲಭೆ ಸೃಷ್ಟಿಸಲು ಬಯಸುತ್ತಿದ್ದಾರೆ. ಅವರ ಸಂಚಿಗೆ ಒಳಗಾಗಬೇಡಿ. ನಾವು ಒಗ್ಗಟ್ಟಿನಿಂದ ಇದ್ದರೆ, ಯಾರೂ ನಮಗೆ ತೊಂದರೆ ಕೊಡಲು ಸಾಧ್ಯವಿಲ್ಲ ಎಂದು ಮತದಾರರನ್ನು ಎಚ್ಚರಿಸಿದ್ದಾರೆ.

    ಬ್ಯಾನರ್ಜಿ ಅವರು ಈ ಹಿಂದೆ ರಾಜ್ಯದಲ್ಲಿ ಸಿಎಎ ಜಾರಿಗೊಳಿಸುವುದರ ವಿರುದ್ಧ ಪ್ರತಿಜ್ಞೆ ಮಾಡಿದ್ದರು. ಸಿಎಎ ವಿಚಾರವಾಗಿ ತೃಣಮೂಲ ಕಾಂಗ್ರೆಸ್‌ ಸೇರಿದಂತೆ ಅನೇಕ ವಿಪಕ್ಷಗಳು ಜನರಿಗೆ ತಪ್ಪು ಸಂದೇಶ ರವಾನಿಸುತ್ತಿವೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ವಾಗ್ದಾಳಿ ನಡೆಸಿದ್ದರು. ಇದನ್ನೂ ಓದಿ: ಪ್ರಧಾನಿಯಾಗಲು ದೀದಿ ಎಲ್ಲಾ ಅರ್ಹತೆ ಹೊಂದಿದ್ದಾರೆ: ಟಿಎಂಸಿ ಸಂಸದ

  • ಮತ್ತೆ ಮದುವೆಯಾಗಬೇಕಿದ್ದರೆ ಚುನಾವಣೆಗೆ ಮುಂಚೆಯೇ ಆಗಿಬಿಡಿ, ಇಲ್ಲಾಂದ್ರೆ ಜೈಲು ಗ್ಯಾರಂಟಿ; ಅಸ್ಸಾಂ ಸಿಎಂ ವಾರ್ನಿಂಗ್‌!

    ಮತ್ತೆ ಮದುವೆಯಾಗಬೇಕಿದ್ದರೆ ಚುನಾವಣೆಗೆ ಮುಂಚೆಯೇ ಆಗಿಬಿಡಿ, ಇಲ್ಲಾಂದ್ರೆ ಜೈಲು ಗ್ಯಾರಂಟಿ; ಅಸ್ಸಾಂ ಸಿಎಂ ವಾರ್ನಿಂಗ್‌!

    ಗುವಾಹಟಿ: ಲೋಕಸಭಾ ಚುನಾವಣಾ (Lok Sabha Elections) ಸಮೀಪಿಸುತ್ತಿರುವ ಹೊತ್ತಿನಲ್ಲೇ ಅಸ್ಸಾಂ ಸಿಎಂ ಹಿಮಂತ ನಿಸ್ವಾ ಶರ್ಮಾ (Himanta Biswa Sarma) ಅವರು ಸಂಸದರೂ ಆಗಿರುವ ಎಐಯುಡಿಎಫ್ ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ ಅವರನ್ನ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಧುಬ್ರಿ ಸಂಸದರು ಮತ್ತೆ ಮದುವೆಯಾಲು ಬಯಸಿದ್ದರೆ ಲೋಕಸಭಾ ಚುನಾವಣೆಗೆ ಮುಂಚಿತವಾಗಿಯೇ ಮದುವೆಯಾಗಲಿ. ಇಲ್ಲದಿದ್ದರೆ ಬಂಧನ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.

    ಶನಿವಾರ ನಡೆದ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ನನಗೆ ಇನ್ನೂ ತುಂಬಾ ಶಕ್ತಿ ಇದೆ, ನಾನು ಮದುವೆಯಾಗುತ್ತೇನೆ. ಮುಖ್ಯಮಂತ್ರಿ ಬಯಸದಿದ್ದರೂ ನಾನು ಆ ಕೆಲಸ ಮಾಡಬಲ್ಲೆ ಅದು ನನ್ನ ಶಕ್ತಿ ಅಷ್ಟೆ ಎಂಬ ಬದ್ರುದ್ದೀನ್ ಅಜ್ಮಲ್ (Badruddin Ajmal) ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ. ಲೋಕಸಭಾ ಚುನಾವಣೆ ಬಳಿಕ ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಯಾಗಲಿದೆ. ಆಗ ಬಹುಪತ್ನಿತ್ವ ಕಾನೂನು ಬಾಹಿರವಾಗಲಿದೆ. ಆಮೇಲೆ ಜೈಲು ಶಿಕ್ಷೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.

    ಧುಬ್ರಿ ಸಂಸದರು ಮತ್ತೆ ಮದುವೆಯಾಲು ಬಯಸಿದ್ದರೆ ಲೋಕಸಭಾ ಚುನಾವಣೆಗೆ ಮುಂಚಿತವಾಗಿಯೇ ಮದುವೆಯಾಗಲಿ. ನಮಗೆ ಆಹ್ವಾನ ಕೊಟ್ಟರೆ ನಾವೂ ಹೋಗ್ತೀವಿ. ಏಕೆಂದರೆ ಈಗ ಅದು ಕಾನೂನು ಬಾಹಿರವಾಗಿಲ್ಲ. ನನಗೆ ತಿಳಿದಿರುವಂತೆ ಈಗಾಗಲೇ ಅವರಿಗೆ ಒಬ್ಬರು ಪತ್ನಿ ಇದ್ದಾರೆ. ಇನ್ನೂ ಎರಡು ಮೂರು ಮದುವೆ ಆಗುವುದಿದ್ದರೆ ಆಗಿಬಿಡಲಿ. ಚುನಾವಣೆಯ ನಂತರ ಬಹುಪತ್ನಿತ್ವ ನಿಲ್ಲಿಸುತ್ತೇವೆ. ಈಗಾಗಲೇ ಯುಸಿಸಿ ಜಾರಿಗೆ ತರಲು ಸಂಪೂರ್ಣ ಕರಡು ಸಿದ್ಧವಾಗಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

    ಈಗಾಗಲೇ ಉತ್ತರಾಖಂಡದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರಲಾಗಿದೆ. ಈ ಕಾನೂನಿನ ಅನ್ವಯ ರಾಜ್ಯದ ಮುಸ್ಲಿಮರು (Muslims) ಸೇರಿದಂತೆ ಎಲ್ಲಾ ಧರ್ಮದವರು 2ನೇ ವಿವಾಹವಾಗುವುದು ಅಪರಾಧವಾಗುತ್ತದೆ. ಒಬ್ಬ ವ್ಯಕ್ತಿಗೆ ಒಂದು ಮದುವೆಗೆ ಮಾತ್ರ ಕಾನೂನಿನ ಮಾನ್ಯತೆ ಇರಲಿದೆ. ಹಾಲಿ ಷರಿಯಾ ಕಾನೂನಿನಡಿ ಮುಸ್ಲಿಮರು ಕಾನೂನು ಬದ್ಧವಾಗಿಯೇ 3 ವಿವಾಹವಾಗುವ ಅವಕಾಶವಿದೆ. ವಿವಾಹ, ವಿಚ್ಛೇದನ, ಆಸ್ತಿ, ಉತ್ತರದಾಯಿತ್ವ ಎಲ್ಲಾ ವಿಚಾರದಲ್ಲಿ ಎಲ್ಲಾ ಧರ್ಮದ ಜನರಿಗೆ ಒಂದೇ ನಿಯಮ ಅನ್ವಯವಾಗುತ್ತದೆ.

  • ಮುಸ್ಲಿಮರ ಬಹುಪತ್ನಿತ್ವ ಕಂಡು ಬೇರೆಯವರಿಗೆ ಹೊಟ್ಟೆಕಿಚ್ಚು: ಜಾವೇದ್‌ ಅಖ್ತರ್‌

    ಮುಸ್ಲಿಮರ ಬಹುಪತ್ನಿತ್ವ ಕಂಡು ಬೇರೆಯವರಿಗೆ ಹೊಟ್ಟೆಕಿಚ್ಚು: ಜಾವೇದ್‌ ಅಖ್ತರ್‌

    – ಹಿಂದೂಗಳು ಅನಧಿಕೃತವಾಗಿ ಇಬ್ಬರು ಪತ್ನಿಯರನ್ನ ಹೊಂದಿರ್ತಾರೆ ಎಂದ ಚಿತ್ರ ಸಾಹಿತಿ

    ನವದೆಹಲಿ: ಉತ್ತರಾಖಂಡ ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ (Uniform Civil Code Bil) ಬೆಂಬಲ ವ್ಯಕ್ತಪಡಿಸಿರುವ ಖ್ಯಾತ ಚಿತ್ರ ಸಾಹಿತಿ ಜಾವೇದ್‌ ಅಖ್ತರ್‌ (Javed Akhtar), ಇದೇ ವೇಳೆ ಮುಸ್ಲಿಮರ ಬಹುಪತ್ನಿತ್ವ ನೋಡಿ ಬೇರೆಯವರಿಗೆ ಹೊಟ್ಟೆಕಿಚ್ಚು ಎಂದು ಹಾಸ್ಯ ಮಾಡಿದ್ದಾರೆ.

    ಹಿಂದೂಗಳು (Hindu) ಅನಧಿಕೃತವಾಗಿ ಇಬ್ಬರು ಪತ್ನಿಯರನ್ನು ಹೊಂದಿರುತ್ತಾರೆ. ಮಾಹಿತಿ ಪ್ರಕಾರ ಇಂತಹವರ ಸಂಖ್ಯೆ ಹೆಚ್ಚಾಗಿಯೇ ಇದೆ. ಹೀಗಾಗಿ ಸಂಹಿತೆಯಲ್ಲಿ ಮುಸ್ಲಿಮರಿಗೆ ಮಾತ್ರ ಬಹುಪತ್ನಿತ್ವ ನಿಷೇಧ ಮಾಡುವುದು ಸರಿಯಲ್ಲ. ನಾನು ಸಮಾನ ಹಕ್ಕು ಮತ್ತು ಕಾನೂನಿನ (Law) ಪರವಾಗಿದ್ದೇನೆ. ನನ್ನ ಮಗ ಮತ್ತು ಮಗಳಿಗೂ ಆಸ್ತಿಯಲ್ಲಿ ಸಮಪಾಲು ನೀಡಿದ್ದೇನೆ. ಹಾಗೆಯೇ ಇದು ಎಲ್ಲರಿಗೂ ಅನ್ವಯವಾಗುವಂತೆ ಇರಬೇಕು. ಮುಸ್ಲಿಮರನ್ನು ಟೀಕಿಸುವುದಕ್ಕೆ ಮಾತ್ರವೇ ಜಾರಿಗೆ ತಂದಂತೆ ಆಗಬಾರದು ಎಂದು ಮನವಿ ಮಾಡಿದ್ದಾರೆ.

    ಕೆಲ ದಿನಗಳ ಹಿಂದೆಯಷ್ಟೇ ಉತ್ತರಾಖಂಡ ಸರ್ಕಾರ (Uttarakhand Government) ಏಕರೂಪ ನಾಗರಿಕ ಸಂಹಿತೆಯನ್ನು ಘೋಷಣೆ ಮಾಡಿತು. ಇದನ್ನೂ ಓದಿ: ಏಕರೂಪ ನಾಗರಿಕ ಸಂಹಿತೆ; 1835-2024ರ ವರೆಗೆ ಒಂದು ನೋಟ..

    ಏಕರೂಪ ನಾಗರಿಕ ಸಂಹಿತೆ:
    ರಾಜ್ಯದ ಮುಸ್ಲಿಮರು ಸೇರಿದಂತೆ ಎಲ್ಲಾ ಧರ್ಮದವರು 2ನೇ ವಿವಾಹವಾಗುವುದು ಅಪರಾಧ. ಒಬ್ಬ ವ್ಯಕ್ತಿಗೆ ಒಂದು ಮದುವೆಗೆ ಮಾತ್ರ ಕಾನೂನಿನ ಮಾನ್ಯತೆ ಇರಲಿದೆ. ಹಾಲಿ ಷರಿಯಾ ಕಾನೂನಿನಡಿ ಮುಸ್ಲಿಮರು ಕಾನೂನು ಬದ್ಧವಾಗಿಯೇ 3 ವಿವಾಹವಾಗುವ ಅವಕಾಶವಿದೆ. ವಿವಾಹ, ವಿಚ್ಛೇದನ, ಆಸ್ತಿ, ಉತ್ತರದಾಯಿತ್ವ ಎಲ್ಲಾ ವಿಚಾರದಲ್ಲಿ ಎಲ್ಲಾ ಧರ್ಮದ ಜನರಿಗೆ ಒಂದೇ ನಿಯಮ ಅನ್ವಯವಾಗುತ್ತದೆ. ಇದನ್ನೂ ಓದಿ: UCC ಬಿಲ್‌ ಪಾಸ್‌ – ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸಿದ ದೇಶದ ಮೊದಲ ರಾಜ್ಯ ಉತ್ತರಾಖಂಡ

    ಲಿವ್ ಇನ್ ಸಂಬಂಧಕ್ಕೆ ನೋಂದಣಿ ಕಡ್ಡಾಯ ಮಾಡಲಾಗಿದೆ. ನೋಂದಣಿ 1 ತಿಂಗಳು ತಡವಾದರೆ 3 ತಿಂಗಳು ಜೈಲು, 25 ಸಾವಿರ ರೂ. ದಂಡ ವಿಧಿಸಲಾಗುತ್ತದೆ. ನೋಂದಣಿ ಸಂಶಯಾಸ್ಪದವಾಗಿದ್ದರೆ ತನಿಖೆ ನಡೆಸಲಾಗುತ್ತದೆ. ಲಿವ್ ಇನ್ ಸಂಬಂಧದಿಂದ ಜನಿಸಿದ ಮಕ್ಕಳಿಗೆ ಕಾನೂನು ಮಾನ್ಯತೆ ಸೇರಿದಂತೆ ಆಸ್ತಿಯಲ್ಲೂ ಸಮಪಾಲು ಸಿಗಲಿದೆ. ಲಿವ್ ಇನ್ ಸಂಗಾತಿ ತೊರೆದಲ್ಲಿ ಜೀವನಾಂಶ ಪಡೆಯಬಹುದು. ಸಂಬಂಧ ಮುಂದುವರಿಸಲು ಇಷ್ಟವಿಲ್ಲದ ಜೋಡಿ, ದಾಖಲೆಗಳನ್ನು ಸಲ್ಲಿಸಿ ಲಿಖಿತ ಹೇಳಿಕೆ ನೀಡಿ ಲಿವ್‌ ಇನ್‌ ಸಂಬಂಧ ಕಡಿತಗೊಳಿಸಬಹುದು. ಈ ಮಸೂದೆಯಿಂದ ಬುಡಕಟ್ಟು ಸಮುದಾಯವನ್ನು ಹೊರಗಿಡಲಾಗಿದೆ.

    ಅತ್ಯಾಚಾರ ಅಥವಾ ಅನೈಸರ್ಗಿಕ ಲೈಂಗಿಕ ಕ್ರಿಯೆ ನಡೆಸಿದ ಪತಿಗೆ ವಿಚ್ಛೇದನ ನೀಡುವ ಹಕ್ಕನ್ನು ಮಸೂದೆ ಮಹಿಳೆಯರಿಗೆ ನೀಡುತ್ತದೆ. ಮದುವೆಯಾದ ಒಂದೇ ವರ್ಷದೊಳಗೆ ವಿವಾಹ ವಿಚ್ಛೇದನ ಪಡೆಯುವುದನ್ನು ಅಸಾಧಾರಣ ಸಂದರ್ಭ ಹೊರತುಪಡಿಸಿ ಉಳಿದ ಸನ್ನಿವೇಶಗಳಲ್ಲಿ ನಿರ್ಬಂಧಿಸುವ ಅಂಶವಿದೆ. ಅತ್ಯಾಚಾರ ಪ್ರಕರಣದಲ್ಲಿ ಪತಿ ಪತಿ ಸಿಲುಕಿದರೆ ಆತನಿಂದ ಪತ್ನಿ ವಿಚ್ಛೇದನ ಕೇಳಬಹುದು. ಇದನ್ನೂ ಓದಿ: Shivamogga Lok Sabha 2024: ಬಿಎಸ್‌ವೈ v/s ಬಂಗಾರಪ್ಪ ಫ್ಯಾಮಿಲಿ – ಯಾರಿಗೆ ಮಣೆ ಹಾಕ್ತಾರೆ ಮಲೆನಾಡ ಜನ?

    ವಿವಾಹವಾದ 60 ದಿನದ ಒಳಗಡೆ ನೋಂದಣಿ ಮಾಡಿಸಬೇಕು. 2010ರ ಮಾ.26ರ ನಂತರ ಮದುವೆಯಾದವರು 6 ತಿಂಗಳೊಳಗೆ ನೋಂದಣಿ ಮಾಡಿಸುವುದು ಕಡ್ಡಾಯ. ನಿರ್ಲಕ್ಷಿಸಿದರೆ 20 ಸಾವಿರ ರೂ. ದಂಡ ವಿಧಿಸಲಾಗುತ್ತದೆ. ಆದರೆ ನೋಂದಣಿಯಾಗದ ವಿವಾಹವನ್ನು ಅಸಿಂಧು ಎಂದು ಪರಿಗಣನೆ ಮಾಡುವುದಿಲ್ಲ.

  • ಉತ್ತರಾಖಂಡದ ಏಕರೂಪ ನಾಗರಿಕ ಸಂಹಿತೆ ಮಸೂದೆಗೆ ರಾಷ್ಟ್ರಪತಿ ಅನುಮೋದನೆ

    ಉತ್ತರಾಖಂಡದ ಏಕರೂಪ ನಾಗರಿಕ ಸಂಹಿತೆ ಮಸೂದೆಗೆ ರಾಷ್ಟ್ರಪತಿ ಅನುಮೋದನೆ

    ಡೆಹ್ರಾಡೂನ್: ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರು ಬುಧವಾರ ಉತ್ತರಾಖಂಡದ ಏಕರೂಪ ನಾಗರಿಕ ಸಂಹಿತೆ (UCC) ಮಸೂದೆಗೆ ಅನುಮೋದನೆ ನೀಡಿದ್ದಾರೆ ಎಂದು ರಾಜ್ಯ ಸರ್ಕಾರ ದೃಢಪಡಿಸಿದೆ.

    ರಾಷ್ಟ್ರಪತಿಗಳ ಅನುಮೋದನೆಯೊಂದಿಗೆ ಉತ್ತರಾಖಂಡವು ಯುಸಿಸಿಯನ್ನು ಜಾರಿಗೆ ತಂದ ದೇಶದ ಮೊದಲ ರಾಜ್ಯವಾಗಲು ಸಿದ್ಧವಾಗಿದೆ. ಉತ್ತರಾಖಂಡದ (Uttarakhand) ರಾಜ್ಯಪಾಲ ಗುರ್ಮಿತ್ ಸಿಂಗ್ ಅವರು ಫೆ.29 ರಂದು ರಾಜ್ಯ ಸರ್ಕಾರವು ಕಳುಹಿಸಿದ್ದ ಮಸೂದೆಯನ್ನು ರಾಷ್ಟ್ರಪತಿ ಮುರ್ಮು ಅವರ ಅನುಮೋದನೆಗೆ ಕಳುಹಿಸಿದ್ದರು. ಇದನ್ನೂ ಓದಿ: ಉತ್ತರಾಖಂಡ ವಿಧಾನಸಭೆಯಲ್ಲಿ ಏಕರೂಪದ ನಾಗರಿಕ ಸಂಹಿತೆ ಮಸೂದೆ ಮಂಡನೆ

    ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಸರ್ಕಾರವು ಫೆ.6 ರಂದು ಯುಸಿಸಿ ಮಸೂದೆಯನ್ನು ಮಂಡಿಸಿ, ಅದರ ಮಹತ್ವವನ್ನು ಒತ್ತಿಹೇಳಿತ್ತು. ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ವಿಧಾನಸಭೆಯಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಮಸೂದೆಯ ಅಂಗೀಕಾರವು ಉತ್ತರಾಖಂಡದ ಇತಿಹಾಸದಲ್ಲಿ ಐತಿಹಾಸಿಕ ದಿನ ಎಂದು ಬಣ್ಣಿಸಿದ್ದರು.

    ಫೆ.7 ರಂದು ಉತ್ತರಾಖಂಡ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಮಸೂದೆಯನ್ನು ಬಹುಮತದೊಂದಿಗೆ ಅಂಗೀಕರಿಸಲಾಗಿತ್ತು. ಎಲ್ಲಾ ಸಮುದಾಯಗಳಿಗೆ ಒಂದೇ ರೀತಿಯ ಅಥವಾ ಏಕರೂಪದ ಕಾನೂನುಗಳನ್ನು ಪ್ರಸ್ತಾಪಿಸುವ ಏಕರೂಪ ನಾಗರಿಕ ಸಂಹಿತೆಯನ್ನು ಮುಖ್ಯಮಂತ್ರಿಯವರು ವಿಶೇಷ ಅಧಿವೇಶನದಲ್ಲಿ ಮಂಡಿಸಿದ್ದರು. ಇದನ್ನೂ ಓದಿ: ಏಕರೂಪ ನಾಗರಿಕ ಸಂಹಿತೆ; 1835-2024ರ ವರೆಗೆ ಒಂದು ನೋಟ..

    ಏಕರೂಪ ನಾಗರಿಕ ಸಂಹಿತೆಯು ಭಾರತದಲ್ಲಿ ಎಲ್ಲಾ ನಾಗರಿಕರಿಗೆ ವೈಯಕ್ತಿಕ ವಿಷಯಗಳಿಗೆ ಏಕರೂಪದ ಕಾನೂನು ಅನ್ವಯಿಸುವ ಪ್ರಸ್ತಾಪವಾಗಿದೆ. ಮದುವೆ, ವಿಚ್ಛೇದನ, ಉತ್ತರಾಧಿಕಾರ ಮತ್ತು ಆಸ್ತಿ ಹಕ್ಕುಗಳು ಇದರಲ್ಲಿ ಸೇರಿವೆ. ಯುಸಿಸಿ ಎಲ್ಲಾ ನಾಗರಿಕರಿಗೆ ಅವರ ಧರ್ಮ, ಲಿಂಗ ಅಥವಾ ಲೈಂಗಿಕ ದೃಷ್ಟಿಕೋನವನ್ನು ಲೆಕ್ಕಿಸದೆ ಸಮಾನವಾಗಿ ಅನ್ವಯಿಸುತ್ತದೆ.

  • ಏಕರೂಪ ನಾಗರಿಕ ಸಂಹಿತೆ; 1835-2024ರ ವರೆಗೆ ಒಂದು ನೋಟ..

    ಏಕರೂಪ ನಾಗರಿಕ ಸಂಹಿತೆ; 1835-2024ರ ವರೆಗೆ ಒಂದು ನೋಟ..

    ಹುಧರ್ಮೀಯ, ಬಹುಸಂಸ್ಕೃತಿಯ ದೇಶ ಭಾರತ. ವಿವಿಧತೆಯಲ್ಲಿ ಏಕತೆ ಸಾರುವ ಸಂವಿಧಾನವನ್ನು ರಾಷ್ಟ್ರದ ಜನತೆ ಒಪ್ಪಿದ್ದಾರೆ. ಜೊತೆಗೆ ತಮ್ಮ ಧರ್ಮದ ಭಾಗವಾಗಿರುವ, ಪರಂಪರೆಯಿಂದ ಅನುಸರಿಸಿಕೊಂಡು ಬಂದಿರುವ ವೈಯಕ್ತಿಕ ಕಾನೂನುಗಳನ್ನೂ ಅನುಸರಿಸುತ್ತಿದ್ದಾರೆ. ಹೀಗಿರುವಾಗ ಧರ್ಮ, ಸಂಸ್ಕೃತಿ ಎನ್ನದೇ ಎಲ್ಲರಿಗೂ ಒಂದೇ ಕಾನೂನು ತಂದರೆ ಹೇಗಿರುತ್ತದೆ? ಬಹುತ್ವವನ್ನೇ ಉಸಿರಾಡುವ ಭಾರತದಂಥ ರಾಷ್ಟçದಲ್ಲಿ ಒಂದೇ ಕಾನೂನು ಸಮರ್ಪಕ ಜಾರಿ ಸಾಧ್ಯವೇ? ಜಾರಿಗೊಳಿಸಿದರೂ ಅದನ್ನು ಜನತೆ ಮನಃಪೂರ್ವಕವಾಗಿ ಒಪ್ಪಿ ನಡೆಯುತ್ತಾರೆಯೇ ಎಂಬ ಪ್ರಶ್ನೆ ಈಗ ಎಲ್ಲರ ಮುಂದಿದೆ.

    ಏಕರೂಪ ನಾಗರಿಕ ಸಂಹಿತೆ (Uniform Civil Code – UCC). ಈಗಾಗಲೇ ಎಲ್ಲರೂ ಕೇಳಿರುವ ವಿಷಯವೇ! ಕೆಲ ಸನ್ನಿವೇಶಗಳಿಂದಾಗಿ ಯುಸಿಸಿ ಕುರಿತು ಆಗಾಗ ಪರ-ವಿರೋಧದ ಚರ್ಚೆಗಳು ನಡೆಯುತ್ತವೆ. ಉತ್ತರಾಖಂಡದ ಸದನದಲ್ಲಿ ಅಂಗೀಕಾರವಾಗಿದ್ದು, ಯುಸಿಸಿ ಮತ್ತೆ ಮುನ್ನೆಲೆಗೆ ಬರಲು ಕಾರಣವಾಗಿದೆ. ಇದನ್ನೂ ಓದಿ: UCC ಬಿಲ್‌ ಪಾಸ್‌ – ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸಿದ ದೇಶದ ಮೊದಲ ರಾಜ್ಯ ಉತ್ತರಾಖಂಡ

    ಅಷ್ಟಕ್ಕೂ ಏನಿದು ಕಾನೂನು? ಅದರ ಇತಿಹಾಸವೇನು? ಕಾನೂನು ವಿಷಯದ ಆಳ-ಅಗಲವೇನು? ಬಹುತ್ವ ಭಾರತಕ್ಕೆ ಅದರ ಅಗತ್ಯವೇಕೆ? ಈಗ ಆ ಕಾನೂನಿನ ಚರ್ಚೆ ಯಾವ ಹಂತದಲ್ಲಿದೆ ಎಂಬೆಲ್ಲ ಪ್ರಶ್ನೆಗಳು ಮೂಡುವುದು ಸಹಜ. ನಿಜಕ್ಕೂ ಇದೊಂದು ಸಂಕೀರ್ಣ ವಿಷಯ.

    ಏನಿದು ಏಕರೂಪ ನಾಗರಿಕ ಸಂಹಿತೆ?
    ಮದುವೆ, ವಿಚ್ಛೇದನ, ದತ್ತು, ಉತ್ತರಾಧಿಕಾರ ಮುಂತಾದ ವಿಚಾರಗಳಲ್ಲಿ ಧರ್ಮಾಧಾರಿತ ಕಾನೂನುಗಳನ್ನು ಕೈಬಿಟ್ಟು, ಎಲ್ಲಾ ಜಾತಿ, ಧರ್ಮಗಳಿಗೆ ಒಂದೇ ಕಾನೂನು ಅನ್ವಯವಾಗುವಂತೆ ಮಾಡುವುದು. ಅಂದರೆ ಯಾವುದೇ ಜಾತಿ, ಧರ್ಮ, ಪ್ರಾಂತ್ಯಭೇದ ಮಾಡದೇ ದೇಶದ ಎಲ್ಲರಿಗೂ ಒಂದೇ ಕಾನೂನು ಇರಬೇಕು ಎನ್ನುವುದೇ ಏಕರೂಪ ನಾಗರಿಕ ಸಂಹಿತೆ. ಕಾನೂನಿನ ಮುಂದೆ ಎಲ್ಲರೂ ಒಂದೇ ಎಂಬುದು ಇದರ ಪ್ರತಿಪಾದನೆ.

    ಭಾರತದಲ್ಲಿ ಸಂಹಿತೆ ಇತಿಹಾಸವೇನು?
    ವಸಾಹತುಶಾಹಿ ಭಾರತದ ಬ್ರಿಟಿಷ್ ಸರ್ಕಾರವು 1835 ರಲ್ಲಿ ಸಿದ್ಧಪಡಿಸಿದ ವರದಿಯಲ್ಲಿ, ಅಪರಾಧ, ಸಾಕ್ಷ್ಯ ಮತ್ತು ಒಪ್ಪಂದಗಳಿಗೆ ಸಂಬಂಧಿಸಿದಂತೆ ದೇಶದಾದ್ಯಂತ ಏಕರೂಪದ ಕಾನೂನು ಜಾರಿಯ ಅಗತ್ಯವಿದೆ ಎಂಬುದನ್ನು ಒತ್ತಿಹೇಳಿತು. 1840 ರಲ್ಲಿ ಇದನ್ನು ಜಾರಿಗೊಳಿಸಿತು. ಆದರೆ ಧರ್ಮದ ಆಧಾರದ ಮೇಲೆ ಹಿಂದೂಗಳು ಮತ್ತು ಮುಸ್ಲಿಮರ ವೈಯಕ್ತಿಕ ಕಾನೂನನ್ನು ಬ್ರಿಟಿಷರು ಪ್ರತ್ಯೇಕಿಸಿದರು. ಅಲ್ಲಿಂದ ಭಾರತದಲ್ಲಿ ಏಕರೂಪ ನಾಗರಿಕ ಸಂಹಿತೆಯ ಬೇಡಿಕೆಯ ಕೂಗು ಶುರುವಾಯಿತು.

    ಸಂಹಿತೆ ಬಗ್ಗೆ ಸಂವಿಧಾನ ಸಭೆಯಲ್ಲಿ ಚರ್ಚೆ ಏನಾಗಿತ್ತು?
    ಈ ಸಂಹಿತೆಯನ್ನು ರೂಪಿಸುವ ವಿಷಯ ಸಂವಿಧಾನ ಸಭೆಯಲ್ಲಿ ಚರ್ಚೆಗೆ ಬಂದಾಗ, ಹಿಂದೂಗಳು-ಮುಸ್ಲಿಮರು ಒಟ್ಟಿಗೆ ವಿರೋಧಿಸಿದ್ದರು. ಧಾರ್ಮಿಕ ವಿಷಯಗಳಲ್ಲಿ ಸರ್ಕಾರದ ಹಸ್ತಕ್ಷೇಪ ಇರಕೂಡದು ಎಂಬುದು ಕೆಲವರ ನಿಲುವಾಗಿತ್ತು. ಯಾವುದೋ ಒಂದು ಕಾನೂನಿಗಾಗಿ ಪರಂಪರಾಗತವಾಗಿ ಬಂದಿರುವ ವೈಯಕ್ತಿಕ ಕಾನೂನನ್ನು ಬಿಟ್ಟುಕೊಡಲು ಯಾವುದೇ ಸಮುದಾಯ, ವರ್ಗದ ಜನರ ಮೇಲೆ ಒತ್ತಾಯ ಹಾಡಬಾರದು ಎಂಬ ಅಭಿಪ್ರಾಯ ಕೇಳಿಬಂದಿತ್ತು. ಸಭೆಯಲ್ಲಿ ಇನ್ನೂ ಕೆಲವರು ಸಂಹಿತೆ ಪರವಾಗಿ ಮಾತನಾಡಿದ್ದರು. ನಾಗರಿಕ ಸಂಹಿತೆ ಜಾರಿ ಪ್ರಕ್ರಿಯೆ 1956 ರಲ್ಲಿಯೇ ಆರಂಭಗೊಂಡಿದ್ದರೂ ಇನ್ನೂ ತಾರ್ಕಿಕ ಅಂತ್ಯ ಕಂಡಿಲ್ಲ. ಇದನ್ನೂ ಓದಿ: ಉತ್ತರಾಖಂಡ ವಿಧಾನಸಭೆಯಲ್ಲಿ ಏಕರೂಪದ ನಾಗರಿಕ ಸಂಹಿತೆ ಮಸೂದೆ ಮಂಡನೆ

    ಧಾರ್ಮಿಕ ಸ್ವಾತಂತ್ರ್ಯದ ಹಕ್ಕಿನಲ್ಲೇನಿದೆ?
    ಭಾರತ ಸಂವಿಧಾನದ 25-28 ನೇ ವಿಧಿಗಳು ಧಾರ್ಮಿಕ ಸ್ವಾತಂತ್ರ್ಯದ ಹಕ್ಕಿನ ಬಗ್ಗೆ ಹೇಳುತ್ತವೆ. 25ನೇ ವಿಧಿಯು, ಭಾರತದ ಪ್ರತಿಯೊಬ್ಬ ಪ್ರಜೆಯೂ ತನ್ನ ಆತ್ಮಸಾಕ್ಷಿಗೆ ಸರಿಯೆನಿಸಿದ ಯಾವುದೇ ಧರ್ಮವನ್ನು ಸ್ವೀಕರಿಸುವ, ಪಾಲಿಸುವ, ಆಚರಿಸುವ, ಪ್ರಚಾರ ಮಾಡುವ ಸ್ವಾತಂತ್ರ್ಯವನ್ನು ನೀಡಿದೆ. ಇದರ ಜೊತೆಗೆ ಒಂದು ಷರತ್ತನ್ನು ಸಂವಿಧಾನ ವಿಧಿಸಿದೆ. ಬಲವಂತದ ಮತಾಂತರವನ್ನು ನಿಷೇಧಿಸಿದೆ. ಹಾಗೆಯೇ 26ನೇ ವಿಧಿಯು, ಧಾರ್ಮಿಕ ಮತ್ತು ದಾನದತ್ತಿ ಉದ್ದೇಶಗಳಿಗಾಗಿ ಸಂಸ್ಥೆಗಳನ್ನು ಸ್ಥಾಪಿಸುವ ಮತ್ತು ನಿರ್ವಹಿಸುವ ಹಕ್ಕನ್ನು ನೀಡಿದೆ.

    ಭಾರತದಲ್ಲಿನ ಏಕರೂಪ ನಾಗರಿಕ ಸಂಹಿತೆಯು ಲಿಂಗ ಅಥವಾ ಲೈಂಗಿಕ ದೃಷ್ಟಿಕೋನದ ಆಧಾರದ ಮೇಲೆ ತರತಮ ಮಾಡುವುದಿಲ್ಲ ಎಂಬ ಕಾರಣದಿಂದಾಗಿ, ಈ ಕರಡು ಭಾರತದಲ್ಲಿ ಎಲ್‌ಜಿಬಿಟಿಕ್ಯೂ+ ಸಮುದಾಯಕ್ಕೆ ಭರವಸೆ ನೀಡುತ್ತದೆ. ಭಾರತದಲ್ಲಿ ಇದುವರೆಗೆ ಅನ್ವಯಿಸುವ ಯಾವುದೇ ಕಾನೂನು ಸಲಿಂಗ ವಿವಾಹಗಳನ್ನು ಕಾನೂನುಬದ್ಧವೆಂದು ಒಪ್ಪಿಕೊಂಡಿಲ್ಲ.

    ಯುಸಿಸಿ ಬಗ್ಗೆ ಸಂವಿಧಾನ ಹೇಳೋದೇನು?
    ಏಕರೂಪ ನಾಗರಿಕ ಸಂಹಿತೆಯು ರಾಜ್ಯ ನಿರ್ದೇಶಕ ತತ್ವಗಳು ಒಳಗೊಂಡಿರುವ ಸಂವಿಧಾನದ 4 ಭಾಗದಲ್ಲಿದೆ. ರಾಜ್ಯ ನಿರ್ದೇಶಕ ತತ್ವಗಳಲ್ಲಿನ 44ನೇ ವಿಧಿಯು ‘ರಾಜ್ಯದ ಪ್ರತಿಯೊಬ್ಬ ನಾಗರಿಕನಿಗೂ ಏಕರೂಪ ನಾಗರಿಕ ಸಂಹಿತೆಯನ್ನು ತರಲು ಸರ್ಕಾರ ಪ್ರಯತ್ನಿಸಬೇಕು’ ಎಂದು ಹೇಳಲಾಗಿದೆ. ಸಂವಿಧಾನದ 44ನೇ ವಿಧಿ ಅಂಗೀಕಾರಗೊಂಡರೂ ಅದು ‘ಮಾರ್ಗಸೂಚಿ ತತ್ವಗಳು’ (ಡೈರೆಕ್ಟಿವ್ ಪ್ರಿನ್ಸಿಪಲ್ಸ್) ಭಾಗದಲ್ಲಿ ಸೇರಿತು.

    ಡಾ.ಬಿ.ಆರ್.ಅಂಬೇಡ್ಕರ್ ಏನು ಹೇಳಿದ್ದರು?
    ಏಕರೂಪ ನಾಗರಿಕ ಸಂಹಿತೆ ಜಾರಿ ಸಾಧ್ಯವೇ ಎಂಬ ಕೆಲವರ ಪ್ರಶ್ನೆಯೇ ನನಗೆ ಆಶ್ಚರ್ಯ ತಂದಿದೆ. ಅಪರಾಧ, ಆಸ್ತಿ ವರ್ಗಾವಣೆ ಕಾನೂನು, ನೆಗೋಶಿಯಬಲ್ ಇನ್ಸ್ಟ್ರುಮೆಂಟ್ಸ್ ಸೇರಿದಂತೆ ಅನೇಕ (ಕ್ರಿಮಿನಲ್ ಕಾನೂನು) ಕಾಯ್ದೆಗಳಿವೆ. ಈ ಕಾಯ್ದೆಗಳು ದೇಶಾದ್ಯಂತ ಎಲ್ಲರಿಗೂ ಏಕರೂಪವಾಗಿವೆ. ಮದುವೆ ಮತ್ತು ಉತ್ತರಾಧಿಕಾರದ ಕಾನೂನುಗಳಿಗೆ ಮಾತ್ರ ಏಕರೂಪ ಕಾನೂನು ತರಲು ಸಾಧ್ಯವಾಗಿಲ್ಲ. ಆದ್ದರಿಂದಲೇ ಈಗ 35ನೇ ವಿಧಿಯ ಮೂಲಕ ಮದುವೆ ಹಾಗೂ ಉತ್ತರಾಧಿಕಾರದ ಕಾನೂನನ್ನು ಏಕರೂಪಗೊಳಿಸಲು ಮುಂದಾಗಿ ಬದಲಾವಣೆ ತರಲು ಇಚ್ಛಿಸಿರುವುದು. ಈ ಸಂಹಿತೆ ಜಾರಿಗೆ ತರಲು ಸಾಧ್ಯವೇ ಎನ್ನುವವರಿಗೆ ನನ್ನ ಉತ್ತರ, ನಾವು ಈಗಾಗಲೇ ಏಕರೂಪ ಕಾನೂನನ್ನು ಜಾರಿಗೊಳಿಸಿದ್ದೇವೆ ಎಂದು ಸಂವಿಧಾನ ಸಭೆಯಲ್ಲಿ ಅಂಬೇಡ್ಕರರು ಹೇಳಿದ್ದರು. ಜೊತೆಗೆ, ‘ರಾಜ್ಯದ ಪ್ರತಿಯೊಬ್ಬ ನಾಗರಿಕನಿಗೂ ಏಕರೂಪ ನಾಗರಿಕ ಸಂಹಿತೆಯನ್ನು ತರಲು ಸರ್ಕಾರ ಪ್ರಯತ್ನಿಸಬೇಕು ಎಂದಷ್ಟೇ ಹೇಳಲಾಗಿದೆ. ಇಂಥದ್ದೊಂದು ಕಾನೂನು ಇದೆ ಎಂದಾಕ್ಷಣ ಸರ್ಕಾರ ಅದನ್ನು ಜಾರಿಗೆ ತರಬೇಕು ಎಂದೇನಿಲ್ಲ’ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಏಕರೂಪ ನಾಗರಿಕ ಸಂಹಿತೆ ಜಾರಿಗೆ ತಯಾರಿ – ಮೋದಿ ಸರ್ಕಾರದ ವಿರುದ್ಧ ವಿಪಕ್ಷಗಳು ಕೆಂಡ

    ಕ್ರಿಮಿನಲ್ & ನಾಗರಿಕ ಕಾನೂನಿಗೆ ಇರುವ ವ್ಯತ್ಯಾಸವೇನು?
    ಯಾವುದೇ ದೇಶದಲ್ಲಿ ಕ್ರಿಮಿನಲ್ ಮತ್ತು ನಾಗರಿಕ ಕಾನೂನು ಎಂಬ 2 ಕಾನೂನುಗಳಿರುತ್ತವೆ. ಅತ್ಯಾಚಾರ, ದರೋಡೆ, ಕೊಲೆ, ಕಳ್ಳತನದಂತಹ ಪ್ರಕರಣಗಳು ಕ್ರಿಮಿನಲ್ ಕಾನೂನು ವ್ಯಾಪ್ತಿಗೆ ಒಳಪಡುತ್ತವೆ. ಇದರಲ್ಲಿ ಎಲ್ಲಾ ಧರ್ಮ, ಸಮುದಾಯಗಳಿಗೆ ಒಂದೇ ರೀತಿಯ ನ್ಯಾಯ ವ್ಯವಸ್ಥೆ ಮತ್ತು ಶಿಕ್ಷೆ ಇರುತ್ತದೆ. ಆದರೆ ನಾಗರಿಕ ಕಾನೂನಿನಲ್ಲಿ ಶಿಕ್ಷೆಗಿಂತ ಪರಿಹಾರ ಅಥವಾ ನ್ಯಾಯಕ್ಕೆ ಹೆಚ್ಚು ಒತ್ತು ನೀಡಬೇಕು. ಮದುವೆ, ಆಸ್ತಿಗೆ ಸಂಬಂಧಿತ ವಿಷಯಗಳು ನಾಗರಿಕ ಕಾನೂನು ವ್ಯಾಪ್ತಿಗೆ ಬರುತ್ತವೆ. ಈ ವಿಷಯಗಳಲ್ಲಿ ನಂಬಿಕೆಗಳನ್ನು ಆಧರಿಸಿ ನಿರ್ದಿಷ್ಟ ಧರ್ಮ, ಸಮುದಾಯಕ್ಕೆ ಪ್ರತ್ಯೇಕ ಕಾನೂನುಗಳಿವೆ. ಇವುಗಳನ್ನೇ ವೈಯಕ್ತಿಕ ಕಾನೂನು ಎಂದು ಕರೆಯುವುದು. ವಿವಾಹ ಆಸ್ತಿ ವಿಷಯದಲ್ಲಿ ಹಿಂದೂ, ಮುಸ್ಲಿಮರು, ಕ್ರೈಸ್ತರು, ಸಿಖ್ಖರಿಗೆ ಪ್ರತ್ಯೇಕ ವೈಯಕ್ತಿಕ ಕಾನೂನುಗಳಿವೆ. ಒಂದು ವೇಳೆ ಏಕರೂಪ ನಾಗರಿಕ ಸಂಹಿತೆ ಜಾರಿಯಾದರೆ, ಈ ಎಲ್ಲ ವೈಯಕ್ತಿಕ ಕಾನೂನುಗಳು ರದ್ದಾಗುತ್ತವೆ.

    ಯುಸಿಸಿಗೆ ವಿರೋಧ ಯಾಕೆ?
    ಏಕರೂಪ ನಾಗರಿಕ ಸಂಹಿತೆಗೆ ಮುಸ್ಲಿಮರು, ಸಂಪ್ರದಾಯವಾಗಿ ಗುಂಪುಗಳು, ಪಂಗಡಗಳು ವಿರೋಧ ವ್ಯಕ್ತಪಡಿಸಿವೆ. ವೈವಿಧ್ಯತೆಯ ದೇಶವಾಗಿರುವ ಭಾರತದಲ್ಲಿ ವಿವಿಧ ಧರ್ಮೀಯರು ತಮ್ಮದೇ ಆದ ವೈಯಕ್ತಿಕ ಕಾನೂನುಗಳನ್ನು ಅನುಸರಿಸುತ್ತಿದ್ದಾರೆ. ವಿವಾಹ ಮತ್ತು ಉತ್ತರಾಧಿಕಾರದ ಕಾನೂನುಗಳ ವಿಚಾರದಲ್ಲಿ ಧರ್ಮಗಳು ಭಿನ್ನತೆಯನ್ನು ಒಳಗೊಂಡಿವೆ. ಉದಾಹರಣೆಗೆ: ಕೆಲವು ಧರ್ಮಗಳಲ್ಲಿ ಉತ್ತರಾಧಿಕಾರದ ಕಾನೂನು ಗಂಡುಮಕ್ಕಳ ಪರವಾಗಿವೆ. ಇಸ್ಲಾಂ ಧರ್ಮದಲ್ಲಿ ಮುಸ್ಲಿಂ ಮಹಿಳೆಯರಿಗೆ ಕಾನೂನುಬದ್ಧ ವಿವಾಹದ ವಯಸ್ಸು ಇತರ ಧರ್ಮಗಳಿಗಿಂತ ಭಿನ್ನವಾಗಿದೆ. ಕೆಲವು ಧರ್ಮಗಳ ವೈಯಕ್ತಿಕ ಕಾನೂನುಗಳು ಬಹುಪತ್ನಿತ್ವಕ್ಕೆ ಅನುಮತಿ ನೀಡುತ್ತವೆ. ಆದರೆ ಬೇರೆ ಧರ್ಮಗಳಲ್ಲಿ ಅದಕ್ಕೆ ಅವಕಾಶ ಇರಲ್ಲ. ಇಷ್ಟೇ ಅಲ್ಲ, ವಿಚ್ಛೇದನ ಮತ್ತು ಜೀವನಾಂಶದ ಕಾನೂನುಗಳು ಸಹ ಭಿನ್ನವಾಗಿವೆ. ಇದೆಲ್ಲವನ್ನೂ ಬಿಟ್ಟು ಒಂದೇ ಕಾನೂನು ವ್ಯಾಪ್ತಿಗೆ ಬರಲು ಕೆಲ ಸಂಪ್ರದಾಯವಾಗಿ ಗುಂಪುಗಳು (ಪ್ರಮುಖವಾಗಿ ಮುಸ್ಲಿಮರು) ಏಕರೂಪ ನಾಗರಿಕ ಸಂಹಿತೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

    ಪ್ರಮುಖ ವಾದಗಳೇನು?
    *ಏಕರೂಪ ನಾಗರಿಕ ಸಂಹಿತೆಯು ಧಾರ್ಮಿಕ ಸಮುದಾಯಗಳು ತಮ್ಮದೇ ಆದ ಸ್ಥಳೀಯ ಕಾನೂನುಗಳಿಗೆ ಬದ್ಧವಾಗಿರಲು ಅನುವು ಮಾಡಿಕೊಡುವ, ತಮ್ಮ ಆಯ್ಕೆಯ ಧರ್ಮವನ್ನು ಆಚರಿಸುವ ನಾಗರಿಕರ ಹಕ್ಕನ್ನು ಉಲ್ಲಂಘಿಸುತ್ತದೆ. ಉದಾಹರಣೆಗೆ; ಆರ್ಟಿಕಲ್ 25, ಪ್ರತಿ ಧಾರ್ಮಿಕ ಸಂಘಟನೆಯ ಸ್ವಾಯತ್ತತೆಯನ್ನು ಖಾತರಿಪಡಿಸುತ್ತದೆ. ಆರ್ಟಿಕಲ್ 29 ರ ಅಡಿಯಲ್ಲಿ ಅವರು ತಮ್ಮ ವಿಶಿಷ್ಟ ಸಂಸ್ಕೃತಿಯನ್ನು ಕಾಪಾಡಿಕೊಳ್ಳಲು ಅರ್ಹರಾಗಿದ್ದಾರೆ.

    *ಭಾರತೀಯ ಸಂವಿಧಾನ ಸಭೆಯ ಮೂಲಭೂತ ಹಕ್ಕುಗಳ ಉಪಸಮಿತಿಯು ಏಕರೂಪ ನಾಗರಿಕ ಸಂಹಿತೆಯನ್ನು ಮೂಲಭೂತ ಹಕ್ಕಾಗಿ ಸೇರಿಸುವುದನ್ನು ಉದ್ದೇಶಪೂರ್ವಕವಾಗಿ ಕೈಬಿಟ್ಟಿದೆ. ಬುಡಕಟ್ಟು ಸಂಘಟನೆಗಳು ಇದೇ ರೀತಿಯ ಆತಂಕವನ್ನು ವ್ಯಕ್ತಪಡಿಸಿವೆ. ರಾಷ್ಟ್ರೀಯ ಆದಿವಾಸಿ ಏಕತಾ ಪರಿಷತ್ತು, ಭವಿಷ್ಯದ ಏಕರೂಪ ನಾಗರಿಕ ಸಂಹಿತೆಯಿಂದ ತನ್ನ ಸಮುದಾಯದವರ ಸಂಪ್ರದಾಯಗಳು ಮತ್ತು ಧಾರ್ಮಿಕ ನಂಬಿಕೆಗಳಿಗೆ ರಕ್ಷಣೆಯನ್ನು ಕೋರಲು 2016 ರಲ್ಲಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಮದುವೆ, ಆಸ್ತಿ ಮಾಲೀಕತ್ವ ಇತ್ಯಾದಿ ಖಾಸಗಿ ವಿಷಯಗಳಿಗೆ ಬಂದಾಗ ನಾಗಾಲ್ಯಾಂಡ್‌ನ ಬುಡಕಟ್ಟು ಜಿಲ್ಲೆಗಳಲ್ಲಿ ಈಗಾಗಲೇ ಜಾರಿಯಲ್ಲಿರುವ ಸಾಂಪ್ರದಾಯಿಕ ನಿಯಮಗಳು ಫೆಡರಲ್ ಕಾನೂನುಗಳಿಗೆ ಆದ್ಯತೆ ನೀಡುತ್ತವೆ. ಇದನ್ನೂ ಓದಿ: ಏಕರೂಪ ನಾಗರಿಕ ಸಂಹಿತೆ ಬಗ್ಗೆ ಅಭಿಪ್ರಾಯ ತಿಳಿಸಿ: ಸಾರ್ವಜನಿಕರಿಗೆ ಕೇಂದ್ರ ಕಾನೂನು ಆಯೋಗ ಮನವಿ

    *ಕ್ರೋಡೀಕರಿಸಿದ ನಾಗರಿಕ ಕಾನೂನುಗಳು, ಸಿಆರ್‌ಪಿಸಿ ಮತ್ತು ಐಪಿಸಿ ಯಂತಹ ಕ್ರಿಮಿನಲ್ ಕಾನೂನುಗಳು ಈ ತತ್ತ್ವಕ್ಕೆ ಬದ್ಧವಾಗಿಲ್ಲದಿದ್ದರೆ “ಒಂದು ರಾಷ್ಟ್ರ, ಒಂದು ಕಾನೂನು” ಅನ್ನು ವಿವಿಧ ಸಮುದಾಯಗಳ ಅನನ್ಯ ವೈಯಕ್ತಿಕ ಕಾನೂನುಗಳಿಗೆ ಅನ್ವಯಿಸಲಾಗುವುದಿಲ್ಲ ಎಂದು ಏಕರೂಪ ನಾಗರಿಕ ಸಂಹಿತೆಯಲ್ಲಿ ಹೇಳಲಾಗಿದೆ. ಉದಾಹರಣೆಗೆ; ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ಸರ್ಕಾರಗಳು 1872ರ ಫೆಡರಲ್ ಇಂಡಿಯನ್ ಎವಿಡೆನ್ಸ್ ಆ್ಯಕ್ಟ್ ಅನ್ನು ಬದಲಾಯಿಸಿದವು.

    *ಏಕರೂಪ ನಾಗರಿಕ ಸಂಹಿತೆಯು ಎಲ್ಲಾ ಸಮುದಾಯಗಳ ಮೇಲೆ ‘ಹಿಂದೂಕರಣ’ ಕೋಡ್ ಅನ್ನು ಹೇರುತ್ತದೆ ಎಂದು ಹೇಳಲಾಗುತ್ತಿದೆ. ಉದಾಹರಣೆಗೆ; ಯುಸಿಸಿಯು ಮದುವೆಯಂತಹ ವಿಷಯಗಳಲ್ಲಿ ಹಿಂದೂ ಸಂಪ್ರದಾಯಕ್ಕೆ ಅನುಗುಣವಾಗಿರುವ ಷರತ್ತುಗಳನ್ನು ಹೊಂದಿರಬಹುದು. ಇತರ ಸಮುದಾಯಗಳ ಜನರು ಅದೇ ರೀತಿ ಮಾಡಲು ಕಾನೂನುಬದ್ಧವಾಗಿ ನಿರ್ಬಂಧಿಸುತ್ತದೆ ಎಂದು ವಾದಗಳು ವ್ಯಕ್ತವಾಗಿವೆ.

    ವೈಯಕ್ತಿಕ ಕಾನೂನು ರಚಿಸಿದ್ದು ಯಾವಾಗ?
    ಹಿಂದೂ ಮತ್ತು ಮುಸ್ಲಿಂ ಜನಸಂಖ್ಯೆಗೆ ಅನುಗುಣವಾಗಿ ವೈಯಕ್ತಿಕ ಕಾನೂನುಗಳನ್ನು ಬ್ರಿಟಿಷ್ ರಾಜ್ ಆಡಳಿತದ ಸಮಯದಲ್ಲೇ ರಚಿಸಲಾಯಿತು. ಸಮುದಾಯದ ಮುಖಂಡರ ಪ್ರತಿರೋಧದಿಂದಾಗಿ, ಬ್ರಿಟಿಷ್ ಅಧಿಕಾರಿಗಳು ಈ ವಿಷಯದಲ್ಲಿ ಹೆಚ್ಚು ಹಸ್ತಕ್ಷೇಪ ಮಾಡಬಾರದು ನಿರ್ಧರಿಸಿದರು.

    ಗೋವಾದಲ್ಲಿ ಯುಸಿಸಿ ಕಾನೂನು?
    1867ರ ಪೋರ್ಚುಗೀಸ್ ಆಡಳಿತದ ಕಾಲದಿಂದಲೂ ಗೋವಾದಲ್ಲಿ ಏಕರೂಪ ನಾಗರಿಕ ಸಂಹಿತೆಯು ಜಾರಿಯಲ್ಲಿದೆ. 1961 ರಲ್ಲಿ ಗೋವಾ ಪೋರ್ಚುಗೀಸರಿಂದ ವಿಮೋಚನೆ ಪಡೆದು ಭಾರತದೊಂದಿಗೆ ವಿಲೀನವಾದ ನಂತರವೂ ಈ ಕಾನೂನು ಮುಂದುವರಿದಿದೆ. ಯುಸಿಸಿ ಜಾರಿಗೆ ಚಿಂತನೆ ನಡೆಸಿರುವ ರಾಜ್ಯಗಳು ಗೋವಾವನ್ನು ಮಾದರಿಯಾಗಿ ತೆಗೆದುಕೊಳ್ಳಬೇಕು ಎಂಬ ಅಭಿಪ್ರಾಯ ಕಾನೂನಿನ ಪರ ಇರುವವರಿಂದ ವ್ಯಕ್ತವಾಗಿದೆ.

    ಶಾ ಬಾನೊ ಕೇಸ್
    ವಿಚ್ಛೇದಿತ ಪತಿಯಿಂದ ಜೀವನಾಂಶ ಪಡೆಯಲು 62 ವಯಸ್ಸಿನ ಮುಸ್ಲಿಂ ಮಹಿಳೆ ಶಾ ಬಾನೊ, ತನ್ನ ಪತಿ ಅಹ್ಮದ್ ಖಾನ್ ವಿರುದ್ಧ 1985 ರಲ್ಲಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಈ ಪ್ರಕರಣದಲ್ಲಿ ಕೋರ್ಟ್ ನೀಡಿದ್ದ ತೀರ್ಪಿಗೆ ಮುಸ್ಲಿಮರು ತೀವ್ರ ಪ್ರತಿರೋಧ ವ್ಯಕ್ತಪಡಿಸಿದ್ದರು. ಶಾ ಬಾನೊ ಪ್ರಕರಣ ಸೇರಿದಂತೆ ಕೆಲವು ಕೇಸ್ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಏಕರೂಪ ಕಾನೂನನ್ನು ಪ್ರತಿಪಾದಿಸಿದೆ.

    ಬಿಜೆಪಿ ಪ್ರಣಾಳಿಕೆಯ ಪ್ರಮುಖ ಭರವಸೆಯೇ ಯುಸಿಸಿ?
    2014ರ ಲೋಕಸಭೆ ಚುನಾವಣೆ ಪ್ರಣಾಳಿಕೆಯಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರುವ ಭರವಸೆಯನ್ನು ಬಿಜೆಪಿ ನೀಡಿದೆ. ಆದರೆ ಇದನ್ನು ಇನ್ನೂ ಈಡೇರಿಸಲಾಗಿಲ್ಲ. ಇದನ್ನೂ ಓದಿ: ಏಕರೂಪ ನಾಗರಿಕ ಸಂಹಿತೆಯನ್ನು ವಿರೋಧಿಸಿ ಕೇರಳ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರ

    ಕಾನೂನು ಆಯೋಗ ಏನು ಹೇಳಿತ್ತು?
    ಕಾನೂನು ಆಯೋಗವು 2018 ರಲ್ಲಿ ಕೇಂದ್ರ ಸರ್ಕಾರಕ್ಕೆ ನೀಡಿದ್ದ ‘ಕೌಟುಂಬಿಕ ಕಾನೂನುಗಳ ಸುಧಾರಣೆ’ ಸಮಾಲೋಚನಾ ವರದಿಯಲ್ಲಿ, ಭಾರತಕ್ಕೆ ಈಗ ಏಕರೂಪ ನಾಯರಿಕ ಸಂಹಿತೆ ಅಗತ್ಯವಿಲ್ಲ. ಈ ಹಂತದಲ್ಲಿ ಭಾರತವು ಅದಕ್ಕೆ ಸಿದ್ಧವಾಗಿಯೂ ಇಲ್ಲ. ದೇಶದಲ್ಲಿನ ಸಾಂಸ್ಕೃತಿಕ ವೈವಿಧ್ಯತೆ ಮತ್ತು ಧಾರ್ಮಿಕ ಸ್ವಾತಂತ್ರ್ಯವನ್ನು ಕಾಯ್ದುಕೊಳ್ಳಬೇಕು. ವೈಯಕ್ತಿಕ ಕಾನೂನುಗಳಲ್ಲಿ ಇರುವ ಕೊರತೆ ನೀಗಿಸಬೇಕು ಎಂದು ಹೇಳಿತ್ತು.

    ಭಾರತದಲ್ಲಿ ಯುಸಿಸಿ ಈಗ ಯಾವ ಹಂತದಲ್ಲಿದೆ?
    2022 ರಲ್ಲಿ ಸಂಸದ ಕಿರೋಡಿ ಲಾಲ್ ಮೀನಾ ಅವರು ರಾಜ್ಯಸಭೆಯಲ್ಲಿ ಯುಸಿಸಿಗೆ ಸಂಬಂಧಿತ ‘ಖಾಸಗಿ ಸದಸ್ಯರ ಮಸೂದೆ’ ಮಂಡಿಸಿದ್ದರು. ಅದಕ್ಕೆ ಕಾಂಗ್ರೆಸ್, ಟಿಎಂಸಿ, ಸಿಪಿಐ ಸೇರಿ ಹಲವು ವಿಪಕ್ಷಗಳು ವಿರೋಧ ವ್ಯಕ್ತಪಡಿಸಿದ್ದವು. ಈ ಮಸೂದೆ ಪರ 63, ವಿರುದ್ಧ 23 ಮತಗಳು ಬಿದ್ದವು. ದೇಶದಲ್ಲಿ ಈವರೆಗೆ 14 ‘ಖಾಸಗಿ ಸದಸ್ಯರ ಮಸೂದೆ’ಗಳು ಮಾತ್ರ ಕಾನೂನು ರೂಪ ಪಡೆದಿವೆ. ಈ ಕಾರಣಕ್ಕಾಗಿಯೇ ಕೇಂದ್ರ ಸರ್ಕಾರ ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಬಹುಮತ ಬೆಂಬಲದೊಂದಿಗೆ ಏಕರೂಪ ನಾಗರಿಕ ಸಂಹಿತೆ ಕಾಯಿದೆ ಜಾರಿಗೆ ತರಲು ಉತ್ಸುಕವಾಗಿದೆ.

    ಉತ್ತರಾಖಂಡದಲ್ಲಿ ಯುಸಿಸಿ ಜಾರಿ?
    ಉತ್ತರಾಖಂಡ ವಿಧಾನಸಭೆಯಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಮಸೂದೆಯನ್ನು ಧ್ವನಿಮತದ ಮೂಲಕ ಅಂಗೀಕರಿಸಲಾಗಿದೆ. ಮಸೂದೆಗೆ ರಾಜ್ಯಪಾಲರ ಅಂಕಿತ ಬಿದ್ದ ನಂತರ ಸ್ವಾತಂತ್ರ್ಯಾನಂತರ ಯುಸಿಸಿ ಕಾಯ್ದೆಯನ್ನು ಜಾರಿಗೆ ತಂದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಉತ್ತರಾಖಂಡ ಪಾತ್ರವಾಗಲಿದೆ. ಆ ಮೂಲಕ ಧರ್ಮಾತೀತವಾಗಿ ಎಲ್ಲಾ ನಾಗರಿಕರಿಗೆ ವಿವಾಹ, ವಿಚ್ಛೇದನ, ಭೂಮಿ, ಆಸ್ತಿ, ಉತ್ತರಾಧಿಕಾರಕ್ಕೆ ಸಂಬಂಧಿಸಿದಂತೆ ಏಕರೂಪದ ಕಾನೂನು ಅನ್ವಯವಾಗುತ್ತದೆ.

  • UCC ಬಿಲ್‌ ಪಾಸ್‌ – ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸಿದ ದೇಶದ ಮೊದಲ ರಾಜ್ಯ ಉತ್ತರಾಖಂಡ

    UCC ಬಿಲ್‌ ಪಾಸ್‌ – ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸಿದ ದೇಶದ ಮೊದಲ ರಾಜ್ಯ ಉತ್ತರಾಖಂಡ

    – UCC ಮಸೂದೆಯಲ್ಲಿ ಏನಿದೆ?

    ಡೆಹ್ರಾಡೂನ್‌: ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ (Pushkar Singh Dhami) ನೇತೃತ್ವದ ಸರ್ಕಾರವು ಮಂಡಿಸಿದ ಏಕರೂಪ ನಾಗರಿಕ ಸಂಹಿತೆ ಮಸೂದೆಯನ್ನು ಉತ್ತರಾಖಂಡ ವಿಧಾನಸಭೆಯಲ್ಲಿ ಬುಧವಾರ (ಫೆ.7) ಅಂಗೀಕರಿಸಿದೆ. ಈ ಮೂಲಕ ಏಕರೂಪ ನಾಗರಿಕ ಸಂಹಿತೆಯನ್ನು (UCC) ಜಾರಿಗೊಳಿಸಿದ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

    ಇನ್ನೂ ಬಿಜೆಪಿ ಆಡಳಿತವಿರುವ ರಾಜಸ್ಥಾನ ಸರ್ಕಾರವೂ ಯುಸಿಸಿ ಅನುಷ್ಠಾನಕ್ಕೆ ಸಿದ್ಧತೆ ನಡೆಸಿದೆ. ಮುಂದಿನ ಅಧಿವೇಶನದಲ್ಲೇ ಕಾಯ್ದೆ ಅನುಷ್ಠಾನಗೊಳಿಸುವುದಾಗಿ ಸರ್ಕಾರದ ಮೂಲಗಳು ತಿಳಿಸಿವೆ. ಇದನ್ನೂ ಓದಿ: ರಾಜಕೀಯ ಸ್ವಾರ್ಥಕ್ಕಾಗಿ ದೇಶ ಒಡೆಯುವ ಮಾತು, ರಾಷ್ಟ್ರವೆಂದರೆ ಕೇವಲ ಒಂದು ತುಂಡು ಭೂಮಿ ಅಲ್ಲ: ಡಿಕೆ ಸುರೇಶ್‌ ಹೇಳಿಕೆ ವಿರುದ್ಧ ಮೋದಿ ಕಿಡಿ 

    ಯುಸಿಸಿ ಮಸೂದೆ ವಿಧಾನಸಭೆಯಲ್ಲಿ ಅಂಗೀಕಾರವಾದ ಬೆನ್ನಲ್ಲೇ ಸಿಎಂ ಪುಷ್ಕರ್‌ ಸಿಂಗ್‌ ಧಾಮಿ ಸಂತಸ ವ್ಯಕ್ತಪಡಿಸಿದ್ದಾರೆ. ಇಂದು ಉತ್ತರಾಖಂಡಕ್ಕೆ ಮಹತ್ವದ ದಿನವಾಗಿದೆ. ದೇಶಾದ್ಯಂತ ಜನರು ಬಹಳ ದಿನಗಳಿಂದ ಕಾಯುತ್ತಿದ್ದ ಮಸೂದೆಯನ್ನು ನಾವು ಅಂಗೀಕರಿಸಿದ್ದೇವೆ. ಯುಸಿಸಿ ಅನುಷ್ಠಾನಗೊಳಿಸಿದ ದೇಶದ ಮೊದಲ ರಾಜ್ಯವೂ ಉತ್ತರಾಖಂಡವೇ (Uttarakhand) ಆಗಿದೆ ಎಂದು ಶ್ಲಾಘಿಸಿದ್ದಾರೆ.

    ಮಸೂದೆಯಲ್ಲಿ ಏನಿದೆ?
    ರಾಜ್ಯದ ಮುಸ್ಲಿಮರು (Muslims) ಸೇರಿದಂತೆ ಎಲ್ಲಾ ಧರ್ಮದವರು 2ನೇ ವಿವಾಹವಾಗುವುದು ಅಪರಾಧ. ಒಬ್ಬ ವ್ಯಕ್ತಿಗೆ ಒಂದು ಮದುವೆಗೆ ಮಾತ್ರ ಕಾನೂನಿನ ಮಾನ್ಯತೆ ಇರಲಿದೆ. ಹಾಲಿ ಷರಿಯಾ ಕಾನೂನಿನಡಿ ಮುಸ್ಲಿಮರು ಕಾನೂನು ಬದ್ಧವಾಗಿಯೇ 3 ವಿವಾಹವಾಗುವ ಅವಕಾಶವಿದೆ. ವಿವಾಹ, ವಿಚ್ಛೇದನ, ಆಸ್ತಿ, ಉತ್ತರದಾಯಿತ್ವ ಎಲ್ಲಾ ವಿಚಾರದಲ್ಲಿ ಎಲ್ಲಾ ಧರ್ಮದ ಜನರಿಗೆ ಒಂದೇ ನಿಯಮ ಅನ್ವಯವಾಗುತ್ತದೆ. ಇದನ್ನೂ ಓದಿ: ಕಾಂಗ್ರೆಸ್‌ 40 ಸ್ಥಾನಗಳನ್ನಾದರೂ ಉಳಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ: ಮೋದಿ ವ್ಯಂಗ್ಯ

    ಲಿವ್ ಇನ್ ಸಂಬಂಧಕ್ಕೆ ನೋಂದಣಿ ಕಡ್ಡಾಯ ಮಾಡಲಾಗಿದೆ. ನೋಂದಣಿ 1 ತಿಂಗಳು ತಡವಾದರೆ 3 ತಿಂಗಳು ಜೈಲು, 25 ಸಾವಿರ ರೂ. ದಂಡ ವಿಧಿಸಲಾಗುತ್ತದೆ. ನೋಂದಣಿ ಸಂಶಯಾಸ್ಪದವಾಗಿದ್ದರೆ ತನಿಖೆ ನಡೆಸಲಾಗುತ್ತದೆ. ಲಿವ್ ಇನ್ ಸಂಬಂಧದಿಂದ ಜನಿಸಿದ ಮಕ್ಕಳಿಗೆ ಕಾನೂನು ಮಾನ್ಯತೆ ಸೇರಿದಂತೆ ಆಸ್ತಿಯಲ್ಲೂ ಸಮಪಾಲು ಸಿಗಲಿದೆ. ಲಿವ್ ಇನ್ ಸಂಗಾತಿ ತೊರೆದಲ್ಲಿ ಜೀವನಾಂಶ ಪಡೆಯಬಹುದು. ಸಂಬಂಧ ಮುಂದುವರಿಸಲು ಇಷ್ಟವಿಲ್ಲದ ಜೋಡಿ, ದಾಖಲೆಗಳನ್ನು ಸಲ್ಲಿಸಿ ಲಿಖಿತ ಹೇಳಿಕೆ ನೀಡಿ ಲಿವ್‌ ಇನ್‌ ಸಂಬಂಧ ಕಡಿತಗೊಳಿಸಬಹುದು. ಈ ಮಸೂದೆಯಿಂದ ಬುಡಕಟ್ಟು ಸಮುದಾಯವನ್ನು ಹೊರಗಿಡಲಾಗಿದೆ.

    ಅತ್ಯಾಚಾರ ಅಥವಾ ಅನೈಸರ್ಗಿಕ ಲೈಂಗಿಕ ಕ್ರಿಯೆ ನಡೆಸಿದ ಪತಿಗೆ ವಿಚ್ಛೇದನ ನೀಡುವ ಹಕ್ಕನ್ನು ಮಸೂದೆ ಮಹಿಳೆಯರಿಗೆ ನೀಡುತ್ತದೆ. ಮದುವೆಯಾದ ಒಂದೇ ವರ್ಷದೊಳಗೆ ವಿವಾಹ ವಿಚ್ಛೇದನ ಪಡೆಯುವುದನ್ನು ಅಸಾಧಾರಣ ಸಂದರ್ಭ ಹೊರತುಪಡಿಸಿ ಉಳಿದ ಸನ್ನಿವೇಶಗಳಲ್ಲಿ ನಿರ್ಬಂಧಿಸುವ ಅಂಶವಿದೆ. ಅತ್ಯಾಚಾರ ಪ್ರಕರಣದಲ್ಲಿ ಪತಿ ಪತಿ ಸಿಲುಕಿದರೆ ಆತನಿಂದ ಪತ್ನಿ ವಿಚ್ಛೇದನ ಕೇಳಬಹುದು. ಇದನ್ನೂ ಓದಿ: ಯಾವುದೇ ಧರ್ಮದವರಿಗೂ 2ನೇ ಮದುವೆ ಅವಕಾಶವಿಲ್ಲ, ಲಿವ್ ಇನ್ ಸಂಬಂಧಕ್ಕೆ ನೋಂದಣಿ ಕಡ್ಡಾಯ – UCC ಮಸೂದೆಯಲ್ಲಿ ಏನಿದೆ?

    ವಿವಾಹವಾದ 60 ದಿನದ ಒಳಗಡೆ ನೋಂದಣಿ ಮಾಡಿಸಬೇಕು. 2010ರ ಮಾ.26ರ ನಂತರ ಮದುವೆಯಾದವರು 6 ತಿಂಗಳೊಳಗೆ ನೋಂದಣಿ ಮಾಡಿಸುವುದು ಕಡ್ಡಾಯ. ನಿರ್ಲಕ್ಷಿಸಿದರೆ 20 ಸಾವಿರ ರೂ. ದಂಡ ವಿಧಿಸಲಾಗುತ್ತದೆ. ಆದರೆ ನೋಂದಣಿಯಾಗದ ವಿವಾಹವನ್ನು ಅಸಿಂಧು ಎಂದು ಪರಿಗಣನೆ ಮಾಡುವುದಿಲ್ಲ.

  • ಉತ್ತರಾಖಂಡ ವಿಧಾನಸಭೆಯಲ್ಲಿ ಏಕರೂಪದ ನಾಗರಿಕ ಸಂಹಿತೆ ಮಸೂದೆ ಮಂಡನೆ

    ಉತ್ತರಾಖಂಡ ವಿಧಾನಸಭೆಯಲ್ಲಿ ಏಕರೂಪದ ನಾಗರಿಕ ಸಂಹಿತೆ ಮಸೂದೆ ಮಂಡನೆ

    ಡೆಹ್ರಾಡೂನ್‌: ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದಂತೆ ಉತ್ತರಾಖಂಡ ಸರ್ಕಾರ (Uttarakhand Government) ಏಕರೂಪ ನಾಗರಿಕ ಸಂಹಿತೆ(UCC) ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಿದೆ.

    ಇಂದು ಸಂವಿಧಾನದ ಮೂಲ ಪ್ರತಿಯೊಂದಿಗೆ ವಿಧಾನಸಭೆ ಪ್ರವೇಶಿಸಿದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ (Pushkar Singh Dhami) ಅವರು ಏಕರೂಪ ನಾಗರಿಕ ಸಂಹಿತೆ ಮಸೂದೆಯನ್ನು ಮಂಡಿಸಿದರು. ಮಸೂದೆ ಮಂಡನೆಯ ವೇಳೆ ಬಿಜೆಪಿ ಸದಸ್ಯರು ರಾಮ್‌ ರಾಮ್‌ ಎಂದು ಮೇಜು ಕುಟ್ಟಿ ಸಂತಸ ವ್ಯಕ್ತಪಡಿಸಿದರು.

    ಎಲ್ಲಾ ನಾಗರಿಕರಿಗೆ ಏಕರೂಪದ ಮದುವೆ, ವಿಚ್ಛೇದನ, ಭೂಮಿ, ಆಸ್ತಿ ಮತ್ತು ಉತ್ತರಾಧಿಕಾರ ಕಾನೂನುಗಳನ್ನು ಪ್ರಸ್ತಾಪಿಸುವ ಅಂಶ ಈ ಮಸೂದೆಯಲ್ಲಿದೆ.

    ಏಕರೂಪದ ನಾಗರಿಕ ಸಂಹಿತೆ ರಚನೆ ಸಂಬಂಧ ಸರ್ಕಾರ ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಾಧೀಶ ರಂಜನಾ ಪ್ರಕಾಶ್‌ ನೇತೃತ್ವದ ಸಮಿತಿಯನ್ನು ರಚಿಸಿತ್ತು. ಈ ಸಮಿತಿ 4 ಸಂಪುಟ ಹೊಂದಿರುವ 749 ಪುಟಗಳಿರುವ ವರದಿ ಮತ್ತು ಹಲವು ಶಿಫಾರಸುಗಳನ್ನು ಸರ್ಕಾರಕ್ಕೆ ನೀಡಿತ್ತು. ಇದನ್ನೂ ಓದಿ: ನಾಯಿ ತಿನ್ನದ ಬಿಸ್ಕತ್ತನ್ನು ಕಾರ್ಯಕರ್ತನಿಗೆ ನೀಡಿದ ರಾಹುಲ್ ಗಾಂಧಿ – ವಿಡಿಯೋ ವೈರಲ್

    ಸಮಿತಿ ಆನ್‌ಲೈನ್‌ ಮೂಲಕ 2.33 ಲಕ್ಷ ಪ್ರತಿಕ್ರಿಯೆ ಪಡೆದಿದ್ದರೆ 70ಕ್ಕೂ ಹೆಚ್ಚು ಸಾರ್ವಜನಿಕ ಕಾರ್ಯಕ್ರಮ ಆಯೋಜಿಸಿ ಜನರಿಂದ ಅಭಿಪ್ರಾಯ ಸಂಗ್ರಹಿಸಿತ್ತು.

    ಬಹುಪತ್ನಿತ್ವ ಮತ್ತು ಬಾಲ್ಯವಿವಾಹದ ಮೇಲೆ ಸಂಪೂರ್ಣ ನಿಷೇಧ, ಎಲ್ಲಾ ಧರ್ಮದ ಹೆಣ್ಣು ಮಕ್ಕಳಿಗೆ ಪ್ರಮಾಣೀಕೃತ ಮದುವೆಯ ವಯಸ್ಸು ಮತ್ತು ವಿಚ್ಛೇದನಕ್ಕೆ ಏಕರೂಪದ ಪ್ರಕ್ರಿಯೆ ಸೇರಿದಂತೆ ಹಲವು ಪ್ರಸ್ತಾಪಗಳಿವೆ. ವಿಧಾನಸಭೆಯಲ್ಲಿ ಈ ಮಸೂದೆ ಅಂಗೀಕಾರಗೊಂಡು ರಾಜ್ಯಪಾಲರಿಂದ ಅಂಕಿತ ಬಿದ್ದರೆ ಯುಸಿಸಿಯನ್ನು ಜಾರಿಗೆ ತಂದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಉತ್ತರಾಖಂಡ ಪಾತ್ರವಾಗಲಿದೆ.

    ಗುಜರಾತ್ ಹಾಗೂ ಅಸ್ಸಾಂ ಸೇರಿದಂತೆ ದೇಶದ ಹಲವು ಬಿಜೆಪಿ ಆಡಳಿತದ ರಾಜ್ಯಗಳು ಉತ್ತರಾಖಂಡ ಯುಸಿಸಿಯನ್ನು ಮಾದರಿಯಾಗಿ ಅನುಸರಿಸಲು ಮುಂದಾಗಿವೆ.

  • ಏಕರೂಪ ನಾಗರಿಕ ಸಂಹಿತೆ ವರದಿಗೆ ಉತ್ತರಾಖಂಡ ಸಚಿವ ಸಂಪುಟ ಅನುಮೋದನೆ

    ಏಕರೂಪ ನಾಗರಿಕ ಸಂಹಿತೆ ವರದಿಗೆ ಉತ್ತರಾಖಂಡ ಸಚಿವ ಸಂಪುಟ ಅನುಮೋದನೆ

    ಡೆಹ್ರಾಡೂನ್: ಏಕರೂಪ ನಾಗರಿಕ ಸಂಹಿತೆ (Uniform Civil Code) ವರದಿಗೆ ಉತ್ತರಾಖಂಡ ಸಚಿವ ಸಂಪುಟ ಭಾನುವಾರ ಅನುಮೋದನೆ ನೀಡಿದೆ.

    ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ (Pushkar Singh Dhami) ಅಧ್ಯಕ್ಷತೆಯಲ್ಲಿ ಅವರ ನಿವಾಸದಲ್ಲಿ ನಡೆದ ಸಂಪುಟ ಸಭೆಯಲ್ಲಿ ಯುಸಿಸಿ ವರದಿಗೆ ಅನುಮೋದನೆ ನೀಡಲಾಗಿದೆ. ಇದನ್ನೂ ಓದಿ: ಶ್ರೀಲಂಕಾ ನೌಕಾಪಡೆಯಿಂದ ಮತ್ತೆ 23 ಭಾರತೀಯ ಮೀನುಗಾರರ ಬಂಧನ

    ಏಕರೂಪ ನಾಗರಿಕ ಸಂಹಿತೆಯ ಅಂತಿಮ ಕರಡನ್ನು ಉತ್ತರಾಖಂಡ ಮುಖ್ಯಮಂತ್ರಿ ಅವರಿಗೆ ತಜ್ಞರ ಸಮಿತಿ ಈಚೆಗೆ ಸಲ್ಲಿಸಿತ್ತು.

    ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ರಂಜನಾ ಪ್ರಕಾಶ್‌ ದೇಸಾಯಿ ನೇತೃತ್ವದ ಐವರು ಸದಸ್ಯರ ಸಮಿತಿಯು ಈ ಕರಡನ್ನು ಸಿಎಂಗೆ ಹಸ್ತಾಂತರಿಸಿತ್ತು. ಇದನ್ನೂ ಓದಿ: ತಾಯಿ ತನ್ನ ತಂಗಿಯನ್ನೇ ಹೆಚ್ಚು ಪ್ರೀತಿಸ್ತಾರೆ ಅಂತಾ ಬುರ್ಕಾ ಧರಿಸಿ ಸ್ವಂತ ಮನೆಗೆ ಕನ್ನ ಹಾಕಿದ ಮಗಳು

    2022 ರ ವಿಧಾನಸಭೆ ಚುನಾವಣೆ ವೇಳೆ ರಾಜ್ಯದ ಜನರಿಗೆ ನೀಡಿದ್ದ ಭರವಸೆ ಈಡೇರಿಸುವ ಕಡೆಗೆ ಸರ್ಕಾರ ಮತ್ತೊಂದು ಹೆಜ್ಜೆ ಇಟ್ಟಿದೆ.