Tag: uae

  • ಜೂ.29 ರಂದು ‘ದುಬೈ ಯಕ್ಷೋತ್ಸವ-2025’ ದಶಮಾನೋತ್ಸವ ಸಂಭ್ರಮ – ಆಮಂತ್ರಣ ಪತ್ರಿಕೆ, ಟಿಕೆಟ್‌ ಬಿಡುಗಡೆ

    ಜೂ.29 ರಂದು ‘ದುಬೈ ಯಕ್ಷೋತ್ಸವ-2025’ ದಶಮಾನೋತ್ಸವ ಸಂಭ್ರಮ – ಆಮಂತ್ರಣ ಪತ್ರಿಕೆ, ಟಿಕೆಟ್‌ ಬಿಡುಗಡೆ

    ದುಬೈ: ಯಕ್ಷಧ್ರುವ ಪಟ್ಲ ಫೌಂಡೇಷನ್ ಯುಎಇ ಘಟಕದ ಸಹಯೋಗದೊಂದಿಗೆ‌ ಜೂ.29 ರಂದು ನಡೆಯಲಿರುವ ಯಕ್ಷಗಾನ ಅಭ್ಯಾಸ ಕೇಂದ್ರದ ದಶಮಾನೋತ್ಸವ ಸಂಭ್ರಮ ‘ದುಬೈ ಯಕ್ಷೋತ್ಸವ-2025’ (Dubai Yakshotsava 2025) ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಮತ್ತು ಟಿಕೆಟ್‌ ಬಿಡುಗಡೆ ಕಾರ್ಯಕ್ರಮ ಮೇ 11 ರಂದು (ಭಾನುವಾರ) ನಡೆಯಿತು.

    ನಗರದ ಗಿಸಾಸ್‌ನ ಫಾರ್ಚೂನ್ ಪ್ಲಾಝದ ಬಾಕ್ವೆಂಟ್ ಸಭಾಂಗಣದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಇದೇ ಮೊದಲ ಬಾರಿಗೆ ಒಂದೇ ವೇದಿಕೆಯಲ್ಲಿ ಯುಎಇಯಲ್ಲಿ ಇರುವ ಎಲ್ಲ ತುಳು ಕನ್ನಡ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಈ ಕಾರ್ಯಕ್ರಮ ಒಂದು ಅಭೂತಪೂರ್ವ ಸಾಕ್ಷಿಗೆ ಕಾರಣವಾಯಿತು. ಉಪಸ್ಥಿತರಿದ್ದ ಯುಎಇಯ ಕನ್ನಡ ತುಳು ಸಂಘ ಸಂಸ್ಥೆಗಳ ಹಾಗೂ ಎಲ್ಲಾ ಸಮಾಜದ ಪದಾಧಿಕಾರಿಗಳು ಜೂ.29 ರಂದು ನಡೆಯಲಿರುವ ದಶಮಾನೋತ್ಸವ ಕಾರ್ಯಕ್ರಮಕ್ಕೆ ತಮ್ಮ ತಮ್ಮ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.

    ಸಭಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಯಕ್ಷಧ್ರುವ ಪಟ್ಲ ಫೌಂಡೇಶನ್ ಯುಎಇ ಘಟಕದ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ, ಯುಎಇ ಬಂಟ್ಸ್ ಮತ್ತು ಕರ್ನಾಟಕ ಎನ್‌ಆರ್‌ಐ ವೇದಿಕೆಯ ಅಧ್ಯಕ್ಷ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ, ಬ್ರಾಹ್ಮಣ ಸಮಾಜ ಯುಎಇಯ ಅಧ್ಯಕ್ಷ ಸುಧಾಕರ ರಾವ್ ಪೇಜಾವರ, ಉದ್ಯಮಿ ಕಲಾಪೋಷಕ ಶಿವಶಂಕರ ನೆಕ್ರಾಜೆ, ಶಾರ್ಜಾ ಕರ್ನಾಟಕ ಸಂಘದ ಅಧ್ಯಕ್ಷ ಸತೀಶ್ ಪೂಜಾರಿ, ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಯುಎಇ ಘಟಕ ಅಧ್ಯಕ್ಷ ಅಮರ್ ದೀಪ್ ಕಲ್ಲೂರಾಯ, ಕರ್ನಾಟಕ ಜಾನಪದ ಅಕಾಡೆಮಿ ದುಬೈಯ ಅಧ್ಯಕ್ಷ ಸದನ್ ದಾಸ್, ಕರ್ನಾಟಕ ಸಂಘ ದುಬೈಯ ಮನೋಹರ ಹೆಗ್ಡೆ, ನಾಗರಾಜ ರಾವ್ ಉಡುಪಿ, ಕನ್ನಡಿಗರ ಕನ್ನಡ ಕೂಟ ದುಬೈಯ ಅಧ್ಯಕ್ಷ ಅರುಣ್ ಕುಮಾರ್, ಉದ್ಯಮಿ ರಶ್ಮಿಕಾಂತ್ ಶೆಟ್ಟಿ, ಕರ್ನಾಟಕ ಸಂಘ ದುಬೈಯ ಗೌರವ ಸಲಹೆಗಾರ ಜಯಂತ್ ಶೆಟ್ಟಿ, ತೀಯಾ ಸಮಾಜ ಯುಎಇಯ ಅಧ್ಯಕ್ಷೆ ಜೆಸ್ಮೀತಾ ವಿವೇಕ್, ಗಮ್ಮತ್ ಕಲಾವಿದೆರ್ ದುಬೈಯ ನಿರ್ದೆಶಕ ವಿಶ್ವನಾಥ ಶೆಟ್ಟಿ, ಬಿಲ್ಲವಾಸ್ ದುಬೈಯ ಅಧ್ಯಕ್ಷ ದೀಪಕ್ ಎಸ್.ಪಿ, ಹಿರಿಯ ಯಕ್ಷಗಾನ ಕಲಾವಿದ ಪ್ರಭಾಕರ ಸುವರ್ಣ ಕರ್ನಿರೆ, ರಂಗ ಕಲಾವಿದ ವಾಸು ಶೆಟ್ಟಿ, ಉದ್ಯಮಿ ರಮಾನಂದ ಶೆಟ್ಟಿ, ಜೈನ್ ಮಿಲನ್ ದುಬೈಯ ಸಂದೇಶ್ ಜೈನ್, ಗಾಣಿಗ ಸಮಾಜ ದುಬೈಯ ಸುಪ್ರೀತ್ ಗಾಣಿಗ, ವೀರಶೈವ ಲಿಂಗಯುತ ಸಮಾಜ ದುಬೈಯ ಮಲ್ಲಿಕಾರ್ಜುನ ಗೌಡ, ಹಿರಿಯ ಹಿಮ್ಮೇಳ ವಾದಕ ವೆಂಕಟೇಶ ಶಾಸ್ತ್ರಿ, ಒಕ್ಕಲಿಗರ ಸಂಘ ಯುಎಇಯ ಅಧ್ಯಕ್ಷ ಕಿರಣ್ ಗೌಡ, ಚಿತ್ರ ನಿರ್ಮಾಪಕ ಶೋಧನ್ ಪ್ರಸಾದ್, ಮಾರ್ಗದೀಪ ಸಾಂಸ್ಕೃತಿಕ ಸಮಿತಿಯ ಸುಗಂದರಾಜ್ ಬೇಕಲ್, ಬಿರುವೆರ್ ಕುಡ್ಲ ದುಬೈಯ ಸಂದೀಪ್ ಕೋಟ್ಯಾನ್, ಪೊಲದವರ ಯಾನೆ ಗಟ್ಟಿ ಸಮಾಜ ದುಬೈಯ ಮನೋಜ್ ಬಂಗೆರ, ಯಕ್ಷಗಾನ ಅಭ್ಯಾಸ ಕೇಂದ್ರದ ಸಂಚಾಲಕ ದಿನೇಶ್ ಶೆಟ್ಟಿ ಕೊಟ್ಟಿಂಜ, ಯಕ್ಷಗಾನ ಗುರುಗಳಾದ ಶೇಖರ್ ಡಿ.ಶೆಟ್ಟಿಗಾರ್ ಕಿನ್ನಿಗೋಳಿ ಅವರು ಕಾರ್ಯಕ್ರಮದ ಉದ್ಘಾಟನಾ ದೀಪವನ್ನು ಬೆಳಗಿಸಿ ಉದ್ಘಾಟಿಸಿದರು.

    ಆಮಂತ್ರಣ ಪತ್ರಿಕೆ ಮತ್ತು ಟಿಕೆಟ್ ಬಿಡುಗಡೆಗೊಳಿಸಿ ಮಾತನಾಡಿದ ಸರ್ವೋತ್ತಮ ಶೆಟ್ಟಿ, ಕಳೆದ ಒಂಬತ್ತು ವರ್ಷದಿಂದ ಅಭ್ಯಾಸ ಕೇಂದ್ರದ ಕಾರ್ಯಕ್ರಮಗಳನ್ನು ನೋಡುತ್ತ ಬಂದಿದ್ದೇನೆ. ಒಳ್ಳೆಯ ಕಾರ್ಯಕ್ರಮವನ್ನು ನೀಡುತ್ತ ಬಂದಿರುವುದರಿಂದ ಅಭ್ಯಾಸ ಕೇಂದ್ರದ ಕಾರ್ಯಕ್ರಮದ ಯುಎಇಯ ಜನರು ಮೆಚ್ಚುಗೆಯ ಮಾತುಗಳನ್ನು ಆಡುತ್ತಿದ್ದಾರೆ. ದಶಮಾನೋತ್ಸವ ಕಾರ್ಯಕ್ರಮ ಇನ್ನಷ್ಟು ಮೆಚ್ಚುಗೆಯನ್ನು ಪಡೆಯಲಿ. ಹಾಗೆಯೇ ರಂಗದ ಹಿಂದೆ ನಿರ್ದೆಶನ ಮಾಡುತ್ತಿರುವ ಗುರುಗಳಾದ ಶೇಖರ್ ಶೆಟ್ಟಿಗಾರ್ ಮತ್ತು ಶರತ್ ಕುಡ್ಲರವರಿಗೆ ಅಭಿನಂದನೆಗಳು ಎಂದು ಜೂ.29 ರಂದು ನಡೆಯಲಿರುವ ದಶಮಾನೋತ್ಸವ ಕಾರ್ಯಕ್ರಮಕ್ಕೆ ಶುಭವನ್ನು ಹಾರೈಸಿದರು.

    ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ ಮಾತನಾಡಿ, ಕಳೆದ ಹತ್ತು ವರ್ಷಗಳಿಂದ ನನ್ನ ಸಂಸ್ಥೆಯಲ್ಲಿ ಯಕ್ಷಗಾನದ ಮುಹೂರ್ತ ಪೂಜೆ ಮತ್ತು ತರಗತಿಗಳು ನಡೆಯುವುದರಿಂದ ಶ್ರೀ ದೇವಿಯ ಸ್ತುತಿಯನ್ನು ವಾರ ವಾರ ಕೇಳುತ್ತ ಇದ್ದೇನೆ. ಹತ್ತನೇ ವರ್ಷದ ಕಾರ್ಯಕ್ರಮದ ಕ್ಷಣಗಣನೆಯಲ್ಲಿ ನಾವೆಲ್ಲ ಇದ್ದೇವೆ. ಉತ್ತಮ ಕಾರ್ಯಕ್ರಮವಾಗಿ ಮೂಡಿಬರಲಿ ಎಂದು ಹಾರೈಸಿದರು. ಉಪಸ್ಥಿತರಿದ್ದ ಎಲ್ಲಾ ಕನ್ನಡ ತುಳು ಸಂಘ ಸಂಸ್ಥೆಗಳ ಪದಾಧಿಕಾರಿಗಳು, ನಮ್ಮ ಹಾಗೂ ನಮ್ಮ ಸಮಾಜದ ಸಂಪೂರ್ಣ ಸಹಕಾರ ಇದೆ ಎಂದು ಬೆಂಬಲ ಘೋಷಿಸಿದರು.

    ಪ್ರಾಸ್ತಾವಿಕವಾಗಿ ಮಾತನಾಡಿದ ಕೇಂದ್ರದ ಸಂಚಾಲಕ ದಿನೇಶ್ ಶೆಟ್ಟಿ ಕೊಟ್ಟಿಂಜ ಮತ್ತು ಕೇಂದ್ರದ ಗುರುಗಳಾದ ಶೇಖರ್ ಡಿ.ಶೆಟ್ಟಿಗಾರ್ ಅವರು ಜೂ.29 ರಂದು ಕರಾಮ ಇಂಡಿಯಾನ್ ಸ್ಕೂಲ್‌ನ ಶೇಖ್ ರಷೀದ್ ಆಡಿಟೋರಿಯಂನ ಸಭಾಂಗಣದಲ್ಲಿ ಬೆಳಗ್ಗೆ 9 ರಿಂದ ಸಂಜೆ 7‌ ಗಂಟೆಯ ವರೆಗೆ ಕಾರ್ಯಕ್ರಮ ನಡೆಯಲಿದೆ. ಬೆಳಗ್ಗೆಯಿಂದ ಹತ್ತು ಚೆಂಡೆವಾದಕರಿಂದ ಅಬ್ಬರ ತಾಳ, ಖ್ಯಾತ ಭಾಗವತರಾದ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ, ದೇವಿಪ್ರಸಾದ್ ಆಳ್ವ ತಲಪಾಡಿ, ಕಾವ್ಯ ಶ್ರೀ ಅಜೇರು ಅವರಿಂದ ಯುಎಇಯಲ್ಲಿ ಮೊತ್ತಮೊದಲ ಬಾರಿಗೆ ಯಕ್ಷ ಗಾಯನ ಸೌರಭ, ಪೂರ್ವರಂಗ ನಂತರ ಯಕ್ಷಗಾನ ಶೋಭಾಯಾತ್ರೆಯೊಂದಿಗೆ ದಶಮಾನೋತ್ಸವದ ಸಭಾ ಕಾರ್ಯಕ್ರಮ ನಡೆಯಲಿದೆ. ಈ ಸಭಾ ಕಾರ್ಯಕ್ರಮದಲ್ಲಿ ಯುಎಇಯ ಹತ್ತು ಮಂದಿ ಸಾಧಕರಿಗೆ ಗೌರವ ಸನ್ಮಾನ ಜರುಗಲಿದೆ. ನಂತರ ಕೇಂದ್ರದ ಕಲಾವಿದರು ಹಾಗೂ ಊರಿನ ಪ್ರಖ್ಯಾತ ಕಲಾವಿದರಿಂದ ‘ಶಿವಾನಿ ಸಿಂಹವಾಹಿನಿ’ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಊರಿನ ಮುಮ್ಮೆಳ ಕಲಾವಿದರಾಗಿ ಪಾವಂಜೆ ಮೇಳದ ಸುಬ್ರಾಯ ಹೊಳ್ಳ ಕಾಸರಗೋಡು ರಕ್ತಬೀಜನ ಪಾತ್ರದಲ್ಲಿ ಹಾಗೂ ಕಟೀಲು ಮೇಳದ ಖ್ಯಾತ ಸ್ತ್ರೀ ಪಾತ್ರದಾರಿ ಅರುಣ್ ಕೋಟ್ಯಾನ್ ಶ್ರೀ ದೇವಿಯಾಗಿ ದುಬೈಯ ಯಕ್ಷಗಾನದ ಅಭಿಮಾನಿಗಳನ್ನು ರಂಜಿಸಲಿದ್ದಾರೆ. ಭಾಗವತರಾಗಿ ಪಟ್ಲ ಸತೀಶ್ ಶೆಟ್ಟಿ, ದೇವಿಪ್ರಸಾದ್ ಆಳ್ವ ತಲಪಾಡಿ, ಕಾವ್ಯ ಶ್ರೀ ಅಜೇರು, ಕೃಷ್ಣ ಪ್ರಸಾದ್ ರಾವ್ ಸುರತ್ಕಲ್, ಚೆಂಡೆ ಮದ್ದಲೆಯಲ್ಲಿ ಚಂದ್ರಶೇಖರ ಸರಪಾಡಿ, ಸವಿನಯ ನೆಲ್ಲಿತೀರ್ಥ, ಭವಾನಿ ಶಂಕರ ಶರ್ಮ, ಪುತ್ತಿಗೆ ವೆಂಕಟೇಶ ಶಾಸ್ತ್ರಿ, ಚಕ್ರತಾಳದಲ್ಲಿ ಚರಣ್ ರಾಜ್, ಆದಿತ್ಯ ದಿನೇಶ್ ಶೆಟ್ಟಿ ಹಾಗೂ ಪ್ರಸಾದನ ಮತ್ತು ವೇಷಭೂಷಣದಲ್ಲಿ ಗಂಗಾಧರ ಡಿ. ಶೆಟ್ಟಿಗಾರ್ ಕಿನ್ನಿಗೋಳಿ, ನಿತಿನ್ ಕುಂಪಲ, ಮನೋಜ್ ಶೆಟ್ಟಿಗಾರ್ ಕಿನ್ನಿಗೋಳಿ ಅವರು ಸಹಕರಿಸಲಿದ್ದಾರೆ. ಸಂಪೂರ್ಣ ಕಾರ್ಯಕ್ರಮದ ನಿರೂಪಣೆಯನ್ನು ಕರಾವಳಿಯ ಪ್ರಸಿದ್ಧ ಟಿವಿ ಮಾಧ್ಯಮದ ನಿರೂಪಕ ಚೇತನ್ ಶೆಟ್ಟಿ ನಿರ್ವಹಿಸಲಿದ್ದಾರೆ. ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲಾ ಕಲಾ ಅಭಿಮಾನಿಗಳಿಗೆ ಮಧ್ಯಾಹ್ನ ಅನ್ನಪ್ರಸಾದ ವಿತರಿಸಲಾಗುವುದು ಎಂದು ದಶಮಾನೋತ್ಸವ ಕಾರ್ಯಕ್ರಮದ ಮಾಹಿತಿಯನ್ನು ನೀಡಿದ್ದಾರೆ. ಕಾರ್ಯಕ್ರಮವನ್ನು ಕೇಂದ್ರದ ಸದಸ್ಯ ಗಿರೀಶ್ ನಾರಯಣ್ ನಿರೂಪಿಸಿದರು. ದಿನೇಶ್ ಶೆಟ್ಟಿ ಕೊಟ್ಟಿಂಜ ಸ್ವಾಗತಿಸಿ ಧನ್ಯವಾದವಿತ್ತರು.

  • ಮುಂಬೈ To ದುಬೈ ಮಧ್ಯೆ ಸಮುದ್ರದೊಳಗೆ ರೈಲು! – ದೇಶದ ಭವಿಷ್ಯವನ್ನೇ ಬದಲಿಸಲಿದೆಯಾ ಈ ಪ್ಲ್ಯಾನ್‌?

    ಮುಂಬೈ To ದುಬೈ ಮಧ್ಯೆ ಸಮುದ್ರದೊಳಗೆ ರೈಲು! – ದೇಶದ ಭವಿಷ್ಯವನ್ನೇ ಬದಲಿಸಲಿದೆಯಾ ಈ ಪ್ಲ್ಯಾನ್‌?

    ಸಾಮಾನ್ಯವಾಗಿ ಬಸ್ಸು, ಕಾರುಗಳ ಪ್ರಯಾಣಕ್ಕಿಂತ ರೈಲಿನಲ್ಲಿ ದೀರ್ಘ ಪ್ರವಾಸ ಮಾಡುವ ಮಜಾನೇ ಬೇರೆ.. ಇದು ಕೇವಲ ಅಗ್ಗದ ಸಾರಿಗೆ ಮಾತ್ರವಲ್ಲ, ಆರಾಮದಾಯಕವಾಗಿ ನಿಗದಿತ ಸ್ಥಾನವನ್ನ ತಲುಪುತ್ತೆ. ಮಾರ್ಗದಲ್ಲಿ ಜಲಪಾತಗಳ ಸೌಂದರ್ಯ, ಆಳವಾದ ಕಂದಕ, ಹಚ್ಚ ಹಸಿರಿನ ಸೌಂದರ್ಯ ಸೇರಿದಂತೆ ಅನೇಕ ಅದ್ಭುತವಾದ ಪ್ರಾಕೃತಿಕ ಆಕರ್ಷಣೆಗಳು ಕಣ್ಣು ಕುಕ್ಕುವಂತಿರುತ್ತದೆ. ಜೊತೆಯಲ್ಲಿ ಸ್ನೇಹಿತರಿದ್ದರೆ ಹಿತವಾದ ಮಾತುಗಳನ್ನು ಕೇಳುತ್ತಾ ಊರು ಸೇರಿದ್ದೇ ತಿಳಿಯೋದಿಲ್ಲ. ಸಾಮಾನ್ಯ ರೈಲಿನಲ್ಲಿ ಇಷ್ಟೆಲ್ಲಾ ರೋಮಾಂಚಕ ಅನುಭವ ಸಿಗುತ್ತೆ ಅಂದ್ಮೇಲೆ ಇನ್ನೂ ಸಮುದ್ರದೊಳಗೆ ರೈಲಿನಲ್ಲಿ ಪ್ರಯಾಣಿಸಿದ್ರೆ ಅದರ ಅನುಭವ ಹೇಗಿರುತ್ತೆ ಅಲ್ಲವೇ? ಅಬ್ಬಬ್ಬ! ನೀರಿನಾಳದಲ್ಲಿ ಸಾವಿರಾರು ಜಲಚರಗಳನ್ನ ನೋಡುತ್ತಾ ಮಿಂಚಿನ ವೇಗದಲ್ಲಿ ಸಾಗುವ ಅನುಭವ ನೆನೆಸಿಕೊಂಡ್ರೇನೆ ಮೈ ರೋಮಾಂಚನವಾಗುತ್ತೆ.

    ಇಂತಹದ್ದೊಂದು ಯೋಜನೆಯನ್ನ ಭಾರತದ ಮನಿ ಕ್ಯಾಪಿಟಲ್‌ ಮುಂಬೈ ಹಾಗೂ ದುಬೈ ನಡುವೆ ಕಾರ್ಯರೂಪಕ್ಕೆ ತರುವ ಕೆಲಸ ನಡೆಯುತ್ತಿದೆ.

    ಹೌದು. ಮುಂಬೈನಿಂದ ದುಬೈಗೆ ಸುರಂಗ ಮಾರ್ಗದ ಮೂಲಕ ಸಮುದ್ರದೊಳಗೆ ರೈಲು ಮಾರ್ಗ ನಿರ್ಮಿಸಲು ಸಿದ್ಧತೆ ನಡೆಯುತ್ತಿದೆ. ಸ್ಟಾರ್ಟ್‌ಅಪ್‌, ವ್ಯಾಪಾರ ಯೋಜನೆಗಳಿಗೆ ಹೆಸರುವಾಸಿಯಾಗಿರುವ ಯುಎಇ ಮೂಲದ ನ್ಯಾಷನಲ್‌ ಅಡ್ವೈಸರ್‌ ಬ್ಯೂರೋ ಲಿಮಿಟೆಡ್‌ (ಎನ್‌ಎಬಿಎಲ್‌) ಈ ಯೋಜನೆಯನ್ನ ಪ್ರಸ್ತಾಪಿಸಿದೆ. ಇದು ಭಾರತ ಮತ್ತು ಯುಎಇಯನ್ನು ಅರೇಬಿಯನ್‌ ಸಮುದ್ರದ ಸಂಪರ್ಕಿಸುತ್ತದೆ. ಈಗಾಗಲೇ ಸಿವಿಲ್‌ ಇಂಜಿನಿಯರರು ಇದಕ್ಕೆ ಕೆಲಸ ಮಾಡುತ್ತಿದ್ದು, ಅಂದಾಜು ವೆಚ್ಚ, ಮತ್ತಿತರ ಯೋಜನೆಯ ಕಾರ್ಯಸಾಧ್ಯತೆಗಳನ್ನ ಚರ್ಚಿಸುತ್ತಿದ್ದಾರೆ. ಸದ್ಯಕ್ಕೆ 21 ಶತಕೋಟಿ ಡಾಲರ್‌ ಅಂದಾಜು ವೆಚ್ಚ ಆಗಲಿದೆ ಎಂದು ಅಂದಾಜಿಸಲಾಗಿದೆ.

    ಈ ಪರಿಕಲ್ಪನೆಯು ಮೊದಲಿಗೆ 2018ರಲ್ಲಿ ಬಂದಿತ್ತು. ಆದ್ರೆ ಇತ್ತೀಚಿನ ತಿಂಗಳುಗಳಲ್ಲಿ ಅದರ ಚರ್ಚೆ ಮತ್ತೆ ತೀವ್ರಗೊಂಡಿದೆ ಎಂಬುದು ಗಮನಾರ್ಹ. ದುಬೈನ ಕ್ರೌನ್ ಪ್ರಿನ್ಸ್ ಶೇಖ್ ಹಮ್ದಾನ್ ಬಿನ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೂಮ್ ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದಾಗಲೂ ಈ ಬಗ್ಗೆ ಚರ್ಚಿಸಿದ್ದಾರೆ. ಜೊತೆಗೆ ಭಾರತ, ಅಮೆರಿಕ, ಯುಎಇ ನಡುವಿನ ಸಂಬಂಧ, ಆರ್ಥಿಕತೆಯನ್ನು ಅಭಿವೃದ್ಧಿ ಪಡಿಸುವ ಭವಿಷ್ಯದ ಯೋಜನೆಗಳ ಕುರಿತಾಗಿಯೂ ಚರ್ಚಿಸಿದ್ದಾರೆ. ಅಲ್ಲದೇ ಈ ಯೋಜನೆ ಇನ್ನೂ ಪರಿಕಲ್ಪನಾ ಹಂತದಲ್ಲಿದ್ದು, ಅನುಮೋದನೆ ಪಡೆಯಲು ತಯಾರಿ ನಡೆಲಸಾಗುತ್ತಿದೆ ಎಂದು ಯುಎಇ ಪತ್ರಿಕೆ ʻಖಲೀಜ್ ಟೈಮ್ಸ್‌ʼ ವರದಿ ಮಾಡಿದೆ.

    ಏನಿದು ನಿರೋಳಗಿನ ರೈಲು ಯೋಜನೆ?
    ಅಂದ್ರೆ ನೀರಿನಾಳದಲ್ಲಿ ಸುರಂಗ ಮಾರ್ಗವೊಂದನ್ನು ನಿರ್ಮಿಸಿ ಆ ಮೂಲಕ ರೈಲು ಸಂಪರ್ಕ ಕಲ್ಪಿಸುವುದು. ಭಾರತ ಮತ್ತು ದುಬೈನ ಫುಜೈರಾಗೆ ಅತೀ ವೇಗದ ರೈಲು ಸಂಪರ್ಕ ಕಲ್ಪಿಸುವ ಯೋಜನೆ ಇದಾಗಿದೆ. ಯುಎಇಯ ನ್ಯಾಷನಲ್ ಅಡ್ವೈಸರ್ ಬ್ಯೂರೋ ಲಿಮಿಟೆಡ್ ಸಂಸ್ಥೆಯು 6 ವರ್ಷಗಳ ಹಿಂದೆ ಅಬುಧಾಬಿಯಲ್ಲಿ ನಡೆದ ಯುಎಇ-ಇಂಡಿಯಾ ಕಾನ್ಕ್ಲೇವ್‌ನಲ್ಲಿ ಈ ಯೋಜನೆಯ ಪರಿಕಲ್ಪನೆಯನ್ನು ಪ್ರಸ್ತಾಪಿಸಿತ್ತು. ಈ ಯೋಜನೆ ಆರ್ಥಿಕತೆಗೆ ಎನರ್ಜಿ ಬೂಸ್ಟರ್‌ ನೀಡುವ ಜೊತೆಗೆ ದ್ವಿಪಕ್ಷೀಯ ವ್ಯಾಪಾರ ಸಂಬಂಧಕ್ಕೆ ಉತ್ತೇಜನ ನೀಡುತ್ತದೆ. ಫುಜೂತಾ ಬಂದರಿನಿಂದ ಭಾರತಕ್ಕೆ ತೈಲವನ್ನು ನೇರವಾಗಿ ರಫ್ತು ಮಾಡಲು ಅನುಕೂಲವಾಗುತ್ತದೆ. ಈ ಯೋಜನೆಯನ್ನು ಪೂರ್ಣಗೊಳಿಸುವ ಉದ್ದೇಶದಿಂದಲೇ ಮುಂಬೈನ ಉತ್ತರಕ್ಕೆ ನರ್ಮದಾ ನದಿಯಿಂದ ಹೆಚ್ಚುವರಿ ನೀರನ್ನು ಹರಿಸಲಾಗುತ್ತದೆ. ಜೊತೆಗೆ ಇದು ಶೀಘ್ರ ಪ್ರಯಾಣಕ್ಕೂ ಅನುಕೂಲ ಮಾಡಿಕೊಡುತ್ತದೆ ಎಂದು ಉದ್ದೇಶಿಸಲಾಗಿದೆ.

    ಮಿಂಚಿನಷ್ಟೇ ವೇಗ
    ಸಮುದ್ರ ಮಾರ್ಗದಲ್ಲಿ ಹಾದುಹೋಗುವ ಈ ರೈಲು ಮಾರ್ಗ ಸುಮಾರು 2,000 ಕಿಮೀ ವ್ಯಾಪ್ತಿ ಹೊಂದಿರಲಿದೆ. ಅರೇಬಿಯನ್‌ ಸಮುದ್ರದ ಮೇಲ್ಮೈನಿಂದ 20-30 ಮೀಟರ್‌ ಆಳದಲ್ಲಿ ಸುರಂಗ ಮಾರ್ಗದ ಮೂಲಕ ಹಾದುಹೋಗಲಿದೆ. ಇಲ್ಲಿ ರೈಲು ಗಂಟೆಗೆ 600 ರಿಂದ 1 ಸಾವಿರ ಕಿಮೀ ವೇಗದಲ್ಲಿ ಚಲಿಸುತ್ತದೆ. ಜಪಾನ್‌, ಚೀನಾಗಳಲ್ಲಿ ಬುಲೆಟ್‌ಟ್ರೈನ್‌ಗೆ ಬಳಸಿದ ಮ್ಯಾಗ್ಲೆವ್‌ ತಂತ್ರಜ್ಞಾನ ಬಳಸಿ ಟ್ರ್ಯಾಕ್‌ ಮಾಡುವುದರಿಂದ ಇದರ ವೇಗ ಅತಿಹೆಚ್ಚಿನದ್ದಾಗಿಯೇ ಇರುತ್ತದೆ.

    ಪ್ರಸ್ತುತ ವಿಮಾನದಲ್ಲಿ ಮುಂಬೈನಿಂದ ದುಬೈಗೆ ಸುಮಾರು 3 ಗಂಟೆ ಪ್ರಯಾಣ ಮಾಡಬೇಕಾಗುತ್ತದೆ. ಈ ಯೋಜನೆ ಪೂರ್ಣಗೊಂಡರೆ ಮುಂಬೈನಿಂದ ದುಬೈಗೆ ಕೇವಲ 2 ಗಂಟೆಗಳಲ್ಲಿ ಪ್ರಯಾಣಿಸಬಹುದು. ಗಾಳಿ ವೇಗಕ್ಕೆ ಸರಿಸಾಟಿಯಾಗಿ ರೈಲು ಚಲಿಸಿದರೂ ಇದರಲ್ಲಿ ಅಪಘಾತ ಸಾಧ್ಯತೆ ತೀರಾ ಕಡಿಮೆ. ಯುಎಇನಿಂದ ಪ್ರಯಾಣಿಕರ ಸಂಚಾರ ಮತ್ತು ಸರಕು ಸಾಗಣೆಯ ವ್ಯವಹಾರ ಎರಡಕ್ಕೂ ಅರೇಬಿಯನ್‌ ಕೊಲ್ಲಿ ಮೂಲಕ ಎಂಟ್ರಿ, ಎಕ್ಸಿಟ್‌ ಇರಲಿದೆ.

    ವಿಶ್ವದಲ್ಲಿ ಇಂತಹ ಪ್ರಯೋಗ ನಡೆದಿದೆಯೇ?
    ಜಗತ್ತಿನಲ್ಲಿ ನೀರಿನೊಳಗಿನ ರೈಲು ಯೋಜನೆ ಪರಿಕಲ್ಪನೆಯು ಹೊಸದೇನಲ್ಲ. ಇಂಗ್ಲೆಂಡ್‌ ಮತ್ತು ಫ್ರಾನ್ಸ್‌ ನಡುವೆ ನಿರ್ಮಾಣಗೊಳ್ಳುತ್ತಿದೆ. ಇದಕ್ಕಾಗಿ ರೈಲು ಅಳಿ ನಿರ್ಮಾಣ ಮಾಡಲು 1994ರಲ್ಲೇ 50.45 ಕಿಮೀ ಉದ್ದದ ಸುರಂಗ ಮಾರ್ಗ ನಿರ್ಮಿಸಲಾಗಿದೆ. ಸಮುದ್ರದ ಮೇಲ್ಮೈನಿಂದ 75 ಮೀಟರ್‌ ಆಳದಲ್ಲಿ ರೈಲು ಚಲಿಸಲಿದ್ದು, ಯೂರೋಸ್ಟಾರ್ ರೈಲುಗಳು ಗಂಟೆಗೆ 160 ಕಿ.ಮೀ ವೇಗದಲ್ಲಿ ಚಲಿಸುತ್ತದೆ. ರಷ್ಯಾ ಮತ್ತು ಕೆನಡಾ ನಡುವೆ ಸಂಪರ್ಕ ಕಲ್ಪಿಸುವುದಕ್ಕೂ ಪ್ರಸ್ತಾವನೆ ಕೇಳಿಬಂದಿದೆ.

    ಒಟ್ಟಿನಲ್ಲಿ ಅಭಿವೃದ್ಧಿಯ ದಾಪುಗಾಲಿಡುತ್ತಿರುವ ಭಾರತ ಹಲವು ಯೋಜನೆಗಳಲ್ಲಿ ಯಶಸ್ಸನ್ನು ಕಂಡಿದೆ. ಸಾಗರದಲ್ಲಿ ಭೂಸ್ವಾದೀನದಂತಹ ಯಾವುದೇ ಸಮಸ್ಯೆ ಇಲ್ಲವಾದರೂ, ನೀರಿನ ಪರಿಸರ ಮತ್ತು ಜಲಚರಗಳ ಮೇಲೆ ಪರಿಣಾಮ ಬೀರಬಹುದೇ ಎಂಬುದನ್ನು ನೋಡಬೇಕಾಗಿದೆ. ಆದ್ರೆ ಈಗಾಗಲೇ ಅಂಡರ್‌ ವಾಟರ್‌ ಮೆಟ್ರೋ ಯೋಜನೆಯಲ್ಲಿ ಯಶಸ್ಸನ್ನು ಕಂಡಿರುವ ಭಾರತ ನೀರಿನೊಳಗಿನ ರೈಲು ಯೋಜನೆಗಾಗಿ ಯುಎಇ ಜೊತೆಗೆ ಕೈಜೋಡಿಸುತ್ತದೆಯೇ ಎಂಬುದನ್ನು ಕಾದುನೋಡಬೇಕಿದೆ.

  • ಯುಎಇ ವಿಮಾನ ಅಪಘಾತದಲ್ಲಿ ಪೈಲಟ್‌ ಜೊತೆ ಭಾರತೀಯ ಮೂಲದ ವೈದ್ಯ ಸಾವು

    ಯುಎಇ ವಿಮಾನ ಅಪಘಾತದಲ್ಲಿ ಪೈಲಟ್‌ ಜೊತೆ ಭಾರತೀಯ ಮೂಲದ ವೈದ್ಯ ಸಾವು

    ದುಬೈ: ರಾಸ್‌ ಅಲ್‌ ಖೈಮಾ ಕರಾವಳಿಯಲ್ಲಿ ಆದ ಲಘು ವಿಮಾನ ಅಪಘಾತದಲ್ಲಿ ಪೈಲಟ್‌ ಜೊತೆಗೆ ಭಾರತೀಯ ಮೂಲದ ವೈದ್ಯ ಕೂಡ ಮೃತಪಟ್ಟಿದ್ದಾರೆ.

    ಡಿ.26 ರಂದು ಈ ಅವಘಡ ಸಂಭವಿಸಿತ್ತು. 26 ವರ್ಷದ ಸುಲೈಮಾನ್ ಅಲ್ ಮಜೀದ್ ಮೃತ ವ್ಯಕ್ತಿ. ಅಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ಕೋವ್ ರೊಟಾನಾ ಹೋಟೆಲ್ ಬಳಿ ಟೇಕಾಫ್ ಆದ ಕೆಲವೇ ಸಮಯದಲ್ಲಿ ಈ ಅಪಘಾತ ಸಂಭವಿಸಿದೆ ಎಂದು ಅವರ ತಂದೆ ಮಜಿದ್ ಮುಕರ್ರಂ ತಿಳಿಸಿದ್ದಾರೆ.

    ಈ ಅಪಘಾತದಲ್ಲಿ 26 ವರ್ಷದ ಪಾಕಿಸ್ತಾನಿ ಮಹಿಳೆ ಪೈಲಟ್ ಪ್ರಾಣ ಕಳೆದುಕೊಂಡಿದ್ದಾರೆ. ಜನರಲ್ ಸಿವಿಲ್ ಏವಿಯೇಷನ್ ​​ಅಥಾರಿಟಿ (ಜಿಸಿಎಎ) ಘಟನೆಯನ್ನು ದೃಢಪಡಿಸಿದೆ. ಈ ವಿಮಾನವು ಜಜಿರಾ ಏವಿಯೇಷನ್ ​​ಕ್ಲಬ್‌ಗೆ ಸೇರಿದೆ ಎಂದು ಖಲೀಜ್ ಟೈಮ್ಸ್ ವರದಿ ಮಾಡಿದೆ.

    ಡಾ.ಸುಲೈಮಾನ್ ಅವರು ತಮ್ಮ ಕುಟುಂಬದೊಂದಿಗೆ-ತಂದೆ, ತಾಯಿ ಮತ್ತು ಕಿರಿಯ ಸಹೋದರರೊಂದಿಗೆ ದೃಶ್ಯವೀಕ್ಷಣೆಯ ಪ್ರವಾಸಕ್ಕಾಗಿ ಲಘು ವಿಮಾನವನ್ನು ಬಾಡಿಗೆಗೆ ಪಡೆದಿದ್ದರು.

  • ದುಬೈ; ಬ್ಯಾರೀಸ್ ಚೇಂಬರ್ ಯುಎಇ ವತಿಯಿಂದ ಫೆ.9ರಂದು ಅದ್ಧೂರಿ ಬ್ಯಾರಿ ಮೇಳ

    ದುಬೈ; ಬ್ಯಾರೀಸ್ ಚೇಂಬರ್ ಯುಎಇ ವತಿಯಿಂದ ಫೆ.9ರಂದು ಅದ್ಧೂರಿ ಬ್ಯಾರಿ ಮೇಳ

    ಬೆಂಗಳೂರು: ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್&ಇಂಡಸ್ಟ್ರಿಸ್ ಯುಎಇ (Bearys Chamber of Commerce and Industries UAE) ನೇತೃತ್ವದಲ್ಲಿ ಯುಎಇಯಲ್ಲಿರುವ ಎಲ್ಲಾ ಬ್ಯಾರಿ ಸಂಘಟನೆಗಳ ಸಹಯೋಗದಲ್ಲಿ 2025ರ ಫೆಬ್ರವರಿ 9ರಂದು ಇತಿಸಲಾತ್ ಅಕಾಡೆಮಿ ಮೈದಾನದಲ್ಲಿ ನಡೆಯಲಿದೆ.

    ಡಿ.8ರಂದು ಅಜ್ಮಾನ್ ತುಂಬೆ ಮೆಡಿಸಿಟಿ ಸಭಾಂಗಣದಲ್ಲಿ ಬ್ಯಾರಿ ಮೇಳ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ ಸಮಾರಂಭ ನಡೆಯಿತು. ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ತುಂಬೆ ಗ್ರೂಪ್ ಸ್ಥಾಪಕರು, ಅನಿವಾಸಿ ಉದ್ಯಮಿ ತುಂಬೆ ಮೊಹಿದ್ದೀನ್ ಬ್ಯಾರಿ ಮೇಳ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಕಾರ್ಯಕ್ರಮದ ಸಿದ್ಧತೆಗೆ ಅಧಿಕೃತ ಚಾಲನೆ ನೀಡಿದರು. ಇದನ್ನೂ ಓದಿ: ಬಾಣಂತಿಯರ ಮರಣದಲ್ಲೂ ರಾಜಕೀಯ – 6 ಸಾವಿಗೆ 6 ವರ್ಷದ ಲೆಕ್ಕ ಕೊಟ್ಟ ಸರ್ಕಾರ!

    ಬ್ಯಾರೀಸ್ ಚೇಂಬರ್ ಯುಎಇ ಅಧ್ಯಕ್ಷ ಹಿದಾಯತ್ ಅಡ್ಡೂರ್ ಬ್ಯಾರಿ ಸಮುದಾಯದ ಉದ್ಯಮ ಕ್ಷೇತ್ರದ ಇತಿಹಾಸದ ಬಗ್ಗೆ ಮಾತನಾಡಿ, ಬ್ಯಾರೀಸ್ ಚೇಂಬರ್‌ನ ಗುರಿ ಹಾಗೂ ಬ್ಯಾರಿ ಮೇಳದ ಉದ್ದೇಶದ ಬಗ್ಗೆ ಮಾತನಾಡಿದರು. ಇದನ್ನೂ ಓದಿ: Tumakuru | ವರ್ಕ್ ಫ್ರಮ್ ಹೋಂ ಆಮಿಷವೊಡ್ಡಿ ಮಹಿಳೆಗೆ 14.15 ಲಕ್ಷ ವಂಚನೆ

    ಬ್ಯಾರಿ ಮೇಳದಲ್ಲಿ ನಡೆಯಲಿರುವ ವಿವಿಧ ಕಾರ್ಯಕ್ರಮಗಳ ರೂಪುರೇಷೆಗಳ ಬಗ್ಗೆ, ಭಾಗವಹಿಸಿಸುವ ಅತಿಥಿಗಳ ಬಗ್ಗೆ ಉಪಾಧ್ಯಕ್ಷ ಬಶೀರ್ ಕಿನ್ನಿಂಗಾರ್, ಹಂಝ ಅಬ್ದುಲ್ ಖಾದರ್, ಮಹಮ್ಮದ್ ಅಲಿ ಉಚ್ಚಿಲ್, ಇಮ್ರಾನ್ ಎರ್ಮಾಳ್ ವಿವರಿಸಿದರು. ಅಂದು ನಡೆಯಲಿರುವ ಉದ್ಯೋಗ ಮೇಳ, ದೊರಕಲಿರುವ ಹಲವಾರು ಉದ್ಯೋಗಾವಕಾಶಗಳ ಬಗ್ಗೆ ಮಹಮ್ಮದ್ ಮುಸ್ತಾಕ್ ಮಾಹಿತಿ ನೀಡಿದರು. ಇದನ್ನೂ ಓದಿ: ಅತ್ಯಾಚಾರ ಖಂಡಿಸಿ ಪ್ರತಿಭಟನೆ – ಕಿಡಿಗೇಡಿಗಳಿಂದ ಕಲ್ಲು ತೂರಾಟ!

    ಬ್ಯಾರಿ ಮೇಳದಲ್ಲಿ ಬ್ಯಾರಿ ಸಾಂಸ್ಕೃತಿಕ ಕಾರ್ಯಕ್ರಮ, ಯಶಸ್ವಿ ಉದ್ಯಮಿಗಳನ್ನು, ಸಮುದಾಯದ ಸಾಧಕರನ್ನು, ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸಲಾಗುವುದು. ಕರಾವಳಿಯ ಪ್ರಸಿದ್ಧ ಆಹಾರ, ತಿಂಡಿಗಳ ಮಳಿಗೆಗಳು, ವಿವಿಧ ಉದ್ಯಮ ಕ್ಷೇತ್ರದ 60ಕ್ಕೂ ಹೆಚ್ಚಿನ ಮಳಿಗೆಗಳು ಇರಲಿವೆ. ಇದನ್ನೂ ಓದಿ: ʻಒಂದು ರಾಷ್ಟ್ರ ಒಂದು ಚುನಾವಣೆʼ ಸನ್ನಿಹಿತನಾ? – ಈ ಅಧಿವೇಶನದಲ್ಲೇ ಮಸೂದೆ ಮಂಡನೆಗೆ ಪ್ಲಾನ್!

    ಪೋಸ್ಟರ್ ಬಿಡುಗಡೆ ಸಮಾರಂಭದಲ್ಲಿ ಯುಎಇಯ ಪ್ರಮುಖ ಬ್ಯಾರಿ ಸಂಘಟನೆಗಳಾದ ಬಿಸಿಎಫ್, ಬಿಡಬ್ಲ್ಯೂಎಫ್, ಕೆಸಿಎಫ್, ಕೆಐಸಿ, ದಾರುಲ್ ಇರ್ಷಾದ್, ಡಿಕೆಎಸ್‌ಸಿ, ಕೆಎಂಎಎಸ್, ಹಿದಾಯ ಫೌಂಡೇಶನ್, ಕೆಡಿಸಿ, ಅಲ್ ಖಮರ್, ಎಸ್‌ಯುಎಸಿ, ಪ್ರವಾಸಿ ಕೂಟ ವಿಟ್ಲ, ಟಿಓಡಿ, ಕೆಎಎಫ್, ಕೆಎಂಎಜೆ, ಎಂಎಫ್‌ಡಿ, ಎಸ್‌ಕೆಎಸ್‌ಎಸ್‌ಎಫ್ ಯುಎಇ, ದಾರುನ್ನೂರು, ದಾರುಸ್ಸಲಾಂ, ಶಂಶುಲ್ ಉಲಾಮ ಸೆಂಟರ್, ದಾರುಲ್ ಹಸನಿಯ್ಯ ಎಜುಕೇಷನ್ ಸೆಂಟರ್, ಅಲ್ ಇಸ್ಲಾಮೀಯ ವೆಲ್ಫೇರ್, ಮೂಳೂರು ವೆಲ್ಫೇರ್, ಅಲ್ ಹುದಾ, ಅಲ್ ಇಬಾದ್ ಇಂಡಿಯನ್ ಸ್ಕೂಲ್, ನೂರ್ ಫ್ರೆಂಡ್ಸ್, ಸಾದಿಯ ಬೆಂಗಳೂರು, ಕೊಡಗು ವೆಲ್ಫೇರ್, ಮಸ್ದರ್ ಕೊಪ್ಪಳ, ಅಲ್ ಮದೀನಾ ಮಂಜನಾಡಿ, ಮುಹಿನ್ನುಸುನ್ನ ದಾವಣಗೆರೆ, ಮರ್ಕಝ್ ಉಲ್ ಹುದಾ ಕುಂಬ್ರ, ದಾರುಲ್ ಹಿದಾ ಬೆಳ್ಳಾರೆ ಹಾಗೂ ಹಲವು ಮುಖಂಡರು, ಉದ್ಯಮಿಗಳು ಭಾಗವಹಿಸಿದರು. ಇದನ್ನೂ ಓದಿ: ಆರ್‌ಬಿಐ ನೂತನ ಗವರ್ನರ್‌ ಆಗಿ ಸಂಜಯ್‌ ಮಲ್ಹೋತ್ರಾ ನೇಮಕ

    ಬ್ಯಾರಿ ಮೇಳ ಕಾರ್ಯಕ್ರಮದ ಸ್ವಾಗತ ಸಮಿತಿ ಅಧ್ಯಕ್ಷರಾದ ಅಶ್ರಫ್ ಷಾ ಮಂತೂರ್ ಎಲ್ಲರಿಗೂ ಧನ್ಯವಾದ ಅರ್ಪಿಸಿದರು. ಬ್ಯಾರೀಸ್ ಚೇಂಬರ್ ಯುಎಇ ಪ್ರಧಾನ ಕಾರ್ಯದರ್ಶಿ ಅನ್ವರ್ ಹುಸೇನ್ ಕಾರ್ಯಕ್ರಮ ನಿರೂಪಿಸಿದರು. ಇದನ್ನೂ ಓದಿ: New Delhi | ಬಡ ವ್ಯಾಪಾರಿಗಳ ತಳ್ಳುಗಾಡಿಗಳ ಮೇಲೆ ಕೇಸರಿ ಧ್ವಜ ನೆಟ್ಟ ಬಿಜೆಪಿ ಕೌನ್ಸಿಲರ್!

  • Women’s Asia Cup: ರಿಚಾ ಸ್ಫೋಟಕ ಅರ್ಧಶಕ – ಭಾರತಕ್ಕೆ 78 ರನ್‌ಗಳ ಭರ್ಜರಿ ಜಯ; ಸೆಮಿಸ್‌ಗೆ ಇನ್ನೊಂದೇ ಹೆಜ್ಜೆ!

    Women’s Asia Cup: ರಿಚಾ ಸ್ಫೋಟಕ ಅರ್ಧಶಕ – ಭಾರತಕ್ಕೆ 78 ರನ್‌ಗಳ ಭರ್ಜರಿ ಜಯ; ಸೆಮಿಸ್‌ಗೆ ಇನ್ನೊಂದೇ ಹೆಜ್ಜೆ!

    ಡಂಬುಲ್ಲಾ: ರಿಚಾ ಘೋಷ್‌ (Richa Ghosh) ಹಾಗೂ ನಾಯಕಿ ಹರ್ಮನ್‌ ಪ್ರೀತ್‌ ಕೌರ್‌ ಅವರ ಭರ್ಜರಿ ಅರ್ಧಶತಕಗಳ ಬ್ಯಾಟಿಂಗ್‌ ನೆರವಿನಿಂದ ಭಾರತ ಮಹಿಳಾ ಕ್ರಿಕೆಟ್‌ ತಂಡವು (India Womens Team) ಯುಎಇ ವಿರುದ್ಧ 78 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಸೆಮಿಫೈನಲ್‌ಗೆ ಇನ್ನಷ್ಟು ಹತ್ತಿರವಾಗಿದೆ.

    ಇಲ್ಲಿನ ರಣಗಿರಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಭಾರತ ವನಿತೆಯರ ತಂಡ 20 ಓವರ್‌ಗಳಲ್ಲಿ 5 ವಿಕೆಟ್​ ನಷ್ಟಕ್ಕೆ ಭರ್ಜರಿ 201 ರನ್ ಗಳಿಸಿತ್ತು. ಇದು ಭಾರತ ಮಹಿಳೆಯರ ಕ್ರಿಕೆಟ್ ತಂಡದ ಇದುವರೆಗಿನ ಗರಿಷ್ಠ ಸ್ಕೋರ್ ಸಹ ಆಗಿದೆ. 202 ರನ್‌ಗಳ ಬೃಹತ್‌ ಮೊತ್ತದ ಗುರಿ ಪಡೆದ ಯುಎಇ (United Arab Emirates Women) ನಿಗದಿತ ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 123 ರನ್‌ ಗಳಿಸಿ ಸೋಲೊಪ್ಪಿಕೊಂಡಿತು.

    ಮೊದಲು ಬ್ಯಾಟಿಂಗ್‌ ಮಾಡಿದ್ದ ಟೀಂ ಇಂಡಿಯಾ ಆರಂಭದಲ್ಲಿ ವಿಕೆಟ್‌ ಕಳೆದುಕೊಂಡರೂ, ಮತ್ತೊಂದೆಡೆ ಬ್ಯಾಟರ್‌ಗಳ ಬಲದಿಂದ ರನ್‌ ಪೇರಿಸುತ್ತಾ ಸಾಗಿತ್ತು. ಕೊನೇ 2 ಓವರ್‌ಗಳಲ್ಲಿ ರಿಚಾ ಘೋಷ್‌ ಹಾಗೂ ಹರ್ಮನ್‌ ಪ್ರೀತ್‌ ( Harmanpreet Kaur) ತಮ್ಮ ಸ್ಫೋಟಕ ಪ್ರದರ್ಶನದಿಂದ 37 ರನ್‌ ಕಲೆಹಾಕುವ ಮೂಲಕ 200 ರನ್‌ಗಳ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ಭಾರತದ ಪರ ರಿಷಾ ಘೋಷ್‌ 64 ರನ್‌ (29 ಎಸೆತ, 1 ಸಿಕ್ಸರ್‌, 12 ಬೌಂಡರಿ), ಹರ್ಮನ್‌ ಪ್ರೀತ್‌ ಕೌರ್‌ 66 ರನ್‌ (47 ಎಸೆತ, 1 ಸಿಕ್ಸರ್, 7 ಬೌಂಡರಿ), ಶಫಾಲಿ ವರ್ಮಾ 37 ರನ್‌, ಸ್ಮೃತಿ ಮಂಧಾನ 13 ರನ್‌, ದಯಾಳನ್‌ ಹೇಮಲತಾ 2 ರನ್‌, ಜೆಮಿಮಾ ರೊಡ್ರಿಗ್ಸ್‌ 14 ರನ್‌ ಗಳಿಸಿ ಮಿಂಚಿದರು.

    ಬೃಹತ್‌ ಮೊತ್ತದ ಚೇಸಿಂಗ್‌ ಆರಂಭಿಸಿದ ಯುಎಇ ಪರ ಇಶಾ ಓಜಾ 38 ರನ್‌, ಕವಿಶ ಈಗೋಡಗೆ 40 ಗಳಿಸಿದರೆ, ಉಳಿದ ಆಟಗಾರರು ಅಲ್ಪಮೊತ್ತಕ್ಕೆ ಔಟಾದರು.

    ಬೌಲರ್‌ಗಳ ಕಮಾಲ್‌:
    ದೊಡ್ಡ ಮೊತ್ತ ಬೆನ್ನಟ್ಟಲು ಮುಂದಾದ ಯುಎಇ ತಂಡವೂ ಆರಂಭದಿಂದಲೇ ಸ್ಫೋಟಕ ಪ್ರದರ್ಶನಕ್ಕೆ ಮುಂದಾಯಿತು. ಆದರೆ, ಭಾರತೀಯ ಬೌಲರ್​ಗಳು ಅದಕ್ಕೆ ಸೊಪ್ಪು ಹಾಕಲಿಲ್ಲ. ಪವರ್‌ ಪ್ಲೇನಲ್ಲೇ ಎದುರಾಳಿ ಬೌಲರ್‌ಗಳನ್ನು ಯಶಸ್ವಿಯಾಗಿ ಕಟ್ಟಿಹಾಕಿದರು. ದೀಪ್ರಿ ಶರ್ಮಾ 2 ವಿಕೆಟ್‌ ಕಿತ್ತರೆ, ರೇಣುಕಾ ಸಿಂಗ್‌, ತನುಜಾ ಕನ್ವರ್‌, ಪೂಜಾ ವಸ್ತ್ರಕಾರ್‌, ರಾಧಾ ಯಾದವ್‌ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು.

    ಎ ಗುಂಪಿನಲ್ಲಿರುವ ಭಾರತ ತಂಡ ತನ್ನ ಮುಂದಿನ ಪಂದ್ಯದಲ್ಲಿ ನೇಪಾಳ ತಂಡವನ್ನು ಎದುರಿಸಲಿದೆ. ಈಗಾಗಲೇ ಎರಡು ಪಂದ್ಯ ಗೆದ್ದಿರುವ ಕಾರಣ ಭಾರತ ಬಹುತೇಕ ಸೆಮಿಫೈನಲ್ ತಲುಪಿದೆ. ಮುಂದಿನ ಪಂದ್ಯ ಗೆದ್ದರೆ ಅಧಿಕೃತವಾಗಿ ಸೆಮಿಫೈನಲ್‌ಗೆ ಪ್ರವೇಶಿಸಲಿದೆ.

  • ಒಕ್ಕಲಿಗರ ಸಂಘ ದುಬೈಯ ‘ವಿಶ್ವ ಪರಿಸರ ದಿನಾಚರಣೆ’; ಪರಿಸರ ತಜ್ಞ ಆರ್.ಕೆ.ನಾಯರ್‌ಗೆ ಸನ್ಮಾನ

    ಒಕ್ಕಲಿಗರ ಸಂಘ ದುಬೈಯ ‘ವಿಶ್ವ ಪರಿಸರ ದಿನಾಚರಣೆ’; ಪರಿಸರ ತಜ್ಞ ಆರ್.ಕೆ.ನಾಯರ್‌ಗೆ ಸನ್ಮಾನ

    ಬೆಂಗಳೂರು: ದುಬೈನಂತಹ (Dubai) ಮರುಭೂಮಿಯ ನಾಡಿನಲ್ಲಿ ಕಾಡು ಬೆಳೆಸಲು ಸಾಧ್ಯ ಎಂಬ ಸಂದೇಶ ವಿಶ್ವಕ್ಕೆ ನೀಡೋಣ ಎಂದು ಗ್ರೀನ್ ಹೀರೋ ಆಫ್ ಇಂಡಿಯಾ, ಫಾರೆಸ್ಟರ್ ಕ್ರಿಯೇಟರ್ಸ್‌ನ ಸಂಸ್ಥಾಪಕ ಪರಿಸರ ತಜ್ಞ ಡಾ.ಆರ್.ಕೆ.ನಾಯರ್ ಅಭಿಪ್ರಾಯಪಟ್ಟರು.

    ಒಕ್ಕಲಿಗರ ಸಂಘ ದುಬೈ ಯುಎಇ (Vokkaligara Sangha Dubai) ವತಿಯಿಂದ ದುಬೈನ ಹಿಲ್ಟನ್ ಹೋಟೆಲ್ ಸಭಾಂಗಣದಲ್ಲಿ ಜಗದ್ಗುರು ಶ್ರೀ ನಿರ್ಮಲಾನಂದ ಸ್ವಾಮಿಯವರ ಆಶೀರ್ವಾದದೊಂದಿಗೆ ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ. ತಾಯ್ನೆಲದ ಪರ ನಮ್ಮ ಜವಾಬ್ದಾರಿಗಳು’ ಎಂಬ ಧ್ಯೇಯೋದ್ದೇಶದೊಂದಿಗೆ ಒಕ್ಕಲಿಗರ ಸಂಘ ದುಬೈ ಯುಎಇ ಹಮ್ಮಿಕೊಂಡಿರುವ ‘ವಿಶ್ವ ಪರಿಸರ ದಿನಾಚರಣೆ’ ನಿಜಕ್ಕೂ ಶ್ಲಾಘನೀಯ. ದುಬೈನಂತಹ ಮರುಭೂಮಿಯ ನಾಡಿನಲ್ಲಿ ಕಾಡು ಬೆಳೆಸಲು ಸಾಧ್ಯ ಎಂಬ ಸಂದೇಶ ವಿಶ್ವಕ್ಕೆ ನೀಡೋಣ. ಒಕ್ಕಲಿಗರ ಸಂಘದ ಮೂಲಕವೇ ನಡೆಯಲಿ. ನನ್ನ ಸಂಪೂರ್ಣ ಮಾರ್ಗದರ್ಶನ, ಸಹಕಾರ ನಿಮ್ಮ ಜೊತೆ ಸದಾ ಇದೆ’ ಎಂದರು. ಇದನ್ನೂ ಓದಿ: ಇನ್ಮುಂದೆ ಬೆಂಗ್ಳೂರಲ್ಲಿ ಬೆಳಗ್ಗೆ 5ರಿಂದ ರಾತ್ರಿ 10ರ ವರೆಗೆ ಪಾರ್ಕ್‍ಗಳು ಓಪನ್: ಡಿಕೆಶಿ

    ಕಾರ್ಯಕ್ರಮದ ಆಯೋಜಕರು, ಒಕ್ಕಲಿಗರ ಸಂಘ ದುಬೈ ಯುಎಇ ಅಧ್ಯಕ್ಷ ಕಿರಣ್ ಗೌಡ ಚನ್ನರಾಯಪಟ್ಟಣ ಅವರು ‌ಮಾತನಾಡಿ, ಡಾ.ಆರ್.ಕೆ.ನಾಯರ್ ಮಾರ್ಗದರ್ಶನದಲ್ಲಿ ಒಕ್ಕಲಿಗರ ಸಂಘ ಭಾರತದಲ್ಲಿ ಹಾಗೂ ದುಬೈನಲ್ಲೂ ಅರಣ್ಯ ನಿರ್ಮಿಸಲು ಕೈಜೋಡಿಸಲಿದೆ. ಇನ್ನಷ್ಟು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಿದ್ದೇವೆ. ಮಿಯಾವಾಕಿ ಮಾದರಿಯಲ್ಲಿ ಲಕ್ಷಾಂತರ ಗಿಡಗಳನ್ನು ಬೆಳೆಸುವ ಮೂಲಕ ಭಾರತದಲ್ಲಿ 100ಕ್ಕೂ ಹೆಚ್ಚಿನ ಅರಣ್ಯಗಳನ್ನು ಸೃಷ್ಟಿಸಿದ ಡಾ. ಆರ್.ಕೆ.ನಾಯರ್, ನಾಸಾ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪರಿಸರ ಸಂರಕ್ಷಣೆ ಕುರಿತು ಪ್ರಬಂಧ ಮಂಡನೆ ಮಾಡಿದ್ದು, ಕನ್ನಡಿಗರಿಗೆ ಹೆಮ್ಮೆಯ ವಿಷಯ ಎಂದು ತಿಳಿಸಿದರು.

    ಮೇಜರ್ ಜನರಲ್ ಒಮರ್ ಮಹಮ್ಮದ್ ಅಲ್ ಮರ್ಝೂಕಿ, ಶಿಕ್ಷಣ ತಜ್ಞ ರಮೇಶ್ ಡ್ಯಾಫೊಡೀಲ್ ಹಾಗೂ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿ ಗಿಡಗಳನ್ನು ಸ್ವೀಕರಿಸಿ ಆರೈಕೆ ಮಾಡುವ ಜವಾಬ್ದಾರಿಯೊಂದಿಗೆ ಪರಿಸರ ಸಂರಕ್ಷಣೆ ಜಾಗೃತಿ ಮೂಡಿಸುವ ಪಣ ತೊಟ್ಟರು.‌ ಇದನ್ನೂ ಓದಿ: ಗುರಿ ಸಾಧಿಸದೇ ಇದ್ರೆ ಶಿಸ್ತು ಕ್ರಮ – ವಾಣಿಜ್ಯ ಇಲಾಖೆ ಅಧಿಕಾರಿಗಳಿಗೆ ಸಿಎಂ ಖಡಕ್ ಎಚ್ಚರಿಕೆ

    ಒಕ್ಕಲಿಗರ ಸಂಘ ದುಬೈ ಸದಸ್ಯ ಹರೀಶ್ ಗೌಡ ಗಿಡಗಳ ಸಂರಕ್ಷಣೆ, ನರ್ಸರಿ ಗಿಡ, ವಿಶ್ವ ಪರಿಸರ ದಿನಾಚರಣೆ ಮಹತ್ವದ ಕುರಿತು ಸವಿವರವಾಗಿ ತಿಳಿಸಿಕೊಟ್ಟರು. ಆಶಿಶ್ ಹರೀಶ್ ಕೋಡಿಯವರ ಕೊಳಲು ವಾದನ, ಸೌಹಾರ್ದ ಲಹರಿ ತಂಡದ ವತಿಯಿಂದ ಸಂಗೀತ ಕಾರ್ಯಕ್ರಮ, ಅಕ್ಷತ ಜಿ ಆಚಾರ್ಯ ಶಿಷ್ಯರಿಂದ ಭರತನಾಟ್ಯ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಅತಿಥಿಗಳಿಗೆ, ಆಹ್ವಾನಿತರಿಗೆ, ಪ್ರಾಯೋಜಕರಿಗೆ ಒಕ್ಕಲಿಗರ ಸಂಘ ಕೋರ್ ಕಮಿಟಿ ಸದಸ್ಯ ಶಿವಪ್ರಕಾಶ್ ಗೌಡ ಧನ್ಯವಾದ ಅರ್ಪಿಸಿದರು.

  • ಲೈಸನ್ಸ್‌ ಇಲ್ಲದೇ ಕುರಾನ್ ಬೋಧಿಸುವ ಡಿಜಿಟಲ್ ಪ್ಲಾಟ್‍ಫಾರ್ಮ್‍ಗಳನ್ನು ನಿಷೇಧಿಸಿದ ಯುಎಇ

    ಲೈಸನ್ಸ್‌ ಇಲ್ಲದೇ ಕುರಾನ್ ಬೋಧಿಸುವ ಡಿಜಿಟಲ್ ಪ್ಲಾಟ್‍ಫಾರ್ಮ್‍ಗಳನ್ನು ನಿಷೇಧಿಸಿದ ಯುಎಇ

    ಅಬುಧಾಬಿ: ಪವಿತ್ರ ಕುರಾನ್ (Quran) ಬೋಧನೆಗೆ ಪರವಾನಗಿ ಪಡೆಯದ ಡಿಜಿಟಲ್ ಪ್ಲಾಟ್‍ಫಾರ್ಮ್‍ಗಳನ್ನು ಯುಎಇ (UAE) ನಿಷೇಧಿಸಿದೆ. ಅಧಿಕಾರಿಗಳಿಂದ ಅಗತ್ಯ ಪರವಾನಗಿಯನ್ನು ಪಡೆಯದ ಹೊರತು ಯಾವುದೇ ಕೇಂದ್ರವನ್ನು ಸ್ಥಾಪಿಸುವುದು, ನಿರ್ವಹಿಸುವುದು ಅಥವಾ ಕುರಾನ್ ಬೋಧಿಸುವುದನ್ನು ನಿಷೇಧಿಸಲಾಗಿದೆ.

    ಇಸ್ಲಾಮಿಕ್ ವ್ಯವಹಾರಗಳು, ದತ್ತಿಗಳು ಮತ್ತು ಝಕಾತ್‍ನ ಜನರಲ್ ಪ್ರಾಧಿಕಾರ (The General Authority for Islamic Affairs, Endowments, and Zakat) ಯುಎಇ ನಾಗರಿಕರು ಮತ್ತು ನಿವಾಸಿಗಳಿಗೆ ಜೂನ್ 2 ರಂದು ಈ ಬಗ್ಗೆ ಸಲಹೆ ನೀಡಿದೆ. ಸಲಹೆಯಲ್ಲಿ ಕುರಾನ್-ಬೋಧನಾ ಸೇವೆಗಳನ್ನು ನೀಡುವ ಪರವಾನಗಿರಹಿತ ಡಿಜಿಟಲ್ ಪ್ಲಾಟ್‍ಫಾರ್ಮ್‍ಗಳಿಂದ ಉಂಟಾಗುವ ಅಪಾಯಗಳನ್ನು ಒತ್ತಿ ಹೇಳಿದೆ. ಯುವ ಪೀಳಿಗೆಯನ್ನು ರಕ್ಷಿಸಲು ಧಾರ್ಮಿಕ ಶಿಕ್ಷಣದ ನಿಖರತೆ ಮತ್ತು ಸೂಕ್ತತೆಯನ್ನು ಖಚಿತಪಡಿಸಿಕೊಳ್ಳುವುದು ಮುಖ್ಯವಾಗಿದೆ ಎಂದು ಇಸ್ಲಾಮಿಕ್ ವ್ಯವಹಾರಗಳ ಸಂಸ್ಥೆ ಹೇಳಿದೆ.

    ಡಿಜಿಟಲ್ ಪ್ಲಾಟ್‍ಫಾರ್ಮ್‍ಗಳ ಮೂಲಕ ಖುರಾನ್ ಬೋಧನಾ ಸೇವೆಗಳನ್ನು ನೀಡುತ್ತಿರುವ ಅನೇಕ ವ್ಯಕ್ತಿಗಳು ಅನರ್ಹರಾಗಿದ್ದಾರೆ. ಅವರು ಧಾರ್ಮಿಕ ಶಿಕ್ಷಣದ ಅರ್ಹತೆ ಹೊಂದಿರುವುದಿಲ್ಲ. ಇದು ತಪ್ಪಾದ ಬೋಧನೆ, ಪವಿತ್ರ ಪುಸ್ತಕದ ತಪ್ಪಾದ ವ್ಯಾಖ್ಯಾನ, ಇಸ್ಲಾಮಿಕ್ ಬೋಧನೆಗಳು ಮತ್ತು ತತ್ವಗಳ ಬಗ್ಗೆ ಸಂಭಾವ್ಯ ತಪ್ಪುಗ್ರಹಿಕೆಗೆ ಕಾರಣವಾಗಬಹುದು ಎಂದು ಸಂಸ್ಥೆ ಅಭಿಪ್ರಾಯಪಟ್ಟಿದೆ. ಅಲ್ಲದೇ ಪ್ರಾಧಿಕಾರವು ಅನೇಕ ಪರವಾನಗಿ ಪಡೆಯದ ಜನರು ತರಗತಿಗಳನ್ನು ತೆಗೆದುಕೊಳ್ಳುವುದನ್ನು ಮೇಲ್ವಿಚಾರಣೆ ಮಾಡಿದೆ. ಪ್ರಚಾರದ ಜಾಹೀರಾತುಗಳೊಂದಿಗೆ ಜನರನ್ನು ಆಮಿಷವೊಡ್ಡುತ್ತದೆ. ಈ ಬಗ್ಗೆ ಎಚ್ಚರಿಕೆ ಅಗತ್ಯ ಎಂದು ಪ್ರಾಧಿಕಾರ ಹೇಳಿದೆ.

    ಅನರ್ಹರು ಧಾರ್ಮಿಕ ಶಿಕ್ಷಣ ನೀಡುವುದನ್ನು ತಡೆಯಲು ಅನುಮಾನಾಸ್ಪದ ಅಥವಾ ಪರವಾನಗಿ ಇಲ್ಲದ ಬೋಧನಾ ಚಟುವಟಿಕೆಗಳ ಬಗ್ಗೆ ಮಾಹಿತಿ ಸಿಕ್ಕರೆ ಅಧಿಕಾರಿಗಳಿಗೆ ವರದಿ ಮಾಡಲು ತಿಳಿಸಲಾಗಿದೆ.

    ಕಾನೂನಿನ (UAE law) ಪ್ರಕಾರ, ಪರವಾನಗಿಯನ್ನು ಪಡೆಯದೆ ಕುರಾನ್‍ನ್ನು ಬೋಧಿಸುವುದು ಕಂಡು ಬಂದಲ್ಲಿ, ಎರಡು ತಿಂಗಳಿಗಿಂತ ಕಡಿಮೆಯಿಲ್ಲದ ಅವಧಿಯವರೆಗೆ ಜೈಲು ಶಿಕ್ಷೆ ಮತ್ತು 50,000 ಡಿಹೆಚ್‍ಗಿಂತ ಹೆಚ್ಚಿನ ದಂಡವನ್ನು ಅಥವಾ ಈ ಎರಡರಲ್ಲಿ ಒಂದು ಶಿಕ್ಷೆಗೆ ಒಳಪಡಿಸಲಾಗುತ್ತದೆ ಎಂದು ಎಚ್ಚರಿಸಲಾಗಿದೆ.

    ಯಾರು ಕುರಾನ್ ಕಲಿಸಬಹುದು?
    ಕುರಾನ್ ಬೋಧಕನ ವಯಸ್ಸು 21 ವರ್ಷಕ್ಕಿಂತ ಕಡಿಮೆಯಿರಬಾರದು. ಆತನಿಗೆ ಒಳ್ಳೆಯ ನಡತೆ ಇರಬೇಕು. ಯಾವುದೇ ಅಪರಾಧ ಕೃತ್ಯ ಮಾಡಿರಬಾರದು, ಶಿಕ್ಷೆಗೆ ಗುರಿಯಾಗಿರಬಾರದು. ಆರೋಗ್ಯದ ಫಿಟ್ನೆಸ್‍ನ್ನು ನೀಡಬೇಕು. ಅಗತ್ಯ ಅನುಭವ, ಪರೀಕ್ಷೆ ಮತ್ತು ವೈಯಕ್ತಿಕ ಸಂದರ್ಶನದಲ್ಲಿ ಉತ್ತೀರ್ಣರಾಗಿರಬೇಕು. ಸಮರ್ಥ ಅಧಿಕಾರಿಗಳ ಅನುಮೋದನೆಯನ್ನು ಪಡೆಯಬೇಕು.

    ಕುರಾನ್ ಕಲಿಸುವ ಉದ್ದೇಶಕ್ಕಾಗಿ ಕೇಂದ್ರ ಸ್ಥಾಪನೆಗೆ, ಕಾನೂನಿನ ಪ್ರಕಾರ ಪರವಾನಗಿ ಪಡೆಯಬೇಕು. ಕಟ್ಟಡವು ಕಾನೂನಿನ ಕಾರ್ಯನಿರ್ವಾಹಕ ನಿಯಮಗಳು ನಿರ್ದಿಷ್ಟಪಡಿಸಿದ ತಾಂತ್ರಿಕ ಮತ್ತು ಆರೋಗ್ಯ ಅಗತ್ಯತೆಗಳನ್ನು ಹೊಂದಿರಬೇಕು. ಸಂಪೂರ್ಣವಾಗಿ ಪ್ರತ್ಯೇಕವಾದ ಲಿಂಗ ತರಗತಿಗಳನ್ನು ಸ್ಥಾಪಿಸಬೇಕು. ಈ ಕಾನೂನಿನ ಕಾರ್ಯನಿರ್ವಾಹಕ ನಿಯಮಗಳಿಂದ ನಿರ್ದಿಷ್ಟಪಡಿಸಿದ ಚಟುವಟಿಕೆಗಳನ್ನು ಅಭ್ಯಾಸ ಮಾಡಲು ಸಭಾಂಗಣಗಳಿರಬೇಕು.

  • ಪ್ರಯಾಣಿಕರನ್ನು ಸಾಗಿಸುವ ಡ್ರೋನ್‌ – ಮಧ್ಯಪ್ರಾಚ್ಯದ ಅಬುಧಾಬಿಯಲ್ಲಿ ಪ್ರಯೋಗ ಯಶಸ್ವಿ

    ಪ್ರಯಾಣಿಕರನ್ನು ಸಾಗಿಸುವ ಡ್ರೋನ್‌ – ಮಧ್ಯಪ್ರಾಚ್ಯದ ಅಬುಧಾಬಿಯಲ್ಲಿ ಪ್ರಯೋಗ ಯಶಸ್ವಿ

    – ಪ್ಯಾಸೆಂಜರ್‌ ಹೊತ್ತೊಯ್ಯುವ ಮೊದಲ ಡ್ರೋನ್‌ ಎಂಬ ಹೆಗ್ಗಳಿಕೆ

    ಅಬುಧಾಬಿ: ಪ್ರಯಾಣಿಕರನ್ನು ಹೊತ್ತೊಯ್ಯುವ ಮೊದಲ ಡ್ರೋನ್‌ (Passenger-Carrying Drone) ಪ್ರಯೋಗವು ಮಧ್ಯಪ್ರಾಚ್ಯದ ಯುಎಇ ರಾಜಧಾನಿ ಅಬುಧಾಬಿಯಲ್ಲಿ (Abu Dhabi) ಯಶಸ್ವಿಯಾಗಿ ನಡೆದಿದೆ.

    ಅಬುಧಾಬಿ ಮೊಬಿಲಿಟಿ ವೀಕ್‌ನಲ್ಲಿ (24 ಏಪ್ರಿಲ್‌ನಿಂದ ಮೇ 1) ಮಲ್ಟಿ ಲೆವೆಲ್ ಗ್ರೂಪ್, ಫಿನ್‌ಟೆಕ್ ಸಹಯೋಗದೊಂದಿಗೆ ಎರಡು ಡ್ರೋನ್‌ಗಳ ಪ್ರಯೋಗ ನಡೆಯಿತು. ಇದನ್ನೂ ಓದಿ: ಭಾರತಕ್ಕೆ ರಾಜತಾಂತ್ರಿಕ ಗೆಲುವು – ಇರಾನ್‌ ವಶಪಡಿಸಿಕೊಂಡ ಹಡಗಿನಲ್ಲಿದ್ದ ಐವರು ಭಾರತೀಯ ನಾವಿಕರು ಬಿಡುಗಡೆ

    350 ಕೆಜಿ ಪೇಲೋಡ್‌ನೊಂದಿಗೆ 25 ಕಿಮೀ ಗಿಂತ ಹೆಚ್ಚು ಪ್ರಯಾಣಿಸುವ ಸಾಮರ್ಥ್ಯವಿರುವ ಐದು ಆಸನಗಳ ಡ್ರೋನ್‌ ಮೊದಲ ಪ್ರಯೋಗದಲ್ಲಿ ಪಾಲ್ಗೊಂಡಿತ್ತು. ಎರಡನೇ ಪ್ರಯೋಗವು, ಸಣ್ಣ ಗಾತ್ರದ ಡ್ರೋನ್ ಅನ್ನು ಒಳಗೊಂಡಿತ್ತು. 20 ನಿಮಿಷಗಳ ಅವಧಿಯಲ್ಲಿ 35 ಕಿಮೀ ವರೆಗೆ ಇಬ್ಬರು ಪ್ರಯಾಣಿಕರನ್ನು ಹೊತ್ತು ಪ್ರಯಾಣಿಸುವ ಸಾಮರ್ಥ್ಯವನ್ನು ಇದು ಹೊಂದಿದೆ.

    ಐದು ಆಸನಗಳ ಡ್ರೋನ್, 123 ಕಿಮೀ ವಿಸ್ತಾರವಾದ ಪ್ರದೇಶದಲ್ಲಿ 40 ನಿಮಿಷಗಳ ದಾಖಲೆ ಅವಧಿಯ ಹಾರಾಟ ನಡೆಸಿದೆ. ಡ್ರೋನ್‌ ಹಾರಾಟದಲ್ಲೇ ಇದು ದಾಖಲೆ ಬರೆದಿದೆ. ಇದನ್ನೂ ಓದಿ: ಪಾಕಿಸ್ತಾನದಲ್ಲಿ ಭಯೋತ್ಪಾದಕರಿಂದ ಗುಂಡಿನ ದಾಳಿ – ಮಲಗಿದ್ದಲ್ಲೇ 7 ಕಾರ್ಮಿಕರು ಸಾವು

    MLG ಮಂಡಳಿಯ ಸದಸ್ಯ ಮೊಹಮ್ಮದ್ ಹಮದ್ ಅಲ್ ಧಹೇರಿ ಮಾತನಾಡಿ, ಈ ಐತಿಹಾಸಿಕ ಕ್ಷಣದ ಭಾಗವಾಗಿರುವುದು ನಿಜಕ್ಕೂ ಹರ್ಷದಾಯಕವಾಗಿದೆ. ತಂತ್ರಜ್ಞಾನ ಮತ್ತು ವಾಯುಯಾನದ ಏಕೀಕರಣವು ನಮ್ಮ ರಾಷ್ಟ್ರದ ಪ್ರಗತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

  • ಯುಎಇನಲ್ಲಿ ಮತ್ತೆ ಭಾರೀ ಮಳೆ – ಅಂತಾರಾಷ್ಟ್ರೀಯ ವಿಮಾನ ಹಾರಾಟ ಸ್ಥಗಿತ

    ಯುಎಇನಲ್ಲಿ ಮತ್ತೆ ಭಾರೀ ಮಳೆ – ಅಂತಾರಾಷ್ಟ್ರೀಯ ವಿಮಾನ ಹಾರಾಟ ಸ್ಥಗಿತ

    ದುಬೈ: ಚಂಡಮಾರುತದಿಂದಾಗಿ ಸಂಕಷ್ಟ ಎದುರಿಸಿದ್ದ ಅರಬ್‌ ಸಂಯುಕ್ತ ಸಂಸ್ಥಾನ (UAE)ದಲ್ಲಿ ಎರಡು ವಾರಗಳ ನಂತರ ಮತ್ತೆ ಭಾರೀ ಮಳೆ ಸುರಿಯುತ್ತಿದೆ. ಹಲವಾರು ಅಂತಾರಾಷ್ಟ್ರೀಯ ವಿಮಾನಗಳ ರದ್ದತಿಗೆ ಇದು ಕಾರಣವಾಗಿದೆ.

    ಕಳೆದ ತಿಂಗಳು ದೇಶಕ್ಕೆ ಅಪ್ಪಳಿಸಿದ ಅಭೂತಪೂರ್ವ ಮಳೆಗಿಂತ ಈ ಮಳೆಯು ಕಡಿಮೆ ತೀವ್ರತೆಯಿಂದ ಕೂಡಿರಲಿದೆ. ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸುವಂತೆ ತಿಳಿಸಲಾಗಿದೆ. 1949 ರ ಬಳಿಕ ದುಬೈನಲ್ಲಿ ದಾಖಲೆಯ ಮಳೆಯಾಗಿದೆ. ಇದನ್ನೂ ಓದಿ: ಚೀನಾಗೆ ಮಸ್ಕ್‌ ಭೇಟಿ; ಸಂಪೂರ್ಣ ಸ್ವಯಂ ಚಾಲಿತ ತಂತ್ರಜ್ಞಾನ ಬಿಡುಗಡೆ ಆಗುತ್ತಾ? ಚೀನಾ ಆಯ್ಕೆ ಏಕೆ?

    ಯುಎಇಯಾದ್ಯಂತ ಹವಾಮಾನ ವೈಪರೀತ್ಯವಾಗಿ ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಚಾರ ಸ್ಥಗಿತಗೊಂಡಿದ್ದು, ಹಲವಾರು ವಿಮಾನಗಳನ್ನು ರದ್ದುಗೊಳಿಸಲಾಗಿದೆ.

    ಪ್ರಮುಖ ನಗರಗಳಾದ್ಯಂತ ಭಾರೀ ಗಾಳಿ ಬೀಸುವುದರೊಂದಿಗೆ ಲಘು ಮಳೆ ಬೀಳುತ್ತಿದೆ. ಗುರುವಾರ ಮತ್ತು ಶುಕ್ರವಾರದಂದು ಎಲ್ಲಾ ಸರ್ಕಾರಿ ಮತ್ತು ಖಾಸಗಿ ವಲಯಗಳಿಗೆ ರಿಮೋಟ್ ವರ್ಕ್ ಸಿಸ್ಟಮ್‌ಗೆ ಸೂಚಿಸಲಾಗಿದೆ. ಇದನ್ನೂ ಓದಿ: Hangor Submarines: ಪಾಕ್‌ಗೆ ಸುಧಾರಿತ ಜಲಾಂತರ್ಗಾಮಿ ನೌಕೆ ನೀಡಲು ಚೀನಾ ಗ್ರೀನ್‌ ಸಿಗ್ನಲ್‌!

    ಪ್ರವಾಹಪೀಡತ ಪ್ರದೇಶಗಳಿಂದ ದೂರ ಇರಲು ಸ್ಥಳೀಯರಿಗೆ ಸೂಚಿಸಲಾಗಿದೆ. ಈ ಪ್ರದೇಶಗಳಿಂದ ದೂರವಿರಲು ಮತ್ತು ಸುರಕ್ಷತಾ ಮಾನದಂಡಗಳನ್ನು ಅನುಸರಿಸಲು ತಿಳಿಸಲಾಗಿದೆ. ಯುಎಇ ಪಶ್ಚಿಮ ಪ್ರದೇಶಗಳು, ಕರಾವಳಿ ಹಾಗೂ ಕೆಲವು ಪೂರ್ವ ಪ್ರದೇಶಗಳಲ್ಲಿ ಮಿಂಚು ಮತ್ತು ಗುಡುಗು ಸಹಿತ, ಸಣ್ಣ ಆಲಿಕಲ್ಲು ಮಳೆಯಾಗಿದೆ.

  • ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆ ಬೆನ್ನಲ್ಲೇ ಐಪಿಎಲ್‌ ಪ್ರಿಯರಿಗೆ ಶಾಕ್‌!

    ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆ ಬೆನ್ನಲ್ಲೇ ಐಪಿಎಲ್‌ ಪ್ರಿಯರಿಗೆ ಶಾಕ್‌!

    ಮುಂಬೈ: ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ ಐಪಿಎಲ್‌ (IPL 2024) ಪ್ರೇಮಿಗಳಿಗೆ ಭಾರೀ ಆಘಾತವಾಗಿದೆ. ಐಪಿಎಲ್‌ನ ದ್ವಿತೀಯಾರ್ಧವನ್ನು ದುಬೈಗೆ (ಯುನೈಟೆಡ್ ಅರಬ್ ಎಮಿರೇಟ್ಸ್‌ – UAE) ಸ್ಥಳಾಂತರಿಸಲಾಗುತ್ತದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಅಧಿಕಾರಿ ಮೂಲಗಳು ತಿಳಿಸಿವೆ.

    ಏಪ್ರಿಲ್‌ 19 ರಿಂದ ಆರಂಭಗೊಂಡು ಜೂನ್‌ 4ರ ವರೆಗೆ ಚುನಾವಣಾ (Lok Sabha Elections) ಪ್ರಕ್ರಿಯೆಗಳು ನಡೆಯಲಿವೆ. ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಐಪಿಎಲ್‌ ಪಂದ್ಯಗಳನ್ನು ನಡೆಸಲು ಸಾಧ್ಯವಿಲ್ಲ. ಆದ್ದರಿಂದ ದ್ವಿತೀಯಾರ್ಧದ ಪಂದ್ಯಗಳನ್ನು ದುಬೈನಲ್ಲಿ ನಡೆಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಪೆರ್ರಿ ಆಲ್‌ರೌಂಡರ್‌ ಆಟ – ಮುಂಬೈ ವಿರುದ್ಧ ಜಯ, ಪ್ಲೇ ಆಫ್‌ಗೆ ಆರ್‌ಸಿಬಿ

    ದುಬೈನಲ್ಲಿ ಆಯೋಜನೆ ಇದೇ ಮೊದಲೇನಲ್ಲ:
    ಯುಎಇನಲ್ಲಿ ಐಪಿಎಲ್‌ ಆಯೋಜನೆ ಮಾಡುತ್ತಿರುವುದು ಇದೇ ಮೊದಲೇನಲ್ಲ. 2014, 2019ರ ಲೋಕಸಭಾ ಚುನಾವಣೆ ವೇಳೆಯೂ ಐಪಿಎಲ್‌ನ ದ್ವಿತೀಯಾರ್ಧ ಭಾಗತವನ್ನು ಯುಎಇನಲ್ಲಿ ನಡೆಸಲಾಗಿತ್ತು. ಈ ಬಾರಿ ಆಯೋಜಿಸುತ್ತಿರುವುದು ಸೇರಿದರೆ 3ನೇ ಬಾರಿ ದುಬೈನಲ್ಲಿ ಐಪಿಎಲ್‌ ಆಯೋಜಿಸಿದಂತಾಗುತ್ತದೆ. ಸದ್ಯ ಈ ಬಗ್ಗೆ ಬಿಸಿಸಿಐ ಅಥವಾ ಐಪಿಎಲ್‌ ಸಮಿತಿ ಅಧಿಕೃತವಾಗಿ ಯಾವುದೇ ಮಾಹಿತಿ ಹಂಚಿಕೊಳ್ಳದಿದ್ದರೂ, ಸ್ಥಳಾಂತರಿವುದು ಖಚಿತವಾಗಿವೆ ಎಂದು ಉನ್ನತ ಮೂಲಗಳು ಮಾಹಿತಿ ನೀಡಿವೆ. ಇದನ್ನೂ ಓದಿ: ಹಾಲಿ ಚಾಂಪಿಯನ್ಸ್‌ ಮುಂಬೈ ಮನೆಗೆ – ಆರ್‌ಸಿಬಿ ಮೊದಲಬಾರಿ ಫೈನಲ್‌ಗೆ

    ಐಪಿಎಲ್‌ ಆರಂಭ ಯಾವಾಗ?
    ಬಹುನಿರೀಕ್ಷಿತ 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ ಇದೇ ಮಾರ್ಚ್‌ 22 ರಿಂದ ಆರಂಭವಾಗಲಿದೆ. ಲೋಕಸಭಾ ಚುನಾವಣೆ (Lok Sabha Elections) ಹಿನ್ನೆಲೆ ಮೊದಲ 15 ದಿನಗಳು ಕಾಲ ನಡೆಯುವ 21 ಪಂದ್ಯಗಳ ವೇಳಾಪಟ್ಟಿ ಸದ್ಯಕ್ಕೆ ಪ್ರಕಟಿಸಲಾಗಿದೆ. ಮಾ. 22ರಿಂದ ಏಪ್ರಿಲ್ 7ರ ತನಕ 21 ಪಂದ್ಯಗಳು ನಡೆಯಲಿದ್ದು, ಈ ಪೈಕಿ 4 ಡಬಲ್ ಹೆಡ್ಡರ್ ಪಂದ್ಯಗಳು ನಡೆಯಲಿವೆ. ಉದ್ಘಾಟನಾ ಪಂದ್ಯವು ರಾತ್ರಿ 8 ಗಂಟೆಗೆ ಆರಂಭವಾಗಲಿದೆ. ಉಳಿದ ಪಂದ್ಯಗಳು ಸಂಜೆ 7.30ಕ್ಕೆ ಪ್ರಾರಂಭವಾಗಲಿವೆ. ಡಬಲ್ ಹೆಡ್ಡರ್ ದಿನದಂದು ಮೊದಲ ಪಂದ್ಯ ಮಧ್ಯಾಹ್ನ 3.30ಕ್ಕೆ ಆರಂಭವಾಗಲಿದೆ. ಇದನ್ನೂ ಓದಿ: ಕೊಹ್ಲಿ ಜೊತೆಗೆ ಬಾಬರ್‌, ಧೋನಿ ಜೊತೆಗೆ ರಿಜ್ವಾನ್‌, ಬುಮ್ರಾ ಜೊತೆಗೆ ಶಾಹೀನ್‌ ಶಾ ಅಫ್ರಿದಿ?

    ಯಾರ ನಡುವೆ, ಯಾವ ದಿನ, ಎಲ್ಲಿ ಪಂದ್ಯ?
    1. ಚೆನ್ನೈ ಸೂಪರ್ ಕಿಂಗ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು – ಮಾರ್ಚ್ 22 ಚೆನ್ನೈ,
    2. ಪಂಜಾಬ್ ಕಿಂಗ್ಸ್ vs ಡೆಲ್ಲಿ ಕ್ಯಾಪಿಟಲ್ಸ್, ಮಾರ್ಚ್ 23, ಮೊಹಾಲಿ,
    3. ಕೋಲ್ಕತ್ತಾ ನೈಟ್​ ರೈಡರ್ಸ್ vs ಸನ್​ರೈಸರ್ಸ್ ಹೈದರಾಬಾದ್, ಮಾರ್ಚ್ 23, ಕೋಲ್ಕತ್ತಾ
    4. ರಾಜಸ್ಥಾನ್ ರಾಯಲ್ಸ್ vs ಲಕ್ನೋ ಸೂಪರ್ ಜೈಂಟ್ಸ್, ಮಾರ್ಚ್ 24, ಜೈಪುರ
    5. ಗುಜರಾತ್ ಟೈಟಾನ್ಸ್ vs ಮುಂಬೈ ಇಂಡಿಯನ್ಸ್, ಮಾರ್ಚ್ 24, ಅಹಮದಾಬಾದ್
    6. ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಪಂಜಾಬ್ ಕಿಂಗ್ಸ್, ಮಾರ್ಚ್ 25, ಬೆಂಗಳೂರು
    7. ಚೆನ್ನೈ ಸೂಪರ್ ಕಿಂಗ್ಸ್ vs ಗುಜರಾತ್ ಟೈಟಾನ್ಸ್, ಮಾರ್ಚ್ 26, ಚೆನ್ನೈ
    8. ಸನ್​ರೈಸರ್ಸ್ ಹೈದರಾಬಾದ್ vs ಮುಂಬೈ ಇಂಡಿಯನ್ಸ್, ಮಾರ್ಚ್ 27, ಹೈದರಾಬಾದ್
    9. ಆರ್‌ಆರ್‌ vs ಡೆಲ್ಲಿ ಕ್ಯಾಪಿಟಲ್ಸ್, ಮಾರ್ಚ್ 28 ಜೈಪುರ
    10. ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಕೋಲ್ಕತ್ತಾ ನೈಟ್​ ರೈಡರ್ಸ್, ಮಾರ್ಚ್ 29 ಬೆಂಗಳೂರು
    11. ಲಕ್ನೋ ಸೂಪರ್ ಜೈಂಟ್ಸ್ vs ಪಂಜಾಬ್ ಕಿಂಗ್ಸ್, ಮಾರ್ಚ್ 30, ಲಕ್ನೋ
    12. ಗುಜರಾತ್ ಟೈಟಾನ್ಸ್ vs ಸನ್​ರೈಸರ್ಸ್ ಹೈದರಾಬಾದ್, ಮಾರ್ಚ್ 31, ಅಹಮದಾಬಾದ್
    13. ಡೆಲ್ಲಿ ಕ್ಯಾಪಿಟಲ್ಸ್ vs ಚೆನ್ನೈ ಸೂಪರ್ ಕಿಂಗ್ಸ್, ಮಾರ್ಚ್ 31, ವಿಶಾಖಪಟ್ಟಣಂ
    14. ಮುಂಬೈ ಇಂಡಿಯನ್ಸ್ vs ರಾಜಸ್ಥಾನ್ ರಾಯಲ್ಸ್, ಏಪ್ರಿಲ್ 1, ಮುಂಬೈ
    15. ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಲಕ್ನೋ ಸೂಪರ್ ಜೈಂಟ್ಸ್, ಏಪ್ರಿಲ್ 2, ಬೆಂಗಳೂರು
    16. ಡೆಲ್ಲಿ ಕ್ಯಾಪಿಟಲ್ಸ್ vs ಕೋಲ್ಕತ್ತಾ ನೈಟ್​ ರೈಡರ್ಸ್, ಏಪ್ರಿಲ್ 3, ವಿಶಾಖಪಟ್ಟಣಂ
    17. ಗುಜರಾತ್ ಟೈಟಾನ್ಸ್ vs ಪಂಜಾಬ್ ಕಿಂಗ್ಸ್, ಏಪ್ರಿಲ್ 4, ಅಹಮದಾಬಾದ್
    18. ಸನ್​ರೈಸರ್ಸ್ ಹೈದರಾಬಾದ್ vs ಚೆನ್ನೈ ಸೂಪರ್ ಕಿಂಗ್ಸ್, ಏಪ್ರಿಲ್ 5, ಹೈದರಾಬಾದ್
    19. ರಾಜಸ್ಥಾನ್ ರಾಯಲ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು, ಏಪ್ರಿಲ್ 6, ಜೈಪುರ
    20. ಮುಂಬೈ ಇಂಡಿಯನ್ಸ್ vs ಡೆಲ್ಲಿ ಕ್ಯಾಪಿಟಲ್ಸ್, ಏಪ್ರಿಲ್ 7, ಮುಂಬೈ
    21. ಲಕ್ನೋ ಸೂಪರ್ ಜೈಂಟ್ಸ್ vs ಗುಜರಾತ್ ಟೈಟಾನ್ಸ್, ಏಪ್ರಿಲ್ 7, ಲಕ್ನೋ