ಹೈದರಾಬಾದ್: ಕನ್ನಡದಲ್ಲಿ ಕಥೆಗಳಿಲ್ಲ ಎಂಬ ಬಗ್ಗೆ ಆಗಾಗ ಚರ್ಚೆಗಳಾಗುತ್ತವೆ. ಇಂಥಾ ಮಾತಾಡುವವರನ್ನು ಜನ ಬೇಷರತ್ತಾಗಿಯೇ ತರಾಟೆಗೆ ತೆಗೆದುಕೊಳ್ಳುತ್ತಲೂ ಇದ್ದಾರೆ. ಆದರೆ ಕನ್ನಡದಲ್ಲಿ ಪರಭಾಷೆಗಳನ್ನೇ ಅದುರಿಸುವಂಥಾ ಚಮತ್ಕಾರಿಕ ಕಥೆಗಳಿದ್ದಾವೆಂಬ ಖದರ್ರೂ ಕೂಡಾ ಆಗಾಗ ಪ್ರದರ್ಶನಗೊಳ್ಳುತ್ತಿರುತ್ತವೆ. ಸದ್ಯ ತೆಲುಗು ಭಾಷೆಯಲ್ಲೂ ಕನ್ನಡದ ಹಿರಿಮೆಯನ್ನು ಪವನ್ ಕುಮಾರ್ ನಿರ್ದೇಶನದ ಯು ಟರ್ನ್ ಚಿತ್ರ ಎತ್ತಿ ಹಿಡಿದಿದೆ.
ಯೂ ಟರ್ನ್ ಚಿತ್ರ ತೆಲುಗಿಗೆ ರೀಮೇಕ್ ಆಗುತ್ತಿರೋ ವಿಚಾರ ಎಲ್ಲರಿಗೂ ಗೊತ್ತೇ ಇದೆ. ಯೂ ಟರ್ನ್ ಹೆಸರಿನಲ್ಲಿಯೇ ತೆಲುಗಿನಲ್ಲಿಯೂ ತಯಾರಾಗುತ್ತಿರೋ ಈ ಚಿತ್ರದಲ್ಲಿ ಶ್ರದ್ಧಾ ಶ್ರೀನಾಥ್ ಅಭಿನಯಿಸಿದ್ದ ಪಾತ್ರದಲ್ಲಿ ಸಮಂತಾ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಕನ್ನಡದಲ್ಲಿ ನೋಡಿ ಬಹುವಾಗಿ ಇಷ್ಟಪಟ್ಟಿದ್ದ ಸಮಂತಾ ಇದೀಗ ಮೂಲ ನಿರ್ದೇಶಕ ಪವನ್ ಕುಮಾರ್ ಪರಿಶ್ರಮ, ಟ್ಯಾಲೆಂಟನ್ನು ಮೆಚ್ಚಿ ಕೊಂಡಾಡಿದ್ದಾಳೆ.

ಈ ಚಿತ್ರ ತೆಲುಗಿಗೆ ರೀಮೇಕ್ ಆಗುವ ಮಾತುಕತೆ ನಡೆದು ಮುಖ್ಯ ಪಾತ್ರಕ್ಕೆ ಸಮಂತಾಳನ್ನು ಅಪ್ರೋಚ್ ಮಾಡಿದ್ದಾಗಲೇ ಆಕೆ ಥ್ರಿಲ್ ಆಗಿದ್ದಳಂತೆ. ಅದಾಗಲೇ ಕನ್ನಡದ ಯೂ ಟರ್ನ್ ಚಿತ್ರವನ್ನು ನೋಡಿ ಬಹುವಾಗಿ ಮೆಚ್ಚಿಕೊಂಡಿದ್ದ ಸಮಂತಾ ಅದೇ ಚಿತ್ರದ ಪಾತ್ರ ತನಗೊಲಿದು ಬಂದಿದ್ದರ ಬಗ್ಗೆ ಖುಷಿಯಾಗಿದ್ದಳಂತೆ. ಅದಾದ ನಂತರದಲ್ಲಿ ಕೇವಲ ನಟಿಯಾಗಿ ತನ್ನ ಪಾತ್ರವನ್ನು ಮಾತ್ರವೇ ಮಾಡದೇ ಇದನ್ನು ತನ್ನ ಚಿತ್ರ ಎಂಬ ಕಕ್ಕುಲಾತಿಯಿಂದ ಪ್ರಮೋಷನ್ ನಲ್ಲೂ ತೊಡಗಿಕೊಂಡಿರೋ ಸಮಂತಾ ಬಗ್ಗೆ ಪವನ್ ಕೂಡಾ ಮೆಚ್ಚುಗೆಯ ಮಾತಾಡಿದ್ದಾರೆ.
ಇಂಥಾದ್ದೊಂದು ಭಿನ್ನ ಆಲೋಚನೆಯ ಚಿತ್ರ ಮಾಡಿ ತನಗೆ ನಟಿಸಲು ಅನುವು ಮಾಡಿ ಕೊಟ್ಟಿರೋ ಪವನ್ ಕುಮಾರ್ ಅವರನ್ನು ಮೆಚ್ಚಿಕೊಳ್ಳುತ್ತಲೇ, ಒಂದು ಕಥೆಯನ್ನು ಡಿಫರೆಂಟಾಗಿ ನಿರೂಪಣೆ ಮಾಡಿರೋ ಪವನ್ ಕಲೆಗಾರಿಕೆಯನ್ನೂ ಕೂಡಾ ಸಮಂತಾ ಕೊಂಡಾಡಿದ್ದಾಳೆ.
ಈ ಮೂಲಕವೇ ಒಂದಷ್ಟು ಕಾಲ ಖಾಸಗಿ ಜೀವನದಲ್ಲಿ ಕಳೆದು ಹೋಗಿದ್ದ ಸಮಂತಾಗೆ ಗ್ರ್ಯಾಂಡ್ ಎಂಟ್ರಿ ಸಿಕ್ಕಂತಾಗಿದೆ. ಮೊನ್ನೆಯಷ್ಟೇ ಈ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿತ್ತು. ಅದಕ್ಕೆ ವ್ಯಾಪಕ ಮೆಚ್ಚುಗೆ ಸಿಕ್ಕಿದೆ. ಆ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿಯೂ ವೈರಲ್ ಆಗಿದೆ.
https://twitter.com/Samanthaprabhu2/status/1020941653442379776