Tag: tweet

  • ದೇಶವೆಂದರೆ ಮಣ್ಣಲ್ಲ, ಮನುಷ್ಯರು – ಬಿಜೆಪಿ ವಿರುದ್ಧ ಹೆಚ್‍ಡಿಕೆ ಟ್ವೀಟ್

    ದೇಶವೆಂದರೆ ಮಣ್ಣಲ್ಲ, ಮನುಷ್ಯರು – ಬಿಜೆಪಿ ವಿರುದ್ಧ ಹೆಚ್‍ಡಿಕೆ ಟ್ವೀಟ್

    ಬೆಂಗಳೂರು: ದೇಶವೆಂದರೆ ಮಣ್ಣಲ್ಲ, ಮನುಷ್ಯರು ಎಂದು ಬಿಜೆಪಿ ವಿರುದ್ಧ ಸರಣಿ ಟ್ವೀಟ್ ಮಾಡುವ ಮೂಲಕ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಹರಿಹಾಯ್ದಿದ್ದಾರೆ.

    ರಾಜ್ಯದಲ್ಲಿ ಹಲಾಲ್ ಕಟ್ ಸಂಘರ್ಷದ ನಡುವೆ ಹೆಚ್.ಡಿ ಕುಮಾರಸ್ವಾಮಿ ಅವರು ತಮ್ಮ ಟ್ವಿಟ್ಟರ್‌ನಲ್ಲಿ, ಕರಪತ್ರಗಳನ್ನು ಹಂಚಿ ಸಮಾಜ ಒಡೆಯುತ್ತಿರುವ ವಿಶ್ವ ಹಿಂದೂ ಪರಿಷತ್, ಬಜರಂಗದಳದ ಬಗ್ಗೆ ನನ್ನ ಹೇಳಿಕೆಯಲ್ಲಿ ಯಾವ ಬದಲಾವಣೆಯೂ ಇಲ್ಲ. ಧರ್ಮ-ಜಾತಿ ಆಧಾರದ ಮೇಲೆ ಜನರನ್ನು ವಿಘಟಿಸುವ ಇಂಥ ಸಂಘಟನೆಗಳ ಕಿಡಿಗೇಡಿಗಳ ಬಗ್ಗೆ ನನ್ನ ನಿಲುವು ಅಚಲ. ‘ಧರ್ಮೋದ್ಧಾರದ ಸೋಗಿನಲ್ಲಿ ಅಶಾಂತಿ’ ಸೃಷ್ಟಿಸುವ ಕೃತ್ಯವನ್ನು ಸಹಿಸುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.

    ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟ. ಇದು ವಿಶ್ವ ಹಿಂದೂ ಪರಿಷತ್, ಬಜರಂಗದಳದ ಜಹಗೀರಲ್ಲ. ಇವೇನು ಹಿಂದೂಗಳ ಪ್ರಾತಿನಿಧಿಕ ಸಂಸ್ಥೆಗಳೂ ಅಲ್ಲ. ಒಂದು ರಾಜಕೀಯ ಪಕ್ಷದ ಬಾಲಂಗೋಚಿಗಳಷ್ಟೇ. ಹಿಂದೂ, ಹಿಂದುತ್ವ ಎನ್ನುವ ಪರಂಪರೆ ಇವರ ಗುತ್ತಿಗೆಯಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕೇವಲ 1 ರೂ. ಸಂಬಳ ತೆಗೆದುಕೊಳ್ಳುತ್ತೇನೆ: ಪಂಜಾಬ್‌ನ ಹೊಸ ಅಡ್ವೊಕೇಟ್ ಜನರಲ್

    ಧರ್ಮೋ ರಕ್ಷತಿ ರಕ್ಷಿತಃ ಎನ್ನುವುದರ ಅರಿವು ನನಗೂ ಇದೆ. ಧರ್ಮ ರಕ್ಷಣೆ ಎಂದರೆ ಇನ್ನೊಬ್ಬರನ್ನು ಕಸಿಯುವುದಲ್ಲ? ನೆಮ್ಮದಿಯ ನಾಡಿಗೆ ಕಿಚ್ಚಿಡುವುದಲ್ಲ? ಮನಸ್ಸುಗಳನ್ನು ಒಡೆದು ದೇಶವನ್ನು ಒಡೆದ ಮಡಿಕೆ ಮಾಡುವುದಲ್ಲ. ದೇಶವೆಂದರೆ ಮಣ್ಣಲ್ಲ, ಮನುಷ್ಯರು ಎಂದು ಹೇಳಿದ್ದಾರೆ.

    ವಿಶ್ವ ಹಿಂದೂ ಪರಿಷತ್, ವಿಶ್ವ ವಿನಾಶಕ ಪರಿಷತ್ ಅಥವಾ ಧರ್ಮ ವಿನಾಶಕ ಪರಿಷತ್ ಆಗುವುದು ಬೇಡ. ಬಜರಂಗದಳ ಭಾವನೆಗಳ ಭಯೋತ್ಪಾದಕ ಆಗುವುದು ಬೇಡ. ಹಿಂದೂ ಧರ್ಮದ ನಾಶ ಚಕ್ರವರ್ತಿ, ಸಾಮ್ರಾಟರಿಗೇ ಆಗಲಿಲ್ಲ. ಹಿಂದುತ್ವ ಅಂದೂ ಉಳಿದಿತ್ತು, ಮುಂದೆಯೂ ಉಳಿಯುತ್ತದೆ. ನಿಮ್ಮ ಕಿತಾಪತಿ ಏಕೆ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಉಡ್ತಾ ಪಂಜಾಬ್‌ ಅಲ್ಲ, ಪ್ರಗತಿಪರ ಪಂಜಾಬ್‌: ಭಗವಂತ್‌ ಮಾನ್‌

    ಕೊರೊನಾ ಕಾಲದಲ್ಲಿ ನೀವೊಬ್ಬರೇ ಜನರ ಸೇವೆ ಮಾಡಿಲ್ಲ. ಎಲ್ಲರೂ ಜಾತಿ, ಧರ್ಮ ಮೀರಿ ಸೇವೆ ಮಾಡಿದ್ದಾರೆ. ಶವ ಸಂಸ್ಕಾರದಲ್ಲೂ ಕೀರ್ತಿಯನ್ನು ಹುಡುಕುವ ನಿಮ್ಮಗಳ ವಿಕೃತ ಮನಸ್ಥಿತಿಗೆ ನನ್ನ ಮರುಕವಿದೆ. ಇದಾ ನಿಮ್ಮ ಧರ್ಮ ಎಂದು ಕಿಡಿಕಾರಿದ್ದಾರೆ.

    ಸೋಂಕಿಗೆ ಬಲಿಯಾದವರ ಪಾರ್ಥೀವ ಶರೀರಗಳನ್ನು ನೀವು ಬಾಲಂಗೋಚಿ ಆಗಿರುವ ಪಕ್ಷದ ಸರ್ಕಾರ ಹೇಗೆ ಕಂಡಿತು ಎಂಬುದಕ್ಕೆ ದಿವಂಗತ ಕೇಂದ್ರ ಮಂತ್ರಿ ಸುರೇಶ್ ಅಂಗಡಿಯವರೇ ಸಾಕ್ಷಿ. ಅವರ ಅಂತ್ಯಕ್ರಿಯೆ ಹೇಗಾಯಿತು ಎಂದು ಮಾಧ್ಯಮಗಳ ಮೂಲಕ ಕಣ್ಣಾರೆ ನೋಡಿದ್ದೇನೆ.

    ಅಂದು ಕೇಂದ್ರ-ರಾಜ್ಯ ಸರಕಾರಗಳ ವೈಫಲ್ಯಗಳು ಯಾವ ಮಟ್ಟದಲ್ಲಿದ್ದವು? ಬೆಂಗಳೂರಿನಲ್ಲಿ ಯಾರೆಲ್ಲಾ ಶವ ಸಂಸ್ಕಾರ ಮಾಡಿದರು ಎನ್ನುವುದನ್ನು ನಾವೂ ಮಾಧ್ಯಮಗಳಲ್ಲಿ ಕಂಡಿದ್ದೇವೆ. ಆಗ ಇವರೆಲ್ಲ ಎಲ್ಲಿದ್ದರೋ ನನಗಂತೂ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

    ಡಿಜೆ ಹಳ್ಳಿ ಗಲಭೆ ಕಾರಣದ ಬಗ್ಗೆ ನೀವು ಏಕೆ ದನಿಯೆತ್ತುವುದಿಲ್ಲ? ಠಾಣೆಗೆ ಬೆಂಕಿ ಬಿದ್ದಾಗ ಅದರಲ್ಲಿ ಚಳಿ ಕಾಯಿಸಿಕೊಂಡವರು ನೀವು. ಧರ್ಮದ ಪಾಠ ಮಾಡುವ ನೀವು, ಧರ್ಮಗುರುಗಳಿಗೆ ಗೌರವ ಕೊಡಬೇಕು ಎನ್ನುವುದನ್ನೂ ತಿಳಿದಿರಬೇಕಲ್ಲವೇ? ನೀವು ಬಾಲಂಗೋಚಿ ಆಗಿರುವ ಸರ್ಕಾರದ ಬೇಹುಗಾರಿಕೆ ವಿಭಾಗ ನಿದ್ದೆ ಮಾಡುತ್ತಿತ್ತು, ಏಕೆ ಎಂದು ಪ್ರಶ್ನಿಸುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಪಂಜಾಬ್‍ನಲ್ಲಿ `ಆಪ್’ ಸುನಾಮಿಗೆ ಕಾಂಗ್ರೆಸ್ ತತ್ತರ- ಚನ್ನಿ, ಸಿಧು, ಕ್ಯಾಪ್ಟನ್‍ಗೆ ಹೀನಾಯ ಸೋಲು

    ಧರ್ಮ ರಕ್ಷಣೆ ಎಂದರೆ ಶಿವಮೊಗ್ಗದಲ್ಲಿ ಸಚಿವರೇ 144 ಸೆಕ್ಷನ್ ಉಲ್ಲಂಘಿಸುವುದಾ? ಅವರೇ ನಿಂತು ಹಿಂಸೆಗೆ ಪ್ರಚೋದನೆ ಕೊಡುವುದಾ? ನಾವ್ಯಾರೂ ಹೀಗೆ ಮಾಡಿಲ್ಲ. ಸಮಾಜಘಾತುಕ ಶಕ್ತಿಗಳನ್ನು ಮಟ್ಟ ಹಾಕಿ ಎಂದು ನೇರವಾಗಿ ಹೇಳಿದ್ದೇನೆ. ಹಿಜಬ್ ಗಲಾಟೆ ಹಿಂದಿರುವ ಕಾಣದ ಕೈಗಳಿಗೆ ಕೊಳ ಹಾಕಿ ಎಂದು ಸದನದಲ್ಲೇ ಆಗ್ರಹಿಸಿದ್ದೇನೆ ಎಂದಿದ್ದಾರೆ.

    ಜಗತ್ತಿಗೆ ಶಾಂತಿ ಸಂದೇಶ ಕೊಟ್ಟ ಕುವೆಂಪು ಅವರು ಜನಿಸಿದ ಶಿವಮೊಗ್ಗ ಜಿಲ್ಲೆಯಲ್ಲಿ ಪ್ರತಿ ಹಬ್ಬ-ಹರಿದಿನದಲ್ಲಿ ನೀವು ಮಾಡುತ್ತಿರುವುದೇನು? ಸೂಕ್ಷ್ಮ ಭಾವನೆಗಳನ್ನು ಕೆರಳಿಸಿ? ಅಶಾಂತಿಯ ಅಶ್ವಮೇಧ? ನಡೆಸುತ್ತಿದ್ದೀರಿ. ಬೆಂಕಿ ಹಾಕುವುದು, ಕಲ್ಲು ಹೊಡೆಯುವುದು ನನ್ನ ಅಥವಾ ನನ್ನ ಪಕ್ಷದ ಸಂಸ್ಕೃತಿ ಅಲ್ಲ ಎಂದು ತಿಳಿಸಿದ್ದಾರೆ.

    ನಿಮಗೆ ದೇಶ, ಸಂವಿಧಾನದ ಮೇಲೆ ಗೌರವ ಇಲ್ಲ. ಜನರೆಂದರೆ ನಿಮ್ಮ ಪಾಲಿಗೆ ?ಭಾವನೆಗಳ ದಾಳಗಳು? ಮಾತ್ರ. ನಿಜವಾದ ಹಿಂದೂ ಎಂದೂ ಸಮಾಜ ಒಡೆಯಲಾರ. “ಹಿಂದೂ ಎಂದರೆ ಎಲ್ಲರೂ ಒಂದು” ಎನ್ನುವ ಆದರ್ಶ & ಪರಂಪರಾಗತ ನಂಬಿಕೆ. ಈ ನಂಬಿಕೆಯ ಮೇಲೆಯೇ ಭಾರತ ನಿಂತಿದೆ. ಭಾವನೆಗಳನ್ನು ಹೇರಿ ಭಾರತವನ್ನು ಒಡೆಯಲು ನಿಮ್ಮಿಂದ ಸಾಧ್ಯವಿಲ್ಲ ಎಂದಿದ್ದಾರೆ.

  • ಮುಖ್ಯಮಂತ್ರಿಗಳೇ, ಕೋಮುಗಳ ನಡುವಿನ ವಿಭಜನೆ ತಡೆಯಿರಿ: ಕಿರಣ್‌ ಮಜುಂದಾರ್‌ ಶಾ ಒತ್ತಾಯ

    ಮುಖ್ಯಮಂತ್ರಿಗಳೇ, ಕೋಮುಗಳ ನಡುವಿನ ವಿಭಜನೆ ತಡೆಯಿರಿ: ಕಿರಣ್‌ ಮಜುಂದಾರ್‌ ಶಾ ಒತ್ತಾಯ

    ಬೆಂಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ಧಾರ್ಮಿಕ ವಿಭಜನೆ ಬಿಕ್ಕಟ್ಟನ್ನು ಪರಿಹರಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬಯೋಕಾನ್‌ ಮುಖ್ಯಸ್ಥೆ ಕಿರಣ್‌ ಮಜುಂದಾರ್‌ ಶಾ ಅವರು ತಾಕೀತು ಮಾಡಿದ್ದಾರೆ.

    ಜಾತ್ರೆ, ಉತ್ಸವ ಸಂದರ್ಭದಲ್ಲಿ ದೇವಸ್ಥಾನಗಳಲ್ಲಿ ಮುಸ್ಲಿಂ ವ್ಯಾಪಾರಿಗಳನ್ನು ನಿಷೇಧಿಸುವಂತೆ ಬಲಪಂಥೀಯ ಗುಂಪುಗಳ ನೀಡಿರುವ ಕರೆಗೆ ಸಂಬಂಧಿಸಿದಂತೆ ಕಿರಣ್ ಮಜುಂದಾರ್-ಶಾ ಟ್ವಿಟ್ಟರ್‌ ಮೂಲಕ ಪ್ರತಿಕ್ರಿಯಿಸಿದ್ದಾರೆ. ತಂತ್ರಜ್ಞಾನ ಕ್ಷೇತ್ರವು ಕೋಮುವಾದಿಯಾದರೆ ಅದು ಭಾರತದ ಜಾಗತಿಕ ನಾಯಕತ್ವವನ್ನು ನಾಶ ಮಾಡುತ್ತದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿರೋದು ಬಿಜೆಪಿ ಸರ್ಕಾರ, RSS, VHP, ಬಜರಂಗದಳವಲ್ಲ: ಹೆಚ್.ವಿಶ್ವನಾಥ್ ಕಿಡಿ

    ಟ್ವೀಟ್‌ನಲ್ಲೇನಿದೆ?
    ಎಲ್ಲಾ ಸಮುದಾಯಗಳನ್ನೂ ಒಳಗೊಂಡ ಆರ್ಥಿಕ ಅಭಿವೃದ್ಧಿಯನ್ನು ಕರ್ನಾಟಕ ರೂಪಿಸಿದೆ. ಇಲ್ಲಿ ಕೋಮುವಾದಕ್ಕೆ ಅನುಮತಿ ನೀಡಬಾರದು. ಐಟಿಬಿಟಿ ಯಂತಹ ಕ್ಷೇತ್ರಗಳಲ್ಲಿ ಕೋಮುವಾದ ಬೆಳೆದರೆ, ಅದು ನಮ್ಮ ಜಾಗತಿಕ ನಾಯಕತ್ವವನ್ನು ನಾಶಪಡಿಸುತ್ತದೆ. ಬಸವರಾಜ ಬೊಮ್ಮಾಯಿ ಅವರೇ, ದಯವಿಟ್ಟು ಕೋಮುಗಳ ನಡುವಿನ ವಿಭಜನೆಯನ್ನು ತಡೆಯಿರಿ ಎಂದು ಟ್ವೀಟ್‌ ಮಾಡಿ ಕಿರಣ್‌ ಮಜುಂದಾರ್‌ ಅವರು ಒತ್ತಾಯಿಸಿದ್ದಾರೆ.

    ಬೊಮ್ಮಾಯಿ ಮತ್ತು ಕಿರಣ್‌ ಶಾ ಅವರಿಗೆ ಟ್ಯಾಗ್‌ ಮಾಡಿ ವ್ಯಕ್ತಿಯೊಬ್ಬ, ಬೊಮ್ಮಾಯಿ ಅವರು ಕೋಮುಗಳ ನಡುವಿನ ವಿಭಜನೆಯನ್ನು ಹೆಚ್ಚಿಸುತ್ತಾರೆ. ನಮ್ಮ ಕಣ್ಣೆದುರೇ ಕರ್ನಾಟಕ ಬಿಕ್ಕಟ್ಟು ಬಗೆಹರಿಸುವಲ್ಲಿ ವಿಫಲವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಹಲಾಲ್ ಧಾರ್ಮಿಕ ಆಚರಣೆ, ಇದರಲ್ಲಿ ಸರ್ಕಾರ ಮೂಗು ತೂರಿಸುವುದಿಲ್ಲ: ಬಿ.ಸಿ ನಾಗೇಶ್

    ಇದಕ್ಕೆ ಪ್ರತಿಕ್ರಿಯಿಸಿರುವ ಕಿರಣ್‌ ಶಾ ಅವರು, ನಮ್ಮ ಮುಖ್ಯಮಂತ್ರಿಗಳು ಪ್ರಗತಿಪರ ನಾಯಕ. ಈ ಬಿಕ್ಕಟ್ಟನ್ನು ಅವರು ಪರಿಹರಿಸುತ್ತಾರೆಂಬ ಭರವಸೆಯಿದೆ ಎಂದು ಆಶಯ ವ್ಯಕ್ತಪಡಿಸಿದ್ದಾರೆ.

  • ಟಿಪ್ಪು ಇತಿಹಾಸ ತಾಲಿಬಾನ್‌, ಐಸಿಸ್‌ ಮತಾಂಧರಷ್ಟೇ ಘೋರ: ಬಿಜೆಪಿ ವಾಗ್ದಾಳಿ

    ಟಿಪ್ಪು ಇತಿಹಾಸ ತಾಲಿಬಾನ್‌, ಐಸಿಸ್‌ ಮತಾಂಧರಷ್ಟೇ ಘೋರ: ಬಿಜೆಪಿ ವಾಗ್ದಾಳಿ

    ಬೆಂಗಳೂರು: ಟಿಪ್ಪು ಸುಲ್ತಾನ್‌ ಈ ದೇಶದ ಸ್ವಾತಂತ್ರ್ಯ ಯೋಧ ಎನ್ನುವುದೇ ಒಂದು ಉತ್ಪ್ರೇಕ್ಷೆ ಹಾಗೂ ತಿರುಚಿದ ಸತ್ಯ ಎಂದು ಬಿಜೆಪಿ ವ್ಯಂಗ್ಯವಾಡಿದೆ.

    tippu

    #ಟಿಪ್ಪುಸುಳ್ಳುಇತಿಹಾಸ ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಸರಣಿ ಟ್ವೀಟ್‌ ಮಾಡಿರುವ ಬಿಜೆಪಿ, ಟಿಪ್ಪು ಸುಲ್ತಾನ್ ಈ ದೇಶದ ಸ್ವಾತಂತ್ರ್ಯ ಯೋಧ ಎನ್ನುವುದೇ ಒಂದು ಉತ್ರ್ಪೇಕ್ಷೆ ಹಾಗೂ ತಿರುಚಿದ ಸತ್ಯ. ಶಾಲಾ- ಪಠ್ಯ ಕ್ರಮದಲ್ಲಿ ಇಂಥ ಸುಳ್ಳುಗಳೇಕೆ ಇರಬೇಕು? ವಿದ್ಯಾರ್ಥಿಗಳಿಗೆ ಮತಾಂಧರ ತಿರುಚಿದ ಇತಿಹಾಸ ಕಲಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದೆ. ಇದನ್ನೂ ಓದಿ: ರಾಜಕೀಯ ವಿರೋಧಿಗಳನ್ನು ಹತ್ತಿಕ್ಕಲು ಹಿಂಸಾಚಾರ ಬಳಸೋದು ಹಕ್ಕುಗಳ ಉಲ್ಲಂಘನೆ: ಮೋದಿ

    ಬಿಜೆಪಿ ಟ್ವೀಟ್‌ನಲ್ಲೇನಿದೆ?
    ಉತ್ತರ ಭಾರತದಲ್ಲಿ ಔರಂಗಜೇಬ್, ದಕ್ಷಿಣದಲ್ಲಿ ಟಿಪ್ಪು ಸುಲ್ತಾನ್ ಮತಾಂಧ ʼರಾಜಸತ್ತೆʼಯ ಸೃಷ್ಟಿಕರ್ತರು. ಕತ್ತಿಯ ಮೊನೆಯಿಂದ ಅಮಾಯಕರ ಬದುಕು ಕಸಿದುಕೊಂಡ ಮತಾಂಧರಿವರು. ಇಂಥ ಮತೀಯ ಸುಳ್ಳು ಇತಿಹಾಸವನ್ನು ನಮ್ಮ ಮಕ್ಕಳು ಓದಬೇಕೇ?

    ನೆತ್ತರಕೆರೆ, ಮಡಿಕೇರಿಯಲ್ಲಿ ಟಿಪ್ಪು ನಡೆಸಿದ ನರಮೇಧ ಮರೆಯಲು ಸಾಧ್ಯವೇ? ‌ಮತಾಂತರವಾಗು, ಶರಣಾಗು, ಇಲ್ಲವೇ ಪ್ರಾಣತ್ಯಾಗ ಮಾಡು ಎಂಬುದು ಟಿಪ್ಪು ರಾಜನೀತಿ. ಒಂದೇ ಒಂದು ಯುದ್ಧವನ್ನು ನೇರಮಾರ್ಗದಲ್ಲಿ ಗೆಲ್ಲದ‌ ಮತಾಂಧನಿಗೆ ʼಮೈಸೂರು ಹುಲಿʼ ಎಂಬ ಬಿರುದು ಪ್ರಾಪ್ತವಾಗಿದ್ದೇ ಒಂದು ಚೋದ್ಯ. ನೈಜತೆ ಬಯಲಾಗಲೇಬೇಕಲ್ಲವೇ?

    ಟಿಪ್ಪು ಇತಿಹಾಸ ಎಂದರೆ ಅದು ತಾಲಿಬಾನ್, ಐಸಿಸ್ ಮತಾಂಧರಷ್ಟೇ ಘೋರ. ಕಾಶ್ಮೀರದಲ್ಲಿ ಮತಾಂಧರು ನಡೆಸಿದ ನರಮೇಧವನ್ನೂ ಮೀರಿದ ಕೃತ್ಯವನ್ನು ಟಿಪ್ಪು ನಡೆಸಿದ್ದಾನೆ ಎಂಬುದಕ್ಕೆ ಸಾಕಷ್ಟು ದಾಖಲೆಗಳಿವೆ. ಸತ್ಯವನ್ನು‌ ಮುಚ್ಚಿಟ್ಟು ಉದಾತ್ತ, ಸ್ವಾತಂತ್ರ್ಯ ವೀರ ಎಂದು ಬಣ್ಣಿಸುವುದು ದೇಶದ ಇತಿಹಾಸಕ್ಕೆ‌ ಮಾಡುವ ಅಪಮಾನ.

    ಮತಬ್ಯಾಂಕ್ ಗಟ್ಟಿಮಾಡಿಕೊಳ್ಳುವ ಉದ್ದೇಶದಿಂದ ಸಿದ್ದರಾಮಯ್ಯ ಅವರು ತಮ್ಮ ಅವಧಿಯಲ್ಲಿ ಟಿಪ್ಪು ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವಾಗಿ ಆಚರಿಸಲು ಆದೇಶ ನೀಡಿದರು. ಟಿಪ್ಪು ನಡೆಸಿದ ಹತ್ಯಾಕಾಂಡಕ್ಕೆ‌ ಟಿಪ್ಪುರಾಮಯ್ಯ ಒಪ್ಪಿಗೆಯ ಮುದ್ರೆ ನೀಡಿದ್ದರು. ಈಗ ಅದೇ ಭಜಕರ ಗುಂಪು ಟಿಪ್ಪು ಸುಳ್ಳು ಇತಿಹಾಸ ಬಯಲಾಗುವುದಕ್ಕೆ ಅಡ್ಡಿಪಡಿಸುತ್ತಿದ್ದಾರೆ. ಇದನ್ನೂ ಓದಿ: ಮಾನವೀಯತೆ ಇರುವುದು ನಿಜವೇ? – ಸಿಎಂ ಕೇಜ್ರಿವಾಲ್‌ಗೆ ಅಗ್ನಿಹೋತ್ರಿ ಪ್ರಶ್ನೆ

    ಟಿಪ್ಪು ಮಾತ್ರವಲ್ಲ ಶಾಲಾ ಪಠ್ಯಕ್ರಮದಲ್ಲಿ ಸೇರಿದ ಎಲ್ಲಾ ಸುಳ್ಳು ಇತಿಹಾಸಗಳ ಪರಿಷ್ಕರಣೆಯಾಗಬೇಕು. ಇತಿಹಾಸ ಎಂದರೆ ‘ಹೀಗೆ ಇತ್ತು’ ಎಂಬ ರೀತಿಯ ವಾಸ್ತವ ಸತ್ಯದಲ್ಲಿರಬೇಕೇ ಹೊರತು ಸುಳ್ಳಿನಿಂದ ಕೂಡಿರಬಾರದು. ಆದರೆ ಈಗ ನಾವು ಓದುತ್ತಿರುವ ಇತಿಹಾಸ, ‘ಕಾಂಗ್ರೆಸ್ ಕೈಪಿಡಿ’ ಎಂದು ಬಿಜೆಪಿ ಟ್ವೀಟ್‌ ಮೂಲಕ ಕಾಂಗ್ರೆಸ್‌ ವಿರುದ್ಧ ಹರಿಹಾಯ್ದಿದೆ.

  • ಶ್ಯಾಮನೂರು ಶಿವಶಂಕರಪ್ಪನವರದ್ದು ಎಷ್ಟನೇ ಬಣ – ಸಿದ್ದುಗೆ ಬಿಜೆಪಿ ಪ್ರಶ್ನೆ

    ಶ್ಯಾಮನೂರು ಶಿವಶಂಕರಪ್ಪನವರದ್ದು ಎಷ್ಟನೇ ಬಣ – ಸಿದ್ದುಗೆ ಬಿಜೆಪಿ ಪ್ರಶ್ನೆ

    ಬೆಂಗಳೂರು: ಸಿದ್ದರಾಮಯ್ಯ ಅವರೇ ಶ್ಯಾಮನೂರು ಶಿವಶಂಕರಪ್ಪ ಅವರದ್ದು ಕಾಂಗ್ರೆಸ್‍ನಲ್ಲಿ ಎಷ್ಟನೇ ಬಣ ಎಂದು ಬಿಜೆಪಿ ಟ್ವೀಟ್ ಮಾಡುವ ಮೂಲಕ ಪ್ರಶ್ನಿಸಿದೆ.

    ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಮುಂದಿನ ಮುಖ್ಯಮಂತ್ರಿ ನಾನೇ ಆಗಿರುತ್ತೇನೆ. ದಾವಣಗೆರೆ ದಕ್ಷಿಣದಿಂದ ಮುಂದೆ ಸ್ಪರ್ಧಿಸುವುದಕ್ಕೆ ನನ್ನ ಬಳಿ ಹಣ ಇಲ್ವಾ? ನನ್ನ ಬಳಿ ಶಕ್ತಿ ಇಲ್ವಾ? ಮುಂದೆ ಪಕ್ಷ ಅಧಿಕಾರಕ್ಕೆ ಬಂದರೆ ನಾನು ಮುಖ್ಯಮಂತ್ರಿ ಆಕಾಂಕ್ಷಿಯಾಗಿದ್ದೇನೆ. ಕಾಂಗ್ರೆಸ್ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಜೊತೆ ನನ್ನದು ಕೂಡ ಸ್ಪರ್ಧೆ ಇದೆ ಎಂದು ಕಾಂಗ್ರೆಸ್ ಹಿರಿಯ ಶಾಸಕರಾದ ಡಾ.ಶಾಮನೂರು ಶಿವಶಂಕರಪ್ಪ ಅವರು ಹೇಳಿದ್ದರು. ಇದನ್ನೂ ಓದಿ: ರಾಜ್ಯಸಭೆಗೆ ಕ್ರಿಕೆಟಿಗ ಹರ್ಭಜನ್ ಸಿಂಗ್ ನಾಮನಿರ್ದೇಶನ – ಅವಿರೋಧವಾಗಿ ಆಯ್ಕೆಯಾಗಲಿರುವ ಬಜ್ಜಿ

    ಈ ಕುರಿತಂತೆ ಸರಣಿ ಟ್ವೀಟ್ ಮಾಡಿರುವ ಬಿಜೆಪಿ ಸಿದ್ದರಾಮಯ್ಯರೇ, ಕಾಂಗ್ರೆಸ್ ಪಕ್ಷದಲ್ಲಿ ಎಷ್ಟು ಬಣವಿದೆ? ಸೋನಿಯಾ ಗಾಂಧಿ ಬಣದ ವಿಚಾರ ಬಿಡಿ, ಅದು ಜಿ23 ಮೂಲಕ ಜಗಜ್ಜಾಹೀರಾಗಿದೆ. ರಾಜ್ಯ ಕಾಂಗ್ರೆಸ್‍ನಲ್ಲಿರುವ ಬಣಗಳ ಸಂಖ್ಯೆ ಎಷ್ಟು? ಪರಿಷತ್ ವಿಪಕ್ಷ ನಾಯಕರೊಂದಿಗೆ ನಿಮ್ಮ ಸೌಹಾರ್ದ ಸಂಬಂಧ ಹೇಗಿದೆ ಎಂದು ಸ್ವಲ್ಪ ವಿವರಿಸಬಹುದೇ ಎಂದು ಕೇಳುವ ಮೂಲಕ ಕಾಂಗ್ರೆಸ್ ಕಾಲೆಳೆದಿದೆ.

    ಸಿದ್ದರಾಮಯ್ಯನವರೇ, ರಾಜ್ಯದಲ್ಲಿರುವ ನಿಮ್ಮ ಬಣಗಳಿಂದ ಕಾಂಗ್ರೆಸ್ ಪಕ್ಷ ಬುಸುಗುಡುತ್ತಿರುವುದು ನಿಮಗೆ ತಿಳಿಯದ ವಿಚಾರವೇ? ಡಿಕೆಶಿ ಬಣ, ಖರ್ಗೆ ಬಣ, ಹರಿಪ್ರಸಾದ್ ಬಣ, ಪರಮೇಶ್ವರ್ ಬಣ. ಮೇಲ್ನೋಟಕ್ಕೆ ಸಿದ್ದರಾಮಯ್ಯ ಮತ್ತು ಡಿಕೆಶಿ ಬಣ ಕಾದಾಡುತ್ತಿದ್ದರೂ, ಇದರ ಲಾಭ ಪಡೆಯಲು ಹಲವಾರು ಬಣಗಳು ಹೊಂಚು ಹಾಕುತ್ತಿವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಮುಂದಿನ ಮುಖ್ಯಮಂತ್ರಿ ನಾನೇ: ಶಾಮನೂರು ಶಿವಶಂಕರಪ್ಪ

    ಸಿದ್ದರಾಮಯ್ಯ ಮತ್ತು ಡಿಕೆಶಿ ಮಾತ್ರ ಮುಖ್ಯಮಂತ್ರಿಯಾಗಬೇಕೇ? ನನ್ನ ಬಳಿಯೂ ದುಡ್ಡಿದೆ. ನಾನು ಸಿಎಂ ಆಗುತ್ತೇನೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಶ್ಯಾಮನೂರು ಶಿವಶಂಕರಪ್ಪ ಅವರು ಹೇಳಿದ್ದಾರೆ. ಸಿದ್ದರಾಮಯ್ಯನವರೇ, ಇವರದು ಎಷ್ಟನೇ ಬಣ ಎಂದು ಪ್ರಶ್ನಿಸಿದ್ದಾರೆ.

  • ಸದಾ ಹೃದಯಲ್ಲಿ ಪುನೀತ್ ಸವಿ ನೆನಪುಗಳನ್ನು ನೆನೆಯೋಣ: ಸುಮಲತಾ

    ಸದಾ ಹೃದಯಲ್ಲಿ ಪುನೀತ್ ಸವಿ ನೆನಪುಗಳನ್ನು ನೆನೆಯೋಣ: ಸುಮಲತಾ

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಪವರ್‌ಸ್ಟಾರ್ ಪುನೀತ್ ರಾಜ್‍ಕುಮಾರ್ ಜನುಮದಿನವನ್ನು ರಾಜ್ಯದ ಜನತೆ ಬಹಳ ಅದ್ದೂರಿಯಾಗಿ ಆಚರಿಸುತ್ತಿದ್ದಾರೆ. ಈ ನಡುವೆ ನಟಿ ಸುಮಲತಾ ಅಂಬರೀಶ್ ಅವರು ಪುನೀತ್ ಜೊತೆಗಿರುವ ಒಂದಷ್ಟು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಪ್ರೀತಿಯ ಅಪ್ಪುಗೆ ಶುಭ ಕೋರಿದ್ದಾರೆ.

    ಮೊದಲಿನಿಂದಲೂ ವರನಟ ಡಾ. ರಾಜ್‍ಕುಮಾರ್ ಹಾಗೂ ರೆಬೆಲ್‍ಸ್ಟಾರ್ ಅಂಬರೀಶ್ ಕುಟುಂಬಗಳು ಬಹಳ ಆತ್ಮೀಯತೆಯನ್ನು ಹೊಂದಿದೆ. ಅಲ್ಲದೇ ಪುನೀತ್ ಚಿಕ್ಕ ವಯಸಿನಿಂದಲೂ ಅಂಬರೀಶ್ ಅವರನ್ನು ಪ್ರೀತಿಯಿಂದ ಅಂಬಿ ಮಾಮ ಎಂದು ಕರೆಯುತ್ತಿದ್ದರು. ಅಂದಿನಿಂದಲೂ ಅಂಬಿ ಕುಟುಂಬಕ್ಕೆ ರಾಜ್ ಕುಟುಂಬ ಬಹಳ ಹತ್ತಿರವಾಗಿದ್ದು, ಇತ್ತೀಚೆಗಷ್ಟೇ ಪುನೀತ್ ಅಗಲಿಕೆಯಿಂದ ಸುಮಲತಾ ಅವರು ದುಃಖ ವ್ಯಕ್ತಪಡಿಸಿದ್ದರು. ಅಲ್ಲದೇ ಪುನೀತ್ ಸಾವಿನಿಂದ ಇಡೀ ಕರುನಾಡು ಶೋಕ ಸಾಗರದಲ್ಲಿ ಮುಳುಗಿತ್ತು. ಇದನ್ನೂ ಓದಿ:  ಎಂದಿಗೂ ಕಸಿದುಕೊಳ್ಳಲಾಗದ ಎನರ್ಜಿ: ಅಪ್ಪುಗೆ ಯಶ್ ವಿಶ್

    ಇದೀಗ ಪುನೀತ್ ಹುಟ್ಟುಹಬ್ಬವನ್ನು ರಾಜ್ಯದ ಜನತೆ ಹಬ್ಬದಂತೆ ಬಹಳ ಸಡಗರದಿಂದ ಆಚರಿಸಿ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಸ್ಯಾಂಡಲ್‍ವುಡ್ ಕಲಾವಿದರೂ ಸಹ ಪುನೀತ್ ಹುಟ್ಟುಹಬ್ಬಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯಗಳ ಸುರಿ ಮಳೆಯನ್ನೇ ಹರಿಸುತ್ತಿದ್ದಾರೆ. ಈ ಮಧ್ಯೆ ನಟಿ, ಸಂಸದೆ ಸುಮಲತಾ ಅವರು, ಪುನೀತ್ ಫ್ಯಾಮಿಲಿ ಜೊತೆಗೆ ತಮ್ಮ ಫ್ಯಾಮಿಲಿ ಕ್ಲಿಕ್ಲಿಸಿಕೊಂಡಿರುವ ಫೋಟೋ ಹಾಗೂ ದೊಡ್ಮನೆ ಹುಡ್ಗ ಸಿನಿಮಾದ ಶೂಟಿಂಗ್ ವೇಳೆ ಹಿಡಿಸಿಕೊಂಡ ಒಂದಷ್ಟು ಫೋಟೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಳ್ಳುವ ಮೂಲಕ ಅಪ್ಪು ಅವರನ್ನು ನೆನಪಿಸಿಕೊಂಡಿದ್ದಾರೆ. ಇದನ್ನೂ ಓದಿ:  ಅಪ್ಪು ನೆನೆದು ನಟಿ ಪ್ರಿಯಾ ಆನಂದ್ ಕಣ್ಣೀರು

    ಫೋಟೋ ಜೊತೆಗೆ ಕ್ಯಾಪ್ಷನ್‍ನಲ್ಲಿ ಬಾಲ್ಯದಿಂದ ಸಿನಿಮಾದಲ್ಲೇ ಜೀವಿಸಿ, ಯಾರಿಗೂ ಗೊತ್ತಾಗದಂತೆ ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ, ಸಿನಿಮಾ ರಂಗಕ್ಕೆ ಮತ್ತು ಸಮಾಜಕ್ಕೆ ಅಪಾರ ಕೊಡುಗೆ ನೀಡಿರುವ ಕರ್ನಾಟಕ ರತ್ನ ಪುನೀತ್ ರಾಜ್‍ಕುಮಾರ್ ಅವರ ಹುಟ್ಟು ಹಬ್ಬದಂದು, ಸದಾ ನಮ್ಮ ಹೃದಯಲ್ಲಿರುವ ಅವರ ಸವಿ ನೆನಪುಗಳನ್ನು ನೆನೆಯೋಣ. ಅಪಾರ ದುಃಖದಲ್ಲೂ, ಅಪ್ಪುವಿನ ಅನುಪಸ್ಥಿತಿಯನ್ನು ಮರೆಸುವಂತೆ ಅವರ ಹುಟ್ಟುಹಬ್ಬ ಆಚರಣೆ ಮಾಡುತ್ತಿರುವ ಅವರ ಕೋಟ್ಯಂತರ ಅಭಿಮಾನಿಗಳಿಗೆ ನನ್ನ ಪ್ರೀತಿಯ ನಮನಗಳು ಎಂದು ಬರೆದುಕೊಂಡಿದ್ದಾರೆ.

  • ಪುನೀತ್ ರಾಜ್‍ಕುಮಾರ್ ಹುಟ್ಟಹುಬ್ಬ- ಬಿಎಸ್‍ವೈ, ಬೊಮ್ಮಾಯಿ ಹೇಳಿದ್ದೇನು..?

    ಪುನೀತ್ ರಾಜ್‍ಕುಮಾರ್ ಹುಟ್ಟಹುಬ್ಬ- ಬಿಎಸ್‍ವೈ, ಬೊಮ್ಮಾಯಿ ಹೇಳಿದ್ದೇನು..?

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಪವರ್ ಸ್ಟಾರ್ ಡಾ.ಪುನೀತ್ ರಾಜ್‍ಕುಮಾರ್‍ಗೆ ಇಂದು 47ನೇ ಹುಟ್ಟುಹಬ್ಬವಾಗಿದ್ದು, ಈ ವಿಶೇಷ ದಿನದಂದು ಅಪ್ಪುಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕ ರಾಜಕೀಯ ಗಣ್ಯರು ಶುಭಕೋರಿದ್ದಾರೆ.

    ಅಪ್ಪು ಎಲ್ಲರನ್ನು ಅಗಲಿ ನಾಲ್ಕೂವರೆ ತಿಂಗಳಾಗುತ್ತಾ ಬಂದರೂ, ಪುನೀತ್ ನೆನಪು ಮಾತ್ರ ಎಲ್ಲರ ಮನದಲ್ಲಿ ಅಜರಾಮರವಾಗಿದೆ. ಇಂದು ಅಪ್ಪು ಹುಟ್ಟುಹಬ್ಬವನ್ನು ರಾಜ್ಯದೆಲ್ಲೆಡೆ ಅಭಿಮಾನಿಗಳು ಬಹಳ ವಿಜೃಂಭಣೆಯಿಂದ ಆಚರಿಸುತ್ತಿದ್ದಾರೆ. ಈ ನಡುವೆ ಅನೇಕ ರಾಜಕೀಯ ಗಣ್ಯರು ಸಹ ಅಪ್ಪು ಸಮಾಜಕ್ಕೆ ಸಲ್ಲಿಸಿದ ಸೇವೆಯನ್ನು ನೆನಪಿಸಿಕೊಳ್ಳುತ್ತಾ ಸಾಮಾಜಿಕ ಜಾಲತಾಣದಲ್ಲಿ ವಿಶ್ ಮಾಡಿದ್ದಾರೆ.

    ಬಿ.ಎಸ್. ಯಡಿಯೂರಪ್ಪನವರು, ನಾಡಿನ ಪ್ರೀತಿ ಗಳಿಸಿದ್ದ ಅಪ್ರತಿಮ, ಸಹೃದಯಿ ಕಲಾವಿದ, ಕನ್ನಡಿಗರ ಕಣ್ಮಣಿ, ಡಾ.ರಾಜ್ ಕುಟುಂಬದ ಕುಡಿ, ಚಿಕ್ಕ ವಯಸ್ಸಿನಲ್ಲಿಯೇ ಅಪಾರವಾದದ್ದನ್ನು ಸಾಧಿಸಿ, ಅಕಾಲಿಕವಾಗಿ ನಮ್ಮನ್ನಗಲಿದ ಅಭಿಮಾನಿಗಳ ಪಾಲಿನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಜನ್ಮದಿನದಂದು ಆ ಸಾಧಕ ಚೇತನಕ್ಕೆ ಅಭಿಮಾನಪೂರ್ವಕ ನಮನಗಳು ಎಂದು ಟ್ವೀಟ್ ಮಾಡಿದ್ದಾರೆ.

    ಬಸವರಾಜ ಬೊಮ್ಮಾಯಿ ಅವರು ತಮ್ಮ ಟ್ವಿಟ್ಟರ್‌ನಲ್ಲಿ, ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿ, ಪವರ್ ಸ್ಟಾರ್ ಆಗಿ ಕನ್ನಡಿಗರ ಜನಮಾನಸದಲ್ಲಿ ಶಾಶ್ವತ ಸ್ಥಾನ ಪಡೆದಿರುವ ಕರ್ನಾಟಕ ರತ್ನ, ಪ್ರೀತಿಯ ಅಪ್ಪು ದಿ. ಡಾ. ಪುನೀತ್ ರಾಜಕುಮಾರ್ ಅವರ ಜನ್ಮದಿನದಂದು ಪ್ರೀತಿ ಪೂರ್ವಕ ನಮನಗಳು. ಅತಿ ಚಿಕ್ಕ ವಯಸ್ಸಿನಲ್ಲಿ ನೀವು ಮಾಡಿದ ಸಾಧನೆ, ಗಳಿಸಿದ ಜನಪ್ರಿಯತೆ, ಮಾಡಿದ ಜನಸೇವೆಯನ್ನು ಬಣ್ಣಿಸಲು ಪದಗಳೇ ಸಾಲದು ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಅಪ್ಪು ಸಮಾಧಿ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್‍ಕುಮಾರ್

    ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವಥ್ ನಾರಾಯಣ್ ಅವರು, ನಮ್ಮ ನೆಚ್ಚಿನ ಪುನೀತ್ ರಾಜ್‍ಕುಮಾರ್ ಅವರ ಬದುಕಿನ ಸಾಧನೆಗಳನ್ನು ಪ್ರೇರಣೆಯಾಗಿ ಪಡೆದು ಉತ್ತಮ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಅವರ ಜನ್ಮದಿನವನ್ನು ಅರ್ಥಪೂರ್ಣವಾಗಿಸೋಣ. ಅವರಲ್ಲಿದ್ದ ಸಾಮಾಜಿಕ ಕಳಕಳಿ, ಶಿಕ್ಷಣ ಪ್ರೇಮ, ಆವಿಷ್ಕಾರಿ ಮನೋಭಾವ ಎಲ್ಲರ ಮನೆ-ಮನಗಳಲ್ಲೂ ಬೆಳಗಿಸಿ ಅವರನ್ನು ಅಮರರಾಗಿಸೋಣ ಎಂದು ಶುಭ ಕೋರಿದ್ದಾರೆ.

    ಮತ್ತೊಂದೆಡೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಅವರು, ಬೆಟ್ಟದ ಹೂವಾಗಿ ಅರಳಿದೆ. ಎರಡು ನಕ್ಷತ್ರಗಳಾಗಿ ಮಿಂಚಿದೆ. ಅರಸುವಾಗಿ ಚಂದನವನದ ಯುವರತ್ನನಾದೆ. ವೀರ ಕನ್ನಡಿಗನಾಗಿ ಪೃಥ್ವಿಯ ಮೈತ್ರಿ ತೊರೆದು ಪರಮಾತ್ಮನ ಮಿಲನವಾದೆ. ಅಪ್ಪು ಇಂದು ಭೌತಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ಅಪ್ಪು ನೆನಪು ಎಂದಿಗೂ ಅಮರ, ಅಪ್ಪು ಎಂದೆಂದಿಗೂ ಅಜರಾಮರ. ಹ್ಯಾಪಿ ಬರ್ತಡೇ ಅಪ್ಪು ಎಂದು ಬಣ್ಣಿಸಿದ್ದಾರೆ. ಇದನ್ನೂ ಓದಿ: ರಾಜ್ಯದ 400 ಥಿಯೇಟರ್‌ಗಳಲ್ಲಿ ಜೇಮ್ಸ್ ರಿಲೀಸ್

  • ಓಟಿಟಿ ಜಗತ್ತಿಗೆ ಕಾಲಿಟ್ಟ ಶಾರೂಖ್ ಖಾನ್

    ಓಟಿಟಿ ಜಗತ್ತಿಗೆ ಕಾಲಿಟ್ಟ ಶಾರೂಖ್ ಖಾನ್

    ಮುಂಬೈ: ಬಾಲಿವುಡ್ ಬಾದ್ ಶಾ ಶಾರೂಖ್ ಖಾನ್ ಈಗಾಗಲೇ ಹಲವು ರೀತಿಯ ಬ್ಯುಸ್ನೆಸ್ ಮಾಡುತ್ತಿದ್ದಾರೆ. ಅದಕ್ಕೆ ಸೇರ್ಪಡೆ ಎನ್ನುವಂತೆ ಮತ್ತೊಂದು ಕಾಯಕವನ್ನು ಶೂರು ಮಾಡಿದ್ದಾರೆ. ಜಗತ್ತಿನಾದ್ಯಂತ ಹೊಸ ಸಂಚಲನ ಮೂಡಿಸಿರುವ ಮತ್ತು ಮನೆಯಲ್ಲಿಯೇ ಕೂತು ಸಿನಿಮಾ ವೀಕ್ಷಿಸಲು ನೆರವಾಗಿರುವ ಓಟಿಟಿ ಓನರ್ ಆಗಿ ಶಾರೂಖ್ ಆ ಜಗತ್ತಿಗೆ ಕಾಲಿಟ್ಟಿದ್ದಾರೆ. ಈಗ ತಮ್ಮದೇ ಎಸ್‍ಆರ್‌ಕೆ+ ಎಂಬ ಒಟಿಟಿ ಪ್ಲಾಟ್‍ಫಾರ್ಮ್ ರೆಡಿ ಮಾಡಿಕೊಂಡಿದ್ದು, ಅದನ್ನು ಶೀಘ್ರದಲ್ಲಿಯೇ ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದ್ದಾರೆ.

    ಸೋಷಿಯಲ್ ಮೀಡಿಯಾದಲ್ಲಿ ‘ಎಸ್‍ಆರ್‌ಕೆ+ ಶೀಘ್ರದಲ್ಲೇ ಬರಲಿದೆ’ ಎಂಬ ಫಾಂಟ್‍ನ ಪಕ್ಕದಲ್ಲಿ ಥಂಬ್ಸ್ ಅಪ್ ನೀಡುತ್ತಿರುವ ಫೋಟೋವೊಂದನ್ನು ಹಂಚಿಕೊಂಡಿರುವ ಅವರು, (ಕುಚ್ ಕುಚ್ ಹೋನೆ ವಾಲಾ ಹೈ, ಒಟಿಟಿ ಕಿ ದುನಿಯಾ ಮೇ) ಈ ಮೂಲಕ ಓಟಿಟಿ ಜಗತ್ತಿನಲ್ಲಿ ಏನೆಲ್ಲಾ ಆಗೋದಿದೆ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಮಹಿಳೆಯರು ಎಲ್ಲಿ, ಏನು ಬೇಕಾದರೂ ಧರಿಸಬಹುದು, ಆದರೆ…: ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ

     

    View this post on Instagram

     

    A post shared by Shah Rukh Khan (@iamsrk)

    ನಿರ್ಮಾಪಕ ಅನುರಾಗ್ ಕಶ್ಯಪ್ ಅವರು ಶಾರೂಖ್ ಅವರ ಟ್ವೀಟ್‍ಗೆ ರಿ-ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ. ಕನಸು ನನಸಾಗುತ್ತಿದೆ ಅವರ ಹೊಸ ಒಟಿಟಿ ಅಪ್ಲಿಕೇಶನ್, ಎಸ್‍ಆರ್‌ಕೆ+ ನಲ್ಲಿ ನಾನು ಕೂಡ ಸಹಭಾಗಿತ್ವ ಪಡೆದುಕೊಂಡಿದ್ದಾಗಿ ಅವರು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಅಂದು ಸುದೀಪ್ ಪುಸ್ತಕ ಬಿಡುಗಡೆ ಮಾಡಿದ್ದ ಪುನೀತ್, ಇಂದು ಪುನೀತ್ ಪುಸ್ತಕ ಬಿಡುಗಡೆ ಮಾಡಿದ ಸುದೀಪ್

    ಮಾದಕ ವಸ್ತು ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ರ ಆರ್ಯನ್ ಖಾನ್ ವಿವಾದದಲ್ಲಿ ಸಿಲುಕಿದ ಮೇಲೆ ಶಾರೂಖ್ ಖಾನ್ ಮೌನಕ್ಕೆ ಶರಣಾಗಿದ್ದರು. ಕೆಲವು ದಿನಗಳ ಹಿಂದೆಯಷ್ಟೇ, ಎನ್‍ಸಿಬಿಯ ವಿಶೇಷ ತನಿಖಾ ತಂಡ (ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ) ಆರ್ಯನ್ ಖಾನ್ ಡ್ರಗ್ಸ್ ಹೊಂದಿರಲಿಲ್ಲ, ಆದ್ದರಿಂದ ಅವರ ಫೋನ್ ತೆಗೆದುಕೊಂಡು ಅವರ ಚಾಟ್‍ಗಳನ್ನು ಪರಿಶೀಲಿಸುವ ಅಗತ್ಯವಿಲ್ಲ ಎಂದು ಹೇಳಿಕೆ ನೀಡಿದ್ದ ಬೆನ್ನಲ್ಲೆ ನಿರಾಳತೆಗೆ ಜಾರಿದ್ದರು.

    ಮತ್ತೆ ಶಾರೂಖ್ ಸಿನಿಮಾಗಳತ್ತ ಮುಖ ಮಾಡಿದ್ದಾರೆ. ಇತ್ತೀಚೆಗಷ್ಟೇ ಅವರ ನಟನೆಯ ‘ಪಠಾಣ್’ ಚಿತ್ರದ ಫಸ್ಟ್ ಲುಕ್‍ನೊಂದಿಗೆ ಅಭಿಮಾನಿಗಳ ಹುಮ್ಮಸ್ಸು ಹೆಚ್ಚಿಸಿದ್ದರು.

  • ಮೊದಲು ಮಕ್ಕಳ ಭವಿಷ್ಯ ಮುಖ್ಯ, ಆಮೇಲೆ ರಾಜಕೀಯ: ಡಿಕೆಶಿ

    ಮೊದಲು ಮಕ್ಕಳ ಭವಿಷ್ಯ ಮುಖ್ಯ, ಆಮೇಲೆ ರಾಜಕೀಯ: ಡಿಕೆಶಿ

    ಚಿಕ್ಕಬಳ್ಳಾಪುರ: ಮೊದಲು ಮಕ್ಕಳ ವಿದ್ಯಾಭ್ಯಾಸ ಅವರ ಭವಿಷ್ಯ ಮುಖ್ಯ. ರಾಜಕೀಯ ಆಮೇಲೆ ಎಂದು ಕಾಂಗ್ರೆಸ್ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಹೇಳಿದ್ದಾರೆ.

    ದೆಹಲಿಯಿಂದ ಚಿಕ್ಕಬಳ್ಳಾಪುರಕ್ಕೆ ಆಗಮಿಸಿದ ಡಿಕೆಶಿವಕುಮಾರ್ ಅವರು ಹಿಜಬ್ ತೀರ್ಪು ಕುರಿತಂತೆ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿ, ತೀರ್ಪಿನ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಬೇಕಿದೆ. ಯಾವುದೇ ರಾಜಕೀಯ ಪಕ್ಷ ತೀರ್ಪುನ್ನು ತಮ್ಮದೇ ರೀತಿಯಲ್ಲಿ ವ್ಯಾಖ್ಯಾನ ಮಾಡಬಹುದು. ಆದರೆ ತೀರ್ಪು ತೀರ್ಪೆ. ತೀರ್ಪನ್ನು ಎಲ್ಲರೂ ಕೂಡ ಗೌರವದಿಂದ ಸ್ವೀಕಾರ ಮಾಡಬೇಕು ಎಂದಿದ್ದಾರೆ.

    ತೀರ್ಪಿನಲ್ಲಿ ಮಾಡಿರುವ ಸಂಪೂರ್ಣವಾದ ಉಲ್ಲೇಖಗಳನ್ನು ನೋಡದೇ ನಾನು ರಾಜಕೀಯ ಪಕ್ಷದ ರಾಜ್ಯಾಧ್ಯಕ್ಷನಾಗಿ ಪ್ರತಿಕ್ರಿಯೆ ನೀಡಲಾರೆ. ನಮ್ಮ ಹಿರಿಯ ನಾಯಕರ ಜೊತೆ ಚರ್ಚೆ ಮಾಡಿ ಪ್ರತಿಕ್ರಿಯೆ ನೀಡುತ್ತೇನೆ. ನಮಗೆ ಶಾಂತಿ ಬೇಕು, ಮಕ್ಕಳ ವಿದ್ಯಾಭ್ಯಾಸ ಮುಖ್ಯವೇ ಹೊರತು ರಾಜಕೀಯ ಎಲ್ಲ ಆಮೇಲೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಹಿಜಬ್‌ ಕುರಿತ ಹೈಕೋರ್ಟ್‌ ತೀರ್ಪನ್ನು ನಾನು ಒಪ್ಪಲ್ಲ: 15 ಟ್ವೀಟ್‌ ಮಾಡಿದ ಓವೈಸಿ

    ಮತ್ತೊಂದೆಡೆ ಹಿಜಬ್ ಕುರಿತಂತೆ ಹೈಕೋರ್ಟ್ ನೀಡಿರುವ ತೀರ್ಪಿನ ಬಗ್ಗೆ ಟ್ವೀಟ್ ಮಾಡಿರುವ ಅವರು, ಹಿಜಬ್ ವಿವಾದದಲ್ಲಿ ನನ್ನ ಪ್ರಮುಖ ಕಾಳಜಿ ಶಿಕ್ಷಣ, ಕಾನೂನು ಮತ್ತು ಸುವ್ಯವಸ್ಥೆಯಾಗಿದೆ. ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ. ಆದರೆ ಶಿಕ್ಷಣ, ಕಾನೂನು ಮತ್ತು ಸುವ್ಯವಸ್ಥೆ, ಕೋಮು ಸೌಹಾರ್ದತೆಯ ಜವಾಬ್ದಾರಿ ಇನ್ನೂ ಕರ್ನಾಟಕ ಸರ್ಕಾರದ ಮೇಲಿದೆ ಎಂದಿದ್ದಾರೆ. ಇದನ್ನೂ ಓದಿ: ಕೋರ್ಟ್ ತೀರ್ಪು ಬೆನ್ನಲ್ಲೇ ಪರೀಕ್ಷೆ ಬಿಟ್ಟು ಹೊರ ನಡೆದ ವಿದ್ಯಾರ್ಥಿನಿಯರು

    ನಾನು ಕರ್ನಾಟಕ ಸರ್ಕಾರಕ್ಕೆ ಪ್ರಬುದ್ಧ ನಾಯಕತ್ವವನ್ನು ಪ್ರದರ್ಶಿಸಲು ಮತ್ತು ಖಚಿತಪಡಿಸಿಕೊಳ್ಳಲು ಮನವಿ ಮಾಡುತ್ತೇನೆ.
    1) ಶಾಲೆಗಳು ಮತ್ತು ಕಾಲೇಜುಗಳ ಸುತ್ತಮುತ್ತ ಕಾನೂನು ಮತ್ತು ಸುವ್ಯವಸ್ಥೆಯನ್ನು ನಿರ್ವಹಿಸಬೇಕಾಗುತ್ತದೆ.
    2) ಧರ್ಮ ಮತ್ತು ಲಿಂಗದ ಲೆಕ್ಕದ ಮೇಲೆ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅಡ್ಡಿಯಾಗುವುದಿಲ್ಲ.
    3) ಕೋಮು ಸೌಹಾರ್ದತೆ ಇದೆ.

     

  • ಹಿಜಬ್‌ ಕುರಿತ ಹೈಕೋರ್ಟ್‌ ತೀರ್ಪನ್ನು ನಾನು ಒಪ್ಪಲ್ಲ: 15 ಟ್ವೀಟ್‌ ಮಾಡಿದ ಓವೈಸಿ

    ಹಿಜಬ್‌ ಕುರಿತ ಹೈಕೋರ್ಟ್‌ ತೀರ್ಪನ್ನು ನಾನು ಒಪ್ಪಲ್ಲ: 15 ಟ್ವೀಟ್‌ ಮಾಡಿದ ಓವೈಸಿ

    ನವದೆಹಲಿ: ಹಿಜಬ್‌ ವಿವಾದ ಕುರಿತು ಕರ್ನಾಟಕ ಹೈಕೋರ್ಟ್‌ ನೀಡಿರುವ ತೀರ್ಪನ್ನು ನಾನು ಒಪ್ಪುವುದಿಲ್ಲ ಎಂದು ಎಐಎಂಐಎಂ ಅಧ್ಯಕ್ಷ ಹಾಗೂ ಸಂಸದ ಅಸಾದುದ್ದೀನ್‌ ಓವೈಸಿ ಹೇಳಿದ್ದಾರೆ.

    ಹಿಜಬ್‌ ಸಂಬಂಧ ಹೈಕೋರ್ಟ್‌ ತೀರ್ಪು ಕುರಿತು ಸರಣಿ ಟ್ವೀಟ್‌ ಮಾಡಿರುವ ಅವರು, ಕರ್ನಾಟಕ ಹೈಕೋರ್ಟ್‌ ನೀಡಿರುವ ತೀರ್ಪನ್ನು ನಾನು ಒಪ್ಪುವುದಿಲ್ಲ. ಕೋರ್ಟ್‌ ತೀರ್ಪನ್ನು ವಿರೋಧಿಸುವುದು ನನ್ನ ಹಕ್ಕು. ಹಿಜಬ್‌ ಪರ ಅರ್ಜಿದಾರರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಿದ್ದಾರೆ ಎಂಬ ಭರವಸೆ ಇದೆ ಎಂದು ಆಶಯ ವ್ಯಕ್ತಪಡಿಸಿದ್ದಾರೆ.

    ಟ್ವೀಟ್‌ನಲ್ಲೇನಿದೆ?
    ಆಲ್‌ ಇಂಡಿಯಾ ಮುಸ್ಲಿಂ ಪರ್ಸನಲ್‌ ಲಾವ್‌ ಬೋರ್ಡ್‌ ಮಾತ್ರವಲ್ಲ ಇತರೆ ಧಾರ್ಮಿಕ ಗುಂಪುಗಳ ಸಂಘಸಂಸ್ಥೆಗಳು ಸಹ ಹೈಕೋರ್ಟ್‌ ತೀರ್ಪು ಪ್ರಶ್ನಿಸಿ ಸುಪ್ರೀಂಗೆ ಮೇಲ್ಮನವಿ ಸಲ್ಲಿಸಲಿವೆ ಎಂದು ಭಾವಿಸಿದ್ದೇನೆ.

    ಏಕೆಂದರೆ ಅದು (ಕೋರ್ಟ್‌) ಧರ್ಮ, ಸಂಸ್ಕೃತಿ, ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೂಲಭೂತ ಹಕ್ಕುಗಳನ್ನು ಸ್ಥಗಿತಗೊಳಿಸಿದೆ. ಸಂವಿಧಾನದ ಪೀಠಿಕೆಯು ವ್ಯಕ್ತಿಗೆ ಆಲೋಚನೆ, ಅಭಿವ್ಯಕ್ತಿ, ನಂಬಿಕೆ ಮತ್ತು ಆರಾಧನೆಯ ಸ್ವಾತಂತ್ರ್ಯವನ್ನು ಹೊಂದುವ ಹಕ್ಕಿದೆ ಎಂದು ಹೇಳುತ್ತದೆ.

    ನನ್ನ ತಲೆಯನ್ನು ಮುಚ್ಚಿಕೊಳ್ಳುವುದು ಅತ್ಯಗತ್ಯ ಎಂಬುದು ನನ್ನ ನಂಬಿಕೆ. ನಾನು ಸೂಕ್ತವೆಂದು ಭಾವಿಸಿದಂತೆ ಆ ನಂಬಿಕೆಯನ್ನು ವ್ಯಕ್ತಪಡಿಸಲು ನನಗೆ ಹಕ್ಕಿದೆ. ಧರ್ಮನಿಷ್ಠ ಮುಸಲ್ಮಾನರಿಗೆ ಹಿಜಬ್‌ ಕೂಡ ಒಂದು ಆರಾಧನೆಯ ಕ್ರಿಯೆಯಾಗಿದೆ.

    ಅಗತ್ಯವಾದ ಧಾರ್ಮಿಕ ಅಭ್ಯಾಸ ಪರೀಕ್ಷೆಯನ್ನು ಪರಿಶೀಲಿಸುವ ಸಮಯ ಇದು. ದರ್ಮನಿಷ್ಠ ವ್ಯಕ್ತಿಗೆ ಎಲ್ಲವೂ ಅತ್ಯಗತ್ಯ. ನಾಸ್ತಿಕನಿಗೆ ಯಾವುದೂ ಅತ್ಯಗತ್ಯವಲ್ಲ. ಶ್ರದ್ಧಾವಂತ ಹಿಂದೂ ಬ್ರಾಹ್ಮಣರಿಗೆ ಜನಿವಾರ ಅತ್ಯಗತ್ಯ. ಆದರೆ ಬ್ರಾಹ್ಮಣೇತರರಿಗೆ ಅದು ಇಲ್ಲದಿರಬಹುದು. ನ್ಯಾಯಾಧೀಶರು ಅಗತ್ಯವನ್ನು ನಿರ್ಧರಿಸಬಹುದು ಎಂಬುದು ಅಸಂಬದ್ಧವಾಗಿದೆ.

    ಅದೇ ಧರ್ಮದ ಇತರ ಜನರು ಸಹ ಅಗತ್ಯವನ್ನು ನಿರ್ಧರಿಸುವ ಹಕ್ಕನ್ನು ಹೊಂದಿಲ್ಲ. ಇದು ವ್ಯಕ್ತಿ ಮತ್ತು ದೇವರ ನಡುವೆ ಇದೆ. ಇಂತಹ ಪೂಜಾ ಕಾರ್ಯಗಳು ಇತರರಿಗೆ ಹಾನಿಯಾದರೆ ಮಾತ್ರ ಧಾರ್ಮಿಕ ಹಕ್ಕುಗಳಲ್ಲಿ ರಾಜ್ಯವು ಹಸ್ತಕ್ಷೇಪ ಮಾಡಲು ಅವಕಾಶ ನೀಡಬೇಕು. ಹಿಜಬ್‌ ಯಾರಿಗೂ ಹಾನಿ ಮಾಡುವುದಿಲ್ಲ.

    ಹಿಜಬ್‌ ನಿಷೇಧಿಸುವುದರಿಂದ ಧಾರ್ಮಿಕ ಮುಸ್ಲಿಂ ಮಹಿಳೆಯರು ಮತ್ತು ಅವರ ಕುಟುಂಬಗಳಿಗೆ ಖಂಡಿತವಾಗಿಯೂ ಹಾನಿಯಾಗುತ್ತದೆ. ಅವರು ಶಿಕ್ಷಣ ಪಡೆಯುವುದಕ್ಕೆ ಅಡ್ಡಿಪಡಿಸಿದಂತಾಗುತ್ತದೆ.

    ಸಮವಸ್ತ್ರವು ಏಕರೂಪತೆಯನ್ನು ಖಚಿತಪಡಿಸುತ್ತದೆ ಎನ್ನಲಾಗುತ್ತದೆ. ಅದು ಹೇಗೆ? ಶ್ರೀಮಂತ/ಬಡ ಕುಟುಂಬದಿಂದ ಬಂದವರು ಯಾರೆಂದು ಮಕ್ಕಳಿಗೆ ತಿಳಿಯುವುದಿಲ್ಲವೇ? ಜಾತಿಯ ಹೆಸರುಗಳು ಹಿನ್ನೆಲೆಯನ್ನು ಸೂಚಿಸುವುದಿಲ್ಲವೇ? ಶಿಕ್ಷಕರು ತಾರತಮ್ಯ ಮಾಡುವುದನ್ನು ತಡೆಯಲು ಸಮವಸ್ತ್ರ ಸಹಕಾರಿಯಾಗಿದೆಯೇ?

    ಐರ್ಲೆಂಡ್‌ ಸರ್ಕಾರವು ಹಿಜಬ್‌ ಮತ್ತು ಸಿಖ್‌ ಪೇಟವನ್ನು ಅನುಮತಿಸಲು ಪೊಲೀಸ್‌ ಸಮವಸ್ತ್ರದ ನಿಯಮಗಳನ್ನು ಬದಲಾಯಿಸಿದಾಗ ಮೋದಿ ಸರ್ಕಾರ ಅದನ್ನು ಸ್ವಾಗತಿಸಿತು. ಹಾಗಾದರೆ ಸ್ವದೇಶ ಮತ್ತು ವಿದೇಶ ವಿಚಾರವಾಗಿ ಏಕೆ ಎರಡು ಮಾನದಂಡಗಳು? ಸಮವಸ್ತ್ರದ ಬಣ್ಣಗಳಿಗೆ ಹೋಲುವ ಹಿಜಬ್‌ ಮತ್ತು ಪೇಟಗಳನ್ನು ಧರಿಸಲು ಅನುಮತಿಸಬಹುದು.

    ಇದೆಲ್ಲದರ ಪರಿಣಾಮವೇನು? ಮೊದಲನೆಯದಾಗಿ, ಸರ್ಕಾರವು ಅಸ್ತಿತ್ವದಲ್ಲಿಲ್ಲದ ಸಮಸ್ಯೆಯನ್ನು ಸೃಷ್ಟಿಸಿತು. ಮಕ್ಕಳು ಹಿಜಬ್‌, ಬಳೆ ಇತ್ಯಾದಿ ಧರಿಸಿ ಶಾಲೆಗೆ ಹೋಗುತ್ತಿದ್ದರು. ಎರಡನೆಯದಾಗಿ, ಹಿಂಸಾಚಾರವನ್ನು ಪ್ರಚೋದಿಸಲಾಯಿತು. ಕೇಸರಿ ಪೇಟಗಳೊಂದಿಗೆ ಪ್ರತಿಯಾಗಿ ಪ್ರತಿಭಟನೆಗಳನ್ನು ನಡೆಸಲಾಯಿತು.

    ಕೇಸರಿ ಪೇಟಗಳು ಅಗತ್ಯವೆ? ಅಥವಾ ಹಿಜಬ್‌ಗೆ ಪ್ರತಿಕ್ರಿಯೆ ಮಾತ್ರವೇ? ಸರ್ಕಾರ ಮತ್ತು ಹೈಕೋರ್ಟ್‌ ಆದೇಶವು ಮೂಲಭೂತ ಹಕ್ಕುಗಳನ್ನು ಅಮಾನತುಗೊಳಿಸಿದೆ. ಹಿಜಬ್‌ ಧರಿಸಿದ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಮಾಧ್ಯಮಗಳು, ಪೊಲೀಸರು ಮತ್ತು ನಿರ್ವಾಹಕರು ಕಿರುಕುಳ ನೀಡುವುದನ್ನು ನಾವು ನೋಡಿದ್ದೇವೆ. ಮಕ್ಕಳು ಪರೀಕ್ಷೆ ಬರೆಯುವುದನ್ನು ಸಹ ನಿಷೇಧಿಸಲಾಗಿದೆ. ಇದು ನಾಗರಿಕ ಹಕ್ಕುಗಳ ಸಾಮೂಹಿಕ ಉಲ್ಲಂಘನೆಯಾಗಿದೆ.

    ಕೊನೆಯದಾಗಿ, ಇದರರ್ಥ ಒಂದು ಧರ್ಮವನ್ನು ಗುರಿಯಾಗಿಸಲಾಗಿದೆ. ಅದರ ಧಾರ್ಮಿಕ ಆಚರಣೆಯನ್ನು ನಿಷೇಧಿಸಲಾಗಿದೆ. ಆರ್ಟಿಕಲ್‌ 15, ಧರ್ಮದ ಆಧಾರದ ಮೇಲೆ ತಾರತಮ್ಯವನ್ನು ನಿಷೇಧಿಸುತ್ತದೆ. ಇದು ಅದೇ ಉಲ್ಲಂಘನೆಯಲ್ಲವೇ? ಸಂಕ್ಷಿಪ್ತವಾಗಿ ಹೈಕೋರ್ಟ್‌ ಆದೇಶವು ಮಕ್ಕಳನ್ನು ಶಿಕ್ಷಣ ಮತ್ತು ಅಲ್ಲಾನ ಆಜ್ಞೆಗಳ ನಡುವೆ ಆಯ್ಕೆ ಮಾಡಲು ಒತ್ತಾಯಿಸಿದೆ.

    ಮುಸ್ಲಿಮರಿಗೆ ಶಿಕ್ಷಣ ಪಡೆಯುವುದು ಅಲ್ಲಾಹನ ಆಜ್ಞೆಯಾಗಿದೆ. ಅವನ ಕಟ್ಟುಪಾಡುಗಳನ್ನು (ಸಲಾಹ್‌, ಹಿಜಬ್‌, ರೋಜಾ ಇತ್ಯಾದಿ) ಅನುಸರಿಸುತ್ತದೆ. ಈಗ ಯಾವುದು ಬೇಕು ಅದನ್ನು ಆಯ್ಕೆ ಮಾಡಿ ಎಂದು ಸರ್ಕಾರ ಹುಡುಗಿಯರನ್ನು ಒತ್ತಾಯಿಸುತ್ತಿದೆ. ಇಲ್ಲಯವರೆಗೆ ನ್ಯಾಯಾಂಗವು ಗಡ್ಡವನ್ನು ಹೊಂದುವುದು ಮತ್ತು ಹಿಜಬ್‌ ಅನಿವಾರ್ಯವಲ್ಲ ಎಂದು ಘೋಷಿಸಿದೆ. ನಂಬಿಕೆಗಳ ಮುಕ್ತ ಅಭಿವ್ಯಕ್ತಿಯಿಂದ ಈಗ ಏನು ಉಳಿದಿದೆ?

    ಹಿಜಬ್‌ ಧರಿಸುವುದು ಮಹಿಳೆಯರಿಗೆ ಕಿರುಕುಳವನ್ನು ಕಾನೂನುಬದ್ಧಗೊಳಿಸಲು ಈ ತೀರ್ಪು ಬಳಸಿಕೊಳ್ಳುವುದಿಲ್ಲ ಎಂದು ನಾನು ಭಾವಿಸುತ್ತೇನೆ. ಬ್ಯಾಂಕ್‌ಗಳು, ಆಸ್ಪತ್ರೆಗಳು, ಸಾರ್ವಜನಿಕ ಸಾರಿಗೆ ಇತ್ಯಾದಿಗಳಲ್ಲಿ ಹಿಜಬ್‌ ಧರಿಸಿದ ಮಹಿಳೆಯರಿಗೆ ಇದು ಸಂಭವಿಸಿದಾಗ ನಿರಾಶೆಯಾಗಬಹುದು.

    ಪೂರ್ಣ ತೀರ್ಪು ಲಭ್ಯವಾದಾಗ ಒಬ್ಬರು ಹೆಚ್ಚು ವಿವರವಾಗಿ ಪ್ರತಿಕ್ರಿಯೆಯನ್ನು ನೀಡಬಹುದು ಎಂದು ಅಸಾದುದ್ದೀನ್‌ ಓವೈಸಿ ಸರಣಿ ಟ್ವೀಟ್‌ ಮಾಡಿದ್ದಾರೆ.

  • ಮೂರು ಪ್ರತ್ಯೇಕ ಎನ್‍ಕೌಂಟರ್‌ಗಳಲ್ಲಿ ನಾಲ್ವರು ಉಗ್ರರ ಹತ್ಯೆ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ 3 ಪ್ರತ್ಯೇಕ ಎನ್‍ಕೌಂಟರ್‌ಗಳಲ್ಲಿ ನಾಲ್ವರು ಉಗ್ರರು ಹತರಾಗಿದ್ದಾರೆ.

    ಕಳೆದ 12 ಗಂಟೆಗಳಲ್ಲಿ ಭದ್ರತಾ ಪಡೆಗಳು ಕಾಶ್ಮೀರದಲ್ಲಿ ಭಯೋತ್ಪಾದಕರ ವಿರುದ್ಧ ಭಾರೀ ಕಾರ್ಯಾಚರಣೆಯನ್ನು ಆರಂಭಿಸಿವೆ. ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಶನಿವಾರ ಬೆಳಗ್ಗೆ ಕಾಶ್ಮೀರದ ಪುಲ್ವಾಮಾ, ಗಂದರ್‌ಬಾಲ್ ಮತ್ತು ಹಂದ್ವಾರ ಪ್ರದೇಶದಲ್ಲಿ ಮೂರು ಪ್ರತ್ಯೇಕ ಎನ್‍ಕೌಂಟರ್‌ಗಳಲ್ಲಿ ನಾಲ್ವರು ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದೆ ಎಂದು ಹೇಳಿದ್ದಾರೆ.

    ಕಾಶ್ಮೀರದಲ್ಲಿ ನಡೆದ ಎನ್‍ಕೌಂಟರ್‌ನಲ್ಲಿ ನಾಲ್ವರು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದ್ದು, ಇನ್ನೂ ಕಾರ್ಯಾಚರಣೆ ಮುಂದುವರಿದಿದೆ. ಭದ್ರತಾ ಪಡೆಗಳು ಕಾಶ್ಮೀರದಲ್ಲಿ ಹಲವು ಕಾರ್ಯಾಚರಣೆಗಳನ್ನು ಆರಂಭಿಸಿವೆ ಎಂದು ಕಾಶ್ಮೀರ ಐಜಿಪಿ ವಿಜಯ್ ಕುಮಾರ್ ಅವರು ಮಾಹಿತಿ ನೀಡಿದರು. ಇದನ್ನೂ ಓದಿ:  ಭೂದಾಖಲೆಗಳನ್ನು ‘ರೈತನ ಮನೆ ಬಾಗಿಲಿಗೆ’ ತಲುಪಿಸುವುದು ಒಂದು ಅತ್ಯುತ್ತಮ ಸೇವೆ: ಆರ್.ಅಶೋಕ್

    ನಾವು ಕಳೆದ ರಾತ್ರಿ 4-5 ಸ್ಥಳಗಳಲ್ಲಿ ಜಂಟಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದೇವೆ. ಇದುವರೆಗೆ ಪುಲ್ವಾಮಾದಲ್ಲಿ ಜೆಇಎಂನ ಇಬ್ಬರು ಭಯೋತ್ಪಾದಕರು, ಗಂದರ್‌ಬಾಲ್ ಎಲ್‍ಇಟಿಯ ಒಬ್ಬ ಭಯೋತ್ಪಾದಕ, ಹಂದ್ವಾರದಲ್ಲಿ ಎಲ್‍ಇಟಿಯ ಮತ್ತೊಬ್ಬ ಭಯೋತ್ಪಾದಕ ಹತನಾಗಿದ್ದಾನೆ ಎಂದು ತಿಳಿಸಿದರು. ಎಲ್ಲಾ ಕಾರ್ಯಾಚರಣೆಗಳು ಪ್ರಗತಿಯಲ್ಲಿವೆ. ಇತರ ಸ್ಥಳಗಳಲ್ಲಿಯೂ ಸಂಪರ್ಕವನ್ನು ಸ್ಥಾಪಿಸಲಾಗುವುದು ಅಂತ ನಾವು ನಿರೀಕ್ಷಿಸುತ್ತಿದ್ದೇವೆ ಎಂದರು.

    ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಚೆವಾಕಲನ್ ಗ್ರಾಮದಲ್ಲಿ ನಿನ್ನೆ ಸಂಜೆ ಮೊದಲ ಎನ್‍ಕೌಂಟರ್ ಪ್ರಾರಂಭವಾಯಿತು. ಅಲ್ಲಿ ಇಬ್ಬರು ಭಯೋತ್ಪಾದಕರು ಹತರಾಗಿದ್ದಾರೆ. ಅಧಿಕಾರಿಗಳ ಪ್ರಕಾರ, ಇನ್ನೂ ಇಬ್ಬರು ಉಗ್ರರು ಅಲ್ಲಿಯೇ ಸಿಕ್ಕಿಬಿದ್ದಿದ್ದಾರೆ ಎಂದು ತಿಳಿದು ಬಂದಿದೆ.

    ಎರಡನೇ ಎನ್‍ಕೌಂಟರ್ ಮಧ್ಯ ಕಾಶ್ಮೀರದ ಗಂದರ್‌ಬಾಲ್ ಜಿಲ್ಲೆಯ ಕೌಬಾಗ್ ನುನಾರ್ ಪ್ರದೇಶದಲ್ಲಿ ನಡೆದಿದ್ದು, ಅಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಒಬ್ಬ ಎಲ್‍ಇಟಿ ಭಯೋತ್ಪಾದಕನನ್ನು ಕೊಲ್ಲಲಾಯಿತು. ಸದ್ಯ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಶನಿವಾರ ಬೆಳಗ್ಗೆ ಹಂದ್ವಾರದ ರಾಜ್ವಾರ್ ಪ್ರದೇಶದ ನೆಚಮಾದಲ್ಲಿ ನಡೆದ ಎನ್‍ಕೌಂಟರ್‌ನಲ್ಲಿ ಇನ್ನೊಬ್ಬ ಭಯೋತ್ಪಾದಕನನ್ನು ಕೊಲ್ಲಲಾಗಿದೆ ಎಂದು ಕಾಶ್ಮೀರ ವಲಯ ಪೊಲೀಸರು ತಿಳಿಸಿದ್ದಾರೆ.

    ಈ ಕುರಿತು ಕಾಶ್ಮೀರ ವಲಯ ಪೊಲೀಸರು ಟ್ವೀಟ್ ಮಾಡಿದ್ದಾರೆ, ಹಂದ್ವಾರದ ರಾಜ್ವಾರ್ ಪ್ರದೇಶದ ನೆಚಮಾದಲ್ಲಿ ಎನ್‍ಕೌಂಟರ್ ಪ್ರಾರಂಭವಾಗಿದೆ. ಪೊಲೀಸರು ಮತ್ತು ಭದ್ರತಾ ಪಡೆಗಳು ಕಾರ್ಯದಲ್ಲಿವೆ. ಹೆಚ್ಚಿನ ವಿವರಗಳನ್ನು ಅನುಸರಿಸಲಾಗುವುದು. ಎನ್‍ಕೌಂಟರ್ ಕಾರ್ಯಾಚರಣೆ ನಡೆಯುತ್ತಿದೆ. ಇದನ್ನೂ ಓದಿ: ತಾವು ಆಯ್ಕೆಯಾದ ಕ್ಷೇತ್ರಗಳಲ್ಲಿ ಕೆಲಸ ಮಾಡಿ, ರಾಜಧಾನಿಯಲ್ಲಿ ಅಲ್ಲ: ಭಗವಂತ್ ಮಾನ್

    ಇದಕ್ಕೂ ಮೊದಲು, ಫೆಬ್ರವರಿ 10 ರಂದು ಕಾಶ್ಮೀರದಲ್ಲಿ ಮೂವರು ಭಯೋತ್ಪಾದಕರನ್ನು ಕೊಲ್ಲಲಾಯಿತು. ಅದರಲ್ಲಿ ಇಬ್ಬರು ಎಲ್‍ಇಟಿ ಭಯೋತ್ಪಾದಕರು ಪುಲ್ವಾಮಾದ ಬಟ್ಪೋರಾ ಪ್ರದೇಶದಲ್ಲಿ ಮತ್ತು ಶ್ರೀನಗರದ ಹಜರತ್ಬಾಲ್ ಪ್ರದೇಶದಲ್ಲಿ ಒಬ್ಬ ಭಯೋತ್ಪಾದಕನನ್ನು ಕೊಲ್ಲಲಾಯಿತು ಎಂದು ತಿಳಿದು ಬಂದಿದೆ.

    ಈ ವರ್ಷ ಕಾಶ್ಮೀರದಲ್ಲಿ 20 ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಗಳನ್ನು ಕಾರ್ಯಗತಗೊಳಿಸಲಾಗಿದೆ. ಭದ್ರತಾ ಪಡೆಗಳು ಮೂವರು ಉನ್ನತ ಕಮಾಂಡರ್‍ಗಳು ಮತ್ತು 9 ಪಾಕಿಸ್ತಾನಿ ಭಯೋತ್ಪಾದಕರು ಸೇರಿದಂತೆ 35 ಭಯೋತ್ಪಾದಕರನ್ನು ಕೊಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

    ಅದಲ್ಲದೆ ಭದ್ರತಾ ಪಡೆಗಳು ಈ ವರ್ಷ 16 ಸಕ್ರಿಯ ಭಯೋತ್ಪಾದಕರು ಮತ್ತು ಮೂರು ಡಜನ್‍ಗಿಂತಲೂ ಹೆಚ್ಚು ಭಯೋತ್ಪಾದಕರ ಸಹಚರರನ್ನು ಜೀವಂತವಾಗಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.