Tag: Tunga- bhadra river

  • ತುಂಗಭದ್ರಾ ನದಿಯಲ್ಲಿ ನಾಪತ್ತೆಯಾಗಿದ್ದ ಮೂವರು ಯುವಕರು ಶವವಾಗಿ ಪತ್ತೆ

    ತುಂಗಭದ್ರಾ ನದಿಯಲ್ಲಿ ನಾಪತ್ತೆಯಾಗಿದ್ದ ಮೂವರು ಯುವಕರು ಶವವಾಗಿ ಪತ್ತೆ

    – ರಾಯರ ದರ್ಶನಕ್ಕಾಗಿ ಮಂತ್ರಾಲಯ ಮಠಕ್ಕೆ ಬಂದಿದ್ದ ಯುವಕರು

    ರಾಯಚೂರು: ಮಂತ್ರಾಲಯ (Mantralaya) ಬಳಿ ತುಂಗಭದ್ರಾ ನದಿಯಲ್ಲಿ (Tungabhadra River) ಈಜಲು ತೆರಳಿ ನೀರುಪಾಲಾಗಿದ್ದ ಹಾಸನ (Hassan) ಮೂಲದ ಮೂವರು ಯುವಕರು ಶವವಾಗಿ ಪತ್ತೆಯಾಗಿದ್ದಾರೆ.

    ರಾಘವೇಂದ್ರ ಸ್ವಾಮಿ ದರ್ಶನಕ್ಕೆ ರಾಯರ ಮಠಕ್ಕೆ ಬಂದಿದ್ದ ಯುವಕರು ಶನಿವಾರ ಸಂಜೆ ನದಿಗೆ ಈಜಲು ಹೋದಾಗ ಘಟನೆ ನಡೆದಿತ್ತು. ನೀರಿನಲ್ಲಿ ನಾಪತ್ತೆಯಾಗಿದ್ದ ಸ್ಥಳದಲ್ಲೇ ಮೃತದೇಹಗಳು ಪತ್ತೆಯಾಗಿವೆ. ಶನಿವಾರದಿಂದ ನಿರಂತರ ಶೋಧಕಾರ್ಯ ಬಳಿಕ ನಾಪತ್ತೆಯಾದ ಶವಗಳು ಇಂದು ಪತ್ತೆಯಾಗಿವೆ. ಹಾಸನ ಮೂಲದ ಅಜಿತ್ (20), ಸಚಿನ್ (20), ಪ್ರಮೋದ್ (19) ಮೃತ ದುರ್ದೈವಿಗಳು. ಇದನ್ನೂ ಓದಿ: ಅಂಧರಿಗೆ ಸರ್ಕಾರದಿಂದ ಗುಡ್‌ನ್ಯೂಸ್ – ಒಂದೇ ಪಾಸ್‌ನಲ್ಲಿ 4 ನಿಗಮಗಳ ಬಸ್‌ನಲ್ಲಿ ಒಡಾಟಕ್ಕೆ ಅವಕಾಶ

    ಆಂಧ್ರಪ್ರದೇಶದ ಎಸ್‌ಡಿಆರ್‌ಎಫ್ ತಂಡದಿಂದ ನಡೆದ ಶೋಧ ಕಾರ್ಯದ ವೇಳೆ ಶವಗಳು ಪತ್ತೆಯಾಗಿವೆ. ಮಂತ್ರಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮರಣೋತ್ತರ ಪರೀಕ್ಷೆಗಾಗಿ ಮೃತದೇಹಗಳನ್ನು ಶವಾಗಾರಕ್ಕೆ ರವಾನಿಸಲಾಗಿದೆ. ಮಕ್ಕಳನ್ನ ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಇದನ್ನೂ ಓದಿ: ಕಸಬ್ ಗಲ್ಲಿಗೇರಲು ಕಾರಣರಾಗಿದ್ದ ವಕೀಲ ಉಜ್ವಲ್ ನಿಕಮ್‌, ಸದಾನಂದನ್ ಮಾಸ್ಟರ್ ಸೇರಿದಂತೆ ನಾಲ್ವರು ರಾಜ್ಯಸಭೆಗೆ ನಾಮನಿರ್ದೇಶನ

  • ಮೈದುಂಬಿ ಹರಿಯುತ್ತಿದೆ ತುಂಗ-ಭದ್ರಾ, ಹೆಬ್ಬಾಳೆ ಸೇತುವೆ ಮುಳುಗಡೆಗೆ 4 ಅಡಿ ಬಾಕಿ

    ಮೈದುಂಬಿ ಹರಿಯುತ್ತಿದೆ ತುಂಗ-ಭದ್ರಾ, ಹೆಬ್ಬಾಳೆ ಸೇತುವೆ ಮುಳುಗಡೆಗೆ 4 ಅಡಿ ಬಾಕಿ

    ಚಿಕ್ಕಮಗಳೂರು: ಕಾಫಿನಾಡಿನ ಮಲೆನಾಡು ಭಾಗದ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಧಾರಾಕಾರ ಮಳೆಯಾಗುತ್ತಿದ್ದು ಮಲೆನಾಡಿನ ಜೀವನದಿಗಳಾದ ತುಂಗ-ಭದ್ರಾ ಹಾಗೂ ಹೇಮಾವತಿ ನದಿಗಳು ಮೈದುಂಬಿ ಹರಿಯುತ್ತಿವೆ.

    ಜಿಲ್ಲೆಯ ಕುದುರೆಮುಖ, ಕೊಪ್ಪ, ಶೃಂಗೇರಿ, ಕಳಸ, ಸಂಸೆ, ಬಾಳೆಹೊಳೆ, ಬಸ್ರಿಕಟ್ಟೆ ಹಾಗೂ ತನಿಕೋಡು ವ್ಯಾಪ್ತಿಯಲ್ಲಿ ಭಾರೀ ಮಳೆಯಾಗುತ್ತಿದೆ. ಇದರಿಂದ ತುಂಗಾ-ಭದ್ರ ನದಿಗಳು ಮೈದುಂಬಿ ಹರಿಯುತ್ತಿವೆ. ಪಶ್ಚಿಮ ಘಟ್ಟದ ಸಾಲಿನಲ್ಲಿ ಕಳೆದ 3 ದಿನಗಳಿಂದ ಮುಂಗಾರು ಚುರುಕಾಗಿರುವ ಹಿನ್ನೆಲೆ ನದಿಗಳ ಒಳಹರಿವಿನ ಪ್ರಮಾಣದಲ್ಲೂ ಭಾರೀ ಏರಿಕೆಯಾಗಿದೆ.

    ಹೊರನಾಡು ಅನ್ನಪೂರ್ಣೇಶ್ವರಿ ದೇಗುಲಕ್ಕೆ ಸಂಪರ್ಕದ ಕೊಂಡಿಯಾಗಿರುವ ಹೆಬ್ಬಾಳೆ ಸೇತುವೆ ಮುಳುಗುವ ಹಂತದಲ್ಲಿದ್ದು, ನದಿ ನೀರು ಸೇತುವೆಯನ್ನು ಮುಳುಗಿಸಲು ಕೇವಲ ನಾಲ್ಕು ಅಡಿಯಷ್ಟೇ ಬಾಕಿ ಇದೆ. ಒಂದು ವೇಳೆ ಸೇತುವೆ ಮುಳುಗಡೆಯಾದರೆ ಕಳಸ ಹಾಗೂ ಹೊರನಾಡಿನ ಸಂಪರ್ಕ ಕಡಿತಗೊಳ್ಳಲಿದೆ.

    ಕಳೆದ 3 ದಿನಗಳಿಂದ ಮಲೆನಾಡಲ್ಲಿ ಮುಂಗಾರು ಚುರುಕಾಗಿರುವುದರಿಂದ ರೈತರು ಹಾಗೂ ಜನಸಾಮಾನ್ಯರ ಮೊಗದಲ್ಲಿ ಸಂತಸ ಮೂಡಿಸಿದೆ. ಈ ಬಾರಿ ಜೂನ್ ತಿಂಗಳ ಮುಂಗಾರು ಕೈಕೊಟ್ಟ ಕಾರಣಕ್ಕೆ ರೈತಾಪಿ ವರ್ಗ ಕಂಗಾಲಾಗಿ ಕುಳಿತಿತ್ತು. ಆದರೆ ಜುಲೈ ಆರಂಭದಲ್ಲಿ ಮಳೆರಾಯ ಆಗಮಿಸಿ ರೈತರ ಆತಂಕವನ್ನು ಕೊಂಚ ದೂರ ಮಾಡಿದ್ದಾನೆ. ಹೀಗಾಗಿ ಸದ್ಯ ಮಲೆನಾಡಿನಲ್ಲಿ ಚುರುಕುಗೊಂಡಿರುವ ಮಳೆಯನ್ನೇ ನಂಬಿ ಕೃಷಿ ಕಾರ್ಯವನ್ನು ಆರಂಭಿಸಿಸಲು ರೈತರು ನಿರ್ಧರಿಸಿದ್ದಾರೆ.

    ಈ ಭಾರಿ ಮಳೆಯ ಅಭಾವ ಎಷ್ಟರಮಟ್ಟಿಗೆ ಕಾಡಿತ್ತು ಎಂದರೆ ಮಲೆನಾಡಿನಲ್ಲೂ ನೀರಿಗಾಗಿ ಹಾಹಾಕಾರ ಎದುರಾಗಿತ್ತು. ಜನ ಜಾನುವಾರುಗಳಿಗೆ ಸರಿಯಾಗಿ ಕುಡಿಯುವ ನೀರು ಸಿಗದೆ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಆದರೆ ಸದ್ಯ ಮಲೆನಾಡು ಹಾಗೂ ಕಾಫಿನಾಡಿನ ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವುದು ಖುಷಿಯ ಸಂಗತಿಯಾಗಿದೆ.