Tag: tumkuru

  • ತುಮಕೂರಲ್ಲಿ ಮತ್ತೆ ಬೈಕ್ ವೀಲಿಂಗ್ ಹಾವಳಿ- ಟಚ್ ಮಾಡಿದ್ದಕ್ಕೆ ಬೈಕಿಗೆ ಬೆಂಕಿ ಹಚ್ಚಿದ ಸ್ಥಳೀಯರು

    ತುಮಕೂರಲ್ಲಿ ಮತ್ತೆ ಬೈಕ್ ವೀಲಿಂಗ್ ಹಾವಳಿ- ಟಚ್ ಮಾಡಿದ್ದಕ್ಕೆ ಬೈಕಿಗೆ ಬೆಂಕಿ ಹಚ್ಚಿದ ಸ್ಥಳೀಯರು

    ತುಮಕೂರು: ನಗರದಲ್ಲಿ ಮತ್ತೆ ಬೈಕ್ ವೀಲಿಂಗ್ ಹಾವಳಿ ಶುರುವಾಗಿದ್ದು, ವೀಲಿಂಗ್ ಮಾಡಬೇಕಾದರೆ ವ್ಯಕ್ತಿಗೆ ಬೈಕ್ ಟಚ್ ಆದ ಪರಿಣಾಮ ಸ್ಥಳೀಯರು ಬೈಕಿಗೆ ಬೆಂಕಿ ಹಚ್ಚಿದ ಘಟನೆ ತುಮಕೂರು ನಗರದ ಟೌನ್ ಹಾಲ್ ಸರ್ಕಲ್ ಬಳಿ ನಡೆದಿದೆ.

    ಫಾರೂಕ್(23), ಶಮೀರ್(19) ಹಾಗೂ ಸಲ್ಮಾನ್(20) ಬೈಕ್ ವೀಲಿಂಗ್ ಮಾಡಿದ ಯುವಕರು. ಮೂವರು ಮರಳೂರು ದಿಣ್ಣೆ ಸಮೀಪದ ನಜಬಾದ್ ನಿವಾಸಿಗಳಾಗಿದ್ದು, ಭಾನುವಾರ ರಾತ್ರಿ ವೀಲಿಂಗ್ ಮಾಡಬೇಕಾದರೆ ವ್ಯಕ್ತಿಗೆ ಬೈಕ್ ಟಚ್ ಆಗಿದೆ.

    ಮೂವರು ಯುವಕರು ಸೇರಿ ಎರಡು ಬೈಕಿನಲ್ಲಿ ವೀಲಿಂಗ್ ಮಾಡಿಕೊಂಡು ಬಂದಿದ್ದಾರೆ. ಕಂಟ್ರೋಲ್ ಸಿಗದೆ ದಾರಿಹೋಕನಿಗೆ ಬೈಕ್ ಟಚ್ ಮಾಡಿದ್ದಾರೆ. ಟಚ್ ಮಾಡಿದ ಪರಿಣಾಮ ಸ್ಥಳೀಯರು ಬೈಕ್ ಸವಾರರಿಗೆ ಥಳಿಸಿ ಬೈಕಿಗೆ ಬೆಂಕಿ ಹಚ್ಚಿದ್ದಾರೆ.

    ಸದ್ಯ ಮೂವರು ಯುವಕರನ್ನು ಸ್ಥಳೀಯರು ಟೌನ್ ಠಾಣೆ ಪೊಲೀಸರಿಗೆ ಒಪ್ಪಿಸಿದ್ದು, ನಗರ ಠಾಣಾ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

     

  • ವಿಶ್ವದ ಅತಿದೊಡ್ಡ ಸೋಲಾರ್ ಪಾರ್ಕ್ ಲೋಕಾರ್ಪಣೆ ಮಾಡಿದ ಸಿಎಂ

    ವಿಶ್ವದ ಅತಿದೊಡ್ಡ ಸೋಲಾರ್ ಪಾರ್ಕ್ ಲೋಕಾರ್ಪಣೆ ಮಾಡಿದ ಸಿಎಂ

    ತುಮಕೂರು: ವಿಶ್ವದಲ್ಲೇ ಅತಿದೊಡ್ಡ ಸೋಲಾರ್ ಪಾರ್ಕ್ ಎಂಬ ಹೆಮ್ಮೆಗೆ ಪಾತ್ರವಾದ ತುಮಕೂರು ಜಿಲ್ಲೆ ಪಾವಗಡದಲ್ಲಿರುವ ಸೋಲಾರ್ ಪಾರ್ಕ್ ಅನ್ನು ಇಂದು ಸಿಎಂ ಸಿದ್ದರಾಮಯ್ಯ ಲೋಕಾರ್ಪಣೆ ಮಾಡಿದರು.

    2 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಸಾಮರ್ಥ್ಯ ಹೊಂದಿರುವ ಸೋಲಾರ್ ಪಾರ್ಕ್‍ನಲ್ಲಿ ಮೊದಲ ಹಂತದಲ್ಲಿ 600 ಮೆ,ವ್ಯಾ ವಿದ್ಯುತ್ ಉತ್ಪಾದನೆ ನಡೆಸುವ ಘಟಕ್ಕೆ ಚಾಲನೆ ನೀಡಲಾಯಿತು. ಸೋಲಾರ್ ಪಾರ್ಕ್ ಸುಮಾರು 13 ಸಾವಿರ ಎಕರೆ ವಿಸ್ತೀರ್ಣ ಹೊಂದಿದ್ದು, 10 ಸಾವಿರ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ.

    ಸೌರ ಘಟಕವನ್ನು ಉದ್ಘಾಟನೆ ನಡೆಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು ಎಂದಿನಂತೆ ಪ್ರಧಾನಿ ಮೋದಿ ಹಾಗೂ ಬಿಜೆಪಿ ವಿರುದ್ಧ ಹಾಸ್ಯದ ದಾಟಿಯಲ್ಲಿ ವಾಗ್ದಾಳಿ ನಡೆಸಿದರು.

    ಲೆಕ್ಕ ಕೊಡಿ: ಅಮಿತ್ ಶಾ ರಾಜ್ಯಕ್ಕೆ ಭೇಟಿ ನೀಡಿ ಕೇಂದ್ರದಿಂದ ಬಂದ ಹಣ ಲೆಕ್ಕ ಕೇಳುತ್ತಾರೆ. ನಮಗೆ ಲೆಕ್ಕ ಕೇಳಲು ಇವರು ಯಾರು ಎಂದು ಪ್ರಶ್ನಿಸಿದರು. ಅಮಿತ್ ಶಾ ಅವರಗೆ ಸಂವಿಧಾನದ ಅರಿವೇ ಇಲ್ಲ. ಆದರೆ ಪ್ರಧಾನಿಗಳು ಕೂಡಾ ಅಮಿತ್ ಶಾ ರಂತೆ ನಡೆದುಕೊಳ್ಳುತ್ತಾರೆ. ರಾಜ್ಯಕ್ಕೆ ಮೂರು ಬಾರಿ ಬಂದರೂ ರೈತರ ಸಾಲ ಮನ್ನಾ, ಮಹಾದಾಯಿ ವಿವಾದ ಕುರಿತು ಪ್ರಸ್ತಾಪ ಮಾಡಿಲ್ಲ. ಇದರ ಜೊತೆಗೆ ಯಡಿಯೂರಪ್ಪ ಅವರಿಗೆ `ರೈತ ಬಂಧು’ ಎಂಬ ಬಿರುದು ನೀಡಲಾಗಿದೆ. ಆದರೆ ರೈತರ ಮೇಲೆ ಗೋಲಿಬಾರ್ ನಡೆಸಿದ್ದಾರೆ. ರೈತರ ಸಾಲ ಮನ್ನಾ ಮಾಡಲು ಕೇಳಿದರೆ ಹಣ ಪ್ರಿಂಟ್ ಮಾಡುತ್ತೇನಾ ಎಂದು ಕೇಳುತ್ತಾರೆ. ಮತ್ತೊಬ್ಬರು ಮಣ್ಣಿನ ಮಗ, ರೈತ ನಾಯಕರಂತೆ ಎಂದು ದೇವೇಗೌಡರು ಹಾಗೂ ಕುಮಾರಸ್ವಾಮಿ ಹೆಸರು ಪ್ರಸ್ತಾಪಿಸದೇ ವ್ಯಂಗ್ಯವಾಡಿದರು.

    ಕಾರ್ಯಕ್ರಮದ ಬಳಿಕ ಬಿಜೆಪಿ ಬಿಡುಗಡೆ ಮಾಡಿದ ಚಾರ್ಜ್ ಶೀಟ್ ಕುರಿತು ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರು ಮಾಡಿದ ಅನಾಹುತಗಳಿಗೆ ಅವರು ಮೊದಲು ಪಶ್ಚಾತ್ತಾಪ ಪಡಬೇಕು. ಅವರ ಕಾಲದಲ್ಲೇ ಫೈಲ್ ಗಳಿಗೆ ಬೆಂಕಿ ಹಾಕಿದ್ದು. ರಾತ್ರಿ ಹೊತ್ತು ಟೆಂಡರ್ ಕರೆದಿದ್ದು. ಕಾರ್ಪೊರೇಷನ್ ಆಸ್ತಿಗಳನ್ನು ಅಡಮಾನ ಮಾಡಿದ್ದು. ಅದನ್ನೆಲ್ಲಾ ಬಿಟ್ಟು ನಮ್ಮ ವಿರುದ್ಧ ಚಾರ್ಜ್ ಶೀಟ್ ಬಿಡುಗಡೆ ಮಾಡಲು ಅವರಿಗೆ ನೈತಿಕತೆ ಇಲ್ಲ. ರಾಜ್ಯದ ಬೊಕ್ಕಸ ಕೊಳ್ಳೆ ಹೊಡೆದು ಸಾಲ ಮಾಡಿಟ್ಟು ಹೋಗಿದ್ದಾರೆ. ಅವರ ಸಾಲವನ್ನು ನಾವು ತೀರಿಸಿದ್ದೇವೆ. ಅವರು ಮಾಡಿದ ಪಾಪಕ್ಕೆ ಅವರೇ ಪ್ರಾಯಶ್ಚಿತ ಪಡಲಿ ಎಂದು ವಾಗ್ದಾಳಿ ನಡೆಸಿದರು.

    ಸೋಲಾರ್ ಪಾರ್ಕ್ ಲೋಕಾರ್ಪಣೆ ಕಾರ್ಯಕ್ರಮದ ವೇಳೆ ಇಂಧನ ಸಚಿವ ಡಿಕೆ ಶಿವಕುಮಾರ್, ಸಚಿವ ಜಯಚಂದ್ರ ಸೇರಿದಂತೆ ಹಲವು ಸಚಿವರು ಭಾಗವಹಿಸಿದ್ದರು. ಇದನ್ನೂ ಓದಿ: ಮೋದಿಯಂತೆ ಮಿಮಿಕ್ರಿ ಮಾಡಿದ ಸಚಿವ ಸಂತೋಷ್ ಲಾಡ್- ವೇದಿಕೆಯಲ್ಲೇ ತಿರುಗೇಟು ನೀಡಿದ ಬಿಜೆಪಿ ಜಿಪಂ ಸದಸ್ಯ!

    https://www.youtube.com/watch?v=kCE9VhsSuiA

  • ಮಹಿಳೆ ದೇಹದಿಂದ 99 ಕಲ್ಲುಗಳು ತೆಗೆದ ತುಮಕೂರು ವೈದ್ಯರು

    ಮಹಿಳೆ ದೇಹದಿಂದ 99 ಕಲ್ಲುಗಳು ತೆಗೆದ ತುಮಕೂರು ವೈದ್ಯರು

    ತುಮಕೂರು: ಮಹಿಳೆಯೊರ್ವಳಿಗೆ ಶಸ್ತ್ರಚಿಕಿತ್ಸೆ ನಡೆಸಿ ಹೊಟ್ಟೆಯಿಂದ ಬರೋಬ್ಬರಿ 99 ಕಲ್ಲುಗಳನ್ನು ಹೊರತೆಗೆದು ತುಮಕೂರು ಜಿಲ್ಲಾಸ್ಪತ್ರೆ ವೈದ್ಯರು ಅಪರೂಪದ ಸಾಧನೆ ಮಾಡಿದ್ದಾರೆ.

    ಸಲ್ಮಾ ಭಾನು (45) ಎಂಬುವರ ದೇಹದಲ್ಲಿ ಪತ್ತೆಯಾದ ಕಲ್ಲುಗಳನ್ನು ಯಶಸ್ವಿಯಾಗಿ ಹೊರ ತೆಗೆಯಲಾಗಿದೆ. ನಗರದ ಶಾಂತಿನಗರದ ನಿವಾಸಿಯಾದ ಸಲ್ಮಾ ಹೊಟ್ಟೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಸ್ಕ್ಯಾನ್ ಮಾಡಿ ನೋಡಿದಾಗ ಪಿತ್ತಕೋಶದಲ್ಲಿ ಕಲ್ಲು ಇರುವುದು ಕಂಡು ಬಂದಿದೆ.

    ತಕ್ಷಣ ಡಾ. ವಾಸಿಂ ಹಾಗೂ ತಂಡ ಶಸ್ತ್ರ ಚಿಕಿತ್ಸೆ ನಡೆಸಿ ಪಿತ್ತಕೋಶದಲ್ಲಿದ್ದ 99 ಕಲ್ಲುಗಳನ್ನು ಹೊರಕ್ಕೆ ತೆಗೆದಿದ್ದಾರೆ. ಹೊಟ್ಟೆಯಲಿ 8 ಮಿಲಿ ಮೀಟರ್ ನಿಂದ 20 ಮಿಲಿ ಮೀಟರ್ ವರೆಗಿನ ಕಲ್ಲುಗಳು ಪತ್ತೆಯಾಗಿತ್ತು.

    ಒಂದು ವೇಳೆ ಶಸ್ತ್ರಚಿಕಿತ್ಸೆ ಮಾಡದೇ ಇದ್ದರೆ ಸಲ್ಮಾ ಅವರ ಪ್ರಾಣಕ್ಕೆ ಅಪಾಯವಾಗುವ ಸಾಧ್ಯತೆಯಿತ್ತು. ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿದ್ದಕ್ಕೆ ಸಾರ್ವಜನಿಕರು ವೈದ್ಯರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

     

  • ಮನೆಯೊಳಗೆ ಚಿರತೆ ನುಗಿದ್ದ ವೇಳೆ ಶೌಚಾಲಯದಲ್ಲಿ ಬಂಧಿಯಾಗಿದ್ದ ಅತ್ತೆ-ಸೊಸೆಗೆ ಸನ್ಮಾನ!

    ಮನೆಯೊಳಗೆ ಚಿರತೆ ನುಗಿದ್ದ ವೇಳೆ ಶೌಚಾಲಯದಲ್ಲಿ ಬಂಧಿಯಾಗಿದ್ದ ಅತ್ತೆ-ಸೊಸೆಗೆ ಸನ್ಮಾನ!

    ತುಮಕೂರು: ಮನೆಯೊಳಗೆ ಇದ್ದ ಚಿರತೆಗೆ ಸೆಡ್ಡುಹೊಡೆದು ಸತತ 7 ಗಂಟೆ ಕಾಲ ಶೌಚಾಲಯದಲ್ಲಿ ಬಂಧಿಯಾಗಿ ಸುರಕ್ಷಿತವಾಗಿ ಹೊರಕ್ಕೆ ಬಂದ ತುಮಕೂರಿನ ಗಟ್ಟಿಗಿತ್ತಿ ಅತ್ತೆ-ಸೊಸೆಗೆ ಅಭಿನಂದನೆಯ ಮಾಹಾಪೂರ ಹರಿದು ಬರುತಿದೆ.

    ಅತ್ತೆ ವನಜಾಕ್ಷಿ ಸೊಸೆ ವಿನುತಾ ಹಾಗೂ ಮಾವ ರಂಗನಾಥ್ ಅವರು ತೋರಿದ ಧೈರ್ಯಕ್ಕೆ ಮೆಚ್ಚಿ ನಗರದ ಜನತೆ ಸನ್ಮಾನಿಸಿದ್ದಾರೆ. ಜಯನಗರ ಬಡಾವಣೆ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಗಟ್ಟಿಗಿತ್ತಿ ಅತ್ತೆ ಮತ್ತು ಸೊಸೆಗೆ ಭಾನುವಾರ ಸನ್ಮಾನಿಸಲಾಯಿತು. ಇದನ್ನೂ ಓದಿ: ಮನೆಗೆ ನುಗ್ಗಿದ ಚಿರತೆ – ಭಯಗೊಂಡು ಶೌಚಾಲಯದಲ್ಲಿ ಅಡಗಿಕೊಂಡ್ರು ಅತ್ತೆ, ಸೊಸೆ

    ಯಾವುದೇ ಸಂಕಷ್ಟ ಬಂದರೂ ಧೃತಿಗೆಡದೇ ಧೈರ್ಯದಿಂದ ಇದ್ದರೆ ಆ ಸಂಕಷ್ಟದಿಂದ ಸುಲಭವಾಗಿ ಪಾರಾಗಬಹುದು ಇದಕ್ಕೆ ಈ ಅತ್ತೆ-ಸೊಸೆಯೆ ಸಾಕ್ಷಿ ಎಂದು ಅಭಿನಂದಿಸಿ ಪ್ರಮಾಣ ಪತ್ರ ನೀಡಲಾಗಿದೆ. ಶಾಸಕ ರಫೀಕ್ ಅಹಮದ್ ಈ ಅಭಿನಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಚಿರತೆ ಸಂಕಷ್ಟದಿಂದ ಪಾರಾದ ರಂಗನಾಥ್ ಅವರ ಕುಟುಂಬದ ಧೈರ್ಯವನ್ನು ಕೊಂಡಾಡಿದರು.

    ಅಂದಹಾಗೆ ಜನವರಿ 20 ರಂದು ಇವರ ಮನೆಗೆ ಚಿರತೆ ನುಗ್ಗಿತ್ತು. ಭಯಗೊಂಡು ಮನೆಯವರು ಶೌಚಾಲಯದಲ್ಲಿ ಅಡಗಿಕೊಂಡಿದ್ದರು. ಸತತ 11 ಗಂಟೆಯ ಕಾರ್ಯಚರಣೆ ಮೂಲಕ ಚಿರತೆಯನ್ನು ಮನೆಯಲ್ಲೇ ಸೆರೆಹಿಡಿಯಲಾಗಿತ್ತು. ಇದನ್ನೂ ಓದಿ: ಆಪರೇಷನ್ ಚೀತಾ ಸಕ್ಸಸ್-ಅಡುಗೆ ಮನೆಯ ಅಟ್ಟದ ಮೇಲೆ ಕುಳಿತಿದ್ದ ಚಿರತೆ

  • ಈಗ ಯಾರೇ ನೀ ಮೋಹಿನಿ ಕಾಟ: ಧಾರಾವಾಹಿಯಲ್ಲಿನ ಭೂತ ನೋಡಿ ವಿದ್ಯಾರ್ಥಿನಿಗೆ ಚಳಿ ಜ್ವರ!

    ಈಗ ಯಾರೇ ನೀ ಮೋಹಿನಿ ಕಾಟ: ಧಾರಾವಾಹಿಯಲ್ಲಿನ ಭೂತ ನೋಡಿ ವಿದ್ಯಾರ್ಥಿನಿಗೆ ಚಳಿ ಜ್ವರ!

    ತುಮಕೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ನಂದಿನಿ ಧಾರಾವಾಹಿಯ ಪಾತ್ರ ಅನುಕರಣೆ ಮಾಡಿ ಬಾಲಕಿಯೊರ್ವಳು ಬಲಿಯಾದ ಘಟನೆ ಮಾಸುವ ಮುನ್ನವೇ `ಯಾರೇ ನೀ ಮೋಹಿನಿ’ ಯ ಕಥೆ ಕೇಳಿ ವಿದ್ಯಾರ್ಥಿನಿಯೊಬ್ಬಳು ಅಸ್ವಸ್ಥಳಾಗಿದ್ದಾಳೆ.

    ಹೌದು. ತುಮಕೂರು ನಗರದ ಬೈಲಾಂಜನೇಯಸ್ವಾಮಿ ದೇವಸ್ಥಾನದ ಬಳಿ ಇರುವ ಇಂಡೋಕಿಟ್ಸ್ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಧಾರಾವಾಹಿಯಲ್ಲಿನ ಭೂತದ ಕಥೆ ಕೇಳಿ ಇಬ್ಬರು ಮಕ್ಕಳು ಹೆದರಿ ಅದರಲ್ಲಿ ಓರ್ವ ಬಾಲಕಿ ಚಳಿ ಜ್ವರದಿಂದ ಅಸ್ವಸ್ಥಳಾಗಿದ್ದಾಳೆ. ಇದನ್ನೂ ಓದಿ: ಶಾಕಿಂಗ್.. ಸೀರಿಯಲ್ ಸೀನ್ ನೋಡಿ ಬೆಂಕಿ ಹಚ್ಚಿಕೊಂಡು ಬಾಲಕಿ ಸಾವು!

    ಯಾರೇ ನೀ ಮೋಹಿನಿ ಧಾರವಾಹಿ ವೀಕ್ಷಿಸಿದ ಬಾಲಕಿ ಪುಷ್ಮಿತಾ ಶಾಲೆಗೆ ಬಂದು ತನ್ನ ಸಹಪಾಠಿ ಪ್ರತಿಕ್ಷಾಗೆ ಹೇಳಿದ್ದಾಳೆ. ಧಾರಾವಾಹಿಯಲ್ಲಿ ಇರುವಂತೆ ಶಾಲೆಯಲ್ಲೂ ಕೂಡ ಭೂತ-ಪಿಶಾಚಿ ಇದೆ ಎಂದು ಪುಷ್ಮಿತಾ ತಾನು ಹೆದರಿದ್ದಲ್ಲದೇ ಪ್ರತಿಕ್ಷಾಗೂ ಹೆದರಿಸಿದ್ದಾಳೆ.

    ಈ ಭಯದಲ್ಲೇ ಮನೆಗೆ ಹೋಗಿದ್ದ ಪ್ರತಿಕ್ಷಾಗೆ ಚಳಿ-ಜ್ವರ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಪೋಷಕರು ಚಿಕಿತ್ಸೆ ನೀಡಿ ವಿಚಾರಿಸಿದಾಗ ಪ್ರತಿಕ್ಷಾ ಧಾರಾವಾಹಿಯಲ್ಲಿನ ಭೂತದ ಕಥೆ ಹೇಳಿದ್ದಾಳೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಸೀರಿಯಲ್ ಗೆ ಬಾಲಕಿ ಬಲಿ ಪ್ರಕರಣ- ಟಿವಿ ಒಡೆದು ನೊಂದ ಪೋಷಕರ ಆಕ್ರೋಶ

  • ಶಾಲಾ ವಾಹನ ಪಲ್ಟಿ- 3 ಶಿಕ್ಷಕರು, 10ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಾಯ

    ಶಾಲಾ ವಾಹನ ಪಲ್ಟಿ- 3 ಶಿಕ್ಷಕರು, 10ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಾಯ

    ತುಮಕೂರು: ಶಾಲಾ ವಾಹನ ಮಗುಚಿ ಬಿದ್ದ ಪರಿಣಾಮ ಮೂವರು ಶಿಕ್ಷಕರು ಹಾಗೂ 10 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ಜಿಲ್ಲೆಯ ಪಾವಗಡ ತಾಲೂಕಿನ ಹುಸೇನ್ ಪುರ ಗ್ರಾಮದ ಬಳಿ ನಡೆದಿದೆ.

    ಸತ್ಯಸಾಯಿ ಜಗದಾಂಬಾ ಖಾಸಗಿ ಶಾಲೆಯ ವಾಹನ ಇದಾಗಿದ್ದು, ಬೆಳಗ್ಗೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗುವಾಗ ಈ ಅಪಘಾತ ಸಂಭವಿಸಿದೆ. ಚಾಲಕನ ನಿರ್ಲಕ್ಷ್ಯದಿಂದ ವಾಹನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ. ಶಾಲಾವಾಹನದ ಅಪಘಾತ ಸಂಭವಿಸುತ್ತಿದ್ದಂತೆ ಅಲ್ಲೇ ಇದ್ದ ಸ್ಥಳೀಯರು ವಾಹನದಲ್ಲಿನ ವಿದ್ಯಾರ್ಥಿಗಳನ್ನು ರಕ್ಷಿಸಿ ತಿರುಮಣಿ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಿದ್ದಾರೆ.

    ಚಾಲಕ ಜಯರಾಮ್ ಮದ್ಯಪಾನ ಮಾಡಿ ವಾಹನ ಚಲಾಯಿಸಿದ್ದೆ ವಾಹನ ಪಲ್ಟಿ ಹೊಡೆಯಲು ಕಾರಣ ಎನ್ನಲಾಗಿದೆ. ಅಪಘಾತ ಸಂಭವಿಸಿದ ನಂತರ ಚಾಲಕ ಜಯರಾಮ್ ಪರಾರಿಯಾಗಿದ್ದಾನೆ. ಈ ಘಟನೆ ಸಂಬಂಧ ತಿರುಮಣಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

     

  • ಮದ್ವೆಯಾಗೋದಾಗಿ ನಂಬಿಸಿ 2ವರ್ಷ ಪ್ರೀತಿ ಮಾಡಿ ಗರ್ಭಿಣಿ ಮಾಡ್ದ – ಈಗ ನಾನವನಲ್ಲ ಎಂದು ಎಸ್ಕೇಪ್

    ಮದ್ವೆಯಾಗೋದಾಗಿ ನಂಬಿಸಿ 2ವರ್ಷ ಪ್ರೀತಿ ಮಾಡಿ ಗರ್ಭಿಣಿ ಮಾಡ್ದ – ಈಗ ನಾನವನಲ್ಲ ಎಂದು ಎಸ್ಕೇಪ್

    ತುಮಕೂರು: ಎರಡು ವರ್ಷಗಳಿಂದ ಪ್ರೀತಿ ಮಾಡಿ ಮದುವೆಯಾಗುವುದಾಗಿ ನಂಬಿಸಿ ಗರ್ಭಿಣಿ ಮಾಡಿದ್ದು, ಈಗ ಯುವತಿಗೆ ಮೋಸ ಮಾಡಿ ಪರಾರಿಯಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹಂದನಕೆರೆ ನಿವಾಸಿ ಸೌಮ್ಯಾ(ಹೆಸರು ಬದಲಾಯಿಸಲಾಗಿದೆ)ಗೆ ಅದೇ ಊರಿನ ಟಾಟಾ ಏಸ್ ಚಾಲಕ ಸೋಮಲಿಂಗಯ್ಯ ಮೋಸ ಮಾಡಿ ಪರಾರಿಯಾಗಿದ್ದಾನೆ. ಜೆಡಿಎಸ್ ಕಾರ್ಯಕರ್ತನೂ ಆದ ಸೋಮಲಿಂಗಯ್ಯ ಮದುವೆಯಾಗುದಾಗಿ ನಂಬಿಸಿ, ಯುವತಿಯನ್ನು ದೈಹಿಕವಾಗಿ ಬಳಸಿಕೊಂಡಿದ್ದಾನೆ. ಪರಿಣಾಮ ಯುವತಿ ಈಗ 5 ತಿಂಗಳ ಗರ್ಭಿಣಿಯಾಗಿದ್ದಾರೆ.

    ಯುವತಿ ಗರ್ಭಿಣಿಯಾದ ವಿಚಾರ ತಿಳಿಯುತ್ತಿದ್ದಂತೆಯೇ ಸೋಮಲಿಂಗಯ್ಯ ನಾನವನಲ್ಲ ಎಂದು ಹೇಳಿ ಪರಾರಿಯಾಗಿದ್ದಾನೆ. ಈ ವಿಚಾರದ ಬಗ್ಗೆ ಊರ ಹಿರಿಯರು ಪಂಚಾಯತಿ ಮಾಡಿ ಸೌಮ್ಯಾ ಹಾಗೂ ಸೋಮಲಿಂಗಯ್ಯರಿಗೆ ಮದುವೆ ಮಾಡಲು ಹೊರಟಿದ್ದಾರೆ. ಆದರೆ ಹಂದನಕೆರೆ ಜಿಲ್ಲಾಪಂಚಾಯತ್ ಜೆಡಿಎಎಸ್ ಸದಸ್ಯ ರಾಮಚಂದ್ರಯ್ಯ ಇದಕ್ಕೆ ಅಡ್ಡಿಯಾಗಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

    ಈ ಸಂಬಂಧ ಹಂದನಕೆರೆ ಠಾಣೆಯಲ್ಲಿ ಸೋಮಲಿಂಗಯ್ಯ ಸೇರಿದಂತೆ ನಾಲ್ವರ ವಿರುದ್ಧ ದೂರು ದಾಖಲಾಗಿದೆ.

  • `ಮನೆಮನೆಗೆ ಕುಮಾರಣ್ಣ’ ವೇಳೆ ಗ್ರಾಮಸ್ಥರ ಜೊತೆ ಜೆಡಿಎಸ್ ಕಾರ್ಯಕರ್ತರ ಮಾರಾಮಾರಿ

    `ಮನೆಮನೆಗೆ ಕುಮಾರಣ್ಣ’ ವೇಳೆ ಗ್ರಾಮಸ್ಥರ ಜೊತೆ ಜೆಡಿಎಸ್ ಕಾರ್ಯಕರ್ತರ ಮಾರಾಮಾರಿ

    ತುಮಕೂರು: ತುರುವೇಕೆರೆ ಜೆಡಿಎಸ್ ಶಾಸಕ ಎಮ್ ಟಿ ಕೃಷ್ಣಪ್ಪ ಬೆಂಬಲಿಗರ ಗೂಂಡಾ ವರ್ತನೆ ಮುಂದುವರೆದಿದ್ದು, ಅಭಿವೃದ್ಧಿ ಕಾಮಗಾರಿ ಆಗಿಲ್ಲ ಎಂದು ಪ್ರಶ್ನಿಸಿದ್ದ ಗ್ರಾಮಸ್ಥರ ಮೇಲೆ ಶಾಸಕರ ಬೆಂಬಲಿಗರು ಹಿಗ್ಗಾಮಗ್ಗಾ ಥಳಿಸಿದ್ದಾರೆ.

    ತಾಲೂಕಿನ ಅಮ್ಮಸಂದ್ರದಲ್ಲಿ ಮನೆಮನೆಗೆ ಕುಮಾರಣ್ಣ ಕಾರ್ಯಕ್ರಮ ನಡೆಯುತಿತ್ತು. ಈ ಸಂದರ್ಭದಲ್ಲಿ ಗ್ರಾಮದ ನಿವಾಸಿ ಗೋಪಾಲ ಹಾಗೂ ಆತನ ಸ್ನೀಹಿತರು ನಮ್ಮೂರಲ್ಲಿ ಅಭಿವೃದ್ದಿ ಕೆಲಸ ಆಗಿಲ್ಲ. ನಾವ್ಯಾಕೆ ಜೆಡಿಎಸ್ ಗೆ ಮತ ಹಾಕಬೇಕು ಎಂದು ಪ್ರಶ್ನಿಸಿದ್ದಾರೆ.

    ಶಾಸಕ ಎಮ್ ಟಿ ಕೃಷ್ಣಪ್ಪರ ಸಮ್ಮುಖದಲ್ಲೇ ಈ ಪ್ರಶ್ನೆ ಕೇಳಿದ್ದಕ್ಕೆ ಬೆಂಬಲಿಗರು ಮತ್ತು ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆದಿದೆ. ಬಳಿಕ ಜಗಳ ಅತಿರೇಕಕ್ಕೆ ತಲುಪಿ ಶಾಸಕರ ಬೆಂಬಲಿಗರು ಪ್ರಶ್ನಿಸಿದ ಯುವಕರ ಮೇಲೆ ಮನಸೋ ಇಚ್ಚೆ ಹಲ್ಲೆ ನಡೆಸಿದ್ದಾರೆ.

    ಸುಮಾರು ಒಂದು ಗಂಟೆಗೂ ಹೆಚ್ಚುಕಾಲ ಜಗಳ ನಡೆದಿದೆ. ಸ್ಥಳಕ್ಕೆ ದಂಡಿನಶಿವರ ಪೊಲಿಸರು ದೌಡಾಯಿಸಿದ್ದು ಸ್ಥಳದಲ್ಲಿ ಬಿಗುವಿನ ವಾತವರಣ ಉಂಟಾಗಿದೆ.

    https://www.youtube.com/watch?v=TrVNpT9tPWQ

  • ಲೋನ್ ಕೊಡಿಸುವುದಾಗಿ ಹೇಳಿ ವಂಚಿಸಿದ ಮಹಿಳೆಗೆ 2 ಕಿ.ಮೀ ಮೆರವಣಿಗೆ ಮಾಡಿದ ಜನರು

    ಲೋನ್ ಕೊಡಿಸುವುದಾಗಿ ಹೇಳಿ ವಂಚಿಸಿದ ಮಹಿಳೆಗೆ 2 ಕಿ.ಮೀ ಮೆರವಣಿಗೆ ಮಾಡಿದ ಜನರು

    ತುಮಕೂರು: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಸಚಿವೆ ಉಮಾಶ್ರೀ ಹೆಸರು ಹೇಳಿಕೊಂಡು ಮಹಿಳೆಯೊಬ್ಬಳು ನೂರಾರು ಜನರಿಗೆ ವಂಚಿಸಿದ ಘಟನೆ ತುಮಕೂರಿನಲ್ಲಿ ಬೆಳಕಿಗೆ ಬಂದಿದೆ.

    ಶಿರಾ ಗೇಟ್ ನ ನಿವಾಸಿ ಪುಷ್ಪಾ ಜನರಿಗೆ ಪಂಗನಾಮ ಹಾಕಿದ ವಂಚಕಿ. ಈಕೆ ಸರ್ಕಾರದ ವತಿಯಿಂದ ಎಸ್.ಬಿ.ಐ ನಲ್ಲಿ ಎರಡು ಲಕ್ಷದವರೆಗೂ ಲೋನ್ ಕೊಡಿಸುತ್ತೀನಿ ಎಂದು ಹೇಳಿ ದೊಡ್ಡಸಾರಂಗಿಪಾಳ್ಯ ಸೇರಿದಂತೆ ಹಲವು ಗ್ರಾಮಗಳ ನೂರಾರು ಜನರಿಂದ ಮುಂಗಡವಾಗಿ ಮನಸೋ ಇಚ್ಛೆ ಹಣ ವಸೂಲಿ ಮಾಡಿ ಮೋಸ ಮಾಡಿದ್ದಾಳೆ.

    ಸ್ವಯಂ ಉದ್ಯೋಗ ಮಾಡಲು ಸರ್ಕಾರವೇ ಲೋನ್ ನೀಡುತ್ತೆ. ಅದಕ್ಕೆ ಮುಂಗಡವಾಗಿ ಹಣ ಕಟ್ಟಬೇಕು ಎಂದು ಹೇಳಿ ಕೆಲವರಿಂದ ನಾಲ್ಕು ಸಾವಿರ, ಇನ್ನೂ ಕೆಲವರಿಂದ ಐದು ಸಾವಿರ ಹೀಗೆ ಮನಬಂದಂತೆ ಲಕ್ಷಾಂತರ ರೂ. ಹಣ ಪೀಕಿದ್ದಾಳೆ. ಸುಳ್ಳು ದಾಖಲೆ ಪತ್ರ ತೋರಿಸಿ ವಂಚಿಸಿದ್ದಾಳೆ.

    ಒಂದು ವರ್ಷ ಆದರೂ ಲೋನ್ ಸಿಗದಿದ್ದಾಗ ರೊಚ್ಚಿಗೆದ್ದ ಜನರು ಶಿರಾ ಗೇಟ್ ನಲ್ಲಿ ಇರುವ ಪುಷ್ಪಾಳ ಮನೆಗೆ ಹೋಗಿ ತರಾಟೆ ತೆಗೆದುಕೊಂಡಿದ್ದಾರೆ. ಹಣ ವಾಪಸ್ ನೀಡುವಂತೆ ಕೇಳಿದ್ದಾರೆ. ಇದಕ್ಕೆ ಪುಷ್ಪಾ ಒಪ್ಪದಿದ್ದಾಗ ನಗರ ಠಾಣೆವರೆಗೆ ಸುಮಾರು 2 ಕಿ.ಮಿ.ನಷ್ಟು ದೂರ ಮೆರವಣಿಗೆ ಮಾಡಿಕೊಂಡು ಬಂದಿದ್ದಾರೆ. ಈ ನಡುವೆ ಮೆರವಣಿಗೆ ಉದ್ದಕ್ಕೂ ಧರ್ಮದೇಟು ನೀಡುತ್ತಾ ಬಂದಿದ್ದಾರೆ.

    ಪುಷ್ಪಾಳ ವಂಚನೆಗೆ ಸಂಬಂಧಿಸಿದಂತೆ ನಗರ ಠಾಣೆಯಲ್ಲಿ ದೂರು ನೀಡಲಾಗಿದೆ.

  • ವಿವಾಹವಾದ ಪ್ರೇಮ ಪಕ್ಷಿಗಳಿಗೆ ಜೀವ ಭಯ – ರಕ್ಷಣೆ ಕೋರಿ ಎಸ್ಪಿ ಮೊರೆ ಹೋದ ನವ ಜೋಡಿ

    ವಿವಾಹವಾದ ಪ್ರೇಮ ಪಕ್ಷಿಗಳಿಗೆ ಜೀವ ಭಯ – ರಕ್ಷಣೆ ಕೋರಿ ಎಸ್ಪಿ ಮೊರೆ ಹೋದ ನವ ಜೋಡಿ

    ತುಮಕೂರು: ಈ ಯುವ ಜೋಡಿಗಳದ್ದು ಧರ್ಮ ಮೀರಿದ್ದ ಪ್ರೀತಿ. ಇವರಿಬ್ಬರ ಅನುರಾಗಕ್ಕೆ ಹಿಂದೂ-ಮುಸ್ಲಿಂ ಎಂಬ ಧರ್ಮದ ಬೇಧ ಬಂದಿಲ್ಲ. ಅದನ್ನೂ ಮೀರಿ ಮದುವೆಯಾಗಿದ್ದಾರೆ. ಆದರೆ ಈ ಯುವ ಜೋಡಿಗೆ ಈಗ ಜೀವ ಭಯವಿದೆಯಂತೆ. ಹಾಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊರೆ ಹೋಗಿದ್ದಾರೆ.

    ಪ್ರೀತಿ ಜಾತಿ ಧರ್ಮ, ಮತ-ಪಂಥವನ್ನೂ ಮೀರಿದ್ದು ಎನ್ನುವುದು ಸಾರ್ವಕಾಲಿಕ ಮಾತು. ಇದೇ ರೀತಿ ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ಬಾಣಸಂದ್ರದ ಶಿವಶಂಕರ್ ಹಾಗೂ ಮುಸ್ಲಿಂ ಯುವತಿ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದಾರೆ. ಅಕ್ಕಪಕ್ಕದ ಮನೆಯವರಾದ ಈ ಯುವ ಜೋಡಿ ಕಳೆದ ಒಂದೂವರೆ ವರ್ಷದಿಂದ ಪ್ರೀತಿಸುತ್ತಿದ್ದರು.

    ಕಳೆದ ಸೋಮವಾರ ಹಿಂದೂ ಸಂಪ್ರದಾಯದಂತೆ ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದಾರೆ. ಮದುವೆಯಾದ ವಿಚಾರ ತಿಳಿಯುತ್ತಿದ್ದಂತೆಯೇ ಯುವತಿಯ ಸಂಬಂಧಿಕರು ಬೆದರಿಕೆ ಹಾಕಿದ್ದಾರೆ. ಇದರಿಂದ ಭಯಭೀತರಾದ ಶಿವಶಂಕರ್ ಹಾಗೂ ಯುವತಿ ರಕ್ಷಣೆ ಕೋರಿ ಎಸ್ ಪಿ ಮೊರೆ ಹೋಗಿದ್ದಾರೆ.

    ಇನ್ನೂ ಶಿವಶಂಕರ್ ಸಾರಿಗೆ ಇಲಾಖೆಯ ಡಿಪೋದಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದು, ಯುವತಿ ಮಾಲ್  ವೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಇಬ್ಬರ ಮದುವೆಗೆ ಶಿವಶಂಕರ್ ತಂದೆ-ತಾಯಿ ಒಪ್ಪಿಕೊಂಡು ಅನ್ಯಧರ್ಮಿಯ ಸೊಸೆಯನ್ನು ಮನೆತುಂಬಿಸಿಕೊಂಡಿದ್ದಾರೆ.

    ಆದರೆ ಯುವತಿ ತಂದೆ- ತಾಯಿ ಈ ಪ್ರೇಮವಿವಾಹಕ್ಕೆ ಆಕ್ಷೇಪ ವ್ಯಕ್ತಪಡಿಸಿ ವಿಲನ್ ಆಗಿದ್ದಾರೆ. ಹಾಗಾಗಿ ದಿಕ್ಕು ತೋಚದ ನವ ಜೋಡಿ ರಕ್ಷಣೆಗಾಗಿ ಪೊಲೀಸ್ ಇಲಾಖೆ ಮೊರೆ ಹೋಗಿದೆ. ಶಿವಶಂಕರ್ ಮತ್ತು ಯುವತಿಯ ಧರ್ಮ ಬೇಧ ಮೀರಿ ಮದುವೆಯಾಗಿದ್ದಾರೆ. ಭಯದಲ್ಲಿ ಬದುಕುತ್ತಿರೋ ಈ ದಂಪತಿಗೆ ಪೊಲೀಸರು ರಕ್ಷಣೆ ನೀಡಬೇಕಿದೆ.