Tag: tumkuru

  • ಮತ್ತೋರ್ವನ ಜೊತೆ ಯುವತಿಯ ಸುತ್ತಾಟ-ಪ್ರಿಯತಮೆಯನ್ನ ಕೊಂದ ಮಾಜಿ ಗೆಳೆಯ ಅರೆಸ್ಟ್

    ಮತ್ತೋರ್ವನ ಜೊತೆ ಯುವತಿಯ ಸುತ್ತಾಟ-ಪ್ರಿಯತಮೆಯನ್ನ ಕೊಂದ ಮಾಜಿ ಗೆಳೆಯ ಅರೆಸ್ಟ್

    ತುಮಕೂರು: ಪ್ರೇಯಸಿಯನ್ನು ಕೊಂದ ಪ್ರಿಯಕರನನ್ನು ಹುಲಿಯೂರುದುರ್ಗ ಪೊಲೀಸರು ಯಶಸ್ವಿ ಕಾರ್ಯಚರಣೆ ನಡೆಸಿ ಬಂಧಿಸಿದ್ದಾರೆ.

    ಅರ್ಪಿತಾ(26) ಕೊಲೆಯಾದ ಪ್ರೇಯಸಿ. ಬೆಂಗಳೂರಿನ ಲೋಹಿತ್(27) ಬಂಧಿತ ಆರೋಪಿ. ಫೆಬ್ರವರಿ 3ರಂದು ಕುಣಿಗಲ್ ತಾಲೂಕಿನ ಸಂತೆಮಾವತ್ತೂರಿನಲ್ಲಿ ಲೋಹಿತ್ ತನ್ನ ಪ್ರೇಯಸಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ಪರಾರಿ ಆಗಿದ್ದನು.

    ಅರ್ಪಿತಾ ತನ್ನ ಪ್ರಿಯಕರ ಲೋಹಿತ್‍ನನ್ನು ಬಿಟ್ಟು ಬೇರೆ ವ್ಯಕ್ತಿ ಜೊತೆ ತಿರುಗಾಡುತ್ತಿದ್ದಳು. ಇದರಿಂದ ಕೋಪಗೊಂಡ ಲೋಹಿತ್ ತನ್ನ ಪ್ರೇಯಸಿ ಅರ್ಪಿತಾಳನ್ನು ಕೊಲೆ ಮಾಡಿದ್ದಾನೆ. ಯುವತಿ ಧರಿಸಿದ್ದ ಎZ ಪಿ ಪೆಟ್ರೋಲ್ ಬಂಕ್ ಸಮವಸ್ತ್ರ ಆಧರಿಸಿ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಹುಲಿಯೂರುದುರ್ಗ ಪೊಲೀಸರು ಆರೋಪಿ ಲೋಹಿತ್‍ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸ್ಮಾರ್ಟ್ ಸಿಟಿ ತುಮಕೂರಿನಲ್ಲಿ ಮತ್ತೇ ತಲೆದೂರಿದ ಕಸದ ಸಮಸ್ಯೆ

    ಸ್ಮಾರ್ಟ್ ಸಿಟಿ ತುಮಕೂರಿನಲ್ಲಿ ಮತ್ತೇ ತಲೆದೂರಿದ ಕಸದ ಸಮಸ್ಯೆ

    ತುಮಕೂರು: ಸ್ಮಾರ್ಟ್ ಸಿಟಿ ತುಮಕೂರಿನಲ್ಲಿ ಮತ್ತೇ ಕಸದ ಸಮಸ್ಯೆ ತಲೆದೂರಿದೆ. ಕಳೆದ 15 ದಿನಗಳಿಂದ ಕಸ ವಿಲೇವಾರಿಯಾಗದೇ ತುಮಕೂರು ತರಕಾರಿ ಮಾರುಕಟ್ಟೆ ಗಬ್ಬೆದ್ದು ನಾರುತ್ತಿದೆ.

    ನಗರದ ಅಂತರಸನಹಳ್ಳಿಯ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ 15 ದಿನಗಳಿಂದ ವಿಲೇವಾರಿಯಾಗದೇ ಮಾರುಕಟ್ಟೆಯಲ್ಲೇ ಕಸ ಬಿದ್ದಿದ್ದು, ಎಪಿಎಂಸಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಾರ್ವಜನಿಕರು ಪರದಾಡುವಂತಾಗಿದೆ. ಈ ಮೊದಲು ಮಾರುಕಟ್ಟೆ ಪ್ರಾಂಗಣದಲ್ಲಿನ ಕಸ ಪ್ರತಿದಿನ ವಿಲೇವಾರಿಯಾಗುತಿತ್ತು. ಇದೀಗ 15 ದಿನಗಳಿಂದ ಕಸ ಎತ್ತದೇ ಮಾರುಕಟ್ಟೆ ತುಂಬೆಲ್ಲಾ ಕಸದ ಪರ್ವತವೇ ಸೃಷ್ಟಿಯಾಗಿದೆ.

    ವಿಎಂವಿ ಅಸೋಸಿಯೆಟ್ಸ್ ಕಂಪನಿಗೆ ಕಸ ವಿಲೇವಾರಿ ಟೆಂಡರ್ ನೀಡಲಾಗಿದ್ದು ಅಲ್ಲಿನ ಸಿಬ್ಬಂದಿ ನಿರ್ಲಕ್ಷ್ಯ ತೋರಿದ್ದಾರೆ. ಸರಿಯಾದ ಮೂಲಭೂತ ಸೌಕರ್ಯ ಸಹ ಮಾರುಕಟ್ಟೆಯಲ್ಲಿ ಒದಗಿಸದೇ ಎಪಿಎಂಸಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಮಾರುಕಟ್ಟೆ ವ್ಯಾಪಾರಸ್ಥರು ಅಳಲು ತೋಡಿಕೊಂಡಿದ್ದಾರೆ.

    ಕಸದ ವಾಸನೆಯ ಪರಿಣಾಮ ಮಾರುಕಟ್ಟೆಗೆ ಆಗಮಿಸಲು ವ್ಯಾಪಾರಸ್ಥರು, ಸಾರ್ವಜನಿಕರು ಹಿಂದೇಟು ಹಾಕುತ್ತಿದ್ದು, ದಿನನಿತ್ಯ ಮೂಗು ಮುಚ್ಚಿಕೊಂಡು ವ್ಯಾಪಾರದಲ್ಲಿ ತೊಡಗುವಂತಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಿದ್ದರಾಮಯ್ಯ ಇಲ್ಲ ಅಂದ್ರೆ ಕಾಂಗ್ರೆಸ್ಸೇ ಇಲ್ಲ – ಕಾಂಗ್ರೆಸ್ ಮಾಜಿ ಶಾಸಕ ಕೆ.ಎನ್.ರಾಜಣ್ಣ

    ಸಿದ್ದರಾಮಯ್ಯ ಇಲ್ಲ ಅಂದ್ರೆ ಕಾಂಗ್ರೆಸ್ಸೇ ಇಲ್ಲ – ಕಾಂಗ್ರೆಸ್ ಮಾಜಿ ಶಾಸಕ ಕೆ.ಎನ್.ರಾಜಣ್ಣ

    – ಸಿಎಂ ಎಚ್‍ಡಿಕೆ ರಾಜೀನಾಮೆ ಕೊಟ್ಟರೆ ಕೊಡ್ಲಿ, ಯಾರಿಗೇನಂತೆ!

    ತುಮಕೂರು: ಕುಮಾರಸ್ವಾಮಿ ರಾಜೀನಾಮೆ ಕೊಟ್ಟರೆ ಕೊಡಲಿ ಯಾರಿಗೆ ಏನು ಆಗುತ್ತೆ. ಆದರೆ ಸಿದ್ದರಾಮಯ್ಯ ಅವರು ಇಲ್ಲದಿದ್ದರೆ ಕಾಂಗ್ರೆಸ್ ಪಕ್ಷವೇ ಇಲ್ಲ ಎಂದು ಮಾಜಿ ಶಾಸಕ, ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಹೇಳಿದ್ದಾರೆ.

    ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬುಡೇನ್ ಸಾಬ್ರಿಗೂ ಹೆಂಡ್ತಿ ಇಲ್ಲ, ಬೂವಮ್ಮನಿಗೂ ಗಂಡನಿಲ್ಲ ಎನ್ನುವಂತೆ ಜೆಡಿಎಸ್-ಕಾಂಗ್ರೆಸ್ ಸಹವಾಸ ಆಗಿದ್ದು, ಸಿದ್ದರಾಮಯ್ಯ ಅವರು ಇಲ್ಲದಿದ್ದರೆ ಕಾಂಗ್ರೆಸ್ ಪಕ್ಷವೇ ಇಲ್ಲ. ಸಿಎಂ ಎಚ್‍ಡಿಕೆ ಅವರು ಬೇಕಾದರೆ ರಾಜೀನಾಮೆ ಕೊಡಲಿ, ಯಾರಿಗೆ ಏನು ಆಗುತ್ತೆ. ಶಾಸಕರನ್ನು ನಿಯಂತ್ರಣ ಮಾಡಲು ಅವರು ಏನು ಚಿಕ್ಕ ಮಕ್ಕಳಲ್ಲ. ಬಿಜೆಪಿಯನ್ನು ದೂರವಿಡಬೇಕು ಎಂಬ ಒಂದೇ ಉದ್ದೇಶದಿಂದ ನಾವೆಲ್ಲಾ ತ್ಯಾಗ ಮಾಡಿ ಸಿಎಂ ಕುರ್ಚಿಯನ್ನು ಕುಮಾರಸ್ವಾಮಿ ಅವರಿಗೆ ನೀಡಿದ್ದೇವೆ ಎಂದರು.

    ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿವಿಧ ಅಭಿಪ್ರಾಯಗಳು ಇದ್ದರೆ ಮಾತ್ರ ಉತ್ತಮ ಆಡಳಿತ ನೀಡಲು ಸಾಧ್ಯ. ಹೀಗಾಗಿ ಸಿಎಂ ಆದವರು ಜವಾಬ್ದಾರಿಯಿಂದ ಸರ್ಕಾರವನ್ನು ಮುನ್ನಡೆಸಬೇಕು ಎಂದು ಇದೇ ವೇಳೆ ಸಿಎಂ ಕುಮಾರಸ್ವಾಮಿ ಅವರಿಗೆ ಸಲಹೆ ನೀಡಿದರು. ಬಂಡಾಯ ಶಾಸಕ, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಕುರಿತು ಪ್ರಶ್ನೆಗೆ ಉತ್ತರಿಸಿ, ಅವರು ಈಗಾಗಲೇ ಪಕ್ಷ ಬಿಟ್ಟಿದ್ದಾರೆ. ಅವರು ಪಕ್ಷದಿಂದಲೇ ದೂರ ಉಳಿದಿದ್ದಾರೆ ಎಂದು ಸ್ಪಷ್ಟನೆ ನೀಡಿದರು.

    ತುಮಕೂರು ಲೋಕಸಭಾ ಕ್ಷೇತ್ರವನ್ನ ಜೆಡಿಎಸ್‍ಗೆ ಬಿಟ್ಟುಕೊಡಲು ಕೇತ್ರದಲ್ಲಿ ಹಾಲಿ ಸಂಸದರು ಇರುವಾಗ ಈ ರೀತಿ ಕೇಳಲು ಜೆಡಿಎಸ್ ಪಕ್ಷದವರಿಗೆ ಮಾನ ಮರ್ಯಾದೆ ಬೇಡ್ವ? 8 ಕ್ಷೇತ್ರದಲ್ಲಿ ನಾವೇ ಮುಂದಿದ್ದೇವೆ ಎನ್ನುವುದಾದರೆ ಹಿಂದೆ 4 ಕ್ಷೇತ್ರದಲ್ಲಿ ಠೇವಣಿ ಕಳೆದುಕೊಂಡಿದ್ದನ್ನ ಮರೆತು ಬಿಟ್ಟಿದ್ದಾರೆಯೇ ಎಂದು ಟೀಕೆ ಮಾಡಿದರು. ಅಲ್ಲದೇ ಇದೇ ವೇಳೆ ಪರೋಕ್ಷವಾಗಿ ಬಂಡಾಯ ಸ್ಪರ್ಧೆ ಬಗ್ಗೆ ಎಚ್ಚರಿಕೆ ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

     

  • ಶ್ರೀಗಳ ಪುಣ್ಯಾರಾಧನೆ- ಧನ್ಯವಾದ ಅರ್ಪಿಸಿದ್ರು ಸಿದ್ದಲಿಂಗ ಶ್ರೀ

    ಶ್ರೀಗಳ ಪುಣ್ಯಾರಾಧನೆ- ಧನ್ಯವಾದ ಅರ್ಪಿಸಿದ್ರು ಸಿದ್ದಲಿಂಗ ಶ್ರೀ

    ತುಮಕೂರು: ಶಿವೈಕ್ಯರಾದ ಶಿವಕುಮಾರ ಶ್ರೀಗಳ 11ನೇ ದಿನದ ಪುಣ್ಯಾರಾಧನೆ ಕಾರ್ಯಕ್ರಮದ ಯಶಸ್ಸನ್ನು, ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿಯವರು ಮಠದ ವಿದ್ಯಾರ್ಥಿಗಳು, ಸಿಬ್ಬಂದಿ ಹಾಗೂ ಭಕ್ತಾದಿಗಳಿಗೆ ಅರ್ಪಿಸಿದ್ದಾರೆ.

    ಕಾರ್ಯಕ್ರಮ ಯಶಸ್ವಿಗೆ ಶ್ರಮಿಸಿದ ಜಿಲ್ಲಾಡಳಿತ ಸೇರಿದಂತೆ ಎಲ್ಲಾ ವರ್ಗದ ಜನರಿಗೂ ಶ್ರಿಗಳು ಧನ್ಯವಾದ ಅರ್ಪಿಸಿದ್ದಾರೆ. ಯಾವುದೇ ಗೊಂದಲ, ಸಮಸ್ಯೆ ಇಲ್ಲದೆ ಸುಸೂತ್ರವಾಗಿ ಕಾರ್ಯಕ್ರಮ ನಡೆದಿರುವುದಕ್ಕೆ ಶ್ರೀಗಳು ಸಂತಸ ವ್ಯಕ್ತಪಡಿಸಿದ್ದಾರೆ.

    ಈ ಬಗ್ಗೆ ಕಿರಿಯ ಸ್ವಾಮೀಜಿ ಮಾಧ್ಯಮಗಳೊಂದಿಗೆ ಮಾತನಾಡಿ, ಪುಣ್ಯಾರಾಧನೆಯ ಕಾರ್ಯಕ್ರಮ ಬಹಳ ಅರ್ಥಪೂರ್ಣವಾಗಿ ಯಶಸ್ವಿಯಾಗಿ ನಡೆದಿದೆ. ನಾನು ಈ ಯಶಸ್ಸನ್ನು ಮಕ್ಕಳಿಗೆ, ಸಿಬ್ಬಂದಿಗೆ, ಭಕ್ತರಿಗೆ, ಸರ್ಕಾರ, ಇಲಾಖೆ, ಜಿಲ್ಲಾಡಳಿತ ಹಾಗೂ ಕೊಡುಗೆ ನೀಡಿದವರಿಗೆ ಅರ್ಪಿಸುತ್ತೇನೆ. ಅವರ ಶ್ರಮದ ಫಲವಾಗಿ ಪುಣ್ಯಾರಾಧನೆ ಯಶಸ್ವಿ ಆಗಿದೆ. ಪೂಜ್ಯರ ಮೇಲಿದ್ದ ಭಕ್ತಿಯನ್ನು ಆ ಸಂದರ್ಭದಲ್ಲಿ ನೋಡಲು ಸಾಧ್ಯವಿಲ್ಲ. ಶ್ರೀಸಾಮಾನ್ಯನಿಂದ ಗಣ್ಯ ವ್ಯಕ್ತಿಗಳವರೆಗೂ ಸಮಾನವಾದ ಭಕ್ತಿಯಿತ್ತು. ಇಲ್ಲಿ ಎಲ್ಲರೂ ಸಮಾನವಾಗಿ ಭಾಗಿಯಾಗುವ ಮೂಲಕ ಕಾರ್ಯಕ್ರಮ ಯಶಸ್ವಿ ಮಾಡಿದ್ದಾರೆ ಎಂದರು.

    ಈ ಕಾರ್ಯಕ್ರಮವನ್ನು ಅನೇಕ ಪಟ್ಟಣಗಳಲ್ಲಿ, ಹಳ್ಳಿಗಳಲ್ಲಿ, ಸಂಘ-ಸಂಸ್ಥೆಗಳಲ್ಲಿ, ಮಾಧ್ಯಮದವರು ಕೂಡ ತಮ್ಮ ಸೆಂಟರ್ ನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಕನ್ನಡ ನಾಡಿನಲ್ಲಿ ಮಾತ್ರವಲ್ಲ ನಾಳೆ ಆಸ್ಟ್ರೇಲಿಯಾದಲ್ಲೂ ಕೂಡ ಪುಣ್ಯರಾಧನೆ ಮಾಡುತ್ತಿದ್ದಾರೆ. ಅವರು ವಿಡಿಯೋ ಕಾಲ್ ಮೂಲಕ ಮಾತನಾಡಬೇಕು ಎಂದು ಕೇಳುತ್ತಿದ್ದಾರೆ. ಅದು ಅವರ ದೊಡ್ಡ ವ್ಯಕ್ತಿತ್ವ. ಈ ಕಾರ್ಯಕ್ರಮದಲ್ಲಿ ಕೆಲಸ ಮಾಡಿದ ಎಲ್ಲರಿಗೂ ನಾನು ಧನ್ಯವಾದ ಅರ್ಪಿಸುತ್ತೇನೆ ಎಂದರು.

    ಇದೇ ವೇಳೆ ಶಿವೈಕ್ಯ ಶಿವಕುಮಾರ ಶ್ರೀಗಳ ಕಂಚಿನ ಪುತ್ಥಳಿ ಬಗ್ಗೆ ಮಾತನಾಡಿದ ಅವರು, ಶ್ರೀಗಳ ಕಂಚಿನ ಪುತ್ಥಳಿ ಉದ್ಯಾನವನದ ಪಕ್ಕದಲ್ಲಿ ಪ್ರತಿಷ್ಠಾಪನೆ ಮಾಡಲು ತಯಾರಿ ನಡೆಯುತ್ತಿದೆ. ಏಪ್ರಿಲ್ 1ರ ಶಿವಕುಮಾರ ಶ್ರೀಗಳ ಜನ್ಮ ದಿನದ ಮುಂಚಿತವಾಗಿಯೇ ಪ್ರತಿಮೆ ಪ್ರತಿಷ್ಠಾಪನೆ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಸಿದ್ದಗಂಗಾ ಮಠದ ಕಿರಿಯ ಶ್ರೀಗಳಾದ ಸಿದ್ದಲಿಂಗ ಸ್ವಾಮೀಜಿ ಸ್ಪಷ್ಟಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಶ್ರೀಗಳ ಪುಣ್ಯಾರಾಧನೆಯಲ್ಲಿ ನಿರ್ಲಕ್ಷ್ಯ- ಭಕ್ತಾದಿಗಳು ಕುಸಿದು ಬಿದ್ದರೂ ಸಹಾಯಕ್ಕೆ ಬಾರದ ಪಿಎಸ್‍ಐ

    ಶ್ರೀಗಳ ಪುಣ್ಯಾರಾಧನೆಯಲ್ಲಿ ನಿರ್ಲಕ್ಷ್ಯ- ಭಕ್ತಾದಿಗಳು ಕುಸಿದು ಬಿದ್ದರೂ ಸಹಾಯಕ್ಕೆ ಬಾರದ ಪಿಎಸ್‍ಐ

    ತುಮಕೂರು: ಸಿದ್ದಗಂಗಾ ಶ್ರೀಗಳು ಶಿವೈಕ್ಯರಾದ ದಿನ ಹಾಗೂ ಪುಣ್ಯಾರಾಧನೆ ದಿನವನ್ನು ಬಿಗಿ ಬಂದೋಬಸ್ತ್ ನೀಡಿ ಯಾವುದೇ ಸಮಸ್ಯೆ ಆಗದಂತೆ ಕಾರ್ಯನಿರ್ವಹಿಸಿದ ಪೊಲೀಸರಿಗೆ ಧನ್ಯವಾದ ಹೇಳಲೇಬೇಕು. ಆದರೆ ಇದಕ್ಕೆ ಅಪವಾದ ಎಂಬಂತೆ ಪುಣ್ಯಾರಾಧನೆಯ ದಿನ ಪಿಎಸ್‍ಐ ಬಂದೋಬಸ್ತ್ ಮಾಡೋದನ್ನು ಬಿಟ್ಟು ಪ್ರೋಬೆಷನರಿ ಮಹಿಳಾ ಡಿವೈಎಸ್‍ಪಿ ಜೊತೆ ಸುಧೀರ್ಘ ಸಂಭಾಷಣೆ ನಡೆಸಿ ನಿರ್ಲಕ್ಷ್ಯ ತೋರಿದ್ದ ವಿಡಿಯೋ ಈಗ ವೈರಲ್ ಆಗಿದೆ.

    ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ಠಾಣಾ ಪಿಎಸ್ ನವೀನ್ ಕುಮಾರ್, ಪ್ರೋಬೇಷನರಿ ಮಹಿಳಾ ಡಿವೈಎಸ್‍ಪಿ ಜೊತೆ ನಿರಂತರ ಮಾತುಕತೆ ನಡೆಸುತ್ತಾ, ಮೊಬೈಲಿನಲ್ಲಿ ಕಾಲಹರಣ ಮಾಡಿ ಸಾರ್ವಜನಿಕರ ವಿರೋಧಕ್ಕೆ ತುತ್ತಾಗಿದ್ದಾರೆ. ಪಿಎಸ್‍ಐ ನವೀನ್‍ನನ್ನು ಶ್ರೀಗಳ ಗದ್ದುಗೆ ಮುಂದೆ ಬಂದೋಬಸ್ತ್ ಗೆ ನಿಯೋಜನೆ ಮಾಡಲಾಗಿತ್ತು.

    ಮಧ್ಯಾಹ್ನದ ವೇಳೆ ಬಿರುಬಿಸಿಲಿನಲ್ಲಿ ಭಕ್ತಾದಿಗಳ ಸಂಖ್ಯೆಯೂ ಹೆಚ್ಚಾಗಿತ್ತು. ಹಲವರು ತಲೆ ಸುತ್ತಿನಿಂದಾಗಿ ಕುಸಿದು ಬಿದ್ದಿದ್ದರು. ನೂಕಾಟ ತಳ್ಳಾಟ ಜೋರಾಗಿತ್ತು. ಇವೆಲ್ಲವೂ ಪಿಎಸ್‍ಐ ನವೀನ್ ಮುಂದೆ ನಡೆಯುತಿತ್ತು. ಇದ್ಯಾವುದರ ಪರಿವೇ ಇಲ್ಲದ ನವೀನ್ ಪ್ರೋಬೇಷನರಿ ಮಹಿಳಾ ಡಿವೈಎಸ್‍ಪಿ ಜೊತೆ ಸುಧೀರ್ಘ ಸಂಭಾಷಣೆಯಲ್ಲಿ ತೊಡಗಿಕೊಂಡಿದ್ದರು.

    ನವೀನ್ ಕುಮಾರ್ ಎದುರಲ್ಲೇ ಹಲವು ಭಕ್ತಾದಿಗಳು ಕುಸಿದು ಬಿದಿದ್ದಾರೆ. ಅವರ ಸಹಾಯಕ್ಕೂ ನವೀನ್ ಹೋಗಲಿಲ್ಲ. ಅಷ್ಟೇ ಅಲ್ಲದೇ ಈ ಇಬ್ಬರೂ ಪೊಲೀಸ್ ಅಧಿಕಾರಿಗಳು ಒರಗಿಕೊಂಡಿದ್ದ ಬ್ಯಾರಿಕೇಡ್ ನ ಕ್ಯೂನಲ್ಲಿ ಜನರ ನೂಕಾಟ ತಳ್ಳಾಟ ಜೋರಾಗಿತ್ತು. ಸ್ವಲ್ಪ ಯಾಮಾರಿದರೂ ಕಾಲ್ತುಳಿತ ನಡೆಯುತಿತ್ತು.

    ಈ ಸನ್ನಿವೇಶವನ್ನು ಕಂಡು ಕಾಣದಂತಿದ್ದ ನವೀನ್ ಸುದೀರ್ಘ ಮಾತುಕತೆಯಲ್ಲಿ ತೊಡಗಿದ್ದನು. ಮೊಬೈಲ್ ಫೋನಿನಲ್ಲಿ ಬ್ಯುಸಿಯಾಗಿದ್ದ. ಕರ್ತವ್ಯ ಮರೆತು ಬೇರೆಯದ್ದೇ ಲೋಕದಲ್ಲಿದ್ದ ಈ ಅಧಿಕಾರಿಗಳ ವಿಡಿಯೋ ಈಗ ವೈರಲ್ ಆಗಿದ್ದು, ಇವರಿಬ್ಬರ ನಡೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಸಿದ್ದರಾಮಯ್ಯ ನನ್ನ ಮಾರ್ಗದರ್ಶಿ, ಹಿರಿಯರು – ಸಿಎಂ ಕುಮಾರಸ್ವಾಮಿ

    ಸಿದ್ದರಾಮಯ್ಯ ನನ್ನ ಮಾರ್ಗದರ್ಶಿ, ಹಿರಿಯರು – ಸಿಎಂ ಕುಮಾರಸ್ವಾಮಿ

    ತುಮಕೂರು: ಬೆಂಗಳೂರಿನಲ್ಲಿ ನಡೆದ ಜೆಡಿಎಸ್ ರಾಷ್ಟ್ರೀಯ ಸಮಾವೇಶದಲ್ಲಿ ಸಿದ್ದರಾಮಯ್ಯ ಅವರ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದ ಸಿಎಂ ಕುಮಾರಸ್ವಾಮಿ ಅವರು, ಇಂದು ಸಿದ್ದಗಂಗಾ ಶ್ರೀಗಳ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ಹಾಡಿಹೊಗಳಿದ್ದಾರೆ.

    ಸಿದ್ದಗಂಗಾ ಶ್ರೀಗಳ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ಮಾತನಾಡಿ ಅವರು, ಸಿದ್ದರಾಮಯ್ಯ ಅವರು ನನ್ನ ಮಾರ್ಗದರ್ಶಿ ಮತ್ತು ಹಿರಿಯರು ಎಂದರು. ಅಲ್ಲದೇ ದಿನನಿತ್ಯದ ರಾಜಕೀಯ ದ್ವೇಷ ಮರೆತು ಎಲ್ಲರೂ ಒಂದೇ ವೇದಿಕೆಯಲ್ಲಿ ಸೇರಿದ್ದೇವೆ ಎಂದು ತಿಳಿಸಿದರು. ಇದಕ್ಕೂ ಮುನ್ನ ಸಿದ್ದರಾಮಯ್ಯ ಅವರೊಂದಿಗೆ ಕೆಲ ಹೊತ್ತು ಮಾತನಾಡಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಕೂಡಾ ಭಾಗವಹಿಸಿದ್ದರು.

    ನಾಯಕರು ಹೇಳೋದು ಏನು?
    ಸಿಎಂ ಎಚ್‍ಡಿಕೆ ಅವರು ಸಿದ್ದರಾಮಯ್ಯ ಅವರನ್ನು ಹೊಗಳಿ ಮಾತನಾಡಿದರೆ, ಇತ್ತ ಕಾಂಗ್ರೆಸ್, ಜೆಡಿಎಸ್ ಶಾಸಕರು ಮತ್ತೆ ತಮ್ಮ ಇಷ್ಟದ ನಾಯಕರ ಹೇಳಿಕೆಯನ್ನು ಮುಂದುವರಿಸಿದರು. ಸಿದ್ದರಾಮಯ್ಯ ನಮ್ಮ ನಾಯಕರು ಎಂದು ಹೇಳುವುದರಲ್ಲಿ ತಪ್ಪೇನಿಲ್ಲ. ನನಗೆ ವ್ಯಕ್ತಿ ನಿಷ್ಠೆ ಅಂದರೆ ಸಿದ್ದರಾಮಯ್ಯ ಅವರು. ಪಕ್ಷ ನಿಷ್ಠೆ ಅಂದರೆ ಕಾಂಗ್ರೆಸ್ ಎಂದು ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್ ಹೇಳಿದರು.

    ಕಾಂಗ್ರೆಸ್ ನಾಯಕರ ಹೇಳಿಕೆಗೆ ಅಸಮಾಧಾನ ಹೊರ ಹಾಕಿದ ಜೆಡಿಎಸ್ ನಾಯಕರು ಸರ್ಕಾರ ಐದು ವರ್ಷ ಸುಲಲಿತವಾಗಿ ನಡೆಯಬೇಕು ಅಂದರೆ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಸ್ಪಷ್ಟವಾಗಿ ರಾಜ್ಯದ ನಾಯಕರಿಗೆ ಸೂಚನೆ ನೀಡಬೇಕು ಎಂದು ಮೇಲುಕೋಟೆಯಲ್ಲಿ ಸಚಿವ ಪುಟ್ಟರಾಜು ಎಚ್ಚರಿಕೆ ನೀಡಿದರು. ಉಳಿದಂತೆ ಯಾರೋ ಯಾರನ್ನೋ ಖುಷಿ ಪಡಿಸೋಕೆ ಯಾವುದೇ ಹೇಳಿಕೆ ಕೊಡಬಾರದು ಎಂದು ಬಂಡೆಪ್ಪ ಕಾಶೆಂಪೂರ್ ಕೊಪ್ಪಳದಲ್ಲಿ ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ನಾವೇ ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ನೀಡ್ತೇವೆ: ಸಿಎಂ ಎಚ್‍ಡಿಕೆ

    ನಾವೇ ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ನೀಡ್ತೇವೆ: ಸಿಎಂ ಎಚ್‍ಡಿಕೆ

    ತುಮಕೂರು: ಕೇಂದ್ರದಲ್ಲಿ ಕಾಂಗ್ರೆಸ್ – ಜೆಡಿಎಸ್ ಸೇರಿದಂತೆ ಮಹಾಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದರೆ ಸಿದ್ದಗಂಗಾ ಶ್ರೀಗಳಿಗೆ ಭಾರತರತ್ನ ಕೊಡುವುದಾಗಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

    ನಡೆದಾಡುವ ದೇವರ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಿದ್ದಗಂಗಾ ಶ್ರೀಗಳು ಸಲ್ಲಿಸಿರುವ ಸೇವೆಯ ಬಗ್ಗೆ ಹೇಳಲು ಪದಗಳು ಇಲ್ಲ. ನಾನು ರಾಜ್ಯದ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿದ ವೇಳೆ ಅವರು ನನ್ನನ್ನು ಕೇಳಿದ್ದು ಒಂದೇ, “ರೈತರು ಹೇಗಿದ್ದಾರೆ. ರಾಜ್ಯದಲ್ಲಿ ಮಳೆ-ಬೆಳೆ ಚೆನ್ನಾಗಿ ಅಗುತ್ತೀದ್ದೇಯಾ” ಎಂದು ಮಾತ್ರ. ಅದನ್ನು ಬಿಟ್ಟರೆ ಅವರು ಬೇರೆ ಏನು ಕೇಳಲಿಲ್ಲ. ಪ್ರತಿದಿನ ಅವರಿಗೆ ನಮನ ಸಲ್ಲಿಸಿ ಮುಂದಿನ ಕಾರ್ಯಕ್ರಮ ಕ್ಕೆ ಹೋಗುತ್ತೇನೆ ಎಂದರು.

    ಇದೇ ವೇಳೆ ಅವರಿಗೆ ಭಾರತ ರತ್ನ ಲಭಿಸಿದ್ದರೆ, ಒಂದು ತೂಕ ಬರುತ್ತಿತ್ತು. ಮುಂದಿನ ದಿನಗಳಲ್ಲಿ ನಮಗೆ ಆ ಶಕ್ತಿ ಬಂದರೆ ನಾನು ಆ ಕೆಲಸ ಮಾಡುತ್ತೇನೆ. ಮುಂದಿನ ದಿನಗಳಲ್ಲಿ ಈ ರಾಜ್ಯಕ್ಕೆ ಬೇಕಾದ್ದು ಮಾಡುವ ಶಕ್ತಿ ನಮಗೆ ಬರುತ್ತದೆ. ಇದರಲ್ಲಿ ಯಾವುದೇ ಸಂಶಯಬೇಡ. ಪರಮಪೂಜ್ಯ ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿ ಕೊಡುವ ಅವಕಾಶ ನಮಗೆ ಬರುತ್ತೆ. ಜನ ಇದನ್ನು ಅರ್ಥ ಮಾಡಿಕೊಳ್ಳಕೊಂಡು ನಮಗೆ ಶಕ್ತಿ ತುಂಬಬೇಕು. ನನ್ನ ಪುಣ್ಯ 2006ರಲ್ಲೇ ಶ್ರೀಗಳಿಗೆ ಕರ್ನಾಟಕ ರತ್ನ ನೀಡಿದ್ದೇವು ಎಂದು ಹೇಳಿದರು.

    ಮಾದರಿ ಗ್ರಾಮ: ಸಿದ್ದಗಂಗಾ ಶ್ರೀಗಳ ಹುಟ್ಟೂರನ್ನು ಸರ್ಕಾರ ಮಾದರಿ ಗ್ರಾಮವನ್ನಾಗಿ ಅಭಿವೃದ್ಧಿ ಮಾಡುತ್ತದೆ. ಅಲ್ಲದೇ ಅವರ ಹೆಸರಿನಲ್ಲಿ ಶಾಶ್ವತವಾಗಿ ಉಳಿಯುವಂತಹ ಕೆಲಸ ಮಾಡುತ್ತೇವೆ ಎಂದು ಸಿಎಂ ಘೋಷಣೆ ಮಾಡಿದರು. ಡಿಸಿಎಂ ಪರಮೇಶ್ವರ್ ಅವರು ಮಾತನಾಡಿ, ಶ್ರೀಗಳು ಇಡೀ ಜೀವನವನ್ನು ಧರ್ಮಕ್ಕಾಗಿ ಜೀವನ ಮುಡಿಪಾಗಿಟ್ಟಿದ್ದಾರೆ. ಸಾವಿರಾರು ಮಕ್ಕಳಿಗೆ ಶಿಕ್ಷಣ ನೀಡಿದ್ದಾರೆ. ಶ್ರೀಗಳ ಹೆಸರಿನಲ್ಲಿ ಕಾರ್ಯಕ್ರಮ ಜಾರಿಗೆ ತರಲು ಸಿಎಂ ಅವರ ಬಳಿ ಮನವಿ ಮಾಡುತ್ತೇನೆ ಎಂದು ಎಂದರು.

    ವಿರೋಧಿ ಪಕ್ಷದ ನಾಯಕರಾದ ಯಡಿಯೂರಪ್ಪ ಅವರು ಮಾತನಾಡಿ, ಲಿಂಗೈಕ್ಯ ಶಿವಕುಮಾರ ಸ್ವಾಮೀಜಿಗಳು ಈ ಜಗತ್ತಿನ ಅಚ್ಚರಿ ಅಂದರೆ ತಪ್ಪಾಗಲಾರದು. ಜಾತಿ, ಮತಗಳ ಭೇದವಿಲ್ಲದೆ ಜೀವನ ನಡೆಸಿದ ಸ್ವಾಮೀಜಿಗಳು ಎಲ್ಲಾ ಧರ್ಮದವರಿಗೂ ಶಿಕ್ಷಣ ನೀಡಿದ್ದಾರೆ. ರಾಷ್ಟ್ರೀಯ ಭಾವೈಕ್ಯತೆಯನ್ನ ನಾವು ಎಲ್ಲಿಯೂ ಹುಡುಕಿಕೊಂಡು ಹೋಗುವ ಅಗತ್ಯವೇ ಇಲ್ಲದಂತೆ, ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದರೆ ಸಾಕು ಆದರ ಅರಿವು ನಮಗಾಗುತ್ತದೆ ಎಂದು ತಿಳಿಸಿದರು.

    ಗೃಹ ಸಚಿವ ಎಂ.ಬಿ. ಪಾಟೀಲರು ಮಾತನಾಡಿ, ನೊಬೆಲ್ ಪುರಸ್ಕಾರಕ್ಕೆ ಶಿಫಾರಸು ಮಾಡುವ ಅವಕಾಶ ಇದೆಯಾ, ಅದರ ಮಾನದಂಡಗಳೇನಿದೆ ಎಂಬುವುದನ್ನು ಸಂಗ್ರಹಿಸುತ್ತಿರುವುದಾಗಿ ಹೇಳಿದರು. ಇದೇ ವೇಳೆ ಸಿದ್ದಗಂಗಾ ಶ್ರೀಗಳಿಗೆ ಚಿಕೆತ್ಸೆ ನೀಡಿದ ವೈದ್ಯರಾದ ಡಾ.ವೆಂಕಟರಮಣ ಮತ್ತು ಡಾ.ರವೀಂದ್ರ ಅವರಿಗೆ ಸಿದ್ದಗಂಗಾ ಮಠದಿಂದ ಸನ್ಮಾನ ಮಾಡಲಾಯಿತು.

    ಉಳಿದಂತೆ ಸಿದ್ದಗಂಗಾ ಶ್ರೀಗಳ ಗದ್ದುಗೆಗೆ ಬೆಳಗ್ಗೆಯಿಂದಲೇ ಅರ್ಚಕರು, ಸಿದ್ದಲಿಂಗ ಶ್ರೀಗಳು ವಿಶೇಷ ಪೂಜೆ ಸಲ್ಲಿಸಿದರು. ಗಣ್ಯಾತಿಗಣ್ಯರು ಸೇರಿದಂತೆ ಲಕ್ಷಾಂತರ ಭಕ್ತರು 2 ಕಿ.ಮೀ. ಸರತಿ ಸಾಲಿನಲ್ಲಿ ನಿಂತು ಶ್ರೀಗಳಿಗೆ ನಮನ ಸಲ್ಲಿಸಿದರು. ಶ್ರೀಗಳ ಭಾವಚಿತ್ರ ಇರುವ ಟೀ ಶರ್ಟ್ ಧರಿಸಿದ 13 ಸಾವಿರಕ್ಕೂ ಹೆಚ್ಚು ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿ ವ್ಯವಸ್ಥೆಗಳನ್ನ ನೋಡಿಕೊಂಡರು.

    ದಾಸೋಹ ಕಾರ್ಯಕ್ರಮ: ಸಿದ್ದಗಂಗಾ ಶ್ರೀಗಳ ಪುಣ್ಯಾರಾಧನೆ ಹಿನ್ನೆಲೆಯಲ್ಲಿ ಲಕ್ಷಾಂತರ ಭಕ್ತರ ಆಗಮಿಸಿ ಶ್ರೀಗಳ ಗದ್ದುಗೆ ದರ್ಶನ ಪಡೆದರು. ಪುಣ್ಯಾರಾಧನೆ ಕಾರ್ಯಕ್ರಮದ ಭಾಗವಾಗಿ ಆಗಮಿಸಿದ್ದ ಭಕ್ತರಿಗೆ ವಿಶೇಷ ಪ್ರಸಾದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಅನ್ನ, ಸಾಂಬಾರ್, ಪಾಯಸ, ಬೂಂದಿ, ಜಿಲೇಬಿ ಸೇರಿದಂತೆ ಇನ್ನಿತರ ತಿನಿಸುಗಳನ್ನು ಮಠದ 11 ಕಡೆ ದಾಸೋಹ ವ್ಯವಸ್ಥೆಯನ್ನ ಮಾಡಲಾಗಿತ್ತು. ಸಂಜೆ ವೇಳೆಗೆ ಭಕ್ತರ ಸಂಖ್ಯೆ ಹೆಚ್ಚಳವಾದ ಕಾರಣ ಶ್ರೀಗಳ ಗದ್ದುಗೆ ಒಳ ಪ್ರವೇಶಕ್ಕೆ ಅವಕಾಶ ನೀಡದೇ ಮುಖ್ಯದ್ವಾರದಿಂದಲೇ ದರ್ಶನ ಮಾಡಲು ಅವಕಾಶ ನೀಡಲಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ವಿದ್ಯಾರ್ಥಿಯ ನೀತಿ ಪಾಠದ ಎಫೆಕ್ಟ್ – ದಾಸೋಹದಲ್ಲಿ ಅನ್ನ ಬಿಡದೇ ತಟ್ಟೆ ಖಾಲಿ ಮಾಡಿದ ಭಕ್ತರು

    ವಿದ್ಯಾರ್ಥಿಯ ನೀತಿ ಪಾಠದ ಎಫೆಕ್ಟ್ – ದಾಸೋಹದಲ್ಲಿ ಅನ್ನ ಬಿಡದೇ ತಟ್ಟೆ ಖಾಲಿ ಮಾಡಿದ ಭಕ್ತರು

    ತುಮಕೂರು: ಸಿದ್ದಗಂಗಾ ಶ್ರೀಗಳ 11ನೇ ದಿನದ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ಭಕ್ತರು ಹಾಕಿಕೊಂಡ ಅನ್ನವನ್ನು ವ್ಯರ್ಥ ಮಾಡದೇ ತಟ್ಟೆಯನ್ನು ಖಾಲಿ ಮಾಡಿ ಸಂತಸಪಟ್ಟಿದ್ದಾರೆ.

    ಶಿವಕುಮಾರ ಸ್ವಾಮೀಜಿ ಅವರು ಲಿಂಗೈಕ್ಯರಾದ ವೇಳೆ ಅನ್ನ ಎಸೆಯುವ ವಿಚಾರಕ್ಕೆ ಸಂಬಂಧಿಸಿದಂತೆ ಭಕ್ತರೊಬ್ಬರಿಗೆ ಮಠದ ವಿದ್ಯಾರ್ಥಿ ಅನ್ನದ ಮಹತ್ವವನ್ನು ತಿಳಿಸಿದ್ದ ವಿಡಿಯೋ ಒಂದು ವೈರಲ್ ಆಗಿತ್ತು. ಈ ವಿಡಿಯೋದ ಪ್ರಭಾವ ಏನೋ ಎಂಬಂತೆ ಭಕ್ತರು ಇಂದು ಎಷ್ಟು ಅನ್ನಬೇಕೋ ಅಷ್ಟೇ ಪ್ರಮಾಣದ ಅನ್ನವನ್ನು ಹಾಕಿಕೊಂಡು ತಿಂದಿದ್ದಾರೆ. ಇದನ್ನು ಓದಿ: ಅನ್ನ ಚೆಲ್ಲಲು ಬಂದ ಭಕ್ತನಿಗೆ ಮಠದ ವಿದ್ಯಾರ್ಥಿಯಿಂದ ಅನ್ನದ ಪಾಠ! – ವಿಡಿಯೋ ನೋಡಿ

    ಪುಣ್ಯಾರಾಧನೆಗೆ ಆಗಮಿಸಿದ 5 ಲಕ್ಷ ಭಕ್ತರಿಗಾಗಿ ನಿರಂತರವಾಗಿ ವಿವಿಧ ರೀತಿಯ ಪ್ರಸಾದವನ್ನು ತಯಾರಿಸಲಾಗುತ್ತಿದೆ. ಮಠದ ಆವರಣದಲ್ಲಿ ವಿವಿಧ ರೀತಿಯ ಪ್ರಸಾದವನ್ನು ಸಿದ್ಧ ಮಾಡುತ್ತಿದ್ದಾರೆ. ನೂರಾರು ಭಕ್ತರು ಸ್ವಯಂ ಪ್ರೇರಿತವಾಗಿ ದಾಸೋಹದ ಸಿದ್ಧತಾ ಕಾರ್ಯದಲ್ಲಿ ರಾತ್ರಿಯಿಡಿ ತೊಡಗಿಕೊಂಡಿದ್ದರು. ಈಗಾಗಲೇ 69 ಕ್ವಿಂಟಾಲ್ ಸಿಹಿ ಬೂಂದಿ ತಯಾರಿಸಲಾಗಿದೆ. ಇದನ್ನು ಓದಿ: ಜನ ಈಗ ಸಾಹುಕಾರರಾಗಿದ್ದಾರೆ, ಹೀಗಾಗಿ ಅನ್ನದ ಬೆಲೆ ಗೊತ್ತಿಲ್ಲ: ಸಿದ್ದಗಂಗಾ ಮಠದ ವಿದ್ಯಾರ್ಥಿ

    ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಶಿವೈಕ್ಯರಾದ ವೇಳೆ ಭಕ್ತಾದಿಗಳಿಗೆ ಅನ್ನದಾಸೋಹ ಮಾಡಲಾಗಿತ್ತು. ಈ ವೇಳೆ ಭಕ್ತರೊಬ್ಬರು ಅನ್ನ ಚೆಲ್ಲಲು ಮುಂದಾದಾಗ ಮಠದ ಬಾಲಕ ಶಿವು ಅವರಿಗೆ ಅನ್ನದ ಮಹತ್ವವನ್ನು ತಿಳಿಸಿದ್ದನು. ಶ್ರೀಗಳ ದರ್ಶನಕ್ಕೆ ಬಂದಿದ್ದ ಭಕ್ತರಿಗೆ ಉಚಿತ ಅನ್ನದಾಸೋಹ ಸಂದರ್ಭದಲ್ಲಿ ಮೇಲುಸ್ತುವಾರಿ ಮಾಡುತ್ತಿದ್ದ ಮಠದ ವಿದ್ಯಾರ್ಥಿ, ಅನ್ನದ ಮಹತ್ವ ತಿಳಿಸಿಕೊಟ್ಟಿದ್ದನು. ಅಲ್ಲದೇ ಪ್ರಸಾದ ಚೆಲ್ಲಬೇಡಿ, ಮುಂದೆ ಅನ್ನ ಸಿಗದ ಕಾಲ ಬರುತ್ತೆ ಎಂದು ವಿದ್ಯಾರ್ಥಿ ಹೇಳಿದ್ದ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

    https://www.youtube.com/watch?v=Ku2W_RqZM9M

    https://www.youtube.com/watch?v=5uh3fpEysn8

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಿದ್ದಗಂಗಾ ಶ್ರೀಗಳ 11ನೇ ಪುಣ್ಯಾರಾಧನೆ – ಮಠದ ಸುತ್ತಮುತ್ತ ಬಿಗಿ ಬಂದೋಬಸ್ತ್

    ಸಿದ್ದಗಂಗಾ ಶ್ರೀಗಳ 11ನೇ ಪುಣ್ಯಾರಾಧನೆ – ಮಠದ ಸುತ್ತಮುತ್ತ ಬಿಗಿ ಬಂದೋಬಸ್ತ್

    ತುಮಕೂರು: ಇಂದು ಸಿದ್ದಗಂಗಾಶ್ರೀಗಳ 11ನೇ ಪುಣ್ಯಾರಾಧನೆ ಕಾರ್ಯಕ್ರಮ ಹಿನ್ನೆಲೆಯಲ್ಲಿ ಮಠದ ಸುತ್ತಮುತ್ತ ಬಿಗಿ ಬಂದೋಬಸ್ತ್ ಮಾಡಲಾಗಿದೆ.

    ಬುಧವಾರ ಮಠಕ್ಕೆ ಬಂದಿರುವ ದಕ್ಷಿಣ ವಲಯ ಐಜಿಪಿ ದಯಾನಂದ್, ಭದ್ರತೆಯ ಉಸ್ತುವಾರಿ ವಹಿಸಿದ್ದು, ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದಾರೆ. ಲಕ್ಷ ಲಕ್ಷ ಭಕ್ತರು ಮಠಕ್ಕೆ ಧಾವಿಸಲಿರುವ ಹಿನ್ನೆಲೆಯಲ್ಲಿ ಕೆಲ ಮಾರ್ಗ ಬದಲಾವಣೆಯನ್ನು ಪೊಲೀಸ್ ಮಾಡಿದೆ.

    ಎನ್‍ಹೆಚ್ 4ನಲ್ಲಿ ಗೂಡ್ಸ್ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ. ದಾವಣಗೆರೆ ಚಿತ್ರದುರ್ಗದ ಕಡೆಯಿಂದ ಬರುವ ಗೂಡ್ಸ್ ವಾಹನಗಳಿಗೆ ಶಿರಾ, ಮಧುಗಿರಿ, ಕೊರಟಗೆರೆ, ದಾಬಸ್ ಪೇಟೆ ಮೂಲಕ ಬೆಂಗಳೂರಿಗೆ ತೆರಳಲು ಸಂಪರ್ಕ ಕಲ್ಪಿಸಲಾಗಿದೆ. ಬೆಂಗಳೂರಿನಿಂದ ದಾವಣಗೆರೆಯತ್ತ ಹೋಗುವ ಗೂಡ್ಸ್ ವಾಹನಗಳಿಗೆ ದಾಬಸ್‍ಪೇಟೆ, ಕೊರಟಗೆರೆ, ಮಧುಗಿರಿ ಮೂಲಕ ಶಿರಾಗೆ ಸಂಪರ್ಕ ಕಲ್ಪಿಸಲಾಗಿದೆ. ಉಳಿದಂತೆ ಬಸ್, ಕಾರುಗಳಿಗೆ ಸಂಚಾರಕ್ಕೆ ಪೊಲೀಸ್ ಇಲಾಖೆ ಅವಕಾಶ ಕಲ್ಪಿಸಿದೆ.

    ಇಂದು ಶಿವೈಕ್ಯ ಸಿದ್ದಗಂಗಾ ಶ್ರೀಗಳ ಪುಣ್ಯಾರಾಧನೆ ಕಾರ್ಯಕ್ರಮವಿದ್ದು, ನಾಡಿನ ಮೂಲೆ ಮೂಲೆಯಿಂದ ಭಕ್ತರು ಆಗಮಿಸಿದ್ದಾರೆ. ಭಕ್ತರು ರಾತ್ರಿಯೇ ಬಂದು ಶ್ರೀಮಠದಲ್ಲಿ ತಂಗಿದ್ದಾರೆ. ರಾತ್ರಿಯಿಡಿ ಶಿವನಾಮ ಸ್ಮರಣೆ ಮಾಡಿ ಜಾಗರಣೆ ಮಾಡಿದ್ದಾರೆ. ಇಂದು ಬೆಳಗ್ಗೆ 5 ಗಂಟೆಯಿಂದ ಪೂಜಾ ಕೈಂಕರ್ಯ ಆರಂಭವಾಗಿದ್ದು, ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಾಳೆ ಶ್ರೀಗಳ 11ನೇ ದಿನದ ಪುಣ್ಯಾರಾಧನೆ- ಲಕ್ಷಾಂತರ ಭಕ್ತರಿಗೆ ಮಠದಲ್ಲಿ ಸಕಲ ಸಿದ್ಧತೆ

    ನಾಳೆ ಶ್ರೀಗಳ 11ನೇ ದಿನದ ಪುಣ್ಯಾರಾಧನೆ- ಲಕ್ಷಾಂತರ ಭಕ್ತರಿಗೆ ಮಠದಲ್ಲಿ ಸಕಲ ಸಿದ್ಧತೆ

    ತುಮಕೂರು: ಸಿದ್ದಗಂಗಾ ಶ್ರೀಗಳು ದೇಹತ್ಯಾಗ ಮಾಡಿ ಇಂದಿಗೆ 9 ದಿನಗಳು ಆಗಿದೆ. 11ನೇ ದಿನವಾದ ಗುರುವಾರ ಶ್ರೀಗಳ ಪುಣ್ಯಾರಾಧನೆ ನಡೆಯಲಿದೆ. ಈ ಹಿನ್ನೆಲೆ ಮಠದಲ್ಲಿ ಸಕಲ ತಯಾರಿ ನಡೆಯುತ್ತಿದೆ. ಶ್ರೀಗಳ ಪುಣ್ಯಸ್ಮರಣೆಗೆ ರಾಜ್ಯದೆಲ್ಲೆಡೆಯಿಂದ ಭಕ್ತರು ಅನ್ನದಾಸೋಹಕ್ಕೆ ಬೇಕಾದ ದಿನಸಿ ಸಾಮಾಗ್ರಿಗಳನ್ನು ಮಠಕ್ಕೆ ಅರ್ಪಿಸಿ ತಮ್ಮ ಭಕ್ತಿ ಮೆರೆಯುತ್ತಿದ್ದಾರೆ.

    ನಡೆದಾಡುವ ದೇವರು ಸಿದ್ಧಗಂಗಾ ಶ್ರೀಗಳ 11ನೇ ದಿನದ ಪುಣ್ಯಸ್ಮರಣೆಗೆ ಶ್ರೀಮಠ ಸಜ್ಜಾಗುತ್ತಿದೆ. ಗುರುವಾರ ನಡೆಯಲಿರುವ ಕಾರ್ಯಕ್ರಮಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸುವ ಭಕ್ತರಿಗೆ ಭಕ್ಷ್ಯ ಭೋಜನಕ್ಕೆ ಸಿದ್ಧತೆ ನಡೆಯುತ್ತಿದೆ. ಮಠದ 4 ಅಡುಗೆ ಕೊಪ್ಪಲಿನಲ್ಲಿ 100ಕ್ಕೂ ಹೆಚ್ಚು ಅಡುಗೆ ಭಟ್ಟರು ವಿವಿಧ ಸಿಹಿ ತಿನಿಸುಗಳ ತಯಾರಿ ನಡೆಯುತ್ತಿದೆ. ಪುಣ್ಯಸ್ಮರಣೆ ಕಾರ್ಯಕ್ರಮಕ್ಕೆ 5 ಲಕ್ಷಕ್ಕೂ ಹೆಚ್ಚು ಭಕ್ತರು ಆಗಮಿಸುವ ಸಾಧ್ಯತೆ ಇದೆ. ಮಠದ ಆವರಣದಲ್ಲಿ ಸುಮಾರು ಹತ್ತು ಕಡೆ ಅನ್ನ ದಾಸೋಹಕ್ಕೂ ಸಿದ್ಧತೆ ನಡೆದಿದೆ. ಇದನ್ನೂ ಓದಿ: ಶ್ರೀಗಳ ಪುಣ್ಯಾರಾಧನೆಗೆ ಭಕ್ತರಿಂದ 11 ಟನ್ ಅಕ್ಕಿ ಕಾಣಿಕೆ!

    ಶ್ರೀಗಳ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ದಿನಸಿ ಸಾಮಾಗ್ರಿಗಳು ಹರಿದು ಬರುತ್ತಿದೆ. ಚಿತ್ರದುರ್ಗ, ದಾವಣಗೆರೆ, ಬೆಳಗಾವಿ ಸೇರಿದಂತೆ ನಾನಾ ಭಾಗಗಳಿಂದ ಭಕ್ತರು ಸ್ವಯಂ ಪ್ರೇರಿತರಾಗಿ ಸಾವಿರಾರು ಕ್ವಿಂಟಾಲ್ ಅಕ್ಕಿ, ಬೇಳೆ, ಬೆಲ್ಲ, ತರಕಾರಿ ತಂದು ಕೊಡುತ್ತಿದ್ದಾರೆ. ಗೋಸಲ ಸಿದ್ದೇಶ್ವರ ವೇದಿಕೆಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ಮಠದ ವಿದ್ಯಾರ್ಥಿಗಳು, ಸಂಸ್ಥೆಯ ಶಿಕ್ಷಕರು, ಭಕ್ತಾಧಿಗಳು ಸ್ವಯಂ ಪ್ರೇರಿತರಾಗಿ ಸಿದ್ಧತೆಯಲ್ಲಿ ತಲ್ಲೀನರಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv