Tag: tulu education

  • ಕರಾವಳಿಯಲ್ಲಿ ಟ್ರೆಂಡ್ ಆಗ್ತಿದೆ #EducationInTulu ಅಭಿಯಾನ- ಏನಿದು ಕ್ಯಾಂಪೇನ್?

    ಕರಾವಳಿಯಲ್ಲಿ ಟ್ರೆಂಡ್ ಆಗ್ತಿದೆ #EducationInTulu ಅಭಿಯಾನ- ಏನಿದು ಕ್ಯಾಂಪೇನ್?

    ಮಂಗಳೂರು: ಲಕ್ಷಾಂತರ ಮಂದಿಯ ಮಾತೃಭಾಷೆಯಾಗಿಯಷ್ಟೇ ಉಳಿದಿರುವ ತುಳು ಭಾಷೆಗೆ ಇನ್ನೂ ಯಾವುದೇ ರೀತಿಯ ಸ್ಥಾನಮಾನ ದೊರೆತಿಲ್ಲ. ಇದೀಗ ತುಳುನಾಡಿನ ಮಕ್ಕಳಿಗೆ ತುಳುವಿನಲ್ಲಿಯೇ ಶಿಕ್ಷಣ ಸಿಗಬೇಕು ಎಂಬ ಅಭಿಯಾನವೊಂದನ್ನು ನಡೆಸಲು ತುಳುವರು ತೀರ್ಮಾನಿಸಿದ್ದಾರೆ.

    ಈ ಹಿನ್ನೆಲೆಯಲ್ಲಿ ಈಗಾಗಲೇ ತುಳುಪರ ಕಾರ್ಯಕ್ರಮಗಳನ್ನು ಮಾಡಿ ಮೆಚ್ಚುಗೆ ಗಳಿಸಿರುವ ಜೈ ತುಳುನಾಡ್ ಸಂಘಟನೆ ಸಾಮಾಜಿಕ ಜಾಲತಾಣಗಳಲ್ಲಿ ನಡೆಸುವ ಅಭಿಯಾನದ ನೇತೃತ್ವ ವಹಿಸಿಕೊಂಡಿದೆ. ಅಲ್ಲದೆ ಈಗಾಗಲೇ ಜನರಲ್ಲಿ ಈ ಬಗ್ಗೆ ಜಾಗೃತಿ ಕೂಡ ಮೂಡಿಸಲು ಆರಂಭಿಸಿದೆ.

    ಈ ಹಿಂದೆ ತುಳುಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸಬೇಕು. ತುಳು ಭಾಷೆಯನ್ನು ಕರ್ನಾಟಕ ಮತ್ತು ಕೇರಳ ರಾಜ್ಯದಲ್ಲಿ ಅಧಿಕೃತ ರಾಜ್ಯ ಭಾಷೆಯನ್ನಾಗಿ ಘೋಷಣೆ ಮಾಡಬೇಕು. ಹಾಗೂ ತುಳು ಲಿಪಿಯನ್ನು ಸಾರ್ವಜನಿಕರಿಗೆ ಕಲಿಸುವಂತಹ ದೊಡ್ಡ ಮಟ್ಟದ ಕಾರ್ಯಕ್ರಮಗಳನ್ನು ಇದೇ ಸಂಘಟನೆ ಹಮ್ಮಿಕೊಂಡಿತ್ತು. ಈ ಮೂಲಕ ತುಳುವರ ಪರ ಕಾರ್ಯಕ್ರಮಗಳನ್ನು ಮಾಡಿ ಜನಮನ್ನಣೆ ಗಳಿಸಿದೆ.

    ಏನಿದು ಕ್ಯಾಂಪೇನ್?:
    ಮಹಾಮಾರಿ ಕೊರೊನಾ ವೈರಸ್ ಎಂಬ ಸಾಂಕ್ರಾಮಿಕ ರೋಗದ ಬಳಿಕ ಕೇಂದ್ರ ಸರ್ಕಾರ ಹೊಸ ಶಿಕ್ಷಣ ನೀತಿ ಜಾರಿಗೊಳಿಸಲು ನಿರ್ಧರಿಸಿದೆ. ಈ ಹೊಸ ಶಿಕ್ಷಣ ನೀತಿಯಲ್ಲಿ 5ನೇ ತರಗತಿಯವರೆಗೆ ಆಯಾ ಪ್ರಾದೇಶಿಕ ಭಾಷೆಯಲ್ಲಿ ಶಿಕ್ಷಣ ಕೊಡಬೇಕು ಎಂಬ ನಿಯಮವಿದೆ. ಇದರ ಅನ್ವಯ ತುಳುನಾಡಿನ ಮಕ್ಕಳಿಗೆ ತುಳು ಭಾಷೆಯಲ್ಲಿಯೇ ಶಿಕ್ಷಣ ನೀಡಬೇಕೆಂಬ ನಿಯಮ ಸೇರಿಸಬೇಕು ಎಂಬುದು ಕರಾವಳಿ ಜನರ ಮಹತ್ತರವಾದ ಆಶಯವಾಗಿದೆ.

    ತುಳುನಾಡಿನ ಮಕ್ಕಳಿಗೆ ಅವರದ್ದೇ ಭಾಷೆಯಲ್ಲಿ ಶಿಕ್ಷಣ ಸಿಗುವಂತಾದರೆ ತುಳು ಭಾಷೆ ಶೈಕ್ಷಣಿಕ ಭಾಷೆಯಾಗಿ ಹೊರಹೊಮ್ಮುವುದರಲ್ಲಿ ಎರಡು ಮಾತಿಲ್ಲ. ಈ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳ ಬಳಿ ತುಳುವನ್ನು ಹೊಸ ಶಿಕ್ಷಣ ನೀತಿಯಲ್ಲಿ ಸೇರಿಸುವ ಬಗ್ಗೆ ಮನವಿ ಮಾಡಬೇಕಾಗಿದ್ದು, ಈ ಮೂಲಕ ಸರ್ಕಾರದ ಗಮನ ಸೆಳೆಯುವ ಅಗತ್ಯತೆ ಇದೆ. ಹೀಗಾಗಿ ತುಳು ಅಭಿಮಾನಿಗಳು ಪಾಲ್ಗೊಂಡು #EducationInTulu ಎಂಬ ಹ್ಯಾಶ್ ಟ್ಯಾಗ್ ನಲ್ಲಿ ಟ್ವೀಟ್ ಮಾಡಿ ಜನಪ್ರತಿನಿಧಿಗಳು ಹಾಗೂ ಸರ್ಕಾರವನ್ನು ಎಚ್ಚರಿಸಬೇಕಾಗಿದೆ ಎಂದು ಜೈ ತುಳುನಾಡ್ ಸಂಘಟನೆಯ ಅಧ್ಯಕ್ಷ ಸುದರ್ಶನ ಮೂಲ್ಯ ಹೇಳಿದ್ದಾರೆ.