Tag: Tukaram

  • ಕಾಂಗ್ರೆಸ್ ನಾಯಕರನ್ನ ತೇಜೋವಧೆ ಮಾಡಲು ಇಡಿ ದಾಳಿ: ಅಶೋಕ್ ಪಟ್ಟಣ

    ಕಾಂಗ್ರೆಸ್ ನಾಯಕರನ್ನ ತೇಜೋವಧೆ ಮಾಡಲು ಇಡಿ ದಾಳಿ: ಅಶೋಕ್ ಪಟ್ಟಣ

    ಬೆಂಗಳೂರು: ಕಾಂಗ್ರೆಸ್ ನಾಯಕರನ್ನ ತೇಜೋವಧೆ ಮಾಡಲು ಇಡಿ ದಾಳಿ (ED Raid) ಮಾಡಿದೆ ಎಂದು ವಿಧಾನಸಭೆ ಸರ್ಕಾರದ ಮುಖ್ಯ ಸಚೇತಕ ಅಶೋಕ್ ಪಟ್ಟಣ (Ashok Pattan) ಇಡಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

    ಇಡಿ ದಾಳಿ ಬಗ್ಗೆ ವಿಧಾನಸೌಧದಲ್ಲಿ ಮಾತನಾಡಿದ ಅವರು, ಸಂಸದ ತುಕಾರಾಂ, ಶಾಸಕ ನಾಗೇಂದ್ರ ಸೇರಿದಂತೆ ಹಲವರ ಮೇಲೆ ಇಡಿ ದಾಳಿ ಮಾಡಿದೆ. ಎಂಪಿ ತುಕಾರಾಂ ಸಭ್ಯಸ್ಥ ವ್ಯಕ್ತಿ. ಬಳ್ಳಾರಿಯಲ್ಲಿ ಕಾಂಗ್ರೆಸ್‌ನವರ ಮೇಲೆ ದಾಳಿ ನಡೆದಿದೆ. ಇಡಿ ದಾಳಿ ಮಾಡಿ ತೇಜೊವಧೆಗೆ ಮಾಡೋ ಕೆಲಸ ಮಾಡ್ತಿದ್ದಾರೆ. ಈಗಾಗಲೇ ತನಿಖೆ ನಡೆಯುತ್ತಿದೆ. ಈಗ ದಾಳಿ ಮಾಡ್ತಿರೋದಕ್ಕೆ ರಾಜಕೀಯ ಕಾರಣ ಇದೆ ಅಂತ ಆರೋಪ ಮಾಡಿದರು. ಇದನ್ನೂ ಓದಿ: ಬಳ್ಳಾರಿ ಚುನಾವಣೆಗೆ 21 ಕೋಟಿ ಹಣ ಬಳಕೆ ಆರೋಪ – ಸಂಸದ ತುಕಾರಾಂ ಇಡಿ ವಶಕ್ಕೆ

    ಚುನಾವಣೆಗೆ ಹಣ ಬಳಕೆಯಾಗಿದೆ ಅನ್ನೋದಕ್ಕೆ ತನಿಖೆ ನಡೆಯುತ್ತಿದೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕಾಂಗ್ರೆಸ್ ನಾಯಕರ ಮೇಲೆ ದಾಳಿ ಆಗ್ತಿದೆ. ತನಿಖೆಯಲ್ಲಿ ತಪ್ಪಾಗಿರೋದು ಕಂಡು ಬಂದ್ರೆ ಶಿಕ್ಷೆಯಾಗಲಿ‌. ಅದು ಬಿಟ್ಟು ಹೀಗೆ ತೇಜೋವಧೆ ಮಾಡೋದು ಸರಿಯಲ್ಲ ಎಂದರು.

    ನಾಗೇಂದ್ರ ಅವರನ್ನ ಮತ್ತೆ ಕ್ಯಾಬಿನೆಟ್‌ಗೆ ಸೇರಿಸಿಕೊಳ್ಳೋ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಾಗೇಂದ್ರ ಅವರನ್ನ ಸಂಪುಟಕ್ಕೆ ತೆಗೆದುಕೊಳ್ಳೋದು ಹೈಕಮಾಂಡ್, ಸಿಎಂಗೆ ಬಿಟ್ಟಿದ್ದು ಎಂದು ತಿಳಿಸಿದರು. ಇದನ್ನೂ ಓದಿ: ವಾಲ್ಮೀಕಿ ಹಗರಣ; ಸಂಸದ ತುಕಾರಾಂ, ಮೂವರು ಶಾಸಕರ ಮನೆ ಮೇಲೆ ED ದಾಳಿ

  • ವಾಲ್ಮೀಕಿ ಹಗರಣ; ಸಂಸದ ತುಕಾರಾಂ, ಮೂವರು ಶಾಸಕರ ಮನೆ ಮೇಲೆ ED ದಾಳಿ

    ವಾಲ್ಮೀಕಿ ಹಗರಣ; ಸಂಸದ ತುಕಾರಾಂ, ಮೂವರು ಶಾಸಕರ ಮನೆ ಮೇಲೆ ED ದಾಳಿ

    ಬಳ್ಳಾರಿ/ಬೆಂಗಳೂರು: ವಾಲ್ಮೀಕಿ ಬಹುಕೋಟಿ ಹಗರಣ ಪ್ರಕರಣದಲ್ಲಿ ಸಂಸದ ತುಕಾರಾಂ ಹಾಗೂ ಮೂವರು ಶಾಸಕರ ಮನೆ ಮೇಲೆ ಬೆಳ್ಳಂಬೆಳಗ್ಗೆ ಇಡಿ ದಾಳಿ ನಡೆದಿದೆ.

    ಶಾಸಕರಾದ ನಾರಾ ಭರತ್‌ ರೆಡ್ಡಿ, ಗಣೇಶ್‌ (ಕಂಪ್ಲಿ ಕ್ಷೇತ್ರ), ಶ್ರೀನಿವಾಸ್‌ ಅವರ ಮನೆ ಮೇಲೂ ಇ.ಡಿ ದಾಳಿ ಮಾಡಿದೆ. ಮಾಜಿ ಸಚಿವ ನಾಗೇಂದ್ರ ಅವರ ಪಿಎ ಗೋವರ್ಧನ್‌ ಮನೆ ಮೇಲೂ ದಾಳಿ ಮಾಡಿ ಪರಿಶೀಲನೆ ನಡೆಸುತ್ತಿದೆ.

    ಬಳ್ಳಾರಿ ಚುನಾವಣೆಗೆ ಪ್ರತಿ ಮತದಾರರಿಗೆ 200 ರೂ. ಹಂಚಿಕೆ ಆರೋಪದಲ್ಲಿ ಸಂಸದ ತುಕಾರಾಂ ಮನೆ ಮೇಲೆ ದಾಳಿ ನಡೆದಿದೆ. ಮತದಾರರಿಗೆ 200 ರೂ.ನಂತೆ ಹಣ ಹಂಚಿಕೆ ಆರೋಪ ಕೇಳಿಬಂದಿದೆ.

    ಲೋಕಸಭಾ ಚುನಾವಣೆಗೆ ವಾಲ್ಮೀಕಿ ನಿಗಮದ ಹಣ ಬಳಕೆಯಾಗಿದೆ ಎಂಬ ಆರೋಪದ ಹಿನ್ನೆಲೆ ಶೋಧ ನಡೆದಿದೆ. ಅಧಿಕಾರಿಗಳು ದಾಖಲೆಗಳನ್ನ ಪರಿಶೀಲನೆ ಮಾಡುತ್ತಿದ್ದಾರೆ.

  • ತುಕಾರಾಂ ಕುಟುಂಬಕ್ಕೆ ಟಿಕೆಟ್‌ ನೀಡಬೇಡಿ – ಬೆಂಗಳೂರು ಕಡೆಗೆ ಅತೃಪ್ತರ ಮುಖ

    ತುಕಾರಾಂ ಕುಟುಂಬಕ್ಕೆ ಟಿಕೆಟ್‌ ನೀಡಬೇಡಿ – ಬೆಂಗಳೂರು ಕಡೆಗೆ ಅತೃಪ್ತರ ಮುಖ

    ಬಳ್ಳಾರಿ: ಸಂಡೂರು ಉಪಚುನಾವಣೆ (Sandur By Election) ರಾಜಕೀಯ ಕೂಡ ಜೋರಾಗಿದೆ. ಸಂಸದ ತುಕಾರಾಂ (Tukaram) ಕುಟುಂಬಕ್ಕೆ ಟಿಕೆಟ್ ನೀಡೋದಕ್ಕೆ ಭಾರೀ ವಿರೋಧ ವ್ಯಕ್ತವಾಗ್ತಿದ್ದು, ಇದು ರಾಜ್ಯ ಕಾಂಗ್ರೆಸ್ ನಾಯಕರ ತಲೆಬಿಸಿಗೆ ಕಾರಣವಾಗಿದೆ.

    ಗುರುವಾರ ಸಂಡೂರಲ್ಲಿ ಸಭೆ ನಡೆಸಿದ್ದ ಅತೃಪ್ತರು ಬೆಂಗಳೂರು ಕಡೆ ಮುಖ ಮಾಡಿದ್ದಾರೆ. ಉಪಸಮರವನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿರುವ ಜನಾರ್ದನ ರೆಡ್ಡಿ (Janardhana Reddy) ಇಂದು ಸಂಡೂರಲ್ಲಿ ಹೊಸಮನೆಯ ಗೃಹಪ್ರವೇಶ ಮಾಡಿದ್ದಾರೆ. ಅಷ್ಟೇ ಅಲ್ಲದೇ ತುಕಾರಾಮ್ ಸಹೋದರಿ ಪುಷ್ಪಾವತಿ ನಾಗರಾಜ್ ಮನೆಗೆ ಭೇಟಿ ನೀಡಿ ಬೆಂಬಲ ಯಾಚಿಸಿದ್ದಾರೆ. ಇದನ್ನೂ ಓದಿ: ದರ್ಶನ್ ನೋಡಲು ಜೈಲಿಗೆ ಬಂದ ವಿಜಯಲಕ್ಷ್ಮಿ

     

    ಈ ಸಂದರ್ಭದಲ್ಲಿ ನಾನು ಸಂಡೂರು ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದು ರಾಮುಲು (Sriramulu) ಘೋಷಿಸಿದ್ದಾರೆ.

  • ಸಂಡೂರು ಶಾಸಕ ಸ್ಥಾನಕ್ಕೆ ತುಕಾರಾಂ ರಾಜೀನಾಮೆ

    ಸಂಡೂರು ಶಾಸಕ ಸ್ಥಾನಕ್ಕೆ ತುಕಾರಾಂ ರಾಜೀನಾಮೆ

    ಬಳ್ಳಾರಿ: ಈಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದ ಹಿನ್ನೆಲೆ ಸಂಡೂರು (Sanduru) ಕ್ಷೇತ್ರದ ಶಾಸಕ ಸ್ಥಾನಕ್ಕೆ ಇ.ತುಕಾರಾಂ (Tukaram) ರಾಜೀನಾಮೆ ನೀಡಿದ್ದಾರೆ.

    ಸಂಸತ್ ಅಧಿವೇಶನದಲ್ಲಿ ಲೋಕಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಬೇಕಾದ ಹಿನ್ನೆಲೆ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ ಸಂಸದ ತುಕಾರಾಂ ವಿಧಾನಸಭೆಯ ಸ್ಪೀಕರ್ ಲಭ್ಯವಿಲ್ಲದ ಕಾರಣ, ಅವರ ಅನುಮತಿ‌ ಪಡೆದು ಕಾರ್ಯದರ್ಶಿಯವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಇದನ್ನೂ ಓದಿ: ತುಕಾರಂ ʼಕೈʼ ಹಿಡಿದ ಬಳ್ಳಾರಿ ಜನ – ಶ್ರೀರಾಮುಲುಗೆ ಸೋಲು

    ಸಂಡೂರು ಕ್ಷೇತ್ರದಿಂದ 2008, 2013, 2018 ಮತ್ತು 2023 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸತತವಾಗಿ ಕಾಂಗ್ರೆಸ್ ಪಕ್ಷದಿಂದಲೇ ಶಾಸಕರಾಗಿ ಆಯ್ಕೆಯಾಗಿದ್ದರು. ಎಂ.ಕಾಂ ಪದವೀಧರರಾದ ತುಕಾರಾಂ ಅವರು ವಿಎಸ್ ಲಾಡ್ ಕಂಪನಿಯಲ್ಲಿ ನೌಕರರಾಗಿದ್ದರು.

    ಕಂಪನಿಯಲ್ಲಿನ ನಿಷ್ಠೆ ಹಿನ್ನೆಲೆ ಸಂತೋಷ ಲಾಡ್ 2008 ರಲ್ಲಿ ಮೊದಲ ಬಾರಿಗೆ ಟಿಕೆಟ್ ಕೊಡಿಸಿ ಸಂಡೂರು ಕ್ಷೇತ್ರದಿಂದ ಕಣಕ್ಕಿಳಿಸಿದ್ದರು. ಅಂದಿನಿಂದ ಈವರೆಗೂ ನಡೆದ ಎಲ್ಲಾ ಚುನಾವಣೆಯಲ್ಲಿ ಗೆಲ್ಲುವ ಮೂಲಕ ತುಕಾರಾಂ ಸೋಲಿಲ್ಲದ ಸರದಾರರಾಗಿದ್ದಾರೆ. ಇದನ್ನೂ ಓದಿ: ರೇಣುಕಾಸ್ವಾಮಿ ಹತ್ಯೆ ಪ್ರಕರಣ – ದರ್ಶನ್ ಗ್ಯಾಂಗ್‍ನ ಮತ್ತಿಬ್ಬರು ಅರೆಸ್ಟ್

  • ತುಕಾರಂ ʼಕೈʼ ಹಿಡಿದ ಬಳ್ಳಾರಿ ಜನ – ಶ್ರೀರಾಮುಲುಗೆ ಸೋಲು

    ತುಕಾರಂ ʼಕೈʼ ಹಿಡಿದ ಬಳ್ಳಾರಿ ಜನ – ಶ್ರೀರಾಮುಲುಗೆ ಸೋಲು

    ಬಳ್ಳಾರಿ: ಕಾಂಗ್ರೆಸ್‌ ಅಭ್ಯರ್ಥಿ ತುಕಾರಂ (Tukaram) ಅವರು ಬಿಜೆಪಿಯ ಶ್ರೀರಾಮುಲು (Sriramulu) ವಿರುದ್ಧ 98 ಸಾವಿರಕ್ಕೂ ಅಧಿಕ ಮತಗಳಿಂದ ಜಯಗಳಿಸಿದ್ದಾರೆ.

    ತುಕರಾಂ ಅವರಿಗೆ 7,30,845 ಮತಗಳು ಬಿದ್ದರೆ ಶ್ರೀರಾಮುಲು ಅವರಿಗೆ 6,31,853 ಮತಗಳು ಬಿದ್ದಿವೆ. ಇದನ್ನೂ ಓದಿ: ಮೈತ್ರಿ ಅಭ್ಯರ್ಥಿ ಎಂದಲ್ಲ, ಜೆಡಿಎಸ್ ಅಭ್ಯರ್ಥಿ ಎಂದು ಭಾವಿಸಿ ಮತ ನೀಡಿದ್ದಾರೆ: ಕೆ.ಸುಧಾಕರ್

    2019ರಲ್ಲಿ ಬಿಜೆಪಿ 25 ಸಾವಿರಕ್ಕೂ ಹೆಚ್ಚು ಮತಗಳಿಂದ ಜಯಗಳಿಸಿತ್ತು. ದೇವೇಂದ್ರಪ್ಪ 6,01,388 ಮತಗಳು ಪಡೆದರೆ ಉಗ್ರಪ್ಪ 5,75,681 ಮತಗಳನ್ನು ಪಡೆದಿದ್ದರು.

    2014ರ ಚುನಾವಣೆಯಲ್ಲಿ ಶ್ರೀರಾಮುಲು 85 ಸಾವಿರ ಮತಗಳಿಂದ ಜಯಗಳಿಸಿದ್ದರು. ಶ್ರೀರಾಮುಲು 5,34,406 ಮತಗಳನ್ನು ಪಡೆದರೆ ಕಾಂಗ್ರೆಸ್‌ ಎನ್‌ವೈ ಹನುಮಂತಪ್ಪ 4,49,262 ಮತಗಳನ್ನು ಪಡೆದಿದ್ದರು.

  • ಜಿಂದಾಲ್ ದಂಗಲ್- ಕಿಕ್ ಬ್ಯಾಕ್ ಆರೋಪ ತಳ್ಳಿ ಹಾಕಿದ ಸಚಿವ ತುಕಾರಾಂ

    ಜಿಂದಾಲ್ ದಂಗಲ್- ಕಿಕ್ ಬ್ಯಾಕ್ ಆರೋಪ ತಳ್ಳಿ ಹಾಕಿದ ಸಚಿವ ತುಕಾರಾಂ

    ಕೊಪ್ಪಳ: ಜಿಂದಾಲ್ ಕಾರ್ಖಾನೆಗೆ ಜಮೀನು ನೀಡುವ ವಿಚಾರದಲ್ಲಿ ಸರ್ಕಾರ ಕಿಕ್ ಬ್ಯಾಕ್ ಪಡೆದಿದೆ ಎಂಬ ವಿರೋಧ ಪಕ್ಷದ ನಾಯಕರು ಮಾಡುತ್ತಿರುವ ಆರೋಪ ಸುಳ್ಳು ಎಂದು ವೈದ್ಯಕೀಯ ಶಿಕ್ಷಣ ಸಚಿವ ಈ ತುಕಾರಾಂ ಹೇಳಿದ್ದಾರೆ.

    ಜಿಲ್ಲೆಯ ಕುಷ್ಟಗಿಯಲ್ಲಿ ಮಾತನಾಡಿದ ತುಕಾರಾಂ, ನಮ್ಮ ಸರ್ಕಾರ ಕಿಕ್ ಬ್ಯಾಕ್ ಪಡೆಯುವಂತಹ ಯಾವುದೇ ಕೆಲಸವನ್ನು ಮಾಡಿಲ್ಲ. ಯಾರ ಬಾಯಿಯಲ್ಲಿ ಏನ್ ಮಾಡಿರುತ್ತಾರೋ ಅದನ್ನು ನುಡಿಸುತ್ತೆ ಎಂದು ಪರೋಕ್ಷವಾಗಿ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪರಿಗೆ ತಿರುಗೇಟು ನೀಡಿದರು.

    ಜಿಂದಾಲ್‍ಗೆ ಏನು ಭೂಮಿ ಕೊಡಲಾಗಿದೆ ಅದು ಲೀಗಲ್ ಆಗಿದೆ. ನಾವೆಲ್ಲ ದೇಶ ಕಟ್ಟಬೇಕಾಗಿದ್ದು, ಯುವಕರಿಗೆ ಉದ್ಯೋಗ ಅವಕಾಶಗಳನ್ನು ಕೊಡಬೇಕಾಗಿದೆ. ಗ್ಲೋಬಲ್ ಇನ್‍ವೆಸ್ಟ್ಮೆಂಟ್ ಮಾಡುವ ಮೂಲಕ ಇಂಡಸ್ಟ್ರಿಗಳನ್ನು ಬೆಳೆಸುವುದು ಸರ್ಕಾರದ ಉದ್ದೇಶವಾಗಿದ್ದು, ಕೈಗಾರಿಕೆಗಳು ದೇಶದ ಆಸ್ತಿ, ಅವುಗಳಿಂದ ಸಾಕಷ್ಟು ಉದ್ಯೋಗಗಳು ಸೃಷ್ಟಿಯಾಗುತ್ತೆ ಎಂದರು.

    ಜಿಂದಾಲ್ ಕಂಪನಿಗೆ 2016ರಲ್ಲಿಯೇ ಭೂಮಿ ನೀಡಲು ಲೀಸ್ ಕಮಿಟಿಯಲ್ಲಿ ನಿರ್ಣಯ ಮಾಡಿ ನೀಡಲಾಗಿತ್ತು. 2006ರಲ್ಲಿ 5 ಮಿಲಿಯನ್ ಟನ್ ಸ್ಟೀಲ್ ಉತ್ಪಾದನೆ ಇತ್ತು, 2010 ರಲ್ಲಿ 10 ಮಿಲಿಯನ್ ಟನ್, 2011ರಲ್ಲಿ 15 ಮಿಲಿಯನ್ ಟನ್ ಇತ್ತು, ಸದ್ಯ 20 ಮಿಲಿಯನ್ ಟನ್ ಅಗತ್ಯ ಇದೆ. ಸ್ಟೀಲ್ ಉತ್ಪಾದನೆಯಿಂದ ಇತರೆ ಉತ್ಪನ್ನಗಳು ಉತ್ಪತ್ತಿಯಾಗುತ್ತಿವೆ. ಸಿಮೆಂಟ್, ಪೇಂಟ್, ಪವರ್ ಹಾಗೂ ಡಾಂಬರ್ ಉತ್ಪಾದನೆ ಆಗುತ್ತಿದ್ದು ಅವುಗಳ ಪ್ಲಾಂಟ್‍ಗಳನ್ನು ನಿರ್ಮಿಸಲಾಗಿದೆ. ಇದೊಂದು ನೈಸರ್ಗಿಕ ಸಂಪನ್ಮೂಲವಾಗಿದ್ದು, ಬಳಕೆ ಮಾಡಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ. ಮುಸುನಾಯಕನ ಹಳ್ಳಿ ಹಾಗೂ ಯರಬನಳ್ಳಿ ಗ್ರಾಮಗಳಲ್ಲಿ ಪ್ಲಾಂಟ್ ಆಗಿದೆ. ಸ್ಥಳೀಯರಿಗೆ ಉದ್ಯೋಗ ಅವಕಾಶ ನೀಡಲಾಗುತ್ತಿದ್ದು. ಸರೋಜಿನಿ ಮಹಿಷಿ ವರದಿ ಪ್ರಕಾರ ಪಾಲೋ ಮಾಡಲಾಗುತ್ತಿದೆ ಎಂದರು.

    ಇನ್ನು ಬ್ರಾಹ್ಮಿಣಿ ಮತ್ತು ಮಿತ್ತಲ್‍ಗೆ ಬಿಜೆಪಿ ಸರ್ಕಾರದಲ್ಲಿ ಭೂಮಿ ಕೊಡಲಾಗಿದ್ದು, 6100 ಎಕರೆ ಉತ್ತಮ್ ಗಾಲ್ವಾ ಕೊಟ್ಟು ಇಂಡಸ್ಟ್ರಿ ಯಾರಿಗೂ ಸಿಗದಂಗೆ ಮಾಡಿದ್ದಾರೆ ಅದು ಸಿಬಿಐಗೆ ಸಿಲುಕಿದೆ. ಇದರ ಬಗ್ಗೆ ಬಿಜೆಪಿ ಅವರು ಯಾರು ಮಾತನಾಡುವುದಿಲ್ಲ. ಬಿಜೆಪಿಯವರು ಯಾವುದೇ ಕೆಲಸ ಮಾಡಿಲ್ಲ. ನಮ್ಮ ಸರ್ಕಾರ ಮಾಡುತ್ತಿದೆ ಅದಕ್ಕಾಗಿ ಹತಾಶರಾಗಿದ್ದಾರೆ ಎಂದು ಟೀಕಿಸಿದರು.

    ಈಗಾಗಲೇ ನಮ್ಮ ಸರ್ಕಾರದಲ್ಲೇ ಕೆಲವರು ಇದಕ್ಕೆ ವಿರೋಧ ಹೇಳಿಕೆ ನೀಡಿದ್ದರು. ಅವರಿಗೂ ಮನವರಿಕೆ ಮಾಡಲಾಗಿದ್ದು, ಇದು ದೇಶದ ಯುವಕರ ಹಾಗೂ ರೈತರ ಅಭಿವೃದ್ಧಿಗಾಗಿ ಮಾಡುತ್ತಿರುವ ಕೆಲಸ ಎಂದು ಈ ತುಕಾರಾಂ ವಿಶ್ವಾಸ ವ್ಯಕ್ತಪಡಿಸಿದರು.

  • ಚುನಾವಣೆಯಲ್ಲಿ ಸೋಲಿನ ಭೀತಿ- ಸಚಿವರಿಂದ ಡಿವೈಎಸ್‍ಪಿಗೆ ಎತ್ತಂಗಡಿ ಶಿಕ್ಷೆ

    ಚುನಾವಣೆಯಲ್ಲಿ ಸೋಲಿನ ಭೀತಿ- ಸಚಿವರಿಂದ ಡಿವೈಎಸ್‍ಪಿಗೆ ಎತ್ತಂಗಡಿ ಶಿಕ್ಷೆ

    ಬಳ್ಳಾರಿ: ಸದಾ ಕಾಲ ಸಾಫ್ಟ್, ಕೂಲ್ ಕೂಲ್ ಆಗಿರೋ ರಾಜ್ಯ ಸಚಿವರೊಬ್ಬರು ಇದೀಗ ಪುಲ್ ವೈಲೆಂಟ್ ಆಗಿದ್ದಾರೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸೋಲಿನ ಭೀತಿಯಿಂದ ಬಿಜೆಪಿ ಅಧ್ಯಕ್ಷನ ಮೇಲೆ ಅಟ್ರಾಸಿಟಿ ಕೇಸ್ ದಾಖಲಿಸಿ ಅಧಿಕಾರದ ದರ್ಪ ಮೆರೆದಿದ್ದಾರೆ. ಅಷ್ಟೇ ಅಲ್ಲ ಸಚಿವರ ಪತ್ನಿಯ ಸೋದರನ ಮೇಲೆ ಹಲ್ಲೆ ಮಾಡಿದ ಆರೋಪ ಎದುರಿಸುತ್ತಿರುವ ಆರೋಪಿಯನ್ನ ಬಂಧಿಸದ ಡಿವೈಎಸ್ ಪಿಗೆ ಇದೀಗ ಎತ್ತಂಗಡಿ ಶಿಕ್ಷೆ ನೀಡುತ್ತಾ ಇದ್ದಾರೆ.

    ಹೌದು. ಸಂಡೂರು ಶಾಸಕ ತುಕಾರಾಂ ಅವರು ವೈದ್ಯಕೀಯ ಶಿಕ್ಷಣ ಸಚಿವರೂ ಆಗಿದ್ದಾರೆ. ಇವರು ತುಂಬಾ ಸಾಫ್ಟ್ ಎಂದು ಎಲ್ಲಾ ಮಾತಾಡುತ್ತಾರೆ. ಆದರೆ ಇದೀಗ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸೋಲೋ ಭೀತಿಯಿಂದ ಫುಲ್ ವೈಲೆಂಟ್ ಆಗಿದ್ದಾರೆ. ಬಿಜೆಪಿ ಪಾಳಯವನ್ನ ಕಟ್ಟಿಹಾಕಲು ಸಚಿವರು ಸೇಡಿನ ರಾಜಕೀಯಕ್ಕೆ ಇಳಿದಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಅಲ್ಲದೆ ತನ್ನ ಬಾಮೈದನಿಗೆ ಜಾತಿ ನಿಂದನೆ ಮಾಡಿದ ಆರೋಪದಡಿ ಸಂಡೂರು ತಾಲೂಕು ಬಿಜೆಪಿ ಅಧ್ಯಕ್ಷ ಜಿಟಿ ಪಂಪಾಪತಿ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲಿಸಿದ್ದಾರೆ.

    ಸಂಡೂರು ಪುರಸಭೆಗೆ ಇದೇ ಬುಧವಾರದಂದು ಚುನಾವಣೆ ನಡೆಯಲಿದೆ. ಆದರೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಭಾಗಿಯಾಗಬಾರದೆಂದು ಪಂಪಾಪತಿ ವಿರುದ್ಧ ಸಚಿವರು ಅಟ್ರಾಸಿಟಿ ಕೇಸ್ ಆಟ ಆಡಿದ್ದಾರೆ. ಪಂಪಾಪತಿ ವಿರುದ್ಧ ಪತ್ನಿಯ ಸಹೋದರ ವಿಶ್ವನಾಥ್ ಮಾಳಗಿಯಿಂದ ಜಾತಿನಿಂದನೆ ಪ್ರಕರಣ ದಾಖಲಿಸಿ, ಬಂಧನಕ್ಕೆ ಕೂಡ್ಲಿಗಿ ಡಿವೈಎಸ್ಪಿ ನೇತೃತ್ವದಲ್ಲಿ ನೂರೈವತ್ತಕ್ಕೂ ಹೆಚ್ಚು ಪೊಲೀಸರನ್ನ ಕಳುಹಿಸಿದ್ದಾರೆ. ಆದರೆ ಬಿಜೆಪಿ ಅಧ್ಯಕ್ಷ ಪೊಲೀಸರ ಕೈಗೆ ಸಿಗದೆ ಕೊನೆಕ್ಷಣದಲ್ಲಿ ನಿರೀಕ್ಷಣಾ ಜಾಮೀನು ಪಡೆದು ಕೊನೆಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪ್ರಚಾರದಲ್ಲಿ ತೊಡಗಿದ್ದಾರೆ. ಇದರಿಂದ ಸಿಟ್ಟಿಗೆದ್ದ ತುಕಾರಾಂ ಕೂಡ್ಲಿಗಿ ಡಿವೈಎಸ್‍ಪಿಗೆ ಎತ್ತಂಗಡಿ ಭಾಗ್ಯ ಕರುಣಿಸಿದ್ದಾರೆ.

    ತುಕಾರಾಂ ಸೇಡಿನ ರಾಜಕೀಯಕ್ಕೆ ಸಂಡೂರಿನೆಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಅಲ್ಲದೇ ಪೊಲೀಸರು ಸಚಿವರ ಒತ್ತಡಕ್ಕೆ ಮಣಿಯದಂತೆ ಸ್ವತಃ ಮಾಜಿ ಸಿಎಂ ಯಡಿಯೂರಪ್ಪ ಬಳ್ಳಾರಿ ಎಸ್‍ಪಿಗೆ ಮನವಿ ಮಾಡಿದ್ದಾರೆ ಎನ್ನಲಾಗುತ್ತಿದೆ. ಸಚಿವರ ಸೋಲಿನ ಭೀತಿಯಲ್ಲಿ ಹೀಗೆಲ್ಲಾ ಮಾಡುತ್ತಿರೋದು ಎಷ್ಟು ಸರಿ ಎಂದು ಜನ ಪ್ರಶ್ನಿಸುತ್ತಿದ್ದಾರೆ.

  • ಅಧಿಕಾರಕ್ಕಾಗಿ ಆನಂದ್ ಸಿಂಗ್ ಡಬಲ್ ಗೇಮ್!

    ಅಧಿಕಾರಕ್ಕಾಗಿ ಆನಂದ್ ಸಿಂಗ್ ಡಬಲ್ ಗೇಮ್!

    ವಿಶೇಷ ವರದಿ
    ಬಳ್ಳಾರಿ/ಬೆಂಗಳೂರು: ಬಳ್ಳಾರಿ ಜಿಲ್ಲೆಯ ಹೊಸಪೇಟೆ ಕ್ಷೇತ್ರದಿಂದ ಕಾಂಗ್ರೆಸ್‍ನಿಂದ ಆಯ್ಕೆಯಾಗಿರುವ ಶಾಸಕ ಆನಂದ್ ಸಿಂಗ್ ಎಲ್ಲಿ ಹೋದ್ರು ಎಂಬ ಪ್ರಶ್ನೆ ಈಗ ಸದ್ಯಕ್ಕೆ ರಾಜ್ಯ ಕಾಂಗ್ರೆಸಿಗರನ್ನು ಕಾಡುತ್ತಿದೆ. ಒಂದು ಕಡೆ ಕಾಂಗ್ರೆಸ್‍ಗೆ ಕೈ ಕೊಡ್ತಾರೆ ಎಂಬ ಸುದ್ದಿ ದಟ್ಟವಾಗಿ ಹರಡಿದ್ದರೂ, ಆನಂದ್ ಸಿಂಗ್ ದಿಢೀರ್ ಮರೆಯಾಗಲು ಕಾರಣವೇನು ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಬಳ್ಳಾರಿಯಿಂದ ಬರುತ್ತಿದ್ದಾರೆ ಎನ್ನಲಾದ ಆನಂದ್ ಸಿಂಗ್ ಅವರನ್ನು ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕರೆದುಕೊಂಡು ಬರಲು ಹೋಗಿದ್ದ ಕಾಂಗ್ರೆಸ್ ಶಾಸಕರಾದ ಜಮೀರ್ ಅಹಮದ್ ಹಾಗೂ ನಾಗೇಂದ್ರ ಬರಿಗೈಲಿ ಬೆಂಗಳೂರಿನ ಕೆಪಿಸಿಸಿ ಕಚೇರಿಗೆ ವಾಪಸ್ ಆಗಿದ್ದಾರೆ. ಬೆಳಗ್ಗೆಯಿಂದಲೇ ಆನಂದ್ ಸಿಂಗ್ ಕಾಂಗ್ರೆಸ್ ನಾಯಕರ ಸಂಪರ್ಕಕ್ಕೆ ಸಿಗುತ್ತಿಲ್ಲ. ಸಂಜೆ ವೇಳೆಗೆ ಆನಂದ್ ಸಿಂಗ್ ಬೆಂಗಳೂರಿಗೆ ಬರುತ್ತಾರೆ ಎಂದು ಕೈ ನಾಯಕರು ಹೇಳಿದ್ದರೂ ಇಂದು ರಾತ್ರಿ 7.00 ಗಂಟೆಯವರೆಗೂ ಅವರು ಎಲ್ಲೂ ಕಾಣಿಸಿಕೊಂಡಿಲ್ಲ.

    ಪಬ್ಲಿಕ್ ಟಿವಿಗೆ ಸಿಕ್ಕ ಖಚಿತ ಮಾಹಿತಿ ಪ್ರಕಾರ ಇಂದು ಬೆಳಗ್ಗೆ ಆನಂದ್ ಸಿಂಗ್ ಬಳ್ಳಾರಿಯಲ್ಲೇ ಇದ್ದರು. ಸೂರ್ಯನ ಬಿಸಿಲು ನೆತ್ತಿಗೇರುತ್ತಿದ್ದಂತೆಯೇ ಆನಂದ್ ಸಿಂಗ್ ಹಾಗೂ ನಾಗೇಂದ್ರ ಬಳ್ಳಾರಿಯಲ್ಲೇ ಪರಸ್ಪರ ಭೇಟಿಯಾಗಿದ್ದಾರೆ. ಈ ಭೇಟಿಯ ವೇಳೆ ಇಬ್ಬರೂ ಪರಸ್ಪರ ಮಾತನಾಡಿಕೊಂಡೇ ಬೆಂಗಳೂರಿಗೆ ಹೊರಟಿದ್ದಾರೆ. ಸದ್ಯ ಬೆಂಗಳೂರಿನಲ್ಲೇ ಆನಂದ್ ಸಿಂಗ್ ಬೀಡುಬಿಟ್ಟಿದ್ದಾರೆ ಎಂಬ ಖಚಿತ ಮಾಹಿತಿಯೂ ಇದೆ. ಆದರೆ ಆನಂದ್ ಸಿಂಗ್ ಇನ್ನೂ ಯಾಕೆ ಕಾಂಗ್ರೆಸ್ ಪಾಳಯದಲ್ಲಿ ಕಾಣಿಸಿಕೊಂಡಿಲ್ಲ ಎಂಬುದನ್ನು ಕೆದಕುತ್ತಾ ಹೋದಾಗ ರೋಚಕ ಮಾಹಿತಿ ಸಿಕ್ಕಿದೆ.

    ಅಧಿಕಾರಕ್ಕಾಗಿ ಸರ್ಕಸ್!: ಸದ್ಯದ ಮಾಹಿತಿ ಪ್ರಕಾರ ಆನಂದ್ ಸಿಂಗ್ ಬಿಜೆಪಿ ಬೆಂಬಲಿಸುವ ಸಾಧ್ಯತೆ ತೀರಾ ಕಡಿಮೆ. ಆದರೆ ಆನಂದ್ ಸಿಂಗ್‍ಗೆ ಈಗ ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದಾರೆ. ಆದರೆ ರಾಜ್ಯ ಕಾಂಗ್ರೆಸ್ ನಾಯಕರು ಈ ಬೇಡಿಕೆಗೆ ನೀರೆರೆಯುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ. ಬಳ್ಳಾರಿಯಲ್ಲಿರುವ ಪಕ್ಷದ ನಾಯಕರು ಹಾಗೂ ಶಾಸಕರಾದ ಪರಮೇಶ್ವರ್ ನಾಯ್ಕ್ ಹಾಗೂ ತುಕಾರಾಂ ಮೇಲೆ ಸಿದ್ದರಾಮಯ್ಯ ಹಾಗೂ ಪರಮೇಶ್ವರ್ ಪ್ರೀತಿಯಿದೆ. ಹೀಗಾಗಿ ಕೈ-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಆನಂದ್ ಸಿಂಗ್‍ಗೆ ಯಾವುದಾದರೂ ಹುದ್ದೆ ಸಿಗುವ ಸಾಧ್ಯತೆಗಳು ತೀರಾ ಕಡಿಮೆ ಎನ್ನಲಾಗಿದೆ. ಬಳ್ಳಾರಿ ಗ್ರಾಮಾಂತರ ಶಾಸಕರಾಗಿರುವ ನಾಗೇಂದ್ರ ಮೇಲೆ ಸಿಎಂಗೆ ಪ್ರೀತಿಯಿದೆ. ಎಸ್ಟಿ ಸಮುದಾಯದ ನಾಯಕರೊಬ್ಬರನ್ನು ರಾಮುಲು ವಿರುದ್ಧ ಬಳ್ಳಾರಿಯಲ್ಲಿ ಬೆಳೆಸಲೇಬೇಕಾಗಿದೆ. ಇದಕ್ಕಾಗಿ ಕಾಂಗ್ರೆಸ್ ಮುಖಂಡರಲ್ಲಿ ನಾಗೇಂದ್ರ ಮೇಲೆ ಒಲವಿದೆ.

    ಇದಲ್ಲದೇ 2008ರಲ್ಲಿ ರೆಡ್ಡಿ ಬ್ರದರ್ಸ್ ಬಳ್ಳಾರಿಯಲ್ಲಿ ಬಿಜೆಪಿಯನ್ನು ಪ್ರಬಲವಾಗಿ ಬೆಳೆಸಿದ್ದರೂ ಅಂದಿನ ಚುನಾವಣೆಯಲ್ಲಿ ರೆಡ್ಡಿಗಳನ್ನು ಎದುರಿಸಿ ತುಕಾರಾಂ ಗೆದ್ದು ಬಂದಿದ್ದರು. ಆದರೆ ತುಕಾರಾಂಗೆ ಸಚಿವ ಸ್ಥಾನ ಸೇರಿದಂತೆ ಯಾವುದೇ ಪಟ್ಟ ಸಿಕ್ಕುವುದು ಆನಂದ್ ಸಿಂಗ್ ಗೆ ಇಷ್ಟವಿಲ್ಲ. ಈ ಹಿನ್ನೆಲೆಯಲ್ಲಿ ಆನಂದ್ ಸಿಂಗ್ ಬೆಂಗಳೂರಿಗೆ ಬಂದಿದ್ದರೂ ಯಾರ ಮುಂದೆಯೂ ಬಹಿರಂಗವಾಗಿ ಕಾಣಿಸಿಕೊಂಡಿಲ್ಲ ಎನ್ನಲಾಗಿದೆ. ಸದಾ ಕಾಲ ಮಾಧ್ಯಮಗಳು ಹಾಗೂ ಜನರ ಸಂಪರ್ಕಕ್ಕೆ ಸಿಗುತ್ತಿದ್ದ ಸೋದರಳಿಯಂದಿರಾದ ಧರ್ಮೇಂದ್ರ ಸಿಂಗ್ ಹಾಗೂ ಸಂದೀಪ್ ಸಿಂಗ್ ಕೂಡಾ ಇಂದು ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದಾರೆಂಬ ಮಾಹಿತಿ ಮೇರೆಗೆ ತೆರಳಿದ್ದ ಜಮೀರ್ ಮತ್ತು ನಾಗೇಂದ್ರ ಏರ್‍ಪೋರ್ಟ್ ಗೂ ತಲುಪುವ ಮುನ್ನವೇ ಅರ್ಧ ದಾರಿಯಿಂದಲೇ ವಾಪಸ್ ಆಗಿದ್ದಾರೆ ಎನ್ನುವುದು ಸದ್ಯಕ್ಕೆ ಸಿಕ್ಕಿರುವ ಅಪ್ಡೇಟ್.