Tag: tughalakbad

  • ಗ್ಯಾಸ್ ಸೋರಿಕೆ- ಸರ್ಕಾರಿ ಶಾಲೆಯ 100ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲು

    ಗ್ಯಾಸ್ ಸೋರಿಕೆ- ಸರ್ಕಾರಿ ಶಾಲೆಯ 100ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲು

    ನವದೆಹಲಿ: ದಕ್ಷಿಣ ದೆಹಲಿಯ ಸರ್ಕಾರಿ ಶಾಲೆಯ ಬಳಿಯ ಡಿಪೋವೊಂದರಲ್ಲಿ ಗ್ಯಾಸ್ ಸೋರಿಕೆಯಾದ ಪರಿಣಾಮ ಶಾಲೆಯ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲಾದ ಘಟನೆ ಇಂದು ಬೆಳಗ್ಗೆ ನಡೆದಿದೆ.

    ದಕ್ಷಿಣ ದೆಹಲಿಯ ತುಘಲಕ್‍ಬಾದ್ ಪ್ರದೇಶದಲ್ಲಿರೋ ರಾಣಿ ಝಾನ್ಸಿ ಸರ್ವೋದಯ ಕನ್ಯಾ ವಿದ್ಯಾಲಯದ ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಶಾಲೆಯು ರೈಲ್ವೇ ಕಾಲೋನಿಯ ಬಳಿ ಇದೆ. ಶಾಲೆಯ ಬಳಿಯೇ ಇರುವ ಡಿಪೋನಲ್ಲಿ ಗ್ಯಾಸ್ ಸೋರಿಕೆಯಾದ ಪರಿಣಾಮ ಶಾಲೆಯಲ್ಲಿ ಪಾಠ ಕೇಳುತ್ತಿದ್ದ ವಿದ್ಯಾರ್ಥಿಗಳು ಕಣ್ಣಿನಲ್ಲಿ ಉರಿ ಹಾಗೂ ಗಂಟಲಿನಲ್ಲಿ ಕಿರಿಕಿರಿಯಾಗುತ್ತಿದೆ ಅಂತ ಹೇಳಿದ್ದಾಗಿ ಶಾಲೆಯ ಉಪ ಪ್ರಾಂಶುಪಾಲರು ಸುದ್ದಿ ಸಂಸ್ಥೆಗೆ ಹೇಳಿಕೆ ನೀಡಿದ್ದಾರೆ. ಗ್ಯಾಸ್ ಸೋರಿಕೆ ವಿಚಾರ ತಿಳಿಯುತ್ತಿದ್ದಂತೆಯೇ ಉಳಿದ ಮಕ್ಕಳನ್ನು ಶಾಲೆಯಿಂದ ಸ್ಥಳಾಂತರಗೊಳಿಸಲಾಗಿದೆ.

    ಗ್ಯಾಸ್ ಸೋರಿಕೆಯಾಗಿರುವ ಬಗ್ಗೆ ಇಂದು ಬೆಳಗ್ಗೆ 7.35ರ ವೇಳೆಗೆ ದೆಹಲಿಯ ಅಗ್ನಿಶಾಮಕ ಅಧಿಕಾರಿಗಳಿಗೆ ವಿಷಯ ಮುಟ್ಟಿಸಲಾಗಿದೆ. ಗ್ಯಾಸ್ ಸೋರಿಕೆಗೆ ಕಾರಣವೇನೆಂಬುದು ಸ್ಪಷ್ಟವಾಗಿಲ್ಲ. ಆದ್ರೆ ಗ್ಯಾಸ್ ಸೋರಿಕೆಯನ್ನ ನಿಯಂತ್ರಿಸಲು 7 ತಂಡಗಳನ್ನ ಸ್ಥಳಕ್ಕೆ ಕಳಿಸಲಾಗಿದೆ.

    ಆಸ್ಪತ್ರೆಗೆ ದಾಖಲಾಗಿರುವ ಕೆಲ ವಿದ್ಯಾರ್ಥಿಗಳೊಂದಿಗೆ ದೆಹಲಿ ಉಪಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವ ಮನೀಶ್ ಸಿಸೋಡಿಯಾ ಫೋನಿನಲ್ಲಿ ಮಾತನಾಡಿದ್ದಾಗಿ ತಿಳಿಸಿದ್ದಾರೆ. ಮಕ್ಕಳಿಗೆ ಯಾವುದೇ ಅಪಾಯವಿಲ್ಲ ಅಂತಾ ವೈದ್ಯರು ತಿಳಿಸಿದ್ದಾರೆ. ಆಸ್ಪತ್ರೆಗೆ ಭೇಟಿ ನೀಡುತ್ತೇನೆ. ಘಟನೆಯ ಬಗ್ಗೆ ತನಿಖೆ ನಡೆಸುವಂತೆ ಜಿಲ್ಲಾ ಮ್ಯಾಜಿಸ್ಟ್ರೇಟ್‍ಗೆ ಹೇಳಿದ್ದೇನೆ ಎಂದು ಸಿಸೋಡಿಯಾ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.