Tag: Tuberculosis

  • ಅಪೌಷ್ಠಿಕತೆ, ಮಧುಮೇಹ ಖಾಯಿಲೆಯಿಂದ ಬಳಲುವವರಿಗೆ ಕ್ಷಯರೋಗದ ಸಾಧ್ಯತೆ ಹೆಚ್ಚು: ಡಾ. ಮಹೇಶ್ ಎಂ.ಜಿ

    ಅಪೌಷ್ಠಿಕತೆ, ಮಧುಮೇಹ ಖಾಯಿಲೆಯಿಂದ ಬಳಲುವವರಿಗೆ ಕ್ಷಯರೋಗದ ಸಾಧ್ಯತೆ ಹೆಚ್ಚು: ಡಾ. ಮಹೇಶ್ ಎಂ.ಜಿ

    ಕೊಪ್ಪಳ: ಕ್ಷಯರೋಗವು ಒಂದು ಸಾಂಕ್ರಾಮಿಕ ರೋಗವಾಗಿದ್ದು, ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ. ಅದರಲ್ಲಿ ವಿಶೇಷವಾಗಿ ಅಪೌಷ್ಠಿಕತೆಯಿಂದ ಬಳಲುವವರಿಗೆ, ಮಧುಮೇಹ ಇತರೆ ಖಾಯಿಲೆಯಿಂದ ಬಳಲುವವರಿಗೆ ಹರಡುವ ಸಾಧ್ಯತೆ ಹೆಚ್ಚು ಇರುತ್ತದೆ ಎಂದು ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ. ಮಹೇಶ್ ಎಂ.ಜಿ ಹೇಳಿದರು.

    ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಕ್ಷಯರೋಗ ನಿರ್ಮೂಲನಾ ಕೇಂದ್ರ, ಕೊಪ್ಪಳ ಇವರ ಸಂಯುಕ್ತ ಆಶ್ರಯದಲ್ಲಿ ಇಂದು ಆಯೋಜಿಸಿದ್ದ ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮದ ಅಂಗವಾಗಿ ಜಿಲ್ಲೆಯ ನಗರ ಪ್ರದೇಶದ ಕೊಳಚೆ ಪ್ರದೇಶ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿನ ಆಯ್ದ ಗ್ರಾಮಗಳಲ್ಲಿ ಕ್ಷಯರೋಗ ನಿರ್ಮೂಲನೆ ಕುರಿತು ಅರಿವು ಮೂಡಿಸುವ ಕಾರ್ಯಕ್ರಮದ ಅಂಗವಾಗಿ ನಗರದ ಬಸವೇಶ್ವರ ವೃತ್ತದಲ್ಲಿ ಎಲ್‍ಇಡಿ ವಾಹನಕ್ಕೆ ಹಸಿರು ನಿಶಾನೆ ತೋರಿಸುವುದರ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು. ಇದನ್ನೂ ಓದಿ: ಹೆಬ್ಬಾಳದಲ್ಲಿ ಸರಣಿ ಅಪಘಾತ – ಬಿಬಿಎಂಪಿ ಕಸದ ಲಾರಿಗೆ ಬಾಲಕಿ ಬಲಿ

    ಕ್ಷಯ ರೋಗದ ಬಗ್ಗೆ ಆರಂಭಿಕ ಹಂತದಲ್ಲಿಯೇ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು. ಒಂದು ವೇಳೆ ಚಿಕಿತ್ಸೆ ಪಡೆಯದಿದ್ದಲ್ಲಿ ಒಬ್ಬ ಕ್ಷಯರೋಗಿಯು 1 ವರ್ಷಕ್ಕೆ 10-15 ಜನರಿಗೆ ಕೆಮ್ಮುವುದರ ಮೂಲಕ ಸೀನುವುದರ ಮೂಲಕ ಪ್ರಸಾರ ಮಾಡುತ್ತಾನೆ. ಆದ್ದರಿಂದ ಕ್ಷಯರೋಗದ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದರು.

    2 ವಾರಗಳಿಂದ ಸತತ ಕೆಮ್ಮು ಬರುವುದು, ಕಫದಲ್ಲಿ ರಕ್ತ ಬರುವುದು, ಸಾಯಂಕಾಲದ ವೇಳೆ ಜ್ವರ ಬರುವುದು, ತೂಕ ಕಡಿಮೆಯಾಗುವುದು, ಹಸಿವು ಆಗದೇ ಇರುವುದು ಇವು ಕ್ಷಯರೋಗದ ಲಕ್ಷಣಗಳಾಗಿದ್ದು, ಇವು ಯಾರಿಗಾದರು ಕಂಡು ಬಂದರೆ ತಕ್ಷಣ ತಮ್ಮ ಸಮೀಪದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಪರೀಕ್ಷಿಸಿಕೊಂಡು, ಚಿಕಿತ್ಸೆ ಪಡೆದುಕೊಂಡು ಆರೋಗ್ಯ ಕೇಂದ್ರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.  ಇದನ್ನೂ ಓದಿ: ಚಾಮರಾಜನಗರ ಜಿಲ್ಲೆಯಲ್ಲಿ ಆಲಿಕಲ್ಲು ಸಹಿತ ಭಾರೀ ಮಳೆ

    ಪ್ರಧಾನ ಮಂತ್ರಿಗಳು 2025ಕ್ಕೆ ಕ್ಷಯಮುಕ್ತ ಭಾರತ ಮಾಡಲು ಪಣ ತೊಟ್ಟಿದ್ದಾರೆ. ಕ್ಷಯರೋಗಿಗಳಿಗೆ ಪೌಷ್ಠಿಕ ಆಹಾರದ ಸಲುವಾಗಿ ನಿಕ್ಷೆಯ ಪೋಷಣೆ ಅಭಿಯಾನ ದಡಿಯಲ್ಲಿ ಪ್ರತಿ ರೋಗಿಗೆ ಮಾಸಿಕ 500 ರೂ. ನೀಡಲಾಗುತ್ತಿದೆ. ರೋಗಿಯ ಮನೆಗೆ ಭೇಟಿ ನೀಡಿ ಆರೋಗ್ಯದ ಬಗ್ಗೆ ಶಿಕ್ಷಣ ನೀಡಲಾಗುತ್ತಿದೆ. ಸಾರ್ವಜನಿಕರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಇಲಾಖೆಯೊಂದಿಗೆ ಸಂಪರ್ಕದಲ್ಲಿರುವಂತೆ ಅವರು ತಿಳಿಸಿದರು.

  • ಕೋವಿಡ್‍ನಿಂದ ಗುಣವಾದವರಿಗೆ ಕ್ಷಯ ರೋಗ: ಸುಧಾಕರ್

    ಕೋವಿಡ್‍ನಿಂದ ಗುಣವಾದವರಿಗೆ ಕ್ಷಯ ರೋಗ: ಸುಧಾಕರ್

    ಬೆಂಗಳೂರು: ಕೋವಿಡ್‍ನಿಂದ ಗುಣಮುಖರಾದವರ ಪೈಕಿ ಹಲವರಲ್ಲಿ ಕ್ಷಯ ರೋಗ ಪತ್ತೆಯಾಗಿದೆ. ಈ ಕುರಿತು ವಿಸ್ತೃತವಾದ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲು ಸೂಚಿಸಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

    ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಆರೋಗ್ಯ ಸೌಧದಲ್ಲಿ ನಡೆದ, ವಿಶ್ವ ಕ್ಷಯರೋಗ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕೋವಿಡ್‍ನಿಂದ ಗುಣಮುಖರಾದವರಿಗೆ ಮೊಟ್ಟ ಮೊದಲ ಬಾರಿಗೆ ಸರ್ಕಾರದಿಂದಲೇ ಕ್ಷಯ ಪರೀಕ್ಷೆ ಮಾಡಲಾಗಿದೆ. ಪರೀಕ್ಷೆಗೊಳಪಟ್ಟ 25 ಲಕ್ಷ ಜನರಲ್ಲಿ 144 ಜನರಿಗೆ ಕ್ಷಯ ದೃಢಪಟ್ಟಿದೆ. ಕೋವಿಡ್ ಬಂದ ಬಳಿಕವೇ ಇವರಿಗೆ ಕ್ಷಯ ಬಂದಿದೆ. ಹೀಗಾಗಿ ಈ ಬಗ್ಗೆ ಹೆಚ್ಚು ಅಧ್ಯಯನ ಮಾಡಿ ವರದಿ ಸಿದ್ಧಪಡಿಸಲು ಸೂಚಿಸಲಾಗಿದೆ. ರಾಜ್ಯವನ್ನು ಕ್ಷಯ ಮುಕ್ತ ಮಾಡುವ ಗುರಿಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದರು.

    ಕೋವಿಡ್‍ನಂತೆಯೇ ಕ್ಷಯವೂ ಸಾಂಕ್ರಾಮಿಕ ರೋಗ. ಕೋವಿಡ್ ವೈರಸ್‍ನಿಂದ ಬಂದರೆ, ಕ್ಷಯವು ಬ್ಯಾಕ್ಟೀರಿಯಾದಿಂದ ಬರುತ್ತದೆ. 2030ರ ವೇಳೆಗೆ ಜಗತ್ತನ್ನು ಕ್ಷಯರೋಗದಿಂದ ಮುಕ್ತ ಮಾಡಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು 2025ರೊಳಗೆ ಭಾರತವನ್ನು ಕ್ಷಯ ಮುಕ್ತ ಮಾಡಬೇಕು ಎಂಬ ಗುರಿ ಹೊಂದಿದೆ. ಇದು ಕೇವಲ ವೈದ್ಯರು ಅಥವಾ ಸರ್ಕಾರದಿಂದ ಸಾಧ್ಯವಿಲ್ಲ. ಇದಕ್ಕೆ ಸಾಮೂಹಿಕ ಪ್ರಯತ್ನ ಅಗತ್ಯ ಎಂದು ಮನವಿ ಮಾಡಿದರು. ಇದನ್ನೂ ಓದಿ: ಅಲ್ಪಸಂಖ್ಯಾತರ ಶಾದಿ ಮಹಲ್ ಯೋಜನೆ ರದ್ದು: ಬೊಮ್ಮಾಯಿ

    ಸಾಮಾನ್ಯವಾಗಿ ರೋಗ ಬಂದ ಬಳಿಕ ಚಿಕಿತ್ಸೆ ಪಡೆಯಲಾಗುತ್ತದೆ. ಇದರ ಬದಲು ಲಕ್ಷಣಗಳು ಕಂಡುಬಂದ ಕೂಡಲೇ ಚಿಕಿತ್ಸೆ ಪಡೆಯಲು ಆರಂಭಿಸಬೇಕು. ಎರಡು ವಾರಕ್ಕೂ ಹೆಚ್ಚು ಕಾಲ ಕೆಮ್ಮು, ಜ್ವರ, ತೂಕ ಇಳಿಕೆಯಾಗುವುದು ಮೊದಲಾದ ಲಕ್ಷಣ ಕಂಡುಬಂದರೆ ಕಡ್ಡಾಯವಾಗಿ ಪರೀಕ್ಷೆ ಮಾಡಿಸಬೇಕು. ಈಗ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಕ್ಷಯ ಪರೀಕ್ಷೆ ಮಾಡುವ ಸೌಲಭ್ಯವಿದೆ. ಜನರು ಇಂತಹ ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿಸಬೇಕು. ಬೇಗ ಪರೀಕ್ಷೆ ಮಾಡಿಸಿದರೆ ಉತ್ತಮ ಚಿಕಿತ್ಸೆ ಪಡೆಯಬಹುದು ಎಂದು ಮಾಹಿತಿ ನೀಡಿದರು.

    ಗ್ರಾಮೀಣ ಭಾಗಗಳಲ್ಲಿ ಜನರು ಖಾಯಿಲೆ ಇದ್ದರೂ ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿಸುವುದಿಲ್ಲ. ಒಬ್ಬ ಕ್ಷಯ ರೋಗಿಯಿಂದ ಕನಿಷ್ಠ 10 ಜನರಿಗೆ ರೋಗ ಹರಡಬಹುದು. ಹೀಗಾದಲ್ಲಿ, ಒಬ್ಬರ ತಪ್ಪಿನಿಂದ ಎಲ್ಲರಿಗೂ ಸಮಸ್ಯೆ ಉಂಟಾಗುತ್ತದೆ. ಆದ್ದರಿಂದ ಈ ಕುರಿತು ಹೆಚ್ಚು ಜಾಗೃತಿ ಮೂಡಿಸಬೇಕಿದೆ. ರಾಜ್ಯ ಸರ್ಕಾರ ರೋಗಗಳ ಬಗ್ಗೆ ಅರಿವು ಮೂಡಿಸಲು ವರ್ಷಕ್ಕೆ 5 ಕೋಟಿ ರೂ.ಗೂ ಅಧಿಕ ಹಣ ಖರ್ಚು ಮಾಡುತ್ತಿದೆ ಎಂದು ಹೇಳಿದರು. ಇದನ್ನೂ ಓದಿ: ಹಿಂದೂಯೇತರರಿಗೆ ವ್ಯಾಪಾರ ನಿರ್ಬಂಧಿಸುವವರ ವಿರುದ್ಧ ಕ್ರಮ ಇಲ್ಲ: ಮಾಧುಸ್ವಾಮಿ

    ರೋಗಿಯನ್ನು ದೂರ ಮಾಡಬಾರದು: ಸಾಂಕ್ರಾಮಿಕ ರೋಗವೆಂದರೆ, ರೋಗಿಯ ವಿರುದ್ಧ ಯುದ್ಧ ಆರಂಭವಾಗಿಬಿಡುತ್ತದೆ. ಈ ರೀತಿಯ ಪರಿಸ್ಥಿತಿ ಸಮಾಜದಲ್ಲಿ ಉಂಟಾಗಬಾರದು. ಇದರಿಂದಾಗಿ ರೋಗಿಗಳು ಮಾನಸಿಕವಾಗಿ ಬಳಲುತ್ತಾರೆ. ಇಂತಹವರಿಗೆ ಮಾನಸಿಕ ಸ್ಥೈರ್ಯ ತುಂಬುವ ಕೆಲಸ ಮಾಡಬೇಕು. ಕೋವಿಡ್ ಬಂದ ಬಳಿಕ ನಿಮ್ಹಾನ್ಸ್ ಸಂಸ್ಥೆಯು 25 ಲಕ್ಷ ಜನರಿಗೆ ಆಪ್ತ ಸಮಾಲೋಚನೆ ನಡೆಸಿದೆ. ಇದೇ ರೀತಿ, ಕ್ಷಯದ ಚಿಕಿತ್ಸೆಯ ಜೊತೆಗೆ ರೋಗಿಗೆ ಹಾಗೂ ಕುಟುಂಬದವರಿಗೆ ಆಪ್ತ ಸಮಾಲೋಚನೆ ಮಾಡಬೇಕಿದೆ. ಕ್ಷಯ ಕಂಡುಬಂದ ಬಳಿಕ ಆ ಸೋಂಕು ರೋಗಿಯ ಮನೆಯವರಿಗೆ ಹರಡದಂತೆ ಎಚ್ಚರ ವಹಿಸಲು ಮಾರ್ಗದರ್ಶನ ನೀಡಬೇಕು ಎಂದರು.

    ಕ್ಷಯ ನಿಯಂತ್ರಣ: ಕ್ಷಯ ನಿಯಂತ್ರಣದಲ್ಲಿ ರಾಜ್ಯದ ಐದು ಜಿಲ್ಲೆಗಳಿಗೆ ಬೆಳ್ಳಿ ಪದಕ ಬಂದಿದೆ. ಈ ಜಿಲ್ಲೆಗಳಲ್ಲಿ ಹಿಂದಿನ ಸಾಲಿಗೆ ಹೋಲಿಸಿದರೆ ಈ ವರ್ಷ ಕ್ಷಯ ಪ್ರಕರಣಗಳ ಪ್ರಮಾಣ ಶೇ.40 ರಷ್ಟು ಇಳಿಕೆಯಾಗಿದೆ. ಇದೇ ರೀತಿ 9 ಜಿಲ್ಲೆಗಳಿಗೆ ಕಂಚಿನ ಪದಕ ಲಭಿಸಿದೆ. ಒಟ್ಟು 14 ಜಿಲ್ಲೆಗಳಲ್ಲಿ ಕ್ಷಯ ನಿಯಂತ್ರಣದಲ್ಲಿ ಗಮನಾರ್ಹ ಸಾಧನೆಯಾಗಿರುವುದು ಶ್ಲಾಘನೀಯ. ಮುಂದಿನ ವರ್ಷಗಳಲ್ಲಿ ಇನ್ನಷ್ಟು ಹೆಚ್ಚು ಕ್ರಮ ಕೈಗೊಂಡು ಚಿನ್ನದ ಪದಕ ಪಡೆಯುವಂತಾಗಬೇಕು ಎಂದು ಸಲಹೆ ನೀಡಿದರು.

  • ರಾಜ್ಯದಲ್ಲಿ ಒಂದೇ ದಿನ ದಾಖಲೆಯ 12 ಲಕ್ಷ ಕೋವಿಡ್ ಲಸಿಕೆ: ಡಾ.ಕೆ ಸುಧಾಕರ್

    ರಾಜ್ಯದಲ್ಲಿ ಒಂದೇ ದಿನ ದಾಖಲೆಯ 12 ಲಕ್ಷ ಕೋವಿಡ್ ಲಸಿಕೆ: ಡಾ.ಕೆ ಸುಧಾಕರ್

    – ಕ್ಷಯ ನಿರ್ಮೂಲನೆ ಬಗ್ಗೆ ಕೇಂದ್ರ ಸಚಿವರೊಂದಿಗೆ ಸಭೆ

    ಬೆಂಗಳೂರು: ರಾಜ್ಯದಲ್ಲಿ ಸೆಪ್ಟೆಂಬರ್ 1ರಂದು ಮೊದಲ ಲಸಿಕಾ ಉತ್ಸವದ ದಿನ ಗುರಿಯನ್ನು ಮೀರಿ 12 ಲಕ್ಷ ಲಸಿಕೆ ಡೋಸ್ ನೀಡಲಾಗಿದೆ. ಈ ಮೂಲಕ ಇಡೀ ದೇಶದಲ್ಲೇ ಕರ್ನಾಟಕ ಮೊದಲ ಸ್ಥಾನದಲ್ಲಿತ್ತು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹರ್ಷ ವ್ಯಕ್ತಪಡಿಸಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಬುಧವಾರದ ಲಸಿಕಾ ಉತ್ಸವದಲ್ಲಿ 10 ಲಕ್ಷ ಲಸಿಕೆ ನೀಡುವ ಗುರಿ ಇತ್ತು. ಆರೋಗ್ಯ ಇಲಾಖೆಯ ಅಧಿಕಾರಿಗಳು, ಜಿಲ್ಲಾಡಳಿತ ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದಾರೆ. ಹಾಗೆಯೇ ಜನರು ಕೂಡ ಸ್ವಯಂಪ್ರೇರಿತರಾಗಿ ಬಂದು ಲಸಿಕೆ ಪಡೆದಿದ್ದಾರೆ. ಇದರಿಂದಾಗಿ ಗುರಿ ಮೀರಿ ಸಾಧನೆಯಾಗಿದ್ದು, ಒಂದೇ ದಿನ ಒಟ್ಟು 12,04,402 ಲಸಿಕೆ ನೀಡಲಾಗಿದೆ. ದೇಶದಲ್ಲಿ ನಿನ್ನೆ ಕರ್ನಾಟಕ ಮೊದಲ ಸ್ಥಾನದಲ್ಲಿತ್ತು. ಬಿಬಿಎಂಪಿ ವ್ಯಾಪ್ತಿಯಲ್ಲಿ 1,85,488 ಡೋಸ್ ನೀಡಲಾಗಿದೆ. ಬೆಳಗಾವಿ ಜಿಲ್ಲೆ ಮೊದಲ ಸ್ಥಾನದಲ್ಲಿದ್ದು, 99,973 ಡೋಸ್ ನೀಡಲಾಗಿದೆ. ಕೊಡಗು, ಗದಗ, ಚಾಮರಾಜನಗರ, ಯಾದಗಿರಿ ಜಿಲ್ಲೆಯಲ್ಲಿ ಅತೀ ಕಡಿಮೆಯಾಗಿದೆ. ಈ ಜಿಲ್ಲೆಗಳಲ್ಲಿ 20 ಸಾವಿರಕ್ಕಿಂತ ಕಡಿಮೆ ಇದೆ ಎಂದು ತಿಳಿಸಿದರು. ಇದನ್ನೂ ಓದಿ: ರಾಜ್ಯದಲ್ಲಿ ಇಂದು ಒಂದೇ ದಿನ ದಾಖಲೆಯ 10 ಲಕ್ಷ ಡೋಸ್ ಲಸಿಕೆ

    ಚಿಕ್ಕಬಳ್ಳಾಪುರದಲ್ಲಿ 50 ಸಾವಿರ, ಚಿಕ್ಕಮಗಳೂರಿನಲ್ಲಿ 44,000, ಮಂಡ್ಯದಲ್ಲಿ 72,000, ಮೈಸೂರಿನಲ್ಲಿ 51,000 ಹೀಗೆ ಲಸಿಕಾ ಉತ್ಸವದಿಂದ ವೇಗ ಬಂದಿದೆ. ದಿನಕ್ಕೆ 5 ಲಕ್ಷ ಲಸಿಕೆ ನೀಡುವ ಗುರಿ ಇದ್ದು, ಆಗಸ್ಟ್ ತಿಂಗಳಲ್ಲಿ 1.12 ಕೋಟಿ ಡೋಸ್ ನೀಡಲಾಗಿದೆ ಎಂದು ಮಾಹಿತಿ ನೀಡಿದರು. ಕೇರಳದಲ್ಲಿ ಇನ್ನೂ ಸೋಂಕು ಇದ್ದು, ಪ್ರಕರಣಗಳ ಸಂಖ್ಯೆ ಕಡಿಮೆಯಾಗಿಲ್ಲ. ಇದಕ್ಕಾಗಿ ಸಾಂಸ್ಥಿಕ ಕ್ವಾರಂಟೈನ್ ನಿಯಮ ತರಲಾಗಿದೆ. ನೀಟ್ ಪರೀಕ್ಷೆ ಸಮಯದಲ್ಲಿ ಇದು ಕಷ್ಟ ಎಂಬ ಅಭಿಪ್ರಾಯ ಬಂದಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಶಿಕ್ಷಣ ಸಂಸ್ಥೆಗಳೇ ಕ್ವಾರಂಟೈನ್ ವ್ಯವಸ್ಥೆ ಮಾಡಬೇಕೆಂದು ಸೂಚಿಸಲಾಗಿದೆ. ಕೈಗಾರಿಕೆ, ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ ಮಾಡುವವರಿಗೆ ಕ್ವಾರಂಟೈನ್ ಗೆ ಅದೇ ಸಂಸ್ಥೆ ವ್ಯವಸ್ಥೆ ಮಾಡಬೇಕು. ಸದ್ಯಕ್ಕೆ ಜನರು ಮನೆಯಲ್ಲೇ ಕ್ವಾರಂಟೈನ್ ಆಗಲು ಅವಕಾಶವಿದೆ. ಪ್ರತಿ ದಿನ ಕೇರಳದಿಂದ ರಾಜ್ಯಕ್ಕೆ ಬರುವವರು ಪ್ರತಿ ವಾರ ಆರ್ ಟಿಪಿಸಿಆರ್ ನೆಗೆಟಿವ್ ವರದಿ ತೋರಿಸಬೇಕು ಎಂದರು.

    ಕ್ಷಯ ನಿರ್ಮೂಲನೆ-ಕೇಂದ್ರ ಸಚಿವರ ಸಭೆ
    ಕೇಂದ್ರ ಆರೋಗ್ಯ ಸಚಿವ ಮನ್‍ಸುಖ್ ಮಾಂಡವೀಯ ಅವರು ಎಲ್ಲಾ ರಾಜ್ಯಗಳ ಆರೋಗ್ಯ ಸಚಿವರೊಂದಿಗೆ ಸಭೆ ನಡೆಸಿದರು. ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸುಧಾಕರ್, 2025 ಕ್ಕೆ ಕ್ಷಯ ನಿರ್ಮೂಲನೆ ಮಾಡುವುದು ಪ್ರಧಾನಿಯವರ ಗುರಿ. ಇದಕ್ಕಾಗಿ ಕೋವಿಡ್ ಸಮಯದಲ್ಲಿ ಕ್ಷಯ ಪರೀಕ್ಷೆ ಕೈಗೊಳ್ಳಲಾಗಿದೆ. ಕೋವಿಡ್ ನಿಂದ 29 ಲಕ್ಷ ಮಂದಿ ಗುಣಮುಖರಾಗಿದ್ದು, ಎಲ್ಲರಿಗೂ ಕ್ಷಯ ಪರೀಕ್ಷೆ ಮಾಡಲಾಗುತ್ತಿದೆ. ಈವರೆಗೆ ಸುಮಾರು 7 ಲಕ್ಷ ಜನರಿಗೆ ಪರೀಕ್ಷೆ ಮಾಡಿದ್ದು, 157 ಪ್ರಕರಣಗಳಲ್ಲಿ ಕ್ಷಯ ಕಂಡುಬಂದಿದೆ. ಈ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಹುಬ್ಬಳ್ಳಿಗೆ ಅಮಿತ್ ಶಾರನ್ನು ಆತ್ಮೀಯವಾಗಿ ಬರಮಾಡಿಕೊಂಡ ಸಿಎಂ

    ಸಾರಿ, ಐಎಲ್‍ಐ ಇರುವವರಿಗೆ ಕ್ಷಯ ಹಾಗೂ ಕೋವಿಡ್ ಪರೀಕ್ಷೆ ಮಾಡಬೇಕು. ಕೋವಿಡ್ ಇದ್ದರೆ ಕ್ಷಯ ಪರೀಕ್ಷೆಯನ್ನೂ ಮಾಡಬೇಕು. ಈ ರೀತಿ ಪರೀಕ್ಷೆ ಮಾಡಿದರೆ ಉತ್ತಮ ಎಂದು ಕೇಂದ್ರ ಸಚಿವರು ಹೇಳಿದ್ದಾರೆ. ಜೊತೆಗೆ ಸಾರ್ವಜನಿಕರು ಕೋವಿಡ್ ಸುರಕ್ಷತಾ ಕ್ರಮ ಪಾಲಿಸಬೇಕು ಎಂದು ಸಚಿವರು ತಿಳಿಸಿದ್ದಾರೆ. ಜೊತೆಗೆ ರಾಜ್ಯದಲ್ಲಿ ನಡೆದ ಲಸಿಕಾ ಉತ್ಸವದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದರು. ಇದನ್ನೂ ಓದಿ: ಪಾಲಿಕೆ ಚುನಾವಣೆಯಲ್ಲಿ ಮುಖ್ಯಮಂತ್ರಿಗಿಲ್ಲ ಮತದಾನದ ಹಕ್ಕು

    ಒಂದು ತಿಂಗಳಿಂದ ಗಡಿಭಾಗಗಳಲ್ಲಿ ಎಚ್ಚರ ವಹಿಸಲಾಗಿದೆ. ಗಡಿಭಾಗದ 20 ಕಿ.ಮೀ. ವ್ಯಾಪ್ತಿಯಲ್ಲಿ ಲಸಿಕೆ ನೀಡಬೇಕು ಎಂದು ಸೂಚಿಸಲಾಗಿದೆ. ಕೆಜಿಎಫ್ ನ ನಸಿರ್ಂಗ್ ಸಂಸ್ಥೆಯಲ್ಲಿ ಕೇರಳದಿಂದ ಬಂದ ವಿದ್ಯಾರ್ಥಿಗಳಲ್ಲಿ ಸೋಂಕು ಬಂದಿದೆ. ಈ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ಹಂಚಿಕೊಂಡರು.

  • ಕೊರೊನಾದಿಂದ ಚೇತರಿಸಿಕೊಂಡವರಲ್ಲಿ ಕ್ಷಯ ರೋಗ ಪತ್ತೆ

    ಕೊರೊನಾದಿಂದ ಚೇತರಿಸಿಕೊಂಡವರಲ್ಲಿ ಕ್ಷಯ ರೋಗ ಪತ್ತೆ

    ಬೆಂಗಳೂರು: ಕೋವಿಡ್-19ನಿಂದ ಗುಣಮುಖರಾದರು ಕೂಡ ಸಂಕಟ ತಪ್ಪುತ್ತಿಲ್ಲ. ಕೊರೊನಾದಿಂದ ಚೇತರಿಸಿಕೊಂಡ 104 ಮಂದಿ ಹಾಗೂ ಅವರ ಸಂಪರ್ಕಿತ 51 ಮಂದಿಯಲ್ಲಿ ಕ್ಷಯ ರೋಗ ಪತ್ತೆಯಾಗಿದೆ.

    ಆರೋಗ್ಯ ಇಲಾಖೆಯ ಕ್ಷಯ ರೋಗ ತಪಾಸಣೆ ಅಭಿಯಾನದಲ್ಲಿ ಈ ವರದಿ ಬಹಿರಂಗವಾಗಿದ್ದು, ಆಗಸ್ಟ್ 16ರಿಂದ 31ರ ವರೆಗೆ ರಾಜ್ಯಾದ್ಯಂತ ಕ್ಷಯ ರೋಗ ತಪಾಸಣೆ ಅಭಿಯಾನವನ್ನು ಆರೋಗ್ಯ ಇಲಾಖೆ ಹಮ್ಮಿಕೊಂಡಿತ್ತು. ಇದನ್ನೂ ಓದಿ: ಮಗಳ ಮೃತ ದೇಹ ನೋಡಲು ಜೈಲಿನಿಂದ ಬಂದ ತಂದೆ-ತಾಯಿ

    ಕೋವಿಡ್-19 ಬಂದ ಬಳಿಕ ಕ್ಷಯ ರೋಗವು ಕೆಮ್ಮು, ಜ್ವರ, ಉಸಿರಾಟ ಸಂಬಂಧಿ ಲಕ್ಷಣಗಳುಳ್ಳ ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳಾಗಿವೆ. ಕ್ಷಯರೋಗ ಕೋವಿಡ್‍ನ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಅಧ್ಯಯನದಲ್ಲಿ ಬಹಿರಂಗವಾಗಿದೆ.

    ಕ್ಷೇತ್ರ ಮಟ್ಟದ ಆರೋಗ್ಯ ಕಾರ್ಯಕರ್ತರು ಕೋವಿಡ್‍ನಿಂದ ಚೇತರಿಸಿಕೊಂಡವರ ಮನೆಗಳಿಗೆ ತೆರಳಿ, ಲಕ್ಷಣಗಳ ಆಧಾರದಲ್ಲಿ ಅವರ ಹಾಗೂ ಸಂಪರ್ಕಿತರ ಕಫದ ಮಾದರಿಯನ್ನು ಸಂಗ್ರಹಿಸಲಾಗಿತ್ತು. ಸಂಗ್ರಹಿಸಿದ ಮಾದರಿಯನ್ನು ಆಯಾ ಜಿಲ್ಲಾ ಕೇಂದ್ರಗಳಲ್ಲಿನ ಟಿಬಿಪಿಸಿಆರ್ ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಲಾಗಿತ್ತು. ಈ ವೇಳೆ ಕ್ಷಯ ರೋಗ ಪತ್ತೆಯಾಗಿದೆ. ಇದನ್ನೂ ಓದಿ: ಪಿಡಿಓ ಹೊರಹಾಕಿ ಕಚೇರಿಗೆ ಬೀಗ ಜಡಿದ ಗ್ರಾ.ಪಂ. ಅಧ್ಯಕ್ಷೆ, ಸದಸ್ಯರು

  • ಕೊರೊನಾದಿಂದ ಗುಣಮುಖರಾದವರಿಗೆ ಕ್ಷಯ ರೋಗ ಪತ್ತೆ, ಪರೀಕ್ಷೆ ಅಗತ್ಯ: ಸುಧಾಕರ್

    ಕೊರೊನಾದಿಂದ ಗುಣಮುಖರಾದವರಿಗೆ ಕ್ಷಯ ರೋಗ ಪತ್ತೆ, ಪರೀಕ್ಷೆ ಅಗತ್ಯ: ಸುಧಾಕರ್

    ಬೆಂಗಳೂರು: ಕೊರೊನಾ ಸೋಂಕು ಪತ್ತೆಯಾದ ಕೆಲವರಲ್ಲಿ ಕ್ಷಯ ರೋಗ ಕಾಣಿಸಿಕೊಳ್ಳುತ್ತಿದ್ದು, ಕ್ಷಯ ರೋಗ ಪರೀಕ್ಷೆ ಮಾಡಿಸಿಕೊಳ್ಳುವುದು ಅಗತ್ಯ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸಲಹೆ ನೀಡಿದ್ದಾರೆ.

    ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ ಹಿನ್ನೆಲೆಯಲ್ಲಿ ಕ್ಷಯರೋಗ ಪತ್ತೆ ಆಂದೋಲನ ನಡೆಸಲಾಗುತ್ತಿದೆ. ರಾಜ್ಯದಲ್ಲಿ ಕೋವಿಡ್ ನಿಂದ ಗುಣಮುಖರಾದ 28 ಲಕ್ಷ ಜನರಿಗೆ ತಪಾಸಣೆ ಅಗತ್ಯವಾಗಿದ್ದು, ಈ ಮೂಲಕ ಕ್ಷಯ ಮುಕ್ತ ರಾಜ್ಯ ಮಾಡುವ ಗುರಿ ಹೊಂದಲಾಗಿದೆ. ಕೋವಿಡ್ ಶ್ವಾಸಕೋಶ ಸಂಬಂಧಿತ ರೋಗ, ಕ್ಷಯ ರೋಗ ಸಹ ಅದೇ ಅಂಗಕ್ಕೆ ಸಂಬಂಧಿತ ಖಾಯಿಲೆಯಾಗಿದೆ. ಭವಿಷ್ಯದಲ್ಲಿ ತೊಂದರೆ ಆಗದಂತೆ ನೋಡಿಕೊಳ್ಳುವ ಉದ್ದೇಶದಿಂದ ತಪಾಸಣೆ ನಡೆಸಲಾಗುತ್ತಿದೆ ಎಂದು ತಿಳಿಸಿದರು. ಇದನ್ನೂ ಓದಿ: ಕೊರೊನಾದಿಂದ ಆರೋಗ್ಯ ಸ್ಥಿತಿ ಗಂಭೀರ- ದಂಪತಿ ಆತ್ಮಹತ್ಯೆ

    ಕೋವಿಡ್ ಬಂದವರೆಲ್ಲರಿಗೂ ಕ್ಷಯ ರೋಗ ಬರುತ್ತೆ ಎನ್ನುವುದು ಸರಿಯಲ್ಲ, ಕೆಲವರಿಗೆ ಮಾತ್ರ ಬರುವ ಸಾಧ್ಯತೆ ಇದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಇದನ್ನು ಮಾಡಿಸಬೇಕಿದೆ. ಕೋವಿಡ್ ನಿಂದ ಗುಣಮುಖರಾದವರು ಸ್ವಯಂಪ್ರೇರಿತರಾಗಿ ಕ್ಷಯ ತಪಾಸಣೆಗೆ ಮುಂದೆ ಬನ್ನಿ ಎಂದು ಕರೆ ನೀಡಿದರು.

    ದೇಶದಲ್ಲೇ ವಿನೂತನ ಪ್ರಯತ್ನ ಇದಾಗಿದ್ದು, ರಾಜ್ಯ ಸರ್ಕಾರ ಮಾಡುತ್ತಿದೆ. ಸಕ್ರಿಯವಾಗಿರುವ ಕ್ಷಯ ರೋಗ ಪತ್ತೆ ಮಾಡುವುದು, ಕೋವಿಡ್ ಬಂದವರಿಂದ ಸಹ ಇದನ್ನು ಪತ್ತೆಹಚ್ಚಬೇಕಿದೆ. ಆಗಸ್ಟ್ 14ರಿಂದ 30ರ ವರೆಗೂ ಕ್ಷಯ ರೋಗ ತಪಾಸಣೆ ಅಭಿಯಾನ ನಡೆಯಲಿದೆ. ಕೊರೊನಾದಿಂದ 28 ಲಕ್ಷ ಜನ ಗುಣಮುಖರಾಗಿದ್ದಾರೆ, ಕಪ್ಪು ಶಿಲೀಂದ್ರ ಪತ್ತೆ ಮಾಡುವ ತಪಾಸಣೆ ನಡೆಯುತ್ತಿದೆ. ಅದೇ ಮಾದರಿಯಲ್ಲಿ ಕ್ಷಯ ರೋಗ ಪತ್ತೆ ಮಾಡಲಾಗುವುದು ಎಂದು ತಿಳಿಸಿದರು.

    ದೊಡ್ಡ ಮಟ್ಟದಲ್ಲಿ ವ್ಯಾಪಿಸದ ರೀತಿಯಲ್ಲಿ ಅವರ ಅಭಿಪ್ರಾಯದಂತೆ ಆಂದೋಲನ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಕಳೆದ ಐದು ವರ್ಷದಿಂದ ಕ್ಷಯ ರೋಗ ಹೆಚ್ಚಾಗಿದೆ. ಶೇ.33ರಷ್ಟು ಕ್ಷಯ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಇಲ್ಲಿಯವರೆಗೂ ನಾವು ಯಾವ ವೃತ್ತಿಯಲ್ಲಿ ಹೆಚ್ಚು ಬರಲಿದೆ ಎಂದು ತಪಾಸಣೆ ಮಾಡಿದ್ದೇವೆ. ಆರ್ಥಿಕ ಸ್ಥಿತಿಗತಿಗಳ ಪ್ರಕಾರವೂ ಸರ್ವೇ ಮಾಡಲಾಗಿದ್ದು, ತಪಾಸಣೆ ಮಾಡಲಾಗಿದೆ. ಇದರ ಜೊತೆಯಲ್ಲಿ ಕೋವಿಡ್ ಬಂದವರಲ್ಲೂ ತಪಾಸಣೆ ಮಾಡಲಾಗುತ್ತಿದೆ. ಕರ್ನಾಟಕದಲ್ಲಿ ಮೊದಲ ಬಾರಿಗೆ ಇದನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು.

    ಕೊರೊನಾ ಸೋಂಕು ತಗುಲಿದ್ದಕ್ಕೆ ಮಂಗಳೂರು ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವುದು ದುರದೃಷ್ಟಕರ. ಕೋವಿಡ್‍ಗೆ ಹೆದರಿ ಈ ರೀತಿ ಮಾಡಿದ್ದು ಸಾಧುವಲ್ಲ, ಕೊರೊನಾಗೆ ಹೆದರುವ ಅಗತ್ಯವಿಲ್ಲ. ಚಿಕಿತ್ಸೆ ಪಡೆಯಬಹುದು, ಕೋವಿಡ್ ಬಂದರೆ ಸಾಯುತ್ತಾರೆ ಎಂಬ ಭೀತಿಗೊಳಗಾಗಬಾರದು ಎಂದು ತಿಳಿಸಿದರು.

  • 2025ಕ್ಕೆ ಬೆಂಗಳೂರು ಜಿಲ್ಲೆ ಕ್ಷಯರೋಗ ಮುಕ್ತವಾಗಬೇಕು: ಜೆ ಮಂಜುನಾಥ್

    2025ಕ್ಕೆ ಬೆಂಗಳೂರು ಜಿಲ್ಲೆ ಕ್ಷಯರೋಗ ಮುಕ್ತವಾಗಬೇಕು: ಜೆ ಮಂಜುನಾಥ್

    ಬೆಂಗಳೂರು: ಜಿಲ್ಲೆಯನ್ನು 2025ರ ವೇಳೆಗೆ ಕ್ಷಯ ರೋಗ ಮುಕ್ತ ಜಿಲ್ಲೆಯಾಗಿಸುವುದು ನಮ್ಮ, ನಿಮ್ಮೆಲ್ಲರ ಮುಖ್ಯ ಗುರಿಯಾಗಬೇಕು ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಜೆ.ಮಂಜುನಾಥ್ ಅವರು ಸಾರ್ವಜನಿಕರಿಗೆ ಕರೆ ನೀಡಿದ್ದಾರೆ.

    ವಿಶ್ವ ಕ್ಷಯ ರೋಗ ದಿನಾಚರಣೆ ಕಾರ್ಯಕ್ರಮ ಅಂಗವಾಗಿ ಬೆಂಗಳೂರು ಪೂರ್ವ ತಾಲೂಕಿನ ಕಣ್ಣೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಕ್ಷಯ ರೋಗ ನಿಯಂತ್ರಣ ಕೇಂದ್ರ ಇವರ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜೆ.ಮಂಜುನಾಥ್, ವಿಶ್ವ ಕ್ಷಯರೋಗ ದಿನಾಚರಣೆ ಹಮ್ಮಿಕೊಂಡಿದ್ದು ಇದರ ಮೂಲ ಉದ್ದೇಶ ಕ್ಷಯ ರೋಗದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮತ್ತು ಜಾಗೃತಿ ಮೂಡಿಸಿ ಈ ರೋಗದ ಬಗ್ಗೆ ಜನರಿಗೆ ಮಾಹಿತಿ ಕೊಡುವುದರ ಜೊತೆಗೆ ವಾಸ್ತವದ ಸ್ಥಿತಿಗತಿಗಳ ಬಗ್ಗೆ ಜನರಿಗೆ ತಿಳುವಳಿಕೆ ನೀಡುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವಂತಹ ಕೆಲಸವಾಗಬೇಕು ಎಂದು ಅಭಿಪ್ರಾಯಪಟ್ಟರು.

    ಪ್ರಪಂಚದ ರೋಗಿಗಳಲ್ಲಿ ಕಾಲು ಭಾಗದಷ್ಟು ರೋಗಿಗಳು ಭಾರತದ ದೇಶದಲ್ಲಿ ಕಂಡುಬರುತ್ತಾರೆ. 2020 ರ ಟಿಬಿ ವರದಿ ಪ್ರಕಾರ ಭಾರತದಲ್ಲಿ 24.04 ಲಕ್ಷ ರೋಗಿಗಳು ನಿಕ್ಷಯ್ ನಲ್ಲಿ ನೋಂದಣಿ ಆಗಿದ್ದಾರೆ. ದೇಶದಲ್ಲಿ ಶೇಕಡಾ 40 ರಷ್ಟು ಜನರಲ್ಲಿ ಈ ರೋಗಾಣುಗಳಿರುತ್ತವೆ ಎಂದು ಅಂದಾಜಿಸಲಾಗಿದ್ದು, ಪ್ರತಿ ಐದು ನಿಮಷಕ್ಕೆ ಇಬ್ಬರು ಕ್ಷಯ ರೋಗದಿಂದ ಮರಣ ಹೊಂದುತ್ತಿದ್ದಾರೆ ಎಂದು ವರದಿ ತಿಳಿಸಿದೆ. ಕ್ಷಯರೋಗ ಪತ್ತೆ ಪ್ರಮಾಣವು ನಮ್ಮ ನಗರ ಜಿಲ್ಲೆಯಲ್ಲಿ ಒಂದು ಲಕ್ಷ ಜನ ಸಂಖ್ಯೆಗೆ 136 ಸರಾಸರಿ ಇದೆ. ಕ್ಷಯ ರೋಗ ಗುಣಪಡಿಸುವಲ್ಲಿ ಶೇ.100 ರಷ್ಟು ಸಾಧನೆಯಾಗಬೇಕು, ಒಂದು ಲಕ್ಷ ಜನ ಸಂಖ್ಯೆಗೆ 10 ಕೇಸ್‍ಗಿಂತ ಕಡಿಮೆ ಪ್ರಮಾಣದಲ್ಲಿ ರೋಗ ಪತ್ತೆಯಾಗುವಂತೆ ಕ್ರಮವಹಿಸಲು ಎಲ್ಲರೂ ಶ್ರಮಿಸಬೇಕಿದೆ. ಅಲ್ಲದೇ, ಈ ರೋಗದಿಂದ ಯಾವುದೇ ಸಾವು ನೋವು ಸಂಭವಿಸದಂತೆ ಎಚ್ಚರ ವಹಿಸುವ ಅಗತ್ಯವಿದೆ. ಎರಡು ವಾರಕ್ಕಿಂತ ಹೆಚ್ಚು ಕೆಮ್ಮು, ರಾತ್ರಿ ವೇಳೆಯಲ್ಲಿ ಜ್ವರ, ಬೆವರುವುದು, ಕಫದಲ್ಲಿ ರಕ್ತ, ತೂಕ ಇಳಿಕೆ, ಹಸಿವಾಗದಿರುವುದು ಇಂತಹ ಯಾವುದೇ ಲಕ್ಷಣಗಳು ಕಂಡುಬಂದರೂ, ಸಾರ್ವಜನಿಕರು ಕೂಡಲೇ ಸಮೀಪದ ಆರೋಗ್ಯ ಕೇಂದ್ರಕ್ಕೆ ಬೇಟಿ ನೀಡಿ ಚಿಕಿತ್ಸೆ ಪಡೆಯಬೇಕು ಎಂದು ಜಿಲ್ಲಾಧಿಕಾರಿಗಳು ಸಲಹೆ ನೀಡಿದರು.

    ಜಿಲ್ಲೆಯು 2025 ರೊಳಗೆ ಕ್ಷಯ ರೋಗ ನಿರ್ಮೂಲನೆ ಮಾಡುವ ಗುರಿಯನ್ನು ಹೊಂದಿದ್ದು, ನಮ್ಮ ಮುಂದೆ ದೊಡ್ಡ ಸವಾಲು ಇದೆ. ಈಗಾಗಲೇ, ಬೆಂಗಳೂರು ನಗರ ಜಿಲ್ಲೆಯಲ್ಲಿ 343 ಜನರು ಕ್ಷಯರೋಗದಿಂದ ಬಳಲುತ್ತಿದ್ದಾರೆ ಎಂದು ಗುರುತಿಸಲಾಗಿದ್ದು. ಇಂತವರಿಗೆ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ನೀಡಿ ರೋಗವನ್ನು ಗುಣಪಡಿಸುವುದಲ್ಲದೇ ರೋಗ ಬರುವುದನ್ನು ತಡೆಗಟ್ಟಲೂ ಸಹ ಸಾಧ್ಯವಿದೆ. ಕ್ಷಯ ರೋಗ ಪತ್ತೆ ಮತ್ತು ಚಿಕಿತ್ಸೆಗೆ ಹಲವಾರು ವ್ಯವಸ್ಥೆ ಇದ್ದು, ಜಿಲ್ಲಾ ಹಾಗೂ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ‘ಸಿಬಿನ್ಯಾಟ್’ ಯಂತ್ರಗಳು ಲಭ್ಯವಿದ್ದು, ಈಗಾಗಲೇ ಕ್ಷಯ ರೋಗಕ್ಕೆ ತುತ್ತಾಗಿರುವ ರೋಗಿಗಳಿಗೆ ಚಿಕಿತ್ಸೆ ಉಚಿತವಾಗಿದ್ದು, ಭಾರತ ಸರ್ಕಾರ ನಿಕ್ಷಯ ಪೋಷಣೆ ಯೋಜನೆಯಡಿಯಲ್ಲಿ ಕ್ಷಯ ರೋಗಕ್ಕೆ ತುತ್ತಾದವರಿಗೆ ಪ್ರತಿ ತಿಂಗಳು ರೂ 500 ಪ್ರೋತ್ಸಾಹ ಧನ ಕೂಡ ನೀಡಲಾಗುವುದು. ಅಷ್ಟೇ ಅಲ್ಲದೆ ಖಾಸಗಿ ಆಸ್ಪತ್ರೆ ಅವರು ಇಂತಹ ಪ್ರಕರಣವನ್ನು ಗುರುತಿಸಿ ವರದಿ ನೀಡಿದರೆ ಅವರಿಗೆ ಸಹ ಒಂದು ಸಾವಿರ ಪ್ರೋತ್ಸಾಹ ಧನ ನೀಡಲಾಗುವುದೆಂದು ಅವರು ತಿಳಿಸಿದರು.

    ಜಿಲ್ಲಾ ಮತ್ತು ಪ್ರಾಥಮಿಕ ಆರೋಗ್ಯ ಸಹಾಯಕರು, ಆಶಾ ಕಾರ್ಯಕರ್ತೆಯರು, ಗ್ರಾಮೀಣ ಪ್ರದೇಶಗಳಲ್ಲಿ ಸಾರ್ವಜನಿಕರಿಗೆ ಆರೋಗ್ಯ ಜಾಗೃತಿ ನೀಡುವ ಮೂಲಕ ಬೆಂಗಳೂರು ನಗರ ಮಾತ್ರವಲ್ಲದೆ ಒಟ್ಟಾರೆ ಕರ್ನಾಟಕವನ್ನು ಕ್ಷಯ ರೋಗ ಮುಕ್ತ ಮಾಡಲು ಕೈಜೋಡಿಸಬೇಕು. ದೇಶದಲ್ಲಿ ಕರೋನಾ ಸೋಂಕಿನ ಎರಡನೇ ಅಲೆ ತಲೆದೋರುತ್ತಿದ್ದು, ಸೋಂಕು ತಡೆಯುವಲ್ಲಿ ಸಾರ್ವಜನಿಕ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ವಹಿಸಿ ಸರ್ಕಾರದೊಂದಿಗೆ ಸಹಕರಿಸಬೇಕು ಎಂದು ವಿನಂತಿಸಿಕೊಂಡರು.
    ನಂತರ ಮಾತನಾಡಿದ ಜಿಲ್ಲಾ ಕ್ಷಯ ರೋಗ ನಿರ್ಮೂಲನಾಧಿಕಾರಿ ಡಾ. ಮಹೇಶ್ ಕುಮಾರ್, ಕ್ಷಯ ರೋಗವನ್ನು ಸೂಕ್ತ ಚಿಕಿತ್ಸೆ ಮೂಲಕ ಗುಣಪಡಿಸಬಹುದಾದ ರೋಗವಾಗಿದ್ದು, ಕ್ಷಯ ರೋಗ ಹರಡುವುದನ್ನು ತಡೆಗಟ್ಟಲು, ಸಾರ್ವಜನಿಕರು ಆರೋಗ್ಯ ಇಲಾಖೆಯೊಂದಿಗೆ ಕೈ ಜೋಡಿಸುವ ಅಗತ್ಯವಿದೆ ಎಂದರು.

    ಕ್ಷಯ ರೋಗ ಪತ್ತೆ ಕುರಿತು ಆರೋಗ್ಯ ಇಲಾಖೆಯೊಂದಿಗೆ ಮಾಹಿತಿ ವಿನಿಮಯ ಮಾಡಿಕೊಳ್ಳುವ ಖಾಸಗಿ ವೈದ್ಯರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಕ್ಷಯ ರೋಗದ ಕುರಿತು ಜಾಗೃತಿ ಮೂಡಿಸುವ ಭಿತ್ತಿ ಪತ್ರವನ್ನು ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಪೂರ್ವ ತಾಲೂಕಿನ ಆರೋಗ್ಯಾಧಿಕಾರಿಗಳಾದ ಡಾ. ಚಂದ್ರಶೇಖರಯ್ಯ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ.ಶ್ರೀನಿವಾಸ ಜಿ.ಎ, ಕಣ್ಣೂರಿನ ಪ್ರಾಥಮಿಕ ಆರೋಗ್ಯಾಧಿಕಾರಿಯಾ ಉಮಾ ರಾಕೇಶ್, ಗ್ರಾ ಪಂ. ಅಧ್ಯಕ್ಷರಾದ ಅಕ್ಕಯ್ಯಮ್ಮ, ಮತ್ತು ಉಪಾಧ್ಯಕ್ಷರು, ಜಿಲ್ಲಾ ಪಂಚಾಯತ್ ಸದಸ್ಯರು ಹಾಗೂ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಕಣ್ಣೂರಿನ ಪ್ರಾಥಮಿಕ ಆರೋಗ್ಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.