Tag: TTV Dinakaran

  • 1 ತಲೆಗೆ 300 ರೂ. – ಮತದಾನಕ್ಕೂ ಮುನ್ನ ದಿನವೇ 1.5 ಕೋಟಿ ರೂ. ಜಪ್ತಿ!

    1 ತಲೆಗೆ 300 ರೂ. – ಮತದಾನಕ್ಕೂ ಮುನ್ನ ದಿನವೇ 1.5 ಕೋಟಿ ರೂ. ಜಪ್ತಿ!

    ಚೆನ್ನೈ: ಟಿಟಿವಿ ದಿನಕರನ್ ಸ್ಥಾಪಿಸಿರುವ ಅಮ್ಮ ಮಕ್ಕಳ್ ಮುನ್ನೆತ್ರಾ ಕಳಗಂ (ಎಎಂಎಂಕೆ) ಪಕ್ಷದ ಕಾರ್ಯಕರ್ತನಿಂದ ಚುನಾವಣಾ ಆಯೋಗ 1.48 ಕೋಟಿ ರೂ. ಹಣವನ್ನು ವಶಕ್ಕೆ ಪಡೆದಿರುವ ಘಟನೆ ತಮಿಳುನಾಡಿನ ಥೇನಿ ಜಿಲ್ಲೆಯ ಅಂಡಿಪಟ್ಟಿಯಲ್ಲಿ ಬುಧವಾರ ನಡೆದಿದೆ.

    ಲೋಕಸಭಾ ಚುನಾವಣೆ 2019ರ ಮೊದಲ ಹಂತ ಪೂರ್ಣಗೊಂಡಿದ್ದು, ಎರಡನೇ ಹಂತದ ಮತದಾನ ಗುರುವಾರ ನಡೆಯಲಿದೆ. ಚುನಾವಣಾ ಆಯೋಗದ ಫ್ಲೈಯಿಂಗ್ ಸ್ಕ್ವಾಡ್ ಮಂಗಳವಾರ ರಾತ್ರಿಯಿಂದ ಇಂದು ಬೆಳಗ್ಗೆ 5:30 ಗಂಟೆಯವರೆಗೂ ಕಾರ್ಯಾಚರಣೆ ನಡೆಸಿದೆ. ಈ ವೇಳೆ 94 ಕವರ್ ಗಳಲ್ಲಿ ಇಟ್ಟಿದ್ದ 1.48 ಕೋಟಿ ರೂ.ವನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಕವರ್ ಗಳ ಮೇಲೆ ವಾರ್ಡ್ ನಂಬರ್, ವಾರ್ಡಿನಲ್ಲಿರುವ ಮತದಾರರ ಸಂಖ್ಯೆ ಮತ್ತು ಮತದಾರಿಗೆ ತಲಾ 300 ರೂ. ನೀಡಬೇಕು ಎಂದು ಬರೆಯಲಾಗಿದೆ.

    ಚುನಾವಣಾ ಅಧಿಕಾರಿಗಳು ಮಂಗಳವಾರ ರಾತ್ರಿ ಕಾರ್ಯಾಚರಣೆ ನಡೆಸಿದ್ದಕ್ಕೆ ಎಎಂಎಂಕೆ ಪಕ್ಷದ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲದೆ ಅಧಿಕಾರಿಗಳ ಮೇಲೆ ಹಲ್ಲೆಗೆ ಯತ್ನಿಸಿದ್ದರು. ಭದ್ರತೆ ಒದಗಿಸಿದ್ದ ಪೊಲೀಸರು ತಕ್ಷಣವೇ ನಾಲ್ಕು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ, ಅಧಿಕಾರಿಗಳನ್ನು ರಕ್ಷಿಸಿದ್ದಾರೆ.

    ಐಟಿ ಅಧಿಕಾರಿಗಳು ಹಾಗೂ ಚುನಾವಣಾ ಅಧಿಕಾರಿಗಳು ಜಂಟಿಯಾಗಿ ಡಿಎಂಕೆ ಪಕ್ಷದ ಮುಖಂಡ ದೊರೈ ಮುರುಗನ್ ಅವರ ಮನೆಯ ಮೇಲೆ ಏಪ್ರಿಲ್ 10ರಂದು ದಾಳಿ ಮಾಡಿದ್ದರು. ಈ ವೇಳೆ ದೊರೈ ಮುರುಗನ್ ಅವರಿಗೆ ಸೇರಿದ್ದ ವೆಲ್ಲೂರಿನ ಗೋದಾಮಿನಲ್ಲಿ 11.50 ಕೋಟಿ ರೂ. ಹಣ ಪತ್ತೆಯಾಗಿತ್ತು. ಇದರಿಂದಾಗಿ ಹಣ ಹಂಚಿ ಮತದಾರರನ್ನು ಮನವೊಲಿಸಲಾಗುತ್ತಿದೆ ಎಂದು ಚುನಾವಣಾ ಆಯೋಗ ಆರೋಪಿಸಿತ್ತು. ಈ ಸಂಬಂಧ ಚುನಾವಣಾ ಆಯೋಗವು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಏಪ್ರಿಲ್ 14ರಂದು ಪತ್ರ ಬರೆದು, ವೆಲ್ಲೂರು ಲೋಕಸಭಾ ಕ್ಷೇತ್ರದ ಚುನಾವಣೆಯನ್ನು ಮುಂದೂಡುವಂತೆ ಶಿಫಾರಸು ಮಾಡಿತ್ತು. ಇದಕ್ಕೆ ರಾಷ್ಟ್ರಪತಿಗಳು ಒಪ್ಪಿಗೆ ಸೂಚಿಸಿದ್ದು, ನಾಳೆ ನಡೆಯಬೇಕಾಗಿದ್ದ ಚುನಾವಣೆಯನ್ನು ರದ್ದು ಮಾಡಲಾಗಿದೆ. ಇದನ್ನು ಡಿಎಂಕೆ ಪಕ್ಷದ ಕಾರ್ಯಕರ್ತರು ವಿರೋಧಿಸಿ ನಿನ್ನೆ ರಾತ್ರಿ ಐಟಿ ಇಲಾಖೆ ಎದುರು ಪ್ರತಿಭಟನೆ ನಡೆಸಿದ್ದರು.

  • ಶಶಿಕಲಾ ಆಪ್ತ ದಿನಕರನ್ ಕಾರಿನ ಮೇಲೆ ಪೆಟ್ರೋಲ್ ಬಾಂಬ್ ದಾಳಿ

    ಶಶಿಕಲಾ ಆಪ್ತ ದಿನಕರನ್ ಕಾರಿನ ಮೇಲೆ ಪೆಟ್ರೋಲ್ ಬಾಂಬ್ ದಾಳಿ

    ಚೆನ್ನೈ: ಮಾಜಿ ಎಐಎಂಡಿಕೆ ಮುಖಂಡ ಹಾಗೂ ಶಶಿಕಲಾ ಆಪ್ತರಾಗಿರುವ ಟಿಟಿವಿ ದಿನಕರನ್ ಮನೆಯ ಮುಂಭಾಗ ನಿಲ್ಲಿಸಿದ್ದ ಅವರ ಕಾರಿನ ಮೇಲೆ ಭಾನುವಾರ ಮಧ್ಯಾಹ್ನ ದುಷ್ಕರ್ಮಿಯೊಬ್ಬ ಪೆಟ್ರೋಲ್ ಬಾಂಬ್ ದಾಳಿ ನಡೆಸಿದ್ದಾನೆ.

    ದುಷ್ಕರ್ಮಿಯೊಬ್ಬ ದಿನಕರನ್ ಕಾರಿನ ಮೇಲೆ ಪೆಟ್ರೋಲ್ ಬಾಂಬ್ ದಾಳಿ ನಡೆಸಿದ್ದು, ಈ ವೇಳೆ ದಿನಕರನ್ ಕಾರಿನಲ್ಲಿ ಇರಲಿಲ್ಲ. ಆದರೆ ದಾಳಿಯಲ್ಲಿ ದಿನಕರನ್ ಕಾರು ಚಾಲಕ ಹಾಗೂ ಫೋಟೋಗ್ರಾಫರ್ ಗಾಯಗೊಂಡಿದ್ದಾಗಿ ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ. ಅಲ್ಲದೇ ದಾಳಿಯಲ್ಲಿ ಕಾರು ಕೂಡ ಜಖಂ ಗೊಂಡಿದ್ದು, ಮುರಿದ ಗಾಜಿನ ತುಣುಕುಗಳು ರಸ್ತೆ ಮೇಲೆ ಚೆಲ್ಲಾಡಿದೆ.

    ಸದ್ಯ ದಾಳಿಯ ಹಿಂದೆ ಪಕ್ಷದಿಂದ ಉಚ್ಚಾಟಿಸಲ್ಪಟ್ಟ ಕಾರ್ಯಕರ್ತನೊಬ್ಬನ ಕೈವಾಡ ಇರುವ ಕುರಿತು ಆರೋಪ ಕೇಳಿಬಂದಿದೆ. ದಾಳಿಯಲ್ಲಿ ಸ್ವದೇಶಿ ನಿರ್ಮಿತ ಪೆಟ್ರೋಲ್ ಬಾಂಬ್ ಬಳಕೆ ಮಾಡಲಾಗಿದೆ ಎಂಬ ಮಾಹಿತಿ ಲಭಿಸಿದೆ.

    ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಸಾವಿನ ಬಳಿಕ ಉಂಟಾದ ಬೆಳವಣಿಗೆಯಲ್ಲಿ ಎಐಎಂಡಿಕೆ ಪಕ್ಷದಿಂದ ದಿನಕರನ್‍ರನ್ನು ಉಚ್ಚಾಟಿಸಲಾಗಿತ್ತು. ಬಳಿಕ ಡಿಸೆಂಬರ್ ನಲ್ಲಿ ನಡೆದ ಉಪಚುನಾವಣೆಯಲ್ಲಿ ಜಯಲಲಿತಾ ಅವರ ಕ್ಷೇತ್ರವಾಗಿದ್ದ ಆರ್.ಕೆ.ನಗರದಿಂದ ದಿನಕರನ್ ಸ್ಪರ್ಧಿಸಿ ಗೆಲುವು ಪಡೆದಿದ್ದರು.

  • ಪೆರೋಲ್ ಅವಧಿಗೂ ಮುನ್ನವೇ ಪರಪ್ಪನ ಅಗ್ರಹಾರಕ್ಕೆ ಮರಳಿದ ಶಶಿಕಲಾ

    ಪೆರೋಲ್ ಅವಧಿಗೂ ಮುನ್ನವೇ ಪರಪ್ಪನ ಅಗ್ರಹಾರಕ್ಕೆ ಮರಳಿದ ಶಶಿಕಲಾ

    ಬೆಂಗಳೂರು: ಪತಿಯ ನಿಧನದ ಹಿನ್ನೆಲೆ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸುವ ಸಲುವಾಗಿ 15 ದಿನಗಳ ಪೆರೋಲ್ ಪಡೆದಿದ್ದ ಎಐಎಂಡಿಕೆ ನಾಯಕಿ ಶಶಿಕಲಾ ಮೂರು ದಿನಗಳ ಮುಂಚೆಯೇ ಜೈಲಿಗೆ ವಾಪಸ್ ಆಗಿದ್ದಾರೆ.

    ಇದೇ ಮಾರ್ಚ್ 20 ರ ಮಧ್ಯರಾತ್ರಿ ಶಶಿಕಲಾ ಪತಿ ನಟರಾಜನ್ ಅನಾರೋಗ್ಯದ ಹಿನ್ನೆಲೆ ಮೃತಪಟ್ಟಿದ್ದರು. ಅವರ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸುವ ಹಿನ್ನೆಲೆ 15 ದಿನಗಳ ತುರ್ತು ಪೆರೋಲ್ ಪಡೆದು ಮಾರ್ಚ್ 21 ರಂದು ತಂಜಾವೂರಿಗೆ ತೆರಳಿದ್ದರು. ಆದರೆ ಇನ್ನೂ 5 ದಿನಗಳ ಪೆರೋಲ್ ಅವಧಿ ಇರುವಂತೆಯೇ ಶಶಿಕಲಾ ಪರಪ್ಪನ ಆಗ್ರಹಾರಕ್ಕೆ ಅಗಮಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ.

    ಮೂಲಗಳ ಪ್ರಕಾರ ಶಶಿಕಲಾ ಕುಟುಂಬದಲ್ಲಿ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ವೈಮಸ್ಸು ಮೂಡಿದ್ದು, ಈ ಹಿನ್ನೆಲೆಯಲ್ಲಿ ಅವಧಿಗೂ ಮುನ್ನವೇ ಶಶಿಕಲಾ ಜೈಲಿಗೆ ಆಗಮಿಸಿದ್ದಾರೆ ಎನ್ನಲಾಗುತ್ತಿದೆ. ಇನ್ನು ಶಶಿಕಲಾ ಜೈಲಿಗೆ ವಾಪಸ್ಸಾಗುವ ವೇಳೆ ತಂಜಾವೂರಿನಿಂದ ನೂರಾರು ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು ಹಾಗು ಬೆಂಬಲಿಗರು ಆಗಮಿಸಿದ್ದರು. ಇದೇ ಸಂದರ್ಭದಲ್ಲಿ ಮಾತನಾಡಿದ ಶಶಿಕಲಾ ಸಂಬಂಧಿ ಟಿಟಿವಿ ದಿನಕರನ್, ಶಶಿಕಲಾ ಅವರಿಗೆ ಕಳೆದ ಹತ್ತು ದಿನಗಳಿಂದಲೂ ಡೆಂಗ್ಯು ಜ್ವರ ಬಾಧಿಸಿದ್ದು, ಮನೆಯಲ್ಲೆ ವೈದ್ಯರಿಂದ ಅವರಿಗೆ ಚಿಕಿತ್ಸೆ ಕೊಡಿಸಲಾಯಿತು ಎಂದು ತಿಳಿಸಿದರು. ಶಶಿಕಲಾರ ಪತಿಯ ಎಲ್ಲಾ ಅಂತಿಮ ಕಾರ್ಯಗಳು ಶುಕ್ರವಾರವೇ ಮುಗಿದ ಕಾರಣ ಇಂದು ಪರಪ್ಪನ ಅಗ್ರಹಾರಕ್ಕೆ ಮರಳಿದರು ಎಂದರು.

  • ತಮಿಳುನಾಡಿಗೆ ಒಬ್ಬರೇ ಎಂಜಿಆರ್, ಒಬ್ಬರೇ ಅಮ್ಮ : ಟಿಟಿವಿ ದಿನಕರನ್

    ತಮಿಳುನಾಡಿಗೆ ಒಬ್ಬರೇ ಎಂಜಿಆರ್, ಒಬ್ಬರೇ ಅಮ್ಮ : ಟಿಟಿವಿ ದಿನಕರನ್

    ಚೆನ್ನೈ: ತಮಿಳುನಾಡಿಗೆ ಒಬ್ಬರೇ ಎಂಜಿಆರ್, ಒಬ್ಬರೇ ಅಮ್ಮ ಅದು ಜಯಲಲಿತಾ. ರಜನಿ ಮೇನಿಯಾ ಎಂಬುವುದು ಕೇವಲ ಮಾಧ್ಯಮಗಳ ಸೃಷ್ಟಿಯಾಗಿದ್ದು, ಇಲ್ಲಿ ಇವೆಲ್ಲ ನಡೆಯುವುದಿಲ್ಲ ಎಂದು ಎಐಡಿಎಂಕೆ ಪಕ್ಷದ ಉಚ್ಛಾಟಿತ ನಾಯಕ ಟಿಟಿವಿ ದಿನಕರನ್ ಹೇಳಿದ್ದಾರೆ.

    ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯ ಪ್ರವೇಶ ಸಂಬಂಧ ಘೋಷಣೆ ಮಾಡಿದ ನಂತರ ಪ್ರತಿಕ್ರಿಯೆ ನೀಡಿರುವ ದಿನಕರನ್, ತಮಿಳುನಾಡಿನಲ್ಲಿ ರಜನಿ ಮೇನಿಯಾ ನಡೆಯುವುದಿಲ್ಲ. ತಮಿಳುನಾಡಿಗೆ ಒಬ್ಬರೇ ಎಂಜಿಆರ್, ಒಬ್ಬರೇ ಅಮ್ಮ. ಅಲ್ಲದೇ ಎಂಜಿಆರ್ ಮತ್ತು ಅಮ್ಮ ಅವರೊಂದಿಗೆ ನೀವು ಯಾರನ್ನು ಬೇಕಾದರೂ ಹೋಲಿಕೆ ಮಾಡಬಾರದು. ಜಯಲಲಿತ ಅವರ ನಿಷ್ಠಾವಂತ ಬೆಂಬಲಿಗ ಮುಂದೆ ಯಾರು ಗೆಲ್ಲಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

    ಇತ್ತೀಚೆಗೆ ಜಯಲಲಿತಾ ಸಾವಿನಿಂದ ತೆರವಾಗಿದ್ದ ರಾಧಾಕೃಷ್ಣ ನಗರ ಕ್ಷೇತ್ರದ ಉಪ ಚುನಾವಣೆಯಲ್ಲಿ ದಿನಕರನ್, ಎಐಎಡಿಎಂಕೆ ಪಕ್ಷದ ಅಭ್ಯರ್ಥಿಯ ವಿರುದ್ಧ ಭರ್ಜರಿ ಜಯ ದಾಖಲಿಸಿದ್ದರು.

    ರಜನಿ ನಿರ್ಧಾರ ಖುಷಿ ತಂದಿದೆ: ತಮಿಳುನಾಡಿನಲ್ಲಿ ರಜನಿಕಾಂತ್ ರಾಜಕೀಯ ಪ್ರವೇಶ ಅವರ ಅಭಿಮಾನಿಗಳಲ್ಲಿ ಹರುಷವನ್ನು ಮೂಡಿಸಿದೆ. ರಜನಿ ಅವರ ಸಮಕಾಲೀನ ನಟ ಕಮಲ್ ಹಾಸನ್ ಈ ಕುರಿತು ತಮ್ಮ ಅಭಿಪ್ರಾಯವನ್ನು ಟ್ವೀಟ್ ಮಾಡಿದ್ದು, ರಜನಿ ಅವರ ರಾಜಕೀಯ ಪ್ರವೇಶ ಖುಷಿ ತಂದಿದೆ. ಸಹೋದರ ರಜನಿಕಾಂತ್ ಅವರ ಸಾಮಾಜಿಕ ಪ್ರಜ್ಞೆ ಬಗ್ಗೆ ನನಗೆ ತಿಳಿದಿದೆ. ಹೀಗಾಗಿ ಅವರಿಗೆ ನಾನು ಶುಭ ಕೋರುತ್ತೇನೆ ಎಂದು ಹೇಳಿದ್ದಾರೆ.

  • ಶಶಿಕಲಾಗೆ 5 ದಿನಗಳ ಪೆರೋಲ್, ಇಂದು ತಮಿಳುನಾಡಿಗೆ

    ಶಶಿಕಲಾಗೆ 5 ದಿನಗಳ ಪೆರೋಲ್, ಇಂದು ತಮಿಳುನಾಡಿಗೆ

    ಬೆಂಗಳೂರು: ಎಐಎಡಿಎಂಕೆ ನಾಯಕಿ ವಿ.ಕೆ ಶಶಿಕಲಾಗೆ 5 ದಿನಗಳ ಪೆರೋಲ್ ಸಿಕ್ಕಿದ್ದು ಶುಕ್ರವಾರ ತಮಿಳುನಾಡಿಗೆ ಪ್ರಯಾಣ ಬೆಳೆಸಲಿದ್ದಾರೆ.

    ಈಗಾಗಲೇ ಆಪ್ತ ಟಿಟಿವಿ ದಿನಕರನ್ ಪರಪ್ಪನ ಅಗ್ರಾಹರಕ್ಕೆ ಭೇಟಿ ನೀಡಿದ್ದು, ಶಶಿಕಲಾ ಬಿಡುಗಡೆಗೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ಪೊಲೀಸ್ ಅಧಿಕಾರಿಗಳು ನಡೆಸುತ್ತಿದ್ದಾರೆ.

    ಪತಿ ನಟರಾಜನ್ ಅನಾರೋಗ್ಯದಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ 15 ದಿನಗಳ ತುರ್ತು ಪೆರೋಲ್ ರಜೆ ನೀಡಬೇಕು ಎಂದು ಶಶಿಕಲಾ ಮನವಿ ಸಲ್ಲಿಸಿದ್ದರು. ಎರಡು ದಿನಗಳ ಹಿಂದೆ ಚೆನ್ನೈ ಆಸ್ಪತ್ರೆಯಲ್ಲಿ ನಟರಾಜನ್ ಅವರಿಗೆ ಯಕೃತ್ ಕಸಿ ಮಾಡಲಾಗಿತ್ತು.

    ಜೈಲಾಧಿಕಾರಿಗಳು 15 ದಿನಗಳ ಪೆರೋಲ್ ರಜೆ ನೀಡದೇ ಐದು ದಿನಗಳ ರಜೆಯನ್ನು ಮಂಜೂರು ಮಾಡಿದ್ದಾರೆ. ಇದೇ ವೇಳೆ ಯಾವುದೇ ರಾಜಕೀಯ ಕಾರ್ಯಕ್ರಮದಲ್ಲಿ ಭಾಗವಹಿಸಬಾರದು ಎಂದು ಷರತ್ತು ವಿಧಿಸಿಸಲಾಗಿದ್ದು, ಒಂದು ವೇಳೆ ಭಾಗವಹಿಸಿದ್ದು ಬೆಳಕಿಗೆ ಬಂದರೆ ಮುಂದೆ ಪೆರೋಲ್ ನೀಡಲು ಸಾಧ್ಯವಿಲ್ಲ ಎಂದು ಜೈಲಾಧಿಕಾರಿಗಳು ಶಶಿಕಲಾಗೆ ಸೂಚನೆ ನೀಡಿದ್ದಾರೆ.

  • ಮನ್ನಾರ್‍ ಗುಡಿ ಶಶಿಕಲಾ ರಾಜಕೀಯ ಜೀವನ ಜೈಲಿನಲ್ಲೇ ಅಂತ್ಯ

    ಮನ್ನಾರ್‍ ಗುಡಿ ಶಶಿಕಲಾ ರಾಜಕೀಯ ಜೀವನ ಜೈಲಿನಲ್ಲೇ ಅಂತ್ಯ

    ಚೆನ್ನೈ: ಮನ್ನಾರ್‍ ಗುಡಿ ಶಶಿಕಲಾ ರಾಜಕೀಯ ಜೀವನ ಜೈಲಿನಲ್ಲೇ ಅಂತ್ಯವಾಗಿದೆ. ಚೆನ್ನೈನಲ್ಲಿ ನಡೆದ ಎಐಎಡಿಎಂಕೆ ಕೌನ್ಸಿಲ್ ಸಭೆಯಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದ ಶಶಿಕಲಾ ಹಾಗೂ ಉಪಕಾರ್ಯದರ್ಶಿ ಟಿಟಿವಿ ದಿನಕರನ್‍ರನ್ನು ಉಚ್ಛಾಟನೆ ನಿರ್ಧಾರವನ್ನು ಕೈಗೊಳ್ಳಲಾಗಿದೆ.

    ಮುಖ್ಯಮಂತ್ರಿ ಪಳನಿಸ್ವಾಮಿ ಹಾಗೂ ಉಪ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತಮ್ಮ ಬಣಗಳ ವಿಲೀನ ಒಪ್ಪಂದದಂತೆ ನಿರ್ಣಯ ಅಂಗೀಕರಿಸಿದ್ದಾರೆ. ಇದರ ಜೊತೆ ಜಯಲಲಿತಾ ಅವರನ್ನ ಎಐಎಡಿಎಂಕೆಯ ಶಾಶ್ವತ ಮುಖ್ಯ ಕಾರ್ಯದರ್ಶಿಯಾಗಿ ನಿರ್ಣಯ ಕೈಗೊಳ್ಳಲಾಗಿದೆ. ಈ ಮೂಲಕ ಜಯಲಲಿತಾ ಸಾವಿನ ಬಳಿಕ ಸೃಷ್ಟಿಯಾಗಿದ್ದ ರಾಜಕೀಯ ಹೈಡ್ರಾಮಕ್ಕೆ ಸದ್ಯ ಫುಲ್‍ಸ್ಟಾಪ್ ಬಿದ್ದಿದೆ.

    ಈ ಹಿಂದೆ ಪನ್ನಿರ್ ಸೆಲ್ವಂ ಎಐಡಿಎಂಕೆ ಸೇರ್ಪಡೆಯಾಗುವ ಮೊದಲು ಶಶಿಕಲಾ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಬೇಕೆಂಬ ಬೇಡಿಕೆಯನ್ನು ಇರಿಸಿದ್ದರು.

    ಜಯಲಲಿತಾ ಅಕ್ರಮ ಆಸ್ತಿಗಳಿಕೆ ಪ್ರಕಣದಲ್ಲಿ ದೋಷಿಯಾಗಿರುವ ಶಶಿಕಲಾ ಸದ್ಯ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ.