Tag: Trustee

  • ಮಾತೆ ಮಾಣಿಕೇಶ್ವರಿ ಲಿಂಗೈಕ್ಯ- ಮಠದ ಆಸ್ತಿಯ ಮೇಲೆ ಟ್ರಸ್ಟಿ ಕಣ್ಣು?

    ಮಾತೆ ಮಾಣಿಕೇಶ್ವರಿ ಲಿಂಗೈಕ್ಯ- ಮಠದ ಆಸ್ತಿಯ ಮೇಲೆ ಟ್ರಸ್ಟಿ ಕಣ್ಣು?

    ಕಲಬುರಗಿ: ಸೇಡಂ ತಾಲೂಕಿನ ಯಾನಾಗುಂದಿಯ ಮಾತೆ ಮಾಣಿಕೇಶ್ವರಿ ಲಿಂಗೈಕರಾಗುತ್ತಿದ್ದಂತೆ ಕೋಟಿ ಕೋಟಿಯ ಆಸ್ತಿಯ ಮೇಲೆ ಹಲವರು ಕಣ್ಣು ಬಿದ್ದಿದೆ. ಹೀಗಾಗಿ ಇದೀಗ ಮಠದ ಆಡಳಿತ ಮಂಡಳಿ ಸದಸ್ಯರ ವಿರುದ್ಧ ಮಠದ ಭಕ್ತರು ಸಮರ ಸಾರಲು ಮುಂದಾಗಿದ್ದಾರೆ.

    ಅಮ್ಮನವರು ಜೀವಿತಾವಧಿಯಲ್ಲಿ ಸಾಮಾಜಿಕ ಕಾರ್ಯಕ್ಕೆ ಅಂತ “ರೂಪ ರಹಿತಾ ಅಂಹಿಸಾ ಯೋಗೇಶ್ವರ ವೀರ ಧರ್ಮಜಾ ಮಾತಾ ಮಾಣಿಕೇಶ್ವರಿ ಟ್ರಸ್ಟ್ ಯಾನಾಗುಂದಿ” ಹುಟ್ಟಿಹಾಕಿದ್ದು, ಆ ಟ್ರಸ್ಟ್ ಅಡಿ ಯಾನಾಗುಂದಿಯಲ್ಲಿ 254 ಎಕರೆ ಜಮೀನು ಸೇರಿದಂತೆ, ಕಲಬುರಗಿ, ಬೀದರ್, ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ಆಂಧ್ರ-ತೆಲಂಗಾಣದಲ್ಲಿ ಕೋಟ್ಯಂತರ ರೂಪಾಯಿ ಆಸ್ತಿ ಹೊಂದಿದೆ. ಈ ಆಸ್ತಿಯ ಮೇಲೆ ಇದೀಗ ಇಲ್ಲಿನ ಆಡಳಿತ ಮಂಡಳಿ ಸದಸ್ಯರು ಕಣ್ಣಿಟ್ಟಿದ್ದಾರೆ.

    ಆಡಳಿತ ಮಂಡಳಿಯ ಕಾರ್ಯದರ್ಶಿ ಶಿವಯ್ಯ ಸ್ವಾಮಿ, ತನ್ನ ಆಧಾರ್ ಕಾರ್ಡ್ ನಲ್ಲಿ ತಿದ್ದುಪಡಿ ಮಾಡಿದ್ದು, ಮಾತೆ ಮಾಣಿಕೇಶ್ವರಿಯ ಪುತ್ರ ಅಂತ ದಾಖಲಾತಿ ಸಿದ್ಧಪಡಿಸಿದ್ದಾರೆ. ಈ ಮೂಲಕ ಮಠದ ಆಸ್ತಿ ಕಬಳಿಸಲು ಹೊಂಚು ಹಾಕಿದ್ದಾರೆ ಅಂತ ಮಾತೆ ಮಾಣಿಕೇಶ್ವರಿ ಅವರ ಪರಮ ಭಕ್ತ ಹಾಗೂ ಹಿಂದಿನಿಂದ ಆಡಳಿತ ಮಂಡಳಿ ಸದಸ್ಯರ ವಿರುದ್ಧ ಕಾನೂನು ಹೋರಾಟ ನಡೆಸುತ್ತಿರುವ ಶಿವಕುಮಾರ್ ಎಂಬವರು ಗಂಭೀರ ಆರೋಪ ಮಾಡಿದ್ದಾರೆ.

    ಈ ಹಿಂದೆ ಸಹ ಆಡಳಿತ ಮಂಡಳಿ ಸದಸ್ಯರು ಅಮ್ಮನವರನ್ನು ಗೃಹಬಂಧನದಲ್ಲಿಟ್ಟಿದ್ದಾರೆ ಎಂದು ಶಿವಕುಮಾರ್ ಕಲಬುರಗಿ ಹೈಕೋರ್ಟ್ ಪೀಠಕ್ಕೆ ಹೆಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿ ಟ್ರಸ್ಟ್ ಸದಸ್ಯರಿಗೆ ಬಿಸಿ ಮುಟ್ಟಿಸಿದ ನಂತರ ಅಮ್ಮನವರನ್ನು ಭಕ್ತರ ದರ್ಶನಕ್ಕೆ ಟ್ರಸ್ಟ್ ಸದಸ್ಯರು ಮುಂದಾಗಿದ್ದರು. ಇದೀಗ ಮತ್ತೆ ಟ್ರಸ್ಟಿ ವಿರುದ್ಧ ಆಸ್ತಿ ಕಬಳಿಕೆಯ ಆರೋಪವನ್ನು ಕೇಳಿ ಬಂದಿರುವುದು ಅಪಾರ ಭಕ್ತರಲ್ಲಿ ಚಿಂತೆಗೀಡಾಗಿದೆ.

    ಮಠದ ಪೀಠಾಧಿಪತಿ ಮತ್ತು ಮುಂದಿನ ಆಡಳಿತ ವ್ಯವಸ್ಥೆ ಬಗ್ಗೆ ಟ್ರಸ್ಟ್ ಕಾರ್ಯದರ್ಶಿ ಶಿವಯ್ಯ ಸ್ವಾಮಿ ಅವರನ್ನು ಕೇಳಿದ್ರೆ, ಇಲ್ಲಿ ನಾವೆಲ್ಲ ಸೇವಕಾರಾಗಿ ಬಂದಿದ್ದೇವೆ. ಸದ್ಯ ಯಾರೂ ಪೀಠದಲ್ಲಿ ಮುಂದುವರಿಯಲ್ಲ. ಆದರೆ ಟ್ರಸ್ಟ್ ಅಡಿಯಲ್ಲಿಯೇ ಎಲ್ಲ ನಡೆಸುವುದಾಗಿ ಹೇಳುತ್ತಿದ್ದಾರೆ. ಇಡೀ ವಿಶ್ವಕ್ಕೆ ದೀಪ ಬೆಳೆಗಿಸಿದ ಮಾತೆ ಮಾಣಿಕೇಶ್ವರಿ ಅಮ್ಮನವರ ಮಠದಲ್ಲಿ ಇದೀಗ ಆಸ್ತಿಯ ಕಲಹ ಆರಂಭವಾಗಿದೆ. ಈ ಮೂಲಕ ಯಾನಾಗುಂದಿ ಟ್ರಸ್ಟ್ ನಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಇದೀಗ ಮತ್ತೆ ದೃಢಪಟ್ಟಿದೆ.

  • ನ್ಯೂಯಾರ್ಕ್ ಮ್ಯೂಸಿಯಂಗೆ ಟ್ರಸ್ಟಿಯಾದ ನೀತಾ ಅಂಬಾನಿ

    ನ್ಯೂಯಾರ್ಕ್ ಮ್ಯೂಸಿಯಂಗೆ ಟ್ರಸ್ಟಿಯಾದ ನೀತಾ ಅಂಬಾನಿ

    ನ್ಯೂಯಾರ್ಕ್: ಶಿಕ್ಷಣ ತಜ್ಞೆ ಹಾಗೂ ಏಷ್ಯಾದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಅವರ ಪತ್ನಿ ನೀತಾ ಅಂಬಾನಿ ಅವರನ್ನು ಅಮೆರಿಕದ ಬಹುದೊಡ್ಡ ಕಲಾಕೇಂದ್ರವಾಗಿರುವ ನ್ಯೂಯಾರ್ಕ್ ಮೆಟ್ರೊಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್ಸ್​ಗೆ ಟ್ರಸ್ಟಿಯಾಗಿ ಆಯ್ಕೆ ಮಾಡಲಾಗಿದೆ.

    ಮಂಗಳವಾರ ನೀತಾ ಅಂಬಾನಿ ಅವರನ್ನು ಗೌರವಾನ್ವಿತ ಟ್ರಸ್ಟಿಯಾಗಿ ಆಯ್ಕೆ ಮಾಡಲಾಗಿದೆ ಎಂದು ಮ್ಯೂಸಿಯಂನ ಅಧ್ಯಕ್ಷ ಡೇನಿಯನ್ ಬ್ರಾಡ್ಸ್ಕಿ ಘೋಷಿಸಿದ್ದಾರೆ. ನೀತಾ ಅಂಬಾನಿ ಅವರು ಈ ಸ್ಥಾನಕ್ಕೆ ಆಯ್ಕೆ ಆದ ಮೊದಲ ಭಾರತೀಯ ಮಹಿಳೆಯಾಗಿರುವುದು ಹೆಮ್ಮೆಯ ವಿಷಯವಾಗಿದೆ.

    ಮೆಟ್ರೊಪಾಲಿಟನ್ ಕಲಾ ವಸ್ತು ಸಂಗ್ರಹಾಲಯದ ಮೇಲೆ ನೀತಾ ಅಂಬಾನಿ ತೋರುತ್ತಿರುವ ಬದ್ಧತೆ, ಭಾರತದ ಕಲೆ, ಸಂಸ್ಕೃತಿಯನ್ನು ಬೆಳೆಸುವ ಬಗ್ಗೆ ಅವರಿಗಿರುವ ಕಾಳಜಿ ನಿಜಕ್ಕೂ ಅದ್ಭುತವಾದದ್ದು. ಅವರ ಬೆಂಬಲ ಕಾಳಜಿಯಿಂದ ಮ್ಯೂಸಿಯಂನಲ್ಲಿ ದೇಶದ ವಿವಿಧ ಮೂಲೆಮೂಲೆಗಳ ಕಲೆ, ಸಂಸ್ಕೃತಿಗಳನ್ನು ಅಧ್ಯಯನ ಮಾಡಿ, ಪ್ರದರ್ಶಿಸಲು ಸಹಾಯಕವಾಗಿದೆ. ಜೊತೆಗೆ ಅವರು ಭಾರತದಲ್ಲಿ ಕ್ರೀಡೆಗೆ ನೀಡುತ್ತಿರುವ ಪ್ರೋತ್ಸಾಹ ನಿಜಕ್ಕೂ ಮೆಚ್ಚುವಂತಹದ್ದು. ಅವರನ್ನು ಮ್ಯೂಸಿಯಂಗೆ ಟ್ರಸ್ಟಿಯಾಗಿ ಆಯ್ಕೆ ಮಾಡಿರುವುದು ನಿಜಕ್ಕೂ ಖುಷಿಯ ವಿಷಯವಾಗಿದೆ ಎಂದು ಡೇನಿಯಲ್ ಬ್ರಾಡ್ಸ್ಕಿ ನೀತಾ ಅವರನ್ನು ಹೊಗಳಿದ್ದಾರೆ.

    ಈ ಮ್ಯೂಸಿಯಂ 149 ವರ್ಷಗಳ ಇತಿಹಾಸ ಹೊಂದಿದೆ. ಅಮೆರಿಕದ ನಾಗರಿಕರು, ಉದ್ಯಮಿಗಳು ಸೇರಿ ಇಲ್ಲಿನ ಜನರಿಗೆ ಕಲೆ ಮತ್ತು ಕಲಾ ಶಿಕ್ಷಣವನ್ನು ನೀಡುವ ಉದ್ದೇಶದಿಂದ ಈ ಮ್ಯೂಸಿಯಂ ಸ್ಥಾಪನೆ ಮಾಡಲಾಗಿದೆ. ಇಲ್ಲಿ ಪ್ರಪಂಚದ ಹಲವು ಪ್ರದೇಶಗಳ 5 ಸಾವಿರಕ್ಕೂ ಹೆಚ್ಚು ವರ್ಷಗಳ ಪುರಾತನ ಕಲೆಗಳನ್ನು ಬಿಂಬಿಸುವ ಸಾವಿರಾರು ಕಲಾ ವಸ್ತುಗಳು ಇವೆ. ಈ ಮ್ಯೂಸಿಯಂ ಈಗ ಅಪರೂಪದ, ಪ್ರಾಚೀನ ಹಾಗೂ ಸುಂದರ ವಸ್ತುಗಳ ಖಜಾನೆಯಾಗಿದೆ.

    ಈ ಹಿಂದೆ ನೀತಾ ಅಂಬಾನಿ ಅಂತರಾಷ್ಟ್ರೀಯ ಒಲಿಂಪಿಕ್ ಸಮಿತಿ(ಐಒಸಿ) ಸದಸ್ಯೆಯಾಗಿ ಆಯ್ಕೆ ಆಗಿದ್ದರು. ಈ ಮೂಲಕ ಈ ಸ್ಥಾನಕ್ಕೆ ಏರಿದ ಮೊದಲ ಭಾರತದ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದರು.