Tag: trupthi desai

  • ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಆಗುತ್ತಾ: ಪ್ರಶ್ನೆಗೆ ಶೋಭಾ ಕೊಟ್ಟ ಉತ್ತರ ಇದು

    ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಆಗುತ್ತಾ: ಪ್ರಶ್ನೆಗೆ ಶೋಭಾ ಕೊಟ್ಟ ಉತ್ತರ ಇದು

    ಉಡುಪಿ: ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಉದ್ದೇಶಪೂರ್ವಕವಾದ ಸುಳ್ಳುಸುದ್ದಿಯಾಗಿದೆ. ಈ ಬಗ್ಗೆ ಮಂಗಳೂರಿನ ಆರ್‍ಎಸ್‍ಎಸ್ ಬೈಠಕ್ ನಲ್ಲಿ ಚರ್ಚೆಯಾಗಿಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ಸ್ಪಷ್ಟನೆ ನೀಡಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಊಹಾಪೋಹ ಸುದ್ದಿಗಳು ಹರಿದಾಡುತ್ತಿದೆ. ಯಾರೋ ಉದ್ದೇಶ ಪೂರ್ವಕವಾಗಿ ಹುಟ್ಟು ಹಾಕಿದ ಸುಳ್ಳು ಸುದ್ದಿ ಇದಾಗಿದೆ ಎಂದು ಗರಂ ಆದರು.

    ರಾಜ್ಯದಲ್ಲಿ ಲೋಕಸಭಾ ಚುನಾವಣೆಗೆ ತಯಾರಿ ನಡೆಯುತ್ತಿರುವಾಗ ರಾಜ್ಯಾಧ್ಯಕ್ಷರ ಬದಲಾವಣೆ ಬಗ್ಗೆ ಚರ್ಚೆಗಳು ಆಗಲ್ಲ. ಈ ಬಗ್ಗೆ ಇಂದಿನವರೆಗೂ ಚರ್ಚೆಯಾಗಿಲ್ಲ. ಮಾಧ್ಯಮಗಳಲ್ಲಿ ಬರುವ ಚರ್ಚೆ ಸುಳ್ಳು ಮಾಹಿತಿಯಿಂದಾಗಿದೆ. ಬಿಜೆಪಿಯನ್ನು ಅಭದ್ರಗಿಳಿಸಲು ಯಾರೋ ಮಾಡುತ್ತಿರುವ ಯತ್ನ ಮತ್ತು ಷಡ್ಯಂತ್ರ ಇದು. ಇಂತಹ ಸುದ್ದಿ ಹಬ್ಬಿಸಿದವರು ಯಾರು ಎಂಬುದು ಗೊತ್ತಾಗುತ್ತಿಲ್ಲ ಎಂದರು.

    ತೃಪ್ತಿ ದೇಸಾಯಿ ವಿರುದ್ಧ ಗರಂ:
    ಇದೇ ಸಂದರ್ಭದಲ್ಲಿ ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ವಿಚಾರದ ಕುರಿತು ಹೋರಾಟಗಾರ್ತಿ ತೃಪ್ತಿ ದೇಸಾಯಿ ವಿರುದ್ಧ ಅವರು ಗುಡುಗಿದ್ದಾರೆ. ಕೊಚ್ಚಿ ವಿಮಾನನಿಲ್ದಾಣಕ್ಕೆ ತೃಪ್ತಿ ದೇಸಾಯಿ ಬಂದಿಳಿದಿದ್ದರೂ ಅವರು ಬಂದ ಸ್ಟೈಲ್ ಅಯ್ಯಪ್ಪ ಭಕ್ತೆಯಂತೆ ಕಾಣುತ್ತಿಲ್ಲ. ತೃಪ್ತಿ ಸ್ತ್ರೀವಾದಿಯ ಸೋಗಿನಲ್ಲಿ ಬಂದಿದ್ದಾರೆ. ದೇಶದಲ್ಲಿ ಪ್ರಚಾರ ಗಿಟ್ಟಿಸಲು ಅವರು ಆಗಮಿಸಿದ್ದು, ಅಯ್ಯಪ್ಪನ ಭಕ್ತರಾಗಿ ತೃಪ್ತಿದೇಸಾಯಿ ಕೇರಳಕ್ಕೆ ಬಂದಿಲ್ಲ ಅಂತ ವಾಗ್ದಾಳಿ ನಡೆಸಿದ್ದಾರೆ.

    ಇರುಮುಡಿ ಇಲ್ಲದೇ, ಉಪವಾಸ ವೃತ ಮಾಡಿಲ್ಲ. ಇರುಮುಡಿ ಇಲ್ಲದೆ, 41 ದಿನ ಉಪವಾಸ ಮಾಡದೇ ಬರಬಹುದು ಎಂದು ಕೋರ್ಟ್ ಹೇಳಿಲ್ಲ. ಹಿಂದೂ ಧರ್ಮ ಅವಹೇಳನ ಮಾಡುವವರು ದೇಶದಲ್ಲಿ ಇದ್ದಾರೆ. ಇಷ್ಟು ವರ್ಷ ಸಹಿಸಿಕೊಂಡು ಬಂದಿದ್ದೇವೆ. ಇನ್ನು ಸಹಿಸಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ದೇವಸ್ಥಾನದ ವಿಚಾರ ಭಕ್ತರಿಗೆ, ಪಂದಳ ರಾಜ, ಅರ್ಚಕರಿಗೆ ಬಿಡಬೇಕು. ಸುಪ್ರೀಂಕೋರ್ಟ್ ಅಯ್ಯಪ್ಪ ಭಕ್ತರ ಭಾವನೆಗೆ ಬೆಲೆ ಕೊಡಬೇಕು ಇದೇ ವೇಳೆ ಒತ್ತಾಯಿಸಿದ್ರು.

    ರಾಜ್ಯ ಸಕಾರದ ವಿರುದ್ಧ ಅಸಮಾಧಾನ:
    ಮಾಜಿ ಸಚಿವ ಜನಾರ್ದನ ರೆಡ್ಡಿ ಬಂಧನ ವಿಚಾರಕ್ಕೆ ಸಂಬಂಧಿಸಿದಂತೆ ಅವರು ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ರು. ಕರ್ನಾಟಕ ಸರ್ಕಾರ ಅಭಿವೃದ್ಧಿ ಕೆಲಸ ಮಾಡುತ್ತಿಲ್ಲ, ಅಭಿವೃದ್ಧಿ ಕೆಲಸದ ಕೂಗು ಮುಚ್ಚಿಹಾಕಲು ಯತ್ನವನ್ನು ಸರ್ಕಾರ ಮಾಡುತ್ತಿದೆ. ವಿಪಕ್ಷ ನಾಯಕರನ್ನು ಮಾತ್ರ ಟಾರ್ಗೆಟ್ ಮಾಡುತ್ತಿದ್ದಾರೆ. ರೆಡ್ಡಿ ನ್ಯಾಯಕ್ಕಾಗಿ ಕೋರ್ಟ್ ನಲ್ಲಿ ಫೈಟ್ ಮಾಡುತ್ತಿದ್ದಾರೆ. ರೆಡ್ಡಿ ಪ್ರಶ್ನೆಗಳಿಗೆ ಸರ್ಕಾರ ಉತ್ತರ ಕೊಡಬೇಕಾಗುತ್ತದೆ ಎಂದರು.

    ರೈತರ ಆತ್ಮಹತ್ಯೆ ನಿರಂತರ ನಡೆಯುತ್ತಿದೆ. ಸಾಲಮನ್ನಾ ಘೋಷಣೆಯಾಗಿದ್ದು, ಕಾರ್ಯರೂಪಕ್ಕೆ ಬಂದಿಲ್ಲ. ರಾಜ್ಯ ಸರ್ಕಾರ ಹುಟ್ಟಿದ ತಕ್ಷಣ ಸತ್ತಿದೆ ಎಂದು ವಾಗ್ದಾಳಿ ನಡೆಸಿದ ಅವರು, ಜನಾರ್ದನ ರೆಡ್ಡಿಯನ್ನು ನಾವು ಸಮರ್ಥಿಸುವುದಿಲ್ಲ, ರೆಡ್ಡಿಯನ್ನು ಸಮರ್ಥಿಸುವ ಅಗತ್ಯ ನಮಗೆ ಇಲ್ಲ. ಆದ್ರೆ ತರಾತುರಿ ಬಂಧನ ಮಾಡಿದ್ಯಾಕೆ ಎಂದು ಪ್ರಶ್ನಿಸಿದರು.

    ರಾಮಮಂದಿರ ನಿರ್ಮಾಣವಾಗಬೇಕು:
    ರಾಮ ಮಂದಿರ ಕುರಿತಾಗಿ ಮಾತನಾಡಿದ ಶೋಭಾ ಕರಂದ್ಲಾಜೆ, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಆಗಬೇಕು. ದೇಶದ ಜನರು ರಾಮಮಂದಿರ ಅಪೇಕ್ಷೆ ಪಟ್ಟಿದ್ದಾರೆ. ಮೋದಿ ನೇತೃತ್ವದಲ್ಲಿ ಸೂಕ್ತ ನಿರ್ಧಾರ ಆಗಲಿದೆ. ಆರ್ ಎಸ್ ಎಸ್ ದೇಶಾದ್ಯಂತ ಬೃಹತ್ ಸಮಾವೇಶ ಆಯೋಜಿಸಿದೆ. ಕೇಂದ್ರ ಸರ್ಕಾರ ಸೂಕ್ತ ತಿರ್ಮಾನ ತೆಗೆದುಕೊಳ್ಳಲಿದೆ. ಸುಪ್ರೀಂ ಕೋರ್ಟ್ ನಿಧಾನಗತಿ ಮಾಡಬಾರದು ಎಂದ ಅವರು, ಪುರಾತನ ಕೇಸುಗಳೆಲ್ಲ ಸುಪ್ರೀಂನಲ್ಲಿ ನಿರ್ಧಾರವಾಗಿದೆ. ಭಕ್ತರ ಭಾವನೆಗೆ ಕೋರ್ಟ್ ಸ್ಪಂದಿಸಬೇಕು ಎಂದು ಶೋಭಾ ಕರಂದ್ಲಾಜೆ ಒತ್ತಾಯಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews