Tag: trump

  • ಲಡಾಕ್ ಗಡಿಯಲ್ಲಿ ಉದ್ವಿಗ್ನತೆ- ಟ್ರಂಪ್ ಜೊತೆ ಮೋದಿ ಮಾತುಕತೆ ನಡೆಸಿಲ್ಲ

    ಲಡಾಕ್ ಗಡಿಯಲ್ಲಿ ಉದ್ವಿಗ್ನತೆ- ಟ್ರಂಪ್ ಜೊತೆ ಮೋದಿ ಮಾತುಕತೆ ನಡೆಸಿಲ್ಲ

    ನವದೆಹಲಿ: ಭಾರತ- ಚೀನಾ ಗಡಿಯಲ್ಲಿ ಉದ್ವಿಗ್ನ ವಾತಾವರಣ ವಿಚಾರಕ್ಕೆ ಸಂಬಂಧಿಸಿದಂತೆ ಅಮೆರಿಕದ ಜೊತೆ ಯಾವುದೇ ಚರ್ಚೆ ನಡೆದಿಲ್ಲ. ಡೊನಾಲ್ಡ್ ಟ್ರಂಪ್ ಜೊತೆಗೆ ಪ್ರಧಾನಿ ಮೋದಿ ಮಾತನಾಡಿಲ್ಲ ಎಂದು ಕೇಂದ್ರ ಸರ್ಕಾರದ ಮೂಲಗಳು ಸ್ಪಷ್ಟಪಡಿಸಿವೆ.

    ಪ್ರಧಾನಿ ನರೇಂದ್ರ ಮೋದಿ ಜೊತೆಗೆ ನಾನು ಮಾತುಕತೆ ನಡೆಸಿದ್ದು ಚೀನಾ ವಿರುದ್ಧ ಅಸಮಾಧಾನ ಹೊರ ಹಾಕಿದ್ದರು. ಗಡಿಯಲ್ಲಿನ ಬೆಳವಣಿಗೆಯಿಂದ ಪ್ರಧಾನಿ ಮೋದಿ ಉತ್ತಮ ಮನಸ್ಥಿತಿಯಲ್ಲಿಲ್ಲ. ಎರಡು ದೇಶಗಳು ಒಪ್ಪಿಕೊಂಡರೇ ನಾವು ಮಧ್ಯಸ್ಥಿಕೆ ವಹಿಸಲಿದ್ದೇವೆ ಎಂದು ಡೊನಾಲ್ಡ್ ಟ್ರಂಪ್ ಅಮೆರಿಕದ ಶ್ವೇತ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು.

    ಈ ವರದಿ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ಕೇಂದ್ರ ಸರ್ಕಾರ, ಇತ್ತಿಚೇಗೆ ಅಮೆರಿಕದ ಜೊತೆಗೆ ಯಾವುದೇ ಮಾತುಕತೆ ನಡೆದಿಲ್ಲ, ಟ್ರಂಪ್ ಜೊತೆಗೆ ಪ್ರಧಾನಿ ಮೋದಿ ಕೊನೆಯದಾಗಿ ಏಪ್ರಿಲ್ 4 ರಂದು ಹೈಡ್ರಾಕ್ಸಿಕ್ಲೋರೊಕ್ವಿನ್ ಸಂಬಂಧ ಮಾತುಕತೆ ನಡೆಸಿದ್ದರು. ಇದಾದ ಬಳಿಕ ಉಭಯ ನಾಯಕರ ನಡುವೆ ನಡೆದಿಲ್ಲ ಎಂದು ಸ್ಪಷ್ಟನೆ ನೀಡಿದೆ. ಈ ಮೂಲಕ ಡೊನಾಲ್ಡ್ ಟ್ರಂಪ್ ಹೇಳಿಕೆಗೆ ಭಾರತ ತದ್ವಿರುದ್ಧದ ಹೇಳಿಕೆ ನೀಡಿದೆ.

    ಭಾರತದ ವಿದೇಶಾಂಗ ಸಚಿವಾಲಯ ಚೀನಾದ ಜೊತೆಗೆ ನೇರ ಸಂಪರ್ಕದಲ್ಲಿದೆ ರಾಜತಾಂತ್ರಿಕ ಸಂಪರ್ಕ ಹೊಂದಿದ್ದೇವೆ ಈ ಸಮಸ್ಯೆಯನ್ನು ಭಾರತ ಪರಿಹರಿಸಿಕೊಳ್ಳಲಿದೆ ಎನ್ನುವ ಮೂಲಕ ಅಮೆರಿಕದ ಮಧ್ಯಸ್ಥಿಕೆ ಪ್ರಸ್ತಾಪವನ್ನು ಮತ್ತೊಮ್ಮೆ ತಳ್ಳಿ ಹಾಕಿದೆ.

  • ಭಾರತದಲ್ಲಿ ಜೋರಾಯ್ತು ಕೊರೊನಾ ರಣಕೇಕೆ- ನೂರರ ಗಡಿ ದಾಟಿದ ಸೋಂಕಿತರ ಸಂಖ್ಯೆ

    ಭಾರತದಲ್ಲಿ ಜೋರಾಯ್ತು ಕೊರೊನಾ ರಣಕೇಕೆ- ನೂರರ ಗಡಿ ದಾಟಿದ ಸೋಂಕಿತರ ಸಂಖ್ಯೆ

    – ಮಹಾರಾಷ್ಟ್ರದಲ್ಲಿ ಮತ್ತೋರ್ವ ಬಲಿ ಶಂಕೆ
    – ರಾಜ್ಯದಲ್ಲಿ ಸೋಂಕಿತರೆಷ್ಟು?

    ಬೆಂಗಳೂರು: ಚೀನಾ ಕಾಯಿಲೆ ದಿನದಿಂದ ದಿನಕ್ಕೆ ಭಾರತವನ್ನ ಆಕ್ರಮಿಸಿಕೊಳ್ತಿದೆ. ದೇಶದಲ್ಲಿ ಕಿಲ್ಲರ್ ಕೊರೊನಾ ಸೋಂಕಿತರ ಸಂಖ್ಯೆ 101ಕ್ಕೆ ಏರಿಕ್ಕೆ ಆಗಿದ್ದು, ಇಬ್ಬರು ಬಲಿಯಾಗಿದ್ದಾರೆ. 4 ಸಾವಿರ ಮಂದಿಯ ಮೇಲೆ ನಿಗಾ ಇಡಲಾಗಿದೆ.

    ಮಹಾರಾಷ್ಟ್ರದಲ್ಲಿ ಮತೋರ್ವ ಕೊರೊನಾಗೆ ಸಾವನ್ನಪ್ಪಿರುವ ಶಂಕೆ ಇದೆ. ತೆಲಂಗಾಣ, ಛತ್ತೀಸ್‍ಗಢ, ಪಶ್ಚಿಮ ಬಂಗಾಳದಲ್ಲಿ ಮಾರ್ಚ್ 31ರವರೆಗೆ ಬಂದ್ ಮಾಡಲಾಗಿದೆ. ಭಾರತ-ಬಾಂಗ್ಲಾದೇಶ, ಭಾರತ-ನೇಪಾಳ, ಭಾರತ-ಭೂತಾನ್, ಭಾರತ-ಮ್ಯಾನ್ಮಾರ್ ಗಡಿ ಕೂಡ ಏಪ್ರಿಲ್ 16 ವರೆಗೂ ಬಂದ್ ಮಾಡಿ ಆದೇಶ ಹೊರಡಿಸಲಾಗಿದ್ದು, ರಾಜತಾಂತ್ರಿಕರು, ಅಧಿಕಾರಿಗಳಿಗೆ ಮಾತ್ರ ಗಡಿ ದಾಟುವ ಅವಕಾಶ ಮಾಡಿಕೊಡಲಾಗಿದೆ.

    ಕೊರೊನಾ ಟೆಸ್ಟ್ ಗೆ ಹೆದರಿ ಕೇರಳ ಆಸ್ಪತ್ರೆಯಿಂದ ಓಡಿ ಹೋಗಿದ್ದ ಅಮೆರಿಕದ ದಂಪತಿ ಕೊಚ್ಚಿ ಏರ್‍ಪೋರ್ಟಿನಲ್ಲಿ ಪತ್ತೆಯಾಗಿದ್ದು, ಮತ್ತೆ ವಿಶೇಷ ವಾರ್ಡ್‍ಗೆ ಶಿಫ್ಟ್ ಮಾಡಿ, ಪರೀಕ್ಷೆಗೆ ಒಳಪಡಿಸಲಾಗಿದೆ. ಈ ನಡುವೆ ಭಾರತೀಯ ರೈಲ್ವೆ ಇಲಾಖೆ ಕೂಡ ಮುನ್ನೆಚ್ಚರಿಕೆ ವಹಿಸಿದ್ದು, ವೈರಸ್ ಹರಡುವ ಭೀತಿಯಿಂದ ತನ್ನ ಪ್ರಯಾಣಿಕರಿಗೆ ಬೆಡ್‍ಶೀಟ್, ಕಾಟನ್ಸ್ ಕೊಡದಿರಲು ನಿರ್ಧರಿಸಿದೆ. ಇದನ್ನೂ ಓದಿ: ಇಟಲಿ, ಡೆನ್ಮಾರ್ಕ್ ಬಳಿಕ ಕುವೈತ್ ಸಂಪೂರ್ಣ ಬಂದ್

    ಕೊರೊನಾ ವಿರುದ್ಧ ಹೋರಾಡಲು ಸಾರ್ಕ್ ಮೂಲಕ ಕಾರ್ಯತಂತ್ರ ರೂಪಿಸಬೇಕೆಂಬ ಪ್ರಧಾನಿ ಮೋದಿ ಕರೆಗೆ ಪಾಕಿಸ್ತಾನ ಸೇರಿ ಎಲ್ಲಾ ರಾಷ್ಟ್ರಗಳು ಒಗ್ಗೂಡಿವೆ. ಇಂದು ಸಂಜೆ 5 ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಾರ್ಕ್ ನಾಯಕರ ಜತೆ ಚರ್ಚೆ ನಡೆಸಲಿದ್ದಾರೆ. ಕೊರೊನಾ ಸೋಂಕು ವ್ಯಾಪಕವಾಗ್ತಿದ್ದಂತೆ ಪರೀಕ್ಷೆಗೆ ಒಳಗಾಗಿದ್ದ ಅಮೆರಿಕ ಅಧ್ಯಕ್ಷ ಟ್ರಂಪ್ ನೆಗೆಟಿವ್ ಬಂದಿದೆ ಎಂದು ವೈಟ್‍ಹೌಸ್ ವೈದ್ಯರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಕೇರಳ ಆಸ್ಪತ್ರೆಯಿಂದ ಓಡಿ ಹೋಗಿದ್ದ ಅಮೆರಿಕ ದಂಪತಿ ಕೊನೆಗೂ ಪತ್ತೆ

    ಕರ್ನಾಟಕದಲ್ಲಿ ಕೊರೊನಾ ಶಂಕಿತರು:
    ಬೆಂಗಳೂರಲ್ಲಿ 9 ಮಂದಿ, ಹಾಸನದಲ್ಲಿ ನಾಲ್ವರು, ದಕ್ಷಿಣ ಕನ್ನಡದಲ್ಲಿ 7 ಮಂದಿ, ಕಲಬುರಗಿಯಲ್ಲಿ ನಾಲ್ವರು, ಉಡುಪಿಯಲ್ಲಿ ಇಬ್ಬರು, ಬಳ್ಳಾರಿಯಲ್ಲಿ ಓರ್ವ, ಚಿಕ್ಕಮಗಳೂರಿನಲ್ಲಿ ಇಬ್ಬರು, ಕೊಡಗಿನಲ್ಲಿ ಓರ್ವ ಹಾಗೂ ಬೀದರ್ ನಲ್ಲಿ ಇಬ್ಬರ ಮೇಲೆ ಕೊರೊನಾ ಶಂಕೆ ವ್ಯಕ್ತವಾಗಿದೆ.

  • ಒಬಾಮಾ ಬಂದಿದ್ದಾಗ ಕಾಂಗ್ರೆಸ್ ಸೈಲೆಂಟಾಗಿದ್ಯಾಕೆ: ನಳೀನ್ ಕುಮಾರ್ ಕಟೀಲ್ ಪ್ರಶ್ನೆ

    ಒಬಾಮಾ ಬಂದಿದ್ದಾಗ ಕಾಂಗ್ರೆಸ್ ಸೈಲೆಂಟಾಗಿದ್ಯಾಕೆ: ನಳೀನ್ ಕುಮಾರ್ ಕಟೀಲ್ ಪ್ರಶ್ನೆ

    ಉಡುಪಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಭೇಟಿಯಿಂದ ಭಾರತ-ಅಮೆರಿಕ ಸಂಬಂಧ ಗಟ್ಟಿಯಾಗಿದೆ. ಅಭಿವೃದ್ಧಿಗೆ ಈ ಭೇಟಿ ಪೂರಕ ಮತ್ತು ಮಹತ್ವದ್ದು ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದರು.

    ಉಡುಪಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇಡೀ ಜಗತ್ತು ಭಾರತದ ಕಡೆ ನೋಡುತ್ತಿದೆ. ಭಾರತೀಯ ಸಂಸ್ಕೃತಿ ಮೋದಿಯಿಂದ ಜಗತ್ತಿಗೆ ಪರಿಚಯ ಆಗುತ್ತಿದೆ. ಟ್ರಂಪ್ ಪ್ರವಾಸ ಗುಜರಾತ್‍ನಿಂದ ಆರಂಭವಾಗುತ್ತಿದ್ದು, ಭಾರತ ಮತ್ತು ಅಮೆರಿಕ ಸಂಬಂಧ ಮತ್ತಷ್ಟು ಗಟ್ಟಿ ಆಗಲಿದೆ ಎಂದರು.

    ಭಾರತಕ್ಕೆ ಎಲ್ಲಾ ನೆರವು ಅಮೆರಿಕದಿಂದ ಸಿಗಲಿದೆ. ವಿಪಕ್ಷಗಳು ವಿರೋಧ ಮಾಡಬೇಕೆಂದು ವಿರೋಧ ಮಾಡುತ್ತಿದೆ. ಬಿಜೆಪಿಯನ್ನು ಟೀಕೆ ಮಾಡುವುದು ಕಾಂಗ್ರೆಸ್ ಜಾಯಮಾನ. ಕಾಂಗ್ರೆಸ್ ಬೌದ್ಧಿಕ ದಿವಾಳಿಯಾಗಿದೆ. ರಾಷ್ಟ್ರದ ಪರಿಕಲ್ಪನೆ ಕಾಂಗ್ರೆಸ್ಸಿಗೆ ಇಲ್ಲ. ಕಾಂಗ್ರೆಸ್ ಆಡಳಿತ ಇರುವಾಗ ಒಬಾಮಾ ಬಂದಿಲ್ವಾ? ಒಬಾಮಾ ಲೋಕಸಭೆಯಲ್ಲಿ ಭಾಷಣ ಮಾಡಿದ್ದಾಗ ಕಾಂಗ್ರೆಸ್ ಆವಾಗ ಕಣ್ಮುಚ್ಚಿ ಕೂತಿದ್ಯಾಕೆ ಎಂದು ಪ್ರಶ್ನೆ ಮಾಡಿದರು.

  • ಡ್ಯಾಶ್, ಡ್ಯಾಶ್, ಡ್ಯಾಶ್ – ಸಿದ್ದು ವಿರುದ್ಧ ಸಿಟಿ ರವಿ ವ್ಯಂಗ್ಯ

    ಡ್ಯಾಶ್, ಡ್ಯಾಶ್, ಡ್ಯಾಶ್ – ಸಿದ್ದು ವಿರುದ್ಧ ಸಿಟಿ ರವಿ ವ್ಯಂಗ್ಯ

    ಚಿಕ್ಕಮಗಳೂರು: ರಾಜ್ಯದ ಕೆಲವೆಡೆ ಗೋ ಬ್ಯಾಕ್ ಟ್ರಂಪ್ ಚಳುವಳಿ ನಡೆಯುತ್ತಿರುವ ಹಿನ್ನೆಲೆ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಗೋ ಬ್ಯಾಕ್ ಅನ್ನುವವರಿಗೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

    ನಗರದ ಜಿಲ್ಲಾ ಪಂಚಾಯಿತಿಯಲ್ಲಿ ಚಿಕ್ಕಮಗಳೂರು ಉತ್ಸವದ ಅಂಗವಾಗಿ ನಡೆಸಿದ ಸುದ್ದಿಗೋಷ್ಠಿ ಬಳಿಕ ಮಾತನಾಡಿದ ಅವರು, ಹುಟ್ಟುವಾಗಲೇ ದ್ವೇಷ ಹೊತ್ತುಕೊಂಡು ಬಂದವರು ಈ ರೀತಿ ವಿರೋಧ ಮಾಡುತ್ತಾರೆ. ಅವರಿಗೆ ಏಕೆ ತಲೆಕೆಡಿಸಿಕೊಳ್ಳಬೇಕು. ಆನೆ ಹೋಗುತ್ತಿರುತ್ತದೆ ಡ್ಯಾಶ್, ಡ್ಯಾಶ್, ಡ್ಯಾಶ್ ಎಂದು ವ್ಯಂಗ್ಯವಾಡಿದ್ದಾರೆ.

    ಇದೇ ವೇಳೆ ರವಿ ಕ್ಯಾಸಿನೋ ಆಡಿರಬೇಕು ಎಂಬ ಸಿದ್ದರಾಮಯ್ಯ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ ಸಿ.ಟಿ.ರವಿ, ಸಿದ್ದರಾಮಯ್ಯಗೆ 70 ವರ್ಷ ಕ್ರಾಸ್ ಆಗಿದೆ. ಅವರು ದೊಡ್ಡವರು. ಯಾರ್ಯಾರು ಮೂರು ಮೂರು ದಿನ ಹೊರಗೆ ಬರುತ್ತಿರಲಿಲ್ಲ ಎಂದು ಅವರು ಅವಲೋಕನ ಮಾಡಿಕೊಳ್ಳಲಿ ಎಂದು ಟಾಂಗ್ ನೀಡಿದ್ದಾರೆ.

    ಯಾರ್ಯಾರ ಫ್ರೆಂಡ್ಸ್ ಸರ್ಕಲ್ ಹೇಗಿದೆ. ತಟ್ಟೋಕೆ ಕೂತ್ರೆ ಮೂರು ದಿನ ಹೊರಗೆ ಬರದೇ ಇದ್ದೋರು ಯಾರು ಎಂದು ಸಿದ್ದರಾಮಯ್ಯ ಅವಲೋಕನ ಮಾಡಿಕೊಳ್ಳಲಿ. ಅವಲೋಕನ ಮಾಡಿಕೊಂಡಾಗ ಆರೋಪ ಮಾಡುವವರು ಎಷ್ಟು ಸಾಚಾ ಎಂದು ಗೊತ್ತಾಗುತ್ತೆ ಎಂದು ಸಿದ್ದು ವಿರುದ್ಧ ಸಚಿವ ಸಿ.ಟಿ.ರವಿ ಕಿಡಿಕಾರಿದರು.

  • ಕಲಾ ತಂಡದಿಂದ ನೃತ್ಯ, ಟ್ರಂಪ್‍ಗೆ ಮೋದಿಯಿಂದ ಪ್ರೀತಿಯ ಅಪ್ಪುಗೆ

    ಕಲಾ ತಂಡದಿಂದ ನೃತ್ಯ, ಟ್ರಂಪ್‍ಗೆ ಮೋದಿಯಿಂದ ಪ್ರೀತಿಯ ಅಪ್ಪುಗೆ

    ಅಹಮದಾಬಾದ್: 2 ದಿನಗಳ ಕಾಲ ಭಾರತದ ಪ್ರವಾಸಕ್ಕೆ ಆಗಮಿಸಿದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ಭವ್ಯವಾದ ಸ್ವಾಗತ ನೀಡಲಾಯಿತು.

    ಬೆಳಗ್ಗೆ 11.36ಕ್ಕೆ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆದ ಏರ್ ಫೋರ್ಸ್ ವಿಮಾನದಿಂದ ಆರಂಭದಲ್ಲಿ ಪುತ್ರಿ ಇವಾಂಕ ಟ್ರಂಪ್ ಕೆಳಗಡೆ ಇಳಿದರು.

    ಇವಾಂಕ ಇಳಿದ ಬಳಿಕ ವಿಮಾನ ನಿಲ್ದಾಣಕ್ಕೆ ಕಾರಿನಲ್ಲಿ ಪ್ರಧಾನಿ ಮೋದಿ ಆಗಮಿಸಿದರು. ಮೋದಿ ಬಂದ ನಂತರ ವಿಮಾನದಿಂದ ಡೊನಾಲ್ಡ್ ಟ್ರಂಪ್, ಪತ್ನಿ ಮೆಲಾನಿಯಾರೊಂದಿಗೆ ಕೆಳಗಡೆ ಇಳಿದರು.

    ಭಾರತದ ನೆಲಕ್ಕೆ ಕಾಲಿಟ್ಟ ಕೂಡಲೇ ಪ್ರಧಾನಿ ಮೋದಿ ಟ್ರಂಪ್ ಅವರನ್ನು ಅಪ್ಪಿಕೊಂಡು ಬರಮಾಡಿಕೊಂಡರು. ನಂತರ ಮೋದಿ ಅಧಿಕಾರಿ ವರ್ಗದ ಸದಸ್ಯರನ್ನು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರನ್ನು ಟ್ರಂಪ್ ಅವರಿಗೆ ಪರಿಚಯಿಸಿದರು.

    ನಡೆದುಕೊಂಡು ಬರುತ್ತಿದ್ದಂತೆ ಸೇನೆಯಿದ ಟ್ರಂಪ್ ಅವರಿಗೆ ಗೌರವ ವಂದನೆ ನೀಡಲಾಯಿತು. ಈ ಸಂದರ್ಭದಲ್ಲಿ ಗುಜರಾತಿನ ಸಾಂಸ್ಕತಿಕ  ಕಲಾ ತಂಡದ ಸದಸ್ಯರು ನೃತ್ಯದ ಮೂಲಕ ಟ್ರಂಪ್ ಅವರನ್ನು ಸ್ವಾಗತಿಸಿದರು.

  • ಟ್ರಂಪ್‍ಗೆ ಹೈ ಸೆಕ್ಯೂರಿಟಿ – 1,2,3….14 ಬೆಂಗಾವಲು ವಾಹನಗಳ ವಿಶೇಷತೆ ಏನು? ಯಾವುದರಲ್ಲಿ ಏನಿದೆ?

    ಟ್ರಂಪ್‍ಗೆ ಹೈ ಸೆಕ್ಯೂರಿಟಿ – 1,2,3….14 ಬೆಂಗಾವಲು ವಾಹನಗಳ ವಿಶೇಷತೆ ಏನು? ಯಾವುದರಲ್ಲಿ ಏನಿದೆ?

    ಸೋಮವಾರದಿಂದ ಡೊನಾಲ್ಡ್ ಟ್ರಂಪ್ ಅವರ ಭಾರತದ ಅಧಿಕೃತ ಪ್ರವಾಸ ಆರಂಭಗೊಳ್ಳಲಿದ್ದು ಈಗಾಗಲೇ ಅವರ ಭದ್ರತೆಗೆ ನಿಯೋಜನೆಗೊಂಡಿರುವ ಬೆಂಗಾವಲು ವಾಹನಗಳು ಗುಜರಾತಿನ ಅಹಮದಾಬಾದಿಗೆ ಬಂದಿಳಿದಿದೆ.

    ಅಮೆರಿಕದ ಅಧ್ಯಕ್ಷರು ಬಳಸುವ ಅಧಿಕೃತ ‘ಬೀಸ್ಟ್’ ಕಾರು ಸೇರಿದಂತೆ 14 ವಾಹನಗಳು ರಸ್ತೆಯಲ್ಲಿ ಸಂಚರಿಸಲಿವೆ. ಈ ವಾಹನಗಳು ಈಗಾಗಲೇ ವಿಶೇಷ ಕಾರ್ಗೋ ವಿಮಾನದ ಮೂಲಕ ಲ್ಯಾಂಡ್ ಆಗಿದೆ. ಈ 14 ವಾಹನಗಳ ವಿಶೇಷತೆ ಏನು ಇತ್ಯಾದಿ ವಿವರಗಳನ್ನು ಇಲ್ಲಿ ನೀಡಲಾಗಿದೆ.

    1. ಸ್ವೀಪರ್ಸ್:
    14 ಬೆಂಗಾವಲು ಪಡೆಯ ವಾಹನಗಳು ಒಟ್ಟೊಟ್ಟಿಗೆ ರಸ್ತೆಯಲ್ಲಿ ಸಂಚರಿಸುವಾಗ ಆರಂಭದಲ್ಲಿ ಬೈಕ್ ನಲ್ಲಿ  ಪೊಲೀಸ್ ಸಿಬ್ಬಂದಿ ಸಂಚರಿಸುತ್ತಾರೆ. ರಸ್ತೆಯ ಬದಿಯಲ್ಲಿ ಜನರಿದ್ದರೆ , ಆ ವ್ಯಕ್ತಿಗಳು ರಸ್ತೆಗೆ ಬಾರದಂತೆ ತಡೆದು ನಿಲ್ಲಿಸಿ ಸುಗಮ ಸಂಚಾರಕ್ಕೆ ಈ ಸಿಬ್ಬಂದಿ ಅನುವು ಮಾಡಿಕೊಡುತ್ತಾರೆ.

    2. ರೂಟ್ ಕಾರ್:
    ಬೆಂಗಾವಲು ಪಡೆಯಲ್ಲಿ ಮೊದಲು ಈ ಕಾರು ಕಾಣಿಸುತ್ತದೆ. ಸಂಪೂರ್ಣವಾಗಿ ಬೆಂಗಾವಲು ಪಡೆಯನ್ನು ಈ ಕಾರು ಮುನ್ನಡೆಸುತ್ತದೆ. ಸಾಧಾರಣವಾಗಿ ದುಬಾರಿ ಬೆಲೆಯ ಎಸ್‍ಯುವಿ(ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್) ಅಥವಾ ಹೈ ಎಂಡ್ ಸೆಡಾನ್ ಕಾರು ಇರುತ್ತದೆ. ಟ್ರಂಪ್ ಅವಧಿಯಲ್ಲಿ ಬಿಎಂಡಬ್ಲ್ಯೂ ಸೆಡಾನ್ ಕಾರು ಹಲವು ಬಾರಿ ರೂಟ್ ಕಾರ್ ಆಗಿ ಬಳಕೆಯಾಗಿದೆ.

    3. ಲೀಡ್ ಕಾರ್:
    ಹೆಸರೇ ಹೇಳುವಂತೆ ಟ್ರಂಪ್ ಕಾರಿಗೆ ಭದ್ರತೆ ನೀಡುವ ಕಾರು. ಈ ಕಾರಿನಲ್ಲಿ ಭದ್ರತಾ ಸಿಬ್ಬಂದಿ ಕುಳಿತಿರುತ್ತಾರೆ. ಶಸ್ತ್ರ ಸಜ್ಜಿತ ಎಸ್‍ಯುವಿ ಶೆವರ್ಲೆಟ್ ಸಬ್ ಅರ್ಬನ್ ಕಾರನ್ನು ಬಳಕೆ ಮಾಡಲಾಗುತ್ತದೆ.

    4. ದಿ ಡಿಕೊಯ್ ಕಾರ್:
    ಒಂದು ವೇಳೆ ಬೀಸ್ಟ್ ಕಾರಿನ ಮೇಲೆ ದಾಳಿ ನಡೆದರೆ ಅಧ್ಯಕ್ಷರನ್ನು ಪಾರು ಮಾಡಲೆಂದು ಈ ಕಾರನ್ನು ಬಳಸಲಾಗುತ್ತದೆ. ಬೀಸ್ಟ್ ಕಾರಿನ ಮುಂದೆ ಈ ಕಾರು ಸಂಚರಿಸುತ್ತಿರುತ್ತದೆ. ಬೀಸ್ಟ್ ಕಾರಿನಲ್ಲಿ ಏನೇಲ್ಲ ವಿಶೇಷತೆಗಳು ಇದೆಯೋ ಅದೆಲ್ಲವೂ ಈ ಕಾರಿನಲ್ಲಿ ಇರುತ್ತದೆ.

    5. ದಿ ಬೀಸ್ಟ್ ಕಾರು:
    ಯಾವುದೇ ವಿದೇಶ ಪ್ರವಾಸ ಕೈಗೊಂಡರೂ ಅಮೆರಿಕದ ಅಧ್ಯಕ್ಷರು ರಸ್ತೆಯಲ್ಲಿ ಈ ಕಾರಿನ ಮೂಲಕವೇ ಸಂಚರಿಸುತ್ತಾರೆ. ಶಸ್ತ್ರ ಸಜ್ಜಿತ ಕಾರು ಇದಾಗಿದ್ದು ಯಾವುದೇ ಅಪಾಯವನ್ನು ಎದುರಿಸುವ ಸಾಮರ್ಥ್ಯವನ್ನು ಹೊಂದಿದೆ. ಇದನ್ನೂ ಓದಿ: ಟ್ರಂಪ್ ಜೊತೆಗೆ ಭಾರತಕ್ಕೆ ಬರುತ್ತಿದೆ ದಿ ಬೀಸ್ಟ್ ಕಾರ್- ಕಾರಿನ ವಿಶೇಷತೆ ಏನು? ಮೈಲೇಜ್ ಎಷ್ಟು?

    6. ಹಾಫ್‍ಬ್ಯಾಕ್:
    ಬೀಸ್ಟ್ ಕಾರಿನ ಹಿಂದೆ ಹಾಫ್‍ಬ್ಯಾಕ್ ಕಾರು ಸಂಚರಿಸುತ್ತದೆ. ಈ ಕಾರಿನಲ್ಲಿ ಅಮೆರಿಕ ಸೀಕ್ರೇಟ್ ಸರ್ವಿಸ್ ಅಧಿಕಾರಿಗಳು ಸಂಚರಿಸುತ್ತಾರೆ. ಭದ್ರತಾ ಉದ್ದೇಶದಿಂದಾಗಿ ಹಲವು ಕಾರುಗಳನ್ನು ಬಳಕೆ ಮಾಡಲಾಗುತ್ತದೆ. ಈ ಎಸ್‍ಯುವಿ ಕಾರುಗಳು ಶಸ್ತ್ರ ಸಜ್ಜಿತವಾಗಿ ಇರುತ್ತದೆ.


    7. ವಾಚ್ ಟವರ್:
    ವಿಶ್ವದ ದೊಡ್ಡಣ್ಣ ಅಮೆರಿಕ ಆದ ಕಾರಣ ಅಧ್ಯಕ್ಷರಿಗೆ ಯಾವಾಗಲೂ ಶತ್ರುಗಳಿಂದ ಬೆದರಿಕೆ ಇದ್ದೆ ಇರುತ್ತದೆ. ಈ ಬೆದರಿಕೆ ಮಟ್ಟ ಹಾಕಲು ಅಧ್ಯಕ್ಷರು ಸಂಚರಿಸುವ ಸಂದರ್ಭದಲ್ಲಿ ವಾಚ್ ಟವರ್ ವಾಹನ ಸಂಚರಿಸುತ್ತದೆ. ಮೇಲುಗಡೆ ದೊಡ್ಡ ಏರಿಯಲ್ ಗಳು ಮತ್ತು ಒಂದು ಗುಮ್ಮಟ ಇರುತ್ತದೆ. ಇದರಲ್ಲಿ ಸಿಗ್ನಲ್ ಜಾಮರ್ ಗಳು, ರೇಡಾರ್ ಜಾಮ್ ಮಾಡುವ ವ್ಯವಸ್ಥೆ ಇದೆ. ಅಷ್ಟೇ ಅಲ್ಲದೇ ಶ್ವೇತಭವನ ಮತ್ತು ಪೆಂಟಾಗನ್(ಅಮೆರಿಕದ ರಕ್ಷಣಾ ಇಲಾಖೆಯ ಕೇಂದ್ರ ಕಚೇರಿ ಇರುವ ಸ್ಥಳ) ಜೊತೆ ನೇರ ಸಂಪರ್ಕ ಸಾಧಿಸುವ ವ್ಯವಸ್ಥೆ ಇರುತ್ತದೆ. ಫೋರ್ಡ್ ಕಂಪನಿಯ ಕಸ್ಟಮೈಸ್ಡ್ ಎಸ್‍ಯುವಿ ಕಾರು ವಾಚ್ ಟವರ್ ಆಗಿ ಕಾರ್ಯನಿರ್ವಹಿಸುತ್ತದೆ.

    8. ಕಂಟ್ರೋಲ್ ಕಾರು:
    ಈ ಕಾರಿನಲ್ಲಿ ಅಧ್ಯಕ್ಷರ ಸಿಬ್ಬಂದಿ, ವೈದ್ಯರು, ಮಿಲಿಟರಿ ಸಿಬ್ಬಂದಿ ಇರುತ್ತಾರೆ.

    9. ಭದ್ರತಾ ಪಡೆಯ ಕಾರು:
    ಅಮೆರಿಕ ಸಿಕ್ರೇಟ್ ಸರ್ವಿಸ್ ಯೋಧರು ಈ ಕಾರಿನಲ್ಲಿ ತೆರಳುತ್ತಿರುತ್ತಾರೆ. ಇದನ್ನೂ ಓದಿ: ‘ನಾನು ಬಾಹುಬಲಿ’ ಎಂದ ಡೊನಾಲ್ಡ್ ಟ್ರಂಪ್ – ವಿಡಿಯೋ ವೈರಲ್

    10. ಪ್ರೆಸ್ ಬಸ್:
    ಅಮರಿಕದ ಪ್ರಮುಖ ಮಾಧ್ಯಮಗಳ ಪತ್ರಕರ್ತರು, ಶ್ವೇತ ಭವನದ ಮಾಧ್ಯಮ ತಂಡದ ಸದಸ್ಯರು ಇರುತ್ತಾರೆ.

    11. ಅಪಾಯವನ್ನು ತಪ್ಪಿಸುವ ವಾಹನ
    ಅಣ್ವಸ್ತ್ರ, ಜೈವಿಕ ಅಥವಾ ರಾಸಾಯನಿಕ ಅಸ್ತ್ರ ದಾಳಿಯನ್ನು ತಡೆಯಬಲ್ಲ ಸಾಧನಗಳು ಈ ವಾಹನದಲ್ಲಿ ಇರುತ್ತದೆ.

    12, 13 ಬೆಂಗಾವಲು ಬಸ್:
    ಬೆಂಗಾವಲು ಪಡೆಗೆ ನಿಯೋಜನೆಗೊಂಡಿರುವ ಇತರೆ ಸದಸ್ಯರನ್ನು ಈ ಬಸ್ಸು ಹೊತ್ತುಕೊಂಡು ಸಾಗುತ್ತದೆ.

    14. ಪೊಲೀಸ್ ಕಾರು:
    ಹಿಂದುಗಡೆಯಿಂದ ಯಾವುದೇ ವಾಹನ ನುಗ್ಗದಂತೆ ತಡೆಯಲು ಪೊಲೀಸರು ಈ ಕಾರಿನಲ್ಲಿ ಇರುತ್ತಾರೆ. ಇಷ್ಟೇ ಅಲ್ಲದೇ ಎರಡು ಬದಿಗಳಲ್ಲಿ ರಕ್ಷಣಾ ಸಿಬ್ಬಂದಿಯ ಇತರೇ ಕಾರುಗಳ ಸಂಚರಿಸಿದರೆ ಅಧ್ಯಕ್ಷರ ಕಾರು ರಸ್ತೆಯ ಮಧ್ಯದಲ್ಲಿ ಸಂಚರಿಸುತ್ತಿರುತ್ತದೆ.

  • ಅಮೆರಿಕ ಚೀನಾ ವಾಣಿಜ್ಯ ಸಮರ – ಭಾರತಕ್ಕೆ ಲಾಭವಾದ ಲೆಕ್ಕದ ಪ್ರಮಾಣ ಹೊರಬಿತ್ತು

    ಅಮೆರಿಕ ಚೀನಾ ವಾಣಿಜ್ಯ ಸಮರ – ಭಾರತಕ್ಕೆ ಲಾಭವಾದ ಲೆಕ್ಕದ ಪ್ರಮಾಣ ಹೊರಬಿತ್ತು

    ವಿಶ್ವಸಂಸ್ಥೆ: ಚೀನಾ ನಡುವಿನ ವ್ಯಾಪಾರ ಸಮರದಿಂದ 2019ರ ಮೊದಲಾರ್ಧದಲ್ಲಿ 755 ದಶಲಕ್ಷ ಡಾಲರ್ ಮೌಲ್ಯದ ಉತ್ಪನ್ನಗಳನ್ನು ಭಾರತ ಅಮೆರಿಕಕ್ಕೆ ರಫ್ತು ಮಾಡಿದೆ ಎಂದು ವಿಶ್ವಸಂಸ್ಥೆಯ ವ್ಯಾಪಾರ ಮತ್ತು ಹೂಡಿಕೆ ಸಂಸ್ಥೆ ಹೇಳಿದೆ.

    ಅಮೆರಿಕ ಚೀನಾದ ಮೇಲೆ ವಾಣಿಜ್ಯ ಸಮರ ಪ್ರಾರಂಭಿಸಿದ ಬಳಿಕ ಏನೇನು ಪರಿಣಾಮವಾಗಿದೆ ಎನ್ನುವುದರ ಬಗ್ಗೆ ಸಂಸ್ಥೆ ಅಧ್ಯಯನ ಮಾಡಿ ವರದಿ ನೀಡಿದೆ. ಎರಡು ರಾಷ್ಟ್ರಗಳ ದ್ವಿಪಕ್ಷೀಯ ವ್ಯಾಪಾರ ದಿಢೀರ್ ಕುಸಿದಿದ್ದು, ಬೇರೆ ರಾಷ್ಟ್ರಗಳಿಂದ ಆಮದು ಹೆಚ್ಚಾಗಿದೆ ಎಂದು ತಿಳಿಸಿದೆ.

    ವಾಣಿಜ್ಯ ಸಮರ ಆರಂಭಗೊಂಡ ಬಳಿಕ ತೈವಾನ್, ಮೆಕ್ಸಿಕೋ, ಯುರೋಪಿಯನ್ ದೇಶಗಳಿಂದ ಅಮೆರಿಕಕ್ಕೆ ವಸ್ತುಗಳು ರಫ್ತು ಆಗುವುದು ಹೆಚ್ಚಾಗಿದೆ. ಭಾರತ, ದಕ್ಷಿಣ ಕೊರಿಯ, ಕೆನಡಾದಿಂದ ಭಾರೀ ಪ್ರಮಾಣದಲ್ಲಿ ರಫ್ತು ಹೆಚ್ಚಾಗದೇ ಇದ್ದರೂ ಸ್ವಲ್ಪ ಪ್ರಮಾಣದಲ್ಲಿ ಹೆಚ್ಚಾಗಿದೆ.

    ಭಾರತದಿಂದ ಒಟ್ಟು 799 ದಶಲಕ್ಷ ಡಾಲರ್ ಮೌಲ್ಯದ ರಫ್ತಾಗಿದ್ದು ಅದರಲ್ಲೂ ಹೆಚ್ಚಾಗಿ ರಾಸಾಯನಿಕ (243 ದಶಲಕ್ಷ ಡಾಲರ್), ಲೋಹ ಮತ್ತು ಅದಿರು(243 ದಶಲಕ್ಷ ಡಾಲರ್) ಎಲೆಕ್ಟ್ರಿಕಲ್ ಯಂತ್ರೋಪಕರಣಗಳು(83 ದಶಲಕ್ಷ ಡಾಲರ್), ಇತರೇ ಯಂತ್ರೋಪಕರಣಗಳು(68 ದಶಲಕ್ಷ ಡಾಲರ್) ಜೊತೆ ಕೃಷಿ ಆಹಾರ, ಪಿಠೋಪಕರಣ, ಆಫೀಸ್ ಉಪಕರಣಗಳು, ಜವಳಿ ಮತ್ತು ಉಡುಪು, ಸಾರಿಗೆ ಉಪಕರಣಗಳು ರಫ್ತಾಗಿದೆ ಎಂದು ಅಧ್ಯಯನ ತಿಳಿಸಿದೆ.

    ಚೀನಾಕ್ಕೆ ಒಟ್ಟು 35 ಶತಕೋಟಿ ಡಾಲರ್ ರಫ್ತು ನಷ್ಟವಾಗಿದ್ದು ಇದರಲ್ಲಿ 21 ಶತಕೋಟಿ ಡಾಲರ್(ಶೇ.62) ರಫ್ತು ಉಳಿದ ರಾಷ್ಟ್ರಗಳಿಗೆ ಹಂಚಿಕೆಯಾಗಿದೆ. ಉಳಿದ 14 ಶತಕೋಟಿ ಡಾಲರ್ ಅಮೆರಿಕಕ್ಕೆ ನಷ್ಟವಾಗಿರಬಹುದು ಅಥವಾ ಅಮೆರಿಕದ ಉತ್ಪಾದಕರೇ ಈ ಜಾಗವನ್ನು ಆಕ್ರಮಿಸಿಕೊಂಡಿರಬಹುದು ಎಂದು ವರದಿ ವಿಶ್ಲೇಷಿಸಿದೆ.

    ಚೀನಾ ಮೇಲಿನ ವ್ಯಾಪಾರ ಸಮರ ಅಮೆರಿಕದ ಜನರ ಮೇಲೂ ಪರಿಣಾಮ ಬೀರಿದೆ. ಅಮೆರಿಕದ ಜನತೆ ದುಬಾರಿ ಬೆಲೆಯನ್ನು ನೀಡಿ ವಸ್ತುಗಳನ್ನು ಖರೀದಿಸುತ್ತಿದ್ದಾರೆ ಎಂದು ಹೇಳಿದೆ.

     

    ಡೊನಾಲ್ಡ್ ಟ್ರಂಪ್ ತಮ್ಮ ಚುನಾವಣಾ ಪ್ರಚಾರದ ಸಮಯದಲ್ಲೇ ಚೀನಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಅಧ್ಯಕ್ಷ ಪದವಿಗೆ ಏರಿದ ಮೇಲೆ 2018ರಲ್ಲಿ ಚೀನಾ ವಿರುದ್ಧ ವಾಣಿಜ್ಯ ಸಮರ ಆರಂಭಿಸಿದರು. ನಾವು ಅಭಿವೃದ್ಧಿ ಪಡಿಸಿದ ಸಾಫ್ಟ್ವೇರ್‌ಗಳು, ಪೇಟೆಂಟ್‌ಗಳು ಮತ್ತು ಇತರೆ ತಂತ್ರಜ್ಞಾನವನ್ನು ಚೀನಾ ಕದ್ದು ಲಾಭ ಮಾಡುತ್ತಿದೆ. ಇದಕ್ಕೆ ನಾನು ಕಡಿವಾಣ ಹಾಕುತ್ತೇನೆ ಎಂದು ಹೇಳಿದ ಟ್ರಂಪ್ 2018ರಿಂದ ಚೈನಾ ವಸ್ತುಗಳ ಮೇಲೆ ಆಮದು ಸುಂಕ ಹೇರಲು ಮುಂದಾದರು. ಇದನ್ನೂ ಓದಿ:ಅಮೆರಿಕ, ಚೀನಾ ಸಮರದಿಂದ ಭಾರತಕ್ಕೆ ಲಾಭ: ಅರುಣ್ ಜೇಟ್ಲಿ

    ಅಭಿವೃದ್ಧಿ ಹೊಂದುತ್ತಿರುವ ದೇಶ ಎಂಬ ಹಣೆಪಟ್ಟಿ ಕಟ್ಟಿಕೊಂಡು ವಿಶ್ವ ವಾಣಿಜ್ಯ ಸಂಸ್ಥೆ (ಡಬ್ಲ್ಯುಟಿಒ) ದಿಂದ ಚೀನಾ ಉಪಯೋಗ ಪಡೆಯುತ್ತಿವೆ. ಇನ್ಮುಂದೆ ಡಬ್ಲ್ಯುಟಿಒ ಲಾಭ ಪಡೆಯಲು ಬಿಡುವುದಿಲ್ಲ ಎಂದು ಟ್ರಂಪ್ ಗುಡುಗಿದ್ದರು.

     

    ಅಮೆರಿಕ ಮೊದಲು ಎಂಬ ನಿಯಮಕ್ಕೆ ಆದ್ಯತೆ ನೀಡಿರುವ ಟ್ರಂಪ್, ಚೀನಾ ವಿಶ್ವ ವಾಣಿಜ್ಯ ಸಂಸ್ಥೆಯಿಂದ ಹಲವು ವರ್ಷಗಳಿಂದ ಸಾಕಷ್ಟು ಅನುಕೂಲ ಪಡೆದುಕೊಂಡಿವೆ. ಇದರಿಂದ ನಮಗೆ ನಷ್ಟವಾಗುತ್ತಿದೆ. ಇನ್ನು ಮುಂದೆ ಈ ಲಾಭವನ್ನು ಪಡೆದುಕೊಳ್ಳಲು ಬಿಡುವುದಿಲ್ಲ ಎಂದು ಹೇಳಿದ್ದರು.

  • ‘ಹೌಡಿ ಮೋದಿ’ಯಲ್ಲಿ ಮೋದಿ, ಟ್ರಂಪ್ ಜೊತೆ ಮಿಂಚಿದ ಉತ್ತರ ಕನ್ನಡದ ಕುವರ

    ‘ಹೌಡಿ ಮೋದಿ’ಯಲ್ಲಿ ಮೋದಿ, ಟ್ರಂಪ್ ಜೊತೆ ಮಿಂಚಿದ ಉತ್ತರ ಕನ್ನಡದ ಕುವರ

    ಕಾರವಾರ: ಅಮೆರಿಕದ ಹ್ಯೂಸ್ಟನ್‍ನಲ್ಲಿ ಭಾನುವಾರ ನಡೆದ ‘ಹೌಡಿ ಮೋದಿ’ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಹಾಗು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆಗೆ ಉತ್ತರ ಕನ್ನಡದ ಕುವರ ಸಾತ್ವಿಕ್ ಹೆಗಡೆ ಸೆಲ್ಫಿ ಕ್ಲಿಕ್ಕಿಸಿದ್ದು ಜಗತ್ತಿನಾದ್ಯಂತ ವೈರಲ್ಲಾಗಿದೆ.

    ಹೌದು, ಭಾನುವಾರ ನಡೆದ ‘ಹೌಡಿ ಮೋದಿ’ ಕಾರ್ಯಕ್ರಮದಲ್ಲಿ ಮೋದಿಯವರ ಸ್ವಾಗತ ಕಾರ್ಯಕ್ರಮದಲ್ಲಿ ಸಾತ್ವಿಕ್ ಹೆಗಡೆ ಭಾಗವಹಿಸಿದ್ದನು. ಕಾರ್ಯಕ್ರಮದಲ್ಲಿ ಸೂರ್ಯ ನಮಸ್ಕಾರ ಪ್ರದರ್ಶನವನ್ನ ಕೂಡ ಸಾತ್ವಿಕ್ ನೀಡಿದ್ದನು. ನಂತರ ಅಮೆರಿಕ ಅಧ್ಯಕ್ಷ ಟ್ರಂಪ್ ಹಾಗೂ ಪ್ರಧಾನಿ ಮೋದಿಯವರ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದನು. ಅಮೆರಿಕದ ದಿ ವೈಟ್ ಹೌಸ್ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ಫೋಟೋವನ್ನು ಹಂಚಿಕೊಳ್ಳಲಾಗಿತ್ತು. ಈಗ ಮೋದಿ, ಟ್ರಂಪ್ ಜೊತೆಗೆ ಸಾತ್ವಿಕ್ ಇರುವ ಫೋಟೋ ಎಲ್ಲೆಡೆ ವೈರಲ್ ಆಗಿದೆ.

    ಟೆಕ್ಸಾಸ್‍ನ ಲೂಯಿಸ್ ಡಿ ಬ್ರಾಂಡಿಸ್ ಶಾಲೆಯಲ್ಲಿ 6ನೇ ತರಗತಿಯಲ್ಲಿ ಸಾತ್ವಿಕ್ ವ್ಯಾಸಂಗ ಮಾಡುತ್ತಿದ್ದಾನೆ. 13 ವರ್ಷ ವಯಸ್ಸಿನ ಸಾತ್ವಿಕ್ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕರ್ಕಿಸವಲ್‍ನ ಮೇಧಾ ಮತ್ತು ಪ್ರಭಾಕರ ಹೆಗಡೆ ದಂಪತಿಯ ಪುತ್ರನಾಗಿದ್ದಾನೆ. ದಂಪತಿ ಕಳೆದ 17 ವರ್ಷಗಳಿಂದ ಅಮೆರಿಕದಲ್ಲಿ ನೆಲೆಸಿದ್ದು, ರಜೆಯ ಅವಧಿಯಲ್ಲಿ ಸಿದ್ದಾಪುರ ತಾಲೂಕಿನ ಕರ್ಕಿಸವಲ್ ಗೆ ಬರುತ್ತಾರೆ. ಸಾತ್ವಿಕ್ ಅಜ್ಜ ನಿವೃತ್ತ ಮುಖ್ಯೋಪಾಧ್ಯಾಯರಾಗಿದ್ದು ತಾಯಿ ಕೂಡ ಅಮೆರಿಕದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಾರೆ.

  • ಹೌಡಿ ಮೋದಿ ಕಾರ್ಯಕ್ರಮಕ್ಕೆ ಸಿದ್ಧಗೊಂಡ ಹ್ಯೂಸ್ಟನ್ ಎನ್‍ಆರ್ ಜಿ ಕ್ರೀಡಾಂಗಣ

    ಹೌಡಿ ಮೋದಿ ಕಾರ್ಯಕ್ರಮಕ್ಕೆ ಸಿದ್ಧಗೊಂಡ ಹ್ಯೂಸ್ಟನ್ ಎನ್‍ಆರ್ ಜಿ ಕ್ರೀಡಾಂಗಣ

    ಹ್ಯೂಸ್ಟನ್: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಜಂಟಿಯಾಗಿ ಭಾಗವಹಿಸುತ್ತಿರುವ ಹೌಡಿ ಮೋದಿ ಕಾರ್ಯಕ್ರಮಕ್ಕೆ ಹ್ಯೂಸ್ಟನ್ ಎನ್‍ಆರ್ ಜಿ ಕ್ರೀಡಾಂಗಣ ಸಿದ್ಧಗೊಂಡಿದೆ. ಕಾರ್ಯಕ್ರಮಕ್ಕೆ ಮುಂಚೆಯೇ ಅನಿವಾಸಿ ಭಾರತೀಯರು ಆಗಮಿಸುತ್ತಿದ್ದಾರೆ. ಕ್ರೀಡಾಂಗಣದ ಪ್ರವೇಶಕ್ಕಾಗಿ ಜನರು ಕಿಲೋ ಮೀಟರ್ ಗಟ್ಟಲೇ ಸರತಿ ಸಾಲಿನಲ್ಲಿ ನಿಂತಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿಯವರು ಎನ್‍ಆರ್ ಜಿ ಕ್ರೀಡಾಂಗಣದಲ್ಲಿ 50 ಸಾವಿರ ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ವಿಶ್ವದ ಗಮನ ಸೆಳೆದಿರುವ ಹೌಡಿ ಮೋದಿ ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ಆರಂಭದಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್ 30 ನಿಮಿಷ ಮಾತನಾಡಲಿದ್ದಾರೆ. ಮೋದಿಯವರ ಭಾಷಣ 9 ಗಂಟೆಗೆ ಆರಂಭವಾಗಲಿದೆ. ಈಗಾಗಲೇ ಅತಿಥಿಗಳು ಸೇರಿದಂತೆ ಅನಿವಾಸಿ ಭಾರತೀಯರು ಆಗಮಿಸಿದ್ದು, 7.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭಗೊಳ್ಳಲಿವೆ. ಅಮರಿಕ ಮತ್ತು ಭಾರತದ ನಡುವಿನ ವ್ಯವಹಾರಿಕ ಸಂಬಂಧದ ಬಗ್ಗೆ ಮೋದಿ ಮಾತನಾಡಲಿದ್ದಾರೆ ಎನ್ನಲಾಗಿದೆ.

    ಅಮೆರಿಕಾದ ಹ್ಯೂಸ್ಟನ್ ನಗರ ಮೋದಿಮಯವಾಗಿದ್ದು, ಕಾರ್ಯಕ್ರಮಕ್ಕೆ ನಮ್ಮ ರಾಷ್ಟ್ರಗೀತೆ ಜನಗಣಮನದಿಂದ ಆರಂಭಗೊಳ್ಳಲಿದೆ. ಪಿಎಂ ಮೋದಿ ಮತ್ತು ಡೊನಾಲ್ಡ್ ಟ್ರಂಪ್ ಜೊತೆಯಾಗಿ ವಿಶೇಷ ಬಾಲಕನೊಬ್ಬ ರಾಷ್ಟ್ರಗೀತೆ ಹಾಡಲಿದ್ದಾನೆ. ಕಾರ್ಯಕ್ರಮಕ್ಕೆ ಇಂಡಿಯನ್ ಮುಸ್ಲಿಂ ಅಸೋಸಿಯೇಶನ್ ಸದಸ್ಯರು ಮೋದಿ ಸ್ವಾಗತಕ್ಕೆ ಕಾದು ಕುಳಿತಿದ್ದಾರೆ. ಹೌಡಿ ಮೋದಿ ಕಾರ್ಯಕ್ರಮದಲ್ಲಿ ಪ್ರಧಾನಿಗಳ ಭಾಷಣವನ್ನು ಮೂರು ಭಾಷೆಗಳಲ್ಲಿ ನೇರ ಪ್ರಸಾರಗೊಳ್ಳಲಿದೆ. ಹಿಂದಿ, ಇಂಗ್ಲಿಷ್ ಮತ್ತು ಸ್ಪ್ಯಾನಿಶ್ ಭಾಷೆಗಳಲ್ಲಿ ಕೇಳಬಹುದಾಗಿದೆ.

    ಏನಿದು ಹೌಡಿ ಮೋಡಿ ಕಾರ್ಯಕ್ರಮ?
    ನೈಋತ್ಯ ಅಮೆರಿಕದಲ್ಲಿ ‘ಹೌ ಡು ಯು ಡು'(ನೀವು ಹೇಗಿದ್ದೀರಿ) ಎಂದು ಕೇಳಲು ಸಂಕ್ಷಿಪ್ತವಾಗಿ ‘ಹೌಡಿ’ ಎಂದು ಕರೆಯುತ್ತಾರೆ. ಹೀಗಾಗಿ ಈ ಕಾರ್ಯಕ್ರಮಕ್ಕೆ ಹ್ಯೂಸ್ಟನ್ ನಗರದಲ್ಲಿರುವ ಭಾರತೀಯರು ‘ಹೌಡಿ ಮೋದಿ’ ಹೆಸರನ್ನಿಟ್ಟಿದ್ದಾರೆ.

  • ಕಾಶ್ಮೀರ ಮಧ್ಯಸ್ಥಿಕೆಗೆ ಮೋದಿ ಮನವಿ – ಟ್ರಂಪ್ ಹೇಳಿಕೆಯನ್ನು ತಿರಸ್ಕರಿಸಿದ ಭಾರತ

    ಕಾಶ್ಮೀರ ಮಧ್ಯಸ್ಥಿಕೆಗೆ ಮೋದಿ ಮನವಿ – ಟ್ರಂಪ್ ಹೇಳಿಕೆಯನ್ನು ತಿರಸ್ಕರಿಸಿದ ಭಾರತ

    ವಾಷಿಂಗ್ಟನ್: ಕಾಶ್ಮೀರ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸಲು ಮೋದಿ ನನ್ನ ಬಳಿ ಮನವಿ ಮಾಡಿದ್ದಾರೆ ಎಂಬ ಟ್ರಂಪ್ ಹೇಳಿಕೆಯನ್ನು ಭಾರತ ತಿರಸ್ಕರಿಸಿದೆ.

    ಪಾಕ್ ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ಇಮ್ರಾನ್ ಖಾನ್ ಶ್ವೇತಭವನಕ್ಕೆ ಭೇಟಿ ನೀಡಿ ಡೊನಾಲ್ಡ್ ಟ್ರಂಪ್ ಜೊತೆ ಮಾತುಕತೆ ನಡೆಸಿದ್ದಾರೆ. ಈ ವೇಳೆ ಭಾರತ-ಪಾಕ್ ಒಪ್ಪಿದರೆ ಕಾಶ್ಮೀರ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದು ಟ್ರಂಪ್ ಹೇಳಿದ್ದಾರೆ.

     

    ಈ ಸಂದರ್ಭದಲ್ಲಿ ಎರಡು ವಾರಗಳ ಹಿಂದೆ ನಾನು ಮತ್ತು ಮೋದಿ ಕಾಶ್ಮೀರ ವಿಚಾರದ ಬಗ್ಗೆ ಚರ್ಚೆ ನಡೆಸಿದೆವು. ಈ ವೇಳೆ ಮೋದಿ ಈ ಸಮಸ್ಯೆ ಪರಿಹಾರಕ್ಕೆ ಮಧ್ಯವರ್ತಿ ಆಗುತ್ತೀರಾ ಎಂದು ಕೇಳಿದರು. ಇದಕ್ಕೆ ನಾನು ನನ್ನಿಂದ ಸಹಾಯವಾಗುತ್ತದೆ ಎಂದಾದರೆ ನಾನು ಮಧ್ಯವರ್ತಿಯಾಗುತ್ತೇನೆ ಎಂದು ತಿಳಿಸಿದ್ದೆ ಎಂದು ಟ್ರಂಪ್ ತಿಳಿಸಿದರು.

    ಕಾಶ್ಮೀರ ಸಮಸ್ಯೆಗೆ ಮಧ್ಯಸ್ಥಿಕೆ ವಹಿಸಲು ಆಸಕ್ತಿ ತೋರಿದ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಯನ್ನು ಇಮ್ರಾನ್‍ಖಾನ್ ಸ್ವಾಗತಿಸಿದ್ದಾರೆ.

    ಟ್ರಂಪ್ ಹೇಳಿಕೆ ನೀಡಿದ ಬೆನ್ನಲ್ಲೇ ಭಾರತದ ವಿದೇಶಾಂಗ ಇಲಾಖೆಯ ವಕ್ತಾರ ರವೀಶ್ ಕುಮಾರ್ ಪ್ರತಿಕ್ರಿಯಿಸಿ, ದ್ವಿಪಕ್ಷೀಯ ಮಾತುಕತೆಯಿಂದ ಮಾತ್ರ ಜಮ್ಮು ಕಾಶ್ಮೀರ ವಿವಾದ ಪರಿಹರಿಸಲು ಸಾಧ್ಯ. ಈ ಮಾತುಕತೆ ನಡೆಯಬೇಕಾದರೆ ಪಾಕಿಸ್ತಾನ ಗಡಿಯಲ್ಲಿ ನಡೆಸುತ್ತಿರುವ ಉಗ್ರಗಾಮಿ ಚಟುವಟಿಕೆ ನಿಲ್ಲಬೇಕು. ಪ್ರಧಾನಿ ಮೋದಿಯವರು ಈ ಸಮಸ್ಯೆ ಪರಿಹಾರಕ್ಕೆ ಯಾವುದೇ ಮನವಿ ಸಲ್ಲಿಸಿಲ್ಲ ಎಂದು ಹೇಳಿ ಟ್ರಂಪ್ ಹೇಳಿಕೆಯನ್ನು ತಿರಸ್ಕರಿಸಿದ್ದಾರೆ.