Tag: trump

  • ಟ್ರಂಪ್ ಮತ್ತೆ ತೆರೆಯಲು ಮುಂದಾಗಿರೋ ಅಲ್ಕಾಟ್ರಾಜ್ ಜೈಲು ಅದೆಷ್ಟು ಭಯಾನಕ ಗೊತ್ತಾ?

    ಟ್ರಂಪ್ ಮತ್ತೆ ತೆರೆಯಲು ಮುಂದಾಗಿರೋ ಅಲ್ಕಾಟ್ರಾಜ್ ಜೈಲು ಅದೆಷ್ಟು ಭಯಾನಕ ಗೊತ್ತಾ?

    ಮೆರಿಕದ ಸ್ಯಾನ್ ಫ್ರಾನ್ಸಿಸ್ಕೋ ಬಳಿಯ ದ್ವೀಪವೊಂದರಲ್ಲಿ 60 ವರ್ಷಗಳ (1963) ಹಿಂದೆ ಮುಚ್ಚಲ್ಪಟ್ಟ ಅಲ್ಕಾಟ್ರಾಜ್ ಜೈಲನ್ನು (Alcatraz Jail) ತೆರೆಯಲು ಅಮೆರಿಕ (United States) ಅಧ್ಯಕ್ಷ ಟ್ರಂಪ್‌ (Donald Trump) ಮತ್ತೆ ಮುಂದಾಗಿದ್ದಾರೆ. ಈ ಜೈಲನ್ನು ಮತ್ತೆ ತೆರೆಯುವುದು ಕಾನೂನು, ಸುವ್ಯವಸ್ಥೆ ಮತ್ತು ನ್ಯಾಯದ ಸಂಕೇತ ಎಂದು ಅವರು ಹೇಳಿಕೊಂಡಿದ್ದಾರೆ.

    ಸ್ಯಾನ್ ಫ್ರಾನ್ಸಿಸ್ಕೋ ನಗರದಿಂದ ಸುಮಾರು 2 ಕಿಲೋಮೀಟರ್ ದೂರದಲ್ಲಿರುವ ಅಲ್ಕಾಟ್ರಾಜ್ ಜೈಲನ್ನು ಆ ಕಾಲಘಟ್ಟದಲ್ಲಿ ಅತ್ಯಂತ ಕಠಿಣ ಜೈಲುಗಳಲ್ಲಿ ಒಂದಾಗಿತ್ತು ಎಂದು ಪರಿಗಣಿಸಲಾಗಿತ್ತು. ಈ ಜೈಲು ಮೂಲತಃ ಅಲ್ಕಾಟ್ರಾಜ್ ದ್ವೀಪದ ರಕ್ಷಣಾ ಕೋಟೆಯಾಗಿತ್ತು. ಅಂತರ್ಯುದ್ಧದ ಸಮಯದಲ್ಲಿ, ಇದನ್ನು ಮಿಲಿಟರಿ ಜೈಲಾಗಿ ಪರಿವರ್ತಿಸಲಾಯಿತು. ಇದು ಸುಮಾರು 22 ಎಕರೆ ವಿಸ್ತೀರ್ಣ ಹೊಂದಿದ್ದು, ಅಮೆರಿಕದ ಕುಖ್ಯಾತ ದರೋಡೆಕೋರ ಅಲ್ ಕಾಪೋನ್ ಸೇರಿದಂತೆ ಕೆಲವು ಕುಖ್ಯಾತ ಅಪರಾಧಿಗಳನ್ನು ಇಲ್ಲಿ ಇರಿಸಲಾಗಿತ್ತು.

    ಈ ಜೈಲು ಅದೆಷ್ಟು ಭದ್ರವಾಗಿತ್ತು ಎಂದರೆ, ವಿಶ್ವದ ಅಪಾಯಕಾರಿ ಕೈದಿಗಳು ಸಹ ಇಲ್ಲಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇರಲಿಲ್ಲ. ಯಾಕಂದ್ರೆ ಈ ಜೈಲಿನಲ್ಲಿದ್ದ ಕೈದಿಗಳಿಗೆ ಕೋಲು ಹಿಡಿದು ಕಾಯುವ ಪೊಲೀಸರು ಇರಲಿಲ್ಲ, ಬದಲಿಗೆ ಶಾರ್ಕ್ ಮೀನುಗಳೇ ಈ ಜೈಲಿನ ಕಾವಲು ಕಾಯುತ್ತಿದ್ದವು. ಇಂತಹ ಜೈಲು 3 ಬಾರಿ ಪ್ರವಾಹಕ್ಕೆ ತುತ್ತಾಗಿದ್ದರಿಂದ ಗೋಡೆಗಳೆಲ್ಲ ಹಾನಿಗೊಳಗಾಗಿತ್ತು. ಅಲ್ಲದೇ ನಿರ್ವಹಣಾ ವೆಚ್ಚ ಹೆಚ್ಚಾದ ಕಾರಣದಿಂದ 1963ರಲ್ಲಿ ಈ ಜೈಲನ್ನು ಬಂದ್‌ ಮಾಡಲಾಗಿತ್ತು.

    ಇದೀಗ ಎರಡನೇ ಬಾರಿಗೆ ಅಧ್ಯಕ್ಷ ಸ್ಥಾನ ವಹಿಸಿಕೊಂಡಿರುವ ಟ್ರಂಪ್‌ ಈ ಜೈಲನ್ನು ಮತ್ತೆ ತೆರೆಯಲು ಪ್ಲ್ಯಾನ್‌ ಮಾಡಿದ್ದಾರೆ. ಈಗ ಪ್ರವಾಸಿ ತಾಣವಾಗಿರುವ ಈ ಕೋಟೆಯನ್ನು ಮತ್ತೆ ಜೈಲನ್ನಾಗಿ ಮಾಡಿ, ಮತ್ತಷ್ಟು ವಿಸ್ತರಿಸಲು ಅವರು ಆದೇಶಿಸಿದ್ದಾರೆ. ಈ ಜೈಲನ್ನು ಅತ್ಯಂತ ಕ್ರೂರಿಗಳನ್ನು ಇರಿಸುವುದಾಕ್ಕಾಗಿ ಮತ್ತೆ ತೆರೆಯಲಾಗುತ್ತಿದೆ ಎಂದು ಟ್ರಂಪ್ ಹೇಳಿಕೊಂಡಿದ್ದಾರೆ.

    ಟ್ರಂಪ್‌ ಅಲ್ಕಾಟ್ರಾಜ್ ರೀ ಓಪನ್‌ ಬಗ್ಗೆ ಹೇಳಿದ್ದೇನು?
    ಅಲ್ಕಾಟ್ರಾಜ್ ಜೈಲಿನಲ್ಲಿ ಅತ್ಯಂತ ಕ್ರೂರಿಗಳನ್ನು ಇರಿಸಲಾಗುತ್ತದೆ. ಕೆಲಸಕ್ಕಾಗಿ ಹಾಗೂ ನಮ್ಮ ದೇಶಕ್ಕೆ ಅಕ್ರಮವಾಗಿ ಬಂದ ಅಪರಾಧಿಗಳ ವಿರುದ್ಧ ಕ್ರಮಕೈಗೊಳ್ಳಲು ನಮಗೆ ಅವಕಾಶವಿದೆ. ಗೂಂಡಾಗಳಿಗೆ ನಾವಿನ್ನು ಮುಂದೆ ಹೆದರುವುದಿಲ್ಲ. ನಿರ್ಧಾಕ್ಷಿಣ್ಯ ಕ್ರಮಕೈಗೊಳ್ಳುತ್ತೇವೆ ಎಂದು ಟ್ರಂಪ್‌ ಹೇಳಿಕೊಂಡಿದ್ದಾರೆ.

    ಬಹಳ ಸಮಯದಿಂದ, ಅಮೆರಿಕವು ಕ್ರೂರ, ಹಿಂಸಾತ್ಮಕ ಮತ್ತು ಪುನರಾವರ್ತಿತ ಅಪರಾಧಿಗಳಿಂದ ಬಳಲುತ್ತಿದೆ. ಅಂತಹ ಕ್ರಿಮಿನಲ್‌ಗಳು ಸಮಾಜದ ಕಸ, ಅವರು ಸಮಾಜಕ್ಕೆ ದುಃಖವನ್ನು ಹೊರತುಪಡಿಸಿ ಬೇರೆ ಏನನ್ನೂ ನೀಡುವುದಿಲ್ಲ. ಅದಕ್ಕಾಗಿ ಈ ಜೈಲು ಅಗತ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.

    ಅಲ್ಕಾಟ್ರಾಜ್ ಕೋಟೆ ಜೈಲಾಗಿದ್ದು ಹೇಗೆ?
    ಅಲ್ಕಾಟ್ರಾಜ್ ಜೈಲು ಕ್ಯಾಲಿಫೋರ್ನಿಯಾದ ಸ್ಯಾನ್ ಫ್ರಾನ್ಸಿಸ್ಕೋ ಕರಾವಳಿಯಲ್ಲಿದೆ. ಒಂದು ಕಾಲದಲ್ಲಿ ಕೋಟೆಯಾಗಿದ್ದ ಇದನ್ನು 1912ರಲ್ಲಿ ಯುಎಸ್ ಸೈನ್ಯದ ಮಿಲಿಟರಿ ಜೈಲಾಗಿ ಪರಿವರ್ತಿಸಲಾಯಿತು.

    ಅಲ್ಕಾಟ್ರಾಜ್ ಯಾಕಿಷ್ಟು ಭದ್ರ ಗೊತ್ತಾ?
    ಮೂರು ಅಂತಸ್ತಿನ ಈ ಜೈಲು ಅಮೆರಿಕದಿಂದ ಬೌಗಳಿಕ ಪ್ರದೇಶದ ಸಂಪರ್ಕವಿಲ್ಲದೇ ಪ್ರತ್ಯೇಕವಾಗಿದೆ. ಸುತ್ತ ಸಮುದ್ರ ವ್ಯಾಪಿಸಿದ್ದು, ಭಾರೀ ಅಲೆಗಳು ಮತ್ತು ಶಾರ್ಕ್‌ ಮೀನುಗಳ ಹಾವಳಿಯಿಂದ ಈ ಜೈಲಿನಿಂದ ಕೈದಿಗಳು ತಪ್ಪಿಸಿಕೊಳ್ಳವುದು ಅಸಾಧ್ಯವಾಗಿತ್ತು. ಅಕಸ್ಮಾತ್‌ ತಪ್ಪಿಕೊಂಡ್ರೆ ಅಪರಾಧಿಗಳು ಶಾರ್ಕ್‌ಗಳಿಗೆ ಊಟವಾಗಬೇಕಿತ್ತು!

    ಈ ಜೈಲು ನಾಲ್ಕು ಸೆಲ್ ಬ್ಲಾಕ್‌ಗಳು, ವಾರ್ಡನ್ ಕಚೇರಿ, ಸಂದರ್ಶಕರ ಕೊಠಡಿ, ಗ್ರಂಥಾಲಯ ಮತ್ತು ಕ್ಷೌರಿಕರ ಕೊಠಡಿಯನ್ನು ಒಳಗೊಂಡಿತ್ತು. ಅತ್ಯಂತ ಅಪಾಯಕಾರಿ ಕೈದಿಗಳನ್ನು ಡಿ-ಬ್ಲಾಕ್‌ನಲ್ಲಿ ಇರಿಸಲಾಗುತ್ತಿತ್ತು. 1934ರಲ್ಲಿ ಜೈಲು ಕಟ್ಟಡವನ್ನು ನವೀಕರಿಸಿದಾಗ ಅದರ ಕಬ್ಬಿಣದ ಮೆಟ್ಟಿಲುಗಳು, ಗನ್‌ ಇಡಲು ಗ್ರಾನೈಟ್ ಬ್ಲಾಕ್‌ಗಳನ್ನು ನಿರ್ಮಿಸಲಾಗಿತ್ತು. ಈ ಜೈಲಿನಲ್ಲಿದ್ದ ರಾಬರ್ಟ್ ಫ್ರಾಂಕ್ಲಿನ್ ಎಂಬ ಅಪರಾಧಿ ಜೈಲು ಸಿಬ್ಬಂದಿಯನ್ನೇ ಹತ್ಯೆಗೈದಿದ್ದ.

    ಜೈಲಿನ ನಿವಹಣಾ ವೆಚ್ಚ ಹೆಚ್ಚಾಗಿದ್ದರಿಂದ ಈ ಜೈಲನ್ನು 1963ರಲ್ಲಿ ಮುಚ್ಚಲಾಯಿತು. ಬಳಿಕ ಯುಎಸ್ ಸರ್ಕಾರವು 1972ರಲ್ಲಿ ಈ ದ್ವೀಪವನ್ನು ರಾಷ್ಟ್ರೀಯ ಉದ್ಯಾನವನ ಅಭಿವೃದ್ಧಿ ಮಂಡಳಿಗೆ ಹಸ್ತಾಂತರಿಸಿತು. ಬಳಿಕ ಇದು ಗೋಲ್ಡನ್ ಗೇಟ್ ಎಂಬ ಹೆಸರಿನ ಪ್ರವಾಸಿ ಸ್ಥಳವಾಗಿ ಹೆಸರಾಯಿತು.

    36 ಕೈದಿಗಳಿಂದ ತಪ್ಪಿಸಿಕೊಳ್ಳೋಕೆ ಯತ್ನ!
    ಇಂತಹ ಭದ್ರ ಜೈಲಿಂದ 36 ಕೈದಿಗಳು ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದರು. ಅದರಲ್ಲಿ ಹೆಚ್ಚಿನ ಕೈದಿಗಳನ್ನು ಸೆರೆಹಿಡಿಯಲಾಗಿತ್ತು. ಅದರಲ್ಲಿ ಕೆಲವರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. 1962 ರಲ್ಲಿ ಫ್ರಾಂಕ್ ಮೋರಿಸ್ ಮತ್ತು ಆಂಗ್ಲಿನ್ ಸಹೋದರರು ಅಲ್ಲಿಂದ ತಪ್ಪಿಸಿಕೊಂಡಿದ್ದರು. ಆ ಇಬ್ಬರೂ ಏನಾದರೂ ಎಂಬುದು ಇಂದಿಗೂ ತಿಳಿದು ಬಂದಿಲ್ಲ.

  • USA vs China Tax War | ಅಮೆರಿಕದ ಕಲ್ಲಿದ್ದಲು, ಗ್ಯಾಸ್‌ ಮೇಲೆ ತೆರಿಗೆ ವಿಧಿಸಿದ ಚೀನಾ

    USA vs China Tax War | ಅಮೆರಿಕದ ಕಲ್ಲಿದ್ದಲು, ಗ್ಯಾಸ್‌ ಮೇಲೆ ತೆರಿಗೆ ವಿಧಿಸಿದ ಚೀನಾ

    ಬೀಜಿಂಗ್‌: ನಿರೀಕ್ಷೆಯಂತೆ ಅಮೆರಿಕ-ಚೀನಾ (USA-China) ನಡುವೆ ವಾಣಿಜ್ಯ ಯುದ್ಧ ಶುರುವಾಗಿದೆ. ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ (Donald Trump) ಶುರು ಮಾಡಿದ ತೆರಿಗೆ ಯುದ್ಧಕ್ಕೆ (Tax War) ಚೀನಾ ಬಲವಾಗಿ ಪ್ರತಿಕ್ರಿಯೆ ನೀಡಿದೆ.

    ಚೀನಾದಿಂದ ಬರುವ ಉತ್ಪನ್ನಗಳಿಗೆ 10%ರಷ್ಟು ಸುಂಕ ವಿಧಿಸುವ ಆದೇಶಕ್ಕೆ ಟ್ರಂಪ್ ಸಹಿ ಹಾಕಿದ್ದಕ್ಕೆ ಕ್ಸಿ ಜಿನ್‌ಪಿಂಗ್ ಸರ್ಕಾರ ಕೆರಳಿದೆ. ಅಮೆರಿಕದಿಂದ ಆಮದು ಮಾಡಿಕೊಳ್ಳುವ ಕಲ್ಲಿದ್ದಲು, ದ್ರವೀಕೃತ ನ್ಯಾಚುರಲ್ ಗ್ಯಾಸ್ ಮೇಲೆ 15%ರಷ್ಟು ಸುಂಕ ವಿಧಿಸಿ ಚೀನಾ ಪ್ರತೀಕಾರ ತೆಗೆದುಕೊಂಡಿದೆ.

    ಇಷ್ಟೇ ಅಲ್ಲದೇ ತೈಲ ಮತ್ತು ಕೃಷಿ ಉಪಕರಣ ಮೇಲೆ 10% ರಷ್ಟು ಸುಂಕವನ್ನು ಚೀನಾ ಪ್ರಕಟಿಸಿದೆ. ಟಂಗ್‌ಸ್ಟನ್‌ಗೆ ಸಂಬಂಧಿಸಿದ ಪದಾರ್ಥಗಳ ಮೇಲೆ ನಿರ್ಬಂಧ ವಿಧಿಸಿದೆ. ಪಿವಿಹೆಚ್ ಕಾರ್ಪೋರೇಷನ್, ಇಲ್ಯೂಮಿನಾ ಇಂಕ್‌ನಂತಹ ಅಮೆರಿಕ ಸಂಸ್ಥೆಗಳನ್ನು ನಂಬಿಕಾರ್ಹ ಸಂಸ್ಥೆಗಳ ಪಟ್ಟಿಯಿಂದ ತೆಗೆದು ಹಾಕಿದೆ. ಇದನ್ನೂ ಓದಿ: ಅಮೆರಿಕದಿಂದ ಅಕ್ರಮ ವಲಸಿಗರು ಗಡಿಪಾರು – 205 ಭಾರತೀಯ ಪ್ರಯಾಣಿಕರಿಗೆ ವಿಮಾನದಲ್ಲಿ ಒಂದೇ ಟಾಯ್ಲೆಟ್‌
    ಅನೈತಿಕ ವಾಣಿಜ್ಯ ಪದ್ಧತಿ ಅವಲಂಬಿಸುತ್ತಿರುವ ಅಮೆರಿಕದ ಟೆಕ್ ಸಂಸ್ಥೆ ಗೂಗಲ್ ವಿರುದ್ಧ ವಿಚಾರಣೆಗೆ ಜಿನ್‌ಪಿಂಗ್ ಸರ್ಕಾರ ಆದೇಶ ನೀಡಿದೆ. ಇದರಿಂದಾಗಿ ವಾಣಿಜ್ಯ ಯುದ್ಧ ಇನ್ನಷ್ಟು ತೀವ್ರ ಸ್ವರೂಪ ಪಡೆಯುವ ಆತಂಕ ಎದುರಾಗಿದೆ.

    ಈಗಾಗಲೇ ಚೀನಾ ಕರೆನ್ಸಿ ಯುವಾನ್ ಮೌಲ್ಯ ಪತನವಾಗಿದೆ. ಈ ಪ್ರಭಾವ ಇತರೆ ದೇಶಗಳ ಮೇಲೂ ಬೀರಿದೆ. ಆಸ್ಟ್ರೇಲಿಯಾದ ಡಾಲರ್, ನ್ಯೂಜಿಲೆಂಡ್ ಡಾಲರ್ ಮೌಲ್ಯವೂ ಕುಸಿದಿದೆ.

     

  • ಪಾಕ್ ಪ್ರಧಾನಿ ಇಮ್ರಾನ್‌ಖಾನ್‌ನನ್ನು ಮಿನಿ ಟ್ರಂಪ್ ಎಂದ ಮಾಜಿ ಪತ್ನಿ

    ಪಾಕ್ ಪ್ರಧಾನಿ ಇಮ್ರಾನ್‌ಖಾನ್‌ನನ್ನು ಮಿನಿ ಟ್ರಂಪ್ ಎಂದ ಮಾಜಿ ಪತ್ನಿ

    ಇಸ್ಲಾಮಾಬಾದ್: `ನೀವು ಇಲ್ಲದಿದ್ದರೆ ಪಾಕಿಸ್ತಾನ ಅದ್ಬುತವಾಗಿರುತ್ತಿತ್ತು’ ಎಂದು ಕಿಡಿಕಾರಿದ್ದ ಪಾಕಿಸ್ತಾನದ ಹಂಗಾಮಿ ಪ್ರಧಾನಿ ಇಮ್ರಾನ್‌ಖಾನ್ ವಿರುದ್ಧ ಅವರ ಮಾಜಿ ಪತ್ನಿ ರೆಹಮ್ ಖಾನ್ ಮತ್ತೆ `ಮಿನಿ ಟ್ರಂಪ್’ ಎಂದು ಟ್ವೀಟ್ ಮಾಡುವ ಮೂಲಕ ಅವರ ಖಾನ್ ವಿರುದ್ಧದ ಅಸಮಾಧಾನ ಹೊರಹಾಕಿದ್ದಾರೆ.

    ತನ್ನ ವಿರುದ್ಧ ನಿನ್ನೆ ಮಂಡನೆಯಾಗಬೇಕಿದ್ದ ಅವಿಶ್ವಾಸ ನಿರ್ಣಯ ವಿಫಲಗೊಳ್ಳುವಂತೆ ಮಾಡಿ ಸಂಸತ್ತನ್ನೇ ವಿಸರ್ಜಿಸಿದ ಪಾಕಿಸ್ತಾನದ ಹಂಗಾಮಿ ಪ್ರಧಾನಿ ಇಮ್ರಾನ್‌ಖಾನ್‌ನನ್ನು `ಮಿನಿ ಟ್ರಂಪ್’ ಎಂದು ಕರೆದಿದ್ದಾರೆ. ಇದನ್ನೂ ಓದಿ: ಭಾರತವನ್ನು ಬೆಂಬಲಿಸುತ್ತಿರುವ ಪ್ರಬಲ ರಾಷ್ಟ್ರವೊಂದು ಪಾಕಿಸ್ತಾನದ ಮೇಲೆ ಕೋಪಗೊಂಡಿದೆ: ಇಮ್ರಾನ್‌ ಖಾನ್‌ 

    IMRAN KHAN

    ರಾಜಕೀಯ ವಿಶ್ಲೇಷಕ ಅದ್ನಾನ್ ಹಫೀಜ್ ಅವರು ಈ ಹಿಂದೆ, ಪಾಕಿಸ್ತಾನದ ಪ್ರಧಾನಿ ವ್ಯಾಪಕ ಹಿಂಸಾಚಾರವನ್ನು ಪ್ರಚೋದಿಸುತ್ತಿದ್ದಾರೆ. ರಾಜಕೀಯ ವಿರೋಧಿಗಳನ್ನು ದೇಶದ್ರೋಹಿಗಳು ಮತ್ತು ಅಮೆರಿಕನ್ನರ ಏಜೆಂಟರು ಎಂದು ಹೆಸರಿಸುವ ಮೂಲಕ ಅವರ ಮೇಲೆ ದಾಳಿಯನ್ನು ಪ್ರಚೋದಿಸುತ್ತಿದ್ದಾರೆ. ದಯವಿಟ್ಟು ಗಮನಿಸಿ ಮತ್ತು ಅವರ ಟ್ವಿಟ್ಟರ್ ಖಾತೆಯನ್ನು ಅಮಾನತುಗೊಳಿಸಿ ಎಂದು ಟ್ವೀಟ್ ಮಾಡಿದ್ದರು. ಇದನ್ನೂ ಓದಿ: ನೀವು ಪ್ರಧಾನಿಯಾಗಿಲ್ಲದಿದ್ದಾಗ ಪಾಕಿಸ್ತಾನ ಅದ್ಭುತವಾಗಿತ್ತು: ಇಮ್ರಾನ್‌ಗೆ ಮಾಜಿ ಪತ್ನಿ ತರಾಟೆ

    ಇದೀಗ ಈ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ರೆಹಮ್ ಖಾನ್, ತುಂಬಾ ಒಳ್ಳೆಯ ಉಪಾಯ! ಈ ಮಿನಿ ಟ್ರಂಪ್ ಹಿಂಸಾಚಾರ ಪ್ರಚೋದಿಸುವುದನ್ನು ಮತ್ತು ನಮ್ಮ ಭದ್ರತೆ ಹಾಗೂ ಸ್ಥಿರತೆಗೆ ಹಾನಿಯುಂಟುಮಾಡುವುದನ್ನು ತಡೆಯಬೇಕು ಎಂದು ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

     

  • ಇಂದು ರಾತ್ರಿಯಿಂದ ಅಮೆರಿಕದಲ್ಲಿ ಹೊಸ ಶಕೆ – ಅಧ್ಯಕ್ಷರಾಗಿ ಜೋಬೈಡನ್ ಪದಗ್ರಹಣ

    ಇಂದು ರಾತ್ರಿಯಿಂದ ಅಮೆರಿಕದಲ್ಲಿ ಹೊಸ ಶಕೆ – ಅಧ್ಯಕ್ಷರಾಗಿ ಜೋಬೈಡನ್ ಪದಗ್ರಹಣ

    – ಉಪಾಧ್ಯಕ್ಷರಾಗಿ ಭಾರತ ಮೂಲದ ಕಮಲಾ

    ವಾಷಿಂಗ್ಟನ್: ಬಿಗಿಭದ್ರತೆ ನಡುವೆ ಸಂಸತ್ತಿನಲ್ಲಿ ಇಂದು ರಾತ್ರಿ 10.30ಕ್ಕೆ ಅಮೆರಿಕದ 46ನೇ ಅಧ್ಯಕ್ಷರಾಗಿ ಜೋ ಬೈಡೆನ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ವಿಶೇಷ ಅಂದ್ರೆ 127 ವರ್ಷದ ಹಳೆದಾದ ಕುಟುಂಬದ ಬೈಬಲ್ ಮೇಲೆ ಬೈಡನ್ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

    ಅಮೆರಿಕ ಕ್ಯಾಪಿಟಲ್ ಹಿಲ್‍ನ ಪಶ್ಚಿಮ ದ್ವಾರದ ಬಳಿ ಸಂಪೂರ್ಣ ಪದಗ್ರಹಣ ಕಾರ್ಯಕ್ರಮಕ್ಕೆ ತಯಾರಿ ನಡೆಸಲಾಗಿದೆ. ಅಮೆರಿಕದ ರಾಜಕೀಯದಲ್ಲಿ ಭಾರತದ ಪಾತ್ರ ಬಹುದೊಡ್ಡದು. 49ನೇ ಉಪಾಧ್ಯಕ್ಷರಾಗಿ ಭಾರತ ಮೂಲದ ಕಮಲಾ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಮೂಲಕ ಭಾರತ ಮೂಲದ ಮೊಟ್ಟ ಮೊದಲ ಮಹಿಳಾ ಉಪಾಧ್ಯಕ್ಷೆ ಎಂಬ ಗರಿಮೆಗೆ ಕಮಲಾ ಪಾತ್ರರಾಗಲಿದ್ದಾರೆ. ತಮಿಳುನಾಡಿನ ತಿರುವರೂರ್ ಸಮೀಪದ ಹಳ್ಳಿ ಕಮಲಾ ಅವರ ತಂದೆ ಊರಾಗಿದೆ. ಪ್ರಮಾಣವಚನ ಕಾರ್ಯಕ್ರಮದಲ್ಲಿ ಕಮಲಾ ಅವರು ಭಾರತೀಯ ಸಂಪ್ರದಾಯದಂತೆ ಸೀರೆ ಉಡ್ತಾರಾ..? ಎಂಬ ಕುತೂಹಲವೂ ಎಲ್ಲರಲ್ಲಿದೆ.

    ಬೈಡನ್ ಪದಗ್ರಹಣ ಕಾರ್ಯಕ್ರಮಕ್ಕೆ ನಿರ್ಗಮಿತ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಭಾಗಿಯಾಗುತ್ತಿಲ್ಲ. ಇಂದು ಶ್ವೇತಭವನದಿಂದ ಡೋನಾಲ್ಡ್ ಟ್ರಂಪ್ ನಿರ್ಗಮಿಸಲಿದ್ದಾರೆ. ಇದೇ ವೇಳೆ ಪ್ರಥಮ ಮಹಿಳೆ ಮಿಲೆನಿಯಾ ಟ್ರಂಪ್ ವಿದಾಯ ಭಾಷಣ ಕುತೂಹಲಕ್ಕೆ ಕಾರಣವಾಯ್ತು. ಶ್ವೇತಭವನದಿಂದ ಟ್ರಂಪ್ ಹೊರಡಲು ಎಲ್ಲಾ ಸಿದ್ಧತೆಯಾಗಿದೆ. ಕಳೆದ ನಾಲ್ಕು ವರ್ಷಗಳು ಮರೆಯಲಾರದ ಕ್ಷಣಗಳಾಗಿದೆ. ಟ್ರಂಪ್, ನಾನು ಶ್ವೇತಭವನದ ಸಮಯ ಮುಕ್ತಾಯಗೊಳಿಸಿದ್ದೇವೆ ಎಂದು ಸುಮಾರು 7 ನಿಮಿಷಗಳ ಭಾಷಣದಲ್ಲಿ ತಿಳಿಸಿದ್ರು. ಆದ್ರೆ ನೂತನ ಅಧ್ಯಕ್ಷರಿಗೆ ಸ್ವಾಗತ ಕೋರದೇ ಇರುವುದು ಚರ್ಚೆಗೆ ಕಾರಣವಾಗಿದೆ.

    ಅಮೆರಿಕದ ಕ್ಯಾಪಿಟಲ್ ಮೇಲಿನ ಕಂಡುಕೇಳರಿಯದ ದಾಳಿಯಿಂದ ಮುಂಜಾಗ್ರತೆಯಾಗಿ ಡೊನಾಲ್ಡ್ ಟ್ರಂಪ್ ಬೆಂಬಲಿಗರು ಮಿಚಿಗನ್, ವರ್ಜಿನಿಯಾ, ವಾಷಿಂಗ್ಟನ್ ಸೇರಿದಂತೆ ದೇಶದ 50ಕ್ಕೂ ಹೆಚ್ಚು ಕಡೆ ಪ್ರತಿಭಟನೆಗೆ ಸಜ್ಜಾಗಿರುವ ಹಿನ್ನೆಲೆಯಲ್ಲಿ ರಾಜಧಾನಿ ವಾಷಿಂಗ್ಟನ್ ಡಿಸಿಯಲ್ಲಿ ಸಂಪೂರ್ಣ ಕಟ್ಟೆಚ್ಚರ ವಹಿಸಲಾಗಿದೆ. ಕ್ಯಾಪಿಟಲ್ ಸುತ್ತಮುತ್ತ 25 ಸಾವಿರಕ್ಕೂ ಹೆಚ್ಚು ಶಸ್ತ್ರಸಜ್ಜಿತ ಭದ್ರತಾಪಡೆಗಳ ನಿಯೋಜನೆ ಮಾಡಲಾಗಿದೆ.

  • ಮತ್ತೊಂದು ಕುಖ್ಯಾತಿಗೆ ಪಾತ್ರವಾದ ಡೊನಾಲ್ಡ್‌ ಟ್ರಂಪ್‌

    ಮತ್ತೊಂದು ಕುಖ್ಯಾತಿಗೆ ಪಾತ್ರವಾದ ಡೊನಾಲ್ಡ್‌ ಟ್ರಂಪ್‌

    ವಾಷಿಂಗ್ಟನ್‌: ಇನ್ನೊಂದು ವಾರದಲ್ಲಿ ಅಮೆರಿಕ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲಿರುವ ಡೊನಾಲ್ಡ್ ಟ್ರಂಪ್ ಮತ್ತೊಂದು ಕುಖ್ಯಾತಿಗೆ ಪಾತ್ರರಾಗಿದ್ದಾರೆ. ಕ್ಯಾಪಿಟೊಲ್ ಮೇಲಿನ ದಾಳಿಗೆ ಟ್ರಂಪ್ ಪ್ರಚೋದನೆ ನೀಡಿದ್ದಾರೆ ಎಂದು ಆರೋಪಿಸಿ ಡೆಮಾಕ್ರಟೆಕ್‌ ಮಂಡಿಸಿದ ವಾಗ್ದಂಡನೆಗೆ ಜನಪ್ರತಿನಿಧಿಗಳ ಸಭೆ ಅನುಮೋದನೆ ನೀಡಿದೆ.

    232-197 ಮತಗಳ ಅಂತರದಲ್ಲಿ ಜನಪ್ರತಿನಿಧಿಗಳ ಸಭೆ ವಾಗ್ದಂಡನೆ ನಿಲುವಳಿಗೆ ಅಂಗೀಕಾರ ನೀಡಿತು. ಈ ಹಿನ್ನೆಲೆಯಲ್ಲಿ ಅಮೆರಿಕ ಇತಿಹಾಸದಲ್ಲಿಯೇ ಜನಪ್ರತಿನಿಧಿಗಳ ಸಭೆಯಲ್ಲಿ ಎರಡು ಬಾರಿ ವಾಗ್ದಂಡನೆಗೆ ಗುರಿಯಾದ ಮೊದಲ ಅಧ್ಯಕ್ಷ ಎಂಬ ಕುಖ್ಯಾತಿಗೆ ಟ್ರಂಪ್ ಪಾತ್ರರಾದರು.

     

    ವಾಗ್ದಂಡನೆಯ ಗ್ಗೆ ಸೆನೆಟ್‍ನಲ್ಲಿ ಚರ್ಚೆ ನಡೆಯಲಿದೆ. ಜನವರಿ 19ಕ್ಕೆ ಸೆನೆಟ್ ಸಭೆ ಸೇರಲಿದೆ. ಸೆನೆಟ್‍ನಲ್ಲಿ ವಾಗ್ದಂಡನೆ ನಿಲುವಳಿ ಅನುಮೋದನೆ ಹೊಂದಲು ಡೆಮೆಕ್ರಾಟಿಕ್‌ಗೆ 17 ಮತಗಳ ಕೊರತೆ ಇದೆ. ರಿಪಬ್ಲಿಕನ್ ಪಕ್ಷದ ಕೆಲವರು ಈ ನಿಲುವಳಿಯನ್ನು ಬೆಂಬಲಿಸುವ ಸುಳಿವು ನೀಡಿದ್ದಾರೆ. ಜನವರಿ 20ಕ್ಕೆ ಬೈಡನ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಟ್ರಂಪ್ ವಿಚಾರಣೆ ನಡೆಯುವ ಸಂಭವ ಇದೆ.

    ಟ್ರಂಪ್ ಟ್ವಿಟ್ಟರ್ ಖಾತೆಯನ್ನು ತೊಲಗಿಸಿದ ಕ್ರಮ ಸರಿಯಾದುದ್ದೇ ಎಂದು ಟ್ವಿಟ್ಟರ್ ಸಿಇಓ ಜಾಕ್ ಡೋರ್ಸೇ ಸಮರ್ಥಿಸಿಕೊಂಡಿದ್ದಾರೆ.

  • ಅಮೆರಿಕ, ಯುರೋಪ್‍ನಲ್ಲಿ ಕೊರೊನಾ ಅಟ್ಟಹಾಸ – ಆಸ್ಟ್ರೇಲಿಯಾದಲ್ಲಿ ಲಾಕ್‍ಡೌನ್

    ಅಮೆರಿಕ, ಯುರೋಪ್‍ನಲ್ಲಿ ಕೊರೊನಾ ಅಟ್ಟಹಾಸ – ಆಸ್ಟ್ರೇಲಿಯಾದಲ್ಲಿ ಲಾಕ್‍ಡೌನ್

    ವಾಷಿಂಗ್ಟನ್: ಕೊರೊನಾ ಬಂದು ವರ್ಷ ಕಳೆದರೂ ಇದರ ತೀವ್ರತೆ ಕಡಿಮೆ ಆಗಿಲ್ಲ. ಅಮೆರಿಕ ಮತ್ತು ಯುರೋಪ್ ಖಂಡದ ದೇಶಗಳಲ್ಲಿ ಹೆಮ್ಮಾರಿ ವಿಜೃಂಭಿಸ್ತಿದೆ. ಐರೋಪ್ಯ ಒಕ್ಕೂಟದಲ್ಲಿ 17 ಸೆಕೆಂಡ್‍ಗೆ ಒಂದು ಸಂಭವಿಸುತ್ತಿದೆ. ಅಮೆರಿಕಾದಲ್ಲಿ ನಿಮಿಷಕ್ಕೊಬ್ಬರನ್ನು ಕೊರೋನಾ ಬಲಿ ಪಡೆಯುತ್ತಿದೆ.

    ಗುರುವಾರ ಅಮೆರಿಕದಲ್ಲಿ 1,962 ಮಂದಿ ಮಂದಿ ಬಲಿಯಾಗಿದ್ದು, ಒಟ್ಟು ಮೃತರ ಸಂಖ್ಯೆ 2.60 ಲಕ್ಷ ದಾಟಿದೆ. ನಿನ್ನೆ ಒಂದೇ ದಿನ 1.92 ಲಕ್ಷ ಕೇಸ್ ಬೆಳಕಿಗೆ ಬಂದಿದ್ದು, ಅಲ್ಲೀಗ ಸಕ್ರಿಯ ಪ್ರಕರಣಗಳ ಸಂಖ್ಯೆ 1.61 ಕೋಟಿ ದಾಟಿದೆ.

    ಎಲೆಕ್ಷನ್ ಸೋತು ಈಗ ಕಿಡಿ ಕಾರುತ್ತಿರುವ ಟ್ರಂಪ್, ಕೊರೊನಾವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಅಮೆರಿಕಾದಲ್ಲಿ ಕೊರೊನಾ ಮಾರಣಹೋಮ ಸಂಭವಿಸಬಹುದು ಎಂದು ತಜ್ಞರು ಆತಂಕ ವ್ಯಕ್ತಪಡಿಸ್ತಿದ್ದಾರೆ.

    ದಕ್ಷಿಣ ಆಸ್ಟ್ರೇಲಿಯಾದಲ್ಲಿ ಲಾಕ್‍ಡೌನ್ ಜಾರಿ ಮಾಡಲಾಗಿದ್ದು, ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿದೆ. ಮನೆಯಿಂದ ಯಾರು ಹೊರಗೆ ಬಾರದಂತೆ ಕಟ್ಟುನಿಟ್ಟಿನ ಆದೇಶವನ್ನು ಹೊರಡಿಸಲಾಗಿದೆ. ಜಪಾನ್, ಪಾಕಿಸ್ತಾನ, ಆಫ್ರಿಕಾ, ಗಲ್ಫ್ ರಾಷ್ಟ್ರಗಳಲ್ಲಿಯೂ ಸೋಂಕು ವಿಜೃಂಭಿಸ್ತಿದೆ.

  • ಮುನ್ನಡೆಯಲ್ಲಿ ಬೈಡನ್‌ – ಟ್ರಂಪ್‌ ಸೋತರೆ ಏನು ಮಾಡಬಹುದು?

    ಮುನ್ನಡೆಯಲ್ಲಿ ಬೈಡನ್‌ – ಟ್ರಂಪ್‌ ಸೋತರೆ ಏನು ಮಾಡಬಹುದು?

    ವಾಷಿಂಗ್ಟನ್‌: ನಾಲ್ಕು ದಿನ ಕಳೆದರೂ ಅಮೆರಿಕದ ಅಧ್ಯಕ್ಷೀಯ ಚುನಾವಣೆ ಫಲಿತಾಂಶ ಮಾತ್ರ ಇನ್ನೂ ಪೂರ್ಣವಾಗಿ ಹೊರಬಿದ್ದಿಲ್ಲ. ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡನ್ ಗೆಲುವಿನ ಅಂಚಿನಲ್ಲಿದ್ದರೂ, ಸಂಭ್ರಮಿಸುವ ಸ್ಥಿತಿಯಲ್ಲಿಲ್ಲ. ಫಲಿತಾಂಶ ಹೊರಬೀಳಬೇಕಿರುವ ಐದು ರಾಜ್ಯಗಳಲ್ಲಿ ಮತ ಎಣಿಕೆ ಮುಂದುವರೆದಿದ್ದು, ಟ್ರಂಪ್-ಬೈಡನ್ ನಡುವೆ ನಾನಾ ನೀನಾ ಎನ್ನುವಷ್ಟರ ಮಟ್ಟಿಗೆ ಟಫ್ ಫೈಟ್ ನಡೆಯುತ್ತಿದೆ.

    ನಿನ್ನೆಯವರೆಗೂ ನೆವಾಡದಲ್ಲಿ ಮಾತ್ರ ಮುನ್ನಡೆ ಕಾಯ್ದುಕೊಂಡಿದ್ದ ಜೋ ಬೈಡನ್ ಇಂದು ಜಾರ್ಜಿಯಾದಲ್ಲಿಯೂ ಮೇಲುಗೈ ಸಾಧಿಸಿದ್ದಾರೆ. ಪೆನ್ಸಿಲ್ವೇನಿಯಾದಲ್ಲಿ ಟ್ರಂಪ್ ಮುನ್ನಡೆಯಲ್ಲಿದ್ದಾರೆ. ಆದರೆ ಮತ ಎಣಿಕೆ ಮುಂದುವರಿದಂತೆ ಜೋ ಬೈಡನ್ ನಿಕಟ ಸ್ಪರ್ಧೆ ನೀಡ್ತಿದ್ದಾರೆ. ಇಲ್ಲಿಯೂ ಯಾವುದೇ ಕ್ಷಣದಲ್ಲಿ ಜೋ ಬೈಡನ್ ಮುನ್ನಡೆ ಸಾಧಿಸುವ ಸಂಭವ ಕಂಡು ಬರುತ್ತಿದೆ.

     

    ಅಲಸ್ಕಾ ಮತ್ತು ನಾರ್ತ್ ಕೊರೋಲಿನಾದಲ್ಲಿ ಮಾತ್ರ ಟ್ರಂಪ್ ಸ್ಪಷ್ಟ ಮುನ್ನಡೆ ಕಾಯ್ದುಕೊಂಡಿದ್ದಾರೆ. ಈ ಐದರಲ್ಲಿ ಅಲಸ್ಕಾ ಬಿಟ್ಟು, ಯಾವುದೇ ರಾಜ್ಯವನ್ನು ಗೆದ್ದರೂ ಬೈಡನ್ ಅಧ್ಯಕ್ಷೀಯ ಚುನಾವಣೆ ಗೆದ್ದಂತೆ ಆಗುತ್ತದೆ.

    ಅಮೆರಿಕದಲ್ಲಿ ಕಳೆದ 120 ವರ್ಷಗಳಲ್ಲೇ ಕಂಡು ಕೇಳರಿಯದ ರೀತಿ ಅಂದ್ರೆ ಶೇ.66ರಷ್ಟು ಮತದಾನ ನಡೆದಿದೆ. ಈ ಹಿಂದಿನ ಎಲ್ಲಾ ಅಧ್ಯಕ್ಷೀಯ ಅಭ್ಯರ್ಥಿಗಳನ್ನು ಮೀರಿಸಿ ಬೈಡನ್ 7.10 ಕೋಟಿ ಮತ ಪಡೆದು ದಾಖಲೆ ಬರೆದಿದ್ದಾರೆ. ಇದು ಇನ್ನಷ್ಟು ಹೆಚ್ಚಾಗಲಿದೆ.

    ಫಲಿತಾಂಶದ ಬಗ್ಗೆ ಟ್ರಂಪ್ ತೀವ್ರ ಅಸಮಾಧಾನ ಹೊಂದಿದ್ದಾರೆ. ಮತ ಎಣಿಕೆ ವೇಳೆ ಅಕ್ರಮ ನಡೆಯುತ್ತಿದೆ. ಕೌಂಟಿಂಗ್ ಕೇಂದ್ರಗಳಿಗೆ ನಮ್ಮ ಪಕ್ಷದವರನ್ನು ಬಿಟ್ಟುಕೊಳ್ತಿಲ್ಲ ಎಂದು ಟ್ರಂಪ್ ದೂರುತ್ತಿದ್ದಾರೆ. ಈ ಮಧ್ಯೆ ಅಮೆರಿಕಾದ ಬಹುತೇಕ ರಾಜ್ಯಗಳಲ್ಲಿ ಉಭಯ ಪಕ್ಷಗಳ ಕಾರ್ಯಕರ್ತರು ಬೀದಿಗೆ ಇಳಿದು ಪ್ರತಿಭಟನೆ ನಡೆಸ್ತಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಬೈಡನ್‍ಗೆ ಭದ್ರತೆ ಹೆಚ್ಚಿಸಲಾಗಿದೆ. 538 ಸ್ಥಾನಗಳ ಪೈಕಿ ಮ್ಯಾಜಿಕ್ ನಂಬರ್ 270 ಆಗಿದ್ದು ಜೋ ಬೈಡನ್ 264 ಡೊನಾಲ್ಡ್ ಟ್ರಂಪ್ 214 ಗೆದ್ದುಕೊಂಡಿದ್ದಾರೆ.

    ಟ್ರಂಪ್‌ ಏನು ಮಾಡಬಹುದು?
    ಒಂದು ವೇಳೆ ಜೋ ಬೈಡನ್ ಗೆದ್ದರೂ ಅಷ್ಟು ಸುಲಭಕ್ಕೆ ಅಧಿಕಾರ ಬಿಟ್ಟು ಕೊಡುವುದಿಲ್ಲ ಎಂದು ಟ್ರಂಪ್ ಹೇಳಿದ್ದರು. ಚುನಾವಣೆಗೆ ಮೊದಲೇ ಪೋಸ್ಟಲ್‌ ವೋಟಿಂಗ್‌ನಲ್ಲಿ ಭಾರೀ ಅಕ್ರಮ ನಡೆಯಲಿದೆ ಎಂದಿದ್ದರು. ಈಗಲೂ ಈ ಮಾತನ್ನೇ ಹೇಳುತ್ತಿದ್ದಾರೆ. ಹೀಗಾಗಿ ಟ್ರಂಪ್ ಸೋತರೂ ಜನವರಿ 20ರವರೆಗೂ ಅಧಿಕಾರದಲ್ಲಿ ಮುಂದುವರಿಯಲು ಅವಕಾಶವಿದೆ.

    ಈಗಾಗಲೇ ಟ್ರಂಪ್‌ ಚುನಾವಣಾ ಮತ ಎಣಿಕೆಯ ಅಕ್ರಮವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದಾರೆ. ಬರೋಬ್ಬರಿ 76 ದಿನ ಡೊನಾಲ್ಡ್ ಟ್ರಂಪ್ ಶ್ವೇತಭವನದಲ್ಲೇ ಇದ್ದು ಅಧಿಕಾರ ಚಲಾಯಿಸಬಹುದು. ಟ್ರಂಪ್ ಕೈಯಲ್ಲಿ ಅಧಿಕಾರ ಇರುವ ಕಾರಣ ಅವರು ಏನು ಬೇಕಾದರೂ ಮಾಡಬಹುದು. ವಿವಾದಾತ್ಮಕ ನಿರ್ಣಯಗಳನ್ನು ಕೈಗೊಳ್ಳುವ ಮೂಲಕ ಉನ್ನತಾಧಿಕಾರಿಗಳ ವರ್ಗಾವಣೆಗಳನ್ನು ಮಾಡಬಹುದು .

    76 ದಿನಗಳ ಬಳಿಕವೂ ಟ್ರಂಪ್ ಅಧಿಕಾರ ಹಸ್ತಾಂತರ ಮಾಡದಿದ್ದರೆ ಮುಂದೇನು ಎಂಬ ಬಗ್ಗೆ ಸಂವಿಧಾನದಲ್ಲಿ ಉಲ್ಲೇಖವಿಲ್ಲ. ನೂತನ ಅಧ್ಯಕ್ಷರು, ಸೀಕ್ರೆಟ್ ಏಜೇನ್ಸಿ ನೆರವಿನಿಂದ ಟ್ರಂಪ್‍ರನ್ನು ಶ್ವೇತಸೌಧದಿಂದ ಹೊರಗೆ ಕಳಿಸಬಹುದು. ಟ್ರಂಪ್ ಮಾಜಿ ಅಧ್ಯಕ್ಷರಾಗುವ ಹಿನ್ನೆಲೆಯಲ್ಲಿ ಪ್ರೋಟೋಕಾಲ್ ಕೂಡ ಇದಕ್ಕೆ ಅಡ್ಡ ಬರಬಹುದು.

  • ಅಮೆರಿಕದಲ್ಲಿ ನಡೆಯುತ್ತಿದೆ ಅಧ್ಯಕ್ಷೀಯ ಚುನಾವಣೆ – ಸಮೀಕ್ಷೆಗಳು ಏನು ಹೇಳಿವೆ?

    ಅಮೆರಿಕದಲ್ಲಿ ನಡೆಯುತ್ತಿದೆ ಅಧ್ಯಕ್ಷೀಯ ಚುನಾವಣೆ – ಸಮೀಕ್ಷೆಗಳು ಏನು ಹೇಳಿವೆ?

    ವಾಷಿಂಗ್ಟನ್‌: ಜಗತ್ತಿಗೆ ಅತ್ಯಂತ ಪ್ರಮುಖವಾಗಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆ ನಡೆಯುತ್ತಿದೆ. ಭಾರತೀಯ ಕಾಲಮಾನದ ಪ್ರಕಾರ, ಮಧ್ಯಾಹ್ನ 1 ಗಂಟೆಗೆ ಮತದಾನ ಆರಂಭ ಆಗಿದೆ.

    ನ್ಯೂ ಹ್ಯಾಂಪ್‍ಷೈರ್‌ನಲ್ಲಿ ಮೊದಲ ವೋಟ್ ನಮೂದಾಗಿದೆ. ಕೋವಿಡ್ ಮುಂಜಾಗ್ರತೆಯ ನಡುವೆ ಚುನಾವಣೆ ಜೋರಾಗಿ ನಡೆಯುತ್ತಿದೆ. ಈ ಬಾರಿ ಗೆಲ್ಲೋದು ಹಾಲಿ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರೋ ಅಥವಾ ಡೆಮಾಕ್ರೆಟಿಕ್‌ ಪಕ್ಷದ ಜೋ ಬಿಡೆನ್ ಅವರೋ ಎನ್ನುವುದು ನಾಳೆ ಹೊತ್ತಿಗೆ ಗೊತ್ತಾಲಿದೆ.

    ಅಮೆರಿಕದಲ್ಲಿ ಒಟ್ಟು 23.9 ಕೋಟಿ ಮತದಾರರಿದ್ದು, ಈಗಾಗಲೇ ಅರ್ಧದಷ್ಟು ಮತದಾರರು ಇ-ಮೇಲ್ ಮತ್ತು ಅಂಚೆ ಮೂಲಕ ತಮ್ಮ ಹಕ್ಕು ಚಲಾಯಿಸಿದ್ದಾರೆ. ಈ ಪೋಸ್ಟಲ್ ಮತಗಳ ಮೇಲೆ ಟ್ರಂಪ್ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಇದೀಗ 10 ಕೋಟಿ ಮಂದಿ ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಸೋಲಿನ ಭಯದಲ್ಲಿರುವ ಟ್ರಂಪ್ ಕೊನೆಯ ದಿನವಾದ ನಿನ್ನೆ, ಹಿಂದೆಂದೂ ಇರದ ರೀತಿಯಲ್ಲಿ ರಾತ್ರಿ 11 ಗಂಟೆಯವರೆಗೂ ಫ್ಲೋರಿಡಾದಲ್ಲಿ ಸಮಾವೇಶ ನಡೆಸಿ ಭಾಷಣ ಮಾಡಿದರು.

    ಇತ್ತ ಜೋ ಬಿಡೆನ್ ಮಾತ್ರ ಕೂಲ್ ಆಗಿ ದಿನವನ್ನು ಆರಂಭಿಸಿದರು. ಟ್ರಂಪ್ ಅವರ ಅಧಿಕಾರದ ಸಮಯ ಮುಗಿಯಿತು. ಶ್ವೇತಭವನದಿಂದ ತೆರಳಲು ಅವರು ಗಂಟು ಮೂಟೆ ಕಟ್ಟಿಕೊಳ್ಳಬೇಕು ಎಂದು ವ್ಯಾಖ್ಯಾನಿಸಿದರು. ಡೆಮಾಕ್ರಟಿಕ್ ಪಕ್ಷದ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ಕಮಲಾ ಹ್ಯಾರಿಸ್ ಗೆಲ್ಲಬೇಕೆಂದು ತಮಿಳುನಾಡಿನಲ್ಲಿರುವ ಅವರ ಸ್ವಗ್ರಾಮ ತಿರುವರೂರಿನ ಲಸೇಂದ್ರಪುರಂನ ದೇಗುಲದಲ್ಲಿ ವಿಶೇಷ ಪೂಜೆಗಳನ್ನು ನಡೆಸಲಾಗಿದೆ. ಅಮೆರಿಕಾದ ಮಧ್ಯಮಗಳು ನಡೆಸಿದ ಸಮೀಕ್ಷೆಗಳಲ್ಲಿ ಜೋ ಬಿಡನ್ ಗೆಲ್ಲುವ ಸಾಧ್ಯತೆ ಹೆಚ್ಚಿದೆ.

    ಸಮೀಕ್ಷೆ ಏನು ಹೇಳಿವೆ?
    ಸಿಎನ್‌ಎನ್‌ ಸಮೀಕ್ಷೆ ಜೋ ಬಿಡೆನ್‌ ಶೇ.54, ಟ್ರಂಪ್‌ ಶೇ.42 ಮತ ಪಡೆಯಲಿದ್ದಾರೆ ಎಂದು ಹೇಳಿದರೆ ನ್ಯೂಯಾರ್ಕ್ ಟೈಮ್ಸ್ ಜೋ ಬಿಡೆನ್‌ ಶೇ.50, ಟ್ರಂಪ್‌ ಶೇ.41 ರಷ್ಟು ಮತ ಪಡೆಯಲಿದ್ದಾರೆ.

    ಎನ್‌ಬಿಸಿ ಟ್ರಂಪ್‌ ಶೇ.42, ಬಿಡೆನ್‌ ಶೇ. 52 ಮತ ಪಡೆಯಲಿದ್ದಾರೆ ಎಂದು ಹೇಳಿದರೆ ಫಾಕ್ಸ್‌ ನ್ಯೂಸ್‌ ಬಿಡೆನ್‌ ಶೇ. 52, ಟ್ರಂಪ್‌ ಶೇ.44ರಷ್ಟು ಮತ ಪಡೆಯಲಿದೆ ಎಂದು ಹೇಳಿದೆ. ರಾಯ್ಟರ್ಸ್‌ ಸಮೀಕ್ಷೆ ಬಿಡೆನ್‌ ಶೇ.52. ಟ್ರಂಪ್‌ ಶೇ. 42 ರಷ್ಟು ಮತ ಪಡೆಯಲಿದ್ದಾರೆ ಎಂದು ಹೇಳಿದೆ.

    ಈ ಸಮೀಕ್ಷೆಯೇ ಅಂತಿಮವಲ್ಲ. 2016ರಲ್ಲಿ ಎಲ್ಲಾ ಸಮೀಕ್ಷೆಗಳು ಹಿಲರಿ ಕ್ಲಿಂಟನ್ ಗೆಲ್ಲಲಿದ್ದಾರೆ  ಎಂದಿದ್ದವು. ಆದರೆ ಅಂತಿಮ ಫಲಿತಾಂಶ ಬಂದಾಗ ಟ್ರಂಪ್‌ ಗೆದ್ದಿದ್ದರು.

  • ಟ್ರಂಪ್‌ ವಿರುದ್ಧ ಅರೆಸ್ಟ್‌ ವಾರೆಂಟ್‌ ಹೊರಡಿಸಿದ ಇರಾನ್‌

    ಟ್ರಂಪ್‌ ವಿರುದ್ಧ ಅರೆಸ್ಟ್‌ ವಾರೆಂಟ್‌ ಹೊರಡಿಸಿದ ಇರಾನ್‌

    ಟೆಹರಾನ್‌: ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವಿರುದ್ಧ ಇರಾನ್‌ ಅರೆಸ್ಟ್‌ ವಾರೆಂಟ್‌ ಹೊರಡಿಸಿದ್ದು ಇಂಟರ್‌ಪೋಲ್‌ ಬಳಿ ಸಹಾಯ ಮಾಡುವಂತೆ ಮನವಿ ಮಾಡಿದೆ.

    ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್‌ ಕೋರ್‌ನ ಕಮಾಂಡರ್‌ ಮೇಜರ್‌ ಜನರಲ್‌ ಖಾಸಿಂ ಸುಲೇಮಾನಿ ಅವರನ್ನು ಅಮೆರಿಕ ಸೇನೆ ಈ ವರ್ಷದ ಜನವರಿ 3 ರಂದು ಹತ್ಯೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ಟ್ರಂಪ್‌ ಸೇರಿದಂತೆ 30 ಮಂದಿ ವಿರುದ್ಧ ಅರೆಸ್ಟ್‌ ವಾರಂಟ್‌ ಹೊರಡಿಸಿದೆ.

    ಇರಾನ್‌ ಸರ್ಕಾರ ಟ್ರಂಪ್‌ ಮತ್ತು 30 ಮಂದಿ ವಿರುದ್ಧ ರೆಡ್‌ ಕಾರ್ನರ್‌ ನೋಟಿಸ್‌ ಜಾರಿ ಮಾಡುವಂತೆ ಇಂಟರ್‌ಪೋಲ್‌ ಬಳಿ ಮನವಿ ಮಾಡಿಕೊಂಡಿದೆ. ಫ್ರಾನ್ಸಿನ ಲಿಯಾನ್‌ನಲ್ಲಿರುವ ಇಂಟರ್‌ಪೋಲ್‌ ಇಲ್ಲಿಯವರೆಗೆ ಈ ವಿಚಾರಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

    ಆರೋಪಿಯನ್ನು ಬಂಧಿಸಲು ಅಥವಾ ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಗಡೀಪಾರು ಮಾಡಲು ಸರ್ಕಾರಗಳು ಇಂಟರ್‌ಪೋಲ್‌ ಬಳಿ ರೆಡ್‌ ಕಾರ್ನರ್‌ ನೋಟಿಸ್‌ ಜಾರಿ ಮಾಡುವಂತೆ ಮನವಿ ಮಾಡುತ್ತವೆ. ರೆಡ್‌ ಕಾರ್ನರ್‌ ನೋಟಿಸ್‌ ಜಾರಿಯಾದರೆ ಆರೋಪಿಯನ್ನು ಬಂಧಿಸಿ ಕರೆ ತರಲು ದೇಶಗಳಿಗೆ ಸಹಾಯವಾಗುತ್ತದೆ.

    ಸಾಮಾನ್ಯವಾಗಿ ದೇಶಗಳಿಂದ ಮನವಿ ಬಂದ ಬಳಿಕ ಇಂಟರ್‌ಪೋಲ್‌(ಇಂಟರ್‌ನ್ಯಾಷನಲ್‌ ಕ್ರಿಮಿನಲ್‌ ಪೊಲೀಸ್‌ ಸಂಘಟನೆ) ತನ್ನ ಸಮಿತಿಯ ಬಳಿ ಚರ್ಚೆ ನಡೆಸಿ ನೋಟಿಸ್‌ ನೀಡಬೇಕೇ? ಬೇಡವೇ ಎಂಬುದರ ಬಗ್ಗೆ ಚರ್ಚೆ ನಡೆಸುತ್ತದೆ. ರಾಜಕೀಯ ಉದ್ದೇಶಕ್ಕಾಗಿ ಅಥವಾ ತನ್ನ ಮಾರ್ಗದರ್ಶಿ ನಿಯಮದ ಉಲ್ಲಂಘನೆಯಾಗಿದ್ದಲ್ಲಿ ಇಂಟರ್‌ಪೋಲ್‌ ಸಾಮಾನ್ಯವಾಗಿ ಮನವಿಯನ್ನು ತಿರಸ್ಕರಿಸಿತ್ತದೆ.

    ವೈಮಾನಿಕ ದಾಳಿಯ ಮೂಲಕ ಇರಾಕ್ ರಾಜಧಾನಿ ಬಾಗ್ದಾದ್‍ನಲ್ಲಿ ಬಿಗಿ ಭದ್ರತೆಯಲ್ಲಿದ್ದ ಸುಲೇಮಾನಿಯನ್ನು ಅಮೆರಿಕ ಹತ್ಯೆ ಮಾಡಿತ್ತು. ಇರಾಕ್‍ನ ಮಿಲಿಟರಿ ಕಮಾಂಡರ್ ಅಬು ಮಹ್ದಿ ಅಲ್ ಮುಹಾಂದಿಸ್ ಜೊತೆ ಇರಾಕ್ ರಾಜಧಾನಿ ಬಾಗ್ದಾದ್‍ನ ವಿಮಾನ ನಿಲ್ದಾಣಕ್ಕೆ ಇರಾನ್ ಸೇನಾ ಮುಖ್ಯಸ್ಥರಾಗಿದ್ದ ಸುಲೇಮಾನಿ ಕಾರಿನಲ್ಲಿ ತೆರಳುತ್ತಿದ್ದರು. ಈ ಇಬ್ಬರು ತೆರಳುತ್ತಿದ್ದ ಕಾರನ್ನು ಟಾರ್ಗೆಟ್ ಮಾಡಿದ ಅಮೆರಿಕ ಸೇನೆಗಳು ಡ್ರೋನ್ ಮೂಲಕ ಕ್ಷಿಪಣಿಯನ್ನು ಉಡಾವಣೆ ಮಾಡಿ ಏರ್ ಸ್ಟ್ರೈಕ್ ಮಾಡಿತ್ತು. ದಾಳಿಯ ತೀವ್ರತೆಗೆ ಇಬ್ಬರು ತೆರಳುತ್ತಿದ್ದ ಕಾರುಗಳು ಛಿದ್ರ-ಛಿದ್ರವಾಗಿದ್ದವು. ಇದನ್ನೂ ಓದಿ: ಅಮೆರಿಕದ ’52 ಟಾರ್ಗೆಟ್’ ಸಂಖ್ಯೆಗೆ ‘290’ ಪ್ರಸ್ತಾಪಿಸಿ ತಿರುಗೇಟು ಕೊಟ್ಟ ಇರಾನ್

    ಘಟನೆಯ ಕುರಿತು ಫ್ಲೋರಿಡಾದಲ್ಲಿ ಮಾತನಾಡಿದ್ದ ಟ್ರಂಪ್, ಇತ್ತೀಚೆಗೆ ಅಮೆರಿಕವನ್ನು ಟಾರ್ಗೆಟ್ ಮಾಡಿ ಇರಾಕ್ ನಡೆಸಿದ ದಾಳಿಗಳಲ್ಲಿ ದೇಶದ ಸೈನಿಕ ಸಾವನ್ನಪ್ಪಿದ್ದರು. ಅಲ್ಲದೇ ರಾಕೆಟ್ ದಾಳಿಯಲ್ಲಿ ನಾಲ್ವರು ಸೈನಿಕರು ಗಂಭೀರವಾಗಿ ಗಾಯಗೊಂಡಿದ್ದರು. ಬಾಗ್ದಾದ್‍ನ ನಮ್ಮ ವಿದೇಶಾಂಗ ಕಚೇರಿಯ ಮೇಲೆ ಸುಲೈಮನಿ ನಿರ್ದೇಶನದಂತೆ ದಾಳಿ ನಡೆಸಲಾಗಿತ್ತು, ಉಗ್ರರಿಗೆ ಸಹಕಾರ ನೀಡುತ್ತಿದ್ದರು. ಈ ಕಾರಣಕ್ಕೆ ಹತ್ಯೆ ಮಾಡಲಾಗಿದೆ ಎಂದು ಟ್ರಂಪ್‌ ಏರ್‌ಸ್ಟ್ರೈಕ್‌ ಸಮರ್ಥಿಸಿಕೊಂಡಿದ್ದರು.

    ಸುಲೇಮಾನಿ ಉತ್ತರಾಧಿಕಾರಿ ಇಸ್ಮಾಯಿಲ್ ಖಾನಿ, “ದೇವರು ಪ್ರತೀಕಾರ ತೀರಿಸಿಕೊಳ್ಳುವ ಭರವಸೆ ನೀಡಿದ್ದಾನೆ. ದೇವರ ಅಣತಿಯಂತೆ ಖಂಡಿತವಾಗಿಯೂ ಪ್ರತೀಕಾರ ತೆಗೆದುಕೊಳ್ಳಲಾಗುವುದು” ಎಂದು ಈ ಹಿಂದೆ ಅಮೆರಿಕಕ್ಕೆ ಎಚ್ಚರಿಕೆ ನೀಡಿದ್ದರು. ಡೊನಾಲ್ಡ್ ಟ್ರಂಪ್ ಅವರ ಹತ್ಯೆಗಾಗಿ ಇರಾನ್ ಬಹುಮಾನವನ್ನು ಈಗಾಗಲೇ ಘೋಷಿಸಿದೆ. ಇರಾನ್‍ನಲ್ಲಿ 8 ಕೋಟಿ ಜನರಿದ್ದು ಪ್ರತಿಯೊಬ್ಬರೂ ಒಂದೊಂದು ಡಾಲರ್ ನೀಡಿದರೂ ಅದು ಟ್ರಂಪ್ ತಲೆ ತೆಗೆದವರಿಗೆ ಸೇರುತ್ತದೆ ಎಂದು ಹೇಳಿದೆ.

  • ಟೆಕ್ಕಿಗಳಿಗೆ ಬಿಗ್‌ ಶಾಕ್‌ ನೀಡಿದ ಟ್ರಂಪ್ – ಭಾರತದ ಕಂಪನಿಗಳ ಮೇಲೆ ಪರಿಣಾಮ ಏನು?

    ಟೆಕ್ಕಿಗಳಿಗೆ ಬಿಗ್‌ ಶಾಕ್‌ ನೀಡಿದ ಟ್ರಂಪ್ – ಭಾರತದ ಕಂಪನಿಗಳ ಮೇಲೆ ಪರಿಣಾಮ ಏನು?

    ‌- ವರ್ಷಾಂತ್ಯದವರೆಗೆ ಎಚ್‌1ಬಿ ವೀಸಾ ಸಿಗಲ್ಲ
    – ಅಮೆರಿಕದ ಹಿತ ಕಾಪಾಡಲು ನಿರ್ಧಾರ ಎಂದ ಟ್ರಂಪ್

    ವಾಷಿಂಗ್ಟನ್‌: ಭಾರತೀಯ ಟೆಕ್ಕಿಗಳಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಶಾಕ್‌ ನೀಡಿದ್ದಾರೆ. ಈ ವರ್ಷಾಂತ್ಯದವರೆಗೆ ಅಮೆರಿಕದಲ್ಲಿ ಉದ್ಯೋಗಕ್ಕೆ ತೆರಳುವ ಮಂದಿಗೆ ವೀಸಾ ನೀಡದೇ ಇರಲು ಟ್ರಂಪ್‌ ತೀರ್ಮಾನ ಕೈಗೊಂಡಿದ್ದಾರೆ.

    ಎಚ್‌1ಬಿ, ಎಲ್‌ ಮತ್ತು ತಾತ್ಕಾಲಿಕ ಉದ್ಯೋಗಕ್ಕಾಗಿ ಅಮೆರಿಕಕ್ಕೆ ಬರುತ್ತಿದ್ದ ಉದ್ಯೋಗಿಗಳಿಗೆ ನೀಡಲಾಗುತ್ತಿದ್ದ ವೀಸಾವನ್ನು ಡಿಸೆಂಬರ್‌ ಅಂತ್ಯದವರೆಗೆ ನೀಡದೇ ಇರಲು ಅಮೆರಿಕ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.

    ಕೋವಿಡ್‌ 19ನಿಂದಾಗಿ ದೇಶದಲ್ಲಿ ಸಾಕಷ್ಟು ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ದೇಶದ ಜನರ ಉದ್ಯೋಗವನ್ನು ರಕ್ಷಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ಟ್ರಂಪ್‌ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಡಿಸೆಂಬರ್‌ 31ರವರೆಗೆ ವೀಸಾ ನಿರ್ಬಂಧಿಸುವ ನಿರ್ಧಾರಕ್ಕೆ ಟ್ರಂಪ್‌ ಸೋಮವಾರ ಸಹಿ ಹಾಕಿದ ಕಾರಣ ಇನ್ನು ಮುಂದೆ ಡಿಸೆಂಬರ್‌ ವರೆಗೆ ವಿದೇಶದ ಯಾವ ವ್ಯಕ್ತಿ ಅಮೆರಿಕದಲ್ಲಿ ತೆರಳಿ ಉದ್ಯೋಗ ಮಾಡಲು ಸಾಧ್ಯವಿಲ್ಲ.

    2020ರ ಫೆಬ್ರವರಿ ಮತ್ತು ಏಪ್ರಿಲ್‌ ನಲ್ಲಿ 2 ಕೋಟಿಗೂ ಹೆಚ್ಚು ಅಮೆರಿಕದ ಜನ ಉದ್ಯೋಗ ಕಳೆದುಕೊಂಡಿದ್ದಾರೆ. ಉದ್ಯೋಗಪತಿಗಳು ಈ ಜಾಗವನ್ನು ಭರ್ತಿ ಮಾಡಲು ಎಚ್‌-1ಬಿ ಮತ್ತು ಎಲ್‌ ವೀಸಾ ನೀಡುವಂತೆ ಮನವಿ ಮಾಡುತ್ತಿದ್ದಾರೆ. ಸಾಕಷ್ಟು ಸಂಖ್ಯೆಯ ಅಮೆರಿಕದ ಯುವ ಜನತೆ ಉದ್ಯೋಗವನ್ನು ಕಳೆದುಕೊಂಡಿದ್ದಾರ. ಈ ನಿಟ್ಟಿನಲ್ಲಿ ಅವರನ್ನೆಲ್ಲ ರಕ್ಷಿಸಲು ಉದ್ಯೋಗ ವೀಸಾವನ್ನು ನಿರ್ಬಂಧಿಸಲಾಗಿದೆ ಎಂದು ಟ್ರಂಪ್‌ ತಮ್ಮ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ಇದನ್ನೂ ಓದಿ: ಟ್ರಂಪ್ ವೀಸಾ ನೀತಿಯಿಂದ ಭಾರತಕ್ಕೆ ಮರಳಿದ್ದ ಟೆಕ್ಕಿ ಪತ್ನಿ ನೇಣಿಗೆ ಶರಣು

    ಟ್ರಂಪ್‌ ನಿರ್ಧಾರಕ್ಕೆ ಈಗಾಗಲೇ ಭಾರೀ ವಿರೋಧ ವ್ಯಕ್ತವಾಗಿದೆ. ಗೂಗಲ್‌ ಕಂಪನಿಯ ಸಿಇಒ ಸುಂದರ್‌ ಪಿಚೈ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, ಅಮೆರಿಕದ ಆರ್ಥಿಕತೆಯ ಯಶಸ್ಸಿಗೆ ವಲಸೆ ಬಹಳಷ್ಟು ನೆರವಾಗಿದೆ. ಟೆಕ್ನಾಲಜಿಯಲ್ಲಿ ಗೂಗಲ್‌ ಜಾಗತಿಕ ನಾಯಕನಾಗಲು ವಲಸೆ ಬಹಳಷ್ಟು ನೆರವಾಗಿದೆ. ಇಂದಿನ ಘೋಷಣೆಯಿಂದ ನಮಗೆ ನಿರಾಸೆಯಾಗಿದೆ. ನಾವು ವಲಸಿಗರ ಪರವಾಗಿ ಇರುತ್ತೇವೆ ಮತ್ತು ಎಲ್ಲರಿಗೂ ಕೆಲಸದ ಅವಕಾಶವನ್ನು ವಿಸ್ತರಿಸುತ್ತೇವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಏನಿದು ಎಚ್‌-1ಬಿ, ಎಚ್‌-2ಬಿ, ಎಲ್‌-1 ವೀಸಾ?
    ವಲಸಿಗರಿಗೆ ದೇಶದಲ್ಲಿ ಉದ್ಯೋಗ ನೀಡಲು ಅಮೆರಿಕ ಸರ್ಕಾರ ಮೂರು ರೀತಿಯ ವೀಸಾಗಳನ್ನು ನೀಡುತ್ತದೆ. 1952 ರಿಂದ ಅಮೆರಿಕ ಸರ್ಕಾರ ವಲಸಿಗರಿಗೆ ಉದ್ಯೋಗ ವೀಸಾವನ್ನು ನೀಡಿದೆ. ಹೆಚ್-1ಬಿ, ಹೆಚ್-2ಬಿ ಮತ್ತು ಎಲ್-1 ವೀಸಾ ಈ ಮೂರೂ ಕೂಡ ವರ್ಕ್ ವೀಸಾ ಮಾತ್ರ ಆಗಿದ್ದು ತಾತ್ಕಾಲಿಕವಾಗಿ ನೀಡಲಾಗುತ್ತದೆ. ಐಟಿ ಮತ್ತು ಇತರೇ ಕ್ಷೇತ್ರಗಳ ಉನ್ನತ ಮಟ್ಟ ಉದ್ಯೋಗಿಗಳಿಗೆ ಎಚ್‌1ಬಿ ವೀಸಾ ನೀಡುತ್ತದೆ. 7 ವರ್ಷದ ಅವಧಿಯವರೆಗೆ ಉದ್ಯೋಗ ಮಾಡಲು ಎಲ್‌1 ವೀಸಾ ನೀಡುತ್ತದೆ. ಆಹಾರ ಮತ್ತು ಕೃಷಿ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಎಚ್‌2ಬಿ ವೀಸಾ ನೀಡುತ್ತದೆ.

    ಭಾರತೀಯರ ಮೇಲೆ ಪರಿಣಾಮ ಏನು?
    ಅಮೆರಿಕ ಸರ್ಕಾರ ಒಂದು ವರ್ಷಕ್ಕೆ ಗರಿಷ್ಟ 85 ಸಾವಿರ ಮಂದಿಗೆ ಮಾತ್ರ ಎಚ್‌-1ಬಿ ವೀಸಾ ನೀಡುತ್ತದೆ. ಭಾರತ ಐಟಿ ಕಂಪನಿಗಳು ಎಚ್‌-1ಬಿ ವೀಸಾದ ಅಡಿಯಲ್ಲಿ ಉದ್ಯೋಗಿಗಳನ್ನು ಅಮೆರಿಕಕ್ಕೆ ಕಳುಹಿಸುತ್ತದೆ. ವೀಸಾ ಅವಧಿ ವಿಸ್ತರಿಸದೇ ಇರುವ ಮತ್ತು ಜೂನ್‌ 23ಕ್ಕೆ ವೀಸಾ ಅವಧಿ ಅಂತ್ಯವಾಗುತ್ತದೋ ಅವರಿಗೆ ಮತ್ತೆ ವೀಸಾ ಸಿಗುವುದಿಲ್ಲ. 2020ರ ಏಪ್ರಿಲ್‌ 1 ರ ವೇಳೆ ಅಮೆರಿಕದ ಪೌರತ್ವ ಮತ್ತು ವಲಸೆ ವಿಭಾಗಕ್ಕೆ ಒಟ್ಟು 2.5 ಲಕ್ಷ ಮಂದಿ ಎಚ್‌-1ಬಿ ವೀಸಾಕ್ಕೆ ಅರ್ಜಿ ಹಾಕಿದ್ದು ಈ ಪೈಕಿ 1.84 ಲಕ್ಷ ಭಾರತೀಯರೇ ಆಗಿದ್ದಾರೆ.

    ಇಲ್ಲಿಯವರೆಗೆ ಲಾಟರಿ ಆಯ್ಕೆ ಮೂಲಕ ಅಮೆರಿಕದ ವೀಸಾ ಸಿಗುತ್ತಿತ್ತು. ಆದರೆ ಇನ್ನು ಮುಂದೆ ಕಂಪನಿಯಲ್ಲಿ ಅತಿ ಹೆಚ್ಚು ಸಂಬಳ ಪಡೆಯುವ ಹೆಚ್ಚು ಕೌಶಲ್ಯ ಇರುವ ಉದ್ಯೋಗಿಗಳಿಗೆ ಮಾತ್ರ ವೀಸಾ ನೀಡಲು ಅಮೆರಿಕ ಸರ್ಕಾರ ಮುಂದಾಗಿದೆ. ಭಾರತದ ಐಟಿ ಕಂಪನಿಗಳು ಕಡಿಮೆ ಸಂಬಳ ನೀಡುವ ಮೂಲಕ ಭಾರತೀಯ ಟೆಕ್ಕಿಗಳನ್ನು ಉದ್ಯೋಗಕ್ಕೆ ಕಳುಹಿಸುತಿತ್ತು. ಒಂದು ವೇಳೆ ಅಮೆರಿಕದವರಿಗೆ ಉದ್ಯೋಗ ನೀಡಿದರೆ ಹೆಚ್ಚು ಸಂಬಳ ನೀಡಬೇಕಿತ್ತು.

    ಕನಿಷ್ಠ ಸಂಬಳ ಈಗ ಎಷ್ಟಿರಬೇಕು?
    ಕನಿಷ್ಠ 1,30,000 ಡಾಲರ್(ಅಂದಾಜು 88.17 ಲಕ್ಷ ರೂ.) ಸಂಬಳ ಹೊಂದಿದ ಉದ್ಯೋಗಿಗಳಿಗೆ ಮಾತ್ರ ಎಚ್-1ಬಿ ವೀಸಾ ನೀಡಲು ಅಮೆರಿಕ ಸರ್ಕಾರ 2017ರಲ್ಲಿ ನಿರ್ಧಾರ ಕೈಗೊಂಡಿದೆ. ಎಚ್-1ಬಿ ವೀಸಾದ ಕಾನೂನು ತಿದ್ದುಪಡಿಯಾಗಿದ್ದು, ಎಚ್-1ಬಿ ವೀಸಾ ಪಡೆಯಲು ಉದ್ಯೋಗಿಗಳಿಗೆ ಕನಿಷ್ಠ 1.30 ಲಕ್ಷ ಡಾಲರ್ ಸಂಬಳ ನೀಡಬೇಕೆಂಬ ಅಂಶವಿದೆ.

    ಈ ಮೊದಲು ಎಚ್-1ಬಿ ವೀಸಾ ಹೊಂದಿದವರಿಗೆ ಕನಿಷ್ಠ ಸಂಬಳದ ಮಿತಿ 60 ಸಾವಿರ ಡಾಲರ್(40.69 ಲಕ್ಷ ರೂ.) ಇತ್ತು. 1989ರ ಜಾರಿಗೆ ಬಂದಿದ್ದ ಈ ವೀಸಾ ನಿಯಮದಲ್ಲಿ 2017ರವರೆಗೆ ಯಾವುದೇ ಬದಲಾವಣೆ ಆಗಿರಲಿಲ್ಲ. ಹೀಗಾಗಿ ಭಾರತೀಯ ಸಾಫ್ಟ್ ವೇರ್ ಕಂಪೆನಿಗಳು ಟೆಕ್ಕಿಗಳನ್ನು ಎಚ್-1ಬಿ ವೀಸಾದ ಅಡಿಯಲ್ಲಿ ಅಮೆರಿಕ ದೇಶಕ್ಕೆ ಕಳುಹಿಸಿಕೊಡುತಿತ್ತು. ಆದರೆ ಈಗ ಈ ವೀಸಾದ ಅಡಿ ಅಮೆರಿಕಕ್ಕೆ ತೆರಳುವ ಉದ್ಯೋಗಿಗಳ ಸಂಬಳದ ಮಿತಿ ಡಬಲ್ ಆಗಿದೆ.