Tag: truck drivers

  • ಕಾಶ್ಮೀರದಲ್ಲಿ ಮತ್ತೆ ಉಗ್ರರ ಅಟ್ಟಹಾಸ – ಗುಂಡಿಕ್ಕಿ ಇಬ್ಬರು ಟ್ರಕ್ ಚಾಲಕರ ಹತ್ಯೆ

    ಕಾಶ್ಮೀರದಲ್ಲಿ ಮತ್ತೆ ಉಗ್ರರ ಅಟ್ಟಹಾಸ – ಗುಂಡಿಕ್ಕಿ ಇಬ್ಬರು ಟ್ರಕ್ ಚಾಲಕರ ಹತ್ಯೆ

    ಶ್ರೀನಗರ: ಕಣಿವೆ ರಾಜ್ಯದಲ್ಲಿ ಮತ್ತೆ ಉಗ್ರರು ಅಟ್ಟಹಾಸ ಮೆರೆಯುತ್ತಿದ್ದು, ಗುರುವಾರ ಸಂಜೆ ಇಬ್ಬರು ಟ್ರಕ್ ಚಾಲಕರನ್ನು ಉಗ್ರರು ಗುಂಡಿಕ್ಕಿ ಕೊಲೆಗೈದಿದ್ದಾರೆ. ಜೊತೆಗೆ ಅವರ ಟ್ರಕ್‍ಗೆ ಬೆಂಕಿ ಹಚ್ಚಿ ವಿಕೃತಿ ಮೆರೆದಿದ್ದಾರೆ.

    ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ರಾಜಸ್ಥಾನದ ಮೊಹಮ್ಮದ್ ಇಲಿಯಾಸ್ ಮತ್ತು ಪಂಜಾಬ್‍ನ ಜೀವನ್ ಮೃತ ಚಾಲಕರು. ಈ ಇಬ್ಬರು ಚಾಲಕರನ್ನು ಉಗ್ರರು ಗುರುವಾರ ಗುಂಡಿಕ್ಕಿ ಕೊಂದಿದ್ದಾರೆ. ಸೇಬು ಹಣ್ಣುಗಳನ್ನು ತುಂಬಿಸಿಕೊಳ್ಳಲು ತೆರಳಿದ್ದ ಟ್ರಕ್‍ಗಳನ್ನು ಉಗ್ರರು ಅಡ್ಡಗಟ್ಟಿ, ಅದರೊಳಗಿದ್ದ ಚಾಲಕರನ್ನು ಗುಂಡಿಕ್ಕಿ ಕೊಲೆ ಮಾಡಿದ್ದಾರೆ. ಅಲ್ಲದೆ ಅವರ ಟ್ರಕ್‍ಗೆ ಬೆಂಕಿ ಹಚ್ಚಿದ್ದಾರೆ. ಈ ವೇಳೆ ಇನ್ನೋರ್ವ ಚಾಲಕ ಗಾಯಗೊಂಡಿದ್ದು, ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಚಾಲಕರು ನಿರ್ಜನ ಪ್ರದೇಶಕ್ಕೆ ತೆರಳುತ್ತಿರುವ ಬಗ್ಗೆ ನಮಗೆ ಮಾಹಿತಿ ನೀಡಿರಲಿಲ್ಲ. ಭದ್ರತಾ ಪಡೆಗೆ ತಿಳಿಸದೆ ಚಾಲಕರು ಟ್ರಕ್‍ಗಳನ್ನು ಕೊಂಡೊಯ್ದಿದ್ದರು ಎಂದು ಭದ್ರತಾ ಪಡೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹಾಗೆಯೇ ಕಳೆದ 3 ದಿನಗಳಲ್ಲಿ ಇದು ಟ್ರಕ್ ಚಾಲಕರನ್ನು ಉಗ್ರರು ಕೊಂದ ಮೂರನೇ ಪ್ರಕರಣವಾಗಿದೆ.

    ಈಗಾಗಲೇ ಘಟನಾ ಸ್ಥಳದಿಂದ ಚಾಲಕರ ಮೃತದೇಹವನ್ನು ತರಲಾಗಿದೆ. ಇತ್ತ ಗಾಯಗೊಂಡ ಚಾಲಕನನ್ನು ಶ್ರೀನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಗಳನ್ನು ಪತ್ತೆಹಚ್ಚಲು ತನಿಖೆ ಕೈಗೊಂಡಿದ್ದು, ಆದಷ್ಟು ಬೇಗ ಉಗ್ರರನ್ನು ಬಂಧಿಸುವ ಪ್ರಯತ್ನದಲ್ಲಿದ್ದೇವೆ ಎಂದು ಭದ್ರತಾ ಪಡೆ ತಿಳಿಸಿದೆ.

    ಆಗಸ್ಟ್ 5ರಿಂದ ಕಾಶ್ಮಿರದಲ್ಲಿ ಪೋಸ್ಟ್ ಪೇಡ್ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಸತತ 70 ದಿನಗಳ ಬಳಿಕ ಮತ್ತೆ ಪೋಸ್ಟ್ ಪೇಡ್ ಮೊಬೈಲ್ ಸೇವೆ ಆರಂಭಗೊಳಿಸಲಾಗಿದೆ. ಹೀಗಾಗಿ ಮತ್ತೆ ಕಣಿವೆ ರಾಜ್ಯದಲ್ಲಿ ವ್ಯಾಪಾರ, ವ್ಯಹಿವಾಟು ಎಂದಿನಂತೆ ಆರಂಭಗೊಂಡಿದೆ. ಆದರೆ ಉಗ್ರರು ವಲಸಿಗ ವ್ಯಾಪಾರಿಗಳು ಹಾಗೂ ಟ್ರಕ್ ಚಾಲಕರಲ್ಲಿ ಭಯಹುಟ್ಟಿಸಲು ಅವರ ಮೇಲೆ ದಾಳಿ ನಡೆಸುತ್ತಿದ್ದಾರೆ. ಕಾಶ್ಮೀರ ಸಾಮಾನ್ಯ ಸ್ಥಿತಿಗೆ ಮರಳಿಲ್ಲ ಎಂದು ಬಿಂಬಿಸಲು ಈ ರೀತಿ ದಾಳಿಗಳನ್ನು ಉಗ್ರರು ಮಾಡುತ್ತಿದ್ದಾರೆ.