Tag: Troy

  • ಜಿಯೋಗೆ ಮೋಸ – ಏರ್ ಟೆಲ್, ವೊಡಾಫೋನ್‍ಗೆ 3050 ಕೋಟಿ ದಂಡ

    ಜಿಯೋಗೆ ಮೋಸ – ಏರ್ ಟೆಲ್, ವೊಡಾಫೋನ್‍ಗೆ 3050 ಕೋಟಿ ದಂಡ

    ನವದೆಹಲಿ: ಜಿಯೋಗೆ ಅಂತರ್ ಸಂಪರ್ಕ ನೀಡದೇ ಲೋಪ ಎಸಗಿದ್ದಕ್ಕೆ ಡಿಜಿಟಲ್ ಕಮ್ಯೂನಿಕೇಷನ್ ಕಮಿಷನ್(ಡಿಸಿಸಿ) ಏರ್ ಟೆಲ್, ಐಡಿಯಾ ವೊಡಾಫೋನ್ ಕಂಪನಿಗಳಿಗೆ 3,050 ಕೋಟಿ ರೂ. ದಂಡ ವಿಧಿಸುವ ಪ್ರಸ್ತಾವನೆಗೆ ಅನುಮೋದನೆ ನೀಡಿದೆ.

    ತನ್ನ ಸೇವೆ ಆರಂಭಗೊಂಡ ಸಮಯದಲ್ಲಿ ಈ ಟೆಲಿಕಾಂ ಕಂಪನಿಗಳು ಅಂತರ್ ಸಂಪರ್ಕ ನೀಡದೇ ಲೋಪ ಎಸಗುತ್ತಿವೆ ಎಂದು ಆರೋಪಿಸಿ ಜಿಯೋ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರಕ್ಕೆ(ಟ್ರಾಯ್) ದೂರು ನೀಡಿತ್ತು.

    ಡಿಸಿಸಿ ಸರ್ಕಾರದ ನೇಮಿಸಿದ ಸಮಿತಿಯಾಗಿದ್ದು ಟೆಲಿಕಾಂ ಸಚಿವಾಲಯ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ, ನೀತಿ ಆಯೋಗ, ಆರ್ಥಿಕ ವ್ಯವಹಾರಗಳ ಇಲಾಖೆಯ ಹಿರಿಯ ಅಧಿಕಾರಿಗಳಿರುತ್ತಾರೆ. ಈಗಾಗಲೇ ವೊಡಾಫೋನ್ ಮತ್ತು ಏರ್ ಟೆಲ್ ಆರ್ಥಿಕ ಮುಗ್ಗಟ್ಟಿನಲ್ಲಿರುವುದು ಡಿಸಿಸಿ ಈಗ ದಂಡಕ್ಕೆ ಅನುಮೋದನೆ ನೀಡಿರುವುದು ಮತ್ತೆ ಹಿನ್ನಡೆಯಾಗಿದೆ.

    ಟ್ರಾಯ್ ನೀಡಿದ ಶಿಫಾರಸುಗಳ ಬಗ್ಗೆ ಗಂಭೀರ ಚರ್ಚೆ ನಡೆಸಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಟೆಲಿಕಾಂ ಕಾರ್ಯದರ್ಶಿ ಅರುಣ್ ಸುಂದರ್‍ರಾಜನ್ ತಿಳಿಸಿದ್ದಾರೆ. ಈ ಹಿಂದಿನ ಸಭೆಯಲ್ಲಿ ಈ ಶಿಫಾರಸ್ಸಿನ ಬದಲಾವಣೆ ಸಾಧ್ಯವೇ ಎಂದು ಕೇಳಿ ಟ್ರಾಯ್‍ಗೆ ವಾಪಸ್ ಕಳುಹಿಸಲಾಗಿತ್ತು. ಆದರೆ ಟ್ರಾಯ್ ಈ ಶಿಫಾರಸ್ಸಿನಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ ಎಂದು ತಿಳಿಸಿತ್ತು.

    2016ರಲ್ಲೇ ಟ್ರಾಯ್ ಈ ಬಗ್ಗೆ ಮೊದಲ ಶಿಫಾರಸ್ಸು ಮಾಡಿತ್ತು. ಡಿಸಿಸಿ ಅನುಮೋದನೆ ಕೊಟ್ಟ ಬಳಿಕ ಈ ಶಿಫಾರಸ್ಸು ದೂರಸಂಪರ್ಕ ಸಚಿವಾಲಯಕ್ಕೆ ಹೋಗುತ್ತದೆ. ಈ ವಿಚಾರದಲ್ಲಿ ದೂರಸಂಪರ್ಕ ಸಚಿವಾಲಯೇ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಸುಂದರ್‍ರಾಜನ್ ತಿಳಿಸಿದರು.

    ಏನಿದು ಪ್ರಕರಣ?
    2016ರ ಸೆಪ್ಟೆಂಬರ್ 5 ರಂದು ಜಿಯೋ ಆರಂಭಗೊಂಡಿದ್ದು, ಈ ಸಂದರ್ಭದಲ್ಲಿ ಒಳ ಬರುವ ಮತ್ತು ಹೊರ ಹೋಗುವ ಕರೆಗಳಲ್ಲಿ ಜಿಯೋ ಗ್ರಾಹಕರು ಸಮಸ್ಯೆ ಎದುರಿಸುತ್ತಿದ್ದರು. ಎರಡು ಟೆಲಿಕಾಂ ಕಂಪನಿಗಳ ಮಧ್ಯೆ ಒಂದು ಕರೆ ಪೂರ್ಣಗೊಳ್ಳಬೇಕಾದರೆ ಪಾಯಿಂಟ್ಸ್ ಆಫ್ ಇಂಟರ್ ಕನೆಕ್ಷನ್ ಬಳಕೆ ಮಾಡಲಾಗುತ್ತದೆ. ಅಕ್ಟೋಬರ್ 2016ರಲ್ಲಿ ಟ್ರಾಯ್ ಜಿಯೋಗೆ ಅಂತರ್ ಸಂಪರ್ಕ ನೀಡದೇ ಲೋಪ ಎಸಗಿದ್ದಕ್ಕೆ ಏರ್ ಟೆಲ್ ಮತ್ತು ವೊಡಾಫೋನ್ ಕಂಪನಿಗಳಿಗೆ 1,050 ಕೋಟಿ ರೂ., ಐಡಿಯಾಗೆ 950 ಕೋಟಿ ರೂ. ದಂಡ ವಿಧಿಸಿ ಸರ್ಕಾರಕ್ಕೆ ಶಿಫಾರಸ್ಸು ಮಾಡಿತ್ತು.

    ಗ್ರಾಹಕ ವಿರೋಧಿ ಮತ್ತು ಮಾರುಕಟ್ಟೆಯಲ್ಲಿ ಸ್ಪರ್ಧೆಯನ್ನು ಕಡಿಮೆ ಮಾಡಲು ಟೆಲಿಕಾಂ ಕಂಪನಿಗಳು ಉದ್ದೇಶಪೂರ್ವಕವಾಗಿ ಈ ಕೆಲಸ ಮಾಡುತ್ತಿದೆ ಎಂದು ಜಿಯೋ ದೂರು ನೀಡಿತ್ತು. ಈ ವಿಚಾರದ ಬಗ್ಗೆ ಏರ್ ಟೆಲ್ ಮತ್ತು ವೊಡಾಫೋನ್ ಕಂಪನಿ, ದಂಡ ವಿಧಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಕಾನೂನು ಹೋರಾಟ ಮಾಡುತ್ತೇವೆ. ನ್ಯಾಯಾಲಯದಲ್ಲಿ ನಮಗೆ ನಂಬಿಕೆಯಿದೆ ಎಂದು ತಿಳಿಸಿದೆ.

  • 2020ರ ವೇಳೆಗೆ ಭಾರತದಲ್ಲಿ ಬರುತ್ತೆ 5ಜಿ: ನೆಟ್ ಸ್ಪೀಡ್ ಎಷ್ಟು ಗೊತ್ತಾ?

    2020ರ ವೇಳೆಗೆ ಭಾರತದಲ್ಲಿ ಬರುತ್ತೆ 5ಜಿ: ನೆಟ್ ಸ್ಪೀಡ್ ಎಷ್ಟು ಗೊತ್ತಾ?

    ನವದೆಹಲಿ: 2020ರ ವೇಳೆಗೆ ದೇಶದಲ್ಲಿ 5ಜಿ ತಂತ್ರಜ್ಞಾನ ಸೇವೆ ಆರಂಭಗೊಳ್ಳಬೇಕೆಂಬ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಂಗಳವಾರ ಸಮಿತಿ ರಚಿಸಿದೆ.

    3ಜಿ ಮತ್ತು 4ಜಿ ಮಾನದಂಡವನ್ನು ನಿರ್ಧರಿಸುವ ಸಂದರ್ಭದಲ್ಲಿ ನಾವು ಪಾಲ್ಗೊಳ್ಳುವ ಅವಕಾಶವನ್ನು ಕಳೆದುಕೊಂಡಿದ್ದೇವು. ಆದರೆ ವಿಶ್ವದಲ್ಲಿ 5ಜಿ ಮಾನದಂಡ ಸಿದ್ಧತೆ ಮಾಡುವ ಸಂದರ್ಭದಲ್ಲಿ ಭಾರತವೂ ಈ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತದೆ. ಯಾವುದೇ ಕಾರಣಕ್ಕೂ ಈ ಅವಕಾಶವನ್ನು ಕೈತಪ್ಪಲು ಬಿಡುವುದಿಲ್ಲ ಎಂದು ಮಾಹಿತಿ ತಂತ್ರಜ್ಞಾನ ಖಾತೆಯ ರಾಜ್ಯ ಸಚಿವ ಮನೋಜ್ ಸಿನ್ಹಾ ಹೇಳಿದ್ದಾರೆ.

    500 ಕೋಟಿ ಮೂಲನಿಧಿಯೊಂದಿಗೆ 5ಜಿ ಸಂಬಂಧಿತ ಸಂಶೋಧನೆ ಹಾಗೂ ಅಭಿವೃದ್ಧಿ ನಡೆಯಲಿದ್ದು, ಈ ಸಮಿತಿಯಲ್ಲಿ ಟೆಲಿಕಾಂ, ಮಾಹಿತಿ ತಂತ್ರಜ್ಞಾನ ಮತ್ತು ವಿಜ್ಞಾನ ತಂತ್ರಜ್ಞಾನ ಸಚಿವಾಲಯಗಳ ಕಾರ್ಯದರ್ಶಿಗಳು ಮತ್ತು ಹಿರಿಯ ಅಧಿಕಾರಿಗಳು ಇರಲಿದ್ದಾರೆ.

    5ಜಿ ಬಂದರೆ ನಗರ ಪ್ರದೇಶದಲ್ಲಿ 10 ಗಿಗಾ ಬೈಟ್ಸ್ ಪರ್ ಸೆಕೆಂಡ್ ಬ್ರಾಡ್‍ಬ್ಯಾಂಡ್ ಸಂಪರ್ಕ ಸಿಕ್ಕಿದರೆ, ಗ್ರಾಮಾಂತರ ಪ್ರದೇಶದಲ್ಲಿ 1 ಗಿಗಾ ಬೈಟ್ಸ್ ಪರ್ ಸೆಕೆಂಡ್ ಸಿಗಲಿದೆ.

    ಕೆಲ ದಿನಗಳ ಹಿಂದೆ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) 5ಜಿ ಸೇವೆಗೆ 3300- 3400 Mhz ಮತ್ತು 3400- 3600 Mhz ಬ್ಯಾಂಡ್ ಬಳಸಲು ಸಮಯ ನಿಗದಿ ಪಡಿಸಿ ಎಂದು ಟೆಲಿಕಾಂ ಕಂಪೆನಿಗಳಿಗೆ ಹೇಳಿತ್ತು.  ಕೇಂದ್ರ ಸರ್ಕಾರ 5ಜಿ ಸೇವೆ ಆರಂಭಿಸಲು ಉತ್ಸುಕವಾಗಿದ್ದರೂ ಭಾರತೀಯ ಟೆಲಿಕಾಂ ಕಂಪೆನಿ ಹಣಕಾಸು ಸಮಸ್ಯೆ ಎದುರಿಸುತ್ತಿರುವ ಕಾರಣ 2021-2022ರ ವೇಳೆಗೆ 5ಜಿ ಭಾರತದಲ್ಲಿ ಆರಂಭವಾಗಬಹುದು ಎನ್ನುವ ವಿಶ್ಲೇಷಣೆ ಕೇಳಿ ಬಂದಿದೆ.

    ಇಂಟರ್‍ನ್ಯಾಷನಲ್ ಟೆಲಿಕಮ್ಯೂನಿಕೇಷನ್ ಯುನಿಯನ್(ಐಟಿಯು) 5ಜಿ ಮಾನದಂಡವನ್ನು ಸಿದ್ಧಪಡಿಸಲಿದ್ದು, ಈಗಾಗಲೇ ಪ್ರಸ್ತಾವನೆ ಸಿದ್ದಪಡಿಸಿದೆ. ಫೆಬ್ರವರಿಯಲ್ಲಿ ಪ್ರಸ್ತಾಪಗೊಂಡ ಪ್ರಕಾರ 5ಜಿ ಡೌನ್‍ಲಿಂಕ್ ಸ್ಪೀಡ್ 20 ಗಿಗಾಬೈಟ್ಸ್ ಪರ್ ಸೆಕೆಂಡ್ ಇರಬೇಕೆಂದು ಹೇಳಿದೆ.