Tag: Trollmaga

  • ಕರ್ನಾಟಕ ಪೊಲೀಸ್ ರಾಜ್ ಆಗುತ್ತಿದ್ಯಾ – ರಾಜ್ಯ ಸರ್ಕಾರಕ್ಕೆ ಹೈ ಕೋರ್ಟ್ ಚಾಟಿ

    ಕರ್ನಾಟಕ ಪೊಲೀಸ್ ರಾಜ್ ಆಗುತ್ತಿದ್ಯಾ – ರಾಜ್ಯ ಸರ್ಕಾರಕ್ಕೆ ಹೈ ಕೋರ್ಟ್ ಚಾಟಿ

    – ರಾಜ್ಯದಲ್ಲಿ ಆಡಳಿತ ಸುವ್ಯವಸ್ಥೆ ಕುಸಿದಿದ್ಯಾ?
    – ಜಾಮೀನು ಮಂಜೂರು ಆಗಿದ್ರೂ ಮತ್ತೊಂದು ಎಫ್‍ಐಆರ್ ಹಾಕಿದ್ದು ಯಾಕೆ
    – ಕೂಡಲೇ ಟ್ರೋಲ್ ಮಗ ಅಡ್ಮಿನ್ ಬಿಡುಗಡೆ ಮಾಡಿ

    ಬೆಂಗಳೂರು:“ಕರ್ನಾಟಕ ಪೊಲೀಸ್ ರಾಜ್ ಆಗುತ್ತಿದೆಯೇ? ರಾಜ್ಯದಲ್ಲಿ ಆಡಳಿತ ಸುವ್ಯವಸ್ಥೆ ಕುಸಿದಿದೆಯಾ?” – ಈ ರೀತಿಯಾಗಿ ಪ್ರಶ್ನಿಸಿ ರಾಜ್ಯ ಸರ್ಕಾರವನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.

    ಜೆಡಿಎಸ್ ನಾಯಕರ ವಿರುದ್ಧ ಫೇಸ್‍ಬುಕ್ ಕಮೆಂಟ್ ಮಾಡಿದ್ದ ‘ಟ್ರೋಲ್ ಮಗ’ ಪುಟದ ಅಡ್ಮಿನ್ ಜಯಕಾಂತ್ ಅವರಿಗೆ ಸೆಷನ್ಸ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿದ್ದರೂ ಐದು ದಿನಗಳ ಕಾಲ ಅವರನ್ನು ಪೊಲೀಸ್ ವಶದಲ್ಲಿಟ್ಟುಕೊಂಡಿದ್ದಕ್ಕೆ ಹೈಕೋರ್ಟ್ ಚಾಟಿ ಬೀಸಿದೆ.

    ಜಾಮೀನು ಮಂಜೂರು ಆಗಿದ್ದರೂ ವಶದಲ್ಲಿಟ್ಟುಕೊಂಡಿದ್ದು ಸರಿಯಲ್ಲ. ಇದೊಂದು ಗಂಭೀರ ವಿಚಾರವಾಗಿದ್ದು, ಪೊಲೀಸರ ಕ್ರಮ ಖಂಡನಾರ್ಹ ಎಂದು ನ್ಯಾ.ಪಿ.ಎಸ್. ದಿನೇಶ್‍ಕುಮಾರ್ ಅವರಿದ್ದ ಏಕಸದಸ್ಯಪೀಠ ಅಭಿಪ್ರಾಯಪಟ್ಟು ಕೂಡಲೇ ಜಯಕಾಂತ್ ಅವರನ್ನು ಬಿಡುಗಡೆ ಮಾಡುವಂತೆ ಪೊಲೀಸರಿಗೆ ಸೂಚಿಸಿತು.

    ಅರ್ಜಿದಾರರ ಪರ ವಾದಿಸಿದ ವಕೀಲ ಅರುಣ್ ಶ್ಯಾಮ್, ನನ್ನ ಕಕ್ಷಿದಾರರು ನ್ಯಾಯಾಲಯದ ನಿರೀಕ್ಷಣಾ ಜಾಮೀನು ಪಡೆದಿದ್ದರೂ ಅದೇ ಆರೋಪದ ಇನ್ನೊಂದು ದೂರಿನ ಮೇಲೆ ಅವರನ್ನು ಮತ್ತೆ ಐದು ದಿನಗಳಿಂದ ಪೊಲೀಸರು ತಮ್ಮ ಕಸ್ಟಡಿಯಲ್ಲಿರಿಸಿಕೊಂಡಿದ್ದಾರೆ. ಈ ರೀತಿ ಕಸ್ಟಡಿಯಲ್ಲಿ ಇರಿಸಿರುವುದು ಅಕ್ರಮ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

    ಈ ವೇಳೆ ನ್ಯಾ. ದಿನೇಶ್‍ಕುಮಾರ್, ಪದೇ ಪದೇ ಇಂತಹ ಪ್ರಕರಣಗಳು ರಾಜ್ಯದಲ್ಲಿ ಮರುಕಳಿಸುತ್ತಿವೆ. ಜನ ಸಾಮಾನ್ಯರು ರಸ್ತೆ ಮೇಲೆ ಕೂಡ ಓಡಾಡಲು ಸಾಧ್ಯವಾಗದಂತಹ ವಾತಾವರಣ ಇದೆಯಲ್ಲ. ಈ ಪ್ರಕರಣದಲ್ಲಿ ಆರೋಪಿಯನ್ನು ತರಾತುರಿಯಲ್ಲಿ ಬಂಧನ ನಡೆಸುವ ಅಗತ್ಯ ಏನಿತ್ತು? ನ್ಯಾಯಾಲಯ ಜಾಮೀನು ನೀಡಿದ್ದರೂ ಇನ್ನೊಂದು ಎಫ್‍ಐಆರ್ ದಾಖಲಿಸಿ ಬಂಧಿಸಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡರು.

    ಸಿವಿಲ್ ಪ್ರಕರಣದಲ್ಲಿ ಪೊಲೀಸರ ಹಸ್ತಕ್ಷೇಪ ದಿನೇ ದಿನೇ ಜಾಸ್ತಿ ಆಗುತ್ತಿದೆ. ಕಳೆದ ವಾರ ಡಿಸಿಪಿಯನ್ನು ನ್ಯಾಯಾಲಯಕ್ಕೆ ಕರೆಸಿ ಸೂಚನೆ ನೀಡಿದ್ದರೂ ನಿಮ್ಮ ಪ್ರವೃತ್ತಿ ಮತ್ತೆ ಮುಂದುವರಿದಿದೆ. ಆಸ್ತಿ ವ್ಯಾಜ್ಯ ಸೇರಿದಂತೆ ಎಲ್ಲ ಪ್ರಕರಣದಲ್ಲಿ ಮೂಗು ತೂರಿಸುತ್ತಿದ್ದೀರಿ ಎಂದು ಅಭಿಪ್ರಾಯಪಟ್ಟು ಪೊಲೀಸರಿಗೆ ನ್ಯಾಯಾಧೀಶರು ಚಾಟಿ ಬೀಸಿದರು.

    ಏನಿದು ಪ್ರಕರಣ?
    ಮೇ 26ರಂದು ಜೆಡಿಎಸ್ ಕಾನೂನು ಘಟಕದ ಪ್ರಧಾನ ಕಾರ್ಯದರ್ಶಿ ಪ್ರದೀಪ್‍ಕುಮಾರ್ ‘ಟ್ರೋಲ್ ಮಗ’ ಪುಟದಲ್ಲಿ ಜೆಡಿಎಸ್ ನಾಯಕರ ಬಗ್ಗೆ ಅವಹೇಳನಕಾರಿ ಹಾಗೂ ಜಾತಿನಿಂದನೆ ಪೋಸ್ಟ್ ಮಾಡಲಾಗಿದೆ ಎಂದು ದೂರು ನೀಡಿದ್ದರು. ಆ ಪ್ರಕರಣದ ಹಿನ್ನೆಲೆಯಲ್ಲಿ ಪುಟದ ಅಡ್ಮಿನ್ ಜಯಕಾಂತ್ ಜೂ.17ರಂದು ನಿರೀಕ್ಷಣಾ ಜಾಮೀನು ಪಡೆದಿದ್ದರು. ಜಾಮೀನು ದಾಖಲೆಗಳನ್ನು ಜಯಕಾಂತ್ ಸಲ್ಲಿಸಲು ಹೋದಾಗ ಜೆಡಿಎಸ್ ಐಟಿ ವಿಭಾಗದ ರವಿರಾಜ್ ಅವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಜೂನ್ 23 ರಂದು ಮತ್ತೊಂದು ಎಫ್‍ಐಆರ್ ದಾಖಲಾಗಿತ್ತು. ಇದನ್ನು ಪ್ರಶ್ನಿಸಿ ಜಯಕಾಂತ್ ಪರ ವಕೀಲರು ಹೈ ಕೋರ್ಟ್ ಮೆಟ್ಟಿಲೇರಿದ್ದರು.