Tag: Triveni

  • ಕೊಡಗಿನಲ್ಲಿ ಮಳೆಯಾರ್ಭಟ- ತ್ರಿವೇಣಿ ಸಂಗಮದ ಸ್ನಾನಘಟ್ಟ ಮುಳುಗಡೆ

    ಕೊಡಗಿನಲ್ಲಿ ಮಳೆಯಾರ್ಭಟ- ತ್ರಿವೇಣಿ ಸಂಗಮದ ಸ್ನಾನಘಟ್ಟ ಮುಳುಗಡೆ

    ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆ (Rain In Kodagu) ಮುಂದುವರಿದಿದ್ದು, ತೀವ್ರ ಮಳೆಗೆ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಸ್ನಾನಘಟ್ಟ ಮುಳುಗಡೆಯಾಗಿದೆ.

    ಬ್ರಹ್ಮಗಿರಿ ತಪ್ಪಲಿನಲ್ಲಿ ನಿರಂತರ ಮಳೆಯಿಂದಾಗಿ ತ್ರಿವೇಣಿ ಸಂಗಮ ಮುಳುಗಡೆಯಾಗಿದೆ. ಹೀಗಾಗಿ ಹೊಸದಾಗಿ ನಿರ್ಮಿಸಿದ್ದ ಉದ್ಯಾನವನ ಸಂಪೂರ್ಣವಾಗಿ ಮುಳುಗಿದೆ. ಹೀಗೆ ಮಳೆ ಮುಂದುವರಿದರೆ ಭಗಂಡೇಶ್ವರ ದೇವಾಲಯದ ಮುಂಭಾಗದ ಆವರಣಕ್ಕೂ ನೀರು ನುಗ್ಗುವ ಸಾಧ್ಯತೆಗಳಿವೆ. ಅಲ್ಲದೇ ನಾಪೋಕ್ಲು-ಭಾಗಮಂಡಲ ರಸ್ತೆ ಜಲಾವೃತವಾಗುವ ಸಾಧ್ಯತೆ ಇದೆ.

    ಬ್ರಹ್ಮಗಿರಿ ಬೆಟ್ಟ ತಲಕಾವೇರಿ ವ್ಯಾಪ್ತಿಯಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಾವೇರಿ, ಕನ್ನಿಕೆ ಸುಜ್ಯೋತಿ ನದಿಗಳು ತುಂಬಿ ಹರಿಯುತ್ತಿದ್ದು, ನೀರಿನ ಮಟ್ಟ ಕ್ಷಣ ಕ್ಷಣಕ್ಕೂ ಏರಿಕೆಯಾಗುತ್ತಿದೆ. ಇದನ್ನೂ ಓದಿ: ಭಾರೀ ಮಳೆಗೆ ಕುಕ್ಕೆಯ ಕುಮಾರಧಾರ ಸ್ನಾನಘಟ್ಟ ಮುಳುಗಡೆ

    ಈಗಾಗಲೇ ಭಾಗಮಂಡಲ ನಾಪೋಕ್ಲು ರಸ್ತೆ ಮೇಲೆ ಒಂದು ಅಡಿ ನೀರು ಹರಿಯುತ್ತಿದೆ. ಸದ್ಯ ಮೇಲ್ಸೇತುವೆ ಆಗಿರುವ ಹಿನ್ನೆಲೆ ಜನರ ಓಡಾಟಕ್ಕೆ ತೊಂದರೆ ಇಲ್ಲ. ಜಿಲ್ಲೆಯಲ್ಲಿ ವರುಣಾರ್ಭಟ ಹೆಚ್ಚಾಗಿರುವುದರಿಂದ ಕೊಡಗಿನ ಮಡಿಕೇರಿ, ವಿರಾಜಪೇಟೆ  ಪೊನ್ನಂಪೇಟೆಯ ತಾಲೂಕಿನ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಇಂದು ರಜೆ ಘೋಷಣೆ ಮಾಡಲಾಗಿದೆ.

  • ಶೂಟಿಂಗ್ ವೇಳೆ ಕುಸಿದು ಬಿದ್ದ ಕಾನ್ಸ್‌ಟೇಬಲ್ ಸರೋಜಾ

    ಶೂಟಿಂಗ್ ವೇಳೆ ಕುಸಿದು ಬಿದ್ದ ಕಾನ್ಸ್‌ಟೇಬಲ್ ಸರೋಜಾ

    ಬೆಂಗಳೂರು: ನಟ ಶಿವಣ್ಣ ಅಭಿನಯದ ‘ಟಗರು’ ಸಿನಿಮಾದಲ್ಲಿ ಕಾನ್ಸ್‌ಟೇಬಲ್ ಸರೋಜಾ ಪಾತ್ರದಲ್ಲಿ ನಟಿಸಿ ಖ್ಯಾತಿ ಪಡೆದುಕೊಂಡಿದ್ದ ನಟಿ ತ್ರಿವೇಣಿ ಸಿನಿಮಾ ಚಿತ್ರೀಕರಣದ ಸಂದರ್ಭದಲ್ಲಿ ಕುಸಿದು ಬಿದ್ದಿದ್ದಾರೆ.

    ನಿರ್ದೇಶಕ ರತ್ನ್ ತೀರ್ಥ ನಿರ್ದೇಶಿಸುತ್ತಿರುವ ‘ಅಲ್ಲೇ ಡ್ರಾ ಅಲ್ಲೇ ಬಹುಮಾನ’ ಹಾರರ್ ಸಿನಿಮಾದ ಶೂಟಿಂಗ್ ವೇಳೆ ಈ ಘಟನೆ ನಡೆದಿದೆ. ಚಿತ್ರತಂಡ ಬೆಂಗಳೂರಿನಲ್ಲಿ ಶೂಟಿಂಗ್ ಮುಗಿಸಿ ಕೊನೆಯ ಹಂತದ ಚಿತ್ರೀಕರಣವನ್ನು ಕಳೆದ ಮೂರು ದಿನದಿಂದ ಸಕಲೇಶಪುರದಲ್ಲಿ ಮಾಡಲಾಗುತ್ತಿತ್ತು.

    ಶುಕ್ರವಾರ ಕೂಡ ಚಿತ್ರೀಕರಣ ನಡೆಯುತ್ತಿತ್ತು. ಈ ವೇಳೆ ಇದ್ದಕ್ಕಿದ್ದಂತೆ ನಟನೆ ಮಾಡುತ್ತಿದ್ದಾಗಲೇ ತ್ರಿವೇಣಿ ಕುಸಿದು ಬಿದ್ದಿದ್ದಾರೆ. ತಕ್ಷಣ ಚಿತ್ರತಂಡ ಸ್ಥಳದಲ್ಲಿಯೇ ಅವರನ್ನು ಆರೈಕೆ ಮಾಡಿದ್ದಾರೆ. ಸದ್ಯಕ್ಕೆ ತ್ರಿವೇಣಿ ಆರೋಗ್ಯವಾಗಿದ್ದಾರೆ ಎಂದು ತಿಳಿದು ಬಂದಿದೆ.

    ಈ ಸಿನಿಮಾ ಜನನಿ ಫಿಲಂಸ್ ಲಾಂಛನದಡಿ ನಿರ್ಮಾಣವಾಗುತ್ತಿದ್ದು, ಬಿಜಿ ಪ್ರಶಾಂತ್ ನಿರ್ಮಿಸುತ್ತಿದ್ದಾರೆ. ಚಿತ್ರದಲ್ಲಿ ತ್ರಿವೇಣಿ ಮುಖ್ಯಪಾತ್ರದಲ್ಲಿ ಅಭಿನಯಿಸುತ್ತಿದ್ದು, ಶೌರ್ಯ ನಾಯಕನಾಗಿ ನಟಿಸುತ್ತಿದ್ದಾರೆ.