Tag: Trivendra Singh Rawat

  • ಉತ್ತರಾಖಂಡ್ ಬಿಜೆಪಿ ನಾಯಕತ್ವದಲ್ಲಿ ದಿಢೀರ್‌ ಬದಲಾವಣೆ – ‌ ಸಿಎಂ ರಾಜೀನಾಮೆ

    ಉತ್ತರಾಖಂಡ್ ಬಿಜೆಪಿ ನಾಯಕತ್ವದಲ್ಲಿ ದಿಢೀರ್‌ ಬದಲಾವಣೆ – ‌ ಸಿಎಂ ರಾಜೀನಾಮೆ

    ಡೆಹ್ರಾಡೂನ್: ಮಹತ್ವದ ಬೆಳವಣಿಗೆಯಲ್ಲಿ ಉತ್ತರಾಖಂಡ್‌ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ರಾಜೀನಾಮೆ ನೀಡಿದ್ದಾರೆ.

    ಬಜೆಟ್ ಅಧಿವೇಶನದ ಸಮಯದಲ್ಲಿ ಮಾ.07 ರಂದು ಬಿಜೆಪಿ ದಿಢೀರ್ ಕೋರ್ ಕಮಿಟಿ ಸಭೆ ನಡೆಸಿ ಸರ್ಕಾರದಲ್ಲಿ ಮಹತ್ವದ ಬದಲಾವಣೆಯ ಸುಳಿವು ನೀಡಿತ್ತು. ತ್ರಿವೇಂದ್ರ ಸಿಂಗ್ ರಾವತ್ ಮಂಗಳವಾರ ಸಂಜೆ ರಾಜ್ಯಪಾಲರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸಿದ್ದಾರೆ.

    ಉತ್ತಾರಖಂಡ್‌ ವಿಧಾನಸಭಾ ಚುನಾವಣೆಗೆ ಒಂದು ವರ್ಷ ಬಾಕಿ ಇರುವಾಗಲೇ 60 ವರ್ಷದ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ರಾಜೀನಾಮೆ ಪಡೆದು ನಾಯಕತ್ವ ಬದಲಾವಣೆ ನಿರ್ಧಾರಕ್ಕೆ  ಹೈ ಕಮಾಂಡ್‌ ಕೈ ಹಾಕಿರುವುದು ಅಚ್ಚರಿಗೆ ಕಾರಣವಾಗಿದೆ.

    ರಾಜೀನಾಮೆ ಯಾಕೆ?
    ಬಿಜೆಪಿ ಶಾಸಕರು ರಾವತ್ ಅವರ ಆಡಳಿತ ಶೈಲಿಯ ಬಗ್ಗೆ ಹೈಕಮಾಂಡ್ ಗೆ ದೂರು ನೀಡಿದ್ದರು. ಇವರೇ ಮುಂದುವರಿದರೆ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಕಷ್ಟ ಎಂದು ತಿಳಿಸಿದ್ದರು ಎನ್ನಲಾಗುತ್ತಿದೆ.

    ಕೋರ್‌ ಕಮಿಟಿ ಸಭೆ ನಡೆದ ಬೆನ್ನಲ್ಲೇ ಮಾ.08 ರಂದು ದೆಹಲಿಗೆ ಭೇಟಿ ನೀಡಿದ್ದ ರಾವತ್ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿದ್ದರು.

    ಒಟ್ಟು 69 ವಿಧಾನಸಭಾ ಕ್ಷೇತ್ರಗಳಿದ್ದು 2017ರ ವಿಧಾನಸಭೆಯಲ್ಲಿ ಬಿಜೆಪಿ 59 ಸ್ಥಾನವನ್ನು ಗೆಲ್ಲುವ ಮೂಲಕ ಅಧಿಕಾರಕ್ಕೆ ಏರಿತ್ತು. ಕಾಂಗ್ರೆಸ್‌ 11 ಸ್ಥಾನಗಳನ್ನು ಮಾತ್ರ ಗೆದ್ದುಕೊಂಡಿತ್ತು.

  • ಹಸುಗಳು ಆಮ್ಲಜನಕವನ್ನು ಹೊರಬಿಡುತ್ತವೆ – ಉತ್ತರಾಖಂಡ್‍ ಸಿಎಂ

    ಹಸುಗಳು ಆಮ್ಲಜನಕವನ್ನು ಹೊರಬಿಡುತ್ತವೆ – ಉತ್ತರಾಖಂಡ್‍ ಸಿಎಂ

    ಡೆಹ್ರಾಡೂನ್: ಹಸುಗಳು ಆಮ್ಲಜನಕವನ್ನು ಉಸಿರಾಡಿ, ಆಮ್ಲಜನಕವನ್ನು ಹೊರ ಬಿಡುವ ಏಕೈಕ ಪ್ರಾಣಿ ಎಂದು ಉತ್ತರಾಖಂಡ್‍ನ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಹೇಳಿರುವುದು ಚರ್ಚೆಗೆ ಗ್ರಾಸವಾಗಿದೆ.

    ಡೆಹ್ರಾಡೂನ್‍ನಲ್ಲಿ ನಡೆದ ಸಮಾರಂಭದಲ್ಲಿ ಪಾಲ್ಗೊಂಡಿದ್ದ ರಾವತ್ ಅವರು ಹಸುವನ್ನು ಹೊಗಳುವ ಸಮಯದಲ್ಲಿ, ಹಸು ಆಮ್ಲಜನಕವನ್ನು ಹೊರಬಿಡುತ್ತದೆ. ಹಸುವನ್ನು ಮಸಾಜ್ ಮಾಡುವುದರಿಂದ ಮನುಷ್ಯನ ಉಸಿರಾಟದ ಸಮಸ್ಯೆ ಗುಣವಾಗುತ್ತದೆ ಎಂದು ಹೇಳಿರುವ ವಿಡಿಯೋ ಈಗ ಸಖತ್ ವೈರಲ್ ಆಗಿದೆ.

    ಹಸುವಿನ ಹಾಲು ಮತ್ತು ಮೂತ್ರದಲ್ಲಿ ಔಷಧೀಯ ಗುಣಗಳು ಹೆಚ್ಚಾಗಿ ಇರುತ್ತೇವೆ ಎಂದು ಹೇಳುವ ಬರದಲ್ಲಿ ರಾವತ್ ಅವರು ಹಸು ಅಮ್ಲಜನಕವನ್ನು ಹೊರಬಿಡುತ್ತದೆ. ಹಸುವನ್ನು ಮಸಾಜ್ ಮಾಡುವುದರಿಂದ ಮನುಷ್ಯನಿಗೆ ಉಸಿರಾಟದ ತೊಂದರೆ ನಿವಾರಣೆಯಾಗುತ್ತದೆ. ಹಸುವಿನ ಜೊತೆ ಹತ್ತಿರದಲ್ಲಿ ವಾಸಿಸುವುದರಿಂದ ಕ್ಷಯರೋಗ ಗುಣವಾಗುತ್ತದೆ ಎಂದು ಹೇಳಿದ್ದಾರೆ.

    ಇದಕ್ಕೂ ಮುನ್ನ ಉತ್ತರಾಖಂಡ್‍ನ ಬಿಜೆಪಿ ಅಧ್ಯಕ್ಷ ಮತ್ತು ನೈನಿತಾಲ್ ಕ್ಷೇತ್ರದ ಶಾಸಕ ಅಜಯ್ ಭಟ್, ಗರ್ಭಿಣಿಯರು ಭಾಗೇಶ್ವರ ಜಿಲ್ಲೆಯ ಗರುದ್‍ನ ಗಂಗಾ ನದಿಯ ನೀರು ಕುಡಿದರೆ ಸಿಸೇರಿಯನ್ ಹೆರಿಗೆ ಮಾಡುವುದನ್ನು ತಪ್ಪಿಸಬಹುದು ಎಂದು ಹೇಳಿದ ಕೆಲ ದಿನಗಳ ನಂತರ ಮುಖ್ಯಮಂತ್ರಿಯವರು ಹಸುವನ್ನು ಹೊಗಳಿರುವುದು ಈಗ ಭಾರೀ ಸುದ್ದಿಯಾಗಿದೆ.

    ಸಿಎಂ ಅವರ ಈ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಅಧಿಕಾರಿಯೊಬ್ಬರು ಮುಖ್ಯಮಂತ್ರಿಗಳು ಉತ್ತರಾಖಂಡ್‍ನಲ್ಲಿ ಇರುವ ಸಾಮಾನ್ಯ ನಂಬಿಕೆಗಳ ಬಗ್ಗೆ ಮಾತನಾಡುವ ಸಮಯದಲ್ಲಿ ಈ ರೀತಿ ಹೇಳಿದ್ದಾರೆ. ಹಸುವಿನ ಹಾಲು ಮತ್ತು ಮೂತ್ರದಲ್ಲಿ ಔಷಧೀಯ ಗುಣಗಳು ಇರುವುದು ಎಲ್ಲರಿಗೂ ತಿಳಿದಿರುವ ವಿಚಾರ ಮತ್ತು ಉತ್ತರಾಖಂಡ್‍ನ ಬೆಟ್ಟದಲ್ಲಿ ವಾಸಿಸುವ ಕೆಲ ಜನರು ಹಸು ನಮಗೆ ಉಸಿರಾಡಲು ಆಮ್ಲಜನಕ ನೀಡುತ್ತದೆ ಎಂದು ನಂಬುತ್ತಾರೆ ಈ ರೀತಿಯಲ್ಲಿ ಸಿಎಂ ಅವರು ಹೇಳಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದಾರೆ.

  • ಉತ್ತರಾಖಂಡ್ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ತ್ರಿವೇಂದ್ರ ಸಿಂಗ್ ರಾವತ್

    ಉತ್ತರಾಖಂಡ್ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ತ್ರಿವೇಂದ್ರ ಸಿಂಗ್ ರಾವತ್

    ಡೆಹ್ರಾಡೂನ್: ಪಂಚರಾಜ್ಯ ಚುನಾವಣೆಯಲ್ಲಿ ಸರಳ ಬಹುಮತ ಗಳಿಸಿದ್ದ ಉತ್ತರಾಖಂಡ್ ರಾಜ್ಯದಲ್ಲಿ ಭಾರತೀಯ ಜನತಾ ಪಾರ್ಟಿ ಅಧಿಕಾರದ ಗದ್ದುಗೆ ಏರಿದೆ. ಉತ್ತರಾಖಂಡ್‍ನ 9ನೇ ಮುಖ್ಯಮಂತ್ರಿಯಾಗಿ ತ್ರಿವೇಂದ್ರ ಸಿಂಗ್ ರಾವತ್ ಗದ್ದುಗೆ ಏರಿದ್ದಾರೆ.

    ರಾಜ್ಯಪಾಲರಾದ ಕೃಷ್ಣ ಕಾಂತ್ ಪೌಲ್ ಪ್ರಮಾಣ ವಚನ ಬೋಧನೆ ಮಾಡಿದ್ರು. ಉತ್ತರಾಖಂಡ್ ರಾಜಧಾನಿ ಡೆಹ್ರಾಡೂನ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಸೇರಿದಂತೆ ಬಿಜೆಪಿಯ ಹಲವು ಹಿರಿಯ ನಾಯಕರು ಭಾಗಿಯಾಗಿದ್ರು.

    ದೀರ್ಘ ಕಾಲ ಆರ್‍ಎಸ್‍ಎಸ್ ಪ್ರಚಾರಕರಾಗಿ ಕೆಲಸ ಮಾಡಿರುವ ತ್ರಿವೇಂದ್ರ ಸಿಂಗ್ ರಾವತ್ ಕಳೆದ ಬಾರಿಯ ಲೋಕಸಭಾ ಚುನಾವಣೆ ವೇಳೆ ಅಮಿತ್ ಷಾ ಜೊತೆಗೂಡಿ ಸಾಕಷ್ಟು ಕೆಲಸ ಮಾಡಿದ್ರು. ತ್ರಿವೇಂದ್ರ ಸಿಂಗ್ ರಾವತ್ ಜೊತೆ ಎಲ್ಲರೂ ಈಶ್ವರನ ಹೆಸರಲ್ಲಿ ಪ್ರಮಾಣ ಸ್ವೀಕಾರ ಮಾಡಿದ್ದು ವಿಶೇಷವಾಗಿತ್ತು. ನಿರ್ಗಮಿತ ಸಿಎಂ ಹರೀಶ್ ರಾವತ್ ಕೂಡ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಶುಭಹಾರೈಸಿದ್ರು.

    ಉತ್ತರಾಖಂಡ್‍ನಲ್ಲಿ 70 ಸ್ಥಾನಗಳಲ್ಲಿ 57 ಸ್ಥಾನಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿತ್ತು.

     

  • ಉತ್ತರಾಖಂಡ್‍ನಲ್ಲಿಂದು ತ್ರಿವೇಂದ್ರ ಸಿಂಗ್ ರಾವತ್ ಪ್ರಮಾಣವಚನ

    ಉತ್ತರಾಖಂಡ್‍ನಲ್ಲಿಂದು ತ್ರಿವೇಂದ್ರ ಸಿಂಗ್ ರಾವತ್ ಪ್ರಮಾಣವಚನ

    – ಉತ್ತರಪ್ರದೇಶದ ಸಾರಥಿ ಯಾರು? ಇಂದು ನಿರ್ಧಾರ

    ನವದೆಹಲಿ: ಉತ್ತರಾಖಂಡ್‍ನಲ್ಲಿ ಇಂದು ಮಧ್ಯಾಹ್ನ 3 ಗಂಟೆಗೆ ತ್ರಿವೇಂದ್ರ ಸಿಂಗ್ ರಾವತ್ ಮುಖ್ಯಮಂತ್ರಿಯಾಗಿ ಅಧಿಕಾರದ ಪ್ರತಿಜ್ಞಾವಿಧಿ ಸ್ವೀಕರಿಸಲಿದ್ದಾರೆ.

    ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಹಾಗೂ ಕೇಂದ್ರ ಸಚಿವರು ಭಾಗಿಯಾಗಲಿದ್ದಾರೆ. ಮಾಜಿ ಸಂಘ ಪ್ರಚಾರಕರಾಗಿರುವ ರಾವತ್, ದೋಯ್‍ವಾಲಾ ಕ್ಷೇತ್ರದಿಂದ ವಿಧಾನಸಭೆ ಪ್ರವೇಶಿಸಿದ್ದಾರೆ.

    ಬಿಜೆಪಿ ಪ್ರಚಂಡ ಜಯ ಸಾಧಿಸಿರುವ ಉತ್ತರಪ್ರದೇಶದಲ್ಲಿ ಸರ್ಕಾರದ ಸಾರಥಿ ಯಾರಾಗಲಿದ್ದಾರೆ ಎಂಬ ಕುತೂಹಲಕ್ಕೆ ಇಂದು ತೆರೆ ಬೀಳಲಿದೆ. ಮನೋಜ್ ಸಿನ್ಹಾ ಅವರು ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದ್ರೆ ನಾನು ಸಿಎಂ ರೇಸ್‍ನಲ್ಲಿ ಇಲ್ಲ ಎಂದು ಸಿನ್ಹಾ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಸಿಎಂ ಯಾರಾಗ್ತಾರೆ ಎಂಬ ಬಗ್ಗೆ ಇವತ್ತು ಅಧಿಕೃತ ಘೋಷಣೆ ಹೊರಬೀಳಲಿದೆ.

    ಮಾರ್ಚ್ 11ರಂದು ಫಲಿತಾಂಶ ಬಂದಿತ್ತಾದರೂ ಯಾರನ್ನು ಸಿಎಂ ಮಾಡಬೇಕೆಂಬ ಲೆಕ್ಕಾಚಾರದಲ್ಲೇ ಬಿಜೆಪಿ ತೊಡಗಿಕೊಂಡಿತ್ತು. ಇಂದು ಲಕ್ನೋದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಇದರಲ್ಲಿ ಮನೋಜ್ ಸಿನ್ಹಾರನ್ನು ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆ ಮಾಡಲಾಗುತ್ತದೆ ಎಂದು ಹೇಳಲಾಗಿದೆ.

    ಭಾನುವಾರ ಮಧ್ಯಾಹ್ನ 2.15ಕ್ಕೆ ಲಕ್ನೋದಲ್ಲಿರುವ ಉಪವನದಲ್ಲಿ ರಾಜ್ಯಪಾಲ ರಾಮ್‍ನಾಯ್ಕ್ ನೂತನ ಸಿಎಂ ಮತ್ತು ಸಚಿವರಿಗೆ ಪ್ರತಿಜ್ಞಾವಿಧಿ ಬೋಧಿಸಲಿದ್ದಾರೆ. ಈ ಐತಿಹಾಸಿಕ ಕ್ಷಣಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಸಾಕ್ಷಿಯಾಗಲಿದ್ದಾರೆ.

                                    

    ಸದ್ಯ ಸಿನ್ಹಾ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದಾರೆ ಮತ್ತು ದೂರಸಂಪರ್ಕ ಖಾತೆಯ ಸ್ವತಂತ್ರ ಸಚಿವರಾಗಿದ್ದಾರೆ. ಗಾಜಿಪುರ್ ಸಂಸದರಾಗಿರುವ ಮನೋಜ್ ಸಿನ್ಹಾ ಭೂಮಿಹಾರ್ ಸಮುದಾಯಕ್ಕೆ ಸೇರಿದವರು. ಸಿವಿಲ್ ಎಂಜಿನಿಯರಿಂಗ್‍ನಲ್ಲಿ ಪದವಿ ಪಡೆದಿರುವ ಸಿನ್ಹಾ 1959ರಲ್ಲಿ ಗಾಜಿಯಪುರದ ಮೋಹನ್‍ಪುರದಲ್ಲಿ ಜನಿಸಿದ್ದರು. 1996ರಲ್ಲಿ ಮೊದಲ ಬಾರಿಗೆ ಲೋಕಸಭೆಗೆ ಆಯ್ಕೆಯಾಗಿದ್ದ ಇವರು ಸಂಸದರ ಪ್ರದೇಶಾಭಿವೃದ್ಧಿ ನಿಧಿಯನ್ನು ಸಂಪೂರ್ಣವಾಗಿ ಬಳಸಿಕೊಂಡ ಸಂಸದ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಬನಾರಸ್ ಹಿಂದೂ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರುವ ಸಿನ್ಹಾ ಪ್ರಾಮಾಣಿಕ, ದಕ್ಷ ಸಂಸದರಲ್ಲಿ ಒಬ್ಬರು ಎಂಬ ಖ್ಯಾತಿಯನ್ನು ಹೊಂದಿದ್ದಾರೆ.