Tag: Triple talaq bill

  • ತ್ರಿವಳಿ ತಲಾಖ್ ವಿಧೇಯಕಕ್ಕೆ ಲೋಕಸಭೆ ಅಸ್ತು: ಮಸೂದೆಯ ಪರ 303, ವಿರೋಧ 82 ಮತ

    ತ್ರಿವಳಿ ತಲಾಖ್ ವಿಧೇಯಕಕ್ಕೆ ಲೋಕಸಭೆ ಅಸ್ತು: ಮಸೂದೆಯ ಪರ 303, ವಿರೋಧ 82 ಮತ

    ನವದೆಹಲಿ: ದೇಶಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದ್ದ ತ್ರಿವಳಿ ತಲಾಖ್ ತಿದ್ದುಪಡಿ ವಿಧೇಯಕಕ್ಕೆ ಲೋಕಸಭೆಯಲ್ಲಿ ಗುರುವಾರ ಅಂಗೀಕಾರ ಸಿಕ್ಕಿದೆ.

    ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರು ಈ ಹಿಂದೆ ಎರಡು ಬಾರಿ ತ್ರಿವಳಿ ತಲಾಖ್ ವಿಧೇಯಕ ಮಂಡಿಸಿದ್ದರು. ಆದರೆ  ರಾಜ್ಯಸಭೆಯಲ್ಲಿ ಬಹುಮತವಿಲ್ಲದ ಕಾರಣ ವಿಧೇಯಕ ಬಿದ್ದು ಹೋಗಿತ್ತು. ಈ ಬಾರಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರಕ್ಕೆ ಭಾರೀ ಬಹುಮತವಿದೆ. ಹೀಗಾಗಿ ವಿಧೇಯಕ ಅಂಗೀಕಾರವಾಗಿದೆ.

    ತ್ರಿವಳಿ ತಲಾಖ್ ಮಸೂದೆಗೆ ಕಾಂಗ್ರೆಸ್, ಸಮಾಜವಾದಿ ಪಕ್ಷ, ತೃಣಮೂಲ ಕಾಂಗ್ರೆಸ್ ಮತ್ತು ಡಿಎಂಕೆ ಪಕ್ಷಗಳು ತೀವ್ರವಾದ ವಿರೋಧ ವ್ಯಕ್ತಪಡಿಸಿದವು. ಆದರೆ ಅಂತಿಮವಾಗಿ ಮಸೂದೆಯನ್ನು ಮತಕ್ಕೆ ಹಾಕಿದಾಗ ಮಸೂದೆಯ ಪರ 303 ಮತ್ತು ವಿರೋಧವಾಗಿ 82 ಮತಗಳು ಬಿದ್ದವು. ಈ ಮೂಲಕ ಎನ್‍ಡಿಎ ಸರ್ಕಾರದ ಮಹತ್ವಾಕಾಂಕ್ಷಿ ಮಸೂದೆ ಲೋಕಸಭೆಯಲ್ಲಿ ಅಂಗೀಕಾರಗೊಂಡಿದೆ.

    ಈ ವಿಧೇಯಕದ ಕುರಿತು ಮಾತನಾಡಿದ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರು, ವಿಶ್ವದ 20 ದೇಶಗಳಲ್ಲಿ ನಿಷೇಧವಾಗಿರುವ ತ್ರಿವಳಿ ತಲಾಖ್ ಪದ್ಧತಿ ನಮ್ಮಲ್ಲೇಕಾಗಬಾರದು? ಇದು ಧರ್ಮಾಧಾರಿತ ಮಸೂದೆಯಲ್ಲ. ಮುಸ್ಲಿಂ ಮಹಿಳೆಯರ ರಕ್ಷಣೆಗೆ, ಲಿಂಗಭೇದ-ತಾರತಮ್ಯ ನಿವಾರಣೆಗೆ ಕೇಂದ್ರದ ಸರ್ಕಾರ ಬಿಲ್ ಜಾರಿಗೆ ತರ್ತಿದೆ ಅಂತ ಬಲವಾಗಿ ವಾದಿಸಿದರು.

    ಪ್ರಾದೇಶಿಕ ಪಕ್ಷಗಳು ಈ ಬಾರಿಯೂ ಭಾರೀ ವಿರೋಧ ವ್ಯಕ್ತಪಡಿಸಿ, ತ್ರಿವಳಿ ತಲಾಖ್ ಮಸೂದೆಯಲ್ಲಿ ಕೆಲವು ಅಂಶಗಳು ಅಸಂವಿಧಾನಿಕವಾಗಿವೆ. ಈ ಕರಡು ಕಾನೂನನ್ನು ಇನ್ನಷ್ಟು ಆಳವಾಗಿ ಅವಲೋಕಿಸಬೇಕಾದ ಅಗತ್ಯವಿದೆ ಎಂದು ಪಟ್ಟು ಹಿಡಿದರು.

    ರೆವೆಲ್ಯೂಷನರಿ ಸೋಷಲಿಸ್ಟಿಕ್ ಪಕ್ಷದ ಸಂಸದ ಎನ್.ಕೆ ರಾಮಚಂದ್ರನ್ ಮಾತನಾಡಿ, ತ್ರಿವಳಿ ತಲಾಖ್ ಕೇವಲ ಮುಸ್ಲಿಂ ಸಮುದಾಯಕ್ಕೆ ಮಾತ್ರ ಶಿಕ್ಷೆ ನೀಡುತ್ತದೆ. ವಿಚ್ಛೇದನ ಪಡೆದವರು ಯಾವುದೇ ಧರ್ಮಕ್ಕೆ ಸೇರಿದ್ದರೂ ಅವರಿಗೆ ಜೈಲು ಶಿಕ್ಷೆಯಾಗಬೇಕು ಎಂಬ ಕಾನೂನು ರೂಪಿಸಿ ಎಂದು ಒತ್ತಾಯಿಸಿದರು.

    ವಿಪಕ್ಷ ಹಾಗೂ ಪ್ರಾದೇಶಿಕ ಪಕ್ಷಗಳ ವಿರೋಧಕ್ಕೆ ಪ್ರತಿಕ್ರಿಯೆ ನೀಡಿದ ರವಿ ಶಂಕರ್ ಅವರು, ಮುಸ್ಲಿಂ ಮಹಿಳೆಯರ ವೈವಾಹಿಕ ಹಕ್ಕು ರಕ್ಷಣೆ ಕಾಯ್ದೆಯ ಬಗ್ಗೆ ಭಯಪಡುವ ಅಗತ್ಯವಿಲ್ಲ. ಕಾಯ್ದೆಯಡಿ ಸಂತ್ರಸ್ತ ಪತ್ನಿ ಅಥವಾ ಆಕೆಯ ರಕ್ತ ಸಂಬಂಧಿ ಪ್ರಕರಣ ದಾಖಲಿಸಿದರೆ ಅಷ್ಟೇ ಆರೋಪಿಯನ್ನು ಬಂಧಿಸಲಾಗುತ್ತದೆ ಎಂದು ತಿಳಿಸಿದರು.

    ಉತ್ತರ ಪ್ರದೇಶದಲ್ಲಿ ಬಾನೋ ಎಂಬ ಮಹಿಳೆಗೆ ತ್ರಿವಳಿ ತಲಾಖ್ ನೀಡಲಾಗಿದೆ. ಪತಿ ಹಾಗೂ ಮನೆ ಮಂದಿ ವರದಕ್ಷಿಣೆಗಾಗಿ ಆಕೆಯನ್ನು ಹಿಂಸೆ ಮಾಡುತ್ತಿದ್ದರು. ತ್ರಿವಳಿ ತಲಾಖ್ ಮಹಿಳೆಯ ವೈವಾಹಿಕ ಜೀವನದ ರಕ್ಷಣೆಗೆ ತರಲಾಗುತ್ತಿದೆ ಎಂದು ಪ್ರಸಾದ್ ವಿವರಿಸಿದರು.

  • ಲೋಕಸಭೆಯಲ್ಲಿ ಮತ್ತೆ ಸದ್ದು ಮಾಡಿದ ತ್ರಿವಳಿ ತಲಾಖ್

    ಲೋಕಸಭೆಯಲ್ಲಿ ಮತ್ತೆ ಸದ್ದು ಮಾಡಿದ ತ್ರಿವಳಿ ತಲಾಖ್

    – ಬಿಜೆಪಿಗೆ ಮುಸ್ಲಿಂ ಮಹಿಳೆಯರ ಮೇಲೆ ಎಷ್ಟು ಪ್ರೀತಿಯಿದೆ: ಓವೈಸಿ ವ್ಯಂಗ್ಯ

    ನವದೆಹಲಿ: ಸಂಸತ್‍ನ ಕಲಾಪದಲ್ಲಿ ತ್ರಿವಳಿ ತಲಾಖ್ ಮತ್ತು ಶಬರಿಮಲೆ ಪ್ರಕರಣಗಳು ಭಾರೀ ಸದ್ದು ಮಾಡಿವೆ. ಈ ವಿಚಾರವಾಗಿ ಪರ ಹಾಗೂ ವಿರೋಧ ವ್ಯಕ್ತವಾಗಿದೆ.

    ವಿಪಕ್ಷಗಳ ವಿರೋಧದ ನಡುವೆಯೂ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರು, ತ್ರಿವಳಿ ತಲಾಖ್ ನಿಷೇಧಿಸುವ ತಿದ್ದುಪಡಿ ವಿಧೇಯಕ ಮಂಡಿಸಿದರು. ಲಿಂಗ ಸಮಾನತೆ ಹಾಗೂ ನ್ಯಾಯದ ದೃಷ್ಟಿಯಿಂದ ಈ ಶಾಸನವು ಅತ್ಯಗತ್ಯ. ಇದು ಧರ್ಮದ ಪ್ರಶ್ನೆಯಲ್ಲ. ಮಹಿಳೆಯರ ಹಕ್ಕಿನ ಪ್ರಶ್ನೆ ಎಂದು ಹೇಳಿದರು.

    ದೇಶದಲ್ಲಿ ತ್ರಿವಳಿ ತಲಾಖ್‍ನ 543 ಕೇಸುಗಳು ಈಗಾಗಲೇ ವರದಿಯಾಗಿವೆ. ತ್ರಿವಳಿ ತಲಾಖ್ ಅನ್ನು ಸುಪ್ರೀಂ ಕೋರ್ಟ್ ನಿಷೇಧಿಸಿದ ಬಳಿಕವೂ 200ರಷ್ಟು ಕೇಸುಗಳು ದಾಖಲಾಗಿವೆ. ಇದು ಮಹಿಳೆಯರ ಘನತೆಯ ಪ್ರಶ್ನೆ ಮತ್ತು ಅವರ ರಕ್ಷಣೆಗೆ ನಾವು ಬದ್ಧರಾಗಿದ್ದೇವೆ ಎಂದು ರವಿಶಂಕರ್ ತಿಳಿಸಿದರು.

    ವಿಧೇಯಕ ಮಂಡಿಸುವಂತೆ ಸ್ಪೀಕರ್ ಓಂ ಬಿರ್ಲಾ ಹೇಳಿದ ತಕ್ಷಣ ಪ್ರತಿಪಕ್ಷದವರು ಗದ್ದಲ ಆರಂಭಿಸಿದರು. ವಿಧೇಯಕವನ್ನು ನಾನು ವಿರೋಧಿಸುತ್ತೇನೆ ಎಂದ ಕಾಂಗ್ರೆಸ್ ಮುಖಂಡ ಶಶಿ ತರೂರ್, ಇದು ಮುಸ್ಲಿಮರಿಗೆ ಮಾತ್ರವೇ ಅಲ್ಲ, ಪತ್ನಿಯರನ್ನು ತೊರೆಯುವ ಎಲ್ಲ ಪ್ರಕರಣಗಳಿಗೂ ಅನ್ವಯವಾಗಬೇಕು ಎಂದು ಆಗ್ರಹಿಸಿದರು.

    ಬಿಜೆಪಿಗೆ ಮುಸ್ಲಿಂ ಮಹಿಳೆಯರ ಮೇಲೆ ಎಷ್ಟು ಪ್ರೀತಿಯಿದೆ ಎಂದು ವ್ಯಂಗ್ಯವಾಡಿದ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ಕೇರಳದ ಶಬರಿಮಲೆ ಪ್ರವೇಶಿಸುವ ಹಿಂದೂ ಮಹಿಳೆಯರ ಹಕ್ಕನ್ನು ವಿರೋಧಿಸಿತು ಎಂದು ಟೀಕಿಸಿದರು.

    ತಪ್ಪಿತಸ್ಥ ಮುಸ್ಲಿಂ ಪುರುಷರಿಗೆ 3 ವರ್ಷ ಜೈಲು ಶಿಕ್ಷೆ ತ್ರಿವಳಿ ತಲಾಖ್ ವಿಧೇಯಕದಲ್ಲಿದೆ. ಆದರೆ ಮುಸಲ್ಮಾನೇತರರು ಇದೇ ತಪ್ಪು ಮಾಡಿದರೆ ಕೇವಲ ಒಂದು ವರ್ಷ ಜೈಲು ಶಿಕ್ಷೆ. ಇದು ಸಂವಿಧಾನಿಕ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಅಸಾದುದ್ದೀನ್ ಓವೈಸಿ ಕಿಡಿಕಾರಿದರು.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಲೋಕಸಭೆಯಲ್ಲಿ ಐತಿಹಾಸಿಕ ತ್ರಿವಳಿ ತಲಾಖ್ ಮಸೂದೆ ಅಂಗೀಕಾರ

    ಲೋಕಸಭೆಯಲ್ಲಿ ಐತಿಹಾಸಿಕ ತ್ರಿವಳಿ ತಲಾಖ್ ಮಸೂದೆ ಅಂಗೀಕಾರ

    ನವದೆಹಲಿ: ತ್ರಿವಳಿ ತಲಾಖ್ ಮಸೂದೆಯನ್ನು ಲೋಕಸಭೆಯಲ್ಲಿ ಇಂದು ಅಂಗೀಕರಿಸಿದೆ. ವಿರೋಧ ಪಕ್ಷಗಳಾದ ಕಾಂಗ್ರೆಸ್, ಎಐಡಿಎಂಕೆ ಮತ್ತು ಸಮಾಜವಾದಿ ಪಾರ್ಟಿ ಸದನದಿಂದ ಹೊರ ನಡೆದ ಬಳಿಕ ತ್ರಿಪಲ್ ತಲಾಖ್ ಅಂಗೀಕರಿಸಲಾಯ್ತು.

    ಮಸೂದೆ ಅಂಗೀಕಾರಕ್ಕೂ ಮೊದಲು ಮಾತನಾಡಿದ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್, ತ್ರಿವಳಿ ತಲಾಖ್ ಮಸೂದೆ ಯಾವುದೇ ಸಮುದಾಯದ, ಧರ್ಮದ ವಿರುದ್ಧವಾಗಿಲ್ಲ. ಈ ವಿಧೇಯಕ ಮಹಿಳಾ ಹಕ್ಕುಗಳನ್ನು ರಕ್ಷಣೆ ಮಾಡಲಿದೆ. ತಲಾಖ್ ಪದ್ಧತಿಯನ್ನು 20 ಇಸ್ಲಾಮಿಕ್ ದೇಶಗಳು ನಿಷೇಧ ಮಾಡಿವೆ. ಹೀಗಿರುವಾಗ ಜಾತ್ಯತೀತ ದೇಶವೆಂದು ಕರೆಸಿಕೊಳ್ಳುವ ಭಾರತದಲ್ಲಿ ಮಾತ್ರ ತಲಾಖ್ ಪದ್ಧತಿ ಜಾರಿಯಲ್ಲಿದೆ. ಇದನ್ನು ಏಕೆ ನಿಷೇಧ ಮಾಡಬಾರದು ಎಂದು ಪ್ರಶ್ನಿಸಿ, ತಲಾಖ್ ಮಸೂದೆ ವಿಚಾರದಲ್ಲಿ ರಾಜಕಾರಣ ಸಲ್ಲದು. ಎಲ್ಲರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದರು.

    ರವಿಶಂಕರ್ ಪ್ರಸಾದ್ ಅವರ ಮನವಿಗೆ ಪ್ರತಿಕ್ರಿಯೆ ನೀಡಿದ ಸಂಸದೀಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ್ ಖರ್ಗೆ ಮಾತನಾಡಿ, ತ್ರಿವಳಿ ತಲಾಖ್ ಚರ್ಚೆಗೆ ನಮ್ಮ ಪಕ್ಷದ ಸದಸ್ಯರು ಸಿದ್ಧರಾಗಿದ್ದಾರೆ. ಆದರೆ ಮಸೂದೆಯನ್ನು ಅಂಗೀಕರಿಸುವ ಮುನ್ನ ಜಂಟಿ ಸದನ ಸಮಿತಿಗೆ ಒಪ್ಪಿಸಬೇಕು ಎಂದು ಆಗ್ರಹಿಸಿದ್ದರು.

    ಇದೇ ವೇಳೆ ಧ್ವನಿಗೂಡಿಸಿದ ಸಂಸದೆ ಸುಷ್ಮಿತಾ ದೇವ್ ಅವರು, ತ್ರಿವಳಿ ತಲಾಖ್‍ನ್ನು ಕ್ರಿಮಿನಲ್ ಅಪರಾಧನವನ್ನಾಗಿ ಮಾಡುವುದು ಸುಪ್ರೀಂ ಕೋರ್ಟ್ ತೀರ್ಪಿಗೆ ವಿರುದ್ಧವಾಗಿದೆ. ಹೀಗಾಗಿ ಮಸೂದೆಯನ್ನು ಸಂಸತ್‍ನ ಜಂಟಿ ಆಯ್ಕೆ ಸಮಿತಿಗೆ ವರ್ಗಾವಣೆ ಮಾಡಬೇಕೆಂದು ಎಂದು ಒತ್ತಾಯಿಸಿದರು.

    ಮಸೂದೆಯಲ್ಲಿ ಏನಿದೆ?:
    2018ರ ಪರಿಷ್ಕೃತ ಮಸೂದೆ ಪ್ರಕಾರ ತ್ರಿವಳಿ ತಲಾಖ್ ಕಾನೂನು ಬಾಹಿರ ಮತ್ತು ಜಾಮೀನು ರಹಿತ ಕ್ರಿಮಿನಲ್ ಅಪರಾಧವಾಗಲಿದೆ. ತಲಾಖ್ ನೀಡುವ ಮುಸ್ಲಿಂ ಪುರುಷರಿಗೆ ಮೂರು ವರ್ಷ ಜೈಲು ಶಿಕ್ಷೆಯ ಪ್ರಸ್ತಾವ ಈ ಮಸೂದೆಯಲ್ಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv