Tag: Triple

  • ತ್ರಿವಳಿ ತಲಾಖ್ ಬಳಿಕ ನಿಖಾ ಹಲಾಲ, ಬಹುಪತ್ನಿತ್ವ ರದ್ದತಿಗೆ ಕೇಂದ್ರ ಚಿಂತನೆ!

    ತ್ರಿವಳಿ ತಲಾಖ್ ಬಳಿಕ ನಿಖಾ ಹಲಾಲ, ಬಹುಪತ್ನಿತ್ವ ರದ್ದತಿಗೆ ಕೇಂದ್ರ ಚಿಂತನೆ!

    ನವದೆಹಲಿ: ತ್ರಿವಳಿ ತಲಾಖ್ ನಿಷೇಧದ ಪರ ನಿಂತಿದ್ದ ಕೇಂದ್ರ ಸರ್ಕಾರ ಈಗ ಸದ್ಯ ಚಾಲ್ತಿಯಲ್ಲಿರುವ ನಿಖಾ ಹಲಾಲ ಹಾಗೂ ಬಹು ಪತ್ನಿತ್ವವನ್ನು ನಿಷೇಧ ಮಾಡಲು ಕೋರ್ಟ್ ಗೆ ಅರ್ಜಿ ಸಲ್ಲಿಸಿದ ಮಹಿಳೆಯರ ಪರ ನಿಲ್ಲಲು ಚಿಂತನೆ ನಡೆಸಿದೆ.

    ಈ ಕುರಿತು ಸುಪ್ರೀಂ ಕೋರ್ಟ್‍ನಲ್ಲಿ ಅರ್ಜಿ ವಿಚಾರಣೆ ನಡೆಯುವ ವೇಳೆ ತೊಂದರೆ ಅನುಭವಿಸಿದ ಮಹಿಳೆಯರ ಪರ ನಿಲ್ಲುವ ಕುರಿತು ಕೇಂದ್ರ ಚಿಂತನೆ ನಡೆಸಿದೆ. ಈ ಎರಡು ಪದ್ಧತಿಗಳು ಮಹಿಳಾ ವಿರೋಧಿಯಾಗಿದ್ದು ಎಂದು ನಿಷೇಧ ಮಾಡಬೇಕೆಂದು ಕೆಲ ಮಹಿಳೆಯರು ಸುಪ್ರೀಂ ಕೋರ್ಟ್ ನಲ್ಲಿ ಈಗಾಗಲೇ ಅರ್ಜಿ ಸಲ್ಲಿಸಿದ್ದಾರೆ. ಕೆಲ ದಿನಗಳಲ್ಲಿ ಈ ಅರ್ಜಿ ವಿಚಾರಣೆಗೆ ಬರಲಿದ್ದು ಈ ವೇಳೆ ಸಂತ್ರಸ್ತ ಮಹಿಳೆಯರ ಪರ ನಿಲ್ಲಲು ಕೇಂದ್ರ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.

    ಈ ಹಿಂದೆ ಅರ್ಜಿ ವಿಚಾರಣೆ ವೇಳೆ ನ್ಯಾಯಾಲಯ ಕೇಂದ್ರ ಕಾನೂನು ಸಚಿವಾಲಯಕ್ಕೆ ಅಭಿಪ್ರಾಯ ತಿಳಿಸುವಂತೆ ನೋಟಿಸ್ ಜಾರಿ ಮಾಡಿತ್ತು. ಅಲ್ಲದೇ ಕೋರ್ಟ್ ಗೆ ಸಲ್ಲಿಕೆಯಾಗಿರುವ ಅರ್ಜಿಗಳ ಅನ್ವಯ ಮುಸ್ಲಿಂ ವೈಯಕ್ತಿಕ ಕಾನೂನು(ಷರಿಯಾತ್) ನಿರ್ಬಂಧಗಳನ್ನು ಅಸಂವಿಧಾನಿಕ ಎಂದು ಘೋಷಿಸಲು ಸಾಧ್ಯವೇ ಎಂದು ತನ್ನ ಅಭಿಪ್ರಾಯವನ್ನು ತಿಳಿಸುವಂತೆ ಸೂಚಿಸಿತ್ತು.

    ಏನಿದು ನಿಖಾ ಹಲಾಲ?
    ಒಮ್ಮೆ ವಿಚ್ಛೇದನ ಪಡೆದ ನಂತರ ದಂಪತಿ ಮತ್ತೊಮ್ಮೆ ಮದುವೆಯಾಗಬೇಕಾದರೆ, ಪತ್ನಿ ಬೇರೊಬ್ಬನನ್ನು ಮದುವೆಯಾಗಿ ನಂತರ ಅವನಿಂದ ವಿಚ್ಛೇದನ ಪಡೆದು ಮೊದಲಿನ ಸತಿಯನ್ನು ಮದುವೆಯಾಗುವುದಕ್ಕೆ ನಿಖಾ ಹಲಾಲ ಎಂದು ಕರೆಯಲಾಗುತ್ತದೆ.

    ಬಹುಪತ್ನಿತ್ವ ಪದ್ಧತಿ ಒಬ್ಬ ಪುರುಷ ಒಂದಕ್ಕಿಂತ ಹೆಚ್ಚು ಮಹಿಳೆಯರನ್ನು ಮದುವೆಯಾಗಲು ಅವಕಾಶ ನೀಡುತ್ತದೆ. ಈ ಎರಡು ಪದ್ಧತಿಗಳನ್ನು ಅಸಂವಿಧಾನಿಕ ಎಂದು ಘೋಷಿಸಿ ನಿಷೇಧಿಸಬೇಕೆಂದು ಮನವಿ ಮಾಡಿ ಕೆಲ ಮಹಿಳೆಯರು ಸುಪ್ರೀಂ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಇದೇ ವೇಳೆ ತ್ರಿವಳಿ ತಲಾಖ್ ನಿಷೇಧದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಭಾರತೀಯ ಮುಸ್ಲಿಂ ಮಹಿಳಾ ಆಂದೋಲನ ಸಂಘಟನೆ (ಬಿಎಂಎಂಎ) ಅರ್ಜಿ ಸಲ್ಲಿಸಿದ ಮಹಿಳೆಯರಿಗೆ ಬೆಂಬಲ ನೀಡುವುದಾಗಿ ತಿಳಿಸಿದೆ.

  • ತ್ರಿವಳಿ ತಲಾಖ್ ಕರಡು ಮಸೂದೆ ಸಿದ್ಧ: ಶಿಕ್ಷೆ ಏನು ಗೊತ್ತಾ?

    ತ್ರಿವಳಿ ತಲಾಖ್ ಕರಡು ಮಸೂದೆ ಸಿದ್ಧ: ಶಿಕ್ಷೆ ಏನು ಗೊತ್ತಾ?

    ನವದೆಹಲಿ: ಮುಸ್ಲಿಮ್ ಸಮುದಾಯದಲ್ಲಿ ತ್ರಿವಳಿ ತಲಾಖ್ ಹೇಳಿ ಪತ್ನಿಗೆ ವಿಚ್ಛೇದನ ನೀಡಿದರೆ ಪತಿಗೆ ಮೂರು ವರ್ಷ ಶಿಕ್ಷೆ ನೀಡುವ ಕಾನೂನು ತರಲು ರೂಪಿಸಲಾಗಿರುವ ಮಸೂದೆಗೆ ಕೇಂದ್ರದ ಕ್ಯಾಬಿನೆಟ್ ಶುಕ್ರವಾರ ಒಪ್ಪಿಗೆ ನೀಡಿದೆ.

    ಇದೇ ಆಗಸ್ಟ್ ನಲ್ಲಿ ಸುಪ್ರೀಂ ಕೋರ್ಟ್ ತ್ರಿವಳಿ ತಲಾಖ್ ನಿಷೇಧಿಸಿ ಕಾನೂನು ರೂಪಿಸುವಂತೆ ಕೇಂದ್ರಕ್ಕೆ ಆದೇಶಿಸಿತ್ತು. ಈ ಆದೇಶದ ಅನ್ವಯ ಕೇಂದ್ರ ಸರ್ಕಾರ ಮುಸ್ಲಿಮ್ ಮಹಿಳೆಯರ ಮದುವೆ, ಹಕ್ಕುಗಳ ರಕ್ಷಣೆಯ ಕರಡು ಮಸೂದೆ 2017ನ್ನು ಸಿದ್ದಪಡಿಸಿದ್ದು, ಈ ಚಳಿಗಾಲದ ಆಧಿವೇಶನದಲ್ಲಿ ಮಂಡನೆಯಾಗುವ ಸಾಧ್ಯತೆಯಿದೆ.

    ಕರಡು ಮಸೂದೆಯಲ್ಲಿ ತ್ರಿವಳಿ ತಲಾಖ್ ನೀಡಿದರೆ ಆ ವ್ಯಕ್ತಿಗೆ ಮೂರು ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸಬೇಕೆಂಬ ಅಂಶವಿದೆ. ತ್ರಿವಳಿ ತಲಾಖ್ ಅಥವಾ ತಲಾಕ್ ಇ ಬಿದ್ದತ್ ಅನ್ನು ಕಾಗ್ನಿಸೆಬಲ್ ಅಪರಾಧ ಎಂದು ಪರಿಗಣಿಸಬೇಕು. ಅಷ್ಟೇ ಅಲ್ಲದೇ ಜಾಮೀನು ನೀಡಬಾರದು. ಅನ್ಯಾಯಕ್ಕೆ ಒಳಗಾದ ಮಹಿಳೆಗೆ ಪರಿಹಾರ ನೀಡಬೇಕು ಎನ್ನುವ ಅಂಶವನ್ನು ಸೇರಿಸಲಾಗಿದೆ.

    ಕರುಡು ಮಸೂದೆಯ ಪ್ರಕಾರ ಬಾಯಿ ಮಾತು, ಬರವಣಿಗೆ ಅಥವಾ ಯಾವುದೇ ಎಲೆಕ್ಟ್ರಾನಿಕ್ ಅಂದರೆ ಇಮೇಲ್, ಎಸ್‍ಎಂಎಸ್, ವಾಟ್ಸಪ್ ಮೂಲಕ ತಲಾಖ್ ಹೇಳಿದರೆ ಅದು ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸಲಾಗುತ್ತದೆ.

    ತ್ರಿವಳಿ ತಲಾಖ್ ಅಸಂವಿಧಾನಿಕ ಎಂದು ಹೇಳಿ ಸುಪ್ರೀಂ ಕೋರ್ಟ್ ಸಂಪೂರ್ಣ ರದ್ದುಗೊಳಿಸಿ ತೀರ್ಪು ನೀಡಿದ ಬಳಿಕವೂ ಮುಸ್ಲಿಮ್ ಸಮುದಾಯದಲ್ಲಿ ತ್ರಿವಳಿ ತಲಾಖ್ ನೀಡಿದ ಪ್ರಕರಣಗಳು ಬೆಳಕಿಗೆ ಬಂದಿತ್ತು. ಕೋರ್ಟ್ ಆದೇಶದ ಅನ್ವಯ ಕಾನೂನು ರೂಪಿಸಲು ಕೇಂದ್ರ ಸರ್ಕಾರ ಮಸೂದೆ ಸಿದ್ಧಪಡಿಸಲು ಸಚಿವರ ಸಮಿತಿಯನ್ನು ರಚಿಸಿತ್ತು. ಇಂದು ಸಚಿವರ ಸಮಿತಿ ಸಿದ್ಧ ಪಡಿಸಿದ ಕರಡು ಮಸೂದೆಗೆ ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಕ್ಯಾಬಿನೆಟ್ ಸಭೆ ಒಪ್ಪಿಗೆ ನೀಡಿದೆ.