Tag: Tribes

  • ಏಳೆಂಟು ಕಿ.ಮೀ. ಹೆಗಲ ಮೇಲೆ ಫುಡ್ ಕಿಟ್ ಹೊತ್ತು ಬಡವರಿಗೆ ನೀಡಿದ ಹೃದಯವಂತರು

    ಏಳೆಂಟು ಕಿ.ಮೀ. ಹೆಗಲ ಮೇಲೆ ಫುಡ್ ಕಿಟ್ ಹೊತ್ತು ಬಡವರಿಗೆ ನೀಡಿದ ಹೃದಯವಂತರು

    – ಆಶಾ ಕಾರ್ಯಕರ್ತೆಯರಿಗೆ ಬಾಗಿನ ನೀಡಿ ಗೌರವ ಸಮರ್ಪಣೆ

    ಚಿಕ್ಕಮಗಳೂರು: ನಕ್ಸಲ್ ಪೀಡಿತ ಪ್ರದೇಶ ಹಾಗೂ ಕುಗ್ರಾಮಗಳಲ್ಲಿರುವ ಬಡವರು, ನಿರ್ಗತಿಕರು, ವಿಕಲಚೇತನರನ್ನ ಗುರುತಿಸಿ ಅವರ ಮನೆ ಬಾಗಿಲಿಗೆ ಹೋಗಿ ಕಿಟ್ ವಿತರಿಸಿರುವಂತಹ ಹೃದಯ ವೈಶಾಲ್ಯತೆಯ ಘಟನೆಗೆ ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರ ಹೋಬಳಿ ಸಾಕ್ಷಿಯಾಗಿದೆ.

    ಜಯಪುರದಲ್ಲಿರುವ ಸ್ಪಂದನಾ ಟ್ರಸ್ಟ್‍ನ ಸದಸ್ಯರು ತಮ್ಮ ಹೋಬಳಿ ವ್ಯಾಪ್ತಿಯಲ್ಲಿ ಬರುವ ನಿರ್ಗತಿಕರು, ನಿರಾಶ್ರಿತರು, ಅಂಗವಿಕಲರು, ವೃದ್ಧರಿಗೆ ಕಿಟ್ ನೀಡಿ ಧೈರ್ಯ ತುಂಬಿದ್ದಾರೆ. ಜೊತೆಗೆ ಮೆಣಸಿನ ಹಾಡ್ಯ, ಇಡಗುಂದ ಸೇರಿದಂತೆ ಹೋಬಳಿ ವ್ಯಾಪ್ತಿಯಲ್ಲಿರುವ ವಿವಿಧ ನಕ್ಸಲ್ ಪೀಡಿತ ಪ್ರದೇಶಗಳ ಬಡವರಿಗೂ ಕಿಟ್ ನೀಡಿದ್ದಾರೆ. ಇದೇ ವೇಳೆ, ಜೀವದ ಹಂಗನ್ನ ತೊರೆದು ಕುಗ್ರಾಮಗಳ ಜನರ ಜೀವವನ್ನು ಉಳಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೂ ಬಾಗಿನ ನೀಡಿ ಗೌರವಿಸಿದ್ದಾರೆ.

    ಹೆಮ್ಮಾರಿ ಕೊರೊನಾ ಇಡೀ ಜಗತ್ತನ್ನೇ ತಲ್ಲಣಗೊಳಿಸಿದೆ. ಎರಡನೇ ಅಲೆಯ ಅಬ್ಬರ ಗ್ರಾಮೀಣ ಭಾಗದ ಜನರ ಕಷ್ಟವನ್ನು ಹೇಳುವಂತಿಲ್ಲ. ಅದರಲ್ಲೂ ಮಲೆನಾಡ ಕುಗ್ರಾಮಗಳು, ನಕ್ಸಲ್ ಪೀಡಿತ ಪ್ರದೇಶದ ಜನರ ಪರಿಸ್ಥಿತಿ ಮತ್ತಷ್ಟು ಶೋಚನೀಯವಾಗಿದೆ. ಮಲೆನಾಡ ಬಹುತೇಕ ಭಾಗದಲ್ಲಿ ಜನ ಅಂದೇ ದುಡಿದು ಅಂದೇ ಊಟ ಮಾಡುವವರೇ ಹೆಚ್ಚು. ಕೊರೊನಾ ಕಾಲದಲ್ಲಂತೂ ಕೈಯಲ್ಲಿ ಹಣವಿಲ್ಲ, ಕೂಲಿಯೂ ಇಲ್ಲ. ಸಾರಿಗೆ ಸಂಪರ್ಕವೂ ಇಲ್ಲ. ನಗರ ಪ್ರದೇಶಕ್ಕೂ ಬರುವಂತಿಲ್ಲ. ಹೀಗಾಗಿ ಜನರ ಕಷ್ಟವನ್ನು ಕಣ್ಣಲ್ಲಿ ನೋಡದಿದ್ದರೂ ಸಹ ಸ್ಪಂದನ ಟ್ರಸ್ಟ್‍ನ ಸದಸ್ಯರು ಅವರ ಸಂಕಟವನ್ನ ಮನಗಂಡು ಕಿಟ್ ನೀಡಿ ಅವರ ನೆರವಿಗೆ ನಿಂತಿದ್ದಾರೆ. ದಟ್ಟ ಕಾನನ, ರಸ್ತೆ ಸಂಪರ್ಕವೂ ಇರಲ್ಲ. ಸಾರಿಗೆ ವ್ಯವಸ್ಥೆಯಂತೂ ಮೊದಲೇ ಇಲ್ಲ. ಅಂತಹ ಹಲವು ಗ್ರಾಮಗಳಿವೆ. ಗ್ರಾಮಗಳ ಬಡಕುಟುಂಬಗಳನ್ನು ಗುರುತಿಸಿ ಕಿಟ್ ನೀಡಲು ಕಾಡು-ಮೇಡು ಸುತ್ತಿ ಹಸಿದವರ ಹೊಟ್ಟೆ ತುಂಬಿಸುತ್ತಿದ್ದಾರೆ.

    ಕೊರೊನಾ ಲಾಕ್‍ಡೌನ್‍ನಲ್ಲಿ ನಗರಕ್ಕೆ ಬರಲು ಸಾಧ್ಯವಾಗದೆ ಹಸಿವಿನ ಸಂಕಟದಲ್ಲಿರುವ ಜನರ ನೆರವಿಗೆ ನಿಂತಿದ್ದಾರೆ. ಗುಡ್ಡಗಾಡಿನ ಸ್ಥಳಗಳಿಗೆ ಹೋಗಿ ಅಲ್ಲಿರುವ ಬಡ ಕುಟುಂಬಗಳಿಗೆ ಕಿಟ್ ವಿತರಿಸಿ ಅವರಿಗೆ ಸಹಾಯದ ಹಸ್ತ ತೋರಿದ್ದಾರೆ. ಸ್ಪಂದನ ಟ್ರಸ್ಟ್‍ನ ಈ ಸೇವಾ ಕಾರ್ಯಕ್ಕೆ ರಾಷ್ಟ್ರೀಯ ಸ್ವಯಂ ಸೇವಕರ ತಂಡ ಕೂಡ ಸಹಕಾರ ನೀಡಿದೆ.

    ಸ್ಪಂದನ ಟ್ರಸ್ಟಿಗಳ ಕೆಲಸಕ್ಕೆ ಅಲ್ಲಿನ ಜನ ಕೂಡ ಅಭಿನಂದನೆ ಸಲ್ಲಿಸಿದ್ದಾರೆ. ಇದರ ಜೊತೆ, ಜೀವದ ಹಂಗು ತೊರೆದು ಕೊರೋನಾ ವಿರುದ್ಧ ಹೋರಾಡುತ್ತಿರುವ ಆಶಾ ಕಾರ್ಯಕರ್ತೆಯರಿಗೂ ಸೀರೆ ಸೇರಿದಂತೆ ಬಾಗಿನ ನೀಡಿ ಗೌರವಿಸಿ ಅವರ ಸೇವೆಯನ್ನ ಶ್ಲಾಘಿಸಿದರು.

  • ಮಹಿಳೆಯರು ತಯಾರಿಸಿದ ವಸ್ತುಗಳನ್ನು ಖರೀದಿಸಿ ಮಹಿಳಾ ದಿನಾಚರಣೆ ಆಚರಿಸಿದ ಮೋದಿ

    ಮಹಿಳೆಯರು ತಯಾರಿಸಿದ ವಸ್ತುಗಳನ್ನು ಖರೀದಿಸಿ ಮಹಿಳಾ ದಿನಾಚರಣೆ ಆಚರಿಸಿದ ಮೋದಿ

    ನವದೆಹಲಿ: ಅಂತರಾಷ್ಟ್ರೀಯ ಮಹಿಳಾ ದಿನವನ್ನು ಪ್ರಧಾನಿ ನರೇಂದ್ರ ಮೋದಿ ವಿಭಿನ್ನವಾಗಿ ಆಚರಿಸಿದ್ದು, ಭಾರತೀಯ ಸಂಸ್ಕೃತಿ ಬಿಂಬಿಸುವ, ಸೃಜನಶೀಲತೆ, ಉದ್ಯಮವನ್ನು ಸಂಭ್ರಮಿಸುವಂತೆ ವಿವಿಧ ವಸ್ತುಗಳನ್ನು ಖರೀದಿಸಿದ್ದಾರೆ.

    ಆತ್ಮನಿರ್ಭರವಾಗಲು ಭಾರತದ ಅನ್ವೇಷಣೆಗೆ ಮಹಿಳೆಯರು ಪ್ರಮುಖ ಪಾತ್ರ ವಹಿಸಿದ್ದಾರೆ. ಮಹಿಳೆಯರ ಉದ್ಯಮಗಳನ್ನು ನಾವೆಲ್ಲರೂ ಪ್ರೋತ್ಸಾಹಿಸಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡುವ ಮೂಲಕ ತಿಳಿಸಿದ್ದಾರೆ. ಸರಣಿ ಟ್ವೀಟ್ ಮಾಡುವ ಮೂಲಕ ತಾವು ಖರೀದಿಸಿದ ವಸ್ತುಗಳ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

    ತಾವು ಖರೀದಿಸಿದ ಉತ್ಪನ್ನಗಳ ವಿವರಗಳನ್ನು ಹಂಚಿಕೊಂಡಿರುವ ಪ್ರಧಾನಿ ಮೋದಿ, ತಮಿಳುನಾಡಿನ ತೋಡಾ ಬುಡಕಟ್ಟು ಕುಶಲಕರ್ಮಿಗಳು ಕೈಯಿಂದ ತಯಾರಿಸಿದ ಸೊಗಸಾದ ಕಸೂತಿ ಶಾಲು ಅದ್ಭುತವಾಗಿದೆ. ನಾನೂ ಒಂದನ್ನೂ ಖರೀದಿಸಿದ್ದೇನೆ. ಟ್ರೈಬ್ಸ್ ಇಂಡಿಯಾ ಇದನ್ನು ಮಾರಾಟ ಮಾಡಿದೆ ಎಂದು ಮಾಹಿತಿಯನ್ನು ನೀಡಿದ್ದಾರೆ.

    ಅಲ್ಲದೆ ಗೊಂಡ್ ಪೇಪರ್‍ನಿಂದ ತಯಾರಿಸಿದ ಪೇಂಟಿಂಗ್‍ನ್ನು ಸಹ ಪ್ರಧಾನಿ ನರೇಂದ್ರ ಮೋದಿ ಹಂಚಿಕೊಂಡಿದ್ದಾರೆ. ಬುಡಕಟ್ಟು ಸಮುದಾಯದವರು ಕಲೆಯನ್ನು ಚಿತ್ರಿಸಿದ್ದಾರೆ. ಪೇಂಟಿಂಗ್‍ನಲ್ಲಿ ಬಣ್ಣಗಳು ಹಾಗೂ ಸೃಜನಶೀಲತೆಯನ್ನು ಕಾಣಬಹುದಾಗಿದೆ ಎಂದು ಬರೆದುಕೊಂಡಿದ್ದಾರೆ.

    ಸಾಂಪ್ರದಾಯಿಕ ನಾಗಾ ಶಾಲಿನ ಚಿತ್ರವನ್ನೂ ಹಂಚಿಕೊಂಡಿರುವ ಅವರು, ಧೈರ್ಯ, ಸಹಾನುಭೂತಿ ಹಾಗೂ ಸೃಜನಶೀಲತೆಯ ಪ್ರತೀಕವಾಗಿರುವ ನಾಗಾ ಸಂಸ್ಕøತಿ ಬಗ್ಗೆ ಭಾರತ ಹೆಮ್ಮೆ ಪಡುತ್ತದೆ. ಖಾದಿ ಮಹಾತ್ಮಾ ಗಾಂಧೀಜಿ ಹಾಗೂ ಭಾರತದ ಶ್ರೀಮಂತ ಇತಿಹಾಸದೊಂದಿಗೆ ನಿಕಟ ಸಂಬಂಧ ಹೊಂದಿದೆ. ಮಧುಬನಿ ಪೇಂಟೆಡ್ ಸ್ಟೋಲ್ ಖರೀದಿಸಿದೆ. ಇದು ಅತ್ಯುತ್ತಮ ಗುಣಮಟ್ಟದ್ದಾಗಿದ್ದು, ಜನತೆಯ ಸೃಜನಶೀಲತೆಯೊಂದಿಗೆ ನಿಕಟ ಸಂಬಂಧ ಹೊಂದಿದೆ ಎಂದು ಬರೆದುಕೊಂಡಿದ್ದಾರೆ.

    ಕೈಯಿಂದ ತಯಾರಿಸಿದ ಈ ನಾರಿನ ಫೈಲ್‍ನ್ನು ನಾನು ಬಳಸಲು ಮುಂದಾಗಿದ್ದೇನೆ. ಇದನ್ನು ಪಶ್ಚಿಮ ಬಂಗಾಳದ ಬುಡಕಟ್ಟು ಜನಾಂಗದವರು ತಯಾರಿಸಿದ್ದಾರೆ. ನೀವೂ ಸಹ ನಿಮ್ಮ ಮನೆಗಳಲ್ಲಿ ಕಡ್ಡಾಯವಾಗಿ ನಾರಿನ ಉತ್ಪನ್ನಗಳನ್ನು ಬಳಸಿ ಎಂದು ತಿಳಿಸಿದ್ದಾರೆ. ಅಲ್ಲದೆ ನಾನು ಆಗಾಗ ಗಮ್ಚಾ ಧರಿಸುವುದನ್ನು ಜನ ನೋಡಿದ್ದಾರೆ. ಇದು ಅತ್ಯಂತ ಆರಾಮದಾಯಕವಾಗಿದೆ ಎಂದು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

  • ಕಳ್ಳರೆಂದು ಶಂಕಿಸಿ ಮೂವರನ್ನು ಕಲ್ಲು, ದೊಣ್ಣೆಯಿಂದ ಥಳಿಸಿ ಕೊಂದ್ರು

    ಕಳ್ಳರೆಂದು ಶಂಕಿಸಿ ಮೂವರನ್ನು ಕಲ್ಲು, ದೊಣ್ಣೆಯಿಂದ ಥಳಿಸಿ ಕೊಂದ್ರು

    – ರಕ್ಷಿಸಲು ಹೋದ ಪೊಲೀಸರ ಮೇಲೆ ಹಲ್ಲೆ

    ಮುಂಬೈ: ಕಳ್ಳರೆಂದು ಶಂಕಿಸಿ ಮೂವರನ್ನು ಕಲ್ಲು ಮತ್ತು ದೊಣ್ಣೆಯಿಂದ ಬುಡಕಟ್ಟು ಜನಾಂಗದವರು ಹೊಡೆದು ಕೊಂದಿರುವ ಘಟನೆ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ನಡೆದಿದೆ.

    ಗುರುವಾರ ರಾತ್ರಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸುಮಾರು 200 ಜನ ಬುಡಕಟ್ಟು ಜನಾಂಗದವರು ಸೇರಿಕೊಂಡು ಮೂವರನ್ನು ಹೊಡೆದು ಕೊಂದು ಹಾಕಿದ್ದಾರೆ. ಕಾಸಾ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿರುವ ದಬದಿ-ಖಾನ್ವೆಲ್ ರಸ್ತೆಯಲ್ಲಿ ಗುರುವಾರ ರಾತ್ರಿ ತಮ್ಮ ಕಾರಿನಲ್ಲಿ ನಾಸಿಕ್‍ಗೆ ಹೋಗುತ್ತಿದ್ದ ಮೂವರನ್ನು ಕಳ್ಳರು ಎಂದು ಅಡ್ಡಗಟ್ಟಿ ಹೊಡೆದು ಕೊಲೆ ಮಾಡಲಾಗಿದೆ.

    ಈ ಬುಡಕಟ್ಟು ಜನಾಂಗದವರು ಇರುವ ಹಳ್ಳಿಗಳಲ್ಲಿ ರಾತ್ರಿಯ ಸಮಯದಲ್ಲಿ ಕಳ್ಳತನಗಳು ಆಗುತ್ತಿದ್ದವು. ಈ ಕಾರಣಕ್ಕೆ ಬುಡಕಟ್ಟಿನ ಕೆಲವರು ರಾತ್ರಿಯ ವೇಳೆ ಗಸ್ತು ತಿರುಗುತ್ತಿದ್ದರು. ಈ ವೇಳೆ ರಾತ್ರಿಯಲ್ಲಿ ಕಾರಿನಲ್ಲಿ ಚಲಿಸುತ್ತಿದ್ದ ಮೂವರನ್ನು ಕಂಡು ಅಡ್ಡಗಟ್ಟಿದ್ದಾರೆ. ಅಲ್ಲದೆ ಇವರೇ ಕಳ್ಳರು ಎಂದು ಅನುಮಾನಗೊಂಡು ಕಾರಿನ ಮೇಲೆ ಕಲ್ಲು ತೂರಾಟ ಮಾಡಲು ಆರಂಭಿಸಿದ್ದಾರೆ.

    ಈ ನಂತರ ಕಾರಿನಲ್ಲಿದ್ದ ಮೂವರನ್ನು ಹೊರೆಗೆ ಎಳೆದುಕೊಂಡು ಸುಮಾರು 200 ಜನರು ಸೇರಿಕೊಂಡು ಕಲ್ಲು ಮತ್ತು ದೊಣ್ಣೆಯಿಂದ ಮನಬಂದಂತೆ ಥಳಿಸಿದ್ದಾರೆ. ಈ ನಡುವೆ ಕಾರಿನ ಚಾಲಕ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಆದರೆ ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲಿ ಈ ಮೂವರನ್ನು ಅಲ್ಲಿನ ಜನರು ಮಾರಣಾಂತಿಕವಾಗಿ ಹಲ್ಲೆ ಮಾಡಿರುತ್ತಾರೆ. ಈ ವೇಳೆ ವಿಷಯ ತಿಳಿದ ಕಾಸಾ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ.

    ಸುಮಾರು 20 ಪೇದೆಗಳೊಂದಿಗೆ ಪೊಲೀಸರು ಸ್ಥಳಕ್ಕೆ ಬಂದಾಗ, ಪೊಲೀಸರ ವಿರುದ್ಧವೇ ಗ್ರಾಮಸ್ಥರು ತಿರುಗಿ ಬಿದ್ದಿದ್ದಾರೆ. ಈ ಘಟನೆಯಲ್ಲಿ ಮೂವರು ಪೊಲೀಸರು ಗಾಯಗೊಂಡಿದ್ದು, ಬುಡಕಟ್ಟು ಜನಾಂಗದವರು ಪೊಲೀಸ್ ವಾಹನವನ್ನು ಸಂಪೂರ್ಣವಾಗಿ ಜಖಂಗೊಳಿಸಿದ್ದಾರೆ. ಈ ನಡುವೆ ಗ್ರಾಮಸ್ಥರನ್ನು ನಿಗ್ರಹಿಸಲು ಹೆಚ್ಚುವರಿ ಪೊಲೀಸರನ್ನು ಕರೆಸಿಕೊಂಡು ಅಲ್ಲಿಂದ ಆ ಮೂವರನ್ನು ಪೊಲೀಸರು ಕರೆದುಕೊಂಡು ಬಂದಿದ್ದಾರೆ.

    ಹಲ್ಲೆಗೆ ಒಳಗಾದ ಮೂವರು ತೀವ್ರವಾಗಿ ಗಾಯಗೊಂಡಿದ್ದ ಕಾರಣ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಈ ವಿಚಾರವಾಗಿ ಬುಡಗಟ್ಟು ಜನಾಂಗದ 20 ಮಂದಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಅವರನ್ನು ವಿಚಾರಣೆ ಮಾಡಿದಾಗ ಆ ಮೂವರು ಕಳ್ಳರು ಎಂದು ಅವರ ಮೇಲೆ ಹಲ್ಲೆ ಮಾಡಿದ್ದೇವೆ ಎಂದು ಹೇಳಿದ್ದಾರೆ. ಈ ಸಂಬಂಧ ದೂರು ದಾಖಲಿಸಿಕೊಂಡ ಕಾಸಾ ಪೊಲೀಸರು ತನಿಖೆ ಮಾಡುತ್ತಿದ್ದಾರೆ.

  • ಬುಡಕಟ್ಟು ಬಾಲಕಿಯೊಂದಿಗೆ ಪ್ರೇಮ – ಮುಸ್ಲಿಂ ಬಾಲಕನ ಹತ್ಯೆ

    ಬುಡಕಟ್ಟು ಬಾಲಕಿಯೊಂದಿಗೆ ಪ್ರೇಮ – ಮುಸ್ಲಿಂ ಬಾಲಕನ ಹತ್ಯೆ

    ಗಾಂಧಿನಗರ: ಬುಡಕಟ್ಟು ಬಾಲಕಿಯನ್ನು ಪ್ರೀತಿಸುತ್ತಿದ್ದ ಎಂಬ ಕಾರಣಕ್ಕೆ 17 ವರ್ಷದ ಮುಸ್ಲಿಂ ಅಪ್ರಾಪ್ತನನ್ನು ಕೆಲ ಯುವಕರು ಸೇರಿ ಹೊಡೆದು ಹತ್ಯೆ ಮಾಡಿರುವ ಘಟನೆ ಗುಜರಾತ್‍ನಲ್ಲಿ ನಡೆದಿದೆ.

    ಫೈಯಾಜ್ ಕೊಲೆಯಾದ ಬಾಲಕ. ಬೋರಿದ್ರ ಗ್ರಾಮದ ಬುಡಕಟ್ಟು ಜನಾಂಗದ ಯುವತಿಯನ್ನು ಪ್ರೀತಿಸಿದ್ದ ಈ ಕಾರಣಕ್ಕೆ ಅಲ್ಲಿ 12 ರಿಂದ 13 ಮಂದಿ ಯುವಕರು ಸೇರಿ ಅವನನ್ನು ದೊಣ್ಣೆಯಿಂದ ಥಳಿಸಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಫೈಯಾಜ್ ತಂದೆ ಮೊಹಮ್ಮದ್ ಸುಲ್ತಾನ್ ಅಬ್ದುಲ್ ರಹೀಂ ಖುರೇಷಿ, ನನ್ನ ಮಗ ಅವನ ಐದು ಜನ ಗೆಳೆಯರೊಂದಿಗೆ ಅಂಕಲೇಶ್ವರಕ್ಕೆ ಹೋಗಿದ್ದ. ನಂತರ ನನ್ನ ಪತ್ನಿ ಅವನಿಗೆ ಕರೆ ಮಾಡಿದಳು. ಆಗ ಅವನು ನಮ್ಮನ್ನು ಬೋರಿದ್ರಗೆ ಬರಲು ಹೇಳಿದ. ನಾವು ಅಲ್ಲಿ ಹೋಗಿ ನೋಡಿದಾಗ ಅವನಿಗೆ ತುಂಬಾ ಜನ ಹೊಡೆದಿದ್ದರಿಂದ ಗಾಯಗಳಿಂದ ಸಹಾಯ ಕೇಳುತ್ತಿದ್ದ ಎಂದು ಹೇಳಿದ್ದಾರೆ.

    ನಾವು ಅವನನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋದೆವು. ಆದರೆ ಅವನ ಕೈ ಕಾಲು ಹೊಟ್ಟೆಗೆ ಗಂಭೀರವಾಗಿ ಗಾಯಗಳಾಗಿದ್ದರಿಂದ ಫೈಯಾಜ್ ಬದುಕುವ ಸಾಧ್ಯತೆ ಕಡಿಮೆ ಎಂದು ವೈದ್ಯರು ಹೇಳಿದರು. ನಂತರ ನಾನು ಅವನನ್ನು ಅಲ್ಲಿಂದ ಸೂರತ್‍ನ ಆಸ್ಪತ್ರೆಗೆ ಕರೆದುಕೊಂಡು ಬಂದೆ ವೈದ್ಯರು ಅವನಿಗೆ ಚಿಕಿತ್ಸೆ ನೀಡಲು ಪ್ರಯತ್ನ ಮಾಡಿದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಗ ಮೃತಪಟ್ಟ ಎಂದು ಹೇಳಿದ್ದಾರೆ.

    ನನ್ನ ಮಗ ಯಾವ ತಪ್ಪು ಮಾಡಿಲ್ಲ. ಅವನನ್ನು ತುಂಬಾ ಜನರು ಹೊಡೆದು ಹತ್ಯೆ ಮಾಡಿದ್ದಾರೆ. ನನ್ನ ಮಗನಿಗೆ ನ್ಯಾಯ ಕೊಡಿಸಿ. ನನ್ನ ಮಗನನ್ನು ಥಳಿಸಿದವರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಖುರೇಷಿ ಒತ್ತಾಯಿಸಿದ್ದಾರೆ.

    ವಿಚಾರದ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು ಸುಮಾರು 12 ರಿಂದ 13 ಯುವಕರು ಜಗಡಿಯಾದ ತಹಸಿಲ್ ಎಂಬಲ್ಲಿ ಫೈಯಾಜ್ ಎಂಬ ಯುವಕನ ಮೇಲೆ ಮಾರಣಂತಿಕ ಹಲ್ಲೆ ಮಾಡಿದ್ದಾರೆ. ಈ ಸಂಬಂಧ ಜಗಡಿಯಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣದಲ್ಲಿ ಆಗಲೇ ನಾಲ್ವರು ಆರೋಪಿಗಳನ್ನು ಬಂಧಿಸಿದ್ದು, ಉಳಿದ ಆರೋಪಿಗಳಿಗೆ ಶೋಧ ನಡೆಯುತ್ತಿದೆ ಎಂದು ಹೇಳಿದ್ದಾರೆ.