Tag: tribal people

  • ಬುಡಕಟ್ಟು ಜನರ ವಿಕಾಸಕ್ಕೆ ದಾರಿ ತೋರಿಸಿ, ಅವರು ಮುನ್ನಡೆಯುತ್ತಾರೆ: ದ್ರೌಪದಿ ಮುರ್ಮ

    ಬುಡಕಟ್ಟು ಜನರ ವಿಕಾಸಕ್ಕೆ ದಾರಿ ತೋರಿಸಿ, ಅವರು ಮುನ್ನಡೆಯುತ್ತಾರೆ: ದ್ರೌಪದಿ ಮುರ್ಮ

    ಬೆಂಗಳೂರು: ನೈಜ ದುರ್ಬಲ ಬುಡಕಟ್ಟು ಜನರ (Tribal People) ಸರ್ವಾಂಗೀಣ ವಿಕಾಸಕ್ಕಾಗಿ ವಸತಿ, ಶಿಕ್ಷಣ, ಆರ್ಥಿಕ ಚಟುವಟಿಕೆಗಳು, ಆರೋಗ್ಯ ಸೌಕರ್ಯಗಳ ಕನಿಷ್ಠ ಮೂಲಸೌಕರ್ಯಗಳನ್ನು ಕಲ್ಪಿಸಿ, ಸುಧಾರಣೆಯ ದಾರಿ ತೋರಿಸಿದರೆ ಸಾಕು ಅವರು ಮುನ್ನಡೆಯಬಲ್ಲರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೈಜ ದುರ್ಬಲ ಬುಡಕಟ್ಟುಗಳ ಕಲ್ಯಾಣಕ್ಕಾಗಿ ಆಂದೋಲನದ ಮಾದರಿಯಲ್ಲಿ ಈ ಕಾರ್ಯನಿರ್ವಹಿಸಬೇಕು ಎಂದು ರಾಷ್ಟಪತಿ ದ್ರೌಪದಿ ಮುರ್ಮು (Droupadi Murmu) ಹೇಳಿದ್ದಾರೆ.

    ರಾಜಭವನದ (Raj Bhavan) ಬ್ಯಾಂಕ್ವೆಟ್ ಹಾಲ್‍ನಲ್ಲಿ ಸೋಮವಾರ ಸಂಜೆ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಆಯೋಜಿಸಿದ್ದ ರಾಜ್ಯದ ವಿವಿಧ ಜಿಲ್ಲೆಗಳ ನೈಜ ಬುಡಕಟ್ಟು ಸಮುದಾಯಗಳ ಸದಸ್ಯರೊಂದಿಗೆ ಸಂವಾದ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು. ಕರ್ನಾಟಕದಲ್ಲಿ 2011ರ ಜನಗಣತಿಯ ಪ್ರಕಾರ ಸುಮಾರು 43 ಲಕ್ಷ ಪರಿಶಿಷ್ಟ ವರ್ಗದ ಜನಸಂಖ್ಯೆಯಿದೆ. ಇದರಲ್ಲಿ ನೈಜ ದುರ್ಬಲ ಬುಡಕಟ್ಟುಗಳೆಂದು ಗುರುತಿಸಲಾಗಿರುವ ಜೇನುಕುರುಬರು ಹಾಗೂ ಕೊರಗ ಸಮುದಾಯಗಳ ಜನಸಂಖ್ಯೆ ಸುಮಾರು 50 ಸಾವಿರದಷ್ಟಿದೆ. ರಾಜ್ಯದ ನೈಜ ದುರ್ಬಲ ಬುಡಕಟ್ಟು ಸಮುದಾಯಗಳಲ್ಲಿಯೂ ಡಾಕ್ಟರೇಟ್ ಪದವಿ ಪಡೆದ ಮಹಿಳೆ, ಶುಶ್ರೂಷಕಿ (ಸ್ಟಾಫ್ ನರ್ಸ್), ಅಂಗನವಾಡಿ ಕಾರ್ಯಕರ್ತೆ, ಪಿಹೆಚ್‍ಡಿ ವ್ಯಾಸಂಗ ಮಾಡುತ್ತಿರುವ ಖಾಸಗಿ ಮಹಿಳಾ ನೌಕರರು ಇರುವುದು ಕಂಡು ಬಹಳ ಸಂತಸವಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಬೆಂಗಳೂರಿಗೆ ಆಗಮಿಸಿದ ದ್ರೌಪದಿ ಮುರ್ಮು – ಸಿಎಂ, ರಾಜ್ಯಪಾಲರಿಂದ ಸ್ವಾಗತ

    ಭಾರತ ದೇಶದಲ್ಲಿ ನೈಜ ದುರ್ಬಲ ಬುಡಕಟ್ಟು ಸಮುದಾಯಗಳ ಜನಸಂಖ್ಯೆ ಸುಮಾರು 28 ಲಕ್ಷದಷ್ಟಿದೆ. 75 ವಿವಿಧ ಬುಡಕಟ್ಟುಗಳನ್ನು ನೈಜ ದುರ್ಬಲ ಬುಡಕಟ್ಟುಗಳೆಂದು ಪಟ್ಟಿ ಮಾಡಲಾಗಿದೆ. ಹಿಂದುಳಿದ ಅರಣ್ಯವಾಸಿ ಸಮುದಾಯಗಳನ್ನು ಗುರುತಿಸಿ ವಸತಿ, ಕೃಷಿಭೂಮಿ ಕಲ್ಪಿಸಿ ಮುಖ್ಯವಾಹಿನಿಗೆ ತರುವುದು ಸ್ಥಳೀಯ ಸರ್ಕಾರಗಳ ಜವಾಬ್ದಾರಿಯಾಗಿದೆ. ಶಾಲೆ, ರಸ್ತೆ, ಆರೋಗ್ಯದ ಸಮಸ್ಯೆಗಳು ಕರ್ನಾಟಕದಲ್ಲಿ ಮಾತ್ರವಲ್ಲ, ದೇಶದೆಲ್ಲೆಡೆ ಸಾಮಾನ್ಯವಾಗಿವೆ. ಅರಣ್ಯವಾಸಿ ಬುಡಕಟ್ಟುಗಳಲ್ಲಿನ ಕ್ಷಯರೋಗ ಹಾಗೂ ಇತರೆ ಆರೋಗ್ಯ ಸಮಸ್ಯೆಗಳನ್ನು ಸಂಪೂರ್ಣವಾಗಿ ಹೋಗಲಾಡಿಸಲು ಮಧ್ಯಪ್ರದೇಶ ರಾಜ್ಯ ಸರ್ಕಾರ ಹಮ್ಮಿಕೊಂಡಿರುವ ಕಾರ್ಯಕ್ರಮವನ್ನು ಪ್ರಸ್ತಾಪಿಸಿದ ರಾಷ್ಟ್ರಪತಿಯವರು ದುರ್ಬಲ ಬುಡಕಟ್ಟುಗಳ ಜನಸಂಖ್ಯೆ ಋಣಾತ್ಮಕವಾಗುತ್ತಿರುವದನ್ನು ತಡೆಯಲು ಇಂತಹ ಯೋಜನೆಗಳನ್ನು ಹಾಕಿಕೊಳ್ಳಬೇಕು ಎಂದು ಹೇಳಿದ್ದಾರೆ.

    ನೈಜ ದುರ್ಬಲ ಬುಡಕಟ್ಟುಗಳ ವಿಕಾಸಕ್ಕಾಗಿ ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಪಿವಿಟಿಜಿ ಅಭಿವೃದ್ಧಿ ಮಿಷನ್ ಅಡಿ 15 ಸಾವಿರ ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. ರಾಜ್ಯದಲ್ಲಿನ ಜನಸಂಖ್ಯೆಗೆ ಅನುಗುಣವಾಗಿ ಹಣ ಬಂದಿರುತ್ತದೆ ಮನೆ, ಶಾಲೆ, ರಸ್ತೆ, ವಿದ್ಯುತ್ ದೀಪ, ನೀರು ಮೊದಲಾದ ಸೌಕರ್ಯಗಳನ್ನು ಒದಗಿಸಲು ಸರ್ಕಾರಗಳು ಆಂದೋಲನದ ರೀತಿ ಕಾರ್ಯೋನ್ಮುಖವಾಗಬೇಕು. ಸರ್ಕಾರ ಬುಡಕಟ್ಟು ಜನರಿಗಾಗಿ ಒಂದು ಹೆಜ್ಜೆ ಮುಂದೆ ಇರಿಸಿ ದಾರಿ ತೋರಿದರೆ ಅವರು ನಿಧಾನವಾಗಿ ನಡೆಯಲು ಕಲಿತು ಹಂತ ಹಂತವಾಗಿ ಓಡಲು ಕಲಿಯುತ್ತಾರೆ. ಬುಡಕಟ್ಟು ಜನರು ತಮ್ಮ ಆತ್ಮಗೌರವ ಕಾಪಾಡಿಕೊಳ್ಳಲು ಸಮಸ್ಯೆಗಳನ್ನು ಸಮರ್ಥವಾಗಿ ಅಭಿವ್ಯಕ್ತಿಗೊಳಿಸುವದನ್ನು ರೂಢಿಸಿಕೊಳ್ಳಬೇಕು ಎಂದಿದ್ದಾರೆ.

    ಬುಡಕಟ್ಟು ಜನ ಶಿಕ್ಷಣಕ್ಕೆ ಒತ್ತು ನೀಡಲಿ, ಎಸ್‍ಎಸ್‍ಎಲ್‍ಸಿ ಓದಿದವರನ್ನು ಗುರುತಿಸಿ ಅವರಲ್ಲಿ ಇರುವ ಕರಕುಶಲ ಕಲೆ, ಜೀವನ ಕೌಶಲ್ಯಗಳನ್ನು ಪ್ರೋತ್ಸಾಹಿಸಿ ಅವರ ಉತ್ಪನ್ನಗಳಿಗೆ ಮೌಲ್ಯವರ್ಧನೆ ಕಲ್ಪಿಸಿದರೆ ಅವರು ಸಮಾಜದ ಮುಖ್ಯವಾಹಿನಿಯೊಂದಿಗೆ ಸಾಗಬಲ್ಲರು. ರಾಜ್ಯದಲ್ಲಿ ಕೇವಲ 50 ಸಾವಿರದಷ್ಟು ನೈಜ ದುರ್ಬಲ ಬುಡಕಟ್ಟು ಸಮುದಾಯವಿರುವದರಿಂದ ಸರ್ಕಾರಕ್ಕೆ ಇದು ಕಷ್ಟದ ಕಾರ್ಯವಲ್ಲ ಎಂದು ಹೇಳಿದ್ದಾರೆ.

    ರಾಜ್ಯದ ಸಮಾಜ ಕಲ್ಯಾಣ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗಳ ಆಶ್ರಮ ಶಾಲೆಗಳಲ್ಲಿ ನೈಜ ದುರ್ಬಲರಿಗಾಗಿ ವಿಶೇಷ ಸ್ಥಾನ, ಗಮನ ನೀಡಿ ಶಿಕ್ಷಣಕ್ಕೆ ಪ್ರೋತ್ಸಾಹಿಸಬೇಕು. ತಾವು ಚಿಕ್ಕವರಿದ್ದಾಗ ತಮ್ಮ ತಂದೆಗೆ ಇಂತಹ ಯಾವ ಸೌಕರ್ಯಗಳು ಇಲ್ಲದಿದ್ದರೂ ತಮಗೆ ಶಿಕ್ಷಣ ಕೊಡಿಸಿದ್ದನ್ನು ರಾಷ್ಟ್ರಪತಿಯವರು ಹೆಮ್ಮೆಯಿಂದ ಸ್ಮರಿಸಿದ್ದಾರೆ. ನೈಜ ದುರ್ಬಲ ಬುಡಕಟ್ಟುಗಳ ಜನ ತಮ್ಮೊಳಗಿನ ಸಾಮಥ್ರ್ಯ ಒರೆಗೆ ಹಚ್ಚಿಕೊಳ್ಳಬೇಕು. ನೆರೆಹೊರೆಯವರನ್ನು ನೋಡಿ ಶಿಕ್ಷಿತರಾಗಿ ಮುಂದೆ ಬರಬೇಕು ಎಂದು ಸ್ಫೂರ್ತಿದಾಯಕ ಮಾತುಗಳನ್ನಾಡಿದರು.

    ಬುಡಕಟ್ಟು ಜನರ ಬಳಿಯೇ ಬಂದು ಆಪ್ತವಾಗಿ ಬೆರೆತ ರಾಷ್ಟ್ರಪತಿಗಳು
    ಸಂವಾದದ ಪ್ರಾರಂಭದಲ್ಲಿ ಸಭಾಂಗಣದಲ್ಲಿ ನೆರೆದಿದ್ದ ನೈಜ ದುರ್ಬಲ ಬುಡಕಟ್ಟು ಜನರ ಜೀವನ ಮಟ್ಟ ಅರಿಯಲು ಪ್ರಯತ್ನಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, ಬುಡಕಟ್ಟು ಜನ ಮುಕ್ತವಾಗಿ ಮಾತನಾಡಲು ಹಿಂಜರಿದಾಗ ರಾಷ್ಟ್ರಪತಿಗಳು ಖುದ್ದು ತಾವೇ ಜನರ ಆಸನಗಳ ಬಳಿ ತೆರಳಿ ಒಬ್ಬೊಬರನ್ನು ಪ್ರತ್ಯೇಕವಾಗಿ ಆಪ್ತವಾಗಿ ಮಾತನಾಡಿಸಿದರು. ಅವರಿಗೆ ಮನೆ ಇದೆಯೇ, ಸರ್ಕಾರ ಮನೆ ಕಟ್ಟಿಸಿಕೊಟ್ಟಿದೆಯೇ, ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆಯೇ, ಅರಣ್ಯಭೂಮಿಯಲ್ಲಿ ವಾಸವಾಗಿರುವವರು ಯಾರಿದ್ದೀರಿ ಎಂಬ ಪ್ರಶ್ನೆಗಳನ್ನು ಹಾಕಿ ಕೊರಗ ಮತ್ತು ಜೇನುಕುರುಬ ಬುಡಕಟ್ಟು ಜನರಿಂದ ನೇರ ಉತ್ತರ ಪಡೆದರು.

    ಸ್ಥಳೀಯ ಭಾಷೆಯಲ್ಲಿಯೇ ಮಾತನಾಡಲು ಪ್ರೋತ್ಸಾಹ
    ಜೇನುಕುರುಬ ಸಮುದಾಯದ ಪರವಾಗಿ ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕಿನ ಯಡವನಾಡು ಹಾಡಿಯ ಚಂದ್ರು ಹಿಂದಿಯಲ್ಲಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸುತ್ತಿದ್ದ ವೇಳೆಯಲ್ಲಿ ಮಧ್ಯೆ ಪ್ರವೇಶಿಸಿದ ರಾಷ್ಟ್ರಪತಿಯವರು, ಸ್ಥಳೀಯವಾಗಿ ನಿಮ್ಮ ಭಾಷೆಯಲ್ಲಿಯೇ ಮಾತನಾಡಿ ಎಂದರು.

    ಕೊರಗ ಸಮುದಾಯದ ಮೊಟ್ಟಮೊದಲ ಡಾಕ್ಟರೇಟ್ ಪದವೀಧರೆ, ಪ್ರಾಧ್ಯಾಪಕಿ ಉಡುಪಿ ಜಿಲ್ಲೆ ಸಾಲಿಗ್ರಾಮದ ಡಾ.ಸವಿತಾ ಮಾತನಾಡಿ, ಕೊರಗ ಸಮುದಾಯ ಅಪೌಷ್ಟಿಕತೆ, ಆರೋಗ್ಯ ಸಮಸ್ಯೆಗಳಿಂದ ಜನಸಂಖ್ಯೆ ಕ್ಷೀಣಿಸುತ್ತಿದೆ. ಈ ಸಂಶೋಧನೆ ಮತ್ತು ಪರಿಹಾರ ಕಾರ್ಯಗಳು ನಡೆಯಬೇಕು ಎಂದರು.

    ಇದೇ ವೇಳೆ, ಬುಡಕಟ್ಟು ಸಮುದಾಯಗಳ ಚಂದ್ರು, ರತ್ನಾ, ಸುಂದರ, ಬಾಬು ಮತ್ತು ಅಯ್ಯಪ್ಪ ಅವರು ರಾಷ್ಟ್ರಪತಿ ಹಾಗೂ ರಾಜ್ಯಪಾಲರನ್ನು ಸನ್ಮಾನಿಸಿ, ನೆನಪಿನ ಕಾಣಿಕೆಗಳನ್ನು ನೀಡಿದರು.

    ರಾಷ್ಟ್ರಪತಿ ಭವನದಿಂದ ಬುಡಕಟ್ಟು ಜನರಿಗೆ ಉಡುಗೊರೆ
    ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕೊರಗ ಹಾಗೂ ಜೇನುಕುರುಬ ಬುಡಕಟ್ಟುಗಳ ಜನರಿಗೆ ರಾಷ್ಟ್ರಪತಿ ಭವನದಿಂದ ತಂದಿದ್ದ ಉಡುಗೊರೆಗಳನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ವಿತರಿಸಿದರು. ಅಲ್ಲದೇ ಪರಿಶಿಷ್ಟ ವರ್ಗಗಳ ಕಲ್ಯಾಣ ಹಾಗೂ ಯುವಸಬಲೀಕರಣ ಸಚಿವರಾದ ಬಿ.ನಾಗೇಂದ್ರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ರಾಜ್ಯದಲ್ಲಿ ನೈಜ ಬುಡಕಟ್ಟು ಜನರ ಕಲ್ಯಾಣಕ್ಕಾಗಿ ಹಮ್ಮಿಕೊಂಡಿರುವ ಕಾರ್ಯಕ್ರಮಗಳನ್ನು ವಿವರಿಸಿದರು.

    ರಾಜ್ಯಪಾಲರಾದ ಥಾವರಚಂದ್ ಗೆಹ್ಲೋಟ್ ಅವರ ಸಮ್ಮುಖದಲ್ಲಿ ನಡೆದ ಬುಡಕಟ್ಟು ಸಮುದಾಯಗಳೊಂದಿಗಿನ ಸಂವಾದದಲ್ಲಿ ಗುಂಡ್ಲುಪೇಟೆಯ ದೇಶಿಪುರ ಕಾಲೊನಿಯ ಸಿದ್ದಮ್ಮ, ಪುಟ್ಟಮ್ಮ, ಮದ್ದೂರು ಕಾಲೊನಿಯ ಗೋವಿಂದ, ಎಚ್.ಡಿ.ಕೋಟೆಯ ಬಸಮ್ಮ, ರಾಜೇಶ್, ಅಯ್ಯಪ್ಪ, ಭೈರಾ, ಸಿ. ಭಾಸ್ಕರ, ಪುಟ್ಟಬಸವಯ್ಯ, ಹುಣಸೂರಿನ ಜೆ.ಪಿ. ಪಾರ್ವತಿ, ಸುಮಾ, ರಾಜಪ್ಪ, ಸಚಿನ್, ಪಿರಿಯಾಪಟ್ಟಣದ ಜಯಮ್ಮ, ಗೌರಿ, ಲಕ್ಷ್ಮೀ, ಜಾನಕಮ್ಮ, ಬಸವಣ್ಣ, ಬಸಪ್ಪ, ಸರಗೂರಿನ ವಿಜಯ್, ಸೋಮವಾರಪೇಟೆಯ ಜೆ.ಕೆ. ಮುತ್ತಮ್ಮ, ಬಿ.ಕೆ. ಧರ್ಮಪ್ಪ, ಉಡುಪಿ ಜಿಲ್ಲೆಯ ನಳಿನಿ, ಡಾ. ಸಬಿತಾ, ಸುಶೀಲಾ, ಪ್ರಕೃತಿ, ಶಕೀಲಾ, ಸುನಂದಾ, ಕುಡ್ವಾ, ಬಾಬು, ರಮೇಶ್, ಕೊಗ್ಗ, ಅಕ್ಷಯ್, ಕುಮಾರ್, ಸಂಜೀವ ಕೊರಗ, ಕೆ.ಪುತ್ರಯ, ದಕ್ಷಿಣ ಕನ್ನಡ ಜಿಲ್ಲೆಯ ರತ್ನ, ಚಂದ್ರವತಿ, ಶಶಿಕಲಾ, ರಾಧಾ, ಎಂ.ಸುಂದರ್, ಬಾಬು, ಮಥಾಡಿ, ಶ್ಯಾಮ್ ಸೇರಿದಂತೆ ಮೈಸೂರು, ಚಾಮರಾಜನಗರ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಿಂದ ಆಗಮಿಸಿದ್ದ ಜೇನುಕುರುಬ ಹಾಗೂ ಕೊರಗ ಬುಡಕಟ್ಟು ಸಮುದಾಯಗಳ 50 ಜನ ಭಾಗವಹಿಸಿ ತಮ್ಮ ಸಾಂಸ್ಕøತಿಕ, ಸಾಮಾಜಿಕ ಅಸ್ಮಿತೆಯ ವಿಶಿಷ್ಟತೆಗಳನ್ನು ಸಾರಿದರು.

    ಸಮಾಜ ಕಲ್ಯಾಣ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗಳ ಸರ್ಕಾರದ ಪ್ರಧಾನ ಕಾರ್ಯದರ್ಶಿ ಪಿ.ಮಣಿವಣ್ಣನ್,ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ನಿರ್ದೇಶಕ ಪಿ.ಎಸ್.ಕಾಂತರಾಜು ಮತ್ತಿತರ ಗಣ್ಯರು ಇದ್ದರು. ಇದನ್ನೂ ಓದಿ: ಘಟಿಕೋತ್ಸವ ಸಮಾರಂಭ ಗುರು ಶಿಷ್ಯರ ಶ್ರೇಷ್ಠ ಸಂಪ್ರದಾಯದ ಪ್ರತಿಬಿಂಬ – ಥಾವರ್ ಚಂದ್ ಗೆಹ್ಲೋಟ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮೂಲ ನಿವಾಸಿಗಳಿಗೆ ಹಕ್ಕುಪತ್ರ ನೀಡಿಲ್ಲ, ಏಸು ಪ್ರತಿಮೆ ನಿರ್ಮಾಣಕ್ಕೆ ಜಾಗ ಯಾವ ನ್ಯಾಯ: ಸತೀಶ್

    ಮೂಲ ನಿವಾಸಿಗಳಿಗೆ ಹಕ್ಕುಪತ್ರ ನೀಡಿಲ್ಲ, ಏಸು ಪ್ರತಿಮೆ ನಿರ್ಮಾಣಕ್ಕೆ ಜಾಗ ಯಾವ ನ್ಯಾಯ: ಸತೀಶ್

    ರಾಮನಗರ: ಅರಣ್ಯದಲ್ಲೇ ವಾಸ ಮಾಡುತ್ತಿದ್ದ ಆದಿವಾಸಿ ಇರುಳಿಗರನ್ನು ಒಕ್ಕಲೆಬ್ಬಿಸಿ ಹಕ್ಕುಪತ್ರಗಳನ್ನು ನೀಡದೇ ಸತಾಯಿಸುತ್ತಿರುವ ಜಿಲ್ಲಾಡಳಿತ ಇದೀಗ ಯೇಸು ಪ್ರತಿಮೆಗೆ ಜಮೀನು ಮಂಜೂರು ಮಾಡಿರುವುದು ಯಾವ ನ್ಯಾಯ ಸ್ವಾಮೀ. ಪ್ರತಿಮೆ ನಿರ್ಮಾಣ ಮಾಡುವ ಬದಲು, ಅಲ್ಲಿನ ಮೂಲ ನಿವಾಸಿಗಳಾದ ವನವಾಸಿಗಳಿಗೆ ಹಕ್ಕುಪತ್ರ ವಿತರಣೆ ಮಾಡಬಹುದಾಗಿತ್ತು ಎಂದು ವನವಾಸಿ ಕಲ್ಯಾಣ ಸಮಿತಿಯ ಮುಖಂಡರು, ಮಾಜಿ ಸಚಿವ ಡಿ.ಕೆ ಶಿವಕುಮಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ನಗರದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವನವಾಸಿ ಕಲ್ಯಾಣ ಸಮಿತಿಯ ಮುಖಂಡ ಸತೀಶ್, ಮೂಲ ನಿವಾಸಿಗಳು ನಿವೇಶನ ಸೇರಿದಂತೆ ಹಕ್ಕು ಪತ್ರಕ್ಕಾಗಿ ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದ್ದಾರೆ. ಆದರೂ ಈ ತನಕ ಅವರ ಕೂಗಿಗೆ ಯಾವುದೇ ಸ್ಪಂದನೆ ವ್ಯಕ್ತವಾಗಿಲ್ಲ. ಆದರೆ ಏಸುಕ್ರಿಸ್ತನ ಪ್ರತಿಮೆ ನಿರ್ಮಾಣಕ್ಕೆ ಸರ್ಕಾರದಿಂದಲೇ ಡಿಕೆಶಿ ಭೂಮಿ ಮಂಜೂರು ಮಾಡಿಸಿರುವುದು ಯಾವ ನ್ಯಾಯ. ಒಂದು ಕಣ್ಣಿಗೆ ಸುಣ್ಣ ಒಂದು ಕಣ್ಣಿಗೆ ಬೆಣ್ಣೆ ರೀತಿ ನಡೆದುಕೊಂಡಿದ್ದಾರೆ ಎಂದು ಹೇಳಿದರು.

    ಕಳೆದ 12 ದಿನಗಳಿಂದ ಕನಕಪುರ ತಾಲೂಕಿನ ಮರಳವಾಡಿಯ ಸಮೀಪದಲ್ಲಿ ಹಕ್ಕುಪತ್ರಕ್ಕಾಗಿ ಬನ್ನೇರುಘಟ್ಟ ಅರಣ್ಯ ಪ್ರದೇಶದಲ್ಲಿ ವನವಾಸಿ ಇರುಳಿಗರು ಹಗಲಿರುಳು ಪ್ರತಿಭಟನೆ ನಡೆಸುತ್ತಿದ್ದಾರೆ. ಶಾಸಕ ಶಿವಕುಮಾರ್ ಅವರಾಗಲೀ, ಸಂಸದ ಡಿ.ಕೆ.ಸುರೇಶ್ ಅವರಾಗಲಿ ಒಂದು ದಿನವೂ ಸ್ಥಳಕ್ಕೆ ಧಾವಿಸಿಲ್ಲ. ಹಕ್ಕುಪತ್ರಕ್ಕಾಗಿ ಆಗ್ರಹಿಸಿ ಹಲವು ಬಾರಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದೇವೆ, ಆದರೆ ಪ್ರಯೋಜನವಾಗಿಲ್ಲ. ಯೇಸು ಪ್ರತಿಮೆ ನಿರ್ಮಾಣಕ್ಕಾಗಿ ಕಪಾಲ ಟ್ರಸ್ಟ್‍ಗೆ 10 ಎಕರೆ ಭೂಮಿ ನೀಡುವ ಜನಪ್ರತಿನಿಧಿಗಳು ಆದಿವಾಸಿಗಳು ಧರಣಿ ನಡೆಸುತ್ತಿದ್ದರು ಸ್ಥಳಕ್ಕೆ ಧಾವಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಜಿಲ್ಲೆಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ಜನತೆಗೆ ಹಕ್ಕು ಪತ್ರ ವಿತರಣೆ ಮಾಡಬೇಕಾಗಿದೆ. ಅದರಲ್ಲೂ ಕನಕಪುರ ತಾಲೂಕಿನಲ್ಲೇ 600ಕ್ಕೂ ಹೆಚ್ಚು ಮಂದಿ ಪಲಾನುಭವಿಗಳಿದ್ದಾರೆ. ಜನಪ್ರತಿನಿಧಿಗಳು ಈ ಕುರಿತು ಗಮನ ಹರಿಸಬೇಕು. ಮೂಲ ನಿವಾಸಿಗಳ ಕಷ್ಟಕ್ಕೆ ಸ್ಪಂದಿಸಬೇಕು ಎಂದು ಆಗ್ರಹಿಸಿದರು.

    ಅರಣ್ಯದಲ್ಲೇ ಹುಟ್ಟಿ ಬೆಳೆದ ಅರಣ್ಯವಾಸಿ, ಆದಿವಾಸಿ, ವನವಾಸಿಗಳು ಪ್ರತಿಭಟನೆ ನಡೆಸುತ್ತಿದ್ರು ಜಿಲ್ಲಾಡಳಿತ ಹಕ್ಕುಪತ್ರ ನೀಡುವ ಕೆಲಸ ಮಾಡಿಲ್ಲ. ಮಾಜಿ ಸಚಿವ ಡಿಕೆಶಿ ಆದಿವಾಸಿಗಳ ಕಡೆಗೆ ಗಮನ ಹರಿಸಿಲ್ಲ. ಆದರೆ ಅವರು ಯೇಸು ಪ್ರತಿಮೆ ನಿರ್ಮಾಣಕ್ಕೆ ಜಾಗ ಮಂಜೂರು ಮಾಡಿ ಪ್ರತಿಮೆ ನಿರ್ಮಿಸಲು ಮುಂದಾಗಿರುವುದು ಸರಿಯಲ್ಲ. ಮೊದಲು ಆದಿವಾದಿಗಳಿಗೆ ಹಕ್ಕಪತ್ರ ನೀಡುವಂತೆ ಒತ್ತಾಯಿಸಿದರು.

  • ಮರಗಳ್ಳನ ಹಿಡಿಯುವ ನೆಪದಲ್ಲಿ ಗರ್ಭಿಣಿಯರ ಮೇಲೆ ಹಲ್ಲೆ!

    ಮರಗಳ್ಳನ ಹಿಡಿಯುವ ನೆಪದಲ್ಲಿ ಗರ್ಭಿಣಿಯರ ಮೇಲೆ ಹಲ್ಲೆ!

    ಮೈಸೂರು: ಮರಗಳ್ಳನ ಹುಡುಕುವ ನೆಪದಲ್ಲಿ ಕಾಡಿನೊಳಗಿನ ಹಾಡಿ ಜನರ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ಹಲ್ಲೆ ಮಾಡಿರುವ ಆರೋಪಗಳು ಕೇಳಿಬಂದಿವೆ. ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕು ಮೇಟಿಕುಪ್ಪೆ ಹಾಡಿಯಲ್ಲಿ ಈ ಘಟನೆ ನಡೆದಿದೆ.

    ಅಕ್ಕಿ ಕುಮಾರ್ ಎಂಬಾತ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಮರಗಳ್ಳತನ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿತ್ತು. ಆದ್ದರಿಂದ ಅಕ್ಕಿ ಕುಮಾರನ್ನ ಹುಡುಕುತ್ತಾ ಮೇಟಿಕುಪ್ಪೆ ಹಾಡಿ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ಮಂಗಳವಾರ ದಾಳಿ ನಡೆಸಿದ್ದರು. ಈ ವೇಳೆ ಅಲ್ಲಿನ ಗರ್ಭಿಣಿಯರ ಮೇಲೆ ಸಿಬ್ಬಂದಿ ಹಲ್ಲೆ ನಡೆಸಿದ್ದಾರೆ ಎಂದು ಹಾಡಿ ಜನರು ಆರೋಪಿಸಿದ್ದಾರೆ. ಅಲ್ಲದೆ ಈ ದಾಳಿಯಲ್ಲಿ ಇಬ್ಬರು ಮಹಿಳೆಯರು ಗಂಭೀರ ಗಾಯಗೊಂಡಿದ್ದು, ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಒಂದೆಡೆ ಈ ಬಗ್ಗೆ ಹಾಡಿ ಜನರು ಅರಣ್ಯ ಇಲಾಖೆ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದರೇ, ಇನ್ನೊಂದೆಡೆ ಹಾಡಿ ಜನರ ಮೇಲೆ ಹಲ್ಲೆ ಮಾಡಿಲ್ಲ. ಇದು ಸುಳ್ಳು ಆರೋಪವೆಂದು ಅರಣ್ಯ ಇಲಾಖೆಯ ಹಿರಿಯ ಅರಣ್ಯಾಧಿಕಾರಿಗಳು ಹೇಳಿದ್ದಾರೆ.

  • ಶವಸಂಸ್ಕಾರಕ್ಕೆ ಅರಣ್ಯಾಧಿಕಾರಿಗಳಿಂದ ಅಡ್ಡಿ- ರಸ್ತೆಯಲ್ಲಿ ಬೆಂಕಿ ಹಚ್ಚಿ ಗ್ರಾಮಸ್ಥರಿಂದ ಆಕ್ರೋಶ

    ಶವಸಂಸ್ಕಾರಕ್ಕೆ ಅರಣ್ಯಾಧಿಕಾರಿಗಳಿಂದ ಅಡ್ಡಿ- ರಸ್ತೆಯಲ್ಲಿ ಬೆಂಕಿ ಹಚ್ಚಿ ಗ್ರಾಮಸ್ಥರಿಂದ ಆಕ್ರೋಶ

    ಮಂಡ್ಯ: ಅರಣ್ಯ ಇಲಾಖೆಯವರು ಶವಸಂಸ್ಕಾರಕ್ಕೆ ಅಡ್ಡಿ ಪಡಿಸಿದಕ್ಕೆ ಬುಡಕಟ್ಟು ಜನಾಂಗದ ಜನರು ರಸ್ತೆಯಲ್ಲಿ ಬೆಂಕಿ ಹಾಕಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಜಿಲ್ಲೆಯ ನಾಗಮಂಗಲ ತಾಲೂಕಿನ ಶಿಕಾರಿಪುರ ಗ್ರಾಮದಲ್ಲಿ ನಡೆದಿದೆ.

    ಇಂದು ಶಿಕಾರಿಪುರ ಗ್ರಾಮದಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಗ್ರಾಮಸ್ಥರು ಮೃತದೇಹವನ್ನು ಈ ಹಿಂದೆ ಅಂತ್ಯಕ್ರಿಯೆ ಮಾಡುತ್ತಿದ್ದ ಜಾಗಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಈ ವೇಳೆ ಇದು ಅರಣ್ಯ ಇಲಾಖೆಗೆ ಸೇರಿದ ಜಾಗವೆಂದು ಹೇಳಿ ಅರಣ್ಯ ಇಲಾಖೆಯವರು ಅಂತ್ಯಕ್ರಿಯೆ ನಡೆಸದಂತೆ ತಡೆದಿದ್ದಾರೆ. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಶ್ರವಣಬೆಳಗೋಳ- ನಾಗಮಂಗಲ ರಸ್ತೆಗೆ ಬೆಂಕಿ ಹಾಕಿ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ.

    ಬುಡಕಟ್ಟು ಜನಾಂಗದವರಾದ ನಾವು 100 ವರ್ಷದಿಂದ ಇಲ್ಲೆ ವಾಸಿಸುತ್ತಿದ್ದೇವೆ. ಆದರೆ ಈಗ ಎಕಾಏಕಿ ಗ್ರಾಮವನ್ನು ಖಾಲಿ ಮಾಡಿ, ಶವಸಂಸ್ಕಾರ ಮಾಡಬೇಡಿ ಎಂದು ಅರಣ್ಯ ಇಲಾಖೆಯವರು ಹೇಳುತ್ತಿದ್ದಾರೆ. ನಾವು ಎಲ್ಲಿ ಹೋಗಬೇಕು. ಸರ್ಕಾರದ ವತಿಯಿಂದ ಶಾಲೆ, ಬ್ಯಾಂಕುಗಳಿಂದ ಸಾಲ ಕೂಡ ನಮಗೆ ಕೊಡುತ್ತಾರೆ. ನಮಗೆ ಆಧಾರ್ ಕಾರ್ಡ್, ವೋಟರ್ ಕಾರ್ಡ್ ಎಲ್ಲಾ ನೀಡಿ ಈಗ ಖಾಲಿ ಮಾಡಿ ಎಂದು ಹೇಳುವುದು ಎಷ್ಟು ಸರಿ ಎಂದು ಅರಣ್ಯಾಧಿಕಾರಿಗಳನ್ನು ಗ್ರಾಮಸ್ಥರು ಪ್ರಶ್ನಿಸಿದ್ದಾರೆ.

    ಅಷ್ಟೆ ಅಲ್ಲದೇ ಈ ರೀತಿ ತೊಂದರೆ ನೀಡಿದರೆ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದ್ದಾರೆ. ಸ್ಥಳಕ್ಕೆ ಆಗಮಿಸಿದ ನಾಗಮಂಗಲ ಪಟ್ಟಣದ ಗ್ರಾಮಾಂತರ ಠಾಣೆಯ ಪೊಲೀಸರು, ಶವಸಂಸ್ಕಾರ ಮಾಡಲು ಅವಕಾಶ ಮಾಡಿಕೊಡುವಂತೆ ಅರಣ್ಯ ಇಲಾಖೆಯವರಲ್ಲಿ ಮನವಿ ಮಾಡಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಜಿಲ್ಲಾಡಳಿತ, ಸರ್ಕಾರಕ್ಕೆ ದಿಡ್ಡಳ್ಳಿ ಆದಿವಾಸಿಗಳಿಂದ ಶಾಕ್!

    ಜಿಲ್ಲಾಡಳಿತ, ಸರ್ಕಾರಕ್ಕೆ ದಿಡ್ಡಳ್ಳಿ ಆದಿವಾಸಿಗಳಿಂದ ಶಾಕ್!

    – ಪೊಲೀಸ್ರು ಬಂದ್ರೆ ಸಾಮೂಹಿಕ ಆತ್ಮಹತ್ಯೆಯ ಎಚ್ಚರಿಕೆ

    ಮಡಿಕೇರಿ: ಕಳೆದ 5 ತಿಂಗಳಿನಿಂದ ಬಗೆಹರಿಯದೆ ಕಗ್ಗಂಟಾಗಿದ್ದ ದಿಡ್ಡಳ್ಳಿ ವಿವಾದ ಜಿಲ್ಲಾಧಿಕಾರಿಗಳ ಸಂಧಾನ ಸಭೆಯ ಬಳಿಕ ಮುಗಿಯಿತು ಎನ್ನುವಷ್ಟರಲ್ಲಿ ಮತ್ತೆ ಭುಗಿಲೆದ್ದಿದೆ. ಇದ್ದಕ್ಕಿದ್ದಂತೆ ರಾತ್ರಿ ಬೆಳಗಾಗೋದ್ರೊಳಗೆ ದಿಡ್ಡಳ್ಳಿಯಲ್ಲಿ ಅರಣ್ಯ ಇಲಾಖೆ ಈ ಹಿಂದೆ ತೆರವುಗೊಳಿಸಿದ್ದ ಸ್ಥಳದಲ್ಲಿ ನೂರಾರು ಗುಡಿಸಲುಗಳು ತಲೆ ಎತ್ತಿದ್ದು, ಜಿಲ್ಲಾಡಳಿತ ಅರಣ್ಯ ಇಲಾಖೆ ಹಾಗೂ ಸರ್ಕಾರಕ್ಕೆ ಶಾಕ್ ನೀಡಿದೆ.

    ಕಳೆದ ಡಿಸೆಂಬರ್ 7ರಂದು ದಿಡ್ಡಳ್ಳಿ ವ್ಯಾಪ್ತಿಯ ಅರಣ್ಯ ಇಲಾಖೆಗೆ ಸಂಬಂಧಿಸಿದ ಜಾಗದಲ್ಲಿ ತಲೆ ಎತ್ತಿದ್ದ ನೂರಾರು ಆದಿವಾಸಿ ಜನರ ಗುಡಿಸಲುಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಪೊಲೀಸರ ಸಹಕಾರ ಪಡೆದು ತೆರವು ಮಾಡಿದ್ದರು. ಬಳಿಕ ನಿರಾಶ್ರಿತರಾಗಿ ತೆರವು ಮಾಡಿದ ಸ್ಥಳದ ರಸ್ತೆ ಬದಿಯಲ್ಲೇ ಕಳೆದ 5 ತಿಂಗಳಿಂದ ಬದುಕು ಕಟ್ಟಿಕೊಂಡಿದ್ದ ಆದಿವಾಸಿ ಜನರು ಭೂಮಿ ಮತ್ತು ವಸತಿಗೆ ಆಗ್ರಹಿಸಿ ನಿರಂತರ ಹೋರಾಟ ನಡೆಸಿದ್ದರು.

    ಹೋರಾಟದ ಫಲವಾಗಿ ಜಿಲ್ಲಾಡಳಿತ ಜಿಲ್ಲೆಯ 3-4 ಕಡೆಗಳಲ್ಲಿ ದಿಡ್ಡಳ್ಳಿ ನಿರಾಶ್ರಿತರಿಗೆಂದು ಭೂಮಿ ಗುರುತಿಸಿತ್ತು. ಆದರೆ ದಿಡ್ಡಳ್ಳಿಯಲ್ಲಿಯೇ ನಿವೇಶನ ನೀಡಬೇಕು. ಬೇರೆಡೆ ನೀಡುವುದಾದರೆ 4 ಏಕರೆ ಭೂಮಿಯನ್ನು ಪ್ರತೀ ಕುಟುಂಬಕ್ಕೆ ಕೊಡಬೇಕು ಎಂದು ಜಿಲ್ಲಾಡಳಿತ ಗುರುತಿಸಿದ್ದ ಸ್ಥಳಕ್ಕೆ ತೆರಳಲು ನಿರಾಕರಿಸಿದ್ದರು. ಈ ಹಿನ್ನಲೆ ದಿಡ್ಡಳ್ಳಿ ಆದಿವಾಸಿ ಜನರು ಹಾಗೂ ಜಿಲ್ಲಾಡಳಿತದ ನಡುವೆ ಹಗ್ಗಜಗ್ಗಾಟ ಏರ್ಪಟ್ಟಿತ್ತು.

    ಕೊನೆಗೆ ಜಿಲ್ಲಾಧಿಕಾರಿಗಳು ಏ.28ರಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಂಧಾನ ಸಭೆಯಲ್ಲಿ ಜಿಲ್ಲಾಡಳಿತ ಗುರುತಿಸಿದ್ದ ಸ್ಥಳಗಳಿಗೆ ತೆರಳಲು ಆದಿವಾಸಿ ಜನರು ಒಪ್ಪಿಗೆ ಸೂಚಿಸಿದ್ದರು. ಪರಿಣಾಮ ದಿಡ್ಡಳ್ಳಿ ಹೋರಾಟ ಸುಖಾಂತ್ಯ ಕಂಡಿದೆ ಎಂದೇ ಹೇಳಲಾಗಿತ್ತು. ಆದರೆ ಕಳದೆ ಮೂರು ದಿನಗಳಿಂದ 500 ಕ್ಕೂ ಅದಿಕ ಆದಿವಾಸಿಗಳು ಈ ಹಿಂದೆ ಅರಣ್ಯದೊಳಗೆ ನಿರ್ಮಿಸಿಕೊಂಡಿದ್ದ ಜಾಗದಲ್ಲಿ ಮತ್ತೆ ಗುಡಿಸಲು ನಿರ್ಮಾಣ ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೇ ಆದಿವಾಸಿಗಳು ದಿಡ್ಡಳ್ಳಿಯಲ್ಲಿಯೇ ಜಾಗ ನೀಡಬೇಕು ಒಂದು ವೇಳೆ ತೆರವು ಮಾಡಲು ಅರಣ್ಯಧಿಕಾರಿಗಳು ಮತ್ತು ಪೊಲೀಸರು ಬಂದರೆ ನಾವು ಸಾಮೂಹಿಕವಾಗಿ ಆಹ್ಮಹತ್ಯೆ ಮಾಡಿಕೊಳ್ಳುವುದಾಗಿ ಹಾಡಿಯ ನಿವಾಸಿ ಮಾರ ಹೇಳಿದ್ದಾರೆ.

  • ಬುಡಕಟ್ಟು ಜನರ ಮೇಲೆ ದಾಳಿಗೆ ಸಂಚು ರೂಪಿಸಿದ್ದ 3 ಐಸಿಸ್ ಉಗ್ರರನ್ನ ಕೊಂದ ಕಾಡುಹಂದಿಗಳು

    ಬುಡಕಟ್ಟು ಜನರ ಮೇಲೆ ದಾಳಿಗೆ ಸಂಚು ರೂಪಿಸಿದ್ದ 3 ಐಸಿಸ್ ಉಗ್ರರನ್ನ ಕೊಂದ ಕಾಡುಹಂದಿಗಳು

    ಬಾಗ್ದಾದ್: ಇರಾಕ್‍ನಲ್ಲಿ ಬುಡಕಟ್ಟು ಜನರ ಮೇಲೆ ದಾಳಿಗೆ ತಯಾರಿ ನಡೆಸಿದ್ದ ಐಸಿಸ್ ಉಗ್ರರ ಗುಂಪಿನ ಮೇಲೆ ಕಾಡುಹಂದಿಗಳು ದಾಳಿ ಮಾಡಿದ್ದು, ಮೂವರು ಉಗ್ರರು ಸಾವನ್ನಪ್ಪಪಿದ್ದಾರೆ.

    ಸ್ಥಳೀಯರ ಮಾಹಿತಿಯ ಪ್ರಕಾರ ಉಗ್ರರು ಇಲ್ಲಿನ ಕಿರ್ಕುಕ್ ಬಳಿಯಿರುವ ಹಮ್ರಿನ್ ಬೆಟ್ಟದ ಸಮೀಪದಲ್ಲಿ ಅಡಗಿದ್ದರು. ಕಾಡುಹಂದಿಗಳು ಮೂವರು ಐಸಿಸ್ ಉಗ್ರರನ್ನು ಕೊಂದಿದ್ದು, ಐವರನ್ನು ಗಂಭೀರವಾಗಿ ಗಾಯಗೊಳಿಸಿವೆ.

    ಇಲ್ಲಿನ ಉಬೇದ್ ಬುಡಕಟ್ಟು ಜನಾಂಗದ ಮುಖ್ಯಸ್ಥರು ಹಾಗೂ ಐಸಿಸ್ ನಿಗ್ರಹ ದಳದ ಮೇಲ್ವಿಚಾರಕರಾದ ಶೇಖ್ ಅನ್ವರ್-ಅಲ್ ಅಸ್ಸಿ ಅವರು ಹೇಳೋ ಪ್ರಕಾರ ಹವೀಜಾ ಪ್ರದೇಶವನ್ನ ಉಗ್ರರು ವಶಪಡಿಸಿಕೊಂಡ ನಂತರ ಇಲ್ಲಿನ ಬೆಟ್ಟಪ್ರದೇಶವನ್ನು ಬುಡಕಟ್ಟು ಜನರು ಬಿಟ್ಟು ಹೋಗಿದ್ದು ಅವರ ಮೇಲೆ ಉಗ್ರರು ದಾಳಿಗೆ ಉದ್ದೇಶಿಸಿದ್ದರು ಎನ್ನಲಾಗಿದೆ.

    ಹತ್ತಿರದ ಜೋಳದ ಹೊಲ ಹಾಗೂ ಇಲ್ಲಿನ ಸುತ್ತಮುತ್ತಲ ಪ್ರದೇಶದಲ್ಲಿ ಬೀಡು ಬಿಟ್ಟಿರುವ ಕಾಡುಹಂದಿಗಳಿಗೆ ಇವರ ಓಡಾಟದಿಂದ ಕಿರಿಕಿರಿಯಾಗಿರಬಹುದು ಎಂದು ಅವರು ಹೇಳಿದ್ದಾರೆ.

    ಹವಿಜಾದಿಂದ ಓಡಿಹೋಗಲು ಯತ್ನಿಸಿದ 25 ಮಂದಿಯನ್ನ ಉಗ್ರರು ಕೊಂದಿದ್ದು, ಸ್ಥಳವನ್ನು ಬಿಟ್ಟುಹೋಗಲು ತಯಾರಿ ನಡೆಸಿದವರನ್ನೂ ಕೊಲ್ಲಬೇಕೆಂದಿದ್ದರು. ಆದ್ರೆ ಕಾಡುಹಂದಿಗಳಿಂದ ಅವರೇ ಸಾವನ್ನಪ್ಪದ್ದಾರೆ ಎಂದು ಶೇಖ್ ಹೇಳಿದ್ದಾರೆ.

    ಹವೀಜಾ ಇರಾಖ್‍ನ ಮೊಸುಲ್ ನಗರದಿಂದ 100 ಮೈಲಿ ದೂರದಲ್ಲಿದ್ದು, ವಿಮೋಚನೆಯಾಗುವ ಹಂತದಲ್ಲಿದೆ. ಆದ್ರೆ ಐಸಿಸ್ ವಿರುದ್ಧ ಹೋರಾಟದಲ್ಲಿದೆ ಎಂದು ವರದಿಯಾಗಿದೆ.